ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ

ಪೀಠಿಕೆ:- ಭಾರತದ ದಖನ್ ಪ್ರಸ್ಥಭೂಮಿಯ ಪಶ್ಚಿಮದಂಚಿನಲ್ಲಿರುವ ಕರ್ನಾಟಕ ತನ್ನ ಪ್ರಾಕೃತಿಕ ಸಂಪತ್ತಿನಿಂದಾಗಿ ದೇಶದಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕರ್ನಾಟಕದ ಪ್ರಾಕೃತಿಕ ಲಕ್ಷಣಗಳಲ್ಲಿ ಅನೇಕ ಸ್ವಾರಸ್ಯಕರವಾದ ವೈವಿಧ್ಯಗಳಿವೆ. ಇವು ಜನರ ಜೀವನದಲ್ಲಿ ಅಭಿವ್ಯಕ್ತಿ ಹೊಂದಿರುವುದು ಮಾತ್ರವಲ್ಲ ಕರ್ನಾಟಕದ ಐತಿಹಾಸಿಕ ವಿಕಾಸದ ಮೇಲೂ ತಮ್ಮ ಪ್ರಭಾವವನ್ನು ಸಾಕಷ್ಟು ಬೀರಿವೆ. ಪಶ್ಚಿಮದಲ್ಲಿ ಎತ್ತರವಾದ ಶಿಖರಗಳು ಮತ್ತು ಹುಲುಸಾಗಿರುವ ಸಸ್ಯಗಳಿಂದ ಕೂಡಿರುವ ಪಶ್ಚಿಮಘಟ್ಟಗಳು ಕಂಗೊಳಿಸುತ್ತಿದ್ದರೆ, ಪ್ರಸ್ಥಭೂಮಿಯು ಅದರ ಕಪ್ಪು ಮಣ್ಣು ಮತ್ತು ನದಿ ಹಾಗೂ ಕೆರೆ ನೀರಾವರಿ ಅನುಕೂಲತೆಗಳಿಂದಾಗಿ ಫಲವತ್ತಾಗಿದೆ. ಘಟ್ಟಗಳ ಪಶ್ಚಿಮ ದಿಕ್ಕಿನಲ್ಲಿ ಪಟ್ಟೆಯಂತಿರುವ ಸಮುದ್ರ ತೀರ ಪ್ರದೇಶವು ಅಲ್ಲಿನ ಹಿನ್ನೀರಿನ ತೀರಗಳು, ಹಸಿರು ಭತ್ತದ ಗದ್ದೆ ಹಾಗೂ ತೋಟಗಳಿಗೆ ಪ್ರಸಿದ್ಧವಾಗಿದೆ. ಇತಿಹಾಸದ ಕಾಲದಿಂದಲೂ ಶ್ರೀಗಂಧದ ಮರ, ಗಂಧದ ಎಣ್ಣೆ, ತೇಗದ ಮರ, ಸಾಂಬಾರ ಪದಾರ್ಥಗಳು ಮತ್ತು ಚಿನ್ನದ ಉತ್ಪಾದನೆಗೆ ಕರ್ನಾಟಕವು ಹೆಸರುವಾಸಿಯಾಗಿದೆ.

ಕರ್ನಾಟಕದ ಪ್ರಾಚೀನತೆ:

ಸಾ.ಶ.ಪೂ. 3-4 ನೆ ಶತಮಾನದ ಫಾಣಿನಿಯ ಅಷ್ಟಾಧ್ಯಾಯಿಯಲ್ಲಿ ಕರ್ಣಾಡಕ ಎಂಬ ಜನಾಂಗದ ಉಲ್ಲೇಖವಿದೆ. ಮಹಾಭಾರತದ ಭೀಷ್ಮಪರ್ವದಲ್ಲಿ ಕರ್ನಾಟಕ ಭಾಗವು ಮಹಿಷಮಂಡಲ ಎಂದು ಒಂದು ಪ್ರದೇಶವಾಗಿ ಉಲ್ಲೇಖಗೊಂಡಿದೆ.

ಮಹಾಭಾರತದ ಎರಡು ಸಂಸ್ಕೃತ ಮೂಲದ ಕೃತಿಗಳಲ್ಲಿ ಕರ್ನಾಟಕ ಅಥವಾ ಉನ್ನತ್ಯಕ ಎಂಬ ಹೆಸರುಗಳು ಕಂಡುಬಂದಿವೆ. ಕುಂತಳ ಎಂಬುದೂ ಸಹ ಇದಕ್ಕಿದ್ದ ಮತ್ತೊಂದು ಹೆಸರು

ಮಾರ್ಕಂಡೇಯ, ಭಾಗವತ ಪುರಾಣಗಳು ಮತ್ತು ವರಾಹ ಮಿಹಿರನ ಬೃಹತ್‌ ಸಂಹಿತಾದಲ್ಲಿ ಈ ನಾಡಿನ ಉಲ್ಲೇಖವಿದೆ. ಪ್ರಾಚೀನ ತಮಿಳು ಕೃತಿಗಳು: ತೋಳ್ಕಾಪ್ಪಿಯರ್‌ ಮತ್ತು ಶಿಲಪ್ಪಾದಿಕಾರಂಗಳಲ್ಲಿ “ಕರುನಾಡರ್‌ ಅಥವಾ ಕರುನಾಟಕರ್”‌ ಎಂಬ ಉಲ್ಲೇಖವಿದೆ. ಕದಂಬ ವಿಷ್ಣುವರ್ಮನ ಬೀರೂರು ತಾಮ್ರಪಟಗಳಲ್ಲಿ ಬನವಾಸಿಯ ದೊರೆಯನ್ನು “ಸಮಗ್ರ ಕರ್ನಾಟ ದೇಶ ಭೂವರ್ಗ ಭರ್ತಾರ”; ಸಾ.ಶ.ವ. 450. ವಿಜ್ಜಿಕೆ ಅಥವಾ ವಿಜಯಾಂಕ  ತನ್ನನ್ನು “ಕರ್ನಾಟ ರಾಜಪ್ರಿಯ” ಎಂದು ಏಳನೆ ಶತಮಾನದಲ್ಲಿ ಹೇಳಿಕೊಂಡಿದ್ದಾಳೆ. ಶಾಸನಗಳಲ್ಲಿ ಬಾದಾಮಿಯ ಚಾಲುಕ್ಯರ ಸೇನೆ :ಕರ್ನಾಟ ಬಲ: ಎಂದು ಉಲ್ಲೇಖ ಕಂಡುಬರುತ್ತದೆ. ಅಲ್ಲದೇ, ಜಾವಾ ದೇಶದ ಶ್ರೀವಿಜಯ ಐರ್ಲಿಂಗನ ಸಾಮ್ರಾಜ್ಯಕ್ಕೆ ಭೇಟಿ ನೀಡುತ್ತಿದ್ದ ವ್ಯಾಪಾರಿಗಳಲ್ಲಿ ಕರ್ನಾಟಕದ ಹೆಸರಿನ ಪ್ರಸ್ತಾಪವಿದೆ.

 

ಹೆಸರಿನ ಅರ್ಥ:

ಕನ್ನಡ ಎಂಬುದೇ ಮೂಲ ಹೆಸರು ಎನ್ನಲಾಗಿದೆ. ಏಕೆಂದರೆ, ಕವಿರಾಜಮಾರ್ಗ ಮತ್ತು ಆಂಡಯ್ಯನ ಕಬ್ಬಿಗರ ಕಾವದಲ್ಲಿ “ಕಾವೇರಿಯಿಂದಮಾ ಗೋದಾವರಿವರೆಮಿರ್ದ ನಾಡದಾ ಕನ್ನಡದೊಳ್”‌ “ಕನ್ನಡಮೆನಿಪ್ಪ ನಾಡು” ಎಂದು ಹೇಳಲಾಗಿದೆ. ಕನ್ನಡ ಪದವೇ ಸಂಸ್ಕೃತದಲ್ಲಿ ಕರ್ನಾಟ ಎಂದು ಬಳಕೆಯಾಗಿದೆ. ಕರ್ಣ ಮತ್ತು ನಾಡ್‌ ಎಂಬ ಎರಡು ಮೂಲನಿವಾಸಿ ಜನಾಂಗಗಳಿಂದ ಈ ಹೆಸರು ಬಂದಿದೆ. ಕಮ್ಮಿತ್ತು ನಾಡು ಅಂದರೆ ಮಲೆನಾಡಿನ ಶ್ರೀಗಂಧದ ಮರಗಳಿಂದ ಸೂಸುವ ಪರಿಮಳಭರಿತ ಮಲಯ ಮಾರುತದ ಕಾರಣದಿಂದ ಈ ಹೆಸರು ಎನ್ನಲಾಗಿದೆ. “ಕಣ್‌” ಅಥವಾ “ಕಳ್‌” ಎಂಬ ಜನಾಂಗ ವಾಸವಿದ್ದ ಕಾರಣ ಕನ್ನಡ ನಾಡು ಎಂಬುದು ಇನ್ನೊಂದು ಅಭಿಪ್ರಾಯ. ಕರಿಯ ಮಣ್ಣಿನ ನಾಡು = ಕರುನಾಡು; ಅದರಿಂದಲೇ ಕರುನಾಡರ್‌ ಎಂಬ ತಮಿಳು ಪದದ ಉಗಮ ಎಂದು ಇನ್ನೊಂದು ಅಬಿಪ್ರಾಯವಿದೆ.

ನಿಜವಾದ ಅರ್ಥ: ಕರುನಾಡು ಎಂದರೆ ದೊಡ್ಡ ನೆಲ ಅಥವಾ ಎತ್ತರದ ನಾಡು ಎಂಬುದು ಒಪ್ಪಿತವಾದ ಅಭಿಪ್ರಾಯ

 

ಭೌಗೋಳಿಕ ನೆಲೆ ಮತ್ತು ಗಡಿಗಳು (ಮೇರೆಗಳು):- ಭೂ ಮೇರೆ ಮತ್ತು ಜಲ ಮೇರೆಗಳೆರಡನ್ನೂ ಹೊಂದಿರುವ ಕರ್ನಾಟಕವು ಭಾರತದ ದಖ್ಖನ್ ಪ್ರಸ್ಥಭೂಮಿಯ ಪಶ್ಚಿಮ ಮಧ್ಯಭಾಗದಲ್ಲಿ ನೆಲೆಗೊಂಡಿದೆ. ಇದು ಉತ್ತರ ಅಕ್ಷಾಂಶ 11.31' ರಿಂದ 18.45' ಹಾಗೂ ಪೂರ್ವ ರೇಖಾಂಶ 74.12'ರಿಂದ 78.40' ರವರೆಗೆ ಹಬ್ಬಿದೆ. ಭಾರತದ 29 ರಾಜ್ಯಗಳಲ್ಲೊಂದಾದ ಕರ್ನಾಟಕ ರಾಜ್ಯವು ಉತ್ತರದಿಂದ ದಕ್ಷಿಣಕ್ಕೆ ಸುಮಾರು 750 ಕಿ.ಮೀ. ವಿಸ್ತರಿಸಿದೆ. ರಾಜ್ಯದ ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರಪ್ರದೇಶ, ದಕ್ಷಿಣಕ್ಕೆ ಮತ್ತು ಆಗ್ನೇಯಕ್ಕೆ ತಮಿಳುನಾಡು, ನೈರುತ್ಯಕ್ಕೆ ಕೇರಳ ಹಾಗೂ ಪಶ್ಚಿಮಕ್ಕೆ ಅರಬ್ಬೀ ಸಮುದ್ರಗಳು ಗಡಿಯಾಗಿವೆ. ಅಂದರೆ ಕರ್ನಾಟಕವು ಮೂರು ಕಡೆ ಭೂಮಿ ಮತ್ತು ಒಂದು ಕಡೆ ಜಲ ಭಾಗಗಳಿಂದ ಆವರಿಸಲ್ಪಟ್ಟಿದೆ.

ವಿಸ್ತೀರ್ಣ:- ಪ್ರಸ್ತುತ ಕರ್ನಾಟಕ ರಾಜ್ಯವು ಒಟ್ಟು 1, 91, 791 ಚದರ ಕಿ.ಮೀ. ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದ್ದು, ಇದು ದೇಶದ ಒಟ್ಟು ವಿಸ್ತೀರ್ಣದ (32, 87, 263 .ಕಿ.ಮೀ.) ಶೇ. 5.84 ಆಗಿದ್ದು, ಭಾರತದ ಎಂಟನೇ (8ನೇ) ವಿಶಾಲವಾದ ರಾಜ್ಯವೆನಿಸಿದೆ. ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯವು ಹಂಗೇರಿ, ಜೆಕೋಸ್ಲಾವೇಕಿಯಾ ಆಥವಾ ಬೆಲ್ಜಿಯಮ್ಗಿಂತಲೂ ದೊಡ್ಡದು.

ಪ್ರಾಚೀನ ವ್ಯಾಪ್ತಿ: ದಕ್ಷಿಣದ ಕಾವೇರಿಯಿಂದ ಗೋದಾವರಿಯವರೆಗೆ; ಕವಿರಾಜಮಾರ್ಗಕಾರನು ಹೇಳಿದಂತೆ

ಬಾದಾಮಿಯ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನರ್ಮದಾ ಉತ್ತರದ ಗಡಿ ಎನಿಸಿತ್ತು.  ಐಹೊಳೆ ಶಾಸನದಂತೆ. ಪೂರ್ವದ ವೆಂಗಿಮಂಡಲದಲ್ಲಿ ಕನ್ನಡಿಗರ ಆಳ್ವಿಕೆ; ಕುಬ್ಜ ವಿಷ್ಣುವರ್ಧನನಿಂದ ಆರಂಭಗೊಂಡ ಮನೆತನವಿದು.  ರಾಷ್ಟ್ರಕೂಟರ ಮೂರನೇ ಕೃಷ್ಣನ ಜುರಾ ಶಾಸನ ಜಬಲ್‌ಪುರ ಬಳಿ, ಮಧ್ಯಪ್ರದೇಶದಲ್ಲಿ ದೊರೆತಿದೆ. ಸಾ.ಶ.ವ. 964ರ ಶಾಸನವಿದು. ರಾಷ್ಟ್ರಕೂಟರ ಗೋವಿಂದನ ಕಾಲದಲ್ಲಿ ಉತ್ತರ ಭಾರತದ ಕನೋಜ್‌ವರೆಗೂ ದಿಗ್ವಿಜಯ ಸಾಧಿಸಲಾಗಿತ್ತು. ಅಲ್ಲದೇ 13ನೆ ಶತಮಾನದವರೆಗಿನ ಗೋದಾವರಿ ಪರಿಸರದಲ್ಲಿನ ಶಾಸನಗಳು ಕನ್ನಡದಲ್ಲಿಯೇ ಲಭ್ಯವಾಗಿದ್ದು, ಅಲ್ಲಿಯವರೆಗೆ ಈ ನಾಡಿನ ಗಡಿಗಳು ವ್ಯಾಪಿಸಿದ್ದನ್ನು ಸೂಚಿಸುತ್ತವೆ. ಅಲ್ಲದೇ 15ನೆ ಶತಮಾನದಲ್ಲಿ ವಿಜಯನಗರದ ಗಡಿಗಳೂ ಸಹ ಪೂರ್ವಾಪರ ಸಮುದ್ರಗಳವರೆಗೆ ವ್ಯಾಪಿಸಿದ್ದವು.

 

ಪ್ರಾಕೃತಿಕ ಲಕ್ಷಣಗಳು:

   ಕರ್ನಾಟಕ ರಾಜ್ಯವು ವೈವಿಧ್ಯಮಯವಾದ ಮೇಲ್ಮೈ ಲಕ್ಷಣದ ಆವಿಷ್ಕರಣಗಳನ್ನು ಹೊಂದಿರುವುದು. ಕರಾವಳಿ ಪ್ರದೇಶ, ಏರು ತಗ್ಗುಗಳಿಂದ ಕೂಡಿದ ಮಲೆನಾಡಿನ ಘಟ್ಟಗಳು ಹಾಗೂ ಸಮತಟ್ಟಾದ ಬಯಲು ಸೀಮೆಗಳಿಂದ ಕೂಡಿದ ಭೂಸ್ವರೂಪಗಳಿವೆ. ಕರ್ನಾಟಕದಲ್ಲಿ ವಿವಿಧ ಎತ್ತರಗಳ ಅಡಿಯಲ್ಲಿ ಹಂಚಿಕೆಯಾಗಿರುವ ಭೂಪ್ರದೇಶದ ವಿಸ್ತೀರ್ಣದ ಶೇಕಡ ರೀತಿ ಇರುವುದು:-

150 ಮೀಟರಿಗಿಂತ ಕಡಿಮೆ 5.16, 150 ರಿಂದ 300 ಮೀಟರ್ ಗಳವರೆಗೆ 1.95, 300ರಿಂದ 600 ಮೀಟರ್ಗಳವರೆಗೆ 43.51, 600ರಿಂದ 1350 ಮೀಟರ್ಗಳವರೆಗೆ 48.81 ಮತ್ತು 1350 ಮೀಟರ್ಗಿಂತ ಹೆಚ್ಚು 0.57. ಕೆಲವೇ ಭಾಗಗಳಲ್ಲಿ ಎತ್ತರವು 1800 ಮೀಟರ್ಗಿಂತ ಹೆಚ್ಚಾಗಿದೆ. ಬಾಬಾ ಬುಡನ್ಗಿರಿ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿಯು (1943 ಮೀಟರ್) ಅತಿ ಎತ್ತರವಾದುದು.

ಸಾಕಷ್ಟು ಆಳವುಳ್ಳ ಕಣಿವೆ ಕಂದರಗಳು, ಒರಟು ಮೇಲ್ಮೈಯುಳ್ಳ ಶಿಲಾಸ್ತರಗಳು ಮುಂತಾದ ಭೂಸ್ವರೂಪಗಳು ಸಹ ರಾಜ್ಯದಲ್ಲಿ ಕಂಡುಬರುತ್ತವೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಭೀಮೇಶ್ವರ ಕಣಿವೆ ಕರ್ನಾಟಕದಲ್ಲಿ ಅತಿ ಕೆಳಮಟ್ಟದ (85ಮೀ) ತಗ್ಗು ಪ್ರದೇಶವಾಗಿದೆ. ಕರ್ನಾಟಕವು ಭಾರತದ ದಖ್ಖನ್ ಪ್ರಸ್ಥಭೂಮಿಯ ಭಾಗವಾಗಿದ್ದು, ಅದರಲ್ಲಿ ಪ್ರಸ್ಥಭೂಮಿಯ ಗುಣಲಕ್ಷಣಗಳು ಕಂಡುಬರುತ್ತವೆ.

ಎತ್ತರ, ಮೇಲ್ಮೈ ಲಕ್ಷಣ, ವಾಯುಗುಣ ಹಾಗೂ ಸಸ್ಯವರ್ಗಗಳ ಹಂಚಿಕೆಗಳನ್ನಾಧರಿಸಿ ಕರ್ನಾಟಕವನ್ನು ಕರಾವಳಿ ಪ್ರದೇಶ, ಮಲೆನಾಡು ಪ್ರದೇಶ ಮತ್ತು ಮೈದಾನ ಪ್ರದೇಶ ಅಥವಾ ಬಯಲು ಸೀಮೆಗಳೆಂದು ಪ್ರಮುಖ ಪ್ರಾಕೃತಿಕ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

1. ಕರಾವಳಿ ಪ್ರದೇಶ

ರಾಜ್ಯ ಪುನರ್ವಿಂಗಡಣೆಯ ಫಲವಾಗಿ ಕರ್ನಾಟಕ ರಾಜ್ಯಕ್ಕೆ ಸಮುದ್ರ ತೀರವು ಲಭ್ಯವಾಯಿತು. ಪೂರ್ವದಲ್ಲಿ ಕರ್ನಾಟಕ ಪ್ರಸ್ಥಭೂಮಿಯ ಪಶ್ಚಿಮ ಘಟ್ಟಗಳ ಅಂಚು (ಎಲ್ಲೆ) ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದ ನಡುವೆ ಹರಡಿರುವ ಕರ್ನಾಟಕ ಕರಾವಳಿ ಪ್ರದೇಶವು ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಿದ್ದು, ದಕ್ಷಿಣೋತ್ತರವಾಗಿ ಸುಮಾರು 300 ಕಿ.ಮೀ. ಉದ್ದ ಹೊಂದಿದೆ. ಅದು ಉತ್ತರದಲ್ಲಿ ಕೊಂಕಣ (ಗೋವಾ) ಕರಾವಳಿಯಿಂದ ದಕ್ಷಿಣದಲ್ಲಿ ಮಲಬಾರ್ (ಕೇರಳದ) ಕರಾವಳಿಯವರೆಗೆ ವ್ಯಾಪಿಸಿದೆ. ಇದು 250ರಿಂದ 350 ಮಿಲಿಯನ್ ವರ್ಷಗಳ ಹಿಂದೆ ಕಾರ್ಬೊನಿಫರಸ್ ಯುಗದಲ್ಲಿ ಭೂಸ್ಥಾನಪಲ್ಲಟ ಅಥವಾ ಶಿಲಾಸ್ಥರ ಭಂಗಗಳ ಕಾರ್ಯಾಚರಣೆಯಿಂದ ಸಮುದ್ರದಲ್ಲಿ ಭೂ ಭಾಗವು ಮೇಲೆತ್ತಲ್ಪಟ್ಟಿದ್ದರ ಪರಿಣಾಮವಾಗಿ ರಚನೆಯಾಗಿದೆಯೆಂದು ಭೂವಿಜ್ಞನಿಗಳು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಕರಾವಳಿ ಪ್ರದೇಶವು ಹೆಚ್ಚು ಕಡಿದಾಗಿದ್ದು, ಕಿರಿದಾಗಿರುತ್ತದೆ. ಇದಕ್ಕೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಸರಣಿಯು ಸಮುದ್ರಕ್ಕೆ ಸಮೀಪವಾಗಿರುವುದು ಪ್ರಮುಖ ಕಾರಣವಾಗಿದೆ. ಸಮುದ್ರ ಮಟ್ಟದಿಂದ 200 ಮೀಟರ್ಗಳಷ್ಟು ಎತ್ತರವಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಕರಾವಳಿ ತೀರ ಬಹುಪಾಲು ಕಿರಿದಾಗಿದ್ದು, ಕಾರವಾರ, ಹೊನ್ನಾವರ, ಭಟ್ಕಳ ಮುಂತಾದವುಗಳ ಕಡೆ ಸಹ್ಯಾದ್ರಿಯ ಅಂಚು ಸಮುದ್ರದೊಳಗೆ ಚಾಚಿರುವುದು ಕಂಡುಬರುತ್ತದೆ. ಇದರ ಅಗಲವು 13-32 ಕಿ.ಮೀ.ನಶ್ಟಿದೆ. ದಕ್ಷಿಣದ ಕಡೆಗೆ ಹೋದಂತೆ ಸ್ವಲ್ಪಮಟ್ಟಿಗೆ ಅಗಲವು ಹೆಚ್ಚಾಗುವುದು. ಅಂದರೆ 50ರಿಂದ 60 ಕಿ.ಮೀ.ಗಳಷ್ಟು ಅಗಲವಾಗಿರುತ್ತದೆ. ಕರಾವಳಿಯ ಮೂಲಕ ಹರಿಯುವ ನದಿಗಳು ಅಲ್ಲಲ್ಲಿ ಕೊರಕಲುಗಳನ್ನು ಸೃಶ್ಟಿಸುತ್ತವೆ. ಅವು ಮೈದಾನವನ್ನು ಬೇರ್ಪಡಿಸುತ್ತವೆ. ಕರಾವಳಿಯ ಉದ್ದಕ್ಕೂ ಮನೋಹರವಾದ ಪ್ರಕೃತಿಯ ಸೌಂದರ್ಯ ಮತ್ತು ಬಂದರುಗಳಿರುವುದು ಒಂದು ವೈಶಿಷ್ಟ್ಯವಾಗಿರುತ್ತದೆ. ಮಂಗಳೂರು, ಭಟ್ಕಳ, ಕಾರವಾರ, ಕುಮಟಾ, ಹೊನ್ನಾವರ ಇತ್ಯಾದಿ. ಕರಾವಳಿಯ ಉದ್ದಕ್ಕೂ ಹಳ್ಳಿಗಳಿವೆ. ಅಲ್ಲಿ ಮೀನುಗಾರಿಕೆಯು ಪ್ರಮುಖ ವೃತ್ತಿಯಾಗಿರುತ್ತದೆ. ಜೊತೆಗೆ ಕೃಶಿಯು ಮುಖ್ಯ ಕಸುಬಾಗಿರುತ್ತದೆ. ಇಲ್ಲಿ ಅಡಿಕೆ, ತೆಂಗು, ಗೋಡಂಬಿ, ಭತ್ತ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವರು.

2. ಮಲೆನಾಡು

ಮಲೆನಾಡು ಅತ್ಯಂತ ವಿಭಿನ್ನವಾದ ಪಶ್ಚಿಮ ಘಟ್ಟಗಳ ಪ್ರದೇಶ. ಇದು ಗುಡ್ಡಗಾಡು ಪ್ರದೇಶವಾಗಿದ್ದರೂ ಕರ್ನಾಟಕದ ಸಂಪತ್ಭರಿತ ಪ್ರಾಕೃತಿಕ ವಿಭಾಗವಾಗಿದೆ. ಮಲೆನಾಡು ಅಥವಾ ಸಹ್ಯಾದ್ರಿ ಪ್ರದೇಶವು ಪೂರ್ವಕ್ಕೆ ಮೈದಾನ ಅಥವಾ ಬಯಲುಗಾಡು ಹಾಗೂ ಪಶ್ಚಿಮದ ಕರಾವಳಿ ಪ್ರದೇಶಗಳ ಮಧ್ಯಭಾಗದಲ್ಲಿ ವಾಯುವ್ಯದಿಂದ ಆಗ್ನೇಯಕ್ಕೆ ಸಮಾಂತರವಾಗಿ ಹಬ್ಬಿವೆ. ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೂ ಹಬ್ಬಿರುವ ಕರ್ನಾಟಕದಲ್ಲಿ ಹಂಚಿಕೆಯಾಗಿರುವ ಸಹ್ಯಾದ್ರಿ ಶ್ರೇಣಿಗೆ "ಮಧ್ಯ ಸಹ್ಯಾದ್ರಿ' ಎಂದು ಕರೆಯುವರು. ಅತ್ಯಧಿಕ ಮಳೆ ಮತ್ತು ದಟ್ಟವಾದ ಸಸ್ಯವರ್ಗಗಳಿರುವುದರಿಂದ ಪ್ರದೇಶವನ್ನು ಹಿಂದೆ ಅನಾರೋಗ್ಯಕರ ಪ್ರದೇಶ ಅಥವಾ ""ಮಲೇರಿಯಾ ಕೊಂಪೆ'' ಎನ್ನುತ್ತಿದ್ದರು. ಈಗ ಅದು ಅಂತಹ ಪರಿಸ್ಥಿತಿಯಿಂದ ಹೊರತಾಗಿದೆ.

ಮಲೆನಾಡು ಪ್ರದೇಶ ಕರಾವಳಿಗೆ ಹೊಂದಿಕೊಂಡಂತೆ ಉತ್ತರದಲ್ಲಿ ಕಾರವಾರದಿಂದ ಪ್ರಾರಂಭಗೊಂಡು ದಕ್ಷಿಣದಲ್ಲಿ ಕೊಳ್ಳೇಗಾಲದವರೆಗೂ 650 ಕಿ.ಮೀ.ಗಳಷ್ಟು ಉದ್ದವಾಗಿದೆ. ಇದು ಸರಾಸರಿ 50ರಿಂದ 75 ಕಿ.ಮೀ.ಗಳಷ್ಟು ಅಗಲವಾಗಿದೆ. ಕರಾವಳಿಯಿಂದ ಒಮ್ಮೆಲೇ ಗೋಡೆಯಂತೆ ಎದ್ದು ನಿಂತ ಸಹ್ಯಾದ್ರಿ ಬೆಟ್ಟಗಳು ಸಮುದ್ರ ಮಟ್ಟದಿಂದ ಸರಾಸರಿ 900 ಮೀ.ಗಳಷ್ಟು ಎತ್ತರವಾಗಿವೆ. ಕೆಲವು ಭಾಗಗಳಲ್ಲಿ 1500 ಮೀಟರ್ಗಳಿಗೂ ಹೆಚ್ಚು ಎತ್ತರವಿರುವ ಕೆಲವು ಗಿರಿಶಿಖರಗಳು ಇವೆ.

ಕರ್ನಾಟಕದ ಎತ್ತರದ ಶಿಖರಗಳಲ್ಲಿ ಮುಳ್ಳಯ್ಯನಗಿರಿ (1943 ಮೀ), ಬಾಬಾಬುಡನ್ಗಿರಿ (ಚಂದ್ರದ್ರೋಣ ಪರ್ವತ 1912 ಮೀ.) ಮತ್ತು ಕುದುರೆಮುಖ (1912 ಮೀ.), ಕಲ್ಹತ್ತಗಿರಿ (1893ಮೀ), ದೇವೀರಮ್ಮನಗುಡ್ಡ (1817 ಮೀ.), ರುದ್ರಗಿರಿ (1715 ಮೀ), ಹೆಬ್ಬಿಬೆಟ್ಟ (1349ಮೀ.) ಮೊದಲಾದ ಶಿಖರಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುವ ಬಾಬಾಬುಡನ್ ಬೆಟ್ಟಗಳ ಸಾಲುಗಳಲ್ಲಿವೆ. ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗದಲ್ಲಿ ಇನ್ನೂ ಅನೇಕ ಶಿಖರಗಳು ಕಾಣಬರುತ್ತವೆ. ಅವುಗಳಲ್ಲಿ ಬಲ್ಲಾಳರಾಯನದುರ್ಗ (1520ಮೀ), ಮೆರ್ತಿಗುಡ್ಡ (1677ಮೀ), ವರಾಹ ಪರ್ವತ(1471ಮೀ), ದೇವರ ಬೆಟ್ಟ (1294 ಮೀ.) ಸುಬ್ರಹ್ಮಣ್ಯ ಅಥವಾ ಪುಷ್ಪಗಿರಿ (1731 ಮೀ), ಜೇನುಕಲ್ಲು ಗುಡ್ಡ (1402 ಮೀ.), ಮೂರು ಕಣ್ಣು ಗುಡ್ಡ (1312 ಮೀ.), ಕೊಡಚಾದ್ರಿ (1357ಮೀ.) ಮುಂತಾದವು.

ಸಹ್ಯಾದ್ರಿ ಘಟ್ಟಗಳ ಎತ್ತರವು ಉತ್ತರದಲ್ಲಿ ಅಷ್ಟೇನೂ ಹೆಚ್ಚಾಗಿಲ್ಲದಿದ್ದರೂ ದಕ್ಷಿಣಕ್ಕೆ ಬಂದಂತೆ ಹೆಚ್ಚಾಗುವುದು. ಘಟ್ಟಗಳ ಪಶ್ಚಿಮ ಭಾಗವು ಕಡಿದಾದ ಇಳಿಜಾರಿನಿಂದಲೂ ಮತ್ತು ಪೂರ್ವ ಭಾಗವು ಕ್ರಮಬದ್ಧವಾದ ಇಳಿಜಾರಿನಿಂದಲೂ ಕೂಡಿದ್ದು, ಪೂರ್ವದ ಮೈದಾನದಲ್ಲಿ ಕ್ರಮೇಣ ವಿಲೀನಗೊಳ್ಳುವುದು. ಇವು ಅವಿಚ್ಛಿನ್ನವಾಗಿ ಹಬ್ಬಿದ್ದು, ಕೆಲವೇ ಭಾಗಗಳಲ್ಲಿ ಮಾತ್ರ ಸಂಚಾರಕ್ಕೆ ಕಣಿವೆ ಮಾರ್ಗಗಳಿವೆ. ಉದಾ: ಚಿಕ್ಕಮಗಳೂರು-ಮಂಗಳೂರುಗಳ ನಡುವಣ ಚಾರ್ಮುಡಿ ಘಾಟ್, ಶಿವಮೊಗ್ಗ-ಉಡುಪಿಗಳ ನಡುವಣ ಆಗುಂಬೆ ಘಾಟ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಲ್ಲೂರು ಘಾಟ್ ಇತ್ಯಾದಿ.

ಸಹ್ಯಾದ್ರಿ ಬೆಟ್ಟಗಳು ಸುಮಾರು 250 ಮಿಲಿಯನ್ನು ವರ್ಷಗಳ ಹಿಂದೆ ಕಾರ್ಬೊನಿಫರಸ್ ಯುಗದಲ್ಲಿ ಸಂಭವಿಸಿದ ಭೂಸ್ಥಾನಪಲ್ಲಟ ಹಾಗೂ ಶಿಲಾಸ್ತರ ಭಂಗಗಳ ಪರಿಣಾಮದಿಂದ ಉಂಟಾಗಿದೆಯೆಂದು ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿರುತ್ತಾರೆ. ಘಟ್ಟಗಳಲ್ಲಿ ಸಾಕಷ್ಟು ಮಳೆಯಾಗುವುದು. ಅದರಲ್ಲೂ ಪಶ್ಚಿಮ ಭಾಗದ ಗಾಳಿಗಭಿಮುಖವಾಗಿರುವ ಭಾಗಗಳಿಗೆ 2500 ಮಿ.ಮೀ ಗಳಿಗಿಂತಲೂ ಹೆಚ್ಚು ವಾರ್ಶಿಕ ಮಳೆಯಾಗುವುದು. ಆದರೆ ಪೂರ್ವದ ಕಡೆಗೆ ಹೋದಂತೆಲ್ಲಾ ಮಳೆಯ ಪ್ರಮಾಣವು ಕಡಿಮೆಯಾಗುವುದು. ಘಟ್ಟಗಳ ಮೂಲಕ ಹರಿಯುವ ನದಿಗಳು ರಮ್ಯವಾದ ಜಲಪಾತ ಮತ್ತು ರಭಸ ಇಳಿತಗಳನ್ನುಂಟು ಮಾಡುತ್ತವೆ. ಉದಾ: ಜೋಗ್ (ಗೇರುಸೊಪ್ಪ-275 ಮೀ), ಭಂಡಾಜಿ (216ಮೀ.), ಶಿವನಸಮುದ್ರ (91ಮೀ.), ಮಾಗೋಡು (137 ಮೀ.) ಜಲಪಾತಗಳು ಇತ್ಯಾದಿ.

ಪ್ರದೇಶದಲ್ಲಿ ಸಾಧಾರಣ ಫಲವತ್ತಾದ ಜಂಬಿಟ್ಟಿಗೆ ಮಣ್ಣು ಹಂಚಿಕೆಯಾಗಿದ್ದು, ಅದು ಭತ್ತ, ತೆಂಗು, ಅಡಿಕೆ, ಏಲಕ್ಕಿ, ಮೆಣಸು ಮುಂತಾದ ಕೃಶಿ ಬೆಳೆಗಳಿಗೆ ಪೂರಕವಾಗಿದೆ. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಮರಗಳೂ ಬೆಳೆಯುತ್ತವೆ.

3. ಮೈದಾನ ಪ್ರದೇಶ ಅಥವಾ ಬಯಲು ಸೀಮೆ:-

ಮಲೆನಾಡಿನ ಪೂರ್ವಕ್ಕಿರುವ ಮೈದಾನ ಅಥವಾ ಬಯಲು ಸೀಮೆ. ತಗ್ಗು-ದಿಣ್ಣೆಗಳಿಂದ ಕೂಡಿದ ತ್ರಿಕೋನಾಕಾರದ ಬಯಲು ಪ್ರದೇಶ. ಇದು ಉತ್ತರದಲ್ಲಿ ಸಮುದ್ರ ಮಟ್ಟಕ್ಕಿಂತ 450ರಿಂದ 760 ಮೀ.ಗಳಷ್ಟು ಎತ್ತರವಾಗಿದೆ. ದಕ್ಷಿಣದಲ್ಲಿ ಅದು 900ರಿಂದ 1200 ಮೀ.ಗಳಷ್ಟು ಎತ್ತರವುಳ್ಳದ್ದಗಿದೆ. ಮಧ್ಯದಲ್ಲಿ 150 ಉತ್ತರ ಅಕ್ಷಾಂಶದ ಬಳಿ ಹರಿಯುವ ದೂಧ್ಗಂಗಾ ನದಿಯು ಪ್ರಸ್ಥಭೂಮಿಯನ್ನು ಎರಡು ಭಾಗಗಳಾಗಿ ವಿಭಾಗಿಸುತ್ತದೆ. ಅವು ಉತ್ತರ ಮೈದಾನ ಮತ್ತು ದಕ್ಷಿಣ ಮೈದಾನಗಳೆನಿಸಿವೆ.

ಉತ್ತರ ಮೈದಾನ ಅಥವಾ ಉತ್ತರದ ಒಳನಾಡು:-

ಮಲೆನಾಡಿನ ಪೂರ್ವಭಾಗ ಮತ್ತು ಬಳ್ಳಾರಿ ಜಿಲ್ಲೆಯ ಉತ್ತರ ಭಾಗಕ್ಕಿರುವ ಪ್ರದೇಶವೇ ಉತ್ತರ ಮೈದಾನ. ಇದು ಮರಗಳಿಲ್ಲದ ವಿಸ್ತಾರವಾದ ಪ್ರಸ್ಥಭೂಮಿ ಭೂದೃಶ್ಯವಾಗಿದ್ದು, ಸರಾಸರಿ ಸಮುದ್ರಮಟ್ಟದಿಂದ 365ರಿಂದ 610 ಮೀ. ಗಳಷ್ಟು ಎತ್ತರವಾಗಿದೆ. ಅಷ್ಟೊಂದು ಏರಿಳಿತಗಳಿಲ್ಲದ ಮೈದಾನದಲ್ಲಿ ಅಲ್ಲಲ್ಲಿ ಪ್ರತ್ಯೇಕಗೊಂಡ ಬೆಟ್ಟಗಳು ಕಂಡು ಬರುತ್ತವೆ. ಅವುಗಳಲ್ಲಿ ನರಗುಂದ ಗುಡ್ಡ (798 ಮೀ), ಪರಸಗಡ ಗುಡ್ಡ (758ಮೀ), ಇಳಕಲ್ ಗುಡ್ಡ (798 ಮೀ), ಶ್ರೀಮಂತ ಬೆಟ್ಟ (712 ಮೀ), ಗುರುಮಟಕ್ (688ಮೀ) ಮತ್ತು ಔರಾದ (678 ಮೀ.)ಗುಡ್ಡಗಳು ಪ್ರಮುಖವಾಗಿವೆ.

ಪ್ರದೇಶವು ಪಶ್ಚಿಮದಿಂದ ಪೂರ್ವದ ಕಡೆಗೆ ಇಳಿಜಾರನ್ನು ಹೊಂದಿದೆ. ಇದನ್ನನುಸರಿಸಿ ಕೃಷ್ಣಾ, ಭೀಮಾ, ದೂಧ್ಗಂಗಾ, ಮಲಪ್ರಭಾ ಹಾಗೂ ಅವುಗಳ ಉಪನದಿಗಳು ಹರಿಯುತ್ತವೆ. ಅದಾಗ್ಯೂ ಕೃಷ್ಣಾ ಮತ್ತು ಅದರ ಉಪ ನದಿಗಳ ಕೊಡುಗೆಯು ಮಹತ್ವವುಳ್ಳದ್ದಾಗಿದೆ. ಪ್ರದೇಶಗಳಲ್ಲಿ ಅನೇಕ ಕಂದರ ಮತ್ತು ಜಲಪಾತಗಳಿವೆ. ಇವುಗಳಲ್ಲಿ ಗೋಕಾಕ(62 ಮೀ) ಜಲಪಾತ, ಛಾಯಾ ಭಗವತಿ (122 ಮೀ.) ಜಲಪಾತ ಮತ್ತು ಸೊಗಲ ಜಲಪಾತಗಳು ಪ್ರಮುಖವಾಗಿವೆ.

ಉತ್ತರ ಮೈದಾನವು ಮಲೆನಾಡಿನ ಪೂರ್ವ ಭಾಗಕ್ಕಿದ್ದು, ಅದು "ಮಳೆ ನೆರಳಿನ ಪ್ರದೇಶ'ವಾಗಿರುತ್ತದೆ. ಇಲ್ಲಿನ ವಾರ್ಶಿಕ ಸರಾಸರಿ ಮಳೆ ಪ್ರಮಾಣವು 700 ಮಿ.ಮೀ.ಗಳಾಗಿರುತ್ತದೆ. ಅನಿರ್ದಿಷ್ಟ ಮತ್ತು ಅಕಾಲಿಕ ಮಳೆಯ ಹಂಚಿಕೆಯ ಪರಿಣಾಮದಿಂದ ಪ್ರದೇಶವು ಆಗಾಗ್ಗೆ ಬರಗಾಲಕ್ಕೆ ತುತ್ತಾಗುವುದು. ಅದರಲ್ಲೂ ಭಾಗಕ್ಕೆ ಸೇರಿದ ರಾಯಚೂರು, ಗುಲ್ಬರ್ಗ, ಬಿಜಾಪುರ ಮತ್ತು ಬೀದರ್ ಜಿಲ್ಲೆಗಳು ಹೆಚ್ಚು ಬರಗಾಲವನ್ನು ಎದುರಿಸುತ್ತವೆ. ಪರಿಣಾಮವಾಗಿ ಇಲ್ಲಿ ಜನವಸತಿ ವಿರಳ. ಕಬ್ಬು, ಹತ್ತಿ, ತಂಬಾಕು, ಭತ್ತ, ಜೋಳ ಮುಂತಾದ ಕೃಶಿ ಬೆಳೆಗಳನ್ನು ಇಲ್ಲಿ ಬೆಳೆಯುವರು.

ದಕ್ಷಿಣ ಮೈದಾನ ಅಥವಾ ದಕ್ಷಿಣ ಒಳನಾಡು:-

ದಕ್ಷಿಣ ಮೈದಾನ ಪ್ರದೇಶವು ಮಲೆನಾಡಿನ ಪೂರ್ವ ಭಾಗ, ಬಳ್ಳಾರಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹಂಚಿಕೆಯಾಗಿದೆ. ದಕ್ಷಿಣ ಮೈದಾನವು ಉತ್ತರ ಮೈದಾನಕ್ಕಿಂತ ಮೇಲ್ಮೈ ಲಕ್ಷಣಗಳಲ್ಲಿ ಭಿನ್ನವಾಗಿದೆ. ಇದು ಉತ್ತರ ಮೈದಾನಕ್ಕಿಂತ ಎತ್ತರವಾಗಿದ್ದು, ಸರಾಸರಿ ಸಮುದ್ರ ಮಟ್ಟಕ್ಕಿಂತ 915ರಿಂದ 975ಮೀ.ಗಳಷ್ಟು ಎತ್ತರವಾಗಿದೆ. ಆದರೂ ಕೆಲವು ಭಾಗಗಳಲ್ಲಿ ಎತ್ತರವು 1500 ಮೀ.ಗಳಿಗಿಂತಲೂ ಹೆಚ್ಚಿರುವುದು. ರಾಜ್ಯದ ದಕ್ಷಿಣ ಗಡಿಯಿಂದ ಉತ್ತರದ ಕಡೆಗೆ ಬೆಟ್ಟಗಳ ಸಾಲು ಮೈದಾನದ ಭಾಗದಲ್ಲಿ ಹಬ್ಬಿವೆ. ಅದು ಮೈಸೂರು ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಗಳಿಂದ ಪಾವಗಡದವರೆಗೂ ವಿಸ್ತರಿಸಿದೆ. ದಕ್ಷಿಣ ಮೈದಾನವು ಕೆಂಪು ಮತ್ತು ಮರಳು ಮಿಶ್ರಿತ ಮಣ್ಣಿನಿಂದ ಆವರಿಸಿದೆ. ಇದು ಸಹ ಮಳೆಯ ನೆರಳಿನ ಪ್ರದೇಶವಾಗಿದ್ದು, ಮಳೆಯ ಹಂಚಿಕೆಯಲ್ಲಿ ಅಸಮಾನತೆ ಮತ್ತು ಅಕಾಲಿಕತೆಯು ಕಂಡುಬರುತ್ತದೆ.

ಈ ಮೈದಾನದಲ್ಲಿ ಕಾವೇರಿ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಹರಿಯುತ್ತವೆ. ಪ್ರದೇಶವು ವರ್ಷಕ್ಕೆ 500ರಿಂದ 700 ಮೀ.ಮೀ.ಗಳಷ್ಟು ಮಳೆಯನ್ನು ಪಡೆಯುತ್ತದೆ. ಈಗ ಇಲ್ಲಿ ಭತ್ತ, ರಾಗಿ, ಜೋಳ, ಹಿಪ್ಪುನೇರಳೆ, ಕಬ್ಬು ಮತ್ತು ಹೊಗೆ ಸೊಪ್ಪುಗಳು ಪ್ರಮುಖ ಕೃಶಿ ಬೆಳೆಗಳಾಗಿರುತ್ತವೆ.

 

ಇತಿಹಾಸದ ಮೇಲೆ ಭೌಗೋಳಿಕ ಅಂಶಗಳ ಪ್ರಭಾವ:

ಪಶ್ಚಿಮಘಟ್ಟಗಳಲ್ಲಿ ಆರಂಭಿಕ ರಾಜಮನೆತನಗಳ ಉದಯ

ನದಿ ತೀರಗಳು ಮತ್ತು ಫಲವತ್ತಾದ ಬಯಲುಗಳು ರಾಜಮನೆತನಗಳ ಉಗಮಕ್ಕೆ ಹಿನ್ನೆಲೆ ಒದಗಿಸಿದವು

ಕೃಷ್ಣ-ತುಂಗಭದ್ರ ದೊ-ಅಬ್‌ ಪ್ರದೇಶ ರಾಜಮನೆತನಗಳಿಗೆ ಶ್ರೀಮಂತಿಕೆ ಒದಗಿಸಿದವು

ಕರಾವಳಿಯ ಕಾರಣ ವಿದೇಶ ವ್ಯಾಪಾರ ವೃದ್ಧಿ

ನೌಕಾಬಲದ ಅಭಿವೃದ್ಧಿ

ಕರಾವಳಿಯ ಪ್ರತ್ಯೇಕತೆ ವಿಶಿಷ್ಟ ಸಂಸ್ಕೃತಿ ಮತ್ತು ಸ್ವತಂತ್ರ ಮನೋಭಾವ ಬೆಳೆಯಲು ಕಾರಣ

ದಕ್ಷಿಣದಲ್ಲಿದ್ದ ಪೂರ್ವ-ಪಶ್ಚಿಮದ ಘಟ್ಟಗಳ ಸಂಗಮವು ತಮಿಳು ರಾಜ್ಯಗಳ ವಿಸ್ತರಣೆಗೆ ತಡೆ ಒಡ್ಡಿದ್ದವು

ತುಂಗಭದ್ರೆಯು ರಾಜಕೀಯ ವಿಭಜನೆಗೆ ಕಾರಣವಾಗಿದೆ

ಪಶ್ಚಿಮಘಟ್ಟದ ಅರಣ್ಯಗಳು ನೈಸರ್ಗಿಕ ಸಂಪತ್ತಿನ ಆಗರಗಳಾಗಿವೆ

ಒರಟಾದ ಬೆಣಚು ಕಲ್ಲು ಶಿಲಾಯುಗದ ಮಾನವನಿಗೆ ನೆಲೆ ಒದಗಿಸಿದವು

ಮರಳುಕಲ್ಲು ಮತ್ತು ಬಳಪದ ಕಲ್ಲುಗಳು ಶಿಲ್ಪಕಲೆಗೆ ಅವಕಾಶ ಒದಗಿಸಿದವು

ಉತ್ತರ-ದಕ್ಷಿಣಗಳ ಸಂಗಮ ಸ್ಥಾನವೆನಿಸಿದೆ

ಕರ್ನಾಟಕ ಸಂಗೀತ ಮತ್ತು ವೇಸರ ಶೈಲಿಗಳ ಉದಯ

 

ಆಕರಗಳು:-

ಕರ್ನಾಟಕದ ಸಂಕ್ಷಿಪ್ತ ಇತಿಹಾಸ – ಡಾ. ಸೂರ್ಯನಾಥ ಕಾಮತ್.

ಕರ್ನಾಟಕದ ಪ್ರಾಕೃತಿಕ ಲಕ್ಷಣಗಳು ಲೇಖನದಿಂದ; ಲೇಖಕರು - ಡಾ: ಎಂ. ಏನ್. ಕಟ್ಟಿ. ಕೃತಿ: ಕರ್ನಾಟಕ ಸಂಗಾತಿ


Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources