ಹಲಗಲಿಯ ಬೇಡರು ಮತ್ತು ಮುಂಡರಗಿ ಭೀಮರಾಯ
ಮುಂಡರಗಿ ಭೀಮರಾವ್
1857ರ ಕ್ರಾಂತಿಯಲ್ಲಿ
ಬ್ರಿಟಿಷರ ವಿರುದ್ಧ ಹೋರಾಡಿದ ವೀರ.
ಇವನ ತಾತ ಮೊಂಡಗೈ
ಭೀಮರಾಯ ಡಂಬಳದ ದೇಸಾಯಿಯ ಸಚಿವನಾಗಿದ್ದ.
ತಂದೆ ಪೇಶ್ವೆಯ ಕೈಕೆಳಗೆ ಅಧಿಕಾರಿಯಾಗಿದ್ದ.
ಮುಂಡರಗಿ ಭೀಮರಾಯ ಹರಪನಳ್ಳಿ ಮತ್ತು
ಬಳ್ಳಾರಿಗಳಲ್ಲಿ ಮಾಮಲೆದಾರ ಆಗಿದ್ದ. ಇಂಗ್ಲಿಷ್,
ಮರಾಠೀ, ಕನ್ನಡ ಚೆನ್ನಾಗಿ ಬಲ್ಲವನಾಗಿದ್ದ.
ತನ್ನ ಮೇಲಿನ ಬ್ರಿಟಿಷ್ ಅಧಿಕಾರಿಗಳ
ನಡತೆ, ಮಾತು, ಮೇಲಾಗಿ ಅವರು
ಸ್ಥಳೀಯರನ್ನು ಕೀಳಾಗಿ ಕಾಣುತ್ತಿದ್ದ ದುರಹಂಕಾರ
ಪ್ರವೃತ್ತಿ ಮೊದಲಾದವುಗಳನ್ನು ಕಂಡರೆ ಕಿಡಿ ಕಿಡಿಯಾಗುತ್ತಿದ್ದ
ಈತ ಸ್ವಾತಂತ್ರ್ಯ ಸಾಧನೆಗಾಗಿ
ತಹತಹಪಡುತ್ತಿದ್ದ. ಆದಕಾರಣ ಬ್ರಿಟಿಷ್ ಅಧಿಕಾರಗಳಿಗೆ
ಅವನ ಮೇಲೊಂದು ಕಣ್ಣಿದ್ದೇ
ಇತ್ತು. ಯಾವುದೋ ಪ್ರಕರಣದಲ್ಲಿ ಭೀಮರಾಯನ
ಮೇಲೆ ಇಲ್ಲದ ಸಲ್ಲ ಆರೋಪಗಳನ್ನು
ಮಾಡಿ ಅವನನ್ನು ಕೆಲಸದಿಂದ ತೆಗೆದುಹಾಕಿದರು.
ಅಂದಿನಿಂದಲೇ
ಬ್ರಿಟಿಷ್ ಆಡಳಿತವನ್ನು ನಿರ್ಮೂಲ ಮಾಡಲು ಪಣತೊಟ್ಟ.
1857ರ ಮಹಾಕ್ರಾಂತಿ ಕಾಲದಲ್ಲಿ ಬ್ರಿಟಿಷರ ವಿರುದ್ಧ
ಹರಡಿದ್ದ ಅಸಂತೃಪ್ತಿ. ಮೊಗಲ್ ಬಾದಷಾ ಮತ್ತು
ಮರಾಠ ಸರದಾರರ ಯೋಜನೆಗಳು ಇವನಿಗೆ
ಸ್ಫೂರ್ತಿಯಾದವು. ರಹಸ್ಯಾಲೋಚನೆಗಳಿಗೆ ಮೊದಲಿಟ್ಟು ಸೊರಟೂರು ದೇಸಾಯಿ
ಮೂಲಕ ನಾನಾ ಸ್ನೇಹ ಸಂಪರ್ಕ
ಬೆಳೆಸಿದ. ಹಮ್ಮಿಗೆ ಕೆಂಚನ ಗೌಡ,
ಡಂಬಳದ ದೇಶಮುಖ. ಗೋವಿನಕೊಪ್ಪದ ದೇಸಾಯಿ-ಇವರೆಲ್ಲ ಭೀಮರಾಯನ ಅಂತರಂಗಕ್ಕೆ
ಸೇರಿದರು. ಬ್ರಿಟಿಷರನ್ನು ಓಡಿಸಲು ಕ್ರಾಂತಿಯನ್ನು ಹೇಗೆ
ವ್ಯವಸ್ಥೆ ಮಾಡಬೇಕು. ಜನರನ್ನು ಇದಕ್ಕೆ
ಹೇಗೆ ಸಿದ್ದಗೊಳಿಸಬೇಕು. ಶಸ್ತ್ರಾಸ್ತ್ರ ಮಾಡಿ ಒಂದು ತೀರ್ಮಾನಕ್ಕೆ
ಬಂದ. ನರಗುಂದದ ಬಾಬಾಸಾಹೇಬನೂ ಈ
ಸಂಚಿಗೆ ಸಿದ್ಧನಾದ.
ಭೀಮರಾಯ ಜನರ ವಿಶ್ವಾಸ ಗಳಿಸಿದ್ದ.
ರಾಯಚೂರು ಜಿಲ್ಲೆಯ ಕೊಪ್ಪಳದಲ್ಲಂತೂ ಇವನ
ಪ್ರಭಾವ ಅಪಾರವಾಗಿತ್ತು. ಬ್ರಿಟಿಷ್ ಅಧಿಕಾರಿಗಳು ಇವನ
ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದರು. 1857ರ ಆಗಸ್ಟ್
1ರಂದು ಧಾರವಾಡ ಕಲೆಕ್ಟರ್ ತನ್ನನ್ನು
ಬಂದು ನೋಡು ಎಂದು ಪತ್ರ
ಬರೆದ. ಭೀಮರಾಯ ಕಲೆಕ್ಟರ್ನ್ನು
ಗೌರವದಿಂದ ಕಂಡು, ಹಿಂತಿರುಗಿ ತನ್ನ
ಬಂಡಾಯದ ಸಿದ್ಧತೆಯನ್ನು ಮುಂದುವರಿಸಿದ. ಶಸ್ತ್ರಾಸ್ತ್ರಗಳ ಸಂಗ್ರಹ ಮಾಡಲಾರಂಭಿಸಿದ. ಇದು
ಹೇಗೂ ಬ್ರಿಟಿಷರಿಗೆ ಗೊತ್ತಾಯಿತು. ಡಂಬಳದ ಅಧಿಕಾರಿ ಹಮ್ಮಿಗೆಯ
ಕೆಂಚಿನ ಗೌಡನ ಮನೆಯನ್ನು ಮುತ್ತಿ,
ಮದ್ದುಗುಂಡುಗಳನ್ನು ವಶಪಡಿಸಿಕೊಂಡ. ತನ್ನ ಗುಪ್ತಕಾರ್ಯ ಬೆಳಕಿಗೆ
ಬಂದುದನ್ನು ಗಮನಿಸಿದ ಭೀಮರಾಯ ನೇರ
ಕಾರ್ಯಚರಣೆ ಆರಂಭಿಸಿದ, ರೈತಜನರಿಗೆ ಕ್ರಾಂತಿತತ್ತ್ವ
ಸಾರಿದ. ಬ್ರಿಟಿಷ್ ಸರ್ಕಾರಕ್ಕೆ ಕಂದಾಯ
ಕೊಡಬೇಡಿರೆಂದು ಹೇಳಿದ. ನರಗುಂದದ ದೇಸಾಯಿ,
ಆನೆಗೊಂದಿಯ ಅರಸರಿಗೆ ಪತ್ರ ಬರೆದು
ಹೋರಾಟಕ್ಕೆ ಅವರ ಬೆಂಬಲ ಬೇಡಿದ.
ಮೊದಲು ಭೀಮರಾಯ ಮತ್ತು ಕೆಂಚನಗೌಡ
ಡಂಬಳವನ್ನು ಮುತ್ತಿ ಆ ನಗರವನ್ನು
ಸೂರೆಮಾಡಿದರು. ಭೀಮರಾಯ ಅಲ್ಲಿಂದ ಗದಗಕ್ಕೆ
ಗದಗದಿಂದ ಕೊಪ್ಪಳಕ್ಕೆ ನಡೆದ.
ಈ ಸುದ್ದಿ ಬ್ರಿಟಿಷರಿಗೆ ಮುಟ್ಟಿತು.
ಧಾರವಾಡ, ಬಳ್ಳಾರಿ, ರಾಯಚೂರು ಕಡೆಗಳಿಂದ
ಬ್ರಿಟಿಷ್ ಸೈನ್ಯಗಳು ಕೊಪ್ಪಳದ ಕಡೆ
ಧಾವಿಸಿದುವು. ಹೈದರಾಬಾದಿನಿಂದ ಟೇಲರ್ ಸಾಹೇಬನ ನೇತೃತ್ವದಲ್ಲಿ
ಒಂದು ದಳ ಬಂತು.
ಮೇಜರ್ ಹೋಗನ್ ನೇತೃತ್ವದಲ್ಲಿದ್ದ ಬ್ರಿಟಿಷ್
ಸೈನ್ಯ ಕೊಪ್ಪಳದ ಕೋಟೆಯನ್ನು ಸುತ್ತುವರಿದು
ಭೀಮರಾಯನನ್ನು ಶರಣಾಗುವಂತೆ ಆಜ್ಞೆ ಮಾಡಿತು (31-5-1858). ಆದರೆ
ಭೀಮರಾಯ ಯುದ್ದಕ್ಕೇ ಸಿದ್ಧನಾದ. ಉಭಯ
ಸೈನ್ಯಗಳಿಗೂ ಘೋರ ಯುದ್ಧವಾಯಿತು. ಕೆಲವು
ವಂಚಕರ ಸಹಾಯದಿಂದ ಬ್ರಿಟಿಷ್ ಸೈನ್ಯ
ಕೋಟೆಯೊಳಗೂ ನುಗ್ಗಿತು. ಭೀಮರಾಯ ವೀರಾವೇಶದಿಂದ
ಹೋರಾಡಿ ರಣರಂಗದಲ್ಲಿ ಅಸುನೀಗಿದ (1-6-1858).
ಮಾಹಿತಿ ಮೂಲ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಬ್ರಿಟಿಷರ ನಿದ್ದೆಗೆಡಿಸಿದ್ದ ಹಲಗಲಿ ಬೇಡರ ಬಗ್ಗೆ
ನಿಮಗೆಷ್ಟು ಗೊತ್ತು?
ಬಾಗಲಕೋಟೆ,
ಆಗಸ್ಟ್, 08: 1857ರ ಪ್ರಥಮ
ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ
ದಂಗೆಯ ಬಳಿಕ ಭಾರತೀಯ ವೀರರ
ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುವ ಹುನ್ನಾರದಿಂದ ಬ್ರಿಟಿಷರು ನಿಶಸ್ತ್ರೀಕರಣ ಕಾಯ್ದೆ
ಜಾರಿಗೆ ತಂದಿದ್ದರು. ಆದರೆ ಈ ಕಾಯ್ದೆಯನ್ನು
ವಿರೋಧಿಸಿದ್ದ ಆ ಒಂದು
ಪುಟ್ಟ ಗ್ರಾಮ, ಬ್ರಿಟಿಷ್ ಕಂಪನಿ
ಸರ್ಕಾರದ ನಿದ್ದೆಗೆಡಿಸಿತ್ತು. ಸ್ವಾತಂತ್ರ್ಯ, ಸ್ವಾಭಿಮಾನಕ್ಕಾಗಿ ಕಂಪನಿ ಸರ್ಕಾರದ ವಿರುದ್ಧ
ಹಲಗಲಿ ಗ್ರಾಮದ ವೀರ ಕಲಿಗಳು
ಸೆಡ್ಡು ಹೊಡೆದು ನಿಂತಿದ್ದರು.
ಹಲಗಲಿ ಗ್ರಾಮದ ವೀರಕಲಿಗಳು ಝಳುಪಿಸುತ್ತಿದ್ದ
ಕತ್ತಿಯ ಹೊಳಪಿಗೆ ಬ್ರಿಟಿಷರು ನಡುಗಿ
ಹೋಗಿದ್ದರು. ನೇರವಾಗಿ ಇವರನ್ನು ಮಣಿಸಲಾಗದೇ
ಕುತಂತ್ರದಿಂದ ಊರಿಗೆ ಬೆಂಕಿ ಹಚ್ಚಿ
ಮಕ್ಕಳು, ಮರಿ ಎನ್ನದೇ ಹಲವು
ವೀರರನ್ನು ಸುಟ್ಟು ಹಾಕಿದರು. ಮತ್ತೆ
ಕೆಲವರನ್ನು ಗಲ್ಲಿಗೇರಿಸಿದರು. ಅಂದು ಆ ವೀರರು
ಹಚ್ಚಿದ್ದ ಸ್ವಾತಂತ್ರ್ಯ ಕಿಡಿ ಪ್ರಜ್ವಲಿಸಿದ್ದು, ಇತಿಹಾಸವಾಗಿ
ಉಳಿದಿದೆ.
ಹೀಗೆ ಜೋಡಿ ಪ್ರತಿಮೆಗಳಲ್ಲಿ ಇರುವವರ
ಹೆಸರು ಜಡಗಣ್ಣ, ಬಾಲಣ್ಣ. ಇವರು
ಶೂರರು, ವೀರರಾಗಿದ್ದರು. 1857ರ ಪ್ರಥಮ
ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದ್ದ
ವೇಳೆ ಕರ್ನಾಟಕದ ಬಾಗಲಕೋಟೆ ಜಿಲ್ಲೆ
ಮುಧೋಳ ತಾಲೂಕಿನ ಹಲಗಲಿ ಗ್ರಾಮದ
ಬೇಡರು ನಡೆಸಿರುವ ಹೋರಾಟ ಕಂಪನಿ
ಸರ್ಕಾರಕ್ಕೆ ಸವಾಲು ಆಗಿತ್ತು.
ಹಲಗಲಿಯಲ್ಲಿ
ಬ್ರಿಟೀಷರ ಕುತಂತ್ರ
ಬ್ರಿಟಿಷರು
ಜಾರಿಗೆ ತಂದಿದ್ದ ನಿಶಸ್ತ್ರೀಕರಣದ ವಿರುದ್ಧ
ಸೆಡ್ಡು ಹೊಡೆದು ನಿಂತಿದ್ದ ಹಲಗಲಿ
ಬೇಡರು ಆಂಗ್ಲರ ವಿರುದ್ಧ ನೇರ
ಯುದ್ಧಕ್ಕೆ ಇಳಿದಿದ್ದರು. ಹುಟ್ಟು ವೀರರಾಗಿದ್ದ ಹಲಗಲಿ
ಬೇಡರನ್ನು ಸೋಲಿಸುವುದು ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಮಾಡಿದ ತಂತ್ರ, ಕುತಂತ್ರಗಳು
ವಿಫಲ ಆಗುತ್ತಲೇ ಬಂದಿದ್ದವು. ಹೀಗಾಗಿ
ಮಧ್ಯರಾತ್ರಿ ಭಾರೀ ಸೈನಿಕರ ಜೊತೆಗೆ
ನುಗ್ಗಿದ್ದ ಹೇಡಿ ಬ್ರಿಟಿಷರು ಊರಿಗೆ
ಬೆಂಕಿ ಹಚ್ಚಿದ್ದರು. ಇದರಲ್ಲಿ ಅನೇಕರು ಪ್ರಾಣ
ಕಳೆದುಕೊಂಡರು. ಬ್ರಿಟಿಷರ ವಿರುದ್ಧ ಕತ್ತಿ
ಝಳಪಿಸಿದ್ದ ಹಲಗಲಿಯ ಜಡಗಾ, ಬಾಲ
ಸೇರಿದಂತೆ ಅನೇಕರನ್ನು ಗಲ್ಲಿಗೇರಿಸಿದ್ದರು.
ದೇಶಕ್ಕಾಗಿ ಪ್ರಾಣ
ತೆತ್ತ
ವೀರಕಲಿಗಳು
ಸ್ವಾತಂತ್ರ್ಯ
ಹಾಗೂ ಸ್ವಾಭಿಮಾನಕ್ಕಾಗಿ ಹೋರಾಡಿದ ಈ ವೀರರ
ಸಾಹಸಗಾಥೆ ಇವತ್ತಿಗೂ ಅಚ್ಚಳಿಯದೇ ಉಳಿದಿದೆ.
ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನು
ಕಳೆದುಕೊಂಡು ಹುತಾತ್ಮರಾಗಿರುವ ಹಲಗಲಿ ಬೇಡರ ಇತಿಹಾಸ
ರೋಚಕವಾಗಿದೆ. ಅದರಲ್ಲಿ ಜಡಗಾ ಮತ್ತು
ಬಾಲ ಅವರ ಪ್ರತಿಮೆಗಳು
ಇದೀಗ ಹಲಗಲಿ ಗ್ರಾಮದಲ್ಲಿ ನಿರ್ಮಾಣ
ಮಾಡಲಾಗಿದೆ. ಆದರೆ ಕಂಚಿನ ಪ್ರತಿಮೆಗಳು
ನಿರ್ಮಾಣ ಮಾಡಬೇಕು. ಇವರ ಇತಿಹಾಸ,
ದೇಶಪ್ರೇಮವನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ
ಕಾರ್ಯಗಳು ಇಲ್ಲಿ ಆಗಬೇಕಿದೆ ಎಂದು
ಅಲ್ಲಿನ ಸ್ಥಳೀಯರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬ್ರಿಟಿಷರ
ನಿದ್ದೆಗೆಡಿಸಿದ್ದ ವೀರಕಲಿಗಳು
ಬ್ರಿಟಿಷರ
ವಿರುದ್ಧ ತೊಡೆತಟ್ಟಿ ನಿಂತಿದ್ದ ಹಲಗಲಿ
ಬೇಡರ ಪೈಕಿ ಕಂಪನಿ ಸರ್ಕಾರಕ್ಕೆ
ಒಬ್ಬಿಬ್ಬರ ಮೇಲೆ ದ್ವೇಷ ಇರಲಿಲ್ಲ.
ಇಡೀ ಗ್ರಾಮವನ್ನು ಸರ್ವನಾಶ
ಮಾಡುವ ನಿರ್ಧಾರವನ್ನು ಮಾಡಿದರು. ಎರಡು ಬಾರಿ
ತಮಗೆ ಆಗಿದ್ದ ಸೋಲು, ಅವಮಾನದ
ಸೇಡಿನಲ್ಲಿ ಬೆಂದಿದ್ದ ಬ್ರಿಟಿಷರು, ಸೇನೆಯೊಂದಿಗೆ
ನುಗ್ಗಿ ಗ್ರಾಮವನ್ನು ಲೂಟಿ ಮಾಡುತ್ತಾರೆ. ಸಿಕ್ಕ
ಸಿಕ್ಕವರನ್ನು ಕೊಲೆ ಮಾಡುತ್ತಾರೆ. ಕೊನೆಗೆ
ಇಡೀ ಊರಿಗೆ ಬೆಂಕಿ
ಹಚ್ಚಿ ಸುಟ್ಟು ಬೂದಿ ಮಾಡಿ,
ಕುರುವು ಸಿಗದಂತೆ ಮಾಡಿದರು.
ಹೋರಾಟಗಾರರ ಕಂಚಿನ ಪ್ರತಿಮೆಗೆ
ಪಟ್ಟು
ಈ ವೇಳೆ ಬ್ರಿಟಿಷರ ನಿದ್ದೆಗೆಡಿಸಿದ್ದ
ಜಡಗಾ, ಬಾಲ ಸೇರಿ ನಾಲ್ವರನ್ನು
ಮುಧೋಳ ನಗರದ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು.
ಆ ಮೂಲಕ ಬ್ರಿಟಿಷರ
ವಿರುದ್ಧ ಹೋರಾಟಕ್ಕೆ ಇಳಿದಯಂತೆ ಸಾರ್ವಜನಿಕರಲ್ಲಿ
ಭಯ ಹುಟ್ಟಿಸುವ ಕೆಲಸವನ್ನು
ಕಂಪನಿ ಸರ್ಕಾರ ಮಾಡಿತ್ತು. ಹೀಗೆ
ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು
ಹೊತ್ತಿಸಿ, ಸ್ವಾಭಿಮಾನಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ
ಎನ್ನುವ ಸಂದೇಶ ಸಾರಿ, ಕೊನೆಗೆ
ಗಲ್ಲಿಗೇರಿದರು.
ಬ್ರಿಟಿಷರ
ಕಪಿಮುಷ್ಠಿಯಿಂದ ಬಿಡಿಸಿ ಈ ದೇಶವನ್ನು
ಸ್ವಾತಂತ್ರ್ಯಗೊಳಿಸಲು ಹಲಗಲಿ ಬೇಡರಂತೆ ಲಕ್ಷಾಂತರ
ಜನರು ತಮ್ಮ ಪ್ರಾಣವನ್ನು ತ್ಯಾಗ
ಮಾಡಿದ್ದಾರೆ. ಅವರೆಲ್ಲರ ತ್ಯಾಗ, ಬಲಿದಾನದಿಂದಾಗಿ
ದೇಶ ಸ್ವಾತಂತ್ರ್ಯಗೊಂಡಿದೆ. ಅಂತಹ
ಮಹನಿಯರ ಬಗ್ಗೆ ಇಂದಿನ ಯುವಪೀಳಿಗೆಗೆ
ಹೆಚ್ಚೆಚ್ಚು ತಿಳಿಸಿಕೊಡುವ ಕೆಲಸ ಆಗಬೇಕು. ಆ
ನಿಟ್ಟಿನಲ್ಲಿ ದೇಶಕ್ಕಾಗಿ ಪ್ರಾಣವನ್ನು ಬಲಿಕೊಟ್ಟಿರುವ
ವೀರರು, ಹುತಾತ್ಮರನ್ನು ನೆನಪಿಸುವ ನಿಟ್ಟಿನಲ್ಲಿ ಅವರು
ಬಾಳಿ, ಬದುಕಿದ ಪ್ರದೇಶಗಳು, ಜಾಗಗಳನ್ನು
ಅಭಿವೃದ್ಧಿಪಡಿಸಲು ಮುಂದಾಗಬೇಕಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
Comments
Post a Comment