ಕರ್ನಾಟಕದಲ್ಲಿ ಇತಿಹಾಸ ಪೂರ್ವ ಕಾಲ: ಹಳೆ, ಮಧ್ಯ ಮತ್ತು ನವಶಿಲಾಯುಗಗಳು.

ಸೂಚನೆ:- ಇಲ್ಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.


   ಗತಕಾಲದ ಘಟನೆಗಳಲ್ಲಿ ಇತಿಹಾಸದ ಕಾಲ ಆರಂಭವಾಗುವ ಮುಂಚಿನ ಅಂದರೆ ಇತಿಹಾಸಪೂರ್ವ ಕಾಲದ ಘಟನೆಗಳು ಮಾನವನ ಬೆಳವಣಿಗೆಯ ವಿವಿಧ ಹಂತಗಳನ್ನು ಅರಿತುಕೊಳ್ಳಲು ಸಹಾಯಕವಾಗಿವೆ. ಇತಿಹಾಸಪೂರ್ವ ಕಾಲವು ಬರಹ ರೂಪವು ಆರಂಭವಾಗುವುದಕ್ಕಿಂತ ಪೂರ್ವಕಾಲದ ಅವಧಿಯಾಗಿದೆ. ಆ ಕಾಲದ  ಇತಿಹಾಸದ ಅಧ್ಯಯನಕ್ಕೆ ನೆರವಾಗುವ ಆಕರಗಳು ಪಳೆಯುಳಿಕೆ ಸ್ವರೂಪದವು ಅಂದರೆ ಪುರಾತತ್ವ ಆಧಾರಗಳಾಗಿವೆ. ಇತಿಹಾಸಪೂರ್ವ ಕಾಲದಲ್ಲಿ ಕಾಣಬರುವ ಹಳೇ, ಮಧ್ಯ ಮತ್ತು ನವ ಶಿಲಾಯುಗಗಳ ಕಾಲಘಟ್ಟಗಳಲ್ಲಿ ಕಾಣಸಿಗುವ ಪುರಾತತ್ವ ಆಕರಗಳು ಮತ್ತು ಆಯುಧಗಳ ವಿನ್ಯಾಸಗಳಲ್ಲಿ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

   ಭೌಗೋಳಿಕವಾಗಿ ಕರ್ನಾಟಕವು ಪ್ರಾಚೀನ ಭಾರತದ ಒಂದು ಭಾಗವಾಗಿದ್ದು, ದಖನ್ ಭಾಗದಲ್ಲಿದೆ. ಈ ಪ್ರದೇಶದ ಜನರ ಜೀವನದ ನಡತೆಯು ಪ್ರಾದೇಶಿಕ ಭೌಗೋಳಿಕ ಲಕ್ಷಣಗಳನ್ನು ಆಧರಿಸಿದೆ. ಇತಿಹಾಸಪೂರ್ವ ಕಾಲದ ಜೀವನ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವಾಗಿದ್ದಿತು. ಅವರು ಗುಹೆಗಳಲ್ಲಿ ವಾಸ ಮಾಡುತ್ತಿದ್ದು, ಕಲ್ಲಿನ ಆಯುಧಗಳು ಮತ್ತು ಮೂಲ ಸಾಧನಗಳನ್ನು ಬಳಕೆ ಮಾಡುತ್ತಿದ್ದರು. ಆದ್ದರಿಂದ ಕರ್ನಾಟಕ (ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ) ಇತಿಹಾಸ ಪೂರ್ವ ಸಂಸ್ಕೃತಿಯನ್ನು 'ಕೈ-ಕೊಡಲಿ'(hand-axe) ಸಂಸ್ಕೃತಿಯೆಂದು ಕರೆಯಲಾಗುತ್ತದೆ. ಕಾಲಕ್ರಮೇಣ ಈ ಜನತೆಯು ಅಭಿವೃದ್ಧಿಯತ್ತ ಸಾಗತೊಡಗಿ ಕೃಷಿಯ ಕಡೆಗೆ ತಿರುಗಿ ಒಂದೆಡೆ ನೆಲೆಸಿ ಸ್ಥಿರ ಜೀವನವನ್ನು ನಡೆಸತೊಡಗಿದರು.

   ಕರ್ನಾಟಕದಲ್ಲಿ ಇತಿಹಾಸ ಪೂರ್ವದ ಅವಧಿಯು ಸಾಕಷ್ಟು ವಿಕಾಸ ಹೊಂದಿರುವುದನ್ನು ಇತ್ತೀಚಿನ ಕೆಲವು ಸಂಶೋಧನೆಗಳಿಂದ ಗಮನಿಸಬಹುದು. ಆದರೆ ಕರ್ನಾಟಕದ ಇತಿಹಾಸ ಪೂರ್ವದ ಅಥವಾ ಪೂರ್ವೇತಿಹಾಸದ ವಿಸ್ತಾರವಾದ ಅಧ್ಯಯನ ಪ್ರಾರಂಭ ಮಾಡಿದ ಹೆಗ್ಗಳಿಕೆ ರಾಬರ್ಟ್ ಬ್ರೂಸ್ ಫೂಟ್ ಅವರದು. ಇವರ ಕಾರ್ಯವನ್ನು ನಂತರ ಬೇರೆ ವಿದ್ವಾಂಸರು ಮುಂದುವರಿಸಿದರು.

    ಇದುವರೆಗೂ ಕರ್ನಾಟಕದ ಇತಿಹಾಸಪೂರ್ವ ಕಾಲದ ಬಗೆಗೆ ಅಧ್ಯಯನ ನಡೆಸಿರುವ ವಿದ್ವಾಂಸರುಗಳ ಕೃತಿಗಳನ್ನು ಗಮನಿಸಿದಾಗ ಇಲ್ಲಿನ ಹಳೇ ಶಿಲಾಯುಗ, ನವ ಶಿಲಾಯುಗ ಮತ್ತು ಬೃಹತ್ ಶಿಲಾಯುಗದ ನೆಲೆಗಳನ್ನು ಹಾಗೂ ಆ ಜನತೆ ಬಳಸಿರುವ ವಿವಿಧ ಬಗೆಯ ವಸ್ತುಗಳಾದ ಮಣಿಗಳು, ಬಳೆಗಳು, ಮಡಿಕೆ-ಕುಡಿಕೆಗಳು, ಕಬ್ಬಿಣದ ವಸ್ತುಗಳು ಕಲ್ಲಿನ ಆಯುಧಗಳು ಮತ್ತು ಅವರ ಕರಕುಶಲತೆಯ ಬಗೆಗೆ ವಿಶೇಷ ಗಮನಹರಿಸಲಾಗಿದೆ ಎನ್ನಬಹುದು.

   ಬಿ.ಕೆ. ಗುರುರಾಜರಾವ್ ಅವರ ಪ್ರಕಾರ, ಕರ್ನಾಟಕದಲ್ಲಿ ಹಳೇ ಶಿಲಾಯುಗಕ್ಕೆ ಸೇರಿರುವ ಪ್ರಮುಖ ನೆಲೆಗಳು ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಗುಲ್ಬರ್ಗ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿವೆ. ಈ ಎಲ್ಲಾ ಪ್ರದೇಶಗಳಲ್ಲಿ ಆದಿಮಾನವನು ಬಳಸಿರುವ ಕೈಕೊಡಲಿಗಳು, ಕೈಗತ್ತಿಗಳು ಮತ್ತು ತೆಳುಪದರದ ಆಯುಧಗಳು ಸಂಶೋಧನೆಯಲ್ಲಿ ಕಂಡುಬಂದಿವೆ. ಈ ಅವಧಿಯಲ್ಲಿ ಪ್ರಾಣಿಗಳ ಬೇಟೆಯಾಡುವಿಕೆಗಾಗಿ ಅವರು ಬಳಸುತ್ತಿದ್ದ ಆಯುಧಗಳು ಕೂಡ ವ್ಯತ್ಯಾಸವನ್ನು ಹೊಂದಿವೆ. ಭರ್ಜಿಗಳು ಮತ್ತು ಈಟಿಗಳನ್ನು ಹರಿತವಾದ ಮೊನೆಗಳುಳ್ಳ ಕಲ್ಲು ಹಾಗೂ ಮೂಳೆಗಳಿಂದ ರಚಿಸುತ್ತಿದ್ದರು. ಕೈಕೊಡಲಿಗಳು ಮತ್ತು ತೆಳುಪದರದ ಕಲ್ಲಿನ ಆಯುಧಗಳನ್ನು ಮಾಂಸವನ್ನು ಕತ್ತರಿಸಲು ಹಾಗೂ ತಾತ್ಕಾಲಿಕ ವಾಸಸ್ಥಾನಗಳ ರಚನೆಗಾಗಿ ಮರಗಳನ್ನು ಕತ್ತರಿಸಲು ಬಳಕೆ ಮಾಡುತ್ತಿದ್ದರು. ಬೇಟೆಗಾರಿಕೆ ಆ ಕಾಲದ ಜನರ ಜೀವನದ ಮುಖ್ಯ ಭಾಗವಾಗಿದ್ದು. ಅದುವೇ ಅವರ ಸಾಮಾಜಿಕ ಜೀವನ ಮತ್ತು ಆರ್ಥಿಕ ಜೀವನದ ಬಗೆಯಾಗಿತ್ತು ಎಂದು ಹೇಳಬಹುದಾಗಿದೆ.

ಕರ್ನಾಟಕದ ಹಳೇ ಶಿಲಾಯುಗದ ನೆಲೆಗಳು ಮತ್ತು ಆಯುಧಗಳು

   ಹಳೇ ಶಿಲಾಯುಗದ ನೆಲೆಯಾಗಿರುವ ತುಮಕೂರಿನ ಬಾಣಸಂದ್ರ ಬೆಟ್ಟ ಪ್ರದೇಶವನ್ನು ಡಾ. ಎಮ್. ಶೇಷಾದ್ರಿ ಅವರು ಪತ್ತೆಹಚ್ಚಿದ್ದರು. ಬಾಗಲಕೋಟೆ ಜಿಲ್ಲೆಯ ನಂದಿಕೇಶ್ವರದಲ್ಲಿನ ನೆಲೆಯನ್ನು ಎಮ್.ಎನ್. ದೇಶಪಾಂಡೆ ಅವರು ಪತ್ತೆಹಚ್ಚಿದ್ದಾರೆ. ಇಲ್ಲಿ ಮುಖ್ಯವಾಗಿ ದೊರೆತಿರುವ ಆಯುಧಗಳೆಂದರೆ ಕೈ ಕೊಡಲಿಗಳು, ಕೈಗತ್ತಿಗಳು ಮತ್ತು ಬೆಣಚುಕಲ್ಲಿನ ಮಚ್ಚುಕತ್ತಿಗಳೇ ಆಗಿವೆ. ಧಾರವಾಡ ಜಿಲ್ಲೆಯ ಚೆನ್ನಾಪುರ ಬಳಿಯಲ್ಲಿನ ನೆಲೆಯಿಂದ ಎಮ್.ಎಸ್. ನಾಗರಾಜರಾವ್ ಅವರು ಆ ಕಾಲದ ಅವಶೇಷಗಳನ್ನು ಸಂಗ್ರಹಿಸಿದ್ದಾರೆ.    ಶ್ರೀ ಆರ್.ಎಸ್. ಪಪ್ಪುರವರು ಹಳೇ ಶಿಲಾಯುಗದ ಆಯುಧಗಳಾದ ಕೈಕೊಡಲಿಗಳು, ಕೈಗತ್ತಿಗಳು, ಮಂಡಲಾಕೃತಿಯ ಆಯುಧ,  ತೆಳು ಪದರಗಳುಳ್ಳ ಆಯುಧಗಳು, ತಿರುಳು ಆಯುಧಗಳು ಮತ್ತು ಬೆಣಚುಕಲ್ಲಿನ ಆಯುಧಗಳನ್ನು ಬೆಳಗಾವಿ, ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಪತ್ತೆಹಚ್ಚಿದ್ದಾರೆ.    ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಹಳೇ ಶಿಲಾಯುಗದ ಕಾಲದ ಮಚ್ಚುಗತ್ತಿಗಳನ್ನು ಪಿ. ರಾಜೇಂದ್ರನ್ ಸಂಶೋಧಿಸಿದ್ದಾರೆ.

   ಈ ಮೇಲಿನ ಎಲ್ಲಾ ನೆಲೆಗಳನ್ನು ಮತ್ತು ದೊರಕಿರುವ ಆಯುಧಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಹಳೇ ಶಿಲಾಯುಗದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿನ ಆಯುಧಗಳನ್ನು ಬಳಕೆ ಮಾಡಿರುವುದು ಕಂಡುಬರುತ್ತದೆ. ಅಲ್ಲದೇ ಅವರು ಬೇಟೆಗಾರಿಕೆ ಮತ್ತು ಆಹಾರ ಸಂಗ್ರಹಣೆಯ ಸಂಸ್ಕೃತಿಯನ್ನು ರೂಢಿಸಿಕೊಂಡಿರುವುದು ಸ್ಪಷ್ಟಗೊಳ್ಳುತ್ತದೆ. ಬೇಟೆಗಾರಿಕೆಯು ಅವರ ಪ್ರಧಾನ ವೃತ್ತಿಯಾಗಿತ್ತು. ಹಾಗಾಗಿ ಅವರು ಕಲ್ಲಿನಿಂದ ರಚಿಸಲ್ಪಟ್ಟ ಆಯುಧಗಳಾದ ಭರ್ಜಿಗಳು, ಕಲ್ಲಿನ ಅಥವಾ ಮೂಳೆಯ ಹರಿತವಾದ ಮೊನೆಗಳುಳ್ಳ ಈಟಿಗಳು, ಕೈಕೊಡಲಿಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಆ ಕಾಲದ ಮಾನವನು ಮಾಂಸ ಕತ್ತರಿಸಲು ಬಳಸುವ ನಯಗೊಳಿಸಿದ ಕಲ್ಲಿನ ಆಯುಧಗಳು ಹಾಗೂ ಮರಗಳ ರೆಂಬೆ ಮತ್ತು ಕೊಂಬೆಗಳನ್ನು ಕತ್ತರಿಸಲು ಬಳಸಿರುವ ಆಯುಧಗಳನ್ನು ಪತ್ತೆಹಚ್ಚಲಾಗಿದೆ.

 

ಮಧ್ಯಶಿಲಾಯುಗ ಕಾಲ

ಮಾನವನ ವಿಕಾಸದ ಹಾದಿಯಲ್ಲಿ ಕಾಣಸಿಗುವ ಮತ್ತೊಂದು ಕಾಲವೇ ಮಧ್ಯಶಿಲಾಯುಗ ಅಥವಾ ಸೂಕ್ಷ್ಮ ಶಿಲಾಯುಗ. ಈ ಯುಗದಲ್ಲಿ ರಚನೆಗೊಂಡಿರುವ ಆಯುಧಗಳು ಮತ್ತು ಸಾಧನಗಳು ಹಾಗೂ ಜನರ ಜೀವನ ಪದ್ಧತಿಯನ್ನು ಅವಲೋಕಿಸಿದಾಗ ಖಚಿತವಾದ ಬದಲಾವಣೆಯು ಕಾಣಸಿಗುವುದು. ಅಂದರೆ  ಈ ಯುಗ ದಲ್ಲಿಯೂ ಮನುಷ್ಯನ ಬುದ್ಧಿಶಕ್ತಿಯ ಬೆಳವಣಿಗೆಯಾಗಿದ್ದು ಮಾತ್ರವಲ್ಲದೇ, ತನ್ನ ಜೀವನೋಪಾಯಕ್ಕೆ ಬಳಕೆಯಾಗುವ ಆಯುಧಗಳು ಮತ್ತು ಉಪಕರಣಗಳಲ್ಲಿ ಬದಲಾವಣೆ ಮಾಡಿರುವುದು ಗೋಚರಿಸುತ್ತದೆ. ಈ ರೀತಿಯ ಕಲ್ಲಿನ ಆಯುಧ ಗಳ ರಚನೆಯು  ಪೂರ್ವ ಇತಿಹಾಸ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕರಕುಶಲಕರ್ಮಿಗಳು ಅಂದರೆ ಕಲ್ಲಿನ ಕೆಲಸಗಳಲ್ಲಿ ನಿಪುಣತೆಯನ್ನು ಹೊಂದಿರುವ ವರ್ಗದ ಅಸ್ಥಿತ್ವ, ಪರಿಶ್ರಮ ಮತ್ತು ನಿಪುಣತೆ ತೋರಿಸುತ್ತದೆ.

ಆಹಾರ ಸಂಗ್ರಹಣೆಯ ಪೂರ್ವಶಿಲಾಯುಗ ಮತ್ತು ಆಹಾರೋತ್ಪಾದನೆಯ ನವಶಿಲಾಯುಗಗಳ ನಡುವಣದ ಕಾಲಘಟ್ಟದಲ್ಲಿನ ಮಧ್ಯಶಿಲಾಯುಗಕ್ಕೆ ಸೇರಿದ ಸಂಸ್ಕೃತಿಯ ಅವಶೇಷಗಳು ಯುರೋಪ್ ಮತ್ತಿತರೆಡೆಗಳಲ್ಲಿ ಕಂಡುಬಂದಿವೆ. ಭಾರತದಲ್ಲಿ ಹಂತದ ಸಂಸ್ಕೃತಿ ಇರಲಿಲ್ಲವೆಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಭಾರತದ ಹಲವೆಡೆಗಳಲ್ಲಿ ಕಾಲಕ್ಕೆ ಸೇರಿದ್ದವೆನ್ನಲಾದ ಅವಶೇಷಗಳು ದೊರಕಿರುವುದು ಗಮನಾರ್ಹ. ಅಂತೆಯೇ ಕರ್ನಾಟಕದಲ್ಲೂ ಆ ಕಾಲದ ನೆಲೆಗಳು ಪತ್ತೆಯಾಗಿವೆ.

ಕರ್ನಾಟಕದ ಮಧ್ಯಶಿಲಾಯುಗದ ಆಯುಧಗಳ ಸ್ವರೂಪ

   ಮಧ್ಯಶಿಲಾಯುಗದ ಅವಧಿಯಲ್ಲಿ ರಚಿಸಲ್ಪಟ್ಟಿರುವ ಆಯುಧಗಳಲ್ಲಿಯೂ ಸಾಕಷ್ಟು ಕೌಶಲ್ಯವು ಕಾಣಸಿಗುತ್ತದೆ. ಸಂಶೋಧನೆಯ ವೇಳೆಯಲ್ಲಿ ಈ ಕಾಲದ ಆಯುಧಗಳು ಕರ್ನಾಟಕದ ಹಲವೆಡೆ ಪತ್ತೆಯಾಗಿವೆ. ಮುಖ್ಯವಾಗಿ ಈ ಕಾಲದಲ್ಲಿ ಬಳಕೆಯಾಗಿರುವ ಸಲಕರಣೆಗಳಲ್ಲಿ ಬೆಣಚುಕಲ್ಲಿನ ಆಯುಧಗಳು, ಹರಳುಕಲ್ಲುಗಳು ಅತ್ಯಂತ ಸೂಕ್ಷ್ಮ ಗಾತ್ರದಲ್ಲಿದ್ದು ಇವುಗಳ ರಚನೆಯಲ್ಲಿ ಸೂಕ್ಷ್ಮ ಕೌಶಲ್ಯತೆಯನ್ನು ಕಾಣಬಹುದು. ಆದ್ದರಿಂದ ಮಧ್ಯಶಿಲಾಯುದ ಕಾಲವನ್ನು ಸೂಕ್ಷ್ಮ ಶಿಲಾಯುಗದ ಕಾಲವೆಂತಲೂ ಕರೆಯುವರು. ಈ ಕಾಲದ ಆಯುಧಗಳು ಮತ್ತು ಸಾಧನಗಳನ್ನು ಮರದ ಬೇರಿನ ಅಗೆತಕ್ಕಾಗಿ, ಮರಗಳ ಕಡಿಯುವಿಕೆ ಮತ್ತು ಈ ಕಾಲದ ಪ್ರಾಣಿಗಳ ಕೊಲ್ಲುವಿಕೆಗಾಗಿ ಬಳಸಿರುವುದು ಸ್ಪಷ್ಟವಾಗುತ್ತದೆ. ಅಂತೆಯೇ ಅವನ ಆಹಾರ ಸಂಗ್ರಹಣೆಯ ಪದ್ಧತಿಯಲ್ಲೂ ಕೆಲವು ಮಾರ್ಪಾಟು ಆಗಿರುವುದನ್ನು ಆ ಕಾಲದ ಆಯುಧಗಳ ಅಧ್ಯಯನದಿಂದ  ತಿಳಿದುಕೊಳ್ಳಬಹುದು.

ಮಧ್ಯ ಅಥವಾ ಸೂಕ್ಷ್ಮ ಶಿಲಾಯುಗದ ನೆಲೆಗಳು ಮತ್ತು ಆಯುಧಗಳು

   ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೂಕ್ಷ್ಮ ಶಿಲಾಯುಗದ ನೆಲೆಗಳು ಪತ್ತೆಯಾಗಿವೆ. ಈ ಜನರು ಪ್ರಮುಖವಾಗಿ ಮೀನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಗಮನಾರ್ಹ. ಅಂದರೆ ಜಲಚರಗಳಾದ ಮೀನು ಮತ್ತು ಏಡಿಗಳನ್ನು ಹಿಡಿಯುವ ಕಲೆಯಲ್ಲಿ ಪರಿಣಿತರಾಗಿದ್ದು ಆಹಾರ ಉತ್ಪಾದನೆಯ ಹಾದಿಯಲ್ಲಿ ಮುಂದುವರಿದಿರುವುದು ಸ್ಪಷ್ಟಗೊಳ್ಳುತ್ತದೆ. ಅರ್ಧಚಂದ್ರಾಕೃತಿಯ ಮೊನೆಗಳುಳ್ಳ ಆಯುಧಗಳು, ದಬ್ಬಣಗಳು, ಉಜ್ಜುವ ಸಾಧನಗಳು, ಮೀನು ಹಿಡಿಯಲು ಬಳಸಿರುವ ಗಾಳ ಹಾಗೂ ಬಲೆಗಳು ಆ ಕಾಲದ ಪ್ರಮುಖ ಸಾಧನಗಳಾಗಿವೆ. ಈ ಕಾಲದ ಪ್ರಮುಖ ನೆಲೆಗಳು ಬೆಂಗಳೂರಿನ ಆಸುಪಾಸಿನಲ್ಲಿರುವ ಜಾಲಹಳ್ಳಿ, ಎಚ್.ಎ.ಎಲ್. ವಿಮಾನ ನಿಲ್ದಾಣ ವಲಯದಲ್ಲಿ ಇರುವ ಸೂಡಸಂದ್ರ ಮತ್ತು ಸಿದ್ದಾಪುರ, ತುಮಕೂರು ಬಳಿಯ ಕಿಬ್ಬನಹಳ್ಳಿ, ಗುಲ್ಬರ್ಗದ ಕೋವಳ್ಳಿ ಮತ್ತು ಶೋರಾಪುರ ದೋ ಅಬ್ ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಕಾಣಸಿಕ್ಕಿವೆ.

   ಎಮ್.ಎಸ್. ನಾಗರಾಜರಾವ್ ಅವರು ಧಾರವಾಡ ಜಿಲ್ಲೆಯ ನಲ್ವಗಾಲ್ ಮತ್ತು ನದಿಹರಳ ಹಳ್ಳಿಯಲ್ಲಿ ಈ ಯುಗದ ನೆಲೆಗಳನ್ನು ಸಂಶೋಧಿಸಿದ್ದಾರೆ. ಇದೇ ಜಿಲ್ಲೆಯ ಹಳ್ಳಿಗಳಲ್ಲಿ ಸೂಕ್ಷ್ಮ ಶಿಲಾಯುಗದ ಕಲ್ಲಿನ ಅಲಗು ತಯಾರಿಕಾ ಪ್ರದೇಶವನ್ನು ಪತ್ತೆಹಚ್ಚಲಾಗಿದೆ. ಬಿಜಾಪುರ ಜಿಲ್ಲೆಯ ತೇರದಾಳದಲ್ಲಿ ಬಹುಸಂಖ್ಯೆಯ ಸೂಕ್ಷ್ಮಶಿಲೆಗಳು, ರಂಧ್ರ ಕೊರೆಯುವ ಸಾಧನಗಳು ಅರ್ಧಚಂದ್ರಾಕೃತಿಯ ಸಾಧನಗಳು ಎರಡು ಬದಿಯಲ್ಲಿಯೂ ಅಲಗುಗಳುಳ್ಳ ವಿನ್ಯಾಸಗಳನ್ನು ಸಂಶೋಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಸೂಕ್ಷ್ಮ ಶಿಲಾಯುಗ ಕಾಲದ ನೆಲೆಗಳು ಹಾಗೂ ಆಯುಧಗಳು ಪತ್ತೆಯಾಗಿವೆ. ಮುಖ್ಯವಾಗಿ ಸ್ಪರ್ಶಶಿಲೆ, ನಯಗೊಳಿಸಿದ ಕಲ್ಲಿನ ಆಯುಧಗಳು, ಮೊನೆಗಳು, ಅಲಗುಗಳು ಮತ್ತು ತೆಳುಪದರಗಳುಳ್ಳ ಆಯುಧಗಳು ಪತ್ತೆಯಾಗಿವೆ.

   ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಬಳಿಯ ಸಾಲ್ವಡಗಿಯಲ್ಲಿ ದೊರೆತಿರುವ ಆಯುಧಗಳ ಗುಂಪು ವಿಶೇಷತೆಯನ್ನು ಹೊಂದಿದೆ. ಮುಖ್ಯವಾಗಿ ಇಲ್ಲಿ ಚೂರಿಯಾಕಾರದ ಅಲಗುಗಳು, ರಂಧ್ರ ಕೊರೆಯುವ ಸಾಧನಗಳು ಮತ್ತು ನಯಗೊಳಿಸಿರುವ ಕಲ್ಲಿನ ಆಯುಧಗಳು ಲಭ್ಯವಾಗಿವೆ. ಸಾಲ್ವಡಗಿಯಲ್ಲಿಯೇ ದೊರಕಿರುವ ಸೂಕ್ಷ್ಮ ಶಿಲಾಯುಧಗಳಲ್ಲಿ ಒರೆಯುವ ಮತ್ತು ಕೊರೆಯುವ ಉಪಕರಣಗಳೂ ಚಕ್ಕೆ ಕಲ್ಲಿನ ಚಾಕುಗಳೂ ಅಲ್ಲದೆ ಹರಪ್ಪ ಸಂಸ್ಕೃತಿಯ ವಿಶಿಷ್ಟ ಅಂಶವಾದ ಉದ್ದನೆಯ ಚಕ್ಕೆ ಕಲ್ಲಿನ ಪಟ್ಟಿಕೆಗಳೂ ಇರುವುದರಿಂದ ಇಲ್ಲಿಯ ಸಂಸ್ಕೃತಿಯೊಂದಿಗೆ ತಾಮ್ರಶಿಲಾಯುಗ ಸಂಸ್ಕೃತಿಯ ಸಂಪರ್ಕವಿದ್ದಿರಬಹುದೆಂದು ವಿದ್ವಾಂಸರು  ಊಹಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿಯೂ ಕಲ್ಲಿನ ಆಯುಧಗಳು ಮತ್ತು ಸೂಕ್ಷ್ಮ ಶಿಲಾಯುಗದ ಸಲಕರಣೆಗಳು ಪತ್ತೆಯಾಗಿವೆ. ಡಾ. ಕೆ. ಪದ್ದಯ್ಯ ಅವರು ಮಧ್ಯಶಿಲಾಯುಗದ ಆಯುಧಗಳಾದ ನಯಗೊಳಿಸಿದ ಕಲ್ಲು, ರಂಧ್ರ ಕೊರೆಯುವ ಆಯುಧಗಳು ಹಾಗೂ ಮೊನೆಯುಳ್ಳ ಆಯುಧಗಳನ್ನು ಹುಣಸಗಿ, ಇಸಾಂಪುರ, ಮಚ್ಚನಾಡು, ವನಹಳ್ಳಿ ಮತ್ತು ಸಾಲಗೊಂದಿಗಳಲ್ಲಿ ಸಂಶೋಧಿಸಿದ್ದಾರೆ.

ಹೀಗೆ ಇತಿಹಾಸಪೂರ್ವ ಕಾಲದಲ್ಲಿ ರಚನೆಯಾಗಿರುವ ಕಲ್ಲಿನ ಆಯುಧಗಳು ಮತ್ತು ಅವಶೇಷಗಳ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಆ ಕಾಲದ ಮಾನವರು ಶಿಲಾಯುಧಗಳು ಮತ್ತು ಇತರ ಉಪಕರಣಗಳನ್ನು ರೂಪಿಸುವಾಗ  ಕೌಶಲ್ಯ, ನಿಪುಣತೆ ಮತ್ತು ಪರಿಣತಿಗಳಲ್ಲಿ ವ್ಯತ್ಯಾಸ ಉಂಟಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಮಾನವ ಜೀವನದಲ್ಲಿನ  ಬದಲಾವಣೆ ವಿಕಾಸವಾಗಿರುವುದು ಇದರಿಂದ ಖಚಿತವಾಗುತ್ತದೆ. ಹಳೇ ಶಿಲಾಯುಗದ ಜನತೆಯು ಜೀವನ ನಡೆಸುವ ಹಾದಿಯಲ್ಲಿ ಬಳಸಿರುವ ಆಯುಧಗಳು ಮತ್ತು ಸಲಕರಣೆಗಳ ರಚನೆಯಲ್ಲಿ ಕಡಿಮೆ ಮಟ್ಟದ ಕೌಶಲ್ಯ ಕಂಡುಬರುತ್ತದೆ.

 

ನವಶಿಲಾಯುಗ

ನವಶಿಲಾಯುಗ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರತದ ಇತರ ಪ್ರದೇಶಗಳಿಗಿಂತ ಹೇರಳವಾಗಿ ದೊರಕಿರುವುದರಿಂದ ನವಶಿಲಾಯುಗ ಕಾಲದಲ್ಲಿ ಕರ್ನಾಟಕ ಮಾನವನ ಪ್ರಮುಖ ಕಾರ್ಯಕ್ಷೇತ್ರವಾಗಿತ್ತೆಂದು ಹೇಳಬಹುದಾಗಿದೆ. ಸಂಸ್ಕೃತಿಗೆ ಸೇರಿದ ಕೊಡಲಿ, ಬಾಚಿ ಮತ್ತು ಇತರ ಆಯುಧಗಳನ್ನು ತಯಾರಿಸಲು ಪ್ರಮುಖವಾಗಿ ಉಪಯೋಗಿಸುತ್ತಿದ್ದ ಟ್ರಾಪ್ ಶಿಲೆಗಳು ಹೆಚ್ಚಾಗಿ ಸಿಕ್ಕುತ್ತಿದ್ದುದೂ ಪಶುಸಂಗೋಪನೆ, ಬೇಟೆ ಮತ್ತು ಪ್ರಾರಂಭದೆಶೆಯ ವ್ಯವಸಾಯ ವೃತ್ತಿಗಳಿಗೆ ಬೇಕಾದ ಸೌಲಭ್ಯಗಳು ಇಲ್ಲಿದ್ದುದರಿಂದಲೂ ನವಶಿಲಾಯುಗದ ಮಾನವ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸಿದ್ದಿರಬಹುದು.

ಉಪಕರಣಗಳ ಅಂಚುಗಳನ್ನು ಉಜ್ಜಿ ನಯಗೊಳಿಸಲು ಉಪಯೋಗಿಸಿದ ಹಳ್ಳಗಳು ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಹಲವೆಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಳ್ಳಾರಿಯ ಉತ್ತರ ಬೆಟ್ಟದಲ್ಲಿ, ಕಂಡುಬಂದಿವೆ. ಜನರು ಕೇವಲ ಅಂಚುಗಳನ್ನು ಅಥವಾ ಇಡೀ ಉಪಕರಣವನ್ನು ಬಂಡೆಗಳ ಮೇಲೆ ಉಜ್ಜಿ ನಯಗೊಳಿಸಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತಿದ್ದುದರಿಂದ ಸಂಸ್ಕೃತಿಗೆ ನಯಗೊಳಿಸಿದ ಶಿಲೋಪಕರಣ ಸಂಸ್ಕೃತಿಯೆಂದೂ ಹೆಸರಿದೆ. ಸಂಸ್ಕೃತಿಯಲ್ಲಿ ಕೊಡಲಿ, ಬಾಚಿ, ಉಳಿ, ಸುತ್ತಿಗೆಕಲ್ಲುಗಳು, ಮಧ್ಯದಲ್ಲಿ ರಂಧ್ರವಿದ್ದು ಅಗೆಯುವ ಮರದ ಕೋಲುಗಳಿಗೆ ಭಾರವನ್ನೊದಗಿಸುತ್ತಿದ್ದ ಚಕ್ರಾಕಾರದ ಕಲ್ಲುಗಳು ಮತ್ತು ಚಕ್ಕೆಕಲ್ಲುಗಳನ್ನು ಮುಖ್ಯ ಉಪಕರಣಗಳಾಗಿ ಉಪಯೋಗಿಸಲಾಗುತ್ತಿತ್ತು.

ಪಶುಪಾಲನೆ, ಬೇಟೆ, ಮೀನು ಹಿಡಿಯುವಿಕೆ, ಮೂಲಭೂತ ಅಥವಾ ಹಿಂದುಳಿದ ವ್ಯವಸಾಯ- ಇವು ಜನರ ಮುಖ್ಯ ವೃತ್ತಿಗಳಾಗಿದ್ದುವು. ತಮ್ಮ ಆಹಾರಧಾನ್ಯಗಳನ್ನು ಹಿಟ್ಟು ಮಾಡಲು ಅವರು ಬೀಸುವ-ಅರೆಯುವ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಮೊತ್ತಮೊದಲಿಗೆ ಜನರು ಮಣ್ಣಿನ ಪಾತ್ರೆಗಳನ್ನು ಉಪಯೋಗಿಸಲಾರಂಭಿಸಿ, ನಯಗೊಳಿಸಿದ ಬೂದುಬಣ್ಣದ ಮಡಕೆ-ಕುಡಿಕೆಗಳನ್ನು ಕೈಯಿಂದಲೇ ರೂಪಿಸಿ ಅನಂತರ ಸುಡುತ್ತಿದ್ದರು. ಕ್ರಮೇಣ ಸಂಸ್ಕೃತಿಯ ಅಂತ್ಯಕಾಲದ ಹೊತ್ತಿಗೆ ನಿಧಾನವಾಗಿ ಸುತ್ತುವ ಮಣಿ ಅಥವಾ ಚಕ್ರಗಳನ್ನು ಮಣ್ಣಿನ ಪಾತ್ರೆಗಳನ್ನು ಮಾಡಲು ಉಪಯೋಗಿಸಿರಬಹುದಾದರೂ ಈಗ ಉಪಯೋಗದಲ್ಲಿರುವ ಕುಂಬಾರಚಕ್ರ ಬಳಕೆಗೆ ಬಂದಿದ್ದಂತೆ ಕಾಣುವುದಿಲ್ಲ. ಮೇಲೆ ಹೇಳಿದ ಬೂದು ಬಣ್ಣದ ಮಡಕೆಗಳಲ್ಲದೆ ಕ್ರಮೇಣ ಕಂದು, ಕೆಂಪು ಮತ್ತು ಕಪ್ಪು ಬಣ್ಣದ ಮಡಕೆಗಳು ಉಪಯೋಗಕ್ಕೆ ಬಂದವು. ಸಂಸ್ಕೃತಿಯ ಕೊನೆಗಾಲದಲ್ಲಿ ದೊರಕುವ ಮಡಕೆಗಳ ಆಕಾರ ಮತ್ತು ಅಲಂಕಾರ ವಿಧಾನಗಳಿಂದ ಮಧ್ಯ ಭಾರತದ ತಾಮ್ರ-ಶಿಲಾಯುಗ ಸಂಸ್ಕೃತಿಯೊಂದಿಗೆ ಸಂಪರ್ಕ ಬೆಳೆದುಬಂದಿತ್ತೆಂದೂ ತಿಳಿದುಬಂದಿದೆ.

ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ದೊರಕಿವೆ. ಉತ್ಖನನಗಳಲ್ಲಿ ಸಂಶೋಧಿಸಲಾಗಿರುವ ನೆಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಬಳ್ಳಾರಿ ಜಿಲ್ಲೆಯ  ಸಂಗನಕಲ್ಲು, ಪಿಕ್ಲಿಹಾಳ್, ರಾಯಚೂರು ಜಿಲ್ಲೆಯ ಮಸ್ಕಿ, ತೆಕ್ಕಲಕೋಟೆ ಮತ್ತು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ಮುಖ್ಯವಾದವು.

ಮೊಟ್ಟಮೊದಲಿಗೆ ಕರ್ನಾಟಕದಲ್ಲಿ ನವಶಿಲಾಯುಗ ವಸತಿಯಿದ್ದ ಹಾಗು ಕ್ರಿ.ಪೂ ೨ನೆಯ ಶತಮಾನದ ಪ್ರಾಚೀನ ಕಾಲದ ಕಲ್ಲಿನ ಅಥವಾ ಲೋಹದ ಆಯುಧಗಳನ್ನೂ ಶೋಧಿಸಲಾಯಿತು. ವರದಿಗಳ ಪ್ರಕಾರ ಕಲ್ಲು ಕೊಡಲಿಗಳು ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಸಿಕ್ಕಿವೆ; ಆದರೆ ವರದಿಯನ್ನು ಖಚಿತ ಪಡಿಸಲು ಇನ್ನೂ ಆಗಿಲ್ಲ. ಬೃಹತ್ ಶಿಲೆಯ ರಚನೆಗಳು ಹಾಗು ಸಮಾದಿಗಳನ್ನೂ ೧೮೬೨ರಲ್ಲಿ ಕೊಡಗು ಹಾಗು ಮೂರೆಯ್ ಬೆಟ್ಟದಲ್ಲಿ ಶೋಧಿಸಲಾಗಿದೆ, ಹಾಗೆಯೇನವಶಿಲಾಯುಗದ ತಾಣಗಳು ಉತ್ತರ ಕರ್ನಾಟಕದಲ್ಲಿ ಸಿಕ್ಕಿವೆ. ಮನುಷ್ಯ ಪ್ರಾಣಿಗಳನ್ನು (ಹಸು,ನಾಯಿ ಹಾಗು ಕುರಿ) ಪಳಗಿಸಲು ಆರಂಭಿಸಿರುವ ಹಾಗು ತಾಮ್ರದ ಹಾಗು ಕಂಚಿನ ಆಯುಧಗಳನ್ನು ಬಳಸಿರುವ ಬಳೆ, ಉಂಗುರ, ಮಣಿಗಳ ಸರ ಹಾಗು ಕಿವಿ ಓಲೆ ಧರಿಸಿರುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ ಮತ್ತು ಸಮಾಧಿಗಳು ಕೂಡ ಕಂಡು ಬಂದಿವೆ. ನವಶಿಲಾಯುಗದ ಕೊನೆಯಲ್ಲಿ ಕಂಡುಬರುವ ಬೃಹತ್ ಶಿಲಾಯುಗದಲ್ಲಿ, ಕರ್ನಾಟಕದಲ್ಲಿ ಜನರು ಕಬ್ಬಿಣದ ಆಯುಧಗಳನ್ನು ಅಂದರೆ ದೊಡ್ಡ ಖಡ್ಗಗಳು, ಕುಡುಗೋಲು, ಕೊಡಲಿ, ಸುತ್ತಿಗೆ, ಉಳಿ ಹಾಗು ಬಾಣಗಳನ್ನು ಉಪಯೋಗಿಸಲು ಆರಂಭಿಸಿದರು.

   ತಾಮ್ರ-ಶಿಲಾಯುಗ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಇರಲಿಲ್ಲವೆಂಬ ವಾದ ನಿಜವಲ್ಲ. ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಅನಂತರದಲ್ಲಿ ಸಂಶೋಧಿಸಲಾದ ತೆಕ್ಕಲಕೋಟೆ, ಹಳ್ಳೂರು ಮುಂತಾದೆಡೆಗಳಲ್ಲಿ ನವಶಿಲಾಯುಗದ ಉತ್ತರಾರ್ಧದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ಪ್ರಭಾವ ತಾಮ್ರ ಮತ್ತು ಕಂಚು, ಕಪ್ಪು ಬಣ್ಣದಿಂದ ಚಿತ್ರಿತವಾದ ಕೆಂಪು ಮಡಕೆಗಳು ಮತ್ತು ಕಲ್ಲುಪಟ್ಟಿಕೆಗಳ ಬಳಕೆಯಿಂದ ಕಂಡುಬರುತ್ತದೆ. ಕರ್ನಾಟಕದಲ್ಲಿ ಸಂಸ್ಕೃತಿ ಮಧ್ಯ ಮತ್ತು ಪಶ್ಚಿಮ ಭಾರತ ಅಥವಾ ಸಿಂಧೂನದಿ ಪ್ರದೇಶಗಳಲ್ಲಿದ್ದಷ್ಟು ಪ್ರಬಲವಾಗಿಲ್ಲದಿದ್ದರೂ, ವಾಣಿಜ್ಯ ಸಂಪರ್ಕಗಳ ಪ್ರಭಾವದಿಂದ ಲೋಹದ ಬಳಕೆ, ಕುಂಬಾರಚಕ್ರದ ಉಪಯೋಗ, ಮುಂದುವರಿದ ವ್ಯವಸಾಯ ಪದ್ಧತಿ ಮತ್ತು ಗ್ರಾಮೀಣ ಜೀವನ ರೀತಿಗಳನ್ನು ಕ್ರಮೇಣ ಅಳವಡಿಸಿಕೊಂಡುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ. ಕೇಂದ್ರಸರ್ಕಾರದ ಪ್ರಾಕ್ತನಶಾಸ್ತ್ರ ಇಲಾಖೆಯ ಆಶ್ರಯದಲ್ಲಿ ನಡೆದ ಸಂಶೋಧನೆಗಳಿಂದ ಬಿಜಾಪುರ, ಧಾರವಾಡ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಸಂಸ್ಕೃತಿಯ ಹದಿಮೂರಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ.

   ತಾಮ್ರ-ಶಿಲಾಯುಗದ ಅನಂತರ ಕರ್ನಾಟಕದಲ್ಲಿ ಕಬ್ಬಿಣಯುಗದ ಸಂಸ್ಕೃತಿಗೆ ಸೇರುವ ಬೃಹತ್ ಶಿಲಾಸಮಾಧಿ ಸಂಸ್ಕೃತಿ ಪ್ರಾಮುಖ್ಯ ಪಡೆಯಿತು. ಮೆಡಿಟರೇನಿಯನ್ ಸಮುದ್ರ ಪ್ರದೇಶದಲ್ಲಿ ಪ್ರ..ಪು. ಸು. ೪ನೆಯ ಸಹಸ್ರಮಾನದಲ್ಲಿ ಹುಟ್ಟಿ, ಕ್ರಮೇಣ ಯುರೋಪ್, ಆಫ್ರಿಕ ಮತ್ತು ಪಶ್ಚಿಮ ಏಷ್ಯಗಳಲ್ಲಿ ಹರಡಿ, ವಿವಿಧ ಸಂಸ್ಕೃತಿಗಳು ಮತ್ತು ಪ್ರಾದೇಶಿಕ ಹಿನ್ನೆಲೆಗಳಿಂದ ಪ್ರಭಾವಿತವಾಗಿ ದಕ್ಷಿಣ ಭಾರತವನ್ನು ತಲುಪುವ ವೇಳೆಗೆ ಕಬ್ಬಿಣಯುಗೀನ ಸಂಸ್ಕೃತಿಯ ಹಂತವನ್ನು ಮುಟ್ಟಿದ್ದೇ ಅಲ್ಲದೆ, ಅನೇಕ ಆಂತರಿಕ ಬದಲಾವಣೆಗಳಿಗೂ ಒಳಗಾಗಿ ದಕ್ಷಿಣ ಭಾರತದ ಆದ್ಯ ಐತಿಹಾಸಿಕ ಸಂಸ್ಕೃತಿಯಾಗಿ ರೂಪುಗೊಂಡಿತು.

ಕರ್ನಾಟಕದಲ್ಲಿ ನವಶಿಲಾ-ತಾಮ್ರಶಿಲಾಯುಗಗಳ ಅನಂತರ ತ್ವರಿತಗತಿಯಲ್ಲಿ ಪ್ರಭಾವಶಾಲಿಯಾಗಿ ಹಬ್ಬಿದ ಸಂಸ್ಕೃತಿಯ ಮುಖ್ಯ ಲಕ್ಷಣಗಳೆಂದರೆ, ಸತ್ತವರ ಅವಶೇಷಗಳನ್ನು ದೊಡ್ಡ ಕಲ್ಲುಗಳಿಂದ ರಚಿತವಾದ ಸಮಾಧಿಗಳಲ್ಲಿ ಹೂಳುವುದು, ಉಪಕರಣಗಳಿಗೆ ಕಬ್ಬಿಣವನ್ನು ಉಪಯೋಗಿಸುವುದು, ಮೇಲ್ಭಾಗದಲ್ಲಿ ಕೆಂಪು ಅಥವಾ ಕಂದಾಗಿಯೂ ತಳ ಮತ್ತು ಒಳಭಾಗಗಳಲ್ಲಿ ಕಪ್ಪಾಗಿಯೂ ಇರುವ (ಕಪ್ಪು ಮತ್ತು ಕೆಂಪು) ಮಡಕೆಗಳನ್ನು ಉಪಯೋಗಿಸುವುದು, ನೀರಾವರಿಯ ಸಹಾಯದಿಂದ ಪ್ರಗತಿಪರ ವ್ಯವಸಾಯ, ನಗರೀಕರಣಕ್ಕೆ ಪೂರ್ವಭಾವಿಯಾದ ವಿಶಾಲ ಗ್ರಾಮೀಣ ಜೀವನ ಮುಂತಾದವು. ಸಂಸ್ಕೃತಿಯ ಪ್ರಾರಂಭದಿಂದ ದಕ್ಷಿಣ ಭಾರತದಲ್ಲಿ ಚಾರಿತ್ರಿಕ ಯುಗದ ಆರಂಭವಾಯಿತೆಂದು ಹೇಳಬಹುದು. ಸಂಸ್ಕೃತಿಯ ನಿರ್ಮಾತೃಗಳಾದ, ದ್ರಾವಿಡ ಭಾಷೆಯನ್ನು ಬಳಸುತ್ತಿದ್ದ, ಜನ ಸಮಯದಲ್ಲಿ ದಕ್ಷಿಣ ಭಾರತಕ್ಕೆ ಬಂದು ನೆಲಸಿದುದಾಗಿ ತಿಳಿದುಬರುತ್ತದೆ. ಚೇರ, ಪಾಂಡ್ಯ, ಚೋಳರಾಜ್ಯಗಳು ದಕ್ಷಿಣದಲ್ಲೂ ಸಾತವಾಹನ ಚಕ್ರಾಧಿಪತ್ಯ ದಖನ್ ಪ್ರಸ್ಥಭೂಮಿಪ್ರದೇಶದಲ್ಲೂ ಶೀಘ್ರದಲ್ಲಿಯೇ ಸ್ಥಾಪಿತವಾಗಿ ಚಾರಿತ್ರಿಕ ಯುಗ ನೆಲೆಗೊಂಡಿತು. ಸಂಸ್ಕೃತಿಯ ಅವಶೇಷಗಳು ಅನೇಕ ನೆಲೆಗಳಲ್ಲಿ ಕಂಡುಬಂದಿದ್ದರೂ ವೈಜ್ಞಾನಿಕ ಸಂಶೋಧನೆಗಳು ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಜಡಿಗೇನಹಳ್ಳಿ ಮುಂತಾದೆಡೆಗಳಲ್ಲಿ ಮಾತ್ರ ನಡೆದಿವೆ

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧