ಹಾನಗಲ್ಲ ಕದಂಬರ ರಾಜಕೀಯ ಇತಿಹಾಸ

ಕರ್ನಾಟಕದ ಸಣ್ಣ ರಾಜ ಮನೆತನಗಳು

ಪೀಠಿಕೆ: ಪ್ರಾಚೀನ ಕಾಲದಿಂದಲೂ ರಾಜಮನೆತನಗಳ ಉದಯ, ಏಳಿಗೆ, ಉಚ್ರಾಯ ಸ್ಥಿತಿ ಮತ್ತು ಅವುಗಳ ಪತನವನ್ನು ಇತಿಹಾಸದಲ್ಲಿ ಕಾಣಬಹುದು. ಇದನ್ನು ನಾವು ಇತಿಹಾಸದಲ್ಲಿ ಸಾಮ್ರಾಜ್ಯಗಳ ಉದಯ ಮತ್ತು ಪತನವೆಂದು ಕರೆಯಬಹುದು. ಆದರೆ ಕೆಲವು ಸಣ್ಣ-ಪುಟ್ಟ ರಾಜರುಗಳು ಅಥವಾ ರಾಜಮನೆತನಗಳು ಸಾಮ್ರಾಜ್ಯಗಳ ಏಳು-ಬೀಳುಗಳ ನಡುವೆಯೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿರುವುದನ್ನು ಸಹಾ ನಾವು ಇತಿಹಾಸದಲ್ಲಿ ಅಧ್ಯಯನ ಮಾಡುತ್ತೇವೆ. ಅಂದರೆ ಸಾಮ್ರಾಜ್ಯಗಳ ಏಳಿಗೆಗೆ ಮುನ್ನ ಮತ್ತು ಅವುಗಳ ಪತನಾನಂತರವೂ ಅಂತಹ ರಾಜಮನೆತನಗಳು ಅಸ್ಥಿತ್ವದಲ್ಲಿದ್ದುವು ಎಂಬುದು ಇದರಿಂದ ನಮಗೆ ತಿಳಿದುಬರುತ್ತದೆ. ಅನೇಕ ಸಣ್ಣ-ಸಣ್ಣ ರಾಜಮನೆತನಗಳು ಒಂದೇ ರಾಜಮನೆತನ ಅಥವಾ ಒಬ್ಬನೇ ರಾಜನ ಅಧೀನಕ್ಕೆ ಒಳಪಟ್ಟಾಗ ಸಾಮ್ರಾಜ್ಯ ಎನಿಸಿಕೊಳ್ಳುತ್ತದೆ. ಆದರೆ ಅಂತಹ ಸಾಮ್ರಾಜ್ಯಗಳ ಕಾಲದಲ್ಲಿ ಸಾಮಂತರು, ಮಾಂಡಲೀಕರು, ಅಧೀನ ಅರಸರು ಅಥವಾ ಪಾಳೇಯಗಾರರು ಎನಿಸಿಕೊಂಡಿದ್ದ ಸಣ್ಣ-ಪುಟ್ಟ ರಾಜರುಗಳು ಸಾಮ್ರಾಜ್ಯಗಳ ರಕ್ಷಣೆಯಲ್ಲಿ ಮತ್ತು ಪ್ರಮುಖ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರವಹಿಸಿರುವುದನ್ನು ಇತಿಹಾಸದಲ್ಲಿ ನೋಡಬಹುದು. ಉದಾ: ರಾಷ್ಟ್ರಕೂಟರು ಮತ್ತು ಚೋಳರ ನಡುವೆ ತಮಿಳುನಾಡಿನ ಕಂಚಿಯ ಬಳಿ ನಡೆದ ತಕ್ಕೋಳಂ ಯುದ್ಧದಲ್ಲಿ ಅವರ ಸಾಮಂತರಾಗಿದ್ದ ಗಂಗರ ಬೂತುಗ ಮತ್ತು ನೊಳಂಬ-ಪಲ್ಲವರ ಅರಸನೊಬ್ಬ ಸೇನೆಯ ನೇತೃತ್ವ ವಹಿಸಿದ್ದನ್ನು ಶಾಸನಗಳು ಉಲ್ಲೇಖಿಸಿವೆ. ಅಂತೆಯೇ, ಮೂರನೇ ಕೃಷ್ಣನ ಉತ್ತರದ ದಂಡಯಾತ್ರೆಗಳ ಕಾಲದಲ್ಲಿ ದಂಗೆಯೆದ್ದಿದ್ದ ಲಲ್ಲಯ್ಯನನ್ನು ಸದೆ ಬಡಿದು ರಾಷ್ಟ್ರಕೂಟ ಸಾರ್ವಭೌಮತ್ವವನ್ನು ರಕ್ಷಿಸಿದವನೂ ಸಹ ಗಂಗರ ಅರಸ ಬೂತುಗನೇ ಎಂಬುದು ಗಮನಾರ್ಹ. ಈ ದೃಷ್ಟಿಯಿಂದ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಸ್ಥಳೀಯವಾಗಿ ಆಳ್ವಿಕೆ ನಡೆಸಿದ ಸಣ್ಣ-ಪುಟ್ಟ ರಾಜಮನೆತನಗಳ ಅಧ್ಯಯನ ಮಾಡುವುದು ಇತಿಹಾಸದ ಒಂದು ಭಾಗವೇ ಆಗಿದೆ. ಕೆಳಗೆ ಕರ್ನಾಟಕದಲ್ಲಿ ವಿವಿಧ ಕಾಲಘಟ್ಟದಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಅಸ್ಥಿತ್ವದಲ್ಲಿದ್ದ ಸಣ್ಣ-ಪುಟ್ಟ ರಾಜಮನೆತನಗಳ ವಿವರಗಳನ್ನು ನೀಡಲಾಗಿದೆ.

ಕೀರ್ತಿಪುರದ ಪುನ್ನಾಟರು – ಮೈಸೂರು ಬಳಿಯ ಹೆಗ್ಗಡದೇವನಕೋಟೆಯ ಸುತ್ತಲಿನ ಪ್ರದೇಶ. ಕಾಲ: ಸಾ.ಶ.ವ. 300-500. ರಾಜಧಾನಿ: ಕೀರ್ತಿಪುರ.

ಅಪರಾಂತಕದ ಅಭೀರರು – ಕೊಂಕಣದ ಭಾಗ. ಶಾತವಾಹನರ ಸಾಮಂತರು. ಕಾಲ: ಸಾ.ಶ.ಪೂ. 200 ರಿಂದ ಸಾ.ಶ. 200. ರಾಜಧಾನಿ: ಅಪರಾಂತಕ.

ಬಾಣವಾಡಿಯ ಬಾಣರು – ಕೋಲಾರದ ಭಾಗ. ಕಾಲ: ಸಾ.ಶ.ವ. 400-೧೪೭೬. ರಾಜಧಾನಿ. ಬಾಣಾಪುರ

ಸೇನಾವಾರರು – ಕುಡಲೂರು; ಚಿಕ್ಕಮಗಳೂರು ಜಿಲ್ಲೆ. ಚಾಲುಕ್ಯರ ಸಾಮಂತರು. ಕಾಲ; ಸಾ.ಶ.ವ. 690-1130. ರಾಜಧಾನಿ: ಕುಡಲೂರು

ನೊಳಂಬ-ಪಲ್ಲವರು – ತುಮಕೂರು, ಆಂಧ್ರದ ಅನಂತಪುರದಲ್ಲಿ ಆಳ್ವಿಕೆ. ಕಾಲ; ಸಾ.ಶ.ವ. 735-1054. ರಾಜಧಾನಿ: ಹೇಮಾವತಿ ಅಥವಾ ಹೆಂಜೇರು.

ಕೊಂಕಣದ ಕಲಹಾರರು – ದಕ್ಷಿಣ ಮಹಾರಾಷ್ಟ್ರದ ಭಾಗ. ಕಾಲ: ಸಾ.ಶ.ವ. 750-1000. ರಾಜಧಾನಿ: ತಗರ.

ನಿಡುಗಲ್ಲಿನ ಚೋಳರು – ತುಮಕೂರು ಭಾಗ. ಕಾಲ: ಸಾ.ಶ.ವ. 800-1200. ರಾಜಧಾನಿ: ನಿಡುಗಲ್ಲು.

ಸವದತ್ತಿಯ ರಟ್ಟರು – ಬೆಳಗಾವಿ ಜಿಲ್ಲೆಯಲ್ಲಿ ಆಳ್ವಿಕೆ. ಕಾಲ: ಸಾ.ಶ.ವ.  930=1230. ರಾಜಧಾನಿ: ಸವದತ್ತಿ.

ಹಾನಗಲ್ಲಿನ ಕದಂಬರು – ಹಾವೇರಿ ಜಿಲ್ಲೆಯಲ್ಲಿ ಆಳ್ವಿಕೆ. ಕಾಲ: ಸಾ.ಶ.ವ. 972-1250. ರಾಜಧಾನಿ: ಹಾನಗಲ್.

ಅರಕಲಗೂಡಿನ ಚೆಂಗಾಳ್ವರು – ಹಾಸನ-ಕೊಡಗು ಜಿಲ್ಲೆಗಳಲ್ಲಿ ಆಳ್ವಿಕೆ. ಕಾಲ: ಸಾ.ಶ.ವ. 1004-1350. ರಾಜಧಾನಿ: ಅರಕಲಗೂಡು.

ಯಲಬುರ್ಗದ ಸಿಂಧರು – ಕೊಪ್ಪಳ ಜಿಲ್ಲೆಯಲ್ಲಿ ಆಳ್ವಿಕೆ. ಕಾಲ: ಸಾ.ಶ.ವ. 1076-1247. ರಾಜಧಾನಿ: ಯಲಬುರ್ಗ.

ಉಚ್ಚಂಗಿಯ ಪಾಂಡ್ಯರು – ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಆಳ್ವಿಕೆ. ಕಾಲ: ಸಾ.ಶ.ವ. 1083-1254. ರಾಜಧಾನಿ: ಉಚ್ಚಂಗಿ.

ಆಳೂಪರು – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳ್ವಿಕೆ

 

ವಿಜಯನಗರದ ಪತನಾನಂತರದಲ್ಲಿ ಅನೇಕ ಪಾಳೆಯಪಟ್ಟುಗಳು ಅಸ್ಥಿತ್ವಕ್ಕೆ ಬಂದವು. ಅವುಗಳಲ್ಲಿ:-

ಮೈಸೂರಿನ ಒಡೆಯರು, ಯಲಹಂಕದ ನಾಡಪ್ರಭುಗಳು, ಚಿತ್ರದುರ್ಗದ ನಾಯಕರು, ಕೆಳದಿಯ ನಾಯಕರು, ಮಧುಗಿರಿಯ ನಾಯಕರು ಪ್ರಸಿದ್ಧರಾಗಿದ್ದಾರೆ.

ಮರಾಠರ ಪತನಾನಂತರದಲ್ಲಿ ಘೋರ್ಪಡೆ ಮನೆತನಗಳು ಉತ್ತರ ಕರ್ನಾಟಕದಲ್ಲಿ ಅಧಿಕಾರ ನಡೆಸಿದುದನ್ನು ನೋಡಬಹುದು. ಉದಾ: ಸೊಂಡೂರು, ರಾಮದುರ್ಗ, ಗಜೇಂದ್ರಗಡ, ನರಗುಂದ, ಸುರಪುರದ ನಾಯಕರು, ಕಿತ್ತೂರುಇನ ದೇಸಾಯಿಗಳು, ಬೆಳವಡಿಯ ರಾಜ್ಯ, ಸವಣೂರು ಇತ್ಯಾದಿ.

 

 

 

   ಹಾನಗಲ್ಲ ಕದಂಬರ ಕುರಿತಂತೆ ಇದುವರೆಗೆ ಸುಮಾರು ಐವತ್ತು ಶಾಸನಗಳು ಪ್ರಕಟಗೊಂಡಿವೆ. ಅಲ್ಲದೇ ಮನೆತನಕ್ಕೆ ಸಂಬಂಧಿಸಿದ ಮೌಲ್ಯಯುತ ಬಿಡಿ ಲೇಖನಗಳನ್ನು ಹಾಗೂ ಟಿಪ್ಪಣಿಗಳನ್ನು ಹಲವು ಸಂಶೋಧಕರು ಪ್ರಕಟಿಸಿದ್ದಾರೆ. ಇವೆಲ್ಲವುಗಳನ್ನಿಟ್ಟುಕೊಂಡು ಇಲ್ಲಿ ಸ್ಥೂಲವಾದ ರಾಜಕೀಯ ಚರಿತ್ರೆಯನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.

   ಹಾನಗಲ್ಲ ಆಡಳಿತ ವಿಭಾಗವು ರಾಷ್ಟ್ರಕೂಟರ ಕಾಲದಲ್ಲಿ ಹಾಗೂ ಕಲ್ಯಾಣದ ಚಾಲುಕ್ಯರ ಸಾಮ್ರಾಜ್ಯಗಳ ಪಶ್ಚಿಮ ಗಡಿಯಲ್ಲಿರುವ ಪ್ರಮುಖ ವಿಭಾಗವಾಗಿತ್ತು. ಅರೆಮಲೆನಾಡಿನ ಹವಾಗುಣದಿಂದ ಕೂಡಿದ ಪ್ರದೇಶವು ಅತ್ಯಂತ ಸಂಪದ್ಭರಿತವಾಗಿತ್ತು. ಅಲ್ಲದೇ ಸದಾಕಾಲ ಮಳೆನಿರು ಹಾಗೂ ಕೆರೆ ನೀರಾವರಿಯ ಅನುಕೂಲ ಹೊಂದಿತ್ತು. ಜೊತೆಗೆ ಈ ಪ್ರದೇಶವು ಕಪ್ಪು ಮಣ್ಣಿನ ಫಲವತ್ತಾದ ಭೂಮಿಯನ್ನು ಹೊಂದಿದೆ. ಅಪಾರವಾದ ಪ್ರಾಣಿ ಹಾಗೂ ಅರಣ್ಯ ಸಂಪತ್ತು ರಾಜ್ಯದ ಬೊಕ್ಕಸಕ್ಕೆ ಸದಾ ಸಂಪತ್ತನ್ನು ಹರಿಸುವ ಬತ್ತದ ಝರಿಯಂತೆ ಕಾರ್ಯ ನಿರ್ವಹಿಸುತ್ತಿದ್ದವು. ಅಲ್ಲದೇ ವಿಸ್ತಾರವಾದ ಸಾಮ್ರಾಜ್ಯಗಳ ಗಡಿರೇಖೆಯನ್ನು ರಕ್ಷಿಸುವ ಆಯಕಟ್ಟಿನ ಪ್ರದೇಶವಾಗಿತ್ತು.       ಹೀಗಾಗಿ ಇದರ ಮೇಲಿನ ಪಾರಮ್ಯಕ್ಕಾಗಿ ಎಲ್ಲ ರಾಜಮನೆತನಗಳು ಬಡಿದಾಡಿಕೊಂಡಿರುತ್ತಿದ್ದವು.

   ಸಾಗರೋತ್ಪನ್ನ ವ್ಯಾಪಾರಕ್ಕೆ ಪ್ರವೇಶದ ಹೆಬ್ಬಾಗಿಲಿನಂತಿದ್ದ ಹಾನಗಲ್ಲ ಪ್ರದೇಶವು ಇತಿಹಾಸಪೂರ್ವ ಕಾಲದಿಂದಲೂ ಬನವಾಸಿ ಕದಂಬರ ಆಳ್ವಿಕೆಗೆ ಒಳಪಟ್ಟಿತ್ತು. ಕರ್ನಾಟಕ ರಾಜಕೀಯ ರಂಗಪರದೆಯಿಂದ ಕದಂಬರು ಮರೆಯಾದ ನಂತರ ಬಾದಾಮಿ ಚಾಲುಕ್ಯರು ದೂರದ ತಮ್ಮ ರಾಜಧಾನಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಿ ವಿಭಾಗದ ಆಡಳಿತ ನಿರ್ವಹಿಸಿದರು. ಆದರೆ ಪ್ರದೇಶದ ಮೇಲೆ ಸಂಪೂರ್ಣ ಸ್ವಾಮ್ಯವನ್ನು ಪಡೆದ ಮೊದಲಿಗರೆಂದರೆ ರಾಷ್ಟ್ರಕೂಟರು. ಚಕ್ರವರ್ತಿ ಕರ್ಕನ ಆಡಳಿತಾಧಿಕಾರಿಯಾಗಿದ್ದ ಚಟ್ಟಯ್ಯದೇವನೆಂಬುವನು ಈ ಮನೆತನದ ಮೂಲ ಪುರುಷ ಎಂದು ಇತಿಹಾಸಕಾರರು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರು ತಮ್ಮ ಬಿರುದುಗಳಲ್ಲಿ ಬನವಾಸಿ ಪುರವರಾಧೀಶ್ವರರು ಎಂದು ಸಂಬೋಧಿಸಿಕೊಂಡಿರುವ ಹಿನ್ನೆಲೆಯಲ್ಲಿ ಆದಿಕದಂಬ ವಂಶಸ್ಥರ ಮುಂದುವರೆದ ಶಾಖೆಯಿದು ಎಂಬ ಕುತೂಹಲಕ್ಕೆ ಕಾರಣವಾಗಿದೆ.

 

   ಹಾನಗಲ್ ಕದಂಬ ಶಾಖೆಯ ಆದ್ಯಪುರುಷ ಚಟ್ಟಯ್ಯ. ಕ್ರಿ.. ೯೬೯ರಲ್ಲಿ ರಾಷ್ಟ್ರಕೂಟರ ಪೆರ್ಗಡೆಯಾಗಿ ತನ್ನ ಧೈರ್ಯ, ಸಾಹಸಗಳಿಂದ ಸಾಮಂತನಾಗಿ ಮೆರೆದ ಉಲ್ಲೇಖ ಸೋಮನಹಳ್ಳಿಯ ಶಾಸನದಲ್ಲಿದೆ. ಆರಂಭದಲ್ಲಿ ಕೊಟ್ಟಿಗನ ಆಳ್ವಿಕೆಯಲ್ಲಿ ಪೆರ್ಗಡೆ(ಹೆಗ್ಗಡೆ)ಯಾಗಿದ್ದ ಚಟ್ಟಯ್ಯ, ಅವನ ಮಗ ಕನ್ನರನ ಕಾಲದಲ್ಲೂ (ಕ್ರಿ.. ೯೭೨ರವರೆಗೆ) ರಾಷ್ಟ್ರಕೂಟರ ಸಾಮಂತನಾಗಿದ್ದನು. ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದ ಕಲ್ಯಾಣದ ಚಾಲುಕ್ಯರ ಇಮ್ಮಡಿ ತೈಲಪನ ಆಡಳಿತಾವಧಿಯಲ್ಲೂ ಸಹ ಇದೇ ಪ್ರದೇಶದ ಮಂಡಲಾಧಿಪತಿಯಾಗಿ ನೇಮಕಗೊಳ್ಳುತ್ತಾನೆ. ಈತನ ಸಾಮರ್ಥ್ಯವನ್ನು ಕಂಡ ಚಾಲುಕ್ಯ ಅರಸ ಸಾಂತಳಿಗೆ ಸಾವಿರ ನಾಡಿನ ಹಕ್ಕನ್ನು ಸಹ ನೀಡುತ್ತಾನೆ. ಈತ ೯೭೨ ರಿಂದ ಕ್ರಿ.. ೧೦೧೫ರ ವರೆಗೆ ಬನವಾಸಿ ಪನ್ನಿರ್ಚ್ಚಾಸಿರ ಮತ್ತು ಸಾಂತಳಿಗೆ ಸಾವಿರ ಪ್ರಾಂತ್ಯಗಳನ್ನು ಆಳುತ್ತಿದ್ದ. ಮುಂದೆ ಚಾಲುಕ್ಯ ಸತ್ಯಾಶ್ರಯನು ತನ್ನ ಮಗಳು ಪಂಪಾದೇವಿಯ ಪತಿ ಕುಂದಮರಸನನ್ನು ಬನವಾಸಿ ಪ್ರಾಂತದ ಮಾಂಡಲಿಕನನ್ನಾಗಿ ಅಧಿಕಾರಕ್ಕೆ ನಿಯಮಿಸಲು, ಕದಂಬ ಚಟ್ಟಯ್ಯ ಅವನ ಅಧೀನನಾಗಿ ಹಾನುಗಲ್ಲಿನ ಆಳ್ವಿಕೆಯನ್ನು ಮುಂದುವರೆಸಿದ್ದನು. ಚಾಲುಕ್ಯ ಚಕ್ರವರ್ತಿ ಎರಡನೆ ಜಯಸಿಂಹನ ಕಾಲದಲ್ಲಿ ರಾಜಧಾನಿ ಮಳಖೇಡದ ಮೇಲೆ ಚೋಳರ ರಾಜೇಂದ್ರ ಚೋಳನು ದಾಳಿ ನಡೆಸಿ ಲೂಟಿ ಮಾಡಲು, ದಾಳಿಯನ್ನು ನಿಗ್ರಹಿಸುವಲ್ಲಿ ಹೋರಾಡಿ ಜಯ ಸಂಪಾದನೆ ಮಾಡಿದ ಚಟ್ಟಯ್ಯ ದೇವನಿಗೆಕಟಕದ ಗೋವಎಂಬ ಬಿರುದಿತ್ತು ಗೌರವಿಸಿದ್ದರು. ಚಟ್ಟಿಗನ ಒಟ್ಟು ಆಳ್ವಿಕೆ ೯೬೯ ರಿಂದ ೧೦೧೫ರ ವರೆಗೆ ಜರುಗಿದುದು. ಇವನ ಮಡದಿಯರು ಥಾನೆಯ ವಾಚಯ್ಯನ ಮಗಳು ಕುಂಡಲಾದೇವಿ ಮತ್ತು ಚತ್ತಬ್ಬರಸಿ ಎಂಬುವರು.

   ಇವನ ಮಗ ಜಯಸಿಂಹ ಬಹುಬೇಗ ಮರಣ ಹೊಂದಿದ್ದು, ಈತನಿಗೆ ಮಾವುಲಿ, ಮೊದಲನೆಯ ತೈಲ, ಎರಡನೆಯ ಶಾಂತಿವರ್ಮ, ಬೋಕಿ, ವಿಕ್ರಮರು ಎಂಬ ಐವರು ಮಕ್ಕಳು.    ಇಮ್ಮಡಿ ತೈಲಪನ ಮಗ ಎರಡನೇ ಮಯೂರವರ್ಮ. ಈತ ೧೦೩೪೩೫ರ ಕಾಲಾವಧಿಯಲ್ಲಿ ಬನವಾಸಿ ಪನ್ನಿರ್ಚ್ಚಾಸಿರ, ಪಾನುಂಗಲ್ಲ ಐನೂರು, ಏಕಾಯತ ಪದಿನಾಲ್ಕು ಗಳನ್ನು ಆಳಿದನು. ಈತನ ಮಡದಿ ಐದನೆ ವಿಕ್ರಮಾದಿತ್ಯನ ಸೋದರಿ ಶೂರರಾಣಿ ಅಕ್ಕಾದೇವಿ. ಇವರಿಗೆ ಹರಿಕೇಸರಿ, ತೋಯಿಮದೇವ, ಹರಿಕಾಂತದೇವರೆಂಬ ಮೂವರು ಮಕ್ಕಳು. ಹರಿಕೇಸರಿ ಬನವಾಸಿ, ಹಾನಗಲ್ಲ ಪ್ರಾಂತದ ಆಡಳಿತ ನೋಡಿದರೆ, ತೋಯಿಮದೇವ ೧೦೬೬ರಿಂದ ಬನವಾಸಿ ಪನ್ನಿರ್ಚ್ಚಾಸಿರ, ಪಾನುಂಗಲ್ಲ ಐನೂರರ ಆಳ್ವಿಕೆ ಕೈಗೊಂಡಿದ್ದನು. ೧೦೭೨ರ ತರುವಾಯ ಹರಿಕಾಂತದೇವ ಬನವಾಸಿ ಮತ್ತು ಪಾನುಂಗಲ್ಲ ಐನೂರರ ಆಳ್ವಿಕೆ ಮಾಡಿದನು.

   ಮುಂದೆ ಹಾನುಗಲ್ಲು ಕದಂಬರ ಮಹಾಮಂಡಲೇಶ್ವರನಾದವನು ಮೊದಲನೆಯ ಕೀರ್ತಿವರ್ಮ. ಇವನ ಆಡಳಿತಾವಧಿಯಲ್ಲಿ ಚಾಲುಕ್ಯ ಆರನೆಯ ವಿಕ್ರಮಾದಿತ್ಯ ಮತ್ತು ಅವನ ಅಣ್ಣನಾಗಿದ್ದ ಸೋಮೇಶ್ವರನ ನಡುವೆ ಅಧಿಕಾರಕ್ಕಾಗಿ ಹೋರಾಟ ಜರುಗಿದಾಗವಿಕ್ರಮಾದಿತ್ಯನಿಗೆ ಬನವಾಸಿಯಲ್ಲಿ ಆಶ್ರಯವಿತ್ತಿದ್ದರಿಂದ ೧೨ ಸಾಮಾಂತರ ದಂಡು ಉದಯಾದಿತ್ಯನ ನೇತೃತ್ವದಲ್ಲಿ ಬನವಾಸಿಯನ್ನು ಮುತ್ತಲು, ಕೀರ್ತಿದೇವ  ವಿಕ್ರಮಾದಿತ್ಯನ ಪರ ಯುದ್ಧದಲ್ಲಿ ಜಯ ಗಳಿಸಿಕೊಟ್ಟಿರುವನು. ಇಷ್ಟಾದರೂ ಕೀರ್ತಿವರ್ಮನಿಗೆ ಹಾನಗಲ್ಲ ಕದಂಬರ ಪಟ್ಟ ಲಭಿಸದೇ ಹೋಯಿತು. ಕೀರ್ತಿವರ್ಮನಿಗೆ ಚತ್ತಯ್ಯ ಮತ್ತು ತೈಲಪದೇವರೆಂಬ ಇಬ್ಬರು ಗಂಡುಮಕ್ಕಳು. ಕೀರ್ತಿವರ್ಮನಿಗೆ ದೊರಕದ ಪಟ್ಟ, ಜಯಸಿಂಹನ ಮಗ ಎರಡನೆಯ ಶಾಂತಿವರ್ಮನಿಗೆ ಮಹಾಮಂಡಲೇಶ್ವರತ್ವ ದೊರಕಿತು. ಈತ ಗೋವೆಯ ಕದಂಬ ಗೂವದೇವನಿಗೆ ಅಧೀನನಾಗಿ ಪಾನುಂಗಲ್ಲ ಐನೂರಿನೊಂದಿಗೆ ಕೊಂತಕುಳಿ ಮೂವತ್ತನ್ನು ಆಳಿರುವನು. ಈತನ ಆಳ್ವಿಕೆಯ ತರುವಾಯಬಂಕಾಪುರದ ಕದಂಬರುಹಾನಗಲ್ಲನ್ನು ಸುಮಾರು ೫೦ ವರ್ಷಗಳವರೆಗೆ ಆಳಿದರು.

ಕ್ರಿ.. ೧೦೮೨ರ ಶಾಸನ ಶಾಂತಿವರ್ಮನ ಮಗ ತೈಲಪನನ್ನು ಹೆಸರಿಸಿದ್ದು, ಬನವಾಸಿ ಮತ್ತು ಪಾನುಂಗಲ್ಲ ಪ್ರಾಂತಗಳನ್ನು ಆಳುತ್ತಿದ್ದನೆಂದಿದೆ. ಕಾಲಾಂತರದಲ್ಲಿ ಕೊಂತಕುಳಿ ಮೂವತ್ತು, ಸಾಂತಳಿಗೆ ಸಾವಿರ ಈತನ ಆಳ್ವಿಕೆಗೆ ಒಳಪಟ್ಟಿದ್ದವು. ಈತನಿಗೆ ಮೂವರು ಮಕ್ಕಳು. ಮಯೂರವರ್ಮ, ಮಲ್ಲಿಕಾರ್ಜುನ ಮತ್ತು ಮೂರನೆಯ ತೈಲಪರು ಉಲ್ಲೇಖಿತರು. ವೇಳೆಯಲ್ಲಿ ಹೊಯ್ಸಳ ವಿಷ್ಣುವರ್ಧನ ಹಾನುಗಲ್ಲನ್ನು ವಶಪಡಿಸಿಕೊಂಡಿದ್ದರೂ ಚಾಲುಕ್ಯ ಜಗದೇಕಮಲ್ಲ ಮತ್ತು ಕದಂಬ ಮಲ್ಲಿಕಾರ್ಜುನ ಹಾನುಗಲ್ಲನ್ನು ಹೆಚ್ಚುಕಾಲ ವಿಷ್ಣುವರ್ಧನನ ಕೈಯಲ್ಲಿ ಬಿಡಲಿಲ್ಲ. ೧೧೪೧ರಲ್ಲಿ ಪುನಃ ವಿಷ್ಣುವರ್ಧನ ಹಾನುಗಲ್ಲಿನಿಂದ ಆಳುತ್ತಿದ್ದನೆಂದು ತಿಳಿದುಬರುತ್ತದೆ. ವಿಷ್ಣುವರ್ಧನ ೧೧೪೨ರಲ್ಲಿ ಬಂಕಾಪುರದಲ್ಲಿ ಮರಣ ಹೊಂದಿದಾಗ, ಅತ್ತ ಕದಂಬರು ಹಾನಗಲ್ಲು ಪರಿಸರವನ್ನು ಮತ್ತೆ ತಮ್ಮ ಕೈವಶಪಡಿಸಿಕೊಂಡರು. ೧೧೭೦ರ ವೇಳೆಗೆ ಹೊಯ್ಸಳ ವಿಷ್ಣುವರ್ಧನನ ಮಗ ನಾರಸಿಂಹ ಮತ್ತು ೧೧೭೮ರಲ್ಲಿ ಬಲ್ಲಾಳರು ಹಾನಗಲ್ಲನ್ನು  ಕೈವಶಪಡಿಸಿಕೊಂಡಿದ್ದರೂ, ಕ್ರಿ.. ೧೧೭೮ರಲ್ಲಿ ಹಾನುಗಲ್ಲು ಹೊಯ್ಸಳ ಇಮ್ಮಡಿ ಬಲ್ಲಾಳನ ವಶಕ್ಕೆ ಹೋಯಿತು. ಆದರೆ ಕಳಚುರಿ ಸಂಕಮನು ಅವನನ್ನು ಹಿಮ್ಮೆಟ್ಟಿಸಿದನು.

   ಕದಂಬ ಕೀರ್ತಿದೇವ ಮುಂದೆ ಕಲಚುರ್ಯರ ಅಧಿಕಾರ ಒಪ್ಪಿ ಅವರಲ್ಲಿ ಮಂಡಲೇಶ್ವರನಾಗಿ ಪಾನುಂಗಲ್ಲ ಐನೂರು, ಬನವಾಸಿ ಪನ್ನಿರ್ಚ್ಚಾಸಿರವನ್ನು ಆಳುತ್ತಿದ್ದನು. ಮಾವುಲಿತೈಲ ಕದಂಬ ಮೂರನೆಯ ತೈಲಪನ ಮೊಮ್ಮಗ. ಈತ ಹೆಚ್ಚುಕಾಲ ಅಧಿಕಾರದಲ್ಲಿ ಉಳಿಯದೆ, ಕಾಮದೇವನಿಗೆ ಅಧಿಕಾರ ಬಿಟ್ಟುಕೊಟ್ಟನು.

   ಕದಂಬರ ಕೊನೆಯ ಸುತ್ತಿನಲ್ಲಿ ಬರುವ ಕಾಮದೇವ ಧೀಮಂತ ಸಾಹಸಿ, ಚತುರ ಆಡಳಿತಗಾರ, ಅಷ್ಟೇ ಮಹತ್ವಾಕಾಂಕ್ಷಿ. ಇವನು ನಾಲ್ವಡಿ ಸೋಮೇಶ್ವರನ ಮಹಾಮಂಡಲೇಶ್ವರನಾಗಿ ಮಲೆನಾಡು, ತುಳುವನಾಡು, ಕೊಂಕಣಪ್ರಾಂತ, ಪಶ್ಚಿಮಘಟ್ಟ, ಬನವಾಸಿ ಪನ್ನಿರ್ಚ್ಚಾಸಿರ, ಪಾನುಂಗಲ್ಲ ಐನೂರು, ಪುಲಿಗೆರೆ ಮುನ್ನೂರು ನಾಡುಗಳ ಆಳ್ವಿಕೆ ಕೈಗೊಂಡಿದ್ದನು. ಕಾಮರಸನ ಕಾಲವೂ ಹೋರಾಟಗಳಿಂದಲೇ ಕೂಡಿತ್ತು. ಗೋವೆಯ ಕದಂಬ ವಂಶದ ಶಿವಚ್ಚಿತ್ತ ಪೆರ್ಮಾಡಿಗೆ ತನ್ನ ಮಗಳು ಕಮಲಾದೇವಿಯನ್ನಿತ್ತು ವಿವಾಹ ಸಂಬಂಧ ಗಟ್ಟಿಗೊಳಿಸಿಕೊಂಡಿದ್ದ. ಇತ್ತ ಕಲ್ಯಾಣ ಸೋಮೇಶ್ವರನ ಆಳ್ವಿಕೆ ಬಹುಕಾಲ ನಡೆಯಲಿಲ್ಲ. ಒಂದೆಡೆ ಹೊಯ್ಸಳರ ಉಪಟಳ, ಕಳಚುರ್ಯರ ತೀವ್ರ ದಬ್ಬಾಳಿಕೆ, ಉತ್ತರದಲ್ಲಿ ಯಾದವರು ಕಲ್ಯಾಣದ ಚಾಲುಕ್ಯರಿಗೆ ಹಾಕಿದ ದಿಗ್ಭಂಧನ ಇಂಥ ಸಂದರ್ಭದ ಲಾಭ ಪಡೆದ ಕದಂಬ ಕಾಮದೇವ ತಾನು ಕದಂಬ ಚಕ್ರವರ್ತಿಎಂದು ಘೋಷಿಸಿಕೊಂಡನು. ಅಲ್ಲದೇ ಹಾನುಗಲ್ಲು ಕೋಟೆಯನ್ನು ಭದ್ರಪಡಿಸಿಕೊಂಡ. ವೇಳೆಗೆ ಹೊಯ್ಸಳ ವೀರಬಲ್ಲಾಳ ಹಾನುಗಲ್ಲನ್ನು ಗೆದ್ದು, ‘ಹಾನುಗಲ್ ಗೊಂಡಬಿರುದನ್ನು ಧರಿಸಿದ. ಇದ್ದ ಸಾಮ್ರಾಜ್ಯವನ್ನು ಕಳೆದುಕೊಂಡ ಕಾಮದೇವ ಹೊಯ್ಸಳರ ಅಧಿಪತ್ಯ ಒಪ್ಪಿಕೊಂಡಿದ್ದರೂ, ಕಾಲಾಂತರದಲ್ಲಿ ದೇವಗಿರಿ ಯಾದವರ ಮಂಡಲೇಶ್ವರನೆನಿಸಿದನು. ಕಾಮದೇವ ನು ಕ್ರಿ.. ೧೧೮೦ ರಿಂದ ೧೨೧೭ರ ವರೆಗೆ ೪೦ ವರ್ಷ ಹಾನುಗಲ್ಲಿನ ರಾಜ್ಯಭಾರ ನಡೆಸಿದನು.

   ಮಲ್ಲಿದೇವ ಈ ಮನೆತನದ ಕೊನೆಯ ಅರಸ. ಇವನ ಬಗೆಗೆ ಕ್ರಿ.. ೧೨೫೨ರವರೆಗಿನ ದಾಖಲೆಗಳು ಲಭ್ಯವಾಗುತ್ತವೆ. ಇವನ ನಂತರವೂ ಹಲವರು ಆಡಳಿತ ವಿಭಾಗವನ್ನು ಆಳಿದ್ದರೂ ಅವರ ಬಗೆಗೆ ಸ್ಪಷ್ಟವಾದ ಮಾಹಿತಿಗಳ ಕೊರತೆಯಿದೆ. ಈ ಮನೆತನದ ಕೊನೆಯ ಅರಸರು ರಾಜಕೀಯ ವಿಪ್ಲವಗಳಿಂದ ಆದ ಪರಿಣಾಮದಿಂದ ಸೇವುಣರ ಪಕ್ಷ ವಹಿಸಿ ಆಡಳಿತ ನಿರ್ವಹಿಸಿದರು.

೧೩ನೆಯ ಶತಮಾನದ ತರುವಾಯ ಹಾನುಗಲ್ಲು ಕದಂಬ ವಂಶ ಅವನತಿ ಹಿಡಿಯಲು ಮುಖ್ಯ ಕಾರಣ, ಒಂದೆಡೆ ಹೊಯ್ಸಳರ ಹೋರಾಟ, ಇನ್ನೊಂದೆಡೆ ಮುಸ್ಲಿಮರ ದಾಳಿಗಳು.

**********

 

 

ಇದೇ ವೇಳೆಗೆ ಕಲ್ಯಾಣದ ಚಾಲುಕ್ಯರ ಸಾಮ್ರಾಜ್ಯದ ಅಧಿಪತ್ಯಕ್ಕೆ ಇಮ್ಮಡಿ ಸೋಮೇಶ್ವರ ಮತ್ತು ಆರನೇ ವಿಕ್ರಮಾದಿತ್ಯರ ನಡುವೆ ಅಂತಃಕಲಹ ಪ್ರಾರಂಭವಾಗುತ್ತದೆ. ಆರನೆಯ ವಿಕ್ರಮಾದಿತ್ಯ ಸಾಮಂತಾಧಿಕಾರಿಗಳ ಬೆಂಬಲ ಪಡೆಯುವ ಪ್ರಯತ್ನದಲ್ಲಿ ಅಲೆದಾಟದಲ್ಲಿ ನಿರತನಾಗಿರುತ್ತಾನೆ. ಈ ವೇಳೆಯಲ್ಲಿ ಇಮ್ಮಡಿ ಸೋಮೇಶ್ವರನ ವಿರುದ್ಧ ಹಾನಗಲ್ಲ ಕದಂಬ ಅರಸ ಕೀರ್ತಿವರ್ಮ ಆರನೆಯ ವಿಕ್ರಮಾದಿತ್ಯನಿಗೆ ಬೆಂಬಲ ನೀಡುತ್ತಾನೆ. ಇದರಿಂದ ಕುಪಿತನಾದ ಇಮ್ಮಡಿ ಸೋಮೇಶ್ವರ ಹಾನಗಲ್ಲ ಕದಂಬರಿಗಿದ್ದ ಅಧಿಕಾರವನ್ನು ಹಿಂತಿರುಗಿ ಪಡೆದು ಅವನನ್ನು ಪದಚ್ಯುತಗೊಳಿಸುತ್ತಾನೆ. ಹೀಗಾಗಿ ಆತನ ಅಧಿಕಾರ ಈಗ ಕೇವಲ ಬನವಾಸಿ ಕೇಂದ್ರಕ್ಕೆ ಮಾತ್ರ ಸೀಮಿತವಾಗುಳಿಯಿತು. ಮತ್ತೆ ಕ್ರಿ.. ೧೦೮೭ರಲ್ಲಿ ಆರನೆಯ ವಿಕ್ರಮಾದಿತ್ಯ ಹಾನಗಲ್ಲ ಕದಂಬರ ವಂಶದ ಶಾಂತಿವರ್ಮನಿಗೆ ಎಲ್ಲ ಅಧಿಕಾರವನ್ನು ಮರಳಿ ನೀಡುತ್ತಾನೆ. ಈತನ ನಂತರ ಅಧಿಕಾರಕ್ಕೆ ಬಂದ ತೈಲಪದೇವ ಹಾಗೂ ಆತನ ಮಗ ಮಯೂರವರ್ಮನು ಹೊಯ್ಸಳ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ತಮ್ಮ ಗಡಿರೇಖೆಗಳನ್ನು ಉಳಿಸಿಕೊಳ್ಳುತ್ತಾರೆ. ಮಲ್ಲಿಕಾರ್ಜುನನ ಕಾಲದಲ್ಲಂತೂ ಹೊಯ್ಸಳರ ರಾಜ್ಯಕ್ಕೆ ನುಗ್ಗಿ ಲಕ್ಕುಂಡಿಯವರೆಗೆ ತನ್ನ ದಂಡಯಾತ್ರೆಯನ್ನು ಮುಂದುವರೆಸಿರುವ ಉಲ್ಲೇಖಗಳಿವೆ. ಕ್ರಿ.. ೧೧೬೧೭೫ರವರೆಗೆ ಆಳಿದ ಕೀರ್ತಿವರ್ಮನು ಕಲ್ಯಾಣದ ಚುಕ್ಕಾಣಿ ಹಿಡಿದ ಕಲಚೂರಿಗಳ ಪರವಹಿಸಿ ಬಿಜ್ಜಳನನ್ನು ತನ್ನ ಚಕ್ರವರ್ತಿಯಾಗಿ ಸ್ವೀಕರಿಸುತ್ತಾನೆ. ಕೆಲವೇ ವರ್ಷಗಳಲ್ಲಿ ಅಸ್ತಂಗತವಾದ ಕಲಚೂರಿಗಳ ನಂತರ ರಾಜಕೀಯ ಅಸ್ಥಿರತೆಯನ್ನು ಉಪಯೋಗಿಸಿಕೊಂಡು ಹಾನಗಲ್ಲ ಕದಂಬ ಅರಸ ಕಾಮದೇವ (೧೧೮೦೧೨೧೭) ಸ್ವತಂತ್ರ ಚಕ್ರವರ್ತಿಯೆಂದು ಘೋಷಿಸಿಕೊಂಡು  ಅವರ ಬಿರುದಾವಳಿಗಳನ್ನು ಪಡೆದುಕೊಳ್ಳುತ್ತಾನೆ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources