ಚಾವುಂಡರಾಯ, ಗಂಗ ಅರಸರ ಮಂತ್ರಿ ಮತ್ತು ಸೇನಾಪತಿ.

ಪೀಠಿಕೆ:-  ಶ್ರವಣಬೆಳಗೊಳದ ಪ್ರಸಿದ್ಧ ಗೊಮ್ಮಟ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೀರ್ತಿಪಡೆದವ; ಚಾವುಂಡರಾಯಪುರಾಣವೆಂದು ಹೆಸರಾಗಿರುವ ತ್ರಿಷಷ್ಠಿಲಕ್ಷಣಮಹಾಪುರಾಣವೆಂಬ ಕೃತಿಯನ್ನು ಗದ್ಯ ರೂಪದಲ್ಲಿ ರಚಿಸಿದವ. ಈತ ಪಶ್ಚಿಮ ಗಂಗವಂಶದ ರಾಜರಾದ ಎರಡನೆ ಮಾರಸಿಂಹ ಮತ್ತು ನಾಲ್ಕನೆ ರಾಚಮಲ್ಲ   ಇವರಲ್ಲಿ ಯೋಧಾಗ್ರಣಿಯೂ ಮಂತ್ರಿಯೂ ಆಗಿದ್ದವ. ಈತನನ್ನು ಚಾಮುಂಡರಾಯ (ನಮಿ ತೀರ್ಥಂಕರನ ಯಕ್ಷಿಯಾದ ಚಾಮುಂಡಿ ಎಂಬುದರಿಂದ ಬಂದಿರಬೇಕು) ಎಂದೂ ಕರೆಯಲಾಗಿದೆ. ಗೊಮ್ಮಟ ಈತನ ಇನ್ನೊಂದು ಹೆಸರು. ಇದರಿಂದಾಗಿಯೇ ಈತ ಕಡೆಸಿದ ಬಾಹುಬಲಿ ಮೂರ್ತಿಯನ್ನು ಗೊಮ್ಮಟೇಶ್ವರ ಎಂದು ಕರೆಯಲಾಗಿದೆ. ಈತ ಜೈನ, ಬ್ರಹ್ಮ ಕ್ಷತ್ರಕುಲೋತ್ಪನ್ನನೆಂದು ತಾನೇ ಹೇಳಿಕೊಂಡಿದ್ದಾನೆ.

ಕೌಟುಂಬಿಕ ವಿಚಾರ:-  ತಂದೆತಾಯಿಗಳ ವಿಚಾರ ತಿಳಿಯದು. ಆದರೂ ತಾಯಿ ಕಾಳಲಾದೇವಿ ಎಂಬ ಮಾಹಿತಿ ಕೆಲವು ಮೂಲಗಳಿಂದ ಲಭ್ಯ.  ಈತನಿಗೆ ಜಿನದೇವಣ ಎಂಬ ಮಗನಿದ್ದನೆಂಬ ಅಂಶಕ್ಕೆ ಶಾಸನಾಧಾರವಿದೆ.

ಶಿಕ್ಷಣ ಮತ್ತು ವೃತ್ತಿ:- ಅಜಿತಸೇನಾಚಾರ್ಯ ಮತ್ತು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಈತನ ಗುರುಗಳು. ಈತ ಇಮ್ಮಡಿ ಮಾರಸಿಂಹನ ಸಹಪಾಠಿಯಾಗಿ ಮುಂದೆ ಆತನ ನೆಚ್ಚಿನ ಸೇನಾನಿಯಾಗಿ ಅವನ ಪರವಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ವಿಷಯ ಚಾವುಂಡರಾಯಪುರಾಣದಲ್ಲಿ ಬರುವ ಉಲ್ಲೇಖಗಳಿಂದಲೂ ಶ್ರವಣಬೆಳಗೊಳದ ಒಂದು ಶಾಸನದಿಂದಲೂ ಅನಂತರ ಪಟ್ಟಕ್ಕೆ ಬಂದ ನಾಲ್ವಡಿ ರಾಚಮಲ್ಲನಲ್ಲಿ ಮಂತ್ರಿಯಾಗಿದ್ದನೆಂದು

'ಸ್ಥಿರ ಜಿನಶಾಸನೋದ್ಧರಣರಾದಿಯೊಳಾರನೆ ರಾಚಮಲ್ಲ ಭೂವರ ವರಮಂತ್ರಿ ರಾಯನೆ...'

ಎಂಬ ಶಾಸನವಾಕ್ಯದಿಂದಲೂ ತಿಳಿದುಬರುತ್ತದೆ.

ಬಿರುದುಗಳು:- ಈತನಿಗೆ ಗುಣರತ್ನಭೂಷಣಂ, ಕವಿಜನಶೇಖರಂ ಎಂಬ ಬಿರುದುಗಳಲ್ಲದೆ ಸಮರಧುರಂಧರ, ವೀರಮಾರ್ತಾಂಡ, ರಣರಂಗಸಿಂಗ, ವೈರಿಕುಲಕಾಲ ದಂಡ, ಭುಜವಿಕ್ರಮ, ಚಲದಂಕರಂಗ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ, ಭಟಮಾರಿ, ಸುಭಟಚೂಡಾಮಣಿ-ಎಂಬ ಶೌರ್ಯಮೂಲವಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಇವು ಈತನ ಕಲಿತನಕ್ಕೆ ಸಾಕ್ಷಿಯಾಗಿವೆ.

ಸಾಹಿತ್ಯ ಸಾಮರ್ಥ್ಯ:- ಈತ ರಚಿಸಿದ ತ್ರಿಷಷ್ಟಿಲಕ್ಷಣ ಮಹಾಪುರಾಣ ಕೃತಿಯು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಪ್ರಾಚೀನ ಗದ್ಯಗ್ರಂಥಗಳಲ್ಲಿ ಒಂದು ಎಂಬುದರ ಮೇಲೂ ಇದರ ಹಿರಿಮೆ ನಿಂತಿದೆ. ವಡ್ಡಾರಾಧನೆ ದೊರೆತು ಪ್ರಕಟವಾಗುವ ಮೊದಲು ಕನ್ನಡ ಸಾಹಿತ್ಯದ ಪ್ರಥಮ ಗದ್ಯಕೃತಿ ಎಂದು ಇದು ಮನ್ನಣೆ ಪಡೆದಿತ್ತು. ಇದರ ಕರ್ತೃತ್ವದ ಬಗ್ಗೆ ಸಂದೇಹವೂ ಇದೆ. ಇದರಲ್ಲಿ ರನ್ನನ ಕೈವಾಡವಿದೆಯೆಂದು ಕೆಲವಿದ್ವಾಂಸರ ಅಭಿಪ್ರಾಯ.

ಜೈನಧರ್ಮಕ್ಕೆ ಸಂಬಂಧಿಸಿದ ಮಹಾಪುರಾಣ ರಚನೆಯಲ್ಲಿ ಜಿನಸೇನಾಚಾರ್ಯ, ಗುಣಭದ್ರಾಚಾರ್ಯರ ಮಹಾಪುರಾಣವನ್ನು ಅವಲಂಬಿಸಿ ಅನುಸರಿಸಲಾಗಿದೆ. ಶಲಾಕಪುರುಷರಾದ ತೀರ್ಥಂಕರರು 24, ಚಕ್ರವರ್ತಿಗಳು 12, ಬಲದೇವರು 9, ವಾಸುದೇವರು 9, ಪ್ರತಿವಾಸುದೇವರು 9-ಹೀಗೆ 63 ಜನರ ಚರಿತ್ರೆಯೇ ಮಹಾಪುರಾಣದ ವಸ್ತು. ಇತರ ಮೂಲವನ್ನು ಬಳಸಿಕೊಳ್ಳುವಾಗ ಅತ್ಯಾವಶ್ಯಕವಾದ ತೀರ್ಥಂಕರಾದಿ ಮಹಾಪುರುಷ ಸಂಬಂಧವಾದ ಕಥಾಸಾರವನ್ನು ಉಳಿಸಿಕೊಂಡು ಅನುಪಯುಕ್ತವಾದ ಕಥಾವಿವರಣೆಗಳನ್ನೂ ವರ್ಣನೆಗಳನ್ನೂ ವ್ಯಕ್ತಿ-ಗುಣ-ವಸ್ತು ವಿಶೇಷಣಾದಿಗಳನ್ನೂ ಅಲಂಕಾರ ವೈಚಿತ್ರ್ಯಗಳನ್ನೂ ನೀತಿಪರವಾಕ್ಯಗಳನ್ನೂ ಧಾರ್ಮಿಕ ಪ್ರಕ್ರಿಯಾವಿವರಗಳನ್ನೂ ಪಾರಿಭಾಷಿಕ ಪದಸಮುಚ್ಚಯಗಳನ್ನೂ ಬಹುಮಟ್ಟಿಗೆ ಬಿಟ್ಟಿದ್ದಾನೆ. ಈತನ ಸಂಗ್ರಾಹಕತೆ ಎಷ್ಟೆಂದರೆ ಆದಿಪುರಾಣದ ಚಕ್ರವರ್ತಿಚರಿತದಲ್ಲಿ ಪ್ರಸಿದ್ಧರಾಗಿರುವ ಭರತ ಬಾಹುಬಲಿಗಳ ವ್ಯಾಯೋಗ ಪ್ರಸಂಗವನ್ನು ಜಿನಸೇನರು ಪೂರ್ಣಪುರಾಣದಲ್ಲಿ ಎರಡೂವರೆ ಪರ್ವಗಳಷ್ಟು ವಿಸ್ತಾರದಲ್ಲೂ ಪಂಪಕವಿ 133 ಪದ್ಯಗಳಲ್ಲೂ ಹೇಳಿದ್ದರೆ ಚಾವುಂಡರಾಯ ಕೇವಲ 27 ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಅಡಕಗೊಳಿಸಿದ್ದಾನೆ. ಇಂಥ ನಿದರ್ಶನಗಳಿಂದ ಚಾವುಂಡರಾಯ ಕುಶಲಸಂಗ್ರಾಹಕನೆಂದು ಒಪ್ಪಿಕೊಳ್ಳದಿದ್ದರೂ ನಿಷ್ಠುರ ಸಂಗ್ರಾಹಕನೆನ್ನದೆ ವಿಧಿಯಿಲ್ಲ.

ಸಂಗ್ರಾಹಕತೆಯಿಂದಾಗಿ ತೀರ್ಥಂಕರ ಚರಿತ್ರೆಗಳಲ್ಲಿ ಮನ ಸೆಳೆಯುವ ಕಥಾಂಶ, ವಿವರಗಳು ಇಲ್ಲ. ತೀರ್ಥಂಕರ ಚರಿತ್ರೆಯ ಮುಖ್ಯಾಂಶಗಳನ್ನು ಮೂಲಕ್ಕೆ ಚ್ಯುತಿಬಾರದಂತೆ ಸಂಕ್ಷೇಪಿಸಿ ಜೈನಧರ್ಮದ ಬಗ್ಗೆ ಜೈನರಲ್ಲಿ ಶ್ರದ್ಧಾಸಕ್ತಿ ಬೆಳೆಯುವಂತೆ ಮಾಡಿರುವುದು ಇಲ್ಲಿನ ಒಂದು ಸಾಧನೆ. ಭಾರತದಲ್ಲಿ ಮಹಾಪುರಾಣ ತುಂಬ ಪುರಾತನವಾದುದಾದರೂ ಕನ್ನಡಕ್ಕೆ ಮೊದಲ ಬಾರಿಗೆ ಅದನ್ನು ತಂದವ ಚಾವುಂಡರಾಯನೇ. ಕನ್ನಡದಲ್ಲಿ ತ್ರಿಷಷ್ಟಿ ಶಲಾಕಾಪುರುಷರ ಚರಿತ್ರೆಯನ್ನು ಕುರಿತು ಮಹಾಪುರಾಣ ಇದೇ ಎನ್ನುವುದರಿಂದಲೂ ಕನ್ನಡದಲ್ಲಿ ಜೈನಪರಂಪರೆಯ ರಾಮಾಯಣ, ಭಾರತ, ಭಾಗವತ ಕಥೆಗಳಿಗೆ ಪ್ರಥಮ ಆಕರಗ್ರಂಥವಾಗಿರುವುದರಿಂದಲೂ ಗ್ರಂಥಕ್ಕೆ ಪ್ರಾಶಸ್ತ್ಯ ಬಂದಿದೆ. ಸಾಮಾನ್ಯವಾಗಿ ಬೇರೆ ಗ್ರಂಥಗಳಲ್ಲಿ ದೊರಕದ, ಸಂಸ್ಕೃತ ಮಹಾಪುರಾಣಗಳ ಕವಿ ಪರಂಪರೆಯನ್ನು ಚಾವುಂಡರಾಯ ಸ್ಪಷ್ಟವಾಗಿ ಹೇಳಿದ್ದಾನೆ. ಈ ದೃಷ್ಟಿಯಿಂದಲೂ ಜೈನಸಾಹಿತ್ಯದಲ್ಲಿ ಚಾವುಂಡರಾಯಪುರಾಣ ಅಧಿಕೃತ ದಾಖಲೆಯಾಗಿ ನಿಲ್ಲುತ್ತದೆ.

ತ್ರಿಷಷ್ಟಿಲಕ್ಷಣಮಹಾಪುರಾಣವನ್ನು 978ರಲ್ಲಿ ರಚಿಸಿದುದಾಗಿ ಕವಿಯೇ ಹೇಳಿಕೊಂಡಿದ್ದಾನೆ. ಗದ್ಯದಲ್ಲಿಯೇ ರಚಿತವಾದ ಗ್ರಂಥದ ಆದಿ, ಅಂತ್ಯ ಹಾಗೂ ಕಥೆಗಳ ಮಧ್ಯದಲ್ಲಿ ಅಲ್ಲಲ್ಲಿ ಪದ್ಯಗಳೂ ಉಂಟು. ಜಿನಸೇನಾಚಾರ್ಯ ಮತ್ತು ಗುಣ ಭದ್ರಾಚಾರ್ಯರ ಮಹಾಪುರಾಣವನ್ನೇ ಅನುಸರಿಸಿ ಈತ ತನ್ನ ಗ್ರಂಥವನ್ನು ರಚಿಸಿದ್ದರೂ ಈತ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಹಿಂದೆ ರಚಿತವಾದ ಇತರ ಮಹಾಪುರಾಣಗಳಿಂದಲೂ ಪ್ರಭಾವಿತನಾಗಿರುವುದಕ್ಕೆ ಇಲ್ಲಿ ಕಂಡುಬರುವ ಅನೇಕ ಬದಲಾವಣೆಗಳು ಸಾಕ್ಷಿಯಾಗಿವೆ. ಇದಲ್ಲದೆ ಈತ ತನ್ನ ಗುರು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ಬರೆದ ಗೊಮ್ಮಟಸಾರಕ್ಕೆ ವೀರಮತ್ತಂಡೀ (ವೀರಮಾರ್ತಂಡೀ) ಎಂಬ ದೇಸೀವೃತ್ತಿಯನ್ನೂ (ಬಹುಶಃ ಕನ್ನಡ) ಬರೆದಂತೆ ಹೇಳಲಾಗಿದೆ. ಆದರೆ ಗ್ರಂಥ ಉಪಲಬ್ಧವಿಲ್ಲ.

ಶಾಶ್ವತ ಕೀರ್ತಿಯ ಸಂಕೇತ:-  ಚಾವುಂಡರಾಯನ ಹೆಸರು ಶಾಶ್ವತವಾಗಿ ನಿಂತಿರುವುದು ಆತ ಶ್ರವಣಬೆಳಗೊಳದ ಇಂದ್ರಗಿರಿಯ ಮೇಲೆ ಕೆತ್ತಿಸಿದ ಬಾಹುಬಲಿ ವಿಗ್ರಹದಿಂದ. ಬಾಹುಬಲಿಮೂರ್ತಿಯ ಬಲಭಾಗದ ಪಾದಗಳ ಬಳಿಯ 'ಶ್ರೀ ಚಾಮುಣ್ಡರಾಜಂ ಮಾಡಿಸಿದಂ' ಎನ್ನುವ ಶಾಸನದಿಂದಲೂ ತಮಿಳು ಮತ್ತು ಮರಾಠಿ ಭಾಷೆಯ ಅದೇ ಅರ್ಥದ ವಾಕ್ಯಗಳು ಬರುವುದರಿಂದಲೂ ವಿಗ್ರಹವನ್ನು ಕೆತ್ತಿಸಿದ್ದು ಈತನೇ ಎನ್ನುವುದು ಖಚಿತವಾಗುತ್ತದೆ. ಮೂರ್ತಿಯ ಸ್ಥಾಪನೆ ಬಹುಶಃ 983ರಲ್ಲಿ ಆಯಿತೆಂದು ಹೇಳಲಾಗಿದೆ. ಬೊಪ್ಪಣಪಂಡಿತನ ಗೊಮ್ಮಟ ಜಿನೇಂದ್ರ ಗುಣಸ್ತವ ಶಾಸನದಲ್ಲಿ ಚಾವುಂಡರಾಯ ಮೂರ್ತಿಯನ್ನು ಸ್ಥಾಪಿಸಿದ ವಿವರ ಬಂದಿದೆ. ವೃಷಭನಾಥನ ಮಕ್ಕಳಲ್ಲಿ ಒಬ್ಬನಾಗಿದ್ದ ಭರತ ಚಕ್ರವರ್ತಿಯು ಪೌದನಪುರದಲ್ಲಿ ಬಾಹುಬಲಿಯ 525 ಬಿಲ್ಲುಗಳಷ್ಟು ಎತ್ತರದ ಮೂರ್ತಿಯನ್ನು ಮಾಡಿ ನಿಲ್ಲಿಸಿದನಷ್ಟೆ. ಮೂರ್ತಿಯ ಮಹಾತಿಶಯವನ್ನು ಕೇಳಿದ ಚಾವುಂಡರಾಯ ಅದರ ದರ್ಶನ ಪಡೆಯಲು ಹಂಬಲಿಸಿದನಂತೆ. ಮೂರ್ತಿಯಿದ್ದ ಸ್ಥಳ ದೂರವೂ ದುರ್ಗಮವೂ ಆಗಿದೆಯೆಂದು ಬಲ್ಲವರು ಹೇಳಿದಾಗ ಅಂಥದೇ ಇನ್ನೊಂದು ಮೂರ್ತಿಯನ್ನು ತಾನು ಕಡೆಸುವುದಾಗಿ ನಿಶ್ಚಯಿಸಿ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದನಂತೆ. ಚಾವುಂಡರಾಯನ ಅಸಾಧಾರಣ ಕಾರ್ಯ ಜನರೂಢಿಯಲ್ಲಿ ಪೌರಾಣಿಕ ಕಲ್ಪನೆಯ ಹಂತವನ್ನು ಮುಟ್ಟುವಷ್ಟು ಪ್ರಭಾವಶಾಲಿಯಾಯಿತು.

ಇದರ ಬಗ್ಗೆ ಅನೇಕ ರೀತಿಯ ಕಥೆಗಳು ಬೆಳೆದುಬಂದಿದೆ. ಪವಾಡಸದೃಶಕಾರ್ಯ ಮಾಡಿದ ಚಾವುಂಡರಾಯನಿಗೆ ರಾಯ ಎಂಬ ಬಿರುದು ಕೊಟ್ಟು ರಾಚಮಲ್ಲ ಗೌರವಿಸಿದ. ಚಾವುಂಡರಾಯನ ಧಾರ್ಮಿಕ ವ್ಯಕ್ತಿತ್ವದಿಂದಾಗಿಯೇ ಬಹುಶಃ ಇತರರು ಆತನನ್ನು ಅಣ್ಣ ಎಂದು ಸಂಬೋಧಿಸಿರಬೇಕು.

ರನ್ನ & ನಾಗವರ್ಮರಿಗೆ ಆಶ್ರಯ:-  ಅಜಿತಸೇನಾಚಾರ್ಯರಲ್ಲಿ ಶಿಷ್ಯವೃತ್ತಿಯಲ್ಲಿದ್ದಾಗ ಕವಿ ರನ್ನ ಈತನ ಸಹಪಾಠಿಯಾಗಿದ್ದಿರಬೇಕು. ಅನಂತರವೂ ಈತ ರನ್ನನಿಗೆ ಸಾಕಷ್ಟು ಸಹಾಯ ಮಾಡಿರಬೇಕು. ಬಹುಶಃ ಕೃತಜ್ಞತೆಯಿಂದಲೇ ರನ್ನ ತನ್ನ ಮಗನಿಗೆ ರಾಯನೆಂದು ಹೆಸರಿಟ್ಟಂತೆ ತೋರುತ್ತದೆ.

ಒಂದನೆಯ ನಾಗವರ್ಮನೂ ಚಾವುಂಡರಾಯನ ಆಶ್ರಯ ಪಡೆದಂತೆ ತನ್ನ ಛಂದೋಂಬುಧಿಯಲ್ಲಿ ಹೇಳಿಕೊಂಡಿದ್ದಾನೆ.

ಮಾಹಿತಿ ಮೂಲ: ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ