ಭಕ್ತಿಪಂಥ; ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಭಕ್ತಿಪಂಥ ಭಗವಂತನಲ್ಲಿ ಅನನ್ಯ ಭಕ್ತಿಯಿಟ್ಟು ತನ್ಮೂಲಕ ಮುಕ್ತಿ ಸಾಧಿಸುತ್ತೇವೆ ಎಂದು ಭಾವಿಸಿ ಅಸ್ತಿತ್ವಕ್ಕೆ ಬಂದಿರುವ ಪಂಥಗಳು. ಶಾಂಡಿಲ್ಯಭಕ್ತಿ ಸೂತ್ರದಲ್ಲಿ ಈಶ್ವರನಲ್ಲಿ ಇಟ್ಟ ಪರಮ ಅನುರಾಗವೇ ಭಕ್ತಿ ಎಂದು ವಿವರಿಸಿದೆ. ಭಕ್ತಿಗೆ ವಿಷಯವಾದದ್ದು. ಒಂದು ದೇವತೆ ಇರಬಹುದು, ಒಬ್ಬ ಗುರು ಆಗಿರಬಹುದು ಅಥವಾ ಒಬ್ಬ ಸಿದ್ಧಪುರುಷನಾಗಿರಬಹುದು. ಭಕ್ತಿಗೆ ವಿಷ್ಣುದೇವತೆ ವಿಷಯವಾದಾಗ ವೈಷ್ಣವ ಪಂಥಗಳೂ ಶಿವ ಆರಾಧ್ಯ ದೇವತೆಯಾದಾಗ ಶೈವ ಪಂಥಗಳೂ ಹುಟ್ಟಿದವು. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಭಕ್ತನ ಹೃದಯದಲ್ಲಿ ಹುಟ್ಟಿದ ಪ್ರೇಮ ಅಥವಾ ಅನುರಾಗ.
ಭಕ್ತಿಗೆ
ಆಕರವಾದ ಈಶ್ವರ ಅನಂತ ಕಲ್ಯಾಣಗುಣ ಪರಿಪೂರ್ಣನೆಂದು
ತಿಳಿಯುವುದನ್ನು ಸಗುಣಭಕ್ತಿಯೆಂದೂ ನಿರ್ಗುಣ ಬ್ರಹ್ಮನಲ್ಲಿ ನೆಟ್ಟ ಅನುರಾಗವನ್ನು ನಿರ್ಗುಣ ಭಕ್ತಿಯೆಂದೂ ಕರೆಯುವ ವಾಡಿಕೆ. ಆದರೆ ಸಾಧಾರಣವಾಗಿ ಭಕ್ತಿಪಂಥವೆಂದರೆ
ಸಗುಣೇಶ್ವರನಲ್ಲಿ ನೆಟ್ಟ ಭಕ್ತಿಯೆಂದು ಅಂಗೀಕರಿಸಲ್ಪಟ್ಟಿದೆ.
ಭಕ್ತಿಪಂಥದ
ಚರಿತ್ರೆಯಲ್ಲಿ ಇತಿಹಾಸಜ್ಞರು ಎರಡು ಘಟ್ಟಗಳನ್ನು ಗುರುತಿಸುತ್ತಾರೆ:
ಒಂದು ವೇದಗಳ ಕಾಲದಿಂದ ಹದಿಮೂರನೆಯ ಶತಮಾನದ ತನಕ, ಮತ್ತೊಂದು ಹದಿಮೂರನೆಯ
ಶತಮಾನದಿಂದ ಹದಿನಾರನೆಯ ಶತಮಾನದ ತನಕ.
ಭಾರತದಲ್ಲಿಯ
ಭಕ್ತಿ ಪಂಥಗಳು ಬಹು ಪ್ರಾಚೀನವಾದವು, ಭಕ್ತಿ
ಭಾವನೆಗಳು ಎಂದೂ ಇದ್ದಂಥವು. ವೇದಗಳಲ್ಲಿಯೇ
ಈ ಭಾವನೆ ಮೂಡಿರುವುದನ್ನು ಕಾಣಬಹುದು.
ಮೊಹೆಂಜೊದಾರೋ
ಮತ್ತು ಹರಪ್ಪ ಸಂಸ್ಕೃತಿಯಲ್ಲೂ ಈ ಭಕ್ತಿ ಭಾವವನ್ನು
ಕಾಣಬಹುದು. ಭಕ್ತಿಭಾವ ಈಶನಿಗೂ ಶರಣನಿಗೂ ಇರುವ ಅಂತರಂಗ ಪ್ರೀತಿಯ
ಸಂಬಂಧವನ್ನು ಋಗ್ವೇದದ ಮಂತ್ರಗಳಲ್ಲಿ ಕಾಣುತ್ತೇವೆ. ಉಪನಿಷತ್ತುಗಳಲ್ಲಿಯೂ ಈ ಭಾವನೆ ಬಂದಿದೆ.
ಭಗವದ್ಭಕ್ತಿಯಲ್ಲಿ ಅಡಗಿರುವ ಈಶ್ವರಾನುಗ್ರಹ ನಿರ್ಹೇತುಕ ಕೃಪೆ ಎಂದು ಕಠೋಪನಿಷತ್ತು
ಸಾರುತ್ತದೆ. ಶ್ವೇತಾಶ್ವತರ ಉಪನಿಷತ್ತು ಶಿವನನ್ನು ಭಕ್ತಿಯಿಂದಲೇ ಕಾಣುವುದು ಶಕ್ಯವೆಂದು ಹೇಳಿದೆ. ಬೌದ್ಧಮತ ಹುಟ್ಟುವ ಮೊದಲೇ ಭಾಗವತಧರ್ಮ ಪಂಥ ಏಕೇಶ್ವರವಾದವನ್ನು ಪ್ರತಿಪಾದಿಸಿ
ಭಕ್ತಿಯಿಂದಲೇ ಮೋಕ್ಷಸಾಧ್ಯವೆಂದು ಸಾರಿತು. ಕ್ರಿಸ್ತ ಪೂರ್ವ ಸುಮಾರು ಐದನೆಯ ಶತಮಾನದ್ದೆಂದು ಹೇಳಲಾದ ಭಗವದ್ಗೀತೆ, ಭಕ್ತಿ ಮಾರ್ಗವನ್ನು ಕುರಿತು ವಿಸ್ತಾರವಾಗಿ ಬರೆದ ವಾಖ್ಯೆ. ವ್ಯಾಕರಣ
ಶಾಸ್ತ್ರಜ್ಞನಾದ ಪಾಣಿನಿ ತನ್ನ ಒಂದು ಸೂತ್ರದಲ್ಲಿ
ಭಕ್ತಿ ಪದದ ವ್ಯುತ್ಪತ್ತಿ ಸೂಚಿಸಿದ್ದಾನೆ.
ಇವನ ಕಾಲ ಕ್ರಿ. ಪೂ
350 ಎಂದು ಊಹಿಸಲಾಗಿದೆ. ಅಂದರೆ ಇವನ ಕಾಲಕ್ಕೆ ಭಕ್ತಿ
ಎಂಬ ಮಾತಿಗೆ ನಿರ್ದಿಷ್ಟವಾದ ಅರ್ಥ ಮೂಡಿತ್ತು ಎಂದು ತಿಳಿಯಬಹುದು.
ಎಂಟನೆಯ
ಶತಮಾನದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ದಕ್ಷಿಣ
ಭಾರತದಲ್ಲಿ ಹರಡಿದುವು. ಭಕ್ತಿಯ ವಿಷಯದಲ್ಲಿ ಈ ಧರ್ಮಗಳಿಗೂ ಹಿಂದೂ
ಧರ್ಮಕ್ಕೂ ಅನೇಕ ಲಕ್ಷಣಗಳಲ್ಲಿ ವಿನಿಮಯ
ಆಗಿದ್ದಿರಬೇಕು. ವಿಗ್ರಹಾರಾಧನೆ, ದೇವಾಲಯ ನಿರ್ಮಾಣ, ತೀರ್ಥಯಾತ್ರೆ, ಉಪವಾಸ, ಧ್ಯಾನ, ಪ್ರಾರ್ಥನೆ, ಸರ್ವಸಮಭಾವ. ಸರ್ವಭೂತಹಿತ ಈ ಅಭಿಪ್ರಾಯಗಳು ಈ
ಮೂರು ಪಂಥಗಳಲ್ಲಿಯೂ ರೂಢಮೂಲವಾದವು. ಶೈವ ಪಂಥದಲ್ಲಿ ನಾಯನಾರರೆಂದು
ಹೆಸರಾದ ಭಕ್ತರು ಹಾಡಿದ ಭಕ್ತಿಗೀತೆಗಳು ಎಲ್ಲರ ಹೃದಯಗಳನ್ನೂ ಸೂರೆಗೊಂಡವು. ಇವರಲ್ಲಿ ಮುಖ್ಯರಾದವರು ತಿರುಜ್ಞಾನ ಸಂಬಂಧರ್, ಅಪ್ಪರ್, ಸುಂದರರ್, ಮಾಣಿಕ್ಯ ವಾಚಕರ್ ಮೊದಲಾದವರು. ಈ ತಮಿಳುನಾಡಿನ ಅಡಿಯಾರರುಗಳು
ಅಂದರೆ ದಾಸರು ಭಕ್ತಿ ಮತ್ತು ಶರಣಾಗತಿಗಳಿಗೆ ಪ್ರಧಾನ ಸ್ಥಾನವನ್ನು ಕೊಟ್ಟರು.
ವೈಷ್ಣವಭಕ್ತಿ
ಪಂಥದಲ್ಲಿ
ಹುಟ್ಟಿದ
ಭಕ್ತರಿಗೆ
ಆಳ್ವಾರುಗಳೆಂದು
ಹೆಸರು.
ಆಳ್ವಾರ್
ಅಂದರೆ
ಭಗವದ್ಭಕ್ತಿಯಲ್ಲಿ
ಮುಳುಗಿದವರು
ಎಂದು
ಅರ್ಥ.
ಇವರು
ಹನ್ನೆರಡು
ಮಂದಿ.
ಆಳ್ವಾರುಗಳಲ್ಲಿ
ಹೆಣ್ಣು
ಆಳ್ವಾರ್
ಆಂಡಾಳ್.
ತಿರುಪ್ಪಾಣ
ಎಂಬ
ಹರಿಜನ
ಆಳ್ವಾರರು
ಒಬ್ಬರು.
ಈ ಪಂಥದಲ್ಲಿ ಮೇಲು ಕೀಳು ಎಂಬ
ಭಾವಕ್ಕೆ ಅವಕಾಶವಿಲ್ಲ. ವಿಷ್ಣುಭಕ್ತರಾದವರೆಲ್ಲರೂ ಸಮಾನರು; ಅವರ ಹುಟ್ಟನ್ನು ಯಾರೂ
ಕೇಳಬಾರದು; ಅವರನ್ನು ಎಲ್ಲ ಜಾತಿಯವರೂ ಆರಾಧಿಸಬೇಕು.
ಅವರಲ್ಲಿ ಜಾತಿಭಾವನೆ ಇಡುವುದು ಘೋರಪಾಪ. ಶೈವಭಕ್ತರಂತೆ ಆಳ್ವಾರರು ಪರಮಾತ್ಮನಲ್ಲಿ ನೆಟ್ಟ ಪ್ರೇಮದಿಂದ ಮಾತ್ರ ಮೋಕ್ಷಸಾಧ್ಯವೆಂದು ಭಾವಿಸಿದರು. ಇವರ ಹಾಡುಗಳಲ್ಲಿ ಭಕ್ತಿ
ಭಾವದ ಹೊಳೆಯೇ ಹರಿದಿದೆ.
ಹದಿಮೂರು
ಮತ್ತು ಹದಿನಾರನೆಯ ಶತಮಾನಗಳ ನಡುವೆ ಭಕ್ತಿಪಂಥ ಇಡೀ ಭಾರತದಲ್ಲಿ ವ್ಯಾಪಿಸಿತು.
ಇಸ್ಲಾಮ್ ಭಾರತವನ್ನು ಪ್ರವೇಶಿಸಿ ಹಿಂದೂ ಮತದ ಮೇಲೆ ತನ್ನ
ಪ್ರಭಾವ ಬೀರಿತು, ಒಂದಿಗೇ ಹಿಂದೂ ಮತ ತನ್ನ ಪ್ರಭಾವವನ್ನು
ಅದರ ಮೇಲೆಯೂ ಬೀರಿತು. ಇದರ ಪರಿಣಾಮವಾಗಿ ಹುಟ್ಟಿದ
ಭಕ್ತಿ ಪಂಥಗಳು ಕಬೀರನ ರೀತಿಯಾಗಿ ರೂಪಗೊಂಡವು. ಈ ಪರ್ವಕಾಲದ ಭಕ್ತರೆಂದರೆ
ರಾಮಾನಂದ, ತುಲಸೀದಾಸ, ವಲ್ಲಬ್, ಸೂರದಾಸ್, ಚೈತನ್ಯ, ಮೀರಾಬಾಯಿ, ನಾಮದೇವ ಮೊದಲಾದವರು.
ಇವರೆಲ್ಲರ
ಉಪದೇಶದ ಪರಿಣಾಮವಾಗಿ ಭಾರತದ ಜನರ ಸಾಮಾಜಿಕ ಮತ್ತು
ಧಾರ್ಮಿಕ ದೃಷ್ಟಿ ರೂಪುಗೊಂಡಿತು. ದೇವರಲ್ಲಿ ನಿಶ್ಚಲವಾದ ಭಕ್ತಿ, ಏಕದೇವೋಪಾಸನೆ, ಕಾಯಾ ವಾಚಾ ಮನಸಾ
ಶುದ್ಧಜೀವನ, ಹೃದಯಮಂಥನ, ಹೃದಯಾನುಕಂಪ, ನಾಮಸ್ಮರಣೆಯ ಮಹತ್ತ್ವ, ಸರ್ವಸಮಭಾವ-ಇವೆಲ್ಲವೂ ಹೊಸ ಚೈತನ್ಯ ಪಡೆದು
ಜನರ ಜೀವನದಲ್ಲಿ ಹೊಕ್ಕವು, ಕರುಣೆ ಸರ್ವಭೂತ ಹಿತ ಸಮದರ್ಶನ-ಇವು
ಭಕ್ತಿಪಂಥದ ಸ್ವರಗಳಾದುವು.
ಕಬೀರ್
ಹಿಂದೂ ಭಕ್ತಿ ಪಂಥಕ್ಕೂ ಇಸ್ಲಾಮ್ ಧರ್ಮಕ್ಕೂ ಸೇತುವೆ ಕಟ್ಟಿದ ರಾಮ-ರಹೀಮ್; ಕೃಷ್ಣ-ಕರೀಮ್ ಒಂದೆ ಎಂದು ಬೋಧಿಸಿದ.
ಇವೆಲ್ಲದರ ಪರಿಣಾಮ ಈಚಿನ ಯುಗದವರಾದ ಗಾಂಧೀಜಿಯ
ಭಕ್ತಿ ಭಾವನೆಯಲ್ಲಿ ಕಾಣುತ್ತೇವೆ. ರಘುಪತಿ ರಾಘವ ರಾಜಾರಾಮ್ ಪತಿತಪಾವನ
ಸೀತಾರಾಮ್. ಈಶ್ವರ ಅಲ್ಲಾ ತೇರೆನಾಮ್ ಸಬ್ಕೋ ಸನ್ಮತಿ
ದೇ ಭಗವಾನ್ ಅನ್ನುವ ಗಾಂಧೀಜಿಯ ಪ್ರಾರ್ಥನೆಯಲ್ಲಿ ಭಕ್ತಿ ಪಂಥ ಪುಷ್ಟಿಸಿದೆ ಮತ್ತು
ಫಲಿಸಿದೆ ಎಂದು ಹೇಳಬಹುದು.
ಬ್ರಹ್ಮ ಮತ್ತು ಮಾಯೆ
ಸುಮ್ಮನೊಬ್ಬಂಟಿಯೆಂತಿಹುದು?
ಬೇಸರವಹುದು
ಹೊಮ್ಮುವೆನು
ಕೋಟಿರೂಪದಲಿ ನಾನೆಂದು
ಬೊಮ್ಮನೆಳಸಿದನಂತೆ.
ಆಯೆಳಸಿಕೆಯೆ ಮಾಯೆ
ನಮ್ಮಿರವು
ಮಾಯೆಯಲಿ – ಮಂಕುತಿಮ್ಮ ||
ಬ್ರಹ್ಮ ಮತ್ತು ಸೃಷ್ಟಿ
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ
ವಿ-
ಸ್ತರಿಸುವಂದದಿ;
ಸೃಷ್ಟಿ ತನ್ನ ಮೂಲವನು
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ
ನೊರೆ ಸೃಷ್ಟಿ ಪಾಲ್ ಬ್ರಹ್ಮ
– ಮಂಕುತಿಮ್ಮ ||
ದೇವರೆಂಬುದದೇನು?
ದೇವರೆಂಬುದದೇನು
ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದರೊಟ್ಟು
ಹೆಸರೆ? ||
ಕಾವನೊರ್ವನಿರಲ್ಕೆ
ಜಗದ ಕಥೆಯೇಕಿಂತು? |
ಸಾವು ಹುಟ್ಟುಗಳೇನು? – ಮಂಕುತಿಮ್ಮ ||
ದೈವ ವಿಚಿತ್ರ
ಶ್ರೀವಿಷ್ಣು
ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ
ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ
||
ದೈವ
ವಿಶೇಷ
ಜೀವ ಜಡರೂಪ ಪ್ರಪಂಚವನದಾವುದೋ
ಆವರಿಸಿಕೊಂಡುಮೊಳನೆರೆದುಮಿಹುದಂತೆ
ಭಾವಕೊಳಪಡದಂತೆ
ಅಳತೆಗಳವಡದಂತೆ
ಆ ವಿಶೇಷಕೆ ಮಣಿಯೊ – ಮಂಕುತಿಮ್ಮ
||
ದೇವರ ಇರುವಿಕೆ ಹೇಗೆ ಗೊತ್ತೆ?
ಕುರುಡನಿನಚಂದ್ರರನು
ಕಣ್ಣಿಂದ ಕಾಣುವನೆ?
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||
ನರನುಮಂತೆಯೆ
ಮನಸಿನನುಭವದಿ ಕಾಣುವನು |
ಪರಸತ್ತ್ವಮಹಿಮೆಯನು
– ಮಂಕುತಿಮ್ಮ ||
ಅಳತೆಗೋಲು ಉಂಟೆ?
ಭೌತವಿಜ್ಞಾನಿ
ರವಿತಾರೆಧರೆಗಳ ಚಲನ |
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್
||
ಪ್ರೀತಿರೋಷಗಳನವನಳೆವನೇನ್?
ಅವ್ಯಕ್ತ
| ಚೇತನವನರಿವನೇಂ? – ಮಂಕುತಿಮ್ಮ ||
ದೇವರ
ಸಮ ದೃಷ್ಟಿ
ಕಿವುಡುತನ
ತಪ್ಪೀತೆ ರನ್ನಕುಂಡಲದಿಂದ?
ತೊಗಲು ಜಬ್ಬಲು
ಬಿಳದೆ ಮೃಷ್ಟಾನ್ನದಿಂದ?
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ
ಜವರಾಯ ಸಮವರ್ತಿ – ಮಂಕುತಿಮ್ಮ ||
ಯಾರು ಮುಕ್ತರಾಗುವರು?
ಮುಕ್ತಿಯೆಂಬುದು ಮನದ ಸಂಸ್ಥಿತಿಯೆ; ಬೇರಲ್ಲ
ರಕ್ತಿ ವಿಪರೀತವದಕಾಗದಿರೆ ಮುಕ್ತಿ
ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ
ಶಮಿಪ
ಶಕ್ತಿವಂತನೆ ಮುಕ್ತ – ಮಂಕುತಿಮ್ಮ ||
ಮನುಷ್ಯನ
ಭಕ್ತಿ ಹೇಗೆ ಗೊತ್ತೆ?
ಕತ್ತಲೆಯೊಳೇನನೋ
ಕಂಡು ಬೆದರಿದ ನಾಯಿ |
ಎತ್ತಲೋ ಸಖನೊರ್ವನಿಹನೆಂದು ನಂಬಿ ||
ಕತ್ತೆತ್ತಿ
ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ
ನಮದು – ಮಂಕುತಿಮ್ಮ || ಕಗ್ಗ
ಮೋಕ್ಷ ಎಂದರೇನು?
ದಾಸರೋ ನಾವೆಲ್ಲ ಶುನಕನಂದದಿ ಜಗದ
|
ವಾಸನೆಗಳೆಳೆತಕ್ಕೆ
ದಿಕ್ಕುದಿಕ್ಕಿನಲಿ ||
ಪಾಶಗಳು ಹೊರಗೆ; ಕೊಂಡಿಗಳು ನಮ್ಮೊಳಗಿಹುವು
|
ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ ||
ಘೋಷಣೆ: ಮೇಲಿನ ವಿವರಗಳನ್ನು ಮೈಸೂರು ವಿಶ್ವಕೋಶದ ಅಂತರ್ಜಾಲದ ಪುಟಗಳು ಮತ್ತು ಪೂಜ್ಯ ಡಿ.ವಿ ಗುಂಡಪ್ಪನವರ "ಮಂಕುತಿಮ್ಮನ ಕಗ್ಗ"ದ ಕೃತಿಯಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ.
Comments
Post a Comment