ಕರನಿರಾಕರಣ ಚಳವಳಿ, ಅರ್ಥ ಮತ್ತು ಸ್ವರೂಪ
ಕರನಿರಾಕರಣ ಚಳವಳಿ, < ಮೈಸೂರು ವಿಶ್ವವಿದ್ಯಾನಿಲಯ
ವಿಶ್ವಕೋಶ
ಕರನಿರಾಕರಣ ಚಳವಳಿ :
ಪ್ರಭುತ್ವದ ರೀತಿನೀತಿಗಳು ಪ್ರಜೆಗಳಿಗೆ ಸರಿಯೆನಿಸದಾಗ, ಅವರ ಹಿತಗಳಿಗೆ ವಿರೋಧವಾಗಿ ಸರ್ಕಾರ ವರ್ತಿಸುತ್ತಿದ್ದಾಗ,
ಪ್ರಜೆಗಳ ನ್ಯಾಯವಾದ ಆಶೋತ್ತರಗಳನ್ನು ಈಡೇರಿಸಲಿಕ್ಕೂ ಆಳರಸರು ಒಡಂಬಡದಿದ್ದಾಗ, ತಮ್ಮ ಹಕ್ಕಿನ ಸ್ಥಾಪನೆಗಾಗಿ,
ಹಿತರಕ್ಷಣೆಗಾಗಿ, ನ್ಯಾಯದ ಪುರೈಕೆಗಾಗಿ ಅಥವಾ ಆಶೋತ್ತರಗಳ ಈಡೇರಿಕೆಗಾಗಿ ಪ್ರಜೆಗಳು ಕೈಕೊಳ್ಳುವ ತೀವ್ರವಾದ
ಮತ್ತು ಸಾಮಾನ್ಯವಾಗಿ ಕೊಟ್ಟಕೊನೆಯ ಅಹಿಂಸಾಸ್ಮಕ ಅಸ್ತ್ರ; ಸರ್ಕಾರಕ್ಕೆ ಕೊಡಬೇಕಾದ ಕಂದಾಯವನ್ನು ಕೊಡಲು
ನಿರಾಕರಿಸುವ ಸಾಮೂಹಿಕ ಕ್ರಮ. ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಸಮರ ಕಾಲದಲ್ಲಿ ರೂಪಿತವಾಗಿ ಪ್ರಯೋಗವಾದ
ಒಂದು ಮುಖ್ಯ ಅಸ್ತ್ರ. (ನೋ-ಟ್ಯಾಕ್ಸ್ ಕ್ಯಾಂಪೇನ್)
ಎಂದಿನಿಂದಲೋ ಪ್ರಜೆ ಪ್ರಭುತ್ವಗಳ ಮಧ್ಯೆ ಒಂದು ಬಗೆಯ ಒಪ್ಪಂದವಾಗಿದೆ.
ಜನರ ಪ್ರಾಣ, ಮಾನ, ಆಸ್ತಿ-ಪಾಸ್ತಿಗಳ ಸಂರಕ್ಷಣೆ ಮಾಡುವುದೂ ಶಾಂತಿ-ಸಮಾಧಾನಗಳನ್ನು ನೆಲೆಗೊಳಿಸುವುದೂ
ನಿತ್ಯ ಜೀವನ ನೆಮ್ಮದಿಯಾಗಿರಲು ಅವಶ್ಯವಾದದ್ದನ್ನೆಲ್ಲ ಮಾಡುವುದೂ ಪ್ರಭುತ್ವದ ಹೊಣೆ. ಈ ಭರವಸೆಗೆ
ಪ್ರತಿಯಾಗಿ, ಸರ್ಕಾರದ ಕರ್ತವ್ಯ ನಿರ್ವಹಣೆಗಾಗಿ, ಸಮಾಜದಲ್ಲಿ ಸಮಸ್ಥಿತಿ ಸ್ಥಾಪನೆಗಾಗಿ, ಪ್ರಜೆಗಳು
ಪ್ರಭುತ್ವಕ್ಕೆ ನಿಗದಿಯಾದ ಶುಲ್ಕ ಅಥವಾ ತೆರಿಗೆಯನ್ನು ವಸ್ತುರೂಪದಲ್ಲೊ, ಹಣದ ರೂಪದಲ್ಲೋ ಸಲ್ಲಿಸಬೇಕಾಗುತ್ತದೆ.
ಕೃಷಿ, ಕೈಗಾರಿಕೆ, ವ್ಯಾಪಾರ ಮುಂತಾದ ನಾನಾ ವೃತ್ತಿಗಳಲ್ಲಿ ತೊಡಗಿರುವವರು ತಮ್ಮ ವೃತ್ತಿಸೌಕರ್ಯ ಮತ್ತು
ಸಂರಕ್ಷಣೆಗೆ ಪ್ರತಿಯಾಗಿ ಪ್ರಭುತ್ವಕ್ಕೆ ತಾವು ಗಳಿಸಿದ್ದರಲ್ಲೊಂದು ಭಾಗವನ್ನು ಕೊಡುತ್ತಾರೆ. ರೈತ
ಪ್ರಭುತ್ವಕ್ಕೆ ಪ್ರತಿವರ್ಷ ಕೊಡುವ ಕಂದಾಯವನ್ನು ಒಳಗೊಂಡು ಎಲ್ಲ ಬಗೆಯ ತೆರಿಗೆಗಳನ್ನೂ ಕರವೆನ್ನುವುದೂ
ಉಂಟು.
ರಾಜ ಪ್ರಜಾಪ್ರಿಯನಾಗದೆ, ಪ್ರಜೆಯ ಹಿತಸಾಧಕನಾಗದೆ ಇದ್ದರೆ,
ಪ್ರಜಾಹಿಂಸಕನಾದರೆ, ಪ್ರಜೆ ಪ್ರತಿಭಟಿಸಬಹುದು. ಇದು ಅವನ ಮೂಲಭೂತಹಕ್ಕು. ರಾಜ ದುಷ್ಟನಾದರೆ, ಪ್ರಜಾಪೀಡಕನಾದರೆ
ಪ್ರಜೆಗಳು ಅವನನ್ನು ಹುಚ್ಚುನಾಯಿಯಂತೆ ಭಾವಿಸಿ, ಬೇಟೆಯಾಡಿ ಕೊಲ್ಲಬಹುದೆಂದು ಪ್ರತಿಪಾದಿಸುವವರೆಗೂ
ಭಾರತದ ರಾಜಿನೀತಿಶಾಸ್ತ್ರಜ್ಞರು ಹೋಗಿದ್ದಾರೆ. ನ್ಯಾಯವಾದ ಕಾರಣಗಳಿಗಾಗಿ ರೈತರು ಕಂದಾಯ ಸಲ್ಲಿಸದೆ
ನಿರಾಕರಿಸಲು ಸಹ ಅಧಿಕಾರ ಉಳ್ಳವರಾಗಿದ್ದಾರೆ. ಅಷ್ಟು ಮಾತ್ರವಲ್ಲ. ಪ್ರಜೆಗಳಿಗೂ ಪ್ರಭುತ್ವಕ್ಕೂ ಘರ್ಷಣೆ
ಉಂಟಾದಾಗ ಪ್ರಜೆಗಳು ಪ್ರಭುತ್ವದ ರೀತಿನೀತಿಗಳನ್ನು ಪ್ರತಿಭಟಿಸಿದ್ದಾರೆ. ಸಾಮೂಹಿಕವಾಗಿ ಹಳ್ಳಿಹಳ್ಳಿಗಳನ್ನೇ
ಬರಿದುಮಾಡಿ, ದೇಶ ಬಿಟ್ಟುಹೋದ ಉದಾಹರಣೆಗಳಿವೆ. ಅಂಥ ಸಂದರ್ಭಗಳಲ್ಲಿ ಪ್ರಭುತ್ವದವರು ಪ್ರಜೆಗಳನ್ನು
ಬರಮಾಡಿಕೊಂಡು, ಮಾತುಕತೆ ನಡೆಸಿ, ಅವರಿಗಾದ ಅನ್ಯಾಯಗಳನ್ನು ಸರಿಪಡಿಸಿ, ಪರಸ್ಪರ ಬಾಂಧವ್ಯವನ್ನು ಸುರಸಗೊಳಿಸಿದ್ದಾರೆ.
ಸ್ವಾತಂತ್ರ್ಯಸಾಧನೆಗಾಗಿ
ಭಾರತ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಹೋರಾಟ ನಡೆಸಿದ್ದ ಕಾಲದಲ್ಲಿ ಮಹಾತ್ಮಗಾಂಧೀಯವರು ಈ ಸಂಗ್ರಾಮದ
ನಾಯಕತ್ವ ವಹಿಸಿಕೊಂಡ ಮೇಲೆ ಅವರು ಇದಕ್ಕೆ ಜಗದಾಶ್ಚರ್ಯಕರವಾದ ರೂಪ ಕೊಟ್ಟರು. ಶಸ್ತ್ರಾಸ್ತ್ರಗಳನ್ನು
ನಿರಾಕರಿಸಿ, ಅಹಿಂಸೆಯ ಮಾರ್ಗವನ್ನು ಅನುಸರಿಸಿ, ಸತ್ಯವನ್ನಾಶ್ರಯಿಸಿ, ನಡೆಸಿದ ಮಹಾಸಂಗ್ರಾಮವದು.
ಒಂದು ಜನಾಂಗ ಶಾಂತಿಯಿಂದ, ತ್ಯಾಗದಿಂದ, ಪ್ರೇಮದಿಂದ ಪರಶತ್ರುವನ್ನು ಗೆಲ್ಲಬಹು ದೆಂಬುದನ್ನು ಮಾನವಕುಲದ
ಅನುಭವಕ್ಕೆ ಗಾಂಧಿಯವರು ತಂದುಕೊಟ್ಟರು. ಸತ್ಯ, ತ್ಯಾಗ, ಅಹಿಂಸೆಗಳೆಂಬ ತ್ರಿಮುಖ ಅಸ್ತ್ರಕ್ಕೆ ಅವರು
ಸತ್ಯಾಗ್ರಹವೆಂದು ಹೆಸರಿಟ್ಟರು. ಈ ಅಸ್ತ್ರಪ್ರಯೋಗಾರ್ಹತೆ ಪಡೆಯುವುದೂ ಗಾಂಧಿಯವರಿಂದ ಪ್ರಶಸ್ತಿ ಪಡೆಯುವುದೂ
ಸಾಮಾನ್ಯವಾಗಿರಲಿಲ್ಲ. ಇಂಥ ಅಸ್ತ್ರಪ್ರಯೋಗ ಮಾಡುವುದರಲ್ಲಿ ಗಾಂಧಿಯವರು ಅನೇಕ ಭಾರತೀಯರನ್ನು ನಿಪುಣರನ್ನಾಗಿ
ಮಾಡಿದರು. ಅವರಿಗೊಂದು ನವೀನ ಸಂಸ್ಕಾರವನ್ನೇ ಗಳಿಸಿಕೊಟ್ಟರು. ದುಷ್ಕರ್ಮದಲ್ಲಿ ತೊಡಗುವ ಸರ್ಕಾರದೊಂದಿಗೆ,
ತಮಗೆ ಬೇಡವೆನಿಸಿದ ಸರ್ಕಾರದೊಂದಿಗೆ, ಅಸಹಕರಮಾಡುವುದು ಪ್ರತಿಯೊಬ್ಬ ಪ್ರಜೆಯ ಈಶ್ವರದತ್ತವಾದ ಹಕ್ಕೆಂದರು.
ದುಷ್ಕರ್ಮದೊಂದಿಗೆ ಸಹಕಾರ ಮಾಡಬಾರದೆಂಬ ತತ್ತ್ವದ ಪ್ರತಿಪಾದನೆ ಮಾಡಿದರು.
ಗಾಂಧೀಜಿಯವರ ಸತ್ಯಾಗ್ರಹಪ್ರಯೋಗಾವಸರದಲ್ಲಿ ನಾನಾಘಟ್ಟಗಳುಂಟು.
ಕಟ್ಟಕಡೆಯ ಘಟ್ಟ ಕರನಿರಾಕರಣ. ಗಾಂಧೀಜಿಯವರು ನಡೆಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಅವರ ಒಪ್ಪಿಗೆ
ಪಡೆದು, ಒಂದೆರಡು ಪ್ರಾಂತ್ಯಗಳಲ್ಲಿ ಮಾತ್ರ ಸತ್ಯಾಗ್ರಹಿಗಳು ಕರನಿರಾಕರಣ ವನ್ನಾರಂಭಿಸಿದರು. ಗುಜರಾತಿನಲ್ಲೂ
ಕರ್ನಾಟಕ ಪ್ರಾಂತ್ಯದ ಕೆಲವು ತಾಲ್ಲೂಕುಗಳಲ್ಲೂ ಮಾತ್ರವೇ ತೃಪ್ತಿಕರವಾಗಿ ಈ ಆಂದೋಲನ ಸಾಗಿತು. ಗುಜರಾತಿನ
ಬಾರ್ದೋಲಿಯ ರೈತರು ಕರನಿರಾಕರಣ ಕ್ರಮವನ್ನಾರಂಭಿಸುವ ನಿರ್ಣಯ ಮಾಡಿದರು. ಈ ಸನ್ನಿವೇಶ ಕುರಿತು ಗಾಂಧೀಜಿಯವರೇ
1922 ಜನವರಿ 1ರ ಯಂಗ್ ಇಂಡಿಯ ಪತ್ರಿಕೆಯಲ್ಲಿ ಈ ರೀತಿ ಬರೆದರು: ಸು. 4,000 ಖಾದಿಧಾರಿಗಳು ಸಭೆಸೇರಿದ್ದರು.
ಅವರಲ್ಲಿ 500 ಮಂದಿ ಹೆಂಗಸರು. ನಾನು ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಹಾಕಿ ಕರನಿರಾಕರಣಮಾಡಲು
ಸಿದ್ಧರಾಗಿರುವವರು ಇಂತಿಂಥ ಯೋಗ್ಯತಾಸಿದ್ಧಿ ಪಡೆದಿರಬೇಕೆಂದು ವಿವರಿಸಿ ಹೇಳಿದೆ. ಪ್ರತಿಯೊಬ್ಬರೂ
ಅರ್ಥಮಾಡಿಕೊಂಡರು. ಅವರು ಎಲ್ಲ ಕಷ್ಟಗಳನ್ನೂ ಎದುರಿಸಲು ಸಿದ್ಧರಾಗಿದ್ದರು; ಸೆರೆಮನೆವಾಸ ಮಾತ್ರವಲ್ಲ,
ಪ್ರಾಣ ಕೊಡಲಿಕ್ಕೂ ಸಿದ್ಧರಾಗಿದ್ದರು. ಗಾಂಧೀಯವರು ಅವರ ಬಗ್ಗೆ ಇಷ್ಟು ಹೇಳಿದಮೇಲೂ ಅವರಿಗೆ ಕರನಿರಾಕರಣ
ವನ್ನಾರಂಭಿಸಲು ಒಪ್ಪಿಗೆ ಕೊಡಲಿಲ್ಲ.
1928ರಲ್ಲಿ ಸರ್ದಾರ್ ಪಟೇಲರ ನಾಯಕತ್ವದಲ್ಲಿ ಬಾರ್ದೋಲಿ
ತಾಲ್ಲೂಕಿನಲ್ಲಿ ಕರನಿರಾಕರಣ ಸತ್ಯಾಗ್ರಹ ಸಿದ್ಧತೆಗಳಾದವು. ಹಲವು ವರ್ಷಗಳಿಂದ ಈ ತಾಲ್ಲೂಕಿನಲ್ಲಿ
ನಾಲ್ಕೈದು ಸೇವಾಸಂಸ್ಥೆಗಳಿದ್ದವು. ಅವುಗಳನ್ನಾಧಾರಮಾಡಿ ಶಿಬಿರಗಳನ್ನೇರ್ಪಡಿಸಲಾಯಿತು. ಒಂದೊಂದು ಶಿಬಿರದಲ್ಲೂ
ಇನ್ನೂರುಮಂದಿ ಸ್ವಯಂಸೇವಕರು. ಇವರೆಲ್ಲರಿಗೂ ನಿರ್ಣೀತ ಕರ್ತವ್ಯಭಾರವಿತ್ತು. ಪ್ರತಿಯೊಂದು ಶಿಬಿರವೂ
ಶಸ್ತ್ರಸನ್ನದ್ಧರಣಾಂಗಣದಂತಿತ್ತು. ಸುದ್ದಿಯ ಕರಪತ್ರಗಳ ಪ್ರಕಟಣೆಯಾಗುತ್ತಿತ್ತು. ಎಂಥ ಪರಿಸ್ಥಿತಿಯೇ
ಉಂಟಾಗಲಿ ಅದನ್ನೆದುರಿಸಲು ರೈತರು ದೃಢಸಂಕಲ್ಪರಾಗಿದ್ದರು.
ನಾವು ಪುರ್ಣ ಅಹಿಂಸಾವಾದಿಗಳಾಗಿರುತ್ತೇವೆ.
ಎಂಥ ಕಷ್ಟವೇ ಬರಲಿ-ನಾವು ಸಹಿಸುತ್ತೇವೆ. ಎದುರಿಸುತ್ತೇವೆ. ನಮ್ಮದೆನ್ನುವುದೆಲ್ಲ ನಾಶವಾಗಿಹೋದರೂ
ನಾವು ದುಃಖಪಡುವುದಿಲ್ಲ. ಸಂತೋಷದಿಂದ ಎಲ್ಲವನ್ನೂ ಎದುರಿಸುತ್ತೇವೆ-ಎಂಬುದಾಗಿ ಪ್ರಮಾಣವಚನ ತೆಗೆದುಕೊಂಡರು.
1928 ಫೆಬ್ರುವರಿ 12ರಂದು ಪ್ರಜಾಪ್ರಮುಖರೆಲ್ಲ ಬಾರ್ದೋಲಿಯಲ್ಲಿ
ಸಮ್ಮೇಳನ ನಡೆಸಿದರು. ಅಂಗೀಕೃತವಾದ ನಿರ್ಣಯ ಈ ರೀತಿ ಇದೆ: ಕಂದಾಯನಿರ್ಣಯದ ಪುನಃಪರಿಶೀಲನೆ ನಿರಂಕುಶವಾದುದು,
ಅನ್ಯಾಯವಾದುದು ಮತ್ತು ಗೋಳುಗುಟ್ಟಿಸುವಂಥದು. ಆದಕಾರಣ ಎಲ್ಲ ಹಿಡುವಳಿದಾರರೂ ಪುನಃಪರಿಶೀಲನೆಯಿಂದ
ನಿಶ್ಚಯವಾಗಿರುವ ಕಂದಾಯವನ್ನು ಕೊಡದೆ ನಿರಾಕರಿಸತಕ್ಕದ್ದು, ಪುರ್ಣ ಹಣ ಸಂದಾಯವಾಯಿತೆಂದು ಹೇಳಿ ಸರ್ಕಾರ
ಹಳೆ ಕಂದಾಯದ ಮೊತ್ತವನ್ನಂಗೀಕರಿಸಲು ಒಪ್ಪಬೇಕು. ಇಲ್ಲವೆ ಸರ್ಕಾರದವರು ನಿಷ್ಪಕ್ಷಪಾತ ವಿಚಾರಣಾ ಸಮಿತಿಯನ್ನು
ನೇಮಿಸಿ, ಆ ಸಮಿತಿ ಸ್ಥಳಪರೀಕ್ಷೆ ಮಾಡಿ ವಿಚಾರಣೆ ನಡೆಸಿ ಒಂದು ತೀರ್ಮಾನಕ್ಕೆ ಬರುವವರೆಗೂ ಹಳೆಕಂದಾಯದ
ಮೊತ್ತವನ್ನಂಗೀಕರಿಸಲು ಒಪ್ಪಬೇಕು.
ಈ ನಿರ್ಣಯವಾಗುತ್ತಲೇ ರೈತರ ಸತ್ಯಾಗ್ರಹಸಿದ್ಥತೆಯೊಂದು
ಕಡೆ, ಪ್ರಭುತ್ವೋದ್ಯೋಗಿಗಳ ಸಮರಸಿದ್ಧತೆಯೊಂದು ಕಡೆ ಆರಂಭವಾದುವು. ಇವೆರಡು ಚಟುವಟಿಕೆಗಳೂ ವಾತಾವರಣವನ್ನು
ಕಲಕಿದುವು. ಗಂಡಸರು, ಹೆಂಗಸರು, ಮುದುಕರು, ಮಕ್ಕಳು, ಅವರಿವರೆನ್ನದೆ ಎಲ್ಲರೂ ಎಂಥ ತಾಗ್ಯಕ್ಕಾದರೂ
ಬಲಿದಾನಕ್ಕಾದರೂ ಸಿದ್ಧರಾದರು. ಸರ್ದಾರರು ಎಲ್ಲೆಲ್ಲೂ ಜನರನ್ನು ಸೇರಿಸಿ, ಸತ್ಯಾಗ್ರಹದ ಕಠೋರ ಪರಿಣಾಮಗಳನ್ನು
ವರ್ಣಿಸುತ್ತ ಬಂದರು. ಜನರಲ್ಲಿ ಮಾತಿಗೆ ನಿಲುಕದಷ್ಟು ಉತ್ಸಾಹ ಶ್ರದ್ಧೆಗಳಿದ್ದವು.
ಸರ್ಕಾರದ ಅಧಿಕಾರಿಗಳು ಶಾಸನ, ಶಸ್ತ್ರ ಇವೆರಡನ್ನು ಆಶ್ರಯಿಸಿ
ಕಂದಾಯ ವಸೂಲಿಗಾರಂಭಿಸಿದರು. ಹಲವು ದುರ್ಬಲಹೃದಯಿ ರೈತರನ್ನೇ ಬಳಸಿಕೊಂಡು ಸತ್ಯಾಗ್ರಹ ಚಳವಳಿಯನ್ನು
ನಿರ್ಮೂಲಮಾಡಲು ಯತ್ನಿಸಿದರು. ಸರ್ಕಾರಿ ಅಧಿಕಾರಿಗಳು ಹಿಡಿಯದ ಮಾರ್ಗವಿಲ್ಲ. ರೈತರನ್ನು ಹೆದರಿಸಿದರು.
ಅವರಿಗೆ ಜುಲ್ಮಾನೆ ಹಾಕಿದರು. ಅವರನ್ನು ಹಿಡಿದು ಸೆರೆಮನೆಗೆ ದೂಡಿದರು. ಅವರ ಆಸ್ತಿಪಾಸ್ತಿಗಳನ್ನು
ಮುಟ್ಟುಗೋಲುಹಾಕಿಕೊಂಡರು. ರೈತರು ಜಗ್ಗಲಿಲ್ಲ. ಲಂಚ ಕೊಟ್ಟು ಹಲವರನ್ನು ಬಲೆಗೆ ಸೆಳೆದುಕೊಳ್ಳಲು ನೋಡಿದರು.
ಪ್ರಯೋಜನವಾಗಲಿಲ್ಲ. ಒಂದು ಪಂಗಡವನ್ನು ಇನ್ನೊಂದು ಪಂಗಡದ ಮೇಲೆ ಎತ್ತಿಕಟ್ಟುವ ಹಂಚಿಕೆ ಹಾಕಿದರು.
ಅದೂ ಯಶಸ್ವಿಯಾಗಲಿಲ್ಲ. ಲಾಠಿಪ್ರಯೋಗ ಆರಂಭವಾಯಿತು. ರೈತರು ಜಗ್ಗಲಿಲ್ಲ, ಎದೆ ಕೊಟ್ಟು ನಿಂತು ಏಟು
ತಿಂದರು. ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಹೊರಗಿನಿಂದ ಪಠಾಣರನ್ನು ಆಮದುಮಾಡಿ, ಅವರನ್ನು ರೈತರಮೇಲೆ
ಬಿಟ್ಟಾಗಲೂ ಜನ ಹೆದರಲಿಲ್ಲ. ಜಮೀನುಗಳನ್ನು ಹರಾಜಿಗಿಟ್ಟರೆ ಕೊಳ್ಳುವವರೇ ಇರಲಿಲ್ಲ. ಅಧಿಕಾರಿಗಳು
1,400 ಎಕರೆಗಳ ಜಮೀನನ್ನು ವಶಪಡಿಸಿಕೊಂಡರು. ಹೋದಷ್ಟು ಬೆಲೆಗೆ ಹರಾಜುಹಾಕಿದರು.
ರೈತರು ಮಾತ್ರ ಶಾಂತಿಯಿಂದಲೇ ನಡೆದುಕೊಂಡರು. ಸರ್ಕಾರದ
ಮೇಲಿನ ಅಧಿಕಾರಿಗಳು, ಕೆಳಗಿನ ನೌಕರರು, ಹರಾಜು ಜಫ್ತಿಗಳೇ ಮುಂತಾದ ಕ್ರಮಗಳಿಗೆ ಸಹಾಯಕರಾದ ಜನರು-ಇವರ
ಮೇಲೆಲ್ಲ ಜನರು ಸಾಮಾಜಿಕ ಬಹಿಷ್ಕಾರ ಹಾಕಿದರು, ಪರಮಾಶ್ಚರ್ಯಕರವಾದ ಈ ಕರನಿರಾಕರಣ ಸಂಗ್ರಾಮದಿಂದ ಬಾರ್ದೋಲಿಗೆ
ಅಖಿಲಭಾರತ ಕೀರ್ತಿಗೌರವಗಳು ಬಂದವು. ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಸಹ ಬಾರ್ದೋಲಿ ಕರನಿರಾಕರಣದ
ವಿಚಾರ ಬಂತು. ಈ ಸಂಗ್ರಾಮ ಐದಾರು ತಿಂಗಳ ಕಾಲ ನಡೆಯಿತು.
ಕಡೆಗೆ ಸರ್ಕಾರ ಶರಣಾಗಬೇಕಾಯಿತು. ಗವರ್ನರ್ ವಿಚಾರಣಾ ಸಮಿತಿಯೊಂದನ್ನು ನೇಮಿಸಿದ. ವಶಪಡಿಸಿಕೊಂಡ ಜಮೀನುಗಳನ್ನೆಲ್ಲ ಸಂಬಂಧಪಟ್ಟವರಿಗೆ ಹಿಂದಕ್ಕೆ ಕೊಡಲಾಯಿತು. ವಜಾ ಮಾಡಲಾಗಿದ್ದ ಗ್ರಾಮೋದ್ಯೋಗಿಗಳನ್ನೆಲ್ಲ ಕರೆಸಿ ಅವರ ದಫ್ತರಗಳನ್ನು ಅವರಿಗೆ ಕೊಟ್ಟು, ಕೆಲಸಗಳಿಗೆ ನೇಮಿಸಿದರು. ಸಮಿತಿಯೂ ವಿಚಾರಣೆ ನಡೆಸಿತು. ರೈತರವಾದ ಯೋಗ್ಯವೆಂದು ಅಂಗೀಕರಿಸಿತು. ಶೇ. 22 ರಷ್ಟು ಏರಿಸಿದ್ದ ಕಂದಾಯವನ್ನು ಶೇ. 6 1/4ಗೆ ಇಳಿಸಲಾಯಿತು. ತಮ್ಮ ಶಿಫಾರಸುಗಳನ್ನು ಸಮಿತಿಯ ಸದಸ್ಯರು ಸರ್ಕಾರಕ್ಕೆ ಕಳುಹಿಸಿದರು. ಬಾರ್ದೋಲಿಯನ್ನು ಸತ್ಯಾಗ್ರಹದ ಪರಮಲಕ್ಷಣದ ಉದಾಹರಣೆಯನ್ನಾಗಿ ಮಾಡಬೇಕೆಂಬುದು ನಿಮ್ಮ ಕನಸಾಗಿತ್ತು. ಬಾರ್ದೋಲಿಯ ರೈತರು ತಮಗೆ ವಿಶಿಷ್ಟವೆನಿಸಿದ ರೀತಿಯಿಂದ ನಿಮ್ಮ ಕನಸನ್ನು ನಿಜಮಾಡಿದರು ಎಂಬುದಾಗಿ ಸರೋಜಿನಿದೇವಿಯವರು ಗಾಂಧೀಜಿಗೆ ಪತ್ರ ಬರೆದರು.
ಸೂಚನೆ: ಮೇಲಿನ ವಿವರಗಳನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ.
Comments
Post a Comment