ಉತ್ತರ ಕನ್ನಡ ಜಿಲ್ಲೆಯ ಕರನಿರಾಕರಣ ಚಳವಳಿ, ಸಂಗ್ರಹಿತ ಮಾಹಿತಿ
ಬಾರ್ದೋಲಿಯ ಕರನಿರಾಕರಣ ಚಳವಳಿಯಲ್ಲದೆ ಎಲ್ಲರ ಗಮನ ಸೆಳೆಯುವ
ಇನ್ನೊಂದು ಉದಾಹರಣೆಯೆಂದರೆ ಕರ್ನಾಟಕದ ಶಿರಸಿ, ಸಿದ್ದಾಪುರ, ಅಂಕೋಲೆ ಮತ್ತು ಹಿರೇಕೆರೂರು ತಾಲ್ಲೂಕುಗಳದು.
ಈ ನಾಲ್ಕೂ ತಾಲ್ಲೂಕುಗಳ ಜನ ಗಾಂಧೀಜಿಯವರ ನಿರ್ಮಲ ಕಲ್ಪನೆ ಮತ್ತು ಪವಿತ್ರಭಾವನೆಗೆ ಲೇಶವೂ ಊನ ಬಾರದಂತೆ
ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಹುಲ್ಲುಬನ್ನಿ ಕರನಿರಾಕರಣ ಮುಂತಾದವುಗಳನ್ನು ನಡೆಸಿದರು.
ಅಂಕೋಲೆಯದು ಒಂದು ಧ್ಯೇಯಕ್ಕಾಗಿ ನಡೆದ (1930 ಏಪ್ರಿಲ್) ಸತ್ಯಾಗ್ರಹವೆನ್ನ ಬಹುದಾದರೂ ಉಳಿದ ತಾಲ್ಲೂಕುಗಳಲ್ಲಿ
ನಡೆದದ್ದು ಒಂದು ಅನಿವಾರ್ಯ ಸನ್ನಿವೇಶದಿಂದಲೂ ಪ್ರಭಾವಿತವಾದದ್ದು ಎಂಬುದನ್ನು ಮರೆಯುವಂತಿಲ್ಲ.
1931ರಲ್ಲಿ ಶಿರಸಿ-ಸಿದ್ದಾಪುರ, ಹಿರೇಕೆರೂರು ಈ ಮೂರು ತಾಲ್ಲೂಕುಗಳಲ್ಲೂ ಕ್ಷಾಮ ಆವರಿಸಿತು. ದವಸ
ಧಾನ್ಯಗಳ ಧಾರಣೆಗಳು ಬಿದ್ದುವು. ಶಿರಸಿ, ಸಿದ್ದಾಪುರಗಳ ಸುವರ್ಣಾದಾಯದ ಬೆಳೆಯೆಂದರೆ ಅಡಿಕೆ. ಏನೋ
ಕಾರಣದಿಂದ ಆ ಬೆಳೆ ಹಾಳಾಯಿತು. ರೂಪಾಯಿಗೆ ನಾಲ್ಕಾಣೆ (ಕಾಲುಭಾಗ) ಬೆಳೆ ಕೂಡ ರೈತರ ಕೈ ಹತ್ತಲಿಲ್ಲ.
ಆ ವರ್ಷ ಕಂದಾಯ ವಸೂಲು ಮಾಡಬಾರದೆಂದು ರೈತರು ಸರ್ಕಾರದಲ್ಲಿ ಮೊರೆ ಇಟ್ಟರು. ಅದು ಬರಿಯ ಅರಣ್ಯರೋದನವಾಯಿತು.
ಸರ್ಕಾರ ಆ ಮೊರೆಗೆ ಕಿವಿಗೊಡಲಿಲ್ಲ. ಕ್ಷಾಮ ಸಂಭವಿಸಿಲ್ಲವೆಂದೂ ಬೆಳೆಯಾಗಿಲ್ಲವೆಂಬ ಮಾತು ಸುಳ್ಳೆಂದೂ
ಇದು ಕರನಿರಾಕರಣ ಚಳವಳಿಯೆಂದೂ ಸರ್ಕಾರ ವಾದಿಸಿತು. ಆದರೆ ಕ್ಷಾಮ ಉಂಟಾಗಿದ್ದುದು ನಿಜ. ರೈತರೂ ಕಂಗಾಲಾಗಿದ್ದುದೂ
ನಿಜ. ಚಳವಳಿಯ ನಾಯಕತ್ವವನ್ನು ರಾಜಕಾರಣಿಗಳು (ಸರ್ಕಾರದವರು ಅವರನ್ನು ಹಾಗೆಂದು ಕರೆದರು) ವಹಿಸಿದ್ದರೆಂಬುದೂ
ನಿಜ. ಆದರೆ ಕ್ಷಾಮವೇ ಚಳವಳಿಗೆ ಮೂಲ ಕಾರಣವೆಂಬ, ಚಳವಳಿಯ ನಾಯಕರು ರಾಜಕಾರಣಿಗಳೇ ಆದರೂ ರೈತರ ನ್ಯಾಯವಾದ
ಬೇಡಿಕೆಯನ್ನು ಈಡೇರಿಸಬೇಕೆಂಬ ವಾದಕ್ಕೆ ಸರ್ಕಾರ ವಿಮುಖವಾಗಿತ್ತು.
ಮೂರೂ
ತಾಲ್ಲೂಕುಗಳ ರೈತರೂ ಶಾಸನಬದ್ಧವಾಗಿ, ಶಾಂತಿರೀತಿಯಿಂದ ನಡೆದುಕೊಂಡರು. ಇದು ಸಂಪುರ್ಣವಾಗಿ ಆರ್ಥಿಕ
ದುಃಸ್ಥಿತಿಯ ಹೋರಾಟ, ರಾಜಕೀಯ ಹೋರಾಟವಲ್ಲ-ಎಂಬುದನ್ನು ಸ್ಥಾಪಿಸಿದರು. ಅರ್ಜಿಗಳನ್ನು ಹಾಕಿದರು. ಸಭೆಗಳನ್ನು
ನಡೆಸಿದರು, ನಿರ್ಣಯಗಳನ್ನು ಮಾಡಿದರು; ಜಿಲ್ಲೆಯ ಅಧಿಕಾರಿಗಳನ್ನು ಕಂಡರು; ತಮ್ಮ ಕಷ್ಟಗಳನ್ನು ವಿವರಿಸಿದರು;
ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೆ ದಾರಿಕಾಣದೆ ರೈತರು ಸಾಂಘಿಕವಾಗಿ ಕರನಿರಾಕರಣ ಸತ್ಯಾಗ್ರಹವನ್ನಾರಂಭಿಸಿದರು.
ಸರ್ಕಾರ ದಂಡದಾರಿಯಾಯಿತು. ರೈತರ ಬೆನ್ನೂಮೂಳೆಗಳನ್ನು ಮುರಿಯಲಾರಂಭಿಸಿತು.
ಶಿರಸಿ-ಸಿದ್ದಾಪುರಗಳ ರೈತರ ವ್ಯವಹಾರ 1923ರಿಂದ ಹಿರಿಯ
ರೆವಿನ್ಯೂ ಆಧಿಕಾರಿ ಕಾಲ್ವೆನನ ಪರಿಶೀಲನೆಯಲ್ಲಿತ್ತು. ಇವೆರಡೂ ತಾಲ್ಲೂಕುಗಳಲ್ಲೂ ಈತ ಸಂಚಾರಮಾಡಿ,
ಆರ್ಥಿಕ ಪರಿಶೀಲನೆ ನಡೆಸಿದ. ಕಂದಾಯದ ಮೊತ್ತವನ್ನು ಶಾಶ್ವತವಾಗಿ ಕಡಿಮೆಮಾಡಬೇಕೆಂದು ಸರ್ಕಾರಕ್ಕೆ
ಸಲಹೆಮಾಡಿದ. ಆದರೆ ಸರ್ಕಾರ ಈ ಸಲಹೆಗಳನ್ನು ಪುರಸ್ಕರಿಸಲಿಲ್ಲ.
ಮೂರು ತಾಲ್ಲೂಕುಗಳ ರೈತರೂ ದೃಢಸಂಕಲ್ಪರಾದರು. ಕಂದಾಯವನ್ನು
ಕೊಡುವುದಿಲ್ಲವೆಂದು ಹೇಳಿದರು. ಅಧಿಕಾರಿಗಳು ಜಮೀನುಗಳನ್ನು ಜಫ್ತಿಮಾಡಿದರು; ರೈತರಿಗೆ ಕೊಡಬಾರದ ಹಿಂಸೆ
ಕೊಟ್ಟರು. ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡರೂ ಯಾವ ರೈತರೂ ಪ್ರತಿಭಟಿಸಲಿಲ್ಲ. ಜಮೀನು ಹರಾಜಿನಲ್ಲಿ
ಸವಾಲು ಕೂಗುವವರೇ ಇರಲಿಲ್ಲ. ಎಂಟುನೂರಕ್ಕೂ ಮೀರಿ ಜಫ್ತಿಗಳಾದವು. ಇನ್ನೂರು ಮಂದಿಗೆ ಮುಟ್ಟುಗೋಲು
ನೋಟೀಸ್ ಕೊಡಲಾಯಿತು. ಉಭಯ ಪಕ್ಷಗಳ ಮಧ್ಯೆ ಹೀಗೆ ಹೋರಾಟವಾಗುತ್ತಿದ್ದಾಗ, 1931ರ ಮಾರ್ಚ್ 4 ರಂದು,
ಗಾಂಧೀ-ಇರ್ವಿನ್ ಒಡಂಬಡಿಕೆ ಯಾಯಿತು. ಚಳವಳಿ ನಿಂತಿತು.
ಜಮೀನುಗಳು ಹರಾಜಾಗುತ್ತಿದ್ದ ಕಾಲದಲ್ಲಿ ಸ್ವಯಂಸೇವಕರನೇಕರು
ಪಿಕೆಟ್ ಮಾಡುತ್ತಿದ್ದರು. ಸರ್ಕಾರದವರು ಇವರ ಮೇಲೆಲ್ಲ ನಾನಾ ಆಪಾದನೆಗಳನ್ನು ಹೊರಿಸಿ ಮೊಕದ್ದಮೆಗಳನ್ನು
ಹೂಡಿ, ವಿಚಾರಣೆಗೊಳಪಡಿಸಿ, ಇವರಿಗೆಲ್ಲ ಶಿಕ್ಷೆ ಕೊಡಿಸಿದ್ದರು. ಸ್ವಯಂಸೇವಕರನೇಕರಿಗೆ ಈ ತಾಲ್ಲೂಕು
ಬಿಟ್ಟು ಹೊರಡಬೇಕೆಂದು ಎಚ್ಚರಿಕೆ ಕೊಟ್ಟಿದ್ದರು. ಧಾರವಾಡ, ಬೆಳಗಾಂವಿ ಕಡೆಗಳಲ್ಲಿ ಮನೆಗಳ ಶೋಧನೆ
ನಡೆಸಿ ಪಿತೂರಿ ಮತ್ತು ರಾಜದ್ರೋಹ ಆಪಾದನೆಗಳಿಗಾಗಿ ಹಲವರ ಮೇಲೆ ಮೊಕದ್ದಮೆಗಳನ್ನು ಹೂಡುವ ಸಿದ್ಧತೆ
ನಡೆದಿತ್ತು. ಆದರೆ ಒಡಂಬಡಿಕೆಯಿಂದಾಗಿ ಅದನ್ನೆಲ್ಲ ಕೈಬಿಡಬೇಕಾಯಿತು.
ಕಟ್ಟಕಡೆಗೆ ರೈತರ ಮೊರೆ ಸಾಧುವಾದದ್ದು ಎಂಬುದು ಸರ್ಕಾರದವರ
ಮನಸ್ಸಿಗೆ ಬಂತು. ನಿಜವಾಗಿಯೂ ಇದು ಆರ್ಥಿಕ ದುಃಸ್ಥಿತಿಯ ಚಳವಳಿ ಎಂಬುದನ್ನು ಅಧಿಕಾರಿಗಳು ಗ್ರಹಿಸಿದರು.
ಈ ಅಂಶವನ್ನು ಗಾಂಧೀಜಿಯವರು ಲಾರ್ಡ್ ಇರ್ವಿನ್ನನ ಗಮನಕ್ಕೆ ತಂದು ಅವನನ್ನೊಪ್ಪಿಸಿದರು. 1931 ಮೇ ತಿಂಗಳಿನಲ್ಲಿ
ರೆವಿನ್ಯೂ ಕಮೀಷನರೊಂದಿಗೆ ಆದ ಒಡಂಬಡಿಕೆಯ ಫಲವಾಗಿ ಹಿರೇಕೆರೂರು ತಾಲ್ಲೂಕಿನ ರೈತರಿಗೆ ತೃಪ್ತಿಕರ
ಪರಿಹಾರ ಸಿಕ್ಕಿತು. ಆ ವರ್ಷದ ಕಂದಾಯವನ್ನು ರದ್ದು ಮಾಡಿದರು.
ಆದರೆ ಶಿರಸಿ ಸಿದ್ದಾಪುರಗಳ ರೈತರ ವಿಚಾರದಲ್ಲಿ ಹೀಗಾಗಲಿಲ್ಲ.
ರೈತರು ಒಬ್ಬೊಬ್ಬರೂ ಅರ್ಜಿಹಾಕಿಕೊಂಡರೆ ವಿಚಾರಮಾಡಿ ಸಂದರ್ಭಾನುಸಾರ ಕಂದಾಯಪರಿಹಾರ ಕೊಡುವುದಾಗಿ ಸರ್ಕಾರಿ
ಅಧಿಕಾರಿಗಳು ಕೊಸರಾಟ ಮಾಡಿದರಲ್ಲದೆ ರೈತರಿಗೆ ಕಿರುಕುಳ ಕೊಟ್ಟರು. ಸ್ಥಳೀಯ ಅಧಿಕಾರಿಗಳು ಸರ್ಕಾರದ
ಆಜ್ಞೆಗಳಿಗೆ ತಮ್ಮದೇ ಆದ ಭಾಷ್ಯ ಮಾಡಿದ್ದರಿಂದ ಬಡರೈತರಿಗೆ ಸಹಿಸಲಾಗದಷ್ಟು ಹಿಂಸೆ ಉಂಟಾಯಿತು. ಕಡೆಗೆ
ಇಲ್ಲೂ ರೈತರಿಗೆ ಗೆಲುವು ಲಭಿಸಿತು. ಬಂಧನದಲ್ಲಿದ್ದವರೆಲ್ಲರ ಬಿಡುಗಡೆಯಾಯಿತು. ನ್ಯಾಯ ಸ್ಥಾನಗಳಲ್ಲಿ
ಹೂಡಿದ್ದ ಮೊಕದ್ದಮೆಗಳನ್ನೆಲ್ಲ ಅಧಿಕಾರಿಗಳು ಹಿಂದಕ್ಕೆ ತೆಗೆದುಕೊಂಡರು. ಕಡೆಗೂ ಕರನಿರಾಕರಣ ಸತ್ಯಾಗ್ರಹ
ರೈತರ ಜಯದಲ್ಲಿ ಮುಕ್ತಾಯವಾಯಿತು. 1931-32ರ ಕರನಿರಾಕರಣ ಸತ್ಯಾಗ್ರಹದ ಮಾತುಬಂದಾಗ, ಕಾರವಾರ ಜಿಲ್ಲೆಯ
ರೈತರ ಸತ್ತ್ವ ಮತ್ತು ಕ್ಷಾತ್ರಗುಣಗಳನ್ನು ಗಣನೆಗೆ ತೆಗೆದುಕೊಂಡಾಗ ಯಾರಿಗಾದರೂ ಹೆಮ್ಮೆಯಾಗುತ್ತದೆ.
ಆ ಅಪುರ್ವ ಸಂಗ್ರಾಮದಲ್ಲಿ ಗಂಡಸರೂ ಹೆಂಗಸರೂ ಸಾಮಾನ್ಯ ಕಲ್ಪನೆಗೆ ಮೀರಿದ ತ್ಯಾಗ ತೋರಿಸಿದರು. ಬೀಳಗಿಯ
ಶ್ರೀ ಕೃಷ್ಣ ಬಾಲಕೃಷ್ಣ ಪುರಾಣಿಕರು ಕರನಿರಾಕರಿಸಿದ ಕಾರಣ ಬಂಧನಕ್ಕೊಳಗಾದರು. ಅವರನ್ನು ಜನ ಮೆರವಣಿಗೆ
ಮಾಡಿ ಪೊಲೀಸ್ ಠಾಣ್ಯಕ್ಕೆ ಕರೆದೊಯ್ದರು. ಪುರಾಣಿಕರು ಆಗ ತಮ್ಮ ಹೆಂಡತಿಯವರಿಗೆ ಹೇಳಿದ ಮಾತಿದು: ನಮ್ಮ
ಹೊಲ, ಮನೆ ಆಸ್ತಿಗಳೆಲ್ಲವನ್ನೂ ಈ ಧರ್ಮಯುದ್ಧದಲ್ಲಿ ನಾವು ಕಳೆದುಕೊಂಡರು ಹೆದರಬೇಕಿಲ್ಲ. ಪಾದಚಾರಿಗಳಾಗಿ
ನಾವು ಊರಿಂದೂರಿಗೆ ಭಿಕ್ಷಾಟನೆ ಮಾಡುತ್ತ ಕಾಶೀಯಾತ್ರೆಗೆ ಹೋಗೋಣ. ಸರ್ಕಾರಕ್ಕೆ ಒಂದು ಕಾಸೂ ಕೊಡಬೇಡ.
ತೀರ್ವೆ ಕೊಟ್ಟು ಪಾಪ ಕಟ್ಟಿಕೊಳ್ಳಬೇಡ. ಒಂದು ವೇಳೆ ಸರ್ಕಾರದವರು ಒತ್ತಾಯಮಾಡಿ ವಸೂಲುಮಾಡಲು ಪ್ರಯತ್ನಿಸಿದ್ದಾದರೆ
ನಮ್ಮ ಕಾಳು ಕಡ್ಡಿ, ಮನೆ ಮಾರು, ಅವರ ಕೈಗೆ ಸಿಗದಂತೆ ಅವುಗಳನ್ನು ಅಗ್ನಿನಾರಾಯಣನಿಗೆ ಆಹುತಿ ಮಾಡಿಬಿಡು.
ಇದಕ್ಕೆ ವ್ಯಾಖ್ಯಾನ ಬೇಕಿಲ್ಲ. ಕರನಿರಾಕರಣ ಸತ್ಯಾಗ್ರಹಿಗಳ
ಸ್ವರೂಪ ನಿದರ್ಶನಕ್ಕೆ ಇದೊಂದು ಉದಾಹರಣೆ. ಊರು ಬಿಟ್ಟು ಶಿಬಿರ ಸೇರಿದ್ದ ಗಂಡಸರ ಸುಳಿವನ್ನು ಪತ್ತೆ
ಹಚ್ಚಲು ಪೊಲೀಸರು ಕೈಕೊಂಡ ನಾನಾ ಬೆದರಿಕೆಯ ಕ್ರಮಗಳಿಗೆ ಸ್ತ್ರೀಯರು ಜಗ್ಗದೆ ಸ್ಥೈರ್ಯದಿಂದ ನಿಂತು
ಎದುರಿಸಿದ್ದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.
ತಮಗಾಗಲೀ ತಮ್ಮ ಹೆಂಡಿರುಮಕ್ಕಳಿಗಾಗಲೀ ಸ್ವಲ್ಪ ಮಾತ್ರ
ಅಪಮಾನವಾದರೆ ಸಹಿಸಲಾರದ ನಾಡಜನರು ಈ ಎಲ್ಲ ಕ್ರಮಗಳ ಎದುರಿನಲ್ಲೂ ತಾಳ್ಮೆ ವಹಿಸಿ ಅಹಿಂಸಾವ್ರತವನ್ನು
ಪಾಲಿಸಿದರು. ಇದು ಅವರ ಸತ್ತ್ವಪರೀಕ್ಷೆಯ ಪ್ರಸಂಗವಾಗಿ ಪರಿಣಮಿಸಿತು. ಗಾಂಧೀಜಿಯವರಲ್ಲಿ ಅವರ ಅಹಿಂಸಾತತ್ತ್ವದಲ್ಲಿ
ಆಗ ನಾಡವರಿಗಿದ್ದ ನಿಷ್ಠೆಯ ಪರಾಕಾಷ್ಠತೆಯಿಂದಾಗಿಯೇ ಅವರು ಇಂಥ ಉದ್ವೇಗ ಜನಕ ಸನ್ನಿವೇಶದಲ್ಲಿ ತಾಳ್ಮೆ
ವಹಿಸುವುದು ಸಾಧ್ಯವಾಯಿತೆನ್ನಬಹುದು. (ಟಿ.ಟಿ.ಎಸ್.)
ಘೋಷಣೆ: ಮೇಲಿನ ವಿವರಗಳನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ.
Comments
Post a Comment