ಕೆಂಪೆಗೌಡರ ಜನಪ್ರಿಯತೆ, ಪ್ರಜೆಗಳ ಪ್ರಭು ಪ್ರೇಮ!

   ಹಿರಿಯ ಕೆಂಪೇಗೌಡರನ್ನು ಬಂಧಿಸಿ ತಾವು ಮಾಡಿದ ತಪ್ಪಿನ ಅರಿವಾಗಲು ವಿಜಯನಗರದ ಅರಸರಿಗೆ ಬರೋಬ್ಬರಿ ಐದು ವರ್ಷಗಳೇ ಹಿಡಿಯುತ್ತದೆ. ಬಿಡುಗಡೆಯಾದ ಕೆಂಪೇಗೌಡರು ಬೆಂಗಳೂರಿಗೆ ಮರಳುತ್ತಾರೆ. ಇನ್ನು ಮಕ್ಕಳದೇ, ಮೊಮ್ಮಕ್ಕಳದೇ ರಾಜ್ಯಭಾರ. ಅವರದ್ದೇನಿದ್ದರು ದೇವಸ್ಥಾನಗಳನ್ನು ಕಟ್ಟಿಸುವುದರಲ್ಲೇ ವಿಷೇಶ ಗಮನ.

ಆನೆಗುಂದಿ ಕಾರಾಗೃಹದಿಂದ ಸಮ್ಮಾನಪೂರ್ವಕ ಬಿಡುಗಡೆ ಆದ ನಂತರ ಕೆಂಪೇಗೌಡರು ಯಲಹಂಕ ತಲುಪಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದರು. ಕಾರಾವಾಸದಲ್ಲಿ ಇದ್ದಾಗ ಹಲವು ದೇವರುಗಳಿಗೆ ಹರಕೆ ಹೊತ್ತಿದ್ದ ದೈವಭಕ್ತ ಗೌಡರಿಗೆ ಮರುದಿನ ಕಾಡುಮಲ್ಲೇಶ್ವರ (ಬೆಂಗಳೂರಿನ ಇಂದಿನ ಮಲ್ಲೇಶ್ವರ ಬಡಾವಣೆ) ದೇವಾಲಯವನ್ನು ಸಂದರ್ಶಿಸುವ ಮನಸ್ಸಾಯಿತು. ಅದು ಯಲಹಂಕದಿಂದ ಪೇಟೆಗೆ ಹೋಗುವ ಬಳಸು ದಾರಿ. ಕೂಡಲೇ ಒಬ್ಬ ದೂತ ಕಾಡುಮಲ್ಲೇಶ್ವರ ದೇವಾಲಯದ ಅರ್ಚಕರಿಗೆ ವಿಷಯ ತಲುಪಿಸಲು ರಾತ್ರಿಯೇ ಪ್ರಯಾಣ ಬೆಳೆಸಿದ. ಮುಂಜಾನೆಯ ವೇಳೆಗೆ ಆಸುಪಾಸಿನ ಗ್ರಾಮದ ಜನರಿಗೆ ಸುದ್ದಿ ತಲುಪಿತು. ಮುಂಜಾನೆ ಬೇಗನೆ ಪ್ರಯಾಣ ಆರಂಭಿಸಿದ ಕೆಂಪೇಗೌಡರು ಮಧ್ಯಾಹ್ನದ ಸುಮಾರಿಗೆ ಕಾಡುಮಲ್ಲೇಶ್ವರ ದೇವಾಲಯದ ಬಳಸು ಹಾದಿಗೆ ಬಂದರು (ಇಂದಿನ ಕಾವೇರಿ ಚಿತ್ರಮಂದಿರ). ಅಲ್ಲಿಂದ ಬಲಕ್ಕೆ ಒಂದು ಮೈಲಿ ಪ್ರಯಾಣ ಮಾಡುವಷ್ಟರಲ್ಲಿ ಅಲ್ಲಿ ಜನಸಾಗರವೇ ನೆರೆದಿತ್ತು! ಕೆಂಪೇಗೌಡರಿಗೆ ಜೈಕಾರ ಹಾಕುತ್ತಾ ಅವರನ್ನು ಸಮಸ್ತ ಮರ್ಯಾದೆಗಳಿಂದ ಕರೆದೊಯ್ದು ಒಂದು ಬೆಳ್ಳಿ ಫಲಕದ ಉಯ್ಯಾಲೆಯ ಮೇಲೆ ಕೂರಿಸಿ ಜೀಕಿ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ಆನಂತರ ಇಡೀ ಜನಸ್ತೋಮದ ಜೊತೆಗೆ ಹೊರಟು ಕೆಂಪೇಗೌಡರು ಕಾಡುಮಲ್ಲೇಶ್ವರನ ದರ್ಶನ ಪಡೆದರು. ಕೆಂಪೇಗೌಡರನ್ನು ಉಯ್ಯಾಲೆ ಮೇಲೆ ಸಮ್ಮಾನಿಸಿದ ಸ್ಥಳ ನಂತರಉಯ್ಯಾಲೆ ಕಾವಲುಎಂದು ಹೆಸರಾಗಿ, ನಂತರ ತಮಿಳರ ಬಾಯಲ್ಲಿ ವೈಯಾಲಿಕಾವಲ್ ಎಂದು ಅಪಭ್ರಂಶಗೊಂಡಿತು.


   ಈ ಘಟನೆ ಇಂದಿಗೂ ರೋಮಾಂಚನ ಹುಟ್ಟಿಸುತ್ತದೆ. ಐದು ವರ್ಷ ಅಭೇದ್ಯ ಆನೆಗುಂದಿ ಜೈಲಿನಲ್ಲಿ ಕಳೆದು, ಜೀವಂತವಾಗಿ ಹೊರಬರುವ ಸಾಧ್ಯತೆಯನ್ನೂ ಕಾಣದಿದ್ದ ಕೆಂಪೇಗೌಡರನ್ನು ಅವರ ಪ್ರಜೆಗಳು ತಮಗೆ ದೊರೆತ ಕೆಲವೇ ಗಂಟೆಗಳ ಕಾಲಾವಧಿಯಲ್ಲಿ ಅಷ್ಟೊಂದು ತಯಾರಿ ನಡೆಸಿ ಸಮ್ಮಾನ ಮಾಡಿದರು ಎಂದರೆ ಕೆಂಪೇಗೌಡರು ಎಷ್ಟೊಂದು ಜನಾನುರಾಗಿ ಆಗಿರಬೇಕು? ಐದು ವರ್ಷಗಳಲ್ಲಿ ಅವರ ಬಿಡುಗಡೆಗೆ ಅದೆಷ್ಟು ಜನ ಹರಕೆ ಹೊತ್ತರೋ ತಿಳಿಯದು. ಅಷ್ಟು ದೀರ್ಘಕಾಲ ಜನರಿಂದ ದೂರ ಇದ್ದರೂ, ಹಿಂದಿರುಗುವ ಸಾಧ್ಯತೆ ಕೂಡ ಮಸುಕಾಗಿ ಇದ್ದರೂ ಜನರಿಗೆ ಕೆಂಪೇಗೌಡರ ಮೇಲಿನ ವಿಶ್ವಾಸ, ಪ್ರೀತಿ ಚಿಕ್ಕಾಸು ಕೂಡ ಕಡಿಮೆ ಆಗಿರಲಿಲ್ಲ. ಪ್ರಜೆಗಳ ಶ್ರೇಯಸ್ಸಿಗೆ ಶ್ರಮಿಸುವ ನಾಯಕ ಹೇಗಿರಬೇಕು ಎಂಬುದಕ್ಕೆ ಕೆಂಪೇಗೌಡರು ಸಾಕ್ಷಿಯಾದರೆ, ಅಂತಹ ನಾಯಕರನ್ನು ಹೇಗೆ ಜನ ನಡೆಸಿಕೊಳ್ಳುತ್ತಾರೆ ಎಂಬುದನ್ನು ಪ್ರಜೆಗಳು ತೋರಿದರು

 

ಅನಾಥವಾಯಿತೇ ಬೆಂಗಳೂರು

ಕೆಂಪೇಗೌಡರ ಮೂರು ತಲೆಮಾರುಗಳು ಒಂದು ನೂರು ಒಂದು ವರ್ಷಗಳ ಸುದೀರ್ಘ ಅವಧಿಯಲ್ಲಿ ಕಟ್ಟಿ ಬೆಳಸಿದ ನಗರಕ್ಕೆ ವಂಶದ ಋಣ ತೀರಿತ್ತು ಎಂದೆನಿಸುತ್ತದೆ.

ನಗರದ ಸಿರಿ ಸಂಪತ್ತು, ತುಂಬಿ ಬೀಗುತ್ತಿದ್ದ ಜಲನೆಲೆಗಳು, ಧಾರ್ಮಿಕ ಉತ್ಸವಗಳು, ತಂಪಾದ ಹವಾಮಾನ, ಸುಭೀಕ್ಷ ವಾತಾವರಣದ ಸುದ್ದಿಗಳು ವಿಜಯನಗರ ಸಾಮ್ರಾಜ್ಯದೆಲ್ಲೆಡೆ ಹರಡತೊಡಗಿದವು. ವ್ಯಾಪಾರವನ್ನು, ಉದ್ಯೋಗವನ್ನು, ನೆಲೆಯನ್ನು ಮತ್ತು ನೆಲವನ್ನು ಹುಡುಕಿಕೊಂಡು ಬಂದವರಿಗೆಲ್ಲಾ ಆಸರೆ ನೀಡಿತು ಬೆಂಗಳೂರು. ಹಿರಿಯ ಕೆಂಪೇಗೌಡರಿಂದ ಹಿಡಿದು ಮುಮ್ಮಡಿ ಕೆಂಪೇಗೌಡರವರೆಗೂ ನಾಡಪ್ರಭುಗಳಾಗಿ ಯಾವ ವೈಷಮ್ಯಗಳಿಲ್ಲದೆ, ರಕ್ತಪಾತವಿಲ್ಲದೆ ಬರೋಬ್ಬರಿ ಒಂದು ಶತಮಾನಗಳ ಕಾಲ (೧೫೩೭ -೧೬೩೮ ) ನಗರವನ್ನು ಅಭಿವೃದ್ಧಿಯ ರೂವಾರಿಗಳಾಗಿ ಆಳಿ ಬಾಳಿದರು. ಹದಿನಾರನೇ ಮತ್ತು ಹದಿನೇಳನೇ ಶತಮಾನದ ಸಮಯದಲ್ಲಿ ಇಂತಹ ಒಂದು ಶಾಂತಿಯುತ ನಾಡಾಗಿ ಮೆರೆಯುತ್ತಿದ್ದ ಏಕೈಕ ನಾಡಾಗಿರ ಬಹುದು. ಯಶೋಗಾಥೆಯ ಹಿನ್ನೆಲೆಯಲ್ಲಿ ವಿಜಯನಗರ ಸಾಮ್ರಾಜ್ಯದ ಅಚಲ ವಿಶ್ವಾಸ ಮತ್ತು ಸುರಕ್ಷಾಕವಚದ ಪ್ರಮುಖ ಪಾತ್ರವನ್ನು ಮರೆಯಲಾಗದು.

ಒಂದು ಕಡೆ ಬೆಂಗಳೂರಿನ ಅಭಿವೃದ್ಧಿ ಉತ್ತುಂಗಕ್ಕೇರುತ್ತಿದ್ದರೆ, ವಿಜಯನಗರ ಸಾಮ್ರಾಜ್ಯ ಅಭದ್ರತೆಯ ಗೂಡಾಯಿತು. ಒಂದು ಮಹಾ ಹಿಂದೂ ಸಾಮ್ರಾಜ್ಯವನ್ನು ಸರ್ವನಾಶ ಮಾಡುವ ಏಕಮೇವ ಉದ್ದೇಶದಿಂದ ಒಂದುಗೂಡಿ ಯುಧ್ಧಮಾಡಿದ ಮುಸ್ಲಿಮ ಸುಲ್ತಾನರು ವಿಜಯನಗರವನ್ನು ಧ್ವಂಸ ಮಾಡಿದ ಮೇಲೆ ತಮ್ಮ ತಮ್ಮ ಹಳೇ ಚಾಳಿಗಳಿಗೆ ಮರಳಿದರು.

ಹಿನ್ನಲೆಯಲ್ಲಿ , ೧೬೩೮ ಬಿಜಾಪುರದ ಸುಲ್ತಾನನ ವಕ್ರದೃಷ್ಟಿ ಬೆಂಗಳೂರಿನ ಕಡೆ ಹರಿಯಿತು. ಅಲ್ಲಿಂದ ಶುರುವಾಯಿತು, ರಕ್ತಪಾತದ ಅಧ್ಯಾಯ. ಬಿಜಾಪುರದ ಸುಲ್ತಾನನ ಪರವಾಗಿ ಮುಮ್ಮಡಿ ಕೆಂಪೇಗೌಡರಿಂದ ಬೆಂಗಳೂರನ್ನು ವಶಪಡಿಸಿಕೊಂಡು ಅದನ್ನು ಜಹಗೀರಾಗಿ ಪಡೆದ ಮರಾಠಾ ಯೋಧ ಶಹಾಜಿ ಭೋನ್ಸ್ಲೆಯ ಅಧ್ಯಾಯ ಶುರುವಾಗುತ್ತದೆ. ಇದರ ಜೊತೆಗೇ ಪ್ರಾರಂಭವಾಗುತ್ತದೆ ಹೊರಗಿನವರ ಪ್ರವೇಶ, ಬೆಂಗಳೂರನ್ನು ಒಂದು ವ್ಯಾಪಾರದ ವಸ್ತುವಿನಂತೆ ಮಾರುವುದು, ಉಡುಗೊರೆಯಾಗಿ ಕೊಡುವುದು, ಸಂಧಾನದ ಸೂತ್ರದಂತೆ ಬಳಸಿಕೊಳ್ಳುವುದು

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ