ಹೈದರನ ಕಾಲದ ನಾಣ್ಯಗಳು

  ಹೈದರ್ ಅಲಿ 1761ರಲ್ಲಿ ಅಧಿಕಾರವನ್ನು ವಹಿಸಿ ಕೊಂಡಾಗ ಮೈಸೂರಿನಲ್ಲಿ ಮೊಗಲ್ ಮತ್ತು ವಿಜಯನಗರದ ನಾಣ್ಯಗಳು ಹೆಚ್ಚು ಪ್ರಸಿದ್ಧಿ ಹೊಂದಿದ್ದು ಜನಾನುರಾಗಿಯಾಗಿದ್ದವು. ಅದರಲ್ಲಿಯೂ ವಿಜಯನಗರದ ನಾಣ್ಯಗಳು ಹೆಚ್ಚು ಬಳಕೆಯಲ್ಲಿದ್ದವು. ಇದನ್ನು ಗಮನಿಸಿದ ಹೈದರ್ ತನ್ನ ನಾಣ್ಯಗಳಲ್ಲಿ ಹೊಸ ಬದಲಾವಣೆಗಳನ್ನು ವಿಶೇಷವಾಗಿ ಮಾಡದೆ ವಿಜಯನಗರದ ಮತ್ತು ಮೊಗಲ್ ರೀತಿಯ ನಾಣ್ಯಗಳ ಪರಂಪರೆಯನ್ನೇ ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಮುಂದುವರಿಸಿದ. ಈತ ನಾಣ್ಯಗಳ ವಿಷಯದಲ್ಲಿ ಅಷ್ಟೊಂದು ಆಸಕ್ತಿಯನ್ನು ತೋರಿಸಿದನೆಂದು ಹೇಳಲೂ ಆಗುವುದಿಲ್ಲ. ಇವನ ಮಗ ಟಿಪ್ಪು ಸುಲ್ತಾನನ ನಾಣ್ಯಗಳು ನಾಣ್ಯಶಾಸ್ತ್ರಜ್ಞರನ್ನು ಅಚ್ಚರಿಗೊಳಿಸುವಷ್ಟು ಸುಂದರವೂ ವೈವಿಧ್ಯಪೂರ್ಣವೂ ಆಗಿವೆ. ಆದರೆ ಹೈದರನ ನಾಣ್ಯಗಳಲ್ಲಿ ಕಲಾವಂತಿಕೆಯಾಗಲೀ ವೈವಿಧ್ಯವಾಗಲೀ ಕಾಣಬರುವುದಿಲ್ಲ.

1763ರಲ್ಲಿ ಹೈದರ್ ಅಲಿ ಬಿದನೂರನ್ನು ತನ್ನ ವಶಮಾಡಿಕೊಂಡ ಮೇಲೆ, ಅಲ್ಲಿ ಒಂದು ಟಂಕಸಾಲೆಯನ್ನು ಸ್ಥಾಪಿಸಿದ. ಟಂಕಸಾಲೆ ಯಿಂದ ಬಹಾದುರಿ ಹಣ ಎಂಬ ಚಿನ್ನದ ನಾಣ್ಯಗಳನ್ನು ಮುದ್ರಿಸಿದ. ಇವು ವಿಜಯನಗರದ ಸದಾಶಿವರಾಯನ ನಾಣ್ಯಗಳಂತೆಯೇ ಇವೆ. ಇವುಗಳ ಮುಮ್ಮುಖದಲ್ಲಿ ಶಿವ-ಪಾರ್ವತಿಯರ ಚಿತ್ರವೂ ಹಿಮ್ಮುಖದಲ್ಲಿ ಬಿಂದುಗಳ ವೃತ್ತದಲ್ಲಿ ಪರ್ಷಿಯನ್ ಲಿಪಿಯಲ್ಲಿ ಹೆ ಎಂಬ ಅಕ್ಷರವೂ ಇದೆ. ರೀತಿಯ ನಾಣ್ಯಗಳನ್ನು ಬೆಂಗಳೂರು ಟಂಕಸಾಲೆಯಿಂದಲೂ ಮುದ್ರಿಸಿದ. ಇವು ದೊಡ್ಡ ತಲೆ ಬೆಂಗಳೂರಿ ಎಂದೂ ಪ್ರಸಿದ್ಧವಾಗಿವೆ. ಇವು ಪಗೋಡ ನಾಣ್ಯಗಳ ನಮೂನೆಗೆ ಸೇರಿದವು.

ಇವನ ಅರ್ಧವರಹ ಚಿನ್ನದ ನಾಣ್ಯಗಳು ಕೃಷ್ಣದೇವರಾಯನ ದುರ್ಗೀ ಪಗೋಡದಂತೆ ಇವೆ. ಇವು ಅಷ್ಟಾಗಿ ದೊರಕಿಲ್ಲ. ಹೈದರ್ ಅಲಿ ಗುತ್ತಿಯ ಟಂಕಸಾಲೆಯಲ್ಲಿ ಮುದ್ರಿಸಿದ ಪಗೋಡಗಳು ವಿಶೇಷವಾಗಿ ಮೊಗಲ್ ಪಗೋಡಗಳನ್ನೇ ಹೋಲುತ್ತವೆ. ಇವುಗಳ ಜೊತೆಗೆ ಈತ ಫಣಂ ಎಂಬ ನಮೂನೆಯ ಚಿನ್ನದ ನಾಣ್ಯಗಳನ್ನೂ ಮುದ್ರಿಸಿದ. ಇವೂ ಪಗೋಡ ನಾಣ್ಯಗಳಂತೆಯೇ ಇವೆ. ಆದರೆ ಕೆಲವು ಫಣಂ ಮತ್ತು ಅರ್ಧಫಣಂ ನಾಣ್ಯಗಳಲ್ಲಿ ಒಂದು ಮುಖದಲ್ಲಿ ಹೆ ಎಂಬ ಅಕ್ಷರವೂ ಮತ್ತೊಂದು ಮುಖದಲ್ಲಿ ಹಿಜಿರ ಕಾಲವೂ ನಮೂದಿತವಾಗಿವೆ. ಅರ್ಧಪಗೋಡ ನಮೂನೆಯ ನಾಣ್ಯಗಳಲ್ಲಿ ಕುಳಿತಿರುವ ವಿಷ್ಣುವಿನ ಚಿತ್ರವಿದೆ. ನಮೂನೆಯ ನಾಣ್ಯಗಳು ವಿಶೇಷವಾಗಿ ದೊರಕಿಲ್ಲ. ಇದೇ ನಮೂನೆಯ ಪಗೋಡಗಳನ್ನೂ ಹೈದರ್ ಅಚ್ಚುಹಾಕಿಸಿರಬೇಕೆಂದು ಖ್ಯಾತ ನಾಣ್ಯಶಾಸ್ತ್ರಜ್ಞ ಹೆಂಡರ್ಸನ್ ಊಹಿಸಿದ್ದರೂ ಅಂಥವು ಇದುವರೆಗೂ ದೊರಕಿಲ್ಲ.

ಹೈದರ್ ಬೆಳ್ಳಿಯ ನಾಣ್ಯಗಳನ್ನು ಅಚ್ಚುಹಾಕಿಸಿದನೇ ಇಲ್ಲವೇ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಇವನ ತಾಮ್ರದ ನಾಣ್ಯಗಳು ವಿಶೇಷವಾಗಿ ದೊರಕಿವೆ. ಇವನ ತಾಮ್ರದ

ನಾಣ್ಯ ಪೈಸಾದಲ್ಲಿ ಮುಮ್ಮುಖದಲ್ಲಿ ಆನೆಯ ಚಿತ್ರವೂ ಹಿಮ್ಮುಖದಲ್ಲಿ ಕಾಲ ಮತ್ತು ಟಂಕಸಾಲೆಯ ಹೆಸರೂ ಬರೆಯಲ್ಪಟ್ಟಿವೆ. ಇವು ವಿಶೇಷವಾಗಿ ಶ್ರೀರಂಗಪಟ್ಟಣ ಮತ್ತು ಬಳ್ಳಾರಿಗಳಲ್ಲಿ ಅಚ್ಚಾದವು. ಇನ್ನು ಕೆಲವು ಪೈಸಾಗಳಲ್ಲಿ ಕನ್ನಡ ಮತ್ತು ಅರಾಬಿಕ್ ಸಂಖ್ಯೆಗಳೂ ಹಿಂಭಾಗದಲ್ಲಿ ಹೆ ಎಂಬ ಅಕ್ಷರವೂ ಇವೆ. ಇವೂ ಬಳ್ಳಾರಿ ಮತ್ತು ಶ್ರೀರಂಗಪಟ್ಟಣ ಗಳಲ್ಲಿ ಮುದ್ರಿತವಾದವು. ಇವುಗಳಲ್ಲಿರುವ ಸಂಖ್ಯೆಗಳು ಏನನ್ನು ಸೂಚಿಸುತ್ತವೆ ಎಂಬುದು ಇನ್ನೂ ವಿವಾದಾಸ್ಪದವಾಗಿಯೇ ಉಳಿದಿದೆ. ಹುಲಿ ಮತ್ತು ಕೊಡಲಿಯ ಚಿತ್ರವಿರುವ ತಾಮ್ರದ ಪೈಸಾಗಳನ್ನು ಹೈದರನ ನಾಣ್ಯಗಳೆಂದು ಕೆಲವರು ಭಾವಿಸಿದ್ದರು. ಅದನ್ನು ಖಚಿತವಾಗಿ ಹೇಳುವಂತಿಲ್ಲವೆಂದು ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರ ನಾಣ್ಯಗಳನ್ನು ವಿಶೇಷವಾಗಿ ಅಭ್ಯಾಸಮಾಡಿರುವ ಹೆಂಡರ್ಸನ್ ಅಭಿಪ್ರಾಯಪಡುತ್ತಾನೆ. (ಬಿ.ಎಸ್..; .ವಿ.ಎನ್.) 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources