ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ
ಪಲ್ಲವ ಅರಸರು (ಸಾ.ಶ.ವ. 200-800)
ಆರಂಭಿಕ ಪಲ್ಲವ ಅರಸರ ವಂಶಾವಳಿಯನ್ನು ರಚಿಸುವಲ್ಲಿ, ಆಧಾರಗಳ
ಕೊರತೆ ಇರುವ ಕಾರಣ, ಅನೇಕ ತೊಡಕುಗಳಿವೆ. ಆದರೂ ಅವರ ಕಾಲವನ್ನು ಪ್ರಾಕೃತ ಶಾಸನಗಳ ಕಾಲದ ಅರಸರು, ಸಂಸ್ಕೃತ
ಶಾಸನಗಳ ಕಾಲದ ಅರಸರು ಮತ್ತು ಶಿಲಾಶಾಸನಗಳ ಕಾಲದ ಅರಸರು ಎಂದು ಮೂರು ವಿಭಾಗಗಳಾಗಿ ಅಧ್ಯಯನ ಮಾಡಲಾಗುತ್ತದೆ.
I.
ಪ್ರಾಕೃತ ಶಾಸನಗಳ ಕಾಲ:-
ಶಿವಸ್ಕಂಧವರ್ಮ - 4ನೆಯ ಶತಮಾನದ ಆದಿಭಾಗ
II. ಸಂಸ್ಕೃತ ಶಾಸನಗಳ ಕಾಲ:-
ಹದಿನಾರಕ್ಕೂ ಹೆಚ್ಚು ರಾಜರು ಸಾ.ಶ.ವ.
350 ರಿಂದ 575ರ ವರೆಗೆ ಆಳಿದರು.
ಅವರಲ್ಲಿ
ಒಂದನೆಯ ಸಿಂಹವರ್ಮ, 1ನೆಯ ಸ್ಕಂಧವರ್ಮ, ವೀರಕುರ್ಚ, 2ನೆಯ ಸ್ಕಂಧವರ್ಮ, ವಿಷ್ಣುಗೋಪ ಮುಂತಾದವರು ಪ್ರಮುಖರು.
III.
ಶಿಲಾ ಶಾಸನಗಳ ಕಾಲದ ಅರಸರು
ಒಂದನೆ
ಮಹೇಂದ್ರವರ್ಮ – (600-630)
ಒಂದನೆ
ನರಸಿಂಹವರ್ಮ – (630-668)
ಎರಡನೆ
ಮಹೇಂದ್ರವರ್ಮ – (668-670)
ಒಂದನೆ
ಪರಮೇಶ್ವರವರ್ಮ – (670-695)
ಇಮ್ಮಡಿ
ನರಸಿಂಹವರ್ಮ – (700-728)
ಇಮ್ಮಡಿ
ಪರಮೇಶ್ವರವರ್ಮ – (728-731)
ಎರಡನೆ
ನಂದಿವರ್ಮ :- (731-795)
ದಂತಿವರ್ಮ
– (795-846)
ಮುಮ್ಮಡಿ
ನಂದಿವರ್ಮ – (846-869)
ನೃಪತುಂಗ
ವರ್ಮ – (869-880)
ಅಪರಾಜಿತವರ್ಮ
– (880-897)
*****
ಸೂಚನೆ:- ವಾಸ್ತುಶಿಲ್ಪದ ಬಗೆಗಿನ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ,
ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
ಪೀಠಿಕೆ:
ಪಲ್ಲವರು ಸು. 600 ವರ್ಷಗಳ ಕಾಲ ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು
ಆಳಿದರು. ಅವರು ರಾಜಕೀಯ ಸಾಧನೆ ಮಾಡಿದ್ದಷ್ಟೇ ಅಲ್ಲದೇ ಕಲೆ ಮತ್ತು ವಾಸ್ತು-ಶಿಲ್ಪಗಳಿಗೂ ಅಪಾರ ಪ್ರೋತ್ಸಾಹ
ನೀಡಿ ತಮ್ಮದೇ ಆದ ವಾಸ್ತು ಶೈಲಿಗಳ ಬೆಳವಣಿಗೆಗೆ ಕಾರಣರಾದರು. ಪಲ್ಲವರ ದೇವಾಲಯಗಳು ತಮಿಳು ನಾಡಿನ ವಾಸ್ತು ಶಿಲ್ಪ ಇತಿಹಾಸದ ಮೊದಲ ಕಾಲಕ್ಕೆ ಸೇರುತ್ತವೆ. ಅವರ
ಕಾಲದ ಕಲೆ ಮತ್ತು ವಾಸ್ತು-ಶಿಲ್ಪದ ಕೊಡುಗೆಗಳನ್ನು ಕೆಳಕಂಡಂತೆ ಕಾಣಬಹುದು.
ಗುಹಾದೇವಾಲಯಗಳು: ಪಲ್ಲವ ದೊರೆಗಳಲ್ಲಿ ಒಬ್ಬನಾದ 1ನೆಯ ಮಹೇಂದ್ರವರ್ಮ ತನ್ನ ಮಂಡಗಪಟ್ಟು ಶಾಸನದಲ್ಲಿ ತಿಳಿಸಿರುವಂತೆ ಆವರೆಗೆ ಇಟ್ಟಿಗೆ, ಮರ, ಗಾರೆಗಳಿಂದ ದೇವಾಲಯಗಳನ್ನು ನಿರ್ಮಿಸುತ್ತಿದ್ದುದರಿಂದ ಅವು ಹೆಚ್ಚು ಕಾಲ ಉಳಿದು ಬರುವುದು ಸಾಧ್ಯವಿರಲಿಲ್ಲ. ಕಾರಣ
ಇವನ ಕಾಲದಲ್ಲಿ ಕಲ್ಲುಗಳಿಂದ ದೇವಾಲಯಗಳ ನಿರ್ಮಾಣ ಕಾರ್ಯ ಆರಂಭವಾಯಿತು. ಅಲ್ಲದೇ ಇವನು ತನ್ನ ರಾಜ್ಯದಲ್ಲಿ
ಚಾಲುಕ್ಯರಂತೆ ಗುಹಾಲಯಗಳ ನಿರ್ಮಾಣ ಆರಂಭಿಸಿದನು.
ಮಹೇಂದ್ರ ಶೈಲಿ: 1ನೆಯ ಮಹೇಂದ್ರವರ್ಮ (ಸಾ.ಶ.ವ.
610-630) ದಕ್ಷಿಣ ಆರ್ಕಾಟ್ ಜಿಲ್ಲೆಯ ಮಂಡಗಪಟ್ಟು ಎಂಬಲ್ಲಿ ತಮಿಳುನಾಡಿನಲ್ಲಿ ಮೊಟ್ಟಮೊದಲಿಗೆ ಕಲ್ಲುಬಂಡೆಯನ್ನು ಕೊರೆಯಿಸಿ ಬ್ರಹ್ಮ ವಿಷ್ಣು ಶಿವರಿಗೆ ಒಂದು ಆಲಯವನ್ನು ನಿರ್ಮಿಸಿದ. ಅನಂತರ ಪಲ್ಲಾವರಮ್ ಮತ್ತು ವಲ್ಲಮ್ (ಚೆಂಗಲ್ಪಟ್ಟು ಜಿಲ್ಲೆ), ಮಾಮಂಡೂರು, ಮಹೇಂದ್ರವಾಡಿ ಮತ್ತು ಸೀಯಮಂಗಲಮ್ (ಉತ್ತರ ಆರ್ಕಾಟ್
ಜಿಲ್ಲೆ), ದಳವಾ ನೂರು (ದಕ್ಷಿಣ ಆರ್ಕಾಟ್
ಜಿಲ್ಲೆ) ಮತ್ತು ತಿರುಚ್ಚಿರಾಪಳ್ಳಿಯಲ್ಲಿ ಗುಹಾದೇವಾಲಯಗಳನು ಕೊರೆಯಿಸಿದ. ಅವುಗಳಲ್ಲಿ ಕೆಲವು ಶಿವನಿಗೂ ಮತ್ತೆ ಕೆಲವು ವಿಷ್ಣುವಿಗೂ ಅರ್ಪಿತವಾಗಿವೆ. ಈ ಮೊದಲ ಗುಹಾ ದೇವಾಲಯಗಳಲ್ಲಿ ಸಾಮಾನ್ಯವಾಗಿ ಆಯತಾಕಾರದ ಮಂಟಪ, ಅದರ ಮುಂಭಾಗದಲ್ಲಿ ಸ್ಥೂಲವಾಗಿದ್ದ ಗಿಡ್ಡನೆಯ ಕಂಬಗಳು ಮತ್ತು ಅರಗಂಬಗಳು ಇರುತ್ತಿದ್ದವು. ಕಂಬಗಳು ಚೌಕವಾಗಿದ್ದರೂ ಕೆಲವು ಬಾರಿ ಅವುಗಳ ಮಧ್ಯಭಾಗದಲ್ಲಿ ಅಷ್ಟಮುಖಗಳಿದ್ದುವು. ಕಂಬಗಳ
ಮೇಲಿನ ಅಡ್ಡದಿಮ್ಮಿಗಳ ಮೇಲೆ ತರಂಗಪಟ್ಟಿಕೆಗಳ ಅಲಂಕರಣವಿರುತ್ತಿತ್ತು. ಹಿಂಭಾಗದ ಇಲ್ಲವೇ
ಕೆಲವು ಬಾರಿ ಪಕ್ಕದ ಗೋಡೆಯಲ್ಲಿ ಕೆತ್ತಿದ ಗೂಡನ್ನು ಗರ್ಭಗುಡಿಯಂತೆ ಬಳಸಲಾಗುತ್ತಿತ್ತು. ಗರ್ಭಗುಡಿಯ ಮುಂದೆ ಕಲ್ಲಿನಲ್ಲಿ ಕೆತ್ತಿದ 2-3 ಮೆಟ್ಟಿಲುಗಳಿರುತ್ತಿದ್ದವು. ಗರ್ಭಗುಡಿಯ ಇಕ್ಕೆಲಗಳಲ್ಲಿ ದ್ವಾರಪಾಲಕ ಶಿಲ್ಪಗಳಿರುತ್ತಿದ್ದವು. ಈ ಶೈಲಿಯ ಗುಹಾದೇವಾಲಯಗಳನ್ನು ಸಾ.ಶ.ವ.
610-700ರ ನಡುವೆ ನಿರ್ಮಿಸಲಾಗಿದೆ. ಮಹೇಂದ್ರವರ್ಮನ ಉತ್ತರಾಧಿಕಾರಿಗಳ ಕಾಲದಲ್ಲಿ ಚೆಂಗಲ್ಪಟ್ಟು ಜಿಲ್ಲೆಯ ತಿರುಕ್ಕುಳಕುನ್ರಮ್, ಮಹಾಬಲಿಪುರದ ಕೋಟೆಕ್ಕಾಲ್ ಮಂಟಪಮ್, ಧರ್ಮರಾಜ ಮಂಟಪಮ್, ಸಿಂಗ ಪೆರುಮಾಳ್ ಕೋವಿಲಿನ ನರಸಿಂಹ ಗುಹೆ, ದಕ್ಷಿಣ ಆರ್ಕಾಟ್
ಜಿಲ್ಲೆಯ ಸಿಂಗವರಮ್‍ನ ರಂಗನಾಥ ಗುಹಾಲಯಗಳನ್ನು ಈ ಶೈಲಿಗೆ ಸೇರಿಸಬಹುದು. ಮಹಾಬಲಿಪುರದ ಬಳಿಯಿರುವ ಸಾಲುವನ್ ಕುಪ್ಪಮ್ನಲ್ಲಿರುವ ಅತಿರಣಚಂಡ ಈ ಶೈಲಿಯ ಕೊನೆಯ ನಿದರ್ಶನ.
ಮಾಮಲ್ಲ ಶೈಲಿ: ಮಹೇಂದ್ರವರ್ಮನ ಮಗ 1ನೆಯ ನರಸಿಂಹವರ್ಮ ಮಾಮಲ್ಲ (ಸಾ.ಶ.ವ.
630-668) ಮಹೇಂದ್ರ ಶೈಲಿಯ ಕೆಲವು
ಗುಹಾಲಯಗಳನ್ನು ಕೊರೆಸಿದರೂ ಸುಧಾರಿತ ಶೈಲಿಯ ಗುಹಾದೇವಾಲಯಗಳ ನಿರ್ಮಾಣ ಪ್ರಾರಂಭಿಸಿದ. ಈ ಶೈಲಿಯ ಗುಹಾಲಯಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿತ್ತು. ಅವನು ಪ್ರಾರಂಭಿಸಿದ ಕೆಲವು ಗುಹೆಗಳನ್ನು ಅವನ ಉತ್ತರಾಧಿಕಾರಿಗಳು ಪೂರ್ಣಗೊಳಿಸಿದರು. ಈ ಶೈಲಿಯ ನಿರ್ಮಾಣಗಳೆಲ್ಲ ಮಹಾಬಲಿಪುರದಲ್ಲಿವೆ. ಈ ಶೈಲಿಯ ಗುಹಾಲಯಗಳಲ್ಲಿ ಕಾಣುವ ಪ್ರಗತಿಪರ ಲಕ್ಷಣಗಳು ಹೀಗಿವೆ:
- ಗುಹಾಲಯಗಳ ಮುಂಭಾಗ ಹಾಗೂ ಒಳಭಾಗಗಳ ವಾಸ್ತುಲಕ್ಷಣಗಳನ್ನು ಆ ಕಾಲದ ಕಟ್ಟಡ ದೇವಾಲಯಗಳ ಮಾದರಿಯಲ್ಲಿ ವಿವರವಾಗಿ ರೂಪಿಸಲಾಗಿದೆ.
- ಮಹೇಂದ್ರ ಶೈಲಿಯ ಮಂಟಪಗಳ ಮುಂಭಾಗದ ತಲೆಕಟ್ಟಡವನ್ನು ಅಡ್ಡತೊಲೆ ಮತ್ತು ಒರಟಾದ ಸೂರುಗಳಿಂದ ರೂಪಿಸುತ್ತಿದ್ದರೆ, ಮಾಮಲ್ಲ ಶೈಲಿಯಲ್ಲಿ ಮುಂಭಾಗದ ಮೇಲೆ ಬಾಗಿದ ಕಪೋತಗಳಲ್ಲಿ ಸಾಲಾಗಿ ಸಣ್ಣ ಗುಡಿಗಳನ್ನು ಹೋಲುವ ಆಯತಾಕಾರದ ಕೂಡುಗಳ ಅಲಂಕರಣವನ್ನು ಮಾಡಲಾಗುತ್ತಿತ್ತು.
- ಮಂಟಪದ ಒಳಭಾಗವನ್ನು ಮುಖಮಂಟಪ ಮತ್ತು ಅರ್ಧಮಂಟಪಗಳಂತೆ ಕಂಬಗಳ ಸಾಲಿನಿಂದ ಇಬ್ಭಾಗಿಸಿ, ಹಿಂಬದಿಯ ಗರ್ಭಗುಡಿಯನ್ನು ಅರ್ಧ ಮಂಟಪದೊಳಕ್ಕೆ ಚಾಚಿಕೊಂಡಿರುವಂತೆ ನಿರ್ಮಿಸಲಾಗುತ್ತಿತ್ತು.
- ಗರ್ಭಗುಡಿಯ ಮುಂಭಾಗದಲ್ಲಿ ಅರಗಂಬಗಳನ್ನು ಕೊರೆದು ದ್ವಾರಪಾಲಕರಿಗೆ ಪ್ರತ್ಯೇಕ ಕೂಡಗಳನ್ನು ನಿರ್ಮಿಸಲಾಗುತ್ತಿತ್ತು.
- ಗರ್ಭಗುಡಿ ಮತ್ತು ದ್ವಾರಪಾಲಕ ಕೂಡುಗಳ ಮೇಲೂ ಬಾಗಿದ ಕೂಡುಗಳನ್ನು ಪ್ರಸ್ತಾರಗಳನ್ನು ನಿರ್ಮಿಸಲಾಗುತ್ತಿತ್ತು.
- ಮಾಮಲ್ಲ ಶೈಲಿಯ ಗುಹೆಗಳ ಗೋಡೆಗಳ ಮೇಲೆ ಎದ್ದು ಕಾಣುವ ದೇವದೇವಿಯರ ಉಬ್ಬುಶಿಲ್ಪಗಳ ಮತ್ತು ಶಿಲ್ಪಫಲಕಗಳ ಅಲಂಕರಣವಿರುತ್ತಿತ್ತು. ಪರಮೇಶ್ವರ ವರ್ಮ (670-700) ನಿರ್ಮಿಸಿದ ಗುಹಾಲಯಗಳ ಗರ್ಭಗುಡಿಯ ಹಿಂದಿನ ಗೋಡೆಯ ಮೇಲೆ ಸೋಮಸ್ಕಂಧ ಉಬ್ಬುಶಿಲ್ಪಗಳನ್ನು ಕಡೆಯಲಾಗಿದೆ.
- ಮಹಾಬಲಿಪುರದ ಕೊನೇರೆ ಮಂಟಪ, ಮಹಿಷಾಸುರಮರ್ದಿನಿ ಗುಹಾಲಯ, ವರಾಹ ಮಂಟಪ, ರಾಮಾನುಜ ಮಂಟಪ, ಮತ್ತು ಆದಿವರಾಹ ಮಂಟಪಗಳು ಅನುಕ್ರಮವಾಗಿ ಮಹೇಂದ್ರ ಶೈಲಿಯಿಂದ ಮಾಮಲ್ಲ ಶೈಲಿಗೆ ಮಾರ್ಪಾಟು ಹೊಂದುತ್ತಿರುವ ಹಂತಗಳನ್ನು ನಿರೂಪಿಸುತ್ತವೆ. ಪಂಚಪಾಂಡವ ಗುಹಾಲಯ ಈ ದಿಸೆಯಲ್ಲಿ ಅತ್ಯಂತ ಪ್ರಗತಿಪರವಾಗಿದೆ.
- ಹೆಚ್ಚು ಸುಧಾರಿತ ಮುಂಭಾಗ, ಸಿಂಹಪೀಠದ ತಳಭಾಗ ಇರುವ ಕಂಬಗಳ ಬೋದಿಗೆಯಲ್ಲಿ ನೆಗೆಯುತ್ತಿರುವ ಮತ್ತು ಕಪೋತವನ್ನು ಮುಟ್ಟುತ್ತಿರುವ ಸಿಂಹಗಳನ್ನು ರೂಪಿಸುವುದರ ಜೊತೆಗೆ, ಅದರ ಅರ್ಧಮಂಟಪದ ಒಳಭಾಗದಲ್ಲಿ ಪ್ರದಕ್ಷಿಣಮಾರ್ಗವಿರುವ ಪ್ರತ್ಯೇಕವಾದ ಗರ್ಭಗುಡಿಯನ್ನು ಕೊರೆಯುವ ಪ್ರಯತ್ನ ಮಾಡಲಾಗಿದೆ.
ಏಕಶಿಲಾ ದೇವಾಲಯಗಳು: ಇವು ಪಲ್ಲವ
ವಾಸ್ತುಶಿಲ್ಪಕ್ಕೆ ನರಸಿಂಹವರ್ಮ ಮಾಮಲ್ಲ ನೀಡಿದ ಅಮೂಲ್ಯ ಕೊಡುಗೆಗಳು. ಇವನ್ನು ಸಾಮಾನ್ಯವಾಗಿ ಪಗೋಡ ಮತ್ತು ರಥಗಳೆಂದು ಕರೆಯುವುದುಂಟು. ಇವರ ಎಲ್ಲ ಏಕಶಿಲಾ ದೇವಾಲಯಗಳು ಮಹಾಬಲಿಪುರದಲ್ಲಿವೆ. ಬಹುಶಃ ಅಂಥ ವಾಸ್ತುನಿರ್ಮಾಣಕ್ಕೆ ಪಶ್ಚಿಮ ಭಾರತದ ಗುಹಾವಿಹಾರಗಳಲ್ಲಿರುವ ಸ್ತೂಪಗಳು ಪ್ರೇರಕ. ಸ್ತೂಪಗಳ ಹೊರಭಾಗವನ್ನು ಪ್ರತ್ಯೇಕ ವಾಸ್ತುಕೃತಿಯಾಗಿ ಕೊರೆದು ಅಲಂಕರಿಸಲಾಗಿತ್ತು; ಆದರೆ ಒಳಭಾಗವನ್ನು ಕೊರೆಯದೆ ಬಿಟ್ಟಿರುತ್ತಿತ್ತು. ಉದಯಗಿರಿಯ ತಾವಾ ಗುಹೆಯಲ್ಲಿ ಪೂರ್ಣ ವಿಮಾನಾಕೃತಿಯನ್ನು ಕೊರೆಯಲಾಗಿತ್ತು. ಮಹಾಬಲಿಪುರದಲ್ಲಿ ಅಂಥ 9 ಏಕಶಿಲಾ ನಿರ್ಮಾಣಗಳಿವೆ. ಅವುಗಳಲ್ಲಿ ವಿಮಾನದ ಹೊರಗಣ ವಾಸ್ತು ಲಕ್ಷಣಗಳನ್ನು ವಿವರವಾಗಿ ರೂಪಿಸಿರುವುದರೊಂದಿಗೆ ಬಹುಮಟ್ಟಿಗೆ ಒಳಗಣ ಭಾಗಗಳನ್ನು ರೂಪಿಸಲಾಗಿದೆ. ಗುಡ್ಡಗಳ ಭಾಗವಾಗಿಯೋ ಬಿಡಿಯಾಗಿಯೋ ಇದ್ದ ಒಂದೇ ಬಂಡೆಗಳಲ್ಲಿ ಮೇಲಿನಿಂದ ಕೆಳಕ್ಕೆ ಕೊರೆದು ಬೇಕಾದ ಆಕಾರಗಳಲ್ಲಿ ಅವನ್ನು ರೂಪಿಸಲಾಗುತ್ತಿತ್ತು. ಆದರೆ ಶಾಸ್ತ್ರಾನುಸಾರವಾಗಿ ಸ್ತೂಪ ಅಥವಾ ಕಲಶವನ್ನು ವಿಮಾನ ಪೂರ್ಣರೂಪಡೆದ ಅನಂತರ ಪ್ರತಿಷ್ಠಾಪನೆಯ ಕಾಲದಲ್ಲಿ ಸ್ಥಾಪಿಸಬೇಕಾಗಿದ್ದುದರಿಂದ ಅದನ್ನು ಪೂರ್ಣ ಘಟದ ಆಕಾರದಲ್ಲಿ ಮತ್ತೊಂದು ಕಲ್ಲಿನಲ್ಲಿ ನಿರ್ಮಿಸಿ ಶಿಖರಾಗ್ರದಲ್ಲಿಡಲಾಗುತ್ತಿತ್ತು. ಇವುಗಳ ನಿರ್ಮಾಣಕಾರ್ಯ ಸಾ.ಶ.ವ.
630ರಿಂದ 700ರ ವರೆಗೆ ನಡೆದಿರಬಹುದು.
ಮಹಾಬಲಿಪುರದ ದಕ್ಷಿಣದಲ್ಲಿ ಸಮುದ್ರದಂಡೆಯಲ್ಲಿ ಉತ್ತರ-ದಕ್ಷಿಣವಾಗಿರುವ ಒಂದು ದೊಡ್ಡ ಬಂಡೆಯಲ್ಲಿ ದ್ರೌಪದಿ, ಅರ್ಜುನ, ಭೀಮ ಮತ್ತು ಧರ್ಮರಾಜ ರಥಗಳನ್ನು ಕೆತ್ತಲಾಗಿದೆ. ಅಲ್ಲಿರುವ ಮತ್ತೊಂದು ಸಣ್ಣ ಬಂಡೆಗಲ್ಲಿನಲ್ಲಿ ನಕುಲ-ಸಹದೇವ ರಥವನ್ನೂ ಒಂದು ಆನೆ ಮತ್ತು ಸಿಂಹಗಳನ್ನೂ ಕೆತ್ತಲಾಗಿದೆ. ಊರಿನ ಮಧ್ಯದ ಗುಡ್ಡದ ಮೇಲೆ ಗಣೇಶ ರಥವನ್ನೂ ಗುಡ್ಡದ ಪಶ್ಚಿಮ ಭಾಗದಲ್ಲಿ ಎರಡು ಪಿಡಾರಿ ರಥಗಳನ್ನೂ ಕಡೆಯಲಾಗಿದೆ.
ಧರ್ಮರಾಜ ರಥ ಮೂರು ಅಂತಸ್ತುಗಳ ವಿಮಾನ. ಅದರ
ಮೂಲೆಗಳಲ್ಲಿ ದೇವದೇವಿಯರ ವಿಗ್ರಹಗಳಿವೆ. ಬ್ರಹ್ಮ-ವಿಷ್ಣುಗಳನ್ನು ಇಬ್ಬದಿಗಳಲ್ಲಿ ಕೆತ್ತಲಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಹೊರಗೋಡೆಗಳ ಮೇಲೆ ಮಾಡಗಳಲ್ಲಿ ದೇವತಾಶಿಲ್ಪಗಳನ್ನು ಕೆತ್ತಲಾಗಿದೆ. ಪಲ್ಲವ ಮೊದಲ ಹಂತದ ಮೂರ್ತಿಶಿಲ್ಪ ಲಕ್ಷಣಗಳನ್ನು ಅವುಗಳಲ್ಲಿ ಕಾಣಬಹುದಾಗಿದೆ.
ಭೀಮ ಮತ್ತು ಗಣೇಶ ರಥಗಳು ಲಂಬಾಕಾರದ ವಿಮಾನ ಶೈಲಿಗೆ ಸೇರಿವೆ. ಅವಕ್ಕೆ ಅರೆಕೊಳವೆಯ ಆಕಾರದ ಚಾವಣಿಗಳಿವೆ. ಚಾವಣಿಯ ಮೇಲೆ ಮೂರು ಅಥವಾ ಐದು ಕಳಶಗಳ ಸಾಲಿದೆ. ಭೀಮರಥ ಒಂದು ಅಂತಸ್ತಿನದೂ ಗಣೇಶ ರಥ ಎರಡು ಅಂತಸ್ತುಗಳದೂ ಆಗಿವೆ. ನಕುಲ ಸಹದೇವ ರಥ ಗಜಪೃಷ್ಠಾಕೃತಿಯದು. ಇವುಗಳ
ಕಂಬಗಳಿಗೆ ಗಜಪೀಠಗಳು ಇವೆ.
ಕಟ್ಟಡ ದೇವಾಲಯಗಳು : ಪರಮೇಶ್ವರನ (669-691) ಕಾಲದಲ್ಲಿ ಪಲ್ಲವ ದೊರೆಗಳು ಕಲ್ಲಿನಲ್ಲಿ ಕೊರೆದ ದೇವಾಲಯಗಳ ಬದಲು, ಕಡೆದ ಕಲ್ಲುಗಳಿಂದ ದೇವಾಲಯ ನಿರ್ಮಾಣ ಪ್ರಾರಂಬಿಸಿದರು. ತಿರುಕ್ಕಳುಕುನ್ರಮ್ ಗುಡ್ಡದ ಮೇಲಿರುವ ವೇದಗಿರೀಶ್ವರ ದೇವಾಲಯ ಅವುಗಳಲ್ಲಿ ಮೊದಲನೆಯದಾಗಿದೆ. ಅದರ ನಾಲ್ಕು ಗೋಡೆಗಳಿಗೆ ದೊಡ್ಡ ಕಲ್ಲುಚಪ್ಪಡಿಗಳನ್ನು ನಿಲ್ಲಿಸಿ ಮೇಲೆ ಚಾವಣಿಗೆ ವಿಶಾಲವಾದ ಮತ್ತೊಂದು ಚಪ್ಪಡಿಯನ್ನು ಹೊದಿಸಲಾಗಿತ್ತು. ಅನಂತರಕಾಲದಲ್ಲಿ ಗೋಡೆಯ ಹೊರತಳಭಾಗದಲ್ಲಿ ಕಲ್ಲಿನ ಮುನ್ಚಾಚಿದ ಗೋಲುಪಟ್ಟಿಕೆಗಳನ್ನು ಸೇರಿಸಲಾಗಿತ್ತು. ಗೋಡೆಯ ಚಪ್ಪಡಿಗಳ ಒಳಮುಖದ ಮೇಲೆ ಸೋಮಸ್ಕಂಧ ಮೊದಲಾದ ಉಬ್ಬುಶಿಲ್ಪಗಳನ್ನು ಕಡೆಯಲಾಗಿತ್ತು. ಅದೇ ಜಿಲ್ಲೆಯ ಕೊರಮ್ ಗ್ರಾಮದಲ್ಲಿ ಅದೇರಾಜನ ಕಾಲದಲ್ಲಿ ಗಜಪೃಷ್ಠಾಕೃತಿಯ ಮತ್ತೊಂದು ದೇವಾಲಯ ನಿರ್ಮಿಸಲಾಯಿತು. ಅದರ ಅಧಿಷ್ಠಾನದ ಗೋಲು ಪಟ್ಟಿಕೆಗಳನ್ನು ಅಡ್ಡಲಾಗಿ ಪೇರಿಸಿದ ಚಪ್ಪಡಿಗಳಿಂದ ನಿರ್ಮಿಸಿ ಅದರ ಮೇಲೆ ಗೋಡೆಗಳ ಸಲುವಾಗಿ ಚಪ್ಪಡಿಗಳನ್ನು ನಿಲ್ಲಿಸಲಾಗಿದೆ. ಗೋಡೆಯ ಚಪ್ಪಡಿಗಳಿಗೆ ಆಧಾರವಾಗಿ ಒಳಭಾಗದಿಂದ ಇಟ್ಟಿಗೆ ಕಟ್ಟಡವನ್ನು ಕಟ್ಟಲಾಗಿದೆ.
ಎರಡನೆಯ ನರಸಿಂಹವರ್ಮ ರಾಜಸಿಂಹ (ಸಾ.ಶ.ವ.
691-728) ಕಾಲದಲ್ಲಿ ಸುಧಾರಿತ ಶೈಲಿಯ
ಅನೇಕ ಕಟ್ಟಡ ದೇವಾಲಯಗಳನ್ನು ನಿರ್ಮಿಸಲಾಯಿತು. ಅವನು ಮಹಾಬಲಿಪುರದ ಕಡಲತೀರದ ದೇವಾಲಯ, ದಕ್ಷಿಣ ಆರ್ಕಾಟ್
ಜಿಲ್ಲೆಯ ಪನಮಲೆಯ ತಾಳಗಿರೀಶ್ವರ ದೇವಾಲಯ ಮತ್ತು ರಾಜಧಾನಿ ಕಂಚಿಯಲ್ಲಿ ಕೆಲವು ದೇವಾಲಯಗಳನ್ನು ರಾಜಸಿಂಹ ಶೈಲಿಯಲ್ಲಿ ಕಟ್ಟಿಸಿದ್ದಾನೆ. ಮಹಾಬಲಿಪುರದ ಕಡಲತೀರದ ದೇವಾಲಯ ಈ ಶೈಲಿಯ ಮೊದಲ ನಿರ್ಮಾಣ. ಮೂರು ಗುಡಿಗಳ ಆ ಸಮೂಹದಲ್ಲಿ ಪೂರ್ವದಲ್ಲಿ ಸಮುದ್ರಾಭಿಮುಖವಾಗಿ ಕ್ಷತ್ರಿಯ ಸಿಂಹೇಶ್ವರ, ಪಶ್ಚಿಮದಲ್ಲಿ ರಾಜಸಿಂಹೇಶ್ವರ, ಅವೆರಡರ ನಡುವೆ ಶಿಖರವಿಲ್ಲದ ಗುಡಿಯಲ್ಲಿ ಅನಂತಶಾಯಿ ವಿಷ್ಣುಮಂದಿರ ಇವೆ. ರಾಜಸಿಂಹೇಶ್ವರ ಗುಡಿಯ ಮುಂದೆ ಗೋಪುರವಿರುವ ಮಂಟಪಗಳಿವೆ. ಅವೆಲ್ಲವನ್ನೂ ಬಳಸಿ ಪ್ರಾಕಾರವಿದೆ.
ಕಂಚಿಯ ಕೈಲಾಸನಾಥ ದೇವಾಲಯ ಸಮೂಹವನ್ನು ರಾಜಸಿಂಹ ಮತ್ತು ಅವನ ಮಗ ಮಹೇಂದ್ರವರ್ಮ ಒರಟಾದ ಮರಳ್ಗಲ್ಲಿನಲ್ಲಿ ಕಟ್ಟಿಸಿದುದಾಗಿ ತಿಳಿದುಬರುತ್ತದೆ. ಇಲ್ಲಿಯೇ 2ನೆಯ ನಂದಿವರ್ಮ ಪಲ್ಲವಮಲ್ಲ ಕಟ್ಟಿಸಿದ ವೈಕುಂಠ ಪೆರುಮಾಳ್ ದೇವಾಲಯ ಮರಳ್ಗಲ್ಲಿನ ಬೃಹತ್ ಕಟ್ಟಡವಾಗಿದೆ. ಅದರ ವಿಮಾನಕ್ಕೆ ನಾಲ್ಕು ಅಂತಸ್ತುಗಳಿವೆ. ಒಂದರಮೇಲೊಂದರಂತೆ ಪ್ರತಿ ಅಂತಸ್ತಿನಲ್ಲಿ ಇರುವ ಗರ್ಭಗುಡಿಗಳಲ್ಲಿ ಕೆಳಗಿನಿಂದ, ಅನುಕ್ರಮವಾಗಿ, ನಿಂತ, ಕುಳಿತ ಮತ್ತು ಮಲಗಿದ ವಿಷ್ಣು ಶಿಲ್ಪಗಳಿವೆ. ದೇವಾಲಯದ ಎಲ್ಲ ಹೊರಗೋಡೆಗಳ ಮೇಲಿರುವ ಅನೇಕ ಶಿಲ್ಪಗಳಲ್ಲದೆ, ಕೈಸಾಲೆಯ ಹಿಂಗೋಡೆಗಳ ಮೇಲೆ ಆ ಕಾಲದ ಶಾಸನಗಳಿರುವ, ಬ್ರಹ್ಮನಿಂದ ಮೊದಲುಗೊಂಡು ನಂದಿವರ್ಮನ ವರೆಗಿನ ಪಲ್ಲವರಾಜರ ವಂಶಾವಳಿಯನ್ನು ತಿಳಿಸುವ ಶಿಲ್ಪ ಫಲಕಗಳಿವೆ. ಅವಕ್ಕೆ ಹೆಚ್ಚಿನ ಐತಿಹಾಸಿಕ ಮಹತ್ತ್ವವಿದೆ.
2ನೆಯ ನಂದಿವರ್ಮ ಪಲ್ಲವಮಲ್ಲನ ತರುವಾಯ ಕೆಲವು ದೇವಾಲಯಗಳನ್ನು ಕಂಚಿಯಿಂದ ಹೊರಗೆ ಗಟ್ಟಿಯಾದ ಗ್ರಾನೈಟ್ ಕಲ್ಲಿನಲ್ಲಿ ಕಟ್ಟಲಾಗಿದೆ. ಸಾಮಾನ್ಯವಾಗಿ ಅವುಗಳ ಹೊರಗೋಡೆಗಳಲ್ಲಿರುವ ಗೂಡುಗಳಲ್ಲಿ ಇಟ್ಟಿಗೆ ಮತ್ತು ಗಾರೆಯಲ್ಲಿ ಮಾಡಿದ ಶಿಲ್ಪಗಳನ್ನು ಇಡಲಾಗಿರುತ್ತದೆ. ಉತ್ತರ ಮೇರೂರಿನಲ್ಲಿ ದಂತಿವರ್ಮ ಕಟ್ಟಿಸಿದ ವೈಕುಂಠ ಪೆರುಮಾಳ್ ಮತ್ತು ಸುಂದರ ಪೆರುಮಾಳ್ ದೇವಾಲಯಗಳು ಈ ರೀತಿಯವು.
ಪಲ್ಲವ ಅಪರಾಜಿತವರ್ಮ (ಸಾ.ಶ.ವ.
885-903) ನಿರ್ಮಿಸಿದ ತಿರುತ್ತಣಿಯ ವಿರಾಟ್ಟಾನೇಶ್ವರ ಮಂದಿರ ಒಂದು ಅಂತಸ್ತಿನ ವಿಮಾನ, ಚತುರಸ್ರ ಗರ್ಭಗುಡಿ ಮತ್ತು ಗಜಪೃಷ್ಠಾಕೃತಿಯ ಗ್ರೀವ ಮತ್ತು ಶಿಖರಗಳಿರುವ ಸುಂದರ ಕಟ್ಟಡವಾಗಿದೆ. ಅದರ ಗೂಡುಗಳಲ್ಲಿ ಮತ್ತು ಶಿಖರದಲ್ಲಿ ಕೆಲವು ಸುಂದರ ಶಿಲ್ಪಗಳಿವೆ.
ಉಪಸಂಹಾರ:
ಹೊಸ ಕಟ್ಟಡ ನಿರ್ಮಾಣ ಪದ್ಧತಿ, ಪ್ರಾಯೋಗಿಕ ಹಂತಗಳಲ್ಲಿ ಪರಿಶ್ರಮ ಪಡೆದ ತರುವಾಯ ಅವರು ಸ್ಥಾಪಿಸಿದ ವಾಸ್ತು ಶಿಲ್ಪ-ಇವನ್ನು ಅನಂತರ ಕಾಲದ ಚೋಳ, ಪಾಂಡ್ಯ ಮತ್ತು ವಿಜಯನಗರದ ದೊರೆಗಳು ರೂಢಿಸಿಕೊಂಡು ಭಾರತದ ವಾಸ್ತು ಶಿಲ್ಪ ಇತಿಹಾಸದಲ್ಲಿ ಅಮೋಘವೂ ಅದ್ಭುತವೂ ಆದ ಕಟ್ಟಡ ದೇವಾಲಯಗಳನ್ನು ದಕ್ಷಿಣ ಭಾರತಾದ್ಯಂತ ನಿರ್ಮಿಸಿದ್ದಾರೆ.
*****
Comments
Post a Comment