ತಂಜಾವೂರಿನ ಚೋಳರು

   ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ರಾಜಮನೆತನಗಳಲ್ಲೊಂದು. ಚೇರ ಪಾಂಡ್ಯರ ಜೊತೆಗೆ ಚೋಳರು ಕ್ರಿ.ಪೂ.ದಲ್ಲೇ ಇದ್ದುದಕ್ಕೆ ಆಧಾರಗಳಿವೆ. ಕಾವೇರಿ ತೀರ ಇವರ ಮೂಲನೆಲೆ. ಕಾವೇರಿಯ ಮುಖದಲ್ಲಿಯ ಕಾವೇರಿ ಪಟ್ಟಣ ಮತ್ತು ಅದೇ ನದಿಯ ದಡದ ಮೇಲಿರುವ ಒರೆಯೂರ್ ಇವರ ಪ್ರಾಚೀನ ನಗರಗಳು. ಚೋಳ ಎಂಬ ಹೆಸರು ಬರಲು ಕಾರಣ ತಿಳಿಯದು. ಕಪ್ಪು ಎಂಬ ಅರ್ಥವುಳ್ಳ ಕಾಲ ಎಂಬ ಸಂಸ್ಕೃತ ಶಬ್ದದಿಂದಾಗಲಿ, ಇಲ್ಲಿಯ ಮೂಲನಿವಾಸಿಗಳನ್ನು ನಿರ್ದೇಶಿಸುವ ಕೋಲ ಎಂಬ ಪದದಿಂದಾಗಲಿ, ಒಂದು ಧಾನ್ಯದ ಹೆಸರಾದಜೋಳ” ಎಂಬುದರಿಂದಾಗಲಿ ಹೆಸರು ಬಂದಿರಬಹುದೆಂಬ ವಾದಗಳು ಸಮಂಜಸವಾಗಿ ಕಾಣಿಸವು. ಚೋಳರಿಗೆ ಕಿಳ್ಳಿ, ವಳವನ್, ಶೆಂಬಿಯನ್ ಎಂಬ ಹೆಸರುಗಳೂ ಉಂಟು.

   ಅಶೋಕನ ಶಾಸನಗಳಲ್ಲಿ ಪಾಂಡ್ಯರ ಜೊತೆಗೆ ಚೋಳರನ್ನು ಹೆಸರಿಸಿದೆ. ಪೆರಿಪ್ಲಸ್ ಮಾರಿಸ್ ಏರಿತ್ರೈ ಎಂಬ ಗ್ರೀಕ್ ಗ್ರಂಥದಲ್ಲಿ ಚೋಳರ ಹೆಸರಿಲ್ಲದಿದ್ದರೂ ಅರ್ಗರು ಅಥವಾ ಒರೆಯೂರಿನ ಹೆಸರಿದೆ. ಸೊರಂಗೇಯನ್ನು-ಎಂದರೆ ಚೋಳರ ರಾಜಧಾನಿ ಅರ್ಥುರಾ ಅಥವಾ ಒರೆಯೂರನ್ನು-ಟಾಲಮಿ ಸ್ಪಷ್ಟವಾಗಿ ತಿಳಿಸುತ್ತಾನೆ. ಎಳಾಲ ಎನ್ನುವವನು ಚೋಳರಾಷ್ಟ್ರದಿಂದ ಸಿಂಹಳಕ್ಕೆ ಹೋಗಿ 42 ವರ್ಷಗಳ ಕಾಲ ಆಳಿದನೆನ್ನುವ ವಿಷಯ ಮಹಾವಂಶದಲ್ಲಿದೆ. ಕ್ರಿ.. ಸು. 2-3ನೆಯ ಶತಮಾ ನಗಳಲ್ಲಿ ರಚಿತವಾಗಿದ್ದಿರಬಹುದಾದ ಸಂಗಂ ತಮಿಳು ಸಾಹಿತ್ಯದಲ್ಲಿ ಹಲವು ಚೋಳರಾಜರ ಕಥೆಗಳು ಹೆಣೆದುಕೊಂಡಿದ್ದರೂ ಆಗಿನ ಚೋಳರ ರಾಜರ ವಂಶಾವಳಿಯನ್ನು ಗುರುತಿಸಲು ಸಾಧ್ಯವಾಗದು. ಇವು ತಿಳಿಸುವ ರಾಜರಲ್ಲಿ ಪ್ರಸಿದ್ಧನಾದವನು ಇರುಜೆಟ್ ಚೆನ್ನಿಯ ಮಗ ಕರಿಕಾಲ. ಕರಿಕಾಲ ಚಿಕ್ಕಂದಿನಲ್ಲಿ ಅಗ್ನಿಯ ಅನಾಹುತಕ್ಕೊಳಗಾಗಿ ಅವನ ಕಾಲು ಸುಟ್ಟದ್ದರಿಂದ ಅವನಿಗೆ ಕರಿಕಾಲನೆಂದು ಹೆಸರು ಬಂತು. ಅವನು ಪಟ್ಟಕ್ಕೆ ಬಂದ ತರುಣದಲ್ಲೇ ಅವನನ್ನು ಹಿಡಿದು ಸೆರೆಯಲ್ಲಿ ಹಾಕಲಾಯಿತು. ಆದರೆ ಸೆರೆಯಿಂದ ತಪ್ಪಿಸಿಕೊಂಡು ಮತ್ತೆ ಅಧಿಪತಿಯಾದ. ವೆಣ್ಣಿ ಎಂಬಲ್ಲಿ ನಡೆದ ಯುದ್ಧದಲ್ಲಿ ಪಾಂಡ್ಯಚೇರರನ್ನು ಸೋಲಿಸಿ ಹಲವಾರು ರಾಜರನ್ನು ಓಡಿಸಿದ. ವಾಹೈ ಪರಂದಲೈ ಎಂಬಲ್ಲಿ ಅವನು ನಡೆಸಿದ ಮತ್ತೊಂದು ಯುದ್ಧದಲ್ಲಿ ಒಂಬತ್ತು ಜನ ಶತ್ರುರಾಜರು ಅವನಿಗೆ ಶರಣಾಗತರಾದರು. ಅವನ ಕಾಲದ ಕಾವೇರಿಪಟ್ಟಣದ ಸುಂದರವಾದ ವರ್ಣನೆ ಸಂಗಂ ಸಾಹಿತ್ಯದಲ್ಲಿ ತುಂಬಿದೆ.

   ಚೋಳರಾಜಪುತ್ರರ ಅಂತಃಕಲಹದ ಉಲ್ಲೇಖವೂ ಸಾಹಿತ್ಯದಲ್ಲಿದೆ. ನಲಂಗಿಳ್ಳಿ ಮತ್ತು ನೆಡುಂಗಿಳ್ಳಿ ಇವರ ನಡುವೆ ಕಾಡಿಯೂರಿನಲ್ಲಿ ನಡೆದ ಯುದ್ಧವನ್ನು ಹಲವು ಬಗೆಯಲ್ಲಿ ವಿವರಿಸಿದೆ. ಇವರು ಪುಹಾರ್ ಅಥವಾ ಕಾವೇರಿಪಟ್ಟಣ ಮತ್ತು ಒರೆಯೂರ್ಗಳಲ್ಲಿ ಆಳುತ್ತಿದ್ದ ಎದುರಾಳಿ ಚೋಳರಾಜಕುಮಾರರು. ಇವರಲ್ಲದೆ ಕಿಳ್ಳವಳವನ್, ಕೋಷ್ಟಿರುಂಜನ್, ಚೋಳನ್, ಪೆರುನಾರ್ ಕಿಳ್ಳಿ, ಕೋಚ್ಚಂಗಣಾನ್ ಮೊದಲಾದವರ ಹೆಸರುಗಳೂ ಅವರ ಸಾಹಸಗಳೂ ಕಾಲದ ಕಾವ್ಯದ ವಸ್ತುಗಳಾಗಿ ಉಳಿದುಬಂದಿದೆ.

   ಸಂಗಂ ಕಾಲವಾದ ಮೇಲೆ ಚೋಳರ ವಿಷಯ ಹೆಚ್ಚು ತಿಳಿದುಬರುವುದಿಲ್ಲ. ತಮಿಳುನಾಡಿನ ಉತ್ತರದಲ್ಲಿ ಪಲ್ಲವರು, ದಕ್ಷಿಣದಲ್ಲಿ ಪಾಂಡ್ಯರು ಪ್ರಬಲರಾಗಿ ಮುನ್ನೂರು ವರ್ಷಗಳ ಕಾಲ ಆಳುತ್ತಿದ್ದಾಗ ಬಹುಶಃ ಚೋಳರು ಸಣ್ಣಸಣ್ಣ ಪಾಳೆಯಪಟ್ಟುಗಳಾಗಿ ಅವರ ಅಧೀನರಾಗಿ ಅಲ್ಲಲ್ಲಿ ಆಳುತ್ತಿದ್ದರು. ಒರೆಯೂರು ಚೋಳರ ಅಧಿಕಾರದಲ್ಲೇ ಉಳಿದಿದ್ದಿರಬೇಕು ಮತ್ತು ಮನೆತನದವರು ತಮ್ಮ ತಾಯಿನಾಡಿನಿಂದ ದೂರವಾಗಿ ಬೇರೆಬೇರೆ ಪ್ರಾಂತ್ಯಗಳಲ್ಲಿ ಹರಡಿ ಹೋಗಿದ್ದರೆಂಬುದಕ್ಕೆ ಕಾಂದಾಲೂರು, ಶಿಯ್ಯಾಳಿ, ಮಾಲೆಪಾಡು, ನೆಕ್ಕುಂದಿ ಮೊದಲಾದ ಕಡೆ ಇದ್ದ ಸಣ್ಣಪುಟ್ಟ ರಾಜರು ತಾವು ಚೋಳ ಮನೆತನಕ್ಕೆ ಸೇರಿದವರೆಂದು ಹೇಳಿಕೊಂಡಿರುವುದನ್ನು ನೋಡಬಹುದು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ನೆಲೆಸಿದ್ದ ಚೋಳರು ಕಾಶ್ಯಪ ಗೋತ್ರದವರೆಂದೂ ಕರಿಕಾಲನ ವಂಶಸ್ಥರೆಂದೂ ಒರೆಯೂರು ಪುರವರಾಧೀಶ್ವರರೆಂದೂ ಹೇಳಿಕೊಂಡಿದ್ದಾರೆ. ಪಲ್ಲವರ ಮತ್ತು ಬಾದಾಮಿ ಚಾಳುಕ್ಯರ ಶಾಸನಗಳಲ್ಲಿ ಚೋಳರಾಜ್ಯದ ಉಲ್ಲೇಖ ಅಲ್ಲಲ್ಲಿ ಕಂಡುಬರುತ್ತದೆ. ಬುದ್ಧವರ್ಮ ಚೋಳಸೈನ್ಯವೆಂಬಾತನು ಸಮುದ್ರಕ್ಕೆ ಬಡಬಾನಲನಾಗಿದ್ದ. ಕಾವೇರೀ ತೀರದಲ್ಲಿ ಅಡಕೆ ತೋಟಗಳು ಮತ್ತು ಬತ್ತದ ಗದ್ದೆಗಳಿಂದ ಸಮೃದ್ಧವಾಗಿದ್ದ ಚೋಳನಾಡನ್ನು ಪಲ್ಲವರ ಸಿಂಹವಿಷ್ಣು ಆಕ್ರಮಿಸಿಕೊಂಡಿದ್ದ. ಬಾದಾಮಿಯ ಚಲುಕ್ಯರ ಒಂದನೆಯ ವಿಕ್ರಮಾದಿತ್ಯ ಚೋಳರಾಜ್ಯವನ್ನು ಗೆದ್ದುದ್ದಾಗಿಯೂ, ಒರೆಯೂರಿನಲ್ಲಿ ಬೀಡು ಬಿಟ್ಟುದ್ದಾಗಿಯೂ ಅವನ ಗದ್ವಾಲ್ ಶಾಸನ ತಿಳಿಸುತ್ತದೆ. ಹೀಗೆ ಚೋಳರು 3-4ನೆಯ ಶತಮಾನಗಳಿಂದ ಹೆಚ್ಚು ಪ್ರಬುದ್ಧಮಾನರಾಗದೆ ಹೋದರೂ 9ನೆಯ ಶತಮಾನದವರೆಗೂ ಅಲ್ಲಲ್ಲಿ ಚಿಕ್ಕಪುಟ್ಟ ಪಾಳೆಯಪಟ್ಟುಗಳಲ್ಲಿ ಅಸ್ತಿತ್ವದಲ್ಲಿದ್ದರೆಂಬುದಕ್ಕೆ ಆಧಾರಗಳು ದೊರೆಯುತ್ತವೆ.

   9ನೆಯ ಶತಮಾನದಲ್ಲಿ ಪಲ್ಲವರ ಅವನತಿಯ ಆರಂಭದೊಂದಿಗೆ ಚೋಳರು ಉತ್ಕರ್ಷಕ್ಕೆ ಬಂದರು. ಚೋಳ ರಾಜ್ಯವನ್ನು ಭದ್ರಗೊಳಿಸಲು ಮೂಲ ಕಾರಣನಾದವನು ವಿಜಯಾಲಯ. ಇವನು ಪಲ್ಲವರ ಸಾಮಂತನಾಗಿದ್ದು ಒರೆಯೂರಿನ ಬಳಿ ಒಂದು ಚಿಕ್ಕ ರಾಜ್ಯವನ್ನು ಆಳುತ್ತಿದ್ದುದಾಗಿ ತೋರುತ್ತದೆ. ಕಾಲದಲ್ಲಿ ತಂಜಾವೂರಿನ ಸುತ್ತಮುತ್ತಣ ಪ್ರದೇಶವನ್ನು ಮುತ್ತರೆಯರು ಎಂಬ ಪುಟ್ಟ ರಾಜ ಮನೆತನದವರು ಶಂದಲೈ ಎಂಬಲ್ಲಿಂದ ಆಳುತ್ತಿದ್ದರು. ಇವರು ಸಮಯಕ್ಕೆ ತಕ್ಕಂತೆ ಪಲ್ಲವರ ಅಥವಾ ಪಾಂಡ್ಯರ ಅಧೀನರಾಗಿರುತ್ತಿದ್ದರು. ಪಾಂಡ್ಯವರಗುಣನ ಆಳ್ವಿಕೆಯಲ್ಲಿ ಮುತ್ತರೆಯರು ಪಾಂಡ್ಯರ ಪಕ್ಷ ವಹಿಸಿದ್ದಂತೆ ತೋರುತ್ತದೆ. ಪಲ್ಲವ ಸಾಮಂತನಾಗಿದ್ದ ವಿಜಯಾಲಯನು ತಂಜಾವೂರನ್ನು ಮುತ್ತಿ ವಶಪಡಿಸಿಕೊಂಡ.

   ವಿಜಯಾಲಯನ ಈ ಗೆಲುವು ಮುಂದೆ ಬೃಹತ್ ಚೋಳ ಚಕ್ರಾಧಿಪತ್ಯದ ನಿರ್ಮಾಣಕ್ಕೆ ನಾಂದಿಯಾಯಿತೆನ್ನಬಹುದು. ಇದು ನಡೆದದ್ದು ಸಾ.ಶ.ವ. 850ಕ್ಕೆ ಮೊದಲು. ಸುಮಾರು 871 ವರೆಗು ವಿಜಯಾಲಯನು ಆಳುತ್ತಿದ್ದ. ಇವನನ್ನು ಶಾಸನಗಳು ತಂಜೈಕೊಂಡ ಪರಕೇಸರಿ ಎಂದು ವರ್ಣಿಸಿವೆ. ಈತ ಪಲ್ಲವಸಾಮಂತನಾಗಿಯೇ ಮುಂದುವರಿದರೂ ಶಾಸನಗಳಲ್ಲಿ ತನ್ನ ಆಳ್ವಿಕೆಯ ವರ್ಷಗಳನ್ನು ತಿಳಿಸಿರುವುದು ಇವನು ಪ್ರಬಲನಾಗುತ್ತಿದ್ದನೆನ್ನುವುದರ ಸೂಚನೆ. ಇವನು ತಂಜಾವೂರಿನಲ್ಲಿ ನಿಷುಂಭಸೂದಿನಿಯ ದೇವಾಲಯವನ್ನು ಕಟ್ಟಿಸಿದ. ಮುಂದೆ ತಂಜಾವೂರು ಚೋಳರ ರಾಜಧಾನಿಯಾಯಿತು. (ಡಿ.ಎಚ್.ಕೆ.; ಎಂ.ಎಸ್.)

   ಮುತ್ತರೆಯವರ ಸೋಲಿಗೆ ಪ್ರತೀಕಾರವಾಗಿ ಪಲ್ಲವರ ಮೇಲೆ ಪಾಂಡ್ಯರ ಇಮ್ಮಡಿ ವರಗುಣವರ್ಮ ಯುದ್ಧ ಹೂಡಿ ಕಾವೇರೀ ತೀರದಲ್ಲಿರುವ ಇಡವೈವರೆಗೂ ನುಗ್ಗಿದ. ಆದರೆ ಆಗ ಆಳುತ್ತಿದ್ದ ಪಲ್ಲವ ಯುವರಾಜ ಅಪರಾಜಿತ ವಿಜಯಾಲಯನ ಮಗ ಒಂದನೆಯ ಆದಿತ್ಯ ಮತ್ತು ಗಂಗ ಒಂದನೆಯ ಪೃಥಿವೀಪತಿ ಇವರನ್ನು ಕೂಡಿಕೊಂಡು, ಕುಂಭಕೋಣದ ಬಳಿ ಶ್ರೀಪುರಂಬಿಯಮ್ ಎಂಬಲ್ಲಿ 880ರಲ್ಲಿ ಅವನನ್ನೆದುರಿಸಿದ. ಯುದ್ಧದಲ್ಲಿ ಪೃಥಿವೀಪತಿ ಸತ್ತರೂ ಪಾಂಡ್ಯರಿಗೆ ಸೋಲಾಯಿತು. ಮುತ್ತರೆಯನಿಂದ ವಿಜಯಾಲಯ ಪಡೆದಿದ್ದ ಪ್ರದೇಶಗಳ ಜೊತೆಗೆ ಇನ್ನಷ್ಟು ಪ್ರದೇಶವನ್ನು ಅವನ ಮಗ ಆದಿತ್ಯ ಪಡೆದ. ಆದರೆ ಸಾಮಂತನಾಗಿ ಉಳಿಯುವುದರಲ್ಲಿ ತೃಪ್ತಿಯಿಲ್ಲದ ಆದಿತ್ಯ 897ರಲ್ಲಿ ತೊಂಡೈಮಂಡಲದ ಮೇಲೆ ನುಗ್ಗಿ ಅಪರಾಜಿತನನ್ನು ಕೊಂದು ಪಲ್ಲವ ರಾಜ್ಯವನ್ನು ವಶಪಡಿಸಿಕೊಂಡು ಸ್ವತಂತ್ರನಾದ. ಮುಂದೆ ಸ್ವಲ್ಪ ಕಾಲದಲ್ಲೇ ಗಂಗ ಇಮ್ಮಡಿ ಪೃಥಿವೀಪತಿಯೂ ಇವನ ಅಧೀನನಾದ. ಆದಿತ್ಯ ಅನಂತರ ಪಾಂಡ್ಯರಾಜ ಪರಾಂತಕ ವೀರನಾರಾಯಣನಿಂದ ಕೊಂಗುದೇಶವನ್ನು ಗೆದ್ದುಕೊಂಡ. ಆದಿತ್ಯನೊಡನೆ ಚೇರರ ಸ್ಥಾಣುರವಿ ಸ್ನೇಹ ಬೆಳೆಸಿದ; ಅವನ ಮಗ ಪರಾಂತಕನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ.

   ಆದಿತ್ಯನಿಗೆ ಕೋದಂಡರಾಮ ಎಂಬ ಮತ್ತೊಂದು ಹೆಸರೂ ಉಂಟು. ಅವನು ಕಾವೇರಿಯ ಎರಡು ದಂಡೆಗಳ ಮೇಲೂ ಹಲವಾರು ಉನ್ನತ ಶಿವಾಲಯಗಳನ್ನು ಕಟ್ಟಿಸಿದ ಉಲ್ಲೇಖಗಳಿವೆ. ಅವನು ಕಾಳಹಸ್ತಿಯ ಬಳಿ ತೊಂಡೈಮಾನಾಡಿನಲ್ಲಿ ತೀರಿಕೊಂಡಾಗ ಅವನ ಮಗ ಪರಾಂತಕ ಅವನ ಹೆಸರಿನಲ್ಲಿ ಆದಿತ್ಯೇಶ್ವರ ದೇವಾಲಯವನ್ನು ಕಟ್ಟಿಸಿದ. ಚಿಕ್ಕ ರಾಜ್ಯವೊಂದರಲ್ಲಿ ಸಾಮಂತನಾಗಿ ಆಳಲಾರಂಭಿಸಿದ ಆದಿತ್ಯ ಸ್ವತಂತ್ರ ಮತ್ತು ವಿಸ್ತಾರವಾದ ರಾಜ್ಯವೊಂದನ್ನು ತನ್ನ ಮಗ ಪರಾಂತಕನಿಗೆ ಬಿಟ್ಟುಹೋದ. ವಿಜಯಾಲಯನ ವಂಶದವರು ಹೊತ್ತಿಗಾಗಲೇ ತಾವು ಸೂರ್ಯವಂಶಕ್ಕೆ ಸೇರಿದವರೆಂದು ತಮ್ಮ ಪೌರಾಣಿಕ ವಂಶಾವಳಿಯನ್ನು ಕೊಡಲಾರಂಭಿಸಿದ್ದರು.

   ಪರಾಂತಕ ಪಟ್ಟಕ್ಕೆ ಬಂದದ್ದು ಸಾ.ಶ.ವ. 907ರಲ್ಲಿ. ಈತ 48 ವರ್ಷಗಳ ಕಾಲ ರಾಜ್ಯಭಾರ ಮಾಡಿದ. ಸಾ.ಶ.ವ. 910ರಲ್ಲಿ ಪಾಂಡ್ಯರಾಜ್ಯದ ಮೇಲೆ ದಂಡೆತ್ತಿ ಹೋಗಿ ಅವರ ರಾಜಧಾನಿಯನ್ನು ಗೆದ್ದು ಮಧುರೈಕೊಂಡ ಎಂಬ ಬಿರುದು ಪಡೆದ. ಸೋತ ಪಾಂಡ್ಯರಾಜ ಇಮ್ಮಡಿ ರಾಜಸಿಂಹ ಮಾರವರ್ಮ (900-920) ಸಿಂಹಳದ 5ನೆಯ ಕಶ್ಯಪನ ಸಹಾಯ ಕೋರಿದ. ಆದರೆ ಪರಾಂತಕ ಇಬ್ಬರ ಸೈನ್ಯವನ್ನು ವೆಲ್ಲೂರಿನ ಬಳಿ ಸೋಲಿಸಿದ. ರಾಜಸಿಂಹ ಸಿಂಹಳಕ್ಕೆ ಓಡಿಹೋದ. ಪಾಂಡ್ಯ ರಾಜ್ಯ ಚೋಳರ ವಶವಾಯಿತು.

   ರಾಷ್ಟ್ರಕೂಟ ಇಮ್ಮಡಿ ಕೃಷ್ಣನ ಮಗಳೊಬ್ಬಳನ್ನು ಆದಿತ್ಯ ಮದುವೆಯಾಗಿದ್ದ. ಅವಳ ಮಗ ಕನ್ನರದೇವ, ಆದಿತ್ಯನ ಅನಂತರ ಪರಾಂತಕ ಪಟ್ಟಕ್ಕೆ ಬಂದಾಗ ಕನ್ನರದೇವನ ಪಕ್ಷವನ್ನು ಕೃಷ್ಣ ವಹಿಸಿ, ಬಾಣ ಮತ್ತು ವೈದುಂಬರನ್ನು ಕೂಡಿಕೊಂಡು ಚೋಳ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಪರಾಂತಕನಿಗೆ ಗಂಗರ ಇಮ್ಮಡಿ ಪೃಥಿವೀಪತಿಯ ನೆರವು ದೊರೆಯಿತು. ವಲ್ಲಾಲದ (ತಿರುವಲ್ಲಂ) ಬಳಿ ನಡೆದ ಯುದ್ಧದಲ್ಲಿ ಕೃಷ್ಣ ಸೋತುಹೋದ. ಬಾಣರಾಜ್ಯ ಪೃಥಿವೀಪತಿಗೆ ಸೇರಿತು. ವೈದುಂಬರೂ ನಷ್ಟವನ್ನನುಭವಿಸಿದರು. ಯುದ್ಧ ನಡೆದದ್ದು 916ಕ್ಕೆ ಮೊದಲು. ಬಹುಬೇಗನೆ ವಿಸ್ತರಿಸಿದ ತನ್ನ ಚಕ್ರಾಧಿಪತ್ಯವನ್ನು ಎಲ್ಲ ದಿಕ್ಕುಗಳಿಂದಲೂ ಸಮರ್ಥವಾಗಿ ರಕ್ಷಿಸಿಕೊಳ್ಳುವುದು ಪರಾಂತಕನಿಗೆ ಅಸಾಧ್ಯವೆನಿಸಿತು.

   940ರಿಂದ ಈಚೆಗೆ ಪರಾಂತಕನಿಗೆ ಕಷ್ಟದ ದಿನಗಳು ಪ್ರಾಪ್ತವಾದುವು. ಅವನ ನಂಬಿಕೆಯ ಸಾಮಂತ ಇಮ್ಮಡಿ ಪೃಥಿವೀಪತಿ ತೀರಿಕೊಂಡಿದ್ದ. ಮುಮ್ಮಡಿ ಕೃಷ್ಣನ ಸೋದರಿಯನ್ನು ಗಂಗರ ಇಮ್ಮಡಿ ಬೂತುಗ ಮದುವೆಯಾಗಿದ್ದುದರಿಂದ ಗಂಗರೂ ರಾಷ್ಟ್ರಕೂಟರೂ ಒಂದಾಗಿದ್ದರು. ಬಾಣ ಮೈದುಂಬರು ರಾಷ್ಟ್ರಕೂಟರ ಅಧೀನರಾಗಿದ್ದರು. ತನ್ನ ರಾಜ್ಯದ ವಾಯುವ್ಯ ಭಾಗದಲ್ಲಿ ಇವರಿಂದ ಆಗಬಹುದಾದ ಮುತ್ತಿಗೆಯನ್ನು ಎದುರಿಸಲು ಪರಾಂತಕ ತನ್ನ ಹಿರಿಯ ಮಗ ರಾಜಾದಿತ್ಯನನ್ನು ದೊಡ್ಡ ಸೈನ್ಯದೊಂದಿಗೆ ಅಲ್ಲಿ ಇರಿಸಿದ್ದ. ಅವನಿಗೆ ಸಹಾಯಕನಾಗಿ ತನ್ನ ಇನ್ನೊಬ್ಬ ಮಗ ಅರಿಕುಲ ಕೇಸರಿಯನ್ನು ಅಲ್ಲಿಗೆ ಕಳುಹಿಸಿದ್ದ. ಮುಮ್ಮಡಿ ಕೃಷ್ಣ 949ರಲ್ಲಿ ಬೂತುಗನನ್ನು ಕೂಡಿಕೊಂಡು ಚೋಳರಾಜ್ಯಕ್ಕೆ ದಂಡೆತ್ತಿ ಬಂದಾಗ ಅರಕೋಣದ ಬಳಿ ತಕ್ಕೋಲಂ ಎಂಬಲ್ಲಿ ಘೋರವಾದ ಯುದ್ಧ ನಡೆಯಿತು. ರಾಜಾದಿತ್ಯ ಶತ್ರುಸೈನ್ಯಕ್ಕೆ ಹೆಚ್ಚಾದ ನಷ್ಟವನ್ನುಂಟು ಮಾಡಿದರೂ ಬೂತುಗ ಕೆಚ್ಚೆದೆಯಿಂದ ರಾಜಾದಿತ್ಯನಿದ್ದ ಆನೆಯನ್ನೇರಿ ಅವನನ್ನಿರಿದು ಕೊಂದು ಕೃಷ್ಣನಿಗೆ ಜಯ ಲಭಿಸುವಂತೆ ಮಾಡಿದ. ಚೋಳರು ಅನುಭವಿಸಿದ ಸೋಲಿನಿಂದ ಅವರ ರಾಜ್ಯದ ಅಸ್ಥಿತ್ವಕ್ಕೆ ಬಲವಾದ ಪೆಟ್ಟು ಬಿದ್ದಿತು. ಕ್ರಮೇಣ ಕೃಷ್ಣ ರಾಜ್ಯದ ಉತ್ತರಭಾಗವನ್ನೆಲ್ಲ ಆಕ್ರಮಿಸಿದ. ಕಂಚಿಯಿಂದ ತಂಜಾವೂರಿನವರೆಗೆ ರಾಷ್ಟ್ರಕೂಟರ ಆಧಿಪತ್ಯ ನಡೆಯುವಂತಾಯಿತು. ಇದಾದ ಸ್ವಲ್ಪ ಕಾಲದಲ್ಲೇ ರಾಜ್ಯದ ದಕ್ಷಿಣಭಾಗದ ಸಾಮಂತರು ದಂಗೆಯೆದ್ದು ಸ್ವತಂತ್ರರಾದರು. ನೂರು ವರ್ಷಗಳಷ್ಟು ಕಾಲ ಬೆಳೆಸಿಕೊಂಡು ಬಂದಿದ್ದ ಚೋಳ ರಾಜ್ಯ ಉಡುಗಿಹೋಯಿತು. ಪರಾಂತಕನ ಆಳ್ವಿಕೆ ಮುಗಿದ ಮೇಲೆ ಮೂವತ್ತು ವರ್ಷಗಳ ಕಾಲ ಚೋಳ ಮನೆತನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು.

   ಪರಾಂತಕನ ಅನಂತರ ಅವನ ಮಕ್ಕಳು ಗಂಡರಾದಿತ್ಯ ಮತ್ತು ಅರಿಂಜಯರು ಅನುಕ್ರಮವಾಗಿ ಸ್ವಲ್ಪ ಕಾಲ ಆಳಿದ ಮೇಲೆ ಅರಿಂಜಯನ ಮಗ ಸುಂದರ ಚೋಳ ಇಮ್ಮಡಿ ಪರಾಂತಕ 957ರಲ್ಲಿ ಪಟ್ಟಕ್ಕೆ ಬಂದ. ಸ್ವಲ್ಪ ಕಾಲದಲ್ಲೇ ಇವನು ತನ್ನ ಮಗ ಇಮ್ಮಡಿ ಆದಿತ್ಯನನ್ನು ಯುವರಾಜನನ್ನಾಗಿ ಮಾಡಿದ. ದಕ್ಷಿಣದಲ್ಲಿ ಸ್ವಾತಂತ್ರ್ಯ ಘೋಷಿಸಿದ್ದ ವೀರಪಾಂಡ್ಯನ ಕಡೆಗೆ ಮೊದಲು ಸುಂದರನ ಗಮನ ಹರಿಯಿತು. ಸಿಂಹಳದ ದೊರೆ ನಾಲ್ವಡಿ ಮಹಿಂದನ ನೆರವಿನಿಂದ ವೀರಪಾಂಡ್ಯ ಅವನನ್ನೆದುರಿಸಿದರೂ ಎರಡೂ ಬಾರಿ ಯುದ್ಧ ನಡೆದು ಕಡೆಗೆ ಇಮ್ಮಡಿ ಆದಿತ್ಯ ವೀರಪಾಂಡ್ಯನನ್ನು ಕೊಂದು ಸಿಂಹಳಕ್ಕೆ ಮುತ್ತಿಗೆಹಾಕಿದ (959). ಆದರೂ ಅಲ್ಲಿ ಚೋಳರ ಆಧಿಪತ್ಯವನ್ನು ಸ್ಥಾಪಿಸಲಾಗಲಿಲ್ಲ. ರಾಜ್ಯದ ಉತ್ತರಭಾಗದಲ್ಲಿ ಸುಂದರ ಚೋಳಯುದ್ಧ ಮಾಡುತ್ತಿದ್ದಾಗಲೇ ಕಂಚಿಯಲ್ಲಿ 973ರಲ್ಲಿ ತೀರಿಕೊಂಡ. ಇವನ ಕಡೆಗಾಲದಲ್ಲಿ ಗಂಡರಾದಿತ್ಯನ ಮಗ ಉತ್ತಮ ಚೋಳ ಯುವರಾಜ ಇಮ್ಮಡಿ ಆದಿತ್ಯನನ್ನು ಕೊಲ್ಲಿಸಿ, ಆದಿತ್ಯನ ತಮ್ಮ ಅರುಮಳಿದೇವನ ಬದಲು ತನ್ನನ್ನೇ ಉತ್ತರಾಧಿಕಾರಿಯನ್ನಾಗಿ ಮಾಡುವಂತೆ ರಾಜನನ್ನು ನಿರ್ಬಂಧಿಸಿದ. ಅದರಂತೆ ಸುಂದರ ಚೋಳನ ಮರಣಾನಂತರ ಉತ್ತಮ ಚೋಳ ಪಟ್ಟಕ್ಕೆ ಬಂದ. ವೇಳೆಗೆ ತೊಂಡೈಮಂಡಲದ ಬಹುಭಾಗವನ್ನು ರಾಷ್ಟ್ರಕೂಟರಿಂದ ಮರಳಿ ಗೆದ್ದುಕೊಳ್ಳಲಾಗಿತ್ತು.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources