ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರತೀಯ ಸಂಸ್ಕೃತಿ.

I. ಪೀಠಿಕೆ: ಭಾರತವು ಬಹುಸಂಸ್ಕೃತಿಗಳ ಬೀಡು.  ಅದು ತನ್ನ ಸಾಂಸ್ಕೃತಿಕ ಪರಂಪರೆಯನ್ನು ನೆರೆ-ಹೊರೆಯ ರಾಷ್ಟ್ರಗಳಿಗೂ ಹರಡಿದೆ. ಭಾರತವು ಭೌಗೋಳಿಕವಾಗಿ ಹಿಮಾವೃತ ಪರ್ವತಗಳು ಮತ್ತು ಜಲಗಡಿಗಳಿಂದ ಸುತ್ತುವರಿದು ಪ್ರಪಂಚದ ಇತರ ದೇಶಗಳೊಂದಿಗೆ ಸಂಪರ್ಕಕ್ಕೆ ಬಾರದೇ ಬಹುಕಾಲದವರೆಗೂ ಏಕಾಂಗಿಯಾಗಿತ್ತು ಎಂಬುದು ಕೆಲ ವಿದ್ವಾಂಸರ ಅಭಿಪ್ರಾಯವಾಗಿತ್ತು. ಇಲ್ಲಿಗೆ ಕೇವಲ ಹೊರಗಿನಿಂದ ವಿದೇಶಿಯರು ಬಂದರಷ್ಟೇ; ಭಾರತೀಯರು ಹೊರಪ್ರಪಂಚಕ್ಕೆ ಕಾಲಿಡಲಿಲ್ಲ ಎಂದು 20ನೆ ಶತಮಾನದ ಆದಿಯವರೆಗೂ ನಂಬಲಾಗಿತ್ತು. ಆದರೆ 1921-22 ರಲ್ಲಿ ವಾಯುವ್ಯ ಭಾರತದ ಸಿಂಧೂ ಕಣಿವೆಯಲ್ಲಿ ಹರಪ್ಪಾ ನಾಗರೀಕತೆಯ ಉತ್ಖನನಗಳು ನಡೆದ ನಂತರ ಅಲ್ಲಿನ ಟೆರ್ರಾಕೋಟಾ ಮುದ್ರೆಗಳನ್ನು ಹೋಲುವ ಮುದ್ರೆಗಳು ಮೆಸಪಟೋಮಿಯಾ ಭಾಗದಲ್ಲಿ ದೊರೆತಾಗ ಮೇಲಿನ ನಂಬಿಕೆ ಹುಸಿಯಾಯಿತು. ಮಧ್ಯ ಏಷ್ಯಾದಲ್ಲಿ ಹರಪ್ಪಾ ನಾಗರೀಕತೆಗೆ ಸಂಬಂಧಿಸಿದ ಮುದ್ರೆಗಳು, ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿಯ ಅಂಶಗಳು ಕಂಡುಬಂದಿರುವುದು ಭಾರತೀಯರಿಗೆ ನೌಕಾಯಾನ ತಿಳಿದಿರಲಿಲ್ಲ ಎಂಬ ನಂಬಿಕೆಯನ್ನು ಸುಳ್ಳಾಗಿಸಿದೆ. ಹರಪ್ಪಾ ಕಾಲದಿಂದ 15ನೆ ಶತಮಾನದವರೆಗೆ ಭಾರತದ ಸಾಂಸ್ಕೃತಿಕ ನೆಲೆಗಳು ಮತ್ತು ರಾಜಕೀಯ ವಸಾಹತುಗಳು ಭಾರತದ ಹೊರಗೆ ಅಸ್ತಿತ್ವದಲ್ಲಿದ್ದವು. ಇಸ್ಲಾಂ ಆಗಮನದ ನಂತರ ಮಧ್ಯ ಏಷ್ಯಾ ಮತ್ತು ಆಗ್ನೇಯ ಏಷ್ಯಾಗಳಲ್ಲಿನ ವಸಾಹತುಗಳು ಮತ್ತು ರಾಜಮನೆತನಗಳು ಕಣ್ಮರೆಯಾದರೂ ಅಲ್ಲಿನ ದೇವಾಲಯಗಳು, ವಿಹಾರಗಳು, ಧರ್ಮ, ಸಾಹಿತ್ಯ, ಸಂಗೀತ, ನೃತ್ಯ, ಭಾಷೆ, ಲಿಪಿ ಇವೇ ಮೊದಲಾದ ಸಾಂಸ್ಕೃತಿಕ ಅಂಶಗಳು ಇಂದಿಗೂ ಉಳಿದಿವೆ.

 

II. ಭಾರತೀಯ ಸಂಸ್ಕೃತಿ ವಿದೇಶಗಳಲ್ಲಿ ಹರಡಿದ ಬಗೆ: ಭೌಗೋಳಿಕವಾಗಿ ಹಿಂದೂ ಮಹಾಸಾಗರದ ಆಯಕಟ್ಟಿನ ಸ್ಥಳದಲ್ಲಿರುವ ಭಾರತಕ್ಕೆ ಸ್ವಾಭಾವಿಕವಾದ ಸಮುದ್ರತೀರ ದೊರೆತಿದೆ. ಇದರಿಂದ ಪ್ರಾಚೀನ ಭಾರತೀಯರು ಪೂರ್ವ ಮತ್ತು ಪಶ್ಚಿಮ ಸಮುದ್ರಗಳಾಚೆಗೆ ನೌಕಾಯಾನ ಕೈಗೊಳ್ಳಲು ಹಾಗೂ ಆ ಮೂಲಕ ನಮ್ಮ ಸಂಸ್ಕೃತಿಯನ್ನು ಹರಡಲು ಸಾಧ್ಯವಾಯಿತು. ಉದಾ: ಪ್ರಾಚೀನ ಭಾರತೀಯರು ರೋಮ್‌ ಸಾಮ್ರಾಜ್ಯದೊಂದಿಗೆ ವ್ಯಾಪಾರ ಸಂಪರ್ಕಗಳನ್ನು ಹೊಂದಿದ್ದ ಬಗ್ಗೆ ಟಾಲೆಮಿ ಮತ್ತು ಅನಾಮಧೇಯರ ಬರವಣಿಗೆಗಳಿಂದ ತಿಳಿದು ಬರುತ್ತದೆ. ಅಂತೆಯೇ ಆಗ್ನೇಯ ರಾಷ್ಟ್ರಗಳಾದ ಜಾವಾ, ಸುಮಾತ್ರ, ಮಲಯ ಇತ್ಯಾದಿಗಳನ್ನು ಪ್ರಾಚೀನ ಕಾಲದಲ್ಲಿ ಸುವರ್ಣದ್ವೀಪಗಳೆಂದು ಕರೆಯಲಾಗುತ್ತಿದ್ದು, ಆ ದೇಶಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸಲು ಅಲ್ಲಿಗೆ ತೆರಳಿದ ಪ್ರಾಚೀನ ಭಾರತೀಯರು ಅಲ್ಲಿ ನೆಲೆಸಿದ್ದಲ್ಲದೇ, ಅಲ್ಲಿನ ಜನರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಿದರು. ಇದರಿಂದ ಅಲ್ಲಿ ನಮ್ಮ ಸಂಸ್ಕೃತಿ ಪ್ರಚಾರಗೊಳ್ಳಲು ಕಾರಣವಾಯಿತು. ನಮ್ಮ ಸಂಸ್ಕೃತಿಯ ಪ್ರಚಾರದ ಜೊತೆಗೆ ಅವರ ಸಂಸ್ಕೃತಿಯನ್ನೂ ನಮ್ಮವರು ಅನುಸರಿಸತೊಡಗಿದರು. ಜೊತೆಗೆ ವ್ಯಾಪಾರಿಗಳೊಂದಿಗೆ ಆ ದೇಶಗಳಿಗೆ ತೆರಳಿದ್ದ ಬೌದ್ಧ ಭಿಕ್ಷುಗಳು ಅಲ್ಲಿ ಧರ್ಮ ಪ್ರಚಾರ ಮಾಡಿದರು. ಅಲ್ಲದೇ ನಮ್ಮ ಪ್ರಾಚೀನ ಋಷಿ-ಮುನಿಗಳು ಆ ದೇಶಗಳಿಗೆ ತೆರಳಿ, ಅಲ್ಲಿ ಆಶ್ರಮ-ಗುರುಕುಲಗಳನ್ನು ತೆರೆಯುವ ಮೂಲಕವೂ ಭಾರತೀಯ ಸಂಸ್ಕೃತಿಯ ಪ್ರಸಾರಕ್ಕೆ ಕಾರಣರಾದರು. ಇದಕ್ಕೆ ಸಾಕ್ಷಿಯಾಗಿ ಕೌಂಡಿನ್ಯ ಋಷಿಯ ವಿಚಾರ ಅಲ್ಲಿನ ಶಾಸನಗಳಲ್ಲಿ ಕಂಡುಬಂದಿದೆ.

   ಅಲ್ಲದೇ ಪ್ರಾಚೀನ ಭಾರತದಲ್ಲಿನ ಕೆಲ ರಾಜಮನೆತನಗಳವರು ನೌಕಾಯಾನದಲ್ಲಿ ಪರಿಣತರಾದ್ದರಿಂದ ಸಮುದ್ರದಾಚೆಗಿನ ದ್ವೀಪ ರಾಷ್ಟ್ರಗಳಿಗೂ ತೆರಳಿದ್ದಲ್ಲದೇ ಅಲ್ಲಿ ಹೊಸ ರಾಜ್ಯಗಳನ್ನು ಕಟ್ಟಿ ಆಳತೊಡಗಿದರು. ಉದಾ: ಚೋಳರು ಶ್ರೀಲಂಕಾದ ಉತ್ತರ ಭಾಗಗಳ ಮೇಲೆ ಹಿಡಿತ ಸಾಧಿಸಿದ್ದರು. ಇದರಿಂದ ಪ್ರಾಚೀನ ಭಾರತದ ಸಂಸ್ಕೃತಿಯು ಆ ಭೂಭಾಗಗಳಲ್ಲಿ ಪ್ರಸರಿಸಿ ಬೃಹತ್‌ ಭಾರತದ ಕಲ್ಪನೆಯು ರೂಪುಗೊಂಡಿತು. ಆದರೆ ಭಾರತೀಯರ ಇಂತಹ ವಿಸ್ತರಣೆಯು ಬಹುತೇಕವಾಗಿ ಶಾಂತಿಯುತವಾದ ಸಾಂಸ್ಕೃತಿಕ ವಿಸ್ತರಣೆಯಾಗಿತ್ತೆ ಹೊರತು ವಿಶ್ವವ್ಯಾಪಕತೆಯನ್ನು ಪಡೆಯಬೇಕೆನ್ನುವ ಬಯಕೆಯಿಂದ ನಡೆಸಿದ ಧಾರ್ಮಿಕ ಅಥವಾ ರಾಜಕೀಯ ಸ್ವರೂಪದ ಆಕ್ರಮಣಗಳಲ್ಲ.

   ಪ್ರಾಚೀನ ಭಾರತದಲ್ಲಿದ್ದ ತಕ್ಷಶಿಲಾ, ನಳಂದಾ, ವಿಕ್ರಮಶಿಲಾ, ವಲ್ಲಭಿ, ಓದಾಂತಪುರಿ, ಕಂಚಿಗಳಂತಹ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಕೇಂದ್ರಗಳಿಗೆ ಉನ್ನತ ಶಿಕ್ಷಣಕ್ಕಾಗಿ ಬಂದ ಆ ದೇಶಗಳ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಹಿಂತಿರುಗಿದ ನಂತರ ಅಲ್ಲಿ ನಮ್ಮ ಸಂಸ್ಕೃತಿಯ ಪ್ರಚಾರಕ್ಕೂ ಕಾರಣರಾದರು. ಹೀಗಾಗಿ, ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಮಯನ್ಮಾರ್‌, ಮಲೇಷಿಯ, ಕಾಂಬೋಡಿಯ, ಸುಮಾತ್ರ, ವಿಯೆಟ್ನಾಂ, ಫಿಲಿಪ್ಪಿನ್ಸ್‌, ಇಂಡೋನೇಷಿಯ ಮುಂತಾದ ದೇಶಗಳಲ್ಲಿ ನಮ್ಮ ಸಂಸ್ಕೃತಿ ಹರಡಿತು. ಭಾರತದ ಪೂರ್ವ ತೀರದ ಬಂದರು ಪಟ್ಟಣಗಳಾಗಿದ್ದ ತಾಮ್ರಲಿಪ್ತಿ, ಅರಿಕಮೇಡು, ಪುರಿ, ಕಾವೇರಿಪಟ್ಟಣಂ, ಮಹಾಬಲಿಪುರಂಗಳಿಂದ ಆಗ್ನೇಯ ಏಷ್ಯಾದ ದೇಶಗಳಿಗೆ ಭಾರತೀಯ ವ್ಯಾಪಾರಿಗಳು, ಧರ್ಮಪ್ರಚಾರಕರು ಮತ್ತು ಶಿಕ್ಷಾ ಗುರುಗಳು ವಲಸೆ ಹೋಗಲು ಸಾಧ್ಯವಾಯಿತು.

III. ಮಯನ್ಮಾರ್‌ (ಬರ್ಮಾ): ಈ ದೇಶವು ಭಾರತೀಯರು ಚೀನಾಕ್ಕೆ ಹೋಗುವ ಮಾರ್ಗದಲ್ಲಿದೆ. ಆದ್ದರಿಂದ ಪ್ರಾಚೀನ ಕಾಲದಲ್ಲಿ ಚೀನಾಕ್ಕೆ ಹೋಗುತ್ತಿದ್ದ ಭಾರತೀಯರು ಇಲ್ಲಿ ನಮ್ಮ ಸಂಸ್ಕೃತಿಯನ್ನು ಹರಡಲು ಸಾಧ್ಯವಾಯಿತು. ಸಾಮಾನ್ಯ ಶಕ ವರ್ಷ ಒಂದು ಮತ್ತು ಎರಡನೇ ಶತಮಾನಗಳಲ್ಲಿಯೇ ಅಮರಾವತಿ ಮತ್ತು ತಾಮ್ರಲಿಪ್ತಿಗಳಿಂದ ನೌಕಾಯಾನ ಮಾಡುತ್ತಿದ್ದ ವ್ಯಾಪಾರಿಗಳು, ಬ್ರಾಹ್ಮಣರು, ಕಲಾವಿದರು, ಕುಶಲಕರ್ಮಿಗಳು ಇಲ್ಲಿ ನೆಲೆಸತೊಡಗಿದರು. 11ನೆ ಶತಮಾನದಲ್ಲಿ   ಅರಿಮರ್ದನಪುರ ಸಾಮ್ರಾಜ್ಯದ ದೊರೆಯಾಗಿದ್ದ  ಅನೋರಥನು ತನ್ನ ಸಾಮ್ರಾಜ್ಯದಲ್ಲಿ ಬೌದ್ಧ ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದನು. ಅವನು ತನ್ನ ರಾಜಧಾನಿ ಪೇಗಾನ್‌ ನಗರದಲ್ಲಿ ಪ್ರಸಿದ್ಧ ಷೆಜಗಾನ್ ಎಂಬ ಬೃಹತ್‌ ಬೌದ್ಧ ಪಗೋಡಾ (ವಿಹಾರ)ವಲ್ಲದೇ ಅನೇಕ ಬೌದ್ಧ ದೇವಾಲಯಗಳನ್ನೂ ನಿರ್ಮಿಸಿದನು. ಇವನ ಮಗನಾದ ಕ್ಯಾನ್‌ಜಿತ್ಥನು ಒರಿಸ್ಸಾದಲ್ಲಿರುವ ಅನಂತ ದೇವಾಲಯದ ಮಾದರಿಯಲ್ಲಿ ಆನಂದ ದೇವಾಲಯವನ್ನು ತನ್ನ ಕಾಲದಲ್ಲಿ ನಿರ್ಮಿಸಿದನು. ಇವನ  ಕಾಲದಲ್ಲಿ ಬೌದ್ಧ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿದ್ದರೂ ವೈಷ್ಣವಧರ್ಮ ಪಾಲಿಸಲ್ಪಡುತ್ತಿತ್ತು. ಅಲ್ಲದೇ ಅವರು ತಮ್ಮದೇ ಆದ ಬ್ರಾಹ್ಮಿ ಲಿಪಿಯ ರೂಪಾಂತರವನ್ನೂ ಅಭಿವೃದ್ಧಿಪಡಿಸಿಕೊಂಡು ಬೌದ್ಧ ಧರ್ಮದ ಗ್ರಂಥಗಳನ್ನು ಭಾಷಾಂತರ ಮಾಡಿಕೊಂಡಿದ್ದರು. ಇಂದಿಗೂ ಸಹ ಮಯನ್ಮಾರ್‌ ದೇಶದಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದಾರೆ.

 

IV. ಥೈಲ್ಯಾಂಡ್‌: 1939ರವರೆಗೂ ಈ ದೇಶವನ್ನು ಸಯಾಮ್‌ ಎಂದು ಕರೆಯಲಾಗುತ್ತಿತ್ತು. ಈ ದೇಶಕ್ಕೂ ಸಹ ಭಾರತೀಯ ವ್ಯಾಪಾರಿಗಳು, ಧರ್ಮಪ್ರಚಾರಕರು ಮತ್ತು ಶಿಕ್ಷಕರು ಸಾ.ಶ.ವ. 1ನೆ ಶತಮಾನದಲ್ಲಿಯೇ ಬಂದು ನೆಲೆಸಿದರು. ಇಲ್ಲಿನ ರಾಜಮನೆತನಗಳನ್ನು ಆರಂಭದಲ್ಲಿ ದ್ವಾರಾವತಿ, ಶ್ರೀವಿಜಯ, ಸುಖೋದಯ ಎಂಬ ಸಂಸ್ಕೃತ ಹೆಸರುಗಳಿಂದ ಕರೆಯಲಾಗುತ್ತಿತ್ತು. ಇಂದಿಗೂ ಅಲ್ಲಿನ ನಗರಗಳಾಗಿರುವ ಕಾಂಚನಬುರಿ, ರಾಜಬುರಿ ಮತ್ತು ಲೋಬಬುರಿಗಳು ಕ್ರಮವಾಗಿ ಕಾಂಚನಪುರಿ, ರಾಜಪುರಿ ಮತ್ತು ಲವಪುರಿಗಳೆಂಬ ಸಂಸ್ಕೃತ ಮೂಲದ ಹೆಸರುಗಳಿಂದಲೇ ಬಂದಿವೆ. ಅಲ್ಲದೇ ಅಲ್ಲಿನ ಮುಖ್ಯಬೀದಿಗಳ ಹೆಸರುಗಳೂ ಸಹ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಉದಾ: ರಾಜಾರಾಂ, ರಾಜಜ್ರನಿ, ಮಹಾಜಯ ಮತ್ತು ಚಕ್ರವಂಶ ಇತ್ಯಾದಿ. ಸಾ.ಶ.ವ. 3 ಮತ್ತು 4ನೆ ಶತಮಾನಗಳಲ್ಲಿ ಬೌದ್ಧ ಮತ್ತು ವೈದಿಕ ದೇವತೆಗಳ ವಿಗ್ರಹಗಳು ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟವು. ವಿಷ್ಣುವಿನ ವಿಗ್ರಹವು ಅದರಲ್ಲಿ ಪ್ರಮುಖವಾದುದು. ಅಲ್ಲದೇ ಅಯೂದ್ಧಿಯಾ ಎಂಬ ಸ್ಥಳದಲ್ಲಿನ ಭಗ್ನ ದೇವಾಲಯಗಳ ಅವಶೇಷಗಳು ಭಾರತೀಯ ವಾಸ್ತು-ಶಿಲ್ಪದ ಉದಾಹರಣೆಗಳಾಗಿವೆ. ಜೊತೆಗೆ ಇಂದಿಗೂ ಅಲ್ಲಿನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಅನೇಕ ಹಿಂದೂ ದೇವಾಲಯಗಳಿರುವುದನ್ನು ನಾವು ನೋಡಬಹುದು.

 

V. ಕಾಂಬೋಡಿಯಾ: ಕಾಂಬೋಜ ಎಂಬುದು ಇದರ ಪ್ರಾಚೀನ ಹೆಸರು. ಇಲ್ಲಿ ಕೌಂಡಿನ್ಯ ಗೋತ್ರಕ್ಕೆ ಸೇರಿದ್ದ ರಾಜರು ಆಳ್ವಿಕೆ ನಡೆಸಿದ್ದಾರೆ ಎಂಬುದು ಶಾಸನಗಳು, ದೇವಾಲಯಗಳು ಮತ್ತಿತರಪುರಾತತ್ವ ಆಧಾರಗಳಿಂದ ದೃಢಪಟ್ಟಿದೆ. ಶಿವ, ವಿಷ್ಣು ದೇವಾಲಯಗಳಲ್ಲದೇ ಬೌದ್ಧರ ಅನೇಕ ಕೇಂದ್ರಗಳು ಇಲ್ಲಿ ಪತ್ತೆಯಾಗಿವೆ. ಸು. ಸಾ.ಶ.ವ. 14ನೆ ಶತಮಾನದವರೆಗೆ ಸಂಸ್ಕೃತ ಇಲ್ಲಿನ ಆಡಳಿತಭಾಷೆಯಾಗಿತ್ತು. ಅಲ್ಲಿನ ಅರಸರು ಸಂಸ್ಕೃತದ ಹೆಸರುಗಳನ್ನು ಪಡೆದಿದ್ದರು. ಉದಾ: ಜಯವರ್ಮ, ಶ್ರೇಷ್ಠವರ್ಮ, ಈಶಾನವರ್ಮ, ಇಂದ್ರವರ್ಮ, ಯಶೋವರ್ಮ ಮತ್ತು ಎರಡನೆಯ ಸೂರ್ಯವರ್ಮ. ಸೂರ್ಯವರ್ಮನು ಅಲ್ಲಿನ ಪ್ರಸಿದ್ಧ ದೊರೆಯಾಗಿದ್ದು, ಅವನನ್ನು ವಿಷ್ಣುವಿನ ಅವತಾರವೆಂದು ಕರೆಯಲಾಗುತ್ತಿತ್ತು. ಇವನು ನಿರ್ಮಿಸಿದ ಇಲ್ಲಿನ ಪ್ರಸಿದ್ಧ ಅಂಕುರ್ವಾಟ್‌ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಅದು ವೈಕುಂಠಧಾಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದರ ಗೋಡೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತಗಳ ಕಥೆಗಳಿಂದ ಆಯ್ದ ಶಿಲ್ಪಗಳನ್ನು ಕೆತ್ತಲಾಗಿದೆ. ಉದಾ: ಸಮುದ್ರ ಮಥನ. ಅಲ್ಲದೇ ಬಾಫುವಾನ್‌ ಎಂಬಲ್ಲಿನ ಶಿವ ದೇವಾಲಯವು 11ನೆ ಶತಮಾನದಲ್ಲಿ ಇಮ್ಮಡಿ ಉದಯಾದಿತ್ಯನಿಂದ ನಿರ್ಮಿಸಲ್ಪಟ್ಟಿದ್ದು, 15ನೆ ಶತಮಾನದಲ್ಲಿ ತೆರಾವಾಡ ಬೌದ್ಧರು ಆ ದೇವಾಲಯದಲ್ಲಿ ಬುದ್ಧನ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಆದರೆ ನಂತರ ಜೀರ್ಣಾವಸ್ಥೆಯಲ್ಲಿದ್ದ ಆ ದೇವಾಲಯವನ್ನು 2011ರಲ್ಲಿ ಅಲ್ಲಿನ ಸರ್ಕಾರವು ಜೀರ್ಣೋದ್ಧಾರಗೊಳಿಸಿದೆ.

 

VI. ವಿಯೆಟ್ನಾಂ (ಚಂಪಾ): ದೂರದ ವಿಯೆಟ್ನಾಂನಲ್ಲೂ ಸಹ ಭಾರತೀಯ ಸಂಸ್ಕೃತಿಯು ಹರಡಿತ್ತು ಎಂಬುದಕ್ಕೆ ಅಲ್ಲಿನ ಪ್ರಾಚೀನ ನಗರಗಳ ಹೆಸರುಗಳು ಸಾಕ್ಷಿಯಾಗಿವೆ. ಚಂಪಾವನ್ನಾಳುತ್ತಿದ್ದ ಆ ಕಾಲದ ಅರಸರು ಇಂದ್ರಪುರ, ಅಮರಾವತಿ, ವಿಜಯ ಮತ್ತು ಪಾಂಡುರಂಗ ಎಂಬ ಹೆಸರುಗಳನ್ನು ನಗರಗಳಿಗೆ ಇರಿಸಿದ್ದರು. ಅಲ್ಲಿನ ಜನರು ಶಿವ, ಗಣೇಶ, ಸರಸ್ವತಿ, ಲಕ್ಷ್ಮಿ, ಪಾರ್ವತಿ ಮತ್ತು ಬುದ್ಧ ಮೊದಲಾದ ವಿಗ್ರಹಗಳನ್ನು ಆರಾಧಿಸಲು ದೇವಾಲಯಗಳನ್ನು ನಿರ್ಮಿಸಿದ್ದರು. ಇದಕ್ಕೆ ಪೂರಕವಾಗಿ 2020ರಲ್ಲಿ ವಿಯೆಟ್ನಾಂನ ಕ್ವಾಂಗ್‌ ನಾಮ್‌ ಎಂಬ ಪ್ರಾಂತ್ಯದಲ್ಲಿನ ವಿಶ್ವಪಾರಂಪರಿಕ ತಾಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ನಡೆಸಿದ ಉತ್ಖನನದಲ್ಲಿ 9ನೆ ಶತಮಾನದ ಶಿವಲಿಂಗ ಪತ್ತೆಯಾಗಿದೆ.

 

VII. ಮಲೇಷಿಯಾ: ಮಲಯ ಎಂಬುದು ಇದರ ಪ್ರಾಚೀನ ಹೆಸರು. ರಾಮಾಯಣದಲ್ಲಿ ಇದರ ಉಲ್ಲೇಖವಿದೆ. ಸುಗ್ರೀವನು ಸೀತೆಯನ್ನು ಹುಡುಕಲು ವಾನರ ಸೇನೆಯನ್ನು ನಿಯೋಜಿಸುವಾಗ ಮಲಯ ದ್ವೀಪದ ಪ್ರಸ್ತಾಪವನ್ನು ಮಾಡುತ್ತಾನೆ. ಅಲ್ಲದೇ ಬೌದ್ಧರ ಜಾತಕ ಕತೆಗಳು, ಮಿಲಿಂದಪನ್ಹ, ಶಿಲಪ್ಪದಿಕಾರಂ, ರಘುವಂಶಗಳಲ್ಲಿಯೂ ಮಲಯದ ಉಲ್ಲೇಖವಿದೆ. ಹೀಗಾಗಿ ಮಲಯವು ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ತಿಳಿದಿತ್ತು. ಅಲ್ಲದೇ ಅಲ್ಲಿನ ಉತ್ಖನನಗಳಲ್ಲಿ ತ್ರಿಶೂಲಧಾರಿಯಾಗಿರುವ ಸ್ತ್ರೀದೇವತೆಯ ವಿಗ್ರಹ ಪತ್ತೆಯಾಗಿದೆ. ನಂದಿ, ಶಿವಲಿಂಗ, ಗಣೇಶ ಮತ್ತು ದುರ್ಗಿಯರ ವಿಗ್ರಹಗಳೂ ಪತ್ತೆಯಾಗಿವೆ. ಕೆದಾಹ ಎಂಬಲ್ಲಿ ದೊರೆತಿರುವ ಬೌದ್ಧರ ಪುರಾತತ್ವ ಅವಶೇಷಗಳಲ್ಲಿ ಸಂಸ್ಕೃತ ಭಾಷೆಯನ್ನು ಹೋಲುವ ಬ್ರಾಹ್ಮಿ ಲಿಪಿಯಂತಹ ಬರವಣಿಗೆಗಳು ಕಂಡುಬಂದಿವೆ. ಲಿಗೋರ್‌ ಎಂಬಲ್ಲಿ ದೊರೆತಿರುವ ಸಂಸ್ಕೃತ ಶಾಸನವು 4-5ನೆ ಶತಮಾನಕ್ಕೆ ಸೇರಿದ್ದು, ಇದರ ಶಾಸನ ಲಿಪಿಯು ಆ ಕಾಲದ ಬ್ರಾಹ್ಮಿ ಲಿಪಿಯನ್ನು ಹೋಲುತ್ತದೆ. ಇದೇ ಸ್ಥಳದಲ್ಲಿ ಸು. 50ಕ್ಕೂ ಹೆಚ್ಚು ಹಿಂದೂ ದೇವಾಲಯಗಳು ಕಂಡುಬಂದಿವೆ. ಅಲ್ಲದೇ ಇಂದಿಗೂ ಸಹ ಅವರ ಆಡುನುಡಿಯಲ್ಲಿ ಸಂಸ್ಕೃತದ ಪದಗಳಾಗಿರುವ ಸ್ವರ್ಗ, ರಸ, ಗುಣ, ಮಂತ್ರಿ, ದ್ವಿಪದಿ, ಮತ್ತು ಲಕ್ಷ ಇವೇ ಮೊದಲಾದ ಪದಗಳ ಬಳಕೆ ಇದೆ.

 

VIII. ಇಂಡೋನೇಷಿಯಾ: ಇಲ್ಲಿನ ಜಾವಾ ಮತ್ತು ಬಾಲಿ ದ್ವೀಪಗಳಲ್ಲಿ ಅಧಿಕ ಸಂಖ್ಯೆಯ ಹಿಂದೂ ದೇವಾಲಯಗಳು ಕಂಡುಬಂದಿವೆ. ಅದರಲ್ಲಿ ಜಾವಾದಲ್ಲಿರುವ 9ನೆ ಶತಮಾನಕ್ಕೆ ಸೇರಿದ ಪ್ರಂಬಾನನ ಎನ್ನುವ ಶಿವ ದೇವಾಲಯವು ಅತಿ ದೊಡ್ಡದಾಗಿದೆ. ಬ್ರಹ್ಮ ಮತ್ತು ವಿಷ್ಣುವಿನ ದೇವಾಲಯಗಳೂ ಇಲ್ಲಿದ್ದು, ಮೂರೂ ದೇವಾಲಯಗಳ ಎದುರಿಗೆ ಆಯಾ ದೇವತೆಗಳ ವಾಹನಗಳಾದ ನಂದಿ, ಗರುಡ ಮತ್ತು ಹಂಸದ ದೇವಾಲಯಗಳಿವೆ. ಇಲ್ಲಿ ಸು. 200ಕ್ಕೂ ಹೆಚ್ಚು ಸಣ್ಣ ದೇವಾಲಯಗಳಿದ್ದು, ದುರ್ಗಿ ಮತ್ತು ಗಣೇಶನ ದೇವಾಲಯಗಳು ಅವುಗಳಲ್ಲಿ ಮುಖ್ಯವಾದವುಗಳಾಗಿವೆ. ಇಲ್ಲಿನ ದೇವಾಲಯಗಳಲ್ಲಿ ಪಠಿಸುವ ಮಂತ್ರಗಳಲ್ಲಿ 500ಕ್ಕೂ ಹೆಚ್ಚು ಸಂಸ್ಕೃತ ಶ್ಲೋಕಗಳನ್ನು ಗುರುತಿಸಲಾಗಿದೆ. ಕಾವಿ ಎನ್ನುವ ಲಿಪಿಯಲ್ಲಿ ಇವುಗಳನ್ನು ಬರೆಯಲಾಗಿದ್ದು, ಆ ಲಿಪಿಯು ಬ್ರಾಹ್ಮಿ ಲಿಪಿಯಿಂದ ಉದಯಿಸಿದೆ. ಅಲ್ಲಿನ ಬುವನಕೋಶ ಎಂಬ ಅತ್ಯಂತ ಪ್ರಾಚೀನ ಮತ್ತು ಬೃಹತ್‌ ಗ್ರಂಥದಲ್ಲಿ 525 ಸಂಸ್ಕೃತದ ಶ್ಲೋಕಗಳಿವೆ. ಅಲ್ಲಿನ ಜನರಿಗೆ ವೇದಗಳಲ್ಲಿ ಹೇಳಿರುವ ವರ್ಣ ವ್ಯವಸ್ಥೆ ತಿಳಿದಿದೆ. ಆದರೆ ಅದು ಆಚರಣೆಯಲ್ಲಿ ಭಾರತದಲ್ಲಿರುವಂತೆ ಕಠಿಣವಾಗಿರದೇ ಸರಳವಾಗಿದೆ. ಅಲ್ಲಿನ ವೈವಾಹಿಕ ಆಚರಣೆಗಳು ಸಹ ಭಾರತೀಯ ಪದ್ಧತಿಗಳಂತಿವೆ. ಬಾಲಿಯಲ್ಲಿನ ಪುರ ಬೆಸಾಕಿಹ್‌ ದೇವಸ್ಥಾನವನ್ನು ಸುಮಾರು 15ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಅಂದಿಗೆ ಅದು ಅಲ್ಲಿನ ಪ್ರಮುಖ ಹಿಂದೂ ದೇವಾಲಯವೆನಿಸಿತ್ತು. ಅಂತೆಯೇ ಜಾವಾದಲ್ಲಿನ ಬೋರಾಬುದೂರ್‌ ಬೌದ್ಧರ ದೇವಾಲಯವು ಮೊದಲು ಹಿಂದೂ ದೇವಾಲಯವಾಗಿತ್ತು.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources