ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಹಿನ್ನೆಲೆ ಮತ್ತು ಅವರ ಏಳಿಗೆಯ ವಿವರಗಳು
ಹೈದರ್ ಅಲಿ ( 1721-82 ) ಮೈಸೂರು ಸಂಸ್ಥಾನದ ಪ್ರಖ್ಯಾತ ಆಡಳಿತಗಾರ . 1721 ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದ . ಇವನ ತಂದೆ ಫತೆ ಮಹಮ್ಮದ್ ಶಿರಾದ ನವಾಬನ ಸೇವೆಯಲ್ಲಿದ್ದ . ಶಾಲೆಗೆ ಹೋಗದೆ ಜೀವನವಿಡೀ ನಿರಕ್ಷರಕುಕ್ಷಿಯಾಗುಳಿದ . ತರುವಾಯ ಇವನು ಮೈಸೂರು ದಳವಾಯಿ ನಂಜರಾಜನ ಸೈನ್ಯದಲ್ಲಿ ಸೇರಿದ . ದೇವನಹಳ್ಳಿ ಮುತ್ತಿಗೆಯ ಸಂದರ್ಭದಲ್ಲಿ ಈತ ತೋರಿಸಿದ ಶೌರ್ಯವನ್ನು ಕಂಡು ಸುಪ್ರೀತನಾದ ದಳವಾಯಿಯ ಪ್ರೋತ್ಸಾಹದಿಂದ ಬಹುಬೇಗ ಉನ್ನತ ಹುದ್ದೆಗೇರಿದ . ಇಂಗ್ಲಿಷರು ಮತ್ತು ಫ್ರೆಂಚರ ನಡುವೆ ನಡೆದ ಕರ್ನಾಟಿಕ್ ( ಈಗಿನ ತಮಿಳುನಾಡು ಭಾಗ ) ಯುದ್ಧಗಳಲ್ಲಿ ತಿರುಚ್ಚಿರಾಪಳ್ಳಿಯನ್ನು ಪಡೆಯುವ ಆಸೆಯಿಂದ ನಂಜರಾಜ ಕರ್ನಾಟಕದ ನವಾಬ ಮಹಮ್ಮದ್ ಅಲಿಯನ್ನು ಬೆಂಬಲಿಸಿದ . ಈ ಯುದ್ಧದಲ್ಲಿ ಭಾಗವಹಿಸಲು ಹೈದರ್ ಅಲಿಯ ನೇತೃತ್ವದಲ್ಲಿ ಮೈಸೂರು ಸೈನ್ಯದ ತುಕಡಿಯೊಂದನ್ನು ಕಳುಹಿಸಿದ . ಮಹಮ್ಮದ್ ಅಲಿಗೆ ತನ್ನ ಶತ್ರುಗಳನ್ನು ಸೋಲಿಸಲು ಹೈದರ್ ನೆರವಾದ . ಗೆಲುವಿನ ಅನಂತರ ಮಹಮ್ಮದ್ ಅಲಿ ತನ್ನ ಮಾತನ್ನು ಮುರಿದು ತಿರುಚ್ಚಿರಾಪಳ್ಳಿಯನ್ನು ನಂಜರಾಜನಿಗೆ ಒಪ್ಪಿಸಲು ನಿರಾಕರಿಸಿದ . ಇದು ಮೈಸೂರಿನವರು ಫ್ರೆಂಚರ ಕಡೆ ಸೇರಿಕೊಂಡು ಇಂಗ್ಲಿಷರ ವಿರುದ್ಧ ಹೋರಾಡುವಂತೆ ಮಾಡಿತು . ಹೈದರ್ ಈ ಸಂಬಂಧವಾದ ಕಾರ್ಯಾಚರಣೆಗಳಲ್ಲಿ ನಾಲ್ಕು ವರ್ಷಗಳ...