ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನರ ಹಿನ್ನೆಲೆ ಮತ್ತು ಅವರ ಏಳಿಗೆಯ ವಿವರಗಳು

ಹೈದರ್ ಅಲಿ (1721-82)

   ಮೈಸೂರು ಸಂಸ್ಥಾನದ ಪ್ರಖ್ಯಾತ ಆಡಳಿತಗಾರ. 1721ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದ. ಇವನ ತಂದೆ ಫತೆ ಮಹಮ್ಮದ್ ಶಿರಾದ ನವಾಬನ ಸೇವೆಯಲ್ಲಿದ್ದ. ಶಾಲೆಗೆ ಹೋಗದೆ ಜೀವನವಿಡೀ ನಿರಕ್ಷರಕುಕ್ಷಿಯಾಗುಳಿದ. ತರುವಾಯ ಇವನು ಮೈಸೂರು ದಳವಾಯಿ ನಂಜರಾಜನ ಸೈನ್ಯದಲ್ಲಿ ಸೇರಿದ. ದೇವನಹಳ್ಳಿ ಮುತ್ತಿಗೆಯ ಸಂದರ್ಭದಲ್ಲಿ ಈತ ತೋರಿಸಿದ ಶೌರ್ಯವನ್ನು ಕಂಡು ಸುಪ್ರೀತನಾದ ದಳವಾಯಿಯ ಪ್ರೋತ್ಸಾಹದಿಂದ ಬಹುಬೇಗ ಉನ್ನತ ಹುದ್ದೆಗೇರಿದ. ಇಂಗ್ಲಿಷರು ಮತ್ತು ಫ್ರೆಂಚರ ನಡುವೆ ನಡೆದ ಕರ್ನಾಟಿಕ್(ಈಗಿನ ತಮಿಳುನಾಡು ಭಾಗ) ಯುದ್ಧಗಳಲ್ಲಿ ತಿರುಚ್ಚಿರಾಪಳ್ಳಿಯನ್ನು ಪಡೆಯುವ ಆಸೆಯಿಂದ ನಂಜರಾಜ ಕರ್ನಾಟಕದ ನವಾಬ ಮಹಮ್ಮದ್ ಅಲಿಯನ್ನು ಬೆಂಬಲಿಸಿದ. ಯುದ್ಧದಲ್ಲಿ ಭಾಗವಹಿಸಲು ಹೈದರ್ ಅಲಿಯ ನೇತೃತ್ವದಲ್ಲಿ ಮೈಸೂರು ಸೈನ್ಯದ ತುಕಡಿಯೊಂದನ್ನು ಕಳುಹಿಸಿದ. ಮಹಮ್ಮದ್ ಅಲಿಗೆ ತನ್ನ ಶತ್ರುಗಳನ್ನು ಸೋಲಿಸಲು ಹೈದರ್ ನೆರವಾದ. ಗೆಲುವಿನ ಅನಂತರ ಮಹಮ್ಮದ್ ಅಲಿ ತನ್ನ ಮಾತನ್ನು ಮುರಿದು ತಿರುಚ್ಚಿರಾಪಳ್ಳಿಯನ್ನು ನಂಜರಾಜನಿಗೆ ಒಪ್ಪಿಸಲು ನಿರಾಕರಿಸಿದ. ಇದು ಮೈಸೂರಿನವರು ಫ್ರೆಂಚರ ಕಡೆ ಸೇರಿಕೊಂಡು ಇಂಗ್ಲಿಷರ ವಿರುದ್ಧ ಹೋರಾಡುವಂತೆ ಮಾಡಿತು. ಹೈದರ್ ಸಂಬಂಧವಾದ ಕಾರ್ಯಾಚರಣೆಗಳಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚುಕಾಲ ಪಾಲ್ಗೊಂಡು ಸೈನಿಕ ವಿಷಯಗಳಲ್ಲಿ ಅಪಾರ ಅನುಭವ ಗಳಿಸಿದ ಹಾಗೂ ಗಾಡಿಗಟ್ಟಲೆ ಚಿನ್ನ, ತುಪಾಕಿಗಳು, ಮತ್ತಿತರ ಯುದ್ಧ ಸಾಮಗ್ರಿಗಳನ್ನು ಸಾಗಿಸಿಕೊಂಡು ಬಂದ. ಸಂಪನ್ಮೂಲಗಳನ್ನು ಬಳಸಿಕೊಂಡು ಇವನು 500 ಜನ ಸಿಪಾಯಿಗಳುಳ್ಳ ಸಣ್ಣ ಸೈನ್ಯವೊಂದನ್ನು ಕಟ್ಟಿ, ಅದಕ್ಕೆ ಫ್ರೆಂಚ್ ಮಾದರಿಯಲ್ಲಿ ತರಬೇತು ಕೊಟ್ಟ. ಅದೇ ವೇಳೆಗೆ ಯುದ್ಧದಲ್ಲಿ ನಾಲ್ಕು ಕೋಟಿ ರೂಪಾಯಿಗಳನ್ನು ಮತ್ತು 20,000 ಸೈನಿಕರನ್ನು ಕಳೆದುಕೊಂಡಿದ್ದ ನಂಜರಾಜ ತನ್ನ ಸೈನ್ಯಕ್ಕೆ ಬಾಕಿಯನ್ನು ಸಹ ಕೊಡುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಮೈಸೂರಿನ ಮೇಲೆ ಮರಾಠರು ಮತ್ತು ನಿಜಾಮ-ಇವರು ಪದೇ ಪದೇ ನಡೆಸುತ್ತಿದ್ದ ದಾಳಿಗಳಿಂದ ಸಂಪನ್ಮೂಲಗಳು ಬರಿದಾದುವು. ನಂಜರಾಜನ ಅರಮನೆಯ ಮುಂದೆ ಸೈನ್ಯ ಧರಣಿ ಕುಳಿತು, ಅರಮನೆಗೆ ಆಹಾರವಸ್ತುಗಳು ಮತ್ತು ನೀರುಸರಬರಾಜನ್ನು ತಡೆದಾಗ ಹೈದರ್ ತನಗೆ ಕಂದಾಯ ವಸೂಲು ಮಾಡಿಕೊಂಡು ಸಾಲಕ್ಕೆ ಜಮಾ ತೆಗೆದುಕೊಳ್ಳಲು ಕೆಲವು ತಾಲ್ಲೂಕುಗಳನ್ನು ಬಿಡುವುದಾದರೆ ಸೈನ್ಯದ ಬಾಕಿ ತೀರಿಸಲು ಸಿದ್ಧವೆಂದು ಮುಂದೆ ಬಂದ. ಮೈಸೂರು ರಾಜ್ಯದ ಬಹುತೇಕ ಭಾಗಕ್ಕೆ ಹೈದರ್ ಅಲಿ ವಾಸ್ತವ ಆಡಳಿತಗಾರನಾಗುವವರೆಗೆ ಇಂಥ ಪ್ರಸಂಗಗಳು ಮರುಕಳಿಸುತ್ತಿದ್ದವು. ಇದರಿಂದ ಜಿಗುಪ್ಸೆಗೊಂಡ ನಂಜರಾಜ ತನ್ನ ಸ್ಥಾನವನ್ನು ತೊರೆಯಲು ನಿರ್ಧರಿಸಿದ. ಆಗ ಹೈದರ್ ಮೈಸೂರಿನ ದಳವಾಯಿಯಾದ. ಆಡಳಿತದಲ್ಲಿ ತನಗೆ ಸಹಾಯ ಮಾಡಲು ಖಂಡೇರಾಯನನ್ನು ಕಾರ್ಯದರ್ಶಿಯಾಗಿ ನೇಮಿಸಿಕೊಂಡ.

   ಅಧಿಕಾರವನ್ನು ಪುನಃ ಪಡೆಯಲು ರಾಜಮನೆತನ ಕೊನೆಯ ಪ್ರಯತ್ನವಾಗಿ ಸಂಚು ನಡೆಸಿತು. ಅದರಲ್ಲಿ ಖಂಡೇರಾಯ ಕೇಂದ್ರವ್ಯಕ್ತಿಯಾಗಿದ್ದ. 1760 ಆಗಸ್ಟ್ನಲ್ಲಿ ನಡೆದ ಮರಾಠರ ದಾಳಿಯ ಸಂದರ್ಭವನ್ನು ಉಪಯೋಗಿಸಿಕೊಂಡು ಹೈದರನನ್ನು ಪದಚ್ಯುತ ಗೊಳಿಸುವುದೇ ಸಂಚಿನ ಹಂಚಿಕೆಯಾಗಿತ್ತು. ಆಗ ಹೈದರನ ಪಡೆಗಳು ಪಾಂಡಿಚೆರಿಯಲ್ಲಿರಲಿಲ್ಲ. ಖಂಡೇರಾಯನೇ ಸ್ವತಃ ನೇತೃತ್ವವಹಿಸಿ ದಾಳಿ ನಡೆಸಿದ. ಸಂದರ್ಭದಲ್ಲಿ ಹೈದರ್ ಓಡಿಹೋಗಿ ತಲೆತಪ್ಪಿಸಿಕೊಳ್ಳಬೇಕಾಯಿತು. ಇವನು ಒಂದು ವರ್ಷಕ್ಕೂ ಹೆಚ್ಚುಕಾಲ ಕಾಡುಮೇಡುಗಳಲ್ಲಿ ಅಲೆದಾಡಬೇಕಾಗಿಬಂದರೂ ತನ್ನ ಸಂಘಟನಾ ಚಾತುರ್ಯ, ವಿವೇಕಯುತ ಮುತ್ಸದ್ದಿತನ, ದೃಢನಿರ್ಧಾರ ಮತ್ತು ದಣಿವರಿಯದ ದುಡಿಮೆಯಿಂದಾಗಿ ತನ್ನ ಅಧಿಕಾರ ಸ್ಥಾನವನ್ನು ಪುನಃ ಪಡೆದ. ಅಲ್ಲಿಂದ ಮುಂದೆ ಇವನು ಮೈಸೂರು ರಾಜ್ಯದ ಅನಿರ್ಬಂಧಿತ ಅಧಿಪತಿಯಾದ.

   ಹೈದರ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಮೇಲೆ ರಾಜ್ಯದ ಸರಹದ್ದುಗಳನ್ನು ವಿಸ್ತರಿಸುವತ್ತ ಗಮನ ಹರಿಸಿದ. 1761ರಲ್ಲಿ ಇವನು ಆದೋನಿಯ ಬಸಲತ್ ಜಂಗ್ನೊಡನೆ ಕೂಡಿಕೊಂಡು ಶಿರಾವನ್ನು ವಶಪಡಿಸಿಕೊಂಡ. ತರುವಾಯ ಬಸಲತ್ ಜಂಗನಿಗೆ ಮೂರು ಲಕ್ಷ ರೂಪಾಯಿಗಳನ್ನು ಕೊಟ್ಟು ಶಿರಾವನ್ನು ಪಡೆದ. ದಕ್ಷಿಣದಲ್ಲಿ ಸಮಗ್ರ ಮುಗಲ್ ಪ್ರಾಂತದ ರಾಜಧಾನಿಯಾದ ಶಿರಾ ವಶವಾದ ಕೂಡಲೆ ಅದರ ಸುತ್ತುಮುತ್ತಲ ವಿಸ್ತಾರ ಪ್ರದೇಶವನ್ನು ಹೈದರ್ ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಬಹುಬೇಗ ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಪೆನುಕೊಂಡೆ, ಮಡಕಶಿರಾ, ನಂದಿದುರ್ಗ ಮತ್ತು ಹರಪನಹಳ್ಳಿಗಳನ್ನು ಹಿಡಿದ. ಚಿತ್ರದುರ್ಗವನ್ನು ಜಯಿಸುವಲ್ಲಿ ಸ್ವಲ್ಪಮಟ್ಟಿನ ತೊಂದರೆ ಎದುರಿಸಿದರೂ ಕೊನೆಗೆ ವಶಪಡಿಸಿಕೊಂಡ. ಆದರೆ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಸಮೃದ್ಧವಾಗಿದ್ದ ಮತ್ತು ಪಶ್ಚಿಮತೀರದವರೆಗೂ ಹಬ್ಬಿದ್ದ ವಿಸ್ತಾರ ಪ್ರದೇಶವನ್ನು ಹೊಂದಿದ್ದಂಥ ಬಿದನೂರನ್ನು ಗೆದ್ದಿದ್ದು ಕಾಲದಲ್ಲಿ ಇವನು ಗಳಿಸಿದ ವಿಜಯಗಳಲ್ಲೆಲ್ಲ ಅತಿಮುಖ್ಯವಾದುದು. ಬಿದನೂರು ರಾಜಮನೆತನದಲ್ಲಿ ಉಂಟಾಗಿದ್ದ ಅಂತಃಕಲಹ, ಅವರ ವಿಷಯಗಳಲ್ಲಿ ಪ್ರವೇಶಿಸಲು ಹೈದರನಿಗೆ ಒಳ್ಳೆಯ ಅವಕಾಶ ಕಲ್ಪಿಸಿತು. ಇವನು ಬಿದನೂರನ್ನು ತಲುಪಿದಾಗ ಕೋಟೆಯನ್ನು ರಕ್ಷಿಸುತ್ತಿದ್ದ ರಾಣಿವೀರಮ್ಮಾಜಿ ಬಳ್ಳಾರಿದುರ್ಗಕ್ಕೆ ಪಲಾಯನ ಮಾಡಿದಳು. ಆಗ ಸ್ಥಳವನ್ನು ಹೆಚ್ಚು ಕಷ್ಟವಿಲ್ಲದೆ ವಶಪಡಿಸಿಕೊಳ್ಳಲಾಯಿತು. ಹೈದರ್ ಅಲಿಗೆ ಅಲ್ಲಿ ಅಪಾರ ಐಶ್ವರ್ಯ ಸಿಕ್ಕಿತು. ಹೊನ್ನಾವರದಿಂದ ಮಂಗಳೂರಿನವರೆಗಿನ ಪಶ್ಚಿಮ ತೀರಪ್ರದೇಶ ಇವನ ಸ್ವಾಧೀನವಾಯಿತು. ಇವನು ಸುಂಡವನ್ನು ಸಹ ವಶಪಡಿಸಿಕೊಂಡು ತಾನು ಅಧಿಕಾರಕ್ಕೆ ಬಂದ ಮೂರು ವರ್ಷಗಳೊಳಗೆ ರಾಜ್ಯವನ್ನು ಗೋವದವರೆಗೆ ವಿಸ್ತರಿಸಿದ.

   ಮೈಸೂರು ರಾಜ್ಯದ ಶೀಘ್ರ ವಿಸ್ತರಣೆಯನ್ನು ಕಂಡು ನೆರೆಹೊರೆಯ ವರಾದ ಮರಾಠರು, ನಿಜಾಮ ಮತ್ತು ಇಂಗ್ಲಿಷರು ಅಸೂಯೆಗೊಂಡರು. ಮೂರನೆಯ ಪಾಣಿಪತ್ ಯುದ್ಧದ ಸೋಲಿನ ಅನಂತರ ಮರಾಠರು ಒಂದನೆಯ ಮಾಧವರಾವ್ ಸಮರ್ಥ ನಾಯಕತ್ವದಲ್ಲಿ ತಮ್ಮ ಪ್ರಾಬಲ್ಯವನ್ನು ಮರಳಿಗಳಿಸುತ್ತಿದ್ದರು. ಅವರು ಉತ್ತರದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಮೈಸೂರು ಪ್ರದೇಶದ ಮೇಲೆ ಮತ್ತೆ ಮತ್ತೆ ದಾಳಿ ಮಾಡತೊಡಗಿದರು. ಆದ್ದರಿಂದ 1762-78 ತನಕ ಮರಾಠರ ದಾಳಿಗಳ ವಿರುದ್ಧ ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳುವುದೇ ಹೈದರನ ಪ್ರಧಾನ ಕಾರ್ಯನೀತಿಯಾಗಿದ್ದಿತು. 1764 ಮೊದಲ ಭಾಗದಲ್ಲಿ ಮಾಧವರಾಯ ಮೈಸೂರಿನ ಮೇಲೆ ದಾಳಿ ಮಾಡಿ ಸುಮಾರು ಒಂದು ವರ್ಷಕಾಲ ಕಾರ್ಯಾಚರಣೆ ನಡೆಸಿದ. ಹೈದರ್ ಅಲಿ ಮಾಧವರಾಯನಿಗೆ ಸಮಬಲನಾಗಿಲ್ಲದಿದ್ದು ದರಿಂದ ನೇರ ಯುದ್ಧಕ್ಕಿಳಿಯದೆ ಮರಾಠರನ್ನು ರಾತ್ರಿದಾಳಿಗಳಿಂದ ಚಕಿತಗೊಳಿಸುವ, ಅವರ ಅಗತ್ಯ ಸಾಮಗ್ರಿಗಳ ಮತ್ತು ಆಹಾರವಸ್ತುಗಳ ಪೂರೈಕೆಯನ್ನು ಕಡಿದುಹಾಕುವ ಹಾಗೂ ಶಾಂತಿಯುತ ಸಂಧಾನಗಳಿಗಾಗಿ ಯುಕ್ತ ಅವಕಾಶ ಕಲ್ಪಿಸಿಕೊಳ್ಳುವ ತಂತ್ರವನ್ನು ಅನುಸರಿಸಿದ. ಕೊನೆಗೆ 28 ಲಕ್ಷರೂಪಾಯಿಗಳ ಕಪ್ಪಕೊಡುವ ಮತ್ತು ಸರಹದ್ದು ಪ್ರದೇಶದ ಕೆಲವು ಸಣ್ಣ ಕೋಟೆಗಳನ್ನು ಬಿಟ್ಟುಕೊಡುವ ಮೂಲಕ ಮಾಧವರಾವ್ನನ್ನು ಸಂತುಷ್ಟಗೊಳಿಸಿದ.

      ಮರಾಠರೊಡನೆ ಶಾಂತಿ ಒಪ್ಪಂದ ಮಾಡಿಕೊಂಡು ಹೈದರ್ ಮಲಬಾರಿನ ದಿಗ್ವಿಜಯ ಕೈಗೊಂಡ. ಇವನು ಬಿದನೂರು ರಾಜ್ಯವನ್ನು ಗೆದ್ದದ್ದು ಮಲಬಾರನ್ನು ಸ್ವಾಧೀನಪಡಿಸಿಕೊಳ್ಳಲು ಅನುಕೂಲ ವಾಯಿತು. ವೇಳೆಗಾಗಲೇ ಹೈದರನು ಅಗತ್ಯವಾಗಿದ್ದ ನೌಕಾಪಡೆಯನ್ನು ರಚಿಸಿಕೊಂಡಿದ್ದರಿಂದ ಇಂಗ್ಲಿಷರು ಮತ್ತು ಪೋರ್ಚುಗೀಸರಿಂದ ತನ್ನ ತೀರಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. 1765 ಹೊತ್ತಿಗೆ ಇವನ ಬಳಿ 30 ಯುದ್ಧನೌಕೆಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಸಾಗಣೆ ನೌಕೆಗಳಿದ್ದವು. ಇವನ ನೌಕೆಗಳನ್ನು ನೋಡಿಕೊಳ್ಳಲು ಮಾಪಿಳ್ಳೆಗಳ ಉತ್ತಮ ನಾವಿಕ ತಂಡ ದೊರೆತಿತ್ತು. ಅನಂತರ ಡಚ್ಚರ ನೆರವಿನಿಂದ 20 ರಿಂದ 40 ಫಿರಂಗಿಗಳನ್ನು ಸಾಗಿಸುವ ಮುಕ್ಕೂವೆಯ ಹಡಗುಗಳು ಮತ್ತು ಇತರ ಅನೇಕ ಸಣ್ಣ ಹಡಗುಗಳಿಂದ ಹೈದರ್ ತನ್ನ ನೌಕಾಪಡೆಯನ್ನು ಬಲಗೊಳಿಸಿದ. ಇದು ಅನೇಕ ಯುದ್ಧಾಕಾಂಕ್ಷಿ ನಾಯರ್ ಅಧಿಪತಿಗಳನ್ನು ಸದೆಬಡಿದು ಮಲಬಾರನ್ನು ವಶಪಡಿಸಿ ಕೊಳ್ಳಲು ಬಹುಮುಖ್ಯ ಸಾಧನವಾಗಿ ಪರಿಣಮಿಸಿತು. ಕೊಳತ್ತಿರಿ ರಾಜನು ತನ್ನ ಶತ್ರುಗಳ ವಿರುದ್ಧ ಹೈದರನ ಸಹಾಯವನ್ನು ಕೋರಿದ. ನೆಪವನ್ನು ಮುಂದೆ ಮಾಡಿಕೊಂಡ ಹೈದರ್ ಅಲಿ 40,000 ಸೈನ್ಯದೊಂದಿಗೆ ಮಲಬಾರನ್ನು ಪ್ರವೇಶಿಸಿ 1766 ಮಾರ್ಚ್ ಹೊತ್ತಿಗೆ ತಿರುವಾಂಕೂರು ರಾಜ್ಯವೊಂದನ್ನುಳಿದು ಮಂಗಳೂರಿನಿಂದ ಕೊಚಿನ್ವರೆಗೆ ಸಮಗ್ರ ಮಲಬಾರನ್ನು ಸ್ವಾಧೀನ ಪಡಿಸಿಕೊಂಡ. ಹೈದರ್ ರಾಜ್ಯದ ಮೇಲೆಯೂ ದಂಡೆತ್ತಿ ಹೋಗಬಹುದಿತ್ತು. ಆದರೆ ಒಂದನೆಯ ಮೈಸೂರು ಯುದ್ಧಕ್ಕೆ ಕಾರಣವಾದ ಹೊಸ ಘಟನೆಗಳು ಇವನ ರಾಜ್ಯದ ಉತ್ತರದ ಗಡಿಗಳಲ್ಲಿ ಸಂಭವಿಸಿದ್ದರಿಂದ ಇವನು ವಿಜಯವನ್ನು ಮುಂದುವರಿಸಲಾಗಲಿಲ್ಲ.


ಟೀಪೂ ಸುಲ್ತಾನ್ 1753-1799. ಮೈಸೂರಿನ ಸುಲ್ತಾನ (1782-1799).

  ಈತನು 1753 ನವೆಂಬರ್ 20, ಶುಕ್ರವಾರ ದೇವನಹಳ್ಳಿಯಲ್ಲಿ ಹುಟ್ಟಿದ. ತಂದೆ ಹೈದರ್ ಅಲೀ, ತಾಯಿ ಫಾತಿಮಾ ಬೇಗಮ್. ಬಹುಕಾಲ ಮಕ್ಕಳಿಲ್ಲದ ಇವರು ಹಜರತ್ ಟೀಪೂ ಮಸ್ತಾನ್ ಎಂಬ ಮುಸ್ಲಿಂ ಸಂತನ ಸೇವೆ ಮಾಡಿ ಇವನನ್ನು ಪಡೆದರೆಂದೂ ಆದ್ದರಿಂದ ಇವನಿಗೆ ಅಬುಲ್ ಪಹತ್ ಟೀಪೂ ಸಾಹಿಬ್ ಎಂದೇ ನಾಮಕರಣ ಮಾಡಿದರೆಂದೂ ಹೇಳಲಾಗಿದೆ.

ತಂದೆ ಹೈದರ್ ಅಲೀ ಅನಕ್ಷರಸ್ಥನಾಗಿದ್ದರೂ ಮಗನಿಗೆ ಸೂಕ್ತವಾದ ಶಿಕ್ಷಣ ಕೊಡಿಸಿದ. ಟೀಪೂವಿಗೆ ಅರಬ್ಬಿ, ಪಾರ್ಸಿ, ಉರ್ದು, ಕನ್ನಡ, ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಗಳ ಪರಿಚಯವಿತ್ತು. ಕುದುರೆ ಸವಾರಿ ಮತ್ತು ಸಮರ ವಿದ್ಯೆಯಲ್ಲೂ ಇವನು ನಿಷ್ಣಾತನಾಗಿದ್ದ. ಹದಿನೈದನೆಯ ವಯಸ್ಸಿನಿಂದಲೇ ಇವನು ತಂದೆಯೊಂದಿಗೆ ಅನೇಕ ಯುದ್ಧಗಳಲ್ಲಿ ಭಾಗವಹಿಸತೊಡಗಿದ. ಇಂಗ್ಲಿಷರೊಡನೆ ನಡೆದ ಒಂದನೆಯ ಮೈಸೂರು ಯುದ್ಧದಲ್ಲೂ (1767-69) ಮರಾಠರೊಡನೆ ನಡೆದ ಯುದ್ಧದಲ್ಲೂ (1769-72) ಭಾಗವಹಿಸಿ ತನ್ನ ಸಾಮರ್ಥ್ಯವನ್ನು ತೋರಿಸಿದ. 1780ರಲ್ಲಿ ಆರಂಭವಾದ ಎರಡನೆಯ ಆಂಗ್ಲೊ-ಮೈಸೂರು ಯುದ್ಧದಲ್ಲಿ ಬೇಲಿಯನ್ನು ಪರಾಭವಗೊಳಿಸುವುದರಲ್ಲಿ ತಂದೆಗೆ ಸಹಾಯ ನೀಡಿದ. 1782ರಲ್ಲಿ ತಂಜಾವೂರಿನಲ್ಲಿ ನಡೆದ ಕದನದಲ್ಲಿ ಬ್ರೇತ್ವೇಟ್ ಇವನಿಂದ ಭಾರಿ ಸೋಲನ್ನನುಭವಿಸಬೇಕಾಯಿತು. ಮಲಬಾರ್ ಪ್ರದೇಶದ ಮೇಲೆ ಇಂಗ್ಲಿಷರು ಆಕ್ರಮಣ ನಡೆಸಿದ್ದರಿಂದ ಇವನು ಅನಂತರ ಅಲ್ಲಿಗೆ ಹೋಗಬೇಕಾಯಿತು. ಅಲ್ಲಿ ಇವನು ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ತಂದೆ ಹೈದರ್ ತೀರಿಕೊಂಡನೆಂಬ (ಡಿಸೆಂಬರ್ 7, 1782) ಸುದ್ದಿ ತಲುಪಿತು. ಪೆನ್ನಾರ್ ನದಿಯ ದಂಡೆಯಲ್ಲಿದ್ದ ಹೈದರನ ಶಿಬಿರಕ್ಕೆ ಇವನು ಕೂಡಲೇ ಪ್ರಯಾಣ ಮಾಡಿ ಅಲ್ಲಿಯ ಜವಾಬ್ದಾರಿಗಳನ್ನು ವಹಿಸಿಕೊಂಡ. ಇವನಿಗೆ 88,000 ಸೈನಿಕರಿದ್ದ ಸೈನ್ಯವನ್ನೂ ಮೂರು ಕೋಟಿ ರೂಪಾಯಿಗಳ ಖಜಾನೆಯನ್ನೂ ಹೈದರನ ಆಪ್ತನಾಗಿದ್ದ ಪೂರ್ಣಯ್ಯ ಒಪ್ಪಿಸಿ, ಹೈದರನ ಅಂತಿಮ ಸಂದೇಶವನ್ನು ತಿಳಿಸಿ, ಇವನಿಗೆ ಸರ್ವಾಧಿಕಾರಿಯ ಪಟ್ಟಗಟ್ಟಿದ.

ಟೀಪೂ ಇಂಗ್ಲಿಷರೊಡನೆ ಯುದ್ಧವನ್ನು ಮುಂದುವರಿಸಿದ. ಜನರಲ್ ಸ್ಟೂಯರ್ಟನ ಸೇನೆ ಮುಂದುವರಿಯುತ್ತಿದ್ದ ಸುದ್ದಿಯನ್ನು ತಿಳಿದು ಅವನ ಮೇಲೆ ಕದನ ನಡೆಸಿ ಅವನನ್ನು ವಾಂಡಿವಾಷ್ ಬಳಿ ಸೋಲಿಸಿದ. ಇವನು ಕದನವನ್ನು ಮುಂದುವರಿಸಲಾಗಲಿಲ್ಲ. ಪಶ್ಚಿಮ ಕರಾವಳಿಯಲ್ಲಿ ಇಂಗ್ಲಿಷರು ಆಕ್ರಮಣ ಮುಂದುವರಿಸುತ್ತಿದ್ದ ಸುದ್ಧಿ ತಿಳಿದು ಅಲ್ಲಿಗೆ ಹೋಗಿ ಹಲವು ಪ್ರದೇಶಗಳನ್ನು ಮತ್ತೆ ಗೆದ್ದು ಇಂಗ್ಲಿಷರ ವಶದಲ್ಲಿದ್ದ ಮಂಗಳೂರು ಬಂದರನ್ನು ಬಿಡಿಸಿಕೊಂಡ. ಕೊನೆಗೆ ಇಂಗ್ಲಿಷರೂ ಟಿಪ್ಪುವೂ ಪರಸ್ಪರ ಹಿಡಿದುಕೊಂಡಿದ್ದ ಪ್ರದೇಶಗಳನ್ನು ಹಿಂದಿರುಗಿಸತಕ್ಕದ್ದೆಂದು 1784 ಮಾರ್ಚ್ 11 ರಂದು ಮಂಗಳೂರು ಒಪ್ಪಂದವಾಯಿತು.

ಟೀಪೂ ಅಧಿಕಾರಕ್ಕೆ ಬಂದಕೂಡಲೇ ತನ್ನದು ದೈವದತ್ತ ಸರ್ಕಾರ ಎಂದು ಘೋಷಿಸಿ, ಬಾದಷಹನೆಂಬ ಬಿರುದು ತಳೆದು, ಮೈಸೂರು ದೊರೆಗಳಿಗೆ ಮೀಸಲಾಗಿದ್ದ 21 ತೋಪುಗಳ ಮರ್ಯಾದೆಯನ್ನೂ ನಜರನ್ನೂ ಸ್ವೀಕರಿಸಿದ. ತಾನು ಸ್ವತಂತ್ರ ಸುಲ್ತಾನನೆಂದು ಸಾರಿಕೊಂಡ. ಇದನ್ನು ವಿರೋಧಿಸಿ ಪಿತೂರಿ ಮಾಡಿದ ಅಂಚೆ ಶಾಮಯ್ಯನನ್ನೂ ಅನಂತರ ತೋಷಿಖಾನೆ ಕೃಷ್ಣರಾಯನನ್ನೂ ಕೊಲ್ಲಿಸಿದ. ತಿರುಮಲರಾಯ ಬಂಧುಗಳ ಮೂಲಕ ಮಹಾರಾಣಿ ಲಕ್ಷ್ಮಮ್ಮಣ್ಣಿ ಇಂಗ್ಲಿಷರೊಡನೆ ಸಂಧಾನ ನಡೆಸುತ್ತಿರುವಳೆಂದು ಕೇಳಿ ಮೈಸೂರು ಅರಮನೆಯಲ್ಲಿ ಇದ್ದ ರಾಣಿಯನ್ನೂ ರಾಜಕುಮಾರ ಕೃಷ್ಣರಾಜನನ್ನೂ ಶ್ರೀರಂಗಪಟ್ಟಣದಲ್ಲಿ ಇರಿಸಿದ.

ಟೀಪೂ ಇಂಗ್ಲಿಷರೊಡನೆ ಯುದ್ಧ ನಡೆಸಬೇಕಾಗಿ ಬಂದಿದ್ದ ಪರಿಸ್ಥಿತಿಯ ದುರುಪಯೋಗವನ್ನು ಪಡೆದುಕೊಂಡ ಅನೇಕ ಪಾಳೆಯಗಾರರು ಸ್ವತಂತ್ರರಾಗಲು ಪ್ರಯತ್ನ ನಡೆಸಿದರು. ಟೀಪೂ ಅವರನ್ನು ಹತ್ತಿಕ್ಕುವುದು ಅವಶ್ಯವಾಯಿತು. ಮಂಜರಾಬಾದಿನ ಬಳಿಯ ಬಲಮ್ ರಾಜನನ್ನೂ ಕೊಡಗಿನಲ್ಲಿ ಎದ್ದಿದ್ದ ಪ್ರತಿಭಟನೆಯನ್ನೂ ಅಡಗಿಸುವುದು ಕಷ್ಟವಾಗಲಿಲ್ಲ. ಆದರೆ ಕಪ್ಪ ಕೊಡದಿದ್ದ ನರಗುಂದದ ದೇಸಾಯಿಯನ್ನು ಮಣಿಸುವುದಕ್ಕೆ ಯತ್ನಿಸಿದಾಗ ಅವನಿಗೆ ಬೆಂಬಲವಾಗಿದ್ದ ಮರಾಠರನ್ನು ಕೆಣಕಿದಂತಾಯಿತು. ಮರಾಠರಿಂದ ಹೈದರ್ ಗೆದ್ದುಕೊಂಡಿದ್ದ ಕೃಷ್ಣಾನದಿಯ ದಕ್ಷಿಣದ ಭಾಗವನ್ನು ಮತ್ತೆ ವಶಪಡಿಸಿಕೊಳ್ಳಲು ಸಮಯ ಕಾಯುತ್ತಿದ್ದ ನಾನಾ ಫಡ್ನವೀಸ್ ಹೈದರಾಬಾದಿನ ನಿಜಾಮನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡ. ಇವರ ಸೈನ್ಯಗಳು 1786 ಮೇ 1ರಂದು ಬಾದಾಮಿ ಮತ್ತು ಇತರ ಗಡಿಪ್ರದೇಶಗಳನ್ನು ಆಕ್ರಮಿಸಿದುವು. ಟೀಪೂ ಸುಲ್ತಾನ ಕೂಡಲೇ ಭಾರಿ ಸೇನೆಯೊಂದಿಗೆ ಅತ್ತ ಸಾಗಿ ಆದೋನಿಯನ್ನು ಆಕ್ರಮಿಸಿಕೊಂಡು ತುಂಗಭದ್ರೆಯನ್ನು ದಾಟಿ ಮುಂದುವರಿದ. ಒಂಬತ್ತು ತಿಂಗಳುಗಳ ಕಾಲ ನಡೆಸಿದ ಕದನದಲ್ಲಿ ಇವನದೇ ಮೇಲುಗೈ ಆಗಿತ್ತು. ಆದರೆ ಮಂಗಳೂರು ಕೌಲಿನಿಂದ ತಮಗೆ ಅವಮಾನವಾಯಿತೆಂದು ಭಾವಿಸಿದ್ದ ಇಂಗ್ಲಿಷರು ಟಿಪ್ಪುವಿನೊಂದಿಗೆ ಯುದ್ಧಕ್ಕಾಗಿ ಕಾಲುಕೆರೆಯುತ್ತಿದ್ದರು. ಸಮಯದಲ್ಲಿ ಮರಾಠರೊಂದಿಗೂ ನಿಜಾಮನೊಂದಿಗೂ ವಿರಸ ಬೆಳೆಸುವುದು ತರವಲ್ಲವೆಂದು ಟೀಪೂ ಭಾವಿಸಿದ. ಇಂಗ್ಲಿಷರನ್ನು ಸೋಲಿಸಿ ಓಡಿಸಲು ತಾವೆಲ್ಲ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಇವನು ಅವರೊಂದಿಗೆ ಒಪ್ಪಂದ ಮಾಡಿಕೊಂಡು ನರಗುಂದ, ಕಿತ್ತೂರು ಮತ್ತು ಬಾದಾಮಿಯನ್ನು ಒಪ್ಪಿಸಿದ.

  ಆದರೆ ಟಿಪ್ಪುವಿನ ಬಲವನ್ನು ಮುರಿಯಬೇಕೆಂದು ಇಂಗ್ಲಿಷರು ಸಮಯ ಕಾಯುತ್ತಲೇ ಇದ್ದರು


ಮಾಹಿತಿ ಮೂಲ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources