18ನೆಯ ಶತಮಾನದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ.

ಮಾಹಿತಿ ಮೂಲ: ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ, ಸಂಪುಟ ೧೭, ಭಾಗ ೨, ಕನ್ನಡ ಆವೃತ್ತಿ.


   ಕರ್ನಾಟಕವು ಈ ಅವಧಿಯಲ್ಲಿ ರಾಜಕೀಯವಾದ ಪರಿವರ್ತನೆಯ ಸುಳಿಯಲ್ಲಿ ಸಿಕ್ಕಿಕೊಂಡಿತು. ವಿಜಯನಗರ ಸಾಮ್ರಾಜ್ಯವು ಒಧಗಿಸಿದ್ದ ಏಕತೆಯು, ಹೆಸರಿಗೆ ಕೂಡ ಉಳಿದುಕೊಳ್ಳದೆ, ಹರಿದು ಹಂಚಿಹೋಗಿತ್ತು. ಕರ್ನಾಟಕದ ಉತ್ತರಭಾಗವು ಮರಾಠರು ಮತ್ತು ನಿಜಾಮರ ವಶವಾಗಿತ್ತು. ದಕ್ಷಿಣ ಮೈಸೂರು ಮತ್ತು ಕೆಳದಿಯ ಸಾಮಂತರು ಪ್ರಭುತ್ವಕ್ಕಾಗಿ ಹೊಡೆದಾಡುತ್ತಿದ್ದರು. ಇಕ್ಕೇರಿಯ ಅರಸರು ವೀರಶೈವ ಮತವನ್ನು ಅವಲಂಬಿಸಿದ್ದರೆ, ಮೈಸೂರಿನ ಒಡೆಯರು, ಸಾಂದರ್ಭಿಕವಾಗಿ ಬೇರೆ ಬೇರೆ ಧರ್ಮಗಳನ್ನು ಪೋಷಿಸುತ್ತಿದ್ದರೂ ವಿಶೇಷವಾಗಿ ಬ್ರಾಹ್ಮಣ ಕವಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಇದರಿಂದ ಅದುವರೆಗೆ, ಜೈನ, ವೀರಶೈವ ಕವಿಗಳ ವಶದಲ್ಲಿದ್ದ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬ್ರಾಹ್ಮಣರು ಆಕ್ರಮಿಸಿಕೊಂಡು ಅವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಹಿತ್ಯ ಕೃಷಿಯನ್ನು ಬೆಳೆಸಿದರು. ಸ್ಥಳೀಯರಾದ ಮಾಂಡಲಿಕರು, ಪಾಳೆಯಗಾರರು, ಸ್ಥಳೇತಿಹಾಸ, ಐತಿಹ್ಯಗಳ ರಚನೆಗೆ ಬೆಂಬಲವಿತ್ತರು. ಕೆಳದಿಯ ಅರಸೊತ್ತಿಗೆಯು ಹೈದರನ ವಶವಾದ ಮೇಲೆ ವೀರಶೈವರು ಮತ್ತು ಬ್ರಾಹ್ಮಣರು ರಾಜಾಶ್ರಯ ಕಳೆದುಕೊಂಡರು. ಹೈದರ್ ಮತ್ತು ಟಿಪ್ಪು ಮೈಸೂರು ಅರಸೊತ್ತಿಗೆಯನ್ನು ತಮ್ಮ ಕೈಗೆ ತೆಗೆದುಕೊಂಡ ಮೇಲೆ, ದಕ್ಷಿಣ ಭಾಗದಲ್ಲಿ ಕನ್ನಡ ಸಾಹಿತ್ಯ ಹತ್ತೊಂಬತ್ತನೆಯ ಶತಮಾನವರೆವಿಗೆ ಅವನತಿಯ ಮಾರ್ಗಹಿಡಿದು ಸಾಗಿತು.

   ಈ ಕಾಲದ ಜೈನ ಕೃತಿ ರಚನಕಾರರು ವಿಶೇಷವಾಗಿ ತಮ್ಮ ಮತ ಪ್ರತಿಪಾದನೆ ಹಾಗೂ ವೈಭವೀಕರಣದಲ್ಲಿ ತೊಡಗಿದರು. ರಾಮ ಮತ್ತು ಸುರಾಲ ಎಂಬ ಕವಿಗಳು ಪದ್ಮಾವತಿಯ ಕಥೆಯನ್ನು ಯಕ್ಷಗಾನ ಮತ್ತು ಸಾಂಗತ್ಯಗಳಲ್ಲಿ ರಚಿಸಿದರು. ಪಾಯಣ್ಣನೆಂಬ ಕವಿ (1748) 'ಅಹಿಂಸಾಚರಿತೆ' ಮತ್ತು ಜೈನರಾಮಾಯಣ ಕಥೆಗಳನ್ನು ಬರೆದನು. ರಾಮಾಯಣ ಕೃತಿಯು, ಚಂದ್ರಸಾಗರ ವರ್ಣಿ (1810) ಮತ್ತು ಪದ್ಮನಾಭ ಕವಿಗಳ ಜೈನರಾಮಾಯಣ ಕಥೆಗಳನ್ನು ಅನುಸರಿಸಿದೆ. ಅನಂತನೆಂಬ ಕವಿಯು 'ಗೊಮ್ಮಟ ಚರಿತ್ರೆ'ಯನ್ನು ಬರೆದಿದ್ದಾನೆ. ಬ್ರಾಹ್ಮಣಾಂಕನು 'ಜಿನಭಾರತ'ವನ್ನೂ ಚಂದ್ರಸಾಗರನು 'ಪರಶುರಾಮ ಭಾರತ' ವನ್ನೂ ರಚಿಸಿದರು. ಪದ್ಮರಾಜ ಮತ್ತು ಅವನ ತಮ್ಮನಾದ ದೇವಚಂದ್ರ (1770-1841) ಎಂಬಿಬ್ಬರು ಕವಿಗಳು ಮಾತ್ರ ಈ ಕಾಲದ ಜೈನಕವಿಗಳಲ್ಲಿ ಸಮರ್ಥ ಕವಿಗಳಾಗಿ ಕಾಣುತ್ತಾರೆ. ಪದ್ಮರಾಜನು ಸಾಂಗತ್ಯ ಛಂದಸ್ಸಿನಲ್ಲಿ ಪೂಜ್ಯಪಾದರ ಕಥೆಯನ್ನು ಬರೆದಿದ್ದಾನೆ. ದೇವಚಂದ್ರನು ಕರ್ನಲ್ ಮೆಕೆಂಜಿಯೊಂದಿಗೆ ಕೂಡಿಕೊಂಡು ಹಲವು ಸ್ಥಳೀಯ ಐತಿಹ್ಯಗಳನ್ನು ತನ್ನ ರಾಜಾವಳೀ ಕಥೆಯಲ್ಲಿ ಸಂಗ್ರಹಿಸಿದ್ದಾನೆ. ಸ್ಥಳೀಯ ರಾಜವಂಶಗಳು, ಜಾತಿ ವಿಂಗಡಣೆಗಳ ಚರಿತ್ರೆಯು ಇದರಲ್ಲಿದೆ. ಅವನು ಬರೆದ 'ರಾಮಕಥಾವತಾರವು' ರಾಮಾಯಣ ಕಥೆಯನ್ನು ಒಳಗೊಂಡಿದೆ. ಶತಕಗಳು, ಯಕ್ಷಗಾನಗಳು, ವ್ಯಾಖ್ಯಾನಗ್ರಂಥಗಳು, ಮತಬೋಧ ವಿಚಾರ ಗ್ರಂಥಗಳು ಹೀಗೆ ಹಲವು ಬಗೆಯ ಕೃತಿ ರಚನೆ ಮಾಡಿದ ಇವನು ಪಂಡಿತನೂ ಮಹತ್ವದ ಕವಿಯೂ ಆಗಿದ್ದಾನೆ. ಚಂದ್ರಸಾಗರವರ್ಣಿಯು ಬರೆದ ಕಾವ್ಯಗಳೆಂದರೆ, 'ಕದಂಬ ಪುರಾಣ' ಮತ್ತು 'ಬಿಜ್ಜಳರಾಯ ಪುರಾಣ' ಎಂಬ ಆರೆ-ಐತಿಹಾಸಿಕ ಕೃತಿಗಳು. ಅವನ 'ಮುಲ್ಲಾಶಾಸ್ತ್ರ' ಎಂಬ ಕೃತಿಯಲ್ಲಿ ಜೈನ ಸಿದ್ಧಾಂತ, ಉಪದೇಶಗಳಲ್ಲಿ ಇಸ್ಲಾಮ್ ತತ್ವಬೋಧೆಗಳನ್ನು ಹುಡುಕಿ ತೆಗೆಯುವ ಪ್ರಯತ್ನ ನಡೆದಿದೆ.

ವೀರಶೈವ ಗ್ರಂಥಕರ್ತರುಗಳಲ್ಲಿ, ಕಾಡಸಿದ್ಧ, ಯೋಗಾನಂದ, ನಿರಂಜನಾರ್ಯ, ನಿಜಲಿಂಗಾರಾಧ್ಯ ಮತ್ತು ಶಿವಯೋಗೀಶ್ವರರು ಶತಕಗಳನ್ನು ರಚಿಸಿದ್ದಾರೆ. ನಿರ್ವಾಣಮಂತ್ರಿ, ವಿರಕ್ತ ಷಡಕ್ಷರ ಮತ್ತು ಮಹೂಮೂರ್ತಿಯರ ಕೃತಿಗಳಲ್ಲಿ ವೀರಶೈವ ವಿಧಿ ಕ್ರಮಗಳನ್ನು ವಿವರಿಸಲಾಗಿದೆ. ನಿಶ್ಚಿಂತಾತ್ಮ ಮತ್ತು ವಿರುಪಣ್ಣಯ್ಯ ಎಂಬ ಕವಿಗಳು ವೀರಭದ್ರನ ಕಥೆಗಳನ್ನು ಕೊಟ್ಟಿದ್ದಾರೆ. ಪುರಾಣಗಳ ರಚನೆಯಲ್ಲಿ ಮುಖ್ಯವಾಗಿ ನಿರಂಜನ ಮೂರ್ತಿಯ 'ಕಂಚಿಪುರಾಣ' ಮತ್ತು ಮುರಿಗೆ ಸ್ವಾಮಿಯ 'ಹಾಲಾಸ್ಯ ಪುರಾಣ'ಗಳನ್ನು ಇಲ್ಲಿ ಉಲ್ಲೇಖಿಸಬಹುದು. ನಂದಿನಾಥನ 'ವಲ್ಲಿ ಕಂಠಾಭರಣ', ನಂಜಯ್ಯನ 'ಕಪೋತ ವಾಕ್ಯ' ಸಾಂಬಯ್ಯನ ಕರಿಬಂಟ ಮತ್ತು ಸಾರಂಗಧರರ ಕಥೆಗಳು ಗಂಗನ 'ಗಿರಿಜಾಕಲ್ಯಾಣ' ನೂರೊಂದನ 'ಸೌಂದರ್ಯ ಕಾವ್ಯ' - ಇವೆಲ್ಲವೂ ಯಕ್ಷಗಾನ ಕೃತಿಗಳು.

ಭಾರತ ಕಥೆಯನ್ನು ಅಳವಡಿಸಿಕೊಂಡ ಬ್ರಾಹ್ಮಣ ಕವಿಗಳಲ್ಲಿ ಲಕ್ಷಕವಿ (1723) ಮತ್ತು ತುರಂಗಭಾರತದ ಪರಮದೇವ (1777) ಸೇರಿದ್ದಾರೆ. ಲಕ್ಷ್ಮ ಕವಿಯು ತನ್ನ ಭಾರತವನ್ನು ವಾರ್ಧಕ್ಯ ಷಟ್ಪದಿಯಲ್ಲಿ ರಚಿಸಿದ್ದಾನೆ. ಇದರಲ್ಲಿ ಕೃಷ್ಣ-ಅರ್ಜುನರ ಸಂಬಂಧದ ಬಗ್ಗೆಯೇ ವಸ್ತುವನ್ನು ಕೇಂದ್ರೀಕರಿಸಲಾಗಿದೆ. ಅವನ ಮತ್ತೊಂದು ಕೃತಿ 'ರುಕ್ರಾಂಗದ ಚರಿತ್ರೆ' ತಿಮಾಮಾತ್ಯನ ಆನಂದರಾಮಾಯಣ, ಸುಬ್ರಹ್ಮಣ್ಯನ ಹನುಮದ್ರಾಮಾಯಣ, ಹರಿದಾಸನ ಮೂಲ ಬಾಲರಾಮಾಯಣ, ವರದ ವಿಠಲನ ರಾಮಾಯಣ ಮತ್ತು (ಹೈದರಾಲಿಯ ಬಳಿ ಅಮಾತ್ಯನಾಗಿದ್ದ) ವೆಂಕಾಮಾತ್ಯನ ರಾಮಾಯಣ ಇವು ಈ ಅವಧಿಯಲ್ಲಿ ಬಂದಿರುವ ರಾಮಾಯಣ ಕೃತಿಗಳು. ಪುರಾಣಗಳಲ್ಲಿ ದೇಪಕವಿಯ 'ದೇವಾಂಗ ಪುರಾಣ', ಬೆಳೆರಾಯನ 'ಮಾರ್ಕಂಡೇಯ ಪುರಾಣ'ಗಳು ಗಮನಾರ್ಹವಾದವು. ವೈದೇಶ್ವರ ಭಕ್ತನ 'ಸೇತುಪುರಾಣ', ವೆಂಕಟೇಶನ 'ಹಾಲಾಸ್ಯ ಪುರಾಣ', ರಂಗಯ್ಯನ ಕಾವೇರಿಪುರಾಣ, ಸಿಂಗರಾಚಾರ್ಯನ 'ಶ್ರೀರಂಗ ಪುರಾಣ', ಅಲ್ಲದೆ ಕಳಲೆ ನಂಜರಾಜ ಮತ್ತಿತತರು ಬರೆದ ಪುರಾಣಗಳು ಸ್ಥಳ ಪುರಾಣ ಹಾಗೂ ಮಹಾತ್ಮಗಳನ್ನು ಒಳಗೊಂಡ ಕೃತಿಗಳು. ಬೊಟ್ಟೂರು ರಂಗನ ಅಂಬಿಕಾವಿಜಯ ಮತ್ತು ಪರಶುರಾಮ ರಾಮಾಯಣಗಳಲ್ಲಿ ಸ್ವಲ್ಪ ಮಟ್ಟಿಗೆ ಸ್ವಂತಿಕೆಯು ಕಾಣಬರುತ್ತದೆ. ಬ್ರಾಹ್ಮಣ ಕವಿಯಾದ ಪಟ್ಟಾಭಿರಾಮನು ತನ್ನ ಜೈನಧರ್ಮಿಯ ಸ್ನೇಹಿತನನ್ನು ಮೆಚ್ಚಿಸಲು 'ರತ್ನ ಶೇಖರ ಚರಿತ್ರೆ'ಯನ್ನು ಕಟ್ಟುನಿಟ್ಟಾಗಿ ಜೈನಧರ್ಮ ತತ್ವಗಳಿಗನುಗುಣವಾಗಿ ಬರೆದಿದ್ದಾನೆ. 'ಪದ್ಮನಿ' (ಚೆನ್ನಯ್ಯ), ಚಂದ್ರಹಾಸ ಮತ್ತು ಸೀತಾಕಲ್ಯಾಣ (ಗಿರಿಯಮ್ಮ) ಮಲ್ಲಿಕಾರ್ಜುನ (ಕಾಶೀರಾಮ, ಶಿಬಿ (ಚೆನ್ನ) ಮತ್ತು ನಳ (ಕೆಂಪಯ್ಯ) - ಇವುಗಳಲ್ಲಿ ಸಾಂಗತ್ಯ, ಯಕ್ಷಗಾನ, ಮತ್ತು ಚೌಪದಿರೂಪಗಳನ್ನು ಬಳಸಲಾಗಿದೆ. ದೇಪಕವಿಯು ಬತ್ತೀಸ ಪುತ್ಥಳಿಯ ಕಥೆಯನ್ನು ಬರೆದಿದ್ದಾನೆ.

ಹೆಳವನ ಕಟ್ಟೆ ಗಿರಿಯಮ್ಮ ಮತ್ತು ಚೆಲುವಾಂಬಾ, ಕವಯಿತ್ರಿಯರಲ್ಲಿ ಪ್ರಮುಖರಾಗಿದ್ದಾರೆ. ಚೆಲುವಾಂಬೆಯು ದೊಡ್ಡ ಕೃಷ್ಣರಾಜನ (1717-1731) ರಾಣಿಯಾಗಿದ್ದಳು. ಅವಳ ವರನಂದಿ ಕಲ್ಯಾಣವು ಬೇಬಿ ನಾಚ್ಚಿಯಾರ್ ಕಥೆಯನ್ನು ಚಿತ್ರಿಸುತ್ತವೆ. ಅಲ್ಲದೆ ಹಾಡುಗಳನ್ನು ಮತ್ತು ವ್ಯಾಖ್ಯಾನಗಳನ್ನು ಅವಳು ರಚಿಸಿದ್ದಾಳೆ. ಹೆಳವನಕಟ್ಟೆ ಗಿರಿಯಮ್ಮ ಆಧ್ಯಾತ್ಮಿಕ ಸಿದ್ಧಿಯುಳ್ಳ ಅನುಭಾವಿ ಭಕ್ತೆಯಾಗಿದ್ದಳು. ಅವಳು ಹಲವು ಭಕ್ತಿರಸ ಭರಿತ ಹಾಡುಗಳನ್ನು ರಚಿಸಿರುವಳಲ್ಲದೆ, ಚಂದ್ರಹಾಸ ಮತ್ತು ಉದ್ಘಾಳಿಕರ ಕಥೆಯನ್ನು ಸಾಂಗತ್ಯ ಛಂದಸ್ಸಿನಲ್ಲಿ ನಿರೂಪಿಸಿದ್ದಾಳೆ.

ಈ ಅವಧಿಯ ಹರಿದಾಸ ಪಂಥವನ್ನು ವಿಜಯದಾಸರು (1725) ಮತ್ತು ಅದರ ಶಿಷ್ಯರು ಪ್ರತಿನಿಧಿಸುತ್ತಾರೆ. ವಿಜಯದಾಸರ ಹಾಡುಗಳಿಗೆ ವಿಜಯ ವಿಠಲನೆಂಬ ಅಂಕಿತವಿದೆ. ಅವರ ನಾಲ್ಕು ಮಂದಿ ಶಿಷ್ಯರಾದ ಗೋಪಾಲದಾಸ, ವೇಣುಗೋಪಾಲದಾಸ, ಮೋಹನದಾಸ ಮತ್ತು ಹಯವದನದಾಸರು ಮಹಿಮಾನ್ವಿತ ಭಕ್ತ ಶೇಷ್ಠರೆನಿಸಿದ್ದಾರೆ. ವರಾಹ ತಿಮ್ಮಪ್ಪ ಮತ್ತು ವಿಠಲದಾಸರು (ಸು. 1759) ಕೂಡ ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಗೋಪಾಲದಾಸರ ಶಿಷ್ಯರಾದ ಜಗನ್ನಾಥದಾಸರು ಜಗನ್ನಾಥ ವಿಠಲನೆಂಬ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿರುವುದಲ್ಲದೆ, 'ಹರಿಕಥಾಮೃತಸಾರ' ಎಂಬ ಕಾವ್ಯವನ್ನು ಬರೆದಿದ್ದಾರೆ. ಗೋಪಾಲದಾಸರ ಶಿಷ್ಯರಲ್ಲಿ ಗುರುಗೋಪಾಲದಾಸ ಮತ್ತು ವರದ ಗೋಪಾಲದಾಸರೂ ಇದ್ದಾರೆ; ವ್ಯಾಸವಿಠಲದಾಸ, ವೇಣುಗೋಪಾಲದಾಸರ ಶಿಷ್ಯ. ವೆಂಕಟದಾಸ ಮತ್ತು ಮನಾಮದುರೆದಾಸರು ಹದಿನೆಂಟನೆಯ ಶತಮಾನದ ಕೊನೆಯಲ್ಲಿದ್ದವರು. ಜಗನ್ನಾಥದಾಸರ ಶಿಷ್ಯರಲ್ಲಿ ಶ್ರೀದ ವಿಠಲದಾಸ ಮತ್ತು ಶ್ರೀಪತಿದಾಸರು ಅಸಂಖ್ಯ ಕೀರ್ತನೆಗಳನ್ನು ರಚಿಸಿದ್ದಾರೆ. ಇವರಲ್ಲದೆ ಅನಾಮಧೇಯರಿಂದ ಬೇರೆಬೇರೆ ಅಂಕಿತಗಳಲ್ಲಿ ಕೀರ್ತನೆಗಳು ಈ ಕಾಲದಲ್ಲಿ ರಚಿತವಾಗಿವೆ.

ಈ ಅವಧಿಯಲ್ಲಿ ನಗರದ ಪುಟ್ಟಯ್ಯ ಮತ್ತು ಶಾನುಭೋಗ ವೆಂಕಟರಮಣಯ್ಯ ಎಂಬವರು ಮೈಸೂರು ಚರಿತ್ರೆಯನ್ನು ಬರೆದಿದ್ದಾರೆ. ಲಿಂಗಣ್ಣ ಕವಿಯ 'ಕೆಳದಿ ನೃಪ ವಿಜಯ' ಕೆಳದಿಯ ಮಾಂಡಲಿಕರ ಇತಿಹಾಸವನ್ನು ಕುರಿತ ಕಾವ್ಯವಾಗಿದೆ. 'ಮೇದಕೇರಿ ರಾಜೇಂದ್ರ ದಂಡಕ'ವು ಚಿತ್ರದುರ್ಗದ ನಾಯಕನನ್ನು ಸ್ತುತಿಸುವ ಕೃತಿ, ಬ್ರಹ್ಮನ 'ವೈದ್ಯಕಂದ ಮತ್ತು ಕಳಲೆ ವೀರರಾಜನ 'ವೈದ್ಯ ಸಂಹಿತಾ ಸಾರಾರ್ಣವ'ಗಳು ವೈದ್ಯಶಾಸ್ತ್ರ ಗ್ರಂಥಗಳು.

ಕಳಲೆ ವೀರರಾಜನ ಮಕ್ಕಳಾದ ದೇವರಾಜ ಮತ್ತು ನಂಜರಾಜರು ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿದ್ದ ದಳವಾಯಿಗಳು. ಇವರು ರಾಜರ ನೇಮಕದಲ್ಲಿ ಪ್ರಭಾವ ಬೀರಬಲ್ಲ ಬಲಿಷ್ಠ ವ್ಯಕ್ತಿಗಳಾಗಿದ್ದರು. ಸೇನಾಪತಿಯಾಗಿದ್ದ ನಂಜರಾಜನು ಪಂಡಿತನೂ ಆಗಿದ್ದನು; ಸಂಸ್ಕೃತ, ಕನ್ನಡ, ತೆಲುಗು ಕವಿಗಳಿಗೆ ಪೋಷಕನಾಗಿದ್ದನು. ನೃಸಿಂಹ ವಿರಚಿತ ಚಂದ್ರಕಲಾ ಪರಿಣಯವೆಂಬ ನಾಟಕವನ್ನೊಳಗೊಂಡ 'ನಂಜರಾಜ ಯಶೋಭೂಷಣ'ವು ನಂಜರಾಜನ ಪ್ರಶಂಸೆಗಾಗಿ ಬರೆದ ಕೃತಿಯಾಗಿದೆ. ಕರಾಚುರಿ ನಂಜರಾಜನೆಂದೇ ಪ್ರಸಿದ್ಧನಾದ ಅವನು ದೇವನಹಳ್ಳಿಯ ಮುತ್ತಿಗೆಯ ಸಮಯದಲ್ಲಿ ಹೈದರನಲ್ಲಿರುವ ಬುದ್ಧಿವಂತಿಕೆಯನ್ನು ಗುರುತಿಸಿ, ಅವನ ಉನ್ನತಿಗೆ ಕಾರಣನೂ ಆದನು. ಅದಕ್ಕಾಗಿ ತನ್ನ ಪ್ರಭು, ಹೆಸರಿಗೆ ಮಾತ್ರ ರಾಜನಾಗಿದ್ದ ಮೈಸೂರು ಮಹಾರಾಜನಿಗೆ ಎರಡು ಬಗೆಯಲು ಹಿಂಜರಿಯಲಿಲ್ಲ. ಪೀಕ್ಕೊಟೋ ವಿವರಿಸಿರುವಂತೆ, ಮೈಸೂರಿನ ಅನಭಿಷಕ್ತ ದೊರೆಯಾಗಿದ್ದ ಕರಾಚುರಿ ನಂಜರಾಜನ ರಾಜಕೀಯ ಹಾಗೂ ಯುದ್ಧ ಕೌಶಲದ ಒಳಸಂಚುಗಳು ಇಡೀ ದಕ್ಷಿಣ ಭಾಗಕ್ಕೆಲ್ಲ ವ್ಯಾಪಿಸಿದ್ದುವೆಂದು ತಿಳಿಯುತ್ತದೆ. ನಂಜರಾಜನು ಸಂಸ್ಕೃತದಲ್ಲಿ 'ಸಂಗೀತ ಗಂಗಾಧರ' ಮತ್ತಿತರ ಕೃತಿಗಳನ್ನು ರಚಿಸಿದ್ದಾನೆ. ಕನ್ನಡದಲ್ಲಿ ಸುಮಾರು ಇಪ್ಪತ್ತು ಕೃತಿಗಳು ಅವನು ಬರೆದವೆಂದು ಹೇಳಲಾಗಿದೆ. ಇವುಗಳಲ್ಲಿ ಏಳು ಕೃತಿಗಳು, ಪವಿತ್ರ ಕ್ಷೇತ್ರಗಳಾದ, ಶಿವಗಂಗೆ, ಭದ್ರಗಿರಿ, ಸೇತು, ಹಾಲಾಸ್ಯ, ನಂಜನಗೂಡು ಮತ್ತು ಕಾಶಿಗಳ ಸ್ಥಳ ಮಾಹಾತ್ಮವನ್ನು ವರ್ಣಿಸುತ್ತವೆ. ಸ್ಕಾಂದಪುರಾಣ, ಪದ್ಮಪುರಾಣ ಮತ್ತು ಭವಿಷ್ಯತ್ತರ ಪುರಾಣಗಳಿಂದ, ಶಿವಗೀತಾ, ಶಿವಧರ್ಮೋತ್ತರ ಮತ್ತಿತರ ಭಾಗಗಳನ್ನು ಆಯ್ತು ಅನುವಾದಿಸಿ ಶಿವನ ಹಿರಿಮೆ ಮಹಿಮೆಗಳನ್ನು ವರ್ಣಿಸಿದ್ದಾನೆ. ನಂಜರಾಜನು ಭಾರತ, ಹರಿವಂಶ ಮತ್ತು ಮಾರ್ಕಂಡೇಯ ಪುರಾಣಗಳನ್ನು ಕನ್ನಡ ಗದ್ಯದಲ್ಲಿ ಅನುವಾದಿಸಿದ್ದಾನೆ. ಅವನ ಆಶ್ರಯದಲ್ಲಿದ್ದ ನೂರೊಂದನು 'ಸೌಂದರಕಾವ್ಯ' ಮತ್ತು ವೆಂಕಟೇಶ 'ಹಾಲಾಸ್ಯ ಮಾಹಾತ್ಮ'ಗಳನ್ನು ಬರೆದಿದ್ದಾರೆ. ಇಮ್ಮಡಿ ಕೃಷ್ಣರಾಜನ (1734- 66) ಸಂಬಂಧಿಯಾದ ಕತ್ತಿ ಗೋಪಾಲರಾಜನು ಸ್ಥಳಪುರಾಣವೊಂದನ್ನು ರಚಿಸಿದ್ದಾನೆ. ಮೈಸೂರಿನಲ್ಲಿದ್ದ ಶಾಲಯದ ಕೃಷ್ಣರಾಜನು (1748-74) ಅನೇಕ ಕೃತಿಗಳ ಕರ್ತೃವಾಗಿದ್ದಾನೆ ಅವನು ಹಲವು ಶತಕಗಳನ್ನು ಬರೆದಿರುವುದಲ್ಲದೆ, 'ವಿವೇಕಾಭರಣ' ಮತ್ತು 'ಅನುಭವ ರಸಾಯನ'ಗಳೆಂಬ ದಾರ್ಶನಿಕ ಗ್ರಂಥಗಳನ್ನು ಕೊಟ್ಟಿದ್ದಾನೆ. ಅವನ 'ಷಟ್‌ಪ್ರತ್ಯಯ'ವು ಛಂದಸ್ಸನ್ನು ಕುರಿತದ್ದಾಗಿದೆ. ಅವನ ಉಳಿದ ರಚನೆಗಳು ಯಕ್ಷಗಾನ ಮತ್ತು ಹಾಡುಗಳ ರೂಪದಲ್ಲಿವೆ.

ಹೈದರನ ಅಮಾತ್ಯನಾಗಿದ್ದ ವೆಂಕಾಮಾತ್ಯನು (1770) ಸಂಸ್ಕೃತದಲ್ಲಿ 'ಅಲಂಕಾರ ಮಣಿದರ್ಪಣ', 'ಸುಧಾಲಹರಿ', 'ಕಾಮವಿಲಾಸಭಾಣ', 'ಮಹೇಂದ್ರಕ ಡಿಮ', 'ಖರದರ್ಪಘಾತನ'ವೆಂಬ ವ್ಯಾಯೋಗ, 'ಹನುಮಜ್ಜಯ'ವೆಂಬ ಕಾವ್ಯ ; 'ಕುಕ್ಕಿಂಬರಿ ಭೈಕ್ಷವ'ವೆಂಬ ಪ್ರಹಸನ ಇವುಗಳನ್ನು ರಚಿಸಿದ್ದಾನೆ. ಕನ್ನಡದಲ್ಲಿ ವಾರ್ಧಕಷಟ್ನದಿಯಲ್ಲಿ ರಾಮಾಯಣವನ್ನೂ ಚಂಪೂವಿನಲ್ಲಿ ರಾಮಾಭ್ಯುದಯ ಮತ್ತು ಹನುಮದ್ವಿಲಾಸಗಳನ್ನೂ ರಚಿಸಿದ್ದಾನೆ. ಜಕ್ಕಾಮಾತ್ಯನು (1750) 'ಸೌಂದರ್ಯ ಲಹರಿ'ಯ ಮೇಲೆ ವ್ಯಾಖ್ಯಾನವನ್ನು ಬರೆದಿದ್ದಾನೆ. ಚಿದಾನಂದನು ಜ್ಞಾನಸಿಂಧು', 'ದೇವಿ ಮಹಾತ್ಮ', 'ತತ್ತ್ವಚಿಂತಾಮಣಿ' ಮತ್ತು 'ಪಂಚೀಕರಣ'ಗಳ ಕರ್ತೃವೆನಿಸಿದ್ದಾನೆ. ಈ ಅದ್ವೈತ ಸಂಪ್ರದಾಯದಲ್ಲಿ ಶಿವರಾಮನೆಂಬ ಕವಿ 'ಶಿವಭಕ್ತಿಸಾರ' ಎಂಬ ಕಾವ್ಯವನ್ನು ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದಾನೆ.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources