ಇತಿಹಾಸಪೂರ್ವ ಕಾಲ ಅಥವಾ ಪ್ರಾಗೈತಿಹಾಸಿಕ ಕಾಲ.

ಪೀಠಿಕೆ:-   ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಲ್ಲಿ ಎರಡು ಬಗೆಗಳಿವೆ. ಲಿಖಿತ ಮತ್ತು ಅಲಿಖಿತ. ಇತಿಹಾಸ ಪುನರ್‌ ರಚನೆಗೆ ಲಿಖಿತ ಆಧಾರಗಳು ಲಭ್ಯವಾಗುವ ನಂತರದ ಕಾಲವನ್ನು “ಐತಿಹಾಸಿಕ ಕಾಲ” ೆನ್ನುವರು. ಆದರೆ, ಇತಿಹಾಸದ ಪುನರ್‌ ರಚನೆಗೆ ಕೇವಲ ಅಲಿಖಿತ ಆಧಾರಗಳು ಲಭ್ಯವಾಗುವ ಕಾಲವನ್ನು “ಇತಿಹಾಸಪೂರ್ವ ಕಾಲ, ಪ್ರಾಗೈತಿಹಾಸಿಕ ಕಾಲ ಅಥವಾ ಪ್ರಾಗ್ಚಾರಿತ್ರಿಕ ಕಾಲ” ಎನ್ನುವರು. ಸಾಮಾನ್ಯ ಶಕ ಪೂರ್ವ 3000 ವರ್ಷಗಳ ಹಿಂದಿನ ಕಾಲವನ್ನು ಇತಿಹಾಸಪೂರ್ವ ಕಾಲ ಎಂದು ಕರೆಯುವರು. ಈ ಕಾಲದ ಆರಂಭ, ವಿಕಾಸ & ಅಂತ್ಯಗಳು ಯಾವಾಗ ಆದವು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇತಿಹಾಸಪೂರ್ವ ಕಾಲದ ಜೀವನ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವಾಗಿದ್ದಿತು. ಆ ಕಾಲದ ಮಾನವರು ಗುಹೆ, ಮರದ ಪೊಟರೆಗಳಲ್ಲಿ ವಾಸ ಮಾಡುತ್ತಿದ್ದು, ಕಲ್ಲಿನ ಆಯುಧಗಳು, ಮರ ಇಲ್ಲವೇ ಪ್ರಾಣಿ ಅಥವಾ ಮನುಷ್ಯರ ಮೂಳೆಗಳಿಂದ ತಯಾರಿಸಿದ ಆಯುಧಗಳನ್ನು ಭೇಟೆಯಾಡಲು ಇಲ್ಲವೇ ಆಹಾರ ರೂಪದ ಗೆಡ್ಡೆ-ಗೆಣಸುಗಳನ್ನು ಅಗೆಯಲು ಬಳಕೆ ಮಾಡುತ್ತಿದ್ದರು. ಕಾಲಕ್ರಮೇಣ ಈ ಜನತೆಯು ಅಭಿವೃದ್ಧಿಯತ್ತ ಸಾಗತೊಡಗಿ, ಕೃಷಿಯ ಕಡೆಗೆ ತಿರುಗಿ ಒಂದೆಡೆ ನೆಲೆಸಿ ಸ್ಥಿರ ಜೀವನವನ್ನು ನಡೆಸತೊಡಗಿದರು. ಆ ಕಾಲಘಟ್ಟವನ್ನು “ಶಿಲಾಯುಗ ಸಂಸ್ಕೃತಿಯ ಕಾಲ” ಎಂತಲೂ ಕರೆಯುವರು.

   ಮಾನವ ಮೊದಮೊದಲು ಇತರ ಪ್ರಾಣಿಗಳಲ್ಲೊಬ್ಬನಾಗಿ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಆಹಾರ ಪದಾರ್ಥಗಳನ್ನು ಅವುಗಳಂತೆಯೇ ಸಂಗ್ರಹಿಸಿ ಜೀವನ ನಡೆಸುತ್ತಿದ್ದ. ಆದರೆ ಮಾನವನನ್ನು ಇತರ ಪ್ರಾಣಿಗಳಿಂದ ಬೇರ್ಪಡಿಸಿದ ಲಕ್ಷಣವೆಂದರೆ ಅವು ತಮ್ಮ ರಕ್ಷಣೆ ಮತ್ತು ಆಹಾರ ಸಂಪಾದನೆಗೆ ದೇಹದಲ್ಲಿಯೇ ಸಲಕರಣೆಗಳನ್ನು ಹೊಂದಿದ್ದರೆ, ಮಾನವ ತನ್ನ ಶರೀರಕ್ಕೆ ಸೇರದ ಬಾಹ್ಯ ಆಯುಧ ಉಪಕರಣಗಳಿಂದ ತನ್ನ ಕಾರ್ಯಗಳನ್ನು ಸಾಧಿಸಬೇಕಾಗಿತ್ತು. ಕಾರಣದಿಂದಲೇ ಮಾನವ ಅವಶ್ಯವಾಗಿ ಆಯುಧೋಪಕರಣಗಳ ತಯಾರಿಕೆಯಲ್ಲಿ ತೊಡಗಿ ಕ್ರಮೇಣ ಗಳಿಸಿದ ವಿವಿಧ ಅನುಭವಗಳಿಂದ ತನ್ನ ಬುದ್ಧಿಶಕ್ತಿಯನ್ನು ಬೆಳೆಸಿಕೊಂಡು ಪ್ರಗತಿಯನ್ನು ಸಾಧಿಸಿದ. ಪ್ರಗತಿಯ ಅಧ್ಯಯನವೇ ಮಾನವನ ಪ್ರಾಗೈತಿಹಾಸ ಕಾಲ; ಅದರಲ್ಲಿ ಸಸ್ಯಮೂಲ ಆಹಾರದ ಸಂಗ್ರಹಣೆಗೆ, ಪ್ರಾಣಿ ಜನ್ಯ ಆಹಾರದ ಬೇಟೆಗಳಿಗೆ ಒರಟಾದ ಕಲ್ಲಿನ ಆಯುಧಗಳನ್ನು ಮಾನವ ಉಪಯೋಗಿಸುತ್ತಿದ್ದ ಹಂತವನ್ನು ಪುರಾತನ ಶಿಲಾಯುಗವೆಂದು ಕರೆಯಲಾಗಿದೆ. ಮಾನವ ಮೊತ್ತಮೊದಲಿಗೆ ಭೂಮಿಯ ಮೇಲೆ ಕಾಣಿಸಿಕೊಂಡಂದಿನಿಂದ ಅವನು ಆಹಾರ ಸಂಗ್ರಹಣೆಯಿಂದ ಹೊಟ್ಟೆ ಹೊರೆಯುತ್ತಿದ್ದಷ್ಟು ಕಾಲ ಕಾಲಘಟ್ಟಕ್ಕೆ ಸೇರುತ್ತದೆ. ಇದರ ವ್ಯಾಪ್ತಿ ಹತ್ತು ಲಕ್ಷ ವರ್ಷಗಳೆಂದು ಪುರಾತತ್ವಜ್ಞರು ಇತ್ತೀಚಿನವರೆಗೂ ಭಾವಿಸಿದ್ದರು; ಆದರೆ, ಅದು ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳಷ್ಟು ಕಾಲ ವಿಸ್ತರಿಸಿತ್ತೆಂಬುದು ಆಧುನಿಕ ವೈಜ್ಞಾನಿಕ ವಿಧಾನಗಳಿಂದ ಈಗ ತಿಳಿದುಬಂದಿದೆ. ಮಾನವ ಇತಿಹಾಸದ ಈ ಕಾಲಘಟ್ಟವು ವಿವಿಧ ದೇಶಗಳಲ್ಲಿ ಬೇರೆ-ಬೇರೆ ಕಾಲಘಟ್ಟದಲ್ಲಿ ಕಂಡುಬರುತ್ತದೆ.

ಭೂಮಿಯ ಮೇಲೆ ಮಾನವನ ಉಗಮ:- ಭೂವೈಜ್ಞಾನಿಕರು ಭೂಮಿಯ ಇತಿಹಾಸವನ್ನು ಫೆನೆರೊಜ಼ೋಯಿಕ್‌ ಯುಗವೆಂದು  ಮುಖ್ಯವಾಗಿ ಗುರ್ತಿಸಿದ್ದು, ಅದರಲ್ಲಿ ಪ್ಯಾಲಿಯೊಜ಼ೋಯಿಕ್, ಮೆಸೊಜ಼ೋಯಿಕ್‌ ಮತ್ತು ಸೆನೊಜ಼ೋಯಿಕ್‌ ಎಂಬ ನಾಲ್ಕು ಪರ್ವಗಳಾಗಿ ವಿಂಗಡಿಸಿದ್ದಾರೆ. ಪ್ಯಾಲಿಯೊಜ಼ೋಯಿಕ್‌ ಯುಗದಲ್ಲಿ ಅಕಶೇರುಕಗಳು ಕಂಡುಬಂದವು. ಮೆಸೋಜ಼ೋಯಿಕ್‌ ಯುಗದಲ್ಲಿ ಬೃಹತ್‌ ಜೀವಿಗಳಾದ ಡೈನೋಸಾರ್‌ಗಳು ಉಗಮಿಸಿ ನಾಶವಾದವು. ಇವುಗಳಲ್ಲಿ ಕೊನೆಯದಾದ ಸೆನೊಜ಼ೋಯಿಕ್‌ ಪರ್ವವನ್ನು ಪ್ಲಿಯೋಸೀನ್ ಮತ್ತು ಪ್ಲೀಸ್ಟೊಸೀನ್ ಎಂಬ ಎರಡು ಯುಗಗಳಾಗಿ ವಿಂಗಡಿಸಲಾಗಿದೆ. ಮಾನವನ ಮೊದಮೊದಲ ಚಟುವಟಿಕೆಗಳು ಪ್ಲೀಸ್ಟೊಸೀನ್ ಯುಗದಲ್ಲಿ ಕಂಡುಬರುತ್ತವೆ. ಪುರಾತನ ಶಿಲಾಯುಗದ ಕಾಲವಾದ ಪ್ಲೀಸ್ಟೊಸೀನ್ ಯುಗವನ್ನು ಅಧ್ಯಯನದ ಅನುಕೂಲಕ್ಕಾಗಿ ಆದಿ, ಮಧ್ಯ ಮತ್ತು ಅಂತ್ಯ ಪ್ಲೀಸ್ಟೊಸೀನ್ ಎಂಬುದಾಗಿ ಪುನಃ ವಿಂಗಡಿಸಲಾಗಿದೆ. ಪ್ರಸ್ತುತ ಭೂಮಿಯು ಪ್ಲೀಸ್ಟೊಸೀನ್ ಕಾಲಘಟ್ಟದ ಕೊನೆಯ ಭಾಗವಾಗಿರುವ ಹಾಲೊಸೀನ್‌ ಯುಗದಲ್ಲಿದೆ.

   ಮಾನವ ಪೀಳಿಗೆಯಲ್ಲಿ ಮಾತ್ರ ಸಂಸ್ಕೃತಿ ತಲೆದೋರಲು ಮುಖ್ಯ ಕಾರಣವೆಂದರೆ ಇತರ ಪ್ರಾಣಿಸಂತತಿಗಳಲ್ಲಿ ಇಲ್ಲದ ಕೆಲವು ಗುಣಗಳು ಮಾನವನಲ್ಲಿದ್ದುದು. ಅಂದರೆ ಚುರುಕಾದ ದೃಷ್ಟಿ, ದೊಡ್ಡ ಮಿದುಳು ಮತ್ತು ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳುವ ಶಕ್ತಿ-ಇವುಗಳ ಜೊತೆಗೆ ಮಾನವ ಹಂತದತ್ತ ಸಾಗುತ್ತಿದ್ದ ಜೀವಿಗಳಲ್ಲಿ ನೆಟ್ಟಗೆ ನಿಲ್ಲುವ ಮತ್ತು ಕಾರಣದಿಂದ ನಡಿಗೆಯಿಂದ ವಿಮುಕ್ತವಾದ ಕೈಗಳನ್ನು ಆಯುಧಗಳ ತಯಾರಿಕೆ, ಭೇಟೆ ಮುಂತಾದ ಚಟುವಟಿಕೆಗಳಿಗೆ ಬಳಸಲು ಸಾಧ್ಯವಾಯಿತು. ಕ್ರಮೇಣ ಚಟುವಟಿಕೆಗಳ ಮುಖಾಂತರ ಅವಕ್ಕೆ ಅವಶ್ಯಕವಾದ ದೈಹಿಕ ಮಾರ್ಪಾಡುಗಳು ಸಂಭವಿಸಿದವು. ಸಸ್ಯಜನ್ಯ ಆಹಾರಗಳನ್ನು ಸೇವಿಸುತ್ತ ಮರಗಳ ಮೇಲೆ ಜೀವಿಸುತ್ತಿದ್ದ ಕೆಲವು ಪ್ರಾಣಿಗಳು ಭೂಮಿಗಿಳಿದು ಬಂದು ದ್ವಿಪಾದಿಗಳಾದ ಅನಂತರ ಬದಲಾವಣೆಗಳಾಗತೊಡಗಿದವು. ಹಂತದಲ್ಲಿ ಸಣ್ಣ ಪ್ರಾಣಿಗಳ ಬೇಟೆಯಿಂದ ಆಹಾರ ಸಂಪಾದನೆ ಮಾಡತೊಡಗಿದ ಮಾನವ ಪ್ರಾಣಿಗಳು ಮಾಂಸಾಹಾರಿಗಳಾದರು. ಸಸ್ಯಜನ್ಯ ಆಹಾರದಿಂದ ಮಾಂಸಹಾರಕ್ಕೆ ಮಾನವ ಮಾರ್ಪಟ್ಟಾಗಲೇ ಸಂಸ್ಕೃತಿಯ ಏರುಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟನೆನ್ನಲಾಗಿದೆ. ಏಕೆಂದರೆ ಸಸ್ಯಜನ್ಯವಾದ ಕಂದಮೂಲ ಫಲಗಳನ್ನು ಒಂಟಿಯಾಗಿ ಸಂಗ್ರಹಿಸಲು ಸಾಧ್ಯ; ಆದರೆ ಬೇಟೆಗೆ ಸಾಮೂಹಿಕ ಯತ್ನ ಅವಶ್ಯ.

   ಕಲ್ಲಿನ ಆಯುಧಗಳ ತಯಾರಿಕೆಯ ದೃಷ್ಟಿಯಿಂದ ಕಾಲದಲ್ಲಿ ವಿವಿಧೋದ್ದೇಶಗಳಿಗೆ ಉಪಯುಕ್ತವಾದ ಸಾಮಾನ್ಯ ಆಯುಧಗಳು ಹೆಚ್ಚು ಬಳಕೆಯಲ್ಲಿದ್ದುವು. ಆದರೆ ಕೆಲವು ವಿಧವಾದ ಕೈಗೊಡಲಿ ಮತ್ತು ಸೀಳು ಕೊಡಲಿಗಳನ್ನು ಸಾಮಾನ್ಯವಾಗಿ ಎಲ್ಲೆಡೆಗಳಲ್ಲು ತಯಾರಿಸಲಾಗುತ್ತಿತ್ತು. ಕಲ್ಲಿನ ಆಯುಧಗಳನ್ನು ಬೇಕಾದಾಗ ತಯಾರಿಸಿ ತತ್ಕಾಲದ ಉಪಯೋಗದ ಅನಂತರ ಅಲ್ಲೆ ಎಸೆದುಬಿಡುತ್ತಿದ್ದುದರಿಂದ ಮತ್ತು ಅವು ದೀರ್ಘ ಕಾಲ ಉಳಿಯುತ್ತಿದ್ದುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಸಿಕ್ಕುತ್ತವೆ. ಆದರೆ, ಮೂಳೆ ಮತ್ತು ಮರದ ಆಯುಧಗಳು ಬೇಗ ನಾಶವಾಗುತ್ತಿದ್ದುದರಿಂದ ಅವು ಬಹಳ ವಿರಳವಾಗಿವೆ.

ಶಿಲಾಯುಗದ ವರ್ಗೀಕರಣ:- ಅಧ್ಯಯನದ ದೃಷ್ಟಿಯಿಂದ ಈ ಕಾಲಘಟ್ಟವನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ಮಾಡಿಕೊಳ್ಳಲಾಗಿದೆ:

1.     ಶಿಲಾಯುಗದ ಕಾಲ: ಸಾ.ಶ.ಪೂ. 50,000 ದಿಂದ 4000 ವರ್ಷಗಳ ವರೆಗೆ. ಇದರಲ್ಲಿ ಪುನಃ ಮೂರು ಉಪವಿಭಾಗ ಮಾಡಲಾಗಿದೆ: A.ಹಳೆಶಿಲಾಯುಗ  B. ಮಧ್ಯಶಿಲಾಯುಗ C. ನವಶಿಲಾಯುಗ

2.     ಲೋಹಯುಗ: ಸಾ. ಶ. ಪೂ. 4000 ವರ್ಷಗಳ ಈಚಿನ ಕಾಲ. ಇದನ್ನು ಮತ್ತೆ ಮೂರು ಉಪವಿಭಾಗಗಳಾಗಿ ವಿಭಜಿಸಲಾಗಿದೆ: A. ತಾಮ್ರಯುಗ B. ಕಂಚಿನ ಯುಗ C. ಕಬ್ಬಿಣದ ಯುಗ.

   ಭಾರತದಲ್ಲಿ ಪ್ರಾಗೈತಿಹಾಸಿಕ ಕಾಲದ ಆಧಾರಗಳು ಮತ್ತು ನೆಲೆಗಳ ಸಂಶೋಧನೆ ನಡೆಸಿದ ಕೆಲವು ಪ್ರಮುಖ ಸಂಶೋಧಕರುಗಳೆಂದರೆ   ರಾಬರ್ಟ್‌ ಬ್ರೂಸ್‌ ಫೂಟ್‌, ಭಾರತದ ಪ್ರಾಗೈತಿಹಾಸಿಕ ಪಿತಾಮಹಾ, ಮೆಡೋಸ್‌ ಟೇಲರ್‌, ಜಾನ್‌ ಮಾರ್ಷಲ್‌, ಡಾ. ದಯಾರಾಂ ಸಹಾನಿ, R.D ಬ್ಯಾನರ್ಜಿ, S.R ರಾವ್‌, ಕನ್ನಿಂಗ್‌ ಹ್ಯಾಂ, ಮಾರ್ಟಿಮರ್‌ ವ್ಹೀಲರ್‌, ಡಾ. ಆಲ್ಚಿನ್‌, ಡಾ. ಅನ್ಸಾರಿ, B.K ಥಾಪರ್‌, ಡಾ. H.D ಸಂಕಾಲಿಯ, ಮತ್ತು (ಕರ್ನಾಟಕದಲ್ಲಿ) R.S ಪಂಚಮುಖಿ, M.H ಕೃಷ್ಣ, R.V ಜೋಶಿ, ಡಾ. M. ಶೇಷಾದ್ರಿ, ಡಾ. S. ನಾಗರಾಜ್‌ ಮತ್ತು ಕೃಷ್ಣಸ್ವಾಮಿ ಅಯ್ಯಂಗಾರ್‌ ಪ್ರಮುಖರು.

ಭಾರತದಲ್ಲಿ ಶಿಲಾಯುಗದ ಕಾಲ ವಿಭಜನೆ:-

I. ಹಳೆಶಿಲಾಯುಗ - Paleolithic age(:- ಸಾ.ಶ.ಪೂ. 2.5 ದಶಲಕ್ಷ ವರ್ಷಗಳಿಂದ ಸಾ.ಶ.ಪೂ. 8,000 ವರ್ಷಗಳವರೆಗೆ*

II. ಮಧ್ಯಶಿಲಾಯುಗ – Mesolithic age:- ಸಾ.ಶ.ಪೂ. 9,000 ವರ್ಷಗಳಿಂದ ಸಾ.ಶ.ಪೂ. 4000 ವರ್ಷಗಳವರೆಗೆ.

III. ನವIII. ನವಶಿಲಾಯುಗ - Neolithic age:-ಸಾ.ಶ.ಪೂ. 7000 ವರ್ಷಗಳಿಂದ ಸಾ.ಶ.ಪೂ. 1000 ವರ್ಷಗಳವರೆಗೆ.

ಶಿಲಾಯುಗ - Neolithc age:-ಸಾ.ಶ.ಪೂ. 7000 ವರ್ಷಗಳಿಂದ ಸಾ.ಶ.ಪೂ. 1000 ವರ್ಷಗಳವರೆಗೆ.

ಹಳೆಶಿಲಾಯುಗದ ಮಾನವನ ಜೀವನ ಪದ್ಧತಿ (Paleolithic age(:- ಸಾ.ಶ.ಪೂ. 2.5 ದಶಲಕ್ಷ ವರ್ಷಗಳಿಂದ ಸಾ.ಶ.ಪೂ. 8,000 ವರ್ಷಗಳವರೆಗೆ*):- ಗ್ರೀಕ್‌ ಪದ Paleolithic ಎಂದರೆ ಹಳೆ ಶಿಲೆಗೆ ಸಂಬಂಧಿಸಿದುದು ಎಂದರ್ಥ. Palio = ಹಳೆಯ + Litho = ಶಿಲೆ. ಆ ಕಾಲದ ಮಾನವನು ಅಲೆಮಾರಿಯಾಗಿದ್ದನು.    ಆಹಾರಕ್ಕಾಗಿ ಗೆಡ್ಡೆ-ಗೆಣಸುಗಳನ್ನು ಅವಲಂಬಿಸಿದ್ದನು. ಮಾಂಸಾಹಾರಕ್ಕಾಗಿ ಬೇಟೆ ಆಡುತ್ತಿದ್ದನು. ಅವನಿಗೆ ಬೆಂಕಿಯ ಉಪಯೋಗ ತಿಳಿದಿರಲಿಲ್ಲ. ಸಾಮೂಹಿಕ ಅಥವಾ ಸಂಘಜೀವನ ಗೊತ್ತಿರಲಿಲ್ಲ. ಗುಹೆ, ಮರದ ಪೊಟರೆಗಳು, ಕಲ್ಲಿನ ಆಸರೆಗಳಲ್ಲಿ ಜೀವಿಸುತ್ತಿದ್ದನು. ನದಿಗಳ ಬಳಿಯಲ್ಲಿ ವಾಸಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಅವನಿಗೆ ಆಹಾರ ಸಂಗ್ರಹಣೆ ತಿಳಿದಿರಲಿಲ್ಲ. ದೇಹವನ್ನು ಮುಚ್ಚಿಡುವುದೂ ಸಹ ಗೊತ್ತಿರಲಿಲ್ಲ. ಗೆಡ್ಡೆ-ಗೆಣಸುಗಳನ್ನು ಅಗೆದು ಹೊರ ತೆಗೆಯಲು ಮತ್ತು ಪ್ರಾಣಿಗಳ ಭೇಟೆಗೆ ಒರಟಾದ ಕೈಕೊಡಲಿ, ಬಾಚಿ, ಭರ್ಚಿ, ಗುಂಡುಗಳಂತಹ ಶಿಲಾಯುಧಗಳನ್ನು ಬಳಸುತ್ತಿದ್ದನು. ತಾನು ವಾಸಿಸುವ ಗುಹೆಗಳ ಛಾವಣಿಗಳು ಮತ್ತು ಗೋಡೆಗಳ ಮೇಲೆ ಒರಟಾದ ರೇಖಾಚಿತ್ರಗಳನ್ನು ಅಂದಿನ ಕಾಲದ ಮಾನವನು ರಚಿಸಿದ್ದಾನೆ. ಹಳೆಶಿಲಾಯುಗವನ್ನು ವಿದ್ವಾಂಸರು ಪುನಃ ಕೆಳಗಿನ ಹಳೆಶಿಲಾಯುಗ (Lower paliolithic), ಮಧ್ಯದ ಹಳೆಶಿಲಾಯುಗ (Middle Paliolithic) ಮತ್ತು ಮೇಲಿನ ಹಳೆಶಿಲಾಯುಗ (Upper Paliolithic) ಎಂದು ವಿಭಾಗಿಸಿದ್ದಾರೆ. ಇವುಗಳಲ್ಲಿ ಮೊದಲನೆಯದು ಅತ್ಯಂತ ಪುರಾತನವಾಗಿದ್ದು, ನಂತರದ ಕಾಲಗಳು ಇತ್ತೀಚಿನವಾಗಿವೆ.

ಭಾರತದಲ್ಲಿನ ಹಳೆಶಿಲಾಯುಗದ ಪ್ರಮುಖ ನೆಲೆಗಳು: ಬಿಲಾನ್‌ ಕಣಿವೆ (ಉತ್ತರ ಪ್ರದೇಶ),  ಸೋಹನ್‌ ಕಣಿವೆ (ಪ್ರಸ್ತುತ ಪಾಕಿಸ್ತಾನದಲ್ಲಿದೆ), ಪಂಅಬ್‌ ಪಂಜಾಬ್‌, ಕಾಶ್ಮೀರ, ರಾಜಸ್ಥಾನ (Thar desert), ನರ್ಮದಾ ಕಣಿವೆ, ತುಂಗಭದ್ರಾ ಕಣಿವೆ, ಭಿಂಬೆಟ್ಕಾ (ಮಧ್ಯಪ್ರದೇಶ), ಗುಜರಾತಿನ ಮೇಲ್ಭಾಗ, ಬಿಹಾರದ ದಕ್ಷಿಣ ಭಾಗ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಇತ್ಯಾದಿ.

 

ಮಧ್ಯಶಿಲಾಯುಗದ ಮಾನವನ ಜೀವನ ಪದ್ಧತಿ (Mesolithic age:- ಸಾ.ಶ.ಪೂ. 9,000 ವರ್ಷಗಳಿಂದ ಸಾ.ಶ.ಪೂ. 4000 ವರ್ಷಗಳವರೆಗೆ.):- ಮೆಸೊಲಿಥಿಕ್‌ ಇದು ಗ್ರೀಕ್‌ ಮೂಲದ ಪದ. ಮೆಸೊ = ಮಧ್ಯ ಮತ್ತು ಲಿಥಿಕ್‌ = ಕಲ್ಲಿಗೆ ಸಂಬಂಧಿಸಿದುದು ಎಂದರ್ಥ. ಈ ಕಾಲದ ಮಾನವನು ಹಳೆಶಿಲಾಯುಗದ ಮಾನವನಿಗಿಂತ ಮುಂದುವರಿದವನಾಗಿದ್ದನು. ಈ ಯುಗದಲ್ಲಿ ಮಾನವನು ಹಿಂದಿನ ಯುಗದಂತಲ್ಲದೇ ಸೂಕ್ಷ್ಮವಾದ ಅಂದರೆ ಗಾತ್ರದಲ್ಲಿ ಕಿರಿದಾದ ಮತ್ತು ಹರಿತಗೊಳಿಸಿದ ಶಿಲಾಯುಧಗಳನ್ನು ಬಳಸಲು ಕಲಿತನು. ಶಿಲಾಯುಧಗಳನ್ನು ಹರಿತಗೊಳಿಸಲು ಅವುಗಳನ್ನು ಬಂಡೆಗಳ ಮೇಲೆ ಉಜ್ಜುವುದು ಅವನಿಗೆ ಈ ಕಾಲಕ್ಕೆ ತಿಳಿದಿತ್ತು. ಆದ್ದರಿಂದ ಈ ಕಾಲವನ್ನು ಸೂಕ್ಷ್ಮ ಶಿಲಾಯುಗ ಎಂತಲೂ ಕರೆಯುವರು. ಅಲೆಮಾರಿ ಜೀವನದ ಬದಲು ಒಂದೆಡೆ ನೆಲೆನಿಂತು ಜೀವಿಸುವುದನ್ನು ಕಲಿತನು. ಬಿಲ್ಲು-ಬಾಣಗಳ ಬಳಕೆ ಕಲಿತನು. ಶಿಲಾಯುಧಗಳಿಗೆ ರಂಧ್ರ ಕೊರೆದು ಮರ ಇಲ್ಲವೇ ಮೂಳೆಗಳ ಹಿಡಿಕೆಗಳನ್ನು ಅಳವಡಿಸಲು ಕಲಿತನು. ಪಶುಪಾಲನೆ ಕಲಿಯತೊಡಗಿದನು. ಕ್ರಮೇಣ ಒಂದೆಡೆ ಸಂಘಜೀವನ ನಡೆಸುವುದನ್ನು ಕಲಿತನು. ಆದ್ದರಿಂದ ಗುಹೆಗಳಲ್ಲಿ ಸಾಮೂಹಿಕ ಜೀವನದ ಪದ್ಧತಿ ಆರಂಭವಾಯಿತು. ಸೂಕ್ಷ್ಮವಾದ ಶಿಲಾಗಾಳಗಳಿಂದ ಮೀನುಗಾರಿಕೆಯನ್ನು ಕಲಿತನು. ಬೆಂಕಿಯ ಉಪಯೋಗ ಕಲಿತನು. ಒರಟಾದ ಮಡಕೆಗಳನ್ನು ಕೈಗಳಿಂದ ತಯಾರಿಸುವ ಕಲೆಯು ಸಹಾ ಅವನಿಗೆ ತಿಳಿದಿತ್ತು. ಸತ್ತವರನ್ನು ಹೂಳುವ ಿಲ್ಲವೇ ಸುಡುವ ಶವಸಂಸ್ಕಾರ ಪದ್ಧತಿಗಳನ್ನೂ ಇವನು ಕಲಿತನು. ದೇಹದ ರಕ್ಷಣೆಗೆ ಮರದ ತೊಗಟೆ, ಪ್ರಾಣಿಗಳ ಚರ್ಮವನ್ನು ಬಳಸಲು ಕಲಿತನು. ವಾಸಕ್ಕಾಗಿ ಗುಡಿಸಲಿನಂತಹ ರಚನೆಗಳನ್ನು ಸಹಾ ಇವನು ಮಾಡುವುದನ್ನು ಕಲಿತನು. ಪ್ರಾಣಿಗಳ ಮಾಂಸವನ್ನು ಸುಟ್ಟು ತಿನ್ನಲು ಕಲಿತನು. ಒಟ್ಟಿನಲ್ಲಿ ಈ ಕಾಲಘಟ್ಟವು ಹಳೆ ಮತ್ತು ನವಶಿಲಾಯುಗಗಳ ನಡುವಿನ ಸ್ಥಿತ್ಯಂತರದ ಕಾಲವೆಂದು ಗುರುತಿಸಲಾಗಿದೆ.

 

ನವಶಿಲಾಯುಗದ ಮಾನವನ ಜೀವನ ಪದ್ಧತಿ (Neolithic age:-ಸಾ.ಶ.ಪೂ. 7000 ವರ್ಷಗಳಿಂದ ಸಾ.ಶ.ಪೂ. 1000 ವರ್ಷಗಳವರೆಗೆ.):- ನಿಯೊಲಿಥಿಕ್‌ ಇದು ಗ್ರೀಕ್‌ ಪದ. Neo ಅಂದರೆ ಹೊಸ (New) ಮತ್ತು Litho ಎಂದರೆ ಶಿಲೆ ಅಥವಾ ಕಲ್ಲು ಎಂದರ್ಥ. ಈ ಕಾಲಘಟ್ಟದ ಮಾನವನು ಮಧ್ಯ ಶಿಲಾಯುಗದ ಮಾನವನಿಗಿಂತ  ಮತ್ತಷ್ಟು ಅಭಿವೃದ್ಧಿ ಹೊಂದಿದನು. ವ್ಯವಸ್ಥಿತವಾದ ಬೇಸಾಯ ಪದ್ಧತಿಯನ್ನು ಕಲಿತನು. ಪರಿಣಾಮವಾಗಿ ಹೆಚ್ಚು ಸಾಂಘಿಕ ಜೀವನ ಆರಂಭವಾಯಿತು. ಪಶುಪಾಲನೆಯನ್ನು ಉಪಕಸುಬಾಗಿಸಿಕೊಂಡನು. ಪ್ರಾಣಿಗಳನ್ನು ಪಳಗಿಸಿ ಕೃಷಿಗೆ ಬಳಸತೊಡಗಿದನು. ಭೂಮಿಯನ್ನು ಉಳುಮೆ ಮಾಡುವ, ಬಿತ್ತನೆ ಮಾಡುವ ಕಲೆಯನ್ನು ಕಲಿತನು. ಇದರಿಂದ ವಿವಿಧ ಧಾನ್ಯಗಳ ಬಳಕೆ ರೂಢಿಗೆ ಬಂದಿತು. ಚಕ್ರದ ಉಪಯೋಗ ಕಲಿತನು. ಇದರಿಂದ ಸಾಗಾಣಿಕೆಗೆ ಗಾಡಿಗಳ ಬಳಕೆ ಮತ್ತು ನಯವಾದ ಮಡಕೆಗಳನ್ನು ತಯಾರಿಸುವ ಕಲೆ ಕಲಿತನು. ಮಡಕೆಗಳನ್ನು ಸುಡುವ ಮತ್ತು ಅವುಗಳ ಮೇಲೆ ರೇಖಾಚಿತ್ರಗಳನ್ನೂ ಬರೆಯಲು ಕಲಿತನು. ಗುಹೆಗಳಲ್ಲಿ ಬೇಟೆ, ನೃತ್ಯ ಮೊದಲಾದ ಚಿತ್ರಗಳನ್ನು ಸ್ವಾಭಾವಿಕ ಬಣ್ಣಗಳಿಂದ ಮೂಡಿಸಲು ಕಲಿತನು. ಸಾಮೂಹಿಕವಾಗಿ ಒಂದೆಡೆ ಜೀವಿಸುವುದನ್ನು ಕಲಿತ ಕಾರಣ ಗ್ರಾಮಜೀವನ ಆರಂಭವಾಯಿತು. ಶಿಲಾಯುಧಗಳ ಜೊತೆಯಲ್ಲಿ ಲೋಹಗಳ ಬಳಕೆ ಸಹ ಕಲಿತನು. ಸತ್ತವರ ಶವಗಳನ್ನು ಹೂಳುವ ವ್ಯವಸ್ಥಿತ ಪದ್ಧತಿ ಕಲಿತನು. ಅಂದರೆ ಮಕ್ಕಳ ಶವಗಳನ್ನು ದೊಡ್ಡ ಮಡಕೆಗಳಲ್ಲಿಟ್ಟು ಹೂಳುವುದು, ಶವಗಳನ್ನು ಸುಟ್ಟ ನಂತರ ಉಳಿದ ಅವಶೇಷಗಳನ್ನು ಮಡಕೆಗಳಲ್ಲಿಟ್ಟು ಮನೆಯ ಮುಂಭಾಗದಲ್ಲಿ ಇಲ್ಲವೇ ಒಳಗಡೆ ಹೂಳುವುದನ್ನು ಈ ಕಾಲದ ಅವಶೇಷಗಳಿಂದ ಪತ್ತೆಹಚ್ಚಲಾಗಿದೆ. ಅಲ್ಲದೇ  ಶವಗಳನ್ನು ಬೃಹತ್‌ ಶಿಲಾಸಮಾಧಿಗಳಲ್ಲಿ ಸಂಸ್ಕಾರ ಮಾಡುವುದನ್ನು ಕಲಿತನು. ಅಂತಹ ಸಮಾಧಿಗಳಲ್ಲಿ ಸತ್ತವರು ಬಳಸುತ್ತಿದ್ದ ವಸ್ತುಗಳು, ಆಹಾರ ಪದಾರ್ಥಗಳು ಮತ್ತು ನಾಯಿಗಳ ಮೂಳೆಗಳು ಕಂಡುಬಂದಿವೆ. ಇದರಿಂದ ಅವನಿಗೆ ಸಾವಿನ ನಂತರದ ಜೀವನದಲ್ಲಿ ನಂಬಿಕೆ ಇರುವುದು ಕಂಡುಬರುತ್ತದೆ. ಧಾರ್ಮಿಕ ಆಚರಣೆಗಳ ಕುರುಹುಗಳು ಈ ಕಾಲದಲ್ಲಿ ಕಂಡುಬರುತ್ತವೆ. ಆದ್ದರಿಂದ ಈ ಕಾಲವನ್ನು ಬೃಹತ್‌ ಶಿಲಾಯುಗ ಕಾಲವೆಂತಲೂ ಕರೆಯುವರು. ಅಂತಹ ಶಿಲಾಸಮಾಧಿಗಳನ್ನು “ಡಾಲ್ಮೈನ್ಸ್‌”ಗಳೆಂದು ಕರೆಯುವರು. ಬಟ್ಟೆ ತಯಾರಿಸುವ ಕಲೆ ಕಲಿತನು. ಲೋಹಗಳ ಬಳಕೆ ತಿಳಿದಿದ್ದರಿಂದ ಭೂಮಿಯನ್ನು ಉಳುಮೆ ಮಾಡಲು ನೇಗಿಲುಗಳ ಬಳಕೆ ಕಲಿತನು. 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources