ಬಾಂಬೆ-ಕರ್ನಾಟಕದಲ್ಲಿನ ಜೈನ ಕೇಂದ್ರಗಳು
ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಳ್ಳೂರು, ತೇರದಾಳ,
ಲಕ್ಕುಂಡಿ, ಬೆಳಗಾವಿ, ಹಲಸಿ, ಅಮ್ಮಣಗಿ
ಕರ್ನಾಟಕದಲ್ಲಿ ಜೈನ ಧರ್ಮ:- ಕರ್ನಾಟಕದಲ್ಲಿ ಜೈನ ಧರ್ಮ
ಬಹಳ ಹಿಂದಿನಿಂದಲೂ ಪ್ರಚಲಿತವಾಗಿದೆ.
ಇಲ್ಲಿನ ಹಲವಾರು ಸಾಮ್ರಾಜ್ಯಗಳಾದ ಪಶ್ಚಿಮ ಗಂಗರು,
ಕದಂಬರು, ಪಲ್ಲವರು, ರಾಷ್ಟ್ರಕೂಟರು, ನೊಳಂಬರು
, ಸವದತ್ತಿಯ ರಟ್ಟರು, ಬಾದಾಮಿ ಮತ್ತು ಕಲ್ಯಾಣದ
ಚಾಲುಕ್ಯರು, ಹೊಯ್ಸಳರು)
ಜೈನ ಧರ್ಮಕ್ಕೆ ಆಶ್ರಯ
ನೀಡಿವೆ. ಕರ್ನಾಟಕದಲ್ಲಿ ಜೈನ ಧರ್ಮದ ಹಲವು
ಸ್ಮಾರಕಗಳು ಇವೆ, ಇದರಲ್ಲಿ ಬಸದಿಗಳು,
ಶಾಸನಗಳು, ಗೊಮ್ಮಟ, ಸ್ತಂಭಗಳು ಸೇರಿವೆ.
ಐತಿಹಾಸಿಕವಾಗಿ
ಕರ್ನಾಟಕದೊಂದಿಗೆ ಜೈನ ಧರ್ಮದ ಸಂಬಂಧ
ಕನಿಷ್ಠ ಕ್ರಿ.ಪೂ.೬ನೇ
ಶತಮಾನದಿಂದಲೇ ಇದೆ. ಪುರಾಣ ಕಾಲದಲ್ಲಿ
ಮಹಾವೀರ ಕರ್ನಾಟಕಕ್ಕೆ ಭೇಟಿ ನೀಡಿ ಹೇಮನಗರ
ದೇಶದ ಕುಂತಳ (ಕರ್ನಾಟಕ) ಪ್ರದೇಶದಲ್ಲಿನ
ರಾಜ ಜೀವಂಧರರಿಗೆ ಉಪದೇಶ
ನೀಡಿದರೆಂದು ಹೇಳಲಾಗುತ್ತದೆ. ಐತಿಹಾಸಿಕವಾಗಿ ಹೇಳುವುದಾದರೆ, ದಕ್ಷಿಣ
ಭಾರತದಲ್ಲಿ ಜೈನ ಧರ್ಮದ ಪ್ರಚಾರ ಕ್ರಿ.ಪೂ. ೩೦೦ ರಿಂದ
ಪ್ರಾರಂಭವಾಯಿತು. ಭದ್ರಬಾಹು ಎಂಬ ಜೈನ
ಮುನಿ ತನ್ನ ಶಿಷ್ಯ ಚಂದ್ರಗುಪ್ತ
ಮೌರ್ಯ(ಮೌರ್ಯ ವಂಶದ ಸ್ಥಾಪಕ)
ಹಾಗೂ ಇತರರೊಂದಿಗೆ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟ ಅಥವಾ
ರಿಶಿಗಿರಿಯಲ್ಲಿ ತಂಗಿದ್ದರು ಎಂದು ಅಲ್ಲಿನ ಶಾಸನಗಳು ಮಾಹಿತಿ ಒದಗಿಸುತ್ತವೆ.
ಕನ್ನಡದ ಮೊದಲ ಸಾಮ್ರಾಜ್ಯವಾದ ಕದಂಬರ ಕಾಲದಲ್ಲಿಯೇ
ಬೆಳಗಾವಿಯ ಹಲಸಿಯಲ್ಲಿ ಜೈನ ಬಸದಿ ನಿರ್ಮಾಣ ಮಾಡಿಸಿದ ಬಗ್ಗೆ ವಿವರಗಳು ಲಭ್ಯವಿವೆ. ನಂತರದ ಕಾಲದಲ್ಲಿ
ಜೈನ ಸನ್ಯಾಸಿಗಳಾದ ಜಿನಸೇನ, ಗುಣಭದ್ರ,
ಮಹಾವೀರ, ಅಕಲಂಕ, ಇಂದ್ರನಂದಿ, ಪುಷ್ಪದಂತ,
ಕನ್ನಡ ಸಾಹಿತ್ಯದ ತ್ರಿ-ರತ್ನಗಳಾದ
ಪಂಪ, ಪೊನ್ನ ಮತ್ತು ರನ್ನ
ಮುಂತಾದ ಪ್ರಖ್ಯಾತ ಜೈನ ಪ್ರಚಾರಕರು,
ತಪಸ್ವಿಗಳು ಮತ್ತು ಸನ್ಯಾಸಿಗಳು ಈ
ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದರು. 12 ನೇ ಶತಮಾನದ
ಮೊದಲು, ಜೈನ ಧರ್ಮವು ಈ
ಪ್ರದೇಶದ ಪ್ರಬಲ ಧರ್ಮವಾಗಿತ್ತು. ಒಂದು
ಕಾಲಕ್ಕೆ ಕರ್ನಾಟಕದ ಒಟ್ಟು ಜನಸಂಖ್ಯೆಯ
ಮೂರನೇ ಒಂದು ಭಾಗದಷ್ಟು ಜನರು
ಜೈನರಾಗಿದ್ದರು. ವಿಶೇಷವಾಗಿ ರಾಷ್ಟ್ರಕೂಟರು, ಚಾಲುಕ್ಯರು ಮತ್ತು ಅವರ
ಸಾಮಂತರಾದ ಹೈಹಯರು ಮತ್ತು ಕಳಚುರಿಗಳ
ಆಳ್ವಿಕೆಯಲ್ಲಿ, ಜೈನಧರ್ಮವು ತನ್ನ ಉತ್ತುಂಗವನ್ನು
ತಲುಪಿತು. ಈ ದೃಷ್ಟಿಯಿಂದ ಬಾಂಬೆ ಕರ್ನಾಟಕದ ಭಾಗದಲ್ಲಿಯೂ ಅನೇಕ
ಜೈನ ಕೇಂದ್ರಗಳಿದ್ದುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಅಲ್ಲದೇ ಇಂದಿಗೂ ಸಹ ಈ ಭಾಗದ ಅನೇಕ ಸ್ಥಳಗಳಲ್ಲಿ
ಜೈನ ಬಸದಿ ಮತ್ತು ದೇವಾಲಯಗಳು ಉಳಿದುಬಂದಿವೆ. ಅವುಗಳ ವಿವರಗಳನ್ನು ಕೆಳಗೆ ನೋಡಬಹುದು.
ಬಾದಾಮಿ:
ಇಲ್ಲಿನ ಕೊನೆಯ ಗುಹೆಯಲ್ಲಿ ಬಾಹುಬಲಿಯ ವಿಗ್ರಹ ಕಂಡು ಬಂದಿದ್ದು, ಅದು ಜೈನ ಧರ್ಮಕ್ಕೆ ಸೇರಿದ್ದಾಗಿದೆ.
ಐಹೊಳೆ:
ಇಲ್ಲಿನ ಮೇಣ ಬಸದಿ ಅಥವಾ ರವಿಕೀರ್ತಿಯ ಶಾಸನವಿರುವ ದೇವಾಲಯವು ಜೈನರ ಕೇಂದ್ರವಾಗಿದೆ.
ಪಟ್ಟದಕಲ್ಲು
ಜೈನರ ದೇವಾಲಯ:- ಪಟ್ಟದಕಲ್ಲು
ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ
ಪಾರಂಪರಿಕ ತಾಣ. ಇದು ಮಲಪ್ರಭಾ
ನದಿಯ ದಡದಲ್ಲಿದ್ದು, ಯುನೆಸ್ಕೋದ ವಿಶ್ವ ಪರಂಪರೆಯ
ತಾಣವಾಗಿ ಘೋಷಿಸಲ್ಪಟ್ಟಿದೆ. ಕಿಸುವೊಳಲು ಇದರ ಪ್ರಾಚೀನ ಹೆಸರು. ಚಾಲುಕ್ಯ
ರಾಜರ ಪಟ್ಟಾಭಿಷೇಕ ನಡೆಯುತ್ತಿದ್ದುದು ಇದೇ ಸ್ಥಳದಲ್ಲಿ ಎಂದು ನಂಬಲಾಗಿದೆ. ಕ್ರಿ.ಶ.9ನೇ
ಶತಮಾನದಲ್ಲಿ ರಾಷ್ಟ್ರಕೂಟರು ಈ ಪ್ರದೇಶವನ್ನು
ಆಳುವಾಗ ಜೈನ ದೇವಾಲಯವನ್ನು ನಿರ್ಮಿಸಿದರು,
ಸ್ಥಳಿಯರು ಇದನ್ನು ಜೈನ ನಾರಾಯಣ
ದೇವಾಲಯ ಎಂದೂ ಕರೆಯುತ್ತಾರೆ. ಈ
ದೇವಾಲಯದಲ್ಲಿ ದ್ರಾವಿಡರ ಶೈಲಿಯ ವಾಸ್ತುಶಿಲ್ಪವನ್ನು
ಕಾಣಬಹುದಾಗಿದೆ. ಈ ದೇವಾಲಯವನ್ನೂ
ಕೂಡ ಮೂರು ಗದ್ದಿಗೆಯ
ಕಲ್ಲಿನ ಮೇಲೆ ನಿರ್ಮಾಣ ಮಾಡಲಾಗಿದೆ.
ಇದು ಪ್ರವಾಸಿಗರ ಅತ್ಯಂತ
ಆಕರ್ಷಣೀಯ ತಾಣವಾಗಿದ್ದು ಪಟ್ಟದಕಲ್ಲಿಗೆ ಭೇಟಿ ನೀಡುವವರೆಲ್ಲರೂ ಇಲ್ಲಿಗೆ
ಭೇಟಿ ನೀಡಲೇ ಬೇಕು. ಈ ದೇವಾಲಯವನ್ನು
ರಾಷ್ಟ್ರಕೂಟರ ಅಮೋಘವರ್ಷ ಅಥವಾ ಆತನ ಮಗ
2ನೇ ಕೃಷ್ಣ ನಿರ್ಮಿಸಿರಬಹುದು
ಎಂದು ನಂಬಲಾಗಿದೆ. ದೇವಾಲಯದ ಕಟ್ಟಡ ಮೂರು
ಅಂತಸ್ಥಿನದಾಗಿದ್ದು, ಕೆಳಭಾಗದ ಎರಡು ಭಾಗಗಳಿಗೆ
ಈಗಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು
ದೇವಾಲಯದಲ್ಲಿ ಅಂತರಾಳ, ಮುಖ ಮಂಟಪ, ಮಂಟಪ
ಹಾಗೂ ವಿಶಾಲವಾದ ಅಂಗಳವನ್ನು ಕಾಣಬಹುದು.
ದೇವಾಲಯದ ಹೊರಭಾಗವಾದ ಕಕ್ಷಾಸನದಲ್ಲಿ(ಉನ್ನತಾಸನ)ಕಂಚಿನ ಉಬ್ಬು
ಕಲಾಕೃತಿಯಲ್ಲಿ ನೃತ್ಯಗಾರ್ತಿಯರು, ನಿಧಿಗಳು, ವ್ಯಾಲಾಗಳು ಹಾಗೂ
ಪೂರ್ಣ-ಘಟ್ಟಗಳನ್ನು ಕಾಣಬಹುದಾಗಿದೆ. ಈ ಮಂಟಪದಲ್ಲಿ
ದೊಡ್ಡ ಆನೆಯ ಮೇಲೆ ಮಾವುತ
ಕುಳಿತಿರುವ ಚಿತ್ರವನ್ನು ಬಿಡಿಸಲಾಗಿದೆ. ಮಂಟಪದ ಪ್ರವೇಶ ದ್ವಾರದ
ಬಳಿ ಪೂಜಿಸಲ್ಪಡುವ ಪೂರ್ಣ-ಘಟ್ಟದಲ್ಲಿ ಶಂಕನಿಧಿ ಹಾಗೂ
ಪದ್ಮನಿಧಿಯ ಆರು ಗಾಯನ ತಂಡಗಳ
ಚಿತ್ರಗಳಿವೆ. ಇದಲ್ಲದೆ ಅಂತರಾಳ ಹಾಗೂ
ಮಂಟಪದಲ್ಲಿ ದೊಡ್ಡ ದೊಡ್ಡ ಕಂಬಗಳನ್ನು
ಪ್ರವಾಸಿಗರು ವೀಕ್ಷಿಸಬಹುದು.
ಹಲಸಿ:
ದಿಗಂಬರ ಜೈನ ಬಸದಿ: ಪಾಳುಬಿದ್ದ ದಿಗಂಬರ ಜೈನ ಬಸದಿಯು ವರಾಹ ನರಸಿಂಹ ದೇವಾಲಯದ ಪಕ್ಕದಲ್ಲಿ ಆಗ್ನೇಯ
ದಿಕ್ಕಿನಲ್ಲಿ ಇದೆ. ಇದು ಸೈಕ್ಲೋಪಿಯನ್ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಶಿಖರವನ್ನು ಹೊಂದಿಲ್ಲ.
ಮಂಟಪವು ಮಧ್ಯಕಾಲೀನ ಪ್ರಕಾರದ ಸುರುಳಿಯಾಕಾರದ ಮತ್ತು ಕೆತ್ತಿದ ಕಂಬಗಳಿಂದ ಸುತ್ತುವರಿದಿದೆ. ಈ ಬಸದಿಯು
11 ಅಥವಾ 12 ನೇ ಶತಮಾನಕ್ಕೆ ಸೇರಿದೆ.
ಲಕ್ಕುಂಡಿ:-
ಬ್ರಹ್ಮ ಜಿನಾಲಯ:- ಲಕ್ಕುಂಡಿಯ ಮೊದಲಿನ ಹೆಸರು ಲೋಕಿಗುಂಡಿ ಎಂದಾಗಿತ್ತು. ಇದು ಜೈನ ದೇವಸ್ಥಾನಗಳಿಗೆ
ಹೆಸರುವಾಸಿಯಾಗಿದೆ. ಇಲ್ಲಿನ ಮಹಾವೀರ ಜೈನ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.
ಇಲ್ಲಿನ ಹಲವಾರು ಬಸದಿಗಳಲ್ಲಿ ಬ್ರಹ್ಮ ಜಿನಾಲಯವು ಜನಪ್ರಿಯ ಜೈನ ಮಂದಿರಗಳಲ್ಲಿ ಒಂದಾಗಿದೆ. ಜೈನ ಸಾಹಿತ್ಯದಲ್ಲಿ
ಬರುವ ದಾನಚಿಂತಾಮಣಿ ಅತ್ತಿಮಬ್ಬೆ ಈ ಬ್ರಹ್ಮ ಜಿನಾಲಯವನ್ನು ನಿರ್ಮಿಸಿದಳು ಎಂದು ಹೇಳಲಾಗುತ್ತದೆ.
ಹಳ್ಳೂರು ಜೈನ
ಬಸದಿ:- ಹಳ್ಳೂರು ಗ್ರಾಮವು ಬಾಗಲಕೋಟೆ ಜಿಲ್ಲೆಯ
ಬಾಗಲಕೋಟೆ ತಾಲೂಕಿನಲ್ಲಿದೆ. ಇದು ಬಾಗಲಕೋಟೆಯಿಂದ 22 ಕಿಮೀ
ದೂರದಲ್ಲಿದೆ. 9 ನೇ ಶತಮಾನದಲ್ಲಿ
ರಾಷ್ಟ್ರಕೂಟರು ನಿರ್ಮಿಸಿದ ಈ ಜೈನ
ದೇವಾಲಯವು ಇಲ್ಲಿನ ಪ್ರಸಿದ್ಧ ಆಕರ್ಷಣೆಯಾಗಿದೆ.
ಇದು ಚೌಕಾಕಾರದ ಗರ್ಭಗುಡಿ,
ಅರ್ಧ ಮಂಟಪ ಮತ್ತು ವಿಶಾಲವಾದ
ನವರಂಗವನ್ನು ಹೊಂದಿದೆ. ನವರಂಗವು 20 ಕಂಬಗಳನ್ನು
ಹೊಂದಿದ್ದು ಅವುಗಳಲ್ಲಿ ನಾಲ್ಕು ಅಲಂಕಾರಿಕವಾಗಿವೆ.
ಅರ್ಧ ಮಂಟಪದ ಎರಡೂ ಬದಿಯಲ್ಲಿ
ದ್ವಾರಪಾಲಕ ಮತ್ತು ಜೈನರ ಆಕೃತಿಗಳನ್ನು
ಕಾಣಬಹುದು. ನವರಂಗದ ಹೊರಗೋಡೆಗಳಲ್ಲಿ ಸಮಭಂಗಿಯಲ್ಲಿರುವ
24 ತೀರ್ಥಂಕರರನ್ನು ಚೆನ್ನಾಗಿ ಕೆತ್ತಲಾಗಿದೆ.
ತೇರದಾಳ:-
ತೇರದಾಳ ಗ್ರಾಮವು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿದೆ. ಇಲ್ಲಿ ಕಂಡುಬರುವ ಜೈನರ ಕೇಂದ್ರಗಳು ಕೆಳಗಿನಂತಿವೆ:
- ಶ್ರೀ ಭಗವಾನ್ ನೇಮಿನಾಥ
ದಿಗಂಬರ ಜೈನ ಬಸದಿ (1008 ನೇಮಿನಾಥ
ಗೊಂಕ ಜಿನಾಲಯ).
- ಶ್ರೀ ಭಗವಾನ್ ಅಜಿತನಾಥ
ದಿಗಂಬರ ಜೈನ ಬಸದಿ.
- ಶ್ರೀ ಭಗವಾನ್ ಪಾರ್ಶ್ವನಾಥ
ದಿಗಂಬರ ಜೈನ ಬಸದಿ, ಗುರುಕುಲ
ಕ್ಯಾಂಪಸ್.
- ಶ್ರೀ ಭಗವಾನ್ ಮಹಾವೀರ
ದಿಗಂಬರ ಜೈನ ಬಸದಿ.
- ಶ್ರೀ ಭಗವಾನ್ ವಾಸುಪೂಜ್ಯ
ದಿಗಂಬರ ಜೈನ ಬಸದಿ, ಕುಡಚಿ
ರಸ್ತೆ.
- ಶ್ರೀ ದಿಗಂಬರ ಜೈನ
ಬಸದಿ, ದೇಸಾಯಿ ಕೆರೆ.
ಅಮ್ಮನಗಿ:-
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಒಂದು ಗ್ರಾಮ.
ಬೆಳಗಾವಿಯ ಕಮಲ ಬಸದಿ:- ಚಾಲುಕ್ಯ ಶೈಲಿಯ ಈ ಬಸದಿಯನ್ನು
ರಟ್ಟ ರಾಜವಂಶದ ನಾಲ್ಕನೆಯ ಕಾರ್ತವೀರ್ಯನ
ಕಾಲದಲ್ಲಿ ಆತನ ಮಂತ್ರಿಯಾದ ಬಿಚಿರಾಜನು
ಕಟ್ಟಿಸಿದನು. ರಟ್ಟರು ರಾಷ್ಟ್ರಕೂಟರ ಅಚ್ಚ
ಕನ್ನಡ ಸಾಮಂತ ರಾಜರು. ಮೊದಲು
ಸುಗಂಧವರ್ತಿ (ಈಗಿನ ಸವದತ್ತಿ) ಮತ್ತು
ನಂತರ ವೇಣುಗ್ರಾಮ(ಬೆಳಗಾವಿ)ದಿಂದ
ರಾಜ್ಯವಾಳಿದರು. ಅವರ ಕಾಲದಲ್ಲಿ ಪಾರಸಗಡ
ಮತ್ತು ಬೆಳಗಾವಿಯ ಕೋಟೆಗಳು ಕಟ್ಟಲ್ಪಟ್ಟವು.
ಇಪ್ಪತ್ತೆರಡನೇಯ ಜೈನ ತೀರ್ಥಂಕರನಾದ ಶ್ರೀ
ನೇಮಿನಾಥನ ದೇವಾಲಯವಾದ ಈ ಬಸದಿಗೆ
'ಕಮಲ ಬಸದಿ' ಎಂಬ ಹೆಸರು
ಬಂದಿರುವುದು ದೇವಸ್ಥಾನದ
ರಂಗಮಂಟಪದ ಮೇಲ್ಛಾವಣಿಯಲ್ಲಿ ಕೆತ್ತಲ್ಪಟ್ಟ ಸುಂದರ ಕಮಲದ ಹೂವಿನಿಂದ.
ಒಂದು ಅಖಂಡ ಕಲ್ಲಿನಲ್ಲಿ ಸಮರೂಪವಾಗಿ
ಮೂಡಿ ಬಂದ ಈ ಶಿಲ್ಪ
ಬೆರಗುಗೊಳಿಸುವಂಥಾದ್ದು. ಅದು ಹೇಗೆ ಅಷ್ಟೊಂದು
ಕರಾರುವಾಕ್ಕಾಗಿ ಈ ಶಿಲ್ಪವನ್ನು
ಕಟೆದಿದ್ದಾರೆ ಮತ್ತು ಎಲ್ಲಿಯೂ ಊನವಾಗದಂತೆ
ಮೇಲ್ಛಾವಣಿಗೆ ಏರಿಸಿದ್ದಾರೆ ಎಂಬ ವಿಸ್ಮಯ ಉಂಟಾಗುತ್ತದೆ.
ಕಮಲ ಬಸದಿಯ ಕಂಬಗಳು
ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು,
ಅದೆಷ್ಟು ನುಣುಪಾಗಿವೆಯೆಂದರೆ, ಅವುಗಳಲ್ಲಿ ನಮ್ಮ ಪ್ರತಿಬಿಂಬ
ಕಾಣಬಹುದು. ಬಸದಿಯ ಪ್ರಾಕಾರದಿಂದ ಗರ್ಭಗುಡಿಯವರೆಗೆ
ಒಟ್ಟು ನಾಲ್ಕು ಬಾಗಿಲುಗಳಿದ್ದು, ಪ್ರತಿ
ಬಾಗಿಲಿನಲ್ಲಿ ಸೂಕ್ಷ್ಮವಾದ ಕೆತ್ತನೆಯ ಕೆಲಸವಿದ್ದು, ಒಳಗಿನ
ಕಂಬಗಳಲ್ಲಿ ಕೂಡಾ ಸುಂದರವಾಗಿ ಕಲ್ಲಿನಲ್ಲಿ
ಮೂಡಿಸಿದ ಚಿತ್ತಾರಗಳಿವೆ. ಸುಂದರ ವಿನ್ಯಾಸಗಳಲ್ಲದೇ ಅನೇಕ
ಪೌರಾಣಿಕ ಪ್ರಸಂಗಗಳ ಕೆತ್ತನೆಯನ್ನು ಕಾಣಬಹುದು.
ಗರ್ಭ ಗುಡಿಯಲ್ಲಿರುವ ಭಗವಾನ್ ನೇಮಿನಾಥನ ದಿವ್ಯವಾದ
ಕಪ್ಪು ಶಿಲೆಯ ಮೂರ್ತಿಯು
ಸುಮಾರು ಎರಡು ನೂರು ವರ್ಷಗಳ
ಹಿಂದೆ ಕಾಡಿನಲ್ಲಿ ದೊರೆಯಿತು. ಭಗವಾನ್
ನೇಮಿನಾಥನ ವಿಗ್ರಹದ ಹಿಂದೆ ಇರುವ
ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು. ಕಲ್ಪ
ವೃಕ್ಷ, ಕಾಮಧೇನು ಮತ್ತು ಅನೇಕ
ಜೀವ ಜಂತುಗಳ ಸೂಕ್ಷ್ಮ
ಕೆತ್ತನೆ ಈ ಪ್ರಭಾವಳಿಯನ್ನು
ಅಲಂಕೃತಗೊಳಿಸಿ ಗರ್ಭ ಗುಡಿಯ ದಿವ್ಯತೆಗೆ
ಮೆರುಗು ತಂದಿವೆ. ನೇಮಿನಾಥನ ವಿಗ್ರಹದ
ಜೊತೆಗೆ ಕಪ್ಪುಶಿಲೆಯ ನವಗೃಹವಿದೆ. ಭಗವಾನ್ ಸುಮತಿನಾಥ, ಭಗವಾನ್
ಪಾರ್ಶನಾಥ ಮತ್ತು ಭಗವಾನ್ ಆದಿನಾಥರ
ಸುಂದರ ವಿಗ್ರಹಗಳನ್ನು ಕೂಡ ಕಾಣಬಹುದು. ಇಡೀ
ದೇಶದಲ್ಲಿ ಕಮಲದ ಛಾವಣಿಯಿರುವ ಮುಖಮಂಟಪ,
ಕಪ್ಪು ಶಿಲೆಯ ನವಗ್ರಹ ಮತ್ತು
ಸೂಕ್ಷ್ಮ ಕೆತ್ತನೆಯ ಪ್ರಭಾವಳಿ, ಈ
ಮೂರೂ ಇರುವ ಬಸದಿ ಇದೊಂದೇ.
ಬೆಳಗಾವಿಯ ಕಿಲ್ಲಾದಲ್ಲಿ ಒಂದು ಕಾಲಕ್ಕೆ ಇಪ್ಪತ್ತಕ್ಕೂ
ಹೆಚ್ಚು ಬಸದಿ, ಗುಡಿಗಳಿದ್ದವು. ಆದರೆ
ಶತೃಗಳ ದಾಳಿಯಿಂದ ಅನೇಕ
ಬಸದಿ, ಗುಡಿಗಳು ನಷ್ಟಗೊಂಡವು. ನಂತರದಲ್ಲಿ
ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದರಿಂದ ಇನ್ನಷ್ಟು ಶಿಥಿಲಗೊಂಡು ಅವನತಿಗೀಡಾದವು.
*****
Comments
Post a Comment