ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

 

"ಶಕ್ತಿ ವಿಶಿಷ್ಟಾದ್ವೈತ"ವು ಲಿಂಗಾಯತ ಧರ್ಮದ ಸಿದ್ಧಾಂತ. ಅದರ ಸಾರವನ್ನು ಹೀಗೆ ಹೇಳಬಹುದು:-

"ಜಗತ್ತಿನ ಅತ್ಯಂತಿಕ ತತ್ವವೆಂದರೆ ಪರಮಾತ್ಮನು! ಅವನು ಒಬ್ಬನು. ಇವನು ಒಂದು ವಿಶೇಷ ಶಕ್ತಿಯಿಂದ ವಿಶೇಷಿತನಾಗಿದ್ದಾನೆ. ಅದುವೆ ಚಿಚ್ಛಕ್ತಿ; ಈ ಶಕ್ತಿ-ಶಿವ ಎರಡು ಬೇರೆ ಬೇರೆ ವ್ಯಕ್ತಿಗಳಲ್ಲ, ತತ್ವಗಳು. ಶಕ್ತಿಯು ಆಗಂತುಕವಾಗಿ ಬಂದು ಸೇರಿದುದಲ್ಲ, ಅಂತರ್ಗತವಾಗಿ ಇರುವಂಥಾದ್ದು. ಶಿವ-ಶಕ್ತಿಯರ ಸಂಬಂಧ ಬಿಚ್ಚಿ ಬೇರಾಗದ ಬೆರಸಿ ಒಂದಾಗದ ಅವಿನಾಭಾವ ಸಂಬಂಧ. ತನ್ನ ಅಂತರ್ಗತ ಶಕ್ತಿಯ ಸಹಾಯದಿಂದಲೇ ದೇವನು ಈ ಜಗತ್ತಿನ ತಂದೆ ಮತ್ತು ತಾಯಿ ಎರಡೂ ಆಗಿದ್ದಾನೆ.

 

ಜಗತ್ತಿನ ತಂದೆ-ತಾಯಿ ಯಾರು?

ಪಂಚಭೂತಗಳ ಪ್ರಸರಣವೇ ಸೃಷ್ಟಿ. ಪೃಥ್ವಿ, ಆಪ್ ಅಥವಾ ಜಲ, ತೇಜ ಅಥವಾ ಅಗ್ನಿ, ವಾಯು ಆಕಾಶ ಎಂಬ ಐದು ಭೂತಗಳು ಪರಸ್ಪರ ಬೆರೆತಾಗ, ವಿವಿಧ ಪ್ರಮಾಣದಲ್ಲಿ ಒಡೆದು ಒಂದು ಗೂಡಿದಾಗ ಈ ಪ್ರಕೃತಿಯ ರಚನೆ. ಮನುಷ್ಯನ ದೇಹವು ಈ ಐದು ತತ್ವಗಳಿಂದ ಆಗಿದೆ ಎನ್ನಲಾಗಿದೆ; ಎಂತಲೇ ಮರಣದ ನಂತರ ಶರೀರವು ಪಂಚಬೂತಗಳಲ್ಲಿ ಲೀನವಾಯಿತು ಎನ್ನಲಾಗುತ್ತದೆ. ಅಂದರೆ, ಮಾನವ ದೇಹ ನಮ್ಮ ಅಧ್ಯಯನದ ಅಳವಿಗೆ ಸಿಕ್ಕುವಂತಹುದು. ಪೃಥ್ವಿ ತತ್ವದ ಪರಿಣಾಮವೇ ಚರ್ಮ, ಮಾಂಸ, ಮೂಳೆ ಮುಂತಾದವು. ಜಲ ತತ್ವದ ಅಸ್ತಿತ್ವವನ್ನು ಸಾರುವವು ಅವುಗಳ ಪರಿಣಾಮಗಳಾದ ರಕ್ತ, ಕಣ್ಣೀರು, ಮೂತ್ರ ಮುಂತಾದವು. ತೇಜಸ್ ತತ್ವದ ಪರಿಣಾಮವೇ ಮೈಯ ಉಷ್ಣತೆ, ನಾಡಿಯಲ್ಲಿ ಅಗ್ನಿ, ಜಠರಾಗ್ನಿ, ಮುಂತಾದವು. ವಾಯುವಿನ ಅಸ್ತಿತ್ವವನ್ನು ದೃಢೀಕರಿಸುವುವು ಪಂಚ ಪ್ರಾಣಗಳಾದ ಪ್ರಾಣ, ಅಪಾನ, ವ್ಯಾನ, ಉದಾನ, ಮತ್ತು ಸಮಾನ. ಈ ಎಲ್ಲ ವಸ್ತುಗಳೂ ವ್ಯವಸ್ಥಿತವಾಗಿ ಇರಲಿಕ್ಕೆ ಇಂಬುಗೊಡುವುದೇ ಆಕಾಶ. ಹೀಗೆ ಮಾನವನ ದೇಹದಲ್ಲಿ ಪಂಚಭೂತಗಳು ಇವೆ. ಈ ಪಂಚಭೂತಗಳು ಪರಿವರ್ತಿತ ಮತ್ತು ಮೂಲಭೂತ ಎರಡೂ ರೂಪಗಳಲ್ಲಿ ಬ್ರಹ್ಮಾಂಡದಲ್ಲಿವೆ. ಹೀಗೆ ಬ್ರಹ್ಮಾಂಡದಲ್ಲಿರುವುದೆಲ್ಲ ಪಿಂಡಾಂಡದಲ್ಲಿದೆ; ಪಿಂಡಾಂಡದಲ್ಲಿರುವುದೆಲ್ಲ ಬ್ರಹ್ಮಾಂಡದಲ್ಲಿದೆ. ಪಿಂಡಾಂಡಕ್ಕೆ ಅಂದರೆ ಮಾನವ ಶರೀರಕ್ಕೆ ತಾಯಿ - ತಂದೆಗಳುಂಟು. ಹಾಗಾದರೆ ಬ್ರಹ್ಮಾಂಡಕ್ಕೆ ತಾಯಿ ತಂದೆ ಯಾರು? ಅವರೇ ಶಿವ-ಶಕ್ತಿಯರು, ಪಿಂಡಾಂಡದ ತಾಯಿ ತಂದೆಯರಂತೆ ಅವರು ಖಂಡಿತ ಸ್ವರೂಪರಲ್ಲ; ಮಾಂಸ ಶರೀರಿಗಳಲ್ಲ, ಮತ್ತು ಬೇರೆ ಬೇರೆ ವ್ಯಕ್ತಿಗಳಲ್ಲ. ಇರುವವನು ಪರಮಾತ್ಮನೊಬ್ಬನೇ, ಅವನೇ ಈ ಜಗತ್ತಿನ ತಂದೆ ಮತ್ತು ತಾಯಿ.

ತಂದೆ ನೀನು ತಾಯಿ ನೀನು

ಬಂಧು ನೀನು ಬಳಗ ನೀನು

ನೀನಲ್ಲದೆ ಮತ್ತಾರೂ ಇಲ್ಲವಯ್ಯಾ

ಕೂಡಲಸಂಗಮದೇವಾ - ಗುರು ಬಸವಣ್ಣನವರು

ಲಿಂಗವೆನ್ನಯ ತಂದೆ ಲಿಂಗವೆನ್ನಯ ತಾಯಿ

ಲಿಂಗವೆನ್ನಯ ಪರಮಜ್ಞಾನಮೂರ್ತಿ

ಲಿಂಗ ಗುರುಮೂರ್ತಿಯ ಪಾದಕ್ಕೆ ಶರಣೆಂದು

ಲಿಂಗ ನಾ ನೀನಾದೆ ಯೋಗಿನಾಥ. - ಸಿದ್ಧರಾಮೇಶ್ವರರು.

ನಿಮಿತ್ತ ಕಾರಣವಾಗಿ ಸೃಷ್ಟಿಗೆ ತಂದೆಯಾಗುವನು ದೇವರೇ, ಉಪಾದಾನ ಕಾರಣನಾಗಿ ಅದಕ್ಕೆ ತಾಯಿಯಾಗುವವನು ದೇವರೇ, ಆಮೇಲೆ ಬಂಧು-ಬಳಗವಾಗಿ ಕಷ್ಟ ಸುಖದಲ್ಲಿ ನೆರವಾಗುವವನೂ ಅವನೇ, ಪರಮ ಜ್ಞಾನಮೂರ್ತಿ ಗುರುವಾಗಿ ಮಾರ್ಗವನ್ನು ತೋರಿಸುವವನೂ ಅವನೇ! ಹೀಗೆ ಶಕ್ತಿ ವಿಶಿಷ್ಟನಾದ ದೇವರು ಜಗತ್ತಿನ ತಂದೆ-ತಾಯಿ.

ಕೆಲವು ಶೈವಸಿದ್ಧಾಂತಕಾರರು ಶಿವಾಧಿಕ್ಯವನ್ನು ಪ್ರತಿಪಾದಿಸುವರು, ಶಾಕ್ತರು ಶಕ್ತಿಯೇ ಅಧಿಕವೆಂದೂ ಹೇಳುವರು. ಆದರೆ ಶಕ್ತಿ ವಿಶಿಷ್ಟಾದ್ವೈತವು ಶಿವತತ್ವವನ್ನು ಆತ್ಯಂತಿಕವೆಂದೂಪ್ಪಿದರೂ ಶಕ್ತಿ ಇಲ್ಲದ ಶಿವನನ್ನು ಕಲ್ಪಿಸಲು ಸಾಧ್ಯವೆನ್ನದು. ಶಿವ ಪುರಾಣ ಶಾಕ್ತ ಪುರಾಣಗಳು ಶಿವ-ಶಕ್ತಿಯರ ಮೂರ್ತಲೀಲೆಗಳನ್ನು ವರ್ಣಿಸುತ್ತ ಒಬ್ಬರಿಗಿಂತ ಒಬ್ಬರು ಮಿಗಿಲೆಂದು ವರ್ಣಿಸುವುದನ್ನು, ಪಾರ್ವತಿಯಿಂದ ಮಾಡಲಾಗದುದನ್ನು, ಶಿವ ಮಾಡಿದನೆನ್ನುವುದು, ಶಿವನಿಂದ ಮಾಡಲಾಗದುದನ್ನು, ಶಕ್ತಿ ಮಾಡಿದಳೆನ್ನುವುದನ್ನು ಕಾಣಬಹುದು. ಇಂತಹ ರಂಜನೀಯ ಕಪೋಲ ಕಲ್ಪಿತ ಕಥೆಗಳ ಗೋಜಿಗೆ ಹೋಗದೆ ವಚನಕಾರರು ಶಕ್ತಿ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸುವರು. ದೇವರ ಸ್ವರೂಪವನ್ನು ಹೇಳುವ ಉರಿಲಿಂಗ ಪೆದ್ದಿಗಳ ಒಂದು ವಚನ ನೋಡಿರಿ.

ಲಿಂಗವೆಂಬುದು ಪರಾಶಕ್ತಿಯುಕ್ತ

ಲಿಂಗವೆಂಬುದು ಪರಶಿವನ ನಿಜ ದೇಹ

ಲಿಂಗವೆಂಬುದು ಪರಶಿವನ ಘನತೇಜ

ಲಿಂಗವೆಂಬುದು ಪರಶಿವನ ತಾನು

ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ ತಾನು

ಎಂದು ಹೇಳುವರು.

ಇಲ್ಲಿ "ಲಿಂಗ" ಪದ ನಿರ್ದೇಶಿಸುವುದು ಜಗತ್ಕರ್ತನನ್ನು, ಪರಮಾತ್ಮನು ಪರಾಶಕ್ತಿ ಸಹಿತನಾಗಿದ್ದಾನೆ; ಪ್ರಕಾಶ ಸ್ವರೂಪನಾಗಿದ್ದಾನೆ; ಷಡಧ್ವಮಯ ಜಗತ್ತಿಗೆ ಜನ್ಮ ಭೂಮಿಯಾಗಿದ್ದಾನೆ.

ಲಿಂಗ, ಪರಶಿವ ಮುಂತಾದ ಪದಗಳೆಲ್ಲ ನಿರಾಕಾರ ದೇವನನ್ನು ನಿರ್ದೇಶಿಸುವುದನ್ನು ಸ್ಪಷ್ಟವಾಗಿ ಮನಗಾಣಬಹುದು. ಲಿಂಗವಂತ ಧರ್ಮವು ಪ್ರತಿಪಾದಿಸುವುದು ನಿರಾಕಾರ ತತ್ವಗಳಾದ ವಿಶ್ವಾತ್ಮ ಮತ್ತು ವಿಶ್ವ ಶಕ್ತಿಗಳನ್ನೇ ವಿನಾ ಮೂರ್ತ ರೂಪದ ಶಿವ-ಪಾರ್ವತಿಯರನ್ನಲ್ಲ. ಸೃಷ್ಟಿಯಲ್ಲಿ ಒಂದು ಶಕ್ತಿ (Energy) ಇದೆ ಎಂಬುದಾಗಿಯೂ, ಮೂಲ ಶಕ್ತಿಯೇ ಪದಾರ್ಥವಾಗಿ (matter) ರೂಪುಗೊಂಡಿದೆ ಎಂದು ವಿಜ್ಞಾನಿಗಳು ಒಪ್ಪುತ್ತಾರೆ, ಆದರೆ ಅವರ ಪ್ರಕಾರ ಅದು ಜಡಶಕ್ತಿ (material energy); ಅಧ್ಯಾತ್ಮವಾದಿಗಳ ಪ್ರಕಾರ ಅದು ಚೈತನ್ಯ ಶಕ್ತಿ (Spiritual energy) ಮತ್ತು ಸಚ್ಚಿದಾನಂದಾತ್ಮಕವಾದುದು. ನಮ್ಮ ದಿನನಿತ್ಯದ ಅನುಭವದಲ್ಲಿಯೂ ಕಾಣಬಹುದು; ಪೃಥ್ವಿಯಲ್ಲಿ ಧಾರಣಶಕ್ತಿ (gravitation) ಇದೆ; ನೀರಿನಲ್ಲಿ ಅಪ್ಯಾಯನ ಶಕ್ತಿ ಇದೆ, ಅಗ್ನಿಯಲ್ಲಿ ದಹನ ಶಕ್ತಿ ಇದೆ; ವಾಯುವಿನಲ್ಲಿ ಚಲನ ಶಕ್ತಿಯಿದೆ; ಆಕಾಶದಲ್ಲಿ ಅವಕಾಶ ಶಕ್ತಿ, ಇಂಬಿಟ್ಟುಕೊಳ್ಳುವ ಶಕ್ತಿಯಿದೆ. ಹಾಗೆ ಆತ್ಮನಲ್ಲಿ ಜ್ಞಾನಶಕ್ತಿ ಇದೆ.

ನಮ್ಮ ಎಲ್ಲ ಇಂದ್ರಿಯಗಳಲ್ಲಿಯೂ ಒಂದೊಂದು ಶಕ್ತಿ ಇದೆ; ನಾಲಿಗೆಯ ವಾಕ್ ಶಕ್ತಿ; ಮೂಗಿನಲ್ಲಿ ಗಂಧ ಗ್ರಹಣ ಶಕ್ತಿ, ಕಣ್ಣಿನಲ್ಲಿ ದೃಷ್ಟಿಶಕ್ತಿ, ಕಿವಿಯ ಶ್ರವಣ ಶಕ್ತಿ ಇದೆ ಹೀಗೆ ಅಭಿವ್ಯಕ್ತಿ ಸೃಷ್ಟಿಯಲ್ಲಿ ಇರುವ ಶಕ್ತಿ, ಮೂಲದಲ್ಲಿಯೂ ಇರಲೇ ಬೇಕಷ್ಟೇ. ಅದುವೇ ಚಿಚ್ಛಕ್ತಿ. ಪರಮಾತ್ಮನಲ್ಲಿರುವ ಈ ಮೂಲ ಚಿಚ್ಛಕ್ತಿಯಲ್ಲಿ ಪುನ: ಮೂರು ಸೂಕ್ಷ್ಮ ಮುಖಗಳನ್ನು ಗುರುತಿಸಲಾಗಿದೆ. ಅವೇ ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಸೃಷ್ಟಿಯ ರಚನೆಗೆ ಇವೆಲ್ಲವೂ ಅತ್ಯವಶ್ಯಕವೇ, ಯಾವುದೊಂದು ಕೆಲಸವನ್ನು ನಾವು ಮಾಡಬೇಕಾದರೂ ಜ್ಞಾನ, ಇಚ್ಛಾ, ಕ್ರಿಯಾಶಕ್ತಿಗಳು ಬೇಕೇ ಬೇಕಾದಂತೆ ಸೃಷ್ಟಿ ರಚನೆಗೂ ಬೇಕು. ಈ ಮೂರರ ಸಮುಚ್ಛಯವೇ ಚಿಚ್ಛಕ್ತಿ.

 

ಅಭಿನ್ನ ನಿಮಿತ್ತೋಪಾದಾನ ಕಾರಣ

ಶಕ್ತಿ ವಿಶಿಷ್ಟನಾದ ಪರಮಾತ್ಮನು ಈ ಜಗತ್ತಿಗೆ ಎಂಥ ಕಾರಣನು? ಎಂಬುದನ್ನು ಈಗ ನೋಡೊಣ. ಜೈನ ಮತ್ತು ಬೌದ್ಧ ಧರ್ಮಗಳು ಕರ್ತನನ್ನು ಒಪ್ಪುವುದಿಲ್ಲ; ಮತ್ತು ಈ ಸೃಷ್ಟಿಯು ರಚನೆಯಾಗಿದೆ ಎಂದು ಪ್ರತಿಪಾದಿಸುವುದಿಲ್ಲ; ’ಸೃಷ್ಟಿಯು ಅನಾದಿಯು; ಎಂದಿನಿಂದಲೂ ಇದೆ, ಎಂದೋ ಒಂದು ದಿನ ರೂಪುಗೊಂಡುದಲ್ಲ ಎಂಬುದು ಆ ಧರ್ಮಗಳ ವಿಚಾರಧಾರೆ. ಇನ್ನು ಶಂಕರಾಚಾರ್ಯರ ಬ್ರಹ್ಮಾದ್ವೈತ ಸಿದ್ಧಾಂತವು ಪ್ರತಿಪಾದಿಸುವುದು ವಿವರ್ತವಾದವನ್ನು. "ಸೃಷ್ಟಿ ವಾಸ್ತವಿಕವಾಗಿ ಇಲ್ಲವೇ ಇಲ್ಲ. ಕತ್ತಲೆಯಲ್ಲಿ ಹಗ್ಗವನ್ನು ಕಂಡು ಹಾವೆಂದು ಭ್ರಮೆ ಪಡುವಂತೆ ಅಜ್ಞಾನದಲ್ಲಿ ಬ್ರಹ್ಮನಿಗೆ ಸೃಷ್ಟಿಯನ್ನು ಆರೋಪಿಸುತ್ತೇವೆ. ವಾಸ್ತವಿಕವಾಗಿ ಸೃಷ್ಟಿ ಇಲ್ಲ". ಶಕ್ತಿ ವಿಶಿಷ್ಟಾದ್ವೈತವು ವಾಸ್ತವಿಕತೆಯನ್ನು, ಇರುವಿಕೆಯನ್ನು ಒಪ್ಪುತ್ತದೆ. ಈ ಜಗತ್ತು ದೇವನ ಲೀಲಾರಂಗ ಎನ್ನುತ್ತದೆ. ಇದನ್ನು ಸಾಧಕ, ಪೂರಕವಾಗಿ ಮಾಡಿಕೊಂಡು ಆ ಕರ್ತನನ್ನು ಕಾಣಬೇಕು ಎನ್ನುತ್ತದೆ. ಆ ಕರ್ತನೆ ಈ ಜಗತ್ತಿಗೆ ತಾಯಿ-ತಂದೆ ಎನ್ನುತ್ತದೆ.

ತಂದೆ ನೀನು ತಾಯಿ ನೀನು

ಬಂಧು ನೀನು ಬಳಗ ನೀನು

ಎನ್ನುವಲ್ಲಿ ಈ ಸತ್ಯವು ಪ್ರತಿಪಾದಿತವಾಗಿದೆ. ಯಾವುದೇ ವಸ್ತು ಸಿದ್ಧವಾಗಬೇಕಾದರೆ ಎರಡು ಕಾರಣಗಳು ಬೇಕು. ಒಂದು ಉಪಾದಾನ ಕಾರಣ, ಇನ್ನೊಂದು ನಿಮಿತ್ತ ಕಾರಣ. ಉದಾಹರಣೆಗೆ, ಮೇಜನ್ನು ಮಾಡಬೇಕಾದರೆ ಕಟ್ಟಿಗೆ ಉಪಾದಾನ ಕಾರಣ ಬಡಗಿಯು ನಿಮಿತ್ತ ಕಾರಣ. ಅಂತೆಯೇ ಮಡಕೆಯನ್ನು ಮಾಡಬೇಕಾದರೆ ಮಣ್ಣು ಉಪಾದಾನ ಕಾರಣ, ಕುಂಬಾರ ನಿಮಿತ್ತ ಕಾರಣ. ಬಟ್ಟೆಯನ್ನು ನೇಯಬೇಕಾದರೆ ನೂಲು ಉಪಾದಾನ ಕಾರಣ, ನೇಕಾರನು ನಿಮಿತ್ತ ಕಾರಣ; ಮಗುವಿಗೆ ತಂದೆಯು ನಿಮಿತ್ತಕಾರಣ, ತಾಯಿಯು ಉಪಾದಾನ ಕಾರಣ. ಹಾಗಾದರೆ ಈ ಜಗತ್ತೆಂಬ ಶಿಶುವಿಗೆ ಉಪಾದಾನ ಕಾರಣವೇನು? ನಿಮಿತ್ತ ಕಾರಣರಾರು? ಶಿವನೇ ನಿಮಿತ್ತ ಕಾರಣ, ಅವನಲ್ಲಿ ಅಂತರ್ಗತವಾಗಿರುವ ಶಕ್ತಿಯೇ ಉಪಾದಾನ ಕಾರಣ. ಹೀಗಾಗಿ ಶಕ್ತಿ ವಿಶಿಷ್ಟನಾದ ದೇವನೇ ಈ ಜಗತ್ತಿಗೆ ಅಭಿನ್ನ ನಿಮಿತ್ತೋಪಾದಾನ ಅಂದರೆ ನಿಮಿತ್ತ ಮತ್ತು ಉಪದಾನ ಎರಡೂ ಒಂದೇ ಆಗಿರುವ ದೇವನು ಕಾರಣನು.

ಕೀಟಕ ಸೂತ್ರದ ನೂಲ ಗೂಡ ಮಾಡಿಕೊಂಡಿಪ್ಪಲ್ಲಿ

ಸೂತ್ರಕ್ಕೆ ನೂಲನ್ನು ಅದೆಲ್ಲಿಂದ ತಂದಿತ್ತಯ್ಯಾ?

ರಾಟಿ ಇಲ್ಲ ಅದಕ್ಕೆ ಹಂಜಿ ಮುನ್ನವೇ ಇಲ್ಲ, ನೂತವರಾರೋ?

ತನ್ನೊಡಲ ನೂಲ ತೆಗೆದು ಪಸರಿಸಿ ಅದರೊಳು ಪ್ರೀತಿಯಿಂದಾಡಿ

ತುದಿಯಲ್ಲಿ ತನ್ನೊಳಗದ ಮಡಗಿ ಕೊಂಡಿಪ್ಪಂತೆ

ತನ್ನಿಂದ ಆದ ಜಗವ ತನ್ನೊಳಗೈದಿಸಿಕೊಳ್ಳಬಲ್ಲ

ನಮ್ಮ ಕೂಡಲಸಂಗಮದೇವರು. - ಗುರು ಬಸವಣ್ಣನವರು

ಜೇಡರ ಹುಳು (ಅಥವಾ ರೇಷ್ಮೆಯ ಹುಳು) ಒಂದು ಬಲೆಯನ್ನು ನೇಯುತ್ತದೆ. ಇದಕ್ಕೆ ನೂಲನ್ನು ಎಲ್ಲಿಂದ ತಂದಿತ್ತು? ನೇಯಲಿಕ್ಕೆ ರಾಟಿಯೂ ಇಲ್ಲ. ಈ ಬಲೆಯನ್ನು ನೇಯ್ದವರಾರು? ತನ್ನೊಳಗೆ ಅಂತರ್ಗತವಾಗಿರುವ ಜೋಲ್ಲು ರಸವನ್ನೇ ಹೊರಗೆ ತಂದುಕೊಂಡು ತಾನೇ ಬಲೆಯನ್ನು ನೆಯ್ದು, ಅದರಲ್ಲಿ ಆಟವಾಡಿಕೊಂಡಿರುವುದಷ್ಟೇ. ಅದೇ ರೀತಿ ಪರಮಾತ್ಮನು ತನ್ನಲ್ಲಿ ಅಂತರ್ಗತವಾಗಿರುವ ಪರಾಶಕ್ತಿಯನ್ನೇ ಉಪಾದಾನ ಕಾರಣವನ್ನಾಗಿ ಮಾಡಿ, ತಾನು ನಿಮಿತ್ತ ಕಾರಣನಾಗಿ ಈ ಜಗತ್ತೆಂಬ ಬಲೆಯನ್ನು ನೇಯುವನು. ತಾನು ಹೀಗೆ ಅಭಿನ್ನ ನಿಮಿತ್ತೋಪಾದಾನ ಕಾರಣನಾಗಿ ಜಗತ್ತಿಗೆ ತಂದೆ-ತಾಯಿ ಎರಡೂ ಆಗುವನು. ಹೇಗೆ ಜೇಡರ ಹುಳುವು ಜಡವಾದ ಬಲೆಯನ್ನು ನೇಯ್ದು, ಚೇತನಮಯವಾದ ಮರಿಗಳನ್ನು ಹುಟ್ಟಿಸುವುದೋ ಹಾಗೆ ದೇವನು ಜಡವಾದ ಜಗತ್ತನ್ನು ನಿರ್ಮಿಸುವನು; ಚೇತನ ಮಯವಾದ ಜೀವಾತ್ಮರುಗಳನ್ನು ಸೃಷ್ಟಿಸುವನು. ಸ್ವ ಇಚ್ಛೆಯಿಂದಲೇ ಈ ವಿನೋದವನ್ನು ಮಾಡುವನು.


ಗ್ರಂಥ ಋಣ:

೧) ವಿಶ್ವಧರ್ಮ ಪ್ರವಚನ: ಲೇಖಕರು ಪೂಜ್ಯ ಶ್ರೀ ಮಾತೆ ಮಹಾದೇವಿಯವರು, ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources