ಬಾದಾಮಿ ಚಾಲುಕ್ಯರ ಕಾಲದ ಸಾಂಸ್ಕೃತಿಕ ಕೊಡುಗೆಗಳು
ಪೀಠಿಕೆ:- ಕರ್ನಾಟಕದಲ್ಲಿ
ಬಾಳಿ ಬದುಕಿದ ಅರಸು ಮನೆತನಗಳು
ಅಂತಸ್ತು, ಗೌರವ, ಪ್ರತಿಷ್ಠೆಯಿಂದ ರಾಜ್ಯವಾಳಿವೆ.
ಹೀಗೆ ಆತ್ಮಶ್ರೀ, ಪ್ರತಿಷ್ಠೆಯಿಂದ ರಾಜ್ಯವಾಳಿದ
ಅರಸು ಮನೆತನ ಬಾದಾಮಿ ಚಾಲುಕ್ಯರದು.
ಬಾದಾಮಿಯನ್ನು ಸಂಸ್ಕೃತಿಯ ಉತ್ಕೃಷ್ಟದ ಕೇಂದ್ರವನ್ನಾಗಿಸಿಕೊಂಡು
ಕರ್ನಾಟಕ ಸಂಸ್ಕೃತಿಗೆ ಭದ್ರಬುನಾದಿ ಹಾಕಿ ಸುಮಾರು ಇನ್ನೂರು
ವರ್ಷ ರಾಜ್ಯವಾಳಿದರು. ಇವರ ಆಳ್ವಿಕೆಯ ಕಾಲ
ಕರ್ನಾಟಕದಲ್ಲಿ ಸುವರ್ಣಯುಗವೆಂದು ಹೆಸರಾಗಿದೆ.
ಚಾಲುಕ್ಯರು
ಸಾಮ್ರಾಜ್ಯದ ಭದ್ರತೆ ಮತ್ತು ವಿಶಾಲ
ವಿಸ್ತಾರಕ್ಕಾಗಿ ತಮ್ಮ ಸುತ್ತ ಮುತ್ತಲಿನ
ಮಂಡಲೇಶ್ವರ, ಸಾಮಂತರೊಡನೆ ರಕ್ತ ಸಂಬಂಧ ಬೆಸೆದು
ಅನುಕೂಲ ಕಲ್ಪಿಸಿಕೊಂಡಿದ್ದರು. ಇವರಲ್ಲಿ ಸಮಾನ ಅಂತಸ್ತು,
ಗೌರವ, ಮನಸ್ಸು ಮನಗಂಡ ಚಾಲುಕ್ಯರು
ಸಂಬಂಧವನ್ನು ಸದೃಢಗೊಳಿಸಿಕೊಳ್ಳುವಲ್ಲಿ ಪ್ರಯನ್ನಶೀಲರಾಗಿದ್ದರು. ಇದರಿಂದಾಗಿ ಸಾಮಂತರ ಅಂತಸ್ತು,
ಗೌರವ, ಪ್ರತಿಷ್ಠೆಗೆ ಗರಿಮೂಡಿಸಿದಂತಾಗಿತ್ತು. ಹೀಗೆ ಬಾಂಧವ್ಯದ ಬೆಸುಗೆಯಲ್ಲಿ
ಪಾಲುಗಾರರಾದವರಲ್ಲಿ ಪ್ರಮುಖರು ಗಂಗರು, ಬಟ್ಟೂರ
ಕುಲದವರು, ಸೇಂದ್ರಕರು, ಕದಂಬರು, ಆಳುಪರು ಮತ್ತು
ಕಲಚೂರ್ಯರು. ಇವರನ್ನೆಲ್ಲ ತಬ್ಬಿಕೊಂಡು ಚಾಲುಕ್ಯರು ಕರ್ನಾಟಕ ಸಂಸ್ಕೃತಿಯನ್ನು
ವಿಶಾಲವಾದ ರಾಜ್ಯದಲ್ಲಿ ಪಸರಿಸಿದರು. ಅವರ
ಕಾಲದ ವಿವಿದ ಕ್ಷೇತ್ರಗಳಲ್ಲಿನ ಕೊಡುಗೆಗಳನ್ನು
ಶಾಸನ ಹಾಗೂ ಮತ್ತಿತರ ಆಧಾರಗಳ
ಮೇಲೆ ಈ ಕೆಳಗಿನಂತೆ
ವಿವರಿಸಬಹುದು.
ಬಾದಾಮಿ ಚಾಲುಕ್ಯರ ಕಾಲದ ಶೈಕ್ಷಣಿಕ
ವ್ಯವಸ್ಥೆ
ಪ್ರಾಚೀನ ಭಾರತದಲ್ಲಿಯ ವಿಧ್ಯಾಭ್ಯಾಸ ಪದ್ಧತಿಯು ಬಹುಪಾಲು ಧಾರ್ಮಿಕವಾಗಿದ್ದು
ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ನೀಡುವಂಥದಾಗಿತ್ತು. ಆತ್ಮಜ್ಞಾನ ಅಥವಾ ಮೋಕ್ಷ
ಸಾಧನೆಯನ್ನು ಹೊಂದುವುದಕ್ಕೆ ಶಿಕ್ಷಣವು ಒಂದು ಸಾಧನವಾಗಿತ್ತು.
‘ಸಾ ವಿದ್ಯಾ ಯಾ
ವಿಮುಕ್ತಯೇ’
ಅಂದರೆ ಯಾವುದು ನಮ್ಮನ್ನು ಮುಕ್ತರನ್ನಾಗಿ
ಮಾಡುತ್ತದೋ ಅದೇ ವಿದ್ಯೆ ಎಂದು
ಪ್ರಾಚೀನರು ನಂಬಿದ್ದರು. ವಿದ್ಯೆಯಿಂದ ಲೌಕಿಕ ಸುಖವೂ ಪ್ರಾಪ್ತವಾಗುತ್ತದೆ.
ವಿದ್ಯೆಯಿಂದ ಧನ, ಧನದಿಂದ ಧರ್ಮ,
ಧರ್ಮದಿಂದ ಸುಖ ಲಭಿಸುತ್ತದೆ. ಇದು
ಪ್ರಾಚೀನರು ಕಂಡುಕೊಂಡ ಮಾರ್ಗವಾಗಿತ್ತು.
ಬಾದಾಮಿ ಚಾಲುಕ್ಯರ ಕಾಲದಲ್ಲಿಯೂ ಶಿಕ್ಷಣದ
ಉದ್ದೇಶ ಇದೇ ಆಗಿತ್ತೆಂದು ತಿಳಿಯಲು
ಅವಕಾಶವಿದೆ. ಅವರ ಶಿಕ್ಷಣ ವ್ಯವಸ್ಥೆಯನ್ನು
ಅಧ್ಯಯನದ ಅನುಕೂಲತೆಗಾಗಿ, ೧. ಬೌದ್ದ
ಶಿಕ್ಷಣ ೨. ಜೈನ
ಶಿಕ್ಷಣ ಹಾಗೂ ೩. ವೈದಿಕ
ಶಿಕ್ಷಣ ಎಂದು ಮೂರು ಬಗೆ
ಯಾಗಿ ವಿಂಗಡಿಸಬಹುದು.
೧. ಬೌದ್ಧ ಶಿಕ್ಷಣ
ಬೌದ್ಧ ಶಿಕ್ಷಣ ವ್ಯವಸ್ಥೆಯ ಪ್ರಮುಖ
ಲಕ್ಷಣವೆಂದರೆ ಸಂಘದಲ್ಲಿ ಸೇರಿಸಿಕೊಳ್ಳುವಾಗ ಜಾತಿ
ಭೇದ ಎನ್ನದೆ ಎಲ್ಲರನ್ನೂ
ಸೇರಿಸಿಕೊಳ್ಳುವುದು ಮತ್ತು ಅವರಿಗೆ ಧರ್ಮೋಪದೇಶ
ಮಾಡುವುದರ ಮೂಲಕ ಸಾಮೂಹಿಕ ಶಿಕ್ಷಣವನ್ನು
ನೀಡುವುದು. ಹೀಗಾಗಿ ಜಾತ್ಯತೀತತೆಯನ್ನು ಶಿಕ್ಷಣ
ವ್ಯವಸ್ಥೆಯಲ್ಲಿ ಮೊದಲು ಅಳವಡಿಸಿದ ಶ್ರೇಯಸ್ಸು
ಬೌದ್ಧರಿಗೆ ಸಲ್ಲುತ್ತದೆ.
ಬೌದ್ಧ ವಿಹಾರದಲ್ಲಿ ಹಿರಿಯ ಭಿಕ್ಷುವಿನ ಮಾರ್ಗದರ್ಶನದಲ್ಲಿ
ಅನೇಕ ಶಿಷ್ಯ ವರ್ಗದವರು ವಾಸಿಸುತ್ತಿದ್ದರು.
ಹೀಗಾಗಿ ಅಲ್ಲಿ ಅನೇಕ ಕೋಣೆಗಳನ್ನು
ನಿರ್ಮಿಸಲಾಗುತ್ತಿತ್ತು. ಮುಂದೆ ಇವೇ ಬೌದ್ಧ
ಶಿಕ್ಷಣ ಕೇಂದ್ರಗಳಾಗಿ ಮಾರ್ಪಾಡು ಹೊಂದಿದವು. ಇಂತಹ
ವಿಹಾರಗಳ ಉಲ್ಲೇಖಗಳು ಬಾದಾಮಿ ಚಾಲುಕ್ಯರ
ಶಾಸನಗಳಲ್ಲಿ ಲಭ್ಯವಾಗದಿದ್ದರೂ ಅವರ ಕಾಲದಲ್ಲಿ ಸಂಘಾರಾಮ,
ವಿಹಾರ, ಚೈತ್ಯಾಲಯಗಳಿದ್ದವೆಂಬುದು ಹ್ಯೂಯೆನ್ತ್ಸಾಂಗನ ಪ್ರವಾಸ
ಕಥನದಿಂದ ತಿಳಿದುಬರುತ್ತದೆ. ಇತ್ಸಿಂಗನ ಪ್ರವಾಸ ಕಥನದಲ್ಲಿಯೂ
ಬೌದ್ಧ ವಿಹಾರಗಳಿದ್ದುದರ ಉಲ್ಲೇಖಗಳಿವೆ.
ಐಹೊಳೆಯಲ್ಲಿರುವ
ಐದು ಗುಹಾಲಯಗಳಲ್ಲಿ ಒಂದು
ಬೌದ್ಧ ಧರ್ಮಕ್ಕೆ ಸೇರಿದ್ದಾಗಿದೆ. ಈ
ಚೈತ್ಯಾಲಯದಲ್ಲಿ ಅಂದು ಬೌದ್ಧಶಿಕ್ಷಣ ನಡೆಯುತ್ತಿರಬೇಕೆಂದು
ಊಹಿಸಲು ಅವಕಾಶವಿದೆ.
೨. ಜೈನ ಶಿಕ್ಷಣ ವ್ಯವಸ್ಥೆ
ಬೌದ್ಧರಂತೆ
ಜೈನರು ಕೂಡ ಕರ್ನಾಟಕದಲ್ಲಿ ತಮ್ಮ
ವಿದ್ಯಾಭ್ಯಾಸ ಕ್ರಮವನ್ನು ಅನುಸರಿಸಿದರು. ಜೈನ
ಬಸದಿಗಳು ಪ್ರಾರಂಭದಲ್ಲಿ ಜೈನಯತಿಗಳು ಚಾತುರ್ಮಾಸದಲ್ಲಿ ನಾಲ್ಕು
ತಿಂಗಳು ತಾತ್ಪೂರ್ತಿಕ ತಂಗುವ ತಾಣಗಳಾಗಿದ್ದವು. ನಂತರ
ಸದಾ ನೆಲೆಯೂರಿ ನಿಲ್ಲುವ
ಸ್ಥಳಗಳಾಗಿ ಪರಿಣಮಿಸಿದವು. ಅನಂತರ ಅಲ್ಲಿಗೆ ಶಿಷ್ಯವೃಂದವು
ಬಂದು ಸೇರಿ ಅಲ್ಲಿ ವಿದ್ಯಾದಾನ,
ಶಾಸ್ತ್ರದಾನ, ಅಷ್ಟವಿಧಾರ್ಚನ, ಹೋಮ ಸಲ್ಲೇಖನ ಮುಂತಾದವು
ನಡೆದವು. ಅಲ್ಲದೇ ಜೈನ ಮುನಿಗಳು
ಸಂಚಾರವನ್ನು ಕಡಿಮೆ ಮಾಡಿ ಬಸದಿಗಳಲ್ಲಿದ್ದು
ಶಿಷ್ಯರಿಗೆ ಬೋಧನೆಯನ್ನು ಮಾಡತೊಡಗಿದರು. ಹೀಗಾಗಿ ಬಸದಿಗಳು ಮುನಿಗಳ
ವಾಸಸ್ಥಾನವು, ದೇವಮಂದಿರಗಳು ಹಾಗೂ ವಿದ್ಯಾಕೇಂದ್ರಗಳಾಗಿಯೂ ಮುಂದುವರೆದವು.
ಜೈನ ಶಿಕ್ಷಣದ ಪ್ರಮುಖವಾದ ಅಂಶಗಳೆಂದರೆ
ಜಾತಿಪದ್ಧತಿ, ಮೇಲುಕೀಳು, ಗಂಡು‑ಹೆಣ್ಣು
ಎಂಬ ಭೇದ‑ಭಾವನೆಯನ್ನು
ಹೋಗಲಾಡಿಸಿ ಅದನ್ನು ಸಾರ್ವತ್ರಿಕಗೊಳಿಸಿದ್ದು ಜೈನ
ಶಿಕ್ಷಣದ ವಿಶೇಷ ಲಕ್ಷಣ. ಅದರಂತೆಯೇ
ಪ್ರಾಂತೀಯ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದರು. ಇದರಿಂದ
ಹೆಚ್ಚು ಜನ ವಿದ್ಯಾವಂತರಾಗಲು
ಅವಕಾಶವಾಯಿತು. ಜೈನರಲ್ಲಿ ಶಿಕ್ಷಕನಾದವನು ಧರ್ಮಬೋಧಕನು,
ಧರ್ಮಪ್ರಚಾರಕನೂ, ಶಿಕ್ಷಕನೂ ಹೌದು. ಅಂತೆಯೇ
ಅವರಲ್ಲಿ ಶಿಕ್ಷಣ, ಧರ್ಮ, ಅಧ್ಯಯನಗಳು
ಸಕ್ರಿಯವಾಗಿ ಹಾಸುಹೊಕ್ಕಾಗಿವೆ.
ಬಾದಾಮಿ ಚಾಲುಕ್ಯರು ಜೈನಧರ್ಮಕ್ಕೆ ಸಾಕಷ್ಟು
ಪ್ರೋತ್ಸಾಹ ನೀಡುವುದರ ಮೂಲಕ ಬಸದಿಗಳ
ನಿರ್ಮಾಣವಲ್ಲದೆ ಜೈನಮುನಿಗಳಿಗೆ, ಸಂಘಗಳಿಗೆ ದಾನವನ್ನು ನೀಡುವುದರ
ಮೂಲಕ ಜೈನಶಿಕ್ಷಣವನ್ನು ಪ್ರೋತ್ಸಾಹಿಸಿದರು. ಮಂಗಳೇಶನ ಹೂಲಿಯ ತಾಮ್ರಪಟ
ಶಾಸನದಲ್ಲಿ ಚಾಲುಕ್ಯ ಮನೆತನದ ಸಾಮಂತ
ರಾಜನಾದ ಸೇಂದ್ರಕ ಮನೆತನದ ರವಿ
ಶಕ್ತಿ ಮತ್ತು ಕಣ್ಣಶಕ್ತಿಯರು ತಮ್ಮ
ಆಡಳಿತದಲ್ಲಿದ್ದ ಕಿರುವಟ್ಟಿಕೆಯಲ್ಲಿಯ ೫೫ ನಿವರ್ತನ
ಭೂಮಿಯನ್ನು ಹದಿನಾರನೆಯ ತೀರ್ಥಂಕರನಾದ ಶಾಂತಿನಾಥ
ಚೈತ್ಯಾಲಯಕ್ಕೆ ದಾನ ಬಿಟ್ಟ ವಿಷಯವನ್ನು
ಹೇಳಿದೆ. ಎರಡನೆಯ ಪುಲಕೇಶಿಯ ಐಹೊಳೆಯ
ಪ್ರಶಸ್ತಿಯ ಕರ್ತೃವಾದ ರವಿಕೀರ್ತಿಯು ಜೈನನಾಗಿದ್ದುದಲ್ಲದೆ,
ಜೈನಗೃಹವೊಂದನ್ನು ಕಟ್ಟಿಸಿದನೆಂದು ತಿಳಿದು ಬರುತ್ತದೆ. ಶಾಸನದ
ಕೊನೆಯಲ್ಲಿ ಹತ್ತು ಗ್ರಾಮಗಳನ್ನು ಈ
ಜಿನೇಂದ್ರಾಲಯದ ಉಪಭೋಗಕ್ಕೆ ಬಿಟ್ಟಂತೆ ಹೇಳಿದೆ.
ಇದನ್ನು ಗಮನಿಸಿದರೆ ಅಲ್ಲಿ ಮುನಿಪರಂಪರೆಯೇ
ಇದ್ದು ಶಿಷ್ಯವರ್ಗದವರಿಗೆ ಜೈನ ದರ್ಶನವನ್ನು ಹೇಳಿಕೊಡುತ್ತಿದ್ದಿರಬೇಕು.
ಪುಲಿಗೆರೆಯು
ಇವರ ಕಾಲದ ಪ್ರಮುಖ
ಜೈನ ಕೇಂದ್ರವಾಗಿತ್ತು. ಎರೆಯಮ್ಮನ
ಕಾಲದಲ್ಲಿ ವಿಜಯಶಕ್ತಿಯ ಮೊಮ್ಮಗನಾದ ಕುಂದಶೆಟ್ಟಿಯ ಮಗ
ದುರ್ಗಶಕ್ತಿಯು ಪುಲಿಗೆರೆಯ ಶಂಖ ಜಿನೇಂದ್ರ
ಚೈತ್ಯಾಲಯಕ್ಕೆ ದತ್ತಿಯನ್ನು ನೀಡಿರುವುದನ್ನು ಅಲ್ಲಿರುವ ಶಾಸನವೊಂದು ಹೇಳಿದೆ.
ಕ್ರಿ.ಶ.೬೮೩ರ
ವಿಜಯಾದಿತ್ಯನ ಶಾಸನವು ಅಲ್ಲಿಯ ಮೂಲ
ಸಂಘದ ದೇವಗಣತಿಲಕನಾದ ಧ್ರುವ ದೇವಾಚಾರ್ಯ ಎಂಬುವವನ
ಧರ್ಮೋಪದೇಶದಂತೆ ಶಂಖ ಬಸದಿಯ ದುರಸ್ತಿಗೆ
ಪೂಜೆಗೆ ಮತ್ತು ದಾನಶಾಲೆಗೆ ಮತ್ತು
ಬೆಳೆವಲ ಮೂರುನೂರರಲ್ಲಿಯ ಹಡಿಗಿಲೆ ಎಂಬ ಗ್ರಾಮವನ್ನು
ದಾನಬಿಟ್ಟ ವಿಷಯವನ್ನು ಉಲ್ಲೇಖಿಸುತ್ತದೆ.
ಪುಲಿಗೆರೆಯಲ್ಲಿ
ಇದ್ದ ನಿರವದ್ಯ ಪಂಡಿತರು ಚಾಲುಕ್ಯ
ದೊರೆ ವಿಜಯಾದಿತ್ಯನಿಗೆ ರಾಜಗುರುವಾಗಿದ್ದರೆಂದು ಕ್ರಿ.ಶ.೭೩೦ರ
ಶಾಸನವೊಂದರಿಂದ ತಿಳಿದು ಬರುತ್ತದೆ. ವಿಜಯಾದಿತ್ಯನು ತನ್ನ ಧರ್ಮಗುರುಗಳಾದ ನಿರವದ್ಯ
ಪಂಡಿತರ ಧರ್ಮೋಪದೇಶದಂತೆ ಶಂಖ ಜಿನೇಂದ್ರ ಬಸದಿಗೆ
ಕದಂಬ ಎಂಬ ಗ್ರಾಮವನ್ನು ದತ್ತಿಯಾಗಿ
ನೀಡಿದನು. ಅವನ ಸಹೋದರಿ ಕುಂಕುಮ
ಮಹಾದೇವಿಯು ಅಲ್ಲಿ ಆನೆಯ ಸಜ್ಜೆ
ಬಸದಿಯನ್ನು ನಿರ್ಮಿಸಿದಳೆಂದು ಹೇಳಿದುದಲ್ಲದೆ ಅದಕ್ಕೆ ರಾಜನು ದಾನ
ನೀಡಿರುವುದನ್ನು ಶಾಸನವು ಉಲ್ಲೇಖಿಸಿದೆ. ಎರಡನೆಯ
ವಿಕ್ರಮಾದಿತ್ಯನು ಕ್ರಿ.ಶ. ೭೩೫ರಲ್ಲಿ
ಪುಲಿಗೆರಿಯಲ್ಲಿರುವ ಧವಳ ಜಿನಾಲಯಕ್ಕೆ ನೀಡಿದ
ಭೂದಾನವನ್ನು ತಿಳಿಸುತ್ತದೆ. ಎರಡನೆಯ ಕೀರ್ತಿವರ್ಮನ (ಹಾನಗಲ್
ತಾಲೂಕಿನ) ಆಡೂರು ಗ್ರಾಮದಲ್ಲಿಯ ಜಿನೇಂದ್ರ
ಭವನಕ್ಕೆ ನೀಡಿದ ಭೂದಾನವನ್ನು ಪರಲೂರ
ಗಣದ ಚೇದಿಯ ಬಳ್ಳಿಗೆ
ಸೇರಿದ ಪ್ರಭಾಚಂದ್ರರು ಸ್ವೀಕರಿಸಿದ ವಿಷಯವನ್ನು ಹೇಳಿದೆ. ಹೀಗೆ
ಚಾಲುಕ್ಯರು ಜೈನ ಮುನಿಗಳಿಗೆ ಮತ್ತು
ಜಿನಾಲಯಗಳಿಗೆ, ಬಸದಿಗಳಿಗೆ ದಾನ ನೀಡುವುದರ
ಮೂಲಕ ಜೈನ ಶಿಕ್ಷಣವನ್ನು ಪ್ರೋತ್ಸಾಹಿಸಿದರು.
೩. ವೈದಿಕ ಶಿಕ್ಷಣ
ಹಿಂದೂ ಸಂಸ್ಕೃತಿ, ಸಾಹಿತ್ಯ ಪರಂಪರೆಗಳನ್ನು
ಉಳಿಸಿ ಬೆಳೆಯಿಸಿಕೊಂಡು ಬರುವುದರ ಸಲುವಾಗಿ ಹಿಂದುಗಳು
ಸಹ ತಮ್ಮದೇ ಆದ
ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದರು. ಇದನ್ನು ವೈದಿಕ ಶಿಕ್ಷಣ
ವ್ಯವಸ್ಥೆಯಂತಲೂ ಹೇಳುವುದುಂಟು. ಇದು ವ್ಯಕ್ತಿ ಕೇಂದ್ರಿತವಾಗಿದ್ದು
ಉನ್ನತ ವರ್ಗದವರಿಗೆ ಮಾತ್ರ ಮೀಸಲಾಗಿದ್ದಂತೆ ತೋರುತ್ತದೆ.
ವೈದಿಕ ಶಿಕ್ಷಣವು ಮುಖ್ಯವಾಗಿ ಗುರುಕುಲ,
ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ಥಾನ ಹಾಗೂ ದೇವಾಲಯ ಮತ್ತು
ಮಠಗಳಲ್ಲಿ ನಡೆಯುತ್ತಿತ್ತು.
ಗುರುಕುಲ ಹಾಗೂ ಆಶ್ರಮ ಶಾಲೆಗಳು
ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿಯ
ಶೈಕ್ಷಣಿಕ ವ್ಯವಸ್ಥೆಯ ಮುಖ್ಯ ಸಂಸ್ಥೆಯಾಗಿತ್ತು.
ಬಾದಾಮಿ ಚಾಲುಕ್ಯರ ಕಾಲದಲ್ಲಿ ಗುರುಕುಲ
ಪದ್ಧತಿಯು ಇತ್ತೆಂದು ಹ್ಯೂಯೆನ್ತ್ಸಾಂಗನ
ಬರವಣಿಗೆಗಳಿಂದ ಹಾಗೂ ಶಿಲ್ಪಗಳಿಂದ ತಿಳಿದುಬರುತ್ತದೆ.
ಪಟ್ಟದಕಲ್ಲಿನ
ವಿರೂಪಾಕ್ಷ ದೇವಾಲಯದ ಸಭಾಮಂಟಪದ ಕಂಬದ
ಮೇಲೆ ಗುರುಜಟಾಧಾರಿಯಾಗಿ ಎತ್ತರದ ಮಣೆಯ ಮೇಲೆ
ಕುಳಿತಿದ್ದಾನೆ. ಆತನ ಎಡಗಾಲು ಪಾದಪೀಠದ
ಮೇಲಿದೆ. ವಿದ್ಯಾರ್ಥಿಗಳು ತಾಳೆಗರಿಗಳನ್ನು ಹಿಡಿದುಕೊಂಡು ಕುಳಿತಿದ್ದಾರೆ. ಹಿನ್ನೆಲೆಗಳಲ್ಲಿ ಗುರುಗಳ ಆಶ್ರಮವಿದೆ. ಎಡಬಲದಲ್ಲಿರುವ
ಸಸ್ಯ ಮತ್ತು ಪ್ರಾಣಿ ಸಂಕುಲವು
ಅಂದಿನ ಶಾಲಾಪರಿಸರವನ್ನು ಚಿತ್ರಿಸುತ್ತದೆ. ಇಂಥದೇ ಇನ್ನೊಂದು ಗುರುಕುಲ
ದೃಶ್ಯವು ಮಲ್ಲಿಕಾರ್ಜುನನ ದೇವಾಲಯದ ಸಭಾ ಮಂಟಪದ
ಕಂಬದ ಮೇಲೆ ಕಂಡರಿಸಲ್ಪಟ್ಟಿದೆ.
ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳಲ್ಲಿ ದೊರೆತಿರುವ
ಎಂಟನೆಯ ಶತಮಾನದ ಬಿಡಿ ಶಾಸನಗಳಲ್ಲಿ
ಬಾದಾಮಿಯ ಮಾಣಿ ಎಂಬುವವನ ಬಗ್ಗೆ
ಉಲ್ಲೇಖಗಳಿವೆ. ಪಾಣಿನಿಯ ಪ್ರಕಾರ ಮಾಣವ
ಎಂದರೆ ವಿದ್ಯಾಭ್ಯಾಸವನ್ನು ಆರಂಭಿಸಿರುವ
ಬಾಲಕ. ಶಾಸನಗಳಲ್ಲಿ ಶ್ರೀ ಕಡಪುದನ್ನಾಡಿದುದನ್ಸಲಿಪೋ ಬಾದಾಮಿಯ
ಮಾಣಿ ಎಂದಿರುವುದರಿಂದ ಈ ಬಾಲಕನು
ಕಡಪುದ ಎಂಬಾತನ ಅತ್ಯಂತ ಅಜ್ಞಾಧಾರಕ
ಶಿಷ್ಯನಾಗಿರಬೇಕು. ಲಕ್ಷ್ಮೇಶ್ವರದ ಶಾಸನವೊಂದರಲ್ಲಿ ಉದಯದೇವಪಂಡಿತನು ಪೂಜ್ಯಪಾದನ ಗೃಹವಿದ್ಯಾರ್ಥಿಯಾಗಿದ್ದನೆಂದು ಉಲ್ಲೇಖಿಸುತ್ತದೆ.
ಅಗ್ರಹಾರ
ಅಗ್ರ ಎಂದರೆ ಶ್ರೇಷ್ಟ; ಆಹಾರ
ಎಂದರೆ ದೇಶ ಅಥವಾ ಸ್ಥಳ.
ಅಗ್ರಹಾರವೆಂದರೆ ಬ್ರಾಹ್ಮಣರೇ ಇರಬೇಕಿಲ್ಲ. ಬೇರೆ ಜಾತಿಯ ಜನಾಂಗದವರು
ಇರಬಹುದು. ಆದರೆ ಆ ಗ್ರಾಮದ
ಆದಾಯವೆಲ್ಲವು ಬ್ರಾಹ್ಮಣರಿಗೆ ಸೇರುತ್ತಿತ್ತು. ಅಗ್ರಹಾರವೆನ್ನುವುದು ಬ್ರಾಹ್ಮಣರಿಗೆ ಧಾರ್ಮಿಕವಾಗಿ ದಾನ ಕೊಡಲಾದ ದತ್ತಿ.
ಅದರ ಸರ್ವಾಧಿಕಾರ ಅವರಿಗೆ
ಸೇರಿದ್ದು ಎಂದು ಕೆ.ಎಂ.
ಗುಪ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದು
ಗ್ರಾಮವನ್ನು ಅಗ್ರಹಾರವಾಗಿ ಪರಿವರ್ತಿಸಿ ಬ್ರಾಹ್ಮಣರಿಗೆ ದಾನ ಮಾಡಿದರೆ ಪುಣ್ಯ
ಬರುತ್ತದೆಂದು ರಾಜರು ನಂಬಿದ್ದರು. ಹೀಗಾಗಿ
ಚಾಲುಕ್ಯರ ಕಾಲದಲ್ಲಿ ಅನೇಕ ಅಗ್ರಹಾರಗಳು
ಹುಟ್ಟಿಕೊಂಡವು. ಬಾದಾಮಿ ಚಾಲುಕ್ಯರ ಹನ್ನೆರಡು
ಶಾಸನಗಳಲ್ಲಿ ಅಗ್ರಹಾರಗಳ ಉಲ್ಲೇಖಗಳಿವೆ. ಮೊಟ್ಟಮೊದಲ
ಉಲ್ಲೇಖವು ಒಂದನೆಯ ಪುಲಕೇಶಿಯ ಅಮ್ಮಿನಭಾವಿಯ
ಶಾಸನವು ಅಲ್ಲಿಯ ಕಲಿದೇವ ದೇವಾಲಯಕ್ಕೆ ದಾನ ನೀಡಿರುವುದನ್ನು ಹೇಳಿ,
ಅಮ್ಮಿನಭಾವಿಯನ್ನು ಅಗ್ರಹಾರವೆಂದು ಕರೆದಿದೆ. ಕ್ರಿ.ಶ.೫೯೯ರ ಮಾರಟೂರ ಶಾಸನವು
ಮಂಗಳೇಶನು ವೇದಪಾರಂಗತರು ಮತ್ತು ತರ್ಕಶಾಸ್ತ್ರ ವಿಶಾರದರು
ಆಗಿದ್ದ ಹನ್ನೆರಡು ಜನ ಬ್ರಾಹ್ಮಣರಿಗೆ
ಮಾರಟೂರ ಗ್ರಾಮವನ್ನು ಅಗ್ರಹಾರವನ್ನಾಗಿ
ಮಾಡಿ ದಾನ ನೀಡಿರುವುದನ್ನು ಉಲ್ಲೇಖಿಸುತ್ತದೆ.
ಎರಡನೆಯ ಪುಲಕೇಶಿಯ ಪೆದ್ದವಡಗೂರು ಶಾಸನವು
ಪುಲಕೇಶಿಯು ರಣವಿಕ್ರಮ ಎಂಬುವವನನ್ನು ಸೋಲಿಸಿದ
ನಂತರ ವಿಜಯೋತ್ಸವದ ಸ್ಮರಣೆಗಾಗಿ ಎಱ್ಬತ್ತುಸಿಂಬಿಗೆ ಎಂಬ ಗ್ರಾಮವನ್ನು ಅಲ್ಲಿಯ
ಮಹಾಜನರಿಗೆ ತೆರಿಗೆರಹಿತವಾಗಿ ದತ್ತಿಕೊಟ್ಟನೆಂದು ಹೇಳುವುದರೊಂದಿಗೆ ನಾಡನೂರು ಎಂಬ ಅಗ್ರಹಾರವನ್ನು
ಅಲ್ಲಿಯ ಮಹಾಜನರಿಗೆ ತೆರಿಗೆರಹಿತವಾಗಿ ಕೊಟ್ಟನೆಂದು
ಹೇಳಿದೆ. ನವಸಾರಿ ತಾಮ್ರಶಾಸನದಲ್ಲಿಯೂ ಅಗ್ರಹಾರದ
ಉಲ್ಲೇಖವಿದೆ.
ವಿಜಯಾದಿತ್ಯನ
ಚಿಪ್ಪಗಿರಿ ಶಾಸನವು ಮಹಾಜನರನ್ನು ಉಲ್ಲೇಖಿಸಿದ್ದು
ಬಹುಶಃ ಅದು ಅಗ್ರಹಾರವಾಗಿರಬಹುದು. ಅವನ
ಕ್ರಿ.ಶ.೬೯೯ರ
ಬಾದಾಮಿಯ ಶಾಸನವು ವಾತಾಪ್ಯಧಿಷ್ಠಾನವು ಚತುರ್ದಶ
ವಿದ್ಯೋಪಲಸಿತಾನೇಕ ಸಹಸ್ರದ್ವಿಜವಲೋಪ್ತ ಶೋಭಿತೇ” ಎಂದು ಉಲ್ಲೇಖಿಸಿದೆ. ಹದಿನಾಲ್ಕು
ವಿದ್ಯೆಗಳಲ್ಲಿ ಪರಿಣತರಾದ ಸಹಸ್ರಾರು ಬ್ರಾಹ್ಮಣರು
ಈ ಪಟ್ಟಣದಲ್ಲಿ ವಾಸವಾಗಿದ್ದರು.
ಇದರಿಂದಾಗಿ ಬಾದಾಮಿಯು ಶಿಕ್ಷಣ ಕೇಂದ್ರವಾಗಿತ್ತೆಂದು
ಊಹಿಸಲು ಅವಕಾಶವಿದೆ. ಮಹಾಕೂಟದ ಮಹಾಕೂಟೇಶ್ವರ ದೇವಾಲಯದ
ಮುಖಮಂಟಪದ ಕಂಬದ ಮೇಲಿರುವ ಶಾಸನವು
ಅದು ಅಗ್ರಹಾರವಾಗಿರುವುದನ್ನು ಸೂಚಿಸುವಂತಿದೆ.
ಐಹೊಳೆಯ ಎರಡು ಶಾಸನಗಳಲ್ಲಿ ಅದನ್ನು
ಅಧಿಷ್ಠಾನವೆಂದು ಹೇಳಿದೆ. ಈ ಶಾಸನಗಳಲ್ಲಿ
ಆರ್ಯಪುರದ ಜನರಿಂದ ಯೋಗ್ಯರೆಂದು ಆರಿಸಿದ ಚತುರ್ವೇದಿಗಳಾದ ಐನೂರ್ವ್ವರ
ಉಲ್ಲೇಖವಿದೆ. ಈ ಎಲ್ಲ
ಉಲ್ಲೇಖಗಳು ಚಾಲುಕ್ಯರ ಕಾಲದಲ್ಲಿ ಅನೇಕ
ಅಗ್ರಹಾರಗಳಿದ್ದವೆಂದು ತಿಳಿದುಬರುತ್ತದೆ. ಆದರೆ ಇಲ್ಲಿ ಎಂತಹ
ಶಿಕ್ಷಣ ವ್ಯವಸ್ಥೆ ಇತ್ತು ಎಂಬುದು
ಸ್ಪಷ್ಟವಾಗುವುದಿಲ್ಲ.
ಬ್ರಹ್ಮಪುರಿ
ಅಗ್ರಹಾರಗಳಂತೆ
ಬ್ರಹ್ಮಪುರಿಗಳೂ ವಿದ್ಯಾಕೇಂದ್ರಗಳಾಗಿದ್ದವು. ಬ್ರಹ್ಮಪುರಿ ಎಂದರೆ ಪಟ್ಟಣದಲ್ಲಿ ಬ್ರಾಹ್ಮಣ
ವಿದ್ವಾಂಸರು ವಾಸವಾಗಿರುವ ಒಂದು ಭಾಗ ಅಥವಾ
ಓಣಿ. ಪ್ರಾಚೀನ ಕಾಲದಲ್ಲಿ ಪಟ್ಟಣಗಳು
ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಬ್ರಹ್ಮಪುರಿಗಳ ಸಂಖ್ಯೆಯು ಕಡಿಮೆ. ಬಾದಾಮಿ,
ಪುಲಿಗೆರೆಗಳಲ್ಲಿ ಬ್ರಹ್ಮಪುರಿಗಳಿದ್ದವೆಂಬ ಉಲ್ಲೇಖಗಳಿವೆ.
ಘಟಿಕಾ ಸ್ಥಾನ
ಘಟಿಕಾ ಸ್ಥಾನವು ಒಂದು ಉನ್ನತ
ಶಿಕ್ಷಣ ಕೇಂದ್ರವಾಗಿತ್ತು. ಕರ್ನಾಟಕದಲ್ಲಿ ಪ್ರಥಮಭಾರಿಗೆ ಘಟಿಕಾಸ್ಥಾನದ ಉಲ್ಲೇಖ ಬರುವ ಶಾಸನವೆಂದರೆ
ಕದಂಬ ಕಾಕುಸ್ಥವರ್ಮನ ತಾಳಗುಂದ ಶಾಸನ. ಇದರಲ್ಲಿ
ಮಯೂರವರ್ಮನು ತನ್ನ ಆರಂಭದ ಶಿಕ್ಷಣವನ್ನು
ಮುಗಿಸಿಕೊಂಡು ಉನ್ನತ ಶಿಕ್ಷಣಕ್ಕಾಗಿ ಕಾಂಚಿಯ
ಘಟಿಕಾಸ್ಥಾನವನ್ನು ಪ್ರವೇಶಿಸಿದನೆಂದು ಹೇಳಿದೆ. ಚಾಲುಕ್ಯ ಎರಡನೆಯ
ವಿಕ್ರಮಾದಿತ್ಯನು ಕಾಂಚಿಯ ಕೈಲಾಸನಾಥ ದೇವಾಲಯದ
ಕಲ್ಲು ಕಂಬದ ಮೇಲೆ ಕೆತ್ತಿಸಿರುವ
ಶಾಸನವೊಂದು “ಘಟಿಕೆಯಾ ಮಹಾಜನಮನ್ಕೊನ್ದಾರ ಲೋಕಕ್ಕೆ
ಸನ್ದಾರಪ್ಪಾರ” ಎಂದು ಹೇಳಿದೆ. ಇಲ್ಲಿ ವಿಕ್ರಮಾದಿತ್ಯನು
ಕಾಂಚಿಯನ್ನು ಗೆದ್ದುಕೊಂಡು ಅಲ್ಲಿ ಸೂರೆ ಮಾಡಿದ್ದ
ಸಂಪತ್ತನ್ನು ಅಲ್ಲಿಯ ಮಹಾಜನರಿಗೆ ಮರಳಿ
ಕೊಟ್ಟನೆಂದು ತಿಳಿಯುತ್ತದೆ. ಇದರಿಂದ ಮೂರು ಅಂಶಗಳು
ಸ್ಪಷ್ಟವಾಗುತ್ತವೆ.
೧. ಕದಂಬರ ಕಾಲದಲ್ಲಿ ಉನ್ನತ
ಶಿಕ್ಷಣ ಕೇಂದ್ರವಾಗಿದ್ದ ಕಾಂಚಿಯು ಚಾಲುಕ್ಯರ ಕಾಲದಲ್ಲಿಯೂ
ಮುಂದುವರೆದು ಕೊಂಡು ಬಂದಿತು.
೨. ಅದರ ಆಡಳಿತವನ್ನು ನೋಡಿಕೊಳ್ಳಲು
ಮಹಾಜನರಿರುತ್ತಿದ್ದರು.
೩. ರಾಜರು ದೇವಾಲಯಗಳ ಸಂಪತ್ತನ್ನು
ಲೂಟಿ ಮಾಡಿದಾಗ ಅದನ್ನು ದೋಚಿಕೊಂಡು
ಬರದೇ ಅಲ್ಲಿಯ ಬ್ರಾಹ್ಮಣರಿಗೆ, ದೇವಾಲಯಗಳಿಗೆ
ಮರಳಿಸುತ್ತಿದ್ದರು.
ಎರಡನೆಯ ಪುಲಕೇಶಿಯ ತಮ್ಮೆಯನೂರು ತಾಮ್ರಶಾಸನದಲ್ಲಿ
ಇಂದುಪುರ ಘಟಿಕೆಯ ಉಲ್ಲೇಖವಿದೆ. ಅಲ್ಲಿಯ
ಆತ್ರೇಯ ಗೋತ್ರದ ಆಪಸ್ತಂಭ ಸೂತ್ರದ
ಮಾವುಗಣ ಸ್ವಾಮಿಗೆ ಚಾಲುಕ್ಯ ವಿಷಯದಲ್ಲಿ
ಪನ್ನಾಸ ಭೂಮಿಯನ್ನು ದಾನ ಮಾಡಿದನು.
ಲಕ್ಷ್ಮೇಶ್ವರದ ಶಾಸನವು ದಾನ ಭೂಮಿಯ
ಸೀಮೆಗಳನ್ನು ಹೇಳುವಾಗ ದಕ್ಷಿಣತಃ ಘಟಿಕಾಕ್ಷೇತ್ರಂ
ಎಂದು ಉಲ್ಲೇಖಿಸಿದ್ದುದನ್ನು ಗಮನಿಸಿದರೆ ಆ ಕಾಲದಲ್ಲಿ
ಲಕ್ಷ್ಮೇಶ್ವರದಲ್ಲಿ ಘಟಿಕಾಸ್ಥಾನವಿದ್ದಿರ ಬಹುದು.
ದೇವಾಲಯಗಳು
ಮತ್ತು ಮಠಗಳು
ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳು ಶೈವಯತಿಗಳ ವಾಸಸ್ಥಾನ
ಆಗಿರುವುದರ ಜೊತೆಯಲ್ಲಿ ಅವು ವಿದ್ಯಾಕೇಂದ್ರಗಳಾಗಿದ್ದವು.
ಒಂದನೆಯ ಪುಲಕೇಶಿಯ ಅಮ್ಮಿನಭಾವಿಯ ಶಾಸನವು
ಅಲ್ಲಿರುವ ಕಲಿದೇವ ದೇವಾಲಯದಲ್ಲಿ ಅಧ್ಯಯನ
ನಡೆಯುತ್ತಿದ್ದುದರ ಬಗ್ಗೆ ಹೇಳಿದೆ. ಎರಡನೆಯ
ಪುಲಕೇಶಿಯ ಸಹೋದರನಾದ ಜಯಸಿಂಹವರ್ಮನ ಮಗ
ನಾಗವರ್ಧನನ ನಿರ್ಪಾನ ತಾಮ್ರಶಾಸನವು ಬಾಲಮ್ಮ
ಠಕ್ಕುರನ ವಿಜ್ಞಾಪನೆಯ ಮೇರೆಗೆ ಕಪಾಲೇಶ್ವರನ ಗುಗ್ಗಳ
ಪೂಜಾದಿಗಳನ್ನು ನಡೆಸುವುದಕ್ಕೆ ಮತ್ತು ಅಲ್ಲಿಯ ಮಹಾಯತಿಗಳ
ಉಪಯೋಗಕ್ಕೆ ಗೋಪರಾಷ್ಟ್ರದಲ್ಲಿದ್ದ ಬಲೇ ಗ್ರಾಮವನ್ನು ದಾನ
ನೀಡಿದ್ದನ್ನು ತಿಳಿಸುತ್ತದೆ. ಈ ಕಪಾಲೇಶ್ವರ
ದೇವಾಲಯದಲ್ಲೂ ವಿದ್ಯಾಭ್ಯಾಸ ನಡೆಯುತ್ತಿತ್ತು. ಇಂತಹ ಹಲವಾರು ಉದಾಹರಣೆಗಳು
ಶಾಸನದಲ್ಲಿವೆ.
ಪಟ್ಟದಕಲ್ಲಿನ
ಸಂಗಮೇಶ್ವರ ದೇವಾಲಯದಲ್ಲಿರುವ ಶಾಸನವೊಂದು ಅಲ್ಲಿರುವ ಭೀಮೇಶ್ವರ
ಮಠದಲ್ಲಿರುವ ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರ ಕ್ಷೌರವನ್ನು
ಮಾಡುತ್ತಿದ್ದ ನಾವಿದನ ಉಲ್ಲೇಖವನ್ನು ಮಾಡುತ್ತದೆ.
ಅಲ್ಲದೇ ಅದಕ್ಕಾಗಿ ದತ್ತಿ ಬಿಟ್ಟಿರುವುದನ್ನು
ಹೇಳಿದೆ. ಇದರಿಂದ ಮಠಗಳಲ್ಲಿಯೂ ವ್ಯಾಸಂಗ
ನಡೆಯುತ್ತಿದ್ದುದು ಗೊತ್ತಾಗುತ್ತದೆ.
ಹೀಗೆ
ಗುರುಕುಲ, ಅಗ್ರಹಾರ, ಬ್ರಹ್ಮಪುರಿ, ಘಟಿಕಾಸ್ಥಾನ
ಮತ್ತು ದೇವಾಲಯ ಹಾಗೂ ಮಠಗಳಲ್ಲಿ
ಶಿಕ್ಷಣವು ನಡೆಯುತ್ತಿತ್ತೆಂದು ಸ್ಪಷ್ಟವಾಗುತ್ತದೆ.
ಬೋಧನಾ ವಿಷಯಗಳು: ವೇದ
ಪುರಾಣ ಮೊದಲಾದ ಪರಂಪರಾನುಗತ ಬೋಧನೆ
ಬ್ರಾಹ್ಮಣರೆ ಮಾಡುತ್ತಿದ್ದರು. ನಾಲ್ಕು ವೇದಗಳು, ಆರು
ವೇದಾಂಗಗಳು, ಪುರಾಣಮೀಮಾಂಸೆ, ನ್ಯಾಯ ಮತ್ತು ಧರ್ಮಶಾಸ್ತ್ರಗಳಿಂದ
ಕೂಡಿದ ಹದಿನಾಲ್ಕು ವಿದ್ಯೆಗಳಲ್ಲಿ ಬಾದಾಮಿಯ
ದ್ವಿಜರು ನಿಪುಣರಾಗಿದ್ದರು. ಶಾಲೆಗಳಲ್ಲಿ ತರ್ಕವನ್ನು ಬೋಧಿಸಲಾಗುತ್ತಿತ್ತು. ಪಠ್ಯಕ್ರಮದಲ್ಲಿ
ಸ್ಮೃತಿ, ಪುರಾಣ, ರಾಮಾಯಣ, ಮಹಾಭಾರತ,
ಇತಿಹಾಸ, ನೀತಿ ಮೊದಲಾದವುಗಳು ಪಠ್ಯ
ವಿಷಯಗಳಾಗಿದ್ದವು. ಸಂಸ್ಕೃತದ ಜೊತೆಗೆ ಪ್ರಾದೇಶಿಕ
ಭಾಷೆ ಕನ್ನಡವನ್ನೂ ಕಲಿಸಲಾಗುತ್ತಿತ್ತು. ಕಪ್ಪೆ ಅರಭಟ್ಟನ ತ್ರಿಪದಿಶಾಸನವು
ಹಾಗೂ ಇತರ ಕೆಲವು ಕನ್ನಡ
ಶಾಸನಗಳು ಆಗಿನ ಕನ್ನಡ ಭಾಷೆಯ
ವೈಶಿಷ್ಟ್ಯವನ್ನು ತಿಳಿಸುತ್ತವೆ. ಶಿಲ್ಪಿಗಳು ಸಂಸ್ಕೃತ ಭಾಷೆಯನ್ನು
ಕಲಿತಿದ್ದರು. ಈ ವಿದ್ಯೆಗೆ
ಸಂಬಂಧಿಸಿದ ಗ್ರಂಥಗಳು, ಆ ಭಾಷೆಯಲ್ಲಿವೆ.
ನಟಸೇವ್ಯ ಅಪಲನ ಪ್ರಶಂಸೆಯುಳ್ಳ ಸಂಸ್ಕೃತ
ಪದ್ಯವು ಅರ್ಧಛಂದಸ್ಸಿನಲ್ಲಿದೆ ಮತ್ತು ಭರತ ನಾಟ್ಯಶಾಸ್ತ್ರವು
ಜನಪ್ರಿಯವಾಗಿತ್ತು ಹಾಗೂ ಪಂಚತಂತ್ರ ಮೊದಲಾದ
ನೀತಿಕತೆಗಳನ್ನು ಶಾಲೆಗಳಲ್ಲಿ ಬೋಧಿಸಲಾಗುತ್ತಿತ್ತು.
ವೃತ್ತಿಶಿಕ್ಷಣ
ಆದರೆ ಬಡಿಗರು, ಕಮ್ಮಾರರು, ಚಮ್ಮಾರರು
ಮೊದಲಾದ ಕಸುಬುದಾರರು ವಂಶಪಾರಂಪರ್ಯವಾಗಿ ಬಂದ ಕುಶಲವಿದ್ಯೆಯನ್ನೂ ತರಬೇತಿಯನ್ನೂ
ತಮ್ಮ ಹಿರಿಯರಿಂದ ಕಲಿತಿದ್ದರು.
ಗುರುಗಳು:
ಚಾಲುಕ್ಯರ ಶಾಸನಗಳಲ್ಲಿ ಗುರು, ದೀಕ್ಷಾಗುರು, ಶಿಕ್ಷಾಗುರು,
ಆಚಾರ್ಯ, ಓಜ, ಪಂಡಿತ, ಭದ್ರ
ಮತ್ತು ಉಪಾಧ್ಯಾಯ ಎಂಬ ಪದಗಳನ್ನು
ಉಪಯೋಗಿಸಲಾಗಿದೆ. ‘ವಿದ್ಯೆ’ ಮುಗಿದ ತಕ್ಷಣವೇ ಗುರುದಕ್ಷಿಣೆಯನ್ನು
ಸಹ ನೀಡುತ್ತಿದ್ದು ದುಂಟು.
ಒಂದನೆಯ ವಿಕ್ರಮಾದಿತ್ಯನು ತನ್ನ ಆಳ್ವಿಕೆಯ ಆರನೆಯ
ವರ್ಷದಲ್ಲಿ ಎಳಸುತ್ತಿ ಗ್ರಾಮವನ್ನು ತನ್ನ
ಗುರುಗಳಾದ ಮೇಘಾಚಾರ್ಯರಿಗೆ ಗುರುದಕ್ಷಿಣೆಯಾಗಿ ಕೊಟ್ಟಿರುವುದು ಅವನ ತಲಮಂಚಿ ಶಾಸನದಿಂದ ತಿಳಿದು
ಬರುತ್ತದೆ.
ಗುರುಶಿಷ್ಯರ
ಸಂಬಂಧ: ಚಾಲುಕ್ಯರ ಶಾಸನಗಳಲ್ಲಿ ಅಂತೇವಾಸಿ
ಮತ್ತು ಛಾತ್ರ ಎಂಬ ಎರಡು
ಪದಗಳ ಉಪಯೋಗವಿದೆ. ವಿದ್ಯಾರ್ಥಿ ಮತ್ತು ಉಪಾಧ್ಯಾಯರೀರ್ವರು ಒಂದೇ
ಚಾವಣಿಯ ಕೆಳಗೆ ವಾಸವಾಗುತ್ತಿದ್ದರೆಂದು ತಿಳಿಯಬಹುದಾಗಿದೆ.
ಇದರಿಂದ ಗುರುಶಿಷ್ಯ ರೀರ್ವರು ಹತ್ತಿರವಿದ್ದು
ತಂದೆ‑ಮಕ್ಕಳ ಸಂಬಂಧದಂತೆ ಸಹಜವಾಗಿಯೇ
ಏರ್ಪಟ್ಟಿತ್ತೆಂದು ಊಹಿಸಲವಕಾಶವಿದೆ.
ಮಹಿಳಾ ಶಿಕ್ಷಣ: “ಮನೆಯೇ ಮೊದಲ
ಪಾಠಶಾಲೆ ಜನನಿ ತಾನೇ ಮೊದಲ
ಗುರು” ಎಂಬ ಮಾತಿನಂತೆ ಶೈಕ್ಷಣಿಕ
ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು.
ಆದರೆ ಯಾವುದೇ ಅಗ್ರಹಾರ, ಬ್ರಹ್ಮಪುರಿ,
ಘಟಿಕಾಸ್ಥಾನಗಳಲ್ಲಿ ಮಹಿಳೆಯರು ಅಧ್ಯಯನ ಮಾಡಿರುವುದನ್ನು
ಶಾಸನಗಳು ಉಲ್ಲೇಖಿಸುವುದಿಲ್ಲ. ಮಹಿಳೆಯರು ಲಲಿತ ಕಲೆಗಳಾದ
ನರ್ತನ, ಸಂಗೀತ ಮುಂತಾದವುಗಳನ್ನು ಮನೆಯಲ್ಲಿಯೇ
ಕಲಿಯುತ್ತಿದ್ದರು. ಚಾಲುಕ್ಯ ಎರಡನೆಯ ಪುಲಕೇಶಿಯ
ಮಗ ಚಂದ್ರಾದಿತ್ಯನ ಮಡದಿ
ವಿಜಯಭಟ್ಟಾರಿಕೆಯು ವಿದ್ವಾಂಸೆಯಾಗಿದ್ದು ಅವಳು ‘ಕೌಮುದೀ ಮಹೋತ್ಸವ’ ಎಂಬ ಸಂಸ್ಕೃತ ನಾಟಕವನ್ನು ರಚಿಸಿದಳು.
ಇದು ಐದು ಅಂಕದ
ಚಿಕ್ಕದಾದ ನಾಟಕ. ರಾಜಕೀಯ ಹಿನ್ನೆಲೆಯ
ಕಥಾ ವಸ್ತುವನ್ನು ಹೊಂದಿರುವಂತಹ
ದಾಗಿದೆ. ಚಾಲುಕ್ಯರ ಕಾಲದಲ್ಲಿ ಹಲವಾರು
ಮಹಿಳೆಯರು ಸಂಗೀತ ನೃತ್ಯ ಕಲೆಗಳಲ್ಲಿ
ಪರಿಣತರಾಗಿರುವುದರೊಂದಿಗೆ ಸಾಹಿತ್ಯದಲ್ಲಿಯೂ ಶ್ರೇಷ್ಠರಾದವರಾಗಿದ್ದರು.
ಹೀಗೆ ಚಾಲುಕ್ಯರ ಕಾಲದಲ್ಲಿ ಶಿಕ್ಷಣ
ವ್ಯವಸ್ಥೆ ಇದ್ದುದು ಶಾಸನಗಳಿಂದ ತಿಳಿದುಬರುತ್ತದೆ.
ಮಹಿಳೆಯರ ಸ್ಥಾನ-ಮಾನಗಳು
ಬಾದಾಮಿ ಚಾಲುಕ್ಯರು ತಮ್ಮ ಕಾಲದಲ್ಲಿ
ಮಹಿಳೆಯರಿಗೂ ಆಡಳಿತದಲ್ಲಿ ಅವಕಾಶ ಕಲ್ಪಿಸಿದ್ದರು ಎಂಬ
ಮಾಹಿತಿಯು ಅಂದಿನ ರಾಣಿ-ಮಹಾರಾಣಿಯರು
ನಡೆಸಿದ ಆಡಳಿತದ ವಿವರಗಳು ಮತ್ತು
ನೀಡಿದ ದಾನಗಳ ವಿವರಗಳಿಂದ ತಿಳಿದುಬರುತ್ತದೆ.
ಹೀಗೆ ಅಂದಿನ ಮಹಿಳೆಯರು ನಿರ್ವಹಿಸಿದ
ಜವಾಬ್ದಾರಿಗಳ ಕುರಿತ ಕೆಲವು ವಿವರಗಳು
ಈ ಕೆಳಗಿನಂತಿವೆ.
ಮೊದಲನೆಯ ಪುಲಿಕೇಶಿಯ ಪತ್ನಿ
ದುರ್ಲಭಾದೇವಿ ಬಟ್ಟೂರ ಕುಲದವಳು. ಈಕೆ
ಬಾದಾಮಿಯ ಸುತ್ತಮುತ್ತಲಿನ ಕೆಲವು ಪ್ರಾಂತಗಳ ಆಡಳಿತ
ಸೂತ್ರ ಹಿಡಿದಿರುವ ಸಂಭಾವ್ಯವಿದೆ. ಕಿಸುವೊಳಲು,
ಕೆಂದೂರು, ನಂದಿಗ್ರಾಮ(ಇಂದಿನ ನಂದಿಕೇಶ್ವರ),
ವ್ರೀಹಿ ಮುಖ ಗ್ರಾಮ, ಶ್ರೀಯಂಬಾಟಕ
ಮೊದಲಾದ ಹತ್ತು ಗ್ರಾಮಗಳನ್ನು ದುರ್ಲಭಾದೇವಿಯ
ಆಜ್ಞೆಯ ಮೇರೆಗೆ ಮಗ ಮಂಗಳೇಶನು
ಮಕುಟೇಶ್ವರ ದೇವರಿಗೆ ದಾನ ನೀಡಿದ
ದಾಖಲೆ ಇದೆ.
ಒಂದನೆಯ ವಿಕ್ರಮಾದಿತ್ಯನ ಸಹೋದರ
ಚಂದ್ರಾದಿತ್ಯನ ಮಡದಿ ವಿಜಯಾ (ವಿಜ್ಜಿಕೆ)
ಖ್ಯಾತ ಸಂಸ್ಕೃತ ಸಾಹಿತಿ. ‘ಕೌಮುದಿ
ಮಹೋತ್ಸವ’ ಎಂಬ ಸಂಸ್ಕೃತ ನಾಟಕದ
ಕರ್ತೃ. ತನ್ನ ಸಮಕಾಲೀನ ಕವಿಗಳಿಗಿಂತ
ತಾನು ಶ್ರೇಷ್ಠಳೆಂಬ ಅಭಿಮಾನ ಆಕೆಯದು. ಈಕೆ
ಮಹಾರಷ್ಟ್ರದ ಸತಾರಾ ಭಾಗದಲ್ಲಿ ಆಳ್ವಿಕೆ
ಮಾಡುತ್ತಿದ್ದ ಬಗ್ಗೆ ಅವಳ ನೆರೂರು
ಶಾಸನದಿಂದ ಮಾಇತಿ ಲಭ್ಯವಾಗುತ್ತದೆ.
ವಿನಯಾದಿತ್ಯನ
ಮಡದಿ ವಿನಯವತಿಯು ಬಾದಾಮಿಯಲ್ಲಿ ಬ್ರಹ್ಮ,
ವಿಷ್ಣು, ಮಹೇಶ್ವರರನ್ನು ಒಂದೇ ಮಂದಿರದಲ್ಲಿ ಪ್ರತಿಷ್ಠಾಪಿಸಿರುವಳು.
ಇದು ಕರ್ನಾಟಕದ ಮೊದಲ
ತ್ರಿಕೂಟಾಲಯವೆನಿಸಿದೆ. ವಿನಯಾದಿತ್ಯನ ಮಗಳಾದ ಕುಂಕುಮ ಮಹಾದೇವಿ
ಆಳುಪ ವಂಶದ ದೊರೆ ಚಿತ್ರವಾಹನನನ್ನು
ವರಿಸಿದ್ದಳು. ಈಕೆ ಲಕ್ಷ್ಮೇಶ್ವರದಲ್ಲಿ ಆನೆಸಜ್ಜೆ
ಬಸದಿಯನ್ನು ಕಟ್ಟಿಸಿದ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಮಹಾಕೂಟ ಶಾಸನದಲ್ಲಿ ‘ವಿಜಯಾದಿತ್ಯ ಸತ್ಯಾಶ್ರಯ ಶ್ರೀ ಪೃಧ್ವೀವಲ್ಲಭ
ಮಹಾರಾಜಾಧಿರಾಜ ಪರಮೇಶ್ವರ ಭಟ್ಟಾರಕರ ಪ್ರಾಣವಲ್ಲಭೆ
ವಿನಾಪೊಟಿಗಳೆನ್ವೊರ್ಸೂಳೆಯರ್….’ ಎಂಬ ವೇಶ್ಯೆಯೋರ್ವಳ ಪ್ರಸ್ತಾಪವಿದೆ. ಅಂದಿನ ಕಾಲಕ್ಕೆ ವಂಶ
ಪಾರಂಪರ್ಯ ಸೂಳೆಗಾರಿಕೆಯ ತಮ್ಮ ಪರಂಪರೆಯನ್ನು ತಿಳಿಸುವಲ್ಲಿ
ಯಾವುದೇ ಅಗೌರವದ ಭಾವನೆ ಇಲ್ಲ.
ವಿನಾಪೊಟಿಯ ತಾಯಿ ಕುಚಿಪೊಟಿ ಅಜ್ಜಿ
ರೇವಮಂಚಳನ್ನು ಈ ಶಾಸನವು
ಉಲ್ಲೇಖಿಸೂತ್ತದೆ ಮತ್ತು ವಿನಾಪೋಟಿಯು ಹಿರಣ್ಯಗರ್ಭ
ದಾನವನ್ನು ಮಾಡಿ ದೇವರಿಗೆ ರತ್ನ
ಪೀಠವನ್ನೂ, ಬೆಳ್ಳಿಯ ಕೊಡೆಯನ್ನು ನೀಡಿ
‘ಅಷ್ಟಶತಂ ಕ್ಷೇತ್ರಂ’ ಭೂಮಿಯನ್ನು ದಾನ ಮಾಡಿದಳು.
ಪಟ್ಟದಕಲ್ಲಿನ ಶಾಸನವೊಂದರಲ್ಲಿ ವಿಜಯಾದಿತ್ಯನು ಸಂಗೀತಗಾರನೊಬ್ಬನಿಗೆ ಈ ಹಿಂದೆ
ನೀಡಿದ್ದ ಕೆಲವು ಮರ್ಯಾದೆಗಳನ್ನು
ರಾಣಿ ಲೋಕಮಹಾದೇವಿಯು ನವೀಕರಿಸಿದುದು ದಾಖಲಾಗಿದೆ.
ಇಮ್ಮಡಿ ವಿಕ್ರಮಾದಿತ್ಯನ ಪತ್ನಿಯರಾದ ಲೋಕಮಹಾದೇವಿ ಮತ್ತು
ತ್ರೈಲೋಕ್ಯ ಮಹಾದೇವಿಯರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ಇಂದಿನ ವಿರೂಪಾಕ್ಷ
ಗುಡಿ) ಮತ್ತು ತ್ರೈಲೋಕೇಶ್ವರ (ಇಂದಿನ
ಮಲ್ಲಿಕಾರ್ಜುನ ಗುಡಿ) ದೇವಾಲಯಗಳನ್ನು ಕಟ್ಟಿಸಿರುವರು.
ಲೋಕಮಹಾದೇವಿಯು ಕಟ್ಟಿಸಿದ ಲೋಕೇಶ್ವರ ದೇವರಿಗೆ
ನರೆಯಂಗಲ್ಲಿನ ಪನ್ನಾಸ (ಎಲೆಯ ಸುಂಕ)
ವನ್ನು ವಿಕ್ರಮಾದಿತ್ಯ ಅರಸನು ಬಿಟ್ಟಿದ್ದನ್ನು ಶಾಸನವೊಂದು
ತಿಳಿಸುತ್ತದೆ.
ಬಾದಾಮಿ ಚಾಲುಕ್ಯ ರಾಣಿಯರು ಶಾಂತಿ,
ಸೌಹಾರ್ದತೆ ನೆಲೆಸುವಲ್ಲಿ, ಸಾಮ್ರಾಜ್ಯದ ಸರ್ವತೋಮುಖ ಬೆಳವಣಿಗೆಯನ್ನು ತೀವ್ರಗೊಳಿಸುವಲ್ಲಿ
ನೆರವಾದದ್ದನ್ನು ಈ ಮೇಲಿನ
ಸಂಗತಿಗಳು ಪುಷ್ಟೀಕರಿಸುತ್ತವೆ. ಆಡಳಿತ ನಿರ್ವಹಣೆಯಲ್ಲಿ ಕಲಾ
ಪೋಷಣೆಯಲ್ಲಿ, ಅವರು ತೋರಿದ ಔದಾರ್ಯ,
ಮಾಡಿದ ದಾನ ಧರ್ಮಗಳು ಉಳಿದ
ಸಾಮ್ರಾಜ್ಯಗಳಿಗೆ ಮಾರ್ಗದರ್ಶಕ ವಾದವು.
ಸಾಮಾನ್ಯ ಸ್ತ್ರೀಯರ ಸ್ಥಾನ-ಮಾನಗಳ ಬಗ್ಗೆ ಅಷ್ಟಾಗಿ
ಗೊತ್ತಾಗುವುದಿಲ್ಲ. ರಾಜಮನೆತನದ ಸ್ತ್ರೀಯರು ಮಾತ್ರ
ವಿದ್ಯಾವಂತರಷ್ಟೇ ಅಲ್ಲ. ಪಾಂಡಿತ್ಯಪೂರ್ಣರೂ ಆಗಿರುತ್ತಿದ್ದರು.
ಇಮ್ಮಡಿ ಪುಲಕೇಶಿಯ ಸೊಸೆ (ಇವನ
ಮಗ ಚಂದ್ರಾದಿತ್ಯನ ಹೆಂಡತಿ)
ವಿಜ್ಜಿಕಾ ಒಬ್ಬ ಮಹಾನ್ ಕವಯಿತ್ರಿಯಾಗಿದ್ದಳು.
ವಿಜಯಾಂಕ ಹಾಗೂ ವಿಜಯಭಟ್ಟಾರಿಕಾ ಎಂದೇ
ಹೆಸರುವಾಸಿಯಾಗಿದ್ದ ಇವಳು ತನ್ನನ್ನು ‘ಕರ್ನಾಟ
ರಾಜಪ್ರಿಯಾ’
ಎಂದು ಹೆಮ್ಮೆಯಿಂದ ವರ್ಣಿಸಿಕೊಂಡಿದ್ದಾಳೆ. ರಾಜಮನೆತನದ ಸ್ತ್ರೀಯರು ಧಾರ್ಮಿಕ
ಮತಗಳಿಗೆ ಪ್ರೋತ್ಸಾಹ ಕೊಡುತ್ತಿದ್ದರು. ಒಂದೊಂದು
ವೇಳೆ ಅವರು ಆಡಳಿತದಲ್ಲಿಯೂ ಸಕ್ರಿಯವಾಗಿ
ಭಾಗವಹಿಸುತ್ತಿದ್ದರು. ಒಂದನೇ ವಿಕ್ರಮಾದಿತ್ಯನ ಮಹಾರಾಣಿ
ಗಂಗಮಹಾದೇವಿಯು ಮತ್ತು ವಿಜಯಾದಿತ್ಯನ ತಂಗಿ
ಹಾಗೂ ಆಳೂಪ ಚಿತ್ರವಾಹನ ಹೆಂಡತಿ
ಕುಂಕುಮ ಮಹಾದೇವಿಯು ಬ್ರಾಹ್ಮಣರಿಗೆ ದಾನಗಳನ್ನು
ಕೊಡಲು ತಮ್ಮ ತಮ್ಮ ಗಂಡಂದಿರಿಗೆ
ಮನವೊಲಿಸುತ್ತಿದ್ದರು. ಸ್ವತಃ ಕುಂಕುಮ ಮಹಾದೇವಿಯೇ
ಲಕ್ಷ್ಮೇಶ್ವರ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾದಳು.
ವಿಜಯಾದಿತ್ಯನ ಕಾಲದಲ್ಲಿ ಲೋಕಟೆನಿಮ್ಮಡಿ ಬಹುಮಟ್ಟಿಗೆ
ಲೋಕಮಹಾದೇವಿಯು ಕುರಿವ್ವಕುಂಟಿ (ಕುರ್ತಕೋಟಿ, ಗದಗ ಹತ್ತಿರ) ಭಾಗವನ್ನು
ಆಳುತ್ತಿದ್ದಳು. ಬಹುಶಃ ವಿಜಯಭಟ್ಟಾರಿಕೆಯು ಆಡಳಿತದಲ್ಲಿ
ಭಾಗವಹಿಸಿದ್ದಳೆಂದು ಕಾಣುತ್ತದೆ.
ಸಾಮಾಜಿಕ ವ್ಯವಸ್ಥೆ
ಚಾತುವಣರ್
ವ್ಯವಸ್ಥೆ ಮುಂದುವರಿದಿತ್ತೇನೊ ನಿಜ. ಆದರೆ ವಾಸ್ತವವಾಗಿ
ಇದು ಹೇಗೆ ಕಾರ್ಯಗತವಾಗಿತ್ತೆಂಬುದು
ಲಭ್ಯವಿರುವ ಶಾಸನಗಳೆ ಮೊದಲಾದವುಗಳಿಂದ ಸ್ಪಷ್ಟವಾಗಿ
ತಿಳಿಯುವುದಿಲ್ಲ. ವಿದ್ಯಾರ್ಜನೆ ಮತ್ತು ವಿದ್ಯಾದಾನದಲ್ಲಿ ವಿಶೇಷವಾಗಿ
ನಿರತರಾಗಿದ್ದ ಬ್ರಾಹ್ಮಣ ವರ್ಗದವರು ಸಮಾಜದಲ್ಲಿ
ಗೌರವ ಸ್ಥಾನದಲ್ಲಿದ್ದರು. ವೈದಿಕ ಶ್ರೌತ ಕರ್ಮಗಳಾದ
ಪಂಚಮಹಾಯಜ್ಞಗಳು, ಹವನಗಳು, ಅಗ್ನಿಹೋತ್ರ, ವೈಶ್ವದೇವ,
ಪಾರು ಮೊದಲಾದ ಕರ್ಮಗಳನ್ನು ನಡೆಸುತ್ತಿದ್ದರು.
ಶಾಸನಗಳಲ್ಲಿ ಗೋವುಗಳಿಗೂ ಬ್ರಾಹ್ಮಣರಿಗೂ ಒಳ್ಳೆಯದಾಗಲಿ
ಎಂಬ ವಿಶೇಷ ವಾಕ್ಯವು
ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ-ಮಾನಗಳನ್ನು
ಸೂಚಿಸುತ್ತವೆ. ಇವರು ವೇದ, ಪುರಾಣ,
ಇತಿಹಾಸ ಹಾಗೂ ಇತರ ಶಾಸ್ತ್ರಗಳಲ್ಲಿ
ಸಾಮಾನ್ಯವಾಗಿ ಪರಿಣತಿಯನ್ನು ಪಡೆದವರಾಗಿರುತ್ತಿದ್ದರು. ಮತ್ತೆ ಕೆಲವರು ಒಂದು
ಅಥವಾ ಹೆಚ್ಚಿನ ವೇದಗಳಲ್ಲಿ ವೇದಾಂಗಗಳಲ್ಲಿ
ವಿಶೇಷ ಪರಿಣತಿಯನ್ನು ಪಡೆದವರಾಗಿರುತ್ತಿದ್ದರು. ಮತ್ತೆ ಕೆಲವರು ತರ್ಕ,
ವ್ಯಾಕರಣ ಮೊದಲಾದ ಶಾಸ್ತ್ರಗಳಲ್ಲಿ ಘನ
ವಿದ್ವಾಂಸರಿದ್ದರು. ಉದಾಹರಣೆಗೆ ಭೀಮಸ್ವಾಮಿ, ಜನಸ್ವಾಮಿ,
ಪಾಂಡುರಂಗಸ್ವಾಮಿ ಮೊದಲಾದವರು ೪ ವೇದಗಳಲ್ಲಿ,
ಹಾಗೆಯೇ ದಿವಾಕರ ಸ್ವಾಮಿ, ಭೂಜಸ್ವಾಮಿ,
ರೇವಸ್ವಾಮಿ ಅಶೇತಿ ತರ್ಕದಲ್ಲಿಯೂ (೮೦
ತರ್ಕಗಳು?) ಆದಿತ್ಯ ಸ್ವಾಮಿ ಎಂಬುವರು
ಸಹಸ್ರ ತರ್ಕದಲ್ಲಿಯೂ, ಗೋಸ್ವಾಮಿ ವರ್ಣತ್ರಯ ನಿವೃತ್ತಿ
ಮೊದಲಾದ ಕ್ಷೇತ್ರಗಳಲ್ಲಿ ವಿಶೇಷ ಪಾಂಡಿತ್ಯವನ್ನು ಗಳಿಸಿದ್ದರು.
ವರ್ಣತ್ರಯ ನಿವೃತ್ತಿ ಎಂದರೆ ಬಹುಶಃ
ಮೊದಲನೆ ಮೂರು ವರ್ಣಗಳವರಿಗೆ ಸಾಮಾನ್ಯವಾಗಿ
ಸೀಮಿತವಾದ ಅಧ್ಯಯನ ಮತ್ತು ವೃತ್ತಿಗಳಲ್ಲಿ
ಪರಿಣತಿ ಎಂದು ಅರ್ಥವಿರುವಂತೆ ಕಾಣುತ್ತದೆ.
ಒಂದನೇ ಕೀರ್ತಿವರ್ಮನ ಕಾಲದ ವ್ಯಾಘ್ರಸ್ವಾಮಿ ಎಂಬುವನು
ವೇದಗಳು, ವೇದಾಂತಗಳು, ರಾಜನೀತಿ, ವ್ಯಾಕರಣ, ತರ್ಕ,
ಕಾವ್ಯ, ನಾಟಕ, ಇತಿಹಾಸ, ಸಾಹಿತ್ಯ,
ಪುರಾಣ ಹಾಗೂ ಸಂಗೀತ ಮೊದಲಾದ
ಹಲವಾರು ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದು ಅತಿ ಶ್ರೇಷ್ಠ
ವಿದ್ವಾಂಸನಾಗಿದ್ದನು. ಚಾಲುಕ್ಯ ಅರಸನಲ್ಲಿ ಉಚ್ಚ
ಜವಾಬ್ದಾರಿ ಸ್ಥಾನವನ್ನು ಅಂದರೆ ಬಹುಶಃ ಪ್ರಧಾನಮಂತ್ರಿಯಾಗಿ
ಕಾರ್ಯನಿರ್ವಹಣೆ ಮಾಡುತ್ತಿದ್ದನು. ಇವನನ್ನು ರಾಜ್ಯ ಸರ್ವಸ್ವ
ಧುರಂಧರನೆಂದು ಹೊಗಳಲಾಗಿದೆ. ಪರಂಪರಾನುಗತವಾಗಿ ಬಂದ ವೇದಪುರಾಣಶಾಸ್ತ್ರಗಳನ್ನು ವಿದ್ಯಾರ್ಥಿಗಳಿಗೆ
ಬೋಧನೆ ಮಾಡುವುದು ಬ್ರಾಹ್ಮಣರಿಗೆ ಸೇರಿತ್ತು.
ಇವರ ಆಳವಾದ, ಘನವಾದ
ವಿದ್ವತ್ತು ಆಳರಸರ ಮೇಲೆ ಹಾಗೂ
ಅಧಿಕಾರಿಗಳ ಮೇಲೆ ಉತ್ತಮ ಪ್ರಭಾವವನ್ನು
ಬೀರಿತ್ತು. ಅವರ ಪರಂಪರೆಯ ಧಾರ್ಮಿಕ
ಕರ್ಮಗಳನ್ನು ನಡೆಸುವುದರಲ್ಲಿ ಬ್ರಾಹ್ಮಣರು ಮುಖ್ಯ ಪಾತ್ರವನ್ನು ವಹಿಸುತ್ತಿದ್ದರು
ಹಾಗೂ ಸ್ಮೃತಿಗಳಲ್ಲಿ ಪ್ರತಿಪಾದಿಸಿದ ಘನ ಆಚಾರ
ವಿಚಾರಗಳನ್ನು ರೂಪಿಸುವುದರಲ್ಲಿ ಇವರ ಗಣನೀಯ ಪಾತ್ರವಿತ್ತು.
ರಾಜ್ಯಭಾರದ
ಕರ್ತವ್ಯವನ್ನು ನೆರವೇರಿಸುವವರು ಕ್ಷತ್ರಿಯರು. ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು
ರಕ್ಷಿಸುವುದು ಮತ್ತು ಮುಂದುವರೆಸಿಕೊಂಡು ಹೋಗುವುದು
ಇವರ ಜವಾಬ್ದಾರಿ. ಒಂದನೇ
ಕೀರ್ತಿವರ್ಮನಿಗೆ ವರ್ಣಾಶ್ರಮ ನ್ಯಾಯದಂತೆ ತನ್ನ
ಪ್ರಜೆಗಳನ್ನು ರಕ್ಷಿಸುವುದರಲ್ಲಿ ಹೆಮ್ಮೆ ಇದ್ದಿತು. ಒಂದನೇ
ಪುಲಕೇಶಿಯು ಪುರಾಣಗಳಲ್ಲಿ ನಿರ್ದೇಶಿತವಾದ ೧೬ ಮಹಾದಾನಗಳಲ್ಲಿ
ಒಂದಾದ ಹಿರಣ್ಯಗರ್ಭ ದಾನವನ್ನು, ಶೌತಯಜ್ಞಗಳಲ್ಲಿ ಒಂದಾದ
ಅಶ್ವಮೇಧವನ್ನು ಮಾಡಿದನು. ಈ ಧಾರ್ಮಿಕ
ಕರ್ಮಗಳಿಂದ ತಮ್ಮ ಪ್ರಭುತ್ವವನ್ನು ಶಾಸ್ತ್ರರೀತಿಯಂತೆ
ನಿಯಮಬದ್ಧವಾಗಿ ಮಾಡುವ ಪ್ರಯತ್ನವು ಇದಾಗಿತ್ತು.
ಯುದ್ಧಗಳಲ್ಲಿ ಜಯಶೀಲರಾಗಿ ತಮ್ಮ ರಾಜಕೀಯ
ಪ್ರಭುತ್ವ ಮತ್ತು ಪ್ರಭಾವವನ್ನು ವಿಸ್ತರಿಸಿಕೊಂಡು
ಸಂಗ್ರಹವಾದ ಸಂಪತ್ತನ್ನು ದೇವಾಲಯಗಳಿಗೆ ಇತರ ಸಾರ್ವಜನಿಕ ಕಾರ್ಯಗಳಿಗೆ
ವಿನಿಯೋಗಿಸುತ್ತಿದ್ದರು. ಕೃಷಿ ಅಭಿವೃದ್ದಿಗೋಸ್ಕರ ದೊಡ್ಡ
ದೊಡ್ಡ ಕೆರೆಗಳನ್ನು ದುರ್ಬಲರಿಗೆ, ಅಲಕ್ಷಿತರಿಗೆ, ಬಡವರಿಗೆ ಅನ್ನಛತ್ರಗಳನ್ನು ವೈದ್ಯಶಾಲೆಗಳನ್ನು
ನಿರ್ಮಿಸುತ್ತಿದ್ದರು. ಯೋಗ್ಯ ಬ್ರಾಹ್ಮಣರಿಗೆ ಗ್ರಾಮಗಳನ್ನು
ಭೂಮಿದಾನ ಮಾಡುತ್ತಿದ್ದರು ಮತ್ತು ದೇವಾಲಯವನ್ನು ನಿರ್ಮಿಸುವುದು
ಮೊದಲಾದ ಕಾರ್ಯಗಳನ್ನು ತಮ್ಮ ಪುಣ್ಯಾರ್ಜನೆಗೋಸ್ಕರ ಮಾಡುತ್ತಿದ್ದರು.
ವಿದ್ವತ್ ಜನರು ಅದೃಷ್ಟಹೀನ ಹಾಗೂ
ಕೆಳವರ್ಗದ ಜನವರ್ಗದ ಬಗ್ಗೆ ವಿಶಾಲ
ಮನೋಭಾವವನ್ನು ತಳೆದಿದ್ದರು. ದಾನ ಕೊಟ್ಟು ಕ್ಷೇತ್ರದಲ್ಲಿಯ
ಸಮಗಾರರನ್ನು ಮತ್ತು ಚಂಡಾಲರನ್ನು ದಾನ
ತೆಗೆದುಕೊಂಡವರಿಂದ ಹೊರತುಪಡಿಸುತ್ತಿದ್ದರು ಮತ್ತು ಸಮಗಾರರ ವೃತ್ತಿಗೆ
ತೆರಿಗೆ ವಿನಾಯಿತಿಯಿದ್ದಿತು.
ಚೀನಾ ಯಾತ್ರಿಕ ಹ್ಯೂಯೆನ್‌ತ್ಸಾಂಗನು
ಈ ಪ್ರದೇಶದ ಜನರ
ಯುದ್ಧೋತ್ಸಾಹವನ್ನು ವರ್ಣಿಸುತ್ತಾ “ಇವರೇನಾದರೂ ತಮ್ಮ ಸೇಡನ್ನು
ತೀರಿಸಿಕೊಳ್ಳುವದಿದ್ದರೆ ತಮ್ಮ ಶತ್ರುವಿಗೆ ಮೊದಲು
ಎಚ್ಚರಿಕೆಯನ್ನು ಕೊಡುತ್ತಿದ್ದರು. ಅನಂತರ ಇಬ್ಬರೂ ಭಲ್ಲೆಗಳಿಂದ
ಸುಸಜ್ಜಿತರಾಗಿ ಒಬ್ಬರನ್ನೊಬ್ಬರು ಎದುರಿಸುತ್ತಿದ್ದರು. ಒಂದು ವೇಳೆ ಒಬ್ಬನು
ಓಡಿಹೋದಲ್ಲಿ ಅವನನ್ನು ಬೆನ್ನಟ್ಟಿ ಹೋಗುತ್ತಿದ್ದರು,
ಆದರೆ ಕೊಲ್ಲುತ್ತಿರಲಿಲ್ಲ. ಒಂದು ವೇಳೆ ಸೇನಾಧಿಪತಿಯು
ಯುದ್ಧದಲ್ಲಿ ಸೋತರೆ ಅವನನ್ನು ಶಿಕ್ಷಿಸುತ್ತಿರಲಿಲ್ಲ,
ಬದಲಾಗಿ ಅವನಿಗೆ ಸ್ತ್ರೀಯ ಉಡಿಗೆ
ತೊಡುಗೆಗಳನ್ನು ಕೊಡುತ್ತಿದ್ದರು. ಅದರಿಂದ ಅವನು ತಾನಾಗಿಯೇ
ಮರಣವನ್ನಪ್ಪುತ್ತಿದ್ದನು. ಪ್ರತಿಸಲವೂ ಯುದ್ಧಕ್ಕೆ ಹೋಗುವ
ಅವರು ಮದ್ಯಪಾನ ಮಾಡಿ ಉನ್ಮತ್ತರಾಗುತ್ತಿದ್ದರು.
ತರುವಾಯ ಈಟಿಗಳನ್ನು ಹಿಡಿದು ಹತ್ತು
ಸಾವಿರ ಸೈನಿಕರನ್ನಾದರೂ ಎದುರಿಸಿ ಯುದ್ಧಕ್ಕೆ ಆಹ್ವಾನಿಸುತ್ತಿದ್ದರು” ಎಂದು ಹೇಳಿದ್ದಾನೆ. ಇವೆಲ್ಲವೂ ಹ್ಯೂಯೆನ್ತ್ಸಾಂಗನು
ಬಹುಶಃ ಕ್ಷತ್ರಿಯರ ಬಗ್ಗೆ ಹೇಳಿದ
ಮಾತುಗಳಿರಬಹುದು.
ವೈಶ್ಯರು ಕೃಷಿ, ವ್ಯಾಪಾರ ಮತ್ತು
ವಾಣಿಜ್ಯ ಕ್ಷೇತ್ರಗಳಲ್ಲಿ ನಿಸ್ಸೀಮರಾಗಿದ್ದರು. ಅದೇ ಹ್ಯೂಯೆನ್ತ್ಸಾಂಗ್
ಮಹಾರಾಷ್ಟ್ರ(ಅಂದರೆ ಇಮ್ಮಡಿ
ಪುಲಕೇಶಿಯ ರಾಜ್ಯ)ದ ಭೂಮಿಯು
ಫಲವತ್ತಾಗಿಯೂ ಸಂಪದ್ಭರಿತವಾಗಿಯೂ ಇದ್ದು ತಪ್ಪದೆ ಆಳರಸರ
ವ್ಯವಹಾರಕ್ಕೊಳಪಟ್ಟಿದೆ. ಇದು ಉತ್ತಮ ಬೆಳೆಯನ್ನು
ಕೊಡುತ್ತದೆ ಎಂದು ಹೇಳಿದ್ದಾನೆ. ಕೆರೆ
ಕಟ್ಟೆಗಳನ್ನು ಕಟ್ಟಿಸಿ ಬೇಸಾಯಕ್ಕೆ ಉತ್ತೇಜನವನ್ನು
ಕೊಡುತ್ತಿದ್ದರು. ಚಾಲುಕ್ಯ ಅರಸು ವಿಜಯಾದಿತ್ಯನು
ತನ್ನ ರಾಜ್ಯದ ಎಲ್ಲೆಡೆಗಳಲ್ಲಿ ಕೆರೆಗಳ
ನಿರ್ಮಾಣ ಕಾರ್ಯವನ್ನು ಕೈಕೊಂಡನು. ಅವುಗಳಲ್ಲಿ ಕೆಲವನ್ನು
ವಣ್ಣೆ, ತಟಾಕ, ಕುಪೇರ ತಟಾಕ,
ಕೆಂಗಲ-ತಟಾಕಗಳನ್ನು ಇಲ್ಲಿ ಹೆಸರಿಸಬಹುದು. ಬೆಳೆಗಳಲ್ಲಿ
ಜೋಳ, ಭತ್ತವಂತೂ ಸರಿಯೇ. ಸಜ್ಜೆ
ರಾಗಿ ಮೊದಲಾದವುಗಳನ್ನೂ ಬೆಳೆಯುತ್ತಿದ್ದಿರಬೇಕು. ವ್ಯಾಪಾರಸ್ಥರು ತಮ್ಮ ತಮ್ಮ ವಾಣಿಜ್ಯ
ಸಂಘ, ಸಂಸ್ಥೆಗಳನ್ನು ಮಾಡಿಕೊಂಡಿದ್ದರು. ತರುವಾಯ ಕಾಲದಲ್ಲಿ ‘ಐಯ್ಯವೊಳೆ
ಐನೂರ್ವರು’ ಎಂಬ ದಕ್ಷಿಣ ಭಾರತಗಳ
ಪ್ರತಿಷ್ಠಿತ ಸಂಸ್ಥೆಯು ಐಹೊಳೆಯಲ್ಲಿತ್ತು. ಎಂಟುನಕರಗಳ
ಒಂದು ಸಂಘವೂ ಇದ್ದಿತು. ಬಾದಾಮಿಯಂಥ
ಮಹಾನಗರಗಳಲ್ಲಿ ಎಣ್ಣೆ, ಅರಿಶಿನ, ಸಕ್ಕರೆ
ಮೊದಲಾದ ದಿನವಸ್ತುಗಳ ಮಾರಾಟದ ಖಾಯಂ ಅಂಗಡಿಗಳಿದ್ದವು.
ಇಂಥ ವ್ಯಾಪಾರಸ್ಥರು ಬಹುಮಟ್ಟಿಗೆ
ಜೈನರು ಅಥವಾ ಈ ಮತದಲ್ಲಿ
ಒಲವು ಇರುವವರಾಗಿದ್ದರು. ಕೆಳವರ್ಗದವರು ಕೃಷಿ, ಕೈಗಾರಿಕೆಯ ಉದ್ಯೋಗಗಳಲ್ಲಿ
ತಮ್ಮದೆ ಪಾತ್ರವನ್ನು ವಹಿಸುತ್ತಿದ್ದರು ಹಾಗೂ ಉಚ್ಚವರ್ಗದವರ ಸೇವಾಕಾರ್ಯವನ್ನು
ಮಾಡುತ್ತಿದ್ದರೆಂದು ಕಾಣುತ್ತದೆ.
ಹ್ಯೂಯೆನ್ತ್ಸಾಂಗನು ಇಮ್ಮಡಿ ಪುಲಕೇಶಿಯ
ಕಾಲದ ಮೊ-ಹೊ-ಲ-ಚ(ಮಹಾರಾಷ್ಟ್ರ)ದ ಜನರನ್ನು
“ಇವರು ಸರಳ ಮನೋಭಾವದವರು, ಪ್ರಾಮಾಣಿಕರು,
ಎತ್ತರ, ದೃಢಕಾಯದವರು, ಮುಚ್ಚು ಮರೆಯಿಲ್ಲದೆ ಸ್ಪಷ್ಟವಾದ
ನಡತೆಯುಳ್ಳವರು, ತಮಗೆ ಸಹಾಯ ಮಾಡಿದವರನ್ನು
ಕೃತಜ್ಞತೆಯಿಂದ ನೆನೆಯುವವರು. ಆದರೆ ತಮಗೆ ಆಗದವರಲ್ಲಿ
ನಿರ್ದಯಿಗಳು. ಅವರನ್ನು ಅಪಮಾನಿಸಿದರೆ ತಮ್ಮ
ಪ್ರಾಣಾಪಾಯವನ್ನು ಲೆಕ್ಕಿಸದೆ ಪ್ರತೀಕಾರವನ್ನು ತೀರಿಸಿಕೊಳ್ಳುವವರು.
ಕಷ್ಟದಲ್ಲಿರುವವರು ಸಹಾಯವನ್ನು ಕೇಳಿದಾಗ ಕೂಡಲೆ
ತಮ್ಮ ಸ್ಥಿತಿಗತಿಗಳನ್ನು ನೋಡದೆ ಸಹಾಯ ಮಾಡಲು
ಮುಂದಾಗುವವರು” ಎಂದು ಪ್ರಶಂಸಿಸಿದ್ದಾನೆ. ಬಾದಾಮಿಯಲ್ಲಿಯ ಕಪ್ಪೆ ಅರಭಟ್ಟನ ಕನ್ನಡ
ತ್ರಿಪದಿ ಶಾಸನವನ್ನು ಪರಿಗಣಿಸಿದರೆ ಹ್ಯೂಯೆನ್ತ್ಸಾಂಗನ ಹೇಳಿಕೆಯಲ್ಲಿ ಸತ್ಯಾಂಶವಿದೆಯೆಂದು
ಹೇಳಬಹುದು.
ಅಂದಿನ ಕಾಲದಲ್ಲಿನ ಜನರಿಗೆ ಪರಂಪರೆಯ
ಹದಿನಾರು ಸಂಸ್ಕಾರಗಳಲ್ಲಿ ಶ್ರದ್ಧೆಯಿತ್ತು ಮತ್ತು ಅವುಗಳನ್ನು ವಿಜೃಂಭಣೆಯಿಂದ
ಆಚರಿಸಲಾಗುತ್ತಿತ್ತು. ಅನ್ನಪ್ರಾಶನ, ಪೂಸವಣ, ಚೌಲಿ, ಉಪನಯನ,
ಸಮಾವರ್ತನ, ಮದುವೆ ಇವೆ ಮೊದಲಾದ
ಆಚರಣೆಯಲ್ಲಿದ್ದ ಸಂಸ್ಕಾರಗಳು. ಎಂಟು ಪ್ರಕಾರಗಳ ಪ್ರಾಚೀನ
ವಿವಾಹ ಕ್ರಮಗಳಲ್ಲಿ ಬಾರದ ‘ಪ್ರಜಾಪತ್ಯ’ ಎಂಬ ವಿನೂತನ ವಿವಾಹ
ಪದ್ಧತಿಯಿದ್ದುದು ಗಮನಾರ್ಹ. ಚಾಲುಕ್ಯ ವಿನಯಾದಿತ್ಯನ
ಕಾಲದಲ್ಲಿ ಕೌಂಡಿನ್ಯ ಗೋತ್ರದ ದೇಶವರ್ಮನು
ಮತ್ತು ಮಾನವ್ಯ ಗೋತ್ರದ ಒಬ್ಬ
ಬ್ರಾಹ್ಮಣನು ಪ್ರಜಾಪತ್ಯದ ಸಲುವಾಗಿ ಭೂಮಿದಾನವನ್ನು ಪಡೆದರೆಂದರೆ,
ತಂದೆಯಾದವನು ತನ್ನ ಮಗಳನ್ನು ಯೋಗ್ಯವರನಿಗೆ
ಕೊಟ್ಟು ಇಬ್ಬರು ಒಟ್ಟಿಗೆ ವಂಶಾಭಿವೃದ್ದಿಗೋಸ್ಕರವೆ
ಲೌಕಿಕ ಹಾಗೂ ಧಾರ್ಮಿಕ ಕರ್ತವ್ಯಗಳನ್ನು
ನೆರವೇರಿಸಬೇಕೆಂಬ ತಿಳುವಳಿಕೆಯ ಪ್ರಜಾಪತ್ಯ ಪದ್ಧತಿಯಲ್ಲಿ ಅಡಗಿದೆಯೆಂದು
ಅಭಿಪ್ರಾಯ. ಪ್ರಜಾಪತ್ಯವು ಗಂಡು ಸಂತಾನವಿಲ್ಲದಿದ್ದಾಗ ತನ್ನ
ಮಗಳು ಗಂಡು ಸಂತಾನವನ್ನು ಪಡೆಯಲು
ಮಾಡಬೇಕಾದ ಒಂದು ವಿಧವಾದ ಯಜ್ಞವೆಂದು
ಅರ್ಥೈಸಲಾಗಿದೆ.
ಅಂದಿನ ಕಾಲದಲ್ಲಿನ ಬಹಳಷ್ಟು ದೇವಾಲಯ,
ಬಸದಿ ನಿರ್ಮಾಣ ನೋಡಿದರೆ ಜನರು
ತುಂಬಾ ಧರ್ಮಶ್ರದ್ಧೆಯುಳ್ಳವರಾಗಿದ್ದರೆಂದು ಕಾಣುತ್ತದೆ. ಧಾರ್ಮಿಕ ವೈಷಮ್ಯ ಸಾಮಾನ್ಯವಾಗಿ
ಇರಲಿಲ್ಲವೆಂದೇ ಹೇಳಬಹುದು. ಬಾದಾಮಿಯಲ್ಲಿ ಒಂದರ
ಪಕ್ಕದಲ್ಲೊಂದರಂತೆ ಶೈವ, ವೈಷ್ಣವ, ಬೌದ್ಧ,
ಜೈನ ಗುಹಾದೇವಾಲಯಗಳಿರುವುದು ಆಗಿನ
ಧಾರ್ಮಿಕ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ. ಶೈವ,
ವೈಷ್ಣವ, ಸೌರ, ಶಾಕ್ತ, ಗಾಣಪತ್ಯ,
ನಾಗ ಹೀಗೆ ವಿವಿಧ
ಪಂಥದವರೂ ಇದ್ದರು. ಇವಲ್ಲದೆ ಶಿಷ್ಟ
ಸಂಪ್ರದಾಯಕ್ಕೆ ಒಳಪಡದ ಜನಸಾಮಾನ್ಯರ ಆರಾಧ್ಯ
ದೈವಗಳಿದ್ದವು.
ಮಹಾಭಾರತ,
ರಾಮಾಯಣ, ಪುರಾಣ, ಪಂಚತಂತ್ರ ಮೊದಲಾದ
ಕಥೆಗಳು ಜನಪ್ರಿಯವಾಗಿದ್ದವು. ಬಾದಾಮಿಯ ಗುಹಾದೇವಾಲಯಗಳಲ್ಲಿ ಕೃಷ್ಣಚರಿತ,
ಪಾರಿಜಾತಾಪಹರಣ, ಸಮುದ್ರಮಥನ, ಶಿವ-ಪಾರ್ವತಿ ಕಲ್ಯಾಣ,
ಮಹಿಷಾಸುರವಧೆ ಮೊದಲಾದ ಕಥಾನಕಗಳನ್ನು ಚಿತ್ರಿಸಲಾಗಿದೆ.
ಇಲ್ಲಿಯ ಮೇಲಿನ ಮತ್ತು ಕೆಳಗಿನ
ಶಿವಾಲಯಗಳೆಂದು ಕರೆಯಲಾದ ದೇವಸ್ಥಾನಗಳಲ್ಲಿ ಕೃಷ್ಣಚರಿತೆ
ಮತ್ತು ರಾಮಾಯಣದ ಕೆಲವು ದೃಶ್ಯಗಳನ್ನು
ರೂಪಿಸಲಾಗಿದೆ. ಪಟ್ಟದಕಲ್ಲಿನ ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಮಹಾಕಾವ್ಯಗಳಲ್ಲದೆ ಹರಿವಂಶ, ಪಂಚತಂತ್ರ ಮೊದಲಾದ
ಕಾವ್ಯಗಳು ಕೆಲವು ಮುಖ್ಯ ಕಥೆಗಳನ್ನು
ಬಹಳ ಸುಂದರವಾಗಿ ಕಂಬಗಳ
ಮೇಲೆ ಬಿಡಿಸಲಾಗಿದೆ. ಇದೇ ದೇವಾಲಯಗಳಲ್ಲಿ ಜೈನ
ಯಶೋಧರ ಮತ್ತು ಅಮೃತಮತಿ ಕಥೆಯಲ್ಲಿಯ
ಕೆಲವು ದೃಶ್ಯಗಳನ್ನು ತೋರಿಸಿರುವುದು ಕುತೂಹಲಕಾರಿ ವಿಷಯ.
ಮನರಂಜನೆ:
ಶ್ರವಣ ಮತ್ತು ದೃಶ್ಯಕಲೆಗಳಾದ ಸಂಗೀತ,
ನೃತ್ಯ, ನಾಟಕ, ವರ್ಣಚಿತ್ರ ಮೊದಲಾದವುಗಳು
ಜನರ ಮನರಂಜನೆಯ ಮುಖ್ಯ
ಸಾಧನಗಳಾಗಿದ್ದವು. ವಾಸ್ತುಮೂರ್ತಿ ಶಿಲ್ಪಿಗಳು ವಿಶೇಷವಾಗಿ ಉತ್ತೇಜನವನ್ನು
ಮತ್ತು ಗೌರವ ಸ್ಥಾನವನ್ನು ಪಡೆದಿದ್ದರು.
ಉಡುಪುಗಳು:-
ಹವಾಮಾನಕ್ಕೆ ತಕ್ಕಂತೆ ಜನರು ಉಡುಪುಗಳನ್ನು
ಧರಿಸುತ್ತಿದ್ದರು. ಶಿಲ್ಪಗಳಲ್ಲಿ ತೋರಿಸಿದಂತೆ ಸಾಮಾನ್ಯವಾಗಿ ಸ್ತ್ರೀಪುರುಷರು ಬಟ್ಟೆಗಳನ್ನು ಧರಿಸುತ್ತಿದ್ದರು. ಧೋತ್ರವಲ್ಲದೆ ಸೊಂಟಕ್ಕೆ ಪ್ರತ್ಯೇಕವಾಗಿ ಈಗ
ಕಮರಿಬಂದವೆಂದು ಹೇಳಲಾದ ವಸ್ತ್ರವನ್ನು ಕಟ್ಟಿಕೊಳ್ಳಲಾಗುತ್ತಿತ್ತು.
ಪುರುಷರು ಸಾಮಾನ್ಯವಾಗಿ ಎದೆಯನ್ನು ಮುಚ್ಚಿಕೊಳ್ಳುವಂಥ ವಸ್ತ್ರಗಳನ್ನು
ಧರಿಸಿಕೊಳ್ಳುತ್ತಿರಲಿಲ್ಲ. ಸ್ತ್ರೀಯರು ಭುಜಗಳ ಮೇಲೆ
ಹಾದು ಹೋಗುವ ಹಾಗೆ ವಸ್ತ್ರವನ್ನು
ತೊಡುತ್ತಿದ್ದರು. ಅಪರೂಪವಾಗಿ ಸ್ತನಪಟ್ಟಿಯನ್ನು ಧರಿಸುತ್ತಿದ್ದುದು
ಕೆಲವು ಸ್ತ್ರೀ ವಿಗ್ರಹಗಳಲ್ಲಿ ಕಾಣುತ್ತದೆ.
ಸ್ವಲ್ಪ ದೊಗಲೆ ಪೈಜಾಮದಂಥ ಹೊಲಿದ
ವಸ್ತುವನ್ನು ಸಾಮಾನ್ಯವಾಗಿ ದ್ವಾರಪಾಲಕರು ಅಥವಾ ಪ್ರತಿಹಾರಿಗಳು ತೊಡುತ್ತಿದ್ದರು.
ಐಹೊಳೆಯ ರಾವಳಫಡಿಯ ಶೈವ ಗುಹಾಲಯದ
ಮುಂಬದಿಯ ಪಾರ್ಶ್ವಗಳಲ್ಲಿರುವ ದ್ವಾರಪಾಲಕರು ಇಂಥ ವಸ್ತ್ರಗಳನ್ನು ಧರಿಸಿದಂತೆ
ತೋರಿಸಲಾಗಿದೆ. ವಿವಿಧ
ಪ್ರಕಾರಗಳ ಹೂಬಳ್ಳಿಗಳು, ರೇಖಾಚಿತ್ರಗಳಿಂದ ಅಲಂಕೃತವಾದ ವಸ್ತ್ರಗಳಿರುತ್ತಿದ್ದವು. ಸ್ತ್ರೀಪುರುಷರಿಬ್ಬರೂ
ನಾನಾ ಪ್ರಕಾರದ ಆಭರಣಗಳನ್ನು ಕಿವಿ,
ಕಂಠ, ಎದೆ, ತೋಳು, ಮಣಿಗಂಟು,
ಸೊಂಟ, ಕಾಲ್ಮಣಿಗಂಟುಗಳಿಗೆ ಧರಿಸುತ್ತಿದ್ದರು. ಕೇಶವಿನ್ಯಾಸವು ಆಶ್ಚರ್ಯಕರ ರೀತಿಯಲ್ಲಿ ವೈವಿಧ್ಯಮಯವಾಗಿತ್ತು.
ಇವೆಲ್ಲವನ್ನು ದೇವಾಲಯದ ಮೂರ್ತಿಶಿಲ್ಪಗಳಲ್ಲಿ ನೋಡಬಹುದು.
ಧಾರ್ಮಿಕ ವ್ಯವಸ್ಥೆ
ಬೌದ್ಧಧರ್ಮ
ಬೌದ್ಧಧರ್ಮದ
ಬಗೆಗೆ ಚಾಲುಕ್ಯ ರಾಜರ ಯಾವುದೇ
ಶಾಸನದಲ್ಲಿ ಉಲ್ಲೇಖವಿದ್ದುದು ಇನ್ನೂವರೆಗೂ ಬೆಳಕಿಗೆ ಬಂದಿಲ್ಲ. ಆದರೆ
ಚಾಲುಕ್ಯ ಸಾಮ್ರಾಜ್ಯದ ತಿರುಳು ಎನಿಸಿದ ಬಾದಾಮಿ-ಐಹೊಳೆಯಲ್ಲಿ ಬೌದ್ಧಧರ್ಮ ಪ್ರಚಾರದಲ್ಲಿ ಇದ್ದುದನ್ನು
ತೋರಿಸುವ ವಾಸ್ತುಗಳು ಮತ್ತು ಶಿಲ್ಪಗಳಿವೆ.
ಬಾದಾಮಿ ೨ನೇ ಮತ್ತು ೩ನೇ
ಗುಹಾದೇವಾಲಯಗಳ ನಡುವೆ ಒಂದು ನೈಸರ್ಗಿಕವಾಗಿ
ನಿರ್ಮಿತವಾಗಿರುವ ಗವಿ ಇದೆ. ಅದರ
ಭಿತ್ತಿಯ ಮೇಲೆ ಬೌದ್ಧಧರ್ಮಕ್ಕೆ ಸಂಬಂಧಿಸಿದಂತಹ
ಅಪೂರ್ಣವಾದ ಉಬ್ಬು-ಶಿಲ್ಪಗಳಿವೆ. ಐಹೊಳೆಯಲ್ಲಿಯ
ಮೇಗುತಿ ಬೆಟ್ಟದ ಉತ್ತರದ ಮಧ್ಯದಲ್ಲಿ
ಒಂದು ಬೌದ್ಧ ಚೈತ್ಯವಿದೆ. ಅದು
ಬೌದ್ಧವಿಹಾರವೂ ಆಗಿತ್ತು. ಈ ಚೈತ್ಯಾಲಯದ
ಬಾಗಿಲುಗಳ ಚೌಕಟ್ಟಿನ ಶಾಲೆಗಳಲ್ಲಿ ಬುದ್ಧನ
ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನು
ಪ್ರತಿಬಿಂಬಿಸುವ ಉಬ್ಬುಶಿಲ್ಪಗಳಿವೆ.
ಬುದ್ಧನ ಮಹಾನಿರ್ವಾಣ, ಧರ್ಮಚಕ್ರ ಪ್ರವರ್ತನ, ನಳಗಿರಿ
ಘಟನೆ, ಬುದ್ಧನನ್ನು ಕೊಲ್ಲಲು ದೇವದತ್ತ ಮಾಡಿದ
ಪ್ರಯತ್ನ ಮುಂತಾದ ಘಟನೆಗಳನ್ನು ಈ
ಉಬ್ಬುಶಿಲ್ಪಗಳು ತೋರಿಸುತ್ತವೆ.
ಚಾಲುಕ್ಯರ
ರಾಜ್ಯದಲ್ಲಿಯ ಬೌದ್ಧಧರ್ಮದ ಬಗೆಗೆ ಚೀನ ಪ್ರವಾಸಿಗ
ಹ್ಯೂಯೆನ್ ತ್ಸಾಂಗನು ತನ್ನ ಕಥನಗಳಲ್ಲಿ
ಹೇಳಿದ್ದಾನೆ. ಅಲ್ಲಿಯ ಹೀನಯಾನರು ಮತ್ತು
ಮಹಾಯಾನರ ಬಗ್ಗೆ ಅವನು ಬರೆದಿದ್ದಾನೆ.
ಚುಲಿಯ ದೇಶದಲ್ಲಿ ಬೌದ್ಧವಿಹಾರಗಳೆಲ್ಲ ಹಾಳು
ಬಿದ್ದಿದ್ದವು. ಕೆಲವೊಂದರಲ್ಲಿ ಮಾತ್ರ ಭಿಕ್ಷುಗಳು ವಾಸಿಸುತ್ತಿದ್ದರು.
ನೂರಾರು ದೇವಮಂದಿರಗಳಿದ್ದವು.
ಅಸಂಖ್ಯ ದಿಗಂಬರರು ಇದ್ದರು. ನಗರದ
ಪಶ್ಚಿಮವಲಯದ ಹತ್ತಿರ ಒಂದು ಹಳೆ
ವಿಹಾರವಿದ್ದಿತು. ಹ್ಯೂಯೆನ್ತ್ಸಾಂಗನು ಕರ್ನಾಟಕದ
ಪಶ್ಚಿಮಭಾಗಕ್ಕೂ ಹೋಗಿದ್ದನು. ಅಲ್ಲಿ ಕೊಂಕಣಪುರದಂತಹ ಸ್ಥಳಗಳಲ್ಲಿ
ಬೌದ್ಧಧರ್ಮದ ಗುರುತುಗಳನ್ನು ಕಂಡಿದ್ದಾಗಿ ಅವನು ಹೇಳುತ್ತಾನೆ. ಒಟ್ಟಿನಲ್ಲಿ
ಅಂದಿನ ಕರ್ನಾಟಕದಲ್ಲಿ ಬೌದ್ಧಧರ್ಮ ಸುಸ್ಥಿತಿಯಲ್ಲಿ ಇದ್ದಿರಲಿಲ್ಲವೆಂದು
ಈ ಚೀನ ದೇಶದ
ಪ್ರವಾಸಿಗನ ವೃತ್ತಾಂತದಿಂದ ಸ್ಪಷ್ಟವಾಗುತ್ತದೆ. ಆದರೆ, ೧೩ನೇ ಶತಮಾನದವರೆಗೂ
ಬೌದ್ಧಧರ್ಮವು ಕರ್ನಾಟಕದಲ್ಲಿ ಉಸಿರಾಡಿಕೊಂಡಿದ್ದಿತು. ದಕ್ಷಿಣಕನ್ನಡದ ಕದಿರಿ, ಉತ್ತರಕನ್ನಡದ ಬನವಾಸಿ,
ಶಿವಮೊಗ್ಗದ ಬಳ್ಳಿಗಾವೆ, ಧಾರವಾಡದ ಡಂಬಳ ಮತ್ತು
ಕೋಳಿವಾಡ ಹಾಗೂ ಬಳ್ಳಾರಿ ಜಿಲ್ಲೆಯ
ಕುರುಗೋಡು ಮುಂತಾದ ಸ್ಥಳಗಳಲ್ಲಿ ಬೌದ್ಧಧರ್ಮ
ಮುಂದುವರೆದುಕೊಂಡು ಬಂದಿತ್ತು ಎಂಬುದಕ್ಕೆ ಅಲ್ಲಿಯ
ವಾಸ್ತು ಮತ್ತು ಶಿಲ್ಪಗಳು ಸಾಕ್ಷ್ಯ
ನುಡಿಯುತ್ತವೆ.
ಜೈನಧರ್ಮ
ವಾತಾಪಿಯ ಚಾಲುಕ್ಯವಂಶ ಧಾರ್ಮಿಕ ಉದಾರತನದಲ್ಲಿ ಹೆಸರಾದುದು.
ಅವರ ಕಾಲದಲ್ಲಿ ಜೈನಧರ್ಮವು
ಉತ್ತರ ಕರ್ನಾಟಕದಲ್ಲಿ ಶಾಖೋಪಶಾಖವಾಗಿ ಹಬ್ಬಿಕೊಂಡಿತು. ಚೈತ್ಯಾಲಯಗಳ ರಚನೆಯಲ್ಲಿ ಸಕ್ರಿಯವಾದ ಆಸಕ್ತಿಯನ್ನು
ತೋರ್ಪಡಿಸಿದ ರಾಜಮನೆತನ ದವರು ಮತ್ತು
ಮನ್ನೆಯರು ಅವುಗಳಿಗೆ ಇನ್ನಷ್ಟು ದಾನಗಳನ್ನು
ಕೊಡಮಾಡಿದರು. ತಮ್ಮ ರಾಜಧಾನಿ ಬಾದಾಮಿ
ಹಾಗೂ ಹತ್ತಿರದ ಐಹೊಳೆಯಲ್ಲಿ ಜೈನ
ಗುಹೆಗಳನ್ನು ಕೊರೆಯಿಸಿದರು. ಅಲ್ಲದೆ ಕರಟಗೇರಿ, ಲಕ್ಷ್ಮೇಶ್ವರ
ಮತ್ತು ಅಡೂರಗಳಲ್ಲಿ ಜೈನ ವಿಶ್ರಾಮಧಾಮಗಳನ್ನೂ ಕಟ್ಟಿಸಿದರು.
ಜೈನ ಸಂಘಸಂಸ್ಥೆಗಳಿಗೆ ಕೊಡಲಾದ
ವಿಪುಲ ದಾನಗಳನ್ನು ಉಲ್ಲೇಖಿಸುವ ಅನೇಕ
ಶಾಸನಗಳು ಲಭ್ಯವಾಗಿವೆ.
ಚಾಲುಕ್ಯ ಮಾಂಡಲೀಕರೂ ಕೂಡ ಜೈನ
ಧರ್ಮಕ್ಕೆ ಪ್ರೋತ್ಸಾಹ ಕೊಟ್ಟರು. ಈಗಿನ
ಧಾರವಾಡ ಜಿಲ್ಲೆಯಲ್ಲಿಯ ಗದಗ ತಾಲೂಕಿನಲ್ಲಿರುವ ಕರಟಗೇರಿಯಲ್ಲಿಯ
ಶಾಂತಿಭಗವತ್ ಚೈತ್ಯಾಲಯಕ್ಕೆ (ಇದು ೧೨ನೇ ತೀರ್ಥಂಕರ
ಶಾಂತಿನಾಥನಿಗೆ ಅರ್ಪಿತವಾಗಿದೆ) ರವಿಕೀರ್ತಿ ಎಂಬ ಸೇಂದ್ರಕ
ಅರಸನು ಭೂಮಿಗಳನ್ನು ದಾನ ಕೊಟ್ಟನು. ಎರಡನೇ
ಪುಲಕೇಶಿಯ ಆಸ್ಥಾನಕವಿಯಾದ ರವಿಕೀರ್ತಿಯು ಐಹೊಳೆಯಲ್ಲಿ ದಿಬ್ಬವೊಂದರ ಮೇಲೆ ಜಿನೇಂದ್ರನ ಒಂದು
ಕಲ್ಲಿನ ಗುಡಿಯನ್ನು ಕಟ್ಟಿಸಿದನು. ಮುಳವಳ್ಳಿ,
ವೆಳವಳ್ಟಿಕವಾಡ, ಮಚ್ಚನೂರ, ಗಂಗೆವೂರ(ಗಂಗುರ,
ಹುನಗುಂದ ತಾ. ಬಿಜಾಪುರ). ಮತ್ತು
ಪುಲಿಗೆರೆ (ಲಕ್ಷ್ಮೇಶ್ವರ, ಧಾರವಾಡ ಜಿಲ್ಲೆ) ಊರುಗಳನ್ನು
ಈ ಜಿನೇಂದ್ರ ದೇವಾಲಯಕ್ಕೆ
ದತ್ತಿ ಕೊಡಲಾಯಿತು. ಈ ದೇವಾಲಯದಲ್ಲಿ
ದೊರೆತ ಅಂಬಿಕಾ (ಕೂಷ್ಮಾಂಡಿನಿ) ಯಕ್ಷಿಯ
ಪ್ರತಿಮೆಯನ್ನು ಗಮನಿಸಿದರೆ, ಇದು ಬಹುಶಃ ನೇಮಿನಾಥನ
ದೇವಾಲಯವಾಗಿದ್ದಿರಬಹುದು ಎಂದೆನಿಸುತ್ತದೆ.
ಎರಡನೇ ಪುಲಕೇಶಿಯ ಸಮಯದಲ್ಲಿಯೆ ಪ್ರಾಚೀನ
ಪುಲಿಗೆರೆ ಅಂದರೆ ಈಗ ಗದಗ
ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರವು ಜೈನ ಕೇಂದ್ರವಾಗಿತ್ತು. ಹಡಗಿಲೆಗ್ರಾಮ(ಹಡಗಲೆ, ಶಿರಹಟ್ಟಿ ತಾ.
ಧಾರವಾಡ ಜಿಲ್ಲೆ)ವನ್ನು ಶಂಖ
ಜಿನಾಲಯದ ದುರಸ್ತಿ, ಪೂಜೆ, ನೈವೇದ್ಯಗಳಿಗಾಗಿ
ಕ್ರಿ.ಶ. ೬೮೬ರಲ್ಲಿ
ಚಾಲುಕ್ಯ ವಿಕ್ರಮಾದಿತ್ಯನು ದಾನವಾಗಿ ಕೊಟ್ಟಿದ್ದನು. ವಿನಯಾದಿತ್ಯನ
ಆಳ್ವಿಕೆಯಲ್ಲಿ ಇಲ್ಲಿಯ ಜೈನ ದೇವಸ್ಥಾನಗಳಿಗೆ
ಇನ್ನೂ ಮೂರು ದಾನಗಳು ಬಂದಿದ್ದವು.
ತನ್ನ ಸಹೋದರಿ ಕುಂಕುಮದೇವಿಯು ಲಕ್ಷ್ಮೇಶ್ವರದಲ್ಲಿ
ಕಟ್ಟಿಸಿದ ಜಿನದೇವಾಲಯಕ್ಕೆ ಸಾಮ್ರಾಟನು ಹಲವಾರು ಗ್ರಾಮಗಳನ್ನು
ಮತ್ತು ಭೂಮಿಗಳನ್ನು ಕ್ರಿ.ಶ.೭೦೭ರಲ್ಲಿ
ದಾನವಾಗಿತ್ತನು. ಕುಂಕುಮದೇವಿ ಕಟ್ಟಿಸಿದ ಜಿನಾಲಯವನ್ನು ಆನೆಸೆಜ್ಜೆಯ
ಬಸದಿ ಎಂದು ಕರೆಯುತ್ತಿದ್ದರು ಎಂದು
೧೧ನೇ ಶತಮಾನದ ಒಂದು ಶಾಸನದಲ್ಲಿ
ಹೇಳಿದೆ.
ಲಕ್ಷ್ಮೇಶ್ವರವು
ಜೈನರ ಕೇಂದ್ರಸ್ಥಾನವಾಗಿದ್ದು, ಮೇಲಿಂದ ಮೇಲೆ ಉಲ್ಲೇಖಿತಗೊಳ್ಳುವ
ದಾನಶಾಲೆಗಳಲ್ಲಿ ಬಡವರಿಗೂ ಹಾಗೂ ನಿರ್ಗತಿಕರಿಗೂ
ಉಚಿತ ಆಹಾರವನ್ನು ಒದಗಿಸ ಲಾಗುತ್ತಿತ್ತು.
ಇದರಿಂದ ಜೈನಧರ್ಮವನ್ನು ಸ್ವೀಕರಿಸಲು ಬಡವರು ಮುಂದಾಗುತ್ತಿದ್ದ ಸಾಧ್ಯತೆಗಳೂ
ಇದ್ದವು. ಕ್ರಿ.ಶ. ೧೨ನೇ
ಶತಮಾನದಲ್ಲಿಯೂ ಲಕ್ಷ್ಮೇಶ್ವರದಲ್ಲಿ ಹೊಸ ಹೊಸ ಬಸದಿಗಳ
ಕಟ್ಟಡ ಕೆಲಸ ನಡೆಯುತ್ತಿದ್ದುದರಿಂದ ಆ
ಊರು ಜೈನರ ಕೇಂದ್ರಸ್ಥಾನವಾಗಿ
ತನ್ನ ಸ್ಥಾನವನ್ನು ಆ ಕಾಲದವರೆಗೂ
ಉಳಿಸಿಕೊಂಡು ಬಂದಿತ್ತು.
ಎರಡನೇ ಕೀರ್ತಿವರ್ಮನ ಆಳ್ವಿಕೆಯಲ್ಲಿ ಜಾಬುಳಗೇರಿಯ ಗಾಮುಂಡ ಕಲಿಯಮ್ಮಳು ಅಣ್ಣಿಗೇರಿಯಲ್ಲಿ
ಒಂದು ಜೈನ ಚೈತ್ಯಾಲಯವನ್ನು ಕಟ್ಟಿಸಿದಳು.
ಈ ಎಲ್ಲ ಸ್ಥಳಗಳಲ್ಲದೆ ಇದೇ
ಕಾಲದಲ್ಲಿ ರಾಯಚೂರು ಜಿಲ್ಲೆಯ ಕೊಪ್ಪಳವೂ
ಕೂಡ ಜೈನ ಮುನಿಗಳ
ಒಂದು ಮಹತ್ವದ ಆಶ್ರಯ ಸ್ಥಾನವಾಗಿತ್ತು.
ಕ್ರಿ.ಶ. ೭-೮ ಶತಮಾನಗಳ
ಲಿಪಿಯಲ್ಲಿದ್ದ ಶಾಸನಗಳು ಸರ್ವನಂದಿ, ಜಟಾಸಿಂಗನಂದಿ
ಆಚಾರ್ಯರಂತಹ ಜೈನ ಸನ್ಯಾಸಿಗಳನ್ನು ಹೆಸರಿಸುತ್ತವೆ.
ಇವರು ಕೊಪ್ಪಳದ ಬಂಡೆಗಲ್ಲುಗಳ ಬೆಟ್ಟದಲ್ಲಿ
ಸಮಾಧಿವಿಧಿಯನ್ನು ಅನುಸರಿಸಿ ನಿರ್ವಾಣವನ್ನು ಹೊಂದಿದವರು.
ಇತ್ತೀಚೆಗೆ ಇಲ್ಲಿಯ ಕೋಟೆಯ ಗೋಡೆಗಳಲ್ಲಿ
ಕೂಡಿಸಿದ ಕಲ್ಲುಗಳಲ್ಲಿ ಕೆಲವೊಂದು ದಾಖಲೆಗಳು ದೊರೆತಿವೆ.
ಇವು ರಾಷ್ಟ್ರಕೂಟರ ಕಾಲದವು
ಎಂದು ಹೇಳಬಹುದು. ಅನ್ವೇಷಣೆಯನ್ನು ಇಲ್ಲಿ
ಇನ್ನೂ ಮುಂದುವರೆಸಿದರೆ ಚಾಲುಕ್ಯರ ಕಾಲದ ಶಾಸನಗಳು
ದೊರೆಯಬಹುದು.
ಬಾದಾಮಿ, ಐಹೊಳೆ, ಹಳ್ಳೂರ (ಬಿಜಾಪುರ
ಜಿಲ್ಲೆ) ಮತ್ತು ಹುಂಚಾ (ಶಿವಮೊಗ್ಗಾ
ಜಿಲ್ಲೆ) ಇವು ವಾತಾಪಿ ಚಾಲುಕ್ಯ
ಕಾಲದಲ್ಲಿಯ ಇನ್ನಿತರ ಕೇಂದ್ರಗಳಲ್ಲಿ ಉಲ್ಲೇಖಾರ್ಹ
ವಾದವುಗಳು. ಬಾದಾಮಿಯಲ್ಲಿ ೪ನೆಯದಾದ ಜೈನ ಗುಹೆಯು
ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ಅಷ್ಟು
ಮಹತ್ವದ್ದಾಗಿ ತೋರುವುದಿಲ್ಲ. ಅದರಲ್ಲಿ ೬-೭
ಶತಮಾನದ ಪಾರ್ಶ್ವ ನಾಥ ಅಥವಾ
(ಸುಪಾರ್ಶ್ವನಾಥ) ಹಾಗೂ ಬಾಹುಬಲಿಯವರ ಸೂಕ್ಷ್ಮ
ಉಬ್ಬುಕೆತ್ತನೆಯಲ್ಲಿಯ ಪ್ರತಿಮೆಗಳು ಇವೆ. ಅಲ್ಲದೆ ಆಗಿನ
ಕಾಲದ ಜೈನರಲ್ಲಿ ಬಾಹುಬಲಿ ಬಹಳ
ಜನಪ್ರಿಯ ನಾಗಿದ್ದನು ಎಂಬುದಕ್ಕೂ ಅದೊಂದು
ನಿದರ್ಶನವಾಗಿದೆ. ಈ ಗವಿಯನ್ನು
ಯಾವ ತೀರ್ಥಂಕರನಿಗಾಗಿ ಕೊರೆದರು
ಎಂಬುದನ್ನು ಹೇಳುವುದು ಕಠಿಣವಾದರೂ ಅದು
ಮಹಾವೀರ ಅಥವಾ ವೃಷಭನಿಗಾಗಿ ಇದ್ದಿರಬಹುದು
ಎಂದು ಊಹಿಸಬಹುದಾಗಿದೆ.
ಬಾದಾಮಿಯಲ್ಲಿಯ
ಗವಿಗಿಂತಲೂ ಐಹೊಳೆಯಲ್ಲಿಯ ಗವಿ ಹೆಚ್ಚು ವಿಶಾಲವಾಗಿದೆ.
ಆದರೆ ಇಲ್ಲಿಯ ಪ್ರತಿಮಾರಚನೆಯ ವಿಧಾನವು
ಬಾದಾಮಿ ಗವಿಯಲ್ಲಿಯ ವಿಧಾನವನ್ನೇ ಹೋಲುತ್ತದೆ.
ಪಾರ್ಶ್ವನಾಥ ಅಥವಾ ಸುಪಾರ್ಶ್ವನಾಥ ಮತ್ತು
ಬಾಹುಬಲಿ ಅವರ ಪ್ರತಿಮೆಗಳ ಉಬ್ಬುಕೆತ್ತನೆಗಳು
ಇಲ್ಲಿಯೂ ಇವೆ. ಗವಿಯ ಒಳಗೆ
ಮಂದಿರದ ಮೂರು ಬದಿಯ ಗೋಡೆಯಲ್ಲಿ
ಮೂರು ಗರ್ಭಗೃಹಗಳಿವೆ. ಮುಖ್ಯ ಗರ್ಭಗುಡಿಯಲ್ಲಿ ಒಂದು
ಜೈನ ಪ್ರತಿಮೆ ಇದೆ.
ಒಂದು ಬದಿಯ ಗರ್ಭಗುಡಿಯಲ್ಲಿ ಅಪೂರ್ಣವಾಗಿರುವ,
ಆದರೆ ಮಹತ್ಕಲ್ಪನೆಯ ಒಂದು ಉಬ್ಬುಶಿಲ್ಪವಿದೆ. ಇದು
ಪಾರ್ಶ್ವನಾಥನ ಸಮವಸರಣವನ್ನು ತೋರಿಸುವ ಶಿಲ್ಪವಾಗಿರಬಹುದು ಎಂದು
ಊಹಿಸಲಾಗಿದೆ. ಇಡೀ ದೇಶದಲ್ಲಿ ಈ
ಉಬ್ಬುಶಿಲ್ಪ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ.
ಹಳ್ಳೂರದ ಜೈನ ಬಸದಿಯಲ್ಲಿ ಒಂದು
ಗರ್ಭಗುಡಿ, ಅದಾದ ನಂತರ ಒಂದು
ಅಂತರ್ಭವನ ಹಾಗೂ ಅದರ ನಂತರ
ಒಂದು ಸಭಾಸ್ಥಾನಗಳಿವೆ. ಸಭಾಸ್ಥಾನದ ಹೊರಗೋಡೆಯ ಮೇಲೆ
ತೀರ್ಥಂಕರರ ಉಬ್ಬುಶಿಲ್ಪಗಳಿವೆ.
ಶಿವಮೊಗ್ಗಾ
ಜಿಲ್ಲೆಯಲ್ಲಿನ ಹುಂಚಾವು ಸಾಂತರ ಅರಸರ
ರಾಜಧಾನಿಯಾಗಿತ್ತು. ಜಿನದತ್ತರಾಯ ಎಂಬುವನು ೭ನೇ ಶತಮಾನದಲ್ಲಿ
ಈ ವಂಶವನ್ನು ಇಲ್ಲಿ
ಸ್ಥಾಪಿಸಿದನೆಂದು ಐತಿಹ್ಯಗಳಿವೆ. ಅವನೆ ಇಲ್ಲಿ ಪದ್ಮಾವತಿ
ದೇವಾಲಯವನ್ನು ಕಟ್ಟಿಸಿದನು ಮತ್ತು ಜಿನನಿಗೆ ನೈವೇದ್ಯಗಳ
ವ್ಯವಸ್ಥೆ ಮಾಡಲು ಕುಂಭಾಸಿ ಎಂಬ
ಗ್ರಾಮವನ್ನು ದತ್ತಿ ಹಾಕಿಕೊಟ್ಟನು. ನಂತರದ
ಅರಸರು ಕೊಡುತ್ತಿದ್ದ ಪ್ರೋತ್ಸಾಹ ಹುಮಚಾವು ಜೈನರ
ಮುಖ್ಯ ಕೇಂದ್ರವಾಗಿಯೆ ಮಧ್ಯಯುಗದ ಪ್ರಾರಂಭದವರೆಗೂ ಉಳಿದುಕೊಂಡು
ಬಂದಿತ್ತು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿಯ
ಶ್ರವಣಬೆಳಗೊಳವು ಜೈನಧರ್ಮದ ಒಂದು ಪ್ರಾಚೀನ
ಕ್ಷೇತ್ರವಾಗಿತ್ತು ಎಂಬುದನ್ನು ಈಗಾಗಲೆ ಹೇಳಲಾಗಿದೆ.
ಅಲ್ಲಿ ೬-೭ನೇ
ಶತಮಾನದ ಶಾಸನಗಳು ದೊರೆಯುತ್ತವೆ. ಇದರಲ್ಲಿ
ಅತ್ಯಂತ ಪ್ರಾಚೀನವಾದ ಶಾಸನವನ್ನು ಚಿಕ್ಕಬೆಟ್ಟದ ಮೇಲಿರುವ
ಪಾರ್ಶ್ವನಾಥ ಬಸದಿಯ ಹತ್ತಿರದ ಬಂಡೆಯೊಂದರ
ಮೇಲೆ ಕೆತ್ತಲಾಗಿದೆ. ಭದ್ರಬಾಹು ಮತ್ತು ಅವನ
ಶಿಷ್ಯರು ದಕ್ಷಿಣಕ್ಕೆ ವಲಸೆ ಬಂದ ಸಂಗತಿಯನ್ನು
ಹಾಗೂ ಪ್ರಭಾಚಂದ್ರ ಆಚಾರ್ಯರು ಕಟವಪ್ರದ ಮೇಲೆ
ಅಂದರೆ ಚಿಕ್ಕಬೆಟ್ಟದ ಮೇಲೆ ಸಮಾಧಿಸ್ಥರಾದರು ಎಂಬುದನ್ನು
ಆ ಶಾಸನದಲ್ಲಿ ಬರೆದಿದೆ.
ಚಂದ್ರಗುಪ್ತ ಮೌರ್ಯನು ಜೈನಮುನಿಯಾದ ಬಳಿಕ
ಅವನು ತನ್ನ ಹೆಸರನ್ನು ಪ್ರಭಾಚಂದ್ರ
ಆಚಾರ್ಯ ಎಂದು ನಾಮಧಾರಣ ಮಾಡಿಕೊಂಡಿರುವ
ಸಾಧ್ಯತೆ ಇದೆ. ಅವನ ನಂತರ
೭೦೦ ಋಷಿಗಳೂ ಕೂಡ
ಇದೆ ಬಗೆಯಾಗಿ ಸಮಾಧಿ
ಹೊಂದಿದರೆಂದು ಹೇಳಿದೆ. ಅದೇ ಬೆಟ್ಟದ
ಮೇಲೆ ೭-೮ನೇ
ಶತಮಾನಗಳ ಸುಮಾರು ೫೨ ಶಾಸನಗಳಾದರೂ
ದೊರೆತಿವೆ. ಸಲ್ಲೇಖನ, ಸನ್ಯಾಸನ ಮುಂತಾದ
ವ್ರತಗಳನ್ನು ಹಿಡಿದು ಜೈನ ಸನ್ಯಾಸಿಗಳು
ಸಾವನ್ನಪ್ಪಿದರು ಎಂದು ಶಾಸನಗಳು ತಿಳಿಸುತ್ತವೆ.
ಕಟವಪ್ರವ ಸಮಾಧಿಗೆ ಅನುಕೂಲವಾಗಿದ್ದ ಬೆಟ್ಟವಾಗಿತ್ತು
ಎಂದು ತೋರುತ್ತದೆ. ಕರ್ನಾಟಕದ ಒಳಗಿನಿಂದಲೂ ಹೊರಗಿನಿಂದಲೂ
ಬಂದ ಬೇರೆ ಬೇರೆ
ಭಾಗಗಳ ಜೈನ ಸನ್ಯಾಸಿಗಳು ಇದು
ಪವಿತ್ರವೆಂದು ಈ ಬೆಟ್ಟದಿಂದ
ಆಕರ್ಷಿತರಾಗಿ ಇದರ ಮೇಲೆ ಸಮಾಧಿ
ಮರಣವನ್ನು ಹೊಂದಿದರು. ಆದರೆ ವಾಸ್ತು
ಚಟುವಟಿಕೆಗಳು ಮಾತ್ರ ಇಲ್ಲಿ ೯ನೇ
ಶತಮಾನದಿಂದ ಪ್ರಾರಂಭ ವಾದವು.
ಶೈವಧರ್ಮ
ಚಾಲುಕ್ಯರ
ಕಾಲದಿಂದ ಶೈವಧರ್ಮವು ಉಚ್ಛ್ರಾಯ ಸ್ಥಿತಿಗೆ
ಏರುತ್ತಾ ಹೋಯಿತು. ಇವರ ಆಳ್ವಿಕೆಯ
ಶುರುವಿನಲ್ಲಿಯೆ ಈ ಮತವು
ಪ್ರಧಾನವಾಗಿತ್ತು. ಬಹುಮಟ್ಟಿಗೆ ಬಾದಾಮಿ ಯಲ್ಲಿಯ ಶೈವ
ಗುಹಾಲಯದ ನಿರ್ಮಾಣಕ್ಕೆ ಒಂದನೇ ಪುಲಕೇಶಿಯೆ ಕಾರಣನಿರಬಹುದು.
ಗರ್ಭಗುಡಿಯಲ್ಲಿ ಪೀಠಸ್ಥ ಏಕ ಶಿವಲಿಂಗವಿದೆ.
ಇದರಲ್ಲಿ ದ್ವಿಭುಜ ಗಣೇಶ, ದುರ್ಗಾ
ಮಹಿಷಮರ್ದಿನಿ, ಕಾರ್ತಿಕೇಯ, ಭೃಂಗಿ ಸಹಿತ ಉಮಾ-ಮಹೇಶ್ವರ, ಅರ್ಧನಾರೀಶ್ವರ, ಇವೆಲ್ಲವುಗಳಿಗಿಂತ
ಮಿಗಿಲಾಗಿ ಹದಿನೆಂಟು ತೋಳಿನ ನಟರಾಜ
ಮೊದಲಾದ ಮನಮೋಹಕ ಬೃಹತ್ ಶಿಲ್ಪಗಳಿವೆ.
ಜಂತಿಯಲ್ಲಿ ಪಾರ್ವತಿ-ಕಲ್ಯಾಣ ಮೊದಲಾದ
ಕಥಾನಕ ಶಿಲ್ಪಗಳಿವೆ. ಸಮಕಾಲೀನ ಜನಪ್ರಿಯ ಶೈವ
ಕಥೆಗಳನ್ನು ಇಲ್ಲಿ ಪ್ರತಿಬಿಂಬಿಸಲಾಗಿದೆ.
ಚಾಲುಕ್ಯ ರಾಜಧಾನಿ ಬಾದಾಮಿ ಹತ್ತಿರದ
ಮಹಾಕೂಟವು ಚಾಲುಕ್ಯ ಪೂರ್ವದ ಒಂದು
ಪ್ರಧಾನ ಶೈವಕೇಂದ್ರ. ಚಾಲುಕ್ಯರ ಕಾಲದಲ್ಲಿ ಇದಕ್ಕೆ
ವಿಶೇಷ ಉತ್ತೇಜನ ಸಿಕ್ಕಿತು. ಇಲ್ಲಿಯ
ಪುಷ್ಕರಣಿಯಲ್ಲಿ ಸರ್ವತೋಭದ್ರ ಮಂಟಪದಲ್ಲಿ ಚತುರ್ಮುಖ ಲಿಂಗವಿದೆ.
ಇಲ್ಲಿಯ ದೇವಾಲಯಗಳ ಸಂಕೀರ್ಣದ ಕೇಂದ್ರ
ಬಿಂದು. ಇದರ ಉತ್ತರ ಬದಿಯಲ್ಲಿರುವ
ಮಹಾಕೂಟೇಶ್ವರ (ಮಕುಟೇಶ್ವರ) ಮತ್ತು ಪುಷ್ಕರಣಿಯು ಬಹುಶಃ
ಒಂದನೇ ಪುಲಕೇಶಿಯ ಕಾಲದ್ದು. ಈ
ಅರಸನು ಮತ್ತು ಇವನ ಮಗ
ಒಂದನೇ ಕೀರ್ತಿವರ್ಮರು ಈ ದೇವಾಲಯಕ್ಕೆ
ದತ್ತಿಗಳನ್ನು ಬಿಟ್ಟರು. ಮಂಗಳೇಶನು ಯುದ್ಧದಲ್ಲಿ
ಕಲತ್ಸೂರಿ ರಾಜನಿಂದ ವಶಪಡಿಸಿಕೊಂಡ ಐಶ್ವರ್ಯವನ್ನು
ಶ್ರೀಯಂಬಾಟಕ ವ್ರಿಹೀಮುಖ, ಕಿಸುವುಳಲ್(ಪಟ್ಟದಕಲ್), ಕೆಂದೂರ
ಮಾನ್ಯ (ಕೆಂದೂರು), ನಂದಿಗ್ರಾಮ(ನಂದಿಕೇಶ್ವರ),
ಆರ್ಯಪುರ (=ಐಹೊಳೆ) ಮೊದಲಾದ ಹತ್ತುಗ್ರಾಮಗಳೊಡನೆ
ಈ ದೇವಾಲಯಕ್ಕೆ ತನ್ನ
ದೊಡ್ಡಮ್ಮ ದುರ್ಲಭದೇವಿಯ ಸಮ್ಮುಖದಲ್ಲಿ ದಾನ ಮಾಡಿದನು. ಸ್ವತಃ
ವಿಷ್ಣು ಭಕ್ತನಾಗಿದ್ದರೂ ಇಲ್ಲಿ ತನ್ನ ಧರ್ಮಸ್ತಂಭ
ವನ್ನು ನೆಡಿಸಿದುದನ್ನು ನೋಡಿದರೆ ಚಾಲುಕ್ಯ ಮನೆತನದವರಲ್ಲಿದ್ದ
ಈ ಕ್ಷೇತ್ರದ ಮೇಲಿನ
ವಿಶಿಷ್ಟ ಭಕ್ತಿಯನ್ನು ಸೂಚಿಸುತ್ತದೆ. ತರುವಾಯ ಚಾಲುಕ್ಯ ವಿಜಯಾದಿತ್ಯನ
ಪ್ರೇಯಸಿ ವಿನಾಪೋಟಿಯ ಹಲವಾರು ಮಹಾದಾನಗಳೊಡನೆ
ಹಿರಣ್ಯಗರ್ಭ ಕರ್ಮವನ್ನು ಮಾಡಿಸಿ, ದೇವರಿಗೆ
ರತ್ನಖಚಿತ ಪೀಠ, ಬೆಳ್ಳಿಕೊಡೆ ಮತ್ತು
ಮಂಗಲುಳ್ಳೆ (ಮಂಗಳ ಗುಡ್ಡ) ಗ್ರಾಮದಲ್ಲಿಯ
ಭೂಮಿಯನ್ನು ದೇವರಿಗೆ ದಾನ ಕೊಟ್ಟಳು.
ಮುನವಳ್ಳಿ
ಹತ್ತಿರ ಯಕ್ಕೇರಿಯಲ್ಲಿ ಮಹಾದೇವ ದೇವಾಲಯವು ಒಂದನೇ
ಪುಲಕೇಶಿಯ ಕಾಲದಲ್ಲಿತ್ತು. ಇದಕ್ಕೆ ಹರಸೇನನು ತನ್ನ
ತಾಯಿ-ತಂದೆಗೆ ಪುಣ್ಯವಾಗಲೆಂದು ಸುಮಾರು
ಕ್ರಿ.ಶ.೫೫೦ರಲ್ಲಿ
ಬೇನೀರ, ಧೂತಿಪುರ, ಅಗರಿಯಪುರ, ಕೃಷ್ಣಪುರ
ಗ್ರಾಮಗಳಿಂದ ಭೂಮಿಯನ್ನು ಈ ದೇವಾಲಯಕ್ಕೆ
ದಾನ ಮಾಡಿದನು. ಇದನ್ನು
ತಿಳಿಸುವ ಶಾಸನವನ್ನು ಈಶಾನನು ರಚಿಸಿದನು.
ಈ ಹೆಸರು ಗಮನಾರ್ಹ.
ಐಹೊಳೆಯ ರಾವಳಫಡಿ ಶೈವ ಗುಹಾದೇವಾಲಯವು
ಬಹುಶಃ ಒಂದನೇ ಪುಲಕೇಶಿಯ ಅವಧಿಯದು.
ಇದರಲ್ಲಿಯ ಸಪ್ತಮಾತೃಕೆಯರು, ದ್ವಿಭುಜ ಗಣೇಶ, ಮಹಾಸೇನ,
ಪಾರ್ವತಿಯರೊಡನೆ ಭವ್ಯ ನಟರಾಜ, ಹರಿಹರ,
ಗಂಗಾಧರ, ಅರ್ಧನಾರೀಶ್ವರ, ವರಾಹ, ದುರ್ಗಾ ಮಹಿಷಮರ್ದಿನಿ
ಭಿತ್ತಿ ಶಿಲ್ಪಗಳು ಅತಿ ಸೊಗಸಾಗಿವೆ.
ಗರ್ಭಗೃಹದಲ್ಲಿ ಪೀಠಸ್ಥ ಏಕಶಿಲೆ ಲಿಂಗವಿದೆ.
ಇದರಲ್ಲಿ ಶ್ರೀವಿಕ್ರ (ಶ್ರೀ ವಿಕ್ರಮನ್) ಎಂಬ
ಒಂದು ಸಾಲಿನ ಶಾಸನವಿದೆ. ಇದು
ಒಂದನೇ ಪುಲಕೇಶಿಯ ವಿಶೇಷ ಹೆಸರು.
ಆದ್ದರಿಂದ ಈ ಶೈವ
ಗುಹಾದೇವಾಲಯವನ್ನು ಈ ಅರಸನ
ಇಚ್ಛೆಯಂತೆ ನಿರ್ಮಿಸಿದ್ದಿರಬೇಕು. ಬಹುಶಃ ಈ ಅರಸನು
ಶೈವ ಧರ್ಮನಿರತ ನಾಗಿರಬೇಕು.
ಇವನ ಮಕ್ಕಳು ಒಂದನೇ ಕೀರ್ತಿವರ್ಮ
ಮತ್ತು ಮಂಗಳೇಶರು ಹಾಗೂ ಮೊಮ್ಮಗ
ಇಮ್ಮಡಿ ಪುಲಕೇಶಿಯು ವೈಷ್ಣವಧರ್ಮ ಪ್ರಿಯರು.
ಆದರೆ ಪ್ರತಿಯೊಬ್ಬರಲ್ಲಿಯೂ ಧರ್ಮಸಹಿಷ್ಣುತೆಯಿತ್ತು. ಮಂಗಳೇಶನು ಮಹಾಕೂಟೇಶ್ವರ ದೇವಾಲಯಕ್ಕೆ
ಧಾರಾಳವಾಗಿ ದಾನ ಮಾಡಿದನು. ಇಮ್ಮಡಿ
ಪುಲಕೇಶಿಯ ಸೋದರಮಾವ ಸೇಂದ್ರಕ ಶ್ರೀವಲ್ಲಭ
ಸೇನಾನಂದ ರಾಜನು ಪರಮಮಾಹೇಶ್ವರನು. ಇಮ್ಮಡಿ
ಪುಲಕೇಶಿಯು ಆಲಂಪುರ ಹತ್ತಿರದ ಸಂಗಮೇಶ್ವರ
(ಕೂಡಲ ಸಂಗಮೇಶ್ವರ)ನ ಸನ್ನಿಧಿಯಲ್ಲಿ
ಮಾಬುಗಣಸ್ವಾಮಿ ಬ್ರಾಹ್ಮಣನಿಗೆ ಚಾಲುಕ್ಯ ವಿಷಯದಲ್ಲಿಯ ತಿಮ್ಮೆಯನೂರು
ಗ್ರಾಮವನ್ನು ದಾನ ಮಾಡಿದನು. ಕದಮರ
ಕಲವದಲ್ಲಿಯ ಶಿವನಂದೀಶ್ವರ ದೇವಾಲಯವನ್ನು ಬಹುಶಃ ಈ ಅರಸನೇ
ಕಟ್ಟಿಸಿದನು. ಈ ರೀತಿ
ತರುವಾಯದ ಅರಸರುಗಳೂ ತಮ್ಮ ವೈಯಕ್ತಿಕ
ಧರ್ಮ ಯಾವುದೇ ಆಗಿದ್ದರೂ ಇತರ
ಧರ್ಮಪಂಥಗಳನ್ನು, ಅವುಗಳ ಅನುಯಾಯಿಗಳನ್ನು ಸಮಾನ
ದೃಷ್ಟಿಯಿಂದ ನೋಡುತ್ತಿದ್ದರು.
ಒಂದನೇ ವಿಕ್ರಮಾದಿತ್ಯನ ಜೀವನದಲ್ಲಿ ಒಂದು ಅಪರೂಪದ
ಮಹತ್ವದ ಬೆಳವಣಿಗೆ ಯುಂಟಾಯಿತು. ಇವನು
ಕ್ರಿ.ಶ.೬೫೮-೫೯ರಲ್ಲಿ ಸುದರ್ಶನಾಚಾರ್ಯರಿಂದ ‘ಶಿವಮಂಡಲ
ದೀಕ್ಷೆ’ಯನ್ನು ಪಡೆದನು. ಆಚಾರ್ಯರಿಗೆ
ವಂಗೂರವಾಡಿಯ ವಿಷಯದಲ್ಲಿಯ ಇಪರುಂಕಲ್ ಗ್ರಾಮವನ್ನು ಗುರುದಕ್ಷಿಣೆಯಾಗಿ
ಕೊಟ್ಟನು. ಆಚಾರ್ಯರು ದಾನ ಬಂದ
ಗ್ರಾಮದ ಭೂಮಿಯನ್ನು ೨೭ ಬ್ರಾಹ್ಮಣರಿಗೆ
ಹಂಚಿದರು. ಈ ಬ್ರಾಹ್ಮಣರ
ಹೆಸರುಗಳು ಈ ಸಂದರ್ಭದಲ್ಲಿ
ಗಮನಾರ್ಹ: ರುದ್ರಶಿವಾಚಾರ್ಯ, ಗಾಯತ್ರೀಶಿವ, ಪರಮಶಿವ ಇತ್ಯಾದಿ. ಈ
ಹೆಸರುಗಳೆಲ್ಲವೂ ಶಿವ ಎಂಬ ಪದದಿಂದ
ಕೊನೆಗೊಳ್ಳುತ್ತವೆ. ಶೈವ ಸಿದ್ಧಾಂತ ಪಂಥದ
ಆಚಾರ್ಯರ ಹೆಸರುಗಳು ಶಿವ ಅಥವಾ
ಶಂಭುವಿನಿಂದ ಕೊನೆಗೊಳ್ಳುತ್ತವೆ. ಈ ಶೈವಾಚಾರ್ಯರು
ಕರ್ನಾಟಕ ಆಂಧ್ರ ಗಡಿಭಾಗದಲ್ಲಿ ಚಾಲುಕ್ಯರ
ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದರು. ಈ ಪಂಥದ
ಆಚಾರ್ಯರೆಲ್ಲರೂ ಶುದ್ಧ ಶೈವರೆಂಬ ನಂಬಿಕೆ
ಬಲವಾಗಿತ್ತು. ಇವರೆಲ್ಲರೂ ಆನುವಂಶಿಕವಾಗಿ ಅಗಸ್ತ್ಯ,
ಭಾರದ್ವಾಜ, ಗೌತಮ(ನಂದಿ), ಕೌಶಿಕ,
ಕಾಶ್ಯಪ, ಅತ್ರಿ ಮಹರ್ಷಿಗಳಿಂದ ಬಂದವರೆಂದು
ತಿಳಿಯಲಾಗಿದೆ. ಈ ಋಷಿಗಳು
ನೇರವಾಗಿ ಪರಶಿವನ ಐದು ಮುಖಗಳಿಂದ
ದೀಕ್ಷೆಯನ್ನು ಪಡೆದವರು. ಆದ್ದರಿಂದ ಅವರು
ಆದಿಶೈವರು ಅಥವಾ ಶೈವ ದ್ವಿಜರು.
ಅವರು ವೇದಗಳಲ್ಲಿ, ಆಗಮ ಸಂಕುಲದಲ್ಲಿ ಮತ್ತು
ತತ್ಸಂಬಂಧ ಶಾಸ್ತ್ರಗಳಲ್ಲಿ ಪಾರಂಗತರು, ಆದ್ದರಿಂದ ದೇವಾಲಯ
ಶುದ್ದೀಕರಣ, ಮೂರ್ತಿ ಪ್ರತಿಷ್ಠಾಪನೆ, ಅರ್ಚನೆ
ಮೊದಲಾದ ದೇವಕಾರ್ಯಗಳನ್ನು ಮನೆಯಲ್ಲಾಗಲಿ ಅಥವಾ ಸಾರ್ವಜನಿಕ ದೇವಾಲಯ
ಗಳಲ್ಲಾಗಲಿ ಯಜಮಾನರಾಗಿ ನಡೆಸುವ ಅಧಿಕಾರವುಳ್ಳವರು.
ಅವರು ದೇವಾಲಯ ಮತ್ತು ಮಠಗಳಲ್ಲಿ
ಅರ್ಚನೆ ಮಾಡಬೇಕಾಗುವುದು. ಈ ಶೈವ
ಸಿದ್ಧಾಂತ ಪ್ರಕಾರ ಮೋಕ್ಷವನ್ನು ಜ್ಞಾನಮಾರ್ಗದಿಂದ
ಪಡೆಯಲಾಗುವುದಿಲ್ಲ. ದೀಕ್ಷೆಯನ್ನು ಪಡೆಯುವುದರ ಮೂಲಕ ದೇವರ
ಅನುಗ್ರಹ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ
ಶೈವನಿಗೂ ದೀಕ್ಷೆಯು ಪರಮ ಮಹತ್ವದ್ದು.
ಇದನ್ನು ಅನುಸರಿಸುವ ಮಾರ್ಗದ ಶುದ್ದೀಕರಣವೇ
(ಆದ್ಯ ಸೈ ಶುದ್ದಿ)
ಇದರ ಪ್ರಥಮ ಉದ್ದೇಶ.
ಇದು ಕ್ರಮೇಣ ಲೌಕಿಕ
ಸ್ಥಿತಿಯಿಂದ ಕಳಚುವಂತೆ ಮಾಡುತ್ತದೆ.
ಯಾವ ಪ್ರದೇಶದಿಂದ ಈ ಶೈವ
ಸಿದ್ಧಾಂತವು ಕರ್ನಾಟಕ-ಆಂಧ್ರಗಡಿ ಪ್ರದೇಶದಲ್ಲಿ
ಪ್ರಸರಣವಾಯಿತೆಂಬುದು ನಿಶ್ಚಯವಾಗಿ ಹೇಳಲಾಗುವುದಿಲ್ಲ. ಆದರೆ ಪಲ್ಲವ ರಾಜ್ಯದಲ್ಲಿಯೂ
ಮಧ್ಯ ಭಾರತದಲ್ಲಿಯೂ ಈ ಪಂಥದ
ವಿಚಾರಗಳು ಚೆನ್ನಾಗಿಯೆ ಪ್ರಚಲಿತವಾಗಿದ್ದವು. ಈ ದೃಷ್ಟಿಕೋನದಿಂದ
ಒಂದನೇ ವಿಕ್ರಮಾದಿತ್ಯನ ಕಾಲದಿಂದ ಈ ಪ್ರದೇಶದಲ್ಲಿ
ಉತ್ತರದ ರೇಖಾನಗರ ದೇವಾಲಯ ಮಾದರಿಯನ್ನು
ಕರ್ನಾಟಕಾಂಧ್ರ ಗಡಿ ಭಾಗದಲ್ಲಿ ಆಲಂಪುರ,
ಐಹೊಳೆ, ಪಟ್ಟದಕಲ್ಲು ಶೈವ ದೇವಾಲಯ ನಿರ್ಮಿತಿಗಳಲ್ಲಿ,
ಅನುಸರಿಸಿದ್ದಲ್ಲಿ ಏನಾದರೂ ಸೂಚನೆ ಇದ್ದರೆ
ಬಹುಶಃ ಈ ಶೈವಸಿದ್ಧಾಂತವು
ಉತ್ತರಭಾರತದಿಂದ ಬಂದಿತೆಂದು ತೋರುತ್ತದೆ. ಈ
ಸಂದರ್ಭದಲ್ಲಿ ಬನ್ನಿಕೊಪ್ಪ ಮತ್ತು ಪಟ್ಟದಕಲ್ಲಿನ ಎರಡು
ಶಾಸನಗಳನ್ನು ಗಮನಿಸ ಬೇಕಾಗುವುದು.
ಮೊದಲನೆಯದರಲ್ಲಿ
ಉತ್ತರಾಪಥದಿಂದ ಬಂದ ಒಬ್ಬ ವ್ಯಕ್ತಿಯು
ಅರ್ಜುನೀಶ್ವರ ದೇವರಿಗೆ ದೇವಾಲಯವನ್ನು ಕಟ್ಟಿಸಿ
ನಂದೀಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದನು ಎಂದು ಹೇಳಿದೆ. ಎರಡನೆಯದು
ಪಟ್ಟದಕಲ್ಲಿನ ವಿಜಯೇಶ್ವರ (ಸಂಗಮೇಶ್ವರ) ಮತ್ತು ಲೋಕೇಶ್ವರ (ವಿರೂಪಾಕ್ಷ)
ದೇವಾಲಯಗಳ ನಡುವಿನ ಭಾಗದಲ್ಲಿ ಇದೆ.
ಗಂಗಾನದಿ ದಡದ ಮೇಲಿನ ಮೃಗಫಣಿಕಾಹಾರದಿಂದ
ಬಂದ ಜ್ಞಾನ ಶಿವಾಚಾರ್ಯನು
ಇಲ್ಲಿಗೆ ಬಂದು ಈ ಸ್ತಂಭವನ್ನು
ಸ್ಥಾಪಿಸಿದನೆಂದಿದೆ. ಇದು ಆದದ್ದು ಚಾಲುಕ್ಯ
ಅರಸು ಶಿವಾಚಾರ್ಯನು ಇಲ್ಲಿಗೆ ಬಂದು ಈ
ಸ್ತಂಭವನ್ನು ಸ್ಥಾಪಿಸಿದನೆಂದಿದೆ. ಇದು ಆದದ್ದು ಚಾಲುಕ್ಯ
ಅರಸು ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ.
ಈ ಆಚಾರ್ಯನ ಹೆಸರು
ಶಿವನಂದ ಕೊನೆಗೊಳ್ಳುವುದು ಗಮನಾರ್ಹ. ಇವು ಪ್ರಭಾವಿಶಾಲಿಗಳಾದ
ಈ ಶೈವರು, ಶೈವಾಚಾರ್ಯರು
ಉತ್ತರದಿಂದ ಬಂದವರೆಂದು ಸೂಚಿಸುತ್ತವೆ.
ಒಂದನೇ ವಿಕ್ರಮಾದಿತ್ಯನ ಇನ್ನೊಬ್ಬ ಗುರು ಮೇಘಾಚಾರ್ಯ.
ಇವರಿಗೆ ಕ್ರಿ.ಶ. ೬೬೦ರಲ್ಲೂ
ಎಳಸೆಟ್ಟಿ ಗ್ರಾಮವನ್ನು ಅರಸನು ದಾನ ಮಾಡಿದನು.
ಶಿವನಂದೀಶ್ವರ ದೇವಾಲಯದ ಬ್ರಾಹ್ಮಣರಿಗೂ ಕ್ರಿ.ಶ. ೬೬೨ರಲ್ಲಿ
ಭೂಮಿ ದಾನವನ್ನು ಮಾಡಿದನು. ಚಾಲುಕ್ಯ
ವಿನಯಾದಿತ್ಯನ ಕಾಲದಲ್ಲಿ ಪಂಪಾಕ್ಷೇತ್ರವು ಪ್ರಸಿದ್ದಿಯಾಗಿತ್ತು.
ಆ ಭಾಗದ ತುಂಗಭದ್ರಾ
ನದಿಯನ್ನು ಪಂಪಾ ಎಂದೇ ಈ
ಅರಸನ ತೊಗರಚೇಡು ಶಾಸನದಲ್ಲಿದೆ. ಕದಮರ
ಕಳವ(ಕರ್ನೂಲ್ ಜಿಲ್ಲೆ)ದ ರಾಜನು
ರಾಮೇಶ್ವರ ತೀರ್ಥದಲ್ಲಿ (ಕರ್ನೂಲ್ ಜಿಲ್ಲೆ) ಬೀಡು
ಬಿಟ್ಟಾಗ ಪಂಚಲಿಂಗಾಲಯ ದಲ್ಲಿಯ ಪಂಚಲಿಂಗ ದೇವರಿಗೂ
ಭೂಮಿ ದಾನ ಮಾಡಿದನು.
ಆಲಂಪುರದಲ್ಲಿಯ
ಸ್ವರ್ಗಬ್ರಹ್ಮದೇವಾಲಯವನ್ನು ವಿನಯಾದಿತ್ಯನ ಮಗ ಲೋಕಾದಿತ್ಯನು
ಅರಸನ ಅಥವಾ ವಿಜಯಾದಿತ್ಯನ ಕಾಲದಲ್ಲಿ
ತನ್ನ ಾಯಿಯ ಗೌರವಾರ್ಥವಾಗಿ ಕಟ್ಟಿಸಿದನು.
ಇವನ ರಾಣಿಯು ಈ
ದೇವಾಲಯಕ್ಕೆ ಕಲ್ಕೊಲ, ಕುರಿಂಬಳ
ಮತ್ತು ಕಲಲೆ ಗ್ರಾಮಗಳನ್ನು ದಾನ
ಮಾಡಿದಳು. ವಿನಯಾದಿತ್ಯನ ಕಾಲದಲ್ಲಿಯೆ ಮಹಾನಂದಿ(ಕರ್ನೂಲ್ ಜಿಲ್ಲೆ)ಯ ಮಹಾನಂದೀಶ್ವರ
ದೇವಾಲಯವನ್ನು ಕಟ್ಟಲಾಯಿತು.
ಶೈವ ದೇವಾಲಯದ ನಿರ್ಮಾಣ ಚಟುವಟಿಕೆಯಲ್ಲಿ
ವಿಜಯಾದಿತ್ಯನ ಕಾಲ ಎದ್ದು ಕಾಣುವಂಥಾದ್ದು. ಕ್ರಿ.ಶ. ೬೯೮-೯೯ರಲ್ಲಿ ಇವನ ತಾಯಿಯು
ಬಾದಾಮಿಯಲ್ಲಿ ಬ್ರಹ್ಮ-ಶಿವ-ವಿಷ್ಣು
ದೇವಾಲಯ (ಜಂಬುಲಿಂಗ) ಕಟ್ಟಿಸಿದ್ದು ಸರಿಯಷ್ಟೆ.
ಇದಕ್ಕೆ ಅಂಗಡಿಗಳಿಂದ ಎಣ್ಣೆ, ಸಕ್ಕರೆ, ಅರಶಿನ
ಮೊದಲಾದ ಪದಾರ್ಥಗಳ ಮೇಲೆ ಸಂಗ್ರಹಿಸಿದ
ಸುಂಕವನ್ನು ದೇವಾಲಯಕ್ಕೆ ಬಿಟ್ಟು ಕೊಡಲಾಯಿತು. ಆಲಂಪುರದಲ್ಲಿ
ಭಗವತ್ ಈಶಾನಾಚಾರ್ಯ ಸ್ವಾಮಿನ್ ನವಬ್ರಹ್ಮ ದೇವಾಲಯ
ಸಮೂಹಕ್ಕೆ ಸುತ್ತಲೂ ‘ನಿರವದ್ಯ ಪ್ರಕಾರ’ವನ್ನು ಸುಮಾರು ಕ್ರಿ.ಶ.೭೧೪-೧೫ರಲ್ಲಿ ಆ
ಎಲ್ಲ ದೇವಾಲಯಗಳನ್ನು ಕಟ್ಟಲಾಗಿತ್ತೆಂದು ಅರ್ಥವಾಗುತ್ತದೆ. ಸ್ವತಃ ವಿಜಯಾದಿತ್ಯನೆ ಪಟ್ಟದಕಲ್ಲಿನಲ್ಲಿ
ವಿಜಯೇಶ್ವರ (ಸಂಗಮೇಶ್ವರ) ದೇವಾಲಯವನ್ನು ಕಟ್ಟಿಸಿದನು. ಇದೊಂದು ಪೂರ್ಣ ವಿಕಸಿತ
ವಿಮಾನ ಮಾದರಿ ದೇವಾಲಯ. ಇದರ
ಉತ್ತರ ಬದಿಗಿರುವ ಗಳಗನಾಥ ದೇವಾಲಯವು
ಇದೇ ಕಾಲದ್ದೆ.
ಇಮ್ಮಡಿ ವಿಕ್ರಮಾದಿತ್ಯನ ಕಾಲವು ಶೈವ ದೇವಾಲಯ
ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮ ಘಟ್ಟ. ಈಗ
ಸುಪ್ರಸಿದ್ಧವಾಗಿರುವ ಲೋಕೇಶ್ವರ (ವಿರೂಪಾಕ್ಷ) ತ್ರೈಲೋಕೇಶ್ವರ
(ಮಲ್ಲಿಕಾರ್ಜುನ) ದೇವಾಲಯಗಳನ್ನು ಇವನ ಪಟ್ಟಮಹಿಷಿಯರಾದ ಹೈಹಯ
ವಂಶದ ಲೋಕಮಹಾದೇವಿ ಮತ್ತು ತ್ರೈಲೋಕಮಹಾದೇವಿಯವರು, ತಮ್ಮ
ಗಂಡ ವಿಕ್ರಮಾದಿತ್ಯನು ಪಲ್ಲವರ
ರಾಜಧಾನಿ ಕಂಚಿಯನ್ನು ಮೂರು ಸಲ
ಗೆದ್ದುದರ ಜ್ಞಾಪಕಾರ್ಥವಾಗಿ ಕಟ್ಟಿಸಿದರು. ಇವು ಪರಿವಾರ ದೇವತೆಗಳು.
ಪ್ರಾಕಾರ ಸಹಿತ ಒಂದು ದೊಡ್ಡ
ಸಂಕೀರ್ಣ ಈ ಕಾಲದ
ದೇವಾಲಯ ನಿರ್ಮಿತಿಗೆ ಕಲಶಪ್ರಾಯವಾಗಿದೆ.
ಭೈರವೇಶ್ವರಕೊಂಡ
ಬೆಟ್ಟದ ಮೇಲಿನ ಕಲ್ಲಿಬೋಲನು ಸ್ಥಾಪಿಸಿದ
ಗಣಪತಿ ನಂದೀಶ್ವರ ಮತ್ತು ದಂಡೀಶ್ವರ
ವಿಗ್ರಹಗಳಲ್ಲಿ ಕೊನೆಯದು ಬಹುಶಃ ಶಿವ-ಲಕುಲೀಶನನ್ನು ಸೂಚಿಸುತ್ತದೆ ಯೆಂದು ಕಾಣುತ್ತದೆ.
ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಉತ್ತರದ ಗಂಗಾ
ಪ್ರದೇಶದ ಮೃಗಪಣಿಕಾಹಾರದಿಂದ ಬಂದ ಜ್ಞಾನಶಿವಾಚಾರ್ಯನು ವಿಜಯೇಶ್ವರ
ಮತ್ತು ಲೋಕೇಶ್ವರ-ಮಲ್ಲಿಕಾರ್ಜುನ ದೇವಾಲಯಗಳ
ನಡುವಿನ ಸ್ಥಳದಲ್ಲಿ ತ್ರಿಶೂಲ ಸ್ತಂಭವನ್ನು
ನೆಡಿಸಿದ್ದನ್ನು ಈಗಾಗಲೇ ಗಮನಿಸಲಾಗಿದೆ. ಈ
ಆಚಾರ್ಯನು ವಿಜಯೇಶ್ವರ ದೇವಾಲಯದಲ್ಲಿ ಬೀಡುಬಿಟ್ಟಿದ್ದನು.
ಇವನು ತನ್ನ ತಂದೆತಾಯಿಗಳಿಗೆ ಮತ್ತು
ತನಗೆ ಪುಣ್ಯವಾಗಲಿಯೆಂದು, ದೇವಾಲಯದಲ್ಲಿ ಆಚಾರ್ಯರ ಪ್ರವಚನಗಳಿಗೋಸ್ಕರ, ದೇವಾಲಯದಲ್ಲಿಯೆ
ನಡೆಯುವ ಧಾರ್ಮಿಕ ಕಾರ್ಯಗಳ ಅಧ್ಯಯನಕ್ಕೋಸ್ಕರ
ಮತ್ತು ದೇವತಾರ್ಚನೆಯ ಕ್ರಮವನ್ನು ಸರಿಯಾಗಿ ತಿಳಿಯಲಿಕ್ಕೋಸ್ಕರ
ಅರಪುಣಗೆ ಗ್ರಾಮದಿಂದ ಭೂಮಿ ದಾನವನ್ನು
ವಾಡಿದನು.
ಈ ಕಾಲದಲ್ಲಿ ಪಾಶುಪತ ಶೈವದ
ಒಂದು ಶಾಕೆಯಾದ ಅತಿಮಾರ್ಗಿಕ ಶೈವ
ಪಂಥದ ಬಗ್ಗೆ ಏನೂ ತಿಳಿದುಬರುವುದಿಲ್ಲ.
ಮಹಾಕೂಟದ ಮಹಾಕೂಟೇಶ್ವರ ಸಂಕೀರ್ಣದ ಪ್ರಕಾರದ ದಕ್ಷಿಣ
ಮಹಾದ್ವಾರದ ಸ್ತ್ರೀ-ಪುರುಷ ಎರಡು
ಪಿಶಾಚಿ ಮೂರ್ತಿಗಳು ಪ್ರಾಯಶಃ ಕಾಪಾಲಿಕ
ಶೈವ ಪ್ರಭಾವವನ್ನು ಸೂಚಿಸಬಹುದೆಂಬ
ಅಭಿಪ್ರಾಯವೇನೋ ಇದೆ. ಆದರೆ ಇದನ್ನು
ನಿಶ್ಚಯವಾಗಿ ಹೇಳಲು ಬರುವುದಿಲ್ಲ. ಈ
ಸಂದರ್ಭ ಇಮ್ಮಡಿ ಪುಲಕೇಶಿಯ ಮಗ
ಚಂದ್ರಾದಿತ್ಯನೆಂದು ಗುರುತಿಸಲಾದ ತ್ರಿಭುವನ ನಾಗವರ್ಧನನು ಗೋಪಕರಾಷ್ಟ್ರದ
(ಗೋವಾ ಪ್ರದೇಶ) ಬೆಲೆಗ್ರಾಮವನ್ನು ಠಕ್ಕೂರನ
ವಿನಂತಿಯ ಮೇರೆಗೆ ಕಪಾಲೇಶ್ವರ ದೇವಾಲಯಕ್ಕೆ
ಮಹಾವ್ರತಿಗಳ ಜೀವನ ಭರಣಕ್ಕೋಸ್ಕರ ಮತ್ತು
ಗುಗ್ಗುಳ ಪೂಜೆಗೋಸ್ಕರ ದಾನ ಮಾಡಿದನು. ಕಾಪಾಲಿಕರ
ಸಾಧನ ಕ್ರಮಕ್ಕೆ ಮಹಾವ್ರತವೆಂದು ಹೆಸರು.
ಈ ಸಾಧನ ಕ್ರಮವನ್ನು
ಅನುಸರಿಸುವ ಕಾಪಾಲಿಕ ಶೈವರನ್ನು ಮಹಾವ್ರತಿಗಳೆಂದು
ಕರೆಯಲಾಗಿದೆ. ಕಪಾಲೇಶ್ವರ ಎಂಬ ದೇವಾಲಯದ
ಹೆಸರು ಈ ಅರ್ಥವನ್ನು
ಬಲಪಡಿಸುತ್ತದೆ. ಪಟ್ಟದಕಲ್ಲಿನ ೮ನೇ ಶತಮಾನದ ಒಂದು
ಶಾಸನದಲ್ಲಿ ಕಾಪಾಲಿಕೆ ಗುರುಗಳಿಗೆ ಅನುಮಾನಾಸ್ಪದ
ಉಲ್ಲೇಖವಿದೆ. ಇದರಲ್ಲಿ ಕಪಾಲವನ್ನು ಹಿಡಿದುಕೊಂಡು
ತಿರುಗಾಡುವ ಕಂಪಾರಿ ಬಲಿ ಎಂದು
ಅರ್ಥೈಸಬಹುದಾದ ‘ಕಂಪಾರ್ ಬಲಿ’ ಎಂಬ ಪದ
ಸಮುಚ್ಚಯವಿದೆ.
ಚಾಲುಕ್ಯ ದೇವಾಲಯಗಳಲ್ಲಿ ಮೂರ್ತಿಶಿಲ್ಪ ಸಂಕುಲವು ಸ್ವಲ್ಪ ಸ್ಪಷ್ಟ
ಚಿತ್ರವನ್ನು ಕೊಡಬಹುದು. ಚಾಲುಕ್ಯ ಆಳಿಕೆಯ
ಪೂರ್ವಾರ್ಧದಲ್ಲಿ ಶಿವನ ಪ್ರಸನ್ನ ಮತ್ತು
ಅನುಗ್ರಹ ರೂಪಗಳಾದ ಗಂಗಾಧರ, ಅರ್ಧನಾರೀಶ್ವರ,
ಹರಿಹರ, ನಟರಾಜ ಮೊದಲಾದವುಗಳು ಪ್ರಧಾನವಾಗಿದ್ದವು.
ಉತ್ತರಾರ್ಧದಲ್ಲಿ ಶಿವನ ಭೀಕರ ರೂಪಗಳಾದ
ಕಾಲಾರಿ ಶಿವ, ತ್ರಿಪುರಾಂತಕ, ಗಜೇಂದ್ರ
ಸಂಹಾರ ಮೂರ್ತಿಗಳೂ ಪದೇಪದೇ ಕಾಣಿಸಿಕೊಳ್ಳುತ್ತವೆ.
ಎಲ್ಲೋರದಲ್ಲಿಯ ಶೈವ ಗುಹಾ-ದೇವಾಲಯಗಳಲ್ಲಿದ್ದಂತೆ,
ಈ ಪ್ರದೇಶದಲ್ಲಿ ಶಿವನ
ಲಕುಲೀಶರೂಪವು ಅಷ್ಟಾಗಿ ಪ್ರಾಮುಖ್ಯತೆಯನ್ನು ಪಡೆದಿಲ್ಲ.
ಅಪಸ್ಮಾರ ನಟರಾಜ ಶಿವಮೂರ್ತಿಗಳೇ ಹೆಚ್ಚು.
ಚಾಲುಕ್ಯ ಕಾಲದಲ್ಲಿ ಬರಬರುತ್ತಾ ಶೈವಧರ್ಮ
ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದರೂ ಶೈವ ದೇವಾಲಯಮೂರ್ತಿ ಶಿಲ್ಪ
ಸರಣಿಯಲ್ಲಿ ಗಜೇಂದ್ರ ಮೋಕ್ಷ, ವಾಮನ-ತ್ರಿವಿಕ್ರಮ , ಕೃಷ್ಣ ಚರಿತೆ ಮೊದಲಾದ
ವೈಷ್ಣವ ಶಿಲ್ಪಗಳೂ ಇವೆ. ಹಾಗೆ
ನೋಡಿದಲ್ಲಿ ಶಿವನ ಸರ್ವೋತ್ತಮತೆಯನ್ನು ಸೂಚಿಸುವ
ಲಿಂಗೋದ್ಭವ ಶಿಲ್ಪವು ವಿರಳ. ಚಾಲುಕ್ಯ
ಕಾಲದ ಕೊನೆಯ ಹಂತದಲ್ಲಿ ಶೈವ
ದೇವಾಲಯ ವಿನ್ಯಾಸ ಕ್ರಮದಲ್ಲಿ ಮುಖ್ಯಗರ್ಭಗುಡಿಗೆ
ಹೊಂದಿಕೊಂಡು ಗಣೇಶ ಮತ್ತು ಮಹಿಷಾಸುರಮರ್ದಿನಿ
ಉಪಗುಡಿಗಳನ್ನು ಸೇರಿಸುವ ಪದ್ಧತಿ ಬೆಳೆಯಿತು.
ಇದನ್ನು ಪಟ್ಟದಕಲ್ಲಿನ ಸಂಗಮೇಶ್ವರ, ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ
ದೇವಾಲಯಗಳಲ್ಲಿ ಕಾಣಬಹುದು. ಸ್ವಲ್ಪ ನಿರ್ಜನ
ಪ್ರದೇಶಗಳಾದ ನಾಗರಾಳ (ಬಾದಾಮಿ ಹತ್ತಿರ),
ಹಳೆ-ಹೊಸ ಮಹಾಕೂಟ,
ಜಾಲಿಹಾಳ, ಸಿದ್ಧನಕೊಳ್ಳ ಮೊದಲಾದೆಡೆಗಳಲ್ಲಿ ಲಜ್ಜಾಗೌರಿ ಮೂರ್ತಿಗಳಿವೆ. ಬಹುಶಃ
ಇಂಥ ಸ್ಥಳಗಳಲ್ಲಿ ತಾಂತ್ರಿಕ ಶೈವರಿದ್ದಿರಬಹುದು.
ವೈಷ್ಣವ ಧರ್ಮ
ಬಾದಾಮಿ ಚಾಲುಕ್ಯರ ಮೊದಲಿನ ಕೆಲವು
ಅರಸರು ವೈಷ್ಣವ ಧರ್ಮಾನುಯಾಯಿಗಳು. ತಮ್ಮ
ವಂಶ ಪ್ರಶಸ್ತಿಯಲ್ಲಿ ತಮ್ಮ
ರಾಜಲಾಂಛನವಾದ ವರಾಹವನ್ನು ಭಗವಾನ್ ನಾರಾಯಣನೆ
ಅನುಗ್ರಹಿಸಿದನೆಂದು ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೊ
ಏನೊ ಇವರಿಂದ ನಿರ್ಮಿಸಲ್ಪಟ್ಟ
ದೇವಾಲಯಗಳಲ್ಲಿ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ವರಾಹ ಮೂರ್ತಿಗಳು
ಹೆಚ್ಚು. ಮಂಗಳೇಶನು ತನ್ನನ್ನು ‘ಪರಮಭಾಗವತ’ನೆಂದು ಕರೆದುಕೊಂಡಿದ್ದನು. ಬಾದಾಮಿಯಲ್ಲಿಯ ಎರಡನೇ ವೈಷ್ಣವ ಗುಹಾ
ದೇವಾಲಯದ ನಿರ್ಮಾತೃ ಇವನು. ಕ್ರಿ.ಶ. ೫೭೮ರಲ್ಲಿ
ಪ್ರತಿಸ್ಥಾಪಿಸಲ್ಪಟ್ಟ ಈ ಮಹಾವಿಷ್ಣುಗೃಹವು
ಒಂದು ಅದ್ಭುತವಾಸ್ತು ಕ್ತಿಯೆಂದು ವರ್ಣಿಸಲಾಗಿದೆ.
ಇಮ್ಮಡಿ ಪುಲಕೇಶಿಯ ಕಾಲದಿಂದ ಶಾಸನಗಳ
ಆದಿಯಲ್ಲಿ ವರಾಹ ಸ್ತುತಿಯಿರುವುದು ಸಾಮಾನ್ಯವಾಯಿತು.
ಬಾದಾಮಿಯಲ್ಲಿಯ ಕೆಳಗಣ ಮತ್ತು ಮೇಲಣ
ಶಿವಾಲಯಗಳು ಅವುಗಳಲ್ಲಿಯ ಶಿಲ್ಪಗಳಿಂದ ಮೂಲತಃ ವಿಷ್ಣು ದೇವಾಲಯಗಳೆಂದು
ಹೇಳಬಹುದು.
ಒಂದನೇ ವಿಕ್ರಮಾದಿತ್ಯನ ಕಾಲದಿಂದ ಈ ಅರಸು
ಮನೆತನದ ಮೇಲೆ ಶೈವಧರ್ಮದ ಪ್ರಭಾವವು
ಗಂಭೀರವಾಗಿ ಆಯಿತು. ಇಲ್ಲಿಂದ ಮುಂದಕ್ಕೆ
ಶೈವ ದೇವಾಲಯಗಳೇ ಹೆಚ್ಚಿನ
ಸಂಖ್ಯೆಯಲ್ಲಿ ನಿರ್ಮಾಣವಾದವು. ಅರಸರುಗಳು ತಮ್ಮನ್ನು ‘ಪರಮ
ಮಾಹೇಶ್ವರ’ರೆಂದು ಕರೆದುಕೊಂಡರು. ಆದರೂ
ಒಂದನೇ ವಿಕ್ರಮಾದಿತ್ಯನ ಸವಣೂರು ಶಾಸನವು ನಾರಾಯಣನಿಗೆ
ನಮಸ್ಕಾರದೊಂದಿಗೆ ಮುಕ್ತಾಯವಾಗುತ್ತದೆ. ಹೀಗೆ ವಿಷ್ಣುಭಕ್ತಿ ಆಳರಸರಲ್ಲಿ
ಅಪರೂಪ ವಾಯಿತು. ವಿಜಯಾದಿತ್ಯನು ಬಾದಾಮಿಯಲ್ಲಿ
ಬ್ರಹ್ಮ-ವಿಷ್ಣು-ಶಿವ ದೇವಾಲಯವನ್ನು
ಕಟ್ಟಿಸಿದನು. ಇದರಲ್ಲಿ ಮಧ್ಯದ ಗರ್ಭಗೃಹದಲ್ಲಿ
ಶಿವಲಿಂಗವಿದ್ದಿರಬೇಕು.
ಶಿಲ್ಪದಲ್ಲಿ
ವಿಷ್ಣುವಿನ ಸ್ಥಾನಕ, ಆಸನ ಮತ್ತು
ಶಯನ ರೂಪಗಳಲ್ಲಿ ಮೂರ್ತಿಗಳು
ಬಹಳ. ಇವುಗಳು ಸ್ವಲ್ಪ ಹೆಚ್ಚುಕಡಿಮೆ
ವೈಖಾನಸಾಗಮದಲ್ಲಿಯ ವಿಷ್ಣುಮೂರ್ತಿಗಳ ರೂಪಣ ನಿಯಮದಂತೆ ಇವೆ.
ಮೂರ್ತಿಶಿಲ್ಪಿಗಳಿಗೆ ರಾಮಾಯಣ, ಮಹಾಭಾರತ, ವಿಷ್ಣುಪುರಾಣ
ಮೊದಲಾದವುಗಳ ಪರಿಚಯ ಚೆನ್ನಾಗಿಯೇ ಇದ್ದಿತು.
ಸುಮಾರು ೭ನೇ ಶತಮಾನದ ಮಧ್ಯಭಾಗದಿಂದ
ಭಾಗವತಪುರಾಣವು ಕರ್ನಾಟಕದಲ್ಲಿ ಪ್ರಸಿದ್ದಿಯಾಗುತ್ತಾ ಬಂದಿತು.
ಲಲಿತಕಲೆ:
ಮಂಗಳೇಶನು ನಿರ್ಮಿಸಿದ ಬಾದಾಮಿಯ ಮೂರನೇ
ವೈಷ್ಣವ ಗುಹಾಲಯದಲ್ಲಿ ಶ್ರೇಷ್ಠಮಟ್ಟದ ಶಿಷ್ಟ ಸಂಪ್ರದಾಯದ ವರ್ಣಚಿತ್ರಗಳಿವೆ.
ಇದರಲ್ಲಿ ಮೃದಂಗ, ವೀಣಾ, ಕೊಳಲು,
ತಾಳ ಮೊದಲಾದವುಗಳನ್ನು ನುಡಿಸುವವರೊಡನೆ
ಸ್ತ್ರೀಪುರುಷರು ನೃತ್ಯವಾಡುತ್ತಿರುವ ಒಂದು ವರ್ಣಚಿತ್ರವಿದೆ. ಆ
ಕಾಲದಲ್ಲಿ ಕಾವ್ಯ ಕಲೆಯ ರಾಜನಾದ
ಶಿವನ ಶಿಲ್ಪವು ಅತ್ಯಂತ ಜನಪ್ರಿಯವಾಗಿತ್ತು.
ಪಟ್ಟದಕಲ್ಲಿನಲ್ಲಿ ಭರತನಾಟ್ಯಶಾಸ್ತ್ರ ಅದರಲ್ಲೂ ವಿಶೇಷವಾಗಿ ‘ಅಗ್ರಸ್ಥಳಸಂಚಾರ’ ಮೊದಲಾದ ಲಾಕ್ಷಣಿಕ ವಿಷಯಗಳನ್ನು ಕರತಲಾಮಲಕ
ಮಾಡಿಕೊಂಡ ನಟಸೇವ್ಯ ಅಚಲನೆಂಬುವನು ಅದ್ವಿತೀಯನಾಗಿದ್ದನು.
ಸಂಗೀತ ಹಾಗೂ ಹಾಡುಗಾರಿಕೆಗಳಲ್ಲಿ ಪ್ರವೀಣರಾದ
ಗಂಧರ್ವರಿಗೆ ವಿಶೇಷ ಹಕ್ಕು ಬಾಧ್ಯತೆಗಳನ್ನು
ಚಾಲುಕ್ಯ ವಿಜಯಾದಿತ್ಯನು ಕೊಟ್ಟಿದ್ದನು. ಇವುಗಳನ್ನು ಮುಂದೆ ಇಮ್ಮಡಿ
ವಿಕ್ರಮಾದಿತ್ಯನು ಪುನರುಜ್ಜೀವನಗೊಳಿಸಿದನು.
ಸೂಚನೆ: ಮೇಲಿನ ವಿವರಗಳನ್ನು "ಕಣಜ"
ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ
ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾತ್ರವೇ ನೀಡಲಾಗಿದೆ.
*****
Comments
Post a Comment