ಆಂಗ್ಲೊ-ಮರಾಠಾ ಯುದ್ಧಗಳು (ಪ್ರಥಮ, ದ್ವಿತೀಯ ಮತ್ತು ತೃತೀಯ)

ಪ್ರಥಮ ಯುದ್ಧ: 1775 – 1782. ಮುಕ್ತಾಯ ಸಾಲ್ಬಾಯ್‌ ಒಪ್ಪಂದ: 1782. ಬ್ರಿಟಿಷರು ಮತ್ತು ಮರಾಠರ ನಡುವೆ.

ಕಾರಣಗಳು: ಮರಾಠರ ಆಂತರಿಕ ಕಲಹ. ಮೊದಲನೆ ಮಾಧವರಾಯನ ಮರಣಾನಂತರ ಪೇಶ್ವೆ ಹುದ್ದೆಗಾಗಿ ರಘೋಬನು (ರಘುನಾಥರಾವ್, ಮಾಧವರಾಯನ ಚಿಕ್ಕಪ್ಪ) ಪೇಶ್ವೆ ಹುದ್ದೆಗೇರಿದ್ದ ಮಾಧವರಾಯನ ಮಗ ನಾರಾಯಣರಾವ್‌ನ ಕೊಲೆ ಮಾಡಿಸಿದ್ದು, ಅದರ ವಿಚಾರಣೆಯಲ್ಲಿ ಅಪರಾಧ ಸಾಬೀತಾದುದು, ನಂತರ ನಾರಾಯಣರಾವನ ಮರಣಾನಂತರ ಅವನ ಪತ್ನಿ ಗಂಗೂಬಾಯಿಯಲ್ಲಿ ಜನಿಸಿದ ನವಜಾತ ಮಗ ಸವಾಯಿ ಮಾಧವರಾವನು ಪೇಶ್ವೆ ಎಂದು ಘೋಷಣೆಯಾದುದು, ಅವನ ಬೆಂಬಲಕ್ಕೆ ನಾನಾ ಫಡ್ನವೀಸನ ನೇತೃತ್ವದಲ್ಲಿ 12 ಜನರ ಪೂನಾ ದರ್ಬಾರ್‌ ರಚನೆ, ಅವರು ರಘೋಬನ ಮೇಲೆ ಬಾಲಕ ಪೇಶ್ವೆಯ ರಕ್ಷಣೆಗೆ ಒತ್ತಾಯಿಸಿದುದು. ಪರಿಣಾಮವಾಗಿ ರಘೋಬನು ಮುಂಬೈಯಲ್ಲಿದ್ದ ಆಂಗ್ಲರೊಂದಿಗೆ ಸೂರತ್‌ ಒಪ್ಪಂದ ಮಾಡಿಕೊಂಡನು. ಮಾರ್ಚ್‌ 7, 1775. ರಘೋಬನಿಗೆ ಪೇಶ್ವೆ ಹುದ್ದೆ ಕೊಡಿಸುವುದು, ಅದಕ್ಕೆ 2500 ಆಂಗ್ಲರ ಸೇನಾ ನೆರವನ್ನು ಬ್ರಿಟಿಷರು ಒದಗಿಸುವುದು, ಪ್ರತಿಯಾಗಿ ಸಾಲ್‌ಸೆಟ್‌ ಮತ್ತು ಬೆಸ್ಸಿನ್‌ಗಳನ್ನು (ಬಾಂಬೆ ಬಳಿಯ ಪ್ರದೇಶಗಳು) ಆಂಗ್ಲರಿಗೆ ನೀಡುವುದು, ಸೂರತ್‌ ಮತ್ತು ಬ್ರೋಚ್‌ಗಳ ಕಂದಾಯದ ಒಂದು ಭಾಗವನ್ನು ಆಂಗ್ಲರಿಗೆ ನೀಡುವುದು ಪ್ರಮುಖ ಕರಾರುಗಳಾಗಿದ್ದವು. ಆದರೆ ಪೂನಾ ದರ್ಬಾರ್‌ ಅಥವಾ ಬಾರಾಭಾಯಿ ಗುಂಪು ಇದನ್ನು ವಿರೋಧಿಸಿತು. ಮೇ 18, 1775ರಲ್ಲಿ  ಕರ್ನಲ್‌ ಕೇಟಿಂಗ್‌ ನೇತೃತ್ವದಲ್ಲಿದ್ದ ಬ್ರಿಟಿಷರ ಸೇನೆ ಅರಾಸ್‌ ಎಂಬಲ್ಲಿ ಮರಾಠರನ್ನು ಸೋಲಿಸಿತು. ಇದು ಮೊದಲ ಆಂಗ್ಲೊ-ಮರಾಠಾ ಯುದ್ಧದ ಆರಂಭಕ್ಕೆ ಕಾರಣವಾಯಿತು. ಕಲ್ಕತ್ತಾದಲ್ಲಿದ್ದ  ಗವರ್ನರ್‌ ಕೌನ್ಸಿಲ್‌ ಸಹಾ ಸೂರತ್‌ ಒಪ್ಪಂದವನ್ನು ಒಪ್ಪಲಿಲ್ಲ. ವಾರನ್‌ ಹೇಸ್ಟಿಂಗ್ಸ್‌ ನೇತೃತ್ವದ ಕಲ್ಕತ್ತಾ ಕೌನ್ಸಿಲ್‌ ಪೂನಾದಲ್ಲಿದ್ದ ದರ್ಬಾರ್‌ನೊಂದಿಗೆ ಮಾರ್ಚ್‌ 1, 1776 ರಲ್ಲಿ ಪುರಂಧರ ಒಪ್ಪಂದವನ್ನು ಮಾಡಿಕೊಂಡಿತು. ಪರಸ್ಪರ ಶಾಂತಿ ಕಾಪಾಡುವುದು, ಸಾಲ್ಸೆಟ್ಟನ್ನು  ಮಾತ್ರ ಬ್ರಿಟಿಷರು ಉಳಿಸಿಕೊಳ್ಳುವುದು, ರಘೋಬನಿಗೆ ಪೇಶ್ವೆ 25,000 ಮಾಶಾಸನ ನೀಡುವುದು, ಬ್ರಿಟಿಷರಿಗೆ 12 ಲಕ್ಷ ಯುದ್ಧವೆಚ್ಚ ನೀಡುವುದು, ಇತರೆ ಯೂರೋಪಿನವರೊಂದಿಗೆ ಸಂಬಂಧ ಬೆಳೆಸದಿರುವುದು ಒಪ್ಪಂದದ ಪ್ರಮುಖ ಕರಾರುಗಳಾಗಿದ್ದವು. ಆದರೆ, ಬಾಂಬೆ ಸರ್ಕಾರ ರಘೋಬನಿಗೆ ಆಶ್ರಯ ಮುಂದುವರಿಸಿತು. ಅಲ್ಲದೇ ಲಂಡನ್ನಿನಲ್ಲಿದ್ದ ಕಂಪೆನಿಯ ಡೈರೆಕ್ಟರ್‌ ಮಂಡಳಿ ಸೂರತ್‌ ಒಪ್ಪಂದವನ್ನು ಮಾನ್ಯ ಮಾಡಿತು. ಇತ್ತ ಹೇಸ್ಟಿಂಗ್ಸ್ ಪುರಂಧರ ಒಪ್ಪಂದವನ್ನು ಪಾಲಿಸುವಂತೆ ಬಾಂಬೆ ಗವರ್ನರನಿಗೆ ಒತ್ತಾಯಿಸಿದನು. ಈ ನಡುವೆ ಪೂನಾ ದರ್ಬಾರ್‌ ಫ್ರೆಂಚರಿಗೆ ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿತು. ಇದರಿಂದ   ಕೆರಳಿದ ವಾರನ್‌ ಪೂನಾ ದರ್ಬಾರಿನ ಮೇಲೆ 1778 ರಲ್ಲಿ ಯುದ್ಧ ಸಾರಿದನು. ಈ ಯುದ್ಧದಲ್ಲಿ ಆಂಗ್ಲರು ಸೋತರು. ಪರಿಣಾಮವಾಗಿ ಕಲ್ಕತ್ತಾ ಕೌನ್ಸಿಲ್‌ ಮತ್ತು ಪೂನಾ ಸರ್ಕಾರಗಳ ನಡುವೆ ವಡಗಾವ್‌ ಒಪ್ಪಂದವಾಯಿತು. ಅದರಂತೆ 1773 ರಿಂದ ಆಂಗ್ಲರು ಮರಾಠರಿಂದ ಗೆದ್ದಿದ್ದ ಎಲ್ಲಾ ಪ್ರದೇಶಗಳನ್ನೂ ಹಿಂತಿರುಗಿಸಬೇಕು, ರಘೋಬನಿಗೆ ನೀಡಿದ್ದ ಬೆಂಬಲವನ್ನು ತಕ್ಷಣವೇ ನಿಲ್ಲಿಸುವುದು, ಬಂಗಾಳ ಸೇನೆ ಹಿಂತಿರುಗುವುದು, ಬ್ರೋಚ್‌ನ ಆದಾಯದ ಒಂದು ಭಾಗವನ್ನು ಸಿಂಧ್ಯನಿಗೆ ನೀಡುವುದು; ಆದರೆ ವಾರನ್‌ ಈ ಒಪ್ಪಂದದ ಕರಾರುಗಳನ್ನು ತಿರಸ್ಕರಿಸಿದನು. ಯುದ್ಧ ಮುಂದುವರಿದು, 1780 ಫೆಬ್ರವರಿ ಮತ್ತು ಡಿಸೆಂಬರ್‌ಗಳಲ್ಲಿ ಅಲಹಾಬಾದ್‌ ಮತ್ತು ಬೆಸ್ಸಿನ್‌ಗಳನ್ನು ಗೋರ್ಡಾಡ್‌ ಗೆದ್ದನು. ಆದರೆ ಅವನು ಪೂನಾ ಯುದ್ಧದಲ್ಲಿ ಮರಾಠರಿಗೆ ಸೋತನು. ಇತ್ತ ಗ್ವಾಲಿಯರ್‌  ಮತ್ತು ಸಿಕ್ರಿಗಳಲ್ಲಿ ಸಿಂಧ್ಯ ಬ್ರಿಟಿಷರಿಗೆ ಸೋತನು. ಇದೇ ವೇಳೆಯಲ್ಲಿ ದೇಶೀಯ ಅರಸರ ಒಕ್ಕೂಟ ಬ್ರಿಟಿಷರ ವಿರುದ್ಧ ಬೃಹತ್‌ ದಾಳಿಯ ಯೋಜನೆ ರೂಪಿಸಿತ್ತು. ಆದರೆ ಹೈದರನ ಹೊರತು ನಿಜಾಮ ಮತ್ತು ಬೋನ್ಸ್ಲೆ  ಆಂಗ್ಲರ ಆಮಿಷಗಳಿಗೆ ಒಳಗಾಗಿ ಯುದ್ಧದಿಂದ ದೂರ ಉಳಿದರು. ಪರಿಣಾಮವಾಗಿ ಪೂನಾ ದರ್ಬಾರ್‌ ಬ್ರಿಟಿಷರೊಂದಿಗೆ ಸಾಲ್ಬಾಯ್‌ ಒಪ್ಪಂದವನ್ನು ಮಾಡಿಕೊಂಡಿತು. ಇದರಲ್ಲಿ ಹೈದರನು ಭಾಗವಹಿಸಲಿಲ್ಲ.

ಸಾಲ್ಬಾಯ್‌ ಒಪ್ಪಂದ: ಮೇ 17, ೧೭೮೨. ಕರಾರುಗಳು: ಆಂಗ್ಲರಿಗೆ ಸಾಲ್‌ಸೆಟ್‌ ನೀಡಲಾಯಿತು. ರಘೋಬನಿಗೆ ನೀಡಿದ್ದ ಬೆಂಬಲ ನಿಲ್ಲಿಸಲು ಒಪ್ಪಿದರು. ರಘೋಬನಿಗೆ ನಿವೃತ್ತಿ ವೇತನ ಮಂಜೂರು ಮಾಡಲಾಯಿತು. ಮಹದಾಜಿ ಸಿಂಧ್ಯನು ಯಮುನಾ ನದಿಯ ಪಶ್ಚಿಮದ ತನ್ನ ಪ್ರದೇಶಗಳನ್ನು ಮರಳಿ ಪಡೆದನು. ದಕ್ಷಿಣ ಭಾರತದ ಯುದ್ಧಗಳಲ್ಲಿ ಅದುವರೆಗೂ ಪರಸ್ಪರ ಗೆದ್ದಿದ್ದ ಪ್ರದೇಶಗಳನ್ನು ಎರಡೂ ಪಕ್ಷಗಳವರು ಹಿಂತಿರುಗಿ ಪಡೆದರು. ಈ ಯುದ್ಧದಲ್ಲಿ ಮರಾಠರದೇ ಮೇಲುಗೈ ಆಗಿತ್ತು.

 

ದ್ವಿತೀಯ ಯುದ್ಧ: ಯಶವಂತರಾವ್‌ ಹೋಳ್ಕರ್‌ ಮತ್ತು ದೌಲತ್ತರಾವ್‌ ಸಿಂಧ್ಯರ ನಡುವಿನ ಆಂತರಿಕ ಕಲಹಗಳ ಕಾರಣದಿಂದಾಗಿ ಪೇಶ್ವೆ ಸಿಂಧ್ಯನ ಪಕ್ಷ ವಹಿಸಿದನು. ಹೋಳ್ಕರನ ಅಣ್ಣ ವಿಠೋಜಿಯನ್ನು ಸಿಂಧ್ಯ ಮತ್ತು ಪೇಶ್ವೆ ಯುದ್ಧದಲ್ಲಿ ಸೋಲಿಸಿ ಕೊಂದರು. ಯಶವಂತರಾವ್‌ ಹೋಳ್ಕರ್‌ ಸಿಂಧ್ಯನಿಂದ ಸೋತು, ಅಣ್ಣನ ಸಾವಿನ ಸೇಡು ತೀರಿಸಿಕೊಳ್ಳಲು ಪೇಶ್ವೆ ಮೇಲೆ ದಾಳಿ ಮಾಡಿದನು. ಸೋತ ಪೇಶ್ವೆ ಪೂನಾದಿಂದ ಪಲಾಯನ ಮಾಡಿದಾಗ ಹೋಳ್ಕರನು ವಿನಾಯಕರಾವ್‌ ಎಂಬ ರಘುನಾಥ ರಾಯನ ಮೊಮ್ಮೊಗನನ್ನು ಪೇಶ್ವೆ ಎಂದು ಘೋಷಿಸಿದನು. ಓಡಿಹೋದ ಪೇಶ್ವೆಯು ತನ್ನ ಹುದ್ದೆ ಉಳಿಸಿಕೊಳ್ಳಲು ಆಂಗ್ಲರೊಂದಿಗೆ ಸಹಾಯಕ ಸೈನ್ಯ ಪದ್ಧತಿಗೆ ಮುಂದಾಗಿ ಡಿಸೆಂಬರ್‌ 31, 1802ರಲ್ಲಿ ಬೆಸ್ಸಿನ್‌ ಒಪ್ಪಂದ ಮಾಡಿಕೊಂಡನು. ಎರಡೂ ಪಕ್ಷಗಳೂ ಪರಸ್ಪರರ ರಕ್ಷಣೆಗೆ ಸಹಾಯ  ಮಾಡುವುದು, ಪೇಶ್ವೆಯ ರಕ್ಷಣೆಗೆ 6000 ಶಸ್ತ್ರಸಜ್ಜಿತ ಆಂಗ್ಲ ಸೇನೆ ಪೂನಾದಲ್ಲಿಡುವುದು, ಅದರ ವೆಚ್ಚಕ್ಕೆ 25 ಲಕ್ಷಗಳನ್ನು ಪೇಶ್ವೆ ನೀಡುವುದು, ಯಾವುದೇ ವಿದೇಶಿ ಶಕ್ತಿಗಳೊಂದಿಗೆ ಪೇಶ್ವೆ ಸೇರುವಂತಿಲ್ಲ, ಸೂರತ್‌ ಮೇಲಿನ ಅಧಿಕಾರವನ್ನು ಬ್ರಿಟಿಷರಿಗೆ ಬಿಟ್ಟುಕೊಡುವುದು ಮತ್ತು ನೆರೆ ರಾಜ್ಯಗಳೊಂದಿಗೆ ವ್ಯವಹರಿಸುವುದನ್ನು (ವಿದೇಶಾಂಗ ನೀತಿ) ಆಂಗ್ಲರಿಗೆ ಒಪ್ಪಿಸುವುದು ಬೆಸ್ಸಿನ್‌ ಒಪ್ಪಂದದ ಪ್ರಮುಖ ಕರಾರುಗಳಾಗಿದ್ದವು. ಪರಿಣಾಮವಾಗಿ 1803, ಮೇ 13ರಂದು ಆರ್ಥರ್‌ ವೆಲ್ಲೆಸ್ಲಿ ನೇತೃತ್ವದ ಒಂದು ಸೇನೆ ಪೂನಾ ಪ್ರವೇಶಿಸಿತು ಮತ್ತು ಬಾಜಿರಾಯನನ್ನು ಪೇಶ್ವೆ ಎಂದು ಘೋಷಿಸಿತು. ಆದರೆ ಹೋಳ್ಕರ್‌, ದೌಲತ್ತರಾವ್‌ ಸಿಂಧ್ಯ ಮತ್ತು ಬೋನ್ಸ್ಲೆ ಬೆಸ್ಸಿನ್‌ ಒಪ್ಪಂದವನ್ನು ವಿರೋಧಿಸಿದರು; ಜೊತೆಗೆ ಒಪ್ಪಂದದ ಕರಾರುಗಳನ್ನು ಸಹಿಸದ ಪೇಶ್ವೆಯು ಸಹಾ ರಹಸ್ಯವಾಗಿ ಮರಾಠಾ ನಾಯಕರಿಗೆ ಬೆಂಬಲ ಸೂಚಿಸಿದನು. ಗಾಯಕ್‌ವಾಡನು ತಟಸ್ಥನಾಗಿದ್ದನು. ಇತ್ತ ಬ್ರಿಟಿಷರು ವ್ಯವಸ್ಥಿತವಾದ ಯುದ್ಧ ಸಿದ್ಧತೆಗಳನ್ನು ಮಾಡಿಕೊಂಡು, ಆಗಸ್ಟ್‌ 13ರಂದು ಅಲಹಾಬಾದನ್ನು ಗೆದ್ದರು. ಔರಂಗಬಾದ್‌ ಬಳಿಯ ಅಸ್ಸೆ ಎಂಬಲ್ಲಿ ಮರಾಠಾ ಒಕ್ಕೂಟದ ಸೇನೆ ಸೋತಿತು. ನವೆಂಬರ್‌ 3ರಂದು ಅರೆಗಾವ್‌ ಎಂಬಲ್ಲಿ ಬೋನ್ಸ್ಲೆ ಸಂಪೂರ್ಣವಾಗಿ ಸೋತನು. ಅಲ್ಲದೇ ಆಗ್ರಾ, ದೆಹಲಿ, ಗುಜರಾತ್‌ ಮತ್ತು ಬುಂದೇಲ್‌ಖಂಡಗಳಲ್ಲಿನ ಯುದ್ಧಗಳಲ್ಲಿ ಆಂಗ್ಲರು ಗೆದ್ದರು. ಕೇವಲ ಐದು ತಿಂಗಳ ಅವಧಿಯಲ್ಲಿ ಸಿಂಧ್ಯ ಮತ್ತು ಬೋನ್ಸ್ಲೆ ಅನೇಕ ಯುದ್ಧಗಳಲ್ಲಿ ಸೋತು, ತಮ್ಮ ಬಹುತೇಕ ಪ್ರದೇಶಗಳನ್ನು ಕಳೆದುಕೊಂಡರು. ಪರಿಣಾಮವಾಗಿ ಬೋನ್ಸ್ಲೆ ಡಿಸೆಂಬರ್‌ 17, 1803 ರಲ್ಲಿ ದೇವಗಾವ್‌ ಒಪ್ಪಂದಕ್ಕೆ ಸಹಿ ಹಾಕಿದನು. ವಾರ್ಧಾ ನದಿಯ ಪಶ್ಚಿಮದ ತನ್ನ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದನು, ನಿಜಾಮ ಮತ್ತು ಪೇಶ್ವೆಗಳೊಂದಿಗಿನ ತನ್ನ ವಿವಾದಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಆಂಗ್ಲರಿಗೆ ಒಪ್ಪಿಸಿದನು, ವಿದೇಶಿ ನೌಕರರನ್ನು ಸೇವೆಗೆ ತೆಗೆದುಕೊಳ್ಳದಿರುವುದು, ಆಂಗ್ಲ ರೆಸಿಡೆಂಟ್‌ ಒಬ್ಬನನ್ನು ತನ್ನ ಆಸ್ಥಾನದಲ್ಲಿಟ್ಟುಕೊಳ್ಳುವುದು, ಬೆಸ್ಸಿನ್‌ ಒಪ್ಪಂದವನ್ನು ಮಾನ್ಯ ಮಾಡಿದ್ದಲ್ಲದೇ ತನ್ನ ವಿದೇಶಾಂಗ ನೀತಿಯನ್ನು ಆಂಗ್ಲರಿಗೆ ಒಪ್ಪಿಸಿದನು. ಸಿಂಧ್ಯನು ಸೂರಜ್‌ ಅರ್ಜುನ್‌ಗಾವ್‌ನಲ್ಲಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡನು. ಗಂಗ-ಯಮುನಾ ನದಿಗಳ ನಡುವಣ ಪ್ರದೇಶ, ರಜಪುತಾಣದಲ್ಲಿದ್ದ ಪ್ರದೇಶಗಳು ಮತ್ತು ದಕ್ಷಿಣದಲ್ಲಿದ್ದ ಅಹಮದ್‌ನಗರ ಮತ್ತು ಗೋದಾವರಿಗಳ ನಡುವಣ ಪ್ರದೇಶಗಳನ್ನು ಬಿಟ್ಟುಕೊಟ್ಟನು. ಅಲ್ಲದೇ ಇವನೂ ಸಹಾ ವಿದೇಶಿ ನೌಕರರನ್ನು ಸೇವೆಗೆ ತೆಗೆದುಕೊಳ್ಳದಿರುವುದು, ಆಂಗ್ಲ ರೆಸಿಡೆಂಟ್‌ ಒಬ್ಬನನ್ನು ತನ್ನ ಆಸ್ಥಾನದಲ್ಲಿಟ್ಟುಕೊಳ್ಳುವುದು, ಬೆಸ್ಸಿನ್‌ ಒಪ್ಪಂದವನ್ನು ಮಾನ್ಯ ಮಾಡಿದ್ದಲ್ಲದೇ ತನ್ನ ವಿದೇಶಾಂಗ ನೀತಿಯನ್ನು ಆಂಗ್ಲರಿಗೆ ಒಪ್ಪಿಸಿದನು. ಅದುವರೆಗೂ ತಟಸ್ಥನಾಗಿದ್ದ ಹೋಳ್ಕರನು 1804ರ ಏಪ್ರಿಲ್‌ನಲ್ಲಿ ಆಂಗ್ಲರ ಹಿಡಿತದಲ್ಲಿದ್ದ ಜೈಪುರದ ಮೇಲೆ ದಾಳಿ ಮಾಡಿದನು. ಕರ್ನಲ್‌ ಮ್ಯಾನ್‌ಸನ್‌ನನ್ನು ಸೋಲಿಸಿ, ಅಕ್ಟೋಬರ್‌ನಲ್ಲಿ ದೆಹಲಿಯತ್ತ ಮುನ್ನುಗ್ಗಿದನು. ಆದರೆ ನವೆಂಬರ್‌ನಲ್ಲಿ ಭಿಗಾ ಮತ್ತು ಫರೂಕಾಬಾದ್‌ಗಳಲ್ಲಿ ಬ್ರಿಟಿಷರಿಗೆ ಸೋತನು. ಪರಿಣಾಮವಾಗಿ ಅವನು 1805, ಏಪ್ರಿಲ್‌ 10ರಂದು ಒಪ್ಪಂದ ಮಾಡಿಕೊಂಡನು. ಅದರಂತೆ 20 ಲಕ್ಷ ರೂ.ಗಳನ್ನು ಬ್ರಿಟಿಷರಿಗೆ ನೀಡುವುದು, ಅವರ ಶತೃ ಮತ್ತು ಮಿತ್ರರು ತನಗೂ ಶತೃ-ಮಿತ್ರರೆಂದು ಒಪ್ಪಿದನು; ಹೀಗೆ ಬ್ರಿಟಿಷರು ಹೋಳ್ಕರನ ಮೇಲೆ ತಮ್ಮ ಹಿಡಿತವನ್ನು ಸಾಧಿಸುತ್ತಿರುವಾಗಲೇ ಕಂಪೆನಿ ಸರ್ಕಾರ ಲಾರ್ಡ್‌ ವೆಲ್ಲೆಸ್ಲಿಯನ್ನು ವಾಪಾಸು ಕರೆಸಿಕೊಂಡಿತು. ಮುಂದೆ ಗವರ್ನರ್‌ ಜನರಲ್‌ ಆಗಿ ಬಂದ ಕಾರ್ನವಾಲೀಸನು 1805 ಅಕ್ಟೋಬರ್‌ನಲ್ಲಿ ಅಕಾಲಿಕ ಮರಣಕ್ಕೀಡಾದನು. ಅವನ ಬದಲು ತಾತ್ಕಾಲಿಕವಾಗಿ ಗ. ಜನರಲ್‌ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಸರ್‌ ಜಾರ್ಜ್‌ ಬಾರ್ಲೋ ಸಹಾ ಒಪ್ಪಂದದ ಪರವಾಗಿದ್ದನು. ಆದರೆ  ಜನರಲ್‌ ಲೇಕನು ಹೋಳ್ಕರನನ್ನು ಅಮೃತಸರದವರೆಗೆ ಬೆನ್ನಟ್ಟಿ ಹೋಗಿದ್ದನು. ಸಿಖ್ಖರ ಬೆಂಬಲ ನಿರಿಕ್ಷಿಸುತ್ತಿದ್ದ ಹೋಳ್ಕರನಿಗೆ ಅವರ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಅವನು 1086, ಜನವರಿ 7 ರಂದು ರಾಜಪುರಘಾಟ್‌ ಒಪ್ಪಂದಕ್ಕೆ ಸಹಿ ಹಾಕಿದನು. ಅದರಂತೆ, ಚಂಬಲ್‌ ನದಿಯ ಉತ್ತರದ ಭಾಗಗಳು ಮತ್ತು ಪೂನಾ ಹಾಗೂ ಬುಂದೇಲಖಂಡಗಳ ಮೇಲಿನ ತನ್ನ ಹಕ್ಕನ್ನು ಆಂಗ್ಲರಿಗೆ ಬಿಟ್ಟುಕೊಡುವುದು, ಯಾವುದೇ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳದಿರಲು ಒಪ್ಪಿದನು. ಚಂಬಲ್‌ ನದಿಯ ದಕ್ಷಿಣದ ಪ್ರದೇಶಗಳನ್ನು ಹೋಳ್ಕರನಿಗೆ ಉಳಿಸಲಾಯಿತು.

 

ತೃತೀಯ ಯುದ್ಧ: 1817-18. ಹಿನ್ನೆಲೆ: ಎರಡನೆ ಆಂಗ್ಲೋ-ಮರಾಠಾ ಯುದ್ಧದ ನಂತರವೂ ಮರಾಠರು ಒಗ್ಗೂಡದಾದರು. ಅವರು ತಮ್ಮ-ತಮ್ಮಲ್ಲಿಯೇ ಆಂತರಿಕ ಕಲಹಗಳಲ್ಲಿ ತೊಡಗಿದರು. ಯಶವಂತರಾವ್‌ ಹೋಳ್ಕರ್‌ 1811 ರಲ್ಲಿ ಗತಿಸಿದನು. ನಂತರ ಅವನ ಮಗ ಮಲ್ಲಾರಿರಾವ್‌ ಹೋಳ್ಕರ್‌ ಅಧಿಕಾರಕ್ಕೆ ಬಂದನು. ಇವನ ರಾಣಿ ತುಳಸಿಬಾಯಿ ರಾಜ್ಯದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಳು. ಆದರೆ ಅವಳು ಅದರಲ್ಲಿ ಸಂಪೂರ್ಣ ಯಶಸ್ವಿಯಾಗಲಿಲ್ಲ. ಇತ್ತ ದೌಲತ್ತರಾವ್‌ನು ತನ್ನ ಸೇನಾ ನಿರ್ವಹಣೆಗೆ ಅಪಾರ ವೆಚ್ಚ ಮಾಡಿ ಆರ್ಥಿಕವಾಗಿ ಸೊರಗಿದ್ದನು. ಕಾರಣ ತನ್ನ ಸೇನಾಪತಿಗಳಿಗೆ ಸಂಬಳ ನೀಡಲಾಗದೇ ಅವನು ಅವರಿಗೆ ತಮ್ಮ ಆದಾಯದ ಮೂಲಗಳನ್ನು ತಾವೇ ಕಂಡುಕೊಳ್ಳಲು ಬಿಟ್ಟುಬಿಟ್ಟನು. ಅತ್ತ ನಾಗ್ಪುರದ ಎರಡನೆ ರಘೋಜಿ ಬೋನ್ಸ್ಲೆಯ ಪರಿಸ್ಥಿತಿಯು ಇದಕ್ಕಿಂತ ವಿಷಮವಾಗಿತ್ತು. ಗಾಯಕ್‌ವಾಡನು 1805 ರಲ್ಲಿ ಆಂಗ್ಲರೊಂದಿಗೆ ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದಕ್ಕೆ ಸಹಿ ಹಾಕಿದ್ದನು. ಇನ್ನು ಪೇಶ್ವೆ ಸಹ ತನ್ನ ಮಂತ್ರಿ ಸದಾಶಿವನ ಮೇಲೆ ಆಡಳಿತದ ಜವಾಬ್ದಾರಿಗಳನ್ನು ವಹಿಸಿದ್ದನು. ಅಲ್ಲದೇ ಅವನು ತ್ರಿಯಂಬಕಜಿ ದಾಂಗ್ಲೆ ಎಂಬುವನ ಪ್ರಭಾವಕ್ಕೆ ಒಳಗಾಗಿದ್ದನು. ಒಟ್ಟಿನಲ್ಲಿ ಯಾವ ಮರಾಠಾ ನಾಯಕನಿಗೂ ಬ್ರಿಟಿಷರನ್ನು ಎದುರಿಸುವ ಶಕ್ತಿ ಇರಲಿಲ್ಲ. ಆದರೆ ಅವರಿಗೆ ತಾವು ಅವರೊಂದಿಗೆ ಮಾಡಿಕೊಂಡ ಸಹಾಯಕ ಸೈನ್ಯ ಪದ್ಧತಿಯ ಬಗ್ಗೆ ಅತೃಪ್ತಿಯೂ ಇತ್ತು. ಕೇವಲ ಗಾಯಕವಾಡ್‌ ಮಾತ್ರವೇ ಆ ಪದ್ಧತಿಯನ್ನು ಮನಸಾರೆ ಒಪ್ಪಿಕೊಂಡಿದ್ದನು.

ಯುದ್ಧದ ಕಾರಣಗಳು:

1) ಆಂಗ್ಲರ ಬಗೆಗಿನ ತಮ್ಮಲ್ಲಿನ ಅತೃಪ್ತಿಯ ಕಾರಣ ಹೋಳ್ಕರ್‌, ಸಿಂಧ್ಯ, ಬೋನ್ಸ್ಲೆ ಮತ್ತು ಪೇಶ್ವೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದರು. ಇತ್ತ ಆಂಗ್ಲರ ಗವರ್ನರ್‌ ಜನರಲ್‌ ಮಾರ್ಕ್ವೆಸ್‌ ಆಫ್‌ ಹೇಸ್ಟಿಂಗ್ಸ್‌ (1813-23) ಸಹಾ ವೆಲ್ಲೆಸ್ಲಿ ಬಿಟ್ಟು ಹೋಗಿದ್ದ ಕೆಲಸವನ್ನು ಪೂರ್ತಿ ಮಾಡಲು ಉತ್ಸುಕನಾಗಿದ್ದನು. ಪಿಂಡಾರಿಗಳು, ಪಠಾಣರು ಮತ್ತು ನೇಪಾಳದ ಮೇಲಿನ ಯುದ್ಧಗಳ ನಂತರ ಅವನು ತನ್ನ ಗಮನವನ್ನು ಮರಾಠರತ್ತ ಹರಿಸಿದನು. ಆ ಅವಕಾಶವನ್ನು ಮರಾಠರೇ ಅವನಿಗೆ ಕಲ್ಪಿಸಿಕೊಟ್ಟರು. ಪೇಶ್ವೆ ಬಾಜಿರಾಯನು ರಹಸ್ಯವಾಗಿ ಇನ್ನಿತರ ಮರಾಠಾ ನಾಯಕರೊಂದಿಗೆ ಆಂಗ್ಲರ ವಿರುದ್ಧದ ಹೋರಾಟಕ್ಕೆ ಮಾತುಕತೆ ನಡೆಸಿದನು. ಅಲ್ಲದೇ ತನ್ನ ಸೇನೆಯನ್ನೂ ಬಲಗೊಳಿಸಿಕೊಂಡನು. ಆದರೆ ಗಾಯಕವಾಡ್‌ ಮಾತ್ರ ಈ ಸಂಚಿನಿಂದ ಹೊರಗೆ ಉಳಿದಿದ್ದನು. ಆದರೆ ಪೇಶ್ವೆಯು ಅಹಮದಾಬಾದ್‌ ಮೇಲಿನ ಒಡೆತನಕ್ಕೆ ಸಂಬಂಧಿಸಿದಂತೆ ಗಾಯಕವಾಡನೊಂದಿಗೆ ಸಂಘರ್ಷಕ್ಕಿಳಿದನು. ಪರಿಣಾಮವಾಗಿ ಗಾಯಕವಾಡನು ತನ್ನ ಮಂತ್ರಿ ಗಂಗಾಧರಶಾಸ್ತ್ರಿಯನ್ನು ಸಂಧಾನಕ್ಕಾಗಿ ಪೇಶ್ವೆಯ ಆಸ್ಥಾನಕ್ಕೆ ಕಳುಹಿಸಿದನು. ಆದರೆ ಅವನನ್ನು ಪೂನಾದಲ್ಲಿ ಕೊಲೆ ಮಾಡಲಾಯಿತು. ಇದರ ಹಿಂದೆ ತ್ರಿಯಂಬಕಜಿ ದಾಂಗ್ಲೆಯ ಕೈವಾಡವಿದೆ ಎಂದು ಶಂಕಿಸಲಾಯಿತು. ಆದ್ದರಿಂದ ಪೂನಾದಲ್ಲಿದ್ದ ಆಂಗ್ಲ ರೆಸಿಡೆಂಟನು ತ್ರಿಯಂಬಕಜಿಯನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಕೇಳಿದನು ಮತ್ತು ಪೇಶ್ವೆ ಅಂತೆಯೇ ಮಾಡಿದನು. ಅವನನ್ನು ಥಾಣಾದ ಕೋಟೆಯಲ್ಲಿ ಬಂಧಿಸಿಡಲಾಯಿತು. ಆದರೆ 1 ವರ್ಷದ ನಂತರ ಅವನು ಅಲ್ಲಿಂದ ತಪ್ಪಿಸಿಕೊಂಡನು. ಇದರ ಹಿಂದೆ ಪೇಶ್ವೆಯ ಕೈವಾಡವಿದೆ ಎಂದು ಪೂನಾದ ಗವರ್ನರ್‌ ಶಂಕಿಸಿದನು. ಕಾರಣ ಈ ವಿಷಯವನ್ನು ಸುಮ್ಮನೇ ಬಿಡಲು ಮಾ. ಹೇಸ್ಟಿಂಗ್ಸ್‌ ಸಿದ್ಧನಿರಲಿಲ್ಲ. ಆದ್ದರಿಂದ ಅವನು ಪೇಶ್ವೆಯೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳುವಂತೆ ಪೂನಾದ ರೆಸಿಡೆಂಟನ ಮೇಲೆ ಒತ್ತಡ ಹಾಕಿದನು. ಪರಿಣಾಮವಾಗಿ ಪೇಶ್ವೆಯು ಜೂನ್‌ 13, 1817ರಲ್ಲಿ ಪೂನಾ ಒಪ್ಪಂದ ಮಾಡಿಕೊಂಡನು. ಅದರಂತೆ ತ್ರಿಯಂಬಕಜಿಯನ್ನು ಹಿಡಿದುಕೊಡುವುದು, ಅಲ್ಲಿಯವರೆಗೆ ತ್ರಿಯಂಬಕಜಿಯ ಕುಟುಂಬದ ಸದಸ್ಯರನ್ನು ಆಂಗ್ಲರ ವಶಕ್ಕೆ ಒಪ್ಪಿಸುವುದು, ಮರಾಠಾ ನಾಯಕನೆಂಬ ತನ್ನ ಸ್ಥಾನ ತೊರೆದು, ಬ್ರಿಟಿಷರಿಲ್ಲದೇ ಯಾರೊಂದಿಗೂ ಯಾವ ಒಪ್ಪಂದವನ್ನೂ ಮಾಡಿಕೊಳ್ಳದಿರುವುದು, ಗಾಯಕವಾಡನೊಂದಿಗಿದ್ದ ತನ್ನ ವಿವಾದವನ್ನು ಕೈಬಿಟ್ಟು ಅದಕ್ಕೆ ಬದಲು ಅವನಿಂದ 4 ಲಕ್ಷಗಳನ್ನು ಪಡೆದುಕೊಳ್ಳುವುದು ಮತ್ತು ಬ್ರಿಟಿಷರಿಗೆ ತನ್ನ ರಾಜ್ಯದ ಕೆಲವು ಪ್ರದೇಶಗಳನ್ನು ಬಿಟ್ಟುಕೊಡಲು ಒಪ್ಪಿದನು. ಇದು ಅವನನ್ನು ಮತ್ತಷ್ಟು ಕೆರಳಿಸಿತು.

2) ಗಾಯಕವಾಡನನ್ನೂ ಸಹಾ ಆಂಗ್ಲರು ಮತ್ತಷ್ಟು ದುರ್ಬಲನನ್ನಾಗಿ ಮಾಡಿದರು. ಅದಕ್ಕಾಗಿ  ಅವನೊಂದಿಗೆ ಈ ಹಿಂದೆ ಮಾಡಿಕೊಂಡಿದ್ದ ಸಹಾಯಕ ಸೈನ್ಯ ಪದ್ಧತಿಯ ಕರಾರುಗಳನ್ನು ನವೀಕರಿಸಲು ಒತ್ತಾಯಿಸಿದರು. ಅದರಂತೆ ಆಂಗ್ಲರ ಮತ್ತಷ್ಟು ಸೈನ್ಯವನ್ನು ತನ್ನ ರಾಜ್ಯದಲ್ಲಿರಿಸಿಕೊಳ್ಳಲು ಅವನು ಒಪ್ಪಬೇಕಾಯಿತು. ಅದಕ್ಕಾಗಿ ಇನ್ನಷ್ಟು ಪ್ರದೇಶಗಳನ್ನು ಅವನು ಬ್ರಿಟಿಷರಿಗೆ ಒಪ್ಪಿಸಿದನು.

3) ಎರಡನೆ ರಘೋಜಿ ಬೋನ್ಸ್ಲೆಯು 1816 ರಲ್ಲಿ ಮರಣ ಹೊಂದಿದನು. ಅವನ ಮಗ ಪರಸೋಜಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗಿದ್ದ ಕಾರಣ ಅವನ ದಾಯಾದಿ ಅಪ್ಪಾಸಾಹೇಬನು ನಾಗ್ಪುರದ ಅಧಿಕಾರ ವಹಿಸಿಕೊಂಡನು. ಆದರೆ ಪರಸೋಜಿಯ ತಾಯಿಯು ತನ್ನ ಮಗನ ಪರವಾಗಿ ಅಪ್ಪಾಸಾಹೇಬನನ್ನು ಹೊರತುಪಡಿಸಿ ಆಡಳಿತ ಮಂಡಳಿಯೊಂದನ್ನು ರಚಿಸಿಕೊಂಡಳು. ಆದರೆ ರಾಜಮನೆತನದವರ ವಿರೋಧದ ಕಾರಣ ನಂತರ ಅವನನ್ನೂ ಸಹ ಮಂಡಳಿಯಲ್ಲಿ ರಚಿಸಿಕೊಂಡಳು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆಂಗ್ಲರು ಅಪ್ಪಾಸಾಹೇಬನೊಂದಿಗೆ ನೂತನ ಒಪ್ಪಂದವೊಂದನ್ನು ಮಾಡಿಕೊಂಡರು. ಇದರಿಂದ ಬೋನ್ಸ್ಲೆಯು ಸೈನಿಕವಾಗಿ ಮತ್ತಷ್ಟು ದುರ್ಬಲನಾದನು.

4) ದೌಲತ್ತರಾವ್ ಸಿಂಧ್ಯ ಸಹ ಹೇಸ್ಟಿಂಗ್ಸ್‌ನ ಒತ್ತಾಯಕ್ಕೆ ಮಣಿದು ಆಂಗ್ಲರೊಂದಿಗೆ 1817 ರಲ್ಲಿ ಗ್ವಾಲಿಯರ್‌ ಒಪ್ಪಂದ ಮಾಡಿಕೊಂಡನು. ಅದರಂತೆ ಪಿಂಡಾರಿಗಳೊಂದಿಗಿನ ಆಂಗ್ಲರ ಹೋರಾಟದಲ್ಲಿ ಅವರಿಗೆ ಸೈನಿಕ ಸಹಾಯ ಮಾಡಲು ಒಪ್ಪಿದ್ದಲ್ಲದೇ ತನ್ನ ರಾಜ್ಯದಲ್ಲಿದ್ದ ಚಂಬಲ್‌ ನದಿಯ ಎಡದಂಡೆಯ ಮೇಲಿನ ನಾಲ್ಕು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು.

   ಹೀಗೆ ಮೂರನೆ ಆಂಗ್ಲೊ-ಮರಾಠಾ ಯುದ್ಧ ಆರಂಭವಾಗುವ ಮುನ್ನವೇ ರಾಜಕೀಯ ತಂತ್ರಗಳ ಮೂಲಕ ಆಂಗ್ಲರು ಮರಾಠರನ್ನು ಅರ್ಧ ಗೆದ್ದಿದ್ದರು ಎಂಬುದು ಮೇಲಿನ ಒಪ್ಪಂದಗಳಿಂದ ಸಾಬೀತಾಗುತ್ತದೆ.

ಯುದ್ಧದ ಆರಂಭ: ಪೇಶ್ವೆ ಎರಡನೆ ಬಾಜಿರಾಯನು ಕಿರ್ಕಿ ಎಂಬ ಬ್ರಿಟಿಷರ ಸೇನಾ ನೆಲೆಯ ಮೇಲೆ 1817 ರಲ್ಲಿ ದಾಳಿ ಮಾಡುವ ಮೂಲಕ ಯುದ್ಧ ಆರಂಬವಾಯಿತು. ಅತ್ತ ಅಪ್ಪಾಸಾಹೇಬ ಮತ್ತು ಮಲ್ಲಾರಿರಾವ್‌ ಹೋಳ್ಕರ್‌ ಸಹ ನಾಗ್ಪುರ ಮತ್ತು ಇಂದೋರ್‌ಗಳಲ್ಲಿ ದಂಗೆ ಎದ್ದರು. ಆದರೆ ಬ್ರಿಟಿಷರು ಅವರನ್ನೆಲ್ಲಾ ಸುಲಭವಾಗಿ ಸೋಲಿಸುವಲ್ಲಿ ಯಶಸ್ವಿಯಾದರು. ಪೇಶ್ವೆಯು ಕೋರೆಗಾವ್‌, ಅಷ್ಟಿ ಎಂಬಲ್ಲಿ ಬ್ರಿಟಿಷರಿಗೆ ಸೋತನು. ಸಿತಾಬಾಳ್ಡಿಯಲ್ಲಿ ನಡೆದ ಯುದ್ಧದಲ್ಲಿ ಅಪ್ಪಾಸಾಹೇಬನು ಸೋತು ಪಲಾಯನ ಮಾಡಿದನು. ಡಿಸೆಂಬರ್‌ 20 ರಂದು ಹೋಳ್ಕರನು ಮಹಿಪುರದಲ್ಲಿ ಸೋತನು ಮತ್ತು ಜನವರಿ 6, 1818 ರಲ್ಲಿ ಮಾಂಡರ್ಸನ್‌ ಒಪ್ಪಂದಕ್ಕೆ ಸಹಿ ಹಾಕಿದನು. ಅದರಂತೆ ಪಠಾಣ ರಾಜ್ಯದ ಮೇಲಿನ ತನ್ನ ಅಧಿಕಾರವನ್ನು ಬಿಡುವುದು, ಸಾತ್ಪುರ ಪರ್ವತ ಶ್ರೇಣಿಗಳ ದಕ್ಷಿಣದ ಎಲ್ಲಾ ರಾಜ್ಯಗಳ ಅಧಿಕಾರವನ್ನು ಬ್ರಿಟಿಷರಿಗೆ ಒಪ್ಪಿಸುವುದು, ಸಹಾಯಕ ಸೈನ್ಯವೊಂದನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳುವುದು, ವೆಚ್ಚ ಭರಿಸುವುದು, ರೆಸಿಡೆಂಟನನ್ನು ಇರಿಸಿಕೊಳ್ಳುವುದು ಮತ್ತು ತನ್ನ ವಿದೇಶಾಂಗ ನೀತಿಯನ್ನು ಆಂಗ್ಲರಿಗೆ ಒಪ್ಪಿಸಿ ಸಂಪೂರ್ಣವಾಗಿ ಬ್ರಿಟಿಷರ ಆಶ್ರಿತ ರಾಜನಾದನು.

   ಪಲಾಯನ ಮಾಡಿದ್ದ ಅಪ್ಪಾಸಾಹೇಬನು ಕೆಲಕಾಲ ಆಂಗ್ಲರನ್ನು ಪ್ರತಿಭಟಿಸಿದನಾದರೂ ಯಶಸ್ವಿಯಾಗದೇ ಪಂಜಾಬಿಗೆ ತೆರಳಿದನು. ನಂತರ ಜೋಧಪುರದಲ್ಲಿ  ಆಶ್ರಯ ಪಡೆದು, ಅಲ್ಲಿಯೇ 1840 ರಲ್ಲಿ ಮರಣಹೊಂದಿದನು.

   ನಾಗ್ಪುರದಲ್ಲಿ ರಘೋಜಿ ಬೋನ್ಸ್ಲೆಯ ಅಪ್ರಾಪ್ತ ಮೊಮ್ಮೊಗನನ್ನು ಅಧಿಕಾರಕ್ಕೆ ತಂದು ಅವನೊಂದಿಗೆ ನೂತನ ಒಪ್ಪಂದ ಮಾಡಿಕೊಂಡರು. ಅದರಂತೆ ನರ್ಮದಾ ನದಿಯ ಉತ್ತರಕ್ಕಿದ್ದ ತನ್ನ ಎಲ್ಲಾ ಪ್ರದೇಶಗಳನ್ನೂ ಬ್ರಿಟಿಷರಿಗೆ ಒಪ್ಪಿಸಿದನು.

   ಸೋತ ಪೇಶ್ವೆಯು 1818ರ ಜೂನ್‌ನಲ್ಲಿ ಆಂಗ್ಲರಿಗೆ ಶರಣಾಗತನಾದನು. ಅವನನ್ನು ಪೇಶ್ವೆ ಹುದ್ದೆಯಿಂದ ವಜಾಗೊಳಿಸಿ, ಆ ಹುದ್ದೆಯನ್ನೇ ರದ್ದುಗೊಳಿಸಲಾಯಿತು. ಅವನ ಸಮಸ್ತ ರಾಜ್ಯವು ಬ್ರಿಟಿಷರ ವಶವಾಯಿತು. ಅವನಿಗೆ ಉತ್ತರ ಪ್ರದೇಶದ ಕಾನ್ಪುರದ ಬಳಿ ಬಿಥೂರ್‌ ಎಂಬಲ್ಲಿ ಒಂದು ಜಹಗೀರನ್ನು ನೀಡಿ, ವಾರ್ಷಿಕ 8 ಲಕ್ಷಗಳ ನಿವೃತ್ತಿವೇತನ ನೀಡಿ, ಮಹಾರಾಷ್ಟ್ರವನ್ನೇ ಬಿಡಲು ಸೂಚಿಸಲಾಯಿತು. ತ್ರಿಯಂಬಕಜಿಯನ್ನು ಸೆರೆ ಹಿಡಿದು, ಬನಾರಸ್ ಬಳಿ ಚುನಾರ್‌ದುರ್ಗದಲ್ಲಿ ಜೀವಾವದಿ ಶಿಕ್ಷೆಗೆ ಒಳಪಡಿಸಲಾಯಿತು.

   ಹೀಗೆ ಮರಾಠರು ತಮ್ಮಲ್ಲಿನ ಒಳಜಗಳಗಳು ಮತ್ತು ದೂರದೃಷ್ಟಿಯ ಕೊರತೆಯ ಕಾರಣ ಮೊಗಲರಿಂದ ಗಳಿಸಿದ್ದ ಸಾಮ್ರಾಜ್ಯವನ್ನು ಕಳೆದುಕೊಂಡು ಆಂಗ್ಲರು ಭಾರತದಾದ್ಯಂತ ವಿಸ್ತರಿಸಲು ಅವಕಾಶ ನೀಡಿದರು. ಅಂತಿಮವಾಗಿ ಆಂಗ್ಲರೇ ಶಿವಾಜಿಯ ವಂಶಸ್ಥನಾಗಿದ್ದ ಪ್ರತಾಪಸಿಂಗ್‌ ಎಂಬುವವನನ್ನು ಸತಾರಾದ ಗದ್ದುಗೆಯಲ್ಲಿ ಕೂರಿಸಿ ಅವನನ್ನು ತಮ್ಮ ಅಧೀನ ಮಿತ್ರನನ್ನಾಗಿಸಿಕೊಂಡರು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources