ಪ್ರಾಕೃತದಲ್ಲಿ ಜೈನ ಸಾಹಿತ್ಯ

ಪೀಠಿಕೆ: ಜೈನ ಧರ್ಮದ ಬೆಳವಣಿಗೆಯಲ್ಲಿ ಮಹಾವೀರ ಮತ್ತು ಸನ್ಯಾಸಿಗಳಿಂದ ರಚಿತವಾದ ತತ್ವಜ್ಞಾನದ ಸಾಹಿತ್ಯವು ಬಹಳ ಪ್ರಭಾವ ಬೀರಿದೆ. ಮಹಾವೀರನು ಜೈನ ಧರ್ಮದ ತತ್ವಗಳ ಬೋಧನೆಗೆ ಸಂಸ್ಕೃತ ಭಾಷೆಯನ್ನು ಬಳಸದೇ ಪ್ರಾಕೃತವೆನಿಸಿದ್ದ ಅರ್ಧಮಾಗಧಿಯಲ್ಲಿ ಬೋಧಿಸಿದನು. ಆದ್ದರಿಂದ ಜೈನರ ತಾತ್ವಿಕ ಸಾಹಿತ್ಯವು ಪ್ರಾಕೃತ ವರ್ಗಕ್ಕೆ ಸೇರಿದ್ದ ಅರ್ಧಮಾಗದಿ ಭಾಷೆಯಲ್ಲಿ ರಚಿತವಾಗಿದೆ. ಪ್ರಾಕೃತದಲ್ಲಿ ಇವರ ಧಾರ್ಮಿಕ ಸಾಹಿತ್ಯವು ಒಳಗೊಂಡಿರುವ ಕೃತಿಗಳೆಂದರೆ:-

ಅ. ೧೨ ಅಂಗಗಳು: ಮಹಾವೀರನ ಬೋಧನೆಗಳನ್ನು ಆತನ ಶಿಷ್ಯರು ಹನ್ನೆರಡು ಅಂಗಗಳಲ್ಲಿ ಸಂಗ್ರಹಿಸಿದ್ದಾರೆ. ಅಂಗಗಳು ಜೈನರ ಮೊದಲ ಧಾರ್ಮಿಕ ಸಾಹಿತ್ಯವೆನಿಸಿವೆ. ಇವು ಜೈನ ಧರ್ಮದ ನೀತಿ ನಿಯಮ, ತತ್ವಗಳು, ದಂತಕಥೆಗಳು ಹಾಗೂ ಸಿದ್ಧಾಂತಗಳನ್ನೊಳಗೊಂಡಿವೆ. ಆಚಾರಾಂಗವು ಸನ್ಯಾಸಿಗಳು ಅನುಸರಿಸಬೇಕಾದ ನಿಯಮಗಳನ್ನು ಒಳಗೊಂಡಿದೆ. ಸೂತ್ರಕೃತಾಂಗ ಆಚಾರಾಂಗದಲ್ಲಿನ ನಿಯಮಗಳಿಗೆ ಮತ್ತಷ್ಟು ನಿಯಮಗಳನ್ನು ಸೇರಿಸಿದೆ. ಸ್ಥಾನಾಂಗವು ಪ್ರಕೃತಿಯ ಬಗೆಗಿನ ಜ್ಞಾನವನ್ನು ತಿಳಿಸುತ್ತದೆ. ಸಮವಾಯಾಂಗದಲ್ಲಿ ಜೈನ ಆಧ್ಯಾತ್ಮಿಕ ಚಿಂತನೆಗಳನ್ನು ಜ್ಯೋತಿಷ್ಯ ಮತ್ತು ಗಣಿತಶಾಸ್ತ್ರದ ಮೂಲಾಂಶಗಳಿಗೆ ಅನುಸಾರವಾಗಿ ಸಂಖ್ಯಾತ್ಮಕವಾಗಿ ವಿವರಿಸಲಾಗಿದೆ. ವಾಕ್ಯ ಪ್ರಜ್ಞಪ್ತಿ ಯಲ್ಲಿಜೀವನದ ಸತ್ಯಗಳನ್ನು ಪ್ರಶ್ನೋತ್ತರ ರೂಪದಲ್ಲಿ ವಿವರಿಸಲಾಗಿದೆ. ಜ್ಞಾತೃಧರ್ಮಕಥಾಂಗವು ಧಾರ್ಮಿಕ ಬೋಧನೆಗಳು ಮತ್ತು ನೈತಿಕಾಂಶಗಳನ್ನು ಸ್ತೋತ್ರ ಹಾಗೂ ಕಥಾನಕದ ರೂಪದಲ್ಲಿ ಒಳಗೊಂಡಿದೆ. ಉಪಾಸಕದಶಕ ಅಥವಾ ಉಪಾಸಕಾಧ್ಯಯನಾಂಗವು ಗೃಹಸ್ಥರು ಅನುಸರಿಸಬೇಕಾದ ಧಾರ್ಮಿಕನಿಯಮಗಳನ್ನು ಒಳಗೊಂಡಿದೆ. ಅಂತಃಕೃದ್ದಶಾಂಗವು ಕಠಿಣ ವ್ರತಾಚರಣೆಯ ನಂತರ ಮೋಕ್ಷವನ್ನು ಪಡೆದ ಹತ್ತು ಸನ್ಯಾಸಿಗಳ ಬಗೆಗೆ ತಿಳಿಸುತ್ತದೆ. ಅನುತ್ತರೋಪದಿಕದಶಾಂಗದಲ್ಲಿ ಹತ್ತು ಜೈನ ಸನ್ಯಾಸಿಗಳು ಕಠಿಣ ವ್ರತ ಮತ್ತು ಸಹಿಷ್ಣುತೆಯಿಂದ ಸ್ವರ್ಗಕ್ಕೆ ಹೋದ ಬಗೆಗಿನ ವಿವರಗಳಿವೆ. ಪ್ರಶ್ನ ವ್ಯಾಕರಣವು ನಂಬಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಕಾರ್ಯಗಳ ಪ್ರಚಾರ ಮತ್ತು ಕೆಡುಕನ್ನು ತಡೆಗಟ್ಟುವ ವಿಧಾನಗಳನ್ನು ಹೇಳುತ್ತದೆ. ವಿಪಾಕ ಸೂತ್ರದಲ್ಲಿ ಒಳ್ಳೆಯತನದ ಪುರಸ್ಕಾರ ಮತ್ತು ಕೆಡುಕಿನ ದುರ್ಗತಿಯನ್ನು ವರ್ಣಿಸಲಾಗಿದೆ. ದೃಷ್ಟಿವಾದದಲ್ಲಿ ಸೂರ್ಯ, ಚಂದ್ರ, ಭೂಮಿ, ಸಾಗರ, ಸಜೀವ ಮತ್ತು ನಿರ್ಜೀವ ಅಂಶಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ವಿವರಿಸಲಾಗಿದೆ.

ಆ. ೧೨ ಉಪಾಂಗಗಳು: ಇವುಗಳು ಜೈನ ದರ್ಶನಗಳನ್ನೊಳಗೊಂಡಿದೆ. ಗುಜರಾತಿನ ವಲ್ಲಭಿಯಲ್ಲಿ ಸಾ.ಶ.ವ. 512 ರಲ್ಲಿ ನಡೆದ ಎರಡನೇ ಜೈನ ಮಹಾಸಮ್ಮೇಳನದಲ್ಲಿ ಇವುಗಳನ್ನು ಜೈನ ಸಾಹಿತ್ಯಕ್ಕೆ ಸೇರಿಸಲಾಯಿತು. ಉದಾ: ಔಪಪತಿಕ, ರಾಜಪ್ರಶ್ನೀಯ.

ಇ. ಪ್ರಕೀರ್ಣಗಳು: ಇವುಗಳು ಗದ್ಯರೂಪದಲ್ಲಿ ಜೈನ ತಾತ್ವಿಕತೆಯನ್ನು ತಿಳಿಸುತ್ತವೆ. ಅವುಗಳೆಂದರೆ, ಚತು ಶ್ರವಣ,, ಅದುರ ಪ್ರತ್ಯಾಖ್ಯಾನ ಅಥವಾ ಆಯುರ್ಪಚಖ್ಯಾನ, ಭಕ್ತಿ ಪರಿಜ್ಞಾ, ಸಂಸ್ತಾರಕಾ ಅಥವಾ ಸಾಂತಾರಾ, ತಂದುಲವೈತಾಲಿಯ, ಚಂದ್ರ ವೇಧ್ಯಕ, ದೇವೇಂದ್ರಾಸ್ತವ, ಗಣಿತ ವಿದ್ಯಾ, ಮಹಾ ಪ್ರತ್ಯಾಖ್ಯಾನ ಮತ್ತು ವಿರಸ್ತವ.

ಈ. ಷಡ್‌ ಸೂತ್ರಗಳು (6 ಛೇದ ಸೂತ್ರಗಳು): ಇವುಗಳು ಜೈನ ಮಠಗಳು ಮತ್ತು ಬಸದಿಗಳು ಅನುಸರಿಸಬೇಕಾದ ನಿಯಮಗಳನ್ನೊಳಗೊಂಡಿವೆ. ಉದಾ: ನಿಶೀಥ, ಮಹಾನಿಶೀಥ.

ಉ. ಮೂಲ ಸೂತ್ರಗಳು: ಇವುಗಳಲ್ಲಿ ಜೈನ ಪದ್ಯಗಳು, ಸಂಭಾಷಣೆಗಳು, ಜಾನಪದ ಕಥೆಗಳು, ದಂತಕಥೆಗಳು ಮುಂತಾದವುಗಳಿವೆ. ಉದಾ: ಉತ್ತರಾಧ್ಯಯನ, ಅವಶ್ಯಕ, ದಶವೈಕಾಲಿಕ. 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources