ಅಧ್ಯಾಯ ೭. ಬಾಂಬೆ-ಕರ್ನಾಟಕದ ದೇಸಗತ್ತಿಗಳು, ದಿವಾನ್‌ ಬಹಾದ್ದೂರ್‌ ಶಿವಲಿಂಗ ರಾವ್‌ ದೇಶಮುಖ್‌ – ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ. ಹಲಗಲಿಯ ಬೇಡರು ಮತ್ತು ಸಿಂಧೂರ ಲಕ್ಷ್ಮಣ.

ದಿವಾನ್‌ ಬಹಾದ್ದೂರ್‌ ಶಿವಲಿಂಗ ರಾವ್‌ ದೇಶಮುಖ್‌ (1820)

 ಇಂದಿನ ಬೀದರ್‌ ಜಿಲ್ಲೆಯು 1800ರ ಕಾಲಕ್ಕೆ  ನಿಜಾಮನ ಆಳ್ವಿಕೆಯಲ್ಲಿತ್ತು. ಅಲ್ಲಿನ ಪ್ರದೇಶಗಳನ್ನು ದೇಶಮುಖರ ಆಡಳಿತದಲ್ಲಿ ಇರಿಸಲಾಗಿತ್ತು. ಮುಂದೆ ನಿಜಾಮನ ದುರಾಡಳಿತದ ಕಾರಣದಿಂದಾಗಿ

   ಭಾರೀ ತೆರಿಗೆಯಿಂದ ಅವರಿಗೆ ಹೊರೆಯಾಯಿತು. ಇದರ ಪರಿಣಾಮವಾಗಿ 1820 ರಲ್ಲಿ ಉದ್ಗೀರ್ನಲ್ಲಿ ದಂಗೆಗಳು ಕಾಣಿಸಿಕೊಂಡವು. ಶಿವಲಿಂಗಯ್ಯ, ತಿರುಮಲ್ ರಾವ್ ಮತ್ತು ಮೇಘಶಾಮ್ ನೇತೃತ್ವದ ಸ್ಥಳೀಯ ದೇಶಮುಖರು ಸುಳಿಯಾಲನ್ನು ತಮ್ಮ ನೆಲೆಯಾಗಿ ಬಳಸಿಕೊಂಡು ದಂಗೆಯ ನೇತೃತ್ವ ವಹಿಸಿದ್ದರು. ಆದ್ದರಿಂದ ದಂಗೆಯನ್ನು ದೇಶಮುಖರ ದಂಗೆ ಎಂದು ಕರೆಯಲಾಗುತ್ತದೆ. ನಿಜಾಮರು ದೇಶಮುಖರನ್ನು ನಿಗ್ರಹಿಸಲು ಬ್ರಿಟಿಷರ ಸಹಾಯವನ್ನು ಪಡೆದರು. ಇದಕ್ಕಾಗಿ ಲೆಫ್ಟಿನೆಂಟ್ ಜನರಲ್ ಸದರ್ಲ್ಯಾಂಡ್ ಅವರನ್ನು ನಿಯೋಜಿಸಲಾಯಿತು ಮತ್ತು ಅವರು ಎರಡು ತಿಂಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅವರನ್ನು ಸೋಲಿಸಿದರು ಮತ್ತು ಅವರನ್ನು ಜೈಲಿಗೆ ಹಾಕಿದರು.

  

ಕಿತ್ತೂರು ರಾಣಿ ಚೆನ್ನಮ್ಮ

ಕಿತ್ತೂರು ರಾಣಿ ಚೆನ್ನಮ್ಮ  ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ್ದಳು.

ಜನನ:- ೨೩ ಅಕ್ಟೋಬರ್ ೧೭೭೮, ಕಾಕತಿ, ಬೆಳಗಾವಿ

ಮರಣ:- 2 ಫೆಬ್ರವರಿ 1829 (50ನೆ ವಯಸ್ಸಿನಲ್ಲಿ), ಬೈಲಹೊಂಗಲ, ಬೆಳಗಾವಿ

 

ಬಾಲ್ಯ ಜೀವನ ಮತ್ತು ವಿವಾಹ:-  ಕಿತ್ತೂರು ಚೆನ್ನಮ್ಮ ಹುಟ್ಟಿದ್ದು 23 ಅಕ್ಟೋಬರ್ ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ತಾಯಿ ಪದ್ಮಾವತಿ. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಅವಳು ದೇಸಾಯಿ ಮನೆತನದ ರಾಜಾ ಮಲ್ಲಸರ್ಜ ಅವರನ್ನು 15 ನೇ ವಯಸ್ಸಿನಲ್ಲಿ ವಿವಾಹವಾದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ಸಂಗೊಳ್ಳಿ ರಾಯಣ್ಣ, ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟ ಕಟ್ಟಿದಳು.

 

ಕಿತ್ತೂರಿನ ಇತಿಹಾಸ:-  ಕಿತ್ತೂರಿನ ಇತಿಹಾಸವು ಕ್ರಿ.. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಬೇಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ಬಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಸೋದರರಲ್ಲಿ ಹಿರಿಯ ಮಲ್ಲನಿಗೆಶಮಶೇರ್ ಜಂಗ್‌ಬಹಾದ್ದೂರ್ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸ ಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ಥಾನದಲ್ಲಿ ಮೊಗಲ್ ಬಾದಶಾಹಿ ದುರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು. ಇಂತಹ ರಾಜಕೀಯ ಪರಿಸ್ಥಿತಿಯು ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಬ್ಬಾಳದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರ ಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನ್ನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠರ ಕಿರಿಕಿರಿ ತಪ್ಪಿಸಿಕೊಳ್ಳಲು ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹವೆಂದರೆ! ಪ್ರತಿ ವರ್ಷ ರೂ. ,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು ೧೧ ಸೆಪ್ಟೆಂಬರ್ ೧೮೨೪ ರಂದು ವಾರಸುದಾರರಿಲ್ಲದೆ ತೀರಿಕೊಂಡನು. ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು!ಆದರೆ ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಿದ್ದನು. ದತ್ತಕವನ್ನು ಧಾರವಾಡದ ಕಲೆಕ್ಟರ್ ಥ್ಯಾಕರೆ ತಿರಸ್ಕರಿಸುತ್ತಾನೆ. ೧೩ ಸೆಪ್ಟೆಂಬರ್ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ್ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡಿ,  ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ!

 

ಕಿತ್ತೂರಿನ ಮೇಲೆ ಬ್ರಿಟಿಷರ ಆಕ್ರಮಣ ಮತ್ತು ಇತರ ರಾಜಕೀಯ ಬೆಳವಣಿಗೆ:- ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆಯುತ್ತಾಳೆ. ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಮಾಡುತ್ತಾಳೆ. ೨೧ ಅಕ್ಟೋಬರ್ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ್ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ವಿಜಯೋತ್ಸವವನ್ನು ಕರ್ನಾಟಕ ಸರ್ಕಾರ ಕಿತ್ತೂರು ಉತ್ಸವ ಎನ್ನುವ ಹೆಸರಿನಲ್ಲಿ ಪ್ರತಿ ವರ್ಷವೂ ಆಚರಣೆ ಮಾಡುತ್ತದೆ.

ಸಂಘರ್ಷದಲ್ಲಿ ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು. ತದನಂತರ ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. ಪರಿಣಾಮವಾಗಿ ೧೮೨೪ ಡಿಸೆಂಬರ್ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಡಿಸೆಂಬರ್ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೯ ಫೆಬ್ರುವರಿ ರಂದು ನಿಧನಹೊಂದುತ್ತಾಳೆ. ಮುಂದೆ ಮೇ ೨೦ರಂದು ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ ಹೋರಾಟ ನಿಂತಿರುವುದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ.

ಮೇ ೧೮೩೦ ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦ ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ ೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿ.

*****

 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

 

ಪೀಠಿಕೆ: ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟ ತಿರುವಿದಾಗ ಕಿತ್ತೂರಿನ ಹೆಸರು ಪ್ರಸ್ತಾಪವಾದ ಕೂಡಲೇ ನೆನಪಾಗುವವರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ರಾಣಿ ಚನ್ನಮ್ಮನ ಬಲಗೈ ಬಂಟನಂತಿದ್ದ ರಾಯಣ್ಣನನ್ನು ಬ್ರಿಟಿಷರು ಮೋಸದಿಂದ ಬಂಧಿಸಿ, ನಂದಗಡದಲ್ಲಿ ಗಲ್ಲಿಗೇರಿಸಿ ಇಂದಿಗೆ 191 ವರ್ಷಗಳಾದವು.

 

   ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡಿ ಗಲ್ಲಿಗೇರಿದವರ ಸಾಲು-ಸಾಲು ಚರಿತ್ರೆಯೇ ಇದೆ. ಅಂಥವರಲ್ಲಿ ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ರಾಯಣ್ಣ ಗಲ್ಲಿಗೇರಿದ ಅವಿಸ್ಮರಣೀಯ ದಿನ ಜನವರಿ 26. ವಿಶೇಷವೆಂದರೆ ರಾಯಣ್ಣನ ಜನ್ಮದಿನಾಂಕದಂದೇ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲ್ಪಡುತ್ತಿದೆ. ಅದೇ ರೀತಿ, ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನವೇ ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.

 

ಹಿನ್ನೆಲೆ:    ಮಲಪ್ರಭೆಯ ಮಡಿಲಲ್ಲಿರುವ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬುದು ರಾಯಣ್ಣನ ಹುಟ್ಟೂರು. ಸಂಗೊಳ್ಳಿ ಕಿತ್ತೂರಿನಿಂದ 14 ಕಿ.ಮೀ. ದೂರವಿದೆ. ಮೂಲ ಹೆಸರು ರಾಯಪ್ಪ. ಪೂರ್ಣ ಹೆಸರು ರಾಯಣ್ಣ ಭರಮಣ್ಣ ರೋಗಣ್ಣವರ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ಮಲ್ಲಸರ್ಜ ದೇಸಾಯಿಯಿಂದ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ಪಡೆದಿದ್ದ. ತಂದೆ ಬರಮಪ್ಪ ಮತ್ತು ತಾಯಿ ಕೆಂಚವ್ವ ದಂಪತಿಗಳ ಮಗನಾಗಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15, 1798 ರಂದು. ದಂಪತಿಗೆ ಮೂವರು ಗಂಡು ಮಕ್ಕಳು. ಕೊನೆಯ ಮಗನೇ ರಾಯಣ್ಣ. ಇವರದ್ದು ಕೃಷಿ ನಿರತ ಹಾಲುಮತಕ್ಕೆ ಸೇರಿದ ಕುಟುಂಬ. ತಂದೆ ಬರಮಪ್ಪ ಊರು ಮಂದಿಗೆ ಕಾಡುತ್ತಿದ್ದ ಹುಲಿಯೊಂದನ್ನು ಕತ್ತಿಯಿಂದ ಇರಿದು ಕಿತ್ತೂರಿನ ರಾಜ ಮಲ್ಲಸರ್ಜನ ಪ್ರೀತಿಗೆ ಪಾತ್ರರಾಗಿದ್ದರು. ಮಲ್ಲಸರ್ಜನು ಅದಕ್ಕಾಗಿ ಭರಮಪ್ಪನಿಗೆ ಭೂಮಿಯನ್ನು ಮಾನ್ಯ ಮಾಡಿಕೊಟ್ಟಿದ್ದನು.  ಇದರಿಂದ ರಾಯಣ್ಣನ ಮನೆತನ ಕಿತ್ತೂರು ಸಂಸ್ಥಾನದಲ್ಲಿ ಹೆಸರುವಾಸಿಯಾಗಿತ್ತು. ಹುಟ್ಟೂರಲ್ಲೇ ಬೆಳೆದ ರಾಯಣ್ಣ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ.

 

  ಏಕೆಂದರೆ, ಸಂಗೊಳ್ಳಿ ಗರಡಿಮನೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತುಂಬಾ ಹೆಸರು ಪಡೆದಿತ್ತು. ನೆರೆಯ ಎಲ್ಲ ಹಳ್ಳಿಗಳ ಯುವಕರು ಸಂಗೊಳ್ಳಿಯ ಗರಡಿಮನೆಯಲ್ಲಿ ಬಂದು ಕತ್ತಿವರಸೆ, ಗುರಿಹೊಡೆತ, ಕವಣೆ ಎಸೆತ ಮತ್ತು ದೊಣ್ಣೆ ವರಸೆಗಳನ್ನು ಕಲಿಯುತ್ತಿದ್ದರು. ಚಿಕ್ಕಂದಿನಿಂದಲೂ ರಾಯಣ್ಣ ಇದೇ ಗರಡಿಯಲ್ಲಿ ತನ್ನ ಹೊತ್ತು ಕಳೆದು ಪಳಗಿದ್ದ. ಎಲ್ಲ ಕಲೆಗಳನ್ನು ಚೆನ್ನಾಗಿ ರೂಡಿಸಿಕೊಂಡಿದ್ದ ರಾಯಣ್ಣ, ವೇಗವಾಗಿ ಓಡುವುದರಲ್ಲಂತೂ ಎತ್ತಿದಕೈ.

 

   ಅದು ಸಾ... 1820 ಆಸುಪಾಸಿನ ಅವಧಿ. ರಾಯಣ್ಣನಿಗೆ 22-23 ವರ್ಷ ವಯಸ್ಸು. ಬಾಳಪ್ಪ ಸಾಧುನವರ, ಬಿಚ್ಚುಗತ್ತಿ ಚನ್ನಬಸಪ್ಪ ರಾಯಣ್ಣನ ಗೆಳೆಯರು. ಎಲ್ಲರೂ ಸಾಹಸಿಗರು. ರಾಯಣ್ಣನಂತೂ ಗುರಿ ಹೊಡೆಯುವುದರಲ್ಲಿ ನಿಪುಣ ಅಷ್ಟೇ ಅಲ್ಲ ಧೈರ್ಯಶಾಲಿಯೂ ಆಗಿದ್ದ. ಅದೊಂದು ದಿನ ಕಿತ್ತೂರು ಅರಮನೆಯಿಂದ ಮೂವರಿಗೆ ಸಂದೇಶವೊಂದು ಬಂದಿತು. ಅರಮನೆಯ ಅಂಗರಕ್ಷಕರಾಗಲು ಬನ್ನಿ ಎಂಬುದು ಅದರ ಒಕ್ಕಣೆ. ಹಾಗೆ ಅರಮನೆಗೆ ಕಾಲಿಟ್ಟ ರಾಯಣ್ಣ ಬಲುಬೇಗ ರಾಣಿ ಚನ್ನಮ್ಮರ ಬಲಗೈ ಬಂಟನಾದ. ಬಲಿಷ್ಠವಾದೊಂದು ಸೈನ್ಯವನ್ನೂ ಕಟ್ಟಿದ.

 

   ಸಾ... 1824ರಲ್ಲಿ ನಡೆದ ಮೊದಲ ಯುದ್ಧದಲ್ಲಿ ಬ್ರಿಟಿಷರಿಗೆ ಸೋಲುಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ. ಸಂಗ್ರಾಮದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಕೊಲ್ಲಲ್ಪಟ್ಟ. ಯುದ್ಧದ ಗೆಲುವಿನಿಂದ ಆರಂಭದಲ್ಲಿ ಕಿತ್ತೂರಿನಲ್ಲಿ ಸಂಭ್ರಮ ನೆಲೆಸಿತ್ತಾದರೂ, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಕ್ಕೆ ಸಂಬಂಧಿಸಿದ ಹಲವು ಮುನ್ಸೂಚನೆಗಳು ಸಿಕ್ಕಿದ್ದವು. ಸೋಲಿನಿಂದ ಮುಖಭಂಗಕ್ಕೊಳಗಾದ ಬ್ರಿಟಿಷರಲ್ಲಿ ಕಿತ್ತೂರಿನ ಬಗೆಗೆ ಅಸಮಾಧಾನ, ಆಕ್ರೋಶ ಹೆಚ್ಚಾಯಿತು. ಕಿತ್ತೂರಿನ ಸೇನೆಯನ್ನು ನೇರ ಯುದ್ಧದಲ್ಲಿ ಸುಲಭವಾಗಿ ಸೋಲಿಸಲಾಗದು ಎಂಬುದನ್ನು ಮನಗಂಡ ಬ್ರಿಟಿಷರು, ಹತ್ತಾರು ಆಸೆ-ಆಮಿಷಗಳನ್ನು ತೋರಿಸಿ, ಕಿತ್ತೂರಿನ ಅರಮನೆಯ ಪ್ರಮುಖರನ್ನು ಬುಟ್ಟಿಗೆ ಬೀಳಿಸಿಕೊಂಡರು. ಗೆಲುವು ಬ್ರಿಟಿಷರದಾಯಿತು. ಸೆರೆಸಿಕ್ಕ ರಾಜಮನೆತನದವರನ್ನು ಸೆರೆವಾಸಕ್ಕೆ ಕಳುಹಿಸಿದರು.

 

   ಆದರೆ ರಾಯಣ್ಣ ಬ್ರಿಟಿಷರ ವಿರುದ್ಧದ ಹೋರಾಟವನ್ನು ಮುಂದುವರಿಸಿದ. ಅವನು ಚನ್ನಮ್ಮನ ದತ್ತುಪುತ್ರ ಶಿವಲಿಂಗ ಸರ್ಜನ ಬೆಂಬಲಕ್ಕೆ ನಿಂತು, ಅವನನ್ನು ಕಿತ್ತೂರಿನಲ್ಲಿ ಅಧಿಕಾರಕ್ಕೆ ತರಲು ಯತ್ನಿಸಿದನು. ಅದಕ್ಕಾಗಿ ನಂಬಿಕಸ್ಥ ಸ್ನೇಹಿತರ ಗೆರಿಲ್ಲಾ ಪಡೆಯೊಂದನ್ನು ಕಟ್ಟಿದನು. ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದ. ಸಾಮ್ರಾಜ್ಯಷಾಹಿ ಬ್ರಿಟಿಷರು ಬಡವರಿಂದ ದೋಚಿದ್ದ ಅಪಾರ ಸಂಪತ್ತನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಸರ್ಕಾರಕ್ಕೆ ಸೇರಿದ್ದ ಹತ್ತು ಹಲವು ಕಡತಗಳು, ಮಹತ್ವದ ದಾಖಲೆಗಳನ್ನು ಸುಟ್ಟು ಕರಕಲು ಮಾಡಿದ. ಬಡಜನರನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಅಪಾರ ಹಾನಿ ಮಾಡುವ ಜತೆಗೆ, ಸಿಂಹಸ್ವಪ್ನವಾಗಿ ಕಾಡಿದ್ದ. ಅಕ್ಷರಶಃ ಕ್ರಾಂತಿಕಾರಿ ಎನಿಸಿಕೊಂಡಿದ್ದ.

 

   ಹೀಗೆ ಸಂಗ್ರಾಮದ ನೊಗ ಹೊತ್ತ ಚನ್ನಮ್ಮನ ಬಲಗೈ ಬಂಟನನ್ನು ಬಲೆಗೆ ಬೀಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಅವಶ್ಯವಿರುವ ಎಲ್ಲ ತಂತ್ರಗಳನ್ನು ರೂಪಿಸಿತ್ತು. ಆದರೆ, ಆರಂಭಿಕ ಹಂತದ ಯಾವ ಪ್ರಯತ್ನವೂ ಫಲಪ್ರದವಾಗಲಿಲ್ಲ. ಹೇಗಾದರೂ ರಾಯಣ್ಣನನ್ನು ಬಂಧಿಸಬೇಕು ಎನ್ನುವ ಬ್ರಿಟಿಷ್ ಅಮಲ್ದಾರ್ಕೃಷ್ಣರಾವ್ನೆರವಿಗೆ ಸಂಗೊಳ್ಳಿಯ ಕರಣಿಕ ಮತ್ತು ಜಮೀನ್ದಾರ ಬಾಳಪ್ಪ ರಂಗನಗೌಡ ನಿಂತನು. ಇವರಿಬ್ಬರ ನೆರವಿಗೆ ಬಂದದ್ದು ರಾಯಣ್ಣನ ಮಾವ ಲಕ್ಷ್ಮಣ. ಸ್ವತಃ ಮಾವನಿಂದಲೇ ಮೋಸಕ್ಕೊಳಗಾದ ರಾಯಣ್ಣ ಬ್ರಿಟಿಷರ ಬಲೆಗೆ ಬಿದ್ದ. ಬ್ರಿಟಿಷರ ಕೈಗೆ ಸಿಗದೇ ಭೂಗತನಾಗಿದ್ದ ರಾಯಣ್ಣ ಒಮ್ಮೆ ಬೆಣಚಿ ಬಳಿಯ ದೋರಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಆಂಗ್ಲ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣನ ಖಡ್ಗ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ವಿಧಿಯಿಲ್ಲದೆ ರಾಯಣ್ಣ ಆಂಗ್ಲರ ಕೈವಶವಾಗಬೇಕಾಯಿತು.

 

   ಸೆರೆಸಿಕ್ಕ ರಾಯಣ್ಣ ಮತ್ತು ಅವನ ಸಹಚರರ ಸೈನಿಕ ವಿಚಾರಣೆ 1830 ಡಿಸೆಂಬರ್‌ 16ರಂದು ನಡೆದು, ವಿಚಾರಣಾಧಿಕಾರಿ ಜಿ. ವಿ. ಅಂಡರ್ಸನ್ರಾಯಣ್ಣ ಮತ್ತವನ 13 ಸಹಚರರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ. ಇದಾದ ಎರಡು ವಾರಗಳ ನಂತರ ಮುಂಬೈ ಗವರ್ನರ್ಸಮ್ಮುಖದಲ್ಲಿ ಮರುವಿಚಾರಣೆ ನಡೆದು, ಮರಣದಂಡನೆಯನ್ನು ರಾಯಣ್ಣ ಮತ್ತವನ ಏಳು ಜನ ಮಿತ್ರರಿಗೆ ಸೀಮಿತಗೊಳಿಸಲಾಯಿತು. ಉಳಿದವರನ್ನು ದೇಶದಾಚೆಗೆ ಗಡಿಪಾರು ಮಾಡಲಾಯಿತು. ಕೊನೆಗೆ 1831 ಜನವರಿ 26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಊರ ಹೊರಗಿನ ಆಲದ ಮರಕ್ಕೆ ಮೊದಲು ರಾಯಣ್ಣನನ್ನು ನಂತರ ಉಳಿದವರನ್ನು ನೇಣಿಗೇರಿಸಿದರು. ರಾಯಣ್ಣನ ಮನೆತನದ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತು. ರಾಯಣ್ಣನೊಂದಿಗೆ ಗಲ್ಲಿಗೇರಿದವರು ಬಾಲಾನಾಯಕ, ಬಸ್ತವಾಡ; ಬಸವಲಿಂಗಪ್ಪ, ಹಣಬರಟ್ಟಿ; ಕಲಬಸಪ್ಪ, ಬೆಳವಾಡಿ; ಭೀಮಾ, ಹೋಗರ್ತಿ; ಕೆಂಚಪ್ಪ, ಸಂಗತಿಕೊಪ್ಪ ಮತ್ತು ಅಪ್ಪಾಜಿ, ಸುತ್ತುಗಟ್ಟಿ. ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು: ರುದ್ರನಾಯಕ  (೫೦), ಬೆಳವಡಿ;  ಎಲ್ಲಾನಾಯಕ  (೪೦), ಬೆಳವಡಿ; ಅಪ್ಪೂಣಿ  (೪೦), ತಿಗೋಡಹಳ್ಳಿ; ರಾಣೋಜಿ (೩೦) ಮಚ್ಚಿಗಡ; ಕೊನೇರಿ (೪೦), ತೋಪಿನಕಟ್ಟೆ ಮತ್ತು  ನೇಮಣ್ಣ  (೪೦), ಕೊಡಚವಾಡಿ.

 

   ಗಲ್ಲಿಗೇರಿಸುವ ಮುನ್ನ ಆಂಗ್ಲ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, “ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕುಎಂದು ಸಿಂಹದಂತೆ ಗರ್ಜಿಸಿದ್ದ ವೀರ!

 

ಮರಣದ ನಂತರ:   ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಸಸಿ ನೆಡುವ ಮೂಲಕ ತನ್ನ ಗೆಳೆಯರಿಗೆ ಅಂತಿಮ ನಮನ ಸಲ್ಲಿಸಿದನು.  ಅಂದು ನೆಟ್ಟ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ನಮ್ಮ ರಾಷ್ಟ್ರೀಯ ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.

 

   ರಾಯಣ್ಣನ ನಿಸ್ವಾರ್ಥ ಹೋರಾಟ,  ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ.  ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ.  ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು.  ಯಾವುದೇ ಸ್ವಾರ್ಥವಿಲ್ಲದೇ ದೇಶಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ದೇಶಭಕ್ತ ರಾಯಣ್ಣ. ಬಡತನದಲ್ಲಿದ್ದರೂ ದೂರದೃಷ್ಟಿ, ಸಂಘಟನಾ ಚಾತುರ್ಯ, ನಾಡನಿಷ್ಠೆಯ ಮೂಲಕ ಬ್ರಿಟಿಷರ ಹುಟ್ಟಡಗಿಸಿದ್ದು ಮಹಾನ್ ಸಾಧನೆಯೇ ಸರಿ. ಅವರ ಇತಿಹಾಸವನ್ನು ಇಂದಿನ ಯುವಪೀಳಿಗೆ ಅಧ್ಯಯನ ಮಾಡುವುದು ಅವಶ್ಯ ಮತ್ತು ಅನಿವಾರ್ಯವಾಗಿದೆ. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.

*****

ಹಲಗಲಿಯ ಬೇಡರು

ಪೀಠಿಕೆ: 1857ರ ಮಹಾದಂಗೆಯ ನಂತರ ಭಾರತೀಯರ ಸಶಸ್ತ್ರದ ಬಂಡಾಯಗಳಿಂದಾಗಿ ಭಯಭೀತರಾದ ಬ್ರಿಟಿಷರು ಅವರಿಂದ ಎಲ್ಲಾ ಶಸ್ತ್ರಾಸ್ತ್ರ ಗಳನ್ನೂ ಕಿತ್ತುಕೊಳ್ಳುವ ಸಂಚು ಹೂಡಿದರು. ಅದಕ್ಕಾಗಿ ಸುರಕ್ಷತೆಯ ನೆಪ ಒಡ್ಡಿ ಎಲ್ಲಾ ಭಾರತೀಯರೂ ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಕಂಪೆನಿ ಸರ್ಕಾರಕ್ಕೆ ಒಪ್ಪಿಸಬೇಕು ಮತ್ತು ಯಾವುದೇ ಭಾರತೀಯನು ಶಸ್ತ್ರಾಸ್ತ್ರಗಳನ್ನು ಉಪಯೋಗಿಸಬೇಕಾದರೆ ಆಂಗ್ಲ ಸರ್ಕಾರದಿಂದ ಅನುಮತಿ ಪಡೆಯಬೇಕೆಂಬ  ನಿರ್ಬಂಧ ಹಾಕಿ, ಬ್ರಿಟಿಷರು ಜಾರಿಗೆ ತಂದಿದ್ದ ಶಸ್ತ್ರಾಸ್ತ್ರ ನಿರ್ಬಂಧ ಕಾಯ್ದೆಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಹಲಗಲಿ ಬೇಡರು ಆಂಗ್ಲರ ವಿರುದ್ಧ ನೇರ ಯುದ್ಧಕ್ಕೆ ಇಳಿದಿದ್ದರು.

ಹಲಗಲಿ ಬಂಡಾಯ ಎಂದರೇನು?: ನಿಜವಾದ ಅರ್ಥದಲ್ಲಿ ೧೮೨೪ರಂದೇ ಪ್ರಾರಂಭವಾದ ಬ್ರಿಟೀಷ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಪಾಲು ಗಮನಾರ್ಹವೇ ಆಗಿದೆ. ಇಂತಹ ಬಂಡಾಯ ಗಳಲ್ಲಿ ಕಿತ್ತೂರು ದಂಗೆ, ಕೊಡಗಿನ ಬಂಡಾಯ, ಸುರಪುರದ ಬಂಡಾಯ ಮತ್ತು ಹಲಗಲಿ ಬಂಡಾಯಗಳು ಪ್ರಮುಖವಾದವುಗಳು. ಇವುಗಳಲ್ಲಿ ಎಲ್ಲರ ಗಮನ ಸೆಳೆಯುವ ಬಂಡಾಯ ವೆಂದರೆ ಹಲಗಲಿ ಎಂಬ ಸಣ್ಣ ಊರಿನ ದೊಡ್ಡಬಂಡಾಯ. ಈ ಬಂಡಾಯ ಕಥನ ರೋಮಾಂಚನಕಾರಿಯಾದುದು ಮತ್ತು ವೀರೋಚಿತವಾದುದು.

   ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ೧೫೦ ವರ್ಷ ಹೇಗೋ ಹಾಗೆಯೇ ಹಲಗಲಿ ಬಂಡಾಯಕ್ಕೆ ಸರಿಯಾಗಿ ೧೫೦ ವರ್ಷಗಳು ತುಂಬುತ್ತದೆ. ೧೮೫೭ರ ಸರಣಿ ಬಂಡಾಯಗಳಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಸಂಭವಿಸಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಎಂಬ ಗ್ರಾಮದಲ್ಲಿ. ಇದು ಹಲಗಲಿಯ ಬೇಡರ ಬಂಡಾಯವೆಂದೇ ಪ್ರತೀತಿ. ಹಲಗಲಿ ಗುಡ್ಡದ ಓರೆಯಲ್ಲಿರುವ ಸಣ್ಣ ಗ್ರಾಮ. ಇಲ್ಲಿನ ನಾಯಕ ಸಮುದಾಯ ದವರು ಜೀವನೋಪಾಯಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಅಪರಾಧಿ ಪ್ರವೃತ್ತಿಯಿಂದಲ್ಲ. ಬ್ರಿಟೀಷ್ ಸರಕಾರ ಜಾರಿಗೊಳಿಸಿದ ಶಸ್ತ್ರಾಸ್ತ್ರ ಅಧಿಸೂಚನೆಯನ್ನು ಪಾಲಿಸಲು ನಿರಾಕರಿಸಿ, ತಮ್ಮ ಆಯುಧಗಳನ್ನು ಸರಕಾರಕ್ಕೆ ಒಪ್ಪಿಸದೇ ೧೮೫೭ರ ನವೆಂಬರ್‌ನಲ್ಲಿ ಅಲ್ಲಿನ ಬೇಡರು ಪ್ರತಿಭಟಿಸಿದ್ದೇ ಹಲಗಲಿ ಬಂಡಾಯ.

      ಬ್ರಿಟೀಷ್ ಸರಕಾರದ ದಬ್ಬಾಳಿಕೆ ದಮನಕಾರಿ ಪ್ರವೃತ್ತಿಗೆ ತೀರ ಮುಗ್ಧರಾಗಿದ್ದ ವೀರನಾಯಕ ಸಮುದಾಯದ ನಾಯಕರು ತಮಗರಿವಿಲ್ಲದೇ ಬಲಾಢ್ಯ ಬ್ರಿಟೀಷ್ ಸಾಮ್ರಾಜ್ಯದ ಜೇನುಗೂಡಿಗೆ ಕಲ್ಲೆಸೆದು ಕೆಣಕಿದ್ದರು. ಅದರ ಪರಿಣಾಮ ಮಾತ್ರ ಘೋರ. ನಾವು ಭಾರತದ ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ಅಂಗವಾಗುತ್ತಿದ್ದೇವೆ ಎಂಬ ಪರಿಕಲ್ಪನೆಯೇ ಇಲ್ಲದ ಕೆಚ್ಚೆದೆಯ ಕಲಿಗಳ ಈ ಬಂಡಾಯ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಊರು ಚಿಕ್ಕದಿದ್ದರೂ, ಜನ ಸ್ವಲ್ಪವೇ ಇದ್ದರೂ ಬ್ರಿಟೀಷ್ ಸರಕಾರದ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯ ವಿರುದ್ಧ ತಿರುಗಿ ನಿಂತ ಈ ವೀರರ ಚರಿತ್ರೆ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿಯೇ ಉಳಿಯುತ್ತದೆ.

ಬಂಡಾಯದ ಕಾರಣಗಳು: ಬೇಟೆಯೇ ಜೀವನಾಂಶಕ್ಕೆ ಪೂರಕವಾಗಿದ್ದ ಈ ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಶಸ್ತ್ರಾಸ್ತ್ರಗಳು ಅಗತ್ಯವಾದದ್ದು ಬೇಟೆಗೆ ಹೊರತು ಹೊಡೆದಾಟಕ್ಕಲ್ಲ. ಆದರೆ ಶಸ್ತ್ರಾಸ್ತ್ರಗಳನ್ನು ಮರಳಿ ಪ್ರಭುತ್ವಕ್ಕೆ ಒಪ್ಪಿಸಬೇಕೆಂಬ ಕಂಪನಿ ಸರಕಾರದ ಆದೇಶ ಬೇಡ ಸಮುದಾಯದ ಜೀವನೋಪಾಯ ಕ್ಕೇ ಸಂಚಕಾರ ತಂದಿತ್ತು. ಈ ದಬ್ಬಾಳಿಕೆಯನ್ನು ಸಹಜವಾಗಿ ಅವರು ವಿರೋಧಿಸಿದರು. ಅವರಿಗೆ ಮರಾಠಾ ಸೈನಿಕ ಬಾಬಾಜಿ ನಿಂಬಾಳಕರ ಎಂಬುವನು ಬ್ರಿಟೀಷರ ವಿರುದ್ಧ ಬಂಡೇಳುವಂತೆ ಪ್ರೋತ್ಸಾಹ ಕೊಡುತ್ತಿದ್ದ.

ಸಂಧಾನ ವಿಫಲ: ಈ ನಡುವೆ ಕಂಪನಿಸರಕಾರ ಹಾಗೂ ಹಲಗಲಿಯ ಹೋರಾಟಗಾರರ ನಡುವೆ ಮಧ್ಯಸ್ಥಿಕೆಗಾರನಾಗಿ ಕಣದರಗಿಯ ಕೃಷ್ಣ ರಾವ್ ಎಂಬ ಕಾರ್ಯಭಾರಿ ಸಂಧಾನಕ್ಕೆ ಪ್ರಯತ್ನಿಸಿದರೂ ಅವನ ಸಂಧಾನ ಫಲಕಾರಿಯಾಗಲಿಲ್ಲ. ಅವರ ಜೀವನಾಧಾರವೇ ಬೇಟೆ. ಆ ಬೇಟೆಗೆ ಬೇಕಾದ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸಿದರೆ ಜೀವಕ್ಕೆ ಸಂಚಕಾರ ಬಂದೀತು ಎಂಬ ಭಾವನೆಯಿಂದ ಅವರು ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸಲು ನಿರಾಕರಿಸಿದರು. ಜೀವ ಹೋದರೂ ಸರಿ ಹತ್ಯಾರಗಳನ್ನು ಕೊಡುವುದಿಲ್ಲ ಎಂದು ತಿಳಿಸಿದರು.

ಬಂಡಾಯದ ಘಟನೆಗಳು: ಮುಂದಿನದು ಮಾತ್ರ ರಕ್ತರಂಜಿತ ಅಧ್ಯಾಯವೇ. ಹಾಗೆ ನೋಡಿದರೆ ಬ್ರಿಟೀಷರ ವಿರುದ್ಧ ಹೋರಾಡುವುದಕ್ಕೆಂದೇ ಈ ವೀರಬೇಡರು ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ. ಆದರೆ ಬ್ರಿಟೀಷರು ಮೊದಲೇ ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದರು. ಅವರು ಹಲಗಲಿಯ ಬೇಡರ ಸಹಜ ವಾದ ಆಸೆ ಮತ್ತು ಅಭಿಮಾನವನ್ನು ಅಪಾರ್ಥ ಮಾಡಿಕೊಂಡರು. ಬೇಡರು ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಮರಳಿಸದಿರಲು ಇರುವ ಸಕಾರಣಗಳನ್ನು ಬ್ರಿಟೀಷ್ ಸರಕಾರ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು.

   ಬೇಡರ ಈ ನಿರಾಕರಣೆಗೆ ಕಂಪನಿ ಸರಕಾರ ೧೮೫೭ರ ನವೆಂಬರ್ ೨೬ರ ಮಧ್ಯರಾತ್ರಿ ೬೦೦ ಅಶ್ವಾರೂಢ ಸೈನಿಕರೊಂದಿಗೆ ಹಲಗಲಿಯನ್ನು ಮುತ್ತಿತು. ದಾಳಿಗೆ ಹೆದರದ ಬೇಡರು ಪ್ರತಿಯಾಗಿ ಅದನ್ನು ಎದುರಿಸಿದರು. ರಾತ್ರಿಯ ಹೊತ್ತು ನಿಕರದ ಹೋರಾಟವೇ ನಡೆಯಿತು. ಫಸ್ಟ್ ಅಸಿಸ್ಟೆಂಟ್ ಮ್ಯಾಜಿಸ್ಟ್ರೇಟ್ ವಿಲಿಯಂ ಹೆನ್ರಿ ಹೆವಲಾಕ್ ಎಂಬ ಅಧಿಕಾರಿ ಬೇಡರ ಈ ದಾಳಿಯಲ್ಲಿ ಹತನಾದ. ಇದರಿಂದ ಹೆದರಿದ ಕರ್ನಲ್ ನೆಟನ್‌ಕರ್ ಹೆಚ್ಚಿನ ಸೈನ್ಯಕಳಿಸುವಂತೆ ಕೇಳಿಕೊಂಡ.

   ಮರುದಿನ ಇನ್ನಷ್ಟು ನಿಕರದ ಹೋರಾಟನಡೆದು ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿದವು. ನಾಯಕ ಸಮುದಾಯದ ಈ ಕೆಚ್ಚೆದೆಯ ಕಲಿತನಕ್ಕೆ ಹೆದರಿ, ಬ್ರಿಟೀಷ್ ಸೇನೆ ಮಧ್ಯರಾತ್ರಿ ಊರಿಗೆ ಬೆಂಕಿಹಚ್ಚಿತು. ಬೆಂಕಿಯ ದಳ್ಳುರಿಗೆ ಸಿಕ್ಕು ಆರ್ತನಾದ ಗೈದ ಮಕ್ಕಳ ಮತ್ತು ದನಕರುಗಳ ರಕ್ಷಣೆಗೆ ಮುಂದಾದ ಬೇಡರ ಪಡೆಯ ವೀರರನ್ನು ಸೇನೆ ಗುಂಡಿಟ್ಟು ಕೊಂದಿತು. ಜಡಗಾ ಮತ್ತು ಬಾಲಾ ಎಂಬ ಗ್ರಾಮದ ಬೇಡರ ಮುಖಂಡರು ದಿಟ್ಟ ಹೋರಾಟ ನಡೆಸಿದರೂ ಬ್ರಿಟೀಷ್ ಸೇನೆಯ ವಿರುದ್ಧ ನಿಲ್ಲಲಾಗಲಿಲ್ಲ.

   ದಾಳಿಯಿಂದ ತಪ್ಪಿಸಿಕೊಳ್ಳಲು ಹತ್ತಿಕಟ್ಟಿಗೆಯಲ್ಲಿ ಅವಿತು ಕೊಂಡಿದ್ದ ೨೩ ಜನರನ್ನು ಸೇನೆ ಸುಟ್ಟುಹಾಕಿತು. ಹೀಗೆ ಒಂದು ರಕ್ತರಂಜಿತ ಅಧ್ಯಾಯ ಕೊನೆಗೊಂಡಿತು. ನಂತರ ಬ್ರಿಟೀಷ್ ಸೇನೆ ಸುಮಾರು ೨೯೦ ಜನರನ್ನು ಸೆರೆ ಹಿಡಿಯಿತು. ಇವರಲ್ಲಿ ಜಡಗಾ-ಬಾಲಾರನ್ನು ಒಳಗೊಂಡಂತೆ ಅನೇಕ ಬೇಡರನ್ನು ಮುಧೋಳ ಮತ್ತು ಹಲಗಲಿಯಲ್ಲಿ ಕಂಪೆನಿ ಸರ್ಕಾರ ಗಲ್ಲಿಗೇರಿಸಿತು. ಹೀಗೆ ಹಲಗಲಿ ಬೇಡರ ಬಂಡಾಯವನ್ನು ಬ್ರಿಟಿಷ್‌ ಸೇನೆ ಹತ್ತಿಕ್ಕಿತು.

   ಅಂತು ತಮ್ಮ ಆತ್ಮರಕ್ಷಣೆಗೆ, ಹಾಗೆಯೇ ಸೂರ್ಯ ಮುಳುಗದ ಸಾಮ್ರಾಜ್ಯದ ದಬ್ಬಾಳಿಕೆಗೆ ಮಣಿಯಬಾರದು ಎಂಬ ಬೇಡರ ಕೆಚ್ಚೆದೆಯ ಹೋರಾಟ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸಂವಾದಿಯಾಗಿ ನಿಲ್ಲಬಲ್ಲ ತಾಕತ್ತು ಹೊಂದಿದೆ. ದಿಟ್ಟ ಹೋರಾಟ ನಡೆಸುವ ಮೂಲಕ ಬ್ರಿಟೀಷರಿಗೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸ್ವಾಭಿಮಾನದ ಪರಿಚಯ ಮಾಡಿಸಿದ ಹಲಗಲಿಯ ಬೇಡರ ಈ ಬಲಿದಾನ ಚಿರಸ್ಥಾಯಿಯಾಗಿ ಉಳಿಯುತ್ತದೆ.

*****

ಸಿಂಧೂರ ಲಕ್ಷ್ಮಣ.

ಸಿಂಧೂರ ಲಕ್ಷ್ಮಣನು೧೮೯೮ - ೧೯೨೨) ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದನು. ಅವನು ತನ್ನದೇ ಆದ ಹಿಂಸಾತ್ಮಕ ರೀತಿಯಲ್ಲಿ ಆಂಗ್ಲ ಸರಕಾರದ ವಿರುದ್ಧ ಸಮರ ಸಾರಿದ್ದನು.

ಜನನ:- ಈಗಿನ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಿಂಧೂರ್ ಗ್ರಾಮದಲ್ಲಿ ಲಕ್ಷ್ಮಣನು ಸಾಬಣ್ಣ ಮತ್ತು ನರಸವ್ವ ಎಂಬ ದಂಪತಿಗಳಿಗೆ ಜನಿಸಿದನು. ದಂಪತಿಗಳ ಮೊದಲ ಸಾಕು ಮಗನ ಹೆಸರು ರಾಮ ಇದ್ದುದರಿಂದ ನಂತರ ಹುಟ್ಟಿದ ತಮ್ಮ ಸ್ವಂತ ಸಂತಾನಕ್ಕೆ ರಾಮನ ತಮ್ಮ ಲಕ್ಷ್ಮಣ ಎಂದು ಹೆಸರಿಟ್ಟರು.

ಜೀವನ:- ಲಕ್ಷ್ಮಣನು ಬಾಲ್ಯದಲ್ಲಿಯೇ ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿದ್ದನೆಂದು ಹೇಳಲಾಗುತ್ತದೆ. ತಂದೆಯ ಮರಣಾನಂತರ ಲಕ್ಷ್ಮಣನಿಗೆ ಸರಕಾರಿ ವಾಲೀಕಾರಿಕೆಯ ಕೆಲಸ ಒದಗಿ ಬಂದಿತು. ಅವನನ್ನು ಪ್ರತ್ಯಕ್ಷವಾಗಿ ನೋಡಿದವರು ಅವನೊಬ್ಬ ಅಜಾನುಬಾಹು, ಸ್ಪುರದ್ರೂಪಿ ಸುಂದರಕಾಯದವನಾಗಿದ್ದನೆಂದು ಹೇಳುವುದುಂಟು. ೧೯೨೦ರ ವೇಳೆಯಲ್ಲಿ ಭಾರತದಾದ್ಯಂತ ಅಸಹಕಾರ ಚಳುವಳಿ ಆವರಿಸಿದಾಗ ಲಕ್ಷ್ಮಣನು ತನ್ನದೇ ಆದ ರೀತಿಯಲ್ಲಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿದನು. ಅವನು ಐದು ಜನ ಸಮಾನ ಮನಸ್ಕರನ್ನು ಜೊತೆಗೂಡಿಸಿಕೊಂಡು ಒಂದು ಗುಂಪು ರಚಿಸಿ, ಆಂಗ್ಲ ಸರಕಾರವು ಶೇಖರಿಸಿದ್ದ ತೆರಿಗೆ ಹಣವನ್ನು ಖಜಾನೆಯಿಂದ ಲೂಟಿ ಮಾಡಲು ಪ್ರಾರಂಭಿಸಿದನು. ಲಕ್ಷ್ಮಣನು ಕೇವಲ ಆಂಗ್ಲರ ವಿರುದ್ಧವಷ್ಟೇ ಅಲ್ಲದೇ ನಿರ್ದಯಿ ಶ್ರೀಮಂತರ ಹಣವನ್ನು ಕೂಡ ದೋಚುತ್ತಿದ್ದನು. ರೀತಿ ದೋಚಿದ ಹಣವನ್ನು ತನ್ನ ಸುತ್ತ ಇರುವ ಬಡವರಿಗೆ ಹಂಚಿ ಸಹಾಯ ಮಾಡುತ್ತಿದ್ದನು. ಅವನಿಂದ ಈ ರೀತಿ ಸಹಾಯ ಪಡೆದ ಜನರೇ ಲಕ್ಷ್ಮಣನಿಗೆ ಅಡಗುದಾಣ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸುತ್ತಿದ್ದರು. ಇದರಿಂದ ಲಕ್ಷ್ಮಣ ನಿಜವಾಗಿಯೂ ಬಡವರ ಬಂಧುವಾಗಿದ್ದನು. ಆದರೆ ಅವನು ಆಂಗ್ಲ ಸರಕಾರಕ್ಕೆ ತಲೆ ನೋವಾಗಿದ್ದ ಕಾರಣ ಸರಕಾರ ಅವನ ವಿರುದ್ಧ ವಾರಂಟ್ ಹೊರಡಿಸಿತ್ತು.

ಮರಣ:- ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಹತ್ತಿರದ ತೆಗ್ಗಿಯ ವೆಂಕಪ್ಪಗೌಡರಿಗೂ ಮತ್ತು ಲಕ್ಷ್ಮಣನಿಗೂ ನಿಕಟವಾದ ಗೆಳೆತನವಿತ್ತು. ಲಕ್ಷ್ಮಣನಿಗೆ ಗೌಡರು ಸಹಾಯ ಮಾಡುವುದನ್ನು ಅರಿತ ಆಂಗ್ಲರು, ಗೌಡರನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿ ಲಕ್ಷ್ಮಣನನ್ನು ಸೆರೆ ಹಿಡಿಯುವ ಅಥವಾ ಕೊಲೆಗಯ್ಯುವ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಿದರು. ಲಕ್ಷ್ಮಣನ ಜೊತೆ ಹೋರಾಡಿ ಗೆಲ್ಲುವುದು ಅಸಾಧ್ಯವೆಂದು ಅರಿತ ಗೌಡರ ವಾಲಿಕಾರರು, ಅವನನ್ನು ಹತ್ಯೆ ಮಾಡುವ ಸಂಚನ್ನು ರೂಪಿಸಿದರು. ೧೯೨೨ರ ಮಣ್ಣೇತ್ತಿನ ಅಮಾವಾಸ್ಯೆಯ ದಿನ ಲಕ್ಷ್ಮಣ ಮತ್ತು ಅವನ ಸಂಗಡಿಗರಿಗೆ ಔತಣದ ಆಹ್ವಾನ  ನೀಡಿದರು. ಲಕ್ಷ್ಮಣನು ಊಟ ಮಾಡುವಾಗ ಮೊದಲೇ ಮರೆಯಲ್ಲಿ ಅವಿತು ಕೂತಿದ್ದ ಬಂದೂಕುಧಾರಿ, ಲಕ್ಷ್ಮಣನ ಮುಂದೆ ಕಂದೀಲಿನ ನಿಶಾನೆ ಮಾಡಿದ ತಕ್ಷಣ ಗುಂಡು ಹಾರಿಸಿದನು. ಮೋಸದಿಂದ ಗುಂಡು ತಾಗಿದುದರಿಂದ ವೀರ ಸಿಂಧೂರ ಲಕ್ಷ್ಮಣ ಹತನಾದನು. ಹೀಗೆ ತನ್ನ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಲಕ್ಷ್ಮಣ ಜನರ ಮನದಲ್ಲಿ ಅಮರನಾದನು. ಸಿಂಧೂರ ಲಕ್ಷ್ಮಣನನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈಗಲೂ ಕೂಡ ಒಬ್ಬ ಜನಪ್ರಿಯ ಬಂಡಾಯ ನಾಯಕನಂತೆ ಜನ ನೆನೆಯುತ್ತಾರೆ.

*****

 

 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources