ಅಧ್ಯಾಯ ೯. ಬಾಂಬೆ-ಕರ್ನಾಟಕದಲ್ಲಿ ಗಾಂಧಿ ಚಳವಳಿಗಳು - ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಅರಣ್ಯ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಸತ್ಯಾಗ್ರಹ


ಪೀಠಿಕೆ:-    ಮಹಾತ್ಮಾ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ದೇಶದ ಉದ್ದಗಲಕ್ಕೂ ಸಂಚರಿಸಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಅಂತೆಯೇ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ತಮ್ಮ ಜೀವಿತಾವಧಿಯಲ್ಲಿ ಕರ್ನಾಟಕದ ಭಾಗಕ್ಕೆ ಒಟ್ಟು ೯ ಬಾರಿ ಭೇಟಿ ನೀಡಿದ್ದರು. ಅದರಲ್ಲಿ ಮುಂಬೈ-ಕರ್ನಾಟಕದ ಭಾಗಕ್ಕೆ ಒಟ್ಟು ಐದು ಭಾರಿ ಭೇಟಿ ನೀಡಿ ತಮ್ಮ ಚಳವಳಿಗಳಿಗೆ ಜನಬೆಂಬಲ ಕೋರಿದರು. ಅವರು ಮುಂಬೈ-ಕರ್ನಾಟಕ ಭಾಗಕ್ಕೆ ಭೇಟಿ ನೀಡಿದ ಸಂದರ್ಭಗಳೆಂದರೆ,

೧. ಬೆಳಗಾವಿಯ ಭೇಟಿಗಾಂಧೀಜಿಯವರ ಈ ಭೇಟಿಯು ೧೯೧೫ರ ಏಪ್ರಿಲ್ ೧೬ರಂದು ಆಯಿತು. ಅವರು ಮುಂಬಯಿ ಪ್ರಾಂತೀಯ ಪರಿಷತ್ತು ಸಮಾವೇಶದಲ್ಲಿ ಭಾಗವಹಿಸಲು ಸರ್ವೋದಯ ಧುರೀಣ ಕಾಕಾ ಕಾಲೇಲ್ಕರ್ ರೊಂದಿಗೆ ಬಂದಿದ್ದರು.

೨. ೧೯೧೮ಮೇ ೫ರಂದು ಮುಂಬಯಿ ಪ್ರಾಂತದ ರಾಜಕೀಯ ಪರಿಷತ್ತಿನಲ್ಲಿ ಭಾಗವಹಿಸಲು ಪಾಣಪುರಕ್ಕೆ ಬಂದಿದ್ದರು.

೩. ೧೯೨೦ ನವೆಂಬರ್ ೨೦ರಂದು ತಮ್ಮ ತತ್ವಗಳ ಸಂದೇಶ ಬೀರಲು ನಿಪ್ಪಾಣಿ, ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ, ಗದಗ ಮತ್ತು ಬೆಳಗಾವಿಗಳನ್ನು ಸಂದರ್ಶಿಸಿದ್ದರು.

೪. ೧೯೨೧ ಮೇ ೨೮ ರಂದು ವಿಜಾಪುರಕ್ಕೆ ಭೇಟಿ ನೀಡಿ ಮಹಿಳೆಯರ ಸಭೆಯಲ್ಲಿ ಪಾಲ್ಗೊಂಡರು ಮುಂದೆ ಬಾಗಲಕೋಟೆ ಸೊಲ್ಲಾಪುರಗಳಿಗೆ ಭೇಟಿ ನೀಡಿದ್ದರು.

೫. ೧೯೨೪ರಲ್ಲಿ ಬೆಳಗಾವಿಯ ೨೯ನೇ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಅವರು ಆಗಮಿಸಿದ್ದರು.

   ಗಾಂಧೀಜಿಯವರ ಇಂತಹ ಭೇಟಿಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟಗಳಿಗೆ ಅಪಾರ ಜನಬೆಂಬಲ ದೊರೆತು ಈ ಭಾಗದಲ್ಲಿಯೂ ಸಹ ಗಾಂಧೀಜಿಯವರ ಚಳವಳಿಗಳು ಯಶಸ್ವೀಯಾದವು. ಅವುಗಳ ವಿವರಗಳನ್ನು ಕೆಳಕಂಡಂತೆ ನೋಡಬಹುದು.

ಅಸಹಕಾರ ಚಳವಳಿ:-

        ಬಾರ್ದೋಲಿಯ ಕರನಿರಾಕರಣ ಚಳವಳಿಯಲ್ಲದೆ ಎಲ್ಲರ ಗಮನ ಸೆಳೆಯುವ ಇನ್ನೊಂದು ಉದಾಹರಣೆಯೆಂದರೆ ಕರ್ನಾಟಕದ ಶಿರಸಿ, ಸಿದ್ದಾಪುರ, ಅಂಕೋಲೆ ಮತ್ತು ಹಿರೇಕೆರೂರು ತಾಲ್ಲೂಕುಗಳದು. ಈ ನಾಲ್ಕೂ ತಾಲ್ಲೂಕುಗಳ ಜನ ಗಾಂಧೀಜಿಯವರ ನಿರ್ಮಲ ಕಲ್ಪನೆ ಮತ್ತು ಪವಿತ್ರಭಾವನೆಗೆ ಲೇಶವೂ ಊನ ಬಾರದಂತೆ ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಹುಲ್ಲುಬನ್ನಿ ಕರನಿರಾಕರಣ ಮುಂತಾದವುಗಳನ್ನು ನಡೆಸಿದರು. ಅಂಕೋಲೆಯದು ಒಂದು ಧ್ಯೇಯಕ್ಕಾಗಿ ನಡೆದ (1930 ಏಪ್ರಿಲ್) ಸತ್ಯಾಗ್ರಹವೆನ್ನ ಬಹುದಾದರೂ ಉಳಿದ ತಾಲ್ಲೂಕುಗಳಲ್ಲಿ ನಡೆದದ್ದು ಒಂದು ಅನಿವಾರ್ಯ ಸನ್ನಿವೇಶದಿಂದಲೂ ಪ್ರಭಾವಿತವಾದದ್ದು ಎಂಬುದನ್ನು ಮರೆಯುವಂತಿಲ್ಲ. 1931ರಲ್ಲಿ ಶಿರಸಿ-ಸಿದ್ದಾಪುರ, ಹಿರೇಕೆರೂರು ಈ ಮೂರು ತಾಲ್ಲೂಕುಗಳಲ್ಲೂ ಕ್ಷಾಮ ಆವರಿಸಿತು. ದವಸ ಧಾನ್ಯಗಳ ಧಾರಣೆಗಳು ಬಿದ್ದುವು. ಶಿರಸಿ, ಸಿದ್ದಾಪುರಗಳ ಸುವರ್ಣಾದಾಯದ ಬೆಳೆಯೆಂದರೆ ಅಡಿಕೆ. ಏನೋ ಕಾರಣದಿಂದ ಆ ಬೆಳೆ ಹಾಳಾಯಿತು. ರೂಪಾಯಿಗೆ ನಾಲ್ಕಾಣೆ (ಕಾಲುಭಾಗ) ಬೆಳೆ ಕೂಡ ರೈತರ ಕೈ ಹತ್ತಲಿಲ್ಲ. ಆ ವರ್ಷ ಕಂದಾಯ ವಸೂಲು ಮಾಡಬಾರದೆಂದು ರೈತರು ಸರ್ಕಾರದಲ್ಲಿ ಮೊರೆ ಇಟ್ಟರು. ಅದು ಬರಿಯ ಅರಣ್ಯರೋದನವಾಯಿತು. ಸರ್ಕಾರ ಆ ಮೊರೆಗೆ ಕಿವಿಗೊಡಲಿಲ್ಲ. ಕ್ಷಾಮ ಸಂಭವಿಸಿಲ್ಲವೆಂದೂ ಬೆಳೆಯಾಗಿಲ್ಲವೆಂಬ ಮಾತು ಸುಳ್ಳೆಂದೂ ಇದು ಕರನಿರಾಕರಣ ಚಳವಳಿಯೆಂದೂ ಸರ್ಕಾರ ವಾದಿಸಿತು. ಆದರೆ ಕ್ಷಾಮ ಪ್ರಾಪ್ತಿಯಾಗಿದ್ದುದು ನಿಜ. ರೈತರೂ ಕಂಗಾಲಾಗಿದ್ದುದೂ ನಿಜ. ಚಳವಳಿಯ ನಾಯಕತ್ವವನ್ನು ರಾಜಕಾರಣಿಗಳು (ಹಾಗೆಂದು ಸರ್ಕಾರದವರು ಅವರನ್ನು ಕರೆದರು) ವಹಿಸಿದ್ದರೆಂಬುದೂ ನಿಜ. ಆದರೆ ಕ್ಷಾಮವೇ ಚಳವಳಿಗೆ ಮೂಲ ಕಾರಣವೆಂಬ, ಚಳವಳಿಯ ನಾಯಕರು ರಾಜಕಾರಣಿಗಳೇ ಆದರೂ ರೈತರ ನ್ಯಾಯವಾದ ಬೇಡಿಕೆಯನ್ನು ಈಡೇರಿಸಬೇಕೆಂಬ ವಾದಕ್ಕೆ ಸರ್ಕಾರ ವಿಮುಖವಾಗಿತ್ತು.

   ಮೂರೂ ತಾಲ್ಲೂಕುಗಳ ರೈತರೂ ಶಾಸನಬದ್ಧವಾಗಿ, ಶಾಂತಿರೀತಿಯಿಂದ ನಡೆದುಕೊಂಡರು. ಇದು ಸಂಪುರ್ಣವಾಗಿ ಆರ್ಥಿಕ ದುಃಸ್ಥಿತಿಯ ಹೋರಾಟ, ರಾಜಕೀಯ ಹೋರಾಟವಲ್ಲ-ಎಂಬುದನ್ನು ಸ್ಥಾಪಿಸಿದರು. ಅರ್ಜಿಗಳನ್ನು ಹಾಕಿದರು. ಸಭೆಗಳನ್ನು ನಡೆಸಿದರು, ನಿರ್ಣಯಗಳನ್ನು ಮಾಡಿದರು; ಜಿಲ್ಲೆಯ ಅಧಿಕಾರಿಗಳನ್ನು ಕಂಡರು; ತಮ್ಮ ಕಷ್ಟಗಳನ್ನು ವಿವರಿಸಿದರು; ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೆ ದಾರಿಕಾಣದೆ ರೈತರು ಸಾಂಗವಾಗಿ ಕರನಿರಾಕರಣ ಸತ್ಯಾಗ್ರಹವನ್ನಾರಂಭಿಸಿದರು. ಸರ್ಕಾರ ದಂಡದಾರಿಯಾಯಿತು. ರೈತರ ಬೆನ್ನೂಮೂಳೆಗಳನ್ನು ಮುರಿಯಲಾರಂಭಿಸಿತು.

   ಶಿರಸಿ-ಸಿದ್ದಾಪುರಗಳ ರೈತರ ವ್ಯವಹಾರ 1923ರಿಂದ ಹಿರಿಯ ರೆವಿನ್ಯೂ ಆಧಿಕಾರಿ ಕಾಲ್ವೆನನ ಪರಿಶೀಲನೆಯಲ್ಲಿತ್ತು. ಇವೆರಡೂ ತಾಲ್ಲೂಕುಗಳಲ್ಲೂ ಈತ ಸಂಚಾರಮಾಡಿ, ಆರ್ಥಿಕ ಪರಿಶೀಲನೆ ನಡೆಸಿದ. ಕಂದಾಯದ ಮೊತ್ತವನ್ನು ಶಾಶ್ವತವಾಗಿ ಕಡಿಮೆಮಾಡಬೇಕೆಂದು ಸರ್ಕಾರಕ್ಕೆ ಸಲಹೆಮಾಡಿದ. ಆದರೆ ಸರ್ಕಾರ ಈ ಸಲಹೆಗಳನ್ನು ಪುರಸ್ಕರಿಸಲಿಲ್ಲ. ಇದರಿಂದ ಮೂರು ತಾಲ್ಲೂಕುಗಳ ರೈತರೂ ದೃಢಸಂಕಲ್ಪರಾದರು. ಕಂದಾಯವನ್ನು ಕೊಡುವುದಿಲ್ಲವೆಂದು ಹೇಳಿದರು. ಅಧಿಕಾರಿಗಳು ಜಮೀನುಗಳನ್ನು ಜಫ್ತಿಮಾಡಿದರು; ರೈತರಿಗೆ ಕೊಡಬಾರದ ಹಿಂಸೆ ಕೊಟ್ಟರು. ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡರೂ ಯಾವ ರೈತರೂ ಪ್ರತಿಭಟಿಸಲಿಲ್ಲ. ಜಮೀನು ಹರಾಜಿನಲ್ಲಿ ಸವಾಲು ಕೂಗುವವರೇ ಇರಲಿಲ್ಲ. ಎಂಟುನೂರಕ್ಕೂ ಮೀರಿ ಜಫ್ತಿಗಳಾದವು. ಇನ್ನೂರು ಮಂದಿಗೆ ಮುಟ್ಟುಗೋಲು ನೋಟೀಸ್ ಕೊಡಲಾಯಿತು. ಉಭಯ ಪಕ್ಷಗಳ ಮಧ್ಯೆ ಹೀಗೆ ಹೋರಾಟವಾಗುತ್ತಿದ್ದಾಗ, 1931ರ ಮಾರ್ಚ್ 4 ರಂದು, ಗಾಂಧೀ-ಇರ್ವಿನ್ ಒಡಂಬಡಿಕೆ ಯಾಯಿತು. ಚಳವಳಿ ನಿಂತಿತು.

ಜಮೀನುಗಳು ಹರಾಜಾಗುತ್ತಿದ್ದ ಕಾಲದಲ್ಲಿ ಸ್ವಯಂಸೇವಕರನೇಕರು ಪಿಕೆಟಿಂಗ್‌ (ಜಾಗೃತಿ ಪ್ರದರ್ಶನ)  ಮಾಡುತ್ತಿದ್ದರು. ಸರ್ಕಾರದವರು ಇವರ ಮೇಲೆಲ್ಲ ನಾನಾ ಆಪಾದನೆಗಳನ್ನು ಹೊರಿಸಿ ಮೊಕದ್ದಮೆಗಳನ್ನು ಹೂಡಿ, ವಿಚಾರಣೆಗೊಳಪಡಿಸಿ, ಇವರಿಗೆಲ್ಲ ಶಿಕ್ಷೆ ಕೊಡಿಸಿದ್ದರು. ಸ್ವಯಂಸೇವಕರನೇಕರಿಗೆ ಈ ತಾಲ್ಲೂಕು ಬಿಟ್ಟು ಹೊರಡಬೇಕೆಂದು ಆದೇಶ ಕೊಟ್ಟಿದ್ದರು. ಧಾರವಾಡ, ಬೆಳಗಾವಿ ಕಡೆಗಳಲ್ಲಿ ಮನೆಗಳ ಶೋಧನೆ ನಡೆಸಿ ಪಿತೂರಿ ಮತ್ತು ರಾಜದ್ರೋಹ ಆಪಾದನೆಗಳಿಗಾಗಿ ಹಲವರ ಮೇಲೆ ಮೊಕದ್ದಮೆಗಳನ್ನು ಹೂಡುವ ಸಿದ್ಧತೆ ನಡೆದಿತ್ತು. ಆದರೆ ಗಾಂಧಿ-ಇರ್ವಿನ್‌ ಒಡಂಬಡಿಕೆಯಿಂದಾಗಿ ಅದನ್ನೆಲ್ಲ ಕೈಬಿಡಬೇಕಾಯಿತು.

ಕಟ್ಟಕಡೆಗೆ ರೈತರ ಬೇಡಿಕೆ ಸಾಧುವಾದದ್ದು ಎಂಬುದು ಸರ್ಕಾರದವರ ಮನಸ್ಸಿಗೆ ಬಂತು. ನಿಜವಾಗಿಯೂ ಇದು ಆರ್ಥಿಕ ದುಃಸ್ಥಿತಿಯ ಚಳವಳಿ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಂಡರು. ಈ ಅಂಶವನ್ನು ಗಾಂಧೀಜಿಯವರು ಲಾರ್ಡ್ ಇರ್ವಿನ್ನನ ಗಮನಕ್ಕೆ ತಂದು ಅವನನ್ನೊಪ್ಪಿಸಿದರು. 1931 ಮೇ ತಿಂಗಳಿನಲ್ಲಿ ರೆವಿನ್ಯೂ ಕಮೀಷನರೊಂದಿಗೆ ಆದ ಒಡಂಬಡಿಕೆಯ ಫಲವಾಗಿ ಹಿರೇಕೆರೂರು ತಾಲ್ಲೂಕಿನ ರೈತರಿಗೆ ತೃಪ್ತಿಕರ ಪರಿಹಾರ ಸಿಕ್ಕಿತು. ಆ ವರ್ಷದ ಕಂದಾಯವನ್ನು ರದ್ದು ಮಾಡಿದರು.

   ಆದರೆ ಶಿರಸಿ ಸಿದ್ದಾಪುರಗಳ ರೈತರ ವಿಚಾರದಲ್ಲಿ ಹೀಗಾಗಲಿಲ್ಲ. ಒಬ್ಬೊಬ್ಬ ರೈತರೂ ಪ್ರತ್ಯೇಕವಾಗಿ ಅರ್ಜಿಹಾಕಿಕೊಂಡರೆ ವಿಚಾರಮಾಡಿ ಸಂದರ್ಭಾನುಸಾರ ಕಂದಾಯಪರಿಹಾರ ಕೊಡುವುದಾಗಿ ಸರ್ಕಾರದವರು ಹೇಳಿದರು. ಆದರೆ  ಕಡೆಗೆ ಇಲ್ಲೂ ರೈತರಿಗೆ ಗೆಲುವು ಲಭಿಸಿತು. ಬಂಧನದಲ್ಲಿದ್ದವರೆಲ್ಲರ ಬಿಡುಗಡೆಯಾಯಿತು. ನ್ಯಾಯ ಸ್ಥಾನಗಳಲ್ಲಿ ಹೂಡಿದ್ದ ಮೊಕದ್ದಮೆಗಳನ್ನೆಲ್ಲ ಅಧಿಕಾರಿಗಳು ಹಿಂದಕ್ಕೆ ತೆಗೆದುಕೊಂಡರು. ಕಡೆಗೂ ಕರನಿರಾಕರಣ ಸತ್ಯಾಗ್ರಹ ರೈತರ ಜಯದಲ್ಲಿ ಮುಕ್ತಾಯವಾಯಿತು.

   1931-32ರ ಕರನಿರಾಕರಣ ಸತ್ಯಾಗ್ರಹದ ಮಾತುಬಂದಾಗ, ಕಾರವಾರ ಜಿಲ್ಲೆಯ ರೈತರ ಸತ್ತ್ವ ಮತ್ತು ಪ್ರದರ್ಶಿಸಿದ ಕ್ಷಾತ್ರಗುಣಗಳನ್ನು ಕಂಡರೆ ಯಾರಿಗಾದರೂ ಹೆಮ್ಮೆಯಾಗುತ್ತದೆ. ಆ ಅಪುರ್ವ ಸಂಗ್ರಾಮದಲ್ಲಿ ಗಂಡಸರೂ ಹೆಂಗಸರೂ ಕಲ್ಪನೆಗೆ ಮೀರಿದ ತ್ಯಾಗ ತೋರಿಸಿದರು. ಬೀಳಗಿಯ ಶ್ರೀ ಕೃಷ್ಣ ಬಾಲಕೃಷ್ಣ ಪುರಾಣಿಕರು ಕರನಿರಾಕರಿಸಿದ ಕಾರಣ ಬಂಧನಕ್ಕೊಳಗಾದರು. ಅವರನ್ನು ಜನ ಮೆರವಣಿಗೆ ಮಾಡಿ ಪೊಲೀಸ್ ಠಾಣ್ಯಕ್ಕೆ ಕರೆದೊಯ್ದರು. ಪುರಾಣಿಕರು ಆಗ ತಮ್ಮ ಹೆಂಡತಿಯವರಿಗೆ ಹೇಳಿದ ಮಾತಿದು: ನಮ್ಮ ಹೊಲ, ಮನೆ ಆಸ್ತಿಗಳೆಲ್ಲವನ್ನೂ ಈ ಧರ್ಮಯುದ್ಧದಲ್ಲಿ ನಾವು ಕಳೆದುಕೊಂಡರು ಹೆದರಬೇಕಿಲ್ಲ. ಪಾದಚಾರಿಗಳಾಗಿ ನಾವು ಊರಿಂದೂರಿಗೆ ಭಿಕ್ಷಾಟನೆ ಮಾಡುತ್ತ ಕಾಶೀಯಾತ್ರೆಗೆ ಹೋಗೋಣ. ಸರ್ಕಾರಕ್ಕೆ ಒಂದು ಕಾಸೂ ಕೊಡಬೇಡ. ತೀರ್ವೆ ಕೊಟ್ಟು ಪಾಪ ಕಟ್ಟಿಕೊಳ್ಳಬೇಡ. ಒಂದು ವೇಳೆ ಸರ್ಕಾರದವರು ಒತ್ತಾಯಮಾಡಿ ವಸೂಲುಮಾಡಲು ಪ್ರಯತ್ನಿಸಿದ್ದಾದರೆ ನಮ್ಮ ಕಾಳು ಕಡ್ಡಿ, ಮನೆ ಮಾರು, ಅವರ ಕೈಗೆ ಸಿಗದಂತೆ ಅವುಗಳನ್ನು ಅಗ್ನಿನಾರಾಯಣನಿಗೆ ಆಹುತಿ ಮಾಡಿಬಿಡು.

 

ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ

ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಅಲ್ಲಿ ಉಪ್ಪಿನ ಕರದ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಚಳುವಳಿಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.

ಚಳುವಳಿಯ ಹಿನ್ನೆಲೆ:- ಡಿಸೆಂಬರ್ ೩೧, ೧೯೨೯ರ ಮಧ್ಯರಾತ್ರಿಯಲ್ಲಿ ಲಾಹೋರ್ ನಗರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಸ್ವತಂತ್ರ ಭಾರತದ ಧ್ವಜವನ್ನು ಹಾರಿಸಲಾಯಿತು. ನಂತರ, ಜನವರಿ ೨೬, ೧೯೩೦ರಂದು ಗಾಂಧೀಜಿ ಮತ್ತು ಜವಹರಲಾಲ್ ನೆಹರೂರವರ ನೇತೃತ್ವದಲ್ಲಿ ಕಾಂಗ್ರೆಸ್ಸು ಭಾರತದ ಸ್ವಾತಂತ್ರ್ಯದ ಘೋಷಣೆಯನ್ನು ಹೊರತಂದಿತು. ಇದರಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ವಸಾಹತುಶಾಯಿ ಸರ್ಕಾರದ ಕಾಯ್ದೆಗಳನ್ನು ಪಾಲಿಸದೆ ಸಾಮೂಹಿಕ ಕಾನೂನು ಭಂಗ ಚಳುವಳಿಯನ್ನು ನಡೆಸುವ ನಿರ್ಧಾರವನ್ನು ಮಾಡಲಾಯಿತು. ಗಾಂಧೀಜಿಯವರು ಅಹಿಂಸಾತ್ಮಕ ರೀತಿಯಲ್ಲಿ ಈ ಚಳುವಳಿಯನ್ನು ನಡೆಸಲು ನಿರ್ಧರಿಸಿದರು.

ಏತಕ್ಕಾಗಿ ಉಪ್ಪಿನ ಸತ್ಯಾಗ್ರಹ ಮಾಡಲಾಯಿತು?

ಬ್ರಿಟೀಷ್ ಸರ್ಕಾರವು ಸಾಮಾನ್ಯ ಜನರು ಬಳಸುವ ಉಪ್ಪಿನ ಮೇಲೆ ಕರವನ್ನು ವಿಧಿಸಿ ಸರ್ಕಾರದ ಬೊಕ್ಕಸವನ್ನು ತುಂಬಿಸಿ ಕೊಳ್ಳುತ್ತಿತ್ತು. ಇದು ಮಹಾತ್ಮಾ ಗಾಂಧಿಯವರ ಗಮನ ಸೆಳೆಯಿತು ಹಾಗು ಅವರು ಉಪ್ಪಿನ ಕರವನ್ನು ತಮ್ಮ ಅಹಿಂಸಾತ್ಮಕ ಚಳುವಳಿಯ ಕೇಂದ್ರ ಬಿಂದುವನ್ನಾಗಿಸಿ ತಮ್ಮ ಚಳುವಳಿಯನ್ನು ನಡೆಸಲು ನಿರ್ಧರಿಸಿದರು. ಈ ಕರದಡಿಯಲ್ಲಿ ಬ್ರಿಟಿಷ್ ಸರ್ಕಾರದ ಹೊರತು ಯಾರೂ ಉಪ್ಪನ್ನು ತಯಾರಿಸುವಂತಿರಲಿಲ್ಲ ಅಥವಾ ಮಾರುವಂತಿರಲಿಲ್ಲ. ಸಮುದ್ರ ತಟದಲ್ಲಿದ್ದ ನಾಗರೀಕರಿಗೆ ಸಮುದ್ರದ ಉಪ್ಪು ಪುಕ್ಕಟೆಯಲ್ಲಿ ಸುಲಭವಾಗಿ ದೊರೆಯುವಂತಿದ್ದರೂ ಅವರು ಅದನ್ನು ಸರ್ಕಾರದಿಂದ ಕೊಂಡುಕೊಳ್ಳಬೇಕಾಗಿತ್ತು. ಇದಲ್ಲದೆ ಈ ತೆರಿಗೆಯು ಈ ಅತ್ಯವಶ್ಯಕ ಪದಾರ್ಥವನ್ನು ಜನಸಾಮಾನ್ಯರಿಗೆ ದುಬಾರಿಯನ್ನಾಗಿ ಮಾಡಿತ್ತು. ಹೀಗಾಗಿ ಈ ಕರದ ವಿರೋಧವು ಎಲ್ಲಾ ಧರ್ಮ, ವರ್ಗ ಮತ್ತು ಪ್ರಾಂತ್ಯದ ಜನರನ್ನು ಹುರಿದುಂಬಿಸುವಂತಹದಾಗಿತ್ತು. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಉಪ್ಪಿನ ಮೇಲಿನ ಕರದಿಂದ ಪ್ರಭಾವಿತನಾಗಿದ್ದರಿಂದ ಇದರ ವಿರುದ್ದ ಪ್ರತಿಭಟಿಸುವುದು ಒಂದು ಅತ್ಯಂತ ಯಶಸ್ವಿ ಚಳುವಳಿಯಾಯಿತು. ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಸೌಮ್ಯವಾದಿಗಳು ಹಾಗು ಸಾಮಾನ್ಯ ಜನತೆ, ಇಬ್ಬರನ್ನು ಈ ಚಳುವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸುವುದರಲ್ಲಿ ಗಾಂಧೀಜಿ ಯಶಸ್ವಿಯಾದರು. ಫೆಬ್ರವರಿ ೫ರಂದು ಪತ್ರಿಕೆಗಳು ಗಾಂಧೀಜಿಯವರು ಸಾಮೂಹಿಕ ಕಾನೂನು ಭಂಗ ಚಳುವಳಿಯನ್ನು ಉಪ್ಪಿನ ಕರವನ್ನು ಉಲ್ಲಂಘಿಸುವುದರಿಂದ ಪ್ರಾರಂಭಿಸಿದ್ದಾಗಿ ಘೋಷಿಸಿದವು.

ಯಾತ್ರೆ ಮತ್ತು ಚಳುವಳಿ:- ಮಾರ್ಚ್ ೨, ೧೯೩೦ರಂದು ಉಪ್ಪಿನ ಕಾನೂನನ್ನು ಬದಲಾಯಿಸುವಂತೆ ಕೋರಿ ಅಂದಿನ ವೈಸ್‍ರಾಯ್, ಲಾರ್ಡ್ ಇರ್ವಿನ್ ರವರಿಗೆ ಒಂದು ಪತ್ರ ಬರೆದರು. ಪತ್ರದ ಕೊನೆಯಲ್ಲಿ: "ಈ ನನ್ನ ಪತ್ರವು ತಮ್ಮ ಮನಸ್ಸನ್ನು ಬದಲಾಯಿಸದಿದ್ದಲ್ಲಿ, ಈ ಮಾಹೆಯ ೧೧ನೇ ತಾರೀಖಿನಂದು ನಾನು ನನ್ನ ಆಶ್ರಮದ ಸಹಚರರೊಂದಿಗೆ ಈ ಕಾನೂನಿನ ಉಪಬಂಧಗಳನ್ನು ನಿರ್ಲಕ್ಷ್ಯ ಮಾಡಲು ಮುಂದಾಗುತ್ತೇನೆ. ಈ ತೆರಿಗೆಯು ಬಡ ಜನರಿಗೆ ಅತ್ಯಂತ ಅನ್ಯಾಯಕಾರಿಯಾದುದು. ನಮ್ಮ ಸ್ವಾತಂತ್ರ್ಯದ ಹೋರಾಟ ಈ ರೀತಿಯ ಬಡ ಬಲ್ಲಿದರಿಗಾಗಿಯೇ ಇರುವುದರಿಂದ, ಈ ತೆರಿಗೆಯ ವಿರೋಧದಿಂದಲೆ ಇದನ್ನು ಪ್ರಾರಂಬಿಸುತ್ತೇವೆ. " ವೈಸ್‍ರಾಯ್‍ರವರು ಇದಕ್ಕೆ ಉತ್ತರ ನೀಡಲಿಲ್ಲ. ಇದರಂತೆ ಮಾರ್ಚ್ ೧೨, ೧೯೩೦ರಂದು ಗಾಂಧೀಜಿಯವರು ೭೮ ಮಂದಿ ಸಹ ಸತ್ಯಾಗ್ರಹಿಗಳೊಂದಿಗೆ ಸಬರಮತಿಯಿಂದ ಸುಮಾರು ೩೭೫ ಮೈಲಿ ದೊರದ ಕಡಲ ತೀರದಲ್ಲಿನ ದಾಂಡಿ ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದರು. ಈ ನಡಿಗೆಯ ೨೩ ದಿನಗಳಲ್ಲಿ ಸಹಸ್ರಾರು ಸತ್ಯಾಗ್ರಹಿಗಳು ದಾರಿಯುದ್ದಕ್ಕೂ ಸೇರಿದರು. ನಾಲ್ಕು ಜಿಲ್ಲೆಗಳು ಮತ್ತು ೪೮ ಹಳ್ಳಿಗಳ ಮೂಲಕ ಹಾಯ್ದ ಈ ನಡಿಗೆ ಏಪ್ರಿಲ್ ೫ರಂದು ದಾಂಡಿ ತಲುಪಿತು.

   ಮುಂದಿನ ಮುಂಜಾನೆಯ ಪ್ರಾರ್ಥನೆಯ ನಂತರ, ಅಲ್ಲಿ ಗಾಂಧೀಜಿಯವರು ಒಂದು ಹಿಡಿಯಷ್ಟು ಮಣ್ಣು ಮತ್ತು ಉಪ್ಪನ್ನು ತೆಗೆದುಕೊಂಡು (ಕೆಲವೆಡೆ ಇದನ್ನು "ಒಂದು ಚಿಟಿಕೆಯಷ್ಟು" ಎಂದು, ಇನ್ನು ಕೆಲವೆಡೆ "ಒಂದು ಕಾಳಿನಷ್ಟು" ಎನ್ನಲಾಗಿದೆ) "ಈ ಮೂಲಕ, ಬ್ರಿಟೀಷ್ ಸಾಮ್ರಾಜ್ಯದ ಅಡಿಪಾಯವನ್ನು ನಾನು ಅಲುಗಾಡಿಸುತ್ತಿದ್ದೇನೆ" ಎಂದು ಘೋಷಿಸಿದರು. ನಂತರ ಅವರು ಅದನ್ನು ಸಮುದ್ರದ ನೀರಿನಲ್ಲೆ ಕುದಿಸಿ, ಯಾವ ಭಾರತೀಯನೂ ಅಧಿಕೃತವಾಗಿ ತಯಾರಿಸಲಾಗದಂತಹ ಪದಾರ್ಥವನ್ನು ತಯಾರಿಸಿದರು, ಅದುವೇ — ಉಪ್ಪು. ನಂತರ ನೆರೆದಿದ್ದ ಸಹಸ್ರಾರು ಅನುಯಾಯಿಗಳಿಗೆ "ತಮಗೆ ಎಲ್ಲಿ ಸಾಧ್ಯವೊ ಹಾಗು ಎಲ್ಲಿ ಅನುಕೂಲವೊ, " ಅಲ್ಲಿ ಉಪ್ಪನ್ನು ತಯಾರಿಸಲು ಉಪದೇಶಿಸಿದರು.

ಚಳುವಳಿಯ ಪರಿಣಾಮಗಳು:- ಚಳುವಳಿಯ ಪರಿಣಾಮ ದೇಶದಾದ್ಯಂತ ವ್ಯಾಪಿಸಿತು. ಗಾಂಧೀಜಿಯವರಿಂದ ಪ್ರೇರಿತರಾಗಿ ಸಾವಿರಾರು ಜನರು ಸ್ವತ: ಉಪ್ಪನ್ನು ತಯಾರಿಸಿದರು ಹಾಗು ಕಾನೂನು ಬಾಹಿರವಾಗಿ ಉಪ್ಪನ್ನು ಕೊಂಡರು. ಇದರೊಂದಿಗೆ ಇತರ ಬ್ರಿಟಿಷ್ ಸರಕುಗಳನ್ನೂ ಭಾರತೀಯರು ಕೊಳ್ಳುವುದನ್ನು ನಿಲ್ಲಿಸಿದರು. ಕಾನೂನು ಬಾಹಿರವಾಗಿ ಉಪ್ಪನ್ನು ಮಾರಿದ ಹಾಗು ಕೊಂಡ ಸಹಸ್ರಾರು ಜನರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿತು. ಭಾರತದ ಇತರೆಡೆಯಲ್ಲಿಯೂ ಈ ಸತ್ಯಾಗ್ರಹ ಹರಡಿತು.

ಕಡೆಗೆ ಮಹಾತ್ಮ ಗಾಂಧಿಯವರನ್ನೂ ಬಂಧಿಸುವಂತೆ ಅಂದಿನ ಭಾರತದ ವೈಸರಾಯ್‌ರು ಆದೇಶಿಸಿದರು. ಮೇ ೪ರಂದು ದಾಂಡಿಯ ಬಳಿಯ ಒಂದು ಊರಿನಲ್ಲಿ ೩೦ ಪೇದೆಗಳ ಪ್ರಬಲ ಪಡೆಯೊಂದಿಗೆ ಬಂದ ಜಿಲ್ಲಾ ನ್ಯಾಯಾಧೀಶರು ಗಾಂಧೀಜಿಯವರನ್ನು ಬಂಧಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಂಡಿ ಸತ್ಯಾಗ್ರಹವು ಒಂದು ಮಹತ್ವಪೂರ್ಣ ಘಟನೆಯಾಗಿತ್ತು.

 

ಅರಣ್ಯ ಸತ್ಯಾಗ್ರಹ:-    ನಮ್ಮ ರಾಜ್ಯದಲ್ಲಿ ಗಾಂಧೀಜಿಯವರ ಕಾಲದಲ್ಲಿ ನಡೆದ ಸತ್ಯಾಗ್ರಹಗಳಲ್ಲಿ ಅರಣ್ಯ ಸತ್ಯಾಗ್ರಹ ಚಳವಳಿ ಕೂಡಾ ಒಂದು. ಸರ್ಕಾರಿ ಜಮೀನಿನಲ್ಲಿರುವ ಈಚಲು ಮರಗಳನ್ನು ಕಡಿದು ಹೆಂಡದ ಸರಬರಾಜು ಆಗದಂತೆ ನೋಡಿಕೊಳ್ಳುವುದು, ಕಾಯ್ದಿಟ್ಟ ಅರಣ್ಯದಿಂದ ಉರುವಲು ಕಟ್ಟಿಗೆ ಹಾಗೂ ಹುಲ್ಲು ತರುವುದು ಇವು ಅರಣ್ಯ ಸತ್ಯಾಗ್ರಹದ ಅಂಶಗಳಾಗಿದ್ದವು. ಇದರಿಂದಾಗಿ ಹೆಂಡದ ಮಾರಾಟದ ಮೂಲಕ ಲಾಭ ಗಳಿಸುತ್ತಿದ್ದ ಬ್ರಿಟಿಷ್‌ ಸರ್ಕಾರದ ಖಜಾನೆಗೆ ನಷ್ಟ ಉಂಟಾಗುತ್ತಿತ್ತು ಅಲ್ಲದೇ ಮೀಸಲು ಅರಣ್ಯಗಳನ್ನು ಪ್ರವೇಶಿಸಿ ಕಟ್ಟಿಗೆ, ಹುಲ್ಲು ಮತ್ತಿತರ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸುವುದು ಮೀಸಲು ಅರಣ್ಯ ಕಾಯ್ದೆಯ ಉಲ್ಲಂಘನೆ ಆಗುತ್ತಿತ್ತು. ಈ ಚಳವಳಿ ಪ್ರಪ್ರಥಮವಾಗಿ ಮೈಸೂರು ಸಂಸ್ಥಾನದಲ್ಲಿ ನಿಜಲಿಂಗಪ್ಪನವರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಅದೇ ತಾಲ್ಲೂಕಿನ ತುರುವನೂರಿನಲ್ಲಿ ಆರಂಭವಾಯಿತು. ಇತ್ತ ಅದೇ ವೇಳೆಯಲ್ಲಿ ಮುಂಬೈ ಕರ್ನಾಟಕದ ಧಾರವಾಡದ ಶಿಗ್ಗಾವಿಯಲ್ಲಿ ನಡೆದ ಈಚಲು ಮರಗಳನ್ನು ಕಡಿಯುವ ಚಳವಳಿ ಯಶಸ್ವಿಯಾಯಿತು.

 

ಭಾರತ ಬಿಟ್ಟು ತೊಲಗಿ ಚಳವಳಿ:- ೧೯೪೨ರಲ್ಲಿ ಬ್ರಿಟಿಷರನ್ನು ಭಾರತದಿಂದ ಉಚ್ಚಾಟಿಸುವ ಚಳವಳಿ ಆರಂಭವಾಯಿತು. ಗಾಂಧೀಜಿ ಆದಿಯಾಗಿ ಅನೇಕ ಮುಖಂಡರು ದಸ್ತಗಿರಿಯಾದಾಗ ರಂಗನಾಥ ದಿವಾಕರ, ಹುಕ್ಕೇರಿಕರ, ಡಿ.ಪಿ.ಕರಮರಕರ, ಚೆನ್ನಬಸಪ್ಪ ಅಂಬಲಿ ಮುಂತಾದವರು ಮುಂಬಯಿಯಲ್ಲಿ ಭೂಗತರಾಗಿ ಚಳವಳಿಯನ್ನು ನಿರ್ದೇಶಿಸಿದರು. ಗಂಗಾಧರರಾವ್ ದೇಶಪಾಂಡೆ, ಎನ್.ಎಸ್. ಹರ್ಡೀಕರ, ಕಬ್ಬೂರ ಮುಂತಾದ ಅನೇಕರು ಬಂಧಿತರಾದರು. ಮೊದಲು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಚಳವಳಿ ಹಳ್ಳಿಗಳಿಗೂ ಹರಡಿತು. ಇದರಿಂದ ಚಳವಳಿ ಉಗ್ರವಾಯಿತು. ಈ ವೇಳೆ ೧೯೪೨ರ ಆಗಸ್ಟ್೯ರಿಂದ ಒಂದು ವರ್ಷದಲ್ಲಿ ಈ ಚಳವಳಿಯಲ್ಲಿ ಭಾಗವಹಿಸಿ ಮುಂಬೈ-ಕರ್ನಾಟಕದ ವಿವಿಧ ಭಾಗಗಳಲ್ಲಿ ಬಂಧಿತರಾದವರ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:

ಬೆಳಗಾವಿ ,೨೫೫, ಧಾರವಾಡ ,೧೪೭, ಉತ್ತರ ಕನ್ನಡ ೫೧೫ ಮತ್ತು ಬಿಜಾಪುರ ೫೦೦

 

ಗೋಲಿಬಾರು ನಡೆದ ಕೆಲವು ಸ್ಥಳಗಳ ಹೆಸರು, ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆಗಳನ್ನು ಮುಂದೆ ಕೊಟ್ಟಿದೆ:

ಬೈಲಹೊಂಗಲ

ನಿಪ್ಪಾಣಿ

ಶಿಲಾಪುರ

ಕೋಳೀಗುಡ್ಡ -

ಖವಟಕೊಪ್ಪ

ಹುಬ್ಬಳ್ಳಿ ೧೮

 

ಲಾಠಿ ಪ್ರಹಾರಗಳ ವಿವರ ರೀತಿ ಇದೆ:

ಪ್ರಹಾರ ಸಂಖ್ಯೆ: ಗಾಯಗೊಂಡವರ ಸಂಖ್ಯೆ:

ಬೆಳಗಾವಿ ೬೫

ಗದಗ

ಹಾವೇರಿ

ತಾಳೀಕೋಟೆ

ಅಂಕೋಲ -

ಮಹಿಳೆಯರ ಪಾತ್ರ:- ಕರನಿರಾಕರಣ ಹಾಗೂ ಕಾನೂನುಭಂಗ ಚಳವಳಿಯ ಸಂದರ್ಭದಲ್ಲಿ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಹಿಳಾ ಚಳವಳಿ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಕರ ನಿರಾಕರಣಗಾರರನ್ನು ಬಂಧಿಸಿ ಸರ್ಕಾರ ಅವರ ಆಸ್ತಿಪಾಸ್ತಿಯನ್ನು ವಶಪಡಿಸಿಕೊಂಡು ಕುಟುಂಬಗಳನ್ನು ಹೊರಹಾಕಿದಾಗ, ಗ್ರಾಮೀಣ ಮಹಿಳೆಯರು ಸಾಂಘಿಕ ನೆಲೆಯಲ್ಲಿ ಚಳವಳಿಗೆ ಇಳಿದರು. ಹರಾಜಿನ ಸಂದರ್ಭಗಳಲ್ಲಿ ಸರ್ಕಾರದ ವಿರುದ್ಧ ಹಾಗೂ ಹರಾಜಿನಲ್ಲಿ ವಸ್ತುಗಳನ್ನು ಕೊಂಡವರ ಮನೆಗಳ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು. ಉತ್ತರ ಕನ್ನಡ ಭಾಗದಲ್ಲಿ ರಮಾಬಾಯಿ ಪ್ರಭು, ಭಾಗೀರಥಿ ಬಾಯಿ ಪುರಾಣಿಕ, ದೇವಯಾನಿ ಹರಿ ಪೈ, ಲಕ್ಷ್ಮೀಬಾಯಿ ರಂಗಪ್ಪ, ಮಹಾದೇವಿ ನಾರಾಯಣ ಹೆಗಡೆ ಮುಂತಾದವರು ನಡೆಸಿದ ಹೋರಾಟ ಅತ್ಯಂತ ಯಶಸ್ವಿಯಾಯಿತು.

ಗಾಂಧೀಜಿಯವರ ವೈಯಕ್ತಿಕ ಸತ್ಯಾಗ್ರಹದ ಮಾದರಿಯು ಕರ್ನಾಟಕದ ಮಹಿಳೆಯರನ್ನು ತೀವ್ರವಾಗಿ ಸೆಳೆಯಿತು. ಯುದ್ಧ ವಿರೋಧಿ ಘೋಷಣೆ, ಪಿಕೆಟಿಂಗ್, ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಿದ ಪಡೆಗಳಲ್ಲಿ ಕಾರ್ಮಿಕ ಹಾಗೂ ಕೆಳ ಹಂತದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸೇರಿಕೊಂಡರು. ಕರಾವಳಿ ಪರಿಸರದಲ್ಲಿ ಕಮಲಾದೇವಿ, ಕಮಲಾ ಅಧಿಕಾರಿ, ಉತ್ತರ ಕರ್ನಾಟಕದ ಪ್ರೆಸಿಡೆನ್ಸಿ ಪ್ರದೇಶದಲ್ಲಿ ರಮಾಬಾಯಿ ಯಾಳಗಿ, ಶಕುಂತಳಾ ದಬಾಡೆ, ಪದ್ಮಾವತಿ ಬಿದರಿ, ಸತ್ಯಭಾಮಾಬಾಯಿ ಪ್ರಭು ಸತ್ಯಾಗ್ರಹದ ಕ್ರಿಯಾಶಕ್ತಿಯಾಗಿ ದುಡಿದರು. ತಂಗೆವ್ವ ಹೊಳೆಯಾಚೆ, ತಂಗೆವ್ವ ಬಡಿಗೇರ, ಬಾಳವ್ವ, ಕಾಶವ್ವ ಹೊಸಮನಿ, ಸರಸ್ವತಿಬಾಯಿ ಚೌಗುಲೆ, ನಿಂಗವ್ವ ಚಿಕ್ಕೋಡಿಯವರ ಮಹಿಳಾ ತಂಡವು ಗೋಕಾಕ, ಸವದತ್ತಿಗಳಲ್ಲಿ ಪೊಲೀಸ್ಬಂದೋಬಸ್ತಿನ ನಡುವೆಯೇ ಸರ್ಕಾರಿ ಕಚೇರಿಗಳಿಗೆ ನುಗ್ಗಿ ದಾಖಲೆ ಪತ್ರಗಳನ್ನು ನಾಶ ಮಾಡಿತು. ಹೇಮಲತಾ ಶಿರ್ನೋಲಿಕರರ ತಂಡ ಧಾರವಾಡ ಜಿಲ್ಲಾ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಹೊಕ್ಕು ಪಿಕೆಟಿಂಗ್ ನಡೆಸಿತು.

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources