ಶೈವ ಪಂಥ ಮತ್ತು ಕಾಳಮುಖರು.

ಪೀಠಿಕೆ: ಕರ್ಣಾಟಕದ ಧರ್ಮಗಳು ಬಹುಮಟ್ಟಿಗೆ ಭಾರತದ ಎಲ್ಲ ಧರ್ಮಗಳನ್ನೂ ಒಳಗೊಂಡಿವೆ. ಭಾರತದ ಧರ್ಮ ಒಂದು ಧಾರ್ಮಿಕ ಮಹಾಸಾಗರ. ಸಾಗರಕ್ಕೆ ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಿಂದ ಬೇರೆ ಬೇರೆ ಕಾಲಗಳಲ್ಲಿ ಧಾರ್ಮಿಕ ವಿವೇಚನೆಯ ಪ್ರವಾಹಗಳು ಹರಿದು ಬಂದು ಸೇರಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳಲ್ಲದೆ, ಭಾರತದ ಆಚಿನಿಂದ ಬಂದ ಧರ್ಮಗಳೂ ಅದರ ಧಾರ್ಮಿಕ ವಿವೇಚನೆಯನ್ನು ಚೇತನಗೊಳಿಸಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳು ವೈದಿಕ, ಶೈವ, ವೈಷ್ಣವ, ತಾಂತ್ರಿಕ, ಶಾಕ್ತೇಯ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು. ಹೊರಗಿನಿಂದ ಬಂದವು - ಕ್ರೈಸ್ತ, ಇಸ್ಲಾಂ ಮತ್ತು ಜರತುಷ್ಟ್ರ ಧರ್ಮಗಳು. ಭಾರತ ಅನಾದಿಕಾಲದಿಂದ ಪೋಷಿಸಿದ ಸರ್ವಮತಸಹಿಷ್ಣುತೆಯ ನೀತಿಯನ್ನು ಕರ್ಣಾಟಕವೂ ಅನುಸರಿಸಿಕೊಂಡು ಬಂದಿದೆ.

ಶೈವಮತ ಕಾಶ್ಮೀರಶೈವ, ಪಾಶುಪತ, ಲಕುಲೀಶ, ದ್ರಾವಿಡ ಶೈವ ಮತ್ತು ಕರ್ಣಾಟಕ ವೀರಶೈವ ಮುಂತಾದವುಗಳ ಮೂಲಕ ಬಹುಮುಖವಾಗಿ ಬೆಳೆದಿದೆ.

ಶೈವಮತ : ಕರ್ಣಾಟಕದಲ್ಲಿ ಕಡೆಯ ಪಕ್ಷ ಶಾತವಾಹನರ ಕಾಲದಿಂದ ಮತ ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ. ಶಾತವಾಹನ ಮತ್ತು ಚುಟುಕುಲದ ರಾಜರು ತಾಲಗುಂದದ ಪ್ರಣವೇಶ್ವರನ ಆರಾಧಕರಾಗಿದ್ದರೆಂದು ಶಾಸನ ತಿಳಿಸುತ್ತದೆ. ಅನಂತರದ ಕದಂಬರು ತಮ್ಮ ವಂಶ ಈಶ್ವರನಿಂದ ಉತ್ಪತ್ತಿಯಾದ ಮುಕ್ಕಣ್ಣ ಅಥವಾ ತ್ರಿನೇತ್ರ ಕದಂಬನಿಂದ ಪ್ರಾರಂಭವಾಯಿತೆಂದು ಹೇಳಿಕೊಂಡಿದ್ದಾರೆ. ಕದಂಬ, ಚಾಳುಕ್ಯ ರಾಜರನೇಕರು ಶೈವಮತಾನುಯಾಯಿಗಳಾಗಿದ್ದರು. ಕಾಲದಲ್ಲಿ ಶೈವರಲ್ಲಿ ಮತಪ್ರಭೇದಗಳು ಹುಟ್ಟಿಕೊಂಡುವು. ಪಾಶುಪತ, ಕಾಳಾಮುಖ, ಲಾಕುಳ, ಮಹೇಶ್ವರಪಂಥಗಳು ಹೆಚ್ಚು ಕಡಿಮೆ ಒಂದೇ ಆಗಿರುವಂತೆ ತೋರುತ್ತದೆ.

 

ಕಾಳಾಮುಖ ಪಂಥ:-

  ಇದು ಲಾಕುಳ ಶೈವ ಪಂಥದ ಒಂದು ಶಾಖೆ; ಮಧ್ಯಕಾಲೀನ ಆಂಧ್ರ-ಕರ್ಣಾಟಕಗಳಲ್ಲಿ ನೆಲಸಿದ್ದ ಅಲ್ಪ ಸಂಖ್ಯಾತ ಮತಗಳಲ್ಲಿ ಪ್ರಮುಖವಾದದ್ದು. ಲಾಕುಳ ಪಂಥದ ಅನುಯಾಯಿಗಳಾದ ಕೆಲವರು ಕಾಳಾಮುಖ ಅಥವಾ ಅಸಿತವಕ್ತ್ರ ದೀಕ್ಷೆಯನ್ನು ಪಡೆಯುತ್ತಿದ್ದರು. ಇವರಿಗೆ ಎಕ್ಕೋಟಿಮುನಿಗಳೆಂದೂ ಹೆಸರಿತ್ತು. ಮುಖದ ಮೇಲೆ ಕಪ್ಪುಬಣ್ಣದ ಗುರುತುಗಳನ್ನು ಮಾಡಿಕೊಳ್ಳುತ್ತಿದ್ದುದರಿಂದ ಇವರಿಗೆ ಕಾಳಾಮುಖರೆಂದು ಹೆಸರಾಯಿತು. ಕ್ರಿಸ್ತಶಕದ ಆರಂಭದಲ್ಲಿ ಕಾಶ್ಮೀರದ ದೇವ ವ್ರತಮುನಿಸಂತತಿಗೆ ಸೇರಿದವರೊಡನೆ ಇವರ ಸಂಬಂಧವಿತ್ತೆಂದು ಶಿಕಾರಿಪುರದ 99ನೆಯ ಶಾಸನ ಸೂಚಿಸುತ್ತದೆ. ಏಳನೆಯ ಶತಮಾನದಿಂದ ಐನೂರು ವರ್ಷಗಳ ಕಾಲ ಇದು ಕರ್ಣಾಟಕದಲ್ಲಿ ಬೌದ್ಧ-ಜೈನಮತಗಳ ವಿರುದ್ಧ ಸ್ಪರ್ಧಿಸುತ್ತ ಪ್ರಬಲವಾಗಿತ್ತು. ಆಂಧ್ರ ಮತ್ತು ತಮಿಳುನಾಡಿನ ಹಲಭಾಗಗಳಲ್ಲೂ ಇದರ ಪ್ರಾಬಲ್ಯ ಕಾಣಬರುತ್ತದೆ. ಬಳ್ಳಿಗಾವೆಯ ಕೇದಾರೇಶ್ವರ ಮಂದಿರ, ಆಂಧ್ರದ ಶ್ರೀಶೈಲ ಪಂಥದವರ ಪ್ರಮುಖ ಸ್ಥಾನಗಳಾಗಿದ್ದುವು. ಇವರಿಗೆ ರಾಜಾಶ್ರಯ ದೊರೆತಿತ್ತು. ಇವರಿಗೆ ಅನೇಕ ದತ್ತಿಗಳನ್ನು ಬಿಟ್ಟಿದ್ದುದಾಗಿ ಶಾಸನಗಳು ತಿಳಿಸುತ್ತವೆ. ಚಾಳುಕ್ಯ 2ನೆಯ ಜಯಸಿಂಹನ (1013-42) ರಾಣಿ ಸುಗ್ಗಲೆ ಪಂಥದವಳಾಗಿದ್ದು, ತನ್ನ ಪತಿಯನ್ನೂ ಇದಕ್ಕೆ ಪರಿವರ್ತಿಸಿದಳು. 2ನೆಯ ಸೋಮೇಶ್ವರನ ಕಾಲದಲ್ಲಿ (1068-76) ಇದು ಬಹಳ ಪ್ರಬಲವಾಯಿತು. ಕಾಲದ ಕಾಳಾಮುಖಗುರು ಸರ್ವೇಶ್ವರ ಶಕ್ತಿದೇವನಿಗೆ (ಸು. 1070) ರಾಜಗುರು ಎಂಬ ಬಿರುದೂ 77 ದೇವಾಲಯಗಳ ಒಡೆತನವೂ ಇದ್ದುದಾಗಿ ಶಾಸನವೊಂದು (..8, ಸೊರಬ-276) ತಿಳಿಸುತ್ತದೆ. ಸೋಮೇಶ್ವರ ಚಕ್ರವರ್ತಿ ಆತನ ಶಿಷ್ಯ. ಅನಂತರದ ಚಕ್ರವರ್ತಿ 6ನೆಯ ವಿಕ್ರಮಾದಿತ್ಯ ಜೈನಧರ್ಮದಲ್ಲಿ ಆಸಕ್ತನಾಗಿದ್ದರೂ ಕಾಳಾಮುಖರಿಗೂ ಆಶ್ರಯ ನೀಡಿದ್ದ. ಹೊಯ್ಸಳರ ಕಾಲದಲ್ಲಿ ಹಳೆಬೀಡಿನಲ್ಲಿ ಕಾಳಾಮುಖ ಪಂಥದ ಪ್ರಸಿದ್ಧ ಗುರುಪರಂಪರೆಯೊಂದಿದ್ದು, ಕೋಡಿಯ ಮಠದೊಡನೆ ಇದರ ಸಂಬಂಧವಿತ್ತು. 1162ರಲ್ಲಿ ಕಳಚೂರಿ ಬಿಜ್ಜಳ ಮಠವನ್ನು ಸಂದರ್ಶಿಸಿ, ಮೆಚ್ಚಿ, ಇದಕ್ಕೆ ದತ್ತಿಗಳನ್ನು ಬಿಟ್ಟಿದ್ದಂತೆ ತಿಳಿದು ಬರುತ್ತದೆ.

      ಹಲವಾರು ಶಾಸನಗಳಲ್ಲಿ ಇವರ ತಪಸ್ಯೆ, ಪಾಂಡಿತ್ಯ, ಔದಾರ್ಯಗಳ ಪ್ರಶಂಸೆಯಿದೆ. ಆದರೂ ವೇದಶಾಸ್ತ್ರಗಳಿಗೆ ವಿರುದ್ಥವಾದ ಮತ್ತು ಸತ್ಯದ ಬಗ್ಗೆ ವಿಚಿತ್ರವಾದ ಭಾವನೆಗಳನ್ನು ಇವರು ತಳೆದಿದ್ದರೆಂದು ಶ್ರೀರಾಮಾನುಜ, ಅಲ್ಲಮಪ್ರಭು ಮತ್ತು ಚೆನ್ನಬಸವ ಇವರು ಹೇಳಿದ್ದಾರೆ. ಕಾಳಾಮುಖರು ತಲೆಬುರುಡೆಯನ್ನು ಪಾನಪಾತ್ರೆಗಳನ್ನಾಗಿ ಬಳಸುತ್ತಿದ್ದರು. ಶ್ಮಶಾನದ ಬೂದಿಯನ್ನು ದೇಹಕ್ಕೆ ಬಳಿದುಕೊಳ್ಳುತ್ತಿದ್ದರು; ನರಮಾಂಸವನ್ನು ತಿನ್ನುತ್ತಿದ್ದರು; ದಂಡಧಾರಿಗಳಾಗಿರುತ್ತಿದ್ದರು; ಮದ್ಯದ ಪಾತ್ರೆಯಲ್ಲಿ ದೇವರಿಗೆ ಬಲಿಯನ್ನರ್ಪಿಸುತ್ತಿದ್ದರು-ಎಂದೆಲ್ಲ ಅವರು ಹೇಳಿದ್ದಾರೆ. ಇವರಲ್ಲಿ ಲೈಂಗಿಕ ಸ್ವೇಚ್ಚಾಚಾರವಿತ್ತೆಂದೂ ತಿಳಿದುಬರುತ್ತದೆ. ಕಾರಣವಿಲ್ಲದೆ ನಗುವುದು, ಕುಣಿಯುವುದು, ಉದ್ಗರಿಸುವುದು, ಅಂಗವಿಕಲರಂತೆ ನಟಿಸುವುದು-ಇವೇ ಮುಂತಾದವು ಇವರ ಅತಿಗಾಮಿಚರ್ಯೆಗಳಾಗಿದ್ದುವು.

        ಪಂಥದ ಗುರುಗಳಲ್ಲಿ ಸಾಮಾನ್ಯವಾಗಿ ರಾಶಿ, ಶಕ್ತಿ ಎಂಬ ಎರಡು ಪಂಗಡಗಳಿದ್ದುವು. ಶಾಸನಗಳಲ್ಲಿ ಇವರ ಕೆಲವು ಗುರುಗಳ ಉಲ್ಲೇಖವಿದೆ. ಅವರಲ್ಲಿ ಕಲಾಶಕ್ತಿ (ಸು. 640) ನೇತ್ರಶಿವಾಚಾರ್ಯ (ಸು. 900), ಈಶ್ವರದೇವ ರುದ್ರಗಣ (ಸು. 1030), ಸರ್ವೇಶ್ವರಶಕ್ತಿ (ಸು. 1070) ಮತ್ತು ನಾಗಶಿವಪಂಡಿತ (ಸು. 1183) ಗಮನಾರ್ಹರು. ಇವರ ಇತಿಹಾಸದಲ್ಲಿ ಪ್ರಮುಖನಾದವನೆಂದರೆ ಕೊನೆಯಲ್ಲಿ ಕಂಡುಬರುವ ಶಿವಗುರು, ವಾಣೀವಿಲಾಸ ಕಾಶೀವಿಲಾಸ ಕ್ರಿಯಾಶಕ್ತಿ (ಸು. 1370). ರಾಜರಾಜಗುರುವೆಂದು ಕೀರ್ತಿತನಾದ ಈತ ವಿದ್ಯಾರಣ್ಯರ ಸಮಕಾಲೀನ. ಈತ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಹರಿಹರ ಬುಕ್ಕ ಸೋದರರಿಗೆ ಉತ್ತೇಜನ ನೀಡಿದನೆಂಬುದು ಕೆಲವರ ವಾದ. ಕ್ರಿಯಾಶಕ್ತಿಯೇ ವಿದ್ಯಾರಣ್ಯರೆಂದು ಹೇಳುವ ವಾದವೂ ಉಂಟು. ಈತನ ಅನಂತರ ಕಾಳಾಮುಖಪಂಥ ಕ್ಷೀಣವಾದಂತೆ ಕಾಣುತ್ತದೆ.       

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources