ವೈದಿಕ ಸಂಸ್ಕೃತಿ: ಪೂರ್ವ ವೈದಿಕ ಕಾಲ.

“India was the motherland of our race, and Sanskrit the mother of Europe’s languages: she was the mother of our philosophy; mother, through the Arabs, of much of our mathematics; mother, through the Buddha, of the ideals embodied in Christianity; mother, through the village community, of self-government and democracy. Mother India is in many ways the mother of us all.”

By: Will Durant , American historian.


   ಸಿಂಧೂ ನಾಗರೀಕತೆಯ ಪತನಾನಂತರ ಉತ್ತರ ಭಾರತದಲ್ಲಿ ಮತ್ತೊಂದು ಸಂಸ್ಕೃತಿ ಉಗಮಿಸಿತು. ಅದನ್ನು ವೈದಿಕ ಸಂಸ್ಕೃತಿ ಎನ್ನುವರು. ಕಾರಣ ಈ ಕಾಲದಲ್ಲಿಯೇ ವೇದಗಳು ರಚಿತವಾದದ್ದು ಎಂದು ನಂಬಲಾಗಿದೆ. ವೇದಗಳ ರಚನಕಾರರು ಆರ್ಯರು ಎಂದು ಭಾವಿಸಲಾಗಿದ್ದು, ಈ ಸಂಸ್ಕೃತಿಯನ್ನು ಆರ್ಯರ ಸಂಸ್ಕೃತಿ ಎಂದೂ ಸಹ ಕರೆಯಲಾಗಿದೆ. ಆರ್ಯ ಎಂದರೆ ಉತ್ತಮ ವ್ಯಕ್ತಿ, ಸಂಸ್ಕೃತಿಯುಳ್ಳವನು ಇಲ್ಲವೇ ಗೌರವಾನ್ವಿತ ವ್ಯಕ್ತಿ ಎಂಬ ಅರ್ಥಗಳೂ ಇವೆ. ಈ ಕಾಲಘಟ್ಟವು ಸು. ಸಾ.ಶ.ಪೂ ೨,೦೦೦ ರಿಂದ ೬೦೦ ರವರೆಗೆ, ಅಂದರೆ ಅವೈದಿಕ ಧರ್ಮಗಳ ಉದಯದವರೆಗೆ, ವ್ಯಾಪಿಸಿತ್ತು ಎಂದು ಗುರ್ತಿಸಲಾಗಿದೆ.

  ವೈದಿಕ ಸಂಸ್ಕೃತಿಯ ಕರ್ತೃಗಳಾದ ಆರ್ಯರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಇಂದಿಗೂ ಭಿನ್ನಾಭಿಪ್ರಾಯಗಳಿವೆ. ಏಕೆಂದರೆ ಅವರು ವಿದೇಶಿಯರು ಎಂದು ಒಂದು ವರ್ಗದ ಅಭಿಪ್ರಾಯವಾದರೆ ಆರ್ಯರು ಭಾರತದ ಮೂಲನಿವಾಸಿಗಳೇ ಎಂಬುದು ಇನ್ನೊಂದು ವರ್ಗದ ವಾದವಾಗಿದೆ. ಇವರ ಮೂಲದ ಕುರಿತ ವಿವಿಧ ಸಿದ್ಧಾಂತಗಳು ಮತ್ತು ಅವುಗಳ ಪ್ರತಿಪಾದಕರ ವಿವರಗಳು ಕೆಳಕಂಡಂತಿವೆ:

೧. ಯೂರೋಪ್‌ ಮೂಲ. ಇವರು ಇಂಡೋ-ಯೂರೋಪಿಯನ್ನರು. ಗ್ರೀಕ್‌, ಲ್ಯಾಟಿನ್‌, ಪರ್ಷಿಯನ್‌, ಸಂಸ್ಕೃತ ಮತ್ತು ಇಂಗ್ಲೀಷ್‌ ಭಾಷೆಗಳನ್ನಾಡುತ್ತಿದ್ದ ಇಂಡೊ-ಯೂರೋಪಿಯನ್ನರೆ ಈ ಜನಾಂಗದ ಮೂಲದವರು ಎಂದು ವಿಲಿಯಂ ಜೋನ್ಸ್‌, ಫಿಲೊಪ್ಪೋ ಮತ್ತು ಸಾಸೆಟ್ಟಿ ವಾದಿಸಿದ್ದಾರೆ. ಇದೇ ರೀತಿಯ ವಿವಿಧ ಅಂಶಗಳನ್ನು ಆಧರಿಸಿ ಮೂಡಿಬಂದಿರುವ ಯೂರೋಪ್‌ ಮೂಲದ ಇತರೆ ಉಪವಾದಗಳು ಕೆಳಕಂಡಂತಿವೆ:

ಅ. ಹಂಗೇರಿ ಮೂಲ. ಆರ್ಯರಿಗೆ ತಿಳಿದಿದ್ದ ಕೃಷಿ, ಕಬ್ಬಿಣದ ಬಳಕೆ, ಪಶುಪಾಲನೆ, ಪ್ರಾಣಿವರ್ಗ ಮಧ್ಯಯೂರೋಪಿಯನ್ನರಿಗೆ ತಿಳಿದಿತ್ತು. ಕಾರಣ ಆರ್ಯರು ಅಲ್ಲಿಂದ ಬಂದವರು ಎಂದು ಡಾ. ಪಿ. ಗೇಲ್ಸ್‌ ಮತ್ತು ಮ್ಯಾಕ್‌ಡೊನಾಳ್ಡ್‌ ವಾದಿಸಿದ್ದಾರೆ.

ಆ. ಜರ್ಮನಿ ಮೂಲ. ಆರ್ಯರು ಮತ್ತು ಜರ್ಮನಿಯನ್ನರ ನಡುವಣ ದೈಹಿಕ ಲಕ್ಷಣಗಳ ಹೋಲಿಕೆಯನ್ನು ಆಧರಿಸಿ ಡಾ. ಬೆಂಕಾ ಅವರ ವಾದ ಇದಾಗಿದೆ. ಇದಕ್ಕೆ ಜನಾಂಗ ಶ್ರೇಷ್ಠತೆಯನ್ನು ಪ್ರತಿಪಾದಿಸಿದ ಹಿಟ್ಲರ್‌ ಸಹಮತಿಸಿದ್ದು, ನಾಜಿಗಳು ಆರ್ಯರ ಮೂಲದವರು ಎಂದು ವಾದಿಸಿದ್ದಾನೆ.

ಇ. ಬಾಲ್ಟಿಕ್‌ ಮೂಲ. ತುರ್ಕಿಸ್ಥಾನದ ಬಾಲ್ಟಿಕ್‌ನಲ್ಲಿ ಕಂಡುಬಂದಿರುವ ಹಳೆಶಿಲಾಯುಗದ ಉಪಕರಣಗಳಿಗೂ ಆರ್ಯರು ಬಳಸುತ್ತಿದ್ದ ಉಪಕರಣಗಳಿಗೂ ಸಾಮ್ಯತೆ ಇರುವ ಕಾರಣ ಡಾ ಮಚ್‌ ಮತ್ತು ಹರ್ಚ್‌ಬರ್ಡ್‌ರು  ಈ ವಾದವನ್ನು ಮಂಡಿಸಿದ್ದಾರೆ.

ಈ. ದಕ್ಷಿಣ ರಷ್ಯಾ ಮೂಲ. ಭಾಷೆಗಳ ಹೋಲಿಕೆಯ ಆಧಾರದಲ್ಲಿ ದಕ್ಷಿಣ ರಷ್ಯಾದ ಸ್ಟೆಪ್ಪಿಸ್‌ ಪ್ರದೇಶ ಆರ್ಯರ ಮೂಲವೆಂದು ಡಾ. ಬಿ.ಕೆ. ಘೊಷ್‌, ಮ್ಯಾಕ್ಸ್‌ಮುಲ್ಲರ್‌ ಮತ್ತು ನೆಹರಿಂಗ್‌ ಮೊದಲಾದವರು ವಾದಿಸಿದ್ದಾರೆ.

ಉ. ಉತ್ತರ ಧೃವ ಮೂಲ. ಬಾಲಗಂಗಾಧರ ತಿಲಕರು ವೇದಗಳಲ್ಲಿನ ಸಸ್ಯವರ್ಗ, ಪ್ರಾಣಿವರ್ಗ, ಹವಾಮಾನ ಮತ್ತು ಜ್ಯೋತಿಷ್ಯದ ಕೆಲವು ಅಂಶಗಳನ್ನು ಆಧರಿಸಿ The Arctic Home in the Vedas (1903) ಎಂಬ ತಮ್ಮ ಕೃತಿಯಲ್ಲಿ ಆರ್ಯರು ಉತ್ತರ ಧೃವದಿಂದ ದಕ್ಷಿಣಕ್ಕೆ ಬಂದವರೆಂದು ವಾದಿಸಿದ್ದಾರೆ.

   ಕೇವಲ ದೈಹಿಕ ಲಕ್ಷಣಗಳು, ಪುರಾತತ್ವ ಆಧಾರಗಳು ಮತ್ತು ಭಾಷೆಗಳನ್ನು ಆಧರಿಸಿ ಒಂದು ಜನಾಂಗದ ಮೂಲವನ್ನು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ ಮೇಲಿನ ಸಿದ್ಧಾಂತಗಳಿಗೆ ಅನೇಕ ಟೀಕೆಗಳು ಕೇಳಿಬಂದಿವೆ.

೨. ಮಧ್ಯ ಏಷ್ಯಾ ಮೂಲ. ಜರ್ಮನಿಯ ಭಾಷಾತಜ್ಞ ಮ್ಯಾಕ್ಸ್‌ ಮುಲ್ಲರ್‌ ಈಗಿನ ಇರಾನ್‌ ಮತ್ತು ಇರಾಕ್‌ಗಳು ಇವರ ಮೂಲವೆಂದು ತಮ್ಮ ಭಾಷೆಗಳ ವಿಜ್ಞಾನದ ಮೇಲಿನ ಉಪನ್ಯಾಸಗಳು ಎಂಬ ಕೃತಿಯಲ್ಲಿ ಸಂಸ್ಕೃತದ ಮಾತೃ, ಪಿತೃ, ಬ್ರಾತೃ ಮತ್ತು ಗೋವು ಎಂಬ ಪದಗಳಿಗೆ Mother, Father, Brother and Cow ಎಂಬ ಪದಗಳ ನಡುವಣದ ಉಚ್ಛಾರಣೆಯಲ್ಲಿನ ಹೋಲಿಕೆಯನ್ನು ಆಧರಿಸಿ ಈ ವಾದವನ್ನು ಮಂಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಏಷ್ಯಾ ಮೈನರ್‌ನ ಭೋಗಜ್‌ಕಾಯ್‌ ಶಾಸನದಲ್ಲಿ ಕಂಡುಬಂದಿರುವ ದೇವತೆಗಳ ಹೆಸರುಗಳು ಆರ್ಯರ ದೇವತೆಗಳೊಂದಿಗೆ ಹೋಲಿಕೆಯಾಗುವುದನ್ನು ಪ್ರತಿಪಾದಿಸಲಾಗಿದೆ. ಅಲ್ಲದೇ ಇರಾನಿಯನ್ನರ ಪ್ರಾಚೀನ ಕೃತಿ ಜೆನ್‌ಅವಿಸ್ತಾಕ್ಕೂ ವೇದಗಳಲ್ಲಿನ ವಿವರಗಳಿಗೂ ಸಾಮ್ಯತೆ ಇರುವುದು ಕಂಡುಬಂದಿದೆ ಎಂಬುದು ಇವರ ವಾದ.

೩. ಟಿಬೆಟ್‌ ಮೂಲ. ದಯಾನಂದ ಸರಸ್ವತಿಯವರು ತಮ್ಮ ಸತ್ಯಾರ್ಥಪ್ರಕಾಶ ಕೃತಿಯಲ್ಲಿ ಟಿಬೆಟ್ಟಿನಲ್ಲಿ ಹೆಚ್ಚಿದ ಜನಸಂಖ್ಯೆಯ ಕಾರಣ ಸಪ್ತಸಿಂಧೂ ಬಯಲಿಗೆ ವಲಸೆ ಬಂದರೆಂದು ವಾದಿಸಿದ್ದಾರೆ.


  ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆರ್ಯರು ವಿದೇಶಿಯರಲ್ಲ, ಅವರು ಭಾರತದ ಮೂಲದವರೇ ಎಂದು ಅನೇಕ ವಿದ್ವಾಂಸರು ವಾದಿಸಿದ್ದಾರೆ. ಅವರ ಪ್ರಕಾರ ಆರ್ಯರು ಹೊರಗಡೆಯಿಂದ ಬಂದಿದ್ದರೆ ಒಮ್ಮೆಯಾದರೂ ತಮ್ಮ ಮೂಲದ ಕುರಿತು ವೇದಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಅಲ್ಲದೇ ವೇದಗಳಲ್ಲಿ ವರ್ಣಿಸಿರುವ ಭೌಗೋಳಿಕ ವಿವರಗಳು ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಿಸಿದವುಗಳೇ ಆಗಿವೆ. ಅಲ್ಲದೇ ಅವರು ಸಿಂಧೂ, ಗಂಗಾ ಮತ್ತು ಹಿಮಾಲಯಗಳನ್ನು ಮನತುಂಬಿ ಹೊಗಳುತ್ತಿರಲಿಲ್ಲ; ಅಥವಾ ಅವುಗಳಿಗೆ ತಮ್ಮ ಮೂಲ ನೆಲೆಗಳಲ್ಲಿನ ನದಿ ಇಲ್ಲವೇ ಪರ್ವತಗಳನ್ನು ಹೋಲಿಸಿ ವರ್ಣಿಸಬಹುದಾಗಿತ್ತು. ಅಲ್ಲದೇ ಸಂಸ್ಕೃತಕ್ಕೆ ಬದಲಾಗಿ ತಮ್ಮ ಮಾತೃಭಾಷೆಯಲ್ಲಿಯೇ ವೇದಗಳನ್ನು ರಚಿಸುತ್ತಿದ್ದರು. ಹೀಗಾಗಿ ಕೆಳಕಂಡ ವಿದ್ವಾಂಸರು ಆರ್ಯರ ಭಾರತೀಯ ಮೂಲವನ್ನು ಕುರಿತು ಕೆಳಕಂಡಂತೆ ತಮ್ಮ ಅಭಿಪ್ರಾಯ ನೀಡಿದ್ದಾರೆ.

ಡಾ. ಡಿ. ಕಲ್ಲಾ:- ಕಾಶ್ಮೀರ ಮತ್ತು ಹಿಮಾಲಯದ ತಪ್ಪಲು ಪ್ರದೇಶ ಆರ್ಯರ ಮೂಲವಾಗಿತ್ತು. ಇವರ ಈ ವಾದವನ್ನು ಪಂಡಿತ ಲಕ್ಷ್ಮಿಧರ ಶಾಸ್ತ್ರಿಗಳು ಬೆಂಬಲಿಸಿದ್ದಾರೆ.

ಡಾ. ಅವಿನಾಶ ಚಂದ್ರ:- ಪಂಜಾಬ್‌ ಅವರ ಮೂಲ ನೆಲೆಯಾಗಿತ್ತು. ಕಾರಣ ಆರ್ಯರು ದೇಶೀಯರೇ ಹೊರತು ವಿದೇಶಿಯರಲ್ಲ.

ಡಿ. ಎಸ್.‌ ತ್ರಿವೇದಿ:- ಮುಲ್ತಾನ ಆರ್ಯರ ಮೂಲನೆಲೆ. ಇದರ ಪ್ರಾಚೀನ ಹೆಸರು ಮೂಲಸ್ಥಾನ.

ಗಂಗಾನಾಥ ಜಾ ಮತ್ತು ರಾಜಾರಾಂ:- ಆರ್ಯರ ನೆಲೆ ಪಂಜಾಬ್.

ಏ. ಸಿ. ದಾಸ್:-‌ ಪಂಜಾಬಿನ ಸಪ್ತಸಿಂಧೂ ಪ್ರದೇಶ ಆರ್ಯರ ಮೂಲ ನೆಲೆ. ಏಕೆಂದರೆ ಋಗ್ವೇದದಲ್ಲಿನ ಭೌಗೋಳಿಕ ವಿವರಗಳು ಪಂಜಾಬಿನ ಭೌಗೋಳಿಕ ಲಕ್ಷಣಗಳನ್ನೇ ಹೋಲುತ್ತವೆ.

   ಅಲ್ಲದೇ ಸ್ವಾಮಿ ವಿವೇಕಾನಂದರು ಮತ್ತು ಡಾ. ಅಂಬೇಡ್ಕರರು ಆರ್ಯರ ವಲಸೆ ಸಿದ್ಧಾಂತವನ್ನು 

   

ಖಂಡಿಸಿದ್ದು, ಆರ್ಯರು ಭಾರತದ ಮೂಲನಿವಾಸಿಗಳೇ ಆಗಿದ್ದಾರೆ ಎಂದು ವಾದಿಸಿದ್ದಾರೆ.


ಪೂರ್ವ ಮತ್ತು ಉತ್ತರ ವೈದಿಕ ಕಾಲ: ವೈದಿದಕ ಕಾಲದ ಜನಜೀವನ, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿ-ಗತಿಗಳಲ್ಲಿ ಉಂಟಾದ ಬದಲಾವಣೆಗಳನ್ನು ಅವಲಂಬಿಸಿ ಒಟ್ಟಾರೆ ವೈದಿಕ ಯುಗವನ್ನು ಪೂರ್ವ ವೈದಿಕ ಕಾಲ ಮತ್ತು ಉತ್ತರ ವೈದಿಕ ಕಾಲ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಪೂರ್ವ ವೇದ ಕಾಲ ಅಥವಾ ಋಗ್ವೇದ ಕಾಲ (ಸಾ.ಶ.ಪೂ. ೨೦೦೦-೧೫೦೦): ಋಗ್ವೇದ ಕಾಲದ ಜನಜೀವನದ ಪ್ರಮುಖ ಅಂಶಗಳು ಕೆಳಕಂಡಂತಿವೆ.

ರಾಜಕೀಯ ಜೀವನ: ಕುಟುಂಬವು ಒಂದು ಘಟಕವಾಗಿತ್ತು. ಹಲವು ಕುಟುಂಬಗಳ ಗುಂಪನ್ನು ಗ್ರಾಮ ಎನ್ನುತ್ತಿದ್ದರು. ಗ್ರಾಮವು ಮೊದಲ ಆಡಳಿತ ಘಟಕವಾಗಿತ್ತು. ಗ್ರಾಮಿಣಿ ಇದರ ಮುಖ್ಯಸ್ಥ. ರಾಜನ ಆದೇಶಗಳ ಪಾಲನೆ, ನ್ಯಾಯ, ರಕ್ಷಣೆಯ ಕಾರ್ಯಗಳು ಗ್ರಾಮಿಣಿಗೆ ಸೇರಿದ್ದವು.

ಗ್ರಾಮಗಳ ಗುಂಪನ್ನು ವಿಸ್‌ ಎನ್ನುತ್ತಿದ್ದರು. ವಿಸ್ಪತಿ ಇದರ ಮುಖ್ಯಸ್ತ. ಹಲವು ವಿಸ್‌ಗಳ ಗುಂಪನ್ನು ಜನಪದ ಎನ್ನುತ್ತಿದ್ದರು. ಗೋಪ ಇದರ ಮುಖ್ಯಸ್ಥ. ಅಲ್ಲದೇ ಬುಡಕಟ್ಟು ರಾಜ್ಯಗಳು ಅಸ್ಥಿತ್ವದಲ್ಲಿದ್ದವು. ಉದಾ: ಭರತರು, ಪುರುಗಳು, ಯದುಗಳು, ಅನುಗಳು, ತೂರ್ವಾಸರು, ಗಾಂಧಾರರು ಇತ್ಯಾದಿ. ಇವುಗಳ ಮುಖ್ಯಸ್ಥನನ್ನು ರಾಜನ್‌ ಎಂದು ಕರೆಯುತ್ತಿದ್ದರು.

ರಾಜಪ್ರಭುತ್ವ: ವಂಶಪಾರಂಪರ್ಯವಾಗಿತ್ತು. ಆಯ್ಕೆ ಪದ್ಧತಿಯೂ ಇತ್ತು. ಧರ್ಮಪಾಲನೆ, ಗೋರಕ್ಷಣೆ ರಾಜನ ಪ್ರಮುಖ ಕಾರ್ಯಗಳು. ರಾಜನಿಗೆ ಗೌರವದ ಸ್ಥಾನ-ಮಾನಗಳಿದ್ದವು. ವಿಶ್ವಾಧಿಪತಿ ಎಂದೂ ಕರೆಯಲಾಗುತ್ತಿತ್ತು.

   ರಾಜನು ನಿರಂಕುಶನಲ್ಲ. ಶಾಸ್ತ್ರಾನುಸಾರ ಪ್ರಜಾಪಾಲನೆ. ರಾಜ ರಂಜಯತೆ ಪ್ರಜಾ; ಪ್ರಜೆಗಳ ಪರಿಪಾಲನೆ. ಜೀವ, ಆಸ್ತಿ, ಪಶುಗಳ ರಕ್ಷಣೆ. ಕಳ್ಳಕಾಕರ ದಮನ. ಯುದ್ಧಗಳು. ಯಜ್ಞ-ಯಾಗಾದಿಗಳ ಆಚರಣೆ. ಪುರೋಹಿತನ ನೇಮಕ, ದಂಡನಾಯಕತ್ವ, ನ್ಯಾಯದಾನ ರಾಜನ ಕರ್ತವ್ಯಗಳು. ಗೋರಕ್ಷಣೆ ಅತೀ ಪ್ರಮುಖ ಕರ್ತವ್ಯ. ಪ್ರಜಾರಕ್ಷಣೆಯ ಕಾರ್ಯಕ್ಕೆ ಬಲಿ ಎಂಬ ತೆರಿಗೆ ಪಡೆಯುತ್ತಿದ್ದನು.

ಸಹಾಯಕರು:

ಅ. ಪುರೋಹಿತ ಅಥವಾ ರಾಜಗುರು. ಆ. ಗ್ರಾಮಿಣಿ. ಇ. ದಂಡನಾಯಕ. ಈ. ಧಶಪತಿ-ಹತ್ತು ಗ್ರಾಮಗಳ ಮುಖಂಡ. ಉ. ಗೋಪ-ಜನಪದಗಳ ಮುಕ್ಯಸ್ಥ. ಊ. ಮಹಿಷಿ-ಪಟ್ಟದ ರಾಣಿ. ಋ. ಸೂತ-ಕಾಗದ ಪತ್ರಗಳ ರಕ್ಷಕ. ಎ. ಭಾಗದುಗ-ಕಂದಾಯ ವಸೂಲಿ ಅಧಿಕಾರಿ. ಏ. ರಥಕಾರ-ರಥಗಳ ನಿರ್ಮಾಪಕ. ಐ. ಕ್ಷತ್ರಿ-ಮನೆವಾರ್ತೆಕಾರ. ಒ. ಗೋವಿಕರ್ತ-ಬೇಟೆಯಲ್ಲಿ ರಾಜನ ಸಹಾಯಕ. ಓ. ಅಕ್ಷವಾಪ-ಮೇಲ್ವಿಚಾರಕ. ಔ. ಸಂಗಹಿತ್ರಿ-ಬೊಕ್ಕಸದ ಅಧಿಕಾರಿ. ಅಂ. ಉಗ್ರ-ರಕ್ಷಣಾಧಿಕಾರಿ. ಅಃ. ಸ್ಥಪತಿ-ಗಡಿರಕ್ಷಕ. ಗೂಢಾಚಾರಿ, ದೂತ,

ವೈದಿಕ ಸಂಘಟನೆಗಳು: ಸಭಾ ಮತ್ತು ಸಮಿತಿಗಳು. ಜನಾದರಣೀಯವಾದ ಜನರ ಪ್ರತಿನಿಧಿ ಸಭೆಗಳು. ಇವುಗಳ ಬೆಂಬಲದಿಂದ ರಾಜರು ಆಡಳಿತ ನಿರ್ವಹಣೆ ಮಾಡುತ್ತಿದ್ದರು.

ಸಭಾ: ಹಿರಿಯರ ಸಭೆ. ಪುರೋಹಿತ, ಶ್ರೀಮಂತರು ಮತ್ತು ಭೂಮಾಲಿಕರು ಇದರ ಸದಸ್ಯರು. ಸದಸ್ಯರಿಗೆ ಸಭಾಸದರು ಎಂಬ ಹೆಸರು. ಅಧ್ಯಕ್ಷನಿಗೆ ಸಭಾಪತಿ ಎಂದು ಹೆಸರು. ರಾಜನೇ ಸಭಾಪತಿ. ಅವನ ಸಮ್ಮುಖದಲ್ಲಿ ಸಭೆ ಮತ್ತು ನಿರ್ಣಯಗಳು. ರಾಜನು ಸಭಾದ ವಿಶ್ವಾಸ ಪಡೆದಿರಬೇಕಾಗಿತ್ತು. ಮಹಿಳೆಯರಿಗೆ ಪ್ರವೇಶವಿತ್ತು. ಇದು ಅಲ್ಪ ಸದಸ್ಯರ ಸಬೆ ಆಗಿತ್ತು.

ಸಮಿತಿ: ಜನಸಾಮಾನ್ಯರ ಸಭೆ. ಎಲ್ಲಾ ಪ್ರಜೆಗಳು ಇದರ ಸದಸ್ಯರು. ರಾಜನೇ ಅಧ್ಯಕ್ಷ. ಸಮಸ್ಯೆಗಳ ಚರ್ಚೆ ಮತ್ತು ತೀರ್ಮಾನ. ಕೆ.ಪಿ. ಜೇಸ್ವಾಲ್-‌ ಇದೊಂದು ರಾಷ್ಟ್ರೀಯ ಸಭೆ. ರಾಜನ ನೇಮಕ ಮತ್ತು ಉಚ್ಛಾಟನೆಯ ಅಧಿಕಾರ. ಅವನು ನಿರಂಕುಶನಾದರೆ ಉಚ್ಛಾಟನೆ. ರಾಜನು ಸಮಿತಿಯನ್ನು ಕಡೆಗಣಿಸುವಂತಿರಲಿಲ್ಲ. ರಾಜನ ಅಧಿಕಾರವು ಸಮಿತಿಯ ಬೆಂಬಲದ ಮೇಲೆ ನಿಂತಿತ್ತು.

ವಿಧಾತ್:‌ ಧಾರ್ಮಿಕ ಸಭೆ. ಸ್ತ್ರೀ-ಪುರುಷರಿಬ್ಬರೂ ಭಾಗವಹಿಸುತ್ತಿದ್ದರು.

ಸೈನಿಕ ಆಡಳಿತ: ಯುದ್ಧಪ್ರಿಯರಾದ ಕಾರಣ ಸೇನಾಡಳಿತವಿತ್ತು. ಪದಾತಿ, ಅಶ್ವಪಡೆ ಮತ್ತು ರಥಪಡೆಗಳಿದ್ದವು. ಬಿಲ್ಲು-ಬಾಣ, ಖಡ್ಗ, ಈಟಿ, ಬಾಕು, ಕೊಡಲಿ, ಶಿರಸ್ತ್ರಾಣ, ಯುದ್ಧಗಳ ಜಯಕ್ಕೆ ಪುರೋಹಿತರು ಪ್ರಾರ್ಥನೆ. ಋಗ್ವೇದದಲ್ಲಿ ಪುರ್‌ಚರಿಷ್ಣು ಎಂಬ ಕೋಟೆಗಳ ಉಲ್ಲೇಖ. ಯುದ್ಧದಲ್ಲಿ ಆದರ್ಶಗಳ ಪಾಲನೆ.

ನ್ಯಾಯಾಡಳಿತ: ರಾಜನೇ ಅಂತಿಮ ನ್ಯಾಯಾಧೀಶ. ರೂಢಿ-ಸಂಪ್ರದಾಯಗಳೆ ಕಾನೂನುಗಳು. ರಸ್ತೆ ದರೋಡೆ, ಕೊಲೆ, ಗೋವುಗಳ ಅಪಹರಣಗಳು ಸಾಮಾನ್ಯ ಅಪರಾಧಗಳಾಗಿದ್ದವು. ದಂಡ, ಚಡಿ ಏಟು ಶಿಕ್ಷೆಗಳಾಗಿದ್ದವು. ಕೊಲೆಗಾರ ೧೦೦ ಹಸುಗಳ ಇಲ್ಲವೇ ನಾಣ್ಯಗಳ ದಂಡ. ಇದನ್ನು ಶತಾದಾಯ ಎನ್ನುತ್ತಿದ್ದರು. ಸಾಲ ತೀರಿಸದಿದ್ದರೆ ಗುಲಾಮಗಿರಿಯ ಶಿಕ್ಷೆ. ಅಪರಾಧ ಪತ್ತೆಗೆ ದಿವ್ಯ ಪರೀಕ್ಷೆ ಇತ್ತು.

ಸಾಮಾಜಿಕ ಜೀವನ: ಕುಟುಂಬ ವ್ಯವಸ್ಥೆ: ಪಿತೃಪ್ರಧಾನ ಕುಟುಂಬ. ಗೃಹಪತಿ ಅಥವಾ ದಂಪತಿ. ಮನೆಯ ಸದಸ್ಯರ ಮೇಲೆ ಒಡೆತನ. ಕುಟುಂಬದ ಧಾರ್ಮಿಕ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ. ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಗ್ರಾಮೀಣ ಜೀವನ ಪ್ರಧಾನವಾಗಿತ್ತು. ಮರ-ಹುಲ್ಲುಗಳಿಂದ ಮನೆಗಳ ನಿರ್ಮಾಣ. ವಿವಿಧ ಕೋಣೆಗಳು. ಅಗ್ನಿಶಾಲೆ, ಪಾಕಶಾಲೆ, ಅತಿಥಿಗಳ ಕೊಠಡಿ, ವಿಶ್ರಾಂತಿ ಕೊಠಡಿ ಇತ್ಯಾದಿ. ಆಸ್ತಿ ಗಂಡು ಮಕ್ಕಳಲ್ಲಿ ಹಂಚಿಕೆ. ಜಾತಿಪದ್ಧತಿ ರೂಢಿಯಲ್ಲಿರಲಿಲ್ಲ.

ವಿವಾಹ ಪದ್ಧತಿ: ಏಕಪತ್ನಿತ್ವ ಜನಸಾಮಾನ್ಯರಲ್ಲಿ ರೂಢಿ. ಬಹುಪತ್ನಿತ್ವ ಅರಸರು/ಶ್ರೀಮಂತರಲ್ಲಿ ರೂಢಿ. ವಿವಾಹ ಪವಿತ್ರವಾದ ಧಾರ್ಮಿಕ ಬಂಧನ. ಕರಾರು ಅಥವಾ ವ್ಯವಹಾರವಾಗಿರಲಿಲ್ಲ. ವಿವಾಹ ವಿಚ್ಛೇದನ ಇರಲಿಲ್ಲ. ವಧುವಿನ ಮನೆಯ ಮುಂದೆ ಶುಭಕಾರ್ಯ. ಪತ್ನಿ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಸಹಭಾಗಿ. ವಯಸ್ಕ ವಿವಾಹ ಪದ್ಧತಿ ರೂಢಿಯಲ್ಲಿತ್ತು. ಸತಿ ಮತ್ತು ಪರದಾ ಪದ್ಧತಿಗಳು ಇರಲಿಲ್ಲ. ವಿಧವಾ ವಿವಾಹಕ್ಕೆ ಅವಕಾಶವಿತ್ತು. ನಿಯೋಗ ಎಂಬ ನಿರ್ಬಂಧದ ಪದ್ಧತಿ ರೂಢಿಯಲ್ಲಿತ್ತು. ಗಂಡುಸಂತಾನಾಪೇಕ್ಷೆಗಾಗಿ. ವರದಕ್ಷಿಣೆ ಮತ್ತು ತೆರ ಪದ್ಧತಿಗಳು ಇದ್ದವು. ಗಂಡುಸಂತಾನಕ್ಕೆ ಆದ್ಯತೆ; ಮೋಕ್ಷದ ಕಾರಣ. ಆದರೆ ಹೆಣ್ಣು ಸಂತಾನ ಕೀಳಾಗಿರಲಿಲ್ಲ. ಮಹಿಳೆಗೆ ವಿವಾಹ ಕಡ್ಡಾಯವಾಗಿರಲಿಲ್ಲ. ಪಾಣಿಗ್ರಹಣ ಜನಪ್ರಿಯ ಸಂಸ್ಕಾರವಾಗಿತ್ತು. ಸೋಮ, ಸೂರ್ಯ ಮತ್ತು ಕನ್ಯಾದಾನ ಎಂಬ ವಿವಾಹ ಪದ್ಧತಿಗಳು. ಸ್ವಗೋತ್ರ ವಿವಾಹ ನಿಷಿದ್ಧ.

ಸ್ತ್ರೀಯರ ಸ್ಥಾನಮಾನಗಳು: ಗೌರವಾನ್ವಿತ ಸ್ಥಾನ-ಮಾನಗಳು. ಉನ್ನತ ಶಿಕ್ಷಣದ ಹಕ್ಕು. ಧಾರ್ಮಿಕ ಕಾರ್ಯಗಳಲ್ಲಿ ಸಹಭಾಗಿ. ಸಭೆ-ಸಮಿತಿಗಳಲ್ಲಿ ಭಾಗವಹಿಸುತ್ತಿದ್ದರು. ಅನೇಕ ಸ್ತ್ರೀಯರು ವೇದಪಾಂಡಿತ್ಯ ಹೊಂದಿದ್ದರು. ವಿಶ್ವಾವರ, ಅಪಾಲ, ಗಾರ್ಗಿ, ಲೋಪಾಮುದ್ರೆ, ಮೈತ್ರೆಯಿ, ಮುದ್ಗಾಲಿನಿ ಮೊದಲಾದವರು. ಮೈತ್ರೆಯಿ, ಕಾತ್ಯಾಯಿನಿ ಮತ್ತು ಗಾರ್ಗಿಯರು ಯಾಜ್ಞವಲ್ಕ್ಯನೊಂದಿಗೆ ಚರ್ಚೆ. ವರನ ಆಯ್ಕೆ ಸ್ವಾತಂತ್ರ್ಯ. ವಿಧಾವಾ ವಿವಾಹಕ್ಕೆ ಅವಕಾಶ. ಪುರುಷನಿಗೆ ಸಮಾನವಾದ ಸ್ಥಾನ-ಮಾನಗಳು ಇದ್ದವು.

ಆಹಾರ/ಪಾನೀಯ: ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡೂ ಇದ್ದವು. ಗೋಜ್ಞ ಎಂಬ ಅತಿಥಿ ಬಂದಾಗ ಗೋವಿನ ಮಾಂಸದ ಉಪಚಾರವಿತ್ತು. ಮುಂದೆ ನಿಷೇಧ. ಹಾಲಿನ ಉತ್ಪನ್ನಗಳು ಪ್ರಮುಖ ಆಹಾರ. ಸುರ ಮತ್ತು ಸೋಮ ಎಂಬ ಪಾನೀಯಗಳ ಸೇವನೆ.

ಉಡುಪುಗಳು: ನೀವಿ ಎಂಬ ಒಳ ಉಡುಪುಗಳು. ಪರಿಧಾನ ಅಥವಾ ವಾಸ ಎಂಬ ಮೇಲುಡುಗೆ. ಅಧಿವಾಸ ಎಂಬ ಕೆಳ ಉಡುಪು. ಹತ್ತಿ, ಉಣ್ಣೆ ಮತ್ತು ರೇಷ್ಮೆಯ ಬಳಕೆ. ಬಣ್ಣಗಳ ಬಳಕೆ. ಚಿನ್ನದ ಕಸೂತಿ ಬಳಕೆ.

ಆಭರಣಗಳು: ಕಂಠಹಾರ, ಓಲೆ, ಬಳೆ, ಕರ್ಣಶೋಧನ, ತೋಳುಬಂಧಿ, ಕಾಲಂದಿಗೆ, ನಿಷ್ಕ, ರುಕ್ಮ, ಕೇಶಾಲಂಕಾರ ರೂಢಿಯಲ್ಲಿತ್ತು. ಕ್ಷೌರ ಮತ್ತು ಗಡ್ಡ ಬೆಳೆಸುವ ಪದ್ಧತಿಗಳಿದ್ದವು. ವ್ಯಾಪ್ತ ಎಂದರೆ ಕ್ಷೌರಿಕ.

ಮನರಂಜನೆ: ರಥಗಳ ಓಟ, ಕುದುರೆ ಓಟ, ಜೂಜಾಟ, ಪಗಡೆ, ಚದುರಂಗ, ಬೇಟೆ, ಸಂಗೀತ, ನೃತ್ಯ, ನಾಟಕಾಭಿನಯಗಳು ಇದ್ದವು. ಹೊರಾಂಗಣ ಕ್ರೀಡೆಗಳು ಬಹು ಜನಪ್ರಿಯವಾಗಿದ್ದವು.

ವರ್ಣ ವ್ಯವಸ್ಥೆ: ನಾಲ್ಕು ವರ್ಣಗಳಿದ್ದವು. ಆಯ್ಕೆಯ ಸ್ವಾತಂತ್ರ್ಯವಿತ್ತು. ವೃತ್ತಿಗನುಸಾರವಾಗಿ ವರ್ಣ ನಿರ್ಣಯ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಅಜ್ಜೇಷ್ಠಾಸೊ ಅಕನಿಷ್ಠಾಸಹ, ಸಂಬ್ರಾತರೊ ವಾವೃದೊ ಸೌಭಾಗಾಯ – ಋಗ್ವೇದದ ಮಂತ್ರ.

ವಿಜ್ಞಾನ: ಆಯುರ್ವೇದ, ಜೋತಿಷ್ಯಗಳು ತಿಳಿದಿದ್ದವು. ಲೋಹಶಾಸ್ತ್ರವೂ ತಿಳಿದಿತ್ತು.

ನೈತಿಕ ಮಟ್ಟ: ಪರಿಶುದ್ಧ ಜೀವನ ಕ್ರಮ. ಸದ್ಭಾವನೆ ಕೊಡುವಂತೆ ಪ್ರಾರ್ಥನೆ. ಗಾಯತ್ರಿ ಮಂತ್ರ.

ಆರ್ಥಿಕ ಜೀವನ: ಕೃಷಿ ಪ್ರಧಾನ ಕಸುಬು. ಆರ್‌ ಎಂದರೆ ಕೃಷಿ ಎಂದರ್ಥ. ಆರ್ಯ ಎಂದರೆ ಕೃಷಿಕ ಎನ್ನುವ ಅರ್ಥವೂ ಇದೆ. ಮರದ ನೇಗಿಲು ಬಳಕೆ. ಉರುವರ – ಕ್ಷೇತ್ರ. ಗೋದಮ, ಜವ, ವ್ರಿಹಿಸ್‌, ಹತ್ತಿ, ಎಣ್ಣೆಕಾಳುಗಳು, ಹಣ್ಣುಗಳು ಪ್ರಮುಖ ಬೆಳೆಗಳು. ನದಿ, ಕಾಲುವೆ ಮತ್ತು ಬಾವಿ/ಅವತಸ್‌ಗಳಿಂದ ನೀರಿನ ವ್ಯವಸ್ಥೆ. ಉಳುಮೆಗೆ ಪ್ರಾಣಿಗಳ ಬಳಕೆ.

ಪಶುಪಾಲನೆ: ಪಶುಗಳು ಅಂದಿನ ಸಂಪತ್ತು. ಗೋಮತ್‌ ಅಂದರೆ ಶ್ರೀಮಂತ. ಋಗ್ವೇದದಲ್ಲಿ ೧೭೬ ಕಡೆ ಗೋ ಪದದ ಉಲ್ಲೇಖ. ಗವಸ್ತಿ ಅಥವಾ ಗೋಗ್ರಹಣ ಯುದ್ಧಗಳು. ಹಸು, ಕುದುರೆ, ಕುರಿ, ಆಡು, ಎತ್ತು, ಎಮ್ಮೆ  ಇತ್ಯಾದಿಗಳು ಪ್ರಮುಖ ಪ್ರಾಣಿವರ್ಗ. ಯಜುರ್ವೇದದಲ್ಲಿ ೬೦೯ ಪ್ರಾಣಿಗಳ ಹೆಸರುಗಳು. ಬೃಹದಾರಣ್ಯಕದಲ್ಲಿ ಪಶುಪಾಲನೆ ಬಗ್ಗೆ ಮಾಹಿತಿ. ಹಾಲು, ಗೊಬ್ಬರ, ಮಾಂಸ ಮತ್ತು ಚರ್ಮಗಳ ಉಪಯೋಗ. ಗೋವು ಪೂಜನೀಯ; ಹತ್ಯೆ ನಿಷೇಧ. ಆಜ್ಞ ಎಂದರೆ ಕೊಲ್ಲಬಾರದು. ಗೋವು ವಿನಿಮಯ ರೂಪದಲ್ಲಿ ಬಳಕೆ. ಕಿವಿಗಳ ಮೇಲೆ ಮುದ್ರೆಗಳು. ವಿದ್ವತ್‌ ಸಭೆಗಳಲ್ಲಿ ಗೆದ್ದವರಿಗೆ ಗೋವುಗಳ ಬಹುಮಾನ. ಯಾಜ್ಞವಲ್ಕ್ಯರ ಪ್ರಕರಣ. ಗೋಮಾಳ ಅಥವಾ ಗೋಚಾರ ಎಂಬ ಭೂಮಿಗಳು. ಕ್ರಮೇಣ ಗಂಗಾ ಬಯಲಿನಲ್ಲಿ ಸ್ಥಿರ ಜೀವನ ಆರಂಭ. ಇದರಿಂದ ವಿವಿಧ ವೃತ್ತಿಗಳು ಆರಂಬಗೊಂಡವು; ರಥಕಾರ, ಕಮ್ಮಾರ, ಕುಂಬಾರ, ಬಡಗಿ, ನೇಕಾರರು ಇತ್ಯಾದಿ.

ವೃತ್ತಿಗಳು: ನೂಲುವುದು, ನೇಯುವುದು, ಕುಂಬಾರಿಕೆ, ಚಮ್ಮಾರಿಕೆ, ಕಮ್ಮಾರಿಕೆ, ಲೋಹಗಾರಿಕೆ, ಅಕ್ಕಸಾಲಿಗರು, ಬಡಗಿಗಳು, ಚಾಪೆ ನೇಯುವವರು, ಕ್ಷೌರಿಕರು ಮೊದಲಾದ ವೃತ್ತಿಗಳು. ವೃತ್ತಿ ವಿಭಜನೆ ಇತ್ತು. ಕಬ್ಬಿಣ, ಕಂಚು, ಚಿನ್ನ, ತಾಮ್ರಗಳು ತಿಳಿದಿದ್ದವು. ವಿವಿಧ ಬಣ್ಣಗಳ ಮಡಕೆಗಳ ತಯಾರಿಕೆ ತಿಳಿದಿತ್ತು.

ವ್ಯಾಪಾರ/ವಾಣಿಜ್ಯ:- ಅಂತರ್ದೇಶೀಯ ವ್ಯಾಪಾರ ರೂಢಿಯಲ್ಲಿತ್ತು. ವಿನಿಮಯ ಪದ್ಧತಿಯ ಮೂಲಕ ವ್ಯಾಪಾರ. ಫಣಿಗಳು ಎಂಬ ವಣಿಕ ವರ್ಗ. ನಿಷ್ಕ, ಹಸುಗಳು ವಿನಿಮಯಕ್ಕೆ ಬಳಕೆ. ನಿಷ್ಕ, ಸುವರ್ಣ, ಶತಮಾನ, ಕೃಷ್ಣವಲ, ಹಿರಣ್ಯ, ಪದಾಸ್ ಎಂಬ ನಾಣ್ಯಗಳು ಚಲಾವಣೆಯಲ್ಲಿದ್ದವು. ಸಮುದ್ರ ವ್ಯಾಪಾರ ತಿಳಿದಿರಲಿಲ್ಲ.

ಸಾರಿಗೆ-ಸಂಪರ್ಕ: ಗಾಡಿಗಳು, ರಥಗಳು, ಕುದುರೆಗಳ ಬಳಕೆ. ದೋಣಿ ಮತ್ತು ನೌಕೆಗಳನ್ನು ಬಳಸುತ್ತಿದ್ದರು.

ಧಾರ್ಮಿಕ ಜೀವನ: ವೈದಿಕ ಆಚರಣೆಗಳಿಂದ ಹಿಂದೂ ಧರ್ಮದ ಆಚರಣೆಗಳು. ಪ್ರಕೃತಿ ಆರಾಧಕರು. ೩೩ ಪ್ರಧಾನ ದೇವತೆಗಳ ಆರಾಧನೆ. ಇಂದ್ರ, ವರುಣ, ಸೂರ್ಯ, ಉಷಸ್‌, ಅಶ್ವಿನಿ, ಸಾವಿತ್ರಿ, ಪರ್ಜನ್ಯ, ಅಗ್ನಿ, ಸೋಮ, ಸರಸ್ವತಿ, ಬೃಹಸ್ಪತಿ ಮೊದಲಾದವರು. ಯಜ್ಞ-ಯಾಗಗಳ ಆಚರಣೆ. ಹವಿಸ್ಸು ಅರ್ಪಣೆ. ಹೋತ್ರಿ, ಅಧ್ವರ್ಯು, ಉದ್ಗಾತ್ರಿಗಳೆಂಬ ಪುರೋಹಿತರು. ಕರ್ಮ ಸಿದ್ಧಾಂತದಲ್ಲಿ ನಂಬಿಕೆ. ವಿಗ್ರಹಾರಾಧನೆ ಇರಲಿಲ್ಲ. ದೇವಾಲಯಗಳು ಇರಲಿಲ್ಲ. ಅಮೂರ್ತ ಆರಾಧನೆ. ಪ್ರಾರ್ಥನೆ ಮೂಲಕ.

ಶವಸಂಸ್ಕಾರ: ಆರಂಭದಲ್ಲಿ ಹೂಳುವ ಪದ್ಧತಿ. ನಂತರ ಅಗ್ನಿಸಂಸ್ಕಾರ ಮತ್ತು ಬೂದಿಯನ್ನು ನೀರಿನಲ್ಲಿ ಬಿಡುವ ಪದ್ಧತಿಗಳು ಬಳಕೆಗೆ ಬಂದವು.

ಶಿಕ್ಷಣ: ಗುರುಕುಲ ಪದ್ಧತಿ ರೂಢಿಯಲ್ಲಿತ್ತು. ಚರಕರೆಂಬ ಗುರುಗಳು ಇದ್ದರು. ಉಪನಯನ ನಂತರ ಶಿಕ್ಷಣಕ್ಕೆ ಗುರುಕುಲಕ್ಕೆ ಕಳುಹಿಸಲಾಗುತ್ತಿತ್ತು. ಕಠಿಣ ಜೀವನ ಕ್ರಮ. ಮೌಖಿಕ ಬೋಧನಾ ಪದ್ಧತಿ. ವಿವಿಧ ವಿಷಯಗಳ ಕಲಿಕೆ. ದ್ವಿಜ – ಎರಡನೆ ಸಲ ಹುಟ್ಟಿದವನು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources