ಅಧ್ಯಾಯ 4: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ, ಅವುಗಳ ಉದ್ದೇಶಗಳು ಹಾಗೂ ಕಾರ್ಯಗಳು.

ಪೀಠಿಕೆ:- ರಾಷ್ಟ್ರಮಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತ ಸರ್ಕಾರ ITDCಯನ್ನು ಸ್ಥಾಪಿಸಿಕೊಂಡಂತೆ ರಾಜ್ಯಮಟ್ಟದಲ್ಲಿ ಆಯಾ ರಾಜ್ಯ ಸರ್ಕಾರಗಳು ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿಕೊಂಡವು. ಅದೇ ರೀತಿ ಕರ್ನಾಟಕ ಸರ್ಕಾರವು 1971ರ ಫೆಬ್ರವರಿ 3 ರಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮವನ್ನು ಸ್ಥಾಪಿಸಿ ಕೊಂಡಿತು (KSTDC). KSTDCಯು ಇಂದು ಕರ್ನಾಟಕ ರಾಜ್ಯದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಅಭಿವೃದ್ಧಿಪಡಿಸುತ್ತಿರುವ ನಮ್ಮ ರಾಜ್ಯಮಟ್ಟದ ಏಕೈಕ ಪ್ರವಾಸೋದ್ಯಮ ಸಂಘಟನೆಯಾಗಿದೆ. KSTDCಯು ಈಗ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಣ ಒದಗಿಸುವುದು, ಪ್ರವಾಸೋದ್ಯಮದ ಪ್ರಚಾರ, ಪ್ರವಾಸಿ ತಾಣಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, KSTDCಗೆ ನಿರ್ದೇಶನಗಳನ್ನು ನೀಡುವುದು ಪ್ರವಾಸೋದ್ಯಮ ಇಲಾಖೆಯ ಕಾರ್ಯಗಳಾಗಿವೆ. ಕರ್ನಾಟಕ ಸರ್ಕಾರ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯವನ್ನು 10 ಪ್ರವಾಸಿ ವಲಯಗಳಾಗಿ ವಿಂಗಡಿಸಿದೆ. ಅವುಗಳ ನಿರ್ವಹಣೆಗಾಗಿ ಪ್ರಚಾರ ಮತ್ತು ಅಭಿವೃದ್ಧಿ ನಿರ್ದೇಶಕರನ್ನು ನೇಮಿಸಲಾಗಿದೆ. ಇದು ಆ - ಭಾಗದ ಪ್ರವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಪ್ರವಾಸೋದ್ಯಮ ಇಲಾಖೆಯು ಆಡಳಿತಾತ್ಮಕ ಇಲಾಖೆಯಾಗಿದ್ದು ವ್ಯವಹಾರ ನಿರ್ವಹಣೆಯಲ್ಲಿ ನೇರವಾಗಿ ಕಾರ್ಯಾಚರಿಸುವುದು ಸುಲಭ ಮತ್ತು ಸುವ್ಯವಸ್ಥಿತ ವಲ್ಲ. ಆದ್ದರಿಂದಲೇ 1956ರ ಕಂಪನಿ ಕಾಯಿದೆ ಅಡಿಯಲ್ಲಿ ಫೆಬ್ರವರಿ 3, 1971ರಂದು KSTDCಯನ್ನು ಸ್ಥಾಪಿಸಲಾಯಿತು.

KSTDCಯ ಧ್ಯೇಯೋದ್ದೇಶಗಳು (Objectives) ಅಥವಾ ಕಾರ್ಯಗಳು

1. ಪ್ರವಾಸಿ ತಾಣಗಳಲ್ಲಿ ವಸತಿ, ಉಪಾಹಾರ ಗೃಹ, ಕ್ಯಾಂಟೀನ್, ಮೋಟೆಲ್, ವಿಶ್ರಾಂತಿ ಗೃಹ, ಕುಟೀರ ಪ್ರವಾಸಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು.

2. ಪ್ರವಾಸೋದ್ಯಮಕ್ಕೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ವಸತಿ ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸುವುದು.

3. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ಒದಗಿಸುವುದು. ಪ್ರವಾಸ ಮಾಹಿತಿಯನ್ನು ದೇಶ-ವಿದೇಶಗಳ ಪ್ರವಾಸಿಗಳಿಗೆ ಮುಟ್ಟಿಸುವುದು. ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವ ಕುರಿತು ಸಾಹಿತ್ಯ ಪ್ರಕಟಿಸುವುದು.

4. ಅಗ್ಗದ ದರದಲ್ಲಿನ ಹೋಟೆಲ್, ಉಪಾಹಾರ, ಕ್ಯಾಂಟೀನ್‌ಗಳನ್ನು ನಿರ್ವಹಿಸುವುದು.

5. ಅಗ್ಗದ ದರದಲ್ಲಿ ಸುಖಕರ ವಿಲಾಸಿ ರೈಲು ಪ್ರವಾಸ, ಪ್ಯಾಕೇಜ್ ಟೂರ್ ಗಳನ್ನು (ಯೋಜಿತ ಪ್ರವಾಸಗಳು) ಏರ್ಪಡಿಸುವುದು.

6. ಕರ್ನಾಟಕ ಸರ್ಕಾರ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ಅಧೀನ ದಲ್ಲಿರುವ ಆಸ್ತಿಗಳಾದ ಪೋಟೆಲ್‌ಗಳು, ಪ್ರವಾಸಿ ಬಂಗಲೆ, ಕ್ಯಾಂಟೀನ್, ಕಾಟೇಜ್‌ಗಳನ್ನು ಸ್ವಾಧೀನ ಮಾಡಿಕೊಂಡು ಅವನ್ನು ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಪಡಿಸುವುದು.

7. ಕರ್ನಾಟಕದ ಕರಕುಶಲ ಕಲೆಗಳತ್ತ ಪ್ರವಾಸಿಗಳನ್ನು ಆಕರ್ಷಿಸಿ ಹೆಚ್ಚಿನ ವಿದೇಶಿ ವಿನಿಮಯ ಬರುವಂತೆ ಮಾಡುವುದು.

8. ಪ್ರೇಕ್ಷಣೀಯ ತಾಣಗಳನ್ನು ಆಕರ್ಷಣೀಯವಾಗಿಡುವುದು.

9. ಪ್ರವಾಸಿ ತಾಣಗಳಲ್ಲಿ ವಸ್ತು ಪ್ರದರ್ಶನ, ಹಬ್ಬ, ಉತ್ಸವ, ನೈಟ್‌ಕ್ಲಬ್, ಕ್ರೀಡೆ, ಈಜುಕೊಳ, ಸಂಗೀತ, ನೃತ್ಯ ಮೊದಲಾದ ಮನೋರಂಜನೆ ನೀಡುವುದು.

10. ಪ್ರವಾಸಿಗಳಿಗೆ ಕೈಗೆಟುಕುವ ದರದಲ್ಲಿ ಬಸ್ಸು, ಕಾರುಗಳನ್ನು ಒದಗಿಸುವುದು.

11. ಕಲಾತ್ಮಕ ವಸ್ತುಗಳು, ಕರಕುಶಲ ವಸ್ತುಗಳ ಮಾರಾಟ, ಶಿಲ್ಪಗಳು, ಚಿತ್ರಗಳು, ಕೆತ್ತನೆ ವಸ್ತುಗಳನ್ನು ಖರೀದಿ ಮತ್ತು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವುದು. ಅಂದರೆ ಮಾರಾಟ ಮಳಿಗೆಗಳನ್ನು ಸ್ಥಾಪಿಸುವುದು.

12. ಕರ್ನಾಟಕದ ಸಂಸ್ಕೃತಿ, ವೈಭವ ಬಿಂಬಿಸುವ ಕೃತಿಗಳು, ಕೈಪಿಡಿಗಳು, ಸಿ.ಡಿ.ಗಳು, ಪತ್ರಿಕೆಗಳು, ಮ್ಯಾಗ್‌ಜಿನ್‌ಗಳನ್ನು ಆಕರ್ಷಕವಾಗಿ ಮುದ್ರಿಸಿ ಪ್ರಕಟಿಸುವುದು.

13. ಪೊಸ ಪ್ರವಾಸಿ ತಾಣಗಳನ್ನು ಗುರ್ತಿಸಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಪಡಿಸುವುದು.

14. ಬೋಟ್ ಕ್ಲಬ್‌ಗಳನ್ನು ನಡೆಸುವುದು, ಇತ್ಯಾದಿ.

*****

 

ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮ

   ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತವು ದಿನಾಂಕ: 27 ಜುಲೈ 2015ರಂದು ಸರ್ಕಾರಿ ಒಡೆತನದ ಒಂದು ಉದ್ಯಮವಾಗಿ ಆರಂಭಗೊಂಡಿತು. ಇದರ ಮೂಲ ಬಂಡವಾಳವು ಸು. 6.5 ಕೋಟಿಗಳು.  ಇದು ಕರ್ನಾಟಕದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ನೋಡೆಲ್ ಏಜೆನ್ಸಿಯಾಗಿದೆ. ಈ ಸಂಸ್ಥೆಯು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ  (PPP) ಅಥವಾ ಜಂಟಿ ಉದ್ಯಮಗಳಂತಹ (Joint Venture)  ಸೂಕ್ತ ವಿಧಾನಗಳ ಮೂಲಕ ಪ್ರವಾಸೋದ್ಯಮ ಯೋಜನೆಗಳ  ಅಭಿವೃದ್ಧಿಗೆ ನೆರವನ್ನು ನೀಡುತ್ತದೆ. ಅಲ್ಲದೇ ಕರ್ನಾಟಕದಾದ್ಯಂತ ಪ್ರವಾಸಿ  ಕೇಂದ್ರಗಳ ಅಭಿವೃದ್ಧಿಗೆ ಅನುಕೂಲ ಕಲ್ಪಿಸಲು ಬೃಹತ್ ಪ್ರವಾಸೋದ್ಯಮ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ  ಪ್ರವಾಸಿಗರಿಗೆ ಸ್ವಚ್ಛ ಶೌಚಾಲಯಗಳು, ಪ್ರವಾಸಿ ಸ್ಥಳಗಳಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ವಿಶ್ರಾಂತಿ ತಾಣಗಳು, ವಾಹನ ನಿಲುಗಡೆ ಸೌಲಭ್ಯ, ಸಂಪರ್ಕ ರಸ್ತೆಗಳ ಅಭಿವೃದ್ಧಿ, ಮಾಹಿತಿ ಕೈಪಿಡಿಗಳು ಇತ್ಯಾದಿಗಳನ್ನು ಒದಗಿಸುತ್ತದೆ.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources