ಶ್ರೀಕೃಷ್ಣದೇವರಾಯನ ಕುರಿತ ಟಿಪ್ಪಣಿ (ನಕಾಶೆ ಅಧ್ಯಯನಕ್ಕಾಗಿ)

  ವಿಜಯನಗರ ಸಾಮ್ರಾಜ್ಯದ ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಸಾಮ್ರಾಜ್ಯದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ 1509-1529. ಧರ್ಮರಕ್ಷಣೆಗಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ ಉನ್ನತ ಕೀರ್ತಿಯನ್ನೂ ಪಡೆಯಿತು. ಪೇಸ್, ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು ಇವನ ಆಸ್ಥಾನದಲ್ಲಿದ್ದು, ರಾಜನ ವ್ಯಕ್ತಿತ್ವ ಮತ್ತು ವೈಭವಗಳನ್ನು ಕಣ್ಣಾರೆ ಕಂಡು ಅವನ್ನು ವಿವರವಾಗಿ ವರ್ಣಿಸಿದ್ದಾರೆ.

   ಮಲಸೋದರ ಇಮ್ಮಡಿ ವೀರನರಸಿಂಹನ ಮರಣಾನಂತರ ಕೃಷ್ಣದೇವರಾಯ ಸಿಂಹಾಸನವೇರಿದನು. ಪಟ್ಟಕ್ಕೆ ಬಂದೊಡನೆ ಆತ ಸೈನ್ಯವನ್ನು ಸುವ್ಯವಸ್ಥೆಗೊಳಿಸಿ ಯುದ್ಧ ನಿರತನಾಗಬೇಕಾಯಿತು. ದಕ್ಷಿಣದಲ್ಲಿ ಉಮ್ಮತ್ತೂರಿನ ಗಂಗರಾಜನ ಮೇಲೆ ಮಾಡಿದ ಯುದ್ಧದಲ್ಲಿ (1510-1512) ಉಮ್ಮತ್ತೂರು, ಪೆನುಗೊಂಡೆ, ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣಗಳು ಇವಇದರಿಂದ ನ ವಶವಾದುವು. ಪ್ರದೇಶಗಳನ್ನು ಶ್ರೀರಂಗಪಟ್ಟಣ ಪ್ರಾಂತ್ಯವನ್ನಾಗಿ ಮಾಡಲಾಯಿತು. ಅನಂತರ ಈತ ಪೂರ್ವ ದೇಶಕ್ಕೆ ನುಗ್ಗಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಡಿದು, ಪ್ರತಾಪರುದ್ರ ಗಜಪತಿಯನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು ಮದುವೆಯಾದ. 1520ರಲ್ಲಿ ನಡೆದ ರಾಯಚೂರು ಯುದ್ಧದಲ್ಲಿ ಕೃಷ್ಣದೇವರಾಯನಿಂದ ಬಿಜಾಪುರದ ಸುಲ್ತಾನ ಸಂಪೂರ್ಣವಾಗಿ ಸೋತ. ಇವನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕೃಷ್ಣಾ ಗೋದಾವರಿಗಳವರೆಗೂ ಪೂರ್ವಪಶ್ಚಿಮಗಳಲ್ಲಿ ಸಮುದ್ರತೀರದವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ವಿಸ್ತರಿಸಿ ದಕ್ಷಿಣ ಭಾರತದಲ್ಲಿ ಶಾಂತಿ ನೆಲಸಿತು. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಾಧೀಶ್ವರ ಎಂಬ ಕೃಷ್ಣದೇವರಾಯನಿಗಿದ್ದ ಬಿರುದು ಸಾರ್ಥಕವಾಯಿತು. ಈತನು ಪೋರ್ಚುಗೀಸರೊಂದಿಗೂ ಸಹ ಉತ್ತಮ ಸಂಬಂಧಗಳನ್ನು ಹೊಂದಿದ್ದನು.

   ಕೃಷ್ಣದೇವರಾಯ ಪ್ರಖ್ಯಾತನಾಗಿರುವುದು ತನ್ನ ವಿಜಯಯಾತ್ರೆಗಳಿಗಿಂತ ಅಧಿಕವಾಗಿ ತಾನು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಕೊಟ್ಟ ಪ್ರೋತ್ಸಾಹದಿಂದಾಗಿ. ಈತ ಮಹಮ್ಮದೀಯರಿಂದ ನಾಶವಾಗಿದ್ದ ಸುಪ್ರಸಿದ್ಧ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ, ಹಿಂದೂಧರ್ಮದ ಪುನರೇಳಿಗೆಗೆ ಕಾರಣನಾದ. ಉದಯಗಿರಿಯಿಂದ ಬಾಲಗೋಪಾಲವಿಗ್ರಹವನ್ನು ತರಿಸಿ ರಾಜಧಾನಿಯಲ್ಲಿ ಪ್ರತಿಷ್ಠಿಸಿದುದಲ್ಲದೆ, ಹಂಪಿಯ ವಿಜಯವಿಠಲಸ್ವಾಮಿಯ ಕಲಾಪೂರ್ಣವಾದ ದೇವಾಲಯವನ್ನು ಕಟ್ಟಿಸಿದ. ಈತ ಎಲ್ಲ ಮತಗಳಿಗೂ ಆಶ್ರಯದಾತನಾಗಿದ್ದ. ಮಾಧ್ವ ಗುರು ವ್ಯಾಸರಾಯರು ವೈಷ್ಣವಮತವನ್ನೂ ಶ್ರೀವೈಷ್ಣವ ಗುರು ತಾತಾಚಾರ್ಯರು ಶ್ರೀವೈಷ್ಣವ ಮತವನ್ನೂ ವಲ್ಲಭಾಚಾರ್ಯರು ಶುದ್ಧಾದ್ವೈತ ಮತವನ್ನೂ ಪ್ರಚಾರ ಮಾಡಿದರು. ಪಂಡಿತರಿಂದಲೂ ಕವಿಗಳಿಂದಲೂ ಇವನ ಆಸ್ಥಾನ ತುಂಬಿತ್ತು. ತೆಲುಗು ಸಾಹಿತ್ಯ ಬಹಳ ಮಟ್ಟಿಗೆ ಅಭಿವೃದ್ಧಿ ಹೊಂದಿತು. ಇವರ ಕಾಲ ಸಾಹಿತ್ಯ ರಂಗದಲ್ಲಿ ಸ್ವರ್ಣಯುಗವೆಂದು ಪ್ರಸಿದ್ಧವಾಗಿದೆ. ಪ್ರಸಿದ್ಧರಾದ ಅಲ್ಲಸಾನಿಪೆದ್ದನ, ಪಿಂಗಳಿಸೂರನ, ಮಲ್ಲನ, ತಿಮ್ಮನ, ರಾಮಭದ್ರ, ತೆನಾಲಿ ರಾಮಕೃಷ್ಣ, ಧೂರ್ಜಟಿ, ರುದ್ರಕವಿ ಎಂಬ ಅಷ್ಟದಿಗ್ಗಜರು ಇವನ ಆಸ್ಥಾನವನ್ನು ಅಲಂಕರಿಸಿ ಉದ್ಗ್ರಂಥಗಳನ್ನು ರಚಿಸಿದರು. ಮನುಚರಿತ್ರೆಯನ್ನು ಬರೆದ ಅಲ್ಲಸಾನಿ ಪೆದ್ದನ ಇವರಲ್ಲಿ ಅಗ್ರಗಣ್ಯ. ಕೃಷ್ಣದೇವರಾಯ ಇತರ ಭಾಷೆಗಳಿಗೂ ಇದೇ ರೀತಿಯಾದ ಪ್ರೋತ್ಸಾಹ ನೀಡಿದ. ತಿಮ್ಮಕವಿ ಇವನ ಆಶ್ರಯದಲ್ಲಿ ಕನ್ನಡದಲ್ಲಿ ಗದುಗಿನ ಭಾರತವನ್ನು ಪೂರ್ತಿ ಮಾಡಿದ. ಪುರಂದರ-ಕನಕದಾಸರು ಅಮೋಘವಾದ ದೇವರನಾಮಗಳನ್ನು ಸೃಷ್ಟಿಸಿದರು. ಸಂಸ್ಕೃತದಲ್ಲಿ ಜಾಂಬವತೀ ಕಲ್ಯಾಣ, ಮದಾಲಸ ಚರಿತ್ರೆ, ಸತ್ಯವಧೂ ಪ್ರೀಣನ, ಸಕಲಕಥಾ ಸಾರಸಂಗ್ರಹಂ, ಜ್ಞಾನಚಿಂತಾಮಣಿ, ರಸಮಂಜರೀ-ಎಂಬ ಗ್ರಂಥಗಳನ್ನೂ ತೆಲುಗಿನಲ್ಲಿ ಅಮುಕ್ತಮಾಲ್ಯದ ಎಂಬ ಕಾವ್ಯವನ್ನೂ ಕೃಷ್ಣದೇವರಾಯನೇ ರಚಿಸಿದನೆಂದು ಹೇಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ ದೊರಕಿರುವವು ಜಾಂಬವತೀ ಪರಿಣಯ ಮತ್ತು ಅಮುಕ್ತಮಾಲ್ಯದ. ಸಾಮ್ರಾಜ್ಯ ವಿಸ್ತಾರ, ದಕ್ಷ ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳಿಂದ ಶ್ರೀಮಂತವಾಗಿದ್ದ ಕೃಷ್ಣದೇವರಾಯನ ವೈಭವದ ಆಡಳಿತವು ಭಾರತದ ಚರಿತ್ರೆಯಲ್ಲಿ ಚಿರಸ್ಮರಣೀಯವಾದುದು.

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ