ಪ್ರವಾಸೋದ್ಯಮದಲ್ಲಿ ಗೃಹ ವಸತಿಗಳು.
ಪೀಠಿಕೆ:- ಭಾರತದ ಸಂಸ್ಕೃತಿಯಲ್ಲಿ
ಅತಿಥಿಗಳನ್ನು ದೇವರೆಂದು ಭಾವಿಸುವ “ಅಥಿಥಿದೇವೋಭವ“ ಎಂಬ ನುಡಿಯಿದೆ. ಅದರಂತೆ ಭಾರತೀಯರು ತಮ್ಮ ಅತಿಥಿಗಳನ್ನು
ಉಪಚರಿಸುವಲ್ಲಿ ಉತ್ತಮ ಆಸ್ತೆ ವಹಿಸುತ್ತಾರೆ. ಆದರೆ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹೋಟೆಲುಗಳಲ್ಲಿ
ಉಳಿದುಕೊಳ್ಳುವ ಪ್ರವಾಸಿಗರಿಗೆ ಭಾರತೀಯರ ಈ ಅತಿಥಿದೇವೋಭವ ಎಂಬ ಉದಾತ್ತ ಮೌಲ್ಯ ಅರಿವಿಗೆ ಬರುವುದೇ
ಇಲ್ಲ. ಆದರೆ ಇತ್ತೀಚಿಗೆ ಪ್ರವಾಸೋದ್ಯಮದಲ್ಲಿ ಚಾಲ್ತಿಗೆ ಬರುತ್ತಿರುವ ಗೃಹ ವಾಸ್ತವ್ಯ ಅಥವಾ ಗೃಹ
ವಸತಿಗಳಿಂದ ಭಾರತೀಯರ ಆತಿಥ್ಯದ ಅನುಭವವು ಆಗುತ್ತಿದೆ.
ಗೃಹವಸತಿ ಅಥವಾ ಗೃಹವಾಸ್ತವ್ಯ:-
ಗೃಹವಸತಿ ಅಂದರೆ ಸಾಮಾನ್ಯ ಅಥವಾ ವಾಣಿಜ್ಯ ವಸತಿ ನಿಲಯಗಳಲ್ಲಿ ಗ್ರಾಹಕರಿಗೆ ಅಥವಾ ಪ್ರವಾಸಿಗರಿಗೆ
ನೀಡುವ ಊಟ ಮತ್ತು ವಸತಿಗಳ ಸೌಲಭ್ಯವನ್ನು ಕುಟುಂಬಸ್ಥರು ವಾಸಿಸುವ ಮನೆಗಳಲ್ಲೇ ನೀಡುವುದಾಗಿದೆ. ಅಂದರೆ
ತಾವು ವಾಸಕ್ಕೆಂದು ನಿರ್ಮಿಸುವ ಮನೆಗಳಲ್ಲಿಯೇ ಹೆಚ್ಚುವರಿಯಾಗಿ ಅಥವಾ ಅತಿಥಿಗಳಿಗೆಂದೇ ಪ್ರತ್ಯೇಕವಾದ
ಮನೆಗಳನ್ನು ನಿರ್ಮಿಸಿ ಅಲ್ಲಿ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡುವುದರ ಜೊತೆಗೆ ಅವರ ಊಟ-ುಪಚಾರಗಳ
ಜವಾಬ್ದಾರಿಯನ್ನೂ ಕುಟುಂಬದ ಸದಸ್ಯರೇ ವಹಿಸಿಕೊಳ್ಳುತ್ತಾರೆ. ಇಂತಹ ಗೃಹವಸತಿಗಳಲ್ಲಿ ವಾಣಿಜ್ಯ ಉದ್ದೇಶದ
ಹೋಟೆಲು ಅಥವಾ ವಸತಿನಿಲಯಗಳಲ್ಲಿ ನೀಡುವ ಸೌಲಭ್ಯಗಳಿಗಿಂತ ಉತ್ತಮವಾದ ಮತ್ತು ಆತ್ಮೀಯವಾದ ಆತಿಥ್ಯವು
ಗ್ರಾಹಕರಿಗೆ ಸಿಗುತ್ತದೆ. ಅದಕ್ಕೆ ಪ್ರತಿಯಾಗಿ ಅಲ್ಲಿ ಉಳಿದುಕೊಳ್ಳುವ ಅತಿಥಿಗಳು ಅಥವಾ ಗ್ರಾಹಕರು
ನಿಗದಿತ ಹಣ ಪಾವತಿ ಮಾಡಬೇಕಾಗುತ್ತದೆ.
ಗೃಹವಸತಿಗಳ ಜನಪ್ರಿಯತೆಗೆ
ಕಾರಣಗಳು:- ವಾಣಿಜ್ಯ ವಸತಿನಿಲಯಗಳಿಗಿಂತ ಗೃಹವಸತಿಗಳು ಹೆಚ್ಚು ಜನಪ್ರಿಯವಾಗುತ್ತಿರುವುದಕ್ಕೆ ಹಲವಾರು
ಕಾರಣಗಳಿವೆ. ಅವುಗಳಲ್ಲಿ,
01. ವೈವಿಧ್ಯಮಯ ವಸತಿ
ಸೌಲಭ್ಯಗಳು::- ಗೃಹವಸತಿಗಳು ಭಾರತದ ಅಥವಾ ಆಯಾ ರಾಜ್ಯಗಳ ವೈವಿಧ್ಯಮಯ
ಸನ್ನಿವೇಶಗಳು ಮತ್ತು ವಸತಿ ಸೌಲಭ್ಯಗಳ ಅನುಭವಗಳನ್ನು ಗ್ರಾಹಕರಿಗೆ ನೀಡುತ್ತವೆ. ಅಂದರೆ ತೋಟಗಳಲ್ಲಿನ
ಮನೆಗಳು, ಐತಿಹಾಸಿಕ ಕಟ್ಟಡಗಳು, ಕೋಟೆಗಳು
ಮತ್ತು ಒಳನಾಡುಗಳಲ್ಲಿನ ಗ್ರಾಮೀಣ ವಸತಿಗಳಂತಹ
ವೈವಿಧ್ಯಮಯ ವಸತಿ ಸೌಲಭ್ಯಗಳು ಗೃಹವಸತಿಗಳಲ್ಲಿ ದೊರೆಯುತ್ತವೆ. ಇಲ್ಲಿ ಗ್ರಾಮೀಣ ಜನರೊಂದಿಗೆ ಮತ್ತು ಶ್ರೀಮಂತ ಜನರೊಂದಿಗೆ
ಉಳಿದುಕೊಳ್ಳುವ ಅವಕಾಶ ಸಹಾ ದೊರೆಯುತ್ತದೆ. ಅಂದರೆ ಭಾರತದ ಎಲ್ಲಾ ವರ್ಗದ ಜನರೊಂದಿಗೂ ಒಡನಾಡುವ ಅವಕಾಶವನ್ನು
ಗೃಹವಸತಿಗಳು ನೀಡುತ್ತವೆ.
02. ವೈಯುಕ್ತಿಕ ಉಪಚಾರ:-
ವಾಣಿಜ್ಯ
ವಸತಿಗಳಿಗೆ ಹೋಲಿಸಿಕೊಂಡಲ್ಲಿ ಗೃಹವಸತಿಗಳಲ್ಲಿ ಸೀಮಿತ ಕೊಠಡಿಗಳಿರುವ ಕಾರಣದಿಂದಾಗಿ ಗ್ರಾಹಕರಿಗೆ
ಉತ್ತಮ ಸೇವೆ ದೊರೆಯುತ್ತದೆ. ಏಕೆಂದರೆ ಗೃಹವಸತಿಗಳನ್ನು ನಡೆಸುವ ಕುಟುಂಬದ ಸದಸ್ಯರೇ ವೈಯುಕ್ತಿಕ ಗಮನ
ಹರಿಸುವ ಮೂಲಕ ತಮ್ಮ ಅತಿಥಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಅಲ್ಲದೇ ಅತಿಥಿಗಳು ಅಥವಾ
ಗ್ರಾಹಕರು ಆ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲೂ ಅವಕಾಶವಿರುತ್ತದೆ. ಇದರಿಂದಾಗಿ ಪ್ರವಾಸಿಗರು
ತಾವು ಉಳಿದುಕೊಳ್ಳುವ ಪ್ರದೇಶಗಳ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ. ಗೃಹವಸತಿಯ ಸಮಯದಲ್ಲಿನ
ಬಾಂಧವ್ಯವು ಗ್ರಾಹಕರು ಮತ್ತು ಆತಿಥೇಯರ ನಡುವೆ ಉತ್ತಮ ಸಂಬಂಧಗಳು ಬೆಳೆಯಲು ಕಾರಣವಾಗುತ್ತದೆ.
03. ಸುರಕ್ಷತೆ:-
ಸಾಮಾನ್ಯವಾಗಿ
ಮಹಿಳೆಯರಿಗೆ ಹೊರಗಿನ ಸಂಚಾರಗಳಲ್ಲಿ ತಮ್ಮ ಸುರಕ್ಷತೆಯ ಭಯವಿರುತ್ತದೆ. ಆದರೆ ಗೃಹವಸತಿಗಳಲ್ಲಿ ಮಹಿಳೆಯರಿಗೆ
ತಮ್ಮ ಸುರಕ್ಷತೆಯ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ. ಏಕೆಂದರೆ ಅವರು ಕುಟುಂಬದೊಂದಿಗೆ ಉಳಿದುಕೊಳ್ಳುವುದರಿಂದ
ಅವರ ಸುರಕ್ಷತೆಗೆ ಯಾವುದೇ ಆತಂಕವಿರುವುದಿಲ್ಲ. ಗೃಹವಸತಿ ಒದಗಿಸುವವರು ಸ್ಥಳೀಯ ಅಪಾಯಗಳ ಬಗ್ಗೆ ಗ್ರಾಹಕರಿಗೆ
ಅಥವಾ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡುತ್ತಾರೆ. ಕೆಲವೊಮ್ಮೆ ಅವರೇ ತಮ್ಮ ಗ್ರಾಹಕರಿಗೆ ವಾಹನ ಸೌಲಭ್ಯಗಳನ್ನೂ
ಒದಗಿಸುವ ಸಾದ್ಯತೆಗಳಿರುತ್ತವೆ. ಇದರಿಂದ ಏಕಾಂಗಿಯಾಗಿ ಪ್ರವಾಸಗಳಿಗೆ ಹೋಗುವ ಮಹಿಳೆಯರಿಗೆ ಗೃಹವಸತಿಗಳು
ಉತ್ತಮ ಆಯ್ಕೆಗಳಾಗಿರುತ್ತವೆ.
04. ಸ್ಥಳೀಯ ತಿಳುವಳಿಕೆ:-
ಗೃಹವಸತಿಗಳಲ್ಲಿ
ಉಳಿದುಕೊಳ್ಳುವ ಪ್ರವಾಸಿಗರಿಗೆ ಕುಟುಂಬದ ಸದಸ್ಯರೇ ಅವರು ನೋಡಬೇಕಾದ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ
ಬಗ್ಗೆ ಮಾಹಿತಿ ನೀಡುತ್ತಾರೆ. ಏಕೆಂದರೆ ಮಾರ್ಗದರ್ಶಿ ಪುಸ್ತಕಗಳಲ್ಲಿನ ಮಾಹಿತಿಗಳಿಗಿಂತ ಸ್ಥಳೀಯರು
ಪಡೆದಿರುವ ಜ್ಞಾನವು ಹೆಚ್ಚು ನಂಬಲರ್ಹವಾಗಿರುತ್ತದೆ.
05. ಉತ್ತಮ ಆಹಾರ:-
ಗೃಹವಸತಿಗಳಲ್ಲಿ
ಪ್ರವಾಸಿಗರಿಗೆ ಭಾರತದ ಅಥವಾ ಸ್ಥಳೀಯವಾಗಿ ತಯಾರಿಸುವ ಆಹಾರಗಳ ನೈಜ ರುಚಿಯನ್ನು ಸವಿಯಲು ಅವಕಾಶವಾಗುತ್ತದೆ.
ಏಕೆಂದರೆ, ವಾಣಿಜ್ಯ ವಸತಿಗಳಲ್ಲಿ ತಯಾರಿಸುವ ಆಹಾರವು ಕೆಲವೊಮ್ಮೆ ನೈಜ ರುಚಿಯನ್ನು ನೀಡಲಾರವು. ಅಲ್ಲದೇ
ಪ್ರವಾಸಿಗರು ಆ ಅಡುಗೆಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನೂ ನೋಡಲು ಗೃಹವಸತಿಗಳಲ್ಲಿ ಅವಕಾಶವಿರುತ್ತದೆ.
ಏಕೆಂದರೆ ತಮ್ಮ ಗ್ರಾಹಕರನ್ನು ಆತಿಥೇಯರು ಅಡುಗೆ ಮನೆಗಳಿಗೂ ಬರಲು ಅವಕಾಶ ನೀಡಬಹುದು.
06. ವೈವಿಧ್ಯಮಯ ಚಟುವಟಿಕೆಗಳು:-
ಗೃಹವಸತಿಗಳಲ್ಲಿನ
ಪ್ರವಾಸಿಗರಿಗೆ ಕುಟುಂಬದ ಸದಸ್ಯರೊಂದಿಗೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಏಕೆಂದರೆ ಗೃಹವಸತಿ ಸೇವೆ ಒದಗಿಸುವವರು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬಯಸುವುದರಿಂದ ಕೆಲವೊಮ್ಮೆ
ಅವರನ್ನು ತಮ್ಮ ಕೌಟುಂಬಿಕ ಸಭೆ-ಸಮಾರಂಭಗಳಲ್ಲೂ ಪಾಲ್ಗೊಳ್ಳಲು ಆಹ್ವಾನಿಸಬಹುದು. ಅಥವಾ ಕೊಡಗು, ಚಿಕ್ಕಮಗಳೂರುಗಳಂತಹ
ಪ್ರದೇಶಗಳಲ್ಲಿ ಕಾಫಿ ಅಥವಾ ಟೀ ಎಸ್ಟೇಟುಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರನ್ನು ತಮ್ಮ ತೋಟಗಳನ್ನು
ವೀಕ್ಷಿಸಲು ಕರೆದೊಯ್ಯಬಹುದು. ಅಲ್ಲದೇ ಸ್ಥಳೀಯ ಹಬ್ಬ, ಜಾತ್ರೆಗಳು ಮತ್ತು ದೇವಾಲಯಗಳ ಭೇಟಿಗೂ ಸಹ
ತಮ್ಮ ಗ್ರಾಹಕರನ್ನು ಗೃಹವಸತಿಗಳ ಮಾಲೀಕರು ಕರೆದೊಯ್ಯಬಹುದು. ಇದರಿಂದ ಸ್ಥಳೀಯ ಸಂಸ್ಕೃತಿಯ ತಿಳುವಳಿಕೆಯ
ಜೊತೆಗೆ ಹಬ್ಬಗಳ ಆಚರಣೆಗಳ ಹಿಂದಿನ ಉದ್ದೇಶಗಳನ್ನೂ ಪ್ರವಾಸಿಗರು ಅರಿಯಬಹುದು.
07. ಪ್ರಶಾಂತ ವಾತಾವರಣ:-
ಗೃಹವಸತಿಗಳು
ಸಾಮಾನ್ಯವಾಗಿ ಪಟ್ಟಣದ ಅಥವಾ ನಗರಗಳ ಗೌಜು-ಗದ್ದಲಗಳಿಂದ ದೂರವಿರುವ ಕಾರಣದಿಂದಾಗಿ ಪ್ರವಾಸಿಗರಿಗೆ
ಪ್ರಶಾಂತವಾದ ವಾತಾವರಣ ದೊರೆಯುತ್ತದೆ.
ಮೇಲಿನ ಕಾರಣಗಳಿಂದಾಗಿ ಇಂದು ಕರ್ನಾಟಕದಲ್ಲಿ ಕೊಡಗು, ಮೈಸೂರು,
ಚಿಕ್ಕಮಗಳೂರು ಮತ್ತು ಕರಾವಳಿ ಪ್ರದೇಶಗಳಲ್ಲದೇ ಬಯಲು ಸೀಮೆಯ ಪ್ರೇಕ್ಷಣೀಯ ಸ್ಥಳಗಳಲ್ಲೂ ಸಹ ಗೃಹವಸತಿಗಳ
ಸೇವೆ ದೊರೆಯುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ಆರ್ಥಿಕ ಸಂಪಾದನೆಗೆ ಅವಕಾಶವಾದರೆ ಪ್ರವಾಸಿಗರಿಗೆ
ಉತ್ತಮ ಸೇವೆಯ ಸೌಲಭ್ಯ ದೊರೆಯುತ್ತದೆ. ಒಟ್ಟಿನಲ್ಲಿ ಪ್ರವಾಸೋದ್ಯಮವು ವಿವಿಧ ವರ್ಗದ ಜನರಿಗೆ ವೈವಿಧ್ಯಮಯವಾದ
ರೀತಿಯಲ್ಲಿ ಉದ್ಯೋಗವಕಾಶಗಳನ್ನು ಒದಗಿಸಿದೆ.
*****
Comments
Post a Comment