ಅಧ್ಯಾಯ 3: ಪ್ರಸ್ತಾವನೆ ಮತ್ತು ಭಾರತ ಸಂವಿಧಾನದ ಪ್ರಧಾನ ಲಕ್ಷಣಗಳು

[I. ಭಾರತ ಸಂವಿಧಾನದ ಪ್ರಸ್ತಾವನೆ [Preamble of Indian Constitution]:

 

ಪೀಠಿಕೆ: ಸಾಮಾನ್ಯವಾಗಿ ಎಲ್ಲ ಗ್ರಂಥಗಳು ಗ್ರಂಥದ ಆರಂಭದಲ್ಲಿ ಪೀಠಿಕೆಯ ಭಾಗವನ್ನು ಒಳಗೊಂಡಿರುತ್ತವೆ. ಪೀಠಿಕೆಯು ಓದುಗರಿಗೆ ಆ ಗ್ರಂಥದ  ಮುನ್ನೋಟವನ್ನು ಒದಗಿಸುತ್ತದೆ. ಅದೇ ರೀತಿ ಜಗತ್ತಿನ ಪ್ರತಿಯೊಂದು ಲಿಖಿತ ಸಂವಿಧಾನಗಳು ಪೀಠಿಕೆ ರೂಪದಲ್ಲಿ ಪ್ರಸ್ತಾವನೆಯನ್ನು ಹೊಂದಿರುತ್ತವೆ. ಸಂವಿಧಾನಗಳ ಪ್ರಸ್ತಾವನೆಯು ಆಯಾ ಸಂವಿಧಾನದ ವಿವರಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಭಾಗವಾಗಿರುತ್ತದೆ.  ಹೀಗಾಗಿ ಸಂವಿಧಾನವೊಂದರ ಪ್ರಸ್ತಾವನೆಯನ್ನು ಪೂರ್ವ ಪೀಠಿಕೆ ಎಂದೂ ಕರೆಯಲಾಗುತ್ತದೆ. ಭಾರತ ಸಂವಿಧಾನ ರಚನಾಕಾರರು ಬೃಹತ್‌ ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ನಿರ್ದೇಶಿಸಲು ಹಾಗೂ ನಿಯಂತ್ರಿಸಲು ತಯಾರಿಸಿದ ಭಾರತ ಸಂವಿಧಾನದಲ್ಲೂ ಪ್ರಸ್ತಾವನೆಯನ್ನು ಅಳವಡಿಸಲು ಮುಂದಾದರು. ಅಮೇರಿಕ ಸಂವಿಧಾನದ ಪ್ರಸ್ತಾವನೆಯ ಪ್ರಭಾವದಿಂದ ಭಾರತ ಸಂವಿಧಾನವೂ ಸಹ ಪ್ರಸ್ತಾವನೆಯನ್ನು ಹೊಂದಿದೆ. ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಕ್ರಾಂತಿಗಳ ಸಮಯದಲ್ಲಿ ಮುನ್ನೆಲೆಗೆ ಬಂದ ಮೌಲ್ಯಗಳನ್ನು ಕಾಣಬಹುದಾಗಿದೆ. ಜೊತೆಗೆ ಪ್ರಸ್ತಾವನೆಯಲ್ಲಿ ಪ್ರಜೆಗಳ ಸರ್ವತೋಮುಖ ಕಲ್ಯಾಣಕ್ಕಾಗಿ ಸಾಧಿಸಬೇಕಾದ ಗುರಿಗಳು ಮತ್ತು ರಾಷ್ಟ್ರ ಜೀವನದಲ್ಲಿ ಪಾಲಿಸಬೇಕಾದ ತತ್ವಗಳನ್ನು ಗುರುತಿಸಬಹುದಾಗಿದೆ. ಭಾರತದ ಭವಿಷ್ಯದ ನೀಲಿ ನಕ್ಷೆಯಾಗಿರುವ ಪ್ರಸ್ತಾವನೆಯು ಸಂವಿಧಾನದ ಪಕ್ಷಿ ನೋಟವನ್ನು ಒದಗಿಸುತ್ತದೆ. ಆದ್ದರಿಂದಲೇ ಪ್ರಸ್ತಾವನೆಯನ್ನು ಸಂವಿಧಾನದ ಮುಖ ಪುಟ ಎನ್ನುವರು.

 

[A. ಪ್ರಸ್ತಾವನೆಯ ಅರ್ಥ [Meaning of Preamble]: ಆಕ್ಸ್ಫರ್ಡ್ ಅಡ್ವಾನ್ಸ್‌ ಲರ್ನರ್‌ ಡಿಕ್ಷನರಿ ಪ್ರಕಾರ ಪ್ರಸ್ತಾವನೆ ಎಂದರೆ ಯಾವುದೇ ಗ್ರಂಥ ಅಥವಾ ಬರಹ ರೂಪದ ದಾಖಲೆಯ ಪರಿಚಯಾತ್ಮಕ ಭಾಗ ಎಂದರ್ಥ. ಸಂವಿಧಾನ ಒಳಗೊಂಡಿರುವ ಮೌಲ್ಯಗಳು, ತತ್ವಗಳು, ಸಿದ್ಧಾಂತಗಳು, ಗುರಿ ಹಾಗೂ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಸಂವಿಧಾನದ ಭಾಗವನ್ನು ಸರಳವಾಗಿ ಪ್ರಸ್ತಾವನೆ ಎನ್ನಬಹುದು. ವಿಶಾಲಾರ್ಥದಲ್ಲಿ ಭೂ ಪ್ರದೇಶವೊಂದರ ಜನ ಜೀವನದ ಸರ್ವತೋಮುಖ ಪ್ರಗತಿಯ ಸಾಕಾರಕ್ಕಾಗಿ ಅಳವಡಿಸಿಕೊಳ್ಳಲಾಗುವ ಸಂವಿಧಾನ ಅಥವಾ ಸನದುಗಳ ತತ್ವಗಳು ಹಾಗೂ ಧ್ಯೇಯೋದ್ಧೇಶಗಳ ಸಾರಾಂಶವನ್ನುಳ್ಳ ಭಾಗವನ್ನು ಪ್ರಸ್ತಾವನೆ ಎನ್ನಬಹುದಾಗಿದೆ. ಸಾಮಾನ್ಯವಾಗಿ ಪ್ರಸ್ತಾವನೆಯು ಸಂವಿಧಾನ ರಚನಾಕಾರರು ಮಹತ್ವ ನೀಡಿದ ಮೌಲ್ಯಗಳು, ಪಾಲಿಸ ಬಯಸಿದ ತತ್ವಗಳು, ಪ್ರಜೆಗಳು ಹೊಂದಬಹುದಾದ ಹಕ್ಕುಗಳು, ರಾಜ್ಯದ ಸ್ವರೂಪವನ್ನು ಪ್ರತಿಫಲಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಪ್ರಸ್ತಾವನೆಯ ವಿಸ್ತರಣೆ ಹಾಗೂ ವಿವರಣೆ ಎನ್ನಬಹುದು.

 

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸುಬ್ಬಾರಾವ್‌ ಸಂವಿಧಾನದ ಆಶಯ ಮತ್ತು ಉದ್ದೇಶಗಳನ್ನು ಸಂಕಷ್ಟದ ಸಮಯದಲ್ಲಿ ಅರಿಯಬೇಕಾದರೆ ಪ್ರಸ್ತಾವನೆಯ ಅರಿವು ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವರು. ಪ್ರಸ್ತಾವನೆಯು ಸಮಗ್ರ ಸಂವಿಧಾನದ ಪ್ರತೀಕವಾಗಿದ್ದು ಸಂವಿಧಾನದ ಆತ್ಮ ಎಂದು ಪರಿಗಣಿಸಲ್ಪಡುತ್ತದೆ. ಇಡೀ ಸಂವಿಧಾನದ ತಿರುಳು ಪ್ರಸ್ತಾವನೆಯಲ್ಲಿ ಗೋಚರವಾಗಿರುತ್ತದೆ. ಆದ್ದರಿಂದ ಠಾಕೂರ್ದಾಸ್‌ ಭಾರ್ಗವ ಪ್ರಸ್ತಾವನೆಯನ್ನು ಸಂವಿಧಾನದ ಯೋಗ್ಯತೆಯನ್ನು ಅಳತೆ ಮಾಡಲು ಇರುವ ಅಳತೆಗೋಲು ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಪ್ರಸ್ತಾವನೆಯು ಸಂವಿಧಾನದ ಭಾಗವಲ್ಲ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯ ಆರಂಭದಲ್ಲಿ ನಿರ್ಣಯಿಸಿತ್ತು. ಬಳಿಕ 1973 ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ವೇಳೆ ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗವೆಂದು ಸರ್ವೋಚ್ಛ ನ್ಯಾಯಾಲಯವೇ ಅಭಿಪ್ರಾಯ ಪಟ್ಟಿತು. ಇದರಿಂದ ಪ್ರಸ್ತಾವನೆಯ ಮಹತ್ವ ಇಂದು ಇಮ್ಮಡಿಗೊಂಡಿದೆ.

 

[B. ಪ್ರಸ್ತಾವನೆಯ ಹಿನ್ನೆಲೆ [Background of the Preamble]: ಭಾರತ ಸಂವಿಧಾನದ ಪ್ರಸ್ತಾವನೆಗೆ ತನ್ನದೇ ಹಿನ್ನೆಲೆ ಇರುವುದನ್ನು ಕಾಣಬಹುದು. ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನದಲ್ಲಿ 13 ಡಿಸೆಂಬರ್‌ 1946 ರಂದು ಜವಾಹರಲಾಲ್‌ ನೆಹರು ಧ್ಯೇಯಗಳ ನಿರ್ಣಯವನ್ನು ಮಂಡಿಸಿದರು. ಈ ಧ್ಯೇಯಗಳ ನಿರ್ಣಯವು ಸಂವಿಧಾನ ರಚನಾ ಸಭೆಯು ಯಾವ ತತ್ವಗಳು, ಮೌಲ್ಯಗಳು, ಸಿದ್ಧಾಂತಗಳು ಹಾಗೂ ಗುರಿಗಳನ್ನು ಆಧರಿಸಿ ಸಂವಿಧಾನ ರಚಿಸಬೇಕೆಂಬ ಅಂಶಗಳನ್ನು ಒಳಗೊಂಡಿತ್ತು. ಸಾರ್ವಭೌಮತೆ, ಪ್ರಜಾಪ್ರಭುತ್ವ, ಗಣತಂತ್ರ, ಜನತಾ ಪರಮಾಧಿಕಾರ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಅಲ್ಪಸಂಖ್ಯಾತ ಹಾಗೂ ಹಿಂದುಳಿದವರ ರಕ್ಷಣೆ ಮುಂತಾದವುಗಳನ್ನೊಳಗೊಂಡ ನಿರ್ಣಯವನ್ನು ಸಂವಿಧಾನ ರಚನಾ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಮುಂದೆ 22 ಜನೇವರಿ 1947 ರಂದು ಧ್ಯೇಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿ ಅದರಲ್ಲಿನ ತತ್ವ, ಮೌಲ್ಯ, ಸಿದ್ಧಾಂತ ಹಾಗೂ ಗುರಿಗಳನುಸಾರ ಸಂವಿಧಾನ ರಚನಾ ಕಾರ್ಯ ಆರಂಭಿಸಿತು. ಕೊನೆಗೆ 17 ಅಕ್ಟೋಬರ್‌ 1949 ರಂದು ಧ್ಯೇಯಗಳ ನಿರ್ಣಯದಲ್ಲಿ ಕೆಲವು ಮಾರ್ಪಾಟು ಮಾಡಿದ ಸಂವಿಧಾನ ರಚನಾ ಸಭೆಯು ಅದನ್ನೇ ಭಾರತ ಸಂವಿಧಾನದ ಪ್ರಸ್ತಾವನೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿತು.

 

[C. ಪ್ರಸ್ತಾವನೆಯ ಪಠ್ಯ [Text of the Preamble]: ಮೂಲ ಭಾರತ ಸಂವಿದಾನವು ಹೊಂದಿದ್ದ ಪ್ರಸ್ತಾವನೆಯನ್ನು 1976 ರಲ್ಲಿ 42 ನೇ ತಿದ್ದುಪಡಿಯು ಬದಲಾವಣೆಗೊಳಿಸಿತು. ಪ್ರಸ್ತಾವನೆಯ ಮೂಲ ಪಠ್ಯಕ್ಕೆ ಸಮಾಜವಾದಿ, ಜಾತ್ಯಾತೀತ ಮತ್ತು ಅಖಂಡತೆ ಎಂಬ ಮೂರು ಪದಗಳನ್ನು ಹೊಸದಾಗಿ ಸೇರಿಸಲಾಯಿತು. ಪ್ರಸ್ತುತ ನಮ್ಮ ಸಂವಿಧಾನದ ಪ್ರಸ್ತಾವನೆಯು ಕೆಳಗಿನ ಪಠ್ಯವನ್ನು ಹೊಂದಿದೆ.

 

“ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿ ವಿದ್ಯುಕ್ತವಾಗಿ ವ್ಯವಸ್ಥೆಗೊಳಿಸಲು ಮತ್ತು ಅದರ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ, ಎಲ್ಲರಿಗೂ ದೊರೆಯುವಂತೆ ಮಾಡಲು ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಹಾಗು ಸಮಗ್ರತೆಯನ್ನು ರಕ್ಷಿಸಿ, ಬ್ರಾತೃತ್ವ ಭಾವನೆಯನ್ನು ಎಲ್ಲರಲ್ಲಿಯು ವೃದ್ಧಿಗೊಳಿಸಲು ದೃಢ ಸಂಕಲ್ಪ ಮಾಡಿ, ನಮ್ಮ ಸಂವಿಧಾನ ರಚನಾ ಸಭೆಯಲ್ಲಿ 1949 ರ ನವೆಂಬರ್‌ 26 ನೇಯ ದಿನ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ”

 

ಮೇಲೆ ನಮೂದಿಸಲಾದ ಪ್ರಸ್ತಾವನೆಯ ಪಠ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಮ್ಮ ಪ್ರಸ್ತಾವನೆಯಲ್ಲಿ ಕೆಳಗಿನ ಮೂಲಾಂಶಗಳನ್ನು ಗುರುತಿಸಬಹುದಾಗಿದೆ.

1. ಸಂವಿಧಾನ ರಚನೆಯ ಮೂಲ

2. ಭಾರತದ ರಾಜಕೀಯ ವ್ಯವಸ್ಥೆಯ ಸ್ವರೂಪ

3. ಸಂವಿಧಾನದ ಗುರಿಗಳು

4. ಸಂವಿಧಾನ ಅಂಗೀಕಾರದ ದಿನಾಂಕ

 

[D. ಪ್ರಸ್ತಾವನೆಯ ತಾತ್ವಿಕತೆ [Philosophy of the Preamble]: ಭಾರತ ಸಂವಿಧಾನದ ಪುಟ್ಟ ಪ್ರಸ್ತಾವನೆಯು ಹಲವು ಅವ್ಯಕ್ತ ತತ್ವಗಳ ಆಗರವಾಗಿದೆ. ಹೀಗಾಗಿ ಭಾರತ ಸಂವಿಧಾನದ ವಿಸ್ತಾರ ಹಾಗೂ ಮಹತ್ವವನ್ನು ಅರಿಯಲು ಪ್ರಸ್ತಾವನೆಯಲ್ಲಿರುವ ತತ್ವಗಳ ಸಂಕ್ಷಿಪ್ತ ಅರಿವು ಅಗತ್ಯ. ಈ ಕೆಳಗೆ ಪ್ರಸ್ತಾವನೆಯಲ್ಲಿ ಸ್ಥಾನ ಪಡೆದಿರುವ ತತ್ವಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು ಪ್ರಸ್ತಾವನೆಯ ತಾತ್ವಿಕತೆಯನ್ನು ಮನವರಿಕೆ ಮಾಡಿಕೊಳ್ಳಲು ಸುಲಭವಾಗುತ್ತದೆ.

 

[1. ಭಾರತದ ಪ್ರಜೆಗಳಾದ ನಾವು: ನಮ್ಮ ಸಂವಿಧಾನವು ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗಿ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ, ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯಗೊಳ್ಳುತ್ತದೆ. ಸಂವಿಧಾನ ರಚನಾ ಸಭೆಯ ಸದಸ್ಯರಿಂದ ನಮ್ಮ ಸಂವಿಧಾನ ರಚನೆಗೊಂಡಿದ್ದರೂ ಆ ಅಧಿಕಾರದ ಮೂಲ ಭಾರತದ ಸಮಸ್ತ ಜನತೆ ಎಂಬುದನ್ನು ಈ ಪದಗಳ ಪ್ರಯೋಗ ಪ್ರತಿಪಾದಿಸುತ್ತದೆ. ಅಂದರೆ ಜನರ ಪರವಾಗಿ ಸಂವಿಧಾನ ರಚನಾಕಾರರು ಸಂವಿಧಾನವನ್ನು ರಚಿಸಿ ಜನರ ಪರವಾಗಿ ಅಂಗೀಕರಿಸಿರುವರೆಂಬುದು ಇದರರ್ಥ. ಈ ಮೂಲಕ ರಾಜಕೀಯ ಪರಮಾಧಿಕಾರ ಜನರಲ್ಲಿರುವ ಜನತಾ ಪರಮಾಧಿಕಾರ ತತ್ವಕ್ಕೆ ಮಹತ್ವವನ್ನು ಒದಗಿಸಲಾಗಿದೆ. ಆದರೆ ಈ ತತ್ವವನ್ನು ಸೀಮಿತ ಮತದಾನದಿಂದ ಸಂವಿಧಾನ ರಚನಾಕಾರರ ಆಯ್ಕೆಯ ಕಾರಣಕ್ಕೆ ವಿಮರ್ಷಕರು ಟೀಕಿಸಿರುವರು. ಜೊತೆಗೆ ಕಾಂಗ್ರೆಸ್ಸಿನ ನಾಯಕರ ಪ್ರಭಾವವನ್ನು ಉಲ್ಲೇಕಿಸಿ ಟೀಕಿಸಲಾಯಿತು. ಅಂತಿಮವಾಗಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಸಂವಿಧಾನಾನುಸಾರ ಚುನಾವಣೆಯಲ್ಲಿ ಭಾಗವಹಿಸಿ ಸಂವಿಧಾನದ ಸಮ್ಮತಿಯನ್ನು ವ್ಯಕ್ತಪಡಿಸಿದರು.

 

2. ಸಾರ್ವಭೌಮ: ರಾಜ್ಯವೊಂದರ ಸರ್ವೋಚ್ಛ ಅಧಿಕಾರವನ್ನು ಪರಮಾಧಿಕಾರ ಅಥವಾ ಸಾರ್ವಭೌಮ ಅಧಿಕಾರ ಎನ್ನಲಾಗುತ್ತದೆ. ಸಾರ್ವಭೌಮಾಧಿಕಾರವು ರಾಜ್ಯದ ಜೀವಾಳವಾಗಿದ್ದು ರಾಜ್ಯದ ಅಸ್ತಿತ್ವ ಮತ್ತು ಮುಂದುವರಿಕೆಗೆ ಅನಿವಾರ್ಯವಾಗಿದೆ. ದೇಶದ ಬಾಹ್ಯ ಅಥವಾ ಆಂತರಿಕ ವ್ಯವಹಾರದಲ್ಲಿ ಯಾವುದೇ ನಿಯಂತ್ರಣಕ್ಕೊಳಪಡದೇ ತನಗೆ ಸರಿ ತೋರಿದ ನಿರ್ಧಾರವನ್ನು ಕೈಗೊಳ್ಳಲು ಸಾರ್ವಭೌಮಾಧಿಕಾರ ನೆರವಾಗುತ್ತದೆ. 15 ಆಗಸ್ಟ್‌ 1947 ರಿಂದ ಭಾರತವು ಹೊರಗಿನ ಅಥವಾ ಒಳಗಿನ ನಿಯಂತ್ರಣಗಳಿಂದ ಮುಕ್ತವಾಗಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಬಲ್ಲ ಅವಕಾಶ ಪಡೆದಿದೆ. ಆದ್ದರಿಂದ ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ ತತ್ವಾಧಾರಿತ ರಾಷ್ಟ್ರವೆಂದು ಸಂವಿಧಾನ ರಚನಾಕಾರರು ಘೋಷಿಸಿರುವರು.

 

3. ಸಮಾಜವಾದ: ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಶೋಷಣೆ ರಹಿತ ಸಮಾನವಕಾಶಗಳನ್ನೊದಗಿಸುವ ವ್ಯವಸ್ಥೆಯೇ ಸಮಾಜವಾದ. ಇನ್ನೊಂದು ರೂಪದಲ್ಲಿ ಸಮಾಜವಾದವು ಖಾಸಗಿ ಒಡೆತನದ ಬದಲು ಸರ್ಕಾರದ ಒಡೆತನವನ್ನು ಹೊಂದಿರುವ ವ್ಯವಸ್ಥೆ.  ಸುದೀರ್ಘ ಚರ್ಚೆಯ ಬಳಿಕ ಭಾರತವನ್ನು ಸುಖಿ ರಾಜ್ಯವನ್ನಾಗಿಸಲು ಸಂವಿಧಾನ ರಚನಾಕಾರರು ಪ್ರಜಾಪ್ರಭುತ್ವದೊಡನೆ ಸಮಾಜವಾದವನ್ನು ಅಳವಡಿಸಲು ಬಯಸಿದ್ದರು. ಫಲವಾಗಿ ಸಂವಿಧಾನದ 4 ನೇ ಭಾಗದ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಲ್ಲಿ ಸಮಾಜವಾದಿ ತತ್ವಗಳನ್ನು ಸೇರಿಸಲು ನಿರ್ಧರಿಸಿದ್ದರು. ಜೊತೆಗೆ ಸ್ವಾತಂತ್ರ್ಯಾ ನಂತರ ಸರ್ಕಾರಗಳು ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಪಾಲಿಸಲು ಸಂವಿಧಾನದಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ ಸಮಾಜವಾದದ ಅಂಶಗಳು ನಮ್ಮ ಸಂವಿಧಾನದಲ್ಲಿದ್ದರೂ ಸಮಾಜವಾದ ಪದವನ್ನು ಮೂಲ ಸಂವಿಧಾನವು ಒಳಗೊಂಡಿರಲಿಲ್ಲ. ಮುಂದೆ 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಸಮಾಜವಾದಿ ಎಂಬ ಪದವನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಯಿತು. ಸಮಾಜವಾದಿ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ 1978 ರ 44 ನೇ ಸಂವಿಧಾನ ತಿದ್ದುಪಡಿ ಮೂಲಕ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ರದ್ದುಗೊಳಿಸಲಾಗಿದೆ.

 

4. ಜಾತ್ಯಾತೀತತೆ: ಯಾವುದೇ ಒಂದು ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ರಾಜ್ಯವು ಗೌರವಿಸುವುದನ್ನು ಜಾತ್ಯಾತೀತತೆ ಎನ್ನಬಹುದು. ಜಾತ್ಯಾತೀತತೆಯು ನಕಾರಾತ್ಮಕ ಹಾಗೂ ಸಕಾರಾತ್ಮಕ ಸ್ವರೂಪವನ್ನು ಹೊಂದಿದೆ. ರಾಜ್ಯವು ಧರ್ಮಗಳ ವಿಚಾರದಲ್ಲಿ ತಾರತಮ್ಯ ತೋರದೇ ತಟಸ್ಥವಾಗಿದ್ದರೆ ಅದನ್ನು ನಕಾರಾತ್ಮಕ ಜಾತ್ಯಾತೀತತೆ ಎನ್ನಲಾಗುತ್ತದೆ. ರಾಜ್ಯವು ತನ್ನ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಸಮಾನವಾಗಿ ಒದಗಿಸಿದ್ದರೆ ಅದನ್ನು ಸಕಾರಾತ್ಮಕ ಜಾತ್ಯಾತೀತತೆ ಎನ್ನಲಾಗುತ್ತದೆ. ಭಾರತ ಸಂವಿದಾನ ರಚನಾಕಾರರು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿರುವರು. ಭಾರತದಲ್ಲಿರುವ ಪ್ರಜೆಗಳು ತಮಗೆ ಸರಿ ತೋರಿದ ಧರ್ಮವನ್ನು ಪಾಲಿಸಲು, ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಲು, ತಮ್ಮ ಧರ್ಮವನ್ನು ಪ್ರಚುರಪಡಿಸಲು ಸ್ವತಂತ್ರರಾಗಿದ್ದಾರೆ. ಜೊತೆಗೆ ಸರ್ಕಾರವು ಹಿಂದೂ, ಇಸ್ಲಾಮ್‌, ಕ್ರೈಸ್ತ, ಜೈನ, ಬೌದ್ಧ, ಸಿಖ್ ಮತ್ತು ಪಾರಸೀಗಳ ಹಿತ ರಕ್ಷಣೆಗಾಗಿ ಸಮಾನವಕಾಶ ಒದಗಿಸುತ್ತವೆ. ಹೀಗಾಗಿ ಭಾರತವು ಜಾತ್ಯಾತೀತ ರಾಷ್ಟ್ರವೆನಿಸಿದೆ. ಪಾಕ್‌ ಇಸ್ಲಾಮ್‌ ಧರ್ಮವನ್ನು ತನ್ನ ರಾಜ್ಯ ಧರ್ಮವೆಂದು ಪರಿಗಣಿಸಿದ್ದು ಅದನ್ನು ಜಾತ್ಯಾತೀತ ರಾಷ್ಟ್ರ ಎನ್ನಲಾಗದು. ವಿಶೇಷವೆಂದರೆ ಜಾತ್ಯಾತೀತ ಪದವನ್ನೂ ಸಹ  ಸಂವಿಧಾನದ ಪ್ರಸ್ತಾವನೆಯಲ್ಲಿ 1976 ರ 42 ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು.

 

5. ಪ್ರಜಾಸತ್ತಾತ್ಮಕತೆ: ದೇಶದ ಆಡಳಿತದಲ್ಲಿ ಪ್ರಜೆಗಳು ಪಾಲು ಹೊಂದಿರುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಪ್ರಜಾಪ್ರಭುತ್ವ ಕುರಿತು ಅಬ್ರಹಾಂ ಲಿಂಕನ್‌ ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳೇ ಾಳುವ ಸರ್ಕಾರ ಎಂದಿದ್ದು ಜನಪ್ರೀಯ ವ್ಯಾಖ್ಯಾನವಾಗಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಪ್ರಜೆಗಳಿಗೆ ಜವಾಬ್ದಾರಿಯಾಗಿದ್ದು ಪ್ರಜೆಗಳೇ ಪ್ರಭುಗಳಾಗಿರುತ್ತಾರೆ. ಭಾರತ ಸಂವಿಧಾನವು ತನ್ನೆಲ್ಲ ವಯಸ್ಕ ಪ್ರಜೆಗಳಿಗೆ ಮತದಾನದ ಹಕ್ಕನ್ನು ಒದಗಿಸಿದೆ. ಜೊತೆಗೆ ಸಂಸಧೀಯ ಮಾದರಿ ಸರ್ಕಾರವನ್ನು ಭಾರತ ಹೊಂದಿರುವುದರಿಂದ ನಿಯತಕಾಲಿಕ ಚುನಾವಣೆಗಳು ಜರುಗುತ್ತವೆ. ಚುನಾವಣೆಗಳಲ್ಲಿ ತಮ್ಮ ಹಿತರಕ್ಷಣೆ ಮಾಡದ ಸರ್ಕಾರವನ್ನು ಕಿತ್ತೊಗೆದು ಬೇರೊಂದು ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಜೆಗಳು ಅಧಿಕಾರ ಪಡೆದಿದ್ದಾರೆ. ಹೀಗಾಗಿ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರಜಾಸತ್ತಾತ್ಮಕ ತತ್ವವನ್ನು ಸಂವಿಧಾನ ರಚನಾಕಾರರು ಸೇರಿಸಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ ಭಾರತದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಸತ್ತಾತ್ಮಕತೆಯ ಗುರಿಯನ್ನು ಸಾಧಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ರಾಜಕೀಯ ಪ್ರಜಾಸತ್ತಾತ್ಮಕತೆಯನ್ನು ಮಾತ್ರವೇ ಭಾರತೀಯರಾದ ನಾವು ಅನುಭವಿಸುತ್ತಿದ್ದೇವೆ.

 

6. ಗಣರಾಜ್ಯ: ದೇಶದ ಮುಖ್ಯಸ್ಥ ಪ್ರಜೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿತನಾಗುತ್ತಿದ್ದರೆ ಆ ದೇಶವನ್ನು ಗಣರಾಜ್ಯ ಎನ್ನಲಾಗುತ್ತದೆ. ಭಾರತವು ಅಮೇರಿಕ, ಫ್ರಾನ್ಸ್‌, ಸ್ವಿಟ್ಜರ್‌ ಲ್ಯಾಂಡ್ನಂತೆ ಗನರಾಜ್ಯವಾಗಿದೆ. ಗಣರಾಜ್ಯವು ಅನುವಂಶೀಯ ಅರಸೊತ್ತಿಗೆಗೆ ವಿರುದ್ಧವಾಗಿದೆ. ಭಾರತದ ಮುಖ್ಯಸ್ಥ ರಾಷ್ಟ್ರಪತಿಯು ಇಂಗ್ಲೆಂಡ್‌ ಹಾಗೂ ಜಪಾನ್‌ ಮುಖ್ಯಸ್ಥರಂತೆ ಅನುವಂಶೀಯವಾಗಿ ನೇಮಕಗೊಳ್ಳುವುದಿಲ್ಲ. ಬದಲಾಗಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಮತ್ತು ಎಲ್ಲ ರಾಜ್ಯ ಶಾಸಕಾಂಗದ ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ವಿಶೇಷ ಮತದಾತೃ ವರ್ಗದಿಂದ ಮತ ಪಡೆದು ಚುನಾಯಿತರಾಗುತ್ತಾರೆ. ಹೀಗಾಗಿ ಭಾರತವು ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿದಂತೆ ಗಣರಾಜ್ಯ ಎಂಬುದು ಸುಸ್ಪಷ್ಟ.

 

7. ನ್ಯಾಯ: ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲ್ಪಟ್ಟ ನ್ಯಾಯವು ಪ್ರಜೆಗಳಿಗೆ ಮೂಲಭೂತ ಹಕ್ಕು ಹಾಗೂ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಲ್ಲಿ ಒದಗಿಸಲಾಗಿರುವ ರಕ್ಷಣೆಯನ್ನು ಸೂಚಿಸುತ್ತದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವರೂಪವನ್ನು ಪ್ರಸ್ತಾವನೆಯಲ್ಲಿನ ನ್ಯಾಯವು ಪ್ರತಿನಿಧಿಸುತ್ತದೆ. ಅಸ್ಪೃಷ್ಯತೆಯ ನಿರ್ಮೂಲನೆ, ದುರ್ಬಲ ವರ್ಗಗಳಿಗೆ ರಕ್ಷಣೆ, ಜಮೀನ್ದಾರಿ ಪದ್ಧತಿಯ ರದ್ದತಿ ಮುಂತಾದವುಗಳ ಮೂಲಕ ಸಮಾಜದಲ್ಲಿನ ತಾರತಮ್ಯಗಳನ್ನು ಹೋಗಲಾಡಿಸಿಅಭಿವೃದ್ಧಿಯ ಪಾಲು ಪ್ರತಿಯೊಬ್ಬರಿಗೂ ಸಮಾನವಾಗಿ ದೊರೆಯುವಂತೆ ಮಾಡುವುದು ಸಾಮಾಜಿಕ ನ್ಯಾಯವಾಗಿದೆ. ಮೂಲಭೂತ ಅಗತ್ಯಗಳ ಕನಿಷ್ಟ ಲಭ್ಯತೆ, ಸಮಾನ ದುಡಿಮೆಗೆ ಸಮಾನ ವೇತನ, ಆದಾಯ ಅಥವಾ ಸಂಪತ್ತಿನ ಕಡಿಮೆ ಅಂತರ, ಉದ್ಯೋಗವಕಾಶಗಳ ಸಮಾನವಕಾಶ ಸೇರಿದಂತೆ ಮಾನವರಿಂದ ಮಾನವರ ಶೋಷಣೆಯಾಗುವ ಚಟುವಟಿಕೆಗಳ ನಿಯಂತ್ರಣವು ಆರ್ಥಿಕ ನ್ಯಾಯವನ್ನು ಸೂಚಿಸುತ್ತದೆ. ಅದೇ ರೀತಿ ದೇಶದ ರಾಜಕೀಯಾಡಳಿತದಲ್ಲಿ ಸಮಾನ ಭಾಗವಹಿಸುವಿಕೆ, ಮತದಾನದ ಸಮಾನವಕಾಶ, ಅಲ್ಪ ಸಂಖ್ಯಾತರಿಗೆ ಅಗತ್ಯ ಪ್ರಾತಿನಿಧ್ಯ ಮುಂತಾದವುಗಳ ಮೂಲಕ ರಾಜಕೀಯ ನ್ಯಾಯವನ್ನು ಒದಗಿಸಲು ಸಂವಿಧಾನ ರಚನಾಕಾರರ ಹಂಬಲವನ್ನು ನ್ಯಾಯವು ಪ್ರತಿಬಿಂಬಿಸುತ್ತದೆ.

 

8. ಸ್ವಾತಂತ್ರ್ಯ: ವ್ಯಕ್ತಿಯ ಚಟುವಟಿಕೆಗಳ ಮೇಲೆ ನಿರ್ಬಂಧ ರಹಿತತೆಯನ್ನು ಸ್ವಾತಂತ್ರ್ಯವು ಪ್ರತಿನಿಧಿಸುತ್ತದೆ. ಇದರೊಡನೆ ವ್ಯಕ್ತಿತ್ವ ಬೆಳವಣಿಗೆಗೆ ಸಾಕಾದಷ್ಟು ಅವಕಾಶಗಳನ್ನು ವ್ಯಕ್ತಿ ಪಡೆಯಬೇಕೆಂಬ ತತ್ವವನ್ನು ಸ್ವಾತಂತ್ರ್ಯ ಆಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯಲ್ಲಿನ ಸ್ವಾತಂತ್ರ್ಯ ಪರಿಕಲ್ಪನೆಯು ಭಾರತದ ಪ್ರಜೆಗಳು ಪಡೆದಿರುವ ವಿವಿಧ ಸ್ವಾತಂತ್ರ್ಯಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಸ್ವಾತಂತ್ರ್ಯದ ಉಲ್ಲಂಘನೆಯಾದರೆ ನ್ಯಾಯಾಲಯಗಳ ನೆರವಿನಿಂದ ರಕ್ಷಣೆ ಪಡೆಯಲು ಪ್ರಜೆಯೊಬ್ಬ ಹೊಂದಿರುವ ಅವಕಾಶವನ್ನು ಸೂಚಿಸುತ್ತದೆ. ಗಮನಾರ್ಹ ವಿಷಯವೇನೆಂದರೆ ಸ್ವಾತಂತ್ರ್ಯ ವ್ಯಕ್ತಿಯ ಸ್ವೇಚ್ಚಾಚಾರವಾಗಿರದೇ ನಿರ್ಬಂಧಕ್ಕೊಳಪಟ್ಟ ಅಂಶವೆಂಬುದನ್ನು ಸ್ವತಂತ್ರ್ಯದ ತತ್ವವು ಸ್ಪಷ್ಟಪಡಿಸುತ್ತದೆ.

 

9. ಸಮಾನತೆ: ಯಾರಿಗೂ ವಿಶೇಷ ಸೌಲಭ್ಯಗಳಿಲ್ಲದಿರುವುದು ಹಾಗೂ ಸರ್ವರಿಗೂ ತಾರತಮ್ಯ ರಹಿತವಾಗಿ ಅವಕಾಶಗಳನ್ನು ನೀಡುವುದನ್ನು ಸಮಾನತೆ ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯಲ್ಲಿನ ಸಮಾನತೆಯು ಅವಕಾಶ ಮತ್ತು ಸ್ಥಾನಮಾನಗಳ ಸಮಾನತೆಯ ಭರವಸೆಯನ್ನು ಭಾರತದ ಪ್ರಜೆಗಳಿಗೆ ನೀಡುತ್ತದೆ. ಮೂಲಭೂತ ಹಕ್ಕುಗಳ ಮೂಲಕ ನಾಗರಿಕ, ಆರ್ಥಿಕ, ರಾಜಕೀಯ ಸಮಾನತೆ ಒದಗಿಸಲಾಗಿರುವ ಅಂಶವನ್ನು ಸ್ಪಷ್ಟಪಡಿಸುತ್ತದೆ. ಕಾನೂನಿನ ಸಮಾನ ರಕ್ಷಣೆ, ಅಸ್ಪೃಷ್ಯತೆಯ ನಿರ್ಮೂಲನೆ, ಬಿರುದುಗಳ ರದ್ದತಿಯಂತಹ ಕ್ರಮಗಳಿಂದ ನಾಗರಿಕ ಸಮಾನತೆಯನ್ನು ಹಾಗೂ ಸಾರ್ವತ್ರಿಕ ವಯಸ್ಕ ಮತದಾನ, ಸಾರ್ವಜನಿಕ ಉದ್ಯೋಗವಕಾಶಗಳ ಸಮಾನತೆ, ಚುನಾವಣಾ ಸ್ಪರ್ಧೆಗೆ ಸರ್ವರಿಗೂ ಅನುವಿನಂತಹ ಕ್ರಮಗಳ ಮೂಲಕ ರಾಜಕೀಯ ಸಮಾನತೆಯನ್ನು ಸಾಧಿಸಲು ಭಾರತ ಸಂವಿಧಾನದ ಬದ್ಧತೆಯನ್ನು ಸಮಾನತೆ ಪ್ರತಿನಿಧಿಸಿದೆ.

 

10. ಭ್ರಾತೃತ್ವ: ದೇಶದ ಪ್ರಜೆಗಳಲ್ಲಿ ಸಹೋದರತೆಯನ್ನು ಬಲಪಡಿಸುವ ಅಂಶವನ್ನು ಬ್ರಾತೃತ್ವವು ಪ್ರತಿನಿಧಿಸುತ್ತದೆ. ವ್ಯಕ್ತಿ ಗೌರವ ಮತ್ತು ದೇಶದ ಅಖಂಡತೆಯ ಭರವಸೆಯನ್ನು ಬ್ರಾತೃತ್ವ ಪರಿಕಲ್ಪನೆಯು ಪ್ರತಿನಿಧಿಸುತ್ತದೆ. ಸಂವಿಧಾನ ರಚನಾಕಾರರು ಭಾರತದ ಪ್ರಜೆಗಳಲ್ಲಿ ಭಾವನಾತ್ಮಕ ಹಾಗೂ ಭೌಗೋಳಿಕ ಏಕತೆ ಮೂಡಿಸಲು ಏಕ ಪೌರತ್ವವನ್ನು ಅಳವಡಿಸಿದ್ದಾರೆ. ಜೊತೆಗೆ ಮೂಲಭೂತ ಕರ್ತವ್ಯಗಳಲ್ಲಿ ಸಹೋದರತೆಗೆ ಪೂರಕವಾದ ಅಂಶಗಳನ್ನು ಸೇರಿಸಲಾಗಿದೆ. ಇದರೊಡನೆ ರಾಜ್ಯಗಳಿಗೆ ಭಾರತದ ಒಕ್ಕೂಟದಿಂದ ಪ್ರತ್ಯೇಕವಾಗಲು ಅವಕಾಶವನ್ನು ಸಂವಿಧಾನ ಒದಗಿಸದೇ ಅಖಂಡತೆಯನ್ನು ರಕ್ಷಿಸಲು ಮುಂದಾಗಿದೆ.

 

[II. ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳು:

 

ಪೀಠಿಕೆ: ಸುದೀರ್ಗ ಹೋರಾಟದ ಬಳಿಕ ರಚನೆಗೊಂಡ ಭಾರತ ಸಂವಿಧಾನ ರಚನಾ ಸಭೆಯು ಭಾರತಕ್ಕೆ ಯೋಗ್ಯ ಸಂವಿಧಾನ ರಚಿಸಲು ಸಾಕಷ್ಟು ಶ್ರಮಿಸಿತು. ಜಗತ್ತಿನ ಹಲವು ಸಂವಿಧಾನಗಳ ಅಧ್ಯಯನ ನಡೆಸಿ ಅವುಗಳಲ್ಲಿನ ಉತ್ತಮಾಂಶಗಳನ್ನು ಭಾರತದ ಸನ್ನಿವೇಶಕ್ಕೆ ಸರಿ ಹೊಂದುವಂತೆ ಮಾರ್ಪಡಿಸಲು ಪ್ರಯತ್ನಿಸಿತು. ಇದರೊಡನೆ ವಿವಿಧ ರಂಗಗಳಿಗೆ ಸಂಬಂಧಿಸಿದ ಸರ್ವ ಸಮ್ಮತ ನಿಯಮಾವಳಿಗಳನ್ನು ಅಳವಡಿಸಲು ಯಶಸ್ವಿಯಾಯಿತು. ಪರಿಣಾಮ ಹಲವು ನ್ಯೂನ್ಯತೆಗಳ ನಡುವೆಯೂ ಆದರ್ಶ ಸಂವಿಧಾನವೆಂದು ಭಾರತದ ಸಂವಿಧಾನವು ಗುರುತಿಸಲ್ಪಟ್ಟಿದೆ. ಇಂತಹ ಭಾರತ ಸಂವಿಧಾನ ತನ್ನದೇ ಹಲವು ಲಕ್ಷಣಗಳಿಂದ ಕೂಡಿದ್ದು ಅವುಗಳ ಸಂಕ್ಷಿಪ್ತ ವಿವರಣೆ ಕೆಳಕಂಡಂತಿದೆ.

1. ಲಿಖಿತ ಹಾಗೂ ಬೃಹತ್‌ ಗಾತ್ರ [Written and Varst Size]: ಇಂಗ್ಲೆಂಡ್‌ ಹಾಗು ಇಸ್ರೇಲ್‌ ಸಂವಿಧಾನದ ಬಹುತೇಕ ನಿಯಮಾವಳಿಗಳು ರೂಢಿ ಮತ್ತು ಸಂಪ್ರದಾಯಗಳ ರೂಪದಲ್ಲಿದ್ದು ಆ ಸಂವಿಧಾನಗಳನ್ನು ಅಲಿಖಿತ ಸಂವಿಧಾನ ಎನ್ನಲಾಗುತ್ತದೆ. ಆದರೆ ಭಾರತದ ಸಂವಿಧಾನವು ಬರಹ ರೂಪದ ನಿಯಮಾವಳಿಗಳ ದಾಖಲೆಯಾಗಿದ್ದು ಲಿಖಿತ ಸಂವಿಧಾನವಾಗಿದೆ. ಮಾತ್ರವಲ್ಲ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವೂ ಭಾರತ ಸಂವಿಧಾನವಾಗಿದೆ. ಸರ್ಕಾರದ ರಚನೆ, ಪ್ರಜೆಗಳ ಹಕ್ಕುಗಳು ಹಾಗೂ ಸರ್ಕಾರ ಮತ್ತು ಪ್ರಜೆಗಳ ನಡುವಿನ ಸಂಬಂಧವನ್ನು ಮಾತ್ರ ವಿವರಿಸದೇ ಭಾರತ ಸಂವಿಧಾನ ಪೌರತ್ವ, ಚುನಾವಣೆ, ತುರ್ತು ಪರಿಸ್ಥಿತಿ, ತಿದ್ದುಪಡಿ ವಿಧಾನ, ಬುಡಕಟ್ಟು ಜನರ ಕಲ್ಯಾಣ, ಸ್ಥಳೀಯ ಸರ್ಕಾರಗಳಂತಹ ವಿಷಯಗಳ ವಿವರಣೆಯಿಂದಾಗಿ ಬೃಹತ್‌ ಗಾತ್ರವನ್ನು ಹೊಂದಿದೆ. ಮೂಲ ಭಾರತೀಯ ಸಂವಿಧಾನವು 395 ವಿಧಿಗಳು, 22 ಭಾಗಗಳು ಹಾಗೂ 8 ಅನುಸೂಚಿಗಳಿಂದ ಕೂಡಿತ್ತು. ಕಾಲಾನುಕ್ರಮದಲ್ಲಿ ಅಂದಿನ ಅಗತ್ಯಕ್ಕೆ ತಕ್ಕಂತೆ ಸಂವಿಧಾನದ ಹಲವು ವಿಧಿಗಳನ್ನು ರದ್ದುಗೊಳಿಸುವುದರೊಡನೆ ಹೊಸದಾಗಿ ನಿಯಮಾವಳಿಗಳನ್ನು ಸೇರಿಸಿರುವ ಕಾರಣ ಸಂವಿಧಾನದ ಗಾತ್ರ ಹೆಚ್ಚುತ್ತಲೇ ಸಾಗಿದೆ. ಪ್ರಸ್ತುತ 460 ಕ್ಕೂ ಅಧಿಕ ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳು ಭಾರತದ ಸಂವಿಧಾನದಲ್ಲಿವೆ. ವಿಶೇಷವೆಂದರೆ ಇಂದಿಗೂ ಸಂವಿಧಾನದ ವಿಧಿಗಳ ಕೊನೆಯ ಸಂಖೆ 395 ಹಾಗೂ ಭಾಗಗಳ ಸಂಖೆ 22 ಉಳಿದುಕೊಂಡಿದೆ. ಆದರ್ಶ ಸಂವಿಧಾನ ಚಿಕ್ಕ ಗಾತ್ರ ಹೊಂದಿರಬೇಕೆಂಬ ಚಿಂತಕರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿರುವ ಜಗತ್ತಿನ ಅತಿ ದೊಡ್ಡ ಸಂವಿಧಾನವೆನಿಸಿದ ಭಾರತದ ಸಂವಿಧಾನವನ್ನು ಆನೆ ಗಾತ್ರದ ಸಂವಿಧಾನ ಎನ್ನಲಾಗುತ್ತದೆ.

2. ಪ್ರಸ್ತಾವನೆ [Preamble]: ಸಂವಿಧಾನದ ಮೌಲ್ಯಗಳು, ತತ್ವಗಳು, ಗುರಿ ಹಾಗೂ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಸಂವಿಧಾನದ ಭಾಗವನ್ನು ಪ್ರಸ್ತಾವನೆ ಅಥವಾ ಪೂರ್ವ ಪೀಠಿಕೆ ಎನ್ನುವರು. ವಿಶ್ವದ ಇತರೆ ಲಿಖಿತ ಸಂವಿಧಾನಗಳು ಹೊಂದಿರುವಂತೆ ಅಮೇರಿಕ ಸಂವಿಧಾನದ ಪ್ರಭಾವದಿಂದ ಭಾರತ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗುವ ಭಾರತ ಸಂವಿಧಾನದ ಪ್ರಸ್ತಾವನೆಯು ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ, ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯವಾಗುತ್ತದೆ. ಸಂವಿಧಾನದ ಪಕ್ಷಿ ನೋಟವನ್ನು ಒದಗಿಸುವ ಪ್ರಸ್ತಾವನೆಯನ್ನು ಸಂವಿಧಾನದ ಕೈಗನ್ನಡಿ ಹಾಗೂ ಸಂವಿಧಾನದ ಅಳತೆಗೋಲು ಎನ್ನಲಾಗುತ್ತದೆ. ಪ್ರಸ್ತಾವನೆಯನ್ನು ಕೆ. ಎಂ. ಮುನ್ಶಿ ಅವರು ರಾಜಕೀಯ ಜಾತಕ ಎಂದು ಬಣ್ಣಿಸಿರುವರು.

3. ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ [Sovereign, Democratic, Republic]: ಭಾರತದ ಸಂವಿಧಾನವು ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವೆಂದು ಘೋಷಿಸಿದೆ. ಭಾರತವು ಆಂತರಿಕ ಅಥವಾ ಬಾಃಯ ವಿಚಾರಗಳನ್ನು ಕುರಿತು ಯಾರ ನಿಯಂತ್ರಣಕ್ಕೊಳಪಡದೇ ತನಗೆ ಸರಿ ತೋರಿದ ನಿರ್ಧಾರವನ್ನು ಕೈಗೊಳ್ಳುವ ಪರಮಾಧಿಕಾರ ಹೊಂದಿದೆ ಎಂಬುದು ಸಾರ್ವಭೌಮ ರಾಷ್ಟ್ರದ ತಿರುಳಾಗಿದೆ. ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜೆಗಳ ಆಶಯದಂತೆ ಪ್ರಜೆಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುವುದರಿಂದ ಭಾರತವು ಪ್ರಜಾಸತ್ತಾತ್ಮಕ ಅಂದರೆ ಪ್ರಜಾಪರ ದೇಶವೆಂದು ಪ್ರಜಾಸತ್ತಾತ್ಮಕ ರಾಷ್ಟ್ರದ ಪರಿಕಲ್ಪನೆ ಧ್ವನಿಸುತ್ತದೆ. ಹಾಗೆಯೇ ದೇಶದ ಮುಖ್ಯಸ್ಥ ಜನರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರೆ ಅದನ್ನು ಗಣರಾಜ್ಯ ಎನ್ನಬಹುದಾಗಿದೆ. ಭಾರತದ ಮುಖ್ಯಸ್ಥನಾದ ರಾಷ್ಟ್ರಪತಿಯು ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭಾ ಚುನಾಯಿತ ಪ್ರತಿನಿಧಿಗಳಿಂದ ಮತಗಳಿಸಿ ಆಯ್ಕೆಯಾಗುವರು. ಈ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ಭಾರತ ಗಣರಾಜ್ಯವಾಗಿದೆ ಎಂಬುದನ್ನು ಎತ್ತಿ ಹಿಡಿಯಲಾಗಿದೆ.

4. ಸಂಸದೀಯ ಮಾದರಿ ಸರ್ಕಾರ [Parliamentary Form of Government]: ಕಾರ್ಯಾಂಗವು ಶಾಸಕಾಂಗದಿಂದ ರಚನೆಗೊಂಡಿದ್ದು ಶಾಸಕಾಂಗಕ್ಕೆ ಕಾರ್ಯಾಂಗವು ಜವಾಬ್ದಾರಿಯಾಗಿದ್ದರೆ ಅದನ್ನು ಸಂಸದೀಯ ಸರ್ಕಾರ ಎನ್ನಲಾಗುತ್ತದೆ. ಇಂಗ್ಲೆಂಡ್‌ ಸಂಸದೀಯ ಮಾದರಿ ಸರ್ಕಾರದ ತವರೂರು. ಭಾರತೀಯರು ಶತಮಾನಗಳ ಕಾಲ ಇಂಗ್ಲೀಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಸಂಸದೀಯ ಸರ್ಕಾರದ ಅನುಭವ ಹೊಂದಿದ್ದರು. ಹೀಗಾಗಿ ಸಂವಿಧಾನ ರಚನಾಕಾರರು ಭಾರತಕ್ಕೆ ಸಂಸದೀಯ ಮಾದರಿ ಸರ್ಕಾರವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ನೈಜ ಕಾರ್ಯಾಂಗ ಹಾಗೂ ನಾಮ ಮಾತ್ರ ಕಾರ್ಯಾಂಗ, ಬಹುಮತ ಪಡೆದ ಪಕ್ಷದ ಆಳ್ವಿಕೆ, ಸಾಮೂಹಿಕ ಜವಾಬ್ದಾರಿ, ಪ್ರಧಾನಿಯ ನಾಯಕತ್ವ ಮುಂತಾದ ಲಕ್ಷಣಗಳು  ಕಂಡು ಬರುತ್ತವೆ. ಈ ಮಾದರಿ ಸರ್ಕಾರವನ್ನು ಮಂತ್ರಿ ಮಂಡಳ ಸರ್ಕಾರ, ಜವಾಬ್ದಾರಿ ಸರ್ಕಾರ, ಪ್ರಧಾನ ಮಂತ್ರಿಯ ಸರ್ಕಾರವೆಂದು ಕರೆಯಲಾಗುತ್ತದೆ.

5. ಜಾತ್ಯಾತೀತ ರಾಷ್ಟ್ರ [Secular Nation]: ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡರೆ ಅದನ್ನು ಜಾತ್ಯಾತೀತ ರಾಜ್ಯ ಎನ್ನಲಾಗುತ್ತದೆ. ಭಾರತ ಸಂವಿಧಾನವು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಎಲ್ಲ ಪ್ರಜೆಗಳಿಗೆ ಒದಗಿಸುವ ಮೂಲಕ ಭಾರತವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದೆ. ಭಾರತದಲ್ಲಿ ಹಿಂದೂ, ಇಸ್ಲಾಮ್‌, ಜೈನ, ಬೌದ್ಧ, ಕ್ರೈಸ್ತ, ಪಾರಸಿಗಳಿಗೆ ಸಮಾನವಕಾಶ ನೀಡಲಾಗುತ್ತಿದೆ. ಜೊತೆಗೆ ವಿವಿಧ ಧರ್ಮಗಳ ಪೂಜಾ ಸ್ಥಳಗಳು ಮತ್ತು ಕಟ್ಟುಪಾಡುಗಳ ರಕ್ಷಣೆಗೆ ಸರ್ಕಾರಗಳು ಭಾರತದಲ್ಲಿ ಬದ್ಧವಾಗಿವೆ. ಮೂಲ ಭಾರತ ಸಂವಿಧಾನದಲ್ಲಿ ಜಾತ್ಯಾತೀತತೆ ಎಂಬ ಪದವನ್ನು ಎಲ್ಲಿಯೂ ಬಳಸಿರಲಿಲ್ಲ. 1976 ರಲ್ಲಿ 42 ನೇ ತಿದ್ದುಪಡಿಯಂತೆ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಎಂಬ ಪದವನ್ನು ಸೇರಿಸಲಾಯಿತು. ಗಮನಿಸಬೇಕಾದ ವಿಚಾರವೆಂದರೆ ಪಾಕಿಸ್ತಾನವು ಜಾತ್ಯಾತೀತ ರಾಷ್ಟ್ರವಲ್ಲ. ಕಾರಣ ಇಸ್ಲಾಮ್‌ ಧರ್ಮವನ್ನು ಪಾಕ್‌ ರಾಜ್ಯ ಧರ್ಮವೆಂದು ಘೋಷಿಸಿಕೊಂಡಿದೆ.

6. ಮೂಲಭೂತ ಹಕ್ಕುಗಳು [Fundamental Rights]: ದೇಶಧ ಪ್ರಜೆಗಳು ನಾಗರಿಕ ಜೀವನ ನಡೆಸಲು ಅತ್ಯಗತ್ಯವಾದ ಸೌಲಬ್ಯ ಅಥವಾ ಅವಕಾಶಗಳಿಗೆ ಮೂಲಬೂತ ಹಕ್ಕು ಎನ್ನಲಾಗುತ್ತದೆ. ಅಮೇರಿಕ ಸಂವಿಧಾನದಿಂದ ಪ್ರಭಾವಿತಗೊಂಡು ಸಂವಿಧಾನ ರಚನಾಕಾರರು ಭಾರತ ಸಂವಿಧಾನದಲ್ಲಿ 3 ನೇ ಭಾಗದ 12 ರಿಂದ 35 ನೇ ವಿಧಿಯವರೆಗೆ ೭ ಮೂಲಭೂತ ಹಕ್ಕುಗಳನ್ನು ಭಾರತದ ಪ್ರಜೆಗಳಿಗೆ ನೀಡಿದ್ದರು. 1978 ರಲ್ಲಿ 44 ನೇ ತಿದ್ದುಪಡಿಯಂತೆ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಯಿತು. ಪ್ರಸ್ತುತ ಭಾರತೀಯರು ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರೋಪಾಯದ ಹಕ್ಕು ಎಂಬ ಆರು ಮೂಲಭೂತ ಹಕ್ಕುಗಳನ್ನು ಅನುಭವಿಸಬಹುದಾಗಿದೆ. ಈ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ ವಿವಿಧ ವಿಶೇಷಾಜ್ಙೆ ಹೊರಡಿಸಿ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯಗಳು ರಕ್ಷಣೆ ನೀಡುತ್ತವೆ. ಮೂಲಭೂತ ಹಕ್ಕುಗಳು ಅನಿರ್ಬಂಧಿತ ಹಕ್ಕುಗಳಾಗಿರದೇ ತುರ್ತು ಪರಿಸ್ಥಿತಿಯಲ್ಲಿ ಇವುಗಳನ್ನು ರದ್ದುಗೊಳಿಸಬಹುದಾಗಿದೆ.

7. ಮೂಲಭೂತ ಕರ್ತವ್ಯಗಳು [Fundamental Duties]: ದೇಶದ ಪ್ರಜೆಗಳು ದೇಶಕ್ಕಾಗಿ ನಿರ್ವಹಿಸಲೇಬೇಕಾದ ಕಾರ್ಯಗಳನ್ನು ಸರಳವಾಗಿ ಮೂಲಭೂತ ಕರ್ತವ್ಯಗಳು ಎನ್ನಬಹುದಾಗಿದೆ. ಮೂಲ ಭಾರತ ಸಂವಿಧಾನದಲ್ಲಿ ಭಾರತೀಯ ಪ್ರಜೆಗಳು ನಿರ್ವಹಿಸಬೇಕಾದ ಮೂಲಭೂತ ಕರ್ತವ್ಯಗಳ ಪ್ರಸ್ತಾಪವಿರಲಿಲ್ಲ. 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸ್ವರ್ಣಸಿಂಗ್‌ ಸಮೀತಿಯ ಶಿಫಾರಸಿನಂತೆ ಅಳವಡಿಸಲಾಯಿತು. ಭಾರತ ಸಂವಿಧಾನದ 4 [A] ಭಾಗದ 51 [A] ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದೆ. ಭಾರತೀಯ ಪ್ರಜೆಗಳ ಈ ಕರ್ತವ್ಯಗಳನ್ನು ನ್ಯಾಯಾಲಯಗಳು ಅನುಷ್ಟಾನಗೊಳಿಸಲು ಅವಕಾಶವಿಲ್ಲ. ಮೂಲಭೂತ ಕರ್ತವ್ಯಗಳ ಅಳವಡಿಕೆಯಲ್ಲಿ ಸೋವಿಯತ್‌ ರಷ್ಯಾ ಹಾಗೂ ಜಪಾನ್‌ ಸಂವಿಧಾನಗಳ ಪ್ರಭಾವ ಕಾಣಬಹುದಾಗಿದೆ.

8. ಸಂಯುಕ್ತ ಹಾಗೂ ಏಕಾತ್ಮಕ ವ್ಯವಸ್ಥೆಗಳ ಸಂರಚನೆ [Structure of Federal and Unitary Systom]: ಕೇಂದ್ರ ಮತ್ತು ಪ್ರಾಂತ್ಯ ಎಂಬ ಎರಡು ಬಗೆಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಸಂಯುಕ್ತ ವ್ಯವಸ್ಥೆಯಾದರೆ ಕೇಂದ್ರ ಸರ್ಕಾರ ಪ್ರಬಲವಾಗಿದ್ದು ರಾಜ್ಯ ಸರ್ಕಾರಗಳು ಕೇಂದ್ರದ ನಿಯಂತ್ರಣದಲ್ಲಿರುವ ವ್ಯವಸ್ಥೆ ಏಕಾತ್ಮಕ ವ್ಯವಸ್ಥೆಯಾಗಿದೆ. ಭಾರತ ಸಂವಿಧಾನದ ಮೊದಲ ವಿಧಿಯು ಭಾರತವು ರಾಜ್ಯಗಳ ಒಕ್ಕೂಟ ಎಂದು ವಿವರಿಸಿದ್ದು ಸಂಯುಕ್ತ ವ್ಯವಸ್ಥೆ ಎಂದು ಎಲ್ಲಿಯೂ ತಿಳಿಸಿಲ್ಲ. ಆದರೆ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳಾದ ದ್ವೀ ಸರ್ಕಾರಗಳ ಅಸ್ತಿತ್ವ, ಅಧಿಕಾರ ಹಂಚಿಕೆ, ಸಂವಿಧಾನದ ಶ್ರೇಷ್ಠತೆ, ಅನಮ್ಯ ತಿದ್ದುಪಡಿ ವಿಧಾನ, ಸ್ವತಂತ್ರ ನ್ಯಾಯಾಂಗ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೊತೆಗೆ ಏಕಾತ್ಮಕ ವ್ಯವಸ್ಥೆಯ ಮೂಲಾಂಶಗಳಾದ ಏಕ ಪೌರತ್ವ, ಏಕ ಸಂವಿಧಾನ, ಪ್ರಬಲ ಕೇಂದ್ರ ಸರ್ಕಾರ, ಅಖಿಲ ಭಾರತೀಯ ಸೇವೆಗಳು, ಸಾಮಾನ್ಯ ಚುನಾವಣಾ ಆಯೋಗ ಮುಂತಾದವುಗಳನ್ನು ಪಾಲಿಸಲಾಗಿದೆ. ಭಾರತದ ಬಹು ಸಂಸ್ಕೃತಿಯ ನಡುವೆ ದೇಶದ ಅಖಂಡತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಸಂವಿಧಾನದಲ್ಲಿ ಸಂಯುಕ್ತ ಹಾಗೂ ಏಕಾತ್ಮಕ ವ್ಯವಸ್ಥೆಯ ಅಂಶಗಳನ್ನು ಸೇರಿಸಲಾಗಿದೆ. ಹೀಗಾಗಿ ರಾಜ್ಯಶಾಸ್ತ್ರಜ್ಙ ಕೆ. ಸಿ. ವೇರ್‌ ಭಾರತ ಅರೆ ಸಂಯುಕ್ತ ವ್ಯವಸ್ಥೆ ಹೊಂದಿರುವ ದೇಶವೆಂದು ಅಭಿಪ್ರಾಯಪಟ್ಟಿದ್ದಾರೆ.

9. ನಮ್ಯ ಮತ್ತು ಅನಮ್ಯ ಸ್ವರೂಪ: ಸಂವಿಧಾನದ ನಿಯಮಾವಳಿಗಳನ್ನು ಸುಲಭ ವಿಧಾನದ ಮೂಲಕ ತಿದ್ದುಪಡಿ ಮಾಡಲು ಸಾಧ್ಯವಾದರೆ ಅದನ್ನು ನಮ್ಯ ಸಂವಿಧಾನವೆಂದೂ ಮತ್ತು ಸಂವಿಧಾನದ ನಿಯಮಾವಳಿಗಳನ್ನು ಕಠಿಣ ವಿಧಾನದ ಮೂಲಕ ಬದಲಾಯಿಸುವುದಾದರೆ ಅದನ್ನು ಅನಮ್ಯ ಸಂವಿಧಾನವೆಂದೂ ಪರಿಗಣಿಸಲಾಗುತ್ತದೆ. ಭಾರತ ಸಂವಿಧಾನ ರಚನಾಕಾರರು ಆಯಾ ಪರಿಸ್ಥಿತಿಗೆ ಸಂವಿಧಾನ ಬದಲಾಯಿಸಿಕೊಳ್ಳಲು ನೆರವಾಗಲು ನಮ್ಯ ಹಾಗು ಅನಮ್ಯ ತಿದ್ದುಪಡಿ ವಿಧಾನಗಳೆರಡನ್ನೂ  ನಮ್ಮ ಸಂವಿಧಾನದ 368 ನೇ ವಿಧಿಯಲ್ಲಿ ಅಳವಡಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಅರ್ಧದಷ್ಟು ಸದಸ್ಯರ ಅನುಮೋದನೆಯೊಡನೆಹಲವು ಸಂವಿಧಾನದ ನಿಯಮಗಳನ್ನು ಬದಲಿಸಬಹುದಾದರೆ ಕೆಲವು ನಿಯಮಾವಳಿಗಳ ಬದಲಾವಣೆಗೆ ಸಂಸತ್ತಿನ ಉಭಯ ಸದನಗಳ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆ ಅಗತ್ಯವಾಗಿರುತ್ತದೆ. ಉಳಿದಂತೆ ಸಂವಿಧಾನದ ಪ್ರಮುಖ ನಿಯಮಾವಳಿಗಳ ಬದಲಾವಣೆಗೆ ಸಂಸತ್ತಿನ ಉಭಯ ಸದನಗಳ ಮೂರನೇ ಎರಡರಷ್ಟು ಬಹುಮತದ ಅಂಗೀಕಾರ ಹಾಗು ಅರ್ಧದಷ್ಟು ರಾಜ್ಯಗಳ ಅನುಮೋದನೆ ಅನಿವಾರ್ಯವಾಗಿದೆ. ಹೀಗೆ ಸರಳ, ಕಠಿಣ ಹಾಗೂ ಸಂಕೀರ್ಣತೆಯ ಮೂರು ತಿದ್ದುಪಡಿ ವಿಧಾನಗಳನ್ನು ಭಾರತ ಸಂವಿಧಾನ ಒಳಗೊಂಡಿದೆ. ಆದ್ದರಿಂದ ಭಾರತ ಸಂವಿಧಾನ ನಮ್ಯ ಹಾಗೂ ಅನಮ್ಯ ಸಂವಿಧಾನಗಳ ಮಿಶ್ರಣ ಎನ್ನಲಾಗುತ್ತದೆ.

10. ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು: ದೇಶದ ಪ್ರಜೆಗಳ ಸಾಮಾಜಿಕ ಹಾಗೂ ಆರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು ಎನ್ನಲಾಗುತ್ತದೆ. ಸಮಾಜವಾದ, ಗಾಂಧೀವಾದ ಹಾಗೂ ಉದಾರವಾದ ಸಿದ್ಧಾಂತಗಳ ತಳಹದಿಯ ಈ ತತ್ವಗಳನ್ನು ಭಾರತ ಸಂವಿಧಾನದ 4 ನೇ ಭಾಗದ 36 ರಿಂದ 51 ನೇ ವಿಧಿಯವರೆಗೆ ಕಾಣಬಹುದಾಗಿದೆ. ಐರ್ಲ್ಯಾಂಡ್‌ ಸಂವಿಧಾನದ ಪ್ರಭಾವದಿಂದ ಈ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ತತ್ವಗಳಿಗೆ ನ್ಯಾಯಾಂಗದ ರಕ್ಷಣೆ ಇಲ್ಲವಾದ್ದರಿಂದ ನ್ಯಾಯಾಲಯಗಳಲ್ಲಿ ಇವುಗಳ ಉಲ್ಲಂಘನೆ ಅಥವಾ ಅನುಷ್ಟಾನ ಕುರಿತು ಪ್ರಜೆಗಳು ಪ್ರಶ್ನಿಸಲು ಅವಕಾಶವಿರುವುದಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿಸುವುದು ರಾಷ್ಟ್ರ ನೀತಿ ನಿರ್ದೇಶಕ ತತ್ವಗಳ ಆಶಯವಾಗಿದೆ.

11. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ: ಜಾತಿ, ಜನ್ಮ, ಲಿಂಗ, ಧರ್ಮ, ಭಾಷೆ, ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯ ಮಾಡದೇ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಎಲ್ಲ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿರುವ ವ್ಯವಸ್ಥೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನಲಾಗುತ್ತದೆ. ಗಮನಿಸಬೇಕಾದ ವಿಷಯವೆಂದರೆ ದೇಶದಿಂದ ದೇಶಕ್ಕೆ ನಿರ್ದಿಷ್ಟ ವಯೋಮಿತಿ ಭಿನ್ನವಾಗಿರುತ್ತದೆ. ಭಾರತ ಸಂವಿಧಾನದ 326 ನೇ ವಿಧಿಯು ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಅವಕಾಶ ನೀಡಿದೆ. ಆರಂಭದಲ್ಲಿ ಭಾರತದ ಮತದಾರರಿಗೆ 21 ವರ್ಷಗಳ ವಯೋಮಿತಿಯನ್ನು ನಿಗಧಿಪಡಿಸಲಾಗಿತ್ತು. ಮುಂದೆ 1989 ರಲ್ಲಿ 61 ನೇ ತಿದ್ದುಪಡಿಯಂತೆ ಮತದಾರರ ವಯೋಮಿತಿಯನ್ನು 18 ವರ್ಷಗಳಿಗೆ ನಿಗಧಿಪಡಿಸಲಾಗಿದೆ. ಹೆಮ್ಮೆಯ ಸಂಗತಿ ಏನೆಂದರೆ ಸಂವಿಧಾನದ ಜಾರಿಯೊಡನೆ ಭಾರತದ ಅರ್ಹ ಸಮಸ್ತ ಪ್ರಜೆಗಳು ಒಮ್ಮೆಲೇ ಈ ಪದ್ಧತಿಯಂತೆ ಮತದಾನದ ಹಕ್ಕನ್ನು ಅನುಭವಿಸುವಂತಾಯಿತು.

12. ತುರ್ತು ಪರಿಸ್ಥಿತಿ ಅವಕಾಶಗಳು: ದೇಶ ಎದುರಿಸಬಹುದಾದ ಅಸಹಜ ಸೈನಿಕ, ಸಂವಿಧಾನಾತ್ಮಕ ಅಥವಾ ಆರ್ಥಿಕ ಸನ್ನಿವೇಶಗಳನ್ನು ತುರ್ತು ಪರಿಸ್ಥಿತಿ ಎನ್ನಬಹುದು. ಜರ್ಮನಿಯ ವೈಮೆರ್‌ ಸಂವಿಧಾನದಿಂದ ಪ್ರಭಾವಿತಗೊಂಡ ಸಂವಿಧಾನ ರಚನಾಕಾರರು 18 ನೇ ಭಾಗದ 352 ರಿಂದ 360 ನೇ ವಿಧಿಯವರೆಗೆ ಭವಿಷ್ಯದಲ್ಲಿ ಎದುರಾಗಬಲ್ಲ ಮೂರು ಬಗೆಯ ತುರ್ತು ಪರಿಸ್ಥಿತಿಗಳಿಗೆ ಪರಿಹಾರೋಪಾಯಗಳನ್ನು ನಮೂದಿಸಿದ್ದಾರೆ. ಭಾರತ ಸಂವಿಧಾನದಲ್ಲಿ ತಿಳಿಸಲಾದ ಮೂರು ಬಗೆಯ ತುರ್ತು ಪರಿಸ್ಥಿತಿಗಳೆಂದರೆ

ಅ. 352 ನೇ ವಿಧಿಯಂತೆ ಬಾಃಯ ಆಕ್ರಮಣ ಅಥವಾ ಆಂತರಿಕ ಸಶಸ್ತ್ರ ಬಂಡಾಯಗಳ ಕಾರಣಕ್ಕೆ ಘೋಷಿಸುವ ರಾಷ್ಟ್ರೀಯ ತುರ್ತು ಪರಿಸ್ಥಿತಿ.

ಆ. 356 ನೇ ವಿಧಿಯಂತೆ ರಾಜ್ಯವೊಂದರ ಸಂವಿಧಾನಾತ್ಮಕ ವ್ಯವಸ್ಥೆ ಕುಸಿದಾಗ ರಾಜ್ಯಪಾಲರಿಂದ ವರದಿ ಪಡೆದು ಆ ರಾಜ್ಯದಲ್ಲಿ ಘೋಷಿಸಲಾಗುವ ರಾಜ್ಯ ತುರ್ತು ಪರಿಸ್ಥಿತಿ.

ಇ. 360 ನೇ ವಿಧಿಯಂತೆ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರಿದಾಗ ಘೋಷಿಸಲಾಗುವ ಆರ್ಥಿಕ ತುರ್ತು ಪರಿಸ್ಥಿತಿ.

ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಜಾರಿಯಾದಾಗ ಕೇಂದ್ರ ಸರ್ಕಾರವು ಪ್ರಬಲವಾಗಿ ರಾಜ್ಯ ಸರ್ಕಾರಗಳು ದುರ್ಬಲಗೊಳ್ಳುತ್ತವೆ. ಹೀಗಾಗಿ ಭಾರತವು ಶಾಂತಿ ಕಾಲದಲ್ಲಿ ಸಂಯುಕ್ತ ವ್ಯವಸ್ಥೆಯಂತೆ ಮತ್ತು ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಏಕಾತ್ಮಕ ವ್ಯವಸ್ಥೆಯಂತೆ ಭಾಸವಾಗುತ್ತದೆ.

13. ಎರವಲು ಸಂವಿಧಾನ: ಭಾರತ ಸಂವಿಧಾನ ರಚಿಸುವಲ್ಲಿ ಸಂವಿಧಾನ ರಚನಾಕಾರರು ಜಗತ್ತಿನ ಇತರ ಸಂವಿಧಾನಗಳ ಉತ್ತಮ ಅಂಶಗಳನ್ನು ಅವಲಂಬಿಸಿದ್ದಾರೆ. ಆದರೆ ಯತಾವತ್ತಾಗಿ ಬೇರೆ ಸಂವಿಧಾನಗಳ ನಿಯಮಾವಳಿಗಳನ್ನು ಸೇರಿಸದೇ ಭಾರತದ ಪರಿಸ್ಥಿತಿಗೆ ತಕ್ಕಂತೆ ಅವುಗಳಲ್ಲಿ ಅಗತ್ಯ ಮಾರ್ಪಾಡಿನೊಂದಿಗೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಸಂವಿಧಾನದ ಬಹು ಭಾಗದ ರಚನೆಗೆ 1935 ರ ಭಾರತ ಸರ್ಕಾರ ಕಾಯಿದೆ ನೆರವಾಗಿದೆ. ಮೂಲಭೂತ ಹಕ್ಕು, ಸರ್ವೋಚ್ಛ ನ್ಯಾಯಾಲಯ, ಪ್ರಸ್ತಾವನೆ ಮುಂತಾದವುಗಳ ಮೇಲೆ ಅಮೇರಿಕ ಸಂವಿಧಾನದ ಪ್ರಭಾವವಿದ್ದರೆ ಸಂಸತ್ತು, ಮಂತ್ರಿ ಮಂಡಳ, ಶಾಸನ ರಚನೆ ಮುಂತಾದವುಗಳ ಮೇಲೆ ಇಂಗ್ಲೆಂಡ್‌ ಸಂವಿಧಾನ ಪ್ರಭಾವ ಬೀರಿದೆ. ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಿಗೆ ಐರ್ಲ್ಯಾಂಡ್‌ ಸಂವಿಧಾನ, ತುರ್ತು ಪರಿಸ್ಥಿತಿ ಅವಕಾಶಗಳಿಗೆ ಜರ್ಮನಿ ಸಂವಿಧಾನ, ಮಾತ್ರವಲ್ಲ ಕೆನಡಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸಂವಿಧಾನಗಳು ಹಲವು ವಿಧದಲ್ಲಿ ನೆರವಾಗಿವೆ. ಆದ್ದರಿಂದ ಭಾರತ ಸಂವಿಧಾನವನ್ನು ಎರವಲು ಸಂವಿಧಾನ ಎನ್ನಲಾಗುತ್ತದೆ.

14. ಏಕೀಕೃತ ಹಾಗೂ ಸ್ವತಂತ್ರ ನ್ಯಾಯಾಂಗ: ಭಾರತದಲ್ಲಿ ಅಮೇರಿಕದಂತೆ ಒಕ್ಕೂಟ ಮತ್ತು ರಾಜ್ಯಗಳಿಗೆ ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆಯಿಲ್ಲ. ಬದಲಾಗಿ ಗೋಪುರಾಕಾರದಂತೆ ಶ್ರೇಣೀಕೃತ ಏಕ ನ್ಯಾಯಾಂಗ ವ್ಯವಸ್ಥೆಯನ್ನು ಭಾರತವು ಹೊಂದಿದೆ. ತಾಲೂಕು ಮಟ್ಟದ ನ್ಯಾಯಾಲಯದಿಂದ ರಾಷ್ಟ್ರ ಮಟ್ಟದ ಸರ್ವೋಚ್ಛ ನ್ಯಾಯಾಲಯದವರೆಗೆ ಭಾರತದ ನ್ಯಾಯಾಲಯಗಳು ಅಂತರ್ಸಂಬಂಧ ಹೊಂದಿವೆ. ಹೀಗಾಗಿ ಭಾರತದ ನ್ಯಾಯಾಂಗವನ್ನು ಏಕೀಕೃತ ನ್ಯಾಯಾಂಗ ಎನ್ನಲಾಗುತ್ತದೆ. ಜೊತೆಗೆ ಅತ್ಯುನ್ನತ ಹಂತದಲ್ಲಿ ಸರ್ವೋಚ್ಛ ನ್ಯಾಯಾಲಯ, ಅದರ ಕೆಳಗೆ ಉಚ್ಛ ನ್ಯಾಯಾಲಯಗಳು, ಅವುಗಳ ಕೆಳಗೆ ಹಲವು ಅಧೀನ ನ್ಯಾಯಾಲಯಗಳು ಸಂಘಟಿತವಾದ್ದರಿಂದ ಭಾರತದ ನ್ಯಾಯಾಂಗ ಶ್ರೇಣೀಕೃತ ನ್ಯಾಯಾಂಗವೆಂದು ಚಿರಪರಿಚಿತವಾಗಿದೆ. ಅಲ್ಲದೇ ಭಾರತದಲ್ಲಿ ನ್ಯಾಯಾಂಗವು ಸಂವಿಧಾನದ ರಕ್ಷಣೆ ಹಾಗೂ ಮೂಲಭೂತ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊಂದಿದ್ದು ಅವು ನಿಶ್ಪಕ್ಷಪಾತವಾಗಿ ನ್ಯಾಯದಾನ ಮಾಡಲು ಸ್ವತಂತ್ರವಾಗಿರುವಂತೆ ಹಲವು ಅವಕಾಶಗಳನ್ನು ನೀಡಲಾಗಿದೆ.

15. ಮೂರು ವಿಧದ ಸರ್ಕಾರಗಳು: ಭಾರತ ಸಂವಿಧಾನ ಜಾರಿಗೊಂಡಾಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂಬ ಎರಡು ಬಗೆಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಮುಂದೆ ಜನರ ಸಹಭಾಗಿತ್ವವನ್ನು ಹೆಚ್ಚಿಸಲು ಸ್ಥಳೀಯ ಸರ್ಕಾರಗಳ ಅನುಷ್ಟಾನಕ್ಕೆ ಪ್ರಯತ್ನಗಳಾದವು. ಕೊನೆಗೆ 1992 ರಲ್ಲಿ ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ತರುವ ಮೂಲಕ ಸ್ಥಳೀಯ ಸರ್ಕಾರಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲಾಯಿತು. 73 ನೇ ತಿದ್ದುಪಡಿಯಂತೆ ಸಂವಿಧಾನಕ್ಕೆ 9 ನೇ ಭಾಗ ಹಾಗು 243 [A] ಯಿಂದ 243 [O] ವರೆಗಿನ ವಿಧಿಗಳನ್ನು ಸೇರಿಸಿ ಗ್ರಾಮೀಣ ಸ್ಥಳೀಯ ಸರ್ಕಾರಗಳ ವಿವರಣೆ ನೀಡಲಾಗಿದೆ. ಅದೇ ರೀತಿ 74 ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ 9 [A] ಭಾಗ ಹಾಗು 243 [P] ಯಿಂದ 243 [ZG] ವರೆಗಿನ ವಿಧಿಗಳನ್ನು ಸೇರಿಸಿ ನಗರ ಸ್ಥಳೀಯ ಸರ್ಕಾರಗಳ ವಿವರಣೆ ನೀಡಲಾಗಿದೆ. ಹೀಗಾಗಿ ಪ್ರಸ್ತುತ ಭಾರತದಲ್ಲಿ ಸಂವಿಧಾನಾತ್ಮಕವಾಗಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳೆಂಬ ಮೂರು ಹಂತದ ಸರ್ಕಾರಗಳನ್ನು ಗುರುತಿಸಬಹುದಾಗಿದೆ.

ಮೇಲೆ ವಿವರಿಸಲಾಗಿರುವ ಪ್ರಧಾನ ಲಕ್ಷಣಗಳಲ್ಲದೇ ಭಾರತದ ಸಂವಿಧಾನವು ಇತರ ವಿಶೇಷತೆಗಳನ್ನೂ ಮೈಗೂಡಿಸಿಕೊಂಡಿದೆ. ಅಖಿಲ ಭಾರತೀಯ ಸೇವೆಗಳು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಸ್ವತಂತ್ರ ಕಾರ್ಯ ನಿರ್ವಹಣಾ ಸಂಸ್ಥೆಗಳು, ಪಕ್ಷಾಂತರ ಪಿಡುಗು, ಪರಿಶಿಷ್ಠ ಪಂಗಡಗಳ ಕಲ್ಯಾಣ ಅಂತಹ ವಿಶೇಷತೆಗಳಲ್ಲಿ ಪ್ರಮುಖವಾದವು. ಗಮನಿಸಬೇಕಾದ ಅಂಶವೇನೆಂದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಕಾರಣವಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್‌ 5ರಂದು ರದ್ದುಗೊಳಿಸಿದೆ ಮತ್ತು ಸರ್ವೋಚ್ಛ ನ್ಯಾಯಾಲಯವು ತನ್ನ ಡಿಸೆಂಬರ್‌ 11, 2023ರ ತೀರ್ಪಿನಲ್ಲಿ ಸರ್ಕಾರದ ಈ ನಿರ್ಣಯವನ್ನು ಎತ್ತಿಹಿಡಿದಿದೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources