ಏಕರೂಪ ನಾಗರೀಕ ಸಂಹಿತೆಯ ಮೇಲೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯ ವಿವರಗಳು

   ಏಕರೂಪ ನಾಗರಿಕ ಸಂಹಿತೆಯ ಚರ್ಚೆಯು ಸಂವಿಧಾನ ರಚನಾ ಪ್ರಕ್ರಿಯೆಯ ಸಮೀತಿಗಳ ಹಂತದಲ್ಲಿಯೇ ಕಾಣಿಸಿಕೊಂಡಿತ್ತು. ಭಾರತ ಸಂವಿಧಾನದಲ್ಲಿ ಅಳವಡಿಸಲಾಗುವ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಅಂತಿಮಗೊಳಿಸುವ ಜವಾಬ್ದಾರಿ ಹೊತ್ತಿದ್ದ ಮೂಲಭೂತ ಹಕ್ಕುಗಳ ಉಪ ಸಮೀತಿಯಲ್ಲಿ ಇದನ್ನು ಕುರಿತಂತೆ ಮೊದಲು ಪ್ರಸ್ತಾಪಿಸಲಾಗಿತ್ತು. ಏಕರೂಪ ನಾಗರಿಕ ಸಂಹಿತೆಯನ್ನು ಕೆ. ಎಂ. ಮುನ್ಶಿ ಮತ್ತು ಮಿನೂ ಮಸಾನಿ ಪ್ರತಿಪಾದಿಸಿದಾಗ ಸಮೀತಿಯ ಸದಸ್ಯರು ಸಮ್ಮತಿಸದೇ ನ್ಯಾಯಾಂಗ ರಕ್ಷಣೆಯುಳ್ಳ ಮತ್ತು ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕುಗಳೆಂದು ಮೂಲಭೂತ ಹಕ್ಕುಗಳನ್ನು ವಿಂಗಡಿಸಲು ಮುಂದಾದರು. ಒಂದೆರಡು ಸಭೆಗಳಲ್ಲಿ ಚರ್ಚಿಸಿದ ಬಳಿಕ ಉಪ ಸಮೀತಿಯು ಸರ್ದಾರ್‌ ಪಟೇಲ್‌ ನೇತೃತ್ವದ ಮೂಲಭೂತ ಹಕ್ಕುಗಳ ಸಮೀತಿಗೆ ತನ್ನ ವರದಿಯನ್ನು ನೀಡಿತು. ಆ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕುಗಳ ಗುಂಪಿಗೆ ಸೇರಿಸಿತ್ತು. ಈ ನಿರ್ಧಾರವನ್ನು ಉಪ ಸಮೀತಿಯ ಸರ್ವ ಸದಸ್ಯರೂ ಒಪ್ಪಿರಲಿಲ್ಲ. ಎಂ. ಆರ್‌. ಮಸಾನಿ, ಹಂಸಾ ಮೆಹತಾ ಮತ್ತು ಅಮೃತ್‌ ಕೌರ್‌ ಎಂಬ ಮೂವರು ಸದಸ್ಯರು ಧಾರ್ಮಿಕ ತಳಹದಿಯ ವೈಯಕ್ತಿಕ ಕಾನೂನುಗಳು ದೇಶದ ರಾಷ್ಟ್ರೀಯತೆಯ ಭಾವನೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಅಧಿಕವಾಗಿರುವುದರಿಂದ ಐದು ಅಥವಾ ಹತ್ತು ವರ್ಷಗಳ ನಂತರವಾದರೂ ಏಕರೂಪ ನಾಗರಿಕ ಸಂಹಿತೆ ಭಾರತಕ್ಕೆ ಅತ್ಯಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕ್ರಮೇಣ ಏಕರೂಪ ನಾಗರಿಕ ಸಂಹಿತೆಯನ್ನು ನ್ಯಾಯಾಂಗ ರಕ್ಷಣೆಯುಳ್ಳ ಹಕ್ಕಾಗಿಸಬೇಕೆಂಬ ಬೇಡಿಕೆ ಅಥವಾ  ಒತ್ತಾಯ ಹೆಚ್ಚುತ್ತಲೇ ಸಾಗಿತು.  ಅಂತಿಮವಾಗಿ ನವೆಂಬರ್‌ 4, 1948 ರಂದು ಕರಡು ಸಂವಿಧಾನವನ್ನು ಸಂವಿಧಾನ ರಚನಾ ಸಭೆಯ ಚರ್ಚೆಗೆ ಅಂಬೇಡ್ಕರ್‌ ಅವರು ಮಂಡಿಸಿದಾಗ ಏಕರೂಪ ನಾಗರಿಕ ಸಂಹಿತೆಯು ಕರಡು ಸಂವಿಧಾನದ ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕಾಗಿ ರಾಷ್ಟ್ರ ನೀತಿ ನಿರ್ದೇಶಕ ಭಾಗದ 35 ನೇ ವಿಧಿಯಲ್ಲಿ ಸ್ಥಾನ ಪಡೆದಿತ್ತು. ನವೆಂಬರ್‌ 23, 1948 ರಂದು 35 ನೇ ವಿಧಿಯನ್ನು ಚರ್ಚೆಗೆ ಕೈಗೆತ್ತಿಕೊಂಡಾಗ ಇಸ್ಮಾಯ್ಲ್ ಸಾಹೆಬ್‌, ನಾಜ಼ುರುದ್ದೀನ್‌ ಅಹಮದ್‌ ಮತ್ತು ಪಕರ್‌ಸಾಹಿಬ್‌ ಬಹದೂರ್‌ ಮುಂತಾದ ಮುಸ್ಲಿಂ ಸದಸ್ಯರಿಂದ ತಿದ್ದುಪಡಿಗಳು ಮಂಡನೆಗೊಂಡವು. ವೈಯಕ್ತಿಕ ಕಾನೂನನ್ನು ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯಿಂದ ಹೊರಗಿಡುವ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಟಾನಗೊಳಿಸುವಾಗ ಬಾಧೆಗೊಳಪಡುವ ಸಮುದಾಯಗಳಿಂದ ಪೂರ್ವಾನುಮತಿ ಪಡೆಯುವ ಅಂಶಗಳನ್ನು ಈ 35 ನೇ ವಿಧಿಯ ತಿದ್ದುಪಡಿಗಳು ಒಳಗೊಂಡಿದ್ದವು.

 

ಸಂವಿಧಾನ ರಚನಾ ಸಭೆಯ ಮುಸ್ಲಿಂ ಸದಸ್ಯರ ವಾದಕ್ಕೆ ಪ್ರತಿಯಾಗಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌, ಕೆ. ಎಂ. ಮುನ್ಶಿ ಮತ್ತು ಅಂಬೇಡ್ಕರ್‌ ಅವರು ಏಕರೂಪ ನಾಗರಿಕ ಸಂಹಿತೆಯ ಪರವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಮುನ್ಶಿಯವರು ಭಾರತೀಯರಲ್ಲಿ ರಾಷ್ಟ್ರೀಯ ಐಖ್ಯತೆ ಮೂಡಿಸಲು ಮತ್ತು ಜಾತ್ಯಾತೀತತೆಯಲ್ಲಿ ನಂಬಿಕೆಯನ್ನು ಬಲಗೊಳಿಸಲು ಸಮಾನ ನಾಗರಿಕ ಸಂಹಿತೆ ಸಹಕಾರಿ ಎಂಬ ಅಂಶವನ್ನು ಪ್ರತಿಪಾದಿಸಿದರು. ಮುಂದುವರಿದು ಏಕರೂಪ ಸಂಹಿತೆಯಿಂದ ಬಹುಸಂಖ್ಯಾತ ಹಿಂದೂಗಳಿಗೂ ಅಭದ್ರತೆ ಉಂಟಾಗುತ್ತದೆ ಎಂಬುದನ್ನು ಮಹಿಳೆಯರ ಸ್ಥಿತಿಯನ್ನು ಉದಾಹರಿಸಿ ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸಿದರು. ಅಂತೆಯೇ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌ ಅವರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಏಕರೂಪ ನಾಗರಿಕ ಸಂಹಿತೆಯು ಸಾಮರಸ್ಯವನ್ನು ನಾಶಗೊಳಿಸುವುದೆಂಬ ಮುಸ್ಲಿಂ ಸದಸ್ಯರ ವಾದವನ್ನು ಸಮ್ಮತಿಸದೇ ಅದು ಸಮುದಾಯದಲ್ಲಿ ಐಖ್ಯತೆಯನ್ನು ಬಲಗೊಳಿಸುವುದೆಂಬ ವಿಚಾರವನ್ನು ಮಂಡಿಸಿದರು. ಆಗ ಅಲ್ಲಾಡಿಯವರನ್ನು ಬೆಂಬಲಿಸುತ್ತಾ ಮಾತನಾಡಿದ ಡಾ. ಅಂಬೇಡ್ಕರ್ ಅವರು ಬ್ರಿಟಿಷರ ಕಾಲದಲ್ಲಿ ಜಾರಿಗೊಂಡ ಸಮಾನ ನಾಗರಿಕ ಸಂಹಿತೆಗೆ ನಾವೆಲ್ಲ ಒಳಪಟ್ಟಿದ್ದು ವಿವಾಹ, ಉತ್ತರಾಧಿಕಾರತ್ವ, ವಿಚ್ಚೇದನ, ದತ್ತು ಸ್ವೀಕಾರದಂತಹ ಕ್ಷೇತ್ರಗಳಲ್ಲಿ ಸಮಾನ ಸಂಹಿತೆ ಜಾರಿಗೊಳಿಸಲು ಮಾತ್ರ ಏಕರೂಪ ನಾಗರಿಕ ಸಂಹಿತೆ ಸಂಬಂಧಿಸಿದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದರು. ಜೊತೆಗೆ ಏಕರೂಪ ನಾಗರಿಕ ಸಂಹಿತೆಯ ಅನುಷ್ಟಾನವು ಐಚಿಕವಾಗಿದ್ದು ಈಗಲೇ ಜಾರಿಗೊಳಿಸುವ ಅಗತ್ಯವಿಲ್ಲ ಎಂಬುದನ್ನು ಸಂವಿಧಾನ ರಚನಾ ಸಭೆಯ ಮುಸ್ಲಿಂ ಸದಸ್ಯರಿಗೆ ಅಂಬೇಡ್ಕರ್‌ ಅವರು ಮನವರಿಕೆ ಮಾಡಿದರು. ರಾಷ್ಟ್ರ ನೀತಿ ನಿರ್ದೇಶಕ ತತ್ವದಡಿ ಬರುವ ಏಕರೂಪ ಸಂಹಿತೆಯನ್ನು ಭವಿಷ್ಯದಲ್ಲಿ ವಿವಿಧ ಸಮುದಾಯಗಳ ಸಹಕಾರದೊಡನೆ ಜಾರಿಗೊಳಿಸುವ ಅಧಿಕಾರವನ್ನು ಸಂಸತ್ತಿಗೆ ಅಂದರೆ ಶಾಸಕಾಂಗಕ್ಕೆ ನೀಡಲಾಗಿದೆ ಎಂಬ ಅಂಶವನ್ನು ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಗೆ    ಸ್ಪಷ್ಟಪಡಿಸಿದರು.

 

   ಅಂಬೇಡ್ಕರ್‌ ಅವರ ವಿವರಣೆಯ ಬಳಿಕ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ್ದ ಕರಡು ಸಂವಿಧಾನದ 35 ನೇ ವಿಧಿಯನ್ನು ಅಂತಿಮವಾಗಿ ಮತಕ್ಕೆ ಹಾಕಲಾಯಿತು. ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕಾರಗೊಂಡ ಕರಡು ಸಂವಿಧಾನದ 35 ನೇ ವಿಧಿಯು ವಿಧಿಗಳ ಮರು ಜೋಡಣೆಯ ಫಲವಾಗಿ ಪ್ರಸ್ತುತ ಭಾರತ ಸಂವಿಧಾನದಲ್ಲಿ 44 ನೇ ವಿಧಿಯಾಗಿ ಗುರುತಿಸಲ್ಪಡುತ್ತಿದೆ. ಸಾಕಷ್ಟು ಸಂಕೀರ್ಣವಾದ ಏಕರೂಪ ನಾಗರಿಕ ಸಂಹಿತೆಯನ್ನು ಕುರಿತಂತೆ ಸಂವಿಧಾನ ರಚನಾ ಸಭೆಯು ಆಳವಾಗಿ ಚರ್ಚಿಸಿತ್ತು. ಇದರ ಪರವಾಗಿದ್ದ ಮತ್ತು ವಿರುದ್ಧವಾಗಿದ್ದ ಸದಸ್ಯರ ನಡುವೆ ಸಹಮತ ಮೂಡಿಸುವುದು ಕಠಿಣ ಸವಾಲಾಗಿತ್ತು. ನ್ಯಾಯಾಂಗ ರಕ್ಷಣೆಯಿಲ್ಲದ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಡಿ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಸ್ತಾಪಿಸುವ ಮೂಲಕ ಡಾ. ಅಂಬೇಡ್ಕರ್‌ ಅವರು ಸಂವಿಧಾನ ರಚನಾಕಾರರಲ್ಲಿ ಸಹಮತವನ್ನು ಮೂಡಿಸಲು ಯಶಸ್ವಿಯಾಗಿದ್ದರು.

 

ಸಂವಿಧಾನ ರಚನಾ ಸಭೆಯಲ್ಲಿ ಶರಿಯತ್‌ ಕಾಯಿದೆ ಕುರಿತಂತೆ ಡಾ. ಅಂಬೇಡ್ಕರ್‌ ಅವರ ನಿಲುವು


   ನಿರ್ದಿಷ್ಟ ಧರ್ಮದ ಜನರು ಪಾಲಿಸುವ ನಂಬಿಕೆ, ಸಂಪ್ರದಾಯ, ಆಚರಣೆ ರೂಪದ ಧಾರ್ಮಿಕ ಕಟ್ಟಳೆಗಳನ್ನು ಸರಳಾರ್ಥದಲ್ಲಿ ವೈಯಕ್ತಿಕ ಕಾನೂನು ಎನ್ನಬಹುದು. ಆಯಾ ಧರ್ಮದ ಪವಿತ್ರ ಗ್ರಂಥಗಳು ಮತ್ತು ಧಾರ್ಮಿಕ ಮುಖಂಡರ ಸೂಚನೆಗಳು ಆಯಾ ಧರ್ಮದವರಿಗೆ ಕಾಲಾನುಕ್ರಮದಲ್ಲಿ ವೈಯಕ್ತಿಕ ಕಾನೂನಾಗಿರುತ್ತವೆ. ಉದಾ: ಮುಸ್ಲಿಂ ವೈಯಕ್ತಿಕ ಕಾಯಿದೆ, ಕ್ರಿಶ್ಚಿಯನ್‌ ವೈಯಕ್ತಿಕ ಕಾಯಿದೆ, ಹಿಂದೂ ವೈಯಕ್ತಿಕ ಕಾಯಿದೆ ಇತ್ಯಾದಿ. ಸಾಮಾನ್ಯವಾಗಿ ವಿವಾಹ, ವಿಚ್ಚೇಧನ, ಉತ್ತರಾಧಿಕಾರ, ದತ್ತು ಸ್ವೀಕಾರ ಮುಂತಾದ ನಾಗರಿಕ ಚಟುವಟಿಕೆಗೆ ಧಾರ್ಮಿಕ ತಳಹದಿಯ ವೈಯಕ್ತಿಕ ಕಾನೂನು ಸಂಬಂಧಿಸಿರುತ್ತವೆ. ಗಮನಾರ್ಹ ಸಂಗತಿ ಏನೆಂದರೆ ಒಂದು ಧರ್ಮದ ಅನುಯಾಯಿಗಳ ವೈಯಕ್ತಿಕ ಕಾನೂನುಗಳು ಅನ್ಯ ಧರ್ಮದ ಅನುಯಾಯಿಗಳ ವೈಯಕ್ತಿಕ ಕಾನೂನಿಗಿಂತ ಭಿನ್ನವಾಗಿರುವುದು. ಉದಾ: ವಿವಾಹದ ವಿಷಯದಲ್ಲಿ ಹಿಂದೂ ಧರ್ಮೀಯರಿಗೆ ಏಕ ಪತ್ನಿತ್ವ ಮತ್ತು ಇಸ್ಲಾಂ ಧರ್ಮೀಯರಿಗೆ ಬಹು ಪತ್ನಿತ್ವ ಅನ್ವಯವಾಗುವುದು. ಗಮನಿಸಬೇಕಾದ ಅಂಶವೇನೆಂದರೆ, ಇಸ್ಲಾಂ ಧರ್ಮದ ವೈಯಕ್ತಿಕ ಕಾನೂನುಗಳೇ ಶರಿಯತ್‌ ಕಾನೂನುಗಳೆಂದು ಗುರುತಿಸಲ್ಪಡುತ್ತವೆ.

 

   ಸಂವಿಧಾನ ರಚನಾ ಸಭೆಯ ಮುಸಲ್ಮಾನ ಸದಸ್ಯರು ಶರಿಯತ್‌ ಕಾಯಿದೆಗಳು ಇಸ್ಲಾಂ ಸಂಸ್ಕೃತಿಯ ಅವಿಭಾಜ್ಯವಾಗಿರುವುದರಿಂದ ಭಾರತದ ಸಂವಿಧಾನದಲ್ಲಿ ಅವುಗಳಿಗೆ ಪ್ರಾಧಾನ್ಯತೆ ನೀಡಬೇಕೆಂದು ವಾದಿಸಿದರು. ಆದರೆ, ಅಂಬೇಡ್ಕರ್‌ ಅವರು ಶರಿಯತ್‌ ಕಾಯಿದೆಗಳನ್ನು ಸಂವಿಧಾನದಲ್ಲಿ ಅಳವಡಿಸಲು ನಿರಾಕರಿಸಿದರು. ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ತತ್ವಗಳನ್ನು ಆಧರಿಸಿರಬೇಕೆಂಬ ಅಂಬೇಡ್ಕರ್‌ ಅವರ ನಂಬಿಕೆಯು ಅವರ ಈ ನಿಲುವಿಗೆ ಕಾರಣವಾಗಿತ್ತು. ಧರ್ಮ, ಜಾತಿ, ಲಿಂಗಗಳ ಆಧಾರದ ಮೇಲೆ ವಿವಿಧ ವರ್ಗಗಳ ನಡುವೆ ತಾರತಮ್ಯ ಮಾಡುವುದು ಉಚಿತವಲ್ಲವೆಂಬ ತಮ್ಮ ನಿಲುವಿನ ಹಿನ್ನೆಲೆಯಲ್ಲಿ ಶರಿಯತ್‌ ಕಾಯಿದೆಗಳಿಗೆ ಸಂವಿಧಾನಾತ್ಮಕ ಸ್ಥಾನವನ್ನು ಅಂಬೇಡ್ಕರ್‌ ಅವರು ತಿರಸ್ಕರಿಸಿದ್ದರು. ಇದರೊಡನೆ ಶರಿಯತ್‌ ಕಾಯಿದೆಗಳು ಮುಸ್ಲಿಂ ಮಹಿಳೆಯರು ಮತ್ತು ಮುಸಲ್ಮಾನೇತರರನ್ನು ಕುರಿತು ತಾರತಮ್ಯವನ್ನು ಪ್ರತಿಪಾದಿಸುವ ಅಂಶವನ್ನು ಅಂಬೇಡ್ಕರ್‌ ಅವರು ಮನಗಂಡಿದ್ದರು. ಶರಿಯತ್‌ ಕಾಯಿದೆಗಳ ಅಳವಡಿಕೆಯಿಂದ ಸಮಾಜದಲ್ಲಿನ ಸಹಬಾಳ್ವೆ ಮತ್ತು ಸಮಗ್ರತೆಗೆ ಧಕ್ಕೆಯುಂಟಾಗುವ ಆತಂಕವನ್ನು ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಯಲ್ಲಿ ವ್ಯಕ್ತಪಡಿಸಿದ್ದರು. ಜೊತೆಗೆ ಆಧುನಿಕ ಕಾಲಕ್ಕೆ ತಕ್ಕಂತೆ ಮತ್ತು ನೂತನ ಬೆಳವಣಿಗೆಗಳಿಗೆ ಅನುಗುಣವಾಗಿ ಶರಿಯತ್‌ ಕಾಯಿದೆಗಳಲ್ಲಿ ಬದಲಾವಣೆಗೊಳ್ಳುವ ಅಗತ್ಯವನ್ನು ಅಂಬೇಡ್ಕರ್‌ ಅವರು ಪ್ರತಿಪಾದಿಸಿದ್ದರು.

 

   ಸಂವಿಧಾನ ರಚನಾ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮತ್ತು ವೈಯಕ್ತಿಕ ಕಾನೂನು ಕುರಿತಂತೆ ಆಳವಾದ ಚರ್ಚೆ ಜರುಗಿತು. ಅಂತಿಮವಾಗಿ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳ 4 ನೇ ಭಾಗದಲ್ಲಿ 44 ನೇ ವಿಧಿಯಡಿ ರಾಜ್ಯವು ಭಾರತದಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂಬ ಸಾಲನ್ನು ಹೊರತುಪಡಿಸಿ ಯಾವುದೇ ಅಂಶವನ್ನು ಭಾರತ ಸಂವಿಧಾನದಲ್ಲಿ ಸೇರಿಸಲು ಸಂವಿಧಾನ ರಚನಾ ಸಭೆ ಮುಂದಾಗಲಿಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಪರಿಪೂರ್ಣವಾಗಿ ಜಾರಿಗೊಳಿಸಲು ಭಾರತ ಪ್ರಸ್ತುತ ಪಕ್ವವಾಗಿಲ್ಲ ಎಂಬುದಾಗಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಅಭಿಪ್ರಾಯಪಟ್ಟಿದ್ದರು. ಆದರೆ, ಬ್ರಿಟಿಷರ ಕಾಲದಲ್ಲಿ ಚಾಲನೆ ಪಡೆದಿದ್ದ ವೈವಿಧ್ಯಮಯ ಹಿಂದೂ ವೈಯಕ್ತಿಕ ಕಾನೂನುಗಳನ್ನು ಕ್ರೋಢೀಕರಿಸಿ ಏಕರೂಪದ ಹಿಂದೂ  ಸಂಹಿತೆಯನ್ನು ಜಾರಿಗೊಳಿಸಲು ನೆಹರು ಸರ್ಕಾರ ಒಲವು ಹೊಂದಿತ್ತು.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ