ಸಂವಿಧಾನ ರಚನಾ ಸಭೆಯಲ್ಲಿನ ಪ್ರಮುಖ ಚರ್ಚೆಗಳು ಮತ್ತು ತಿದ್ದುಪಡಿಗಳು - Constituent Assembly Debates and amendments

ಅಧ್ಯಾಯ 2. ಕರಡು ಸಂವಿಧಾನದ ಮೇಲಿನ ಪ್ರಮುಖ ಚರ್ಚೆಗಳು ಮತ್ತು ತಿದ್ದುಪಡಿಗಳು.

Chapter 2. Important Debates on Draft Constitution and ammendments.

ಪೀಠಿಕೆ: ನಮ್ಮ ಸಂವಿಧಾನಕಾರರು ಅದನ್ನು ರಚಿಸುವಾಗ ಸುಧೀರ್ಘ ಚರ್ಚೆ ಮತ್ತು ವಿಮರ್ಶೆಗಳನ್ನು ಮಾಡಿದ್ದರು. ಅಂದರೆ ಪ್ರತಿಯೊಂದು ವಿಧಿಯನ್ನು ಅನುಮೋದಿಸುವಾಗ ಅದರ ವರ್ತಮಾನದ ಪರಿಣಾಮಗಳು ಮತ್ತು ಭವಿಷ್ಯದ ಆಗು-ಹೋಗುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇವಲ ವಿಧಿಗಳ ರಚನೆಯಷ್ಟೇ ಅಲ್ಲ ಅವುಗಳಲ್ಲಿ ಬಳಸಲ್ಪಡುವ ಪದಗಳನ್ನೂ ಸಹ ಆಳವಾದ ಚರ್ಚೆಗೆ ಒಳಪಡಿಸಿದ್ದರು. ಇದರಿಂದಾಗಿ ನಮ್ಮ ಸಂವಿಧಾನದ ವಿಧಿಗಳು ಅಂದಿ ಕಾಲಕ್ಕೆ ಅಷ್ಟೇ ಅಲ್ಲ ಬದಲಾಗುತ್ತಿರುವ ಸಮಕಾಲೀನ ಪರಿಸ್ಥಿತಿಗೂ ಸಹ ಹೊಂದಿಕೊಳ್ಳುತ್ತಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಕರಡು ಸಂವಿಧಾನದ ಮೇಲೆ ನಡೆದ ಕೆಲವು ಪ್ರಮುಖ ಚರ್ಚೆಗಳನ್ನು ಇಲ್ಲಿ ವಿವರಿಸಲಾಗಿದೆ. ಬಹುತೇಕ ಈ ಚರ್ಚೆಗಳ ಸಮಯದಲ್ಲಿ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ್ದ ಡಾ. ಅಂಬೇಡ್ಕರ್‌ ಅವರು ಸದಸ್ಯರು ಕೇಳುವ ಪ್ರಶ್ನೆ ಮತ್ತು ಸ್ಪಷ್ಟೀಕರಣಗಳಿಗೆ ಸೂಕ್ತ ವಿವರಣೆಗಳನ್ನು ಒದಗಿಸಿದ್ದನ್ನು ಇಲ್ಲಿ ಗಮನಿಸಬಹುದು. ನಮ್ಮ ಕರಡು ಸಂವಿಧಾನದ ಮೇಲೆ 1. ಪ್ರಸ್ತಾವನೆಯ ಮೇಲಿನ ಚರ್ಚೆ, 2. ಸಂಯುಕ್ತ (ಒಕ್ಕೂಟ) ವ್ಯವಸ್ಥೆಯ ಮೇಲಿನ ಚರ್ಚೆ, 3. ಸಮಾನತೆಯ ಹಕ್ಕು ಮತ್ತು ತಾರತಮ್ಯ ನಿರ್ಬಂಧದ ಮೇಲಿನ ಚರ್ಚೆ, 4. ಏಕರೂಪ ನಾಗರೀಕ ಸಂಹಿತೆಯ ಮೇಲಿನ ಚರ್ಚೆ, 5. ಸುಗ್ರಿವಾಜ್ಞೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರದ ಮೇಲಿನ ಚರ್ಚೆ, 6. ಮರಣದಂಡನೆಯ ಮೇಲಿನ ಚರ್ಚೆ ಮತ್ತು 7. ಅಸ್ಪೃಶ್ಯತೆಯ ಮೇಲಿನ ಚರ್ಚೆಗಳು ಗಮನ ಸೆಳೆದ ಚರ್ಚೆಗಳಾಗಿದ್ದು, ಇವು ಇಂದಿಗೂ ಸಹ ಚರ್ಚೆ ಮತ್ತು ಮಂಥನಗಳಿಗೆ ಒಳಗಾಗುತ್ತಿರುವ ವಿಷಯಗಳಾಗಿವೆ.

1. ಪ್ರಸ್ತಾವನೆಯ ಮೇಲಿನ ಚರ್ಚೆ - Debate on Preamble

       ನವೆಂಬರ್ 15, 1948ರಂದು ಸಂವಿಧಾನ ರಚನಾ ಸಭೆಯಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆ ಮತ್ತು ಅದರ ಸ್ವರೂಪ ಕುರಿತು ಬಹು ಗಂಭೀರವಾದ ಚರ್ಚೆ ನಡೆಯಿತು. ಆ ಚರ್ಚೆಯ ಸ್ವರೂಪವನ್ನು ಕೆಳಕಂಡಂತೆ ವಿವರಿಸಲಾಗಿದೆ.

 “ಜಾತ್ಯಾತೀತ, ಸಂಯುಕ್ತ ಮತ್ತು ಸಮಾಜವಾದಿ”

ಪ್ರೊ. ಕೆ. ಟಿ. ಶಾ ಅವರು ಪ್ರಸ್ತಾವನೆಯಲ್ಲಿ ಮೇಲಿನ ಪದಗಳನ್ನು ಅಳವಡಿಸಲು ಪ್ರಸ್ತಾಪಿಸಿದರು. ಅಂದರೆ ಅವರ ಅಭಿಪ್ರಾಯವು “ಭಾರತವು ಜಾತ್ಯಾತೀತ, ಸಂಯುಕ್ತ ಮತ್ತು ಸಮಾಜವಾದಿ ಒಕ್ಕೂಟವಾಗಿರಬೇಕು” ಎಂಬುದಾಗಿತ್ತು. ಈ ಪದಗಳನ್ನು ಪೂರ್ವಪೀಠಿಕೆಯಲ್ಲಿ ಅಳವಡಿಸುವುದರಿಂದ ರಾಜ್ಯವು (ಸರ್ಕಾರ) ಹೇಗೆ ಸಂವಿಧಾನಾತ್ಮಕವಾಗಿ  ಆಡಳಿತ ನಡೆಸಬೇಕು ಎಂದು ಸ್ಪಷ್ಟವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರು ಭಾರತವು ಏಕಾತ್ಮಕ ಸ್ವರೂಪದ ಒಕ್ಕೂಟವಾಗಿರಬಾರದು ಎಂಬ ಕಾರಣಕ್ಕೆ “ಸಂಯುಕ್ತ” ಎಂಬ ಪದವನ್ನು ಪ್ರಸ್ತಾವನೆಯಲ್ಲಿ ಅಳವಡಿಸಲು ಬಯಸಿದರು. ಅವರ ಪ್ರಕಾರ ಈ ಪದವು ಒಕ್ಕೂಟದ ರಚನೆಯಲ್ಲಿ ಅದರಲ್ಲಿರುವ ಎಲ್ಲಾ ಪ್ರಾಂತ್ಯ ಅಥವಾ ರಾಜ್ಯಗಳ ಒಮ್ಮತಾಭಿಪ್ರಾಯ ಮತ್ತು ಅವುಗಳಿಗೆ ಸಮಾನ ಸ್ಥಾನ-ಮಾನಗಳನ್ನು ಒದಗಿಸುತ್ತದೆ. ಆದ್ದರಿಂದ ಭಾರತದ ಒಕ್ಕೂಟದಲ್ಲಿನ ರಾಜ್ಯಗಳು “ಭಾರತದ ಒಕ್ಕೂಟವನ್ನು ರಚಿಸುವ ರಾಜ್ಯಗಳು” ಆಗಿರಬೇಕು ಎಂಬುದು ಅವರ ಅಬಿಪ್ರಾಯವಾಗಿತ್ತು. ಅಲ್ಲದೇ ಅವರು ಭಾರತವು ಒಂದು ಜಾತ್ಯಾತೀತ ರಾಷ್ಟ್ರವಾಗಿರಬೇಕು ಎಂದು ಬಯಸಿದರು.  ಅಂದರೆ ಅವರು ರಾಜ್ಯ ಅಥವಾ ಸರ್ಕಾರದ ಸ್ವರೂಪ ಕುರಿತ ಸ್ಪಷ್ಟ ಮತ್ತು ನಿಖರ ವಿವರಣೆಯು ಸಂವಿಧಾನದಲ್ಲಿ ಇರಬೇಕು ಎಂದು ನಂಬಿದ್ದರು. ಏಕೆಂದರೆ, ವಿಭಜನೆಗೆ ಮುನ್ನಿನ ಕಹಿಘಟನೆಗಳ ಹಿನ್ನೆಲೆಯಲ್ಲಿ ರಾಷ್ಟ್ರವು ಜಾತ್ಯಾತೀತವಾಗಿರಬೇಕು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅಂದರೆ ಇದು ರಾಜ್ಯದ ಅಥವಾ ಸರ್ಕಾರದ ಆಡಳಿತ ಸ್ವರೂಪ ಕುರಿತು ಪ್ರಜೆಗಳಿಗೆ ಅನ್ಯಾಯ ಮತ್ತು ಅಸಮಾನತೆ ಉಂಟಾಗದಂತೆ ಜನತೆಗೆ ಭರವಸೆಯನ್ನುಂಟು ಮಾಡುತ್ತದೆ - ಎಂಬುದು ಅವರ ಅಭಿಪ್ರಾಯವಾಗಿತ್ತು.

ಅಂತಿಮವಾಗಿ ಸಂವಿಧಾನ ಸಭೆಯ ಸದಸ್ಯರು ಭಾರತದ ರಾಜ್ಯ ಸ್ವರೂಪವು ಜಾತ್ಯಾತೀತತೆಗೆ ಬದ್ಧವಾಗಿರುವುದರಿಂದ “ಜಾತ್ಯಾತೀತ” ಎಂಬ ಪದವನ್ನು ಪ್ರಸ್ತಾವನೆಯಲ್ಲಿ ಅಳವಡಿಸದಿರಲು ತೀರ್ಮಾನಿಸಿದರು.

            ಪ್ರೊ. ಶಾ ಅವರು “ಸಮಾಜವಾದಿ” ಎಂಬ ಪದವನ್ನು ಪ್ರಸ್ತಾಪಿಸುತ್ತಾ, ಅದು ರಾಷ್ಟ್ರದ ೆಲ್ಲಾ ಪ್ರಜೆಗಳಿಗೂ ಸಮಾನತೆ ಮತ್ತು ನ್ಯಾಯವನ್ನು ೊದಗಿಸುವುದಲ್ಲದೆ, ಎಲ್ಲರೂ ತಮ್ಮ ಶಕ್ತ್ಯಾನುಸಾರ ದೇಶದ ಉನ್ನತಿಗೆ ಕೊಡುಗೆ ನೀಡುವುದಲ್ಲದೇ ಪ್ರತಿಯೊಬ್ಬರೂ ತೃಪ್ತಿಕರವಾದ ಜೀವನ ನಡೆಸಲು ಬೇಕಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ ಎಂದರು. ಅಂದರೆ ಅವರ ಅಭಿಪ್ರಾಯವು “ಸಮಾಜವಾದಿ” ಎಂಬ ಪದವೇ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುತ್ತದೆ ಎಂಬುದಾಗಿತ್ತು. ಅಲ್ಲದೇ ಇದರಿಂದ ಸಮಾನತೆಯನ್ನು ಯಾವುದೇ ಸಂಘರ್ಷಗಳಿಲ್ಲದಂತೆ ಶಾಂತಿಯುತವಾಗಿ ಸಾಧಿಸಬಹುದು ಮತ್ತು ಈ ಪದವು ಪಟ್ಟಭದ್ರ ಹಿತಾಸಕ್ತಿಗಳ ನಿವಾರಣೆಯಲ್ಲಿ ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬ ಭಯವಿಲ್ಲ  ಎಂಬುದನ್ನು ಅವರು ಒತ್ತಿ ಹೇಳಿದರು.

        ಆದರೆ ಡಾ. ಅಂಬೇಡ್ಕರ್‌ ಈ ತಿದ್ದುಪಡಿಯನ್ನು ತಿರಸ್ಕರಿಸುತ್ತಾ “ಸರ್ಕಾರದ ನೀತಿಯು ಹೇಗಿರಬೇಕು, ಸಮಾಜವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೇಗೆ ಸಂಘಟಿತವಾಗಿರಬೇಕು? ಎಂಬ ವಿಷಯಗಳು ಪ್ರಜೆಗಳಿಂದಲೇ ಕಾಲ-ಕಾಲಕ್ಕೆ ಮತ್ತು ಸಂದರ್ಭಕ್ಕೆ ಅನುಗುಣವಾಗಿ ತೀರ್ಮಾನವಾಗಬೇಕು” ಎಂದು ತಿಳಿಸಿದರು. ಅದನ್ನು ಸಂವಿಧಾನದಲ್ಲಿಯೇ ಅಳವಡಿಸಲಾಗದು; ಏಕೆಂದರೆ ಅದು ಪ್ರಜಾಪ್ರಬುತ್ವ ಪದ್ಧತಿಯನ್ನೇ ವಿನಾಶಗೊಳಿಸಬಹುದು. ಅಲ್ಲದೇ ಸಂವಿಧಾನದಲ್ಲಿಯೇ ಸಾಮಾಜಿಕ ಸ್ವರೂಪವು ಹೇಗಿರಬೇಕು ಎಂಬುದನ್ನು ನಿರೂಪಿಸಿದರೆ, ಪ್ರಜೆಗಳು ಎಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ತಾವು ಜೀವಿಸಬೇಕು ಎಂದು ತೀರ್ಮಾನಿಸುವ ಹಕ್ಕನ್ನೇ ಅವರಿಂದ ಕಸಿದುಕೊಂಡಂತಾಗುತ್ತದೆ. ಪ್ರಸ್ತುತ ಬಂಡವಾಳಶಾಹಿ ಸಾಮಾಜಿಕ ವ್ಯವಸ್ಥೆಗಿಂತ ಸಮಾಜವಾದಿ ವ್ಯವಸ್ಥೆಯೇ ಸೂಕ್ತವೆಂದು ಬಹುಜನರ ಅಭಿಪ್ರಾಯವಾಗಿದ್ದರೂ, ನಾಳಿನ ಪ್ರಜೆಗಳು ಸಮಾಜವಾದಿ ವ್ಯವಸ್ಥೆಯ ಬದಲಾಗಿ ಬೇರೊಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಹೊಂದಲು ಬಯಸಬಹುದು ಎಂಬುದನ್ನೂ ಸಹ ನಾವಿಲ್ಲಿ ಆಲೋಚಿಸಬೇಕು ಎಂದೂ ಅವರು ತಿಳಿಸಿದರು. ಕಾರಣ ಶ್ರೀ ಹೆಚ್‌. ವಿ. ಕಾಮತ್‌ ಅವರೂ ಸಹ ಶಾ ಅವರು ಪ್ರಸ್ತಾಪಿಸಿದ ತಿದ್ದುಪಡಿಯನ್ನು ವಿರೋಧಿಸಿದರು.

        ಪರಿಣಾಮವಾಗಿಯೇ ಮುಂದೆ 1976 ರಲ್ಲಿ ಸಂವಿಧಾನದ 42ನೆ ತಿದ್ದುಪಡಿಯ ಮೂಲಕ “ಜಾತ್ಯಾತೀತ, ಸಮಾಜವಾದಿ ಅಖಂಡ ಮತ್ತು ಸಮಗ್ರತೆ” ಎಂಬ ಪದಗಳನ್ನು ಪೂರ್ವಪೀಠಿಕೆಗೆ ಸೇರಿಸಲಾಯಿತು.

ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ - Sovereign Democratic Republic

      ಸಂವಿಧಾನ ರಚನಾ ಸಭೆಯಲ್ಲಿ ಡಾ. ಅಂಬೇಡ್ಕರ್‌ರವರು ಸಂವಿಧಾನದ ಪ್ರಸ್ತಾವನೆಯನ್ನು ಮಂಡಿಸುತ್ತಾ “ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿ ವಿದ್ಯುಕ್ತವಾಗಿ ವ್ಯವಸ್ಥೆಗೊಳಿಸಲು” ಎಂದು ವಿವರಿಸುವಾಗ ಮೌಲಾನಾ ಹಸರತ್‌ ಮೊಹಾನಿ ಅವರು ಕಠಿಣವಾಗಿ  ಅವರ ಮಾತುಗಳನ್ನು ವಿರೋಧಿಸಿದರು. ಇವರು ಕಾಂಗ್ರೆಸ್ಸಿನ ಸದಸ್ಯರಾಗಿದ್ದು, “ಇನ್ಕ್ವಿಲಾಬ್‌ ಜಿಂದಾಬಾದ್”ಎಂಬ ಘೋಷಣೆಯನ್ನು ನೀಡಿದ  ಖ್ಯಾತ ಉರ್ದು ಕವಿಯಾಗಿದ್ದರು. ಅವರ ಈ ವಿರೋಧಕ್ಕೆ ಕಾರಣವೆಂದರೆ ದ್ಯೇಯೋದ್ಧೇಶಗಳ ಮೇಲಿನ ನಿರ್ಣಯದಲ್ಲಿ “ಸ್ವತಂತ್ರ, ಸಾರ್ವಭೌಮ ಗಣರಾಜ್ಯ” ಎಂಬ ಪದಗಳಿದ್ದವು. ಆದರೆ ಕರಡು ಸಮಿತಿಯು ”ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ” ಎಂಬ ಪದಗಳನ್ನು ಅಳವಡಿಸಿತ್ತು. ಏಕೆಂದರೆ “ಸಾರ್ವಭೌಮ” ಎಂಬ ಪದದಲ್ಲಿಯೇ “ಸ್ವತಂತ್ರ” ಎಂಬ ಅಂಶವು ಒಳಗೊಂಡಿದೆ ಎಂಬುದು ಕರಡು ಸಮಿತಿಯವರ ಅಭಿಪ್ರಾಯವಾಗಿತ್ತು. ಆದ್ದರಿಂದ ಮೊಹಾನಿ ಅವರು ಕೆಳಕಂಡ ಪದಗುಚ್ಛಗಳನ್ನು ಪರಿಶೀಲಿಸುವಂತೆ ಕೇಳಿಕೊಂಡರು:-

1. ಸಾರ್ವಭೌಮ ಸ್ವತಂತ್ರ ಗಣರಾಜ್ಯ - Sovereign Independent Republic,

2. ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ - Sovereign Democratic Republic,

3. ಸಾರ್ವಭೌಮ  ಪ್ರಜಾಸತ್ತಾತ್ಮಕ ರಾಜ್ಯ - Sovereign Democratic State.”

        ಮೇಲಿನ ತಿದ್ದುಪಡಿಗೆ ಸಂಬಂಧಿಸಿದಂತೆ ಅಮೂಲ್ಯ ಚರ್ಚೆಯ ನಂತರ ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಕರಡು ಸಮಿತಿಯವರು ಸೂಚಿಸಿದ್ದ ಪದಗಳನ್ನೇ ಪ್ರಸ್ತಾವನೆಯಲ್ಲಿ ಅಳವಡಿಸಿಕೊಳ್ಳಲಾಯಿತು.

2. ಸಂಯುಕ್ತ ವ್ಯವಸ್ಥೆಯ ಮೇಲಿನ ಚರ್ಚೆ - Debate on Federalism

        ಭಾರತೀಯ ಸಂವಿಧಾನದ ಪ್ರಮುಖ ಲಕ್ಷಣವೆಂದರೆ ಅದು ಇತರ ಪಾಶ್ಚಿಮಾತ್ಯ ರಾಜ್ಯಗಳಂತೆ ಒಕ್ಕೂಟದ ರಚನೆಯನ್ನು ಹೊಂದಿರುವುದು. ನಮ್ಮ ಒಕ್ಕೂಟದ ಸ್ವರೂಪವು ಬಹುಕಾಲದಿಂದ ಚರ್ಚೆಗೆ ಒಳಗಾಗುತ್ತಿದೆ. ಅಲ್ಲದೇ ಸಂವಿಧಾನ ರಚನಾ ಸಭೆಯಲ್ಲಿಯೂ ಸಹಾ ಇದು ತೀವ್ರ ಚರ್ಚೆಗೆ ಒಳಗಾಗಿತ್ತು.  1946 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಐತಿಹಾಸಿಕ ಮೀರತ್ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದ ಜೆ.ಬಿ. ಕೃಪಲಾನಿ ಅವರು ಪ್ರಸ್ತಾಪಿತ ಸಂವಿಧಾನವನ್ನು ವಿವರಿಸುವಾಗ ಅದು ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಅಥವಾ ಅಧಿಕಾರ ಹೊಂದಿರುವ ಒಕ್ಕೂಟ ವ್ಯವಸ್ಥೆ ಆಗಿರಬೇಕು ಎಂದು ಒತ್ತಾಯಿಸಿದ್ದರು. ಆದರೆ ವಿಭಜನೆಯ ನಂತರ ಭಾರತದ ಐಕ್ಯತೆಯ ಸಮಸ್ಯೆಯು ದೂರವಾದ ಕಾರಣ ಹೆಚ್ಚು ಅಧಿಕಾರವುಳ್ಳ ಕೇಂದ್ರ ಸರ್ಕಾರದ ಬಗ್ಗೆ ಇದ್ದ ವಿರೋಧ ದೂರವಾಯಿತು. ಆದರೂ ಭಾರತೀಯ ರಾಜ್ಯಗಳಲ್ಲಿನ ವೈವಿಧ್ಯತೆಯಿಂದಾಗಿ ಒಕ್ಕೂಟದ ಅವಶ್ಯಕತೆಯೊಂದನ್ನು ತಿರಸ್ಕರಿಸುವಂತಿರಲಿಲ್ಲ. ಕಾರಣ ಬಲಿಷ್ಠ ಕೇಂದ್ರ ಮತ್ತು ರಾಜ್ಯಗಳಿಗೆ ಗಮನಾರ್ಹವಾದ ಅಧಿಕಾರ ನೀಡಿ ಒಕ್ಕೂಟವನ್ನು ರಚಿಸುವುದು ಅವಶ್ಯವೆನಿಸಿತ್ತು. ಈ ತೆರನಾದ ಕ್ರಮವು ಮಂತ್ರಿಮಂಡಲ ಆಯೋಗದವರು ಊಹಿಸಿದ್ದಕ್ಕಿಂತ ಬಲಿಷ್ಠ ಕೇಂದ್ರ ಸರ್ಕಾರದ ರಚನೆಗೆ ಅವಕಾಶವೀಯುತ್ತಿತ್ತು.

            ಡಾ. ಅಂಬೇಡ್ಕರ್ ರವರು ಸಂವಿಧಾನ ಸಭೆಗೆ ಕರಡು ಸಂವಿಧಾನವನ್ನು ಪ್ರಸ್ತುತಪಡಿಸಿದಾಗ ಅವರು “ಅದರಲ್ಲಿ ರೂಪಿಸಿರುವ ಕೇಂದ್ರ ಸರ್ಕಾರವನ್ನು ಸಂಯುಕ್ತ ಸ್ವರೂಪದ್ದಾಗಿದೆ ಎಂದು ವಿವರಿಸಿದರು, 1 ನೇ ವಿಧಿಯಲ್ಲಿ ಬಳಸಲಾದ ಪದವು ಯೂನಿಯನ್ ಆಗಿದ್ದರೂ ಮತ್ತು " ಸಂಯುಕ್ತ" ಪದವನ್ನು ಪ್ರಸ್ತಾವನೆ ಅಥವಾ ಇತರ ಯಾವುದೇ ವಿಧಿಗಳಲ್ಲಿ ಉಲ್ಲೇಖಿಸಲಾಗಿಲ್ಲಎಂದು ವಿವರಿಸಿದ್ದರು.

        ಬಾಹ್ಯ ಪರಿಸ್ಥಿತಿಗಳು, ದೇಶದ ವೈಶಾಲ್ಯತೆ ಮತ್ತು ಅದರ ವೈವಿಧ್ಯಮಯ ಅಂಶಗಳ ಹಿನ್ನೆಲೆಯಲ್ಲಿ ಏಕೀಕೃತ ವ್ಯವಸ್ಥೆಯು ಅನಗತ್ಯ ಮತ್ತು ಅದು ಕಾರ್ಯಸಾಧ್ಯವಲ್ಲ ಎಂದು ಅಸೆಂಬ್ಲಿಯಲ್ಲಿ ಒಮ್ಮತಾಭಿಪ್ರಾಯವಿತ್ತು. ಆದ್ದರಿಂದ ಭಾರತಕ್ಕೆ ಸಂಯುಕ್ತ ಸ್ವರೂಪದ ಸಂವಿಧಾನವು ಸೂಕ್ತವೆನಿಸಿದ್ದು, ಕರಡು ಸಂವಿಧಾನದಲ್ಲಿ ವಿವರಿಸಿದ ಕೇಂದ್ರ ಸರ್ಕಾರವು ಹೆಚ್ಚಿನ ಅಧಿಕಾರವುಳ್ಳದ್ದಾಗಿದ್ದರೂ ಸದಸ್ಯರು ಮೇಲಿನ ಅಭಿಪ್ರಾಯವನ್ನು ಕೊನೆಯವರೆಗೂ ಹೊಂದಿದ್ದರು. ಏಕೆಂದರೆ ವಿಭಜನೆಯ ನಂತರ ಬಲವಾದ ಕೇಂದ್ರ ಸರ್ಕಾರವು ಅನಿವಾರ್ಯವಾಗಿತ್ತು ಮತ್ತು ಅದಕ್ಕಾಗಿ ಏಕಾತ್ಮಕ ವ್ಯವಸ್ಥೆಯು ಅನಿವಾರ್ಯವಾಗಿರಲಿಲ್ಲ.

ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆ

ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆಯು ಸಂವಿಧಾನ ಸಭೆಯ ಗಮನಕ್ಕೆ ಬಾರದೇ ಇರಲಿಲ್ಲ. ಗಣರಾಜ್ಯ, ಪ್ರಜಾಪ್ರಭುತ್ವ, ಸರ್ಕಾರದ ಸಂಸದೀಯ ಸ್ವರೂಪದಂತಹ ಅನೇಕ ಪಾಶ್ಚಿಮಾತ್ಯ ರಾಜಕೀಯ ಪರಿಕಲ್ಪನೆಗಳಂತೆ, ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆಯೂ ಚರ್ಚೆಗಳಲ್ಲಿ ಒಳಗೊಂಡಿತ್ತು ಮತ್ತು ಸಂವಿಧಾನದ ಕರಡು ಸಮಿತಿಯವರು ಈ ಪರಿಕಲ್ಪನೆಯನ್ನು ಅಳವಡಿಸಿಕೊಂಡರು. ಉದಾಹರಣೆಗೆ, ಯು.ಎಸ್.ಎಸ್.ಆರ್ ನಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಜಾರಿಗೊಳಿಸುವಾಗ ಅಲ್ಲಿನ ಜನಾಂಗಗಳು, ಭಾಷೆಗಳು ಮತ್ತು ಸಂಸ್ಕೃತಿಗಳ ಅವರ ವೈವಿಧ್ಯತೆ, ವಿಸ್ತಾರವಾದ ಅಭಿವೃದ್ಧಿಯಾಗದ ಪ್ರದೇಶಗಳು ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಅವರ ಪ್ರಾಚೀನ ಪ್ರದೇಶಗಳುಹೀಗೆ ಪರಿಹರಿಸಬೇಕಾದ ಸಮಸ್ಯೆಗಳು ನಮ್ಮ ಸಂವಿಧಾನ ರಚನಾಕಾರರ ಗಮನಕ್ಕೆ ಬಂದವು. ಆದರೆ ರಷ್ಯನ್ನರು ಒಕ್ಕೂಟವನ್ನು ರಚಿಸಲು ಬಳಸಿದ ಸರ್ವಾಧಿಕಾರಿ ವಿಧಾನಗಳು ಮತ್ತು ಕಮ್ಯುನಿಸಂನ ಕಠಿಣ ಸಿದ್ಧಾಂತಗಳ ಪರಿಣಾಮವಾಗಿ ನಮ್ಮ ಸಂವಿಧಾನ ರಚನಾಕಾರರು ಪ್ರಜಾಪ್ರಭುತ್ವವಾದಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಯುಕ್ತ ಸ್ವರೂಪದತ್ತ ಹೆಚ್ಚಿನ ಗಮನ ಹರಿಸಿದರು.

ಸಂಯುಕ್ತ ರಾಜ್ಯದ ಸ್ವರೂಪಕ್ಕೆ ಸಂಬಂಧಿಸಿದಂತೆ, ಶ್ರೀ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರುಈ ವ್ಯವಸ್ಥೆಯು ಸಂವಿಧಾನದ ಮೂಲಭೂತ ತತ್ವಗಳಲ್ಲಿ ಒಂದಾಗಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರದ ಸ್ಪಷ್ಟ ಹಂಚಿಕೆ ಇದ್ದು, ಅವೆರಡೂ ಸರ್ಕಾರಗಳಿಗೆ ಸಾರ್ವಭೌಮ ಅಧಿಕಾರವನ್ನು ಒದಗಿಸಬೇಕು. ಇತರ ಸಂವಿಧಾನಗಳು ಹೊಂದಿರುವ ಸಂಯುಕ್ತ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿಗಳ ಸ್ಪಷ್ಠ ಹಂಚಿಕೆಯಿಲ್ಲದ ಕಾರಣ ಅವುಗಳು ಹೊಂದಿರುವ ಸಂಯುಕ್ತ ಸ್ವರೂಪವು ಕಟಿಣವಾಗಿಲ್ಲ ಮತ್ತು ಇದರಿಂದ ಅವೆರಡೂ ಸರ್ಕಾರಗಳು ಪರಸ್ಪರ ಅವಲಂಬಿತವಾಗಿವೆ” ಎಂದು ಹೇಳಿದ್ದರು. ಸಂಯುಕ್ತ ವ್ಯವಸ್ಥೆಯನ್ನು ಅಳವಡಿಸಿಕೊಂಡ ಅನೇಕ ರಾಷ್ಟ್ರಗಳು ಐತಿಹಾಸಿಕವಾಗಿ ಎದುರಿಸದ ಸಮಸ್ಯೆಗಳನ್ನು ಭಾರತವು ಎದುರಿಸುತ್ತಿರುವ ಕಾರಣ ವ್ಯಾಖ್ಯಾನವು ಭಾರತೀಯ ಸಂದರ್ಭಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ಬ್ರಿಟಿಷರ ಅಡಿಯಲ್ಲಿದ್ದ ಪ್ರದೇಶಗಳನ್ನು ಒಂದು ಒಕ್ಕೂಟದ ಅಡಿಯಲ್ಲಿ ಏಕೀಕರಿಸುವುದು ಭಾರತದ ಸಮಸ್ಯೆಯಾಗಿತ್ತು.

      ಸಂವಿಧಾನದ 250, 352 ಮತ್ತು 353 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಮಾತ್ರ ಏಕೀಕೃತ ಸ್ವರೂಪದ ಅಧಿಕಾರವನ್ನು ಚಲಾಯಿಸಬಹುದು ಮತ್ತು ಅಧಿಕಾರದ ಚಲಾವಣೆಗೆ ಭಾರತೀಯ ಸಂಸತ್ತಿನ ಉಭಯ ಸದನಗಳ ಅನುಮೋದನೆಯ ಅಗತ್ಯವಿದೆ ಎಂದು ಡಾ. ಅಂಬೇಡ್ಕರ್ ಸ್ಪಷ್ಟಪಡಿಸಿದರು. ಅವರು ಮುಂದುವರಿದು ನಿಬಂಧನೆಗಳು ಭಾರತೀಯ ಸಂವಿಧಾನವು ಸಮಯ ಮತ್ತು ಸಂದರ್ಭಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಏಕೀಕೃತ ಮತ್ತು ಸಂಯುಕ್ತ ವ್ಯವಸ್ಥೆಗಳಂತೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುತ್ತವೆ. ಉದಾ: ಸಾಮಾನ್ಯ ಅಥವಾ ಶಾಂತಿಯ ಸಮಯದಲ್ಲಿ, ಇದು ಸಂಯುಕ್ತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಿದರೆ, ಯುದ್ಧದ ಸಮಯದಲ್ಲಿ ಅದು ಏಕಾತ್ಮಕ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ” ಎಂದರು.

3. ಸಮಾನತೆಯ ಹಕ್ಕು ಮತ್ತು ತಾರತಮ್ಯ ನಿರ್ಬಂಧದ ಮೇಲಿನ ಚರ್ಚೆಗಳು

        ಕರಡು ಸಂವಿಧಾನದ ವಿಧಿ 9 ನ್ನು ಪ್ರಸ್ತುತ ಸಂವಿಧಾನದ 14 ಮತ್ತು 15 ನೆ ವಿಧಿಗಳಾಗಿ ವಿಭಜಿಸಲಾಗಿದೆ. ಈ ಕೆಳಗೆ ಪ್ರಸ್ತುತ ನಮ್ಮ ಸಂವಿಧಾನದ ವಿಧಿ 14 ಮತ್ತು 15 ನ್ನು ನೀಡಲಾಗಿದೆ:-

ವಿಧಿ ೧೪. ಕಾನೂನಿನ ಮುಂದೆ ಸಮಾನತೆ: ಭಾರತದ ರಾಜ್ಯಕ್ಷೇತ್ರದಲ್ಲಿ ಯಾರೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳಿಂದ ಸಮಾನ ಸಂರಕ್ಷಣೆಯನ್ನು ರಾಜ್ಯವು ನಿರಾಕರಿಸತಕ್ಕದ್ದಲ್ಲ.

ವಿಧಿ ೧೫. ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧ:

ಕರಡು ಸಂವಿಧಾನದ ವಿದಿ 9ರ ಮೇಲಿನ ಚರ್ಚೆಗಳು

        ಶ್ರೀ ಸಿ. ಸುಬ್ರಮಣ್ಯಂ ಅವರು ರಾಜ್ಯವು ಮೇಲೆ ಹೇಳಿರುವ ವಿಷಯದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಅಲ್ಲದೇ ಅವರು ಪ್ರಸ್ತಾಪಿತ ವಿಧಿಗೆ 9(1A) ಉಪವಿಧಿಯನ್ನು ಸೇರಿಸಲು ಸೂಚಿಸಿದರು. ಅದರಲ್ಲಿ "ಯಾವುದೇ ನಾಗರಿಕನು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ಯಾವುದೇ ತಾರತಮ್ಯಕ್ಕೆ ಒಳಗಾಗಬಾರದು" ಎಂಬ ಅಂಶವನ್ನು ಸೇರಿಸಲು ಸೂಚಿಸಿದರು

      ನಂತರ ಸೈಯದ್‌ ಅಬ್ದುರ್‌ ರೂಫ್‌ ಅವರು “ಲಿಂಗ” ಪದದ ಬದಲು “ಜನ್ಮಸ್ಥಳ” ಎಂಬ ಪದವನ್ನು ಅಳವಡಿಸಲು ಸೂಚಿಸಿದರು. ಏಕೆಂದರೆ ಅವರು ಜನ್ಮಸ್ಥಳದ ಆಧಾರದಲ್ಲಿ ತಾರತಮ್ಯ ಉಂಟಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದರು. ಮುಂದುವರಿದು ಯಾರಿಗಾದರೂ ತಾರತಮ್ಯ ಮಾಡುವಾಗ ಅವರ ಜನಾಂಗದ ಬದಲು ಅವರ ಜನ್ಮಸ್ಥಳದ ಆಧಾರದಲ್ಲಿ ತಾರತಮ್ಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

      ಪ್ರೊ. ಕೆ. ಟಿ. ಶಾ ಅವರು “ನಂಬಿಕೆ” ಎಂಬ ಪದದ ಬದಲು “ಧರ್ಮ” ಎಂಬ ಪದವನ್ನು ಬಳಸಲು ಸೂಚಿಸಿದರು. ಅಲ್ಲದೇ ಅವರು ವಿವಿಧ ಸ್ಥಳಗಳ ಹೆಸರುಗಳನ್ನು ಸೂಚಿಸುವ ಬದಲು “ಸಾರ್ವಜನಿಕ ಸ್ಥಳ” ಎಂಬ ಪದವನ್ನು ಬಳಸಲು ಸೂಚಿಸಿದರು. ಅವರು ಸಾರ್ವಜನಿಕ ಸ್ಥಳ ಎಂಬ ಪದವನ್ನು ವಿಶಾಲ ಅರ್ಥದಲ್ಲಿ ವ್ಯಕ್ತಪಡಿಸಿದರು. ಏಕೆಂದರೆ ಹಿಂದೆ ಕೆಲವು ಸಮುದಾಯಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದೂ ಸಹ ಅವರು ಹೇಳಿದರು. ಪ್ರಜಾಸತ್ತಾತ್ಮಕ ಸಮಾನತೆಯ ಸಂವಿಧಾನವಾಗಿರುವ ಕಾರಣ ಎಲ್ಲಾ ಸ್ಥಳಗಳ ಹೆಸರುಗಳನ್ನು ಸಂವಿಧಾನದ ವಿಧಿಯಲ್ಲಿ ಬಳಸುವುದು ಅರ್ಥಹೀನವಾಗುತ್ತದೆ ಎಂದೂ ಅವರು ಹೇಳಿದರು.      ಶ್ರೀ ಹೆಚ್.ವಿ. ಕಾಮತ್‌ ಅವರು “ರಾಜ್ಯದ ಕಂದಾಯ” ಎಂಬ ಪದದ ಬದಲು “ರಾಜ್ಯದ ನಿಧಿ” ಎಂಬ ಪದವನ್ನು ಬಳಸಲು ಕೋರಿದರು. ಅಂಬೇಡ್ಕರರು ಅದನ್ನು ಅನುಮೋದಿಸಿದರು.

      ನಂತರ ಶ್ರೀ ಮಹಮದ್‌ ತಾಹಿರ್‌ ಅವರು “ರಾಜ್ಯ ಅಥವಾ ಸಾರ್ವಜನಿಕರ ಬಳಕೆಗೆ ಮೀಸಲಿರುವ” ಎಂಬ ಪದಗಳಿಗೆ ಬದಲಾಗಿ “ರಾಜ್ಯ ಅಥವಾ ಯಾವುದೇ ಕಾನೂನಾತ್ಮಕ ಸಂಸ್ಥೆ ಅಥವಾ ಸಾರ್ವಜನಿಕರ ಬಳಕೆಗೆ ಮೀಸಲಿರುವ ಮತ್ತು ಈ ನಿಯಮದ ಉಲ್ಲಂಘನೆಯು ಕಾನೂನು ಧೃಷ್ಟಿಯಿಂದ ಅಪರಾಧವಾಗಿದ್ದು ದಂಡನಾರ್ಹವಾಗಿರುತ್ತದೆ” ಎಂಬ ಪದಗಳನ್ನು ಬಳಸಲು ಸೂಚಿಸಿದರು. ಅವರು ಇದನ್ನು ಮಾನವರೆಲ್ಲರ ಸಂಪೂರ್ಣ ಸಮಾನತೆಯ ದೃಷ್ಟಿಯಿಂದ ಪ್ರಸ್ತಾಪಿಸಿದರು. ಅಲ್ಲದೇ ಅವರು ಹಾಗೆ ಹೇಳಲು ಭಾರತದಲ್ಲಿನ ಅನೇಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳವರ ದಯನೀಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿಯನ್ನು ಸೂಚಿಸಿದರು. ಈ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

       ಶ್ರೀ ರಾಜ್‌ ಬಹಾದ್ದೂರ್‌ ಅವರು ಸ್ಥಳ ಎಂಬ ಪದದ ಪೂರ್ವದಲ್ಲಿ ಜನ್ಮ ಎಂಬ ಪದವನ್ನು ಬಳಸುವುದರಿಂದ ಈ ವಿಧಿಗೆ ಸೀಮಿತ ಅರ್ಥ ಉಂಟಾಗುತ್ತದೆ ಎಂದರು. ಅವರ ಪ್ರಕಾರ ಜನ್ಮಸ್ಥಳ ಎಂದರೆ ವಂಶ ಎಂಬ ಅರ್ಥವೂ ಉಂಟಾಗುತ್ತದೆ. ಆದ್ದರಿಂದ ವಂಶ ಎಂಬ ಪದವನ್ನು ಪರಿಗಣಿಸಿದರೆ ಭವಿಷ್ಯದಲ್ಲಿ ಅದು ಹೆಚ್ಚಿನ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದರು. ಧರ್ಮ, ಜಾತಿ ಲಿಂಗ ಮತ್ತು ಇನ್ನಿತರ ಅಂಶಗಳ ಆಧಾರದಲ್ಲಿ ತಾರತಮ್ಯ ತಡೆಗಟ್ಟುವುದು ಮಾತ್ರವಲ್ಲ ಕುಟುಂಬ ಮತ್ತು ವಂಶದ ಆಧಾರದಲ್ಲೂ ಉಂಟಾಗಬಹುದಾದ ತಾರತಮ್ಯವನ್ನು ಸಂವಿಧಾನದ ಮೂಲಕವೇ ತಡೆಗಟ್ಟಲು ಸೂಚಿಸಿದರು. ಅಲ್ಲದೇ ತಾರತಮ್ಯವನ್ನು ತಡೆಗಟ್ಟುವುದು ಮಾತ್ರವಲ್ಲ ತಾರತಮ್ಯ ಉಂಟಾಗುವ ಸಾಧ್ಯತೆಗಳನ್ನೂ ತಡೆಹಿಡಿಯುವುದರಿಂದ ಎಲ್ಲಾ ರೀತಿಯ ತಾರತಮ್ಯಗಳನ್ನೂ ಸಂವಿಧಾನದ ಮೂಲಕವೇ ತಡೆಗಟ್ಟಲು ಅವರು ಬಯಸಿದ್ದರು.

      ಶ್ರೀ ಎಸ್.‌ ನಾಗಪ್ಪ ಅವರ ಅಭಿಪ್ರಾಯದಲ್ಲಿ ಭಾರತದ ಜನತೆಯು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಕ್ತವಾಗಿರಬೇಕು. ಅವರ ಪ್ರಕಾರ ಸ್ವಾತಂತ್ರ್ಯ ಎಂದರೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಎಂದರ್ಥ. ಅವರು ಈ ವಿಧಿಯಡಿ ಸಾಮಾಜಿಕ ಹಕ್ಕುಗಳನ್ನು ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ನೀಡಬೇಕು ಎಂದು ಬಯಸಿದರು. ಅಲ್ಲದೇ ಸಾಮಾಜಿಕ ಹಕ್ಕುಗಳನ್ನು ಹೊಂದುವುದು ವ್ಯಾಪಕವೂ ಮತ್ತು ಉತ್ತರದಾಯಿಯೂ ಆಗಿದೆ ಎಂದರು. ಮುಂದುವರಿದು ಅವರು ಶೋಷಣೆಗೆ ಒಳಗಾದ ಭಾರತೀಯರ ಆರ್ಥಿಕ ಪರಿಸ್ಥಿತಿಯ ಸಮೀಕ್ಷೆಯೂ ಆಗಬೇಕಾಗಿದೆ ಎಂದರು. ಜೊತೆಗೆ ಅವರು ನಮ್ಮ ಬಹುತೇಕ ನ್ಯಾಯಾಲಯಗಳು ಕಾನೂನಿನ ನ್ಯಾಯಾಲಯಗಳಾಗಿವೆಯೇ ಹೊರತು ನ್ಯಾಯ ನೀಡುವ ನ್ಯಾಯಾಲಯಗಳಾಗಿಲ್ಲವೆಂದರು. ಆದ್ದರಿಂದ ಶೋಷಿತರಿಗೆ ಆರ್ಥಿಕ ಹಕ್ಕುಗಳನ್ನು ನೀಡಿದರೆ ಅವರು ಆಗಾಗ್ಗೆ ನ್ಯಾಯಕ್ಕಾಗಿ ಕೋರ್ಟುಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಸಹ ಹೇಳಿದರು.

       ಸರ್ದಾರ್‌ ಭೂಪಿಂದರ್‌ ಸಿಂಗ್‌ ಮನ್‌ ಅವರು ಮೂಲಭೂತ ಹಕ್ಕುಗಳ ಬಗ್ಗೆ ನಿರ್ಣಯ ಕೈಗೊಳ್ಳುವಾಗ ಆರಾಧನಾ ಸ್ಥಳಗಳನ್ನು ಈ ಹಕ್ಕುಗಳಿಂದ ಹೊರಗಿಟ್ಟರೆ ಮೂಲಭೂತ ಹಕ್ಕುಗಳು ಅಪೂರ್ಣವಾಗುತ್ತವೆ ಎಂದರು. ಅವರ ಪ್ರಕಾರ ಅಂತಹ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು ಮತ್ತು ಅವುಗಳನ್ನು ಅರ್ಹರ ನಿಯಂತ್ರಣಕ್ಕೆ ನೀಡಬೇಕೆಂದರು. ಆ ಮೂಲಕ ಧಾರ್ಮಿಕ ತಾರತಮ್ಯವನ್ನು ಶಾಶ್ವತವಾಗಿ ಕಿತ್ತೊಗೆಯಲು ಅವರು ಬಯಸಿದ್ದರು.

ಉಪಸಂಹಾರ:-       ಭಾರತೀಯ ಸಂವಿಧಾನದ ರಚನೆಕಾರರು ಜನಾಂಗ, ಧರ್ಮ, ಜಾತಿ, ಲಿಂಗ ಅಥವಾ ಅವುಗಳಲ್ಲಿ ಯಾವುದೇ ಆಧಾರದ ಮೇಲೆ ಯಾವುದೇ ನಾಗರಿಕರ ವಿರುದ್ಧ ರಾಜ್ಯದಿಂದ ತಾರತಮ್ಯ ಉಂಟಾಗದಿರುವ ಗುರಿಯನ್ನು ಹೊಂದಿದ್ದರು. ವಿಧಿಯನ್ನು ಭಾರತದ ನಾಗರಿಕರಿಗಾಗಿ ರಚಿಸಲಾಗಿದ್ದು, ಅದರ ಮೂಲಕ ರಕ್ಷಣೆಯನ್ನು ಭಾರತದ ನಾಗರಿಕರಿಗೆ ಮಾತ್ರ ನೀಡುವ ಮೂಲಕ  ಪಂಗಡ, ಪಂಥ ಮತ್ತು ಕೋಮುವಾದಿ ಸಂಸ್ಥೆಗಳ ಪ್ರಭಾವಕ್ಕೆ ಯಾವುದೇ ಅವಕಾಶಗಳು ಇರಬಾರದು ಎಂದು  ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಅವರು ನಿಜವಾದ ಪ್ರಜಾಪ್ರಭುತ್ವದ ಏಳಿಗೆಯನ್ನು ಗುರಿಯಲ್ಲಿಟ್ಟುಕೊಂಡು, ಯಾವುದೇ ನಿರ್ದಿಷ್ಟ ಸಮುದಾಯದಿಂದ ಸ್ಥಾಪಿಸಲಾದ ಯಾವುದೇ ಸಾಮಾಜಿಕ ಸಂಸ್ಥೆಯು ನಿರ್ದಿಷ್ಟ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಪ್ರಯೋಜನವನ್ನುಂಟು ಮಾಡಬೇಕು ಎಂಬ ನಂಬಿಕೆಯನ್ನು ಅವರು ಹೊಂದಿದ್ದರು. ಅಂದರೆ, ಸಾಮಾಜಿಕ ಸಂಸ್ಥೆಗಳ ಉಪಯುಕ್ತತೆಯು ದೊಡ್ಡ ಸಮುದಾಯಕ್ಕೆ ಲಭ್ಯವಾಗಬೇಕು. ಇದಲ್ಲದೆ, ಅವರು ಮಹಿಳೆಯರು ಮತ್ತು ಮಕ್ಕಳಿಗೆ ಸಂಪೂರ್ಣ ಸಮಾನತೆಯನ್ನು ನೀಡಲು ಬಯಸಿದ್ದರು. ದಕ್ಕಾಗಿ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ರಾಜ್ಯವು ಯಾವುದೇ ವಿಶೇಷ ಕಾನೂನುಗಳನ್ನು ರಚಿಸಲು ಯಾವುದೇ ಅಡೆ-ತಡೆ ಇರಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು. ಅಂದರೆ ಸಮಾನ ನಾಗರಿಕತೆಯ ಪರಿಕಲ್ಪನೆಯನ್ನು ಉತ್ತೇಜಿಸಲು ಮತ್ತು ಅದನ್ನು ಅನುಷ್ಠಾನಗೊಳಿಸುವುದು ಅವರ ಗುರಿಯಾಗಿತ್ತು. ಅದಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಬುಡಕಟ್ಟುಗಳ ವಿಶೇಷ ವರ್ಗವನ್ನು ಗುರ್ತಿಸಲು ಅವರು ಬಯಸಲಿಲ್ಲ. ಅವರು ಎಲ್ಲರನ್ನೂ “ನಾಗರಿಕ” ಎಂಬ ಪರಿಭಾಷೆಯ ಅಡಿಯಲ್ಲಿ ಗುರ್ತಿಸಲು ಬಯಸಿದ್ದು, ಅದಕ್ಕಾಗಿ ರಾಜ್ಯದ ನೀತಿ ತಾರತಮ್ಯರಹಿತವಾಗಿರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ವಿಧಿಯಲ್ಲಿ ಬಳಸಲಾದಸಾರ್ವಜನಿಕ” ಎಂಬ ಪದವನ್ನು ಭಾರತೀಯ ಪ್ರಜೆಗಳೆಲ್ಲರಿಗೂ ಸಮಾ ಅರ್ಥದಲ್ಲಿ ಬಳಸಲಾಗಿದೆ.  ಅವರು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಇತ್ಯಾದಿ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಏಕರೂಪವಾಗಿ ಪರಿಗಣಿಸಿದ್ದಾರೆ. ರಾಜ ಮನೆತನಗಳು, ರಾಜವಂಶಗಳು, ಶ್ರೀಮಂತರು, ಇತ್ಯಾದಿ ಸೇರಿದಂತೆ ಯಾವುದೇ ವ್ಯಕ್ತಿಗೆ ಅಥವಾ ಗುಂಪಿಗೆ ವಿಶೇಷ ಸ್ಥಾನಮಾನವನ್ನು ನೀಡದೇ, ಒಟ್ಟಿನಲ್ಲಿ ಅವರು ಆರ್ಥಿಕ, ಸಾಮಾಜಿಕ, ಮತ್ತು ಧಾರ್ಮಿಕ ಅಸಮಾನತೆಗಳನ್ನು ಹೋಗಲಾಡಿಸುವ ಮೂಲಕ ಕಾನೂನಿನ ಮುಂದೆ ಎಲ್ಲರಿಗೂ ಸಮಾನ ಸ್ಥಾನವನ್ನು ನೀಡಲು ಬಯಸಿದ್ದರು.

4. ಏಕರೂಪ ನಾಗರೀಕ ಸಂಹಿತೆಯ ಮೇಲಿನ ಚರ್ಚೆ - Debate on Uniform Civil Code

      ಸ್ವಾತಂತ್ರ್ಯಾನಂತರ ವೈಯುಕ್ತಿಕ ಕಾನೂನಿನ ಪ್ರಶ್ನೆಯು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಯಿತು.  ಸುಮಾರು ಎರಡು ವರ್ಷಗಳ ಕಾಲ ಸಾಂವಿಧಾನಿಕ ಸಭೆಯಲ್ಲಿ ಪ್ರಗತಿಪರ ಸದಸ್ಯರ ಮಾತುಗಳು, ಸಂಪ್ರದಾಯವಾದಿ ಸದಸ್ಯರೆಂದು ಕರೆಯಲ್ಪಡುವವರ ಭಿನ್ನಾಭಿಪ್ರಾಯದ ಧ್ವನಿಗಳು, ಅಲ್ಪಸಂಖ್ಯಾತ ಸಮುದಾಯಗಳು ವ್ಯಕ್ತಪಡಿಸಿದ ಆತಂಕಗಳು ಮತ್ತು ಹೊರಗಿನ ಕಾನೂನು ತಜ್ಞರು ಮತ್ತು ಸಾಮಾನ್ಯರಿಂದ ಉಂಟಾದ ಒತ್ತಡಗಳಿಂದ ವಿಷಯವು ಹೆಚ್ಚು ಚರ್ಚೆಗೆ ಒಳಗಾಯಿತು.      ಈ ನಿಟ್ಟಿನಲ್ಲಿ  ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿನ ಚರ್ಚೆಗಳು ಸಂವಿಧಾನ ರಚನಾಕಾರರು ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆ, ಅದರ ಪ್ರಸ್ತುತತೆ ಮತ್ತು ಉಪಯುಕ್ತತೆಯನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ ಎಂದು ತಿಳಿಸುತ್ತವೆ.

      ಸಂವಿಧಾನ ರಚನಾ ಸಭೆಯಲ್ಲಿದ್ದ ಮುಸ್ಲಿಂ ಸದಸ್ಯರು ವೈಯುಕ್ತಿಕ ಕಾನೂನುಗಳ ಮೇಲಿನ ಪ್ಪ್ರಸ್ತಾವನೆಯನ್ನು ಒಟ್ಟಾಗಿ ಪ್ರತಿಭಟಿಸಿದರು. ಸದರಿ ಚರ್ಚೆಯು ಸಂವಿಧಾನದ ವಿಧಿ 35ರ ಅಡಿಯಲ್ಲಿ ನಡೆಯಿತು. ಅಂದಿನಿಂದ ಇಂದಿನವರೆಗೂ ಈ ವಿಷಯದ ಮೇಲಿನ ಚರ್ಚೆಯು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಏಕೆಂದರೆ ಈ ಅಂಶವು ಭಾರತದ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಅದರ ಭಾಷಾ ವೈವಿಧ್ಯತೆಯ ಮೇಲೆ ಪ್ರಭಾವ ಬೀರುವಂತದ್ದಾಗಿದೆ.

      ನಮ್ಮ ಸಂವಿಧಾನದ ರಚನಾಕಾರರು ದೇಶದ ಪ್ರಜೆಗಳೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಮೃದ್ಧಿಯನ್ನು ಒದಗಿಸುವ ಆಧಾರದ ಮೇಲೆ ನಮ್ಮ ದೇಶವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಉದ್ದೇಶಿಸಿದ್ದರು. ಮುಂದೆ 1976 ರಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆಗೆ ಜಾತ್ಯಾತೀತತೆ ಮತ್ತು ಸಮಾಜವಾದಿ ಎಂಬ ಪದಗಳನ್ನು ಸೇರಿಸಲಾಯಿತು. ಅದಕ್ಕೂ ಮೊದಲೇ 1950ರಲ್ಲಿಯೇ ನಮ್ಮ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಅಳವಡಿಸಲ್ಪಟ್ಟಿದ್ದವು; ಅದರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಹಾ ಸೇರಿತ್ತು. ಅಂದಿನಿಂದಲೂ ಸಂವಿಧಾನ ರಚನಾ ಸಭೆ ಮಾತ್ರವಲ್ಲ ಇನ್ನಿತರ ಸಾರ್ವಜನಿಕ ಸಭೆಗಳಲ್ಲಿ ವೈಯುಕ್ತಿಕ ಕಾನೂನುಗಳ ಮೇಲಿನ ಚರ್ಚೆಯು ಆಗಿಂದಾಗ್ಯೆ ನಡೆಯುತ್ತಲೇ ಇದೆ. ಅಲ್ಲದೇ ನಮ್ಮ ಸಂವಿಧಾನ ಜಾರಿಗೊಳ್ಳುವುದಕ್ಕೂ ಮೊದಲೇ ಈ ವಿಷಯದ ಪರ ಮತ್ತು ವಿರೋಧದ ಚರ್ಚೆಗಳು ಬಹುವಾಗಿ ನಡೆದಿದ್ದವು.

      ಹೀಗೆ ನಡೆದ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಮದ್ರಾಸ್‌ ಪ್ರಾಂತ್ಯದ ಪ್ರತಿನಿಧಿಯಾಗಿದ್ದ ಮಹಮದ್‌ ಇಸ್ಮಾಯಿಲ್‌ ಅವರು ವಿಧಿ 33ಕ್ಕೆ ಮುಂದಿನ ತಿದ್ದುಪಡಿಯನ್ನು ಸೂಚಿಸಿದರು:- ಯಾವುದೇ ಗುಂಪು, ವರ್ಗ ಅಥವಾ ಸಮುದಾಯವು ತನ್ನದೇ ಆದ ವೈಯುಕ್ತಿಕ ಕಾನೂನುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ಕೈಬಿಡಲು ಒತ್ತಾಯಿಸತಕ್ಕದ್ದಲ್ಲ”. ಅವರು ವ್ಯಕ್ತಿಯೊಬ್ಬನು ತನ್ನ ವೈಯುಕ್ತಿಕ ಕಾನೂನುಗಳಿಗೆ ಬದ್ಧನಾಗಿರುವುದು ಅವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಜೊತೆಗೆ ಅವರು ವೈಯುಕ್ತಿಕ ಕಾನೂನುಗಳು ವ್ಯಕ್ತಿಯೊಬ್ಬನ ಜೀವನಶೈಲಿಯ ಭಾಗವಾಗಿರುತ್ತವೆ ಎಂದರು. ಅವರ ಪ್ರಕಾರ ವೈಯುಕ್ತಿಕ ಕಾನೂನುಗಳು ಧರ್ಮ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುತ್ತವೆ. ಆದ್ದರಿಂದ ಅವುಗಳಲ್ಲಿನ ಹಸ್ತಕ್ಷೇಪವು ತಲ-ತಲಾಂತರದಿಂದ ಪಾಲಿಸಿಕೊಂಡು ಬಂದಿರುವ ಜೀವನಶೈಲಿಯಲ್ಲಿನ ಹಸ್ತಕ್ಷೇಪವಾಗುತ್ತದೆ ಎಂದರು. ಭಾರತವು ಒಂದು ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು. ತಮ್ಮ ಈ ವಾದವನ್ನು ಸಮರ್ಥಿಸಲು ಅವರು ಯುಗೋಸ್ಲಾವಿಯದ ಅಧ್ಯಕ್ಷರು ತಮ್ಮ ದೇಶದಲ್ಲಿ ಮುಸ್ಲೀಮರಿಗೆ ಅವರ ಕೌಟುಂಬಿಕ ಮತ್ತು ವೈಯುಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಸ್ಥಾನ-ಮಾನವನ್ನು ಒದಗಿಸುವ ಭರವಸೆ ನೀಡಿರುವುದನ್ನು ಉಲ್ಲೇಖಿಸಿದರು. ಜೊತೆಗೆ ಇತರ ಯೂರೋಪಿನ ಕೆಲ ದೇಶಗಳಲ್ಲಿ ಇದೇ ರೀತಿಯ ಸಂವಿಧಾನಾತ್ಮಕ ಕಾನೂನುಗಳಿರುವುದನ್ನು ಸಹ ವಿವರಿಸಿದರು. ಆದಾಗ್ಯೂ ಅವರು ಅಂತಹ ವಿಧಿಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿರದೇ ಚಿಕ್ಕದಾದ ಗುಂಪು, ವರ್ಗ ಅಥವಾ ಸಮುದಾಯಕ್ಕೆ ನೀಡಿರುವ ಕಾರಣ ಅವುಗಳ ವ್ಯಾಪ್ತಿಯು ಸೀಮಿತವಾಗಿದೆ ಎಂದರು.

      ಮಹಮಬೂಬ್‌ ಅಲಿ ಬೇಗ್‌ ಅವರು ವಿಧಿ 35ರಲ್ಲಿ ಹೇಳಿರುವ ನಾಗರೀಕ ಸಂಹಿತೆಯು ಕೌಟುಂಬಿಕ ಕಾನೂನು ಮತ್ತು ಸಂಪ್ರದಾಯಗಳನ್ನು ಒಳಗೊಂಡಿರುವುದಿಲ್ಲ ಮತ್ತು ಅದರ ಬಗ್ಗೆ  ಸಭೆಯ ಕೆಲವರಿಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ವೈಯುಕ್ತಿಕ ಕಾನೂನುಗಳ ವ್ಯಾಪ್ತಿಗೊಳಪಟ್ಟ ವಿಷಯಗಳನ್ನು ಹೊರತುಪಡಿಸಿ ಈ ವಿಧಿಗೆ ತಿದ್ದುಪಡಿಯೊಂದನ್ನು ಮಾಡುವ ಮೂಲಕ ಆಸ್ತಿಯ ಹಕ್ಕು, ಒಪ್ಪಂದ ಮತ್ತು ಇನ್ನಿತರ ವಿಷಯಗಳ ಮೇಲಿನ ಸ್ಪಷ್ಟನೆ ಮೂಡುವಂತೆ ಮಾಡಬೇಕು ಎಂದರು.

      M.A. ಅಯ್ಯಂಗಾರ್‌ ಅವರು ಮಧ್ಯೆ ಪ್ರವೇಶಿಸಿ ಅದು ಪರಸ್ಪರರ ನಡುವಿನ ಒಪ್ಪಿಗೆಯ ವಿಷಯವಾಗಿದೆ ಎಂದರು. ಅಲ್ಲದೇ ವೈವಾಹಿಕ ಒಪ್ಪಂದವು ಪವಿತ್ರ ಖುರಾನಿನ ಆಧಾರದಲ್ಲಿ ಮತ್ತು ಪ್ರವಾದಿಯವರ ಆಚರಣೆಗಳನ್ನು ಅವಲಂಬಿಸಿದೆ ಎಂದರಲ್ಲದೇ ಭಾರತದಲ್ಲಿನ ಜಾತ್ಯಾತೀತತೆಯು ಎಲ್ಲಾ ಧರ್ಮಗಳ ಅಸ್ಥಿತ್ವವನ್ನು ಸಮಾನ ಗೌರವ ಮತ್ತು ಘನತೆಯೊಂದಿಗೆ  ತಾಳ್ಮೆಯಿಂದ ಉಳಿಸಿಕೊಂಡಿದೆ. ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ವಿಭಿನ್ನ ಸಮುದಾಯಗಳು ತಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸಲು ಸ್ವಾತಂತ್ರ್ಯವಿರಬೇಕು ಹಾಗೂ ಅವರ ವೈಯುಕ್ತಿಕ ಕಾನೂನುಗಳನ್ನು      ಅನುಸರಿಸಲು ಅವಕಾಶ ನೀಡಬೇಕು ಎಂದರು. ಜೊತೆಗೆ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳೆರಡೂ ವೈಯುಕ್ತಿಕ ಕಾನೂನುಗಳ ವಿಷಯದಲ್ಲಿ ಸಂವಿಧಾನ ರಚನಾ ಸಮಿತಿಯ ಹಸ್ತಕ್ಷೇಪದ ಅಧಿಕಾರವನ್ನು ಪ್ರಶ್ನಿಸಿದವು. ಆದ್ದರಿಂದ ವಿದಿ 35 ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಆದರೆ ಮತ್ತೊಂದೆಡೆ ಹಿಂದೂ ಸಮುದಾಯದ ಅನೇಕ ಸದಸ್ಯರು ಮುಸ್ಲಿಂ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

      K.M. ಮುನ್ಷಿಯವರು ವಿಧಿ 35ರ ಹೊರತಾಗಿಯೂ ಈ ಸಭೆಯು ಏಕರೂಪದ ನಾಗರೀಕ ಸಂಹಿತೆಯನ್ನು ಜಾರಿಗೊಳಿಸುವುದು  ಕಾನೂನಾತ್ಮಕವಾಗಿದೆ.  ಏಕೆಂದರೆ ಸದರಿ ವಿಧಿಯು ಅದಾಗಲೇ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದು, ಧಾರ್ಮಿಕ ವಿಷಯಗಳಿಗೆ ಸಂಬಂದಿಸಿದಂತೆ ರಾಜ್ಯ/ಸರ್ಕಾರಕ್ಕೆ ಅಧಿಕಾರವನ್ನು ನೀಡಿದೆ. ಟರ್ಕಿ ಮತ್ತು ಈಜಿಪ್ಟ್‌ನಂತಹ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ  ಅಲ್ಪಸಂಖ್ಯಾತರ ವೈಯುಕ್ತಿಕ ಕಾನೂನುಗಳು ಸಂರಕ್ಷಿಸಲ್ಪಟ್ಟಿಲ್ಲ. ಅಲ್ಲದೇ ಮುಸ್ಲಿಂರಲ್ಲಿಯೇ ಕೆಲವು ಪಂಗಡಗಳು ಅಂದರೆ ಖೋಜಾಗಳು ಮತ್ತು ಮೆಮೂನ್‌ಗಳು ಶರ್ಯಾತ್‌ ಕಾನೂನುಗಳನ್ನು ಪಾಲಿಸುವುದಿಲ್ಲ; ಆದರೂ 1937ರ ಶರ್ಯಾತ್‌ ಕಾನೂನಿನಡಿ ಅವರು ಶರ್ಯಾತ್‌ ಕಾನೂನುಗಳನ್ನು ಪಾಲಿಸುವಂತೆ ಮಾಡಲಾಗಿದೆ ಎಂದರು. ಯೂರೋಪ್‌ ರಾಷ್ಟ್ರಗಳು ಅಲ್ಪಸಂಖ್ಯಾತರಿಗೂ ಅನ್ವಯವಾಗುವ ಏಕರೂಪದ ಕಾನೂನುಗಳನ್ನು ಹೊಂದಿದ್ದವು. ಧರ್ಮವು ವೈಯುಕ್ತಿಕ ಕಾನೂನುಗಳಿಂದ ಪ್ರತ್ಯೇಕವಾಗಿರಬೇಕು. ಏಕೆಂದರೆ ಹಿಂದೂ ಕೋಡ್‌ ಬಿಲ್‌ನಲ್ಲಿನ ನಿಯಮಗಳು ಮನು ಅಥವಾ ಯಾಜ್ಞವಲ್ಕ್ಯನ ತತ್ವಗಳನ್ನು ಅನುಸರಿಸಿರಲಿಲ್ಲ. ಒಟ್ಟಿನಲ್ಲಿ ವೈಯುಕ್ತಿಕ ಕಾನೂನು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಲಿಂಗಾಧಾರಿತವಾಗಿ ತಾರತಮ್ಯದಿಂದ ಕೂಡಿರುವುದರಿಂದ ಸಂವಿಧಾನದಲ್ಲಿ ಅದಕ್ಕೆ ಅವಕಾಶ ನೀಡಲಾಗದು ಎಂದರು.  A.K. ಅಯ್ಯರ್‌ ಅವರು ಮುನ್ಷಿಯವರ ಮೇಲಿನ ಅಭಿಪ್ರಾಯವನ್ನು ಬೆಂಬಲಿಸುತ್ತಾ ಏಕರೂಪ ನಾಗರೀಕ ಸಂಹಿತೆಗೆ ಸಂಬಂಧಿಸಿದ ವಿಧಿಯನ್ನು ಅನುಮೋದಿಸುವಂತೆ ಒತ್ತಾಯಿಸಿದರು.

      ಆದರೆ ಡಾ ಅಂಬೇಡ್ಕರರು ಪ್ರಸ್ತಾಪಿತ ತಿದ್ದುಪಡಿಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು ವಿವಿಧ ಸಮುದಾಯಗಳ ವೈಯುಕ್ತಿಕ ಕಾನೂನುಗಳಲ್ಲಿನ  ರಾಜ್ಯ/ಸರ್ಕಾರದ ಹಸ್ತಕ್ಷೇಪದ ಅಧಿಕಾರವನ್ನು ಎತ್ತಿಹಿಡಿದರು. ಅವರು ವಿವಿಧ ಸಮುದಾಯಗಳ ಕಾನೂನುಗಳನ್ನು ಮತ್ತು ಸಂವಿಧಾನ ಸಭೆಯ ಹಿಂದೂ ಸದಸ್ಯರ ವಾದಗಳನ್ನು ಬೆಂಬಲಿಸಿದರು. ಅಲ್ಲದೇ ಅವರು ಮುಸ್ಲಿಂ ಸದಸ್ಯರಿಗೆ ಭರವಸೆಯನ್ನು ನೀಡುತ್ತಾ, ಸದರಿ ವಿದಿಯು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆಯೇ ಹೊರತು ಅದನ್ನು ಪಾಲಿಸುವ ಅನಿವಾರ್ಯತೆಯನ್ನಲ್ಲ. ಜೊತೆಗೆ ಅವರು ಮುಸ್ಲಿಂ ಸದಸ್ಯರನ್ನು ಮನವೊಲಿಸುತ್ತಾ ವಿಧಿ 44ನ್ನು ಗಂಭೀರವಾಗಿ ಪರಿಗಣಿಸದಿರಲು ತಿಳಿಸಿದರು. ಒಂದು ವೇಳೆ ಏಕರೂಪದ ನಾಗರೀಕ ಸಂಹಿತೆಯು ಅನುಷ್ಠಾನಗೊಂಡರೂ ಯಾರು ಅದನ್ನು ಒಪ್ಪಿಕೊಳ್ಳುತ್ತಾರೆಯೋ ಅವರಿಗೆ ಅನ್ವಯವಾಗುತ್ತದೆ ಎಂದು ಹೇಳಿದರು.

ಉಪಸಂಹಾರ: ಭಾರತದ ಸಂವಿಧಾನವು ಸಂಸತ್ತಿಗೆ ಏಕರೂಪದ ನಾಗರೀಕ ಸಂಹಿತೆಯನ್ನು ಜಾರಿಗೊಳಿಸಲು ಅಧಿಕಾರವನ್ನು ನೀಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದೂ ಕೋಡ್‌ ಬಿಲ್‌ನ ಜಾರಿಯ ನಂತರ ಮುಸ್ಲಿಂ ವೈಯುಕ್ತಿಕ ಕಾನೂನುಗಳಿಗೆ ಸುಧಾರಣೆ ಮಾಡಲು ಮತ್ತು ಏಕರೂಪದ ನಾಗರೀಕ ಸಂಹಿತೆಯನ್ನು ಜಾರಿಗೊಳಿಸಲು ಬೇಡಿಕೆಗಳು ಹೆಚ್ಚಿದವು. ಏಕೆಂದರೆ ಸಂವಿಧಾನಾತ್ಮಕವಾಗಿ ವೈಯುಕ್ತಿಕ ಕಾನೂನು ಸೇರಿದಂತೆ ಎಲ್ಲಾ ವಿಧಿಗಳನ್ನೂ ಬದಲಾವಣೆಗೆ ಅಥವಾ ತಿದ್ದುಪಡಿಗೆ ಒಳಪಡಿಸಬಹುದು. ನೈಜವಾಗಿ ಹೇಳುವುದಾದರೆ, ವೈಯುಕ್ತಿಕ ಕಾನೂನು ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತವೆ.

5. ಸುಗ್ರಿವಾಜ್ಞೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರದ ಮೇಲಿನ ಚರ್ಚೆ

Debate on Ordinance Making Power of the President

      ರಾಷ್ಟ್ರಪತಿಗಳ ಸುಗ್ರಿವಾಜ್ಞೆ ಹೊರಡಿಸುವ ಕರಡು ಸಂವಿಧಾನದ ವಿದಿ 102ರ ಮೇಲಿನ ಚರ್ಚೆಯು ಮೆ 23, 1949ರಂದು ನಡೆಯಿತು. ಪ್ರಸ್ತುತ ನಮ್ಮ ಸಂವಿಧಾನದ 123ನೆ ವಿಧಿಯು ಈ ಅವಕಾಶವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ. ಅದರ ಪ್ರಕಾರ ರಾಷ್ಟ್ರಪತಿಗಳು ಸಂಸತ್ತು ಅಧಿವೇಶನದಲ್ಲಿ ಇಲ್ಲದಿದ್ದಾಗ ಸುಗ್ರಿವಾಜ್ಞೆಗಳನ್ನು  ಹೊರಡಿಸಬಹುದು.

ವಿಧಿ 102, ಕರಡು ಸಂವಿಧಾನ, 1948

(1) ಯಾವುದೇ ಸಮಯದಲ್ಲಿ, ಆದರೆ ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇಲ್ಲದಿದ್ದಾಗ, ಸುಗ್ರಿವಾಜ್ಞೆಯನ್ನು ಹೊರಡಿಸುವ  ಸನ್ನಿವೇಶವು ಉಂಟಾಗಿದ್ದು ಮತ್ತು ರಾಷ್ಟ್ರಪತಿಗಳಿಗೆ  ಅದು ಮನವರಿಕೆಯಾಗಿದ್ದಲ್ಲಿ ಮತ್ತು ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವಿದ್ದಾಗ ಸುಗ್ರಿವಾಜ್ಞೆಗಳನ್ನು ಹೊರಡಿಸಬಹುದು.

      ಮೇಲಿನ ಪ್ರಸ್ತಾಪಿತ ವಿಧಿಗೆ ಸದಸ್ಯರೊಬ್ಬರು ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇರದಿದ್ದಾಗ ಸುಗ್ರಿವಾಜ್ಞೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಯೊಂದನ್ನು ಸೂಚಿಸಿದರು. ಏಕೆಂದರೆ ಸುಗ್ರಿವಾಜ್ಞೆ ಹೊರಡಿಸುವ ಅವಕಾಶ ನೀಡುವ ವಿಧಿಯು ಅಧಿಕ ವೆಚ್ಚದಾಯಕವಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

      ಡಾ. ಅಂಬೇಡ್ಕರ್ ಅವರು ಇದಕ್ಕೆ ಪ್ರತ್ಯುತ್ತರವಾಗಿ ಶಾಸನವೊಂದರ ಜಾರಿಗೆ ಎರಡೂ ಸದನಗಳ ಅನುಮೋದನೆಯು ಅಗತ್ಯವಾಗಿರುವುದರಿಂದ ಸದರಿ ಅಧಿಕಾರವು ನಿರುಪಯುಕ್ತವಾಗುತ್ತದೆ. ಆದ್ದರಿಂದ ಒಂದು ಸದನವು ಅಧಿವೇಶನದಲ್ಲಿದ್ದಾಗ ರಾಷ್ಟ್ರಪತಿಗಳು ಸುಗ್ರಿವಾಜ್ಞೆಯನ್ನು ಹೊರಡಿಸುವ ಅಧಿಕಾರವನ್ನು ಹೊಂದಿರಬೇಕು ಎಂದರು.

      ಇದೇ ತಿದ್ದುಪಡಿಯಲ್ಲಿ “ಎರಡೂ ಸದನಗಳು” ಎಂಬುದಕ್ಕೆ ಬದಲಾಗಿ “ಒಂದು ಅಥವಾ ಎರಡೂ ಸದನಗಳು” ಮತ್ತು “ಸುಗ್ರಿವಾಜ್ಞೆಗಳು” ಎಂಬ ಪದಕ್ಕೆ ಬದಲಾಗಿ “ಸುಗ್ರಿವಾಜ್ಞೆ ಅಥವಾ ಸುಗ್ರಿವಾಜ್ಞೆಗಳು” ಎಂಬ ಪದಗಳನ್ನು ಸೂಚಿಸಲಾಯಿತು. ಆದರೆ ಸದರಿ ತಿದ್ದುಪಡಿಯು ತಿರಸ್ಕೃತವಾಯಿತು.

      ಮತ್ತೋರ್ವ ಸದಸ್ಯರು ಈ ವಿಧಿಗೆ, ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದ ಸಂದರ್ಭವನ್ನು ಹೊರತುಪಡಿಸಿ, ಪ್ರಜೆಗಳ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡಬಾರದೆಂಬ ಉಪವಿಧಿಯನ್ನು ಸೇರಿಸುವಂತೆ ಸೂಚಿಸಿದರು.

      ಇದಕ್ಕೆ ಪ್ರತ್ಯುತ್ತರವಾಗಿ ಡಾ. ಅಂಬೇಡ್ಕರ್ ಅವರು ಸದರಿ ವಿದಿಯಲ್ಲಿನ ಉಪವಿಧಿ 3 ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಸುಗ್ರಿವಾಜ್ಞೆಗಳಿಂದ ರಕ್ಷಣೆ ಒದಗಿಸುವುದರಿಂದ ಈ ತಿದ್ದುಪಡಿಯು ಅನವಶ್ಯಕ ಎಂಬ ವಿವರಣೆ ನೀಡಿದರು. ಪರಿಣಾಮವಾಗಿ ಈ ತಿದ್ದುಪಡಿಯ ಸಲಹೆಯನ್ನು ತಿರಸ್ಕರಿಸಲಾಯಿತು.

 (2) ಈ ವಿಧಿಯ ಪ್ರಕಾರ ಜಾರಿಗೊಂಡ ಸುಗ್ರಿವಾಜ್ಞೆಗಳನ್ನು ಸಂಸತ್ತಿನ ಅನುಮೋದನೆಗಾಗಿ ಅದರ ಅಧಿವೇಶನ ಆರಂಭವಾದ      6 ವಾರ ಇಲ್ಲವೇ 4 ವಾರಗಳಒಳಗಾಗಿ ಸಂಸತ್ತಿನಲ್ಲಿ ಮಂಡಿಸಿ ಅದರ ಅನುಮೋದನೆ ಪಡೆಯುವ ಕಾಲಮಿತಿಯನ್ನು ನಿಗದಿಗೊಳಿಸುವ ಬಗ್ಗೆ ಮತ್ತು  ಸುಗ್ರಿವಾಜ್ಞೆ ಜಾರಿಗೊಂಡ 1 ತಿಂಗಳ ಕಾಲಾವಧಿಯ ನಂತರ ಅದು ರದ್ದಾಗುವ ತಿದ್ದುಪಡಿಗಳನ್ನು ಸೂಚಿಸಲಾಯಿತು.

      ಮೇಲಿನ ತಿದ್ದುಪಡಿಗಳಿಗೆ ಡಾ. ಅಂಬೇಡ್ಕರ್ ಅವರು ʼಸೂಚಿತ ತಿದ್ದುಪಡಿಗಳು ಸಂಸತ್ತು ಅಧಿವೇಶನದಲ್ಲಿಲ್ಲದಿದ್ದಾಗ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಧಿವೇಶನ ಸೇರಲು ಸಾಧ್ಯವಾಗದಿದ್ದಾಗ ಸುಗ್ರಿವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವ ಕುರಿತು ಏನನ್ನೂ ವಿವರಿಸಿಲ್ಲ. ಅಲ್ಲದೇ ಸುಗ್ರಿವಾಜ್ಞೆ ಹೊರಡಿಸುವ ಅಧಿಕಾರವು ತುರ್ತು ಸಂದರ್ಭದಲ್ಲಿನ ಅಧಿಕಾರವಾಗಿದ್ದು, ಅದು ಸೀಮಿತ ವ್ಯಾಪ್ತಿಯನ್ನು ಹೊಂದಿದೆ ಮತ್ತು ಅದರ ದುರುಪಯೋಗವನ್ನು ತಡೆಯಲು ಕರಡು ವಿಧಿಯಲ್ಲಿ ಸೂಕ್ತ ನಿರ್ಬಂಧಗಳಿವೆ ಎಂದು ವಿವರಣೆ ನೀಡಿದರು.

ಉಪಸಂಹಾರ: ನಮ್ಮ ಸಂವಿಧಾನದ ರಚನಾಕಾರರು ರಾಷ್ಟ್ರಪತಿಗಳಿಗೆ ಸಂಸತ್ತು ಅಧಿವೇಶನದಲ್ಲಿ ಇರದಿದ್ದಾಗ ಸುಗ್ರಿವಾಜ್ಞೆಗಳನ್ನು ಹೊರಡಿಸುವ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಅವರು ಈ ಅಧಿಕಾರವನ್ನು ಕೇವಲ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರವೇ ಬಳಸಬಹುದು. ಅವರ ಈ ಅಧಿಕಾರವು ಸಾಮಾನ್ಯ ಸನ್ನಿವೇಶದಲ್ಲಿ ಸಂಸತ್ತು ಕಾನೂನು ರೂಪಿಸುವ ವಿಧಾನದಂತೆಯೇ ಇರುತ್ತದೆ. ಗಮನಾರ್ಹವಾದ ವಿಷಯವೆಂದರೆ, ಶಾಸಕಾಂಗವು ಹೊರಡಿಸುವ ಯಾವುದೇ ಕಾನೂನು ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವಂತಿಲ್ಲ ಮತ್ತು ಈ ನಿರ್ಬಂಧವು ಸುಗ್ರಿವಾಜ್ಞೆಗಳಿಗೂ ಸಹ ಅನ್ವಯವಾಗುತ್ತದೆ.

6. ಮರಣದಂಡನೆಯ ಮೇಲಿನ ಚರ್ಚೆ - Debate on Abolition of Death Penalty

      ಸಂವಿಧಾನ ರಚನಾ ಸಭೆಯು 1947-49 ನಡುವೆ ಮರಣ ದಂಡನೆಯ ಮೇಲಿನ ಚರ್ಚೆಯನ್ನು ಕೈಗೊಂಡಿತ್ತು. ಚರ್ಚೆಯು ಮರಣ ದಂಡನೆಯ ನ್ಯಾಯಾಧೀಶ ಕೇಂದ್ರಿತ ಸ್ವಭಾವ, ಅದನ್ನು ಬಳಸುವಲ್ಲಿ ಉಂಟಾಗಬಹುದಾದ ಸಂಭವನೀಯ ಅನಿಶ್ಚಿತತೆ, ಬಡವರು ಮತ್ತು ತುಳಿತಕ್ಕೊಳಗಾದ ವರ್ಗಗಳ ವಿರುದ್ಧ ಅದನ್ನು ಬಳಸುವಲ್ಲಿ ತಾರತಮ್ಯದ ಪ್ರಭಾವ ಮತ್ತು ಅಂತಿಮ ತೀರ್ಪಿನಲ್ಲಿ ದೋಷದ ಸಾಧ್ಯತೆಯ ಕುರಿತು ನಡೆಯಿತು.

      Z.H. ಲಾರಿ ಅವರು ಪ್ರಸ್ತಾಪಿತ ವಿಧಿಗೆ ಉಪವಿಧಿ 11(B) ಸೇರಿಸುವಂತೆಯು, ಅದರಲ್ಲಿ ಹಿಂಸಾತ್ಮಕ ರಾಷ್ಟ್ರದ್ರೋಹದ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಪ್ರಕರಣಗಳಲ್ಲಿ ಮರಣದಂಡನೆಯ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸೂಚಿಸಿದರು. ಏಕೆಂದರೆ ಜಗತ್ತಿನ ಸುಮಾರು 30 ದೇಶಗಳಲ್ಲಿ ಮರಣದಂಡನೆಯು ರದ್ದಾಗಿದ್ದು, ಅಲ್ಲಿನ ಸಮಾಜ ಮತ್ತು ವ್ಯಕ್ತಿಗಳು ಈ ಶಿಕ್ಷೆ ಇಲ್ಲದೆಯೂ ರಕ್ಷಿಸಲ್ಪಡುತ್ತಿವೆ. ಅಲ್ಲದೇ ಸದರಿ ಶಿಕ್ಷೆಯು ಜಾರಿಗೊಂಡ ನಂತರ ನ್ಯಾಯಾಲಯಕ್ಕೆ ಅಪರಾಧಿಯು ತಪ್ಪು ಮಾಡಿರಲಿಲ್ಲವೆಂಬ ಸತ್ಯ ಮನವರಿಕೆಯಾದರೂ ಸಹ  ಶಿಕ್ಷಿತನು  ಜೀವಂತವಾಗಿರುವುದಿಲ್ಲವಾದ್ದರಿಂದ ನ್ಯಾಯಾಲಯವು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮಾನವ ಜನ್ಮವು ಅಮೂಲ್ಯವಾಗಿದ್ದು, ಅವನು ಸಮಾಜ ಮತ್ತು ಇತರರ ಜೀವಗಳಿಗೆ ಅಪಾಯಕಾರಿಯಾಗಿದ್ದಲ್ಲಿ ಮಾತ್ರವೇ ಒಬ್ಬ ವ್ಯಕ್ತಿಯ ಜೀವವನ್ನು ಕಾನೂನಾತ್ಮಕ ಶಿಕ್ಷೆಯ ಮೂಲಕ ತೆಗೆಯಬಹುದು. ಮುಂದುವರಿದು ಅವರು ಮರಣದಂಡನೆಯು ಕ್ರೂರವಾದ ಶಿಕ್ಷೆಯಾಗಿದ್ದು, ಕ್ರೂರತೆಯು ಇಂದಿನ ಶತಮಾನದಲ್ಲಿ ಯಶಸ್ವಿ ಅಥವಾ ಸೂಕ್ದವಾದ ಅಂಶವಲ್ಲ ಎಂದರು. ಜೊತೆಗೆ ಅವರು “ಮರಣದಂಡನೆಯು ಕೊಲ್ಲುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವವರಿಗೆ ಉತ್ತೇಜನವೀಯುತ್ತದೆ; ಏಕೆಂದರೆ ಕೊಂದು ಮರಣದಂಡನೆಗೊಳಗಾಗುವುದು ಹುತಾತ್ಮರಾಗುವುದಕ್ಕೆ ಸಮವೆಂದು ಅವರು ಭಾವಿಸುತ್ತಾರೆ” ಎಂಬ ಡಿಕನ್ಸ್‌ ಅವರ ಹೇಳಿಕೆಯನ್ನು ವಿವರಿಸಿದರು. ಆದ್ದರಿಂದ ವೃತ್ತಿಪರ ಕೊಲೆಗಾರರಿಗೆ ಮರಣದಂಡನೆಯು ಸೂಕ್ತವಾದರೂ ಆಕಸ್ಮಿಕವಾಗಿ ಕೊಲೆಯಂತಹ ಅಪರಾಧ ಮಾಡುವವರಿಗೆ ಮರಣದಂಡನೆಗಿಂತ ಜೀವಾವಧಿ ಶಿಕ್ಷೆಯು ಸೂಕ್ತವೆನಿಸುತ್ತದೆ ಎನ್ನುತ್ತಾ ಮರಣದಂಡನೆಯ ವಿಧಿಗೆ ಮುಂದಿನ ಮೂರು ತಿದ್ದುಪಡಿಗಳನ್ನು ಸೂಚಿಸಿದರು:- ಮನುಷ್ಯರಿಂದ ಆಗುವ ತೀರ್ಪು, ಮಾನವ ಜೀವನದ ಅಮೂಲ್ಯತೆ ಮತ್ತು ಶಿಕ್ಷೆಯ ಉದ್ದೇಶ. ಅಲ್ಲದೇ ಅವರು ರಾಷ್ಟ್ರವು ಅಪಾಯಕ್ಕೊಳಗಾದಾಗ ಮತ್ತು ಬಹುಜನರ ಜೀವಕ್ಕೆ ಆಪತ್ತು ಉಂಟಾದಾಗ ಈ ಶಿಕ್ಷೆಯನ್ನು ಉಪಯೋಗಿಸುವಂತೆ ಸೂಚಿಸಿದರು ಮತ್ತು ಸಂಸತ್ತು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಶಿಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಲು ಅವಕಾಶವಿರಬೇಕೆಂದರು.

      ತದನಂತರ ಶ್ರೀ ಅಮಿಯೊಕುಮಾರ್‌ ಘೋಷ್‌ ಅವರು ಸದರಿ ಶಿಕ್ಷೆಯು ಅಮಾನವೀಯವಾಗಿದ್ದು, ತೀರ್ಪು ನೀಡುವವರು ಈ ಶಿಕ್ಷೆಯನ್ನು ವಿಧಿಸುವಾಗ ತಪ್ಪೆಸಗುವ ಸಾಧ್ಯತೆಗಳಿರುತ್ತವೆ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. ಸಮಾಜದಲ್ಲಿ ಶಿಷ್ಟ ಮತ್ತು ದುಷ್ಟರಿಬ್ಬರೂ ಇದ್ದು, ಸಮಾಜದಲ್ಲಿ ಭಯವನ್ನುಂಟು ಮಾಡುವವರನ್ನು  ತಡೆಗಟ್ಟಲು ಸರ್ಕಾರಗಳಿಗೆ ಅಥವಾ ರಾಜ್ಯಕ್ಕೆ ಮರಣದಂಡನೆಯಂತಹ ಶಿಕ್ಷೆಗಳ ಅವಶ್ಯಕತೆ ಇರುತ್ತದೆ. ಪ್ರಸ್ತುತ ಭಾರತವು ಸಂಕ್ರಮಣ ಕಾಲದಲ್ಲಿದ್ದು, ಗಂಭೀರ ಸ್ವರೂಪದ ಸಮಸ್ಯೆಗಳು ರಾಜ್ಯ ಮತ್ತು ಸಮಾಜ ಎರಡಕ್ಕೂ ಸವಾಲಾಗಿ ಪರಿಣಮಿಸಿದಾಗ ಅವುಗಳಿಗೆ ತಕ್ಕುದಾದ ಶಿಕ್ಷೆಯನ್ನು ವಿಧಿಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಮರಣದಂಡನೆಯ ಶಿಕ್ಷೆಯನ್ನು ಸಂವಿಧಾನದಲ್ಲಿ ಅಳವಡಿಸುವ ಬದಲು ಅದಕ್ಕಾಗಿ ಇರುವ ಕಾನೂನುಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದು ಎಂದರು.

      ಶ್ರೀ ಕೆ. ಹನುಮಂತಯ್ಯನವರು ಮರಣದಂಡನೆಗೆ ಬದಲಾಗಿ ಜೀವಾವಧಿ ಶಿಕ್ಷೆಯನ್ನು ಅಪರಾಧಿಗೆ ವಿಧಿಸಬಹುದು. ಆದರೂ ರಾಷ್ಟ್ರದ ಹಿತದೃಷ್ಟಿಯಿಂದ ಅಪರಾಧವೆಸಗುವವರಿಗೆ ಭಯದ ವಾತಾವರಣವಿರುವುದುಉ ಅವಶ್ಯಕವೆಂದರು. ಮುಂದುವರಿದು ಶಿಕ್ಷೆಯಲ್ಲಿನ ಮಾರ್ಪಾಡು ಅದರ ಮೌಲ್ಯವನ್ನು ಕಡಿಮೆಗೊಳಿಸುತ್ತದೆ ಮತ್ತು ಆ ತೆರನಾದ ಶಿಕ್ಷೆಯ ಬದಲಾವಣೆಯಲ್ಲಿ ಅಪರಾಧಿಗೆ ರಿಯಾಯಿತಿಗಳನ್ನು ನೀಡುವ ಮೂಲಕ ಬೇಗನೇ ಬಿಡುಗಡೆ ಮಾಡಲಾಗುತ್ತದೆ. ಕಾರಣ ಯಾರನ್ನಾದರೂ ಕೊಲೆಗೈದರೆ, ತಾನು ಜೀವನವಿಡೀ ಶಿಕ್ಷೆಗೆ ಒಳಗಾಗುವೆನೆಂಬ ಭಯದಿಂದ ಅವರು ಕೊಲೆಯಂತಹ ದುಷ್ಕೃತ್ಯಗಳಿಂದ ದೂರ ಉಳಿಯುತ್ತಾರೆ. ಆದ್ದರಿಂದ ರಾಷ್ಟ್ರದ ಹಿತದೃಷ್ಟಿಯಿಂದ ಮರಣದಂಡನೆಯನ್ನು ರದ್ದುಗೊಳಿಸುವುದು ಸೂಕ್ತವಲ್ಲ ಎಂದರು.

      ಪರಿಣಾಮವಾಗಿ ಮರಣದಂಡನೆಯನ್ನು ರದ್ದುಗೊಳಿಸಲು ಸೂಚಿಸಿದ 11(B) ತಿದ್ದುಪಡಿಯನ್ನು ತಿರಸ್ಕರಿಸಲಾಯಿತು.

ಉಪಸಂಹಾರ:- ವಿಧಿ 11(ಬಿ)ಯ ಹಿಂದಿನ ಉದ್ದೇಶವು ಮರಣದಂಡನೆಯನ್ನು ಭಾಗಶಃ ರದ್ದುಗೊಳಿಸುವುದಾಗಿತ್ತು. ಆದರೆ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಮೂಲಕ ರಾಜ್ಯ/ಸರ್ಕಾರವನ್ನು ಅಸಹಾಯಕ ಸ್ಥಿತಿಗೆ ತರಬಾರದು ಎಂದು ಸಂವಿಧಾನ ರಚನಾಕಾರರು ಬಯಸಿದ್ದರು. ಮತ್ತೊಂದೆಡೆ ಶಿಕ್ಷೆಯಲ್ಲಿನ ಸುಧಾರಣೆಯು ಅಪರಾಧ ತಡೆಯುವ ಉದ್ದೇಶವನ್ನು ಪೂರೈಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ಅವರ ಪ್ರಕಾರ, ಅಪರಾಧವನ್ನೇ ತಡೆಗಟ್ಟುವುದು ಅಗತ್ಯವಾಗಿತ್ತು. ಅಲ್ಲದೇ ಒಂದು ಹಂತದವರೆಗೆ ಸಮಾಜದ ಅಭಿವೃದ್ಧಿಯಾದ ನಂತರ ಮರಣದಂಡನೆಯನ್ನು ತೆಗೆದುಹಾಕಬಹುದು ಎಂದು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದ್ದರಿಂದ ಬಹುತೇಕ ಸಂವಿಧಾನ ರಚನಾಕಾರರು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಕ್ಕೆ ವಿರುದ್ಧವಾಗಿದ್ದರು. ಕಾರಣ ಅನುಚ್ಛೇದ 11(ಬಿ) ತಿದ್ದುಪಡಿಯು ಅನುಷ್ಠಾನಗೊಳ್ಳಲಿಲ್ಲ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧