ಏಕರೂಪ ನಾಗರೀಕ ಸಂಹಿತೆಯ ಮೇಲಿನ ಚರ್ಚೆ - Debate on Uniform Civil Code

   ಸ್ವಾತಂತ್ರ್ಯಾನಂತರ ವೈಯುಕ್ತಿಕ ಕಾನೂನಿನ ಪ್ರಶ್ನೆಯು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಯಿತು.  ಸುಮಾರು ಎರಡು ವರ್ಷಗಳ ಕಾಲ ಸಾಂವಿಧಾನಿಕ ಸಭೆಯಲ್ಲಿ ಪ್ರಗತಿಪರ ಸದಸ್ಯರ ಮಾತುಗಳು, ಸಂಪ್ರದಾಯವಾದಿ ಸದಸ್ಯರೆಂದು ಕರೆಯಲ್ಪಡುವವರ ಭಿನ್ನಾಭಿಪ್ರಾಯದ ಧ್ವನಿಗಳು, ಅಲ್ಪಸಂಖ್ಯಾತ ಸಮುದಾಯಗಳ ವ್ಯಕ್ತಪಡಿಸಿದ ಆತಂಕಗಳು ಮತ್ತು ಹೊರಗಿನ ಕಾನೂನು ತಜ್ಞರು ಮತ್ತು ಸಾಮಾನ್ಯರಿಂದ ಉಂಟಾದ ಒತ್ತಡಗಳಿಂದ ವಿಷಯವು ಹೆಚ್ಚು ಚರ್ಚೆಗೆ ಕಾರಣವಾಯಿತು.   ಈ ನಿಟ್ಟಿನಲ್ಲಿ  ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿನ ಚರ್ಚೆಗಳು ಸಂವಿಧಾನ ರಚನಾಕಾರರು ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆ, ಪ್ರಸ್ತುತತೆ ಮತ್ತು ಉಪಯುಕ್ತತೆಯನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ ಎಂದು ತಿಳಿಸುತ್ತವೆ.

   ಸಂವಿಧಾನ ರಚನಾ ಸಭೆಯಲ್ಲಿದ್ದ ಮುಸ್ಲಿಂ ಸದಸ್ಯರು ವೈಯುಕ್ತಿಕ ಕಾನೂನುಗಳ ಮೇಲಿನ ಪ್ಪ್ರಸ್ತಾವನೆಯನ್ನು ಒಟ್ಟಾಗಿ ಪ್ರತಿಭಟಿಸಿದರು. ಸದರಿ ಚರ್ಚೆಯು ಸಂವಿಧಾನದ ವಿಧಿ 35ರ ಅಡಿಯಲ್ಲಿ ನಡೆಯಿತು. ಅಂದಿನಿಂದ ಇಂದಿನವರೆಗೂ ಈ ವಿಷಯದ ಮೇಲಿನ ಚರ್ಚೆಯು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಏಕೆಂದರೆ ಈ ಅಂಶವು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಅದರ ಭಾಷಾ ವೈವಿಧ್ಯತೆಯ ಮೇಲೆ ಕೇಂದ್ರೀಕೃತವಾಗಿದೆ.

   ನಮ್ಮ ಸಂವಿಧಾನದ ರಚನಾಕಾರರು ದೇಶದ ಪ್ರಜೆಗಳೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಮೃದ್ಧಿಯನ್ನು ಒದಗಿಸುವ ಆಧಾರದ ಮೇಲೆ ನಮ್ಮ ದೇಶವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಉದ್ದೇಶಿಸಿದ್ದರು. ಮುಂದೆ 1976 ರಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆಗೆ ಜಾತ್ಯಾತೀತತೆ ಮತ್ತು ಸಮಾಜವಾದಿ ಎಂಬ ಪದಗಳನ್ನು ಸೇರಿಸಲಾಯಿತು. ಅದಕ್ಕೂ ಮೊದಲೇ 1950ರಲ್ಲಿಯೇ ನಮ್ಮ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಅಳವಡಿಸಲ್ಪಟ್ಟಿದ್ದವು; ಅದರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಹಾ ಸೇರಿತ್ತು. ಅಂದಿನಿಂದಲೂ ಸಂವಿಧಾನ ರಚನಾ ಸಭೆ ಮಾತ್ರವಲ್ಲ ಇನ್ನಿತರ ಸಾರ್ವಜನಿಕ ಸಭೆಗಳಲ್ಲಿ ವೈಯುಕ್ತಿಕ ಕಾನೂನುಗಳ ಮೇಲಿನ ಚರ್ಚೆಯು ಆಗಿಂದಾಗ್ಯೆ ನಡೆಯುತ್ತಲೇ ಇರುತ್ತದೆ. ಅಲ್ಲದೇ ನಮ್ಮ ಸಂವಿಧಾನ ಜಾರಿಗೊಳ್ಳುವುದಕ್ಕೂ ಮೊದಲೇ ಈ ವಿಷಯದ ಪರ ಮತ್ತು ವಿರೋಧದ ಚರ್ಚೆಗಳು ಬಹುವಾಗಿ ನಡೆದಿದ್ದವು.

 

   ಹೀಗೆ ನಡೆದ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಮದ್ರಾಸ್‌ ಪ್ರಾಂತ್ಯದ ಪ್ರತಿನಿಧಿಯಾಗಿದ್ದ ಮಹಮದ್‌ ಇಸ್ಮಾಯಿಲ್‌ ಅವರು ವಿಧಿ 33ಕ್ಕೆ ಕೆಳಕಂಡ ತಿದ್ದುಪಡಿಯನ್ನು ಸೂಚಿಸಿದರು:-

ಯಾವುದೇ ಗುಂಪು, ವರ್ಗ ಅಥವಾ ಸಮುದಾಯವು ತನ್ನದೇ ಆದ ವೈಯುಕ್ತಿಕ ಕಾನೂನುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ಕೈಬಿಡಲು ಒತ್ತಾಯಿಸತಕ್ಕದ್ದಲ್ಲ

ಅವರು ವ್ಯಕ್ತಿಯೊಬ್ಬನು ತನ್ನ ವೈಯುಕ್ತಿಕ ಕಾನೂನುಗಳಿಗೆ ಬದ್ಧನಾಗಿರುವುದು ಅವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಜೊತೆಗೆ ಅವರು ವೈಯುಕ್ತಿಕ ಕಾನೂನುಗಳು ವ್ಯಕ್ತಿಯೊಬ್ಬನ ಜೀವನಶೈಲಿಯ ಭಾಗವಾಗಿರುತ್ತವೆ ಎಂದರು. ಅವರ ಪ್ರಕಾರ ವೈಯುಕ್ತಿಕ ಕಾನೂನುಗಳು ಧರ್ಮ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುತ್ತವೆ. ಆದ್ದರಿಂದ ಅವುಗಳಲ್ಲಿನ ಹಸ್ತಕ್ಷೇಪವು ತಲ-ತಲಾಂತರದಿಂದ ಪಾಲಿಸಿಕೊಂಡು ಬಂದಿರುವ ಜೀವನಶೈಲಿಯಲ್ಲಿನ ಹಸ್ತಕ್ಷೇಪವಾಗುತ್ತದೆ ಎಂದರು. ಭಾರತವು ಒಂದು ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು. ತಮ್ಮ ಈ ವಾದವನ್ನು ಸಮರ್ಥಿಸಲು ಅವರು ಯುಗೋಸ್ಲಾವಿಯದ ಅಧ್ಯಕ್ಷರು ತಮ್ಮ ದೇಶದಲ್ಲಿ ಮುಸ್ಲೀಮರಿಗೆ ಅವರ ಕೌಟುಂಬಿಕ ಮತ್ತು ವೈಯುಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಸ್ಥಾನ-ಮಾನವನ್ನು ಒದಗಿಸುವ ಭರವಸೆ ನೀಡಿರುವುದನ್ನು ಉಲ್ಲೇಖಿಸಿದರು. ಜೊತೆಗೆ ಇತರ ಯೂರೋಪಿನ ಕೆಲ ದೇಶಗಳಲ್ಲಿ ಇದೇ ರೀತಿಯ ಸಂವಿಧಾನಾತ್ಮಕ ಕಾನೂನುಗಳಿರುವುದನ್ನು ಸಹ ವಿವರಿಸಿದರು. ಆದಾಗ್ಯೂ ಅವರು ಅಂತಹ ವಿಧಿಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿರದೇ ಚಿಕ್ಕದಾದ ಗುಂಪು, ವರ್ಗ ಅಥವಾ ಸಮುದಾಯಕ್ಕೆ ನೀಡಿರುವ ಕಾರಣ ಅವುಗಳ ವ್ಯಾಪ್ತಿಯು ಸೀಮಿತವಾಗಿದೆ ಎಂದರು.

 

   ಮಹಮಬೂಬ್‌ ಅಲಿ ಬೇಗ್‌ ಅವರು ವಿಧಿ 35ರಲ್ಲಿ ಹೇಳಿರುವ ನಾಗರೀಕ ಸಂಹಿತೆಯು ಕೌಟುಂಬಿಕ ಕಾನೂನು ಮತ್ತು ಸಂಪ್ರದಾಯಗಳನ್ನು ಒಳಗೊಂಡಿರುವುದಿಲ್ಲ ಮತ್ತು ಅದರ ಬಗ್ಗೆ  ಸಭೆಯ ಕೆಲವರಿಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ವೈಯುಕ್ತಿಕ ಕಾನೂನುಗಳ ವ್ಯಾಪ್ತಿಗೊಳಪಟ್ಟ ವಿಷಯಗಳನ್ನು ಹೊರತುಪಡಿಸಿ ಈ ವಿಧಿಗೆ ತಿದ್ದುಪಡಿಯೊಂದನ್ನು ಮಾಡುವ ಮೂಲಕ ಆಸ್ತಿಯ ಹಕ್ಕು, ಒಪ್ಪಂದ ಮತ್ತು ಇನ್ನಿತರ ವಿಷಯಗಳ ಮೇಲಿನ ಸ್ಪಷ್ಟನೆ ಮೂಡುವಂತೆ ಮಾಡಬೇಕು ಎಂದರು.

 

M.A. ಅಯ್ಯಂಗಾರ್‌ ಅವರು ಮಧ್ಯೆ ಪ್ರವೇಶಿಸಿ ಅದು ಪರಸ್ಪರರ ನಡುವಿನ ಒಪ್ಪಿಗೆಯ ವಿಷಯವಾಗಿದೆ ಎಂದರು. ಅಲ್ಲದೇ ವೈವಾಹಿಕ ಒಪ್ಪಂದವು ಪವಿತ್ರ ಖುರಾನಿನ ಆಧಾರದಲ್ಲಿ ಮತ್ತು ಪ್ರವಾದಿಯವರ ಆಚರಣೆಗಳನ್ನು ಅವಲಂಬಿಸಿದೆ ಎಂದರಲ್ಲದೇ ಭಾರತದಲ್ಲಿನ ಜಾತ್ಯಾತೀತತೆಯು ಎಲ್ಲಾ ಧರ್ಮಗಳ ಅಸ್ಥಿತ್ವವನ್ನು ಸಮಾನ ಗೌರವ ಮತ್ತು ಘನತೆಯೊಂದಿಗೆ  ತಾಳ್ಮೆಯಿಂದ ಉಳಿಸಿಕೊಂಡಿದೆ. ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ವಿಭಿನ್ನ ಸಮುದಾಯಗಳು ತಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸಲು ಸ್ವಾತಂತ್ರ್ಯವಿರಬೇಕು ಹಾಗೂ ಅವರ ವೈಯುಕ್ತಿಕ ಕಾನೂನುಗಳನ್ನು   ಅನುಸರಿಸಲು ಅವಕಾಶ ನೀಡಬೇಕು ಎಂದರು. ಅಲ್ಲದೇ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳೆರಡೂ ವೈಯುಕ್ತಿಕ ಕಾನೂನುಗಳ ವಿಷಯದಲ್ಲಿ ಸಂವಿಧಾನ ರಚನಾ ಸಮಿತಿಯ ಹಸ್ತಕ್ಷೇಪದ ಅಧಿಕಾರವನ್ನು ಪ್ರಶ್ನಿಸಿದವು. ಆದ್ದರಿಂದ ವಿದಿ 35 ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ.

 

ಆದರೆ ಮತ್ತೊಂದೆಡೆ ಹಿಂದೂ ಸಮುದಾಯದ ಅನೇಕ ಸದಸ್ಯರು ಮುಸ್ಲಿಂ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

K.M. ಮುನ್ಷಿಯವರು ವಿಧಿ 35ರ ಹೊರತಾಗಿಯೂ ಈ ಸಭೆಯು ಏಕರೂಪದ ನಾಗರೀಕ ಸಂಹಿತೆಯನ್ನು ಜಾರಿಗೊಳಿಸುವುದು  ಕಾನೂನಾತ್ಮಕವಾಗಿದೆ.  ಏಕೆಂದರೆ ಸದರಿ ವಿಧಿಯು ಅದಾಗಲೇ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದು, ಧಾರ್ಮಿಕ ವಿಷಯಗಳಿಗೆ ಸಂಬಂದಿಸಿದಂತೆ ರಾಜ್ಯ/ಸರ್ಕಾರಕ್ಕೆ ಅಧಿಕಾರವನ್ನು ನೀಡಿದೆ. ಟರ್ಕಿ ಮತ್ತು ಈಜಿಪ್ಟ್‌ನಂತಹ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ  ಅಲ್ಪಸಂಖ್ಯಾತರ ವೈಯುಕ್ತಿಕ ಕಾನೂನುಗಳು ಸಂರಕ್ಷಿಸಲ್ಪಟ್ಟಿಲ್ಲ. ಅಲ್ಲದೇ ಮುಸ್ಲಿಂರಲ್ಲಿಯೇ ಕೆಲವು ಪಂಗಡಗಳು ಅಂದರೆ ಖೊಜಾಗಳು ಮತ್ತು ಮೆಮೂನ್‌ಗಳು ಶರ್ಯಾತ್‌ ಕಾನೂನುಗಳನ್ನು ಪಾಲಿಸುವುದಿಲ್ಲ; ಆದರೂ 1937ರ ಶರ್ಯಾತ್‌ ಕಾನೂನಿನಡಿ ಅವರು ಶರ್ಯಾತ್‌ ಕಾನೂನುಗಳನ್ನು ಪಾಲಿಸುವಂತೆ ಮಾಡಲಾಗಿದೆ ಎಂದರು. ಯೂರೋಪ್‌ ರಾಷ್ಟ್ರಗಳು ಅಲ್ಪಸಂಖ್ಯಾತರಿಗೂ ಅನ್ವಯವಾಗುವ ಏಕರೂಪದ ಕಾನೂನುಗಳನ್ನು ಹೊಂದಿದ್ದವು. ಧರ್ಮವು ವೈಯುಕ್ತಿಕ ಕಾನೂನುಗಳಿಂದ ಪ್ರತ್ಯೇಕವಾಗಿರಬೇಕು. ಏಕೆಂದರೆ ಹಿಂದೂ ಕೋಡ್‌ ಬಿಲ್‌ನಲ್ಲಿನ ನಿಯಮಗಳು ಮನು ಅಥವಾ ಯಾಜ್ಞವಲ್ಕ್ಯನ ತತ್ವಗಳನ್ನು ಅನುಸರಿಸಿರಲಿಲ್ಲ. ಒಟ್ಟಿನಲ್ಲಿ ವೈಯುಕ್ತಿಕ ಕಾನೂನು ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಲಿಂಗಾಧಾರಿತವಾಗಿ ತಾರತಮ್ಯದಿಂದ ಕೂಡಿರುವುದರಿಂದ ಸಂವಿಧಾನದಲ್ಲಿ ಅದಕ್ಕೆ ಅವಕಾಶ ನೀಡಲಾಗದು

A.K. ಅಯ್ಯರ್‌ ಅವರು ಮುನ್ಷಿಯವರ ಮೇಲಿನ ಅಭಿಪ್ರಾಯವನ್ನು ಬೆಂಬಲಿಸುತ್ತಾ ಏಕರೂಪ ನಾಗರೀಕ ಸಂಹಿತೆಗೆ ಸಂಬಂಧಿಸಿದ ವಿಧಿಯನ್ನು ಅನುಮೋದಿಸುವಂತೆ ಒತ್ತಾಯಿಸಿದರು.

ಆದರೆ ಡಾ ಅಂಬೇಡ್ಕರರು ಪ್ರಸ್ತಾಪಿತ ತಿದ್ದುಪಡಿಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು ವಿವಿಧ ಸಮುದಾಯಗಳ ವೈಯುಕ್ತಿಕ ಕಾನೂನುಗಳಲ್ಲಿನ  ರಾಜ್ಯ/ಸರ್ಕಾರದ ಹಸ್ತಕ್ಷೇಪದ ಅಧಿಕಾರವನ್ನು ಎತ್ತಿಹಿಡಿದರು. ಅವರು ವಿವಿಧ ಸಮುದಾಯಗಳ ಕಾನೂನುಗಳನ್ನು ಮತ್ತು ಸಂವಿಧಾನ ಸಭೆಯ ಹಿಂದೂ ಸದಸ್ಯರ ವಾದಗಳನ್ನು ಬೆಂಬಲಿಸಿದರು. ಅಲ್ಲದೇ ಅವರು ಮುಸ್ಲಿಂ ಸದಸ್ಯರಿಗೆ ಭರವಸೆಯನ್ನು ನೀಡುತ್ತಾ, ಸದರಿ ವಿದಿಯು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆಯೇ ಹೊರತು ಅದನ್ನು ಪಾಲಿಸುವ ಅನಿವಾರ್ಯತೆಯನ್ನಲ್ಲ. ಜೊತೆಗೆ ಅವರು ಮುಸ್ಲಿಂ ಸದಸ್ಯರನ್ನು ಮನವೊಲಿಸುತ್ತಾ ವಿಧಿ 44ನ್ನು ಗಂಭೀರವಾಗಿ ಪರಿಗಣಿಸದಿರಲು ತಿಳಿಸಿದರು. ಒಂದು ವೇಳೆ ಏಕರೂಪದ ನಾಗರೀಕ ಸಂಹಿತೆಯು ಅನುಷ್ಠಾನಗೊಂಡರೂ ಯಾರು ಅದನ್ನು ಒಪ್ಪಿಕೊಳ್ಳುತ್ತಾರೆಯೋ ಅವರಿಗೆ ಅನ್ವಯವಾಗುತ್ತದೆ ಎಂದು ಹೇಳಿದರು.

 

ಉಪಸಂಹಾರ: ಭಾರತದ ಸಂವಿಧಾನವು ಸಂಸತ್ತಿಗೆ ಏಕರೂಪದ ನಾಗರೀಕ ಸಂಹಿತೆಯನ್ನು ಜಾರಿಗೊಳಿಸಲು ಅಧಿಕಾರವನ್ನು ನೀಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದೂ ಕೋಡ್‌ ಬಿಲ್‌ನ ಜಾರಿಯ ನಂತರ ಮುಸ್ಲಿಂ ವೈಯುಕ್ತಿಕ ಕಾನೂನುಗಳಿಗೆ ಸುಧಾರಣೆ ಮಾಡುವುದು ಮತ್ತು ಏಕರೂಪದ ನಾಗರೀಕ ಸಂಹಿತೆಯನ್ನು ಜಾರಿಗೊಳಿಸಲು ಬೇಡಿಕೆಗಳು ಹೆಚ್ಚಿದವು. ಸಂವಿಧಾನಾತ್ಮಕವಾಗಿ ವೈಯುಕ್ತಿಕ ಕಾನೂನು ಸೇರಿದಂತೆ ಎಲ್ಲಾ ವಿಧಿಗಳನ್ನೂ ಬದಲಾವಣೆಗೆ ಅಥವಾ ತಿದ್ದುಪಡಿಗೆ ಒಳಪಡಿಸಬಹುದು. ನೈಜವಾಗಿ ಹೇಳುವುದಾದರೆ, ವೈಯುಕ್ತಿಕ ಕಾನೂನು ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತವೆ. 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources