ಅಧ್ಯಾಯ 7. ನೆಹರೂರವರ ಆರ್ಥಿಕ ಸುಧಾರಣೆಗಳು [Nehru's Economic Reforms]

ಸೂಚನೆ: ಕೆಳಗಿನ ವಿವರಗಳನ್ನು ಶ್ರೀ ಟಿ.ಜಿ. ಚಂದ್ರಶೇಖರಪ್ಪನವರ ಆಧುನಿಕ ಭಾರತದ ಇತಿಹಾಸ ಎಂಬ ಪಠ್ಯಪುಸ್ತಕದಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ಕೇವಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.

 

      ನೆಹರು ಭಾರತದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡಿದ್ದರು. ಹಾಗಾಗಿ, ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಂಚವಾರ್ಷಿಕ ಯೋಜನೆಗಳ ಮೂಲಕ  ಕೈಗಾರಿಕೆಗಳು, ಕೃಷಿ ಮತ್ತು ನೀರಾವರಿಗೆ ಆದ್ಯತೆ ನೀಡಿದ್ದಲ್ಲದೇ ಗ್ರಾಮೀಣ ಋಣಭಾರ ನಿವಾರಣೆ,  ಸಹಕಾರಿ ಚಳುವಳಿಗೆ ಪ್ರೋತ್ಸಾಹ,  ಮಧ್ಯವರ್ತಿಗಳ ರದ್ಧತಿ,  ಸಮುದಾಯ ಅಭಿವೃದ್ಧಿ ಯೋಜನೆ,, ಭೂದಾನ ಮತ್ತು ಗ್ರಾಮದಾನ ಚಳುವಳಿಗಳಂತಹ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು.

 

ಪಂಚವಾರ್ಷಿಕ ಯೋಜನೆಗಳು [ Five Years Plans]

      ಭಾರತದ ಪ್ರಪ್ರಥಮ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡ ಪಂಡಿತ್ ಜವಹರಲಾಲ್ ನೆಹರೂರವರು ಭಾರತಕ್ಕಿತ್ತ ಪ್ರಮುಖ ಕೊಡುಗೆಗಳು ಎಂದರೆ, ಪ್ರಜಾಪ್ರಭುತ್ವ (Democracy), ಧರ್ಮಾತೀತ ಅಥವಾ ಲೌಕಿಕ ದೃಷ್ಟಿ (Secularism), ಯೋಜನೆ (Planning) ಮತ್ತು ಸಮಷ್ಟಿವಾದ (Socialism). ಯೋಜಿತ ಆರ್ಥಿಕತೆಗೆ ಸಂಬಂಧಿಸಿದಂತೆ ನೆಹರು ತೀವ್ರವಾಗಿ ಆಲೋಚಿಸಿದರು. ಅವರಿಗಿಂತ ಮೊದಲೇ ಅಂದರೆ, 1934ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು " Planned Economy for India" ಎಂಬ ಕೃತಿಯಲ್ಲಿ ಯೋಜನೆಯನ್ನು ಕುರಿತು ಶಿಫಾರಸು ಮಾಡಿದ್ದರು. ಅದೇ ರೀತಿ 1943ರಲ್ಲಿ M.N.ರಾಯ್‌ರವರಿಂದ ತಯಾರಿಸಿದ ಯೋಜನೆ 'ಜನತಾ ಯೋಜನೆ' (Peoples Plan) ಎಂದು ಕರೆಯಲ್ಪಟ್ಟಿದೆ.

     ನೆಹರೂರವರ ಯೋಜಿತ ಆರ್ಥಿಕತೆಗೆ ಸಂಬಂಧಿಸಿದ ಅಂಶಗಳನ್ನು ಅವರ ಭಾಷಣಗಳು, ಅವರ ಆತ್ಮಕಥನ (Autobiography), ಅವರೇ ರಚಿಸಿರುವ "The Discovery of India" ಮತ್ತು “ Glimpses of World History" ಹಾಗೂ ಇನ್ನೂ ಮುಂತಾದ ಕೃತಿಗಳಿಂದ ತಿಳಿದುಕೊಳ್ಳಬಹುದಾಗಿದೆ.

     ಭಾರತದಲ್ಲಿ ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ನೆಹರೂರವರಿಗೆ ಸಲ್ಲುತ್ತದೆ. ನೆಹರು ಪ್ರಜಾಪ್ರಭುತ್ವ ಯೋಜನೆಯಲ್ಲಿ ನಂಬಿಕೆಯನ್ನು ಇಟ್ಟಿದ್ದರು. ಅವರೇ ಹೇಳಿರುವಂತೆ: - ಆರ್ಥಿಕ ವ್ಯವಸ್ಥೆಯನ್ನು ಬಂಡವಾಳಶಾಹಿ ವ್ಯವಸ್ಥೆಯ ಅಧೀನದಲ್ಲಿ ಬಿಟ್ಟಲ್ಲಿ ಬಡವರು ಬಡವರಾಗುತ್ತಲೇ ಹೋಗುತ್ತಾರೆ ಮತ್ತು ಸೀಮಿತ ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುತ್ತಾರೆ. ಆದ್ದರಿಂದ ಆರ್ಥಿಕ ಪ್ರಗತಿಯಲ್ಲಿ ಯೋಜನೆ ಅತ್ಯವಶ್ಯಕ. ಈ ರೀತಿಯ ಯೋಜನೆಯನ್ನು ಅಳವಡಿಸುವುದರಿಂದ ಬಡವರು ಬಡತನದಿಂದ ಹೊರಬರಲು ಸಹಾಯಕವಾಗುತ್ತದೆ. ಇದನ್ನು ರಷ್ಯನ್ನರು ಭೀಕರ ಸಂಕಷ್ಟದೊಂದಿಗೆ ಸಾಧಿಸಿದ್ದಾರೆ. ಪ್ರಸ್ತುತ ನಮಗಿರುವ ಸಮಸ್ಯೆ ಎಂದರೆ, ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯನ್ನು ಉಂಟು ಮಾಡದೆ ಬಡತನದಿಂದ ಯಾವ ರೀತಿ ಹೊರಬರುವುದು ಎಂಬುದು. ಇಂತಹ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ನೆಹರು ಅಧ್ಯಕ್ಷತೆಯಲ್ಲಿ 1950ರ ಮಾರ್ಚ್‌ನಲ್ಲಿ ಯೋಜನಾ ಆಯೋಗ [Planning Commission] ಅಸ್ತಿತ್ವಕ್ಕೆ ಬಂದಿತು.

 

     ನೆಹರು ನವೆಂಬರ್ 1954ರ ರಾಷ್ಟ್ರೀಯ ಅಭಿವೃದ್ಧಿ ಸಮಿತಿ ( National Development Council - NDC) ಯ ಸಭೆಯಲ್ಲಿ ಯೋಜನೆಯ ಸಾರವನ್ನು ಕುರಿತು ಹೇಳುತ್ತಾ: “ಯೋಜನೆಗೆ ಸಂಬಂಧಿಸಿದಂತೆ ನಾನು ಸಂಪೂರ್ಣವಾಗಿ ಸಮಾಜವಾದಿ ಸಮಾಜದ ಕಲ್ಪನೆಯನ್ನು ಹೊಂದಿದ್ದೇನೆ... ಅಂದರೆ, ಉತ್ಪತ್ತಿ ಸಮಾಜದ ಹಿತದಲ್ಲಿ ಇರಬೇಕು, ಅದು ಇಡೀ ಸಮಾಜದ ಹಿತಕ್ಕೆ ಉಪಯೋಗವಾಗಬೇಕು” ಎಂದು ಹೇಳಿದರು.

     ನೆಹರು ಈ ರೀತಿಯ ಭಾವನೆಯನ್ನು ಹೊಂದಿದ್ದರೂ ಖಾಸಗಿ ಉದ್ಯಮಕ್ಕೆ ಸಾಕಷ್ಟು ಅವಕಾಶವನ್ನು ಮಾಡಿಕೊಟ್ಟಿದ್ದರು. ಬೃಹತ್ ಕೈಗಾರಿಕೆಗಳಿಗೆ ಮಾನ್ಯತೆಯನ್ನು ನೀಡಿದಂತೆ ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೂ ಮಾನ್ಯತೆಯನ್ನು ನೀಡಿದ್ದರು.

     ನೆಹರೂರವರಿಗೆ 'ಯೋಜನೆ' ಕೈಗಾರಿಕೀಕರಣದ ಮೂಲಕ ಸ್ವಾವಲಂಬನೆಯಾಗಿತ್ತು. ಗಾಂಧೀಜಿ ಕೈಗಾರಿಕೀಕರಣ ಮನುಜ ಕುಲಕ್ಕೆ ಒಂದು ಶಾಪ ಎಂದು ಪರಿಗಣಿಸಿದ್ದರು. ಅಲ್ಲದೆ, ಭಾರತಕ್ಕೆ ಗೃಹ ಕೈಗಾರಿಕೆಗಳೆ ಸೂಕ್ತವೆಂದು ಪ್ರತಿಪಾದಿಸಿದರು. ಆದರೆ, ನೆಹರು ಕೈಗಾರಿಕೀಕರಣದ ಕಡೆ ತಮ್ಮ ಒಲವನ್ನು ತೋರಿಸಿದರು. ಏಪ್ರಿಲ್ 1953ರಲ್ಲಿ ಅಖಿಲ ಭಾರತ ಕೈಗಾರಿಕೋದ್ಯಮಿಗಳ ಸಂಘಟನೆಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ : ನಾವು ಕೈಗಾರಿಕೀಕರಣವನ್ನು ಸಾಧಿಸಬೇಕೆಂದಿದ್ದರೆ, ಬೃಹತ್ ಮತ್ತು ಮೂಲ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಇದನ್ನು ಹೊರತುಪಡಿಸಿದರೆ, ಅನ್ಯ ಮಾರ್ಗವಿಲ್ಲ. ನಾವು ಕಬ್ಬಿಣ ಮತ್ತು ಉಕ್ಕನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕು. ಯಂತ್ರಗಳನ್ನು ತಯಾರಿಸುವ ಯಂತ್ರಗಳನ್ನು ಉತ್ಪಾದಿಸಬೇಕು. ಎಲ್ಲಿಯವರೆಗೆ ಈ ತರಹದ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಇತರೆಯವರನ್ನು ಆಶ್ರಯಿಸಬೇಕಾಗುತ್ತದೆ ಮತ್ತು ಶೀಘ್ರವಾಗಿ ಅಭಿವೃದ್ಧಿಯನ್ನು ಸಾಧಿ ಸುವುದು ಅಸಾಧ್ಯವೆಂದು ಹೇಳಿದರು. ಒಂದು ಸಾರಿ ಮೂಲ ಸೌಕರ್ಯಗಳನ್ನು ಪಡೆದರೆ, ನಾವು ಭಾವಿಸಿರುವಂತೆ ಪ್ರಗತಿಯನ್ನು ಸಾಧಿಸಬಹುದು ಎಂದರು. ಈ ಎಲ್ಲಾ ಅಂಶಗಳನ್ನು ನೆಹರು ಸೋವಿಯತ್ ರಷ್ಯಾದ ಯೋಜನೆಯಿಂದ (ರಷ್ಯಾ 1928ರಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಆರಂಭಿಸಿತ್ತು) ಕರಗತ ಮಾಡಿಕೊಂಡಿದ್ದರು.

     ನೆಹರೂರವರ ಕಾರ್ಯಪಟುತ್ವದ ಫಲವಾಗಿ, ಭಾರತದಲ್ಲಿ 1951ರಿಂದ ಮೂರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಯೋಜನೆಗಳ ಫಲವಾಗಿ, ರಾಷ್ಟ್ರೀಯ ಆದಾಯ ಸರಾಸರಿ ಶೇ. 3.5ರಷ್ಟು ಮತ್ತು ತಲಾ ಆದಾಯ ಶೇ. 1.3 ರಷ್ಟು ಅಧಿಕವಾಯಿತು.

     ಪ್ರಥಮ ಪಂಚವಾರ್ಷಿಕ ಯೋಜನೆ (1951-56) ಯಲ್ಲಿ ಕೃಷಿಗೆ ಪ್ರಾಧಾನ್ಯತೆಯನ್ನು ಕೊಟ್ಟರೆ, ದ್ವಿತೀಯ ಪಂಚವಾರ್ಷಿಕ ಯೋಜನೆ (1956-61) ಯಲ್ಲಿ ಕೈಗಾರಿಕೆಗೆ ಪ್ರಾಶಸ್ತ್ಯವನ್ನು ನೀಡಲಾಯಿತು. ಆದರೆ, ತೃತೀಯ ಪಂಚವಾರ್ಷಿಕ ಯೋಜನೆ (1961-66)ಯಲ್ಲಿ ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಸಮಾನ ಪ್ರಾತಿನಿಧ್ಯವನ್ನು ನೀಡಲಾಯಿತು. ನೆಹರೂರವರ ಕಾಲಾವಧಿಯಲ್ಲಿ ಜಾರಿಗೊಳಿಸಿದ ಈ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿನ ಉದ್ದೇಶಗಳನ್ನು ಕೆಳಕಂಡಂತೆ ಕ್ರೋಢೀಕರಿಸಬಹುದು.

* ನಿರುದ್ಯೋಗ ನಿವಾರಣೆ

* ಬಡತನ ನಿರ್ಮೂಲನೆ

* ರಾಷ್ಟ್ರೀಯ ಆದಾಯದ ವೃದ್ಧಿ

* ಸ್ವಾವಲಂಬನೆ

* ಆದಾಯದ ಸಮಾನ ಹಂಚಿಕೆ

* ಆರ್ಥಿಕತೆಯ ಆಧುನೀಕರಣ

* ಸಾಮಾಜಿಕ ನ್ಯಾಯ

* ಸಮಾಜವಾದಿ ಆರ್ಥಿಕ ವ್ಯವಸ್ಥೆಯ ಸ್ಥಾಪನೆ

* ದೇಶದ ಸರ್ವಾಂಗೀಣ ಅಭಿವೃದ್ಧಿ

       ಈ ತೆರನಾದ ಉದ್ದೇಶಗಳನ್ನು ಹೊಂದಿದ್ದ ಮೂರು ಪಂಚವಾರ್ಷಿಕ ಯೋಜನೆಗಳು ಕೃಷಿ, ಕೈಗಾರಿಕೆ, ಸಹಕಾರ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವ ಅಂಶ ತಿಳಿದುಬರುತ್ತದೆ.

 

ಕೃಷಿ [Agriculture]:

ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ಶೇ. 65ಕ್ಕಿಂತಲೂ ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಪ್ರಸ್ತುತ ದೇಶದ ರಾಷ್ಟ್ರೀಯ ಆದಾಯದಲ್ಲಿ ಶೇ. 28ರಷ್ಟು ಆದಾಯ ಕೃಷಿಯಿಂದಲೇ ಬರುತ್ತಿದೆ. ಹಾಗಾಗಿ, ಕೃಷಿ ಕ್ಷೇತ್ರವನ್ನು ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಕರೆಯಲಾಗಿದೆ.

ಕೃಷಿ ಕ್ಷೇತ್ರ ಈ ತರಹದ ಮಹತ್ವವನ್ನು ಹೊಂದಿರುವುದರಿಂದ ನೆಹರು ಅದರ ಉನ್ನತಿಗಾಗಿ ಹಲವು ಕ್ರಮಗಳನ್ನು ಕೈಗೊಂಡರು. ಉದಾ : ಕೃಷಿಕ ಭೂಮಿಯನ್ನು ಹೊಂದಿದ್ದ ಮಾತ್ರಕ್ಕೆ ಉತ್ತಮ ಫಸಲನ್ನು ಬೆಳೆಯುವುದು ಅಸಾಧ್ಯ. ಹಾಗಾಗಿ, ಉತ್ತಮ ಫಸಲನ್ನು ಬೆಳೆಯಲು ಸಹಾಯಕವಾಗುವ ವಿವಿಧೋದ್ದೇಶ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಯಿತು. ಉದಾ: ಭಾಕ್ರಾನಂಗಲ್ ( ಪಂಜಾಬ್, ಹರಿಯಾಣ, ರಾಜಸ್ಥಾನ ), ಕೋಸಿ ( ಬಿಹಾರ್ ), ಹಿರಾಕುಡ್ - ಮಹಾನದಿ ಯೋಜನೆ (ಒರಿಸ್ಸಾ), ದಾಮೋದರ್ ಕಣಿವೆ (ಪಶ್ಚಿಮ ಬಂಗಾಳ, ಬಿಹಾರ), ಚಂಬಲ್ (ರಾಜಸ್ಥಾನ - ಮಧ್ಯಪ್ರದೇಶ), ತುಂಗಭದ್ರಾ (ಕರ್ನಾಟಕ, ಆಂಧ್ರಪ್ರದೇಶ), ಭದ್ರಾ(ಕರ್ನಾಟಕ), ನಾಗಾರ್ಜುನ ಸಾಗರ ( ಆಂಧ್ರಪ್ರದೇಶ), ಇನ್ನೂ ಮುಂತಾದ ಪ್ರದೇಶಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು. ಆ ಮೂಲಕ ಕೃಷಿ ಯೋಗ್ಯ ಭೂಮಿಗೆ ನೀರನ್ನು ಒದಗಿಸಲಾಯಿತು. ಅಲ್ಲದೆ, ವಿದ್ಯುತ್‌ ಅನ್ನು ಉತ್ಪಾದಿಸಲಾಯಿತು. ಫಲವಾಗಿ, 1950-51ರಲ್ಲಿ 22.6 ಮಿಲಿಯನ್ ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯವಿತ್ತು. ಕ್ರಿ. ಶ. 1965- 66ರ ವೇಳೆಗೆ 31.1 ಮಿಲಿಯನ್ ಹೆಕ್ಟೇ‌ರ್‌ಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯವನ್ನು ಕೊಡಲು ಸಾಧ್ಯವಾಯಿತು. (ಪ್ರಥಮ ಮೂರು ಯೋಜನೆಗಳಿಂದ ನೀರಾವರಿ ಯೋಜನೆಗೆ 1550 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಯಿತು). ಯೋಜನೆಗಳ ಫಲವಾಗಿ, ಆಹಾರ ಧಾನ್ಯಗಳ ಉತ್ಪಾದನೆ 1950-51ರಲ್ಲಿ 540 ಲಕ್ಷ ಟನ್ನುಗಳಾಗಿತ್ತು. ಆದರೆ, ಅದು 1964-65 ರ ವೇಳೆಗೆ 880 ಲಕ್ಷ ಟನ್ನುಗಳಿಗೆ ಏರಿತು.

 

ಕೈಗಾರಿಕೆ (Industry):

ಒಂದು ದೇಶದ ಜನರ ಜೀವನ ಮಟ್ಟವನ್ನು ನಿರ್ಧರಿಸುವಲ್ಲಿ ಕೈಗಾರಿಕಾ ಪ್ರಗತಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಉದಾ: ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದ್ದರಿಂದ ಆ ದೇಶದ ಪ್ರಜೆಗಳ ತಲಾ ಆದಾಯ 1956ರಲ್ಲಿ 9731 ರೂ. ಗಳಾಗಿದ್ದವು. ಆದರೆ, ಭಾರತ ಕೈಗಾರಿಕೆಯಲ್ಲಿ ಅಷ್ಟು ಪ್ರಗತಿಯನ್ನು ಹೊಂದದೆ ಇದ್ದುದರಿಂದ ಭಾರತೀಯ ಪ್ರಜೆಯ ತಲಾ ಆದಾಯ 1956ರಲ್ಲಿ 282 ರೂ. ಗಳಾಗಿದ್ದವು. ಫಲವಾಗಿ, ಭಾರತೀಯ ಪ್ರಜೆಯ ಜೀವನ ಮಟ್ಟ ಅಮೇರಿಕಾದ ಪ್ರಜೆಯ ಜೀವನಮಟ್ಟಕ್ಕಿಂತ ಸಾಕಷ್ಟು ಕೆಳಮಟ್ಟದಲ್ಲಿತ್ತು. ಹಾಗಾಗಿ, ಜನತೆಯ ಜೀವನ ಮಟ್ಟವನ್ನು ಸುಧಾರಿಸಬೇಕೆಂದರೆ, ಕೈಗಾರಿಕೆಗಳ ಅಭಿವೃದ್ಧಿ ಅತ್ಯವಶ್ಯ ಎಂದು ನೆಹರು ಭಾವಿಸಿದರು. ಫಲವಾಗಿ, ಭಾರತದ ಪ್ರಥಮ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಯಿತು.

ಪ್ರಥಮ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಒಟ್ಟು 5,254 ಕೋಟಿ ರೂ.ಗಳನ್ನು ಖರ್ಚು ಮಾಡಲಾಯಿತು. ಫಲವಾಗಿ, ದೇಶದಾದ್ಯಂತ ಹಲವು ಬೃಹತ್ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳು ಅಸ್ತಿತ್ವವನ್ನು ಕಂಡುಕೊಂಡವು. ಅವುಗಳೆಂದರೆ, ಹಿಂದೂಸ್ತಾನ್ ಮೆಷಿನ್ ಟೂಲ್ಸ್ (H.M.T), ಸಿಂದ್ರಿ ರಸಗೊಬ್ಬರ ಕಾರ್ಖಾನೆ, ಹಿಂದೂಸ್ಥಾನ್ ಆಂಟಿ ಬಯೋಟಿಕ್ಸ್, ಹಿಂದೂಸ್ತಾನ್ ಕೇಬಲ್, ಹಿಂದೂಸ್ತಾನ್ ಕ್ರಿಮಿನಾಶಕ ಕಾರ್ಖಾನೆ, ಇಂಟಿಗ್ರೇಟ್ ಕೋಚ್ ಫ್ಯಾಕ್ಟರಿ, ಹಿಂದೂಸ್ಥಾನ್ ಷಿಪ್ ಯಾರ್ಡ್, ಸಿಮೆಂಟ್ ಕಾರ್ಖಾನೆ, ಚಿತ್ತರಂಜನ್ ಲೊಕೋಮೋಟಿವ್‌ ಕಾರ್ಖಾನೆ (ಪ್ರಥಮ ಪಂಚವಾರ್ಷಿಕ ಯೋಜನೆ ), ಇತ್ಯಾದಿ,

ವಿದೇಶೀಯರ ಸಹಯೋಗದೊಂದಿಗೆ ಅಂದರೆ, ರಷ್ಯಾದ ನೆರವಿನಿಂದ ಬಿಲಾಯ್ (ಛತ್ತೀಸ್ ಘರ್), ಇಂಗ್ಲೆಂಡಿನ ನೆರವಿನಿಂದ ದುರ್ಗಾಪುರ (ಪಶ್ಚಿಮ ಬಂಗಾಳ) ಹಾಗೂ ಪಶ್ಚಿಮ ಜರ್ಮನಿಯ ನೆರವಿನಿಂದ ರೂರ್‌ಕಲಾ (ಒರಿಸ್ಸಾ) ಗಳಲ್ಲಿ ಬೃಹತ್ ಪ್ರಮಾಣದ ಕಬ್ಬಿಣದ ಮತ್ತು ಉಕ್ಕಿನ ಕಾರ್ಖಾನೆಗಳನ್ನು ಸಾರ್ವಜನಿಕ ವಲಯದಲ್ಲಿ ಸ್ಥಾಪಿಸಲಾಯಿತು. ಅಲ್ಲದೆ, ಹತ್ತಿ ಬಟ್ಟೆ, ಸೆಣಬು ಮತ್ತು ಸಕ್ಕರೆ ಕಾರ್ಖಾನೆಗಳನ್ನು ಆಧುನೀಕರಣಗೊಳಿಸಲಾಯಿತು.

ದ್ವಿತೀಯ ಪಂಚವಾರ್ಷಿಕ ಯೋಜನೆಯ ನಂತರದಲ್ಲಿ ಪಾಕಿಸ್ಥಾನ ಮತ್ತು ಚೀನಾಗಳೊಂದಿಗಿನ ಯುದ್ಧಗಳು, ಅನಿರೀಕ್ಷಿತ ಬರಗಾಲ ಹಾಗೂ ಹಣದುಬ್ಬರ ಕಾಣಿಸಿಕೊಂಡಿತು. ಆದರೂ ಅಲ್ಯೂಮಿನಿಯಂ, ಪೆಟ್ರೋಲಿಯಂ, ಆಟೋಮೊಬೈಲ್, ಮೆಷಿನ್ ಟೂಲ್ಸ್, ಇನ್ನೂ ಮುಂತಾದ ಕೈಗಾರಿಕೆಗಳು ಸಾಕಷ್ಟು ಪ್ರಗತಿಯನ್ನು ( ತೃತೀಯ ಪಂಚವಾರ್ಷಿಕ ಯೋಜನೆ ) ಸಾಧಿಸಿದವು.

 

ಗ್ರಾಮೀಣ ಋಣಭಾರ (Rural Indebtedness):

 ಭಾರತ ಸ್ವಾತಂತ್ರ್ಯವನ್ನು ಪಡೆದಾಗ ಭಾರತದಲ್ಲಿದ್ದ ಭೂ ಹಿಡುವಳಿ ಪದ್ಧತಿ, ಕಡುಬಡತನ, ಇನ್ನೂ ಮುಂತಾದ ಕಾರಣಗಳಿಂದ ಕೃಷಿಕ ಸಾಲಗಾರನಾಗಿದ್ದನು. ಕೃಷಿಕ ಸಾಲಿಗನ ಕಪಿಮುಷ್ಠಿಯಿಂದ ಹೊರಬರಲು ಸಾಧ್ಯವಿಲ್ಲದ ವಾತಾವರಣ ಸೃಷ್ಟಿಯಾಗಿತ್ತು. ಆಗ ಸರ್ಕಾರ ಭೂ ಅಡಮಾನ ಬ್ಯಾಂಕ್‌ (ಭೂ ಅಭಿವೃದ್ಧಿ ಬ್ಯಾಂಕ್ )ಗಳನ್ನು ಸ್ಥಾಪಿಸಿತು. ಆ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲಗಳನ್ನು ಮಂಜೂರು ಮಾಡಿದ್ದರಿಂದ ಕೃಷಿಕ ಸಾಲದ ಹೊರೆಯಿಂದ ಹೊರಬರಲು ಸಾಧ್ಯವಾಯಿತು. ಅಲ್ಲದೆ, ಕೃಷಿಕರು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲು ಸಾಧ್ಯವಾಯಿತು. ಈ ಬ್ಯಾಂಕುಗಳು 1950-51 ರಲ್ಲಿ 1.38 ಕೋಟಿ ರೂ.ಗಳನ್ನು ಕೃಷಿಕರಿಗೆ ಸಾಲವನ್ನು ನೀಡಿದವು. ಆದರೆ, 1990-91ರ ವೇಳೆಗೆ ಸಾಲದ ಮೊತ್ತ 785 ಕೋಟಿ ರೂ.ಗಳನ್ನು ತಲುಪಿರುವ ಅಂಶ ತಿಳಿದುಬರುತ್ತದೆ.

 

ಸಹಕಾರಿ ಚಳುವಳಿಗೆ ಪ್ರೋತ್ಸಾಹ (Encouragement to the Co- operative Movement) :

"ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ'' (Each for al and all for each) ಎಂಬ ತಾತ್ವಿಕ ನೆಲೆಗಟ್ಟಿನ ಮೇಲೆ ಸಹಕಾರಿ ಚಳುವಳಿ 19ನೇ ಶತಮಾನದ ಕೊನೆಗೆ ಆರಂಭವಾಯಿತು. ಈ ಚಳುವಳಿಯು ಸ್ವಾತಂತ್ರ್ಯ ನಂತರ ಸರಕಾರದಿಂದ ಉತ್ತಮ ಪ್ರೋತ್ಸಾಹವನ್ನು ಪಡೆಯಿತು. ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ವಿಭಿನ್ನ ಸಹಕಾರಿ ಸಂಘಗಳು ಸ್ಥಾಪನೆಯಾದವು.  ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಕ್ಷೇತ್ರವನ್ನು ಸುಧಾರಿಸುವಲ್ಲಿ ಸಹಕಾರಿ ಚಳುವಳಿ ಮಹತ್ತರ ಪಾತ್ರವನ್ನು ವಹಿಸಿತು. ಖಾಸಗಿ ಸಾಲಗಾರರ ಹಿಡಿತದಿಂದ ಕೃಷಿಕರನ್ನು ಮುಕ್ತಗೊಳಿಸುವುದಕ್ಕೆ ಮತ್ತು ಕೃಷಿಕರಿಗೆ ಸಾಲವನ್ನು (ಅಲ್ಪಾವಧಿ) ನೀಡುವುದಕ್ಕೆ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಯಿತು. ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, ಜಿಲ್ಲಾ ಮಟ್ಟದಲ್ಲಿ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಸಹಕಾರಿ ಬ್ಯಾಂಕುಗಳನ್ನು ಆರಂಭಿಸಲಾಯಿತು.

ಕ್ರಿ.ಶ. 1950-51 ರಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು 44 ಲಕ್ಷ ಸದಸ್ಯರನ್ನು ಹೊಂದಿ 23 ಕೋಟಿ ರೂ.ಗಳನ್ನು ಸಾಲ ನೀಡಿದವು. ಪಂಚವಾರ್ಷಿಕ ಯೋಜನೆಗಳ ಮೂಲಕ ಪ್ರೋತ್ಸಾಹವನ್ನು ಪಡೆದ ಸಹಕಾರಿ ಸಂಘಗಳು 1960-61ರ ವೇಳೆಗೆ 200 ಕೋಟಿ ರೂ. ಗಳ ಸಾಲವನ್ನು ನೀಡಿದವು. ಈ ಸಂಘಗಳು 1989-90ರ ವೇಳೆಗೆ ಸು. 8 ಕೋಟಿ ಸದಸ್ಯರನ್ನು ಹೊಂದಿ 4,789 ಕೋಟಿ ರೂ.ಗಳನ್ನು ಸಾಲ ನೀಡಿದವು.

ಪತ್ತಿನ ಸಹಕಾರಿ ಸಂಘಗಳು ಕೃಷಿಕನನ್ನು ಸಾಲಗಾರನ ಹಿಡಿತದಿಂದ ಮುಕ್ತಗೊಳಿಸಿದವು. ಜೊತೆಗೆ, ರಾಷ್ಟ್ರದ ಆರ್ಥಿಕತೆಯಲ್ಲಿ ಕೃಷಿಕ ಮಹತ್ತರ ಪಾತ್ರವನ್ನು ವಹಿಸುವ ವ್ಯಕ್ತಿಯನ್ನಾಗಿ ಪರಿವರ್ತಿಸಿದವು. ಅಲ್ಲದೆ, ಕೃಷಿಕನಿಗೆ ಆಧುನಿಕ ಯಂತ್ರಗಳು, ಸಲಕರಣೆಗಳು, ಸುಧಾರಿತ ಬಿತ್ತನೆ ಬೀಜಗಳು, ರಸಗೊಬ್ಬರ, ಕ್ರಿಮಿನಾಶಕಗಳನ್ನು ಪೂರೈಸುವುದರ ಮೂಲಕ ಸುಧಾರಿತ ಕೃಷಿ ಪದ್ಧತಿಯ ಜಾರಿಗೆ ಕಾರಣವಾಗಿವೆ.

ಸಮುದಾಯ  ಅಭಿವೃದ್ಧಿ ಯೋಜನೆ [Community Development Programme - CDP]:

 ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿಯ ಕನಸನ್ನು ನನಸು ಮಾಡುವ ಉದ್ದೇಶದಿಂದ ಭಾರತ ಸರಕಾರ ಸಮುದಾಯ ಅಭಿವೃದ್ಧಿ ಯೋಜನೆಯನ್ನು 2ನೇ ಅಕ್ಟೋಬರ್ | 1952ರಲ್ಲಿ ಜಾರಿಗೊಳಿಸಿತು.

* ಈ ಯೋಜನೆಯಲ್ಲಿ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕ ಏಳಿಗೆಗೆ ಮಾರ್ಗದರ್ಶನ ಹಾಗೂ ಸೌಕರ್ಯಗಳನ್ನು ಒದಗಿಸಲಾಯಿತು.

* ಸರಕಾರಿ ಇಲಾಖೆಗಳಾದ ಆರೋಗ್ಯ ಕೇಂದ್ರ, ಶಿಕ್ಷಣ ಇಲಾಖೆ, ಸಹಕಾರಿ ಸಂಘಗಳು, ಕೃಷಿ ಇಲಾಖೆ ಮತ್ತು ಪ್ರಾಣಿ ಸಾಕಾಣಿಕ ಇಲಾಖೆಗಳ ನಡುವೆ ಉತ್ತಮ ಸಂಬಂಧವನ್ನು ಕಲ್ಪಿಸಿ, ಅವೆಲ್ಲವೂ ಸಾಮೂಹಿಕವಾಗಿ ಗ್ರಾಮಗಳ ಅಭಿವೃದ್ಧಿಯಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು, ಈ ಮುಖೇನ ಪಶುಸಂಗೋಪನೆ, ಮೀನುಗಾರಿಕೆ, ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದಾಗಿತ್ತು.

ಈ ಯೋಜನೆಯಲ್ಲಿ 300 ಹಳ್ಳಿಗಳು, 450-500 ಚದರ ಮೈಲಿ ವಿಸ್ತೀರ್ಣ ಹಾಗೂ 2 ಲಕ್ಷ ಜನರನ್ನು ಒಳಗೊಂಡ `ಪ್ರದೇಶವನ್ನು ಒಂದು ಘಟಕ ಎಂದು ಪರಿಗಣಿಸಿ ಪ್ರತೀ ಘಟಕವನ್ನು 3 ಬ್ಲಾಕ್‌ ಗಳಾಗಿ ವಿಂಗಡಿಸಲಾಗಿತ್ತು. ಅಲ್ಲದೆ, ಪ್ರತೀ ಬ್ಲಾಕ್‌ನಲ್ಲಿ 5 ಹಳ್ಳಿಗಳನ್ನು ಒಳಗೊಂಡ ಚಿಕ್ಕ ಘಟಕವನ್ನು ಹಾಗೂ ಈ ಚಿಕ್ಕ ಘಟಕಕ್ಕೆ ಒಬ್ಬ ಗ್ರಾಮ ಸೇವಕನನ್ನು ನೇಮಿಸಲಾಯಿತು. ಇವನು ಕೃಷಿಗೆ ಸಂಬಂಧಿಸಿದ ವೈಜ್ಞಾನಿಕ ಹಾಗೂ ತಾಂತ್ರಿಕ ಅಂಶಗಳನ್ನು ಕೃಷಿಕರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಕೃಷಿ ಉನ್ನತಿಯ ಕಾರ್ಯದಲ್ಲಿ ನಿರತನಾಗುತ್ತಿದ್ದನು.

ಗ್ರಾಮೀಣ ಜನರು ಊಟ ಮತ್ತು ಬಟ್ಟೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟು ಆರೋಗ್ಯ ಮತ್ತು ನೈರ್ಮಲ್ಯತೆಗೆ ಯಾವುದೇ ಗಮನವನ್ನು ನೀಡುತ್ತಿರಲಿಲ್ಲ. ಹಾಗಾಗಿ, ಸಮುದಾಯ ಅಭಿವೃದ್ಧಿ ಯೋಜನೆ ಗ್ರಾಮೀಣ ಜನರ ಆರೋಗ್ಯ ಮತ್ತು ನೈರ್ಮಲ್ಯತೆಯ ಕಡೆ ಗಮನ ಹರಿಸಿತು. ಗ್ರಾಮಗಳನ್ನು ಸ್ವಚ್ಛವಾಗಿ ಇಡುವುದು, ಸ್ವಚ್ಛವಾದ ನೀರಿನ ಸೌಲಭ್ಯ ಒದಗಿಸುವುದು, ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು, ರಾತ್ರಿ ದೀಪಗಳ ವ್ಯವಸ್ಥೆ, ಉಚಿತವಾಗಿ ಗ್ರಾಮೀಣ ಜನರಿಗೆ ಔಷಧವನ್ನು ವಿತರಿಸುವುದು, ಪಶು ಚಿಕಿತ್ಸಾಲಯಗಳ ನಿರ್ಮಾಣ, ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಗ್ರಾಮಗಳಲ್ಲಿ ಕಕ್ಕಸು ಗುಂಡಿಗಳನ್ನು ನಿರ್ಮಿಸುವುದು, ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಸಮುದಾಯ ಅಭಿವೃದ್ಧಿ ಯೋಜನೆ ಹಾಕಿಕೊಂಡಿತು. ಇದರಿಂದ ಮಾನವ ಸಂಪನ್ಮೂಲಗಳನ್ನು ಹಾಗೂ ದನ-ಕರುಗಳ ಆರೋಗ್ಯವನ್ನು ಕಾಯ್ದುಕೊಂಡಿದ್ದಲ್ಲದೆ, ಆರ್ಥಿಕ ಉನ್ನತಿಯನ್ನು ಸಾಧಿಸಲಾಯಿತು.

ಮಾಹಿತಿ ಮೂಲ: ಆಧುನಿಕ ಭಾರತದ ಇತಿಹಾಸ, ಲೇಖಕರು: ಟಿ. ಜಿ. ಚಂದ್ರಶೇಖರಪ್ಪ; ಮುದ್ರಣ: 2009.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧