ಭಾರತದಲ್ಲಿನ ಪರಿಸರ ಚಳವಳಿಗಳಿಗೆ ಕಾರಣಗಳು, ಪ್ರಮುಖ ಚಳವಳಿಗಳು ಮತ್ತು ಅವುಗಳ ಪರಿಣಾಮಗಳು

ಪೀಠಿಕೆ: ವೈಯಕ್ತಿಕವಾಗಿ ಅಥವ ಸಾಮೂಹಿಕವಾಗಿ ಸಮಾಜದಲ್ಲಿ ಬದಲಾವಣೆ ತರಲು ನಡೆಸುವ ಪ್ರಯತ್ನವನ್ನು ಸಾಮಾಜಿಕ ಚಳವಳಿ ಎನ್ನಬಹುದು. ಸಾಮಾನ್ಯವಾಗಿ ಸಮಾಜದ ಭಾಗವಾಗಿರುವ ಒಂದು ಗುಂಪಿನ ಬದಲಾವಣೆಯನ್ನು ಉತ್ತೇಜಿಸಲು ಅಥವ ವಿರೋಧಿಸಲು ಸಾಮಾಜಿಕ ಚಳವಳಿಗಳು ಜರುಗುತ್ತವೆ. ಅಂಡ್ರಸನ್‌ ಮತ್ತು ಪಾರ್ಕರ್‌ ಪ್ರಕಾರ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಅಥವ ಭಾಗಶಃ ಬದಲಾವಣೆ ತರಲು ಕಾಲ ಹಾಗು ಗುರಿಗೆ ತಕ್ಕಂತೆ ಹಂತ ಹಂತವಾಗಿ ರೂಪುಗೊಂಡ ಬಹುಸಂಖ್ಯಾತರ ವರ್ತನೆಗಳೇ ಸಾಮಾಜಿಕ ಚಳವಳಿ. ಅಂತೆಯೇ ಲಂಡ್ಬರ್ಗ್‌ ಹಾಗು ಇತರರು ವಿಶಾಲ ಸಮಾಜದಲ್ಲಿನ ಧೋರಣೆ, ವರ್ತನೆ ಅಥವ ಸಾಮಾಜಿಕ ಸಂಬಂಧಗಳನ್ನು ಬದಲಾಯಿಸಲು ತೊಡಗಿರುವ ಸ್ವಯಂ ಪ್ರೇರಿತ ಜನ ಸಮೂಹವನ್ನುಳ್ಳ ಸಂಘಟನೆಗಳ ಪ್ರಯತ್ನಗಳೇ ಸಾಮಾಜಿಕ ಚಳವಳಿ ಎಂದಿರುವರು. ಒಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಜನಸಮೂಹ ನಡೆಸುವ ಪ್ರಯತ್ನಗಳನ್ನು ಸಾಮಾಜಿಕ ಚಳವಳಿ ಎನ್ನಲಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಬದಲಾವಣೆವಿರೋಧಿಸಲು, ಅಲ್ಪ ಬದಲಾವಣೆ ತರಲು ಅಥವ ಸಂಪೂರ್ಣ ಬದಲಾವಣೆ ಸಾಕಾರಗೊಳಿಸಲು ಸಾಮಾಜಿಕ ಚಳವಳಿಗಳು ಜರುಗುತ್ತವೆ. ಹೀಗೆ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಚಳವಳಿಗಳನ್ನು ಆರಂಭದಲ್ಲಿ ಸುಧಾರಣಾ ಚಳವಳಿ ಎಂದು ಕರೆದರೆ ಬಳಿಕ ಕ್ರಾಂತಿಕಾರಿ ಚಳವಳಿ ಎಂತಲೂ ಗುರುತಿಸಲಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕಿಯ ವ್ಯವಸ್ಥೆಯ ಬದಲಾವಣೆಗೆ ಜಗತ್ತಿನಾದ್ಯಂತ ೧೮ ನೇ ಶತಮಾನದಿಂದ ಸಾಮಾಜಿಕ ಚಳವಳಿ ಸಂಭವಿಸಿವೆ. ಎರಡನೇ ಮಹಾ ಯುದ್ಧದ ಬಳಿಕ ಹೊಸ ಸಾಮಾಜಿಕ ಚಳವಳಿಗಳು ನಾಗರಿಕ ಹಕ್ಕು, ಮಹಿಳಾ ಹಕ್ಕು, ಮಾನವ ಹಕ್ಕು, ಪರಿಸರ ರಕ್ಷಣೆ, ಬ್ರಷ್ಟಾಚಾರ, ಭಯೋತ್ಪಾದನೆಯಂತಹ ಜ್ವಲಂತ ಸವಾಲುಗಳ ಕುರಿತು ಜರುಗುತ್ತಿರುವುದು ಗಮನಾರ್ಹ. ಭಾರತದಲ್ಲೂ ಸಾಮಾಜಿಕ ಚಳವಳಿಗಳು ಪುನರುಜ್ಜೀವನ ಕಾಲದಿಂದ ಮುನ್ನೆಲೆಗೆ ಬಂದವು. ವೈವಿಧ್ಯತೆಗೆ ಹೆಸರಾದ ಭಾರತ ಸಮಾಜ ಭಿನ್ನ ನೆಲೆಗಟ್ಟಿನ ಸಾಮಾಜಿಕ ಚಳವಳಿಗಳಿಗೆ ಸಾಕ್ಷಿಯಾಗಿದೆ.


ಪ್ರಮುಖ ಪರಿಸರ ಚಳವಳಿಗಳು: ಭಾರತ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಪರಿಸರಕ್ಕೆ ಮಹತ್ವ ನೀಡಲಾಗಿದೆ. ಅಶೋಕ ಚಕ್ರವರ್ತಿ ರಸ್ತೆ ಬದಿಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸಾಲು ಮರಗಳನ್ನು ಬೆಳೆಸಲು ಮುಂದಾಗಿದ್ದನು. ಅಲ್ಲದೇ ಭಾರತೀಯರು ವಿವಿಧ ವೃಕ್ಷ, ಪ್ರಾಣಿ ಹಾಗೂ ನದಿಗಳನ್ನು ಪೂಜಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದರು. ಇಂತಹ ಭಾರತದಲ್ಲಿ ಕಳೆದ ನಾಲ್ಕು ದಶಕಗಳಿಂದ ಪರಿಸರ ಚಳವಳಿ ತೀವ್ರ ಸ್ವರೂಪ ಪಡೆದಿದೆ. ಭಾರತದಲ್ಲಿ ಕಂಡು ಬಂದ ಜನಪ್ರಿಯ ಪರಿಸರ ಚಳವಳಿಗಳ ವಿವರ ಕೆಳಗಿನಂತಿದೆ.

ಅ. ಬಿಷ್ಣೊಯ್‌ ಚಳವಳಿ: ಪಶ್ಚಿಮ ಭಾರತದ ರಾಜಸ್ತಾನದಲ್ಲಿ ಮಾರ್ವಾರ್‌ ಪ್ರದೇಶದಲ್ಲಿ ಸುಮಾರು ೪೦೦ ವರ್ಷಗಳ ಹಿಂದೆ ಈ ಚಳವಳಿ ಜರುಗಿತು. ಐತಿಹಾಸಿಕ ಆಧಾರಗಳಂತೆ ಬಿಷ್ಣೋಯ್‌ ಅಹಿಂಸಾತ್ಮಕ ಹಾಗೂ ಪ್ರಕೃತಿ ಪೂಜೆಯಲ್ಲಿ ನಂಬಿಕೆ ಹೊಂದಿರುವ ಒಂದು ಸಮುದಾಯವಾಗಿತ್ತು. ಸಾ.ಶ.ವ. ೧೪೫೧ ಕ್ಕಿಂತ ಮೊದಲೇ ಸಂತ ಜಂಬೇಶ್ವರ ಎಂಬುವವನು ವಿಷ್ಣುವಿನ ಆರಾಧನೆ ಪ್ರತಿಪಾದಿಸಿ ವಿಷ್ಣೋಯ್‌ ಅಥವ ಬಿಷ್ಣೋಯ್‌ ಪಂಥಕ್ಕೆ ಚಾಲನೆ ನೀಡಿದನು.  ಅಲ್ಲದೇ ಅವನು ಜೈವಿಕ ವೈವಿಧ್ಯತೆಯನ್ನು ಉಳಿಸಿಕೊಂಡು  ಪರಿಸರ ಸ್ನೇಹಿ ಸಾಮಾಜಿಕ ಜೀವನ ನಡೆಸಲು ತನ್ನ ಅನುಯಾಯಿಗಳಿಗೆ ೨೯ ನಿಯಮಗಳ ಪಾಲನೆಗೆ ಸೂಚಿಸಿದ್ದನು. ಹೀಗಾಗಿ ರಾಜಸ್ತಾನದ ಮಾರ್ವಾರ್‌ ಪ್ರದೇಶದ ಬಿಷ್ಣೋಯ್‌ ಸಮುದಾಯ ಕಾಡು ಮೃಗಗಳು ಹಾಗೂ ವೃಕ್ಷಗಳನ್ನು ಪೂಜಿಸುವ ಸಮುದಾಯವಾಯಿತು. ಹೀಗಿರುವಾಗ ಹೊಸ ಅರಮನೆ ನಿರ್ಮಾಣಕ್ಕೆ ಅಗತ್ಯ ಕಟ್ಟಿಗೆಗಾಗಿ ಮರ ಕಡಿಯಲು ಸ್ಥಳೀಯ ಮಹರಾಜನ ಸೇವಕರು ಬಂದಾಗ ಚಳವಳಿ ೧೭೦೦ ರ ಹೊತ್ತಿಗೆ ಖೆಜರ್ಲಿ ಗ್ರಾಮದಲ್ಲಿ ಆರಂಭವಾಯಿತು. ಅಮೃತದೇವಿ ಎಂಬ ಮಹಿಳೆ ಕಡಿಯಲು ಬಂದ ಮರವನ್ನು ಅಪ್ಪಿಕೊಂಡು ಮರ ಕಡಿಯುವುದನ್ನು ತಡೆಯಲು ಮುಂದಾದಳು. ಅಲ್ಲದೇ ಆಕೆ ಇತರರಿಗೆ ತಮ್ಮ ಪವಿತ್ರ  ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಅವುಗಳನ್ನು ರಕ್ಷಿಸಲು ಕರೆಕೊಟ್ಟಳು. ಈ ಚಳವಳಿ ವೇಳೆ ೩೬೩ ಬಿಷ್ಣೋಯ್‌ ಸಮುದಾಯದ ಪ್ರತಿಭಟನಾಕಾರರು ಮಹರಾಜನ ಸೈನಿಕರಿಂದ ಪ್ರಾಣ ಕಳೆದುಕೊಂಡರು. ಕೊನೆಗೆ ಬಿಷ್ಣೋಯ್‌ ಸಮುದಾಯದ ಪರಿಸರ ಚಳವಳಿಯ ಹಿನ್ನೆಲೆ ತಿಳಿದ ಮಹರಾಜ ಪ್ರತಿಭಟನೆ ಆರಂಭವಾದ ಹಳ್ಳಿಗೆ ಆಗಮಿಸಿ ತನ್ನ ಸೈನಿಕರಿಗೆ ಮರ ಕಡಿಯದಂತೆ ಆದೇಶ ನೀಡಿದನು. ಜೊತೆಗೆ ಬಿಷ್ಣೋಯ್‌ ಸಮುದಾಯದ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಪೂಜನೀಯ ಮರ ಅಥವ ಪ್ರಾಣಿಗಳ ನಾಶವನ್ನು ಅಲ್ಲಿ ನಿಷೇಧಿಸಿದನು.

ಆ. ಚಿಪ್ಕೊ ಚಳವಳಿ: ಚಿಪ್ಕೊ ಚಳವಳಿ ಭಾರತದ ಜನಪ್ರಿಯ ಹಾಗೂ ಪರಿಣಾಮಕಾರಿ ಪರಿಸರ ಚಳವಳಿಯಾಗಿದೆ. ಬ್ರಿಟಿಷ್‌ ಆಡಳಿತವಿದ್ದಾಗಲೂ ಹಿಮಾಲಯದ ತಪ್ಪಲಿನ ಅರಣ್ಯ ನೀತಿಯನ್ನು ಜನರು ಪ್ರತಿಭಟಿಸಿದ್ದರು. ಮುಂದೆ ಸ್ವತಂತ್ರ್ಯೋತ್ತರ ಸರ್ಕಾರಗಳು ರಸ್ತೆ, ಅಣೆಕಟ್ಟು, ರೈಲ್ವೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗಾಗಿ ಅರಣ್ಯ ನಾಶಕ್ಕೆ ಮುಂದಾದವು. ಅಲ್ಲದೇ ಗಡಿ ರಸ್ತೆಗಳ ಕಾರಣಕ್ಕೆ ಅಪಾರ ಅರಣ್ಯ ನಾಶವಾಯಿತು. ಇದರಿಂದ ಪಶ್ಚಿಮ ಹಿಮಾಲಯದ ಅಲಕ್ನಂದಾ ನದಿ ಪಾತ್ರದಲ್ಲಿ ಜೂನ್‌ ೧೯೭೦ ರಲ್ಲಿ ಪ್ರವಾಹ ಉಂಟಾಯಿತು. ಈ ಸಮಯದಲ್ಲಿ ಹೆಸರಾಂತ ಪರಿಸರವಾದಿ ಸುಂದರಲಾಲ್‌ ಬಹುಗುಣ ಪಾದಯಾತ್ರೆ ಕೈಗೊಂಡು ಜನರಲ್ಲಿ ಮಣ್ಣಿನ ಸವೆತ, ಮಳೆ ಪ್ರಮಾಣದಲ್ಲಿನ ಏರಿಳಿತ, ಶುದ್ಧ ಗಾಳಿ ಮುಂತಾದವಕ್ಕೆ ಮರಗಳು ಅನಿವಾರ್ಯವೆಂಬ ಜಾಗೃತಿ ಮೂಡಿಸಿದರು. 1973 ರಲ್ಲಿ ಸರ್ಕಾರ ಖಾಸಗಿ ಗುತ್ತಿಗೆದಾರರಿಗೆ ಮರ ಕಡಿಯಲು ಅನುಮತಿ ನೀಡಿತು. ಗುತ್ತಿಗೆದಾರನ ಕಡೆಯವರು ಮರ ಕಡಿಯಲು ಮುಂದಾದಾಗ ದಶೌಲಿ ಗ್ರಾಮ ಸ್ವರಾಜ್ಯ ಸಂಘದ ಸದಸ್ಯರು ಉಗ್ರ ಪ್ರತಿಭಟನೆ ತೋರಿದರು. ಈ ವೇಳೆ ಚಾಂಡಿ ಪ್ರಸಾದ್‌ ಬಟ್ಟ ಮಂಡಲ್‌ ಗ್ರಾಮದಲ್ಲಿ ೧ ಏಪ್ರಿಲ್‌ 1973 ರಂದು ಜರುಗಿದ ಸಭೆಯಲ್ಲಿ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಅವುಗಳನ್ನು ಕತ್ತರಿಸದಂತೆ ತಡೆಯಲು ಕರೆಕೊಟ್ಟರು. ಪ್ರತಿಭಟನಾಕಾರರು ಮರಗಳನ್ನು ಕಡಿಯಲು ಬಂದಾಗ ಅವುಗಳನ್ನು ಅಪ್ಪಿಕೊಂಡು ನಿಂತರು. ಇದರಿಂದ ಗುತ್ತಿಗೆದಾರ ಮರ ಕಡಿಯುವುದು ಸಾಧ್ಯವಾಗಲಿಲ್ಲ. ಮರಗಳನ್ನು ಅಪ್ಪಿಕೊಂಡು ಪ್ರತಿಭಟಿಸುವ ಯಶಸ್ವಿ ವಿಧಾನ ಚಮೌಲಿ ಹಾಗೂ ತೆಹ್ರಿ ಗರ್ಹ್ವಾಲ್‌ ಜಿಲ್ಲೆಯ ಸುತ್ತಲಿನ ಪ್ರದೇಶಗಳಿಗೆ ಹರಡಿ ಚಳವಳಿ ಜಗತ್ತಿನಾದ್ಯಂತ ಚಿಪ್ಕೋ ಚಳವಳಿ ಎಂದು ಜನಪ್ರಿಯವಾಯಿತು. ಚಿಪ್ಕೊ ಎಂದರೆ ಹಿಂದಿ ಭಾಷೆಯಲ್ಲಿ ಅಪ್ಪಿಕೊ ಎಂದರ್ಥ. ಚಿಪ್ಕೊ ಚಳವಳಿ ವಾಣಿಜ್ಯ ಉದ್ದೇಶಕ್ಕಾಗಿ ಮರ ಕಡಿಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪ್ರಯತ್ನಿಸಿತು. ಜೊತೆಗೆ ಅರಣ್ಯಗಳ ನಿರ್ವಹಣೆಗೆ ಸುತ್ತಲಿನ ಹಳ್ಳಿಗರ ಸಮಿತಿಗಳನ್ನು ರಚಿಸಲು, ಅರಣ್ಯಾಧಾರಿತ ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಒತ್ತಾಯಿಸಿತು. ಚಿಪ್ಕೊ ಚಳವಳಿ ಸುಂದರಲಾಲ್‌ ಬಹುಗುಣ್‌, ಚಾಂಡಿ ಪ್ರಸಾದ್‌ ಬಟ್ಟ್‌, ಗೋವಿಂದ ಸಿಂಗ್‌ ರಾವತ್‌, ಧೂಮ್‌ ಸಿಂಗ್‌ ನೇಗಿ, ಶಾಮ್ಶೇರ್‌ ಬಿಸ್ತ್‌, ಘನಶ್ಯಾಮ್‌ ರಾಚುರಿ, ಗೌರಿದೇವಿ, ಸುದೇಶಾದೇವಿ ಹಾಗೂ ಬಚ್ನಿದೇವಿ ನಾಯಕತ್ವದಲ್ಲಿ ಜರುಗಿ ಸರ್ಕಾರ ಮತ್ತು ವಿಶ್ವ ಬ್ಯಾಂಕ್ನ ಗಮನ ಸೆಳೆಯಿತು.

ಇ. ಸೈಲೆಂಟ್‌ ವ್ಯಾಲಿ ಚಳವಳಿ: ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯು ಶಾಂತ ಕಣಿವೆ ಅಥವ ಸೈಲೆಂಟ್‌ ವ್ಯಾಲಿ ಮೂಲಕ ಹರಿಯುವ ಕುಂತಿಪೂಜಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಜಲ ವಿದ್ಯುತ್‌ ಉತ್ಪಾದನಾ ಯೋಜನೆಯ ಅನುಷ್ಠಾನಕ್ಕೆ  ನಿರ್ಧರಿಸಿತು. ಫೇಬ್ರವರಿ 1973 ರಲ್ಲಿ ೨೫ ಕೋಟಿ ವೆಚ್ಚದ ಈ ಯೋಜನೆಗೆ ಯೋಜನಾ ಆಯೋಗ ಸಮ್ಮತಿ ನೀಡಿತು. ಈ ಬೆಳವಣಿಗೆಯಿಂದ ಅನೇಕರು ೮. ೩೦ ಚದುರ ಕಿ. ಮೀ. ನಿತ್ಯ ಹರಿದ್ವರ್ಣದ ಅರಣ್ಯ ಹಾಗೂ ಜೀವ ಸಂಕುಲ ನಾಶವಾಗುವುದೆಂದು ಆತಂಕಗೊಂಡರು. ಕೇರಳ ಸಾಹಿತ್ಯ ಪರಿಷತ್‌ ಮತ್ತು ಸಾಕಷ್ಟು ಪರಿಸರವಾದಿ ಸ್ವಯಂ ಸೇವಾ ಸಂಘಟನೆಗಳು ಯೋಜನೆಯನ್ನು ವಿರೋಧಿಸಿದವು. ಅಲ್ಲದೇ  ಸುಘಾತಾಕುಮಾರಿ ನೇತೃತ್ವದಲ್ಲಿ ಸರ್ಕಾರ ಯೋಜನೆಯ ಅನುಷ್ಟಾನ ಕೈಬಿಡಬೇಕೆಂದು ಪರಿಸರವಾದಿಗಳು ಒತ್ತಾಯಿಸಿದರು. ಮುಂದೆ ಜನೇವರಿ 1981 ರಲ್ಲಿ ಪ್ರಧಾನಿ ಇಂದಿರಾಗಾಂಧಿ ಜನರ ಪ್ರತಿಭಟನೆ ತೀವ್ರವಾದಾಗ ಸೈಲೆಂಟ್‌ ವ್ಯಾಲಿ ರಕ್ಷಿಸುವ ಭರವಸೆಯನ್ನು ನೀಡಿದರು. ನಂತರ ಜೂನ್‌ 1983 ರಲ್ಲಿ ಕೇಂದ್ರ ಸರ್ಕಾರವು ಸೈಲೆಂಟ್‌ ವ್ಯಾಲಿ ವಿಚಾರವನ್ನು ಪುನರ್ಪರಿಶೀಲಿಸಲು ಎಂ. ಜಿ. ಕೆ. ಮೆನನ್‌ ಅಧ್ಯಕ್ಷತೆಯಲ್ಲಿ ಆಯೋಗವೊಂದನ್ನು ರಚಿಸಿತು. ಆಯೋಗ ನವೆಂಬರ್‌ 1983 ರಲ್ಲಿ ವರದಿ ನೀಡಿ ಸೈಲೆಂಟ್‌ ವ್ಯಾಲಿ ಯೋಜನೆ ಕೈಬಿಡಲು ಸೂಚಿಸಿತು. ಪರಿಸರವಾದಿಗಳ ಚಳವಳಿಯ ಪರಿಣಾಮವಾಗಿ ಶಾಂತ ಕಣಿವೆ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿ 1985 ರಲ್ಲಿ ಪ್ರಧಾನಿ ರಾಜೀವ್ಗಾಂಧಿ ಔಪಚಾರಿಕವಾಗಿ ಉದ್ಘಾಟಿಸಿದರು.

ಈ. ಅಪ್ಪಿಕೊ ಚಳವಳಿ: ಉತ್ತರ ಭಾರತದಲ್ಲಿ ಜರುಗಿದ ಚಿಪ್ಕೊ ಚಳವಳಿ ಮಾದರಿಯಂತೆ ದಕ್ಷಿಣ ಭಾರತದ ಕರ್ನಾಟಕದಲ್ಲಿ ಅಪ್ಪಿಕೊ ಚಳವಳಿ ಜರುಗಿತು. ಸ್ವಾಭಾವಿಕ ಅರಣ್ಯದ ವಾಣಿಜ್ಯೀಕರಣ ಹಾಗೂ ಅರಣ್ಯದ ಪ್ರಾಚೀನ ಜೀವಂತಿಕೆ ರಕ್ಷಣೆ ಉದ್ದೇಶಕ್ಕಾಗಿ ಕರ್ನಾಟಕದ ಉತ್ತರ ಕನ್ನಡ ಮತ್ತು ಶಿವಮೊಗ್ಗಾ ಜಿಲ್ಲೆಗಳಲ್ಲಿ ಅಪ್ಪಿಕೊ ಚಳವಳಿ ಜರುಗಿತು. ಆರಂಭದಲ್ಲಿ ಪಾಂಡುರಂಗ ಹೆಗಡೆ ಅಪ್ಪಿಕೊ ಚಳವಳಿಗೆ ಪ್ರೇರಕ ಶಕ್ತಿಯಾಗಿದ್ದರು. ಸ್ವಾಭಾವಿಕ ಅರಣ್ಯದಲ್ಲಿನ ಮರಗಳನ್ನು ಕಡಿದು ಅಲ್ಲಿ ಸಾಗುವಾನಿ ಬೆಳೆಸುವ  ಅರಣ್ಯ ಇಲಾಖೆಯ ನಿರ್ಧಾರವನ್ನು ಬಾಳೇಗದ್ದೆ ಗ್ರಾಮದ ಯುವಕರು ಪ್ರತಿಭಟಿಸಿದರು. ಅರಣ್ಯ ಇಲಾಖೆ ತನ್ನ ನಿರ್ಧಾರವನ್ನು ಬದಲಿಸದಾದಾಗ ಯುವಕರು ಸ್ಥಳೀಯರಲ್ಲಿ ಪರಿಸರ ಪ್ರಜ್ನೆ ಮೂಡಿಸಿ ಪರಿಸರವಾದಿಗಳನ್ನು ಸಂಘಟಿಸಿದರು. ಚಳವಳಿಗಾರರು ಬೀದಿ ನಾಟಕ, ಜಾನಪದ ನೃತ್ಯ, ಸ್ತಬ್ಧ ಚಿತ್ರಗಳನ್ನು ಸಾಧನಗಳಾಗಿ ಬಳಸಿಕೊಂಡು ಪರಿಸರದ ಉಳಿವಿನ ಬಗ್ಗೆ ಅರಿವು ಮೂಡಿಸಿದರು. ಅಲ್ಲದೇ ಪಾದ ಯಾತ್ರೆಗಳನ್ನು ಹಮ್ಮಿಕೊಂಡು ಅರಣ್ಯದ ಅಂಚಿನಲ್ಲಿ ವಾಸಿಸುವವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರು. ಸೆಪ್ಟೆಂಬರ್‌ 1983 ರಲ್ಲಿ ಅರಣ್ಯ ಇಲಾಖೆಯ ಮರ ಕಡಿಯುವ ಕೂಲಿಯವರು ಮರ ಕಡಿಯಲು ಮುಂದಾದಾಗ ಮರಗಳನ್ನು ಅಪ್ಪಿಕೊಂಡು ಪ್ರತಿಭಟಿಸಿದರು. ಇದರಿಂದಾಗಿ ಮರ ಕತ್ತರಿಸುವುದನ್ನು ಸರ್ಕಾರ ನಿಷೇಧಿಸಿತಲ್ಲದೇ ಸ್ಥಳೀಯ ಅಗತ್ಯಾನುಸಾರ ನಾಶಗೊಂಡ, ನಾಶದ ಅಂಚಿನಲ್ಲಿರುವ ಹಾಗೂ ಒಣಗಿದ ಮರಗಳನ್ನು ಮಾತ್ರ ತೆರವುಗೊಳಿಸಲು ಸೂಚಿಸಿತು. ಮುಂದೆ ಅಪ್ಪಿಕೊ ಚಳವಳಿ ಕೌಟುಂಬಿಕ ಅಥವ ಯುವಕ ಮಂಡಳಗಳ ನೆರವಿನಿಂದ ಪಾಳು ಭೂಮಿಯಲ್ಲಿ ಮರ ಬೆಳೆಸುವುದನ್ನು ಪ್ರೋತ್ಸಾಹಿಸಿತು. ಪರಿಣಾಮ 1984/1985 ರಲ್ಲಿ ಶಿರ್ಶಿ ಸುತ್ತಮುತ್ತ ೧.೨ ದಶಲಕ್ಷ ಗಿಡ-ಮರಗಳನ್ನು ಬೆಳೆಸಿ ಪರಿಸರ ಕಾಪಾಡಲಾಯಿತು. ಹೀಗೆ ಅಪ್ಪಿಕೊ ಚಳವಳಿಯು ವಿವೇಚಣಾಪೂರ್ವಕ ಬದಲಿ ಶಕ್ತಿ ಮೂಲಗಳನ್ನು ಉಪಯೋಗಿಸುವ ಮೂಲಕ ಅರಣ್ಯಗಳ ಮೇಲಿನ ಅವಲಂಬನೆಯನ್ನು ತಡೆಯಲು ಪ್ರಯತ್ನಿಸಿತು.

ಉ. ನರ್ಮದಾ ಬಚಾವೋ ಆಂಧೋಲನ: ನರ್ಮದಾ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಹರಿಯುವ ೧೩೧೨ ಕಿ. ಮೀ. ಉದ್ದದ ನದಿ. ಪಶ್ಚಿಮಾಭಿಮುಖವಾಗಿ ಹರಿಯುವ ನರ್ಮದಾ ನದಿ ತನ್ನ ಪಾತ್ರದಲ್ಲಿ ಅರಣ್ಯಮಯ ಬೆಟ್ಟ, ಫಲವತ್ತಾದ ಕೃಷಿ ಭೂಮಿ, ನಯನ ಮನೋಹರ ಜಲಪಾತಗಳು ಹಾಗೂ ಕಿರಿದಾದ ಕಲ್ಲು ಕಣಿವೆಗಳನ್ನು ಹೊಂದಿದೆ. ಇಂತಹ ನರ್ಮದಾ ನದಿಗೆ ಅನೇಕ ಬೃಹತ್‌ ಹಾಗೂ ಸಣ್ಣ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಲು ಜರುಗಿದ ಸಾಮಾಜಿಕ ಚಳವಳಿಯೇ ನರ್ಮದಾ ಬಚಾವೋ ಆಂಧೋಲನ. ಆರಂಭದಲ್ಲಿ ಸರ್ದಾರ್‌ ಸರೋವರ ಅಣೆಕಟ್ಟು ನಿರ್ಮಾಣದಿಂದ ತೊಂದರೆಗೊಳಗಾದ ಜನರಿಗೆ ಸೂಕ್ತ ಪುನರ್ವಸತಿ ಮತ್ತು ಸಾಕಷ್ಟು ಪರಿಹಾರದ ಬೇಡಿಕೆಗಳ ಈಡೇರಿಕೆಗೆ ಈ ಚಳವಳಿ ಸೀಮಿತವಾಗಿತ್ತು. ನಂತರ ಪರಿಸರ ಸಂರಕ್ಷಣೆ ಹಾಗೂ ನರ್ಮದಾ ಕಣಿವೆಯ ಪರಿಸರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಿತು. ಮೇಧಾ ಪಾಟ್ಕರ್‌ ಹಾಗೂ ಬಾಬಾ ಆಮ್ಟೆ ಮುಂದಾಳತ್ವದಲ್ಲಿ ಆದಿವಾಸಿಗಳು, ರೈತರು, ಪರಿಸರವಾದಿಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ನರ್ಮದಾ ಬಚಾವೋ ಆಂಧೋಲನದಲ್ಲಿ ಭಾಗವಹಿಸಿದರು. ಸರ್ದಾರ್‌ ಸರೋವರದ ಎತ್ತರವನ್ನು ಉದ್ದೇಶಿತ ೧೩೦ ಮೀಟರುಗಳಿಂದ ೮೮ ಮೀಟರಿಗೆ ನಿಗಧಿಪಡಿಸಲು ಹೋರಾಟಗಾರರು ಒತ್ತಾಯಿಸಿದರು. ಈ ಕುರಿತಾದ ವಿವಾದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ ಅಕ್ಟೋಬರ್‌ 2000 ದಲ್ಲಿ  ನೀಡಲಾದ ತೀರ್ಪಿನಂತೆ ಸರ್ದಾರ್‌ ಸರೋವರದ ಎತ್ತರವನ್ನು ೯೦ ಮೀಟರಿಗೆ ನಿಗಧಿಪಡಿಸಲಾಗಿದೆ. ಈ ಆಂಧೋಲನದ ಪರಿಣಾಮ ವಿಶ್ವ ಬ್ಯಾಂಕ್‌ ಸರ್ದಾರ್‌ ಸರೋವರ ಯೋಜನೆಯಿಂದ ಹಿಂದೆ ಸರಿಯಿತು. ನರ್ಮದಾ ಬಚಾವೋ ಆಂಧೋಲನ ಅಣೆಕಟ್ಟು ನಿರ್ಮಾಣವನ್ನು ತಡೆಯುವಲ್ಲಿ ಸಫಲಗೊಳ್ಳದಿದ್ದರೂ ದೇಶದೊಳಗೆ ಮತ್ತು ಹೊರಗೆ ಬೃಹತ್‌ ಅಣೆಕಟ್ಟೆ ನಿರ್ಮಾಣದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತು. ಗಮನಿಸಬೇಕಾದ ಅಂಶವೇನೆಂದರೆ ಈ ಆಂಧೋಲನವು ಸಂಪೂರ್ಣ ಸತ್ಯಾಗ್ರಹ ರಸ್ತೆ ತಡೆ, ಜಲ ಸಮರ್ಪಣೆ, ಉಪವಾಸದಂತಹ ಗಾಂಧಿವಾದಿ ಮಾರ್ಗದಲ್ಲಿ ಸಾಗಿತು ಎಂಬುದು. ಅಲ್ಲದೇ ನರ್ಮದಾ ಬಚಾವೋ ಆಂಧೋಲನಕ್ಕೆ ಅಂತರರಾಷ್ಟ್ರಿಯ ಬೆಂಬಲ ದೊರಕಿತು.

ಊ. ಪಶ್ಚಿಮ ಘಟ್ಟ ಉಳಿಸಿ ಅಭಿಯಾನ: ಗುಜರಾತಿನ ತಪತಿ ನದಿಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ದಕನ್‌ ಪ್ರಸ್ತಭೂಮಿ ಹಾಗೂ ಪಶ್ಚಿಮ ಕರಾವಳಿ ಮಧ್ಯದ ಘಟ್ಟ ಸರಣಿಯೇ ಪಶ್ಚಿಮ ಘಟ್ಟಗಳು. ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಘಟ್ಟ ಹಾಗೂ ನೀಲಗಿರಿ ಬೆಟ್ಟವೆಂದೂ ಕರೆಯಲಾಗುತ್ತದೆ. ಪಶ್ಚಿಮ ಘಟ್ಟಗಳು ಗುಜರಾತ್‌, ಮಹರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು  ಮತ್ತು ಕೇರಳ ರಾಜ್ಯಗಳಲ್ಲಿ ಹಾದು ಹೋಗುತ್ತವೆ. ದಟ್ಟ ಅರಣ್ಯ, ಹುಲ್ಲುಗಾವಲು ಹಾಗೂ ವಿಶ್ವದಲ್ಲೇ ವಿಶಿಷ್ಟ ಜೀವವೈವಿಧ್ಯತೆಯನ್ನು ಪಶ್ಚಿಮ ಘಟ್ಟವು ಒಳಗೊಂಡಿವೆ. ವಿವಿಧ ಅಭಿವೃದ್ಧಿ ಯೋಜನೆಗಳ ನಿರ್ಧಾರಗಳಿಂದ ಪಶ್ಚಿಮ ಘಟ್ಟದ ಪರಿಸರವು ಧಕ್ಕೆಗೊಳಗಾಗುತ್ತಾ ಬಂದಿತು. ಉದಾ: 1975 ರಲ್ಲಿ ಕರ್ನಾಟಕ ಸರ್ಕಾರ ಬೆಟ್ತಿ ಜಲ ವಿದ್ಯುತ್‌ ಯೋಜನೆ ಕೈಗೊಳ್ಳಲು ಮುಂದಾಯಿತು. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಶಿರ್ಶಿ ಹಾಗೂ ಯಲ್ಲಾಪುರ ತಾಲೂಕಿನ ಗ್ರಾಮಗಳು ಮುಳುಗಡೆಯಾಗಿ ಜನರು ತಮ್ಮ ಮೂಲ ನೆಲೆ ಕಳೆದುಕೊಳ್ಳುವ ಆತಂಕ ಎದುರಾಯಿತು. ಆಗ ಅಂಕೋಲಾ ಮತಕ್ಷೇತ್ರದ ಶಾಸಕಿ ಅನುಸೂಯಾ ಶರ್ಮಾ ನಾಯಕತ್ವದಲ್ಲಿ ಬೇಡ್ತಿ ವಿರೋಧಿ ಚಳವಳಿ ಚಾಲನೆ ಪಡೆಯಿತು. ಹೀಗೆ ಪಶ್ಚಿಮ ಘಟ್ಟದಲ್ಲಿನ ಹಲವು ರಾಜ್ಯ ಸರ್ಕಾರಗಳ ಕ್ರಮದಿಂದ ಪಶ್ಚಿಮ ಘಟ್ಟದ ಪರಿಸರ ಅಳಿವಿನಂಚನ್ನು ತಲುಪುವ ಆತಂಕ ಎದುರಾಯಿತು. 1985 ರಲ್ಲಿ ಪಶ್ಚಿಮ ಘಟ್ಟದ ಪರಿಸರ ರಕ್ಷಣೆಗಾಗಿ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ ಪ್ರಾರಂಬವಾಯಿತು. ಹಲವು ರಾಜ್ಯಗಳ ಜನರು ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಬದ್ಧತೆ ತೋರಲು ಸರ್ಕಾರಗಳನ್ನು ಒತ್ತಾಯಿಸಲು ಒಂದಾದರು. 1987/88 ರಲ್ಲಿ ಪಶ್ಚಿಮ ಘಟ್ಟ ಉಳಿಸಿ ಅಭಿಯಾನದಡಿ ಕನ್ಯಾಕುಮಾರಿಯಿಂದ ಗುಜರಾತಿನವರೆಗೆ ಪಾದಯಾತ್ರೆಯನ್ನು ಆಯೋಜಿಸಲಾಯಿತು. ಈ ನಡುವೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ. ಶಿವರಾಮ ಕಾರಂತರು ಕರ್ನಾಟಕದ ಕೆನರಾ ಲೋಕಸಭಾ ಕ್ಷೇತ್ರದಿಂದ ಪರಿಸರ ಹೋರಾಟದ ಭಾಗವಾಗಿ ಚುನಾವಣೆಗೆ ಸ್ಪರ್ಧಿಸಿದರು. ಇಂತಹ ಬೆಳವಣಿಗೆಯಿಂದ ದೇಶದಾದ್ಯಂತ ಪರಿಸರದ ಜಾಗೃತಿ ಮೂಡಿತಲ್ಲದೇ ಪರಿಸರ ವಿರೋಧಿ ನಿರ್ಧಾರಗಳು ನಿಯಂತ್ರಿಸಲ್ಪಟ್ಟವು. ಮುಂದೆ ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗಾಗಿ ವರದಿ ನೀಡಲು ಕೇಂದ್ರ ಸರ್ಕಾರ ಪರಿಸರ ತಜ್ನ ಮಾಧವ ಗಾಡ್ಗಿಳ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ದಿನಾಂಕ 31 ಆಗಸ್ಟ್‌ 2011 ರಂದು ಆ ಸಮಿತಿ ತನ್ನ ವರದಿ ನೀಡಿ ಪಶ್ಚಿಮ ಘಟ್ಟದ ಬಹು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲು ಹಾಗೂ ಪರಿಸರದ ಜೀವವೈವಿಧ್ಯಕ್ಕೆ ಹಾನಿಯಾಗದ ಅಭಿವೃದ್ಧಿ ಯೋಜನೆಗಳಿಗೆ ಮಾತ್ರವೇ ಅನುಮತಿ ನೀಡಬೇಕೆಂದು ಸೂಚಿಸಿತು. ಆದರೆ ಗಾಡ್ಗಿಳ್‌ ವರದಿ ಪಶ್ಚಿಮ ಘಟ್ಟದ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಪರಿಸರಕ್ಕೆ ಅತಿಯಾದ ಮಹತ್ವ ನೀಡಿದೆ ಎಂಬುದಾಗಿ ಟೀಕಿಸಲ್ಪಟ್ಟಿತು. ಪರಿಣಾಮ ಗಾಡ್ಗಿಳ್‌ ವರದಿಯಲ್ಲಿನ ದೋಷಗಳ ನಿವಾರಣೆಗಾಗಿ ಕೇಂದ್ರ ಸರ್ಕಾರ ಇಸ್ರೊ ಮಾಜಿ ಅಧ್ಯಕ್ಷರಾಗಿದ್ದ ಡಾ. ಕೆ. ಗ್ಕಸ್ತೂರಿ ರಂಗನ್‌ ನಾಯಕತ್ವದಲ್ಲಿ ಹತ್ತು ಜನರ ಸಮಿತಿಯೊಂದನ್ನು ರಚಿಸಿತು. 15 ಏಪ್ರಿಲ್‌ 2013 ರಂದು ಕಸ್ತೂರಿ ರಂಗನ್‌ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಯಿತು. ಈ ವರದಿಯು ಪ್ರತಿಶತ 36.49 ರಷ್ಟು ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ತಿಳಿಸಿದೆ. ಜೊತೆಗೆ ಆ ಪ್ರದೇಶದಲ್ಲಿ ಗಣಿಗಾರಿಕೆ, ಮರಳುಗಾರಿಕೆ, ಜಲ ವಿದ್ಯುತ್‌ ಯೋಜನೆ, ಅಣೆಕಟ್ಟು ನಿರ್ಮಾಣವನ್ನು ಕೈಗೊಳ್ಳದಂತೆ ಸೂಚಿಸಿದೆ. ಪಶ್ಚಿಮ ಘಟ್ಟದ ಜನರ ಚಟುವಟಿಕೆಗಳನ್ನು ಮಿತಿಗೊಳಪಡಿಸುವ ಈ ವರದಿಯ ಜಾರಿಗೆ ಸಾಕಷ್ಟು ವಿರೋಧ ಎದುರಾಗಿದೆ.

 

ಪರಿಸರ ಚಳವಳಿಗಳಿಗೆ ಕಾರಣಗಳು: ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಪರಿಸರ ಚಳವಳಿಗಳು ಭಾರತದಲ್ಲಿ ಇತ್ತೀಚಿನ ಬೆಳವಣಿಗೆ ಎನಿಸಿದೆ. ಸ್ವಾತಂತ್ರ್ಯೋತ್ತರ ಸಮಯದಲ್ಲಿ ಅದರಲ್ಲೂ ೧೯೭೦ ರ ದಶಕದಲ್ಲಿ ಪರಿಸರ ಚಳವಳಿಗಳು ಭಾರತದಲ್ಲಿ ಕಾಣಿಸಿಕೊಂಡವು. ಪರಿಸರ ಚಳವಳಿಗಳಿಗೆ ಪ್ರಧಾನ ಕಾರಣಗಳೆಂದರೆ

ಅ. ಪರಿಸರದ ಅವನತಿ: ಮಾನವನ ಸ್ವಾರ್ಥದಿಂದ ಪರಿಸರದ ಮೂಲಾಂಶಗಳಾದ ಜಲ, ವಾಯು, ಶಬ್ದ ಹಾಗೂ ಮಣ್ಣು ಮಲೀನಗೊಂಡಿದೆ. ಕೈಗಾರಿಕೆಗಳ ತ್ಯಾಜ್ಯ, ನಗರಗಳ ಕೊಳಚೆ, ಧಾರ್ಮಿಕ ನಂಬಿಕೆಗಳು ಇತ್ಯಾದಿ ಕಾರಣಗಳಿಂದ ಪರಿಸರದಲ್ಲಿನ ಜಲ ಮೂಲಗಳಾದ ಕೆರೆ, ಹಳ್ಳ, ನದಿಗಳು ಮಲೀನಗೊಂಡಿವೆ. ಜಲ ಮಾಲಿನ್ಯದಿಂದ ಶುದ್ಧ ಕುಡಿಯುವ ನೀರು ದೊರಕದಂತಾಗಿದೆ. ಕೈಗಾರಿಕೆಗಳು ಹಾಗೂ ವಾಹನಗಳು ಹೊರ ಸೂಸುವ ಹೊಗೆಮತ್ತು ಮಾನವನ ಉರುವಲು ಪ್ರಕ್ರಿಯೆಯಿಂದ ವಾಯು ಮಾಲಿನ್ಯ ಉಂಟಾಗಿದ್ದು ಶುದ್ಧ ಗಾಳಿ ಉಸಿರಾಟಕ್ಕೆ ಸಿಗದಂತಾಗಿದೆ. ನಗರವಾಸಿಗಳಂತೂ ವಾಯು ಮಾಲಿನ್ಯದಿಂದ ನಾನಾ ರೋಗಗಳಿಗೆ ಗುರಿಯಾಗಬೇಕಿದೆ. ಇದರೊಡನೆ ವಾಹನ, ಬೃಹತ್‌ ಯಂತ್ರಗಳು, ಪಟಾಕಿ ಹಚ್ಚುವಿಕೆಯಿಂದ ಶಬ್ದ ಮಾಲಿನ್ಯ ಮಿತಿ ಮೀರಿದೆ. ಶಾಂತ ಪರಿಸರ ನಗರಗಳಲ್ಲಿ ಮಾತ್ರವಲ್ಲದೇ ಗ್ರಾಮಗಳಲ್ಲೂ ಮಾಯವಾಗುತ್ತಿದೆ. ರಸಾಯನಿಕ ಗೊಬ್ಬರ, ನೀರಾವರಿ ಅವಲಂಬನೆ ಹಾಗೂ ಅತಿಯಾದ ಇಳುವರಿ ನಿರೀಕ್ಷೆಯಿಂದ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಪರಿಣಾಮ ಕ್ರಮೇಣ ಹಸಿರು ಮಾಯವಾಗುತ್ತದೆ. ಹೀಗೆ ಪರಿಸರದ ಹಲವು ಮೂಲಾಂಶಗಳು ಮಿತಿ ಮೀರಿ ಮಾಲಿನ್ಯಕ್ಕೊಳಗಾಗುವುದನ್ನು ತಡೆಯಲು ಪರಿಸರ ಚಳವಳಿ ಜರುಗುತ್ತವೆ. ಉದಾ: ಗಂಗಾ ಉಳಿಸಿ ಚಳವಳಿ.

ಆ. ಅರಣ್ಯ ನಾಶ: ಸರ್ಕಾರಗಳು ಆರ್ಥಿಕಾಭಿವೃದ್ಧಿ ಕಾರಣಕ್ಕೆ ಪರಿಸರದ ಭಾಗವಾದ ಅರಣ್ಯಗಳನ್ನು ನಾಶಗೊಳಿಸಲು ನಿರ್ಧರಿಸುತ್ತವೆ. ರಸ್ತೆ, ರೈಲು ಮಾರ್ಗ, ಅಣೆಕಟ್ಟು, ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾದಾಗ ಅಪಾರ ಪ್ರಮಾಣದ ಅರಣ್ಯ ಹಾಗೂ ಸಸ್ಯ ಸಂಪತ್ತು ನಿರ್ಮೂಲನೆಗೊಳ್ಳುತ್ತದೆ. ಅರಣ್ಯ ನಾಶ ಮಣ್ಣಿನ ಸವೆತಕ್ಕೆ ಕಾರಣವಾಗಿ ಫಲವತ್ತತೆ ಕಡಿಮೆಯಾಗುತ್ತದೆ. ಹೀಗಾಗಿ ಅರಣ್ಯ ನಾಶಕ್ಕೆ ಸರ್ಕಾರಗಳು ಮುಂದಾದಾಗ ಪರಿಸರವಾದಿಗಳು ಸಂಘಟಿತರಾಗಿ ಪರಿಸರ ಚಳವಳಿ ಹೂಡುತ್ತಾರೆ. ಉದಾ: ಚಿಪ್ಕೊ ಚಳವಳಿ.

ಇ. ನೈಸರ್ಗಿಕ ಸಂಪನ್ಮೂಲಗಳ ನಿಯಂತ್ರಣ: ಪರಿಸರವು ವೈವಿಧ್ಯಮಯ ಸಂಪನ್ಮೂಲಗಳ ಆಗರ. ಸಸ್ಯ, ಪ್ರಾಣಿ, ಪಕ್ಷಿ, ಜಲ, ವಾಯು ಸಂಪನ್ಮೂಲಗಳು ಪರಿಸರದ ಅವಿಭಾಜ್ಯ ಅಂಗಗಳು. ಇವುಗಳಲ್ಲಿ ಯಾವುದೇ ಒಂದು ಸಂಪನ್ಮೂಲ ಕಳೆದುಕೊಂಡರೆ ಪರಿಸರದ ಅಸಮತೋಲನ ಉಂಟಾಗುತ್ತದೆ. ಹೀಗಾಗಿ ಪರಿಸರದಲ್ಲಿನ ವಿವಿಧ ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆಯಾಗುವ ಸನ್ನಿವೇಶದಲ್ಲಿ ಪರಿಸರ ಚಳವಳಿಗೆ ಮನುಕುಲ ಮುಂದಾಗುತ್ತದೆ. ಉದಾ: ಕೇರಳದ ಸೈಲೆಂಟ್‌ ವ್ಯಾಲಿ ಅಥವ ಶಾಂತ ಕಣಿವೆ ಚಳವಳಿ.

ಈ. ಪರಿಸರ ನಿರ್ವಹಣೆಯ ಉದಾಸೀನ: ಸುವ್ಯವಸ್ಥಿತ ಪರಿಸರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳು ಮುಂದಾಗಬೇಕು. ನಗರಗಳಲ್ಲಿನ ಕೊಳಚೆ ಹಾಗೂ ತ್ಯಾಜ್ಯಗಳ ನಿರ್ವಹಣೆಯಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಮಹಾನಗರಗಳಲ್ಲಿನ ಆಡಳಿತ ವರ್ಗ ತೆಗೆದುಕೊಳ್ಳಬೇಕು. ಕೊಳಗೇರಿಗಳ ನಿರ್ಮೂಲನೆ, ಕೊಳಚೆ ನೀರಿನ ಸಂಸ್ಕರಣೆ, ವೈಜ್ನಾನಿಕ ಕಸ ವಿಲೇವಾರಿ ಮೂಲಕ ನಗರಗಳಲ್ಲಿ ಸುಂದರ ಪರಿಸರವನ್ನು ರೂಪಿಸಬೇಕು. ಜೊತೆಗೆ ಸಾಕಷ್ಟು ಮರಗಳು ನೆಡಲು ಮತ್ತು ಉದ್ಯಾನವನಗಳನ್ನು ನಿರ್ವಹಿಸಲು ಪ್ರಯತ್ನಿಸಬೇಕು. ಆಗ ನಗರವಾಸಿಗಳು ಉತ್ತಮ ಜೀವನ ನಡೆಸಬಹುದು. ಆದರೆ ಬಹುತೇಕ ಸನ್ನಿವೇಶದಲ್ಲಿ ಜನರಿಗೆ ಸುಂದರ ಪರಿಸರವನ್ನು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತವೆ ಉದಾ: ಬೆಂಗಳೂರಿನಲ್ಲಿ ಜರುಗಿದ ಚಳವಳಿ. ಅರಣ್ಯದಲ್ಲಿ ಕಾಡ್ಗಿಚ್ಚು ಕಂಡು ಬಂದಾಗ ಸಸ್ಯ ಮತ್ತು ಪ್ರಾಣಿ ಸಂಕುಲ ತೊಂದರೆಗೊಳಗಾಗುವ ಮೊದಲೇ ಬೆಂಕಿ ನಂದಿಸಲು ಸರ್ಕಾರ ಸಮರೋಪಾದಿಯಲ್ಲಿ ಮುಂದಾಗಬೇಕು. ಆದರೆ ಸರ್ಕಾರಗಳು ಕಾಡ್ಗಿಚ್ಚನ್ನು ತುರ್ತು ಎಂಬುದಾಗಿ ಭಾವಿಸದೇ ಅರಣ್ಯ ಸುಟ್ಟು ಬೂದಿಯಾಗುತ್ತದೆ. ಇದರಿಂದಾಗಿ ಪರಿಸರವಾದಿಗಳು ಚಳವಳಿ ಮಾರ್ಗ ತುಳಿಯುತ್ತಾರೆ.

ಉ. ಸಾಮಾಜಿಕ ಹಾಗೂ ಆರ್ಥಿಕ ಆತಂಕ: ಜನರ ಸಾಮಾಜಿಕ ಹಾಗೂ ಆರ್ಥಿಕ ಮಟ್ಟವು ಸುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಸರ್ಕಾರ ತಮ್ಮ ಪರಿಸರದಲ್ಲಿ ಗಣಿಗಾರಿಕೆ, ಬೃಹತ್‌ ಕೈಗಾರಿಕೆ, ಅಣೆಕಟ್ಟು ನಿರ್ಮಿಸಲು ನಿರ್ಧರಿಸಿದಾಗ ಅಲ್ಲಿನ ಜನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಆತಂಕಕ್ಕೆ ದೂಡಲ್ಪಡುತ್ತದೆ. ಭೂ ಒಡೆಯರು ಭೂ ಹೀನರಾಗುವ, ಮನೆ ಕಳೆದುಕೊಂಡು ಸೂರಿಲ್ಲದವರಾಗುವ, ಕೃಷಿ ಭೂಮಿ ಕಳೆದುಕೊಂಡು ಕೈಗೆಲಸ ಇಲ್ಲದಾಗುವ ಸನ್ನಿವೇಶ ಎದುರಾಗುತ್ತದೆ. ಪುನರ್ವಸತಿ ಸಮಯದಲ್ಲಿ ನೆರೆಹೊರೆ ಕಳೆದುಕೊಳ್ಳುವ, ಹಿಂದಿನ ಸಾಮಾಜಿಕ ಸ್ಥಾನಮಾನ ದೊರೆಯದಾಗುವ, ಪೂರ್ವಿಕರ ನೆಲೆ ಕಳೆದುಕೊಳ್ಳುವ ಸಾಮಾಜಿಕ ತುಮುಲಕ್ಕೆ ಜನರು ಒಳಗಾಗುವರು. ಇದರಿಂದ ಯೋಜನೆಗಳ ಮುನ್ಸೂಚನೆ ದೊರೆಯುತ್ತಿದ್ದಂತೆ ಸಂಘಟಿತರಾಗಿ ಪರಿಸರವಾದಿ ನಾಯಕರು, ಸಾಮಾಜಿಕ ಕಾರ್ಯಕರ್ತರು ಅಥವ ಧಾರ್ಮಿಕ ಮುಖಂಡರ ನಾಯಕತ್ವದಲ್ಲಿ ಚಳವಳಿಗೆ ಇಳಿಯುತ್ತಾರೆ. ಉದಾ; ಉತ್ತರ ಕನ್ನಡ ಜಿಲ್ಲೆಯ ಕ್ರೊಜೆಂಟ್ರಿಕ್ಸ್.

ಊ. ಪರಿಸರದ ಜಾಗೃತಿ: ಪ್ರಸ್ತುತ ಜನರಲ್ಲಿ ಸಾಕಷ್ಟು ಪರಿಸರ ಪ್ರಜ್ನೆ ಕಂಡು ಬರುತ್ತಿದೆ. ಅಭಿವೃದ್ಧಿ ನೆಪವೊಡ್ಡಿ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಲು ಮುಂದಾದಾಗ ಜನರು ಮೌನವಾಗಿ ಸಮ್ಮತಿಸುವುದಿಲ್ಲ. ಜೊತೆಗೆ ಅಧಿಕ ಪರಿಹಾರ ಹಾಗೂ ಪುನರ್ವಸತಿ ಭರವಸೆ ನೀಡಿದರೂ ಜನರು ಆಯೋಜನೆ ತಮ್ಮ ಪರಿಸರಕ್ಕೆ ಪೂರಕವೇ ಎಂಬುದನ್ನು ಚಿಂತಿಸಲು ಶಕ್ತರಾಗಿದ್ದಾರೆ. ಯೋಜನಾ ನಿರಾಶ್ರಿತರು ಸಮ್ಮತಿ ನೀಡಿದರೂ ಇತರ ಜನರು ಚಳವಳಿ ಕೈಗೊಂಡು ಪರಿಸರಕ್ಕೆ ಮಾರಕವಾಗುವ ನಿರ್ಧಾರಗಳನ್ನು ತಡೆಯಲು ಮುಂದಾಗುತ್ತಾರೆ. ಸಮೂಹ ಮಾಧ್ಯಮಗಳು ಜನರಲ್ಲಿ ಪರಿಸರ ಪ್ರಜ್ನೆ ಮೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ನಿರ್ದಿಷ್ಟ ಯೋಜನೆಯ ಅನುಕೂಲ ಹಾಗೂ ಅನಾನುಕೂಲಗಳ ಮೇಲೆ ಬೆಳಕು ಚೆಲ್ಲುವ ಮಾಧ್ಯಮಗಳು ಜನರು ಏಕಾಭಿಪ್ರಾಯ ತಾಳಿ ಹೋರಾಟಕ್ಕಿಳಿಯಲು ಸಹಾಯ ಮಾಡುತ್ತವೆ. ಉದಾ: ನರ್ಮದಾ ಬಚಾವೋ ಆಂಧೋಲನ.

 

ಪರಿಸರ ಚಳವಳಿಗಳ ಪರಿಣಾಮಗಳು: ಭಾರತದಲ್ಲಿನ ಪರಿಸರ ಚಳವಳಿಗಳು ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಬೀರಿವೆ. ಜನರ ನಿತ್ಯ ಜೀವನದಿಂದ ಹಿಡಿದು ರಾಜಕಿಯ ವ್ಯವಸ್ಥೆಯನ್ನು ಪರಿಸರ ಚಳವಳಿಗಳು ಪ್ರಭಾವಿಸಿವೆ. ಪರಿಸರ ಚಳವಳಿಯ ಪ್ರಮುಖ ಪರಿಣಾಮಗಳನ್ನು ಕೆಳಗಿನಂತೆ ವಿವರಿಸಬಹುದಾಗಿದೆ.

ಅ. ಪರಿಸರಕ್ಕೆ ಸಂವಿಧಾನಾತ್ಮಕ ಸ್ಥಾನ: ಭಾರತದ ಬೃಹತ್‌ ಸಂವಿಧಾನದಲ್ಲಿ ಪರಿಸರ ಸಂಬಂಧಿತ ವಿಚಾರಗಳನ್ನು ವ್ಯಾಪಕವಾಗಿ ಪ್ರಸ್ತಾಪಿಸಿರಲಿಲ್ಲ. 1970 ರ ದಶಕದಲ್ಲಿನ ಪರಿಸರ ಚಳವಳಿಗಳು ಪರಿಸರಕ್ಕೆ ಸಂವಿಧಾನಾತ್ಮಕ ಸ್ಥಾನ ನೀಡುವ ಅಗತ್ಯವನ್ನು ಪ್ರತಿಪಾದಿಸಿದವು. ಪರಿಣಾಮ 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿ ಮೂಲಕ ಪರಿಸರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳು ಸಂವಿಧಾನಾತ್ಮಕ ಸ್ತಾನ ಪಡೆದವು. ರಾಷ್ಟ್ರ ನೀತಿ ನಿರ್ದೇಶಕ ತತ್ವಗಳ ನಾಲ್ಕನೇ ಬಾಗದಲ್ಲಿ 48 [A] ಉಪ ವಿಧಿಯಲ್ಲಿ ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂಬ ವಿಚಾರವನ್ನು ಸೇರಿಸಲಾಯಿತು. ರಾಜ್ಯ ಪಟ್ಟಿಯ ವಿಷಯವಾಗಿದ್ದ ಅರಣ್ಯವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿದ್ದು ಪ್ರಸ್ತುತ ಅರಣ್ಯ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಬೇಕಾದ ಅನಿವಾರ್ಯತೆ ಉಂಟಾಯಿತು. ಅಲ್ಲದೇ ಮೂಲಭೂತ ಕರ್ತವ್ಯಗಳ 4 [A] ಭಾಗದ 51 [A] ವಿಧಿಯಲ್ಲಿ ಅರಣ್ಯ, ಸರೋವರ, ನದಿಗಳು ಹಾಗೂ ವನ್ಯ ಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವೆಂದು ತಿಳಿಸಲಾಯಿತು. ಹೀಗೆ ಸಂವಿಧಾನಕ್ಕೆ ತರಲಾದ 42 ನೇ ತಿದ್ದುಪಡಿ ಪರಿಸರಕ್ಕೆ ಸಂಬಂಧಿಸಿದ ಮೇಲಿನ ಅಂಶಗಳಿಗೆ ಸಂವಿಧಾನಾತ್ಮಕ ಸ್ಥಾನ ಕಲ್ಪಿಸಿ ಪರಿಸರ ಸಂರಕ್ಷಣೆಗೆ ಪ್ರಯತ್ನಿಸಿದೆ.

ಆ. ಪರಿಸರ ಸಂಬಂಧಿತ ಶಾಸನಗಳ ಜಾರಿ: ಪರಿಸರ ಚಳವಳಿಗಳು ಪರಿಸರದ ನಾಶಕ್ಕೆ  ಕಾರಣವಾದ ನಾನಾ ಅಂಶಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆದವು. ಹೀಗಾಗಿ ಸರ್ಕಾರಗಳು ಪರಿಸರದ ಭಾಗವಾದ ಸಸ್ಯ, ಜಲ, ವಾಯು, ವನ್ಯಜೀವಿಗಳ ಸಂರಕ್ಷಣೆಗಾಗಿ ಅಂದಿನ ಅಗತ್ಯಾನುಸಾರ ಹಲವು ಕಾನೂನುಗಳನ್ನು ಜಾರಿಗೊಳಿಸುತ್ತಾ ಬಂದಿವೆ. ಉದಾ: 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ, 1974ರ ಜಲ ಮಾಲಿನ್ಯ ತಡೆ ಕಾಯಿದೆ, 1980ರ ಅರಣ್ಯ ಸಂರಕ್ಷಣಾ ಕಾಯಿದೆ, 1981ರ ವಾಯು ಮಾಲಿನ್ಯ ನಿಯಂತ್ರಣ ಕಾಯಿದೆ, 1986ರ ಪರಿಸರ ಸಂರಕ್ಷಣಾ ಕಾಯಿದೆ, 2002ರ ಜೀವ ವೈವಿಧ್ಯ ಕಾಯಿದೆಗಳು ಪರಿಸರ ರಕ್ಷಣೆಗೆ ಪೂರಕವಾದ ಶಾಸನಗಳಾಗಿವೆ. ಈ ವಿವಿಧ ಕಾಯಿದೆಗಳು ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಪರಿಸರ ನಾಶವನ್ನು ತಡೆಯಲು ನೆರವಾಗಿವೆ. 2010 ರ ರಾಷ್ಟ್ರಿಯ ಹಸಿರು ನ್ಯಾಯಾಧಿಕರಣ ಕಾಯಿದೆ ಪರಿಸರ ಸಂಬಂಧಿತ ವ್ಯಾಜ್ಯಗಳ ಶೀಘ್ರ ವಿಲೇವಾರಿಗಾಗಿ ರಾಷ್ಟ್ರಿಯ ಹಸಿರು ನ್ಯಾಯ ಮಂಡಳಿ [NGT]ಯನ್ನು ಸ್ಥಾಪಿಸಲು ಅವಕಾಶ ಮಾಡಿದೆ.

ಇ. ಪ್ರತ್ಯೇಕ ಸಚಿವಾಲಯದ ಪ್ರಾರಂಭ: ಭಾರತದ ಕೇಂದ್ರ ಸರ್ಕಾರದ ವಿಜ್ನಾನ ಹಾಗೂ ತಂತ್ರಜ್ನಾನ ಸಚಿವಾಲಯದಡಿ ರಾಷ್ಟ್ರೀಯ ಪರಿಸರ ಸಮಿತಿ ಸ್ಥಾಪನೆಗೊಂಡು ಕಾರ್ಯಾಚರಿಸುತ್ತಿತ್ತು. 1980 ರಲ್ಲಿ ಪರಿಸರ ಇಲಾಖೆ ಆರಂಭಿಸಲಾಯಿತು.  ಮುಂದೆ 1985 ರಲ್ಲಿ ಪರಿಸರ ರಕ್ಷಣೆಗಾಗಿ ಪರಿಸರ ಮತ್ತು ಅರಣ್ಯ ಸಚಿವಾಲಯ ಪ್ರತ್ಯೇಕವಾಗಿ ಸ್ಥಾಪನೆಗೊಂಡಿತು. ಮೇ 2014 ರಿಂದ ಈ ಸಚಿವಾಲಯವನ್ನು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವೆಂದು ಪುನರ್ನಾಮಕರಣಗೊಳಿಸಲಾಗಿದೆ. ದೇಶದ ಪರಿಸರ ವ್ಯವಸ್ಥೆಯ ರಕ್ಷಣೆ ಈ ಸಚಿವಾಲಯದ ಹೊಣೆಗಾರಿಕೆಯಾಗಿದೆ. ಇದರೊಡನೆ ಪ್ರತಿ ರಾಜ್ಯ ಸರ್ಕಾರದ ಅರಣ್ಯ ಇಲಾಖೆಗಳು ದೇಶದ ಪರಿಸರ ಯೋಜನೆ ರೂಪಿಸಿ ಅನುಷ್ಟಾನಗೊಳಿಸುವಲ್ಲಿ ನೆರವಾಗಿವೆ.

ಈ. ಪರಿಸರ ಜಾಗೃತಿಯ ವಿಸ್ತರಣೆ: ಭಾರತದಲ್ಲಿನ ವಿವಿಧ ಜನಪ್ರೀಯ ಪರಿಸರ ಚಳವಳಿಗಳು ಜನ ಸಮುದಾಯದಲ್ಲಿ ಪರಿಸರ ಪ್ರಜ್ನೆಯನ್ನು ಹೆಚ್ಚಿಸುವಲ್ಲಿ ಪ್ರಭಾವ ಬೀರಿವೆ. ಉತ್ತರ ಭಾರತದಲ್ಲಿನ ಚಿಪ್ಕೊ ಚಳವಳಿ ದೇಶದಾದ್ಯಂತ ಮರಗಳ ಸಂರಕ್ಷಣೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿತು. ಅಲ್ಲದೇ ನರ್ಮದಾ ಬಚಾವೋ ಚಳವಳಿ ಬೃಹತ್‌ ಅಣೆಕಟ್ಟುಗಳ ನಿರ್ಮಾಣದ ಸಾಧಕ ಬಾಧಕಗಳ ಕುರಿತು ಜನರಲ್ಲಿ ಅರಿವು ಮೂಡಿಸಿತು. ಗಂಗಾ ಉಳಿಸಿ ಹೋರಾಟ ಜಲ ಮೂಲಗಳ ಅವನತಿಗೆ ಕಾರಣವಾಗುವ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಜಲ ಸಂರಕ್ಷಣೆಯ ಚಿಂತನೆಗೆ ದೇಶದ ಜನರನ್ನು ಪ್ರೆರೇಪಿಸಿತು. ಚಳವಳಿಗಳು ತಮ್ಮ ಪರಿಸರಕ್ಕೆ ಧಕ್ಕೆಯಾಗುವ ಸರ್ಕಾರದ ತೀರ್ಮಾನಗಳನ್ನು ವಿರೋಧಿಸಲು ಜನರನ್ನು ಸಿದ್ಧಗೊಳಿಸುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು. ಉದಾ: ಗದಗ ಜಿಲ್ಲೆಯ ಜನರು ಕಪ್ಪತಗುಡ್ಡದ ಪರಿಸರದ ಸಂರಕ್ಷಣೆಗಾಗಿ ಹೋರಾಟದ ಹಾದಿ ಅನುಸರಿಸಲು ಮುಂದಾಗಿದ್ದುದು. ಒಟ್ಟಾರೆ ಪರಿಸರ ಚಳವಳಿಗಳು ಜನರಲ್ಲಿ ತಮ್ಮ ಪರಿಸರದ ಕಾಳಜಿಯತ್ತ ಚಿಂತಿಸುವಷ್ಟು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ಬೀರಿವೆ.

ಉ. ನ್ಯಾಯಾಲಯಗಳ ಪರಿಸರ ಸ್ನೇಹಿ ತೀರ್ಪುಗಳಿಗೆ ಹಾದಿ: ಪರಿಸರ ಚಳವಳಿಗಳು ನ್ಯಾಯಾಲಯಗಳು ಪರಿಸರಕ್ಕೆ ಪೂರಕವಾದ ತೀರ್ಪು ನೀಡಲು ಪ್ರಭಾವ ಬೀರುತ್ತವೆ. 1987 ರ ದಾಮೋದರ ರಾವ್‌ V/S ಮುನ್ಸಿಪಲ್‌ ಕಾರ್ಪೊರೇಶನ್‌ ಪ್ರಕರಣದಲ್ಲಿ ವಾತಾವರಣವನ್ನು ನಾಶಗೊಳಿಸುವ ಪರಿಸರ ಮಾಲಿನ್ಯದ ಕ್ರಮಗಳು ವಿಧಿ ೨೧ ರಲ್ಲಿ ತಿಳಿಸಲಾದ ಜೀವಿಸುವ ಹಕ್ಕಿನ ಉಲ್ಲಂಘನೆಗೊಳಿಸಿದಂತೆ ಎಂಬುದಾಗಿ ತೀರ್ಮಾನಿಸಿತು. 1991 ರ ಸುಭಾಶ್ಕುಮಾರ್‌ V/S ಬಿಹಾರ್‌ ರಾಜ್ಯ ಮತ್ತು ಇತರರು ಪ್ರಕರಣದಲ್ಲಿ ಮೂಲಭೂತ ಹಕ್ಕಾದ ಜೀವಿಸುವ ಹಕ್ಕಿನಡಿ ಸರ್ವೋಚ್ಛ ನ್ಯಾಯಾಲಯ ಮಾಲಿನ್ಯ ರಹಿತ ಪರಿಸರ ಹೊಂದುವ ಹಕ್ಕನ್ನು ಸೃಷ್ಟಿಸಿತು. ೆಂ. ಸಿ. ಮೆಹತಾ V/Sಭಾರತ ಸರ್ಕಾರ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ದೇಶದಾದ್ಯಂತ ಚಲನಚಿತ್ರ ಮಂದಿರಗಳು ಪ್ರತಿ ಪ್ರದರ್ಶನದ ವೇಳೆ  ಉಚಿತ ಪರಿಸರ ಸಂಬಂಧಿತ ದೃಶ್ಯಗಳನ್ನು ಮತ್ತು ದೂರದರ್ಶನ ನಿತ್ಯ ಐದರಿಂದ ಏಳು ನಿಮಿಷಗಳ ಪರಿಸರ ಜಾಗೃತಿ ಕಾರ್ಯಕ್ರಮ ಬಿತ್ತರಿಸಲು ನಿರ್ದೇಶನ ನೀಡಿತು. ಇದರೊಡನೆ ನ್ಯಾಯಾಲಯದ ನಿರ್ದೇಶನದಂತೆ ಪರಿಸರ ಅಧ್ಯಯನವು ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಕಡ್ಡಾಯ ಪಠ್ಯವಸ್ತುವಾಗಿದೆ. ವಾಯು ಮಾಲಿನ್ಯಕ್ಕೆ ಕಾರಣವಾಗುವ ಧೂಮಪಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲು ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿತ್ತು. 2014 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಪ್ರಾಣಿ ಹಿಂಸೆಯನ್ನು ತಡೆಯಲು ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಲು ತೀರ್ಪು ನೀಡಿತು.

ಊ. ಪರಿಸರ ಸಂಬಂಧಿತ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಟಾನ: ಪರಿಸರ ಚಳವಳಿಗಳ ಪರಿಣಾಮ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಪರಿಸರಕ್ಕೆ ಪೂರಕವಾದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಟಾನಕ್ಕೆ ತಂದಿವೆ. ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷ ಜೂನ್‌ ಐದರಂದು ಆಚರಿಸಿ ಪರಿಸರ ಸಂರಕ್ಷಣೆಗೆ ಶ್ರಮಿಸಿದವರನ್ನು ಗೌರವಿಸಲಾಗುತ್ತಿದೆ. ಇದರಿಂದ ಪರಿಸರ ರಕ್ಷಣೆಗೆ ಶ್ರಮಿಸಲು ಜನರು ಪ್ರೇರೇಪಣೆಗೊಂಡು ಪರಿಸರ ಕಾಳಜಿ ಹೆಚ್ಚುತ್ತಿದೆ. ಗಂಗಾ ನದಿಯ ಮಾಲಿನ್ಯವನ್ನು ನಿಯಂತ್ರಿಸಲು 1986 ರಲ್ಲಿ ಅಂದಿನ ಪ್ರಧಾನಿ ರಾಜೀವ್ಗಾಂಧಿ ಗಂಗಾ ಕ್ರಿಯಾ ಯೋಜನೆ ಜಾರಿಗೊಳಿಸಿ 462 ಕೋಟಿ ಹಣವನ್ನು ಮೀಸಲಾಗಿಟ್ಟಿದ್ದರು. ಇಂದಿಗೂ ಕೇಂದ್ರ ಸರ್ಕಾರ ಗಂಗಾ ಶುದ್ಧೀಕರಣಕ್ಕಾಗಿ [NMCG] ಮೂಲಕ ಗಂಗಾ ಪರಿಸರವನ್ನು ಸಂರಕ್ಷಿಸಲು ಶ್ರಮಿಸುತ್ತಿದೆ. ತಾಜ್ಮಹಲ್ನ ಅಮೃತ ಶಿಲೆಗಳ ಅವನತಿಗೆ ಕಾರಣವಾಗಬಲ್ಲ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ದೆಹಲಿ ಸರ್ಕಾರವು ಮಿತಿಮೀರಿದ ವಾಯು ಮಾಲಿನ್ಯ ತಡೆಯಲು ಸಮ ಹಾಗೂ ಬೆಸ ಸಂಖೆಯ ವಾಹನಗಳನ್ನು ರಸ್ತೆಗಿಳಿಸುವ ನಿರ್ಣಯದ ಮೂಲಕ ವಿನೂತನ ಪ್ರಯತ್ನ ಕೈಗೊಂಡಿದ್ದು ಗಮನಾರ್ಹ ಸಂಗತಿ. ಇತ್ತೀಚೆಗೆ ಪ್ಲಾಸ್ಟಿಕ್‌ ಬಳಕೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ನಿಷೇಧಿಸಿ ಸಾರ್ವಜನಿಕರೂ ಕೂಡ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕೈಬಿಡಲು ಕ್ರಮ ಕೈಗೊಳ್ಳಲಾಗಿದೆ. 2 ಅಕ್ಟೋಬರ್‌ 2014 ರಿಂದ ಪರಿಸರದ ನೈರ್ಮಲ್ಯ ರಕ್ಷಣೆಗಾಗಿ ಸ್ವಚ್ಛ ಭಾರತ ಅಭಿಯಾನವನ್ನು ಜಾರಿಗೊಳಿಸಲಾಗಿದೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources