ಭಾರತದಲ್ಲಿ ಮಹಿಳಾ ಚಳವಳಿಗಳಿಗೆ ಕಾರಣಗಳು, ಪ್ರಮುಖ ಮಹಿಳಾ ಚಳವಳಿಗಳು ಮತ್ತು ಅವುಗಳ ಪರಿಣಾಮಗಳು
ಪೀಠಿಕೆ: ವೈಯಕ್ತಿಕವಾಗಿ ಅಥವ ಸಾಮೂಹಿಕವಾಗಿ ಸಮಾಜದಲ್ಲಿ ಬದಲಾವಣೆ ತರಲು ನಡೆಸುವ ಪ್ರಯತ್ನವನ್ನು ಸಾಮಾಜಿಕ ಚಳವಳಿ ಎನ್ನಬಹುದು. ಸಾಮಾನ್ಯವಾಗಿ ಸಮಾಜದ ಭಾಗವಾಗಿರುವ ಒಂದು ಗುಂಪಿನ ಬದಲಾವಣೆಯನ್ನು ಉತ್ತೇಜಿಸಲು ಅಥವ ವಿರೋಧಿಸಲು ಸಾಮಾಜಿಕ ಚಳವಳಿಗಳು ಜರುಗುತ್ತವೆ. ಅಂಡ್ರಸನ್ ಮತ್ತು ಪಾರ್ಕರ್ ಪ್ರಕಾರ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಅಥವ ಭಾಗಶಃ ಬದಲಾವಣೆ ತರಲು ಕಾಲ ಹಾಗು ಗುರಿಗೆ ತಕ್ಕಂತೆ ಹಂತ ಹಂತವಾಗಿ ರೂಪುಗೊಂಡ ಬಹುಸಂಖ್ಯಾತರ ವರ್ತನೆಗಳೇ ಸಾಮಾಜಿಕ ಚಳವಳಿ. ಅಂತೆಯೇ ಲಂಡ್ಬರ್ಗ್ ಹಾಗು ಇತರರು ವಿಶಾಲ ಸಮಾಜದಲ್ಲಿನ ಧೋರಣೆ, ವರ್ತನೆ ಅಥವ ಸಾಮಾಜಿಕ ಸಂಬಂಧಗಳನ್ನು ಬದಲಾಯಿಸಲು ತೊಡಗಿರುವ ಸ್ವಯಂ ಪ್ರೇರಿತ ಜನ ಸಮೂಹವನ್ನುಳ್ಳ ಸಂಘಟನೆಗಳ ಪ್ರಯತ್ನಗಳೇ ಸಾಮಾಜಿಕ ಚಳವಳಿ ಎಂದಿರುವರು. ಒಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಜನಸಮೂಹ ನಡೆಸುವ ಪ್ರಯತ್ನಗಳನ್ನು ಸಾಮಾಜಿಕ ಚಳವಳಿ ಎನ್ನಲಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಬದಲಾವಣೆವಿರೋಧಿಸಲು, ಅಲ್ಪ ಬದಲಾವಣೆ ತರಲು ಅಥವ ಸಂಪೂರ್ಣ ಬದಲಾವಣೆ ಸಾಕಾರಗೊಳಿಸಲು ಸಾಮಾಜಿಕ ಚಳವಳಿಗಳು ಜರುಗುತ್ತವೆ. ಹೀಗೆ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಚಳವಳಿಗಳನ್ನು ಆರಂಭದಲ್ಲಿ ಸುಧಾರಣಾ ಚಳವಳಿ ಎಂದು ಕರೆದರೆ ಬಳಿಕ ಕ್ರಾಂತಿಕಾರಿ ಚಳವಳಿ ಎಂತಲೂ ಗುರುತಿಸಲಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕಿಯ ವ್ಯವಸ್ಥೆಯ ಬದಲಾವಣೆಗೆ ಜಗತ್ತಿನಾದ್ಯಂತ ೧೮ ನೇ ಶತಮಾನದಿಂದ ಸಾಮಾಜಿಕ ಚಳವಳಿ ಸಂಭವಿಸಿವೆ. ಎರಡನೇ ಮಹಾ ಯುದ್ಧದ ಬಳಿಕ ಹೊಸ ಸಾಮಾಜಿಕ ಚಳವಳಿಗಳು ನಾಗರಿಕ ಹಕ್ಕು, ಮಹಿಳಾ ಹಕ್ಕು, ಮಾನವ ಹಕ್ಕು, ಪರಿಸರ ರಕ್ಷಣೆ, ಬ್ರಷ್ಟಾಚಾರ, ಭಯೋತ್ಪಾದನೆಯಂತಹ ಜ್ವಲಂತ ಸವಾಲುಗಳ ಕುರಿತು ಜರುಗುತ್ತಿರುವುದು ಗಮನಾರ್ಹ. ಭಾರತದಲ್ಲೂ ಸಾಮಾಜಿಕ ಚಳವಳಿಗಳು ಪುನರುಜ್ಜೀವನ ಕಾಲದಿಂದ ಮುನ್ನೆಲೆಗೆ ಬಂದವು. ವೈವಿಧ್ಯತೆಗೆ ಹೆಸರಾದ ಭಾರತ ಸಮಾಜ ಭಿನ್ನ ನೆಲೆಗಟ್ಟಿನ ಸಾಮಾಜಿಕ ಚಳವಳಿಗಳಿಗೆ ಸಾಕ್ಷಿಯಾಗಿದೆ.
ಮಹಿಳಾ ಚಳವಳಿಗಳಿಗೆ ಕಾರಣವಾದ ಅಂಶಗಳು: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪ್ರಾಚೀನ ಕಾಲದಿಂದಲೂ ಉನ್ನತ ಸ್ಥಾನ ನೀಡಲಾಗಿದೆ. ಮಹಿಳೆಯನ್ನು ಮಾತೃದೇವತೆ ಅಥವಾ ಭೂದೇವತೆಯ ಪ್ರತಿರೂಪವೆಂದು ಪರಿಗಣಿಸಲಾಗಿದೆ. ಋಗ್ವೇದ ಕಾಲದಲ್ಲಿ ಮಹಿಳೆಯು ಪುರುಷನಿಗೆ ಸಮಾನವಾದ ಸ್ಥಾನ ಪಡೆದಿದ್ದಳು. ಅಪಾಲಾ, ಗಾರ್ಗಿ, ಮೈತ್ರೇಯಿ, ಕಾತ್ಯಾಯಿನಿ, ಲೋಪಾಮುದ್ರಾ ಮುಂತಾದ ಮಹಿಳಾ ತತ್ವಜ್ನಾನಿಗಳು ವೈದಿಕ ಕಾಲದಲ್ಲಿದ್ದರು. ಸಭಾ ಮತ್ತು ಸಮಿತಿ ಎಂಬ ರಾಜಕಿಯ ಸಂಸ್ಥೆಗಳಲ್ಲಿ ವೈದಿಕ ಕಾಲದ ಮಹಿಳೆಯರು ಭಾಗವಹಿಸುತ್ತಿದ್ದರಲ್ಲದೇ ಯಜ್ನ ಯಾಗಾದಿಗಳಲ್ಲಿ ಪುರುಷನೊಡನೆ ಮಹಿಳೆಯೂ ಭಾಗವಹಿಸುತ್ತಿದ್ದಳು. ಆದರೆ ನಂತರದ ಬೆಳವಣಿಗೆಗಳು ಮಹಿಳೆಯ ಸ್ಥಾನಮಾನ ಕುಗ್ಗಲು ಕಾರಣವಾದವು. ಮನುವು ತನ್ನ ಧರ್ಮಶಾಸ್ತ್ರದಲ್ಲಿ ಮಹಿಳೆಯು ಬಾಲ್ಯದಲ್ಲಿ ಪಿತೃವಿನ, ಯೌವನದಲ್ಲಿ ಪತಿಯ ಹಾಗೂ ವೃದ್ಧಾಪ್ಯದಲ್ಲಿ ಪುತ್ರನ ಆಶ್ರಯದಲ್ಲಿ ಇರಬೇಕೆಂದು ವಿವರಣೆ ನೀಡಿದನು. ಮನುವಿನ ಈ ವ್ಯಾಖ್ಯಾನವು ಮಹಿಳೆಯನ್ನು ಪರಾವಲಂಬಿ ಎನಿಸಿತು. ಬಾಲ್ಯ ವಿವಾಹ, ವರದಕ್ಷಿಣೆ, ವಿಧವಾ ಪುನರ್ವಿವಾಹ ನಿರಾಕರಣೆ, ಪರದಾ ಪದ್ಧತಿಗಳಂತಹ ಅನೇಕ ಸಾಮಾಜಿಕ ಕಟ್ಟುಪಾಡುಗಳು ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಂಡವು. ಈ ನಡುವೆ ಮಧ್ಯಯುಗದಲ್ಲಿ ರಜಿಯಾ ಬೇಗಂ, ದುರ್ಗಾದೇವಿ, ನೂರ್‌ಜಹಾನ್, ಚನ್ನಮ್ಮಾಜಿಯಂತಹ ಬೆರಳೆಣಿಕೆಯಷ್ಟು ಮಹಿಳೆಯರು ತಮ್ಮ ಸಾಮರ್ಥ್ಯ ತೋರಿದರೂ ಸಾರ್ವತ್ರಿಕವಾಗಿ ಮಹಿಳೆಯರ ಸ್ಥಿತಿ ಸುಧಾರಣೆಗೊಂಡಿರಲಿಲ್ಲ. ಶಿಕ್ಷಣದಿಂದ ವಂಚಿತವಾದ ಮಹಿಳೆ ತನ್ನ ಹಕ್ಕುಗಳ ಬಗ್ಗೆ ದ್ವನಿ ಎತ್ತದಾದಳು. ಪುರುಷ ಪ್ರಧಾನ ಸಮಾಜದಲ್ಲಿ ಕಾಲಾ ನಂತರ ಮಹಿಳೆ ನಾಲ್ಕು ಗೋಡೆಗಳ ನಡುವೆ ಬಂಧಿಯಾದಳು. ಈ ಸನ್ನಿವೇಶದಲ್ಲಿ ಮಹಿಳಾ ಸಮುದಾಯವು ನಾನಾ ತೆರನಾದ ಅಮಾನವಿಯ ಸಾಮಾಜಿಕ ಕಳಂಕಗಳಿಗೆ ತುತ್ತಾಯಿತು. ಕೊನೆಗೂ ೧೯ ನೇ ಶತಮಾನದಿಂದ ಮಹಿಳೆ ತನ್ನ ಸಂಕೋಲೆಗಳನ್ನು ಕಿತ್ತೊಗೆದು ಮೇಲೆಳಲು ಮುಂದಾದಳು. ಈ ಭಾವನೆಯು ಮಹಿಳಾ ಹಿತರಕ್ಷಣಾ ಚಳವಳಿಯ ರೂಪ ತಾಳಿತು. ಆರಂಭದಲ್ಲಿ ಸಮಾಜ ಸುಧಾರಕರು, ರಾಷ್ಟ್ರಿಯ ಹೋರಾಟದ ವೇಳೆ ವಿವಿಧ ಹೋರಾಟಗಾರರು, ಸ್ವತಂತ್ರ್ಯೋತ್ತರ ರಾಜಕಾರಣಿಗಳು, ವಿವಿಧ ಬುದ್ಧಿಜೀವಿಗಳು ಮಹಿಳಾ ಚಳವಳಿಗೆ ಚಾಲಕ ಶಕ್ತಿಯಾದರು. ಹೀಗೆ ಕಾಲಕ್ರಮೇಣ ರೂಪುಗೊಂಡ ಭಾರತದಲ್ಲಿನ ಮಹಿಳಾ ಚಳವಳಿಗಳಿಗೆ ಕಾರಣವಾದ ವಿಚಾರಗಳನ್ನು ಕೆಳಗಿನ ಅಂಶಗಳಲ್ಲಿ ಚರ್ಚಿಸಲಾಗಿದೆ.
ಅ. ಸಮಾಜ ಸುಧಾರಕರ ಪ್ರಯತ್ನಗಳು: ಭಾರತದ ಮಹಿಳಾ ಚಳವಳಿಗಳ
ಬೇರುಗಳನ್ನು ಸಮಾಜ ಸುಧಾರಣಾ ಚಳವಳಿಗಳಲ್ಲಿ ಗುರುತಿಸಬಹುದು. ಬ್ರಮ್ಹ ಸಮಾಜ, ಪ್ರಾರ್ಥನಾ ಸಮಾಜ, ಸತ್ಯ
ಶೋಧಕ ಸಮಾಜ, ಆರ್ಯ ಸಮಾಜ ಮುಂತಾದ ಸಂಸ್ಥೆಗಳು ಸಮಾಜ ಸುಧಾರಣೆಗೆ ಮುಂದಾದವು. ಸಮಾಜದ ಸುಧಾರಣೆ ಆಗಬೇಕಾದರೆ
ಅದರಲ್ಲಿರುವ ಅರ್ಧದಷ್ಟು ಸಂಖೆಯ ಮಹಿಳೆಯರೂ ಸುಧಾರಣೆಗೊಳ್ಳಬೇಕೆಂಬುದು ಸುಧಾರಕರ ಅಭಿಮತವಾಗಿತ್ತು.
ಹೀಗಾಗಿ ಮಹಿಳಾ ಸಮುದಾಯ ಅನುಭವಿಸುತ್ತಿದ್ದ ಹಲವು ಅಮಾನವಿಯ ಪದ್ಧತಿಗಳನ್ನು ಅವರು ವಿರೋಧಿಸಿದರು.
ಸತಿ ಪದ್ಧತಿ, ವಿಧವಾ ಪುನರ್ವಿವಾಹ ನಿಷೇಧ, ಪರದಾ ಪದ್ಧತಿ, ಬಾಲ್ಯ ವಿವಾಹ ಮುಂತಾದವುಗಳ ನಿರ್ಮೂಲನೆಗೆ
ಸಮಾಜ ಸುಧಾರಕರು ಮುಂದಾದರು. ಮೃತ ಪತಿಯ ಚಿತೆಗೆ ಹಾರಿ ಸಜೀವ ದಹನಗೊಳ್ಳುವ ಸತಿ ನಿರ್ಮೂಲನೆಗೆ ಬ್ರಮ್ಹ
ಸಮಾಜ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಡಿತು. ಪರಿಣಾಮ ಸತಿ ಪದ್ಧತಿ ನಿಷೇಧ ಕಾಯಿದೆ
1829 ರಲ್ಲಿ ಜಾರಿಗೊಂಡು ಮಹಿಳೆಯರಲ್ಲಿ ಆತ್ಮಬಲ ಹೆಚ್ಚಾಯಿತು. ಈಶ್ವರಚಂದ್ರ ವಿದ್ಯಾಸಾಗರ್, ಕೇಶವಚಂದ್ರ
ಸೇನ್ ಹಾಗೂ ದೋಂಧೊ ಕೇಶವ ಕರ್ವೆಯವರ ಪ್ರಯತ್ನದಿಂದ ವಿಧವಾ ಪುನರ್ವಿವಾಹ ಕಾಯಿದೆ 1856 ರಲ್ಲಿ ಜಾರಿಗೊಂಡಿತು.
ಇದರೊಡನೆ ಮದ್ರಾಸ್ ಪ್ರಾಂತದಲ್ಲಿ ಕಂದುಕುರಿ ವೀರೇಶಲಿಂಗಂ ನೇತೃತ್ವದಲ್ಲಿ 1874 ರ ಹೊತ್ತಿಗೆ ೬೩
ವಿಧವಾ ಪುನರ್ವಿವಾಹಗಳು ಜರುಗಿದವು. ಈ ಬೆಳವಣಿಗೆಗಳು ಮಹಿಳೆಯರ ಹೋರಾಟಕ್ಕೆ ಬಲ ನೀಡಿದವು. ಪ್ರಾರ್ಥನಾ
ಸಮಾಜವು ಎಂ. ಜಿ. ರಾನಡೇ ನಾಯಕತ್ವದಲ್ಲಿ ಮಹಿಳೆಯರ ಹಿತರಕ್ಷಣೆಗೆ ಹೋರಾಡಿತು. ಹಲವು ಸಮಾಜ ಸುಧಾರಕರ
ಪ್ರಯತ್ನದಿಂದ 1891 ರಲ್ಲಿ ಮಹಿಳೆಯರ ವಿವಾಹದ ವಯಸ್ಸನ್ನು ಬ್ರಿಟಿಷ್ ಸರ್ಕಾರ ೧೨ ವರ್ಷಗಳಿಗೆ ನಿಗಧಿಪಡಿಸಿತು.
ಇದರಿಂದ ಬಾಲ್ಯ ವಿವಾಹಕ್ಕೊಳಗಾದ ಮಹಿಳೆ ಅನುಭವಿಸುತ್ತಿದ್ದ ನಾನಾ ಸಮಸ್ಯೆಗಳು ದೂರವಾದವು. ಜೊತೆಗೆ
ಮುಸ್ಲಿಮ್ ಮಹಿಳೆಯರ ಸಾಂಪ್ರದಾಯಿಕ ಸಂಕೋಲೆಗಳನ್ನು ಸಡಿಲಗೊಳಿಸುವಲ್ಲಿ ಸಯಿದ್ ಅಹಮದ್ ಖಾನ್,
ಕರ್ಮತ್ ಹುಸೇನ್, ಶೇಕ್ ಅಬ್ದುಲ್ಲಾ ಪ್ರಯತ್ನಿಸಿದರು. ಇದಲ್ಲದೇ ಸ್ವಾಮಿ ವಿವೇಕಾನಂದ, ಸ್ವಾಮಿ
ದಯಾನಂದ ಸರಸ್ವತಿ, ಅನಿಬೆಸೆಂಟ್ ಮುಂತಾದ ಸುಧಾರಕರು ಮಹಿಳೆಯರ ಬೆನ್ನಿಗೆ ನಿಂತರು. ಹೀಗೆ ಅನೇಕ ಸಮಾಜ
ಸುಧಾರಕರ ಪ್ರಯತ್ನಗಳಿಂದ ಭಾರತದಲ್ಲಿ ಮಹಿಳೆಯರು ತಮ್ಮ ಹಕ್ಕು ಹಾಗೂ ಅವಕಾಶಗಳ ಕುರಿತು ಜಾಗೃತಗೊಂಡರು.
ಅಮಾನವಿಯ ಸಾಮಾಜಿಕ ಕಟ್ಟುಪಾಡುಗಳನ್ನು ಕಿತ್ತೊಗೆಯುವ ಸ್ವಾತಂತ್ರ್ಯ ತಮಗಿದೆ ಎಂಬುದನ್ನು ಮನವರಿಕೆ
ಮಾಡಿಕೊಂಡರು. ಇದರಿಂದ ಮುಂದೆ ವಿವಿಧ ಮಹಿಳಾ ಚಳವಳಿಗಳು ರೂಪುಗೊಳ್ಳಲು ಸಾಧ್ಯವಾಯಿತು.
ಆ. ಮಹಿಳಾ ಶಿಕ್ಷಣದ ಹೆಚ್ಚಳ: ಪುನರುಜ್ಜೀವನ ಕಾಲದಲ್ಲಿ
ಉದಾರವಾದಿ ಹಾಗೂ ಸಂಪ್ರದಾಯವಾದಿ ಸಮಾಜ ಸುಧಾರಕರು
ಮಹಿಳಾ ಶಿಕ್ಷಣವನ್ನು ಬೆಂಬಲಿಸಿದರು. ಇದರಿಂದಾಗಿ ಮಹಿಳೆಯರಿಗೆ ಶಿಕ್ಷಣದ ಅವಕಾಶಗಳು ತೆರೆದುಕೊಂಡವು.
ಈಶ್ವರಚಂದ್ರ ವಿದ್ಯಾಸಾಗರರು 1855-1858 ರ ನಡುವೆ ಬಾಲಕಿಯರಿಗಾಗಿ 48 ಶಾಲೆಗಳನ್ನು ಸ್ಥಾಪಿಸಿದರು.
ಸತ್ಯ ಶೋಧಕ ಸಮಾಜದ ಜ್ಯೋತಿ ಬಾ ಪುಲೆ ಸಾರ್ವತ್ರಿಕ ಶಿಕ್ಷಣವನ್ನು ಪ್ರತಿಪಾದಿಸಿದರು. ಇವರ ಪತ್ನಿ
ಸಾವಿತ್ರಿ ಬಾಪುಲೆ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಿದರು. ಪ್ರಾರ್ಥನಾ ಸಮಾಜದ ಮಹದೇವ ಗೋವಿಂದ
ರಾನಡೇ ಪುಣೆಯಲ್ಲಿ ಬಾಲಕಿಯರಿಗಾಗಿ ಪ್ರೌಢ ಶಾಲೆಯೊಂದನ್ನು ಆರಂಭಿಸಿದರು. ಆರ್ಯ ಸಮಾಜ ಸ್ತ್ರೀ ಹಾಗೂ
ಪುರುಷನಿಗೆ ಸಮಾನವಾದ ಕಡ್ಡಾಯ ಶಿಕ್ಷಣ ಪ್ರತಿಪಾದಿಸಿ ಅನೇಕ ಆರ್ಯ ಕನ್ಯಾ ಪಾಠಶಾಲೆಗಳನ್ನು ಸ್ಥಾಪಿಸಿತು.
ದೋಂಧೊ ಕೇಶವ ಕರ್ವೆ ಹಾಗೂ ಇತರರು ಸೇರಿ ವಿಧವೆಯರ ಸ್ವಾವಲಂಬನೆಗಾಗಿ ಅಗತ್ಯ ಶಿಕ್ಷಣ ಒದಗಿಸಲು ಅನಂತ
ಬಾಲಿಕಾಶ್ರಮವನ್ನು 1896 ರಲ್ಲಿ ಸ್ಥಾಪಿಸಿದರು. ಅಲ್ಲದೇ ಕರ್ವೆಯವರ ಪ್ರಯತ್ನದಿಂದ ಎಸ್. ಎನ್. ಡಿ.
ಟಿ. ಮಹಿಳಾ ವಿಶ್ವ ವಿದ್ಯಾಲಯ 1916 ರಲ್ಲಿ ಆರಂಭವಾಯಿತು. ಹೀಗೆ ಅನೇಕರ ಪ್ರಯತ್ನದಿಂದ ಮಹಿಳಾ ಶಿಕ್ಷಣ ಭಾರತದಲ್ಲಿ ಪಸರಿಸಿತು. ಜೊತೆಗೆ ಪಾಶ್ಚಿಮಾತ್ಯ
ಶಿಕ್ಷಣ ಮಹಿಳೆಯರಿಗೆ ದೊರೆತು ಉದಾರವಾದ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಮನವರಿಕೆ ಮಾಡಿತು.
ಸ್ತ್ರೀ ಹಾಗೂ ಪುರುಷ ಸಮಾನರೆಂಬ ಚಿಂತನೆಯನ್ನು ವಿಸ್ತರಿಸಿತು. ಪರಿಣಾಮವಾಗಿ ಮಹಿಳಾ ಚಳವಳಿಗಳು ಕ್ರಮೇಣ
ವ್ಯಾಪಕಗೊಳ್ಳತೊಡಗಿದವು.
ಇ. ರಾಷ್ಟ್ರಿಯ ಹೋರಾಟ: ಭಾರತದಲ್ಲಿ ಮಹಿಳಾ ಚಳವಳಿಗಳು
ತೀವ್ರ ಸ್ವರೂಪ ತಾಳಲು ರಾಷ್ಟ್ರಿಯ ಹೋರಾಟ ಕಾರಣವಾಯಿತು. ಮಧ್ಯಮ ವರ್ಗದ ಸುಶಿಕ್ಷಿತ ಮಹಿಳೆಯರು ರಾಜಕಿಯ
ಚಟುವಟಿಕೆಗಳಲ್ಲಿ ಭಾಗವಹಿಸಲು ಮುಂದಾದರು. ಉದಾ: ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ನ 1889 ರ ಅಧಿವೇಶನದಲ್ಲಿ
ಹತ್ತು ಮಹಿಳೆಯರು ಭಾಗವಹಿಸಿದ್ದರು. 1905 ರ ಬಂಗಾಳ ವಿಭಜನೆ ವಿರುದ್ಧ ಆರಂಭವಾದ ಸ್ವದೇಶಿ ಹೋರಾಟದಲ್ಲಿ
ಬಂಗಾಳ ಹಾಗೂ ಪಂಜಾಬ್ ಮಹಿಳೆಯರು ಭಾಗವಹಿಸಿ ತಮ್ಮ ಒಡವೆಗಳನ್ನು ರಾಷ್ಟ್ರಿಯ ಹೋರಾಟಕ್ಕೆ ಅರ್ಪಿಸಿ
ನೆರವಾದರು. 1920 ರವರೆಗೆ ಮಹಿಳಾ ಭಾಗವಹಿಸುವಿಕೆ
ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಗಾಂಧೀಜಿ ನೇತೃತ್ವದ ಹಲವು ಚಳವಳಿಗಳಲ್ಲಿ ಮಹಿಳೆಯರು ಹೆಚ್ಚು
ಸಂಖೆಯಲ್ಲಿ ಭಾಗವಹಿಸಲಾರಂಭಿಸಿದರು. 1930 ರಲ್ಲಿ ಜರುಗಿದ ದಂಡಿ ಪಾದಯಾತ್ರೆಯಲ್ಲಿ ಹಲವು ಮಹಿಳೆಯರು
ಭಾಗವಹಿಸಿದ್ದರು. ಕಮಲಾದೇವಿ ಚಟ್ಟೊಪಾಧ್ಯಾಯ ಮಹಿಳೆಯರ ಹಿತಾಸಕ್ತಿ ಅಡಕವಾದ ಮಧ್ಯದಂಗಡಿಗಳ ಪಿಕೇಟಿಂಗ್
ಆಯೋಜಿಸಿದರು. ಸರೋಜಿನಿ ನಾಯ್ಡು ಮಹಿಳಾ ಪ್ರತಿನಿಧಿಯಾಗಿ 1931 ರ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ
ಭಾಗವಹಿಸಲು ಅವಕಾಶ ಪಡೆದುಕೊಂಡರು. 1942 ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ವೇಳೆ ಪುರುಷರ
ಬಂಧನವಾದಾಗ ಮಹಿಳೆಯರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಹೀಗೆ ರಾಷ್ಟ್ರಿಯ ಸ್ವತಂತ್ರ್ಯ ಹೋರಾಟ
ಮಹಿಳಾ ಚಳವಳಿ ಬಲಗೊಳ್ಳಲು ವೇದಿಕೆಯನ್ನು ಕಲ್ಪಿಸಿತು.
ಈ. ತಾರತಮ್ಯ ಮನೋಭಾವ: ತಲೆತಲಾಂತರದಿಂದ ಭಾರತದಲ್ಲಿ
ಮಹಿಳೆ ಪುರುಷನಿಗಿಂತ ನಾನಾ ತಾರತಮ್ಯ ಅನುಭವಿಸಿಕೊಂಡು ಬಂದಿರುವಳು. ಸಮಾಜ ಸುಧಾರಣಾ ಚಳವಳಿ ಕಾಲದಲ್ಲಿ
ಮಹಿಳಾ ತಾರತಮ್ಯ ಹೋಗಲಾಡಿಸಲು ಪ್ರಯತ್ನಗಳು ಆರಂಭವಾದರೂ ತೃಪ್ತಿಕರವಾಗಿರಲಿಲ್ಲ. 1882 ರಲ್ಲಿ ತಾರಾಬಾಯಿ
ಸಿಂಧೆ ಸ್ತ್ರೀ ಪುರುಷ ತುಲನಾ ಎಂಬ ಗ್ರಂಥ ರಚಿಸಿ ಮಹಿಳಾ ಸಮಾನತೆ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ
ತಂದರು. ಸರೋಜಿನಿ ನಾಯ್ಡು ಮತದಾನದ ಹಕ್ಕನ್ನು ಮಹಿಳೆಗೆ ನೀಡಬೇಕೆಂಬ ಒತ್ತಾಯ ಮಾಡಿದರು. ದಂಡಿ ಪಾದಯಾತ್ರೆಯಲ್ಲಿ
ಭಾಗವಹಿಸುವವರ ಪಟ್ಟಿಯಲ್ಲಿ ಮಹಿಳೆಯರನ್ನು ಕೈಬಿಟ್ಟಾಗ ಮಹಿಳಾ ನಾಯಕರು ಅಸಮಧಾನಗೊಂಡು ಹಟ ಬಿಡದೇ ಉಪ್ಪಿನ
ಸತ್ಯಾಗ್ರಹದಲ್ಲಿ ಭಾಗಿಯಾದರು. ಶಿಕ್ಷಣ, ಆಸ್ತಿ, ಉದ್ಯೋಗ, ಆಡಳಿತ ಮುಂತಾದ ರಂಗಗಳಲ್ಲಿ ತಾರತಮ್ಯ
ಹೋಗಲಾಡಿಸಲು ಸ್ವತಂತ್ರ್ಯ ನಂತರವೂ ಅನೇಕ ಹೋರಾಟಗಳು ಜರುಗಿವೆ. ಮಹಿಳೆ ಎಂಬ ಆಧಾರದ ಮೇಲೆ ತಾರತಮ್ಯ
ಉಂಟಾದಾಗಲೆಲ್ಲ ಮಹಿಳಾ ಚಳವಳಿ ಪುಷ್ಟಿ ಪಡೆಯುತ್ತವೆ. ಉದಾ: ಇತ್ತೀಚೆಗೆ ದೇವಸ್ಥಾನವೊಂದರ ಪ್ರವೇಶಕ್ಕಾಗಿ
ಮಹಿಳಾ ಸಮುದಾಯ ನಡೆಸಿದ ಚಳವಳಿ.
ಉ. ಕೌಟುಂಬಿಕ ಹಿಂಸೆ: ಮಹಿಳೆ ಕುಟುಂಬದ ಕೇಂದ್ರಬಿಂದುವಾಗಿದ್ದರೂ
ಪುರುಷ ಪ್ರಾಧಾನ್ಯತೆಯಿಂದ ಭಾರತದಲ್ಲಿ ಶೇ ೭೦ ರಷ್ಟು ಮಹಿಳೆಯರು ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ.
ಮನೆಯಲ್ಲಿರುವ ಗೃಹಿಣಿಯಾಗಲಿ ಅಥವ ಕಾರ್ಯನಿರತ ಮಹಿಳೆಯಾಗಲಿ ಕೌಟುಂಬಿಕ ಹಿಂಸೆಯಿಂದ ಮುಕ್ತವಾಗಿಲ್ಲ.
ಕುಟುಂಬದಲ್ಲಿ ಪತಿ ಅಥವ ಇತರ ಸದಸ್ಯರಿಂದ ಮಹಿಳೆ ದೈಹಿಕ ಮತ್ತು ಮಾನಸಿಕ ಹಿಂಸಾಚಾರವನ್ನು ಅನುಭವಿಸುತ್ತಿರುವ
ನಿದರ್ಶನಗಳು ಇಂದಿಗೂ ನಮ್ಮ ಸುತ್ತ ಕಂಡುಬರುತ್ತಿವೆ. ಹಲವು ಕುಟುಂಬಗಳಲ್ಲಿ ಮಹಿಳೆಯರಿಗೆ ಹೊಡೆಯುವ,
ಒದೆಯುವ, ವಿವಿಧ ವಸ್ತುಗಳನ್ನು ಎಸೆಯುವ ಮೂಲಕ ದೈಹಿಕ ಹಿಂಸೆಯನ್ನು ನೀಡಲಾಗುತ್ತಿದೆ. ಜೊತೆಗೆ ನಿಂದಿಸುವ,
ಭಯ ಹುಟ್ಟಿಸುವ, ಕಾರ್ಯಗಳನ್ನು ವಿಮರ್ಷಿಸುವ, ಸಂಶಯದಿಂದ ಕಾಣುವ ಮೂಲಕ ಮಹಿಳೆಯರನ್ನು ಮಾನಸಿಕವಾಗಿ
ಹಿಂಸಿಸುವುದು ಭಾರತೀಯ ಕುಟುಂಬಗಳಲ್ಲಿ ಸಾಮಾನ್ಯ ಸಂಗತಿ ಎನಿಸಿದೆ. ಇದರೊಡನೆ ಕೆಲವು ಕುಟುಂಬದಲ್ಲಿ
ಲೈಂಗಿಕ ದೌರ್ಜನ್ಯಗಳೂ ಜರುಗುತ್ತವೆ. ಇಂತಹ ಕೌಟುಂಬಿಕ ಹಿಂಸಾಚಾರಗಳಿಂದ ಮಹಿಳೆಯರನ್ನು ರಕ್ಷಿಸಲು
ಮಹಿಳಾಪರ ಸಂಘಟನೆಗಳು ಮುಂದಾದಾಗ ಮಹಿಳಾ ಚಳವಳಿ ಸಂಭವಿಸುತ್ತವೆ.
ಊ. ವರದಕ್ಷಿಣೆಯ ಪಿಡುಗು: ಇತರ ಸಾಮಾಜಿಕ ಕಟ್ಟುಪಾಡುಗಳಿಗಿಂತ
ವಸಾಹತೋತ್ತರ ಮಹಿಳಾ ಚಳವಳಿಗೆ ವರದಕ್ಷಿಣೆಯ ಪಿಡುಗು ಪ್ರಮುಖ ಕಾರಣವಾಗಿದೆ. ವಿವಾಹ ಸಮಯದಲ್ಲಿ ವಧುವಿನ
ಪೋಷಕರು ವರನಿಗೆ ಉಡುಗೊರೆ ನೀಡುವ ಪದ್ಧತಿ ವರದಕ್ಷಿಣೆ ಎನಿಸಿಕೊಂಡಿದೆ. ಹಿಂದೆ ತಮ್ಮ ಮಗಳು ಗಂಡನ
ಮನೆಯಲ್ಲಿ ಸುಖವಾಗಿರಲೆಂದು ಅವಳ ಪೋಷಕರು ಪ್ರೀತಿಯಿಂದ ಉಡುಗೊರೆ ನೀಡುವ ಸಂಪ್ರದಾಯವಿತ್ತು. ಕ್ರಮೇಣ
ಅದು ಮದುವೆ ಮಾಡಿಕೊಡುವ ವಧುವಿನ ಪೋಷಕರು ಕಡ್ಡಾಯವಾಗಿ ವರನ ಕಡೆಯವರು ಬಯಸಿದಷ್ಟು ಉಡುಗೊರೆ ನೀಡಬೇಕಾದ
ಪದ್ಧತಿಯಾಗಿ ಪರಿವರ್ತನೆಗೊಂಡಿದೆ. ಮಾತ್ರವಲ್ಲ, ವಿವಾಹದ ನಂತರವೂ ಹೆಚ್ಚುವರಿ ವರದಕ್ಷಿಣೆ ತರಲು ಮಹಿಳೆಯರನ್ನು
ಒತ್ತಾಯಿಸುವ ಪರಿಪಾಠ ಹಲವೆಡೆ ಕಂಡು ಬರತೊಡಗಿದೆ. ಇದರಿಂದ ಹೆಣ್ಣು ಹೆತ್ತವರು ಸಾಲದ ಸುಳಿಗೆ ಸಿಲುಕಿಕೊಳ್ಳುವಂತಾಗಿದೆ.
ಜೊತೆಗೆ ಹೆಣ್ಣು ಮಕ್ಕಳಿಗೆ ಜನ್ಮ ನೀಡುವುದು ಹೊರೆಯೆಂಬ ಭಾವನೆ ಮೂಡಿಸಿದೆ. ಪರಿಣಾಮ ಹೆಣ್ಣು ಬೃಣ
ಹತ್ಯೆ, ಹೆಣ್ಣು ಶಿಶು ಮಾರಾಟ, ಹೆಣ್ಣು ಶಿಶುಗಳ ಪರಿತ್ಯಾಗ ಸಾಮಾನ್ಯವೆನಿಸಿತು. ವಧು ವಿದ್ಯಾವಂತಳಾಗಿರಲಿ
ಅಥವ ಉದ್ಯೋಗಿಯಾಗಿರಲಿ ವರದಕ್ಷಿಣೆ ಕಡ್ಡಾಯವಾಗಿ ನೀಡಲೇಬೇಕಾದ ಸನ್ನಿವೇಶ ಜಾರಿಗೊಂಡಿದೆ. ಹೀಗಾಗಿ
ಮಹಿಳೆಯ ಸ್ಥಾನಮಾನ, ಸುಖ ಜೀವನ, ಜನಸಂಖೆಗೆ ೆರವಾದ ವರದಕ್ಷಿಣಾ ಪಿಡುಗಿನ ವಿರುದ್ಧ ಚಳವಳಿ ತೀವ್ರತೆ
ಪಡೆಯಿತು. ಇಂದಿಗೂ ಮಹಿಳಾ ಪರ ಸಂಘಟನೆಗಳು ವರದಕ್ಷಿಣಾ ಕಿರುಕುಳದಿಂದ ಬಳಲುತ್ತಿರುವವರ ಪರವಾಗಿ ಅಲ್ಲಲ್ಲಿ
ಹೋರಾಟ ಕೈಗೊಂಡ ನಿದರ್ಶನಗಳನ್ನು ಮಾಧ್ಯಮಗಳಲ್ಲಿ ಕಾಣಬಹುದಾಗಿದೆ.
ಋ. ಲೈಂಗಿಕ
ಕಿರುಕುಳಗಳು: ಪ್ರಸ್ತುತ ದಶಕದ ಭಾರತದ ಮಹಿಳಾ ಚಳವಳಿ ಲೈಂಗಿಕ ಕಿರುಕುಳದಿಂದ ಪ್ರೇರಿತವಾಗಿವೆ. ಅಮಾನವಿಯವಾಗಿ
ಹೆಣ್ಣು ಶಿಶುಗಳ ಮೇಲೆ ಲೈಂಗಿಕ ದೌರ್ಜನ್ಯ ಜರುಗುತ್ತಿವೆ. ಜೊತೆಗೆ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ
ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಸಾಮಾನ್ಯ ಸಂಗತಿಯಾಗಿದೆ. ಇದಲ್ಲದೇ ಕಾರ್ಯ
ಸ್ಥಳದಲ್ಲಿ ಪುರುಷರಿಂದ ಮಹಿಳೆಯರು ಲೈಂಗಿಕ ಶೋಷಣೆ ಎದುರಿಸುವುದು ಸಹಜ ಸಂಗತಿಯಾಗಿದೆ. ಸಾರ್ವಜನಿಕ
ಸ್ಥಳಗಳಲ್ಲಿ ಮಹಿಳೆ ಲೈಂಗಿಕ ಹಿಂಸೆ ಅನುಭವಿಸುವಂತಾಗಿದೆ. ಇಂತಹ ಘಟನೆಗಳ ವಿರುದ್ಧ ತಮಗೆ ಸೂಕ್ತ ಭದ್ರತೆ
ಒದಗಿಸದ ಸರ್ಕಾರಗಳ ಧೋರಣೆ ಖಂಡಿಸಿ ಮಹಿಳಾ ಸಂಘಟನೆಗಳು ಚಳವಳಿ ಹೂಡುತ್ತವೆ. ಅಲ್ಲದೇ ಲೈಂಗಿಕ ಹಿಂಸೆ
ಕುರಿತು ಜಾಗೃತಿ ಮೂಡಿಸಲೆಂದು ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾಜಿಕ ಚಳವಳಿಗೆ ಮಹಿಳೆಯರು ಮುಂದಾಗುತ್ತಿದ್ದಾರೆ.
ಪ್ರಮುಖ
ಮಹಿಳಾ ಚಳವಳಿಗಳು:
ಭಾರತದಲ್ಲಿ ಪುನರುಜ್ಜೀವನ ಕಾಲದಿಂದ ಮಹಿಳಾ ಚಳವಳಿ ಆರಂಭವಾಗಿದ್ದು ಇಂದಿಗೂ ಮುಂದುವರೆದಿವೆ. ಆರಂಭದಲ್ಲಿ
ಮಹಿಳೆಯರ ಸುಧಾರಣೆಗೋಸ್ಕರ ಅನ್ಯ ಸಮುದಾಯಗಳು ಚಳವಳಿ ಕೈಗೊಂಡರೆ ಪ್ರಸಕ್ತ ಮಹಿಳೆಯರೇ ಮಹಿಳೆಯರಿಗಾಗಿ
ಚಳವಳಿ ಸಂಘಟಿಸುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿನ ಮಹಿಳಾ ಚಳವಳಿ ಸಮಾಜ ಸುಧಾರಣೆಯ ಭಾಗವಾಗಿ ಮಹಿಳಾ
ಹಿತರಕ್ಷಣೆಗೆ ಶ್ರಮಿಸಿದವು. ವಸಾಹತೋತ್ತರ ಮಹಿಳಾ ಚಳವಳಿ ಲಿಂಗ ಸಮಾನತೆ ಮತ್ತು ಪುರುಷ ಪ್ರಾಬಲ್ಯದ
ಶೋಷಣೆಗಳನ್ನು ವಿರೋಧಿಸುತ್ತವೆ. ಜೊತೆಗೆ ಪ್ರಸ್ತುತ ಮಹಿಳಾ ಚಳವಳಿಗಳು ಸಾಮಾಜಿಕ ಹಿತಾಸಕ್ತಿಗೆ ಮಾರಕವಾದ
ಪರಿಸರ ನಾಶ, ಬ್ರಷ್ಟಾಚಾರ, ಬೆಲೆ ಏರಿಕೆ, ಮೂಲಭೂತ ಸೌಕರ್ಯಗಳ ಕೊರತೆ ಮುಂತಾದ ವಿಚಾರಗಳನ್ನು ವಿರೋಧಿಸಲೂ
ಮುಂದಾಗಿವೆ. ಭಾರತದಲ್ಲಿನ ಪ್ರಮುಖ ಮಹಿಳಾ ಚಳವಳಿಗಳ ಸಂಕ್ಷಿಪ್ತ ಪರಿಚಯ ಕೆಳಗಿನಂತಿದೆ.
ಅ. ಮಧ್ಯಪಾನ ವಿರೋಧಿ ಚಳವಳಿ: 1990 ರ ವೇಳೆಗೆ ಅವಿಭಜಿತ
ಆಂಧ್ರ ಪ್ರದೇಶ ರಾಜ್ಯದ ಪುರುಷರಲ್ಲಿ ಮಧ್ಯಪಾನ ವ್ಯಸನ ತೀವ್ರಗೊಂಡಿತ್ತು. ಇದರಿಂದ ಕುಟುಂಬದ ಆದಾಯವೆಲ್ಲ
ಮಧ್ಯಪಾನ ಮಾರಾಟದ ಅಂಗಡಿಗಳ ಪಾಲಾಗುತ್ತಿತ್ತು. ಕುಟುಂಬ ನಿರ್ವಹಣೆ ಮಹಿಳೆಯರಿಗೆ ಕಠಿಣವಾಯಿತು. ಜೊತೆಗೆ
ಪಾನಮತ್ತ ಪುರುಷರಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಮಹಿಳೆಯರು ಅನುಭವಿಸುವಂತಾಗಿತ್ತು. ಹೀಗಿರುವಾಗ
ವಯಸ್ಕರ ಶಿಕ್ಷಣ ನೀಡುತ್ತಿದ್ದ ಮಹಿಳೆಯನ್ನು ಪಾನಮತ್ತ ಪುರುಷರು ನಿಂದಿಸಿದ ಘಟನೆ 1992 ರಲ್ಲಿ ನೆಲ್ಲೂರು
ಜಿಲ್ಲೆಯ ದುಬಗುಂಟಾ ಎಂಬ ಹಳ್ಳಿಯೊಂದರಲ್ಲಿ ಜರುಗಿತು. ಅದೇ ಗ್ರಾಮದ ರೋಸಮ್ಮಾ ಎಂಬಾಕೆ ವಿದ್ಯಾವಂತ
ಮಹಿಳೆಯರನ್ನು ಸಂಘಟಿಸಿ ಮಧ್ಯಪಾನ ನಿಷೇಧಕ್ಕೆ ಹೋರಾಟ ಆರಂಭಿಸಿದಳು. ಪೊರಕೆ, ಕಾರದ ಪುಡಿ, ಕೋಲುಗಳನ್ನು
ಹಿಡಿದು ಮಧ್ಯದಂಗಡಿ ಮುಚ್ಚಿಸಲು ಮಹಿಳೆಯರು ಮುಂದಾದರು. ದುಬಗುಂಟಾದ ಈ ಹೋರಾಟ ನೆಲ್ಲೂರು ಜಿಲ್ಲೆಯಾದ್ಯಂತ
ಹೋರಾಟದ ಕಿಡಿ ಹೊತ್ತಿಸಿತು. ಹಲವು ಜಿಲ್ಲೆಗಳಲ್ಲಿನ ಮಧ್ಯಪಾನ ವಿರೋಧಿ ಹೋರಾಟಕ್ಕೆ ಮಣಿದು 1 ಅಕ್ಟೋಬರ್
1993 ರಿಂದ ಭಾಗಶಃ ಮಧ್ಯಪಾನ ನಿಷೇಧವನ್ನು ಅಂದಿನ ಮುಖ್ಯಮಂತ್ರಿ ಕೆ. ವಿಜಯ ಭಾಸ್ಕರ ರೆಡ್ಡಿ ಜಾರಿಗೊಳಿಸಿದರು.
1994 ರ ಚುನಾವಣೆಯಲ್ಲಿ ಮಧ್ಯಪಾನ ನಿಷೇಧ ಮಹತ್ವ ಪಡೆಯಿತು. ತೆಲಗು ದೇಶಂ ಪಕ್ಷ ಚುನಾವಣೆ ಸಮಯದಲ್ಲಿ
ನೀಡಿದ ಭರವಸೆಯಂತೆ ಜನೇವರಿ 16 1995 ರಂದು ಎನ್. ಟಿ. ರಾಮರಾವ್ ಮುಖ್ಯಮಂತ್ರಿಯಾದೊಡನೆ ಮಧ್ಯಪಾನ
ನಿಷೇಧ ನಿರ್ಧಾರ ಕೈಗೊಂಡರು. ಆದರೆ ಮುಂದೆ ಮುಖ್ಯಮಂತ್ರಿಯಾದಚಂದ್ರ ಬಾಬೂ ನಾಯ್ಡು ಮಧ್ಯಪಾನ ನಿಷೇಧವನ್ನು
ಕೈಬಿಡಲು ಮುಂದಾದಾಗ ಮಧ್ಯಪಾನ ವಿರೋಧಿ ಚಳವಳಿ ತೀವ್ರಗೊಂಡಿತು.
ಆ. ಮುನ್ನಾರ್ ಪ್ಲಾಂಟೇಶನ್ ಮುಷ್ಕರ: ಕೇರಳ ರಾಜ್ಯದ
ಇಡಕ್ಕಿ ಜಿಲ್ಲೆಯ ಮುನ್ನಾರ್ ಟೀ ತೋಟಗಳಿಂದ ಕೂಡಿರುವ ಸ್ಥಳವಾಗಿದೆ. ಇಲ್ಲಿನ ಕಣ್ಣನ್ ದೇವನ್ ಹಿಲ್
ಟೀ ತೋಟಗಳಲ್ಲಿ ಹೆಚ್ಚಿನವರು ಮಹಿಳಾ ಕಾರ್ಮಿಕರು. ವಾರದ ಆರು ದಿನ ೧೨ ಗಂಟೆಗಳ ಕಾಲ ಮಹಿಳಾ ಕಾರ್ಮಿಕರು
ಕೆಲಸ ಮಾಡುತ್ತಿದ್ದರು. ಇವರಿಗೆ ದಿನಕ್ಕೆ ಕೇವಲ ೨೩೦ ರೂ ವೇತನ ನೀಡಲಾಗುತ್ತಿತ್ತು. ಮಹಿಳಾ ಕಾರ್ಮಿಕರ
ಹಿತರಕ್ಷಣೆಗೆ ಅಗತ್ಯವಾದ ಇತರ ಸೌಲಭ್ಯಗಳನ್ನು ಸಾಕಷ್ಟು ಒದಗಿಸಲಾಗಿರಲಿಲ್ಲ. ಹೀಗಾಗಿ 6 ಸೆಪ್ಟೆಂಬರ್
2015 ರಿಂದ ಸುಮಾರು ಐದು ಸಾವಿರ ಮಹಿಳಾ ಕಾರ್ಮಿಕರು ಪ್ರತಿಭಟನೆ ಆರಂಭಿಸಿದರು. ದಿನಕ್ಕೆ ರೂ 500
ವೇತನ ಹಾಗೂ ಶೇ 20 ರಷ್ಟು ಬೋನಸ್ ಹೆಚ್ಚಳ ಈ ಚಳವಳಿ ಮುಂದಿಟ್ಟ ಬೇಡಿಕೆಗಳಾಗಿದ್ದವು. ವಿಶೇಷವೆಂದರೆ
ಪುರುಷ ಕಾರ್ಮಿಕ ಸಂಘಟನೆಗಳ ಹಾಗೂ ರಾಜಕಾರಣಿಗಳ ಮಧ್ಯಸ್ತಿಕೆಯನ್ನು ನಿರಾಕರಿಸಿ ಮಹಿಳೆಯರೇ ಚಳವಳಿ
ನಾಯಕತ್ವ ನಿರ್ವಹಿಸಿದರು. ಒಂಬತ್ತು ದಿನಗಳ ಹೋರಾಟದ ಬಳಿಕ ಕೆ. ಡಿ. ಹೆಚ್. ಪಿ ವ್ಯವಸ್ತಾಪನಾ ಮಂಡಳಿ
ಹೋರಾಟಗಾರರ ಬೇಡಿಕೆಗಳನ್ನು ಪರಿಶೀಲಿಸಲು ಒಪ್ಪಿಕೊಂಡಿತು. ಈ ಮುನ್ನಾರ್ ಚಳವಳಿ ಕೇರಳದ ಇತರ ಟೀ ತೋಟಗಳ
ಮಹಿಳಾ ಕಾರ್ಮಿಕರು ಚಳವಳಿ ಹೂಡಲು ಪ್ರೇರೇಪಿಸಿತು.
ಇ. ಆಸಿಡ್ ದಾಳಿ ನಿಲ್ಲಿಸಿ ಚಳವಳಿ: ಲಕ್ಷ್ಮಿ ಅಗರ್ವಾಲ್
ಎಂಬ ಆಸಿಡ್ ಸಂತ್ರಸ್ತ ಮಹಿಳೆಯು ಈ ಚಳವಳಿಯ ಕೇಂದ್ರಬಿಂದು. 2005 ರಲ್ಲಿ ಲಕ್ಷ್ಮಿ ಮದುವೆಯಾಗಲು
ನಿರಾಕರಿಸಿದ ಕಾರಣ ಅವಳ ಮೇಲೆ ದೆಹಲಿಯ ಖಾನ್ ಮಾರ್ಕೆಟ್ನಲ್ಲಿ ಗುದ್ದು ಹಾಗೂ ರಾಖಿ ಎಂಬುವವರು ಆಸಿಡ್
ದಾಳಿ ನಡೆಸಿದರು. ಈ ದಾಳಿ ತನ್ನ ಮುಖ ಹಾಗೂ ದೇಹವನ್ನು
ವಿರೂಪಗೊಳಿಸಿದಾಗ ಲಕ್ಷ್ಮಿ ಇತರ ಮಹಿಳೆಯರಂತೆ ಸುಮ್ಮನೆ ಕೂಡಲಿಲ್ಲ. 2006 ರಲ್ಲಿ ಪೋಷಕರ ಬೆಂಬಲದಿಂದ
ಅಮಾನವಿಯ ಆಸಿಡ್ ದಾಳಿಗಳಿಗೆ ಅಂತ್ಯ ಕಾಣಿಸಲು ನಿರ್ಧರಿಸಿ
ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದಳು. 2013 ರಲ್ಲಿ ಅಲೋಕ್ ದೀಕ್ಷಿತ್ ಹಾಗೂ ಆಶಿಷ್ ಶುಕ್ಲಾ
ಪ್ರಾರಂಭಿಸಿದ ಆಸಿಡ್ ದಾಳಿ ನಿಲ್ಲಿಸಿ ಚಳವಳಿ ಸೇರಿಕೊಂಡಳು.
ದೇಶದಾದ್ಯಂತ ಆಸಿಡ್ ದಾಳಿಗೆ ತುತ್ತಾದವರ ನೆರವಿಗಾಗಿ
ಪ್ರತಿಷ್ಟಾನವೊಂದನ್ನು ಈ ಚಳವಳಿ ಆರಂಭಿಸಿತು. ೨೭ ಸಾವಿರ ಸಹಿ ಸಂಗ್ರಹಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ
ಸಲ್ಲಿಸಿತು. 2013 ರಲ್ಲಿ ಸರ್ವೊಚ್ಛ ನ್ಯಾಯಾಲಯವು
ಆಸಿಡ್ ಮಾರಾಟದ ಮೇಲೆ ನಿರ್ಬಂಧ ಹೇರಲು, ದಾಳಿಗೊಳಗಾದವರಿಗೆ
ಪರಿಹಾರ ಒದಗಿಸಲು, ಹಾಗೂ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಗಳಿಗೆ ಸೂಚಿಸಿತು. ಈ ಚಳವಳಿ
ದಾಳಿಗೊಳಗಾದ ಮಹಿಳೆಯರ ಮನೋಸ್ಥೈರ್ಯ ವೃದ್ಧಿಸಲು ಪ್ರಯತ್ನಿಸಿತು. ಜೊತೆಗೆ ಸಂತ್ರಸ್ತರಿಗೆ ಶಿಕ್ಷಣ
ಹಾಗೂ ಉದ್ಯೋಗವಕಾಶ ದೊರಕಿಸಲು ಶ್ರಮಿಸಿತಲ್ಲದೇ ಮಹಿಳೆಯರ ಮೇಲಿನ ಆಸಿಡ್ ದಾಳಿಗಳು ಗಣನೀಯವಾಗಿ ಕುಗ್ಗಲು ಕಾರಣವಾಗಿದೆ.
ಈ. ನಿರ್ಭಯಾ ಚಳವಳಿ: 16 ಡಿಸೆಂಬರ್ 2012 ರ ರಾತ್ರಿ
ದೆಹಲಿಯ ವೈಧ್ಯಕಿಯ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಹಾಗೂ ಆಕೆಯ ಸ್ನೇಹಿತ ಅವನಿಂದ್ರ ಪಾಂಡೇ ತಮ್ಮ
ಮನೆಗೆ ತೆರಳಲು ಖಾಸಗಿ ಬಸ್ಸನ್ನೇರಿದರು. ಬಸ್ಸಿನಲ್ಲಿದ್ದ ನಾಲ್ವರು ಿವರಿಬ್ಬರ ದೂರವಾಣಿ ಕಸಿದುಕೊಂಡು
ಬಸ್ನ ದೀಪಗಳನ್ನು ಆರಿಸಿ ಅವನಿಂದ್ರ ಪಾಂಡೇಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದರು. ಸ್ನೇಹಿತ ಪ್ರಜ್ನಾಹೀನನಾದಾಗ
ಜ್ಯೋತಿ ಸಿಂಗ್ ಮೇಲೆ ಚಲಿಸುತ್ತಿದ್ದ ಬಸ್ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದರು. ಕೊನೆಗೆ ಅವರಿಬ್ಬರನ್ನು
ಹೆದ್ದಾರಿಯ ಪಕ್ಕದಲ್ಲಿ ಎಸೆದರು. ಈ ಅಮಾನವಿಯ ಕೃತ್ಯದ ನಂತರ ಸ್ನೇಹಿತ ಬದುಕುಳಿದರೆ ಜ್ಯೋತಿ ಸಿಂಗ್
೨೯ ಡಿಸೆಂಬರ್ 2012 ರಂದು ಸಿಂಗಪೂರ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಳು. ಮಾಧ್ಯಮಗಳು
ಸಂತ್ರಸ್ತೆಯ ಹೆಸರಿನ ಬದಲು ನಿರ್ಬಯಾ ಎಂಬ ಹೆಸರನ್ನು ಬಳಸಿದ್ದು ಆ ಹೆಸರಿನಿಂದಲೇ ಮಹಿಳಾ ಪರ ಚಳವಳಿ
ಆರಂಭವಾಯಿತು. ಅಮಾನವಿಯ ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಜನರು ಭಾರತದಾದ್ಯಂತ ಬೀದಿಗಿಳಿದರು.
ಸುರಕ್ಷಿತ ಹಾಗೂ ಸಾಕಷ್ಟು ಸಾರ್ವಜನಿಕ ಸಾರಿಗೆ ಕೊರತೆ ಮತ್ತು ಅಸಮರ್ಪಕ ಭದ್ರತಾ ಕ್ರಮಗಳ ವಿರುದ್ಧ
ಚಳವಳಿ ತೀವ್ರಗೊಂಡಿತು. ವಾಟ್ಸ್ ಆಯಾಪ್, ಟ್ವಿಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳ
ಮೂಲಕ ಮಹಿಳಾ ದೌರ್ಜನ್ಯದ ಕುರಿತು ಚರ್ಚೆಗಳು ನಿರ್ಭಯಾ ಚಳವಳಿ ವೇಳೆ ಜರುಗಿದವು. ಸ್ವಯಂ ಪ್ರೇರಿತ
ಜನರು ಮೇಣಬತ್ತಿ ಹಿಡಿದು ಗಲ್ಲಿ ಗಲ್ಲಿಗಳಲ್ಲಿ ಮೌನ ಮೆರವಣಿಗೆ ನಡೆಸಿದರು. ಈ ಹೋರಾಟ ಲೈಂಗಿಕವಾಗಿ
ಶೋಷಿತ ಮಹಿಳೆಯರು ಮುಕ್ತವಾಗಿ ತಮ್ಮ ಮೇಲಾದ ಶೋಷಣೆಯನ್ನು ಬಹಿರಂಗಗೊಳಿಸಲು ಪ್ರೇರೇಪಿಸಿತು. ಸರ್ಕಾರಗಳು
ಮಹಿಳಾ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚಳವಳಿ ಕಾರಣವಾಯಿತು. ಲೈಂಗಿಕ ಅಪರಾಧದ ಕಾನೂನುಗಳನ್ನು
ಕಠಿಣಗೊಳಿಸಲು ಸಾಧ್ಯವಾಯಿತು. ನಿರ್ಭಯಾ ಹೋರಾಟ ಅದುವರೆಗೆ ಮಹಿಳೆ ಆಂತರ್ಯದಲ್ಲೇ ಉಳಿದು ಹೋಗುತ್ತಿದ್ದ
ಅನ್ಯಾಯವನ್ನು ಮುಕ್ತವಾಗಿ ಹೇಳಿಕೊಂಡು ನ್ಯಾಯ ಪಡೆಯಲು ಪೂರಕವಾಯಿತು ಎನ್ನಬಹುದು.
ಉ.
ಗುಲಾಬಿ ಗ್ಯಾಂಗ್ ಹೋರಾಟ: ಪೋಲಿಸರ ಅನುಪಸ್ಥಿತಿಯಲ್ಲಿ ಮಹಿಳಾ ಹಿತರಕ್ಷಣೆಗೆ ಪ್ರಯತ್ನಿಸುವ ಮಹಿಳಾ
ಸದಸ್ಯರ ಗುಂಪುಗಳೇ ಗುಲಾಬಿ ಗ್ಯಾಂಗ್. ಇದು ಉತ್ತರ ಪ್ರದೇಶ ರಾಜ್ಯದ ಬಂಡಾ ಜಿಲ್ಲೆಯ ಮೂಲದ ಮಹಿಳೆಯರು
ಮಹಿಳೆಯರಿಗಾಗಿ ಹೋರಾಡುವ ವಿನೂತನ ಮಹಿಳಾ ಚಳವಳಿಯಾಗಿದೆ. ಈ ಗುಂಪಿನ ಸದಸ್ಯರು ಗುಲಾಬಿ ಬಣ್ಣದ ಸೀರೆ
ಧರಿಸಿ ಕೈಯಲ್ಲಿ ಬಿದುರಿನ ಕೋಲನ್ನು ಹಿಡಿದಿರುತ್ತಾರೆ. ಸಂಪತ್‌ದೇವಿ ಪಾಲ್ ಎಂಬಾಕೆ ಗುಲಾಬಿ ಗ್ಯಾಂಗ್
ಋವಾರಿ ಎನ್ನಬಹುದು. ತನ್ನ ನೆರೆ ಮನೆಯ ಗಂಡಸು ಆತನ ಹೆಂಡತಿಯನ್ನು ಹಿಂಸಿಸುವಾಗ ತಡೆಯಲು ಹೋದ ಈಕೆ
ನಿಂದನೆಗೊಳಗಾದಳು. ಇದರಿಂದ ಕ್ರುದ್ಧಳಾದ ಆಕೆ ಕೂಡಲೇ ಬಿದುರಿನ ಕೋಲನ್ನು ದೌರ್ಜನ್ಯ ಎಸಗುತ್ತಿದ್ದ
ಪುರುಷನ ವಿರುದ್ಧ ಬಳಸಿ ಮಹಿಳೆಗಾಗುತ್ತಿದ್ದ ಹಿಂಸೆಯನ್ನು ತಡೆದಳು. ಇದರಿಂದ ಪ್ರೇರೇಪಣೆಗೊಂಡ ಪಾಲ್
2006 ರಲ್ಲಿ ಮಹಿಳಾ ಸಂರಕ್ಷಣೆಗಾಗಿ ಗುಲಾಬಿ ಗುಂಪಿನ
ರಚನೆಗೆ ಕಾರಣಳಾದಳು. ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ, ದೌರ್ಜನ್ಯ, ವರದಕ್ಷಿಣೆಯ ಕಿರುಕುಳ, ಲೈಂಗಿಕ
ದೌರ್ಜನ್ಯ, ಬಾಲ್ಯ ವಿವಾಹ ಘಟಿಸುವಲ್ಲಿ ತೆರಳಿ ಸಂತ್ರಸ್ತರ ರಕ್ಷಣೆ ಮಾಡುವುದು ಈ ಗುಲಾಬಿ ಗ್ಯಾಂಗ್‌ನ
ಉದ್ದೇಶವಾಗಿದೆ. ಮಹಿಳಾ ದೌರ್ಜನ್ಯ ಮಾಡುವವರನ್ನು ಸಂಧಾನ, ವಿನಂತಿ, ಮುಷ್ಕರಗಳ ಮೂಲಕ ಪರಿವರ್ತಿಸಲು
ಪ್ರಯತ್ನಿಸಿ ಸಾಧ್ಯವಿಲ್ಲದಾದಾಗ ಬಿದುರಿನ ಕೋಲುಗಳನ್ನು ಬಳಸಲು ಗುಲಾಬಿ ಗ್ಯಾಂಗ್ನ ಸದಸ್ಯರು ಮುಂದಾಗುವರು.
ಜೊತೆಗೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಈ ಗುಂಪುಗಳು ಪ್ರಯತ್ನಿಸುತ್ತಿವೆ. ಪ್ರಸ್ತುತ ಉತ್ತರ ಪ್ರದೇಶ
ಹಾಗೂ ಮಧ್ಯಪ್ರದೇಶದ ೧೧ ಜಿಲ್ಲೆಗಳಲ್ಲಿ ಬಡ ಹಾಗೂ ಹಿಂದುಳಿದ ಮಹಿಳೆಯರ ಹಿತರಕ್ಷಣೆಗೆ ೪ ಲಕ್ಷ ಸದಸ್ಯರನ್ನುಳ್ಳ
ಸಾವಿರಾರು ಗುಂಪುಗಳು ಕ್ರಿಯಾಶೀಲವಾಗಿವೆ. ಇತ್ತೀಚೆಗೆ ವಿಧವಾ ಪುನರ್ವಿವಾಹ, ಅಂತರ್ಜಾತಿ ವಿವಾಹ,
ಶಿಕ್ಷಣ, ಬ್ರಷ್ಟಾಚಾರದಂತಹ ಸಾಮಾಜಿಕ ಹಿತಕ್ಕೂ ಈ ಗುಲಾಬಿ ಗ್ಯಾಂಗ್ಗಳು ಶ್ರಮಿಸುತ್ತಿವೆ. ಮಹಿಳೆ
ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ರಾಜಕಿಯವಾಗಿ ಪುರುಷನಿಗೆ ಸಮಾನಳಾಗಿ ಬಾಳಲು
ಪೂರಕ ವಾತಾವರಣವನ್ನು ಸಮಾಜದಲ್ಲಿ ಸ್ಥಾಪಿಸಲು ಈ ಗುಂಪುಗಳು ಹೋರಾಡುತ್ತಿವೆ.
ಊ. #ಮಿ
ಟೂ [ನಾನೂ ಕೂಡ] ಚಳವಳಿ: ಮಹಿಳೆ ತನಗಾದ ಲೈಂಗಿಕ ದೌರ್ಜನ್ಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅಮೇರಿಕ
ಮೂಲದ ಮಹಿಳಾ ಚಳವಳಿಯಾಗಿದೆ. 1997 ರಲ್ಲಿ ಹೆವನ್ ಎಂಬ ಹುಡುಗಿಯ ಲೈಂಗಿಕ ಶೋಷಣೆಯನ್ನು ಆಲಿಸಿದ ಬಳಿಕ
ತರಾನಾ ಬರ್ಗ್ ನನಗಾದರೂ ಕೂಡ ಹೇಳಬಾರದಿತ್ತೇ ಎಂಬರ್ಥದಲ್ಲಿ ಮಿ ಟೂ ಪದ ಬಳಸಿದಳು. ಮಿ ಟೂ ಪದ ಶೋಷಣೆಗೊಳಗಾದವರಲ್ಲಿ
ಆತ್ಮಬಲ, ಧೈರ್ಯ, ಭರವಸೆ ಮೂಡಿಸುವ ಸಾಮರ್ಥ್ಯ ಹೊಂದಿರುವುದನ್ನು ತರಾನಾ ಬರ್ಗ್ ಕಂಡುಕೊಂಡಳು. ಹೀಗೆ
ಬಳಸಲ್ಪಟ್ಟ ಮಿ ಟೂ ೨೦೦೬ ರಲ್ಲಿ ಅಮೇರಿಕದ ಸಾಮಾಜಿಕ ಮಾಧ್ಯಮವೊಂದರಲ್ಲಿ ಸದ್ದು ಮಾಡಿತು. ಈ ಪರಿಕಲ್ಪನೆಗೆ
ಅಕ್ಟೋಬರ್ ೨೦೧೭ ರಲ್ಲಿ ಹಾಲಿವುಡ್ ನಟಿ ಅಲಿಸೊ ಮೆಲಾನೊ ಮರುಚಾಲನೆ ನೀಡಿದಳು. ಯಾರಿಗಾದರೂ ಲೈಂಗಿಕ
ಶೋಷಣೆಯ ಅನುಭವವಾಗಿದ್ದಲ್ಲಿ ಫೇಸ್ಬುಕ್ನಲ್ಲಿ ಹಂಚಿಕೊಳ್ಳಲು ಮೆಲಾನೊ ತನ್ನ ಅನುಯಾಯಿಗಳಿಗೆ ಕರೆಕೊಟ್ಟಾಗ
ಒಂದೇ ದಿನ ೧೨ ಮಿಲಿಯನ್ ಮಹಿಳೆಯರು ತಮಗಾದ ನೋವನ್ನು ಹಂಚಿಕೊಂಡರು. ಭಾರತದಲ್ಲಿ ಬಾಲಿವುಡ್ ನಟಿ
ತನುಶ್ರಿ ದತ್ತಾ # ಮಿ ಟೂ ಅಭಿಯಾನದಡಿ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ
ಚಳವಳಿ ತೀವ್ರತೆ ಪಡೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಖ್ಯಾತ
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು # ಮಿಟೂ ಅಭಿಯಾನದಡಿ ಮಾಡಿದ್ದರು.
ಒಟ್ಟಾರೆ ಕಾರ್ಯ ಕ್ಷೇತ್ರದಲ್ಲಿ ಮಹಿಳೆಗಾದ ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಈ ಚಳವಳಿ
ವೇಧಿಕೆ ಒದಗಿಸಿತು. # ಮಿ ಟೂ ಅಭಿಯಾನ ಚಿತ್ರನಟರು, ರಾಜಕಾರಣಿಗಳು, ಪತ್ರಿಕೊದ್ಯಮಿಗಳ ಬಣ್ಣವನ್ನು
ಅನ್ಯಾಯಕ್ಕೊಳಗಾದ ಮಹಿಳೆಯರು ಬಯಲಿಗೆಳೆಯಲು ಶಕ್ತಿ ನೀಡಿತು. ಸಮಾಜದಲ್ಲಿ ಮಹಿಳೆ ವಿವಿಧ ರಂಗಗಳಲ್ಲಿ
ಇಂದಿಗೂ ಅನುಭವಿಸುತ್ತಿರುವ ತುಮುಲಗಳ ಮೇಲೆ ಬೆಳಕು ಚೆಲ್ಲಿತು ಎನ್ನಬಹುದು.
ಮೇಲೆ ಪ್ರಸ್ತಾಪಿಸಿದ
ಕೆಲವು ಜನಪ್ರಿಯ ಮಹಿಳಾ ಚಳವಳಿಗಳಲ್ಲದೇ ಮಹಿಳೆಯರು ನಕ್ಸಲೈಟ್ ಚಳವಳಿ, ಚಿಪ್ಕೊ ಚಳವಳಿ, ತೆಲಂಗಾಣ
ಹೋರಾಟ ಮುಂತಾದವುಗಳಲ್ಲಿ ಭಾಗವಹಿಸಿದ್ದಾರೆ. ಮಹಿಳಾ ಚಳವಳಿಗಳ ಯಶಸ್ಸಿಗೆ ಸ್ವಯಂ ಉದ್ಯೋಗಿ ಮಹಿಳಾ
ಸಂಘ [SEWA], ಕಾರ್ಯನಿರತ ಮಹಿಳಾ ಸಂಸ್ಥೆ [WWO], ಮಹಿಳಾ ಸಮತಾ ಸೈನಿಕ ದಳ, ಪ್ರಗತಿಪರ ಮಹಿಳಾ ಸಂಘಟನೆ,
ಮುಂತಾದವುಗಳ ಕಾಣಿಕೆ ಅಪಾರವಾಗಿದೆ.
ಮಹಿಳಾ ಚಳವಳಿಗಳ ಪರಿಣಾಮಗಳು: ಭಾರತದಲ್ಲಿ ಪುನರುಜ್ಜೀವನ ಕಾಲದಿಂದ ಆರಂಭಗೊಂಡು
ಇಲ್ಲಿಯವರೆಗೂ ನಡೆದಿರುವ ಮಹಿಳಾ ಚಳವಳಿಗಳು ಅನೇಕ ಪರಿಣಾಮಗಳನ್ನು ಉಂಟು ಮಾಡಿವೆ. ಸಾಂಪ್ರದಾಯಿಕ ಬಾರತೀಯ
ಸಮಾಜದಲ್ಲಿ ಮಹಿಳೆಯ ಸ್ಥಾ-ನಮಾನಗಳ ಸುಧಾರಣೆಯಲ್ಲಿ ಈ ಚಳವಳಿಗಳು ಸಾಕಷ್ಟು ಯಶಸ್ವಿಯಾಗಿವೆ. ಮಹಿಳಾ
ಹೋರಾಟಗಳಿಂದ ಮಹಿಳೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕಿಯ ಹಾಗೂ ಸಾಂಸ್ಕೃತಿಕ ಪರಿಸ್ಥಿತಿಗಳಲ್ಲಿ
ಗಮನಾರ್ಹವಾದ ಸುಧಾರಣೆ ಆಗಿದೆ. ಇದರಿಂದ ಅನೇಕ ಪರಿಣಾಮಗಳು
ಉಂಟಾಗಿದ್ದು, ಅವುಗಳನ್ನು ಕೆಳಗೆ ವಿವರಿಸಲಾಗಿದೆ.
ಅ. ಸಂವಿಧಾನಾತ್ಮಕ ಸಮಾನವಕಾಶಗಳಿಗೆ ಕ್ರಮ: ಸಮಾಜ
ಸುಧಾರಕರು ಕೈಗೊಂಡ ಹಲವು ಮಹಿಳಾ ಪರವಾದ ಚಳವಳಿಗಳು ಮಹಿಳೆಯರ ಸ್ಥಾನಮಾನದ ಮೇಲೆ ಬೆಳಕು ಚೆಲ್ಲಿದವು.
ಸಂವಿದಾನ ರಚನೆಯ ವೇಳೆಗೆ ಮಹಿಳೆಯರ ಸ್ಥಾನ-ಮಾನಗಳ ಸುಧಾರಣೆಯ ಅಗತ್ಯತೆಯ ಜಾಗೃತಿಯನ್ನು ಚಳವಳಿಗಳು
ಮೂಡಿಸಿದ್ದವು. ಹೀಗಾಗಿ ಭಾರತ ಸಂವಿಧಾನ ರಚನಾಕಾರರು ಪುರುಷ ಪ್ರಧಾನ ಭಾರತದಲ್ಲಿ ಮಹಿಳೆಗೆ ಸಮಾನವಕಾಶ ಒದಗಿಸಲು ಮುಂದಾದರು. ಸಮಾನತೆ, ಸ್ವಾತಂತ್ರ ಹಾಗೂ
ಸಹೋದರತ್ವ ತತ್ವದಡಿ ಮಹಿಳೆಯರ ಸಾಮಾಜಿಕ, ಆರ್ಥಿಕ,
ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕಿಯ ಹಿತರಕ್ಷಣೆಗಾಗಿ ಸಂವಿಧಾನದ ಹಲವು ವಿಧಿಗಳಲ್ಲಿ ಪ್ರಯತ್ನಿಸಿದ್ದಾರೆ.
ಉದಾ: ವಿಧಿ ೧೪ರಡಿ ಕಾನೂನಿನ ಮುಂದೆ ಸಮಾನತೆ ಹಾಗೂ ಸಮಾನ ರಕ್ಷಣೆಯನ್ನು, ವಿಧಿ ೧೫ರಡಿ ಸಾರ್ವಜನಿಕ
ಸ್ಥಳಗಳಿಗೆ ಸಮಾನ ಪ್ರವೇಶವಕಾಶವನ್ನು, ವಿಧಿ ೧೬ರಡಿ ಸರ್ಕಾರಿ ಉದ್ಯೋಗ ಹೊಂದುವ ಅವಕಾಶವನ್ನು, ವಿಧಿ
೨೩ರಡಿ ಶೋಷಣೆಯನ್ನು ವಿರೋಧಿಸುವುದನ್ನು, ವಿಧಿ ೩೯(B)ರಡಿ ಸಮಾನ ದುಡಿಮೆಗೆ ಸಮಾನ ವೇತನ ಪಡೆಯುವುದನ್ನು,
ವಿಧಿ ೪೨ರಡಿ ಗರ್ಭಿಣಿ ಮಹಿಳೆ ಕೆಲಸದಿಂದ ವಿನಾಯಿತಿ ಪಡೆಯುವುದನ್ನು, ವಿಧಿ ೩೨೬ರಡಿ ಮತದಾನ ಮಾಡುವುದನ್ನು
ಸಂವಿಧಾನಾತ್ಮಕವಾಗಿ ಮಹಿಳೆಯರಿಗೆ ಖಾತ್ರಿಪಡಿಲಾಗಿದೆ. ಹೀಗೆ ಮಹಿಳಾ ತಾರತಮ್ಯ ಹೋಗಲಾಡಿಸಲು ಸಂವಿಧಾನಾತ್ಮಕ
ಸಮಾನವಕಾಶಗಳು ನೆರವಾಗಿವೆ.
ಆ. ಮಹಿಳಾ ಪರ ಶಾಸನಗಳ ಜಾರಿ: ಪುನರುಜ್ಜೀವನ ಕಾಲದಲ್ಲಿ
ಸಮಾಜ ಸುಧಾರಕರ ಹೋರಾಟಕ್ಕೆ ಮಣಿದು ಬ್ರಿಟಿಷ್ ಸರ್ಕಾರ ಅನೇಕ ಮಹಿಳಾ ಪರವಾದ ಕಾಯಿದೆಗಳನ್ನು ಜಾರಿಗೊಳಿಸಿತ್ತು.
ಉದಾ: 1829 ರ ಸತಿ ನಿಷೇಧ ಕಾಯಿದೆ, 185೪ ರ ವಿಧವಾ ಪುನರ್ವಿವಾಹ ಕಾಯಿದೆ ಇತ್ಯಾದಿ. ಇದರೊಡನೆ ಭಾರತಿಯ
ದಂಡ ಸಂಹಿತೆ ಮೂಲಕ ಮಹಿಳೆಯರ ಸವಾಲುಗಳಿಗೆ ತಾತ್ಕಾಲಿಕ ಪರಿಹಾರವನ್ನು ಬ್ರಿಟಿಷ್ ಸರ್ಕಾರ ಒದಗಿಸಿತ್ತು.
ಸ್ವತಂತ್ರ್ಯ ನಂತರ ಭಾರತ ಸರ್ಕಾರ ಮಹಿಳಾ ಚಳವಳಿ ಬೆಳಕು ಚೆಲ್ಲಿದ ಸಮಸ್ಯೆಗಳ ನಿರ್ಮೂಲನೆಗಾಗಿ ಹಲವು
ಶಾಸನಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಮಹಿಳಾ ಚಳವಳಿ ವ್ಯಕ್ತಪಡಿಸುವ ಮಹಿಳಾ ಸಮಸ್ಯೆಗಳನ್ನು ಹೋಗಲಾಡಿಸಲು
ಸಂಸತ್ತು ಕಾಲಕಾಲಕ್ಕೆ ವಿವಿಧ ಶಾಸನಗಳನ್ನು ಅನುಷ್ಟಾನಗೊಳಿಸಿದೆ. ಅವುಗಳಲ್ಲಿ ವಿಶೇಷ ವಿವಾಹ ಕಾಯಿದೆ
೧೯೫೪, ವರದಕ್ಷಿಣೆ ನಿಷೇಧ ಕಾಯಿದೆ 1961, ಭಾರತೀಯ ವಿಚ್ಚೇಧನಾ ಕಾಯಿದೆ 1969, ಸಮಾನ ವೇತನ ಕಾಯಿದೆ
1976, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಯಂತ್ರಣ ಕಾಯಿದೆ 1986 (Indecent Representation
of Women (Prohibition) Act, 1986), ಗೃಹ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆ 2005, ಬಾಲ್ಯ
ವಿವಾಹ ನಿಷೇಧ ಕಾಯಿದೆ 2006, ಕಾರ್ಯಸ್ಥಳದಲ್ಲಿ ಲೈಂಗಿಕ ಶೋಷಣೆ ತಡೆಗಟ್ಟುವಿಕೆ, ನಿಷೇಧ ಹಾಗೂ ಪರಿಹಾರ
ಕಾಯಿದೆ 2013 ಪ್ರಮುಖವಾದವು.
ಇ. ಮಹಿಳಾ ಆಯೋಗಗಳ ಸ್ಥಾಪನೆ: ಕೇಂದ್ರ ಸರ್ಕಾರವು
ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಗಳ ಅಧ್ಯಯನಕ್ಕಾಗಿ 1974 ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. [CSWI]
ಈ ಸಮಿತಿಯು ತನ್ನ ವರದಿಯಲ್ಲಿ ಮಹಿಳೆಯರ ಕುಂದುಕೊರತೆಗಳ ನಿವಾರಣೆ ಮತ್ತು ಸಾಮಾಜಿಕ ಹಾಗೂ ರಾಜಕಿಯ
ಪ್ರಗತಿಯ ಮೇಲ್ವಿಚಾರಣೆಗೆ ರಾಷ್ಟ್ರೀಯ ಸಂಸ್ಥೆಯೊಂದರ ಸ್ಥಾಪನೆಗೆ ಶಿಫಾರಸ್ಸು ಮಾಡಿತು. ಇದರೊಡನೆ
ಸಾಮಾಜಿಕ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಬೇಡಿಕೆಯೂ ಇದೇ ಆಗಿತ್ತು.
ಹೀಗಾಗಿ ಆಗಸ್ಟ್ ೧೯೯೦ ರಲ್ಲಿ ಸಂಸತ್ತು ರಾಷ್ಟ್ರಿಯ ಮಹಿಳಾ ಆಯೋಗ ಕಾಯಿದೆಯನ್ನು ಅಂಗೀಕರಿಸಿತು.
ಈ ಕಾಯಿದೆಯಂತೆ ೩೧ ಜನೇವರಿ ೧೯೯೨ ರಂದು ರಾಷ್ಟ್ರಿಯ ಮಹಿಳಾ ಆಯೋಗ ಸ್ಥಾಪನೆಗೊಂಡಿತು. ಮಹಿಳೆಯರಿಗೆ
ಸಂಬಂಧಿಸಿದ ಸರ್ಕಾರದ ನೀತಿ ನಿರೂಪಣೆಯಲ್ಲಿ ಸಲಹೆ ನೀಡುವುದು ಹಾಗೂ ಮಹಿಳಾ ಹಕ್ಕುಗಳ ಸಂರಕ್ಷಣೆಗೆ
ಪ್ರಾತಿನಿಧ್ಯ ಒದಗಿಸುವುದು ಇದರ ಮುಖ್ಯ ಕಾರ್ಯಗಳಾಗಿವೆ.
ಜೊತೆಗೆ ಮಹಿಳಾ ಶೋಷಣೆ ತಡೆದು ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು ರಾಷ್ಟ್ರೀಯ ಮಹಿಳಾ ಆಯೋಗದ
ಉದ್ದೇಶವಾಗಿದೆ. ಇದರೊಡನೆ ರಾಜ್ಯ ಮಹಿಳಾ ಆಯೋಗಗಳನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ.
1995 ರ ಕರ್ನಾಟಕ ಮಹಿಳಾ ಆಯೋಗ ಕಾಯಿದೆಯಂತೆ 06 ಆಗಸ್ಟ್ 1996 ರಂದು ಕರ್ನಾಟಕದಲ್ಲಿ ರಾಜ್ಯ ಮಹಿಳಾ
ಆಯೋಗ ಅಸ್ತಿತ್ವಕ್ಕೆ ಬಂದಿದೆ.
ಈ. ರಾಜಕಿಯ ಭಾಗವಹಿಸುವಿಕೆಯಲ್ಲಿ ಹೆಚ್ಚಳ: ಮಹಿಳಾ
ಚಳವಳಿಗಳ ಪರಿಣಾಮವಾಗಿ ಸ್ವತಂತ್ರ ಪೂರ್ವದಲ್ಲೇ ಮಹಿಳೆಯರು ರಾಜಕಿಯ ಪ್ರಾತಿನಿಧ್ಯದ ಅವಕಾಶವನ್ನು ಪಡೆದುಕೊಂಡರು.
1917 ರಲ್ಲಿ ಅನಿಬೆಸೆಂಟ್ ಹಾಗೂ 1925 ರಲ್ಲಿ ಸರೋಜಿನಿ ನಾಯ್ಡು ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ನ
ಅಧ್ಯಕ್ಷತೆ ವಹಿಸಿಕೊಳ್ಳಲು ಅವಕಾಶ ದೊರಕಿತು. ಮದ್ರಾಸ್ ಪ್ರಾಂತದ ಮಹಿಳೆಯರಿಗೆ ಮತದಾನದ ಹಕ್ಕನ್ನು
ಮೊದಲು ನೀಡಲಾಗಿತ್ತು. 1926 ರಿಂದ ಚುನಾವಣೆಗಳಲ್ಲಿ ಮಹಿಳೆಯರು ಮತದಾನದ ಸೀಮಿತ ಅವಕಾಶಗಳನ್ನು ಪಡೆದರು.
ಭಾರತ ಸಂವಿಧಾನ ಲಿಂಗ ಬೇಧವಿಲ್ಲದೇ ಎಲ್ಲ ಮಹಿಳೆಯರಿಗೆ ಪುರುಷನಂತೆ ರಾಜಕಿಯ ಭಾಗವಹಿಸುವಿಕೆಗೆ ಅವಕಾಶ
ಕಲ್ಪಿಸಿತು. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಹೆಚ್ಚಾಗಿ ಕಂಡು ಬರದಾದಳು. ಹೀಗಾಗಿ ಸ್ಥಳೀಯ
ಸಂಸ್ಥೆಗಳ ಶೇ ೩೩ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕರ್ನಾಟಕ ಇನ್ನೂ ಒಂದು ಹೆಜ್ಜೆ ಮುಂದಿಟ್ಟು
ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ ೫೦ ಸ್ಥಾನಗಳನ್ನು ಮೀಸಲಿಡಲು ನಿರ್ಧರಿಸಿದೆ. ಇದರೊಡನೆ ಕೇಂದ್ರ
ಶಾಸಕಾಂಗ ಹಾಗೂ ರಾಜ್ಯ ಶಾಸಕಾಂಗಗಳಲ್ಲಿ ಶೇ ೩೩ ರಷ್ಟು ಮಹಿಳಾ ಮೀಸಲಾತಿ ಒದಗಿಸಬೇಕೆಂಬ ಪ್ರಯತ್ನಗಳು
ಜರುಗಿದ್ದು ಇಚ್ಛಾ ಶಕ್ತಿಯ ಕೊರತೆಯಿಂದ ಇಂದಿಗೂ ಕೈಗೂಡದಿರುವುದು ಗಮನಾರ್ಹ.
ಉ. ಮಹಿಳಾ
ಸಬಲೀಕರಣಕ್ಕೆ ಕ್ರಮ: ಮಹಿಳಾ ಚಳವಳಿಗೆ ಕಾರಣವಾಗುವ ಮಹಿಳೆಯರ ಶೋಚನಿಯ ಪರಿಸ್ಥಿತಿ ನಿರ್ಮೂಲನೆಗೆ ಸರ್ಕಾರಗಳು
ಹಲವು ಕ್ರಮಗಳನ್ನು ಕೈಗೊಂಡಿವೆ. ಚಳವಳಿಯಿಂದ ವ್ಯಕ್ತವಾಗುವ ಮಹಿಳಾ ಸಮಸ್ಯೆಗಳನ್ನು ಹೋಗಲಾಡಿಸಿ ಮಹಿಳೆಯರ
ಸಬಲೀಕರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಭಾರತ ಸರ್ಕಾರ ಹಮ್ಮಿಕೊಂಡಿರುವ ಪ್ರಮುಖ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳ
ವಿವರ ಕೆಳಗಿನಂತಿದೆ.
*
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ೨೨ ಜನೇವರಿ 2015 ರಂದು ಆರಂಭಿಸಲಾಯಿತು. ಬಾಲಕಿಯರಿಗೆ
ಶಿಕ್ಷಣ ನೀಡುವುದು, ಹೆಣ್ಣು ಶಿಶುವಿನ ಜನನವನ್ನು ಸಂಭ್ರಮಿಸುವುದು ಹಾಗೂ ಮಹಿಳಾ ಹಿಂಸೆಯನ್ನು ನಿಯಂತ್ರಿಸುವುದು
ಇದರ ಉದ್ದೇಶವಾಗಿವೆ.
*
ಮಹಿಳಾ ಸಹಾಯವಾಣಿ ಕಾರ್ಯಕ್ರಮ ೧ ಏಪ್ರಿಲ್ 2015 ರಂದು ಜಾರಿಗೊಂಡಿತು. ಕುಟುಂಬ, ಸಮುದಾಯ ಅಥವ ಕಾರ್ಯಸ್ಥಳದಲ್ಲಿನ
ಮಹಿಳೆಯರ ಲೈಂಗಿಕ ಶೋಷಣೆಗೆ ಸ್ಪಂದಿಸಲು 24*೭ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಸಾರ್ವಜನಿಕ ಅಥವ
ಖಾಸಗಿ ಸ್ವರೂಪದ ಮಹಿಳಾ ಶೋಷಣೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ.
*
ಉದ್ಯೋಗಸ್ಥ ಮಹಿಳೆಯರ ವಸತಿನಿಲಯ ಯೋಜನೆ 1973 ರಿಂದ ಜಾರಿಯಲ್ಲಿದ್ದರೂ ೬ ಏಪ್ರಿಲ್, 2017 ರಿಂದ
ಪುನರ್ರಚನೆಗೊಂಡು ಅನುಷ್ಟಾನಗೊಂಡಿದೆ. ನಗರ, ಪಟ್ಟಣ ಅಥವ ಗ್ರಾಮೀಣ ಪ್ರದೇಶಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ
ಅನುಕೂಲಕರ ಹಾಗೂ ಭದ್ರ ನೆಲೆ ಒದಗಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಉದ್ಯೋಗಸ್ಥ ಮಹಿಳೆಯರ ಮಕ್ಕಳ ನಿರ್ವಹಣೆಯೂ ಈ ಯೋಜನೆಯ ಆಶಯವಾಗಿದೆ.
*
ಸ್ವದಾರ್ ಯೋಜನೆ ೨೦೦೨ ರಲ್ಲಿ ಜಾರಿಗೊಂಡಿದೆ. ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಬೆಂಬಲವಿಲ್ಲದೇ
ಸಂಕಷ್ಟದಲ್ಲಿರುವ ಮಹಿಳೆಯರ ಹಿತರಕ್ಷಣೆ ಇದರ ಉದ್ದೇಶವಾಗಿದೆ. ಜೈಲಿನಿಂದ ಹೊರಬಂದ ಮಹಿಳಾ ಕೈದಿಗಳು,
ನೈಸರ್ಗಿಕ ವಿಕೋಪಗಳಿಂದ ನಿರಾಶ್ರಿತರಾದ ಮಹಿಳೆಯರು, ವಿಧವೆಯರು, ಬುದ್ಧಿಮಾಂದ್ಯ ಮಹಿಳೆಯರು, ಎಚ್.
ಐ. ವಿ ಪೀಡಿತ ಮಹಿಳೆಯರಿಗೆ ಈ ಯೋಜನೆಯಡಿ ಸುಭದ್ರ ಜೀವನ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
*
ಮಹಿಳಾ ತರಬೇತಿ ಹಾಗೂ ಉದ್ಯೋಗ ನೆರವು ಕಾರ್ಯಕ್ರಮವನ್ನು 1986/87 ರಿಂದ ಅನುಷ್ಟಾನಗೊಳಿಸಿದ್ದು ೨೦೧೪
ರಲ್ಲಿ ಪುನರ್ರಚನೆಗೊಂಡು ಜಾರಿಯಲ್ಲಿದೆ. [SUPPORT TO TRANING AND EMPLOYMENT SCHEME] ಅಂದರೆ
ಸ್ಟೆಪ್ ಎಂದು ಪರಿಚಿತವಾಗಿರುವ ಈ ಕಾರ್ಯಕ್ರಮವು ಮಹಿಳೆಯರಲ್ಲಿ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು
ವೃದ್ಧಿಗೊಳಿಸುವ ಉದ್ದೇಶ ಹೊಂದಿದೆ. ಜೊತೆಗೆ ಮಹಿಳೆಯರು ಸಮರ್ಥ ಸ್ವಯಂ ಉದ್ಯೋಗಿ ಅಥವ ಉದ್ಯಮಿಯಾಗಲು
ನೆರವು ನೀಡಲು ಪ್ರಯತ್ನಿಸುತ್ತದೆ.
*
ಮಹಿಳಾ ಈ ಹಾಟ್ ಯೋಜನೆಯನ್ನು ೭ ಮಾರ್ಚ್ 2016 ರಂದು ಜಾರಿಗೊಳಿಸಲಾಗಿದೆ. ಸ್ಟ್ಯಾಂಡ್ ಅಪ್ ಇಂಡಿಯಾ
ಹಾಗೂ ಮೇಕ್ ಇನ್ ಇಂಡಿಯಾ ಪ್ರಯತ್ನಗಳ ಭಾಗವಾಗಲು ಮಹಿಳೆಯರಿಗೆ ಆರ್ಥಿಕ ಸಹಕಾರವನ್ನು ಒದಗಿಸುವುದು
ಇದರ ಪ್ರಮುಖ ಉದ್ದೇಶವಾಗಿದೆ.
* ರಾಷ್ಟ್ರಿಯ
ಮಹಿಳಾ ಕೋಷ ಅಂದರೆ ರಾಷ್ಟ್ರಿಯ ಮಹಿಳಾ ಸಾಲ ನಿಧಿ [NCFW] 1993 ರಲ್ಲಿ ಜಾರಿಗೊಂಡಿತು. ಬಡ ಹಾಗೂ
ಆಸ್ತಿರಹಿತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ಹಣಕಾಸಿನ ನೆರವು ನೀಡುವುದು ಇದರ ಪ್ರಮುಖ
ಉದ್ದೇಶವಾಗಿದೆ.
Comments
Post a Comment