ಗುಪ್ತರ ಕಾಲದ ಸುವರ್ಣ ಯುಗದ ವಿಶ್ಲೇಷಣೆ
ಪೀಠಿಕೆ: ಭಾರತದ ಇತಿಹಾಸದಲ್ಲಿ ಆಳ್ವಿಕೆ ಮಾಡಿರುವ ಅನೇಕ ರಾಜಮನೆತನಗಳು
ವೈಭವದಿಂದ ಆಡಳಿತ ನಡೆಸಿ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಅಂತಹ ಕೆಲವು ರಾಜಮನೆತನಗಳಲ್ಲಿ
ಗುಪ್ತರ ಮನೆತನವೂ ಒಂದು. ಇವರ ಕಾಲಾವದಿ ಸಾ.ಶ.ವ. 300ರ ಆಸು-ಪಾಸಿನಿಂದ 550ರವರೆಗೆ ವ್ಯಾಪಿಸಿತ್ತು.
ಸಮುದ್ರಗುಪ್ತ, ಚಂದ್ರಗುಪ್ತ ಮತ್ತು ಕುಮಾರ ಗುಪ್ತರು ಈ ಮನೆತನದ ಶ್ರೇಷ್ಠ ಸಾಮ್ರಾಟರು. ಸಮುದ್ರಗುಪ್ತನ
ಕಾಲದಲ್ಲಿ ಸಾಮ್ರಾಜ್ಯವು ಉತ್ತರ-ದಕ್ಷಿಣದಲ್ಲಿ ವಿಸ್ತರಿಸಿದ್ದರೆ, ಇಮ್ಮಡಿ ಚಂದ್ರಗುಪ್ತನ ಕಾಲದಲ್ಲಿ
ಪಶ್ಚಿಮದಲ್ಲಿ ಗುಜರಾತ್, ಪಂಜಾಬ್ ಮತ್ತು ಗಾಂಧಾರಗಳವರೆಗೂ ವಿಸ್ತರಿಸಿತ್ತು. ಸಾಮಾನ್ಯವಾಗಿ ಎರಡನೆ
ಚಂದ್ರಗುಪ್ತನ ಆಳ್ವಿಕೆಯ ಕಾಲವನ್ನು ಇವರ ಕಾಲದ ಸುವರ್ಣಯುಗವೆಂದು ಪರಿಗಣಿಸಲಾಗಿದೆ.
ಪಾಶ್ಚಾತ್ಯ ಇತಿಹಾಸಕಾರ
ವಿ.ಎ. ಸ್ಮಿತ್ ಮತ್ತು ಕೆಲವು ರಾಷ್ಟ್ರೀಯವಾದಿ
ಇತಿಹಾಸಕಾರರು ಸುವರ್ಣಯುಗದ ಪ್ರತಿಪಾದನೆ ಮಾಡಿದ್ದಾರೆ. ಇವರ ಪ್ರಕಾರ ಗುಪ್ತರ ಕಾಲದಲ್ಲಿ ಸಾಮ್ರಾಜ್ಯ
ವಿಸ್ತಾರವು ಮೌರ್ಯರ ನಂತರದಲ್ಲಿ ವಿಶಾಲವಾದ ವ್ಯಾಪ್ತಿಯನ್ನು ಪಡೆಯಿತು. ಅಲ್ಲದೇ ಸಾಹಿತ್ಯ, ಕಲೆ,
ವಿಜ್ಞಾನ, ವಾಸ್ತು-ಶಿಲ್ಪ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಗಣನೀಯವಾದ ಸಾಧನೆಗಳಾದವು. ಮೌರ್ಯರ ನಂತರ ವೈದಿಕ ಧರ್ಮವು
ಇವರ ಕಾಲದಲ್ಲಿ ಯಾವುದೇ ಹಿಂಸೆ ಮತ್ತು ರಕ್ತಪಾತಗಳಿಲ್ಲದೇ ಪುನರುಜ್ಜೀವನಗೊಂಡಿತು. ಅಂತೆಯೇ ವಿದೇಶಿ
ವ್ಯಾಪಾರವೂ ಸಾಕಷ್ಟು ಅಬಿವೃದ್ಧಿ ಹೊಂದಿತು. ಶೈಕ್ಷಣಿಕವಾಗಿ ನಳಂದಾದಂತಹ ವಿಶ್ವವಿದ್ಯಾಲಯಗಳು ಆರಂಬವಾದವು.
ಇವರ ಕಾಲದಲ್ಲಿ ಗುಪ್ತರ ಖ್ಯಾತಿಯು ಭಾರತದ ಗಡಿಯಾಚೆಗೂ ಅಂದರೆ ದ್ವೀಪ ರಾಷ್ಟ್ರಗಳಲ್ಲಿ ಹರಡಿತು. ಇದರಿಂದಾಗಿ
ಇವರ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗಿದೆ.
ಆದರೆ ಡಾ. ಡಿ. ಎನ್. ಝಾ, ರೊಮಿಲ್ಲಾ ಥಾಪರ್, ಆರ್.
ಎಸ್. ಶರ್ಮ ಮತ್ತು ಬರ್ನೆಟ್ ರಂತಹ ವಿದ್ವಾಂಸರು ಗುಪ್ತರ ಯುಗವನ್ನು ಟೀಕಿಸಿದ್ದು, ಸುವರ್ಣಯುಗದ
ಕಲ್ಪನೆಯು ಕೇವಲ ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿತ್ತೆಂದು ಹೇಳಿದ್ದಾರೆ. ಏಕೆಂದರೆ ಉನ್ನತ ವರ್ಗದವರಿಗೆ
ಮತ್ತು ಶ್ರೀಮಂತ ವರ್ಗದವರಿಗೆ ಲಭ್ಯವಿದ್ದ ಸೌಲಭ್ಯಗಳು ಕೆಳವರ್ಗದವರಿಗೆ ಇರಲಿಲ್ಲ. ಉದಾ: ಶ್ರೀಮಂತರು,
ಬ್ರಾಹ್ಮಣರು ಮತ್ತು ಕ್ಷತ್ರಿಯರು ಮೂರರಿಂದ ಐದು ಕೋಣೆಗಳುಳ್ಳ ಮನೆಗಳಲ್ಲಿ ವಾಸಿಸಿದರೆ, ಶೂದ್ರರು ಕೇವಲ ಎರಡು ಕೊಠಡಿಗಳ ಮನೆಗಳಲ್ಲಿ ವಾಸಿಸಬೇಕು ಎಂಬುದನ್ನು
ವರಾಹಮಿಹಿರನ ಬರವಣಿಗೆಗಳಿಂದ ತಿಳಿಯಬಹುದು ಎಂದಿದ್ದಾರೆ. ಅಂತೆಯೇ ಗುಪ್ತ ಅರಸರು ನೀಡಿದ ಉದಾರ ಬೂದತ್ತಿಗಳ
ಕಾರಣ ಊಳಿಗಮಾನ್ಯ ಪದ್ಧತಿಯು ಬೆಳೆಯಲು ಸಾಧ್ಯವಾಯಿತು. ಇಲ್ಲಿ ಕಲೆಸ ಮಾಡುವ ರೈತರಿಗೆ ಸಾಮಾಜಿಕ ಬದ್ರತೆ
ಇರಲಿಲ್ಲ. ಜೊತೆಗೆ ನಾರದ ಸ್ಮೃತಿಯಲ್ಲಿ ಸು. 14 ಬಗೆಯ ವಿವಿಧ ಗುಲಾಮರಿದ್ದ ಬಗೆಗೆ ಉಲ್ಲೇಖಗಳಿವೆ.
ಅದರಂತೆ ವಾತ್ಸಾಯನ ಮತ್ತು ಕಾಳಿದಾಸರ ಬರವಣಿಗೆಗಳಲ್ಲಿಯೂ ವೇಶ್ಯಾವಾಟಿಕೆ ರೂಢಿಯಲ್ಲಿದ್ದ ಬಗ್ಗೆ ತಿಳಿದು
ಬಂದಿದೆ. ಫಾಹಿಯಾನನ ಬರವಣಿಗೆಗಳಿಂದ ಚಾಂಡಾಲರ ಸ್ಥಾನ-ಮಾನಗಳು ಉತ್ತಮವಾಗಿರಲಿಲ್ಲ ಎಂಬ ಅಂಶ ತಿಳಿದು
ಬರುತ್ತದೆ. ಅಲ್ಲದೇ ಗುಪ್ತರ ಸಾಮ್ರಾಜ್ಯವು ವಿಸ್ತಾರದ ದೃಷ್ಟಿಯಿಂದ ಮೌರ್ಯರ ಸಾಮ್ರಾಜ್ಯಕ್ಕಿಂತ ಕಡಿಮೆಯಾಗಿತ್ತು.
ಸೇನೆಯ ಸಂಚಲನದ ವೇಳೆಯಲ್ಲಿ ಗ್ರಾಮಸ್ಥರು ಅದರ ಸಾಮಗ್ರಿಗಳನ್ನು ಪೂರೈಸಬೇಕಾಗಿತ್ತು. ಅಲ್ಲದೇ ಇವರ
ಕಾಲದ ನಾಣ್ಯಗಳಲ್ಲಿ ಸಣ್ಣ ಮೌಲ್ಯದ ನಾಣ್ಯಗಳು ಚಲಾವಣೆಯಲ್ಲಿ ಇಲ್ಲದುದು ಸಹಾ ಕಂಡುಬಂದಿದೆ. ಜೊತೆಗೆ
ರೋಮ್ ಮತ್ತು ಬೈಜಾಂಟಿಯನ್ ಸಾಮ್ರಾಜ್ಯಗಳೊಂದಿಗಿನ ವ್ಯಾಪಾರವು ಸಹ ಕುಂಠಿತಗೊಂಡಿತ್ತು. ಇದು ಕಡೆಯ
ಗುಪ್ತ ಅರಸರ ನಾಣ್ಯಗಳಿಂದ ತಿಳಿದು ಬರುತ್ತದೆ. ಅಲ್ಲದೇ ಇವರ ಸೇನೆಯು ಸಾಮಂತರ ಸೇನಾಬಲವನ್ನು ಅವಲಂಬಿಸಿದ್ದು,
ಸಾಮ್ರಾಟನ ಸೇನಾಬಲವು ಮೌರ್ಯರಿಗೆ ಹೋಲಿಸಿದರೆ ಕಡಿಮೆ ಇತ್ತು ಎಂಬಿತ್ಯಾದಿ ಕಾರಣಗಳಿಂದ ಇವರ ಕಾಲದ ಸುವರ್ಣ ಯುಗದ ಕಲ್ಪನೆಯನ್ನು
ಅಲ್ಲಗಳೆದಿದ್ದಾರೆ.
ಉಪಸಂಹಾರ: ಭಾರತದ ರಾಷ್ಟ್ರೀಯ ಚಳವಳಿಯ ಕಾಲಕ್ಕೆ ವಿದೇಶೀಯ
ಮತ್ತು ದೇಶೀಯ ಇತಿಹಾಸಕಾರರು ಗುಪ್ತರ ಸುವರ್ಣ ಯುಗದ ಕಲ್ಪನೆಯನ್ನು ಪ್ರತಿಪಾದಿಸಿದರು. ಇವರ ಪ್ರತಿಪಾದನೆಗಳಿಗೆ
ವಿರುದ್ಧವಾಗಿ ಮಾರ್ಕ್ಸ್ ವಾದಿ ಇತಿಹಾಸಕಾರರು ಗುಪ್ತರ
ಸುವರ್ಣಯುಗದ ಕಲ್ಪನೆಯನ್ನು ಅಲ್ಲಗಳೆದು ತಮ್ಮದೆ ಆದ ಪ್ರತಿವಾದವನ್ನು ಮಂಡಿಸಿದರು. ಎರಡೂ ವರ್ಗಗಳ
ಅಭಿಪ್ರಾಯಗಳನ್ನು ಗಮನಿಸಿದಾಗ ಇತಿಹಾಸದುದ್ದಕ್ಕೂ ಆಳ್ವಿಕೆ ನಡೆಸಿರುವ ರಾಜಮನೆತನಗಳ ಕಾಲಾವಧಿಯಲ್ಲಿ
ಆರಂಭ , ಉನ್ನತಿ ಮತ್ತು ಅವನತಿಗಳೆಂಬ ಮೂರು ಹಂತಗಳನ್ನು ಗುರುತಿಸಬಹುದು. ಉದಾಹರಣೆಗೆ ಮೌರ್ಯರ ಕಾಲದ
ಅಶೋಕ , ಗುಪ್ತರ ಸಮುದ್ರಗುಪ್ತ , ವರ್ಧನರ ಹರ್ಷವರ್ಧನ , ರಾಷ್ಟ್ರಕೂಟರ ಅಮೋಘವರ್ಷ ಮತ್ತು ಬಾದಾಮಿಯ
ಚಾಲುಕ್ಯರ ಪುಲಕೇಶಿಯರ ಆಳ್ವಿಕೆಯ ಕಾಲ ಇತ್ಯಾದಿ.
ಆದರೆ ೨೦ ನೇ ಶತಮಾನದ ಪೂರ್ವದಲ್ಲಿ ಭಾರತದ ರಾಷ್ಟ್ರೀಯ ಚಳುವಳಿಯು ತೀವ್ರ ಸ್ವರೂಪದಲ್ಲಿದ್ದ ಕಾರಣ
ಭಾರತಿಯರಲ್ಲಿ ರಾಷ್ಟ್ರೀಯತೆಯನ್ನು ಮೂಡಿಸುವ ಸಲುವಾಗಿ
ಗುಪ್ತರ ಕಾಲದ ವೈಭವವನ್ನು ಸುವರ್ಣ ಯುಗಕ್ಕೆ ಹೋಲಿಸಿದ್ದು ಇದರ ಖಂಡನಾವಾದಗಳು ಬೆಳೆದಿರುವುದು ಸಹಜ.
ಆದರೆ ಮೌರ್ಯರ ಕಾಲದಲ್ಲಿ ಮತ್ತು ವರ್ಧನರ ಕಾಲದಲ್ಲಿನ
ಚಾಣಕ್ಯ ಹೂಯೆನ್ ತ್ಸಾಂಗನ ಬರವಣಿಗೆಗಳನ್ನು
ಗಮನಿಸಿದಲ್ಲಿ ಆ ಕಾಲಕ್ಕೂ ಕೆಳವರ್ಗದವರ ಸಾಮಾಜಿಕ ಸ್ಥಾನಮಾನಗಳು ಉತ್ತಮವಾಗಿಲ್ಲದಿರುವುದನ್ನು ಅರಿಯಬಹುದು.
ಏಕೆಂದರೆ ಚಾಣಕ್ಯನ ಅರ್ಥಶಾಸ್ತ್ರ ಮತ್ತು ತ್ಸಾಂಗನ ಬರವಣಿಗೆಗಳಲ್ಲಿ ಮೌರ್ಯ ಮತ್ತು ವರ್ದನರ ಕಾಲದಲ್ಲಿ
ಕೆಳವರ್ಗದವರ ಸ್ಥಾನಗಳು ದುರ್ಬಲವಾಗಿದ್ದುದು ಕಂಡು ಬರುತ್ತದೆ. ಆದ್ದರಿಂದ ಸುವರ್ಣ ಯುಗದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಆಯಾ ಕಾಲದ
ಸ್ಥಿತಿ -ಗತಿಗಳನ್ನು ವಿವರವಾಗಿ ಅಭ್ಯಸಿಸುವ ಅವಶ್ಯಕತೆ
ಇರುತ್ತದೆ.
*****
Comments
Post a Comment