ಸಮಕಾಲೀನ ಭಾರತದಲ್ಲಿನ ರೈತರ ಚಳವಳಿಗಳಿಗೆ ಕಾರಣಗಳು, ಪ್ರಮುಖ ಚಳವಳಿಗಳು ಮತ್ತು ಅವುಗಳ ಪರಿಣಾಮಗಳು

ರೈತರ ಚಳವಳಿಗಳಿಗೆ ಕಾರಣಗಳು: ಪ್ರತಿಯೊಂದು ಚಳವಳಿಗೆ ನಿರ್ದಿಷ್ಟ  ಕಾರಣಗಳಿದ್ದು ಭಾರತದಲ್ಲಿನ ರೈತರ ಚಳವಳಿಗಳೂ ಸಹ  ವಿಶಿಷ್ಟ ಕಾರಣಗಳನ್ನು ಆಧರಿಸಿವೆ. ರೈತರ ಚಳವಳಿಗಳ ಕಾರಣಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದು ಗಮನಾರ್ಹ. ಬ್ರಿಟಿಷ್‌ ವಸಾಹತು ಕಾಲದಲ್ಲಿನ ಕಾರಣಗಳಿಗಿಂತ ಪ್ರಸ್ತುತ ರೈತರ ಚಳವಳಿಗಳ ಕಾರಣಗಳು ಸಾಕಷ್ಟು ಭಿನ್ನವಾಗಿವೆ. ಈ ಅಂಶವನ್ನು ಕೆಳಗಿನ ವಿವರಣೆಯ ಮೂಲಕ ಅರ್ಥೈಸಿಕೊಳ್ಳಬಹುದಾಗಿದೆ.

 

ಅ. ಬ್ರಿಟಿಷರ ಕಂದಾಯ ನೀತಿ: ಆರಂಭದಲ್ಲಿ ಬ್ರಿಟಿಷರು ತಮ್ಮ ನಿಯಂತ್ರಣಕ್ಕೊಳಪಟ್ಟ ಪ್ರದೇಶಗಳ ರೈತರಿಂದ ಕಂದಾಯ ವಸೂಲಿ ಹಕ್ಕನ್ನು ಪಡೆದರು. ಮುಂದೆ ಭಾರತದಲ್ಲಿ ಪ್ರಬಲರಾಗುತ್ತಿದ್ದಂತೆ ಖಚಿತ ಕಂದಾಯ ಕ್ರೋಢೀಕರಣಕ್ಕಾಗಿ ರೈತ ವಿರೋಧಿ ಕಂದಾಯ ನೀತಿಗಳನ್ನು ಬ್ರಿಟಿಷರು ಅನುಷ್ಟಾನಕ್ಕೆ ತಂದರು. ಖಾಯಂ ಗುತ್ತಾ ಪದ್ಧತಿ, ರೈತವಾರಿ ಪದ್ಧತಿ ಹಾಗು ಮಹಲ್ವಾರಿ ಪದ್ಧತಿಗಳು ಭಾರತೀಯ ರೈತರನ್ನು ಹಲವು ವಿಧದಲ್ಲಿ ಶೋಷಣೆಗೆ ಗುರಿಪಡಿಸಿದವು. ಬ್ರಿಟಿಷರ ಕಂದಾಯ ನೀತಿ ಮಧ್ಯವರ್ತಿಗಳ ವರ್ಗಗಳನ್ನು ಸೃಷ್ಟಿಸಿ ಅವರಿಂದ ರೈತರ ಕಿರುಕುಳಕ್ಕೆ ಕಾರಣವಾಯಿತು. ಅಧಿಕ ಕಂದಾಯ ಕಟ್ಟಲಾಗದ ರೈತರು ಸಾಲದ ಸುಳಿಗೆ ಸಿಲುಕಿಕೊಳ್ಳುವಂತಾಯಿತು. ಬ್ರಿಟಿಷರ ಕಂದಾಯ ನೀತಿಯಿಂದ ಉತ್ಪನ್ನ ಹಾಗು ಶ್ರಮದ ರೂಪದಲ್ಲಿದ್ದ ಗೇಣಿ ನಗದು ರೂಪವನ್ನು ತಾಳಿತು. ಭೂ ಒಡೆತನದ ಅಭದ್ರತೆ ಸಾಮಾನ್ಯವಾದ ಮತ್ತು ಕಡ್ಡಾಯ ಬೆಳೆ ಬೆಳೆಯಬೇಕಾದ ಅನಿವಾರ್ಯತೆಗೆ ಬ್ರಿಟಿಷರ ಕಂದಾಯ ನೀತಿ ರೈತರನ್ನು ದೂಡಿತು. ಹೀಗೆ ಬ್ರಿಟಿಷ್ ಕಂದಾಯ ನೀತಿಯ ಪರಿಣಾಮಗಳು ರೈತರು ಚಳವಳಿ ಹೂಡಲು ಪ್ರೇರೇಪಿಸಿದವು. ಉದಾ: ಿಂಡಿಗೊ ಚಳವಳಿ.

ಆ. ಸಮಸ್ಯೆಗಳ ಉದಾಸೀನ: ಭಾರತದಲ್ಲಿ ರಾಜ ಮಹರಾಜರ ಕಾಲದಿಂದಲೂ ರೈತರ ಸಮಸ್ಯೆಗಳನ್ನು ಕಡೆಗಣಿಸಿರುವ ಕಾರಣಕ್ಕೆ ಚಳವಳಿ ಸಂಭವಿಸಿವೆ. ಬ್ರಿಟಿಷರ ಕಾಲದಲ್ಲೂ ರೈತರ ಸಮಸ್ಯೆಗಳನ್ನು ಕಡೆಗಣಿಸಲಾಯಿತು. ಅಧಿಕ ಕಂದಾಯ ಹೇರಿಕೆ, ವಿಶೇಷ ಗೇಣಿ ವಸೂಲಿ, ಭೂ ಮಾಲಿಕರ ಕಿರುಕುಳ, ರೈತರ ಒಕ್ಕಲೆಬ್ಬಿಸುವಿಕೆ ಮುಂತಾದ ರೈತ ವಿರೋಧಿ ಚಟುವಟಿಕೆಗಳನ್ನು ಬ್ರಿಟಿಷ್‌ ಸರ್ಕಾರ ನಿರ್ಲಕ್ಷಿಸಿತು. ರೈತರ ಸಂಕಟಗಳಿಗೆ ಕಿವಿಗೊಡದೇ ಮಧ್ಯವರ್ತಿಗಳ ರಕ್ಷಣೆಗೆ ಪೂರಕವಾಗಿ ಬ್ರಿಟಿಷ್‌ ಆಳ್ವಿಕೆ ನಡೆದುಕೊಂಡಿತು. ಅಲ್ಲದೇ ಸ್ವತಂತ್ರ್ಯೋತ್ತರ ಸರ್ಕಾರಗಳೂ ಕೂಡ ರೈತರ ಹಿತಾಸಕ್ತಿಗೆ ಬದ್ಧತೆಯನ್ನು ತೋರದೇ ಅವರನ್ನು ಕಡೆಗಣಿಸುತ್ತಿವೆ. ಪ್ರಸ್ತುತ ರೈತರ ಮೂಲಭೂತ ಬೇಡಿಕೆಗಳಾದ ಉತ್ತಮ ಬೀಜ, ರಸಗೊಬ್ಬರ, ಸೂಕ್ತ ಮಾರುಕಟ್ಟೆ, ಉಚಿತ ವಿದ್ಯುತ್‌, ಬೆಂಬಲ ಬೆಲೆ ಘೋಷಣೆ ಮುಂತಾದವುಗಳನ್ನು ಇಂದಿಗೂ ಆಳುವವರು ನಿರ್ಲಕ್ಷಿಸುತ್ತಿರುವುದು ರೈತರ ಚಳವಳಿಗೆ ಕಾರಣವಾಗಿದೆ.

ಇ. ಅನ್ಯಾಯದ ಮನೋಭಾವ: ಬ್ರಿಟಿಷರ ಕಾಲದಿಂದಲೂ ರೈತ ಸಮುದಾಯದಲ್ಲಿ ತಾವು ನ್ಯಾಯದಿಂದ ವಂಚಿತರಾದವರೆಂಬ ಭಾವನೆ ಆಳವಾಗಿತ್ತು. ಐರೋಪ್ಯ ಹಾಗು ಸ್ಥಳೀಯ ಭೂಮಾಲಿಕರು ತಮಗೆ ನಾನಾ ವಿಧದಲ್ಲಿ ಅನ್ಯಾಯ ಎಸಗುತ್ತಿರುವುದು ಅವರ ವಂಚಿತ ಭಾವನೆಯನ್ನು ಹೆಚ್ಚಿಸಿತ್ತು. ಅನ್ಯಾಯಯುತ ವರ್ತನೆಗಳನ್ನು ಸಹಿಸದಾದಾಗ ಚಳವಳಿ ಮಾರ್ಗವನ್ನು ಬ್ರಿಟಿಷ್‌ ಆಳ್ವಿಕೆಯಲ್ಲೇ ರೈತ ಸಮುದಾಯ ಅನುಸರಿಸಿತು. ರೈತ ಸಮುದಾಯ ಇಂದಿಗೂ ಸಹ ಅನ್ಯಾಯದ ಭಾವನೆಯಿಂದ ಹೊರ ಬಂದಿಲ್ಲ. ಸಮಾಜದಲ್ಲಿನ ಇತರ ವೃತ್ತಿನಿರತರಷ್ಟು ಆದಾಯವಾಗಲಿ, ಗೌರವವಾಗಲಿ ಅಥವ ಸೌಲಭ್ಯಗಳಾಗಲಿ ತಮಗೆ ದೊರಕುತ್ತಿಲ್ಲವೆಂಬ ಅಸಮಧಾನ ರೈತರದಾಗಿದೆ. ನೈಸರ್ಗಿಕ ವಿಕೋಪಗಳು, ಬೆಲೆ ಕುಸಿತ, ಸಾಲದ ಸಂಕಷ್ಟದ ವೇಳೆ ಸಕಾಲಕ್ಕೆ ಸರ್ಕಾರಗಳು ಸ್ಪಂದಿಸುತ್ತಿಲ್ಲವೆಂಬ ಹತಾಶೆ ರೈತರದಾಗಿದೆ. ಇದರೊಡನೆ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳಿಗೆ ಬೆಲೆ ನಿಗಧಿಪಡಿಸುವಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗಧಿಪಡಿಸುವ ಸ್ವಾತಂತ್ರ್ಯವನ್ನು ತಾವು ಪಡೆದಿಲ್ಲವೆಂಬ ನೋವು ರೈತ ಸಮುದಾಯದಲ್ಲಿದೆ. ಇಂತಹ ವಂಚಿತ ಭಾವನೆಗಳು ರೈತರು ಚಳವಳಿ ಮಾರ್ಗ ತುಳಿಯಲು ಪ್ರೇರಣೆ ನೀಡುತ್ತವೆ.

ಈ. ಅವೈಜ್ನಾನಿಕ ಭೂ ಸ್ವಾಧಿನ: ಬ್ರಿಟಿಷರು ಲಾಭದ ಕಾರಣವೊಂದಕ್ಕೆ ಕಂದಾಯ ವಸೂಲಿ ಹಕ್ಕನ್ನು ಪಡೆದ ಪ್ರದೇಶದಲ್ಲಿ ಭೂ ಒಡೆತನವನ್ನು ಕೆಲವರ ಸ್ವಾಧೀನಕ್ಕೆ ನೀಡಿದರು. ನಂತರ  ರೈಲ್ವೆ, ರಸ್ತೆ, ಕಾರ್ಕಾನೆಗಳ ಅಭಿವೃದ್ಧಿಯ ಕಾರಣಕ್ಕೆ ರೈತರ ಭೂಮಿಯನ್ನು ವಶಪಡಿಸಿಕೊಂಡರು. ಈ ರೀತಿ ಬ್ರಿಟಿಷರ ಕಾಲದಲ್ಲಿ ರೈತರ ಚಳವಳಿಗೆ ಭೂ ಸ್ವಾಧೀನವು ಕಾರಣವಾಗಿತ್ತು. ಸ್ವತಂತ್ರ್ಯೋತ್ತರ ಸರ್ಕಾರಗಳ ಕಾಲದಲ್ಲೂ ಭೂ ಸ್ವಾಧಿನ ರೈತರನ್ನು ಆಕ್ರೋಶಗೊಳಿಸಿ ಚಳವಳಿ ಹೂಡಲು ಪ್ರೇರೆಪಿಸಿತು. ಅಧಿಕ ಜನಸಂಖೆಗೆ ಪೂರಕವಾಗಿ ರೈಲ್ವೆ, ರಸ್ತೆ ಹಾಗು ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ರೈತರ ಫಲವತ್ತಾದ ಭೂಮಿಯ ಸ್ವಾಧಿನಕ್ಕೆ ಸರ್ಕಾರಗಳು ಮುಂದಾದವು. ಜೊತೆಗೆ ಅಣೆಕಟ್ಟು ಹಾಗು ಕಾಲುವೆಗಳ ರಚನೆಗೆ ಭೂ ಸ್ವಾಧಿನ ಕೆಲವು ರೈತರನ್ನು ಅಸಮಧಾನಗೊಳಿಸಿತು. ಬಹುತೇಕ ಸಮಯದಲ್ಲಿ ಸ್ವಾಧೀನದ ವೇಳೆ ಸರ್ಕಾರ ನೀಡುವ ಪರಿಹಾರ ಮೊತ್ತ ರೈತರ ಕೆಂಗಣ್ಣಿಗೆ ಗುರಿಯಾಯಿತು. ಸರ್ಕಾರಗಳು ಅಗತ್ಯಕ್ಕಿಂತ ಹೆಚ್ಚಿನ ಫಲವತ್ತಾದ ಭೂಮಿಯನ್ನು ವಸತಿ, ಕೈಗಾರಿಕೆ, ವಿಮಾನ ನಿಲ್ದಾಣಗಳ ಕಾರಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗುವುದರಿಂದ ಚಳವಳಿ ಕಂಡು ಬರುತ್ತವೆ.

ಉ. ನೈಸರ್ಗಿಕ ವಿಕೋಪಗಳು: ಭಾರತದ ಕೃಷಿಯು ಅಧಿಕವಾಗಿ ನೈಸರ್ಗಿಕ ಮಳೆಯನ್ನು ಆಧರಿಸಿದೆ. ಅಂದರೆ ನೈರುತ್ಯ ಮಾನ್ಸೂನ್‌ ಮಾರುತಗಳು ತರುವ ಮಳೆಯನ್ನು ಕೃಷಿ ಚಟುವಟಿಕೆಗಳು ಅವಲಂಬಿಸಿವೆ. ಹೀಗಾಗಿ ಬ್ರಿಟಿಷರ ಕಾಲದಿಂದಲೂ ರೈತರ ಚಳವಳಿಗೆ ಅತಿವೃಷ್ಟಿ, ಬರಗಾಲ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳು ಪರೋಕ್ಷ ಕಾರಣವಾಗಿವೆ. ಇಂದಿಗೂ ರೈತ ಸಮುದಾಯ ಅವಲಂಬಿಸಿರುವ ಕೃಷಿ ಮಾನ್ಸೂನ್‌ ಮಳೆಯೊಡನೆ ಆಡುವ ಜೂಜಾಟವಾಗಿದ್ದು ಪರಿಸ್ಥಿತಿ ಭಿನ್ನವಾಗಿಲ್ಲ. ರೈತರು ನೈಸರ್ಗಿಕ ವಿಕೋಪಗಳ ವೇಳೆ ಸರ್ಕಾರಗಳು ತಮ್ಮ ನೆರವಿಗೆ ಧಾವಿಸಬೇಕೆಂದು ಬಯಸುತ್ತಾರೆ. ಈ ವೇಳೆ ಬೆಳೆ ಪರಿಹಾರ, ಕಂದಾಯ ರದ್ದತಿ, ವಿಮೆ ಬಿಡುಗಡೆ ಮುಂತಾದ ಬೇಡಿಕೆಗಳಿಗೆ ರೈತರು ಸರ್ಕಾರವನ್ನು ಒತ್ತಾಯಿಸುವರು. ಸಕಾಲಕ್ಕೆ ಸೂಕ್ತ ಪರಿಹಾರ ನೀಡದಿದ್ದಾಗ ರೈತರು ಸರ್ಕಾರಗಳ ವಿರುದ್ಧ ಚಳವಳಿ ಮಾರ್ಗ ಹಿಡಿಯುತ್ತಾರೆ.

ಊ. ಸಾಲದ ಹೊರೆ: ರೈತ ತನ್ನ ಭೂಮಿಗೆ ಬೀಜ ಹಾಗು ಗೊಬ್ಬರ ಹಾಕಲು ಸಾಲಕ್ಕೆ ಮುಂದಾಗುತ್ತಾನೆ. ಉತ್ತಮ ಫಸಲಿನ ನಿರೀಕ್ಷೆಯೊಡನೆ ಕುಟುಂಬದ ಇತರ ಕಾರಣಗಳಿಗೆ ವಿವಿಧ ಮೂಲಗಳಿಂದ ಸಾಲವನ್ನು ಪಡೆದಿರುತ್ತಾನೆ. ನೈಸರ್ಗಿಕ ವಿಕೋಪಗಳಿಂದ ಬೆಳೆ ಬಾರದೇ ಅಥವ ಬೆಳೆ ಬಂದರೂ ಬೆಲೆ ಬಾರದೇ ಸಾಲ ಅಧಿಕವಾಗುತ್ತದೆ. ಇಂತಹ ನಿರಂತರ ಸನ್ನಿವೇಶ ಎದುರಾದಾಗ ರೈತ ಆತ್ಮಹತ್ಯೆಗೂ ಮುಂದಾಗುತ್ತಾನೆ. ಈ ಬೆಳವಣಿಗೆ ರೈತರು ಸಂಘಟಿತರಾಗಿ ಹೋರಾಡಲು ಸ್ಪೂರ್ತಿ ನೀಡುತ್ತದೆ. ಉದಾ: ವಿಟ್ಠಲ್‌ ಅರಬಾವಿ ಎಂಬ ರೈತನ ಆತ್ಮಹತ್ಯೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟವನ್ನು ತೀವ್ರಗೊಳಿಸಿತು. ಭಾರತದಲ್ಲಿ ರೈತರು ಸಾಲದಲ್ಲಿ ಹುಟ್ಟಿ, ಸಾಲದಲ್ಲಿ ಬೆಳೆದು, ಸಾಲದಲ್ಲೇ ಸಾಯಬೇಕಾದ ಸ್ಥಿತಿಯಲ್ಲಿದ್ದಾರೆ. ಸಾಲದ ಹೊರೆ ತಾಳಲಾರದ ರೈತರು ಅಧಿಕ ಸಾಲ ನೀಡಿಕೆ, ಬಡ್ಡಿ ರಹಿತ ಸಾಲ ನೀಡಿಕೆ, ಸಾಲ ಮನ್ನಾ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಚಳವಳಿ ಹೂಡುವುದು ಸಾಮಾನ್ಯ ಸಂಗತಿಯಾಗಿದೆ.

ಋ. ರೈತ ವಿರೋಧಿ ನಿರ್ಧಾರಗಳು: ಸ್ವತಂತ್ರ ಭಾರತದಲ್ಲಿ ರೈತರ ಚಳವಳಿಗೆ ಸರ್ಕಾರಗಳ ರೈತ ವಿರೋಧಿ ನಿರ್ಧಾರಗಳು ಕಾರಣವಾಗಿವೆ. ಮುಕ್ತ ವ್ಯಾಪಾರ ಒಪ್ಪಂದಗಳಿಂದ ಬಹು ರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೊಳಗಾಗಿ ಸಬ್ಸೀಡಿ ಕೈಬಿಡಲು ಸರ್ಕಾರ ಮುಂದಾಗುತ್ತದೆ. ಜೊತೆಗೆ ಆಮದು ಶುಲ್ಕದ ಕಡಿತ ಹಾಗು ರಫ್ತು ನಿಷೇಧ ನಿರ್ಧಾರದಿಂದ ರೈತರ ಬೆಳೆಗಳ ಬೆಲೆ ನೆಲ ಕಚ್ಚುತ್ತದೆ. ಹೀಗಾಗಿ ರೈತ ಸಮುದಾಯಕ್ಕೆ ಮಾರಕವಾದ ನಿರ್ಧಾರಗಳಿಂದ ದೂರವಿರಲು ಸರ್ಕಾರಗಳ ಮೇಲೆ ಒತ್ತಡ ತರಲೆಂದು ಚಳವಳಿಗಳು ಜರುಗುತ್ತವೆ. ಉದಾ: ಪ್ರಾದೇಶಿಕ ಸಮಗ್ರ ಆರ್ಥಿಕ ಭಾಗವಹಿಸುವಿಕೆ ಒಪ್ಪಂದದ ನಿರ್ಧಾರದಿಂದ ಹಿಂದೆ ಸರಿಯುವಂತೆ ೨೦೧೯ ರಲ್ಲಿ ರೈತ ಹೋರಾಟ ಜರುಗಿತು. ಜೊತೆಗೆ ಗಣಿಗಾರಿಕೆ, ಕೈಗಾರಿಕೆ, ನಗರೀಕರಣಕ್ಕೆ ಸಂಬಂಧಿಸಿದ ನಿರ್ಧಾರಗಳು ರೈತರ ಭೂಮಿಗೆ ಮಾರಕವಾಗುತ್ತವೆ. ಆರ್ಥಿಕ ಹೊರೆಯ ಕಾರಣ ರೈತರ ಬೆಂಬಲ ಬೆಲೆ ಘೋಷಿಸಲು ಮುಂದಾಗದಿರುವ ಸರ್ಕಾರದ ನಿರ್ಧಾರ ಕೂಡ ರೈತರ ಚಳವಳಿಗೆ ಕಾರಣವಾಗುತ್ತದೆ.

ಎ. ನದಿ ನೀರು ಹಂಚಿಕೆ ವಿವಾದಗಳು: ಸ್ವತಂತ್ರ್ಯೋತ್ತರ ಭಾರತ ಭಾಷಾಧಾರಿತ ರಾಜ್ಯಗಳಾಗಿ ಪುನರ್ರಚನೆಗೊಂಡಿದೆ. ವಿವಿಧ ನದಿಗಳು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಹರಿಯುತ್ತವೆ. ಇದರಿಂದಾಗಿ ನದಿ ಪಾತ್ರದ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ನೀರಿನ ಸೂಕ್ತ ಹಂಚಿಕೆಗೆ ಒತ್ತಾಯಿಸಿದಾಗ ವಿವಾದಗಳು ತಲೆದೋರುತ್ತವೆ. ಉದಾ: ಕರ್ನಾಟಕ ಹಾಗು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ವಿವಾದ, ಮಹರಾಷ್ಟ್ರ, ಗೋವಾ ಮತ್ತು ಕರ್ನಾಟಕದ ನಡುವಿನ ಮಹದಾಯಿ ವಿವಾದ ಇತ್ಯಾದಿ. ಈ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಿ ತೀರ್ಪಿನನುಸಾರ ಸರ್ಕಾರಗಳು ನೀರು ಹರಿಸಲು ಮುಂದಾದಾಗ ರೈತರು ತಮ್ಮ ಹಿತಾಸಕ್ತಿಗೆ ಮಾರಕವೆಂದು ಉಗ್ರ ಹೋರಾಟ ನಡೆಸುವರು. ಜೊತೆಗೆ ನ್ಯಾಯಾಲಯಗಳ ತೀರ್ಪು ಅನುಸರಿಸಲು ಸರ್ಕಾರ ಮುಂದಾಗುವುದಾದರೆ ನೀರಿನ ಕೊರತೆಯಿಂದ ಬೆಳೆ ನಷ್ಟ ತುಂಬಿ ಕೊಡುವಂತೆ ಚಳವಳಿ ಹೂಡುವರು. ಕೆಲವೊಮ್ಮೆ ಜಲ ವಿವಾದ ಬಗೆಹರಿಸಲು ಮುಂದಾಗದ ಸರ್ಕಾರಗಳ ವಿರುದ್ಧ ಚಳವಳಿ ಜರುಗುತ್ತವೆ. ಉದಾ: ಮಹದಾಯಿ ವಿವಾದ ಬಗೆ ಹರಿಸಲು ಮುಂದಾಗದ ಸರ್ಕಾರಗಳ ವಿರುದ್ಧ ಉತ್ತರ ಕರ್ನಾಟಕದಲ್ಲಿ ಜರುಗಿದ ರೈತರ ಚಳವಳಿ. ಹೀಗೆ ನದಿ ಪಾತ್ರದ ಜನರು ಜಲ ವಿವಾದಗಳಿಂದ ತಮ್ಮ ಹಿತಾಸಕ್ತಿಗೆ ಧಕ್ಕೆಯಾದಾಗ ಚಳವಳಿ ಹೂಡುವುದು ಸಾಮಾನ್ಯ ಸಂಗತಿಯಾಗಿದೆ.

 

ಪ್ರಮುಖ ರೈತರ ಚಳವಳಿಗಳು: ಮೊಘಲರ ಕಾಲದಿಂದ ಭಾರತದಲ್ಲಿ ರೈತರ ಚಳವಳಿ ಆರಂಭವಾಗಿದ್ದು ಇಲ್ಲಿಯವರೆಗೆ ನೂರಾರು ರೈತ ಹೋರಾಟಗಳು ಜರುಗಿವೆ. ಪ್ರಸ್ತುತ ವಿವಿಧ ಕಾರಣಕ್ಕಾಗಿ ಸೀಮಿತ ಪ್ರದೇಶದಲ್ಲಿ ಅಸಂಖ್ಯ ರೈತರ ಚಳವಳಿಗಳು ಜರುಗುತ್ತಿವೆ. ರೈತರ ವಿವಿಧ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಮುಖ ರೈತರ ಚಳವಳಿಗಳನ್ನು ಮಾತ್ರ ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ.

 

ಅ. ಇಂಡಿಗೊ ಚಳವಳಿ 1859/60: ಇಂಡಿಗೊ ಅಥವ ನೀಲಿ ಬೆಳೆ ಬಟ್ಟೆಗೆ ಬಣ್ಣ ಹಾಕಲು ಅಗತ್ಯವಾಗಿತ್ತು. ಇಂಗ್ಲೆಂಡ್‌ ಹತ್ತಿ ಬಟ್ಟೆ ಕೈಗಾರಿಕೆಗೆ ಪ್ರಸಿದ್ಧವಾದ್ದರಿಂದ ನೀಲಿ ಬೆಳೆಗೆ ಸಾಕಷ್ಟು ಬೇಡಿಕೆಯಿತ್ತು. ಹೀಗಾಗಿ ಬಂಗಾಳ ಹಾಗು ಬಿಹಾರದಲ್ಲಿ ಯೂರೋಪಿಯನ್‌ ಭೂ ಮಾಲಿಕರು ರೈತರಿಂದ ಕಡ್ಡಾಯವಾಗಿ ನೀಲಿ ಬೆಳೆ ಬೆಳೆಸುತ್ತಿದ್ದರು. ಜೊತೆಗೆ ರೈತರು ಬೆಳೆದ ನೀಲಿ ಬೆಳೆಯನ್ನು ಯೂರೋಪಿನ ಭೂ ಮಾಲಿಕರೇ ಖರೀದಿಸುತ್ತಿದ್ದರು. ಆದರೆ ರೈತರಿಗೆ ಅತ್ಯಂತ ಕಡಿಮೆ ಅಂದರೆ ಒಂದು ಮಣ ನೀಲಿಗೆ ೪ ರೂಪಾಯಿ ನೀಡಿ ೪೦ ರೂ ಲಾಬವನ್ನು ಪಡೆಯುತ್ತಿದ್ದರು. ಯೂರೋಪಿಯನ್‌ ಭೂ ಮಾಲಿಕರಿಗೆ ನೀಲಿ ಲಾಭದ ಬೆಳೆಯಾದರೆ ರೈತರಿಗೆ ನಷ್ಟದ ಬೆಳೆಯಾಗಿತ್ತು. ನೀಲಿ ಬೆಳೆಯಲು ಸಮ್ಮತಿಸದ ರೈತರ ಮೇಲೆ ಯೂರೊಪಿಯನ್ನರು ದಬ್ಬಾಳಿಕೆ ನಡೆಸುತ್ತಿದ್ದರು. ಹಿಂಸೆ ಮತ್ತು ಕಿರುಕುಳ ಅನುಭವಿಸದಾದ 20 ಸಾವಿರ ರೈತರು ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನೀಲಿ ಬೆಳೆಯಲು ನಿರಾಕರಿಸಿ ದಿಗಂಬರ ಬಿಶ್ವಾ ಮತ್ತು ಬಿಶ್ಣು ಬಿಶ್ವಾ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾದರು. ದೀನಬಂಧು ಮಿತ್ರ ರಚಿಸಿದ ನೀಲ್ ದರ್ಪಣ್‌ ನಾಟಕ ನೀಲಿ ಬೆಳೆಗಾರರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು‌ ಬ್ರಿಟಿಷ್‌ ಸರ್ಕಾರದ ಕಣ್ಣು ತೆರೆಸಿತು. ಪರಿಣಾಮ ಸರ್ಕಾರವು  1860 ರಲ್ಲಿ ನೀಲಿ ಆಯೋಗವನ್ನು ರಚಿಸಿತು. ನೀಲಿ ಆಯೋಗವು ರೈತರಿಗೆ ತಮಗಿಷ್ಟವಾದ ಬೆಳೆ ಬೆಳೆಯಲು ಅವಕಾಶ ಒದಗಿಸಿತು. ಆಧುನಿಕ ಭಾರತದ ಪ್ರಮುಖ ರೈತರ ಚಳವಳಿಯಾದ ಇಂಡಿಗೊ ಚಳವಳಿ ರೈತರ ಅಸಹಕಾರ ಧೋರಣೆಯಿಂದ ಕಡ್ಡಾಯ ನೀಲಿ ಬೆಳೆಯುವುದನ್ನು ತಡೆಯಲು ಯಶಸ್ವಿಯಾಯಿತು.

ಆ. ದಕನ್‌ ರೈತ ಹೋರಾಟ 1875: ಬ್ರಿಟಿಷ್‌ ಸರ್ಕಾರ ಮಹಲ್ವಾರಿ ಪದ್ಧತಿ ಜಾರಿಗೊಳಿಸಿ ಭೂ ಕಂದಾಯವನ್ನು ಹೆಚ್ಚಿಸಿತು. ಹೆಚ್ಚುವರಿ ಭೂ ಕಂದಾಯ ಕಟ್ಟಲೆಂದು ರೈತರು ಮಾರವಾಡಿ ಅಥವ ಗುಜರಾತಿಗಳ ಹತ್ತಿರ ಅಧಿಕ ಬಡ್ಡಿಗೆ ಸಾಲ ಮಾಡಿದರು. ಈ ವೇಳೆಯಲ್ಲಿ ಹತ್ತಿ ಬೆಳೆ ಕೈಕೊಟ್ಟು ರೈತರು ಸಾಲ ಮರುಪಾವತಿ ಮಾಡುವುದು ಸಾಧ್ಯವಾಗಲಿಲ್ಲ. ಆಗ ಮಾರವಾಡಿ ಅಥವ ಗುಜರಾತಿಗಳು ರೈತರ ಭೂಮಿ, ಮನೆ ಹಾಗು ವಸ್ತುಗಳನ್ನು ಅಡವಿಟ್ಟುಕೊಂಡರಲ್ಲದೇ ರೈತರ ಹೆಂಡತಿ ಮತ್ತು ಮಕ್ಕಳನ್ನು ಹಿಂಸಿಸತೊಡಗಿದರು. ತಮ್ಮನ್ನು ಶೋಷಿಸುತ್ತಿದ್ದವರ ವಿರುದ್ಧ ಆರಂಭದಲ್ಲಿ ರೈತರು ಸಾಮಾಜಿಕ ಬಹಿಷ್ಕಾರ ಚಳವಳಿಗೆ ಮುಂದಾದರು. ಬಳಿಕ ಮಹಾರಾಷ್ಟ್ರದ ಪುಣೆ ಹಾಗು ಅಹಮದ್ನಗರ ಜಿಲ್ಲೆಗಳಲ್ಲಿ ರೈತರ ಚಳವಳಿ ತೀವ್ರ ಸ್ವರೂಪ ಪಡೆಯಿತು. ಉದ್ರಿಕ್ತ ರೈತರು ಮಾರವಾಡಿ ಅಥವ ಗುಜರಾತಿಗಳ ಮನೆ ಹಾಗು ಅಂಗಡಿಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಕಿತ್ತುಕೊಂಡರು ಅಥವ ಬೆಂಕಿ ಹಚ್ಚಿದರು. ಅಲ್ಲದೇ ಹಲವು ಜಮೀನ್ದಾರರು ಹಾಗು ಬಡ್ಡಿ ವ್ಯಾಪಾರಿಗಳನ್ನು ಕೊಂದರು. ದಕನ್‌ ರೈತ ಧಂಗೆಗೆ ಪೂನಾ ಸಾರ್ವಜನಿಕ ಸಭಾದ ಎಂ. ಜಿ. ರಾನಡೆ ಮತ್ತು ಫಡ್ಕೆಯ ಬೆಂಬಲ ದೊರೆಯಿತು. ಕೊನೆಗೆ 1879 ರಲ್ಲಿ ದಕನ್‌ ಕೃಷಿ ಪರಿಹಾರ ಕಾಯಿದೆ ಜಾರಿಗೊಳಿಸಿ ರೈತರ ಭೂಮಿಯನ್ನು ಅಡವಿಟ್ಟುಕೊಳ್ಳುವುದನ್ನು ಬ್ರಿಟಿಷ್‌ ಸರ್ಕಾರ ತಡೆಯಿತು.

ಇ. ಚಂಪಾರಣ್ಯ ಸತ್ಯಾಗ್ರಹ 1917: ಬಿಹಾರದ ಚಂಪಾರಣ್ಯ ಜಿಲ್ಲೆಯ ರೈತರು ಮೂರನೇ ಎರಡರಷ್ಟು ಭೂಮಿಯಲ್ಲಿ ಕಡ್ಡಾಯವಾಗಿ ನೀಲಿ ಬೆಳೆ ಬೆಳೆದು ಯೂರೋಪಿಯನ್‌ ಭೂ ಮಾಲಿಕರಿಗೆ ಅವರು ನಿಗಧಿಪಡಿಸುವಷ್ಟು ಬೆಲೆಗೆ ಮಾರಬೇಕಾಗಿತ್ತು. ಟಿಂಕಾತಿಯಾ ಎಂದು ಕರೆಯಲ್ಪಡುತ್ತಿದ್ದ ಈ ಪದ್ಧತಿಯಿಂದ ರೈತರು ಐರೋಪ್ಯ ತೋಟಗಾರರ ವಿವಿಧ ದಬ್ಬಾಳಿಕೆ ಹಾಗು ಶೋಷಣೆಗೆ ಗುರಿಯಾಗಿದ್ದರು. 1916 ರ ಲಕ್ನೌ ಅಧಿವೇಶನದಲ್ಲಿ ರಾಜ್ಕುಮಾರ್‌ ಶುಕ್ಲಾ ಚಂಪಾರಣ್ಯ ರೈತರ ಶೋಷಣೆ ಕುರಿತು ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ನ ಗಮನ ಸೆಳೆದರು. ಪರಿಣಾಮ ಗಾಂಧೀಜಿ 1917 ರಲ್ಲಿ ಚಂಪಾರಣ್ಯಕ್ಕೆ ಭೇಟಿ ನೀಡಿ ರೈತರ ಸ್ಥಿತಿ ಅಧ್ಯಯನ ಮಾಡಿದರಲ್ಲದೇ ಬ್ರಿಟಿಷರ ವಿರೋಧದ ನಡುವೆ ಸತ್ಯಾಗ್ರಹಕ್ಕೆ ಮುಂದಾದರು. ಆಗ ಜೂನ್‌ 1917 ರಲ್ಲಿ ಬ್ರಿಟಿಷರು ಗಾಂಧಿ ಸೇರಿದಂತೆ ಮೂರು ಸದಸ್ಯರ ತನಿಖಾ ಸಮಿತಿಯೊಂದನ್ನು ರಚಿಸಿತು. ಕಡ್ಡಾಯ ನೀಲಿ ಬೆಳೆಯುವುದನ್ನು ಕೈಬಿಡಲು ಹಾಗು ಐರೋಪ್ಯ ತೋಟಗಾರರು ರೈತರ ಹಣವನ್ನು ಹಿಂತಿರುಗಿಸಲು ಸಮಿತಿ ಶಿಫಾರಸು ಮಾಡಿತು. ಈ ಶಿಫಾರಸಿನನ್ವಯ 1918 ರಲ್ಲಿ ಚಂಪಾರಣ್‌ ಕೃಷಿ ಕಾಯಿದೆ ಜಾರಿಗೊಂಡು ರೈತರು ಶೋಷಣೆಯಿಂದ ಮುಕ್ತರಾದರು.

ಈ. ಕೇಡಾ ರೈತ ಸತ್ಯಾಗ್ರಹ 1918: ಇಂದಿನ ಗುಜರಾತ್‌ ರಾಜ್ಯದ ಕೇಡಾ ಜಿಲ್ಲೆಯಲ್ಲಿ ಬ್ರಿಟಿಷ್‌ ಸರ್ಕಾರದ ವಿರುದ್ಧ ಕೇಡಾ ಸತ್ಯಾಗ್ರಹ ಜರುಗಿತು. ಬರಗಾಲದಿಂದ 1918 ರಲ್ಲಿ ಬೆಳೆ ಬಾರದೇ ರೈತರು ಕಂಗಾಲಾದರು. ಜಾರಿಯಲ್ಲಿದ್ದ ಕಂದಾಯ ಕಾನೂನಿನಂತೆ ಶೇ ೨೫ ಇಳುವರಿ ಬಾರದಿದ್ದರೆ ಕಂದಾಯ ರದ್ದುಗೊಳಿಸಲು ಅವಕಾಶವಿತ್ತು. ಇದನ್ನಾಧರಿಸಿ ರೈತರು ಕಂದಾಯ ವಿನಾಯಿತಿ ನೀಡಲು ಮನವಿ ಮಾಡಿಕೊಂಡರು. ಆದರೂ ಬ್ರಿಟಿಷ್‌ ಸರ್ಕಾರ ಭೂ ಕಂದಾಯವನ್ನು ರದ್ದು ಅಥವ ಕಡಿತಗೊಳಿಸದೇ ಪೂರ್ಣ ಪ್ರಮಾಣದ ತೆರಿಗೆ ವಸೂಲಿಗೆ ಮುಂದಾಯಿತು. ಕಂದಾಯ ಅಧಿಕಾರಿಗಳು ರೈತರ ದನಕರುಗಳನ್ನು ಜಪ್ತಿ ಮಾಡಿದರಲ್ಲದೇ ಅವರ ವಸ್ತು ಒಡವೆಗಳನ್ನು ಹರಾಜು ಹಾಕಿದರು. ಗಾಂಧೀಜಿ ಸ್ವತಃ ಕೇಡಾದ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಬ್ರಿಟಿಷರ ಗಮನಕ್ಕೆ ತಂದರೂ ಕಂದಾಯವನ್ನು ಕೈಬಿಡಲಿಲ್ಲ. ಆಗ ಗಾಂಧೀಜಿ ಕಂದಾಯ ಪಾವತಿಸಲು ನಿರಾಕರಿಸುವಂತೆ ರೈತರಿಗೆ ಕರೆಕೊಟ್ಟು ಮಹದೇವ ದೇಸಾಯ್, ಶಂಕರಲಾಲ್‌, ಇಂಧೂಲಾಲ್‌, ಸರ್ದಾರ್‌ ಪಟೇಲ್‌ ಮುಂತಾದವರೊಡನೆ ಸತ್ಯಾಗ್ರಹ ಕೈಗೊಂಡರು. ಮೂರು ಸಾವಿರಕ್ಕಿಂತ ಹೆಚ್ಚಿನ ಜನರು ಸತ್ಯಾಗ್ರಹದಲ್ಲಿ ಭಾಗವಹಿಸಿದುದನ್ನು ಅರಿತ ಬ್ರಿಟಿಷ್‌ ಸರ್ಕಾರ ಜೂನ್‌ 2018 ರ ಹೊತ್ತಿಗೆ ರೈತರೊಡನೆ ಮಾತುಕತೆಗೆ ಬಂದು ಅವರ ಸಮಸ್ಯೆಗಳನ್ನು ಬಗೆ ಹರಿಸಲು ಮುಂದಾಯಿತು.

. ಮಾಪಿಳ್ಳೆಗಳ ರೈತ ಹೋರಾಟ: ಮಾಪಿಳ್ಳೆಗಳು ಕೇರಳದ ಮಲಬಾರ್‌ ಜಿಲ್ಲೆಯ ಭೂರಹಿತ ಬಡ ಕಾರ್ಮಿಕರು. ಬ್ರಾಹ್ಮಣ ಹಾಗು ನಾಯರ್‌ ಜಮೀನ್ದಾರರು ಮಾಪಿಳ್ಳೆಗಳನ್ನು ಶೋಷಿಸುತ್ತಿದ್ದ ಕಾರಣ ಮಾಪಿಳ್ಳೆಗಳು ಆಗಸ್ಟ್‌ 1921 ರಲ್ಲಿ ಸಶಸ್ತ್ರ ಹೋರಾಟ ಆರಂಭಿಸಿದರು. ಅಧಿಕ ಭೂ ಕಂದಾಯ, ಭೂಮಿಯಿಂದ ಒಕ್ಕಲೆಬ್ಬಿಸುವುದು, ನೀಡಿದ ಕಂದಾಯಕ್ಕೆ ರಸೀದಿ ನೀಡದಿರುವುದು, ವಿಶೇಷ ಕಂದಾಯ ವಸೂಲಿ ಮುಂತಾದವುಗಳಿಂದ ಮಾಪಿಳ್ಳೆಗಳು ಜಮೀನ್ದಾರರ ವಿರುದ್ಧ ಸಿಡಿದೆದ್ದರು. ಮುಸ್ಲೀಮ್‌ ಮಾಪಿಳ್ಳೆಗಳಿಗೆ ಹಿಂದೂ ರೈತರ ಬೆಂಬಲವೂ ದೊರಕಿತು. ಮಲಬಾರಿನಲ್ಲಿ ಸುಮಾರು ೨೮ ಸ್ಥಳಗಳಲ್ಲಿ ನ್ಯಾಯಾಲಯ, ಪೋಲಿಸ್‌ ಠಾಣೆ, ಕಛೇರಿ ಹಾಗು ಐರೋಪ್ಯ ಭೂ ಮಾಲಿಕರನ್ನು ಗುರಿಯಾಗಿಸಿ ಧಂಗೆಗಳಾದವು. ಧರ್ಮದ ನೆಲೆಗಟ್ಟಿನ ಕಿಲಾಫತ್‌ ಚಳವಳಿ ಭಾರತದಲ್ಲಿ ಇದೇ ವೇಳೆಯಲ್ಲಿ ಆರಂಭವಾದ್ದರಿಂದ ಮಾಪಿಳ್ಳೆಗಳ ಹೋರಾಟ ಮಹತ್ವ ಕಳೆದುಕೊಂಡಿತು. ಕೊನೆಗೆ ಮಲಬಾರ್‌ ಗೇಣಿ ಕಾಯಿದೆ ಜಾರಿಗೊಳಿಸಿ ಮಾಪಿಳ್ಳೆಗಳ ಹಿತಾಸಕ್ತಿ ರಕ್ಷಿಸಲಾಯಿತು.

ಊ. ಬಾರ್ಡೋಲಿ ಸತ್ಯಾಗ್ರಹ 1928: ಶೇ 22 ರಷ್ಟು ಭೂ ಕಂದಾಯವನ್ನು ಹೆಚ್ಚಿಸಿದ್ದರಿಂದ ಪ್ರಸ್ತುತ ಗುಜರಾತ್ನ ಸೂರತ್‌ ಜಿಲ್ಲೆಯ ಬಾರ್ದೊಲಿಯಲ್ಲಿ ವಲ್ಲಬ್ಬಾಯ್‌ ಪಟೇಲ್‌ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಹೆಚ್ಚುವರಿ ಕಂದಾಯ ಕಟ್ಟಲು ನಿರಾಕರಿಸಿದ ರೈತರ ಚರ ಮತ್ತು ಸ್ಥಿರಾಸ್ತಿಗಳನ್ನು ವಶ ಪಡಿಸಿಕೊಳ್ಳಲಾಯಿತು. ಈ ನಡುವೆ ಫೇಬ್ರವರಿ ೧೨ ರಂದು ಗಾಂಧೀಜಿಯವರ ಸಲಹೆಯಂತೆ ಪಟೇಲ್‌ ಕರ ನಿರಾಕರಣೆ ಸತ್ಯಾಗ್ರಹವನ್ನು ಕೈಗೊಂಡರು. ಬಾರ್ದೋಲಿಯ ಸತ್ಯಾಗ್ರಹದಲ್ಲಿ ೧೫೦೦ ವಿದ್ಯಾರ್ಥಿಗಳು ಪಾಲ್ಗೊಂಡರು. ಜೊತೆಗೆ ಗುಜರಾತ್ನ ಬಾಂಬೆ ಶಾಸನಸಭೆಯ ಸದಸ್ಯರು ರಾಜೀನಾಮೆ ನೀಡಿದರು. ಅಲ್ಲದೇ ಮಹಿಳೆಯರೂ ಸೇರಿದಂತೆ ೮೯ ಸಾವಿರ ರೈತರು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಇದಕ್ಕೆ ಮಣಿದ ಸರ್ಕಾರ ಭೂ ಕಂದಾಯದ ಹೆಚ್ಚಳವನ್ನು ಶೇ ೬ ಕ್ಕೆ ಮಿತಿಗೊಳಿಸಿತು. ಇದರೊಡನೆ ವಶಪಡಿಸಿಕೊಂಡ ಆಸ್ತಿಪಾಸ್ತಿಯನ್ನು ಸರ್ಕಾರ ರೈತರಿಗೆ ಹಿಂತಿರುಗಿಸಿತು. ಬಾರ್ದೋಲಿ ಸತ್ಯಾಗ್ರಹದ ನಾಯಕತ್ವ ವಲ್ಲಬ್ಬಾಯ್‌ ಪಟೇಲರಿಗೆ ಸರ್ದಾರ್‌ ಎಂಬ ಬಿರುದು ತಂದುಕೊಟ್ಟಿತು.

 

ಸ್ವಾತಂತ್ರ್ಯೋತ್ತರ ಭಾರತದಲ್ಲಿನ ರೈತರ ಚಳವಳಿಗಳ ಸ್ವರೂಪ ಮತ್ತು ಪ್ರಮುಖ ರೈತರ ಚಳವಳಿಗಳು:-

       ಹಸಿರು ಕ್ರಾಂತಿಯ ನಂತರ ರೈತರ ಬೇಡಿಕೆಗಳಲ್ಲಿ ಬದಲಾವಣೆಗಳು ಉಂಟಾದವು. ಅವರ ಬೇಡಿಕೆಗಳು ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸುವುದು, ಕೃಷಿ ಉಪಕರಣಗಳಿಗೆ ಸಬ್ಸಿಡಿ ಇಲ್ಲವೇ ರಿಯಾಯಿತಿ ನೀಡುವುದು, ನೀರಾವರಿ, ರಸಗೊಬ್ಬರ ಮತ್ತು ವಿದ್ಯುತ್‌ ದರಗಳಲ್ಲಿನ ಇಳಿಕೆ ಮತ್ತು ಕೃಷಿ ಸಾಲದ ನಿಯಮಗಳ ಸಡಿಲಿಕೆ ಇತ್ಯಾದಿಗಳಾಗಿ ಬದಲಾದವು.  ಮಹಾರಾಷ್ಟ್ರದ ಶೇತ್ಕಾರಿ ಸಂಘಟನೆ, ಉತ್ತರ ಪ್ರದೇಶದ ಭಾರತೀಯ ಕಿಸಾನ್‌ ಸಂಘಟನೆ, ತಮಿಳುನಾಡು, ಪಂಜಾಬ್ ಮತ್ತು ಗುಜರಾತಿನ ರೈತರಸಂಘಟನೆಗಳು ರೈತ ಹೋರಾಟದ ಮೂಲಕ ರಾಜಕೀಯ ರಂಗವನ್ನೂ ಸಹ ಪ್ರವೇಶಿಸಿದವು.

 

. ತೆಭಾಗಾ ರೈತರ ಚಳವಳಿ ೧೯೪೬: ಬಂಗಾಳ ಪ್ರಾಂತ್ಯದಲ್ಲಿ ಜಮೀನ್ದಾರರು ತಮ್ಮ ಭೂಮಿಯನ್ನು ಜೊತೇದಾರರಿಗೆ ನಿರ್ದಿಷ್ಟ ಕಂದಾಯ ನೀಡಬೇಕೆಂಬ ಶರತ್ತಿನೊಂದಿಗೆ ಗುತ್ತಿಗೆ ನೀಡುತ್ತಿದ್ದರು. ಜೋತೇದಾರರು ಆ ಗುತ್ತಿಗೆ ಭೂಮಿಯನ್ನು ಆದಿವಾಸಿ ಅಥವ ಬಡ ಬರ್ಗಾದಾರರೆಂಬ ವರ್ಗಕ್ಕೆ ಗೇಣಿ ನೀಡುತ್ತಿದ್ದರು. ಜಮೀನ್ದಾರ ಹಾಗು ಜೋತೇದಾರರು ಭೂಮಿಯ ಶಾಶ್ವತ ಒಡೆತನ ಹೊಂದಿದ್ದರೆ ಬರ್ಗಾದಾರರು ವರ್ಷಕ್ಕೊಮ್ಮೆ ಗೇಣಿ ನೀಡುವ ಭೂ ಮಾಲಿಕತ್ವವಿಲ್ಲದ ರೈತರಾಗಿದ್ದರು. ಬರ್ಗಾದಾರರು ಜಮೀನ್ದಾರ ಹಾಗು ಜೋತೇದಾರ ವರ್ಗದಿಂದ ಸಾಕಷ್ಟು ಶೋಷಣೆ ಹಾಗು ಹಿಂಸೆ ಅನುಭವಿಸುತ್ತಿದ್ದರು. ೧೯೩೭ ರಲ್ಲಿ ಭಾರತೀಯರಿಂದ ರಚನೆಗೊಂಡ ಬಂಗಾಳ ಸರ್ಕಾರವು ಬಂಗಾಳ ಕಿಸಾನ್‌ ಸಭಾ ಕೈಗೊಂಡ ತೀವ್ರ ಚಳವಳಿ ಪರಿಣಾಮ ಬಂಗಾಳ ಕಂದಾಯ ಆಯೋಗವನ್ನು ರಚಿಸಿತು. ಈ ಆಯೋಗವು ಫ್ಲೌಡ್‌ ಕಮೀಷನ್‌ ಎಂದು ಪರಿಚಿತವಾಗಿದ್ದು ಬರ್ಗಾದಾರರ ಬೇಡಿಕೆಗಳನ್ನು ಎತ್ತಿ ಹಿಡಿದು ಸುಧಾರಣೆಗಳನ್ನು ಜಾರಿಗೊಳಿಸಲು ಶಿಫಾರಸು ಮಾಡಿತು. ಆಗ ಬರ್ಗಾದಾರರು ಸುಧಾರಣೆಗಳ ಅನುಷ್ಟಾನಕ್ಕಾಗಿ  ಸಂಘಟಿತ ಹೋರಾಟ ಮಾಡಲು ಮುಂದಾದರು. ಬರ್ಗಾದಾರರು ಜೋತೇದಾರರ ಸ್ಥಳದ ಬದಲು ತಮ್ಮ ಸ್ಥಳದಲ್ಲಿ ಕಣ ಮಾಡುವ ಮೂಲಕ ಪ್ರತಿಭಟಿಸಿದರಲ್ಲದೇ ನಿಚ್‌ ಕಮರೆ ಧಾನ್‌ ದೋಲೊ ಕರೆಕೊಟ್ಟು ಇತರ ರೈತರನ್ನು ಹುರಿದುಂಬಿಸಿದರು. ಬಂಗಾಳ ಪ್ರಾಂತ್ಯ ಕಿಸಾನ್‌ ಸಭಾದ ನೇತೃತ್ವದಲ್ಲಿ ಜಮೀನ್ದಾರರು, ಜೋತೇದಾರರು, ಅಧಿಕಾರಿಗಳು, ವ್ಯಾಪಾರಿಗಳು, ಲೇವಾದೇವಿದಾರರ ವಿರುದ್ಧ ರೈತರು ಚಳವಳಿ ಹೂಡಿದರು. ಮುಂದೆ 1946 ರಲ್ಲಿ ಸುಹಾರ್ವರ್ಧಿ ನಾಯಕತ್ವದ ಮುಸ್ಲೀಮ್‌ ಲೀಗ್‌ ಸರ್ಕಾರ ಬರ್ಗಾದಾರ್‌ ಮಸೂದೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತು. ಆದರೆ ಅಷ್ಟರಲ್ಲಿ ದೇಶ ವಿಭಜನೆ ಚರ್ಚೆಯಿಂದ ಚಳವಳಿಯು ಕೋಮು ಹಿಂಸಾಚಾರದ ರೂಪವನ್ನು ತಳೆಯಬಹುದೆಂದು ಬಂಗಾಳ ಕಿಸಾನ್‌ ಸಭಾ ಚಳವಳಿಯನ್ನು ಕೈಬಿಡಲು ಮುಂದಾಯಿತು.

ಆ. ತೆಲಂಗಾಣ ಚಳವಳಿ 1948-50: ಹಿಂದಿನ ಆಂಧ್ರಪ್ರದೇಶ ರಾಜ್ಯದ ತೆಲಂಗಾಣ ಭಾಗವು ಭಾರತದ ಅತಿ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿತ್ತು. ಅಲ್ಲಿ ಜಮೀನ್ದಾರಿ ಪದ್ಧತಿ ವ್ಯಾಪಕವಾಗಿದ್ದು, ಹಲವು ಮಂದಿ ಜಮೀನ್ದಾರರು ಅಲ್ಲಿಯ ಇಡೀ ಭೂಮಿಯಮೇಲೆ ಸರ್ವಸ್ವಾಮ್ಯ ಪಡೆದಿದ್ದರು. ಲಕ್ಷಾಂತರ ಭೂಹೀನ ಕಾರ್ಮಿಕರೂ ಗೇಣಿದಾರರೂ ಬಡತನ, ಶೋಷಣೆಗಳಿಂದ ಕಷ್ಟ ಪರಿಸ್ಥಿತಿಯಲ್ಲಿದ್ದರು. ಅಲ್ಲದೇ ವೆತ್ತಿ ಎಂಬ ಉಚಿತ ಸೇವೆಯನ್ನೂ ಜಮೀನುದಾರರು ಬಡವರಿಂದ ಬಲವಂತವಾಗಿ ಪಡೆಯುತ್ತಿದ್ದರು. ಈ ಪರಿಸ್ಥಿತಿಯನ್ನು ಸುಧಾರಿಸಲು ಕಮ್ಯುನಿಸ್ಟ್‌ ಪಕ್ಷವು ರೈತರನ್ನು ಸಂಘಟಿಸಿ ಹೋರಾಟಕ್ಕೆ ಇಳಿಯಿತು. ಆದರೆ ಹೋರಾಟವು ಹಿಂಸಾರೂಪವನ್ನು ಪಡೆಯಿತು. ಅನೇಕ ಕಡೆ ಜಮೀನ್ದಾರರ ಕೊಲೆ, ಆಸ್ತಿಪಾಸ್ತಿಗಳ ಲೂಟಿ ಆದವು. ಪರಿಣಾಮವಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ವಿಶೇಷ ಪೊಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಯಿತು. ನಂತರ ಆಂಧ್ರಪ್ರದೇಶ ಗೇಣಿ ಸುಧಾರಣೆ ಮತ್ತು ಕೃಷಿ ಭೂಮಿ ಕಾಯ್ದೆ 1950 ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು. ಇದೇ ಸಂದರ್ಭದಲ್ಲಿ ವಿನೋಬಾ ಅವರು ತೆಲಂಗಾನದಲ್ಲಿ ಭೂದಾನ ಚಳವಳಿಯನ್ನು ಆರಂಭಿಸಿದ್ದು.

ಇ. ಸಂತಾಲರ ಚಳವಳಿ 1970: ಪಶ್ಚಿಮ ಬಂಗಾಳದ ಪೂರ್ನಿಯಾ ಜಿಲ್ಲೆಯ ಸಂತಾಲ ಬಾತೆದಾರರು (ಸಾಮೂಹಿಕ ರೈತರು) ಸರ್ಕಾರವು ಕೈಗೊಂಡಿದ್ದ ಜಮೀನ್ದಾರಿ ಸುಧಾರಣೆಗಳಲ್ಲಿನ ದೋಷಗಳ ವಿರುದ್ಧ ಚಳವಳಿ ಹೂಡಿದರು. ಇದನ್ನು ಆನಂದ ಚಕ್ರವರ್ತಿ ಅವರು 1986ರಲ್ಲಿ ನಡೆಸಿದ ತಮ್ಮ ಅಧ್ಯಯನದಲ್ಲಿ ಜಮೀನ್ದಾರಿ ಸುಧಾರಣೆಗಳ ನಂತರವೂ ಭೂಮಾಲಿಕರು ಮತ್ತು ಜಮೀನ್ದಾರರು ರೈತರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಗಳಿಂದಾಗಿ ಅಲ್ಲಿನ ಸಂತಾಲರು ಪ್ರತಿಭಟನೆಗಳಿಗೆ ಇಳಿಯಬೇಕಾಯಿತು ಎಂದು ತಿಳಿಸಿದ್ದಾರೆ.

ಈ. ನಕ್ಸಲ್‌ಬಾರಿ ಚಳವಳಿ 1967-68: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌  ಜಿಲ್ಲೆಯ ನಕ್ಸಲ್‌ಬಾರಿ ಎಂಬ ಗ್ರಾಮದಲ್ಲಿ ಆರಂಭವಾದ ಚಳವಳಿಯು ಸಹ ಆರಂಭದಲ್ಲಿ ರೈತ ಚಳವಳಿಯೇ ಆಗಿತ್ತು. ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸಿ ಉಳುವವನಿಗೆ  ಭೂಮಿ ಕೊಡಿಸುವುದು, ಉಳುವ ರೈತನಿಂದ ಅಥವಾ ಗೇಣಿದಾರನಿಂದ ಭೂಮಿಯನ್ನು ಕಸಿದುಕೊಳ್ಳದಿರುವುದು, ವಿವಿಧ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳದಿರುವುದು ಮತ್ತು ನಿರಾತಂಕವಾಗಿ ಕೃಷಿ ಮಾಡುವ ವಾತಾವರಣ ಕಲ್ಪಿಸುವುದು  - ಇವೇ ಮೊದಲಾದ ಬೇಡಿಕೆಗಳೊಂದಿಗೆ ಚಳವಳಿ ಆರಂಭವಾಯಿತು. ಈ ಚಳವಳಿಯಲ್ಲಿ ಭೂಮಿಯನ್ನು ಕಳೆದುಕೊಂಡ ಶ್ರೀಮಂತರು, ಸಾಮೂಹಿಕ ಕೃಷಿಕರು ಮತ್ತು ಭೂರಹಿತ ಕಾರ್ಮಿಕರ ಬೆಂಬಲವನ್ನು ಗಳಿಸಿದ್ದರೂ ಅದು ಒಗ್ಗೂಡಿದ ಪ್ರಯತ್ನವಾಗಿರಲಿಲ್ಲ. ಇದರಲ್ಲಿನ ಕೆಲವರ್ಗದವರು ತಮ್ಮ ಹೋರಾಟದಲ್ಲಿ ಯಶಸ್ಸನ್ನೂ ಗಳಿಸಿದರು. ಮುಂದೆ ಈ ಚಳವಳಿಗೆ ನಗರಗಳ ಯುವಕರು ಸೇರಿದ್ದರಿಂದ ಹೋರಾಟದ ಉದ್ದೇಶಗಳೇ ಬದಲಾಗಿ ಅದು ಅಹಿಂಸಾತ್ಮಕ ರೂಪವನ್ನು ಪಡೆಯಿತು.

ಉ. MKSS ಚಳವಳಿ: ರಾಜಸ್ಥಾನದಲ್ಲಿ 1990ರಲ್ಲಿ ಆರಂಭವಾದ  ಮಜ್ದೂರ್‌ ಕಿಸಾನ್‌ ಶಕ್ತಿ ಸಂಘಟನೆಯು MNREGA ಅಡಿಯಲ್ಲಿ ದಾಖಲೆಗಳಿಲ್ಲದ ಭೂರಹಿತ ಕಾರ್ಮಿಕರ ಕೆಲಸದ ಹಕ್ಕು ಮತ್ತು ಕನಿಷ್ಠ ಕೂಲಿಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿತು.

 

ಕರ್ನಾಟಕದಲ್ಲಿನ ರೈತರ ಹೋರಾಟಗಳು:

. ಕಾಗೋಡು ರೈತರ ಚಳವಳಿ: ಶಿವಮೊಗ್ಗಾ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನಲ್ಲಿ ಜರುಗಿದ ರೈತರ ಚಳವಳಿ ಕರ್ನಾಟಕದ ಪ್ರಮುಖ ರೈತ ಹೋರಾಟಗಳಲ್ಲಿ ಒಂದು. ಕಾಗೋಡು ಪರಿಸರದಲ್ಲಿ ಜಮೀನ್ದಾರರು ಪಾಲಿಸುತ್ತಿದ್ದ ಗೇಣಿ ದರ, ಅಳತೆಯ ಅನ್ಯಾಯ ಮತ್ತು ಶೋಷಣೆ ಪರಿಣಾಮ ಕಾಗೋಡು ಹೋರಾಟ ಜರುಗಿತು. ಜಮೀನ್ದಾರ ಕೆ. ಜಿ. ಒಡೆಯರ್‌ ವಿರುದ್ಧ ಕಾಗೋಡಿನ 70 ದೀವರ ಕುಟುಂಬಗಳು, 18 ದಲಿತ ಕುಟುಂಬಗಳು, 3 ಮಡಿವಾಳ ಕುಟುಂಬಗಳು ಹಾಗು 1 ಅಕ್ಕಸಾಲಿಗರ ಕುಟುಂಬ ಪ್ರತಿಭಟನೆಗೆ ಮುಂದಾದವು. ಈ ಹೋರಾಟಕ್ಕೆ ಸಾಲ ನೀಡುತ್ತಿದ್ದಾಗ ಸಣ್ಣಕ್ಕ ಹಾಗು ಸಾಲ ಪಡೆಯುತ್ತಿದ್ದಾಗ ದೊಡ್ಡಕ್ಕ ಎಂಬ ಅಳತೆಯ ಕೊಳಗವನ್ನು ಜಮೀನ್ದಾರರು  ಬಳಸುತ್ತಿದ್ದುದು ಕಾರಣವೆನಿಸಿತು. ಜೊತೆಗೆ ಗೇಣಿದಾರರು ಬಿಟ್ಟಿ ಕೆಲಸ ಮಾಡಬೇಕಾದ ಅನಿವಾರ್ಯತೆ ಕೂಡ ಕಾರಣವಾಯಿತು. ಗಣಪತಿಯಪ್ಪ ಮತ್ತು ಶಾಂತವೇರಿ ಗೋಪಾಲಗೌಡ ಬೆನ್ನೆಲುಬಾಗಿ ಈ ಚಳವಳಿಗೆ ನಾಯಕತ್ವ ನೀಡಿದ್ದರು. ಕಾಗೋಡು ಜನರ ಬೆಂಬಲಕ್ಕೆ ಮಲೆನಾಡು ಗೇಣಿದಾರರ ಸಂಘ ಹಾಗು ಸಾಗರ ತಾಲೂಕು ರೈತ ಸಂಘಗಳು ನಿಂತುಕೊಂಡವು. ದಿನಗಳೆದಂತೆ ಊಳುವವನೇ ಭೂಮಿಯ ಒಡೆಯ ಎಂಬ ಸಮಾಜವಾದಿ ನಂಬಿಕೆ ಆಧರಿಸಿ ಕಾಗೋಡು ಸತ್ಯಾಗ್ರಹ ತೀವ್ರತೆ ಪಡೆಯತೊಡಗಿತು. ೧೮ ಏಪ್ರಿಲ್‌ ೧೯೫೧ ರಂದು ಜಮೀನ್ದಾರರ ಹೊಲದಲ್ಲಿ ಗೇಣಿದಾರರ ಪರವಾಗಿ ಉಳುಮೆ ಮಾಡಲು ಮುಂದಾದಾಗ ಗುಬ್ಬಿಗ ಸದಾಶಿವರಾಯ, ಶಾಂತವೇರಿ ಗೋಪಾಲಗೌಡ, ಎಸ್.‌ ಜಿ. ಗೋವಿಂದಪ್ಪ ಮುಂತಾದ ಸಮಾಜವಾದಿ ನಾಯಕರು ಬಂಧನಕ್ಕೊಳಗಾದರು. ಮುಂದೆ ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಆಗಮಿಸಿ ಕಾಗೋಡು ಚಳವಳಿಗೆ ಪ್ರೇರಣೆ ನೀಡಿದರು. ಈ ವೇಳೆ ಬಂಧನಕ್ಕೊಳಗಾದ ಲೋಹಿಯಾರನ್ನು ಒಂಬತ್ತು ದಿನಗಳ ಬಳಿಕ ಬಿಡುಗಡೆ ಮಾಡಲಾಯಿತು. ಕಾಗೋಡು ಚಳವಳಿ ಪರಿಣಾಮ ಗೇಣಿದಾರರು ದಾಸ್ಯದಿಂದ ಹೊರಬಂದು ಆತ್ಮ ಗೌರವದಿಂದ ಬದುಕಲು ಅವಕಾಶ ಕಲ್ಪಿಸಿತು. ಕರ್ನಾಟಕದಲ್ಲಿ ಇತರ ರೈತರ ಚಳವಳಿಗೆ ಸ್ಪೂರ್ತಿ ನೀಡಿತು. ಜೊತೆಗೆ 1974 ರಲ್ಲಿ ಮುಖ್ಯಮಂತ್ರಿ ದೇವರಾಜ್‌ ಅರಸು ಭೂ ಸುಧಾರಣೆ ಜಾರಿಗೊಳಿಸಲು ತಳಹದಿಯಾಯಿತು. ಅಲ್ಲದೇ ಬುದ್ಧಿಜೀವಿ ವರ್ಗವನ್ನು ಸೃಷ್ಟಿಸುವಲ್ಲಿ ಕಾಗೋಡು ಚಳವಳಿ ಯಶಸ್ವಿಯಾಯಿತು.

. ಮಲಪ್ರಭಾ ರೈತರ ಚಳವಳಿ: ಮಲಪ್ರಭಾ ಉತ್ತರ ಕರ್ನಾಟಕದ ಪ್ರಮುಖ ನದಿ. ಈ ನದಿಗೆ ಅಣೆಕಟ್ಟು ನಿರ್ಮಿಸಿದ್ದರಿಂದ ನರಗುಂದ, ನವಲಗುಂದ, ಸವದತ್ತಿ ಹಾಗು ರಾಮದುರ್ಗ ತಾಲೂಕಿನ ರೈತರು ತಮಗೆ ಅನುಕೂಲವಾಗುವುದೆಂದು ಭಾವಿಸಿದ್ದರು. ಆ ಭಾಗದ ಮಣ್ಣಿನ ಗುಣದಿಂದ ಕಾಲುವೆಗಳಲ್ಲಿ ಸಮರ್ಪಕ ನೀರು ಹರಿಯದಾಯಿತು. ಕೊನೆಗೆ 1976 ರಲ್ಲಿ ಕಾಲುವೆಗಳಲ್ಲಿ ನೀರು ಹರಿದರೂ ಸರ್ಕಾರ ನೀರಾವರಿ ಬೆಳೆಗಳನ್ನು ಬೆಳೆಯದಂತೆ ರೈತರನ್ನು ನಿರ್ಬಂಧಿಸಿತು. ಕಾಲುವೆ ಹಾಗು ಅಣೆಕಟ್ಟು ನಿರ್ಮಾಣದಿಂದ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರಕಲಿಲ್ಲ. ಜೊತೆಗೆ ರೈತರಿಂದ ನೀರಿನ ಹಾಗು ಅಭಿವೃದ್ಧಿ ತೆರಿಗೆಗಳನ್ನು ಸರ್ಕಾರ 1974 ರಿಂದಲೇ ಪೂರ್ವಾನ್ವಯವಾಗುವಂತೆ ವಸೂಲಿ ಮಾಡಲು ಮುಂದಾಯಿತು. ಈ ವೇಳೆ ರೈತರಿಗೆ ಲಾಭದ ಬೆಳೆಯಾಗಿದ್ದ ವರಲಕ್ಷ್ಮಿ ಹತ್ತಿಯ ಬೆಲೆ ನೆಲ ಕಚ್ಚಿತು. ತೆರಿಗೆ ವಸೂಲಿ ವಿಚಾರದಲ್ಲಿ ಅಧಿಕಾರಿಗಳಿಂದ ರೈತರಿಗೆ ಶೋಷಣೆ ಅಧಿಕವಾಯಿತು. ಜೂನ್‌ 1980 ರಲ್ಲಿ ನರಗುಂದದ ೧೩ ಸಾವಿರ ರೈತರು ತೆರಿಗೆ ಕಟ್ಟದಿರುವ ಪ್ರತಿಜ್ನೆ ಕೈಗೊಂಡು ಪ್ರತಿಭಟನೆ ತೋರಿದರು. ತಮ್ಮ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲೆಂದು ೨೧ ಜುಲೈ 1980 ರಂದು ನವಲಗುಂದ, ನರಗುಂದ, ಸವದತ್ತಿ ಮುಂತಾದ ಸ್ಥಳಗಳಲ್ಲಿ ರೈತರು ಜಾತಾ ಆಯೋಜಿಸಿದ್ದರು. ಈ ಹೋರಾಟದ ನಾಯಕತ್ವವನ್ನು ಹಳಕಟ್ಟಿ, ಹೊಸಕೇರಿ, ಕಪ್ಪಣ್ಣವರ್‌, ಯಾವಗಲ್‌ ವಹಿಸಿಕೊಂಡಿದ್ದರು. ಈ ದಿನವೇ ಪೋಲೀಸರ ಗುಂಡೇಟಿಗೆ ಹತ್ತಾರು ರೈತರು ಬಲಿಯಾದರು. ಪರಿಣಾಮ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕರ್ನಾಟಕದ ಹಲವೆಡೆ ಪ್ರತಿಭಟನಾ ಹೋರಾಟಗಳಾದವು. ಬೆಳೆಗಳಿಗೆ ನ್ಯಾಯವಾದ ಬೆಲೆ, ಬೆಳೆ ವಿಮೆ ನೀಡಿಕೆ, ಸಾಲ ರದ್ದತಿ, ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ, ಕಾಲುವೆಗಳ ದುರಸ್ತಿಗೆ ಕ್ರಮ, ಸಕ್ಕರೆ ಹಾಗು ಸೆಣಬು ಕಾರ್ಖಾನೆಗಳ ರಾಷ್ಟ್ರೀಕರಣ ಮುಂತಾದ ಬೇಡಿಕೆಗಳನ್ನು ಈ ರೈತ ಹೋರಾಟ ಸರ್ಕಾರದ ಮುಂದಿಟ್ಟಿತು.

ಇ. ಕರ್ನಾಟಕ ರಾಜ್ಯ ರೈತ ಸಂಘ: 1980ರಲ್ಲಿ ನರಗುಂದದಲ್ಲಿ ಆರಂಭವಾದ ಮಲಪ್ರಭಾ ಅಚ್ಚುಕಟ್ಟು ಪ್ರದೇಶಧ ರೈತರ ಹೋರಾಟದ ಮುಂದುವರಿದ ಭಾಗವಾಗಿ ಕ.ರಾ.ರೈ. ಸಂಘವು ಅಕ್ಟೋಬರ್‌ 17, 1990 ರಲ್ಲಿ ಆರಂಭವಾಯಿತು. ಅದು ತನ್ನ 19 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿತು. ಇದರ ಸಂಸ್ಥಾಪಕ ಅಧ್ಯಕ್ಷರಾಗಿದ್ದವರು ಹಿಂದಿನ ಕೃಷಿ ಮಂತ್ರಿ ಹಾಗೂ ಸ್ಪೀಕರ್ ಆಗಿದ್ದ ಹೆಚ್‌.ಎಸ್‌. ರುದ್ರಪ್ಪ ಅವರು, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೋರಾಟ ಸಮಿತಿಯ ಸಂಚಾಲಕರಾಗಿ, ಎನ್.ಡಿ. ಸುಂದರೇಶ್‌ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡರು. ಕಡಿದಾಳು ಶಾಮಣ್ಣ, ರೇವಣ್ಣಸಿದ್ದಯ್ಯ ಮುಂತಾದ ಅನೇಕರು ಇದರ ನೇತೃತ್ವ ವಹಿಸಿದ್ದರು. ಈ ಸಂಘಟನೆಯು ರಾಜ್ಯದ ರೈತರ ವಿವಿಧ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿತಲ್ಲದೇ ರಾಜಕೀಯವಾಗಿಯೂ ವಿಧಾನಸಭೆಯನ್ನು ಪ್ರವೇಶಿಸುವ ಮೂಲಕ ತನ್ನ ಹೋರಾಟವನ್ನು ಮುಂದುವರಿಸಿತು.

 

ರೈತರ ಚಳವಳಿಯ ಪರಿಣಾಮಗಳು: ರೈತರ ಚಳವಳಿಗಳು ರೈತ ಸಮುದಾಯದ ಸಾಮಾಜಿಕ ಹಾಗು ಆರ್ಥಿಕ ಸ್ಥಿತಿಯ ಸುಧಾರಣೆಯಲ್ಲಿ ಪ್ರಭಾವ ಬೀರಿವೆ. ಇದರೊಡನೆ ರೈತರ ಚಳವಳಿ ರಾಜಕಿಯ ವ್ಯವಸ್ಥೆಯ ಮೇಲೂ ತನ್ನದೇ ಪರಿಣಾಮಗಳನ್ನು ಉಂಟು ಮಾಡಿವೆ. ಈ ವಿಚಾರವನ್ನು ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.

ಅ. ರೈತರ ಶೋಷಣೆಗೆ ಕಡಿವಾಣ: ಬ್ರಿಟಿಷರ ಕಾಲದಲ್ಲಿ ಜರುಗಿದ ಹಲವು ರೈತರ ಚಳವಳಿ ಪರಿಣಾಮ ರೈತರ ಶೋಷಣೆ ಮಿತಿಗೊಳಪಟ್ಟಿತು. ಅಧಿಕ ಕಂದಾಯ ಹೇರಿಕೆ, ವಿಶೇಷ ಗೇಣಿ ವಸೂಲಿ, ಕಡ್ಡಾಯ ಬೆಳೆ ಬೆಳೆಯುವಿಕೆ, ಭೂಮಿ ಅಡವಿಟ್ಟುಕೊಂಡು ಬಡ್ಡಿ ಪಡೆಯುವಿಕೆ, ಅಧಿಕ ಪಾಲು ತೆಗೆದುಕೊಳ್ಳುವಿಕೆ ಮುಂತಾದ ರೈತರ ಶೋಷಣೆಗೆ ಕಾರಣವಾದ ಭೂ ಮಾಲಿಕರ ಚಟುವಟಿಕೆಗಳನ್ನು ತಡೆಯುವಲ್ಲಿ ರೈತರ ಚಳವಳಿಗಳು ಯಶಸ್ವಿಯಾದವು. ಚಳವಳಿ ಕಾರಣ ಬ್ರಿಟಿಷ್‌ ಸರ್ಕಾರ ವಿವಿಧ ಆಯೋಗ ಅಥವ ಸಮಿತಿಗಳನ್ನು ರಚಿಸಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಒಲವು ತೋರುವಂತಾಯಿತು. ಜೊತೆಗೆ ಹಲವು ಕಾಯಿದೆಗಳನ್ನು ಜಾರಿಗೊಳಿಸಿ ರೈತ ಸಮುದಾಯ ಶೋಷಣೆಯಿಂದ ಬಿಡುಗಡೆಗೊಳ್ಳಲು ಬ್ರಿಟಿಷ್‌ ಸರ್ಕಾರ ಪ್ರಯತ್ನಿಸಿತು. ಉದಾ: 1860 ರ ನೀಲಿ ಆಯೋಗದ ರಚನೆ, 1879 ರದಕನ್‌ ಕೃಷಿ ಪರಿಹಾರ ಕಾಯಿದೆ.

ಆ. ರಾಷ್ಟ್ರೀಯತೆಯ ಬಲವರ್ಧನೆ: ಭಾರತದಲ್ಲಿ ಬ್ರಿಟಿಷರ ವಿರುದ್ಧದ ರೈತರ ಚಳವಳಿಗಳು ರೈತ ಸಮುದಾಯದಲ್ಲಿ ರಾಷ್ಟ್ರಿಯತೆಯನ್ನು  ಬಲಗೊಳಿಸಿದವು. ಚಂಪಾರಣ್ಯ ರೈತ ಸತ್ಯಾಗ್ರಹ, ಕೇಡಾ ರೈತರ ಚಳವಳಿ, ಬಾರ್ದೋಲಿ ಸತ್ಯಾಗ್ರಹಗಳ ಯಶಸ್ಸು  ರಾಷ್ಟ್ರಿಯ ಹೋರಾಟವನ್ನು ತೀವ್ರಗೊಳಿಸಲು ಪ್ರೇರೇಪಿಸಿದವು. ಬಹು ಸಂಖೆಯ ರೈತ ಹೋರಾಟ ರಾಷ್ಟ್ರಿಯ ಸ್ವತಂತ್ರ್ಯ ಹೋರಾಟಕ್ಕೆ ಬಲ ನೀಡಿತು.

ಇ. ಭೂ ಸುಧಾರಣಾ ಕ್ರಮಗಳ ಜಾರಿ:: ಸ್ವತಂತ್ರ್ಯೋತ್ತರ ಸರ್ಕಾರಗಳು ರೈತರ ಚಳವಳಿ ಪರಿಣಾಮ ಭೂ ಸುಧಾರಣೆಗೆ ಮುಂದಾದವು. ವಿವಿಧ ರಾಜ್ಯ ಸರ್ಕಾರಗಳು ಜಮೀನ್ದಾರರು, ಜಹಗೀರುದಾರರು, ಇನಾಮ್ದಾರರು ಮುಂತಾದ ಮಧ್ಯವರ್ತಿ ಭೂ ಒಡೆಯರಿಂದ ರೈತರ  ಶೋಷಣೆ ತಡೆಯಲು ಆ ಪದ್ಧತಿಗಳ ನಿರ್ಮೂಲನಾ ಕಾಯಿದೆಗಳನ್ನು ಅಂಗೀಕರಿಸಿವೆ. ಇದರೊಡನೆ ಭೂ ಒಡೆತನದ ಮೇಲೆ ನಿರ್ಬಂಧ ಹೇರುವ ಕಾಯಿದೆಗಳು ಜಾರಿಗೊಂಡವು. ಪರಿಣಾಮ ಭೂ ಒಡೆಯರ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು  ಭೂ ರಹಿತರಿಗೆ ಹಂಚಲು ಸಾಧ್ಯವಾಯಿತು. ಜೊತೆಗೆ 1974 ರಲ್ಲಿ ರಾಷ್ಟ್ರೀಯ ಭೂ ಸುಧಾರಣಾ ಕಾಯಿದೆ ಜಾರಿಗೊಂಡು ಊಳುವವನೇ ಭೂ ಒಡೆಯ ತತ್ವವನ್ನು ಪಾಲಿಸಲಾಗಿದೆ. ಇಂತಹ ಭೂ ಒಡೆತನವನ್ನು ಭೂ ರಹಿತರಿಗೆ ಹಂಚುವ ಉದ್ದೇಶದಿಂದ ಜಾರಿಗೊಂಡ ಕಾಯಿದೆಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸದಂತೆ ಸಂಸತ್ತು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸಿ ಆ ಕಾಯಿದೆಗಳಿಗೆ ರಕ್ಷಣೆ ಒದಗಿಸಲು ಮುಂದಾಯಿತು. ಅಲ್ಲದೇ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಹಕಾರಿ ಬೇಸಾಯವನ್ನು ಪ್ರೋತ್ಸಾಹಿಸಲು ಅನೇಕ ಕ್ರಮಗಳನ್ನು ಕೈಗೊಂಡಿವೆ. 2013 ರ ಭೂ ಸ್ವಾಧೀನ ಕಾಯಿದೆಗೆ ಅಧಿಕ ಮೊತ್ತದ ಪರಿಹಾರ, ಪುನರ್ವಸತಿಗೆ ಅವಕಾಶ, ವಶಪಡಿಸಿಕೊಂಡಷ್ಟು ಭೂಮಿ ನೀಡಿಕೆಯಂತಹ ಅಂಶಗಳನ್ನು ಸೇರಿಸಲಾಗಿದೆ.  ಒಟ್ಟಾರೆ ಭೂ ಸುಧಾರಣೆಗಳ ಮೂಲಕ ಗ್ರಾಮೀಣ ಭಾಗದಲ್ಲಿರುವ ಅಧಿಕ ಸಂಖೆಯ ರೈತರ ಸ್ಥಿತಿಗತಿ ಸುಧಾರಿಸುವಲ್ಲಿ ಭೂ ಸುಧಾರಣಾ ಕ್ರಮಗಳು ನೆರವಾಗುವಲ್ಲಿ ರೈತರ ಚಳವಳಿಗಳ ಪ್ರಭಾವವನ್ನು ಗುರುತಿಸಬಹುದು.

ಈ. ಸಾಲ ಸೌಲಬ್ಯಗಳ ವಿಸ್ತರಣೆ: ರೈತರ ಚಳವಳಿಗೆ ಸಾಲ ಸಂಬಂಧಿತ ಸಮಸ್ಯೆಗಳು ಪ್ರಧಾನ ಕಾರಣ. ಹೀಗಾಗಿ ಸರ್ಕಾರಗಳು ರೈತ ಸಮುದಾಯಕ್ಕೆ ಸಾಲ ಸೌಲಬ್ಯ ಒದಗಿಸಲು ಹಲವು ಕ್ರಮಗಳನ್ನು ಜಾರಿಗೊಳಿಸಿವೆ. ಪತ್ತಿನ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಅಲ್ಪಾವಧಿ ಸಾಲ ಸುಲಭವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಪ್ರತಿ ತಾಲೂಕಿನಲ್ಲಿ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳನ್ನು ಸ್ಥಾಪಿಸಿ ಮಧ್ಯಮಾವಧಿ ಹಾಗು ದೀರ್ಗಾವಧಿ ಸಾಲ ಸೌಲಬ್ಯ ದೊರೆಯಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ರೈತರಿಗೆ ಸಾಲ ಪಡೆಯಲು ಅವಕಾಶ ಮಾಡಲಾಗಿದೆ. ಇದರೊಡನೆ ಸಾಲ ನೀಡದ ಸನ್ನಿವೇಶದಲ್ಲಿ ರೈತರ ನೆರವಿಗೆ ಧಾವಿಸುವ ರಾಷ್ಟ್ರಿಯ ಬೆಳೆ ವಿಮೆ ಯೋಜನೆ, ರಾಷ್ಟ್ರಿಯ ಕೃಷಿ ವಿಮೆ ಯೋಜನೆ, ವಾತಾವರಣ ಆಧಾರಿತ ಕೃಷಿ ವಿಮೆ ಯೋಜನೆ ಮುಂತಾದವುಗಳನ್ನು ಜಾರಿಗೊಳಿಸಿದೆ. ಇದಲ್ಲದೇ ಅನಿವಾರ್ಯ ಸಮಯದಲ್ಲಿ ರೈತರ ಸಾಲದ ಮೇಲಿನ ಬಡ್ಡಿ ವಿನಾಯಿತಿ ಹಾಗು ಸಾಲ ಮನ್ನಾ ನಿರ್ಧಾರಗಳನ್ನು ಸರ್ಕಾರಗಳು ಕೈಗೊಂಡಿವೆ. ಉದಾ: ಕರ್ನಾಟಕದಲ್ಲಿ ೧ ಲಕ್ಷದವರೆಗಿನ ಸಾಲ ಮನ್ನಾ ಯೋಜನೆ.

ಉ. ರಾಜಕಿಯ ಪಕ್ಷಗಳ ಧೋರಣೆಗಳಲ್ಲಿ ಪರಿವರ್ತನೆ: ಭಾರತದಲ್ಲಿ ರಾಜಕಿಯ ಪಕ್ಷಗಳ ಧೋರಣೆಗಳನ್ನು ಬದಲಾಯಿಸುವಲ್ಲಿ ರೈತರ ಚಳವಳಿಗಳು ಪ್ರಮುಖ ಪಾತ್ರ ವಹಿಸಿವೆ. ಆರಂಭದ ನಿರ್ಲಕ್ಷ ಧೋರಣೆ ಕೈಬಿಟ್ಟು ರೈತ ಸ್ನೇಹಿ ನೀತಿಗಳನ್ನು ಪಾಲಿಸಲು ರಾಜಕಿಯ ಪಕ್ಷಗಳು ಮುಂದಾಗಲು ಚಳವಳಿಗಳು ಯಶಸ್ವಿಯಾಗಿವೆ. ಚುನಾವಣೆ ವೇಳೆ ಪ್ರತಿಯೊಂದು ರಾಜಕಿಯ ಪಕ್ಷ ತನ್ನ ಪ್ರನಾಳಿಕೆಯಲ್ಲಿ ರೈತಪರ ಧೋರಣೆಗಳನ್ನು ಿಂದು ಸೇರ್ಪಡಿಸಿಕೊಳ್ಳುತ್ತಿವೆ. ರೈತ ಸಮುದಾಯವನ್ನು ವಿರೋಧಿಸಿಕೊಂಡರೆ ತಮಗೆ ಉಳಿಗಾಲವಿಲ್ಲ ಎಂಬುದನ್ನು ರಾಜಕಿಯ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ರೈತರ ಚಳವಳಿಗಳ ಪಾತ್ರ ಹಿರಿದಾಗಿದೆ.

ಊ. ಕೃಷಿ ಸುಧಾರಣೆ: ರೈತರ ಚಳವಳಿಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಯಶಸ್ವಿಯಾಗಿವೆ. ಉತ್ತಮ ಬೀಜ, ರಸಗೊಬ್ಬರ, ಕೃಷಿ ಉಪಕರಣ ಮುಂತಾದ ಕೃಷಿ ಕ್ಷೇತ್ರದ ಸುಧಾರಣೆಗೆ ಅಗತ್ಯ ಸೌಲಬ್ಯಗಳನ್ನು ಸಕಾಲಕ್ಕೆ ರೈತ ಸಮುದಾಯಕ್ಕೆ ತಲುಪಿಸಲು ಸರ್ಕಾರಗಳು ಇಂದು ಶ್ರಮಿಸುತ್ತಿವೆ. ಜೊತೆಗೆ ಕೃಷಿಯನ್ನು ವೈಜ್ನಾನಿಕರಿಸಲು ಕೃಷಿ ವಿಶ್ವ ವಿದ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರ, ಮಣ್ಣು ಪರಿಕ್ಷಾ ಕೇಂದ್ರ ಮುಂತಾದವುಗಳನ್ನು ಸರ್ಕಾರ ಸ್ಥಾಪಿಸಿವೆ. ಮಾರುಕಟ್ಟೆ ವ್ಯವಸ್ಥೆಯಲ್ಲಿನ ದೋಷಗಳನ್ನು ಹೋಗಲಾಡಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಬೆಲೆ ಬಾರದಿದ್ದಾಗ ಬೆಂಬಲ ಬೆಲೆ ನೀಡುವ ಮೂಲಕ ಕೃಷಿಯಲ್ಲಿಸುಧಾರಣೆ ತರಲು ಪ್ರಯತ್ನಿಸಲಾಗಿದೆ. ಮಹಾತ್ಮಾ ಗಾಂಧಿ ಉದ್ಯೋಗ ಭರವಸೆ ಕಾರ್ಯಕ್ರಮದ ಮೂಲಕ ಕೃಷಿ ಸುಧಾರಣೆ ಮತ್ತು ಭೂರಹಿತ ಕೃಷಿ ಕಾರ್ಮಿಕರ ಹಿತವನ್ನು ರಕ್ಷಿಸಲಾಗುತ್ತಿದೆ.

***** 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources