ಬ್ಯಾಂಕುಗಳ ರಾಷ್ಟ್ರೀಕರಣದ ಪರ-ವಿರೋಧ ವಾದಗಳು ಮತ್ತು ಲಾಭಗಳು
ರಾಷ್ಟ್ರೀಕರಣದ ಪರವಾದ ವಾದಗಳು
ಬ್ಯಾಂಕುಗಳ ರಾಷ್ಟ್ರೀಕರಣದ ಪರವಾಗಿ ಕೆಳಗಿನ ವಾದಗಳನ್ನು ಮಂಡಿಸಲಾಯಿತು:-
1. ಭಾರತದಲ್ಲಿರುವ ವಾಣಿಜ್ಯ ಬ್ಯಾಂಕುಗಳು ಹೆಚ್ಚಾಗಿ ಕೆಲವೇ ಜನ ಶ್ರೀಮಂತರ
ಒಡೆತನದಲ್ಲಿವೆ. ಬ್ಯಾಂಕಿನ ವ್ಯವಸ್ಥೆಯಲ್ಲಿ ಇರುವಷ್ಟು ಏಕಸ್ವಾಮ್ಯತೆಯು ಬೇರಾವ ಉದ್ದಿಮೆಯಲ್ಲಿಯೂ
ಇಲ್ಲ. ಈ ಶ್ರೀಮಂತರು ತಮ್ಮ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರ ಬ್ಯಾಂಕಿನ ವ್ಯವಹಾರ ನಡೆಸುತ್ತಿದ್ದುದರಿಂದ
ದೇಶದ ಆರ್ಥಿಕ ಶಕ್ತಿಯೆಲ್ಲವೂ ಅವರಲ್ಲಿಯೇ ಕೇಂದ್ರೀಕೃತವಾಗಿತ್ತು. ಒಡೆತನದ ಕೇಂದ್ರೀಕರಣ ಹಾಗೂ ಆರ್ಥಿಕ
ಶಕ್ತಿಯ ಕೇಂದ್ರೀಕರಣಗಳು ನಮ್ಮ ದೇಶದ ಆರ್ಥಿಕ ನೀತಿಗೂ ಮತ್ತು ಸಂವಿಧಾನಕ್ಕೂ ವಿರುದ್ಧವಾಗಿವೆ. ಆರ್ಥಿಕ
ಶಕ್ತಿಯ ಕೇಂದ್ರಿಕರಣವನ್ನು ತೊಡೆದು ಹಾಕುವುದು, ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿರುವ ಅಸಮಾನತೆಯನ್ನು
ಕಡಿಮೆ ಮಾಡುವುದು ನಮ್ಮ ಸಂವಿಧಾನದ ಮುಖ್ಯ ಗುರಿಯಾಗಿದೆ.
2. ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಆಡಳಿತವು ಕೆಲವೇ ಜನ ಶ್ರೀಮಂತ ಉದ್ದಿಮೆದಾರರ
ಕೈಯಲ್ಲಿತ್ತು. ಇದರಿಂದಾಗಿ ಅವರು ಠೇವಣಿದಾರರ ಹಣವನ್ನು ಕೇವಲ ತಮ್ಮ ಉದ್ದಿಮೆಗಳ ಅಭಿವೃದ್ಧಿಗಾಗಿ
ಮಾತ್ರ ಬಳಸಿಕೊಳುತ್ತಿದ್ದರು. ಪರಿಣಾಮವಾಗಿ ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗಲು ಸಾಧ್ಯವಾಯಿತು.
ಸಾರ್ವಜನಿಕ ಹಣದಿಂದ ಸ್ವಂತ ಲಾಭ ಪಡೆದುಕೊಳ್ಳುವುದು ಸಾಮಾಜಿಕ ಅನ್ಯಾಯ. ಇದರಿಂದ ಆರ್ಥಿಕ ಅಸಮಾನತೆ
ಹೆಚ್ಚಾಗುತ್ತ ಹೋಗುತ್ತದೆ. ಬ್ಯಾಂಕುಗಳ ರಾಷ್ಟ್ರೀಕರಣವು ಇಂತಹ ಸಾಮಾಜಿಕ ಅನ್ಯಾಯವನ್ನು ತಡೆಗಟ್ಟುವುದು.
3. ವಾಣಿಜ್ಯ ಬ್ಯಾಂಕುಗಳ ನಿರ್ದೇಶಕರುಗಳು ಅತ್ಯಧಿಕ ಪ್ರಮಾಣದಲ್ಲಿ ಸಾಲ ಪಡೆದುಕೊಂಡು,
ತಮ್ಮ ಉದ್ದಿಮೆಗಳನ್ನು ಅಭಿವೃದ್ಧಿಗೊಳಿಸುತ್ತಿದ್ದರು. ಇದೂ ಅಲ್ಲದೆ ಅವರು ತಮ್ಮ ಸಂಬಂಧಿಕರಿಗೆ ಹಾಗೂ
ಸ್ನೇಹಿತರಿಗೆ ಸಹ ಅಪಾರ ವೊತ್ತದ ಸಾಲವನ್ನೊದಗಿಸುತ್ತಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣವು ಇಂತಹ
ಪ್ರವೃತ್ತಿಯನ್ನು ತಡೆಯುತ್ತದೆ.
4. ವಾಣಿಜ್ಯ ಬ್ಯಾಂಕುಗಳು ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಬಗ್ಗೆ ಮಲತಾಯಿ
ಧೋರಣೆಯನ್ನು ಅನುಸರಿಸುತ್ತ ಬಂದಿವೆ. ಅವು ಬೃಹತ್ ಕೈಗಾರಿಕೆಗಳು ಮತ್ತು ಶ್ರೀಮಂತ ವ್ಯಾಪಾರಸ್ಥರಿಗೆ
ಸುಲಭವಾಗಿ ಸಾಲ ಒದಗಿಸುತ್ತಿದ್ದವು. ಇದರಿಂದಾಗಿ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಯು ಕುಂಠಿತವಾಯಿತು.
ಬ್ಯಾಂಕುಗಳ ರಾಷ್ಟ್ರೀಕರಣದಿಂದ ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಹಣ ಒದಗಿಸಲು ಸಾಧ್ಯವಾಗಿದೆ.
5. ಭಾರತದ ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ಆದರೆ ವಾಣಿಜ್ಯ ಬ್ಯಾಂಕುಗಳು ಕೃಷಿಯ ಸುಧಾರಣೆಗಾಗಿ ಹಣವನ್ನು ಒದಗಿಸಲಿಲ್ಲ. ಅಷ್ಟೇ ಅಲ್ಲದೆ ಆದ್ಯತೆ
ನೀಡಿದ ಉದ್ದಿಮೆಗಳಿಗೂ ಸಹ ಅವು ಸಾಕಷ್ಟು ಹಣ ಒದಗಿಸಲಿಲ್ಲ. ಆದ್ದರಿಂದ ಇದನ್ನು ಸರಿಪಡಿಸಲು ಬ್ಯಾಂಕುಗಳ
ರಾಷ್ಟ್ರೀಕರಣವು ಅವಶ್ಯವಾಯಿತು.
6. ಅವು
ಆದ್ಯತೆ ನೀಡದ ಉದ್ದಿಮೆಗಳಿಗೆ ಹಣ ಒದಗಿಸುತ್ತಿದ್ದು, ಆ ಕ್ಷೇತ್ರಗಳ ಪ್ರಗತಿ ಮಾತ್ರವೇ ಆಗುತ್ತಿದ್ದು,
ಆದ್ಯತಾ ವಲಯಗಳ ಪ್ರಗತಿ ಕಡಿಮೆಯಾಗಿ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗುತ್ತಿತ್ತು. .
7. ವಾಣಿಜ್ಯ ಬ್ಯಾಂಕುಗಳು ತಾವು ಸಂಗ್ರಹಿಸಿದ ಹಣವನ್ನು ಅದೇ ಪ್ರದೇಶದಲ್ಲಿಯೇ
ಉಪಯೋಗಿಸದೆ ಅದನ್ನು ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಉಪಯೋಗಿಸುತ್ತಿದ್ದುದರಿಂದ ಕೆಲವು
ಪ್ರದೇಶಗಳು ಹೆಚ್ಚು ಬೆಳವಣಿಗೆ ಹೊಂದುವಂತಾದರೆ, ಕೆಲವು ಪ್ರದೇಶಗಳು ಬಹಳ ಹಿಂದುಳಿದವು. ದೇಶದ ಎಲ್ಲ
ಪ್ರದೇಶಗಳೂ ಸಮನಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶವು ಪರಿಪೂರ್ಣ ಪ್ರಗತಿ ಸಾಧಿಸಿದಂತಾಗುತ್ತದೆ.
ಬ್ಯಾಂಕುಗಳ ಈ ನೀತಿಯನ್ನು ತಡೆಗಟ್ಟುವುದು ಅವಶ್ಯವೆನಿಸಿದ್ದರಿಂದ ಬ್ಯಾಂಕುಗಳನ್ನು ರಾಷ್ಟ್ರೀಕರಿಸಲಾಯಿತು.
8. ವಾಣಿಜ್ಯ ಬ್ಯಾಂಕುಗಳು ಜನರ ಉಳಿತಾಯವನ್ನು ಸಂಗ್ರಹಿಸುವಲ್ಲಿ ಯೋಗ್ಯ ಪಾತ್ರವನ್ನು
ವಹಿಸಿರಲಿಲ್ಲ. ಅವು ಹೆಚ್ಚಾಗಿ ಪಟ್ಟಣಗಳಲ್ಲಿಯೇ ಕೇಂದ್ರೀಕೃತವಾಗಿರುವುದರಿಂದ ಗ್ರಾಮೀಣ ಪ್ರದೇಶಗಳನ್ನು
ಕಡೆಗಣಿಸಲಾಗಿತ್ತು. ನೂರಾರು ಪಟ್ಟಣಗಳಲ್ಲಿ ಮತ್ತು ಸಾವಿರಾರು ಹಳ್ಳಿಗಳಲ್ಲಿ ಇನ್ನೂ ಬ್ಯಾಂಕಿನ ಸೌಲಭ್ಯಗಳೇ
ಇರಲಿಲ್ಲ. ಒಕ್ಕಲುತನದ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗ್ರಾಮೀಣ ಜನರ ಸಂಪಾದನೆ ಹೆಚ್ಚಳವಾಗುತ್ತಿತ್ತು.
ನಮ್ಮ ಯೋಜನೆಗಳು ಹೆಚ್ಚಾಗಿ ಗ್ರಾಮೀಣ ಜನತೆಯ ಹಿತವನ್ನೇ ಬಯಸುತ್ತಿದ್ದು, ಅವರೂ ಸಹ ಉಳಿತಾಯ ಮಾಡಿ
ದೇಶದ ಆರ್ಥಿಕಾಭಿವೃದ್ಧಿಯ ಕಾರ್ಯಗಳಲ್ಲಿ ಪಾಲುಗೊಳ್ಳುವುದು ಅವಶ್ಯವಾಗಿತ್ತು. ಬ್ಯಾಂಕುಗಳ ರಾಷ್ಟ್ರೀಕರಣದಿಂದ
ಇದನ್ನು ಸಾಧಿಸಲು ಸಾಧ್ಯವಾಗುತ್ತಿತ್ತು.
9. ವಾಣಿಜ್ಯ ಬ್ಯಾಂಕುಗಳು ಸಾಮಾನ್ಯವಾಗಿ ಶ್ರೀಮಂತ ವ್ಯಾಪಾರಸ್ಥರಿಗೆ ಅಧಿಕ
ಪ್ರಮಾಣದಲ್ಲಿ ಸಾಲವನ್ನೊದಗಿಸುತ್ತಿದ್ದುದರಿಂದ ಜೀವನಾವಶ್ಯಕ ವಸ್ತುಗಳನ್ನು ಸಂಗ್ರಹಿಸಿಡುವುದು, ಅವುಗಳನ್ನು
ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಇವೇ ವೊದಲಾದ ದುಷ್ಟ ಪ್ರವೃತ್ತಿಗಳು ಅವರಲ್ಲಿ
ಹೆಚ್ಚಾದವು. ಬ್ಯಾಂಕುಗಳು ಹಾಗೂ ಶ್ರೀಮಂತ ವರ್ತಕರ ಈ ವರ್ತನೆಯಿಂದಾಗಿ ಜನಸಾಮಾನ್ಯರು ಕಷ್ಟಕ್ಕೀಡಾದರು.
ಇಂತಹ ಪ್ರವೃತ್ತಿಯನ್ನು ತಡೆಯಲು ರಿಸರ್ವ್ ಬ್ಯಾಂಕಿನಿಂದಲೂ ಸಾಧ್ಯವಾಗಲಿಲ್ಲ. ಬ್ಯಾಂಕುಗಳ ರಾಷ್ಟ್ರೀಕರಣದಿಂದ
ಇದನ್ನು ತಡೆಯಲು ಮತ್ತು ಬೆಲೆಗಳ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆಯೆಂದು ಗ್ರಹಿಸಲಾಯಿತು.
ಮೇಲೆ ಹೇಳಿದ ಕಾರಣಗಳಿಗಾಗಿ, ಹದಿನಾಲ್ಕು ಬೃಹತ್ ಬ್ಯಾಂಕುಗಳನ್ನು ರಾಷ್ಟ್ರೀಕರಿಸಲಾಯಿತು.
ಇಂತಹ ರಾಷ್ಟ್ರೀಕರಣದಿಂದ ಮುಂದೆ ಕೊಟ್ಟ ಲಾಭಗಳನ್ನು ಸಾಧಿಸಬಹುದಾಗಿದೆ ಎಂದು ಹೇಳಲಾಗಿದೆ.
ಬ್ಯಾಂಕುಗಳ ರಾಷ್ಟ್ರೀಕರಣದಿಂದಾಗುವ ಲಾಭಗಳು
1. ರಾಷ್ಟ್ರೀಕೃತ ಬ್ಯಾಂಕುಗಳು ಇನ್ನು ಮುಂದೆ ತಮ್ಮ ಶಾಖೆಗಳನ್ನು
ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿಯೇ ತೆರೆಯುವುದರಿಂದ ಗ್ರಾಮೀಣ ಜನತೆಯ ಉಳಿತಾಯವನ್ನು ಪ್ರೋತ್ಸಾಹಿಸಲು
ಸಾಧ್ಯವಾಗುತ್ತದೆ.
2. ಜನಗಳಲ್ಲಿ ಆದ್ಯತೆ ಪಡೆದ ಕೃಷಿ, ಸಣ್ಣ ಕೈಗಾರಿಕೆ ಮತ್ತು ರಫ್ತು ವ್ಯಾಪಾರಗಳಿಗೆ
ಸಾಲ ಒದಗಿಸಲು ಸಾಧ್ಯವಾಗುತ್ತದೆ.
3. ಕೈಗಾರಿಕೆಗಳ ದೃಷ್ಟಿಯಿಂದ ಇದುವರೆಗೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯನ್ನು
ಸಾಧಿಸಲು ರಾಷ್ಟ್ರೀಕೃತ ಬ್ಯಾಂಕುಗಳು ಪ್ರಯತ್ನಿಸುತ್ತವೆ.
4. ಸಂಪತ್ತಿನ ಮತ್ತು ಆರ್ಥಿಕ ಶಕ್ತಿಯ ಕೇಂದ್ರೀಕರಣವು ಕಡಿಮೆಯಾಗಿ ಬಡವರ ಮತ್ತು
ಶ್ರೀಮಂತರಲ್ಲಿರುವ ಅಂತರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
5. ಬ್ಯಾಂಕಿನ ಹಣವನ್ನು ಸಗಟು ವ್ಯಾಪಾರ, ಕಾಳಸಂತೆ ಮೊದಲಾದವುಗಳಿಗಾಗಿ ಉಪಯೋಗವಾಗದಂತೆ
ತಡೆಹಿಡಿಯಲು ಸಾಧ್ಯವಾಗುತ್ತದೆ.
6. ಬ್ಯಾಂಕುಗಳಿಗೆ ಹೆಚ್ಚಿನ ದೃಢತೆ ಅಥವಾ ಭದ್ರತೆ ಬರುತ್ತದೆ. ಇದರಿಂದ ಬ್ಯಾಂಕುಗಳಲ್ಲಿ
ಜನಸಾಮಾನ್ಯರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಠೇವಣಿಗಳನ್ನಿಡಲು ಮುಂದೆ ಬರುತ್ತಾರೆ.
7. ಠೇವಣಿದಾರರಿಗೆ ಸಂಪೂರ್ಣ ಭದ್ರತೆ ಸಿಗುತ್ತದೆ. ತಮ್ಮ ಠೇವಣಿಯು ಒಳ್ಳೆಯ
ಉದ್ದೇಶಕ್ಕಾಗಿ ಉಪಯೋಗಿಸಲ್ಪಡುತ್ತದೆಂಬ ಅರಿವು ಅವರಿಗೆ ಆಗುತ್ತದೆ.
8. ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರದ ಅಭಿವೃದ್ಧಿಯ ಕಾರ್ಯಗಳಲ್ಲಿ
ಹಣ ತೊಡಗಿಸಲು ಸಾಧ್ಯವಾಗುತ್ತದೆ.
9. ಬ್ಯಾಂಕ್ ನೌಕರರ ಸೇವೆಗಳ ನಿಯಮಗಳನ್ನು ಸುಧಾರಿಸಿ, ಅವರು ಜನತೆಗೆ ಉತ್ತಮ
ಸೇವೆ ಸಲ್ಲಿಸುವಂತೆ ಮಾಡಲು ಸಾಧ್ಯವಾಗುತ್ತದೆ.
ರಾಷ್ಟ್ರೀಕರಣದ ವಿರುದ್ಧ ಮಾಡಲಾದ ಟೀಕೆಗಳು
ಬ್ಯಾಂಕುಗಳ ರಾಷ್ಟ್ರೀಕರಣದ ಅನೇಕ ಲಾಭಗಳು ಲಭಿಸುತ್ತಿದ್ದರೂ ಅದರಿಂದ ಹಾನಿಗಳು
ಇಲ್ಲದಿಲ್ಲ. ಇಂತಹ ಹಾನಿಗಳು ಸಂಭವಿಸದಂತೆ ನೋಡಿಕೊಳ್ಳುವುದು ಕಠಿಣವಾಗುತ್ತದೆ. ಆದ್ದರಿಂದಲೇ ರಾಷ್ಟ್ರೀಕರಣವನ್ನು
ಅನೇಕರು ವಿರೋಧಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳು ಖಾಸಗಿ ಕ್ಷೇತ್ರದಲ್ಲಿಯ ವ್ಯಾಪಾರ ಮತ್ತು
ಕೈಗಾರಿಕೆಗಳಿಗೆ ಹಣ ಒದಗಿಸಲಾರವು ಎಂಬ ಭೀತಿಯನ್ನು ವ್ಯಕ್ತಪಡಿಸಲಾಯಿತು. ಬ್ಯಾಂಕುಗಳ ರಾಷ್ಟ್ರೀಕರಣವು
ರಾಜಕೀಯ ದುರುದ್ದೇಶಗಳಿಂದ ಕೂಡಿದ್ದಾಗಿದೆಯೆಂದೂ ಟೀಕಿಸಲಾಯಿತು. ಹೀಗೆ ರಾಷ್ಟ್ರೀಕರಣದ ವಿರುದ್ಧ ಮಾಡಲಾದ
ಮಹತ್ವದ ಟೀಕೆಗಳನ್ನು ಕೆಳಗೆ ನೀಡಲಾಗಿದೆ :
1. ರಾಷ್ಟ್ರೀಕೃತ ಬ್ಯಾಂಕುಗಳ ಹಣವನ್ನು ಅಭಿವೃದ್ಧಿಯ ಕಾರ್ಯಗಳಿಗಾಗಿ ವಿನಿಯೋಗಿಸುವುದಕ್ಕೆ
ಬದಲು ರಾಜಕೀಯ ಉದ್ದೇಶಗಳಿಗಾಗಿ ಉಪಯೋಗಿಸುವ ಸಂಭವವಿದೆ.
2. ಈ ಮೊದಲೇ ಭಾರತೀಯ ಸ್ಟೇಟ್ ಬ್ಯಾಂಕು ಮತ್ತು ಅದರ ಉಪಾಂಗ
(Subsidiary) ಬ್ಯಾಂಕುಗಳು ಸರಕಾರದ ಬ್ಯಾಂಕುಗಳಾಗಿವೆ. ದೇಶದ ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಣ
ಮಾಡಿದ್ದರಿಂದ ಬ್ಯಾಂಕುಗಳ ಠೇವಣಿಯಲ್ಲಿ ಶೇಕಡಾ 91 ರಷ್ಟು ಸರ್ಕಾರದ ಅಧೀನದಲ್ಲಿ ಬಂದಂತಾಯಿತು. ಇದರಿಂದ
ಸಮಾಜವಾದದ ಬದಲು ಸರಕಾರದ ಏಕಸ್ವಾಮ್ಯತೆ ಉಂಟಾಗುತ್ತದೆ.
3. ಅನೇಕ ರಾಷ್ಟ್ರೀಕೃತ ಉದ್ದಿಮೆಗಳು ಲಾಭದಾಯಕವಾಗಿ ನಡೆಯುತ್ತಿಲ್ಲವಾದ್ದರಿಂದ
ರಾಷ್ಟ್ರೀಕೃತ ಬ್ಯಾಂಕುಗಳು ಇದಕ್ಕೆ ಹೊರತಾಗಿರುವುದಿಲ್ಲ. ಅಧಿಕಾರದ ಆಸೆಯ ಪ್ರವೃತ್ತಿ, ಆಡಳಿತದಲ್ಲಿರುವ
ತೊಡಕುಗಳು, ವಿಳಂಬ ನೀತಿ, ಅಧಿಕಾರಿಗಳಲ್ಲಿರುವ ಭ್ರಷ್ಟಾಚಾರ ಇವೇ ವೊದಲಾದವುಗಳಿಂದಾಗಿ ರಾಷ್ಟ್ರೀಕೃತ
ಬ್ಯಾಂಕುಗಳು ಹಾನಿಗೊಳಗಾಗುವ ಸಂಭವವಿದೆ.
4. ಖಾಸಗಿ ಮತ್ತು ಸರಕಾರಿ ಉದ್ದಿಮೆಗಳೆರಡೂ ಪರಸ್ಪರ ಪೂರಕವಾಗಿ ಬೆಳೆಯಬೇಕೆಂಬ
ಸರಕಾರದ ಧೋರಣೆಯು ಯಶಸ್ವಿಯಾಗಲಾರದು. ರಾಷ್ಟ್ರೀಕೃತ ಬ್ಯಾಂಕುಗಳು ಖಾಸಗಿ ಉದ್ದಿಮೆಗಳಿಗೆ ಹಣ ಒದಗಿಸದಿದ್ದರೆ
ಅವುಗಳ ಬೆಳವಣಿಗೆ ಕುಂಠಿತವಾಗುವುದು ಸಹಜ.
5. ರಾಷ್ಟ್ರೀಕರಣದಿಂದ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವೇನೂ ಆಗಲಾರದು.
ಕಾರ್ಮಿಕರು, ಹಳ್ಳಿಗರು ಮತ್ತು ಇತರ ಸಾಮಾನ್ಯ ಜನರು ಬ್ಯಾಂಕುಗಳೊಡನೆ ವ್ಯವಹಾರ ಮಾಡುವುದೇ ಕಡಿಮೆ.
ಬಡ ಜನರಿಗೆ ಬ್ಯಾಂಕುಗಳು ಆಧಾರವಿಲ್ಲದೆ ಸಾಲ ಒದಗಿಸಲು ಸಾಧ್ಯವೇ ಇಲ್ಲ.
6. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜಕಾರಣಿಗಳು ಕೈಹಾಕುವ ಸಂಭವವುಂಟು. ಹೀಗಾದರೆ
ಅವು ಇಂದಿನ ಸಹಕಾರಿ ಸಂಘಗಳಂತೆಯೇ ಆಗುತ್ತವೆ. ಇದರಿಂದ ಪ್ರಾದೇಶಿಕ ತಂಟೆಗಳು ಅಧಿಕವಾಗಿ ಅನಾಹುತಗಳಾಗುವ
ಸಂಭವವಿದೆ.
7. ರಾಷ್ಟ್ರೀಕೃತ ಬ್ಯಾಂಕುಗಳು ಲಾಭ ಮತ್ತು ದಕ್ಷತೆಗಳಿಗೆ ಗಮನಕೊಡುವುದಿಲ್ಲವಾದ್ದರಿಂದ
ಅವುಗಳ ನಿರ್ವಹಣೆಯ ವೆಚ್ಚ ಹೆಚ್ಚಾಗಿ ಅವು ಹಾನಿಗೊಳಗಾಗುವ ಸಂಭವವಿದೆ. ಇದರಿಂದ ಸಮಾಜಕ್ಕೆ ನಷ್ಟವಾಗುತ್ತದೆ.
ರಾಷ್ಟ್ರೀಕೃತ ಬ್ಯಾಂಕುಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸದಿದ್ದರೆ ಜನರು ಖಾಸಗಿ ಬ್ಯಾಂಕುಗಳೊಂದಿಗೆ
ವ್ಯವಹಾರ ಮಾಡುತ್ತಾರೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ನಿಯಮ ನಿಬಂಧನೆಗಳಿಗೆ ಹೆಚ್ಚಿನ
ಪ್ರಾಮುಖ್ಯತೆನೀಡಿ, ಜನಸಾಮಾನ್ಯರ ಹಿತವನ್ನು ಕಡೆಗಣಿಸುತ್ತಾರೆ.
8. ರಾಷ್ಟ್ರೀಕೃತ
ಬ್ಯಾಂಕುಗಳು ಠೇವಣಿದಾರರ ಬಗೆಗೆ ಕಾಯ್ದುಕೊಳ್ಳಬೇಕಾದ ಗೌಪ್ಯವನ್ನು ಕಾಯ್ದುಕೊಳ್ಳಲಾರವೆಂಬ ಭೀತಿಯು
ವ್ಯಾಪಾರಿ ವರ್ಗದಲ್ಲಿ ಮೂಡಿದೆ.
ಹೀಗೆ ಬ್ಯಾಂಕುಗಳ ರಾಷ್ಟ್ರೀಕರಣದಿಂದ
ಹಲವಾರು ಲಾಭಗಳುಂಟಾದರೆ ಅದರಲ್ಲಿ ಅನೇಕ ದೋಷಗಳೂ ಇರುತ್ತವೆ. ಆದರೆ ದೋಷಗಳಿವೆಯೆಂಬ ಮಾತ್ರಕ್ಕೆ ಭಾರತದಲ್ಲಿ
ಬ್ಯಾಂಕಿಂಗ್ ಪದ್ಧತಿಯ ರಾಷ್ಟ್ರೀಕರಣವನ್ನು ಮಾಡದೇ ಇರಲು ಸಾಧ್ಯವಿರಲಿಲ್ಲ. ದೋಷಗಳಿಗಿಂತಲೂ ಲಾಭಗಳೇ
ಹೆಚ್ಚಾಗಿರುವದರಿಂದ ಬ್ಯಾಂಕುಗಳ ರಾಷ್ಟ್ರೀಕರಣವನ್ನು ನಾವು ಸ್ವಾಗತಿಸಬೇಕಾಗುತ್ತದೆ. ಸಮಾಜವಾದಿ ಸಮಾಜವನ್ನು
ಸ್ಥಾಪಿಸುವ ದಿಶೆಯಲ್ಲಿ ರಾಷ್ಟ್ರೀಕರಣವು ಒಂದು ಮಹತ್ವದ ಹೆಜ್ಜೆಯಾಗಿದೆ. ದೇಶದಲ್ಲಿ ಬ್ಯಾಂಕಿಂಗ್
ಉದ್ದಿಮೆಯನ್ನು ಸುವ್ಯವಸ್ಥಿತಗೊಳಿಸಿ, ರಾಷ್ಟ್ರೀಕೃತ ಬ್ಯಾಂಕುಗಳು ಜನರ ಉಳಿತಾಯವನ್ನು ಸಂಗ್ರಹಿಸಿ,
ಅದನ್ನು ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಸುವಂತೆ ಮಾಡಿ ದೇಶದ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸುವುದೇ
ರಾಷ್ಟ್ರೀಕರಣದ ಮುಖ್ಯ ಉದ್ದೇಶವಾಗಿತ್ತು. ಈ ದಿಶೆಯಲ್ಲಿ ಬ್ಯಾಂಕುಗಳು ಯಶಸ್ವಿಯಾದರೆ ಆಗ ರಾಷ್ಟ್ರೀಕರಣದ
ಕ್ರಮವು ಸಾರ್ಥಕವಾಗುತ್ತದೆ.
*****
Comments
Post a Comment