ಪಲ್ಲವರ ರಾಜಕೀಯ ಇತಿಹಾಸ

ಪಲ್ಲವ ಅರಸರು (ಸಾ... 200-800)

  ಆರಂಭಿಕ ಪಲ್ಲವ ಅರಸರ ವಂಶಾವಳಿಯನ್ನು ರಚಿಸುವಲ್ಲಿ ಆಧಾರಗಳ ಕೊರತೆ ಇರುವ ಕಾರಣದಿಂದಾಗಿ ಅನೇಕ ತೊಡಕುಗಳಿವೆ. ಆದರೂ ಅವರ ಕಾಲವನ್ನು ಪ್ರಾಕೃತ ಶಾಸನಗಳ ಕಾಲದ ಅರಸರು, ಸಂಸ್ಕೃತ ಶಾಸನಗಳ ಕಾಲದ ಅರಸರು ಮತ್ತು ಶಿಲಾಶಾಸನಗಳ ಕಾಲದ ಅರಸರು ಎಂದು ಮೂರು ವಿಭಾಗಗಳಾಗಿ ಅಧ್ಯಯನ ಮಾಡಲಾಗುತ್ತದೆ.

I. ಪ್ರಾಕೃತ ಶಾಸನಗಳ ಕಾಲ:-

ಶಿವಸ್ಕಂಧವರ್ಮ - 4ನೆಯ ಶತಮಾನದ ಆದಿಭಾಗ

II. ಸಂಸ್ಕೃತ ಶಾಸನಗಳ ಕಾಲ:-

ಹದಿನಾರಕ್ಕೂ ಹೆಚ್ಚು ರಾಜರು ಸಾ.ಶ.ವ. 350 ರಿಂದ 575 ವರೆಗೆ ಆಳಿದರು.

ಅವರಲ್ಲಿ ಒಂದನೆಯ ಸಿಂಹವರ್ಮ, 1ನೆಯ ಸ್ಕಂಧವರ್ಮ, ವೀರಕುರ್ಚ, 2ನೆಯ ಸ್ಕಂಧವರ್ಮ, ವಿಷ್ಣುಗೋಪ ಮುಂತಾದವರು ಪ್ರಮುಖರು.

III. ಶಿಲಾ ಶಾಸನಗಳ ಕಾಲದ ಅರಸರು

ಒಂದನೆ ಮಹೇಂದ್ರವರ್ಮ – (600-630)

ಒಂದನೆ ನರಸಿಂಹವರ್ಮ – (630-668)

ಎರಡನೆ ಮಹೇಂದ್ರವರ್ಮ – (668-670)

ಒಂದನೆ ಪರಮೇಶ್ವರವರ್ಮ – (670-695)

ಇಮ್ಮಡಿ ನರಸಿಂಹವರ್ಮ – (700-728)

ಇಮ್ಮಡಿ ಪರಮೇಶ್ವರವರ್ಮ – (728-731)

ಎರಡನೆ ನಂದಿವರ್ಮ :- (731-795)

ದಂತಿವರ್ಮ – (795-846)

ಮುಮ್ಮಡಿ ನಂದಿವರ್ಮ – (846-869)

ನೃಪತುಂಗ ವರ್ಮ – (869-880)

ಅಪರಾಜಿತವರ್ಮ – (880-897)

*****


ಸೂಚನೆ:- ಇಲ್ಲಿನ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.

 

ಪೀಠಿಕೆ:- ದಕ್ಷಿಣ ಭಾರತದಲ್ಲಿ ಈಗಿನ ಆರ್ಕಾಟ್, ಚೆನ್ನೈ, ತಿರುಚ್ಚಿರಪ್ಪಳ್ಳಿ ಮತ್ತು ತಂಜಾವೂರು ಜಿಲ್ಲೆಗಳಿರುವ ಪ್ರದೇಶವನ್ನಾಳಿದ ಪ್ರಾಚೀನ ರಾಜವಂಶ. ವಂಶದ ಅರಸರು ದಕ್ಷಿಣ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದ ಮೇಲೆ ವಿಶೇಷ ಪ್ರಭಾವ ಬೀರಿದವರು. ಪಲ್ಲವ ದೊರೆಗಳು 3ನೆಯ ಶತಮಾನದಿಂದ 9ನೆಯ ಶತಮಾನದವರೆಗೂ ಪ್ರಬಲರಾಗಿದ್ದು, ವಿಶಾಲ ಸಾಮ್ರಾಜ್ಯ ಸ್ಥಾಪಿಸಿ ಆಳಿದರು.

ಪಲ್ಲವರ ಮೂಲ:-

ವಿದೇಶೀಯ ಮೂಲ:- ಪಲ್ಲವರು ಪಹಲ್ಲವ ಅಥವಾ ಪಾರ್ಥಿಯನ್ ಬುಡಕಟ್ಟಿಗೆ ಸೇರಿದವರೆಂದು ಬಿ. ಎಲ್ ರೈಸ್, ವಿ.ಎ. ಸ್ಮಿಥ್‌ ಮತ್ತು ವಿ. ವೆಂಕಯ್ಯ ಮುಂತಾದ ವಿದ್ವಾಂಸರು ಹೇಳಿದ್ದಾರೆ. ಪಲ್ಲವರು ಪರ್ಷಿಯದಿಂದ ಸಿಂಧೂ ಪ್ರದೇಶಕ್ಕೆ ಬಂದು, ಅನಂತರ ದಕ್ಷಿಣ ಭಾರತದಲ್ಲಿ ತೊಂಡಮಂಡಲದಲ್ಲಿ ರಾಜ್ಯ ನಿರ್ಮಿಸಿ ಆಳಿದರೆಂಬುದು ಇವರ ಅಭಿಪ್ರಾಯ. ಆದರೆ ಈಚಿನ ಸಂಶೋಧನೆಗಳು ಪಲ್ಲವರು ಪರ್ಷಿಯನ್ ಅಥವಾ ಪಾರ್ಥಿಯನ್ ಮೂಲದವರೆಂಬ ವಾದವನ್ನು ನಿರಾಧಾರಗೊಳಿಸಿವೆ. ಪಲ್ಲವ ದೊರೆಗಳು ಹೊರಗಿನವರಲ್ಲವೆಂದೂ ಅವರು ವೈದಿಕ ಸಂಪ್ರದಾಯಕ್ಕೆ ಸೇರಿದವರಾಗಿದ್ದು, ಅಶ್ವಮೇಧಯಾಗ ಮುಂತಾದವನ್ನು ಆಚರಿಸುತ್ತಿದ್ದರೆಂದೂ ಹೇಳಲಾಗಿದೆ. ಪಲ್ಲವರು ಮತ್ತು ಪಹ್ಲವರು ಒಂದೇ ಗುಂಪಿಗೆ ಸೇರಿದವರಾಗಿದ್ದಲ್ಲಿ, ಪಲ್ಲವರ ದಾಖಲೆಗಳಲ್ಲಿ ಪಹ್ಲವರ ಪ್ರಸ್ತಾಪವಿರಬೇಕಿತ್ತು. ಹೊರಗಿನವರಾದ ಪಾರ್ಥಿಯನರು ಅಥವಾ ಪಹಲ್ಲವರು ಅತ್ಯಲ್ಪ ಸಮಯದಲ್ಲಿ ಭಾರತೀಯ ಸಂಪ್ರದಾಯಗಳನ್ನು ಅನುಸರಿಸಿ, ಅಶ್ವಮೇಧ ಯಾಗಗಳನ್ನು ಆಚರಿಸುತ್ತಿದ್ದರೆಂದು ಊಹಿಸುವುದು ಸಹ ಸಾಧ್ಯವಿಲ್ಲವೆಂದು ಡಿ. ಸಿ. ಸರ್ಕಾರ್ ಹೇಳಿದ್ದಾರೆ. ದಕ್ಷಿಣ ಭಾರತದ ಪಲ್ಲವರು ಮತ್ತು ಉತ್ತರದ ಪಹಲ್ಲವರು ಬೇರೆ ಬೇರೆಯವರೆಂದು ಗೂರ್ಜರ ಪ್ರತೀಹಾರ ದೊರೆಗಳ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ಮತ್ತು ವಿದ್ವಾಂಸ ರಾಜಶೇಖರ ಅಭಿಪ್ರಾಯಪಟ್ಟಿದ್ದಾನೆ.

ಸಿಂಹಳ ಮೂಲ:- ಪಲ್ಲವರು ಮೂಲತಃ ಸಿಂಹಳ ದ್ವೀಪಕ್ಕೆ ಸೇರಿದವರೆಂದು ಪ್ರಾಚೀನ ತಮಿಳು ಸಾಹಿತ್ಯದಿಂದ, ಮುಖ್ಯವಾಗಿ ಮಣಿಮೇಖಲೈ, ಶಿಲಪ್ಪದಿಕಾರಮ್ ಗ್ರಂಥಗಳಿಂದ ತಿಳಿದುಬರುತ್ತದೆ. ಸಿಂಹಳದ್ವೀಪದ ಬಳಿಯ ಮಣಿಪಲ್ಲವಂ ದ್ವೀಪದ ದೊರೆಯಾಗಿದ್ದ ನಾಗ ಗುಂಪಿಗೆ ಸೇರಿದ್ದ ಒಳೈವನಮ್ ಎಂಬವನ ಮಗಳು ಪಿಲ್ಲಿವಳೈ ಎಂಬ ರಾಜಕುಮಾರಿಯನ್ನು ಕಿಳ್ಳಿವಳರ್ವನ್ ಎಂಬ ಚೋಳ ದೊರೆ ವಿವಾಹವಾಗಿ ಒಬ್ಬ ಪುತ್ರನನ್ನು ಪಡೆದನೆಂದು ಮಣಿಮೇಖಲೈ ಗ್ರಂಥದಲ್ಲಿ ಬರುವ ಕಥೆಯೊಂದರಲ್ಲಿ ಹೇಳಿದೆ. ರಾಜಕುಮಾರ ಸಮುದ್ರದ ಮೇಲೆ ಪ್ರಯಾಣ ಮಾಡುತ್ತಿದ್ದಾಗ ಅವನ ಹಡಗು ಒಡೆದುಹೋಯಿತು. ಆದರೆ ಅವನು ಅಲೆಗಳ ಸಹಾಯದಿಂದ ಸಮುದ್ರ ದಂಡೆಯನ್ನು ತಲಪಿದಾಗ, ಅವನ ಕಾಲಿಗೆ ತೊಂಡೈ ಅಥವಾ ಬಳ್ಳಿ ಸುತ್ತಿಕೊಂಡಿತ್ತು. ಆದ್ದರಿಂದ ಅವನಿಗೆ ತೊಂಡೈಮನ್ ಎಂಬ ಹೆಸರೂ ಅವನು ಆಳಿದ ರಾಜ್ಯಕ್ಕೆ ತೊಂಡೈಮಂಡಲ ಎಂಬ ಹೆಸರೂ ಬಂದುವೆಂದೂ, ನಾಗಕುಲಕ್ಕೆ ಸೇರಿದ ತನ್ನ ತಾಯಿಯ ಊರಾದ ಮಣಿಪಲ್ಲವಂ ಎಂಬ ಹೆಸರಿನ ಪಲ್ಲವಂ ಪದವನ್ನೇ ಅವನು ತನ್ನ ಸಂತತಿಗೆ ಸೇರಿಸಿಕೊಂಡನೆಂದೂ ಹೇಳಲಾಗಿದೆ. ಆದರೆ ಕಥೆಯ ಆಧಾರದ ಮೇಲೆ ಪಲ್ಲವರ ಮೂಲವನ್ನು ನಿರ್ಧರಿಸುವುದು ಸಮಂಜಸವೆನಿಸುವುದಿಲ್ಲ. ಏಕೆಂದರೆ ಪಲ್ಲವರ ಪ್ರಾರಂಭವಾದ ಪ್ರಾಕೃತ ಶಾಸನಗಳಲ್ಲಿ ನಾಗ ಸಂತತಿಯ ಸಂಬಂಧವಾಗಲಿ ತೊಂಡೈಮನ್ನನ ವರ್ಣನೆಯಾಗಲಿ ಕಂಡುಬರುವುದಿಲ್ಲ.

ಬ್ರಾಹ್ಮಣ ಮೂಲ:- ಪಲ್ಲವರು ಉತ್ತರದ ಬ್ರಾಹ್ಮಣ ವಾಕಾಟಕ ದೊರೆಗಳ ಸಂತತಿಗೆ ಸೇರಿದವರೆಂದೂ ಅವರು ಕ್ಷತ್ರಿಯ ಧರ್ಮವನ್ನು ಅನುಸರಿಸಿ, ದಕ್ಷಿಣದಲ್ಲಿ ತಮ್ಮದೇ ಆದ ಒಂದು ರಾಜ್ಯವನ್ನು ಕಟ್ಟಿಕೊಂಡರೆಂದೂ ಕೆ.ಪಿ. ಜೇಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣದ ಮೂಲ:- ಪಲ್ಲವರು ಉತ್ತರದವರು ಅಲ್ಲ, ಪರಕೀಯರು ಅಲ್ಲ. ಅವರು ದಕ್ಷಿಣ ಭಾರತದ ನಿವಾಸಿಗಳು ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಪಲ್ಲವರು ಬಳ್ಳಾರಿ ಜಿಲ್ಲೆಗೆ ಸೇರಿದವರೆಂದೂ ಬನವಾಸಿಯ ನಾಗಕುಲದೊಂದಿಗೆ ವಿವಾಹಸಂಬಂಧ ಬೆಳೆಸಿಕೊಂಡು, ಶಾತವಾಹನರ ಅವನತಿಯ ಅನಂತರ ಕಾಂಚೀಪುರ ಅಥವಾ ಕಂಚಿ ಪ್ರದೇಶವನ್ನು ಆಕ್ರಮಿಸಿಕೊಂಡು ತಮ್ಮದೇ ಆದ ರಾಜ್ಯ ಕಟ್ಟಿಕೊಂಡರೆಂದೂ ಹಿರೇಹಡಗಲಿ ಶಾಸನದ ಆಧಾರದ ಮೇಲೆ ಎಸ್. ಶ್ರೀಕಂಠಶಾಸ್ತ್ರಿ ಹೇಳಿದ್ದಾರೆ. ಪಲ್ಲವರು ದಕ್ಷಿಣ ಭಾರತದವರಲ್ಲವೆಂಬುವುದರಲ್ಲಿ ಯಾವ ಸಂದೇಹವೂ ಇಲ್ಲವೆಂದೂ, ಅವರು ಕಂಚಿ ಪ್ರದೇಶದಲ್ಲಿ ತಮ್ಮ ಆಳ್ವಿಕೆ ಆರಂಬಿಸಿ ಕ್ರಮೇಣ ತಮ್ಮ ರಾಜ್ಯವನ್ನು ವಿಸ್ತರಿಸಿದರೆಂದೂ, ಅವರ ರಾಜ್ಯದ ಬಹು ಭಾಗವನ್ನು ತೊಂಡಮಂಡಲ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತೆಂದೂ ಅನೇಕ ವಿದ್ವಾಂಸರು ವಾದಿಸಿದ್ದಾರೆ. ಪಲ್ಲವರು ದಕ್ಷಿಣದ ತೊಂಡಮಂಡಲದ ನಿವಾಸಿಗಳೆಂದೂ, ಅವರಿಗೆ ಅಶೋಕನ ಶಾಸನಗಳಲ್ಲಿ ಪಲದ ಅಥವಾ ಪುಳಿಂದರೆಂಬ ಹೆಸರಿತ್ತೆಂದೂ, ಶಾತವಾಹನರ ಅವನತಿಯ ಅನಂತರ ಅವರು ಪ್ರಸಿದ್ಧಿಗೆ ಬಂದರೆಂದೂ ಆರ್. ಸತ್ಯನಾಥ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. ಪಲ್ಲವರು ದಕ್ಷಿಣದವರೆಂಬ ವಾದವನ್ನು ಈಚಿನ ಸಂಶೋಧನೆಗಳು ಹೆಚ್ಚು ದೃಢಪಡಿಸಿವೆ.

 

ರಾಜಕೀಯ ಇತಿಹಾಸ;- ಪಲ್ಲವ ವಂಶದ ಆರಂಭದ ಇತಿಹಾಸ ಅಸ್ಪಷ್ಟ. ಪಲ್ಲವರ ವಂಶವೃಕ್ಷ ಮತ್ತು ಕಾಲಾನುಕ್ರಮಣಿಕೆಗಳಿಗೆ ಸಂಬಂಧಿಸಿದಂತೆ ಇರುವ ವಿವರಗಳು ಹೆಚ್ಚು ತೊಡಕಿನವುಗಳಾಗಿವೆ. ಆರನೆಯ ಶತಮಾನದವರೆಗೂ ಆಳಿದ ಪಲ್ಲವ ದೊರೆಗಳು ಪ್ರಾಕೃತ ಮತ್ತು ಸಂಸ್ಕೃತ ಶಾಸನಗಳ ಪಲ್ಲವ ಶಾಖೆಗಳಿಗೆ ಸೇರಿದವರೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸಿಂಹವರ್ಮ, ಶಿವಸ್ಕಂದವರ್ಮ ಮುಂತಾದವರು ಆರಂಭದ ರಾಜರುಗಳಲ್ಲಿ ಪ್ರಮುಖರು.

      ನಾಲ್ಕನೆಯ ಶತಮಾನದ ಆದಿಭಾಗದಲ್ಲಿ ಆಳಿದ ಶಿವಸ್ಕಂಧವರ್ಮ ಆರಂಭದ ರಾಜರುಗಳಲ್ಲಿ ಹೆಚ್ಚು ಪ್ರಸಿದ್ಧನಾದವನು. ಪಲ್ಲವರ ಚರಿತ್ರೆ ಶಿವಸ್ಕಂಧವರ್ಮನ ಕಾಲದಿಂದಲೇ ಆರಂಭವಾಗುವುದೆಂದು ಹೇಳಲಾಗಿದೆ. ಶೂರನೂ, ಪರಾಕ್ರಮಿಯೂ ಆಗಿದ್ದ ಶಿವಸ್ಕಂಧವರ್ಮನ ರಾಜ್ಯ ಕೃಷ್ಣಾನದಿಯಿಂದ ದಕ್ಷಿಣ ಪೆನ್ನಾರ್ ಮತ್ತು ಬಳ್ಳಾರಿ ಜಿಲ್ಲೆಯವರೆಗೆ ಹಬ್ಬಿತ್ತು. ಕಂಚಿ ಅವನ ರಾಜಧಾನಿಯಾಗಿತ್ತು. ತನ್ನ ಶೌರ್ಯ ಹಾಗೂ ಸೈನಿಕ ಸಾಧನೆಗಳ ನೆನಪಾಗಿ ಶಿವಸ್ಕಂಧವರ್ಮ ಅಶ್ವಮೇಧ ಯಾಗಗಳನ್ನು ಆಚರಿಸಿ ರಾಜಾಧಿರಾಜ, ಧರ್ಮಸಂರಕ್ಷಕ ಎಂಬ ಬಿರುದುಗಳನ್ನು ಧರಿಸಿದ್ದ. ಮೌರ್ಯರ ಆಡಳಿತಕ್ರಮವನ್ನು ಶಿವಸ್ಕಂದವರ್ಮ ಅನುಸರಿಸಿದ್ದನೆಂದು ತಿಳಿದುಬರುತ್ತದೆ.

     ಸಂಸ್ಕೃತ ಶಾಸನ ಪದ್ಧತಿಯನ್ನು ಜಾರಿಗೆ ತಂದ ಕಂಚಿ ಪಲ್ಲವ ಶಾಖೆಯ ಹದಿನಾರಕ್ಕೂ ಹೆಚ್ಚು ರಾಜರು 350 ರಿಂದ 575 ವರೆಗೆ ಆಳಿದರೆಂದು ತಿಳಿದು ಬರುತ್ತದೆ. ಒಂದನೆಯ ಸಿಂಹವರ್ಮ, 1ನೆಯ ಸ್ಕಂಧವರ್ಮ ವೀರಕುರ್ಚ, 2ನೆಯ ಸ್ಕಂಧವರ್ಮ, ವಿಷ್ಣುಗೋಪ ಮುಂತಾದವರು ಇವರಲ್ಲಿ ಪ್ರಮುಖರಾದವರು. ರಾಜರ ಕಾಲವನ್ನು ನಿರ್ಧರಿಸಲು ಅನೇಕ ತೊಡಕುಗಳಿವೆ. ಉತ್ತರದ ಗುಪ್ತ ದೊರೆ ಸಮುದ್ರಗುಪ್ತ ದಕ್ಷಿಣಾಪಥದ ಮೇಲೆ ದಂಡೆತ್ತಿ ಬಂದು ಸೋಲಿಸಿದ ದೊರೆಗಳಲ್ಲಿ ಕಂಚಿಯ ವಿಷ್ಣುಗೋಪನೂ ಒಬ್ಬ. ವಿಷ್ಣುಗೋಪ ಇತರರೊಡನೆ ಸೇರಿಕೊಂಡು ಸಮುದ್ರಗುಪ್ತನನ್ನು ಸೋಲಿಸಿದನೆಂಬ ವಾದ ಸತ್ಯಕ್ಕೆ ದೂರವಾದದ್ದು. ಕಂಚಿಯ ಬಳಿ ನಡೆದ ಯುದ್ಧದಲ್ಲಿ ಸಮುದ್ರಗುಪ್ತ ವಿಷ್ಣು ಗೋಪನನ್ನು ಸಂಪೂರ್ಣವಾಗಿ ಪರಾಭವಗೊಳಿಸಿ, ಜಯಶೀಲನಾದರೂ ಪಲ್ಲವ ರಾಜಧಾನಿಗೆ ಬರಲಿಲ್ಲ. ಸಮುದ್ರಗುಪ್ತ ಗೆದ್ದ ಪ್ರದೇಶಗಳನ್ನು ವಿಷ್ಣು ಗೋಪನಿಗೆ ಹಿಂದಿರುಗಿಸಿ, ಅವನಿಂದ ಕಪ್ಪಕಾಣಿಕೆಗಳನ್ನು ಪಡೆದು ಉತ್ತರಕ್ಕೆ ಮರಳಿದ.

     ಕೆಲವು ಶಿಲಾಶಾಸನಗಳಿಂದ ತಿಳಿದುಬರುವಂತೆ ವೀರ ಕುರ್ಚ ನಾಗಕುಮಾರಿಯೊಬ್ಬಳನ್ನು ವಿವಾಹವಾಗಿ ರಾಜನಾದ. ವೀರ ಕುರ್ಚ ತನ್ನದೇ ಆದ ಪಲ್ಲವ ಸಂತತಿಯನ್ನು ಆರಂಭಿಸಿದನೆಂದು ಕೆಲವು ಇತಿಹಾಸಕಾರರು ಇದನ್ನು ಆಧಾರವಾಗಿಟ್ಟುಕೊಂಡು ವಾದಿಸಿದ್ದಾರೆ. ಆದರೆ ಇದು ಸರಿಯಲ್ಲವೆಂದು ಕಾಣಿಸುತ್ತದೆ. ಸಮುದ್ರ ಗುಪ್ತ ದಕ್ಷಿಣಾಪಥದ ಮೇಲೆ ನಡೆಸಿದ ಆಕ್ರಮಣದಿಂದ ಉಂಟಾದ ರಾಜಕೀಯ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ತನ್ನ ಅಧಿಕಾರವನ್ನು ಭದ್ರಗೊಳಿಸಿಕೊಳ್ಳಲು ವೀರಕುರ್ಚ ವಿವಾಹ ಸಂಬಂಧ ಬೆಳೆಸಿದ್ದಿರಬೇಕು. ಅವನು ಪ್ರತ್ಯೇಕ ಪಲ್ಲವ ಸಂತತಿಯೊಂದನ್ನು ಆರಂಭಿಸಿದನೆಂಬ ವಾದದಲ್ಲಿ ಹುರುಳಿಲ್ಲ.

     ಸಾ.ಶ.ವ. 575 ಸುಮಾರಿನಲ್ಲಿ ಅಧಿಕಾರಕ್ಕೆ ಬಂದ 3ನೆಯ ಸಿಂಹವರ್ಮನ ಮಗ ಸಿಂಹವಿಷ್ಣುವಿನ ಕಾಲದಿಂದ ಪಲ್ಲವರ ರಾಜಕೀಯ ಇತಿಹಾಸ ಹೆಚ್ಚು ಸ್ಪಷ್ಟವಾಗಿ ತಿಳಿದು ಬರುತ್ತದೆ. ಸಿಂಹವಿಷ್ಣು ಗದ್ದುಗೆ ಏರಿದಾಗ ಶ್ರೇಷ್ಠ ಹಾಗೂ ಪ್ರಖ್ಯಾತ ಪಲ್ಲವ ರಾಜರ ಕಾಲ ಆರಂಭವಾಯಿತಲ್ಲದೆ, ಪಲ್ಲವ ಇತಿಹಾಸದಲ್ಲಿ ಅಭ್ಯುದಯಭರಿತ ಯುಗವೊಂದು ಆರಂಭವಾಯಿತು. ಪಲ್ಲವರ ಮಹತ್ತಾದ ರಾಜಕೀಯ ಹಾಗೂ ಸಾಂಸ್ಕೃತಿಕ ಸಾಧನೆಗಳಿಗೆ ಅಸ್ತಿಭಾರ ಹಾಕಿದ ಕೀರ್ತಿ ಸಿಂಹವಿಷ್ಣುವಿಗೆ ಸಲ್ಲಬೇಕು. ವಿಸ್ತರಣವಾದಿಯಾಗಿದ್ದ ಸಿಂಹವಿಷ್ಣುವು ಚೋಳರು, ಪಾಂಡ್ಯರು ಮತ್ತು ಕಲಭ್ರರನ್ನು ಸದೆಬಡಿದು, ಕಂಚಿಯಲ್ಲಿ ಪಲ್ಲವ ಪ್ರಭುತ್ವವನ್ನು ಭದ್ರಗೊಳಿಸಿದ. ಚೋಳಮಂಡಲವನ್ನು ಗೆದ್ದುಕೊಂಡದ್ದು ಸಿಂಹವಿಷ್ಣುವಿನ ಪ್ರಮುಖ ಸೈನಿಕ ಸಾಧನೆ. ಸಿಂಹವಿಷ್ಣುವಿನ ಪ್ರಭುತ್ವ ಮದರಾಸಿನಿಂದ ಕುಂಭಕೋಣಂವರೆಗೂ ಹಬ್ಬಿತ್ತೆಂದು ತಿಳಿದುಬರುತ್ತದೆ. ವೈಷ್ಣವ ಮತಾವಲಂಬಿಯಾಗಿದ್ದ ಸಿಂಹವಿಷ್ಣುವಿಗೆ ಅವನಿಸಿಂಹ ಎಂಬ ಬೇರೊಂದು ಹೆಸರಿತ್ತು. ಅವನಿಭಾಜನ, ಲಲಿತಾಂಕುರ, ಶತ್ರುಮಲ್ಲ ಮುಂತಾದ ಬಿರುದುಗಳು ಇವನಿಗಿದ್ದವು. ಇವನು ಮಹಾಪರಾಕ್ರಮಿಯಾಗಿದ್ದುದಲ್ಲದೆ, ಸಂಗೀತ ಸಾಹಿತ್ಯ ಪಕ್ಷಪಾತಿಯಾಗಿದ್ದ; ಲಲಿತಕಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದ. ಕಿರಾತಾರ್ಜುನೀಯ ಗ್ರಂಥ ಬರೆದ ಪ್ರಸಿದ್ಧ ಕವಿ ಭಾರವಿ ಇವನ ಕಾಲದಲ್ಲಿ ಕಂಚಿಗೆ ಭೇಟಿ ನೀಡಿದ್ದ. ಸಿಂಹವಿಷ್ಣುವಿನ ಮತ್ತು ಇವನ ರಾಣಿಯರ ಚಿತ್ರಗಳು ಮಹಾಬಲಿಪುರದ ಆದಿವರಾಹ ಗುಡಿಯಲ್ಲಿವೆ. ಮಹಾಬಲಿಪುರ ಪ್ರಖ್ಯಾತ ಶಿಲ್ಪಕೇಂದ್ರವಾಗಿ ಬೆಳೆಯಲು ಸಿಂಹವಿಷ್ಣು ಕಾರಣವಾಗಿದ್ದಿರಬೇಕು.

ಮಹೇಂದ್ರವರ್ಮ 1: ಸಾ.ಶ.ವ. 600 ರಿಂದ 630 ವರೆಗೆ ಆಳಿದ ಒಂದನೆಯ ಮಹೇಂದ್ರವರ್ಮ ಸಿಂಹವಿಷ್ಣುವಿನ ಪುತ್ರ ಮತ್ತು ಉತ್ತರಾಧಿಕಾರಿ. ಇವನು ಪಲ್ಲವ ರಾಜವಂಶದಲ್ಲೇ ಅತ್ಯಂತ ಹೆಸರಾಂತ ದೊರೆ. ಈತ ಚತುರ. ಕವಿ, ಸಂಗೀತಗಾರ ಮತ್ತು ರಾಜ್ಯಸಂಸ್ಥಾಪಕನೆಂದು ಕೀರ್ತಿ ಪಡೆದವ. ಇವನ ಕಾಲದಲ್ಲೇ ಪ್ರಸಿದ್ಧ ಪಲ್ಲವ-ಚಾಳುಕ್ಯ ಕದನಗಳು ಆರಂಭವಾದದ್ದು. ಪಲ್ಲವ ರಾಜ್ಯಕ್ಕೂ ಕನ್ನಡ ರಾಜ್ಯಕ್ಕೂ ಉದ್ಭವಿಸುವ ರಾಜಕೀಯ ವೈಷಮ್ಯ ಆಜನ್ಮದ್ವೇಷದ ರೂಪ ತಾಳಿ ಅನೇಕ ಶತಮಾನಗಳ ಕಾಲ ಮುಂದುವರಿಯಿತು.

     ಪಲ್ಲವರು ತಮ್ಮ ಪ್ರಭುತ್ವಕ್ಕೆ ವಿರುದ್ಧವಾಗಿದ್ದರೆಂಬ ಕಾರಣದಿಂದ ಚಾಳುಕ್ಯರ ಪ್ರಖ್ಯಾತ ದೊರೆ ಇಮ್ಮಡಿ ಪುಲಕೇಶಿ 1ನೆಯ ಮಹೇಂದ್ರವರ್ಮನ ವಿರುದ್ಧ ಯುದ್ಧ ಹೂಡಿ, ಪಲ್ಲವ ರಾಜ್ಯದ ಉತ್ತರ ಭಾಗದ ಮೇಲೆ ದಾಳಿ ನಡೆಸಿದ. ಮಹೇಂದ್ರವರ್ಮನು ಧೈರ್ಯಸಾಹಸಗಳಿಂದ ಹೋರಾಡಿದರೂ ಮೇಲಿಂದ ಮೇಲೆ ಚಾಳುಕ್ಯ ಸೇನೆಯಿಂದ ಅಪಜಯ ಅನುಭವಿಸಿದ. ಇಮ್ಮಡಿ ಪುಲಕೇಶಿ ಪಲ್ಲವರಿಂದ ವೆಂಗಿಮಂಡಲವನ್ನು ಗೆದ್ದುಕೊಂಡು, ಪ್ರದೇಶಕ್ಕೆ ತನ್ನ ಸೋದರ ವಿಷ್ಣುವರ್ಧನನನ್ನು ಆಧಿಪತಿಯಾಗಿ ನೇಮಿಸಿದ. ಚಾಳುಕ್ಯ ಪಲ್ಲವ ಸೇನೆಗಳ ನಡುವಣ ಹೋರಾಟದ ವಿವರಣೆಯನ್ನು ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನ ನೀಡುತ್ತದೆ. ಪುಲಕೇಶಿ ತನ್ನ ಸೈನ್ಯದ ದೂಳಿನಿಂದ ಪಲ್ಲವರ ವೈಭವವನ್ನು ನಾಶಗೊಳಿಸಿದನಲ್ಲದೆ, ಮಹೇಂದ್ರವರ್ಮನನ್ನು ಕಾಂಚೀಪುರದ ಗೋಡೆಗಳ ಹಿಂದೆ ಆಶ್ರಯಪಡೆಯುವಂತೆ ಮಾಡಿದ ಎಂದು ಶಾಸನ ಹೇಳಿದೆ. ಆದರೆ, ಪುಲಕೇಶಿಯ ಮುನ್ನಡೆಯನ್ನು 1ನೆಯ ಮಹೇಂದ್ರವರ್ಮ ಕಾಂಜೀವರಂ ಬಳಿಯ ಪುಲ್ಲಲೂರಿನಲ್ಲಿ ತಡೆಹಿಡಿದ.

     ಕಂಚಿಯ ಉತ್ತರದ ಭಾಗಗಳು ಚಾಲುಕ್ಯರ ವಶವಾದರೂ, ದಕ್ಷಿಣದ ಭಾಗಗಳು ಪಲ್ಲವರ ವಶದಲ್ಲಿಯೇ ಉಳಿದವು.

     1ನೆಯ ಮಹೇಂದ್ರವರ್ಮನ ಆಳ್ವಿಕೆ ಶಾಂತಿ ಮತ್ತು ಸಾಂಸ್ಕೃತಿಕ  ಬೆಳವಣಿಗೆಯ ದೃಷ್ಟಿಯಿಂದ ಪ್ರಾಮುಖ್ಯ ಪಡೆದಿದೆ. ಇವನು ಕಲೆ ಸಾಹಿತ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿದ. ಮೊದಲು ಜೈನಮತಾವಲಂಬಿಯಾಗಿದ್ದ ಇವನು ಹೆಸರಾಂತ ಶೈವಸಂತರಾಗಿದ್ದ ಅಪ್ಪಾರರ ಪ್ರಭಾವಕ್ಕೆ ಒಳಗಾಗಿ ಶೈವ ಧರ್ಮ ಸ್ವೀಕರಿಸಿದನೆಂದು ಸೆಕ್ಕಿಲಾರ್‌ ವಿರಚಿತ ಪೆರಿಯಪುರಾಣ ತಿಳಿಸುತ್ತದೆ. ಅಪ್ಪಾರ್, ತಿರುಜ್ಞಾನ ಸಂಬಂಧರ್ ಮುಂತಾದ ಶೈವ ಸಂತರೂ ಪ್ರಸಿದ್ಧ ಕವಿ ಭಾರವಿಯೂ ಮಹೇಂದ್ರವರ್ಮನ ಸಮಕಾಲೀನರಾಗಿದ್ದರು. ಸಂಗೀತದಲ್ಲಿ ಇವನು ಹೆಚ್ಚು ಆಸಕ್ತಿ ಅಭಿರುಚಿ ಹೊಂದಿದ್ದ. ರುದ್ರಾಚಾರ್ಯ ಎಂಬ ಪ್ರಖ್ಯಾತ ಸಂಗೀತ ವಿದ್ವಾಂಸರ ಶಿಷ್ಯನಾಗಿದ್ದ. ಒಂದನೆಯ ಮಹೇಂದ್ರವರ್ಮ ಪರಿವೀಣಾ ಎಂಬ ವಾದ್ಯವನ್ನು ನುಡಿಸುವುದರಲ್ಲಿ ಪರಿಣತಿ ಪಡೆದಿದ್ದ. ಮಹೇಂದ್ರವರ್ಮನ ಆಜ್ಞಾನುಸಾರ ಪುದಿಕೋಟೆ ಬಳಿ ಕುಡಿಮಿಯಾಮಲೈ ಎಂಬಲ್ಲಿ ಸಂಸ್ಕೃತದಲ್ಲಿ ಕೆತ್ತಲಾಗಿರುವ ಶಾಸನ, ಸಂಗೀತದ ಬಗ್ಗೆ ಅಧ್ಯಯನ ನಡೆಸಲು ಅಮೂಲ್ಯ ಆಧಾರವೆನಿಸಿದೆ. ಕವಿಗಳಿಗೆ ಆಶ್ರಯ ನೀಡಿದ್ದ ಇವನು ಬರಹಗಾರನೂ ಆಗಿದ್ದ. ಇವನು ಮತ್ತವಿಲಾಸಪ್ರಹಸನ ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿದ್ದಾನೆ. ಕಾಪಾಲಿಕ ಪಂಥದ ಮತ್ತು ಬೌದ್ಧ ಭಿಕ್ಷುಗಳ ಕಪಟ ಜೀವನವನ್ನು ಬಯಲಿಗೆಳೆಯುವ ಉದ್ದೇಶದಿಂದ ಬರೆದ ಗ್ರಂಥ ಆಗಿನ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಹೆಚ್ಚು ಸಹಕಾರಿಯಾಗಿದೆ.

     ಮಹೇಂದ್ರವರ್ಮನ ಕಾಲದಲ್ಲಿ ಕಲೆ ಔನ್ನತ್ಯ ಪಡೆದಿತ್ತು. ವಾಸ್ತು ಶಿಲ್ಪ, ಚಿತ್ರ ಮತ್ತು ನೃತ್ಯ ಕಲೆಗಳಿಗೆ ಇವನು ವಿಶೇಷ ಪ್ರೋತ್ಸಾಹ ನೀಡಿದ. ಮಹಾಬಲಿಪುರಂ, ತಿರುಚಿ, ಸಿತ್ತನ್ನವಾಸಲ್, ದಳವನೂರು, ಮಹೇಂದ್ರವಾಡಿ ಮುಂತಾದೆಡೆಗಳಲ್ಲಿ 1ನೆಯ ಮಹೇಂದ್ರವರ್ಮನ ಕಾಲದಲ್ಲಿ ಶೈವ ಮತ್ತು ವೈಷ್ಣವ ಗುಹಾಲಯಗಳು ನಿರ್ಮಿತವಾದುವು. ಬರಿಯ ಕಲ್ಲಿನಿಂದ ಗುಡಿಗಳನ್ನು ಕಟ್ಟುವ ಪದ್ಧತಿ ಇವನ ಕಾಲದಿಂದ ಜಾರಿಗೆ ಬಂತು. ಸಿತ್ತನ್ನವಾಸಲ್ನಲ್ಲಿ ಕಟ್ಟಿರುವ ಜೈನ ಗುಡಿಯಲ್ಲಿ ವಿವಿಧ ವಿನ್ಯಾಸಗಳಲ್ಲಿ ಬಿಡಿಸಿರುವ ವರ್ಣಚಿತ್ರ ಮತ್ತು ನೃತ್ಯಚಿತ್ರಗಳು ಅತ್ಯಂತ ಮನಮೋಹಕವಾಗಿವೆ. ಮಹಾಬಲಿಪುರದ ಗುಹೆಯೊಂದರಲ್ಲಿ ಮಹೇಂದ್ರವರ್ಮ ಮತ್ತು ಆತನ ರಾಣಿಯರ ಶಿಲಾಕೃತಿಗಳನ್ನು ಈಗಲೂ ಕಾಣಬಹುದು. ಮಹೇಂದ್ರ ವರ್ಮನಿಗೆ ಮತ್ತವಿಲಾಸ, ವಿಚಿತ್ರ ಚಿತ್ತ, ಚೈತ್ಯಕಾರಿ, ಚಿತ್ತಕಾರಪುಲಿ, ಗುಣಭಾರ, ಪರಮ ಮಹೇಶ್ವರ ಮುಂತಾದ ಬಿರುದುಗಳಿದ್ದುವು. ಮಹೇಂದ್ರವರ್ಮ ಸಾಹಿತ್ಯ ಸಂಗೀತಗಳಲ್ಲಿ ಪಡೆದಿದ್ದ ಅಭಿರುಚಿ ಮತ್ತು ಪ್ರೌಢಿಮೆಗಳಿಗೆ ಇವು ಸಂಕೇತವಾಗಿದ್ದಿರಬೇಕು.

 

ನರಸಿಂಹವರ್ಮ 1: ಸಾ.ಶ.ವ. 630-668. ಇವನು 1ನೆಯ ಮಹೇಂದ್ರವರ್ಮನ ಪುತ್ರ ಹಾಗೂ ಉತ್ತರಾಧಿಕಾರಿ. ವೀರನೂ ಕಲಾಭಿಮಾನಿಯೂ ಆಗಿದ್ದ ಇವನಿಗೆ ಮಹಾಮಲ್ಲ (ಮಾಮಲ್ಲ) ಎಂಬ ಹೆಸರೂ ಇತ್ತು. ಇವನು ವೈವಿಧ್ಯಮಯ ಸಾಧನೆಗಳಿಂದ ದಕ್ಷಿಣ ಭಾರತಾದ್ಯಂತ ಖ್ಯಾತಿ ಗಳಿಸಿದ. ಇವನು ಸಮರ್ಥ ರಾಜಕಾರಣಿ. ದಕ್ಷ ಆಡಳಿತಗಾರ ಮತ್ತು ಮಹಯೋಧನಾಗಿದ್ದ. ಇವನ ಕಾಲದಲ್ಲಿ ಪಲ್ಲವ ರಾಜ್ಯ ವಿಸ್ತಾರವಾಗಿ ಬೆಳೆದು ಬಲಿಷ್ಠವಾಯಿತು. ಇವನ ಆಳ್ವಿಕೆಯಲ್ಲಿ ಮಹತ್ತ್ವಪೂರ್ಣವಾದ ಘಟನೆಗಳು ಜರುಗಿದವು.

ಪುಲಕೇಶಿಯ ಮೇಲಿನ ವಿಜಯ:- ಇವನು ಚಾಳುಕ್ಯ ದೊರೆ ಇಮ್ಮಡಿ ಪುಲಕೇಶಿಯ ಮೇಲೆ ಸೇಡು ತೀರಿಸಿಕೊಳ್ಳಲು ಪುಲಕೇಶಿಯೇ ಇವನಿಗೆ ಅವಕಾಶ ಒದಗಿಸಿಕೊಟ್ಟ. ಪಲ್ಲವರ ಸಾಮಂತರಾಗಿದ್ದ ಬಾಣರನ್ನು ಪುಲಕೇಶಿ ಪರಾಭವಗೊಳಿಸಿ ಅವರ ಪ್ರದೇಶಗಳನ್ನು ವಶಪಡಿಸಿಕೊಂಡ. ಅಲ್ಲದೇಪಲ್ಲವರ ರಾಜಧಾನಿಯನ್ನು ಆಕ್ರಮಿಸಿಕೊಳ್ಳುವ ಉದ್ಧೇಶದಿಂದ ಅವನು ತನ್ನ ಸೇನೆಯನ್ನು ಕಂಚಿಯ ಗಡಿಯವರೆಗೆ ಮುನ್ನಡೆಸಿದ. ಆಗ ನರಸಿಂಹವರ್ಮ ಪುಲಕೇಶಿಯ ವಿರುದ್ಧ ದಂಡೆತ್ತಿ ಬಂದ. ಶ್ರೀ ಹರ್ಷನನ್ನು ಮತ್ತು ತನ್ನ ತಂದೆ ಮಹೇಂದ್ರವರ್ಮನನ್ನು ಸೋಲಿಸಿದ್ದ 2ನೆಯ ಪುಲಕೇಶಿಯನ್ನು ಪಲ್ಲವ ದೊರೆ ಪೆರಿಯಾಲ, ಮಣಿಮಂಗಲ ಮತ್ತು ಸುರಮಾರಗಳ ಬಳಿ ನಡೆದ ಗಡಿ  ಕದನಗಳಲ್ಲಿ ಸಂಪೂರ್ಣವಾಗಿ ಬಗ್ಗು ಬಡಿದ. ಆರಂಭದ ಈ ಸೋಲುಗಳಿಂದ ಪುಲಕೇಶಿ ರಣರಂಗದಿಂದ ಹಿಮ್ಮೆಟ್ಟಬೇಕಾಯಿತು. ಅನಂತರ ನರಸಿಂಹವರ್ಮನು ಭಾರಿ ಸೈನ್ಯದೊಂದಿಗೆ ತನ್ನ ಸೈನ್ಯಾಧಿಕಾರಿ ಸಿರುತ್ತೊಂಡ ನಾಯನಾರ್ ಎಂಬುವನನ್ನು ಚಾಳುಕ್ಯರ ರಾಜಧಾನಿ ಬಾದಾಮಿಯ ಮೇಲೆ ಮುತ್ತಿಗೆ ಹಾಕಲು ಕಳುಹಿಸಿದ. ಬಾದಾಮಿಯ ಬಳಿ ನಡೆದ ಭೀಕರ ಕಾಳಗದಲ್ಲಿ 2ನೆಯ ಪುಲಕೇಶಿ ಸೋತು ಪ್ರಾಣಬಿಟ್ಟ. ಸಾ.ಶ.ವ. 642ರಲ್ಲಿ ನರಸಿಂಹವರ್ಮ ಬಾದಾಮಿಯನ್ನು ವಶಪಡಿಸಿಕೊಂಡು ವಾತಾಪಿಕೊಂಡ ಎಂಬ ಬಿರುದು ಧರಿಸಿದ. ಇಮ್ಮಡಿ ಪುಲಕೇಶಿಯ ಸಾವಿನ ಅನಂತರ ಸುಮಾರು 13 ವರ್ಷಗಳವರೆಗೆ ಚಾಳುಕ್ಯ ರಾಜ್ಯದ ದಕ್ಷಿಣ ಭಾಗಗಳು ಪಲ್ಲವರ ವಶದಲ್ಲಿದ್ದುವು. ನರಸಿಂಹವರ್ಮನು ವಾತಾಪಿಯನ್ನು ವಶಪಡಿಸಿಕೊಂಡಿದ್ದನೆಂಬುದಕ್ಕೆ ಬಾದಾಮಿಯ ಮಲ್ಲಿಕಾರ್ಜುನ ದೇವಾಲಯದ ಹಿಂಭಾಗದಲ್ಲಿ ಬಂಡೆಯೊಂದರ ಮೇಲೆ ಕೆತ್ತಿರುವ ಶಾಸನ ಸಾಕ್ಷಿಯಾಗಿ ಉಳಿದಿದೆ. ಇಮ್ಮಡಿ ಪುಲಕೇಶಿ ಸತ್ತ ಅನಂತರವೂ ಚಾಳುಕ್ಯ-ಪಲ್ಲವರ ಹೋರಾಟ ಮುಂದುವರೆಯಿತು.

ಸಂಗಮ ರಾಜ್ಯಗಳು ಮತ್ತು ಸಿಂಹಳದ ಮೇಲಿನ ವಿಜಯ:- ಚೋಳ, ಚೇರ, ಕಲಭ್ರ ಮತ್ತು ಪಾಂಡ್ಯರ ಮೇಲೂ ನರಸಿಂಹವರ್ಮ ಹೋರಾಡಿ ಯಶಸ್ವಿಯಾದನೆಂದು ತಿಳಿದುಬರುತ್ತದೆ. ಸಿಂಹಳ ದ್ವೀಪದ ಮೇಲೂ ನರಸಿಂಹವರ್ಮ ದಂಡಯಾತ್ರೆ ನಡೆಸಿದ. ದಂಡಯಾತ್ರೆಯ ವಿವರಗಳು ಮಹಾ ವಂಶ ಗ್ರಂಥದಲ್ಲಿ ದೊರಕುತ್ತವೆ. ಸಿಂಹಳದ ರಾಜಕುಮಾರ ಮಾನವರ್ಮ ಶತ್ರುಗಳ ಉಪಟಳದಿಂದ ಸಿಂಹಾಸನವನ್ನು ಕಳೆದುಕೊಂಡು ಪಲ್ಲವ ರಾಜನ ಆಶ್ರಯ ಪಡೆದ. ಅವನು ನರಸಿಂಹ ವರ್ಮನ ಅನೇಕ ಯುದ್ಧಗಳಲ್ಲಿ ಹೋರಾಡಿ ಅವನ ಪ್ರೀತಿವಿಶ್ವಾಸಗಳಿಗೆ ಪಾತ್ರನಾಗಿದ್ದ. ಮಾನವರ್ಮನಿಗೆ ಸಿಂಹಾಸನವನ್ನು ಮತ್ತೆ ದೊರಕಿಸಿಕೊಡಲು ನರಸಿಂಹವರ್ಮ ಮಹಾಬಲಿಪುರದ ರೇವಿನಿಂದ ನೌಕಾದಳವೊಂದನ್ನು ಕಳುಹಿಸಿದ. ಸಿಂಹಳದಲ್ಲಿ ಮಾನವರ್ಮನೊಂದಿಗೆ ಪಲ್ಲವ ಸೈನಿಕರು ವೀರಾವೇಶದಿಂದ ಹೋರಾಡಿ, ಅವನಿಗೆ ಮರಳಿ ಸಿಂಹಾಸನವನ್ನು ದೊರಕಿಸಿಕೊಡುವಲ್ಲಿ ಜಯಶೀಲರಾದರು.

     ಸಾ.ಶ.ವ. 642ರಲ್ಲಿ ಚೀನದ ಯಾತ್ರಿಕ ಹುಯೆನ್ತ್ಸಾಂಗ್ ಪಲ್ಲವ ರಾಜಧಾನಿ ಕಂಚಿಗೆ ಭೇಟಿ ನೀಡಿದನಲ್ಲದೆ ತೊಂಡಮಂಡಲದಲ್ಲಿ ಸಂಚರಿಸಿದ. ತೊಂಡಮಂಡಲದ ಬಗ್ಗೆ ಹುಯೆನ್ತ್ಸಾಂಗ್ ನೀಡಿರುವ ವಿವರಣೆ ಅತ್ಯಂತ ಉಪಯುಕ್ತವಾದದ್ದು. ಪಲ್ಲವ ರಾಜ್ಯದ ಸುತ್ತಳತೆ ಒಂದು ಸಾವಿರ ಮೈಲಿಗಳೆಂದು ಅವನು ಬರೆದಿದ್ದಾನೆ. ತೊಂಡಮಂಡಲ ಪ್ರದೇಶವನ್ನು ಅವನು ದ್ರಾವಿಡನಾಡು ಎಂದು ಕರೆದಿದ್ದಾನೆ. ಕಂಚಿಯ ಸುತ್ತಳತೆ ಆರು ಮೈಲಿಯೆಂದೂ, ಅಲ್ಲಿ ಹತ್ತು ಸಾವಿರ ಬೌದ್ಧ ಸಂನ್ಯಾಸಿಗಳಿದ್ದರೆಂದೂ, ನೂರಕ್ಕೂ ಹೆಚ್ಚು ಬೌದ್ಧ ವಿಹಾರಗಳಿದ್ದುವೆಂದೂ, ರಾಜಧಾನಿಯಲ್ಲಿ ದಿಗಂಬರ ಜೈನರೂ ಇದ್ದರೆಂದೂ ಬರೆದಿದ್ದಾನೆ. ಕಂಚಿ ಬರೀ ಧಾರ್ಮಿಕ ಕ್ಷೇತ್ರವಾಗಿರದೆ ಜ್ಞಾನದೇಗುಲವಾಗಿತ್ತೆಂದು ಹೇಳಿದ್ದಾನೆ. ಕಂಚಿಯಲ್ಲಿ ಸುಂದರವಾದ ಜೈನಬಸದಿಗಳು, ಬೌದ್ಧವಿಹಾರಗಳು ಮತ್ತು ಹಿಂದೂ ದೇವಾಲಯಗಳನ್ನು ಅವನು ಕಂಡನು. ನಾಲಂದ ವಿಶ್ವವಿದ್ಯಾಲಯದ ಪ್ರಸಿದ್ಧ ಪ್ರಾಚರ್ಯನಾಗಿದ್ದ ಧರ್ಮಪಾಲ ಕಂಚಿಯವನೆಂದು ಹುಯೆನ್ತ್ಸಾಂಗನ ಬರಹಗಳಲ್ಲಿ ಹೇಳಲಾಗಿದೆ.

     ತನ್ನ ತಂದೆಯಂತೆ ನರಸಿಂಹವರ್ಮನೂ ಪ್ರಸಿದ್ಧ ಕಲಾಭಿಮಾನಿಯೂ ಕಲಾ ಪೋಷಕನೂ ಆಗಿದ್ದ. ಇವನು ಅನೇಕ ದೇವಾಲಯಗಳನ್ನೂ ನಿರ್ಮಿಸಿ ಪಲ್ಲವರ ವಾಸ್ತುಶಿಲ್ಪಕಲಾಹಿರಿಮೆಯನ್ನು ಪ್ರಕಾಶಕ್ಕೆ ತಂದ. ಇವನು ಮಹಾಬಲಿಪುರದಲ್ಲಿ ಅನೇಕ ಕಲಾಕೃತಿಗಳನ್ನು ನಿರ್ಮಿಸಿದ. ಇವನ ಕಾಲದಲ್ಲಿ ಅದು ಪಲ್ಲವರ ಎರಡನೆಯ ರಾಜಧಾನಿಯಾಯಿತಲ್ಲದೆ ಒಂದು ಸುಂದರ ಮತ್ತು ಮನಮೋಹಕ ಕಲಾಕ್ಷೇತ್ರವಾಗಿ ಮೆರೆಯಿತು. ವಾಣಿಜ್ಯ ಕೇಂದ್ರವಾಯಿತು. ಅಲ್ಲಿನ ಜಗತ್ಪ್ರಸಿದ್ದ ಸಮುದ್ರತೀರದ ದೇವಾಲಯ, ಅನೇಕ ಗುಹಾಲಯಗಳು, ಶಿಲಾರಥಗಳು ಪಲ್ಲವ ಕಲಾಶೈಲಿಯ ಉಚ್ಛ್ರಾಯ ಸ್ಥಿತಿಯನ್ನು ಮೆರೆದುವು. ಮಹಾಬಲಿಪುರವನ್ನು ಇವನು ತನ್ನ ಬಿರುದಿನ ಸಂಕೇತವಾಗಿ ಮಾಮಲ್ಲಪುರಂ ಎಂದು ಕರೆದ.

     ನರಸಿಂಹವರ್ಮನ ಅನಂತರ ಅವನ ಮಗ ಇಮ್ಮಡಿ ಮಹೇಂದ್ರವರ್ಮ ಅಧಿಕಾರಕ್ಕೆ ಬಂದ. ಅವನು ಎರಡು ವರ್ಷಗಳ ಕಾಲ ಮಾತ್ರ (ಸಾ.ಶ.ವ. 668-670) ಆಳಿದ. ಸಾ.ಶ.ವ. 670ರಲ್ಲಿ 2ನೆಯ ಮಹೇಂದ್ರವರ್ಮನ ಮಗ 1ನೆಯ ಪರಮೇಶ್ವರವರ್ಮ ಪಲ್ಲವ ಗದ್ದುಗೆ ಏರಿದ. ರಾಜರ ಕಾಲದಲ್ಲಿ ಮತ್ತೆ ಚಾಳುಕ್ಯ-ಪಲ್ಲವ ದ್ವೇಷ ಮುಂದುವರಿಯಿತು. ಚಾಳುಕ್ಯ ದೊರೆ 1ನೆಯ ವಿಕ್ರಮಾದಿತ್ಯ ಪಾಂಡ್ಯದೊರೆ ಅರಿಕೇಸರಿ ಪರಾಂಕುಶ ಮಾರವರ್ಮನ ಸಹಾಯ ಪಡೆದು 1ನೆಯ ಪರಮೇಶ್ವರವರ್ಮನ ಮೇಲೆ ಯುದ್ಧ ಘೋಷಿಸಿದ. ಪಲ್ಲವ ದೊರೆ ಸೋತು 1ನೆಯ ವಿಕ್ರಮಾದಿತ್ಯನಿಗೆ ಕಪ್ಪಕಾಣಿಕೆ ನೀಡಿದ. ಆದರೆ ಹೋರಾಟದಲ್ಲಿ ಪಲ್ಲವರು ಜಯಶೀಲರಾದರೆಂದು ಪಲ್ಲವ ಗ್ರಂಥಗಳಲ್ಲಿ ಹೇಳಲಾಗಿದೆ. ಪೆರುವಲ ನಲ್ಲೂರು (ತಿರುಚಿರಪಲ್ಲಿ ಜಿಲ್ಲೆಯ ಲಾಲ್ಗುಡಿ ಬಳಿ) ಕದನದಲ್ಲಿ ವಿಕ್ರಮಾದಿತ್ಯನ ಸೈನ್ಯವನ್ನು ಸೋಲಿಸಿದ್ದಾಗಿ ಪರಮೇಶ್ವರ ವರ್ಮ ಹೇಳಿಕೊಂಡಿದ್ದಾನೆ. ಪರಮೇಶ್ವರವರ್ಮ ಶೈವಮತಾವಲಂಬಿಯಾಗಿದ್ದ. ಇವನು ಕಂಚಿಯ ಬಳಿಯ ಕುರಂನಲ್ಲಿ ಶಿವಾಲಯವೊಂದನ್ನು ನಿರ್ಮಿಸಿದ. ಮಹಾಬಲಿಪುರದ ಗಣೇಶರಥವನ್ನು ಕೊರೆಯಿಸಿದವನು ಇವನೇ.

     ಒಂದನೆಯ ಪರಮೇಶ್ವರವರ್ಮನ ಅನಂತರ ಅವನ ಮಗ 2ನೆಯ ನರಸಿಂಹವರ್ಮ ರಾಜಸಿಂಹ ಸಿಂಹಾಸನವೇರಿದ. ಇವನ ಕಾಲದಲ್ಲಿ ಪಲ್ಲವ ರಾಜ್ಯ ಹೊರಗಿನ ಆಕ್ರಮಣದಿಂದ ಮುಕ್ತವಾಗಿತ್ತು. ರಾಜ್ಯದಲ್ಲಿ ಶಾಂತಿ ನೆಮ್ಮದಿಗಳು ನೆಲಸಿ, ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ದುಡಿಯಲು 2ನೆಯ ನರಸಿಂಹವರ್ಮನಿಗೆ ಹೆಚ್ಚು ಅವಕಾಶ ಸಿಕ್ಕಿತು. ಇವನು ಕಲೆ ಮತ್ತು ಸಾಹಿತ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದ. ಅನೇಕ ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದ. ಅವುಗಳಲ್ಲಿ ಪ್ರಮುಖವಾದವೆಂದರೆ ಕಂಚಿಯ ಕೈಲಾಸನಾಥನ ಐರಾವತೇಶ್ವರನ ಮತ್ತು ಪನಮಲೆಯ ಶಿವನ ದೇವಾಲಯಗಳು. ವಿವಿಧ ಅಭಿರುಚಿಗಳ ವ್ಯಕ್ತಿಯಾಗಿದ್ದ ನರಸಿಂಹವರ್ಮ ಶಂಕರ ಭಕ್ತ, ಆಗಮಪ್ರಿಯ, ಶ್ರೀವಾದ್ಯವಿದ್ಯಾಧರ ಮುಂತಾದ ಬಿರುದುಗಳನ್ನು ಹೊಂದಿದ್ದ. ನರಸಿಂಹವರ್ಮ ಚೀನಕ್ಕೆ ರಾಯಭಾರಿಯೊಬ್ಬನನ್ನು ಕಳುಹಿಸಿದ್ದನೆಂದು ನಂಬಲಾಗಿದೆ.

     ಇಮ್ಮಡಿ ನರಸಿಂಹವರ್ಮನ ಮರಣದ ಅನಂತರ ಅವನ ಮಗ ಇಮ್ಮಡಿ ಪರಮೇಶ್ವರವರ್ಮ ಸಿಂಹಾಸನಕ್ಕೆ ಬಂದ. ಇವನು ತನ್ನ ಆಳ್ವಿಕೆಯ ಕೊನೆಯಲ್ಲಿ ಚಾಳುಕ್ಯ ಯುವರಾಜ ಇಮ್ಮಡಿ ವಿಕ್ರಮಾದಿತ್ಯನೊಡನೆ ಸೆಣಸಬೇಕಾಯಿತು. ಗಂಗದೊರೆ ಶ್ರೀಪುರುಷನ ಪುತ್ರ ಎರೆಯಪ್ಪನ ನೆರವಿನಿಂದ ಇಮ್ಮಡಿ ವಿಕ್ರಮಾದಿತ್ಯ ಪಲ್ಲವ ರಾಜಧಾನಿಯ ಮೇಲೆ ದಾಳಿ ನಡೆಸಿದ. ಇಮ್ಮಡಿ ಪರಮೇಶ್ವರವರ್ಮ ಸೋತು ಅಪಾರ ಯುದ್ಧಪರಿಹಾರ ದಂಡವನ್ನು ನೀಡಿ ಚಾಳುಕ್ಯರೊಡನೆ ಒಪ್ಪಂದ ಮಾಡಿಕೊಂಡನು. ಶ್ರೀಪುರುಷನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ವಿಫಲವಾದ ಮೇಲೆ ವಿಳಂದೆ ಕದನದಲ್ಲಿ ಗಂಗರಾಜನಿಂದ ಇಮ್ಮಡಿ ಪರಮೇಶ್ವರವರ್ಮ ಸಾವಿಗೆ ಈಡಾದ.

ಇಮ್ಮಡಿ ನಂದಿವರ್ಮ ಪಲ್ಲವಮಲ್ಲ: ಸಾ.ಶ.ವ. 730-800. ಇಮ್ಮಡಿ ಪರಮೇಶ್ವರ ವರ್ಮನ ಮರಣಾನಂತರ 2ನೆಯ ನಂದಿವರ್ಮ ಪಲ್ಲವಮಲ್ಲ ರಾಜನಾದ. ಇವನು ಪ್ರಜೆಗಳಿಂದ ಚುನಾಯಿತನಾದವನೆಂದು ಕೆಲವರು, ಪಲ್ಲವಸಿಂಹಾಸನವನ್ನು ದುರಾಕ್ರಮಣದಿಂದ ಪಡೆದುಕೊಂಡನೆಂದು ಮತ್ತೆ ಕೆಲವರೂ ಅಭಿಪ್ರಾಯಪಟ್ಟಿದ್ದಾರೆ. ಇಮ್ಮಡಿ ಪರಮೇಶ್ವರವರ್ಮನ ಸಾವಿನ ಸಮಯದಲ್ಲಿ ಅವನ ಮಗ ಚಿತ್ರಮಾಯ ಇನ್ನೂ ಚಿಕ್ಕವನಾಗಿದ್ದ. ಆದ್ದರಿಂದ ಸಿಂಹವಿಷ್ಣುವಿನ ಸೋದರ ಭೀಮವರ್ಮನ ವಂಶಕ್ಕೆ ಸೇರಿದ ಇಮ್ಮಡಿ ನಂದಿವರ್ಮ ಪಲ್ಲವಮಲ್ಲನನ್ನು ಅರಮನೆಯ ಪಂಡಿತರು, ಅಧಿಕಾರಿಗಳು ಮತ್ತು ಪ್ರಜೆಗಳು ರಾಜನಾಗಿ ಚುನಾಯಿಸಿದರೆಂದು ಕಂಚಿಯ ವೈಕುಂಠ ಪೆರುಮಾಳ್ ದೇವಾಲಯದ ಶಾಸನವೊಂದು ತಿಳಿಸುತ್ತದೆ.

     ಇಮ್ಮಡಿ ನಂದಿವರ್ಮನ ಆಳ್ವಿಕೆಯು ಪ್ರಮುಖ ಘಟನೆಗಳಿಂದ ಕೂಡಿತ್ತು. ಪಲ್ಲವ, ಪಾಂಡ್ಯ ಮತ್ತು ಚಾಳುಕ್ಯ ಶಾಸನಗಳು ನಂದಿವರ್ಮನ ವಿವಿಧ ಬಗೆಯ ಸಾಧನೆಗಳ ಬಗ್ಗೆ ಹೆಚ್ಚು ಬೆಳಕನ್ನು ಚೆಲ್ಲುತ್ತವೆ. ಸಾ.ಶ.ವ. 740 ವೇಳೆಗೆ ಚಾಳುಕ್ಯ ದೊರೆ ಇಮ್ಮಡಿ ವಿಕ್ರಮಾದಿತ್ಯ ಕಂಚಿಯ ಮೇಲೆ ಆಕ್ರಮಣ ನಡೆಸಿ ಪಲ್ಲವ ದೊರೆಯನ್ನು ಸೋಲಿಸಿ ರಾಜಧಾನಿ ಕಂಚಿಯನ್ನು ವಶಪಡಿಸಿಕೊಂಡ. ಆದರೆ ಇಮ್ಮಡಿ ವಿಕ್ರಮಾದಿತ್ಯ ರಾಜಧಾನಿಯನ್ನು ಕೊಳ್ಳೆ ಹೊಡೆಯುವ ಬದಲು ಅಲ್ಲಿಯ ಕೈಲಾಸನಾಥ ದೇವಾಲಯಕ್ಕೆ ಅಮೂಲ್ಯ ರತ್ನಾಭರಣಗಳನ್ನು ನೀಡಿ, ಅನೇಕ ದತ್ತಿಗಳನ್ನು ಬಿಟ್ಟ. ಅಲ್ಲದೆ, ಕೈಲಾಸನಾಥ ದೇವಾಲಯದ ಕಂಬವೊಂದರ ಮೇಲೆ ಈ ಘಟನೆಯ ಕುರಿತು ಕನ್ನಡದಲ್ಲಿ ಶಾಸನ ಕೆತ್ತಿಸಿದ. ಅವನು ನಂದಿವರ್ಮನಿಂದ ಆನೆಗಳು ಮತ್ತು ಕಪ್ಪಕಾಣಿಕೆಗಳನ್ನು ಪಡೆದು ತನ್ನ ರಾಜಧಾನಿಗೆ ಹಿಂದಿರುಗಿದ. ಇಮ್ಮಡಿ ವಿಕ್ರಮಾದಿತ್ಯ ತನ್ನ ಆಳ್ವಿಕೆಯ ಕೊನೆಯಲ್ಲಿ ತನ್ನ ಮಗ ಕೀರ್ತಿವರ್ಮನ ನೇತೃತ್ವದಲ್ಲಿ ಕಂಚಿಯ ಆಕ್ರಮಣಕ್ಕೆ ಮತ್ತೆ ಸೈನ್ಯವನ್ನು ಕಳುಹಿಸಿದ. ಕೀರ್ತಿವರ್ಮ ಜಯಶೀಲನಾಗಿ ಅಪಾರ ಆಭರಣಗಳೊಡನೆ ಚಾಳುಕ್ಯ ರಾಜಧಾನಿಗೆ ಮರಳಿದ.

     ಇಮ್ಮಡಿ ನಂದಿವರ್ಮನ ಕಾಲದಲ್ಲಿ ಪಲ್ಲವರಿಗೂ ಪಾಂಡ್ಯರಿಗೂ ಯುದ್ಧಗಳಾದುವು. ಪಾಂಡ್ಯರು ಸ್ವತಂತ್ರರಾಗಲು ಬಯಸಿ ಚಿತ್ರಮಾಯನ ಹಕ್ಕುಗಳನ್ನು ಎತ್ತಿಹಿಡಿದು ಇಮ್ಮಡಿ ನಂದಿವರ್ಮನ ವಿರುದ್ಧ ಒಂದು ಸೈನಿಕ ಒಕ್ಕೂಟ ರಚಿಸಿ ದಾಳಿ ನಡೆಸಿದರು. ಪಾಂಡ್ಯ ದೊರೆ 1ನೆಯ ರಾಜಸಿಂಹ ತಂಜಾವೂರಿನ ಸುತ್ತಮುತ್ತಲಲ್ಲಿ ಇಮ್ಮಡಿ ನಂದಿವರ್ಮ ಪಲ್ಲವಮಲ್ಲನ ವಿರುದ್ಧ ಅನೇಕ ಕದನಗಳಲ್ಲಿ ವಿಜಯಿಯಾದನೆಂದು ಹೇಳಲಾಗಿದೆ. ಕುಂಭಕೋಣಂ ಬಳಿಯ ನಂದಿಪುರದ ಸಮೀಪದಲ್ಲಿ ನಂದಿವರ್ಮನನ್ನು ಪಾಂಡ್ಯಸೇನೆಗಳು ಸುತ್ತುಗಟ್ಟಿದವು. ಆದರೆ ನಂದಿವರ್ಮನ ಸೇನಾಧಿಪತಿ ಉದಯಚಂದ್ರ ವೀರಾವೇಶದಿಂದ ಹೋರಾಡಿ ಪಾಂಡ್ಯ ದೊರೆಯನ್ನು ಪರಾಭವಗೊಳಿಸಿದನಲ್ಲದೆ, ಚಿತ್ರಮಾಯನನ್ನು ಸಂಹರಿಸಿದ.

     ಚಾಲುಕ್ಯರ ನಂತರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ರಾಷ್ಟ್ರಕೂಟರೂ ಪಲ್ಲವರ ಪ್ರಭಾವವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದರು. ರಾಷ್ಟ್ರಕೂಟ ಪ್ರಭುತ್ವದ ಸಂಸ್ಥಾಪಕನಾದ ದಂತಿದುರ್ಗ ಕಂಚಿಯ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡ. ಆದರೆ ದಂತಿದುರ್ಗ ತನ್ನ ಪುತ್ರಿ ರೇವಳನ್ನು ಇಮ್ಮಡಿ ನಂದಿವರ್ಮನಿಗೆ ವಿವಾಹ ಮಾಡಿಕೊಟ್ಟು ಅವನೊಡನೆ ಶಾಂತಿ ಒಪ್ಪಂದಕ್ಕೆ ಸಮ್ಮತಿಸಿ, ರಾಷ್ಟ್ರಕೂಟ ರಾಜ್ಯಕ್ಕೆ ಹಿಂದಿರುಗಿದ. ರೇವಳು ದಂತಿವರ್ಮ ಪಲ್ಲವನಿಗೆ ಜನ್ಮವಿತ್ತಳು. ತಲಕಾಡಿನ ಗಂಗರಿಗೂ ಇಮ್ಮಡಿ ನಂದಿವರ್ಮನಿಗೂ ಯುದ್ಧಗಳು ನಡೆದುವು. ಪಲ್ಲವರ ಮೇಲೆ ಗಂಗದೊರೆ ಶ್ರೀಪುರುಷ ಜಯಗಳಿಸಿದನೆಂದು ಗಂಗರ ಶಾಸನಗಳು ತಿಳಿಸುತ್ತವೆ. ಆದರೆ ಗಂಗದೊರೆಯನ್ನು ನಂದಿವರ್ಮ ಸೋಲಿಸಿ ಅವನಿಂದ ಪ್ರಸಿದ್ಧ ಕಂಠಾಭರಣವೊಂದನ್ನು ಕಸಿದುಕೊಂಡನೆಂದು ಪಲ್ಲವ ದಾಖಲೆಗಳು ತಿಳಿಸುತ್ತವೆ. ಇಮ್ಮಡಿ ನಂದಿವರ್ಮನು ವಿಷ್ಣುವಿನ ಪರಮಭಕ್ತನಾಗಿದ್ದನಲ್ಲದೆ ವಿದ್ವಾಂಸನೂ ಆಗಿದ್ದ. ಇವನು ವಿದ್ವನ್ಮಣಿಗಳಿಗೆ ಆಶ್ರಯ ನೀಡಿದ್ದನು. ವಿಷ್ಣುಭಕ್ತರೂ, ವಿದ್ವಾಂಸರೂ ಆಗಿದ್ದ ತಿರುಮಂಗೈ ಆಳ್ವಾರರು ಇಮ್ಮಡಿ ನಂದಿವರ್ಮನ ಸಮಕಾಲೀನರು. ಇವನು ಕಲೆಗೆ ಪ್ರೊತ್ಸಾಹ ನೀಡಿದ. ಇಮ್ಮಡಿ ನಂದಿವರ್ಮ ಕಂಚಿಯ ಮುಕ್ತೇಶ್ವರ ಮತ್ತು ಕೂರಮ್ ಕೇಶವ ಪೆರುಮಾಳ್ ದೇವಾಯಲಗಳನ್ನು ನಿರ್ಮಿಸಿದ. ಕಂಚಿಯ ಮತ್ತೊಂದು ಪ್ರಸಿದ್ದ ದೇವಾಲಯವಾದ ವೈಕುಂಠ ಪೆರುಮಾಳ್ ದೇವಾಲಯವನ್ನೂ ಇವನೇ ನಿರ್ಮಿಸಿದನೆಂದು ಕೆಲವರ ಅಭಿಪ್ರಾಯ.

     ಇಮ್ಮಡಿ ನಂದಿವರ್ಮನ ತರುವಾಯ ಅವನ ಮಗ ದಂತಿವರ್ಮ ಸಿಂಹಾಸನ ವೇರಿದ. ರಾಷ್ಟ್ರಕೂಟ ವಂಶದೊಡನೆ ಇವನ ರಕ್ತಸಂಬಂಧವಿದ್ದಾಗ್ಯೂ ರಾಷ್ಟ್ರಕೂಟ ರಾಜರಾದ ಧ್ರುವ ಮತ್ತು ಮುಮ್ಮಡಿ ಗೋವಿಂದರು ಇವನನ್ನು ಸೋಲಿಸಿ ಅವನಿಂದ ಅಪಾರ ಕಪ್ಪಕಾಣಿಕೆ ಪಡೆದುಕೊಂಡರು. ಪಾಂಡ್ಯರೂ ದಂತಿವರ್ಮನಿಂದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡರು. ದಂತಿವರ್ಮ ಉತ್ತಮ ಕಲಾಪೋಷಕನಾಗಿದ್ದ. ಮದರಾಸಿನ ತಿರುವಲ್ಲಿಕ್ಕೇಣಿಯ ಪಾರ್ಥಸಾರಥಿ ದೇವಾಲಯವನ್ನು ದಂತಿವರ್ಮ ಕಟ್ಟಿಸಿದನೆಂದು ಅಲ್ಲಿರುವ ಒಂದು ತಮಿಳು ಶಾಸನದಿಂದ ತಿಳಿದುಬರುತ್ತದೆ.

     ದಂತಿವರ್ಮನ ಅನಂತರ ಅವನ ಮಗ 3ನೆಯ ನಂದಿವರ್ಮ ಪಟ್ಟಕ್ಕೆ ಬಂದ. ಇವನು ಸಮರ್ಥ ಯೋಧ. ಕ್ಷೀಣಿಸುತ್ತಿದ್ದ ಪಲ್ಲವ ಪ್ರಭುತ್ವವನ್ನು ಎತ್ತಿಹಿಡಿಯಲು ಶ್ರಮಿಸಿದ. ಈತ ಪಾಂಡ್ಯ ದೊರೆ ಶ್ರೀಮಾರನನ್ನು ತೆಲ್ಲಾರು ಕದನದಲ್ಲಿ ಸೋಲಿಸಿದ. ಕಂಚಿ, ಮಹಾಬಲಿಪುರ, ಮಯಿಲೈ (ಮೈಲಾಪುರ) ಇವು ಪ್ರಮುಖ ರಾಜಕೀಯ ಕೇಂದ್ರಗಳಾಗಿದ್ದುವೆಂದು ತಿಳಿದುಬರುತ್ತದೆ. ಶೈವಧರ್ಮ ಮತ್ತು ತಮಿಳು ಸಾಹಿತ್ಯಕ್ಕೆ ಇವನು ವಿಶೇಷ ಪ್ರೋತ್ಸಾಹ ನೀಡಿದ. ಪೆರುಂದೇವನಾರ್ ಎಂಬ ತಮಿಳು ಕವಿ ಇವನ ಸಮಕಾಲೀನನಾಗಿದ್ದ. ನಂದಿವರ್ಮನ ಬಳಿ ಒಂದು ನೌಕಾಸೈನ್ಯವಿತ್ತೆಂದು ಸಮುದ್ರದಾಚೆಯ ವ್ಯಾಪಾರದಲ್ಲಿ ಇವನು ಆಸಕ್ತಿ ತಾಳಿದ್ದನೆಂದೂ ಸಯಾಮ್ನಲ್ಲಿ ದೊರೆತಿರುವ ತಮಿಳು ಶಾಸನವೊಂದು ತಿಳಿಸುತ್ತದೆ.

     ಮೂರನೆಯ ನಂದಿವರ್ಮನ ಮರಣಾನಂತರ ಅವನ ಮಗ ನೃಪತುಂಗವರ್ಮ ಸಿಂಹಾಸನಕ್ಕೆ ಬಂದ. ನೃಪತುಂಗವರ್ಮ ಚೋಳ, ಪಾಂಡ್ಯ ಮತ್ತು ಗಂಗದೊರೆಗಳನ್ನು ಸೋಲಿಸಿದ್ದಾಗಿ ತನ್ನ ಶಾಸನಗಳಲ್ಲಿ ಹೇಳಿಕೊಂಡಿದ್ದಾನೆ. ಆದಾಗ್ಯೂ ಇವನ ಕಾಲದಲ್ಲಿ ಪಲ್ಲವರ ಅಧಿಕಾರ ಮತ್ತು ಪ್ರಾಬಲ್ಯಗಳು ಕುಂದಿ, ಚೋಳ ಮತ್ತು ಪಾಂಡ್ಯರು ತಲೆ ಎತ್ತಿದರು. ನೃಪತುಂಗ ವರ್ಮನ ಮಂತ್ರಿಯೊಬ್ಬ ವೇದ ಮತ್ತು ಧರ್ಮಶಾಸ್ತ್ರಗಳ ಅಧ್ಯಯನಕ್ಕೆಂದು ಸ್ಥಾಪಿತವಾಗಿದ್ದ ಸಂಸ್ಥೆಯೊಂದರ ಪೋಷಣೆಗಾಗಿ ಮೂರು ಹಳ್ಳಿಗಳನ್ನು ದತ್ತಿಬಿಟ್ಟ ವಿಷಯವನ್ನು ಆ ಕಾಲದ ಶಾಸನವೊಂದು ತಿಳಿಸುತ್ತದೆ.

   ನೃಪತುಂಗವರ್ಮನ ಮಗ ಹಾಗೂ ಅವನ ಉತ್ತರಾಧಿಕಾರಿ ಅಪರಾಜಿತ ವರ್ಮ. ಇವನು ಪಲ್ಲವ ವಂಶದ ಕೊನೆಯ ಅರಸು. ಅಪರಾಜಿತವರ್ಮ ಕುಂಭಕೋಣಂ ಬಳಿಯ ಶ್ರೀಪುರಂಬಿಯಂ ಎಂಬಲ್ಲಿ ಪಾಂಡ್ಯ ದೊರೆ ಇಮ್ಮಡಿ ವರಗುಣನನ್ನು ಸೋಲಿಸಿದ. ಇವನ ಕಾಲದಲ್ಲಿ ಚೋಳರಿಗೂ ಪಲ್ಲವರಿಗೂ ಅನೇಕ ಯುದ್ಧಗಳಾದವು. ವಿಜಯಾಲಯ ಚೋಳನ ನಾಯಕತ್ವದಲ್ಲಿ ಪ್ರಬಲರಾಗುತ್ತಿದ್ದ ಚೋಳರು ಪಲ್ಲವರನ್ನು ನಾಶಪಡಿಸಲು ಹವಣಿಸುತ್ತಿದ್ದರು. ತಿರುವೊಲಂಕಾಡು ಕದನದಲ್ಲಿ (ಸಾ.ಶ.ವ. 890) ಅಪರಾಜಿತ ವರ್ಮನನ್ನು ವಿಜಯಾಲಯ ಮತ್ತು ಅವನ ಮಗ 1 ನೆಯ ಆದಿತ್ಯ ಸಂಪೂರ್ಣವಾಗಿ ಸೋಲಿಸಿ ಪಲ್ಲವರ ಅಧಿಕಾರವನ್ನು ಕೊನೆಗೊಳಿಸಿದರು. ಇದರಿಂದಾಗಿ ಪಲ್ಲವರು ತೊಂಡೈಮಂಡಲ ನಾಡಿನ ತಮ್ಮ ಆಧಿಪತ್ಯವನ್ನು ಕಳೆದುಕೊಂಡರು. ಅಪರಾಜಿತ ವರ್ಮನ ಅವಸಾನದೊಡನೆ ಪಲ್ಲವರ ಸ್ವತಂತ್ರ ಆಳ್ವಿಕೆ ಕೊನೆಗೊಂಡಿತು. ಹನ್ನೆರಡನೆಯ ಶತಮಾನದ ವರೆಗೂ ಪಲ್ಲವರು ಚೋಳರ ಸಾಮಂತರಾಗಿ, ಚೋಳ ಸಾಮ್ರಾಜ್ಯದ ಅಧಿಕಾರಿಗಳಾಗಿದ್ದರು. ಪಲ್ಲವರ ಸಂತತಿ ಮತ್ತು ರಾಜಕೀಯ ಪ್ರಾಬಲ್ಯ ಅಳಿದ ಮೇಲೆ ಚೋಳರು ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಪ್ರಧಾನ ಪಾತ್ರ ವಹಿಸಿದರು. (ಜಿ.ಎಂ..ಸ್.)

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources