ತುರ್ತು ಪರಿಸ್ಥಿತಿಯನ್ನು ಸಾಮಾನ್ಯ ಜನತೆ ನಂತರದಲ್ಲಿ ವಿರೋಧಿಸಲು ಕಾರಣವಾದ ಅಂಶಗಳು
ತುರ್ತು ಪರಿಸ್ಥಿತಿಯು ಕೆಲವೇ ಕೆಲವು ತಿಂಗಳುಗಳಲ್ಲಿ ಜನರನ್ನು ಭ್ರಮನಿರಸನ ಗೊಳಿಸಿತು. ಅತೃಪ್ತಿಯ ಹೊಗೆ 1976ರ ಮಧ್ಯದಲ್ಲಿ ಕಾಣಿಸಿಕೊಂಡಿತು. ಆದರೂ 06 ತಿಂಗಳಲ್ಲಿ ಅದು ತುತ್ತತುದಿಯನ್ನು ಮುಟ್ಟಿತು. ಅದಕ್ಕೆ ಕೆಳಕಂಡ ಕಾರಣಗಳನ್ನು ನೀಡಬಹುದು.
A. ಜನತೆಗೆ ನೀಡಿದ ಪರಿಹಾರಗಳು ಶಾಶ್ವತವಾಗಿರಲಿಲ್ಲ. ತುರ್ತುಪರಿಸ್ಥಿತಿ ಜಾರಿಗೆ
ಬಂದ ಮೊದಲ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲಾಗಲಿಲ್ಲ. ಕೃಷಿ ಹುಟ್ಟುವಳಿ ಗಣನೀಯ ಪ್ರಮಾಣದಲ್ಲಿ
ಕುಸಿಯಿತು. 1976ರ ಅಂತ್ಯದ ವೇಳೆಗೆ ಬೆಲೆಗಳು ಶೇ.10ರಷ್ಟು ಅಧಿಕವಾದವು. ತುರ್ತುಪರಿಸ್ಥಿತಿಯ ಆಘಾತ
ಅಳಿಸಿಹೋಗುತ್ತಿದ್ದಂತೆ, ಭ್ರಷ್ಟರು, ಕಾಳಸಂತೆಕೋರರು ಮತ್ತು ಕಳ್ಳ ಸಾಗಾಣಿಕೆ ದಾರರು ತಮ್ಮ ಚಟುವಟಿಕೆಗಳಲ್ಲಿ
ನಿರತರಾದರು. ಬಡವರು ತಮ್ಮ ಕಲ್ಯಾಣ ಕೇವಲ ಭ್ರಮೆ ಎಂದು ಭಾವಿಸಿದರು. ಕಾರ್ಮಿಕರ ಕೂಲಿ (Wage), ಲಾಭಾಂಶ
(Bonus), ತುಟ್ಟಿಭತ್ಯೆ (Dearness allowance) ಮತ್ತು ಹರತಾಳ (Strike)ಗಳ ಮೇಲೆ ಮಿತಿಯನ್ನು
ಹಾಕಿದ್ದರಿಂದ ಅತೃಪ್ತರಾದರು. ಸರಕಾರಿ ಅಧಿ ಕಾರಿಗಳು ಮತ್ತು ಶಿಕ್ಷಕರೂ ಕೂಡ ಅತೃಪ್ತರಾದರು. ಕಾರಣ,
ಅವರು ತಮ್ಮ ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡುವಂತೆ ನೋಡಿಕೊಂಡಿದ್ದಲ್ಲದೆ, ನಿಗದಿತ ಗುರಿಯನ್ನು
ತಲುಪಲು ಕೆಲವರನ್ನು ಸಂತಾನಹರಣ ಕ್ರಿಯೆಗೆ ಒಳಪಡಿಸಲಾಯಿತು.
B. 20 ಅಂಶಗಳ ಕಾರ್ಯಕ್ರಮಗಳು ಹಾಗೂ ಇತರೇ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಕ್ಕೆ
ಭ್ರಷ್ಟ ಮತ್ತು ಅಸಮರ್ಥ ಅಧಿಕಾರಿಗಳು, ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ವಿಶ್ವಾಸಕ್ಕೆ
ಅರ್ಹರಲ್ಲದ ರಾಜಕಾರಣಿಗಳನ್ನು ನೇಮಿಸಲಾಯಿತು. ಈ ತರಹದ ಅಂಶಗಳನ್ನು ತಿಳಿಸುವುದಕ್ಕೆ ಅಥವಾ ಪ್ರತಿಭಟಿಸುವುದಕ್ಕೆ
ಅವಕಾಶವಿರಲಿಲ್ಲ. ಹಾಗಾಗಿ, ಜನಸಾಮಾನ್ಯರು, ಮೇಧಾವಿಗಳು ಹಾಗೂ ರಾಜಕಾರಣಿಗಳೂ ಕೂಡ ಭಯದ ವಾತಾವರಣದಲ್ಲಿ
ಕಾಲವನ್ನು ನೂಕಬೇಕಾಯಿತು.
C. ಅಧಿಕಾರಿಗಳು ಮತ್ತು ಪೋಲೀಸರು ಅಪರಿಮಿತ ಅಧಿಕಾರವನ್ನು ಪಡೆದರು. ಆಕಾಶವಾಣಿ
ಮತ್ತು ಪತ್ರಿಕೆಗಳನ್ನು ದೋಷವಿಮರ್ಶಾನ ಅಧಿಕಾರಕ್ಕೆ ಒಳಪಡಿಸಿದ್ದರಿಂದ ಹಾಗೂ ಪ್ರತಿಭಟನೆಗಳನ್ನು ನಿಷೇಧಿಸಿದ್ದರಿಂದ
ದೇಶದಲ್ಲಿ ಏನು ಘಟಿಸುತ್ತಿದೆ ಎನ್ನುವುದು ಸರಕಾರದ ಗಮನಕ್ಕೆ ಬರದಿರುವ ವಾತಾವರಣ ಸೃಷ್ಠಿಯಾಯಿತು.
D. ನಾಗರಿಕರ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡದ್ದು ಜನಸಾಮಾನ್ಯರ ದಿನನಿತ್ಯದ
ಚಟುವಟಿಕೆಗಳಿಗೆ ಒಂದು ರೀತಿಯ ಕಡಿವಾಣವನ್ನು ಹಾಕಿದಂತಾಯಿತು. ಅಧಿಕಾರಿಗಳ ದೌರ್ಜನ್ಯ ಮತ್ತು ಭ್ರಷ್ಟಾಚಾರದಿಂದ
ಜನಸಾಮಾನ್ಯರು ಬೇಸತ್ತರು ಪ್ರತಿಭಟನಾ ಸ್ವಾತಂತ್ರ್ಯ ಇಲ್ಲದಿದ್ದರಿಂದ ಅವರು ಪ್ರತಿನಿತ್ಯ ನರಕಯಾತನೆಯನ್ನು
ಅನುಭವಿಸಬೇಕಾಯಿತು.
E. ತುರ್ತುಪರಿಸ್ಥಿತಿಯನ್ನು ನಿಲುಗಡೆಗೊಳಿಸಲು ತಡಮಾಡಿದ ಅಂಶವೂ ಜನರಲ್ಲಿ
ಒಂದು ರೀತಿಯ ಭೀತಿಯ ವಾತಾವರಣವನ್ನು ಸೃಷ್ಠಿ ಮಾಡಿತು. ಇದಕ್ಕೆ ಪೂರಕವಾಗಿ, ನವೆಂಬರ್ 1976ರಲ್ಲಿ
ಸಂಸತ್ತಿನ ಚುನಾವಣೆಯನ್ನು ಒಂದು ವರ್ಷ ಮುಂದೂಡಿದ್ದು ಸಾಕಷ್ಟು ಆತಂಕ ಮತ್ತು ಭಯದ ವಾತಾವರಣವನ್ನು
ಮಾಡಿತು. ಈ ಸಂದರ್ಭದಲ್ಲಿ ಮೇಧಾವಿಗಳು, ಶಿಕ್ಷಕರು, ಪತ್ರಿಕೋದ್ಯಮಿಗಳು, ನ್ಯಾಯವಾದಿಗಳು ಹಾಗೂ ಇತರೇ
ಉದ್ಯೋಗಿಗಳು ಸಂವಿಧಾನದ 42ನೇ ತಿದ್ದುಪಡಿಯನ್ನು ಜನತಂತ್ರವನ್ನು ಬುಡಮೇಲು ಮಾಡಲು ನಡೆಸಿದ ಹುನ್ನಾರವೆಂದು
ಭಾವಿಸಿದರು.
F. ಅಧಿಕಾರದ ಕೇಂದ್ರ ಬಿಂದುವಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ಕಿರಿಯ ಪುತ್ರ
- ಸಂಜಯ್ ಗಾಂಧಿ ಜನರಲ್ಲಿ ಇನ್ನಷ್ಟು ಭೀತಿಯನ್ನು ಉಂಟುಮಾಡಿದರು. ಕ್ಯಾಬಿನಟ್ ಮಂತ್ರಿಗಳು, ಕಾಂಗ್ರೆಸ್
ಮುಖಂಡರು, ಮುಖ್ಯಮಂತ್ರಿಗಳು ಮತ್ತು ಸರಕಾರದ ಉನ್ನತ ಅಧಿಕಾರಿಗಳು ಸಂಜಯ್ ಗಾಂಧಿ ಯವರ ಮರ್ಜಿಯಲ್ಲಿ
ಕಾರ್ಯನಿರ್ವಹಿಸಬೇಕಾಯಿತು. ಅಲ್ಲದೆ, ಅವರ ಸಂಗಡ ಗೌರವದಿಂದ ನಡೆದುಕೊಳ್ಳಬೇಕಾಯಿತು. ಸರಕಾರದ 20 ಅಂಶಗಳ
ಕಾರ್ಯಕ್ರಮಗಳಿಗಿಂತಲೂ ಸಂಜಯ್ ಗಾಂಧಿ ಯವರ 04 ಅಂಶಗಳ ಕಾರ್ಯಕ್ರಮಗಳು ಮುಖ್ಯವಾದವು. ಅವುಗಳೆಂದರೆ,
* ವರದಕ್ಷಿಣೆಯನ್ನು ಪಡೆಯುವಂತಿರಲಿಲ್ಲ.
* ಪ್ರತೀ ಕುಟುಂಬ ಜನನ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆಯನ್ನು ಪಾಲಿಸಬೇಕಿತ್ತು.
ಜೊತೆಗೆ, ಒಂದು ಕುಟುಂಬ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿರಲಿಲ್ಲ.
* ದೇಶದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕು.
* ಸಾಕ್ಷರತೆ (Literacy) ಯನ್ನು ಪ್ರೋತ್ಸಾಹಿಸಬೇಕು.
- ಇವುಗಳ ಜೊತೆಗೆ, ನಗರಗಳಲ್ಲಿ ಅತಿಕ್ರಮಿಸಿ ಕಟ್ಟಲ್ಪಟ್ಟ ಕಟ್ಟಡಗಳನ್ನು ಕೆಡವಲಾಯಿತು.
ಅಲ್ಲದೆ, ನಗರಗಳನ್ನು ಅಲಂಕರಿಸಲಾಯಿತು.
ಸಂಜಯ್ ಗಾಂಧಿಯವರ ಕುಟುಂಬ
ಯೋಜನೆಯನ್ನು ಅತ್ಯಂತ ಜರೂರಾಗಿ ಜಾರಿಗೊಳಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಸರಕಾರಿ ಅಧಿಕಾರಿಗಳು,
ಶಾಲಾ ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯ ನೌಕರರು ಇಂತಿಷ್ಟು ಜನರನ್ನು ಸಂತಾನಹರಣ
(Sterilisation) ಕ್ಕೆ ಒಳಪಡಿಸಬೇಕೆಂದು ಹೇಳಲಾಯಿತು. ಇದನ್ನು ಜಾರಿಗೊಳಿಸಲು ಪೋಲೀಸು ಇಲಾಖೆ ಸಹಕರಿಸಬೇಕಿತ್ತು.
ಒತ್ತಾಯ ಪೂರ್ವಕವಾಗಿ ಈ ಕಾರ್ಯಕ್ರಮದಲ್ಲಿ ಜನತೆಯನ್ನು ಒಳಪಡಿಸಿದ್ದರಿಂದ ತೀವ್ರವಾದ ಪ್ರತಿಭಟನೆಯನ್ನು
ಜನಸಾಮಾನ್ಯರು ಸರಕಾರದ ವಿರುದ್ಧ ಮಾಡಿದರು.
*****
Comments
Post a Comment