ಮರಣದಂಡನೆಯ ಮೇಲಿನ ಚರ್ಚೆ - Debate on Abolition of Death Penalty
ಸಂವಿಧಾನ ರಚನಾ ಸಭೆಯು 1947-49ರ ನಡುವೆ ಮರಣ ದಂಡನೆಯ ಮೇಲಿನ ಚರ್ಚೆಯನ್ನು ಕೈಗೊಂಡಿತ್ತು. ಚರ್ಚೆಯು ಮರಣ ದಂಡನೆಯ ನ್ಯಾಯಾಧೀಶ ಕೇಂದ್ರಿತ ಸ್ವಭಾವ, ಅದನ್ನು ಬಳಸುವಲ್ಲಿ ಉಂಟಾಗಬಹುದಾದ ಸಂಭವನೀಯ ಅನಿಶ್ಚಿತತೆ, ಬಡವರು ಮತ್ತು ತುಳಿತಕ್ಕೊಳಗಾದ ವರ್ಗಗಳ ವಿರುದ್ಧ ಅದನ್ನು ಬಳಸುವಲ್ಲಿ ತಾರತಮ್ಯದ ಪ್ರಭಾವ ಮತ್ತು ಅಂತಿಮ ತೀರ್ಪಿನಲ್ಲಿ ದೋಷದ ಸಾಧ್ಯತೆಯ ಕುರಿತು ನಡೆಯಿತು.
Z.H. ಲಾರಿ ಅವರು
ಪ್ರಸ್ತಾಪಿತ ವಿಧಿಗೆ ಉಪವಿಧಿ 11(B) ಸೇರಿಸುವಂತೆಯು, ಅದರಲ್ಲಿ ಹಿಂಸಾತ್ಮಕ ರಾಷ್ಟ್ರದ್ರೋಹದ ಪ್ರಕರಣಗಳನ್ನು
ಹೊರತುಪಡಿಸಿ ಇನ್ನುಳಿದ ಪ್ರಕರಣಗಳಲ್ಲಿ ಮರಣದಂಡನೆಯ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸೂಚಿಸಿದರು.
ಏಕೆಂದರೆ ಜಗತ್ತಿನ ಸುಮಾರು 30 ದೇಶಗಳಲ್ಲಿ ಮರಣದಂಡನೆಯು ರದ್ದಾಗಿದ್ದು, ಅಲ್ಲಿನ ಸಮಾಜ ಮತ್ತು ವ್ಯಕ್ತಿಗಳು
ಈ ಶಿಕ್ಷೆ ಇಲ್ಲದೆಯೂ ರಕ್ಷಿಸಲ್ಪಡುತ್ತಿವೆ. ಅಲ್ಲದೇ ಸದರಿ ಶಿಕ್ಷೆಯು ಜಾರಿಗೊಂಡ ನಂತರ ನ್ಯಾಯಾಲಯಕ್ಕೆ
ಅಪರಾಧಿಯು ತಪ್ಪು ಮಾಡಿರಲಿಲ್ಲವೆಂಬ ಸತ್ಯ ಮನವರಿಕೆಯಾದರೂ ಸಹ ಶಿಕ್ಷಿತನು
ಜೀವಂತವಾಗಿರುವುದಿಲ್ಲವಾದ್ದರಿಂದ ನ್ಯಾಯಾಲಯವು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ.
ಅಲ್ಲದೇ ಮಾನವ ಜನ್ಮವು ಅಮೂಲ್ಯವಾಗಿದ್ದು, ಅವನು ಸಮಾಜ ಮತ್ತು ಇತರರ ಜೀವಗಳಿಗೆ ಅಪಾಯಕಾರಿಯಾಗಿದ್ದಲ್ಲಿ
ಮಾತ್ರವೇ ಒಬ್ಬ ವ್ಯಕ್ತಿಯ ಜೀವವನ್ನು ಕಾನೂನಾತ್ಮಕ ಶಿಕ್ಷೆಯ ಮೂಲಕ ತೆಗೆಯಬಹುದು. ಮುಂದುವರಿದು ಅವರು
ಮರಣದಂಡನೆಯು ಕ್ರೂರವಾದ ಶಿಕ್ಷೆಯಾಗಿದ್ದು, ಕ್ರೂರತೆಯು ಇಂದಿನ ಶತಮಾನದಲ್ಲಿ ಯಶಸ್ವಿಯಾದ ಅಂಶವಲ್ಲ
ಎಂದರು. ಜೊತೆಗೆ ಅವರು “ಮರಣದಂಡನೆಯು ಕೊಲ್ಲುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವವರಿಗೆ ಉತ್ತೇಜನವೀಯುತ್ತದೆ;
ಏಕೆಂದರೆ ಕೊಂದು ಮರಣದಂಡನೆಗೊಳಗಾಗುವುದು ಹುತಾತ್ಮರಾಗುವುದಕ್ಕೆ ಸಮವೆಂದು ಅವರು ಭಾವಿಸುತ್ತಾರೆ”
ಎಂಬ ಡಿಕನ್ಸ್ ಅವರ ಹೇಳಿಕೆಯನ್ನು ವಿವರಿಸಿದರು. ಆದ್ದರಿಂದ ವೃತ್ತಿಪರ ಕೊಲೆಗಾರರಿಗೆ ಮರಣದಂಡನೆಯು
ಸೂಕ್ತವಾದರೂ ಆಕಸ್ಮಿಕವಾಗಿ ಕೊಲೆಯಂತಹ ಅಪರಾಧ ಮಾಡುವವರಿಗೆ ಮರಣದಂಡನೆಗಿಂತ ಜೀವಾವಧಿ ಶಿಕ್ಷೆಯು ಸೂಕ್ತವೆನಿಸುತ್ತದೆ
ಎನ್ನುತ್ತಾ ಮರಣದಂಡನೆಯ ವಿಧಿಗೆ ಮುಂದಿನ ಮೂರು ತಿದ್ದುಪಡಿಗಳನ್ನು ಸೂಚಿಸಿದರು:- ಮನುಷ್ಯರಿಂದ ಆಗುವ
ತೀರ್ಪು, ಮಾನವ ಜೀವನದ ಅಮೂಲ್ಯತೆ ಮತ್ತು ಶಿಕ್ಷೆಯ ಉದ್ದೇಶ. ಅಲ್ಲದೇ ಅವರು ರಾಷ್ಟ್ರವು ಅಪಾಯಕ್ಕೊಳಗಾದಾಗ
ಮತ್ತು ಬಹುಜನರ ಜೀವಕ್ಕೆ ಆಪತ್ತು ಉಂಟಾದಾಗ ಈ ಶಿಕ್ಷೆಯನ್ನು ಉಪಯೋಗಿಸುವಂತೆ ಸೂಚಿಸಿದರು ಮತ್ತು ಸಂಸತ್ತು
ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಶಿಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಲು ಅವಕಾಶವಿರಬೇಕೆಂದರು.
ತದನಂತರ ಶ್ರೀ ಅಮಿಯೊಕುಮಾರ್
ಘೋಷ್ ಅವರು ಸದರಿ ಶಿಕ್ಷೆಯು ಅಮಾನವೀಯವಾಗಿದ್ದು, ತೀರ್ಪು ನೀಡುವವರು ಈ ಶಿಕ್ಷೆಯನ್ನು ವಿಧಿಸುವಾಗ
ತಪ್ಪೆಸಗುವ ಸಾಧ್ಯತೆಗಳಿರುತ್ತವೆ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. ಸಮಾಜದಲ್ಲಿ ಶಿಷ್ಟ ಮತ್ತು
ದುಷ್ಟರಿಬ್ಬರೂ ಇದ್ದು, ಸಮಾಜದಲ್ಲಿ ಭಯವನ್ನುಂಟು ಮಾಡುವವರನ್ನು ತಡೆಗಟ್ಟಲು ಸರ್ಕಾರಗಳಿಗೆ ಅಥವಾ ರಾಜ್ಯಕ್ಕೆ ಮರಣದಂಡನೆಯಂತಹ
ಶಿಕ್ಷೆಗಳ ಅವಶ್ಯಕತೆ ಇರುತ್ತದೆ. ಪ್ರಸ್ತುತ ಭಾರತವು ಸಂಕ್ರಮಣ ಕಾಲದಲ್ಲಿದ್ದು, ಗಂಭೀರ ಸ್ವರೂಪದ
ಸಮಸ್ಯೆಗಳು ರಾಜ್ಯ ಮತ್ತು ಸಮಾಜ ಎರಡಕ್ಕೂ ಸವಾಲಾಗಿ ಪರಿಣಮಿಸಿದಾಗ ಅವುಗಳಿಗೆ ತಕ್ಕುದಾದ ಶಿಕ್ಷೆಯನ್ನು
ವಿಧಿಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಮರಣದಂಡನೆಯ ಶಿಕ್ಷೆಯನ್ನು ಸಂವಿಧಾನದಲ್ಲಿ ಅಳವಡಿಸುವ
ಬದಲು ಅದಕ್ಕಾಗಿ ಇರುವ ಕಾನೂನುಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದು ಎಂದರು.
ಶ್ರೀ ಕೆ. ಹನುಮಂತಯ್ಯನವರು ಮರಣದಂಡನೆಗೆ ಬದಲಾಗಿ
ಜೀವಾವಧಿ ಶಿಕ್ಷೆಯನ್ನು ಅಪರಾಧಿಗೆ ವಿಧಿಸಬಹುದು. ಆದರೂ ರಾಷ್ಟ್ರದ ಹಿತದೃಷ್ಟಿಯಿಂದ ಅಪರಾಧವೆಸಗುವವರಿಗೆ
ಭಯದ ವಾತಾವರಣವಿರುವುದುಉ ಅವಶ್ಯಕವೆಂದರು. ಮುಂದುವರಿದು ಶಿಕ್ಷೆಯಲ್ಲಿನ ಮಾರ್ಪಾಡು ಅದರ ಮೌಲ್ಯವನ್ನು
ಕಡಿಮೆಗೊಳಿಸುತ್ತದೆ ಮತ್ತು ಆ ತೆರನಾದ ಶಿಕ್ಷೆಯ ಬದಲಾವಣೆಯಲ್ಲಿ ಅಪರಾಧಿಗೆ ರಿಯಾಯಿತಿಗಳನ್ನು ನೀಡುವ
ಮೂಲಕ ಬೇಗನೇ ಬಿಡುಗಡೆ ಮಾಡಲಾಗುತ್ತದೆ. ಕಾರಣ ಯಾರನ್ನಾದರೂ ಕೊಲೆಗೈದರೆ, ತಾನು ಜೀವನವಿಡೀ ಶಿಕ್ಷೆಗೆ
ಒಳಗಾಗುವೆನೆಂಬ ಭಯದಿಂದ ಅವರು ಕೊಲೆಯಂತಹ ದುಷ್ಕೃತ್ಯಗಳಿಂದ ದೂರ ಉಳಿಯುತ್ತಾರೆ. ಆದ್ದರಿಂದ ರಾಷ್ಟ್ರದ
ಹಿತದೃಷ್ಟಿಯಿಂದ ಮರಣದಂಡನೆಯನ್ನು ರದ್ದುಗೊಳಿಸುವುದು ಸೂಕ್ತವಲ್ಲ ಎಂದರು.
ಆದ್ದರಿಂದ ಮರಣದಂಡನೆಯನ್ನು
ರದ್ದುಗೊಳಿಸಲು ಸೂಚಿಸಿದ 11(B) ತಿದ್ದುಪಡಿಯನ್ನು ತಿರಸ್ಕರಿಸಲಾಯಿತು.
ಉಪಸಂಹಾರ:- ವಿಧಿ 11(ಬಿ)ಯ ಹಿಂದಿನ ಉದ್ದೇಶವು ಮರಣದಂಡನೆಯನ್ನು
ಭಾಗಶಃ ರದ್ದುಗೊಳಿಸುವುದಾಗಿತ್ತು. ಆದರೆ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಮೂಲಕ ರಾಜ್ಯ/ಸರ್ಕಾರವನ್ನು ಅಸಹಾಯಕ
ಸ್ಥಿತಿಗೆ ತರಬಾರದು ಎಂದು ಸಂವಿಧಾನ
ರಚನಾಕಾರರು ಬಯಸಿದ್ದರು. ಮತ್ತೊಂದೆಡೆ
ಶಿಕ್ಷೆಯಲ್ಲಿನ ಸುಧಾರಣೆಯು ಅಪರಾಧ
ತಡೆಯುವ ಉದ್ದೇಶವನ್ನು ಪೂರೈಸಲು
ಸಾಧ್ಯವಿಲ್ಲ ಎಂದು ಅವರು ನಂಬಿದ್ದರು.
ಅವರ ಪ್ರಕಾರ, ಅಪರಾಧವನ್ನೇ
ತಡೆಗಟ್ಟುವುದು ಅಗತ್ಯವಾಗಿತ್ತು.
ಅಲ್ಲದೇ ಒಂದು ಹಂತದವರೆಗೆ ಸಮಾಜದ ಅಭಿವೃದ್ಧಿಯಾದ
ನಂತರ ಮರಣದಂಡನೆಯನ್ನು ತೆಗೆದುಹಾಕಬಹುದು ಎಂದು ಅವರು ತಮ್ಮ
ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದ್ದರಿಂದ ಬಹುತೇಕ ಸಂವಿಧಾನ ರಚನಾಕಾರರು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಕ್ಕೆ ವಿರುದ್ಧವಾಗಿದ್ದರು. ಕಾರಣ ಅನುಚ್ಛೇದ 11(ಬಿ) ತಿದ್ದುಪಡಿಯು ಅನುಷ್ಠಾನಗೊಳ್ಳಲಿಲ್ಲ..
*****
Comments
Post a Comment