ಒಂದನೆ ರಾಜ-ರಾಜ ಚೋಳ ಮತ್ತು ಒಂದನೆ ರಾಜೇಂದ್ರ ಚೋಳರ ಆಳ್ವಿಕೆ

ಒಂದನೆ ರಾಜ-ರಾಜ ಚೋಳ

   ಇಮ್ಮಡಿ ಪರಾಂತಕಸುಂದರಚೋಳ ಮತ್ತು ವಾನವನ್ ಮಹಾದೇವಿಯವರ ಮಗ ರಾಜಕೇಸರಿ ಅರುಮೋಳಿವರ್ಮ 935ರಲ್ಲಿ ರಾಜರಾಜನೆಂಬ ಹೆಸರಿನಿಂದ ಪಟ್ಟಕ್ಕೆ ಬಂದ. ಇವನು 30 ವರ್ಷಗಳ ಕಾಲ ಆಳಿದ. ಪಟ್ಟಕ್ಕೆ ಬಂದಾಗ ಅಷ್ಟೇನೂ ದೊಡ್ಡದಾಗಿರದಿದ್ದ ಚೋಳ ನಾಡನ್ನು ವಿಸ್ತಾರವಾದ ಚಕ್ರಾಧಿಪತ್ಯವಾಗಿ ಸಮುದ್ರದಾಚೆಗೂ ಪಸರಿಸುವಂತೆ ಮಾಡಿದ ರಾಜರಾಜ ದಕ್ಷತೆಯಿಂದ ಆಡಳಿತ ನಿರ್ವಹಿಸಿದ. ಅತ್ಯಂತ ಸತ್ತ್ವಶಾಲಿಯಾದ ರಾಜನೆಂಬ ಕೀರ್ತಿ ಪಡೆದ. ಮುಮ್ಮಡಿ ಚೋಳದೇವ ಎಂಬುದು ಇವನ ಮೊದಲಿನ ಬಿರುದುಗಳಲ್ಲೊಂದು. ಪಟ್ಟಕ್ಕೆ ಬರುತ್ತಿದ್ದಂತೆಯೇ ಕೇರಳದ ಮೇಲೆ ದಂಡೆತ್ತಿಹೋಗಿ ಕಾನ್ದಳೂರ್ಶಾಲೈಕ್ಕಳ ಮರುತ್ತ ಎಂಬ ಬಿರುದು ಗಳಿಸಿದ. ಇವನ ದಕ್ಷಿಣದ ದಂಡಯಾತ್ರೆಯು ಪಾಂಡ್ಯಚೇರರ ಮೇಲೆ ಒಟ್ಟಾಗಿ ನಡೆಯಿತು. ಅಷ್ಟೇ ಅಲ್ಲ, ಹಲವು ಸಲ ಇವನು ದಂಡ ಯಾತ್ರೆಗಳನ್ನು ನಡೆಸಿರಬೇಕು. ಕೊಲ್ಲಂ ಎಂಬಲ್ಲಿ ನಡೆಸಿದ ಯುದ್ಧ ಇವುಗಳಲ್ಲೊಂದು. ಇದರಂತೆ ಮಲೆನಾಡಿನಲ್ಲಿ ಚೇರ ಪಾಂಡ್ಯರನ್ನು ಅವನು ಎದುರಿಸಿದನೆಂದು ತಂಜಾವೂರಿನ ಶಾಸನದಲ್ಲಿ ತಿಳಿಸಿರುವ ಯುದ್ಧ ಕಾನ್ದಲೂರು ಮತ್ತು ವಿಳಿನಂ ಯುದ್ಧಗಳಿಗಿಂತ ಬೇರೆಯಾಗಿರಬೇಕು. ಇವನು ಈಳ ಮಂಡಳವನ್ನು (ಸಿಂಹಳ) ಗೆದ್ದ ವಿಷಯವನ್ನು 993 ಕಾಲದ ಶಾಸನಗಳು ತಿಳಿಸುತ್ತವೆ. ಸಿಂಹಳದಲ್ಲಿ ಚೋಳರ ಆಧಿಪತ್ಯ ಸ್ಥಾಪಿತವಾದ ಮೇಲೆ, ಅಲ್ಲಿ ಬಹುಕಾಲದಿಂದ ರಾಜಧಾನಿಯಾಗಿದ್ದ ಅನುರಾಧಪುರದ ಬದಲು ಪೊಲೊನ್ನರುವವನ್ನು ಅವರು ರಾಜಧಾನಿಯಾಗಿ ಮಾಡಿಕೊಂಡರು. ಅದಕ್ಕೆ ಜನನಾಥ ಮಂಗಲ ಎಂಬ ನಾಮಕರಣವಾಯಿತು; ಅಲ್ಲಿ ಒಂದು ಶಿವದೇವಾಲಯವೂ ನಿರ್ಮಿತವಾಯಿತು. ದಕ್ಷಿಣದ ದಿಗ್ವಿಜಯ ಮುಗಿಯುತ್ತಿದ್ದಂತೆಯೇ ರಾಜರಾಜನ ಕಣ್ಣು ತಲಕಾಡಿನ ಗಂಗರ ಮೇಲೆ ಬಿತ್ತು. ಅಷ್ಟು ಹೊತ್ತಿಗೆ ರಾಷ್ಟ್ರಕೂಟ ಸಾಮ್ರಾಜ್ಯ ಅಳಿದಿತ್ತು; ಚಾಳುಕ್ಯರು ಕುಂತಳವನ್ನಾಕ್ರಮಿಸಿದ್ದರು. ಇದರಿಂದ ಗಂಗರ ಶಕ್ತಿ ಉಡುಗಿತ್ತು. ರಾಜಾದಿತ್ಯನನ್ನು ಬೂತುಗ ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಚೋಳ ಸೈನ್ಯ ಕೊಂಗುನಾಡಿನ ಮೂಲಕ ಸಾಗಿ ಕಾವೇರಿಯನ್ನು ದಾಟಿ ನುಗ್ಗಿ ಸುಲಭವಾಗಿ ತಲಕಾಡನ್ನು ವಶಪಡಿಸಿಕೊಂಡಿತು. ಇದರಿಂದ ಗಂಗವಾಡಿಯ ಬಹುಭಾಗ ಚೋಳ ರಾಜ್ಯಕ್ಕೆ ಸೇರಿದಂತಾಯಿತು. ಆಗ ಕರ್ನಾಟಕದ ದಕ್ಷಿಣಭಾಗದಲ್ಲಿ ಬಲವಾದ ರಾಜ್ಯವೊಂದಿರಲಿಲ್ಲ. ಆದರೂ ಅಳಿದುಳಿದ ಚಿಕ್ಕಪುಟ್ಟ ರಾಜರು ಸೇರಿ ಚೋಳರನ್ನೆದುರಿಸುವ ಸಾಹಸ ನಡೆಸಿ ರಾಜರಾಜನ ದಂಡನಾಯಕ ಅಪ್ರಮೇಯನನ್ನು ಕಲಿಯೂರಿನ ಬಳಿ ಎದುರಿಸಿ ಸಂಪೂರ್ಣವಾಗಿ ಸೋತುಹೋದರು. ಅವರಲ್ಲಿ ಹೊಯ್ಸಳ, ನೊಳಂಬ, ಗಂಗ ಮೊದಲಾದ ಮನೆತನಗಳಿಗೆ ಸೇರಿದವರಿದ್ದರು. ರಾಜರಾಜ ರಟ್ಟವಾಡಿಯನ್ನು ಗೆದ್ದನೆಂದು ಅವನ ಶಾಸನಗಳು ತಿಳಿಸುತ್ತವೆ. ಆದರೆ ಚೋಳ ಸೈನ್ಯ ರಟ್ಟವಾಡಿಗೆ ನುಗ್ಗಿ ಕೊಲೆ ಸುಲಿಗೆ ನಡೆಸಿ ತುಂಬ ಹಾವಳಿ ಮಾಡಿತೇ ಹೊರತು ರಾಜ್ಯವನ್ನಾಗಲಿ ಅದರ ಯಾವ ಭಾಗವನ್ನಾಗಲಿ ಚೋಳ ರಾಜ್ಯಕ್ಕೆ ಸೇರಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲವೆಂದು ಹೂಟ್ಟೂರು ಶಾಸನದಿಂದ ಗೊತ್ತಾಗುತ್ತದೆ. ಚಾಳುಕ್ಯ ಸತ್ಯಾಶ್ರಯ ಅವರನ್ನು ಹಿಮ್ಮೆಟ್ಟಿಸಿದ. ಯುದ್ಧಗಳಲ್ಲೆಲ್ಲ ಮಹಾದಂಡನಾಯಕನಾಗಿ ಬಂದಿದ್ದವನು ಪಂಚವನ್ಮಹಾರಯಾನೆಂಬ ಬಿರುದು ಪಡೆದಿದ್ದ ರಾಜೇಂದ್ರ ಚೋಳ, ರಾಜರಾಜನ ಮಗ.

   ರಾಜರಾಜ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಹಿಂದೆ ಪರಾಂತಕನ ಕಾಲದಲ್ಲಿ ಚೋಳರಾಜ್ಯಕ್ಕೆ ಸೇರಿದ್ದ ಭಾಗಗಳನ್ನು ಪುನಃ ವಶಪಡಿಸಿಕೊಳ್ಳಲು ಅತ್ತಕಡೆ ಸೈನ್ಯವನ್ನು ಕಳಿಸಿದ. ವೆಂಗಿನಾಡಿನಲ್ಲಿ ಅಂತರ್ಯುದ್ಧವಾಗಿ, ವಾನಾರ್ಣವನ ಮಕ್ಕಳು ಶಕ್ತಿವರ್ಮ ಮತ್ತು ವಿಮಲಾದಿತ್ಯರು ಚೋಳನಾಡಿನಲ್ಲಿ ನೆಲೆಸಿದ್ದರು. ರಾಜರಾಜ ಪಟ್ಟಕ್ಕೆ ಬಂದಮೇಲೆ ಇವರ ಪಕ್ಷ ವಹಿಸಿ ವೆಂಗಿಯ ರಾಜಕೀಯದಲ್ಲಿ ತಲೆಹಾಕಿದ. ಚೋಳರ ಸಹಾಯದಿಂದ ಶಕ್ತಿವರ್ಮ ವೆಂಗಿಯ ಅಧಿಪತಿಯಾಗಿ ಅವರ ಸಾಮಂತನಾದ. ಹೀಗೆ ರಾಜರಾಜ ವೆಂಗಿನಾಡಿನಲ್ಲಿ ಅಂತರ್ಯುದ್ಧವನ್ನು ಕೊನೆಗಾಣಿಸಿ ಅಲ್ಲಿ ಸುಸ್ಥಿತಿ ನೆಲೆಸುವಂತೆ ಮಾಡಿದನಾದರೂ ಗಂಗವಾಡಿಯಂತೆ ವೆಂಗಿನಾಡನ್ನು ಪೂರ್ಣವಾಗಿ ತನ್ನ ರಾಜ್ಯಕ್ಕೆ ಸೇರಿಸುವ ಯೋಚನೆ ಮಾಡಲಿಲ್ಲ. ವೆಂಗಿನಾಡಿನಲ್ಲಿ ಶಕ್ತಿವರ್ಮನ ಅನಂತರ ವಿಮಲಾದಿತ್ಯ ಪಟ್ಟಕ್ಕೆ ಬಂದ. ರಾಜರಾಜ ತನ್ನ ಮಗಳು ಕುಂದವೆಯನ್ನು ಅವನಿಗೆ ಕೊಟ್ಟು ಮದುವೆ ಮಾಡಿದ. ಕಡೆಯದಾಗಿ ರಾಜರಾಜ ತನ್ನ ನೌಕಾಬಲವನ್ನು ಕಳುಹಿಸಿ ಮಾಲ್ಡೀವ್ ದ್ವೀಪಗಳನ್ನು ಗೆದ್ದನೆಂದು ಅವನ ಆಳ್ವಿಕೆಯ ಕೊನೆಯ ವರ್ಷಗಳ ಶಾಸನಗಳು ತಿಳಿಸುತ್ತವೆ. ಮುಂದೆ ಅವನ ಮಗ ರಾಜೇಂದ್ರ ನೌಕಾದಳವನ್ನು ವಿಸ್ತರಿಸಿ ದೂರದೇಶಗಳನ್ನು ಗೆದ್ದ. ಇದಕ್ಕೆ ದೊಡ್ಡದಾದ ನೌಕಾಸೈನ್ಯವಿದ್ದುದೇ ಕಾರಣ. ಬಾಣ ರಾಜನೊಬ್ಬನನ್ನು ರಾಜರಾಜ ಓಡಿಸಿದನೆಂದೂ ಭೋಗದೇವ ಎನ್ನುವವನ ತಲೆಯನ್ನು ಕತ್ತರಿಸಿದನೆಂದೂ ಕರಂದೈ ಶಾಸನ ತಿಳಿಸುತ್ತದೆ. ಆದರೆ ಇವರು ಯಾರೆಂಬುದಕ್ಕೆ ವಿವರಗಳಿಲ್ಲ.

   ರಾಜರಾಜನ ಆಳ್ವಿಕೆಯ ಕಡೆಯ ವರ್ಷಗಳಲ್ಲಿ ಅವನ ಮಗ ರಾಜೇಂದ್ರ ಆಡಳಿತದಲ್ಲಿ ಪಾಲ್ಗೊಂಡಿದ್ದ. 1012ರಲ್ಲಿ ರಾಜರಾಜ ಅವನನ್ನು ಯುವರಾಜನನ್ನಾಗಿ ನೇಮಿಸಿದ. ರಾಜರಾಜನ ಮಹತ್ತ್ವ ಪೂರ್ಣ ಆಡಳಿತ 1014ರಲ್ಲಿ ಕೊನೆಗೊಂಡಿತು. ಅವನು ತಂಜಾವೂರಿನಲ್ಲಿ ಕಟ್ಟಿಸಿದ ರಾಜರಾಜೇಶ್ವರ ದೇವಾಲಯ ಚೋಳ ಸಾಮ್ರಾಜ್ಯದ ವೈಭವದ ಪ್ರತೀಕವಾಗಿ ನಿಂತಿದೆ. ರಾಜರಾಜ ದಕ್ಷ ಆಡಳಿತಗಾರನಾಗಿ ಆಡಳಿತದಲ್ಲಿ ಹೆಚ್ಚಿನ ಸುಧಾರಣೆ ತಂದ. ಗೆದ್ದ ರಾಜ್ಯವನ್ನು ತನ್ನ ಆಡಳಿತಕ್ಕೆ ನೇರವಾಗಿ ಸೇರಿಸಿಕೊಂಡು ಅವುಗಳ ಆಡಳಿತಕ್ಕೆ ಅಧಿಕಾರಿಗಳನ್ನು ನೇಮಿಸಿದ. ಬಲವಾದ ಸೈನ್ಯ ವ್ಯವಸ್ಥೆಯನ್ನು ಏರ್ಪಡಿಸಿದ. ಅವನಿಗೆ ಚೋಳೇಂದ್ರ ಸಿಂಹ, ಶಿವಪಾದಶೇಖರ, ಕ್ಷತ್ರಿಯ ಶಿಖಾಮಣಿ, ಜನನಾಥ, ಸಿಗರಿಲಿಶೋಲ, ರಾಜೇಂದ್ರ ಸಿಂಹ, ಚೋಳ ಮಾರ್ತಾಂಡ, ರಾಜಾಶ್ರಯ, ರಾಜಮಾರ್ತಾಂಡ, ನಿತ್ಯ ವಿನೋದ, ಪಾಂಡ್ಯ ಕುಲಾಶಿನಿ, ಕೇರಳಾಂತಕ, ಶಿಂಗಳಾಂತಕ, ರವಿಕುಲಮಾಣಿಕ್ಯ, ತೆಲಿಂಗಕುಲಕಾಲ ಮುಂತಾದ ಹಲವು ಬಿರುದುಗಳಿದ್ದವು.

*****

ಒಂದನೆ ರಾಜೇಂದ್ರ ಚೋಳ

   ರಾಜರಾಜ ಮತ್ತು ವಾಣವನ್ ಮಹಾದೇವಿ ಅಥವಾ ತ್ರಿಭುವನ ಮಹಾದೇವಿ ಇವರ ಮಗ ಪರಾಕೇಸರಿವರ್ಮ ರಾಜೇಂದ್ರ ಚೋಳವರ್ಮ 1014ರಲ್ಲಿ ರಾಜರಾಜನ ಅನಂತರ ಪಟ್ಟಕ್ಕೆ ಬಂದ. ಅವನನ್ನು ರಾಜರಾಜ ಯುವರಾಜನನ್ನಾಗಿ ನೇಮಿಸಿದ 1012ನೆಯ ವರ್ಷವನ್ನೇ ತನ್ನ ಆಡಳಿತದ ಆರಂಭವರ್ಷವನ್ನಾಗಿ ಶಾಸನಗಳಲ್ಲಿ ಎಣಿಸಿದ್ದಾನೆ. ರಾಜರಾಜ ಸುಭದ್ರವಾದ, ವಿಸ್ತಾರವಾದ ರಾಜ್ಯವನ್ನು ಇವನಿಗೆ ಬಿಟ್ಟುಹೋದ, ಚೋಳರಾಜ್ಯ ತಮಿಳುನಾಡು, ಕೇರಳ, ಕರ್ನಾಟಕದ ದಕ್ಷಿಣಭಾಗ, ಆಂಧ್ರಪ್ರದೇಶ ಮತ್ತು ಸಿಂಹಳದ ಭಾಗವನ್ನು ಒಳಗೊಂಡಿತ್ತು. ರಾಜರಾಜನನ್ನು ಮೀರಿಸಿದ ಪ್ರಬಲವಾದ ಚಕ್ರವರ್ತಿ ರಾಜೇಂದ್ರ ಚೋಳ. ಇವನ 33 ವರ್ಷಗಳ ಆಡಳಿತದ ಮೊದಲ ಭಾಗವೆಲ್ಲ ಯುದ್ಧಗಳು ಮತ್ತು ರಾಜ್ಯ ವಿಸ್ತರಣೆಗಳಿಂದ ತುಂಬಿತ್ತು.

   ರಾಜೇಂದ್ರ ತನ್ನ ಆಳ್ವಿಕೆ ಆರಂಭವಾದ ತರುಣದಲ್ಲೇ 1018ರಲ್ಲಿ ತನ್ನ ಮಗ ರಾಜಾಧಿರಾಜನನ್ನು ಯುವರಾಜನನ್ನಾಗಿ ಆರಿಸಿ ತನ್ನ ಆಡಳಿತದಲ್ಲಿ ನೆರವಾಗುವಂತೆ ಏರ್ಪಡಿಸಿದ. ರಾಜಾಧಿರಾಜ 25 ವರ್ಷಗಳ ಕಾಲ ಯುವರಾಜನಾಗಿದ್ದು ಚಕ್ರಾಧಿಪತ್ಯದ ಆಡಳಿತದ ಹೊಣೆ ಹೊತ್ತು ತನ್ನ ತಂದೆಗೆ ನೆರವಾದ. ಇದೇ ರೀತಿ ರಾಜೇಂದ್ರನ ಬೇರೆಬೇರೆ ಮಕ್ಕಳು ಪ್ರಾಂತ್ಯಾಧಿಕಾರಿಗಳಾಗಿ ರಾಜ್ಯ ನಿರ್ವಹಣೆ ಮಾಡಿದರು. ಇದರಿಂದ ರಾಜ್ಯದ ಆಡಳಿತ ಬಿಗಿಯಾಗಿ, ಉತ್ತರಾಧಿಕಾರ ನಿರಾತಂಕವಾಗುವಂತಾಯಿತು. ರಾಜೇಂದ್ರ ಚೋಳನ ಶಾಸನಗಳಲ್ಲಿ ಕಂಡುಬರುವ ಅವನ ಪ್ರಶಸ್ತಿಗಳು ರಾಜರಾಜ ಹಾಕಿಕೊಟ್ಟ ಮೇಲ್ಪಂಕ್ತಿಯನ್ನನುಸರಿಸಿ ಅವನ ಆಡಳಿತದ ಆರಂಭ ವರ್ಷದಿಂದ ಕ್ರಮಕ್ರಮವಾಗಿ ಅವನು ನಡೆಸಿದ ಯುದ್ಧಗಳನ್ನೂ ಮಹತ್ಸಾಧನೆಗಳನ್ನೂ ವಿವರಿಸುತ್ತ ಹೋಗುವುದರಿಂದ ಅವನ ಆಡಳಿತದ ವಿವರಗಳನ್ನು ಅರಿಯಲು ಅವು ಸಹಾಯಕವಾಗಿವೆ.

   ರಾಜೇಂದ್ರನ ಆಳ್ವಿಕೆಯ ಮೂರನೆಯ ವರ್ಷದ ಶಾಸನಗಳಲ್ಲೇ ಅವನು ಎಡತೊರೆನಾಡು, ಬನವಾಸಿ, ಕೊಲ್ಲಿಪಾಕಿ, ಮಣ್ಣೈಕಡಕಂ ಅಥವಾ ಮಾನ್ಯಖೇಟ ಇವುಗಳನ್ನು ಗೆದ್ದ ಉಲ್ಲೇಖವಿದೆ. ತನ್ನ ತಂದೆಯ ಕಾಲದಲ್ಲೇ ಅವನು ಪ್ರದೇಶಗಳಲ್ಲಿ ನಡೆಸಿದ ಯುದ್ಧಗಳನ್ನು ಬಹುಶಃ ಅವು ಸೂಚಿಸುತ್ತವೆ. ಅವನ ಮುಂದಿನ ದಂಡಯಾತ್ರೆ ನಡೆದದ್ದು ಈಳಮಂಡಳ ಅಥವಾ ಸಿಂಹಳದ ಮೇಲೆ. ದಂಡಯಾತ್ರೆ ಅವನ ಆಳ್ವಿಕೆಯ 5ನೆಯ ವರ್ಷದಲ್ಲಿ ಅಂದರೆ ಸಾ.ಶ.ವ. 1017-18ರಲ್ಲಿ, 5ನೆಯ ಮಹಿಂದ ಅಲ್ಲಿ ಆಳುತ್ತಿದ್ದಾಗ ನಡೆದಿರಬೇಕು. ಹಿಂದೆಯೇ ಸಿಂಹಳದಲ್ಲಿ ಸೈನಿಕರು ದಂಗೆಯೆದ್ದಿದ್ದ ಸಮಯವನ್ನು ಸಾಧಿಸಿ ರಾಜರಾಜ ಚೋಳ ರಾಜ್ಯದ ಬಹುಭಾಗವನ್ನಾಕ್ರಮಿಸಿದ್ದ. ಆದರೂ ಅದರ ದಕ್ಷಿಣದ ಸ್ವಲ್ಪಭಾಗ ಸಿಂಹಳೀಯರ ವಶದಲ್ಲೇ ಉಳಿದಿತ್ತು. ರಾಜೇಂದ್ರನ ದಂಡಯಾತ್ರೆಯಿಂದ ಮಹಿಂದನೂ ಅವನ ಪರಿವಾರದವರೂ ಸೆರೆಸಿಕ್ಕಿದರಲ್ಲದೆ ಅಪಾರವಾದ ಸಂಪತ್ತು ರಾಜೇಂದ್ರನ ಕೈವಶವಾಯಿತು. ಮಹಿಂದನನ್ನು ಚೋಳ ರಾಜ್ಯದಲ್ಲಿ ಸೆರೆಯಿಡಲಾಯಿತು. ಸಿಂಹಳ ಚೋಳರಾಜ್ಯದ ಒಂದು ಪ್ರಾಂತ್ಯವಾಯಿತು. ಕಾಲದಲ್ಲಿ ಪೋಲನ್ನುರುವದಲ್ಲಿ ಶೈವ ಮತ್ತು ವೈಷ್ಣವ ದೇವಾಲಯಗಳನ್ನು ಕಟ್ಟಿಸಿದಂತೆ ತೋರುತ್ತದೆ. ರಾಜೇಂದ್ರ ಸಿಂಹಳವನ್ನು ಗೆದ್ದ 12 ವರ್ಷಗಳ ಅನಂತರ ಚೋಳರ ಮೇಲೆ ಮಹಿಂದನ ಮಗ ಕಸ್ಯ ತಿರುಗಿ ಬಿದ್ದು ಸ್ವತಂತ್ರವಾಗಿ ರೋಹಣದಿಂದ ಆಳಲಾರಂಭಿಸಿದ. ರಾಜೇಂದ್ರ ಸಿಂಹಳವನ್ನು ಗೆದ್ದ ಅನಂತರ, ಅವನ ಆಳ್ವಿಕೆಯ 6ನೆಯ ವರ್ಷದಲ್ಲಿ, ಕೇರಳ ಅವನಿಗೆ ಸೋತು ಶರಣಾಯಿತು. ರಾಜೇಂದ್ರ ತನ್ನ ಮಗ ಜಟಾವರ್ಮನನ್ನು ಚೋಳಪಾಂಡ್ಯನೆಂಬ ಬಿರುದಿನಿಂದ ಪಾಂಡ್ಯ ರಾಜ್ಯದಲ್ಲಿ ಮಧುರೈಯಲ್ಲಿ ರಾಜಪ್ರತಿನಿಧಿಯನ್ನಾಗಿ ನೇಮಿಸಿದ. ಅನಂತರ ಸ್ವಲ್ಪ ಕಾಲದಲ್ಲಿಯೇ ಅವನು ಕೇರಳದಲ್ಲೂ ರಾಜಪ್ರತಿನಿಧಿಯಾದ. ರಾಜೇಂದ್ರನ ಆಳ್ವಿಕೆಯಲ್ಲಿ ರಾಜಪ್ರತಿನಿಧಿಗಳಿಗೆ ಹೆಚ್ಚಿನ ಸ್ವಾತಂತ್ರ ಇರುತ್ತಿತ್ತು.

      ರಾಜೇಂದ್ರ ಸಾ.ಶ.ವ. 1021-22ರಲ್ಲಿ ಚಾಳುಕ್ಯ ಚಕ್ರವರ್ತಿ ಜಯಸಿಂಹನ ಮೇಲೆ ಮತ್ತೆ ಯುದ್ಧವನ್ನಾರಂಭಿಸಿದ. ಮುಷಂಗಿ ಅಥವಾ ಮುಯಂಗಿ ಎಂಬಲ್ಲಿ ನಡೆದ ಯುದ್ಧದಲ್ಲಿ ರಾಜೇಂದ್ರ ಜಯಗಳಿಸಿದುದಾಗಿ ಶಾಸನಗಳು ತಿಳಿಸಿದರೂ ಅದರಿಂದ ಅವನ ರಾಜ್ಯವಿಸ್ತರಣೆಯೇನೂ ಆದಂತೆ ತೋರುವುದಿಲ್ಲ.

   ವೆಂಗಿಯಲ್ಲಿ ವಿಮಲಾದಿತ್ಯ 1019ರಲ್ಲಿ ತೀರಿಕೊಂಡಾಗ ಅವನ ಮಗ ರಾಜರಾಜ ನರೇಂದ್ರ ತನ್ನ ಸೋದರಮಾವನಾದ ರಾಜೇಂದ್ರನ ನೆರವನ್ನು ಕೋರಿದ. ಆದ್ದರಿಂದ ಚೋಳರ ದಂಡನಾಯಕ ಅರೈಯನ್ ರಾಜರಾಜನ್ ಅಥವಾ ವಿಕ್ರಮಚೋಳ ಚೋಳಿಯ ವರಯ್ಯನ್ ಎಂಬುವನು ವೆಂಗಿಯ ಕಡೆ ದಂಡೆತ್ತಿದಾಗ ವಿಜಯಾದಿತ್ಯ ಓಡಿಹೋದ. ಇದೇ ಸಂದರ್ಭದಲ್ಲಿ ಚೋಳ ದಂಡನಾಯಕ ತನ್ನ ದಂಡಯಾತ್ರೆಯನ್ನು ಮುಂದುವರಿಸಿ ಗಂಗಾತೀರದವರೆಗೂ ನುಗ್ಗಿ, ರಾಜೇಂದ್ರ ಹೊಸದಾಗಿ ಕಟ್ಟಿಸುತ್ತಿದ್ದ ರಾಜಧಾನಿಗೆ ಪವಿತ್ರ ಗಂಗಾಜಲವನ್ನು ತಂದ. ಸಂದರ್ಭದಲ್ಲಿ ರಾಜೇಂದ್ರ ಗೋದಾವರಿಯವರೆಗೂ ಬಂದಿದ್ದು ಗಂಗೆಯ ಕಡೆಗೆ ಹೊರಟಿದ್ದ ತನ್ನ ಸೈನ್ಯದ ಮೇಲೆ ಕಳಿಂಗರೂ ಓಡ್ರರೂ ತಿರುಗಿಬೀಳದಂತೆ ನೋಡಿಕೊಂಡ. ಗಂಗಾತೀರದವರೆಗೆ ದಂಡಯಾತ್ರೆ ಹೋಗಿದ್ದ ಸೈನ್ಯ ಗೆದ್ದ ರಾಜರಲ್ಲಿ ಇಂದ್ರರಥ, ರಣಶೂರ, ಧರ್ಮಪಾಲ ಮುಂತಾದವರ ಹೆಸರುಗಳು ಬರುತ್ತವೆ. ವಿಜಯದ ನೆನಪಿಗಾಗಿ ರಾಜೇಂದ್ರ ತನ್ನ ರಾಜಧಾನಿಯಲ್ಲಿ ಚೋಳಗಂಗ ಎಂಬ ಕೆರೆಯನ್ನು ಕಟ್ಟಿಸಿದ. ಚೈತ್ರಯಾತ್ರೆಯ ಅಂತ್ಯದಲ್ಲಿ ರಾಜರಾಜ ನರೇಂದ್ರನ ಪಟ್ಟಾಭಿಷೇಕ ನೆರವೇರಿತು. ಅದೇ ಕಾಲದಲ್ಲಿ ಅವನು ರಾಜೇಂದ್ರನ ಮಗಳು ಅಮ್ಮಂಗಾ ದೇವಿಯನ್ನು ವಿವಾಹವಾದ.

   ರಾಜರಾಜ ನರೇಂದ್ರ ವೆಂಗಿಯಲ್ಲಿ 41 ವರ್ಷಗಳ ಕಾಲ ಆಳಿದರೂ ಅನೇಕ ಬಾರಿ ದೇಶವನ್ನು ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಉಂಟಾಗಿತ್ತು. ಚೋಳ ಸೈನ್ಯಕ್ಕೆ ಹೆದರಿ ಓಡಿಹೋಗಿದ್ದ ವಿಜಯಾದಿತ್ಯ ಚಾಳುಕ್ಯರ ಸಹಾಯದಿಂದ ರಾಜರಾಜನನ್ನು ಓಡಿಸಿ ತಾನೇ ವೆಂಗಿಯ ರಾಜನಾಗಿ 1031ರಲ್ಲಿ ಪಟ್ಟಕ್ಕೆ ಬಂದ. ರಾಜರಾಜ ನರೇಂದ್ರ ಪುನಃ ರಾಜೇಂದ್ರನತ್ತ ಸಹಾಯಕ್ಕಾಗಿ ತಿರುಗಬೇಕಾಯಿತು. ಬ್ರಹ್ಮಮಹಾರಾಜನೆಂಬ ದಂಡನಾಯಕನೊಡನೆ ಬಲವಾದ ಸೈನ್ಯವನ್ನು ರಾಜೇಂದ್ರ ಕಳುಹಿಸಿದ. ಅವನೊಂದಿಗೆ ಉತ್ತಮ ಚೋಳ ಮೆಲಾಡುಡೈಯಾನ್ ಮತ್ತು ಉತ್ತಮ ಚೋಳ ಚೋಳಕೋನ್ ಎಂಬ ಅಧಿಕಾರಿಗಳು ಇದ್ದರು. ಕಲಿದಿಂಡಿ ಎಂಬಲ್ಲಿ ನಡೆದ ಯುದ್ಧದಲ್ಲಿ ಮೂವರು ಸತ್ತರು. ಆದರೂ ರಾಜರಾಜ ನರೇಂದ್ರ ಜಯಗಳಿಸಿ ಮತ್ತೆ ಸು. 1035 ವೇಳೆಗೆ ವೆಂಗಿರಾಜ್ಯದ ರಾಜನಾದಂತೆ ತೋರುತ್ತದೆ. 1042 ಹೊತ್ತಿಗೆ ಚಾಳುಕ್ಯ 1ನೆಯ ಸೋಮೇಶ್ವರ ವೆಂಗಿಯ ಮೇಲೆ ದಂಡೆತ್ತಿ ಬಂದಾಗ ರಾಜರಾಜ ಪುನಃ ರಾಜೇಂದ್ರನ ಸಹಾಯ ಕೋರಬೇಕಾಯಿತು. ರಾಜೇಂದ್ರನ ಮಗ ರಾಜಾಧಿರಾಜ ಸೈನ್ಯದೊಂದಿಗೆ ವೆಂಗಿನಾಡಿಗೆ ಹೋದಾಗ ಪುನಃ ಚೋಳ ಚಾಳುಕ್ಯರ ನಡುವೆ ಯುದ್ಧವಾಯಿತು.

   ರಾಜೇಂದ್ರನ 14ನೆಯ ವರ್ಷದ ಶಾಸನದಲ್ಲಿ ಮೊದಲ ಬಾರಿಗೆ ಅವನು ಕಡಾರದ ಮೇಲೆ ಯುದ್ಧಕ್ಕೆ ಹೋದ ವಿಷಯ ಕಂಡುಬರುತ್ತದೆ. ಅನೇಕ ಹಡಗುಗಳಲ್ಲಿ ಸಮುದ್ರ ದಾಟಿ, ಕಡಾರದ ರಾಜ ಸಂಗ್ರಾಮ ವಿಜಯೋತ್ತುಂಗ ವರ್ಮನನ್ನು ಸೆರೆಹಿಡಿದು, ವಿದ್ಯಾಧರ ತೋರಣ, ಶ್ರೀವಿಜಯ, ಪಣ್ಣೈ, ಮಲೆಯೂರ್, ನೂಯಿರುಡಿಂಗಂ ಇಲಂಗಾಶೋಕ, ಮಾಪಪ್ಪಾಳಂ, ಮೋವಿಳಂಬಂಗ, ನಳೈಪ್ಪಂದೂರ್, ತಲೈತ್ತಕ್ಕೋಲಂ, ಮಾದಮಾಲಿಂಗಂ, ಇಲಾಮುರಿದೇಶಂ ಮಾನಕ್ಕವಾರಂ ಮತ್ತು ಕಡಾರಗಳನ್ನು ಗೆದ್ದನೆಂದು ಅವನ ಪ್ರಶಸ್ತಿ ಸಾರುತ್ತದೆ. ಹೀಗೆ ಅವನ ರಾಜ್ಯ ಸಮುದ್ರದಾಚೆಗೂ ಹರಡುವಂತಾಯಿತು. ಇನ್ನು ಮುಂದೆ ರಾಜೇಂದ್ರ ಯುದ್ಧಗಳಲ್ಲಿ ತಾನೇ ಭಾಗವಹಿಸದೆ ತನ್ನ ಮಕ್ಕಳಿಗೆ ಅವಕಾಶವನ್ನೊದಗಿಸಿದ. ಪಾಂಡ್ಯ ಕೇರಳ ರಾಜ್ಯಗಳಲ್ಲಿ ದಂಗೆಯೆದ್ದಾಗ ಅದನ್ನು ಅಡಗಿಸಿದವನು ರಾಜಾಧಿರಾಜ. ಇದೇ ರೀತಿ ಸಿಂಹಳದಲ್ಲಿ 1ನೆಯ ವಿಕ್ರಮಬಾಹುವಿನೊಂದಿಗೆ ರಾಜಾಧಿರಾಜ ನಡೆಸಿದ ಯುದ್ಧಗಳು ರಾಜೇಂದ್ರನ ಆಳ್ವಿಕೆಯಲ್ಲೆ ಆರಂಭವಾದುವು.

      ಹೀಗೆ ರಾಜೇಂದ್ರನ ಆಳ್ವಿಕೆ ವಿಜಯಾಲಯನ ಪೀಳಿಗೆಯ ಚೋಳ ವಂಶದಲ್ಲೇ ಅಮೋಘವಾದದ್ದಾಗಿತ್ತು. ಅವನ ರಾಜ್ಯ ಅತ್ಯಂತ ವಿಸ್ತಾರವಾಗಿತ್ತು. ಸೈನ್ಯ ಮತ್ತು ನೌಕಾಬಲ ಅತ್ಯಂತ ಬಲಯುತವಾದ್ದಾಗಿತ್ತು. ರಾಜೇಂದ್ರನಿಗೆ ಹಲವಾರು ಬಿರುದುಗಳಿದ್ದವು. ಅವುಗಳಲ್ಲಿ ಮುಖ್ಯವಾದವು ಮುಡಿಗೊಡ ಚೋಳ, ಪಂಡಿತ ಚೋಳ, ಗಂಗೈಕ್ಕೊಂಡ ಚೋಳ. ಗಂಗೈಕ್ಕೊಂಡ ಚೋಳನೆಂಬ ಬಿರುದು ಅವನಿಗೆ ಅತ್ಯಂತ ಪ್ರಿಯವಾದದ್ದು. ಹೆಸರಿನಿಂದ ಅವನು ಹೊಸ ರಾಜಧಾನಿಯನ್ನು ಕಟ್ಟಿಸಿ ಅಲ್ಲಿ ಭವ್ಯವಾದ ಗಂಗೈಕ್ಕೊಂಡ ಚೋಳೇಶ್ವರ ದೇವಾಲಯವನ್ನು ಕಟ್ಟಿಸಿದ. 1044ರಲ್ಲಿ ರಾಜೇಂದ್ರ ಕಾಲವಾದ. ಅವನ ರಾಣಿಯರಲ್ಲಿ ವೀರಮಹಾದೇವಿ ಅವನೊಂದಿಗೆ ಸಹಗಮನ ಮಾಡಿದಳು. ಅವನ ಮಕ್ಕಳಲ್ಲಿ ರಾಜಾಧಿರಾಜ, ರಾಜೇಂದ್ರ ಮತ್ತು ವೀರರಾಜೇಂದ್ರರು ಅವನ ಅನಂತರ ಅನುಕ್ರಮವಾಗಿ ರಾಜ್ಯಭಾರ ಮಾಡಿದರು.

ಸೂಚನೆ: ಮೇಲಿನ ವಿವರಗಳನ್ನು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಮಾತ್ರ ನೀಡಲಾಗಿದೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources