ಚೋಳರ ಕಲೆ ಮತ್ತು ವಾಸ್ತುಶಿಲ್ಪ

   ಚೋಳರು ಆಳಿದ 400 ವರ್ಷಗಳ ಕಾಲದಲ್ಲಿ (850-1250) ಚೋಳ ಸಾಮ್ರಾಜ್ಯದಲ್ಲಿ ವಾಸ್ತುಶಿಲ್ಪ ಅದ್ಭುತ ಪ್ರಗತಿ ಹೊಂದಿತು. ಪಲ್ಲವರು ಆರಂಭಿಸಿ ಬೆಳೆಸಿಕೊಂಡು ಬಂದಿದ್ದ ವಾಸ್ತು ಶೈಲಿಯನ್ನೇ ಚೋಳರು ಮೊದಲು ಬಳಸಿದರೂ ಅವರು ಮುಂದುವರಿದಂತೆಲ್ಲ ತಮ್ಮದೇ ಆದ ರೀತಿಯನ್ನು ಅವುಗಳಲ್ಲಿ ಹೆಚ್ಚಾಗಿ ಅಳವಡಿಸುತ್ತ ಹೋಗಿ ಕಡೆಗೆ ಚೋಳ ಶೈಲಿ ಎಂದು ಸ್ಪಷ್ಟವಾಗಿ ಗುರುತಿಸಬಹುದಾದಷ್ಟು ಖಚಿತವಾದ ಸ್ವರೂಪವನ್ನು ಅದಕ್ಕೆ ಕೊಟ್ಟರು. ಅವರು ಕಟ್ಟಿಸಿದ ದೇವಾಲಯಗಳಿಗೆ ಲೆಕ್ಕವಿಲ್ಲ. ಚೋಳ ರಾಜ್ಯದಲ್ಲಷ್ಟೇ ಅಲ್ಲ, ಅವರು ಗೆದ್ದ ಸಿಂಹಳ, ಕರ್ಣಾಟಕ, ಆಂಧ್ರಗಳ ಭಾಗಗಳಲ್ಲೂ ತಮ್ಮ ವಾಸ್ತುಶಿಲ್ಪ ಶೈಲಿಯನ್ನು ಅನುಷ್ಠಾನಕ್ಕೆ ತಂದರು. ಸಮುದ್ರದಾಚೆಗಿನ ಮಲಯ, ಸುಮಾತ್ರ, ಜಾವ ದ್ವೀಪಗಳಲ್ಲಿ ಕೂಡ ಇವರ ಶೈಲಿಯ ಪ್ರಭಾವವನ್ನು ಕಾಣಬಹುದು. ಅವರ ಅಸಂಖ್ಯಾತ ದೇವಾಲಯಗಳಲ್ಲಿ ಹಲವನ್ನು ಕಟ್ಟಿದ ಕಾಲ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೂ ಕಟ್ಟಡಗಳ ರಚನೆ, ಶೈಲಿ, ಶಿಲ್ಪಗಳ ಸೂಕ್ಷ್ಮ ಪರಿಶೀಲನೆಯಿಂದ ಅವುಗಳ ಕಾಲವನ್ನು ಸ್ಥೂಲವಾಗಿ ಹೇಳಲು ಸಾಧ್ಯ.

   ಚೋಳರು ಸ್ವತಂತ್ರರಾಗುವ ಹೊತ್ತಿಗೆ ಪಲ್ಲವರಲ್ಲಿ ಗುಹಾ ವಾಸ್ತು ಕೊನೆಗೊಂಡು, ಇಟ್ಟಿಗೆಯ, ಕಲ್ಲಿನ ಸಣ್ಣಸಣ್ಣ ದೇವಾಲಯಗಳನ್ನು ಕಟ್ಟುವ ಪದ್ಧತಿ ಬೆಳೆದಿತ್ತು. ಅದನ್ನೇ ಮುಂದುವರಿಸಿದ ಮೊದ ಮೊದಲಿನ ಚೋಳರಾಜರು ಇಟ್ಟಿಗೆಯ ಕಟ್ಟಡಗಳಿಗಿಂತ ಕಲ್ಲು ಕಟ್ಟಡಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದರು. ಆಗಲೆ ಕಟ್ರಾಳಿಯನ್ನು (ಪೂರ್ಣವಾಗಿ ಶಿಲೆಯಿಂದ ನಿರ್ಮಿತವಾದ ದೇವಾಲಯ) ಕಟ್ಟಿಸುವುದು ಹೆಮ್ಮೆಯಿಂದ ಹೇಳಿಕೊಳ್ಳುವ ವಿಷಯವಾಗಿತ್ತು. ಹಿಂದಿನ ಹಲವು ಇಟ್ಟಿಗೆ ಕಟ್ಟಡಗಳನ್ನು ಅವರು ಹೀಗೆ ಕಲ್ಲು ಕಟ್ಟಡಗಳಾಗಿ ಮಾರ್ಪಡಿಸಿದ ನಿದರ್ಶನಗಳುಂಟು. ತಿರುಕ್ಕುಳ ಕುಮಡ್ರದಲ್ಲಿದ್ದ ಇಟ್ಟಿಗೆ ಕಟ್ಟಡಕ್ಕೆ ಬದಲಾಗಿ 1ನೆಯ ಆದಿತ್ಯ ಕಲ್ಲಿನ ಕಟ್ಟಡವನ್ನು ಕಟ್ಟಿಸಿ ದೇವಾಲಯಕ್ಕೆ ಹಿಂದೆ ಸ್ಕಂದ ಶಿಷ್ಯ ಬಿಟ್ಟಿದ್ದ ದತ್ತಿಯನ್ನು ಮುಂದುವರಿಸಿದಂತೆ ತಿಳಿಸುವ ಶಾಸನಗಳು ಅಲ್ಲಿವೆ. ಆದಿತ್ಯ ಸಹ್ಯಾದ್ರಿಯಿಂದ ಸಮುದ್ರದವರೆಗೂ ಕಲ್ಲಿನಿಂದ ದೇವಾಲಯಗಳನ್ನು ಕಟ್ಟಿಸಿದುದಾಗಿ ಶಾಸನಗಳು ತಿಳಿಸುತ್ತವೆ. ಆದರೂ ಇಟ್ಟಿಗೆ ಕಟ್ಟಡಗಳನ್ನೂ ಕಾಲದಲ್ಲಿ ಕಟ್ಟಿದ್ದುಂಟು. ಆದಿತ್ಯನ ಸಾಮಂತ ಕಂದನ್ನ ಮಾರವರ್ಮನ್ ಎಂಬುವನು ಇಟ್ಟಿಗೆಯಲ್ಲಿ ಕಟ್ಟಿಸಿದ್ದ ತಿರುತೊಟ್ಟಮುಡೈಯ ಮಹಾದೇವರ ದೇವಾಲಯವನ್ನು 1ನೆಯ ಕುಲೋತ್ತುಂಗ ಚೋಳನ ಕಾಲದಲ್ಲಿ ಕಲ್ಲಿನಿಂದ ಪುನರ್ನಿಮಾಣ ಮಾಡಿದಂತೆ ಕಂಡುಬರುತ್ತದೆ. ಚೋಳರ ಕಾಲದಲ್ಲಿ ಇಟ್ಟಿಗೆಯಲ್ಲಿ ಕಟ್ಟಿದ ಕೆಲವು ದೇವಾಲಯಗಳು ಈಗಲೂ ಉಳಿದುಬಂದಿವೆ.

   10ನೆಯ ಶತಮಾನದವರೆಗಿನ ಕಾಲದ ದೇವಾಲಯಗಳ ಗಾತ್ರ ಹೇಳುವಂಥದೇನೂ ಅಲ್ಲ. ಆದರೂ ಕಾಲದಲ್ಲಿ ಅವರು ಕಟ್ಟಿಸಿದ ದೇವಾಲಯಗಳಲ್ಲಿ ಹಂತಹಂತವಾದ ಬೆಳವಣಿಗೆಯನ್ನು ಕಾಣಬಹುದು. ಆರಂಭಕಾಲದ ಅಂದರೆ ವಿಜಯಾಲಯ ಮತ್ತು 1ನೆಯ ಆದಿತ್ಯನ ಕಾಲದ ದೇವಾಲಯಗಳು ಸಣ್ಣ ಅಥವಾ ಮಧ್ಯಮ ಪ್ರಮಾಣದವಾಗಿದ್ದವು. ಅವು ಹೆಚ್ಚಾಗಿ ಪಲ್ಲವ ಶೈಲಿಯನ್ನು ಹೋಲುತ್ತವೆ. ವಿಶಾಲೂರು, ತಿರುಪ್ಪೂರು, ಕಾಳಿಯಾಪಟ್ಟಿ, ಪನಂಗುಡಿ, ಏನಾದಿ ಮುಂತಾದ ಕಡೆ ಇರುವ ಚಿಕ್ಕ ಗುಡಿಗಳು ಗುಂಪಿಗೆ ಸೇರುತ್ತವೆ. ಇವುಗಳಲ್ಲಿ ಕಾಣುವ ಉಪಪೀಠ, ಗೂಡುಗಳು, ಅರೆಗಂಬಗಳು, ವಿಮಾನ ಎಲ್ಲವೂ ಪಲ್ಲವರೂ ಕಂಚಿಯಲ್ಲಿ ಕಟ್ಟಿಸಿರುವ ಮತಂಗೇಶ್ವರ, ಮುಕ್ತೇಶ್ವರ ದೇವಾಲಯಗಳ ಅನುಕರಣೆ ಗರ್ಭಗೃಹ ಮತ್ತು ಅಂತರಾಳಗಳೆರಡನ್ನೂ ಸೇರಿಸಿಕೊಂಡು ಮೇಲೇಳುವ ಪಲ್ಲವರ ವಿಮಾನ ಚೋಳರ ಕಾಲಕ್ಕೆ ಗರ್ಭಗುಡಿಯ ಮೇಲೆ ಮಾತ್ರ ಇರುತ್ತವೆ. ಹಾಗೆಯೇ ಪಲ್ಲವರ ಕಾಲದಲ್ಲಿದ್ದ ಸಿಂಹಸ್ತಂಭಗಳು ಕಡಿಮೆಯಾಗಿ ಕ್ರಮೇಣ ಬಿಟ್ಟುಹೋದವು. ಇನ್ನೊಂದು ಮುಖ್ಯ ವ್ಯತ್ಯಾಸವೆಂದರೆ, ಪಲ್ಲವರಲ್ಲಿ ಮೂಲದೇವಾಲಯದ ಸುತ್ತಲೂ ಅದರ ಗೋಡೆಗಳಿಗೆ ಹೊಂದಿಕೊಂಡಂತೆ ಹೊರಮುಖವಾದ ಕಿರುಗುಡಿಗಳಿದ್ದರೆ, ಚೋಳ ಸಂಪ್ರದಾಯದಲ್ಲಿ ಮಧ್ಯದ ಮೂಲೆಗುಡಿಯ ಸುತ್ತಲೂ ಪ್ರಕಾರಕ್ಕೆ ಹೊಂದಿಕೊಂಡಂತೆ ಒಳಮುಖವಾಗಿರುವ ಕಿರುಗುಡಿಗಳಿರುತ್ತವೆ. ನಾರ್ತಾಮಲೈಯಲ್ಲಿರುವ ವಿಜಯಾಲಯ ಚೋಳೇಶ್ವರ ಇಂಥ ದೇವಾಲಯಗಳಿಗೆ ಮೊದಲ ಮಾದರಿಯಾಗಿದ್ದು, ಅದರ ಹೆಸರೇ ತಿಳಿಸುವಂತೆ ಅದು ವಿಜಯಾಲಯನ ಕಾಲದಲ್ಲಿ ನಿರ್ಮಿತವಾದಂತೆ ತೋರುತ್ತದೆ. ನಡುವೆ ಮೂಲದೇವಾಲಯ, ಸುತ್ತಲೂ ಏಳು ಚಿಕ್ಕಚಿಕ್ಕ ಗುಡಿಗಳು, ನುಣುಪಾದ ಹೊರಮೈಯುಳ್ಳ ಬೆಣಚುಕಲ್ಲಿನ ದಪ್ಪ ದಿಮ್ಮಿಗಳಿಂದ ನಿರ್ಮಿತವಾಗಿರುವ ಮೂಲದೇವಾಲಯದ ಗರ್ಭಗುಡಿ ವೃತ್ತಾಕಾರವಾಗಿದೆ. ಅದರ ಗೋಡೆಗಳು 5' ದಪ್ಪವಿದೆ. ಗರ್ಭಗುಡಿಯನ್ನು ಬಳಸಿದ ಮತ್ತೊಂದು ಚೌಕನೆಯ ಕಟ್ಟಡ ಇದೆ. ಪ್ರದಕ್ಷಿಣಾಪಥ ಇರುವುದು ಇವುಗಳ ನಡುವೆ. ಮುಂದೆ 6 ಕಂಬಗಳ ಮೇಲೆ ನಿಂತಿರುವ ಅಂತರಾಳ. ಇದರ ಹೊರಗೋಡೆಯ ಮೇಲಿರುವ ಅಲಂಕೃತ ಅರೆಗಂಬಗಳು ಚೋಳ ಶಿಲ್ಪದ ವೈಶಿಷ್ಟ್ಯ. ಆದರೆ ನಡುವೆ ಗೂಡುಗಳಿಲ್ಲ. ಕೆಳಭಾಗದಲ್ಲಿ ಕುಬ್ಜರ ಸಾಲು, ಮೇಲೆ ಯಾಳಿಗಳ ಸಾಲು, ಮಂಟಪದ ಕಂಬಗಳು ಕೆಳಗೆ ಮತ್ತು ಮೇಲೆ ಚೌಕಾಕೃತಿಯಲ್ಲಿದ್ದು, ನಡುವೆ ಅಷ್ಟಮುಖವುಳ್ಳವಾಗಿ ಪಲ್ಲವ ಶೈಲಿಯನ್ನುಳಿಸಿಕೊಂಡಿವೆ. ಪ್ರವೇಶದ್ವಾರದ ಎರಡೂ ಕಡೆಯೂ ಅರೆಮಂಟಪದಲ್ಲಿ ಎದುರುಮುಖವಾಗಿದ್ದು ದೇಹವನ್ನು ಬಾಗಿಲ ಕಡೆ ತಿರುಗಿಸಿ ಅಡ್ಡಗಾಲು ಹಾಕಿ ನಿಂತಿರುವ ದ್ವಾರಪಾಲಕ ಮೂರ್ತಿಗಳಿವೆ. ಅವುಗಳಿಗೆ ಪಲ್ಲವರ ದ್ವಾರಪಾಲಕ ಮೂರ್ತಿಗಳಂತೆ ಎರಡೇ ಕೈಗಳು. ಮೇಲಿನ ವಿಮಾನ ಮೂರು ಅಂತಸ್ತುಗಳಿಂದ ಕೂಡಿದೆ. ಮೂರನೆಯ ಅಂತಸ್ತು ವೃತ್ತಾಕಾರವಾಗಿದ್ದು, ಸುತ್ತಲೂ ಇರುವ ಕೈಪಿಡಿಯ ಪಂಜರಗಳ ಗೂಡುಗಳಲ್ಲಿ ಮನೋಹರವಾದ ನಾಟ್ಯಭಂಗಿಯಲ್ಲಿರುವ ನರ್ತಕಿಯರ ಮೂರ್ತಿಗಳಿವೆ. ಕಣ್ಣನ್ನೂರಿನಲ್ಲಿ 1ನೆಯ ಆದಿತ್ಯನ ಕಾಲದಲ್ಲಿ ಕಟ್ಟಿಸಿದ ಬಾಲಸುಬ್ರಹ್ಮಣ್ಯ ದೇವಾಲಯ ಇದೇ ಮಾದರಿಯದು. ಕುಂಭಕೋಣದ ಸುಂದರವಾದ ನಾಗೇಶ್ವರ ದೇವಾಲಯವೂ ಇದೇ ರೀತಿಯಲ್ಲಿದ್ದರೂ ಇದರ ಗರ್ಭಗೃಹದ ಹೊರಗೋಡೆಗಳಲ್ಲಿರುವ ಗೂಡುಗಳಲ್ಲಿ ಅರ್ಧನಾರೀಶ್ವರ, ಬ್ರಹ್ಮ, ದಕ್ಷಿಣಾಮೂರ್ತಿಯರ ವಿಗ್ರಹಗಳಿವೆ. ಉಳಿದ ಗೂಡುಗಳಲ್ಲಿ ಆಳೆತ್ತರದ ಸುಂದರವಾದ ಭಂಗಿಗಳಲ್ಲಿರುವ ಸ್ತ್ರೀಪುರುಷರ ಅರೆಯುಬ್ಬು ಮೂರ್ತಿಗಳುಂಟು. ಇವಲ್ಲದೆ ಜಗತಿಯಲ್ಲಿ ಅರೆಗಂಬಗಳ ಕೆಳಗಿರುವ ಪೌರಾಣಿಕ ವಸ್ತುಗಳ ಶಿಲ್ಪಗಳು ಕುಸುರಿ ಕೆಲಸದಿಂದ ತುಂಬಿವೆ.

   ಶ್ರೀನಿವಾಸದ ನಲ್ಲೂರಿನಲ್ಲಿರುವ ಕೊರಂಗನಾಥ ದೇವಾಲಯ 1ನೆಯ ಪರಾಂತಕನ ಕಾಲದ್ದು. ಇದು ಮುಂದಿನ ಹಂತ. ಚೌಕವಾದ ಗರ್ಭಗೃಹ, ಉದ್ದುದ್ದನೆಯ ಮಂಟಪ 50'ಗಳಷ್ಟು ಎತ್ತರವಾಗಿರುವ ಶಿಖರ. ಇದೊಂದು ಮಧ್ಯ ಗಾತ್ರದ ದೇವಾಲಯ. ಇದರಲ್ಲಿ ಹಿಂದಿನ ದೇವಾಲಯುಗಳಲ್ಲಿಯ ಸರಳತೆ ಇದೆ. ಆದರೆ ಒಳಗೆ ಚೋಳ ರೀತಿಯ ಕಂಬಗಳು, ಸ್ತಂಭಾಗ್ರದಲ್ಲಿ ಕಳಶದ ಆಕೃತಿಯನ್ನಳವಡಿಸಿದೆ. ಅದರ ಮೇಲೆ ಹೆಚ್ಚು ಅಗಲವಾದ ಪುಷ್ಪಬೋದಿಗೆಗಳಿವೆ. ದೇವಾಲಯದ ಹೊರಗೂಡುಗಳಲ್ಲಿರುವ ದಕ್ಷಿಣಾಮೂರ್ತಿ, ವಿಷ್ಣು, ಬ್ರಹ್ಮ ಇವರ ಮತ್ತು ಇತರ ಸ್ತ್ರೀಪುರುಷರ ಮೂರ್ತಿಗಳು ಬಹುತೇಕ ಪೂರ್ಣವಾಗಿ ಬಿಡಿಸಲ್ಪಟ್ಟಿವೆ. ಇವು ಕಲಾಪೂರ್ಣವಾಗಿವೆ. ಕೋಡಂಬಾಳೂರಿನ ಮೂವರ್ ಕೋಯಿಲ್ ಸೊಗಸಾದ ವಾಸ್ತುಶೈಲಿಗೂ ಮೂರ್ತಿಶಿಲ್ಪಗಳ ಸೌಂದರ್ಯಕ್ಕೂ ಹೆಸರಾಗಿವೆ. ಇಮ್ಮಡಿ ಪರಾಂತಕನ ಕಾಲದಲ್ಲಿ ಅವನ ಸಾಮಂತ ಭೂತಿವಿಕ್ರಮ ಕೇಸರಿ ಕಟ್ಟಿಸಿದ. ಒಂದು ಸಾಲಿನಲ್ಲಿರುವ, ಮೂರೂ ಗುಡಿಗಳಲ್ಲಿ ಒಂದೊಂದೂ 21' ಚೌಕವಾಗಿದೆ. ಒಂದಕ್ಕೂ ಇನ್ನೊಂದಕ್ಕೂ 10' ಅಂತರ. ಒಂದೊಂದರ ಮುಂದೆಯೂ ಒಂದೊಂದು ಅರ್ಧ ಮಂಟಪವುಂಟು. ಇವುಗಳ ಮುಂದೆ 8' ಅಂತರದಲ್ಲಿ ಇವು ಮೂರಕ್ಕೂ ಸೇರುವ ಒಂದು ದೊಡ್ಡ ಮಹಾಮಂಟಪ-ಇದರ ಮುಂದೆ, ನಡುವೆ. ಒಂದು ನಂದಿಮಂಟಪ; ಮಂಟಪಕ್ಕೂ ಪ್ರಾಕಾರದ್ವಾರಕ್ಕೂ ನಡುವೆ ಬಲಿಪೀಠ ಅಥವಾ ಧ್ವಜಸ್ತಂಭ; ಇವೆಲ್ಲವನ್ನೂ ಒಳಗೊಂಡಂತೆ ಸುತ್ತಾಲಯ; ಅದಕ್ಕೆ ಸೇರಿದಂತೆ ಸುತ್ತಲೂ 15 ಕಿರುಗುಡಿಗಳು. ಹೊರಪ್ರಾಕಾರ ದಪ್ಪ ಗೋಡೆಯದು. ಪಶ್ಚಿಮದಲ್ಲಿ ಪ್ರವೇಶದ್ವಾರಗೋಪುರವೊಂದಿತ್ತು. ಹೊರಗೋಡೆಯ ಶಿಲ್ಪಗಳು ಇತರ ದೇವಾಲಯಗಳಲ್ಲಿರುವಂತೆಯೇ ಇವೆ. ಆದರೆ ಅವು ಹೆಚ್ಚು ನವುರವು. ಲೋವೆಯ ಕೆಳಗಿನ ಗಣಗಳು ಹಲವು ಭಂಗಿಗಳಲ್ಲಿ ಆಕರ್ಷಕವಾಗಿವೆ. ಅಲ್ಲಿಯ ಶಿಲ್ಪಗಳಲ್ಲಿ ಅರ್ಧನಾರಿ, ವೀಣಾಧರ, ದಕ್ಷಿಣಾಮೂರ್ತಿ, ಗಜಾರಿ, ಗಂಗಾಧರ ಮುಂತಾದವು ಗಮನಿಸಬೇಕಾದವು. ಕಿಳಿಯನೂರಿನ ಅಗಸ್ತ್ಯೇಶ್ವರ, ತಿಂಡಿವನದ ತಿರುತ್ತಿಂಡೀಶ್ವರ, ತಿರುವೆರುಂಬಿಯೂರಿನ ಪಿಪೀಲಿಕೇಶ್ವರ, ಬ್ರಹ್ಮದೇಶದ ತಿರುವಾಳೀಶ್ವರ ಮೊದಲಾದವು ಗುಂಪಿಗೆ ಸೇರುತ್ತವೆ.

   ರಾಜರಾಜ ಮತ್ತು ರಾಜೇಂದ್ರನ ಕಾಲದಲ್ಲಿ ಚೋಳರ ವಾಸ್ತುಶಿಲ್ಪಶೈಲಿ ಪರಾಕಾಷ್ಠೆ ಮುಟ್ಟಿತು. ಬೃಹತ್ತಿಗೂ ಮಹತ್ತಿಗೂ ಹೆಸರಾಯಿತು. ಅವರ ಸಾಮ್ರಾಜ್ಯ ದೊಡ್ಡದಾದಂತೆ ಅವರು ದೊಡ್ಡ ದೇವಾಲಯಗಳನ್ನು ಕಟ್ಟಿಸಿ ವಾಸ್ತುಶಿಲ್ಪ ಇತಿಹಾಸದಲ್ಲಿ ಚೋಳಶೈಲಿಗೆ ಪ್ರಮುಖ ಸ್ಥಾನ ದೊರಕಿಸಿಕೊಟ್ಟರಲ್ಲದೆ ತಮ್ಮ ಕೀರ್ತಿಯನ್ನು ಅಜರಾಮರಗೊಳಿಸಿಕೊಂಡರು. ಇವರ ಸಾಮ್ರಾಜ್ಯದ ಉದ್ದಗಲಕ್ಕೂ ದೇವಾಲಯಗಳು ಹರಡಿಕೊಂಡುವು. ರಾಜರಾಜನ ಆಳ್ವಿಕೆಯ ಮೊದಲ ಭಾಗದಲ್ಲಿ ಅವನು ಕಟ್ಟಿಸಿದ ದೇವಾಲಯಗಳು ಹಿಂದಿನ ದೇವಾಲಯಗಳಿಗಿಂತ ದೊಡ್ಡವಾಗಿದ್ದರೂ ಮುಂದೆ ಅವನು ತಂಜಾವೂರಿನಲ್ಲಿ ಕಟ್ಟಿಸಿದ ರಾಜರಾಜ ದೇವಾಲಯದ (ಬೃಹದೀಶ್ವರ ದೇವಾಲಯ) ಮುಂದೆ ತೀರ ಚಿಕ್ಕವೇ. ಇವುಗಳಲ್ಲಿ ತಿರುವಾಳೇಶ್ವರ ದೇವಾಲಯ ತನ್ನ ಶಿಲ್ಪಬಾಹುಳ್ಯ ಮತ್ತು ವೈವಿಧ್ಯದಿಂದ ಅತ್ಯಂತ ಆಕರ್ಷಕವಾಗಿದೆ. ಅದರಲ್ಲೂ ಲೋವೆಯ ಕೆಳಗಿನ ಗಣಗಳ ವಿವಿಧ ನಾಟ್ಯಭಂಗಿಗಳು, ವಿಚಿತ್ರ ಮುಖಮುದ್ರೆಗಳು, ಹಾಸ್ಯಮಯವಾದ ನಡೆನೋಟಗಳು ಗಮನಾರ್ಹವಾಗಿವೆ. ತಂಜಾವೂರಿನಲ್ಲಿ ರಾಜರಾಜ ಕಟ್ಟಿಸಿದ ರಾಜರಾಜೇಶ್ವರ ಮತ್ತು ಗಂಗೈಕ್ಕೊಂಡ ಚೋಳಪುರದಲ್ಲಿ 1ನೆಯ ರಾಜೇಂದ್ರ ಕಟ್ಟಿಸಿದ ಗಂಗೈಕ್ಕೊಂಡ ಚೋಳೇಶ್ವರ ದೇವಾಲಯಗಳು ಚೋಳಶೈಲಿಯ ಉತ್ತುಂಗ ಶಿಖರಗಳು. ಗಾತ್ರದಲ್ಲಷ್ಟೇ ಅಲ್ಲ. ರಚನೆಯಲ್ಲಿ, ಶಿಲ್ಪದಲ್ಲಿ, ಯಾವುದೇ ದೃಷ್ಟಿಯಿಂದಲೂ ಇವನ್ನು ಮೀರಿಸಿದ ಚೋಳ ದೇವಾಲಯಗಳಿಲ್ಲ, ರಾಜರಾಜೇಶ್ವರ ಅಥವಾ ಬೃಹದೀಶ್ವರ ದೇವಾಲಯ ರಾಜರಾಜನ ಅತ್ಯದ್ಭುತ ಸಾಧನೆ. 1003ರಲ್ಲಿ ಆರಂಭವಾದ ದೇವಾಲಯ ನಿರ್ಮಾಣ 1009-10 ಹೊತ್ತಿಗೆ, ಎಂದರೆ ರಾಜರಾಜನ ಆಳ್ವಿಕೆಯ 25ನೆಯ ವರ್ಷದಲ್ಲಿ ಮುಗಿಯಿತು. ಚೋಳರ ಬಲ ಮತ್ತು ಐಶ್ವರ್ಯಗಳು ರಾಜರಾಜನ ಕಾಲದಲ್ಲಿ ಹೇಗೆ ಬೆಳೆದುವೆಂಬುದಕ್ಕೆ ಇದು ಸಾಕ್ಷಿಯಾಗಿದೆ. 180' ಉದ್ದವಿರುವ ದೇವಾಲಯದ ವಿಮಾನ 190' ಎತ್ತರವಾಗಿದೆ. ಇದು ಭಾರತದಲ್ಲೇ ಅತ್ಯುನ್ನತ ದೇವಾಲಯ. ವಿಮಾನ, ಅರ್ಧಮಂಟಪ, ಮಹಾಮಂಟಪ, ನಂದಿಮಂಟಪಗಳು. ಅವನ್ನು ಬಳಸಿದ ಒಂದು ದೊಡ್ಡ ಪ್ರಾಕಾರ, ಪ್ರಾಕಾರದ ಒಳಭಾಗದಲ್ಲಿ 35 ಸಣ್ಣ ಗುಡಿಗಳು. ಪ್ರಾಕಾರದ ಪ್ರವೇಶದ್ವಾರದ ಮೇಲೊಂದು ಗೋಪುರ. ಅಲ್ಲಿಂದ ಹೊರಗಡೆಗೆ ಎರಡನೆಯ ಪ್ರಾಕಾರಕ್ಕೆ ಸೇರಿದಂತೆ ಮತ್ತೊಂದು ಗೋಪುರ, ಇದರ ಭವ್ಯವಾದ ವಿಮಾನ 90' ಚೌಕದ ಭದ್ರವಾದ ಬುನಾದಿಯ ಮೇಲೆ ನಿಂತಿದೆ. ಹೊರಮುಖದಲ್ಲಿರುವ ಹಲವು ಭಾಗಗಳು ಒಳಸರಿದೋ ಹೊರಚಾಚಿಯೋ ಇದ್ದು ದೇವಾಲಯದ ಒಟ್ಟಿನ ಆಕೃತಿಗೆ ಮೆರಗು ನೀಡಿವೆ. ಗರ್ಭಗೃಹದ ಗೋಡೆಯ ಎತ್ತರ 50'. ಅದರ ಮೇಲೆ 13 ಅಂತಸ್ತುಗಳಲ್ಲಿ ಗೋಪುರಾಕೃತಿಯಲ್ಲಿ ನೇರವಾಗಿ ಮೇಲೆದ್ದಿರುವ ವಿಮಾನದ ತುದಿಯಲ್ಲಿ ಗುಂಡಾದ ಶಿಖರವಿದೆ. ಅದರ ಭವ್ಯತೆ ಅಡಗಿರುವುದು ವಿಮಾನದ ಸರಳವಾದ ನೇರವಾದ ನಿಲುವಿನಲ್ಲಿ ಮತ್ತು ಅದರ ಮೇಲಿನ ಗೋಳಾಕೃತಿಯ ಬೃಹತ್ ಶಿಖರದಲ್ಲಿ. ಮಧ್ಯದಲ್ಲಿ ಅಡ್ಡವಾಗಿ ಹಾದುಹೋಗಿರುವ ದಿಂಡುಕಲ್ಲಿನಿಂದ ಹೊರಗೋಡೆ ಎರಡು ಭಾಗವಾಗಿದೆ. ದಿಂಡಿನ ಕೆಳಗು ಮೇಲೂ ಅರೆಗಂಬಗಳ ಸಾಲು ಮತ್ತು ಇತರ ಅಲಂಕೃತ ಶಿಲ್ಪಗಳಿವೆ. ಗೋಡೆಗೆ ಹಲವು ಮುಖಗಳಿವೆ. ಒಂದೊಂದು ಮುಖದಲ್ಲೂ ಅರೆಮಂಟಪಗಳು ಅಥವಾ ಆಳವಾದ ದೇವಗೋಷ್ಠಗಳಿವೆ. ಅವುಗಳಲ್ಲಿ ಅತ್ಯಂತ ಸುಂದರವಾಗಿ ಕಡೆದ ಮೂರ್ತಿಶಿಲ್ಪಗಳು ತುಂಬಿವೆ. ಮೇಲೇರುತ್ತ ಕಿರಿದಾಗುವ ವಿಮಾನದ 13 ಅಂತಸ್ತುಗಳೂ ರಚನೆಯಲ್ಲಿ ಒಂದೇ ಬಗೆ, ಒಂದೊಂದರಲ್ಲೂ ಅಲಂಕೃತ ಕಿರುಗೋಪುರಗಳ ಸಾಲು. ಇದು ಅತ್ಯಂತ ಸುಂದರವಾದ ಶಿಲ್ಪ ಜೋಡಣೆ. ಚೌಕಾಕೃತಿಯಲ್ಲೇ ಮೇಲೆದ್ದ ವಿಮಾನದ ತುದಿಯಲ್ಲಿಯ ಕಂಠ ಭಾಗದಿಂದ ಅದರ ಮೇಲೆ ನಾಲ್ಕು ಕಡೆಯೂ ಅಲಂಕೃತ ಗೂಡುಗಳಿರುವ ಗೋಲಾಕೃತಿಯ ದೊಡ್ಡ ಶಿಖರದಿಂದ ಅದರ ಸೌಂದರ್ಯ ಇಮ್ಮಡಿಸಿದೆ. 45' ಚೌಕದ ಗರ್ಭಗೃಹದ ಸುತ್ತಲೂ ಇರುವ 6' ಅಗಲದ ಪ್ರದಕ್ಷಿಣಾಪಥದ ಒಳಚಾವಣಿ ಕಾಲದ ಸೊಗಸಾದ ವರ್ಣಚಿತ್ರಗಳಿಂದ ತುಂಬಿದೆ. ಗರ್ಭಗೃಹದಲ್ಲಿರುವ ಲಿಂಗ, ನಂದಿಮಂಟಪದಲ್ಲಿರುವ ನಂದಿ ಎರಡೂ ದೊಡ್ಡವು. ಅರ್ಧ ಮಂಟಪ ಹೊರಗೋಡೆಗಳ ಗೂಡುಗಳಲ್ಲಿರುವ ದೇವತಾಮೂರ್ತಿಗಳು ಕಲಾತ್ಮಕವಾದವು. ಒಟ್ಟಿನಲ್ಲಿ ದೇವಾಲಯದ ರಚನೆ ಸುಭದ್ರ, ಸ್ಥೂಲ, ಭವ್ಯ ಮತ್ತು ಪ್ರಮಾಣಬದ್ಧ.

   ರಾಜರಾಜೇಂದ್ರ ಸು. 1030ರಲ್ಲಿ ಕಟ್ಟಿಸಿದ ಗಂಗೈಕ್ಕೊಂಡ ಚೋಳೇಶ್ವರ ದೇವಾಲಯ ಇದೇ ಮಾದರಿಯದು. ಇದು ವಿಸ್ತಾರದಲ್ಲಿ ಹಿರಿದಾಗಿದ್ದರೂ ಗಾತ್ರದಲ್ಲಿ ಕಿರಿದು. ಇದರ 8 ಅಂತಸ್ತುಗಳ 160' ಎತ್ತರದ ವಿಮಾನದಲ್ಲಿ ರಾಜರಾಜೇಶ್ವರ ದೇವಾಲಯದ ನೇರವಾದ ನೀಳ ರಚನೆ ಇಲ್ಲ. ಅದರ ಬುಡ ಅಗಲ; ಮೇಲೇರುತ್ತಿದ್ದಂತೆ ಹೊರರಚನೆಯಲ್ಲಿ ಒಂದು ಬಳುಕಿದೆ. ಅದರಲ್ಲಿ ರಾಜರಾಜೇಶ್ವರ ದೇವಾಲಯದ ಗಂಡುತನ ಇಲ್ಲದಿದ್ದರೂ ಗಾಂಭೀರ್ಯವಿದೆ. ದೇವಾಲಯದ ಹೊರರಚನೆಯಲ್ಲೂ ಅಲಂಕರಣ ಹೆಚ್ಚು. ದ್ವಾರಪಾಲಕರು, ಹೊರಗೋಡೆಯ ಮೇಲಿನ ಮೂರ್ತಿಗಳು ಜೀವಂತ ಸೌಂದರ್ಯವನ್ನು ಹೊಮ್ಮಿಸುವ ಮಹತ್ತರ ಕೃತಿಗಳು.

   ಮುಂದೆ ಒಂದು ಶತಮಾನಕಾಲ ಚೋಳ ವಾಸ್ತುಶಿಲ್ಪಗಳು ಬಹುಮುಖವಾಗಿ ಬೆಳೆದುವು. ಅನೇಕ ದೇವಾಲಯಗಳ ನಿರ್ಮಾಣವಾಯಿತು. ಇವುಗಳಲ್ಲಿ ದಾರಾಸುರದ ಐರಾತೇಶ್ವರ ದೇವಾಲಯ ಇಮ್ಮಡಿ ರಾಜರಾಜನ ಕಾಲದ ಭವ್ಯ ಕಟ್ಟಡ. ಇದು ತಂಜಾವೂರಿನ ಮಾದರಿಯಲ್ಲೇ ಇದ್ದರೂ ಇದನ್ನು ಹಲವು ಪ್ರಾಕಾರಗಳು ಸುತ್ತುವರಿದಿವೆ. ಅಲ್ಲದೆ ಇದರ ಮಹಾಮಂಟಪದ ಮುಂದೆ ರಾಜಗಂಭೀರವೆಂಬ ಮತ್ತೊಂದು ಮಂಟಪವಿದೆ. ಅದು ಆನೆಗಳು ಎಳೆಯುತ್ತಿರುವ ರಥದ ಮಾದರಿಯಲ್ಲಿದೆ. ಮುಮ್ಮಡಿ ಕುಲೋತ್ತುಂಗನ ಕಾಲದಲ್ಲಿ ತ್ರಿಭುವನದಲ್ಲಿ ಕಟ್ಟಿದ ಕಂಪಹರೇಶ್ವರ ದೇವಾಲಯವೂ ಮೇಲೆ ತಿಳಿಸಿದ ಬೃಹದ್ದೇವಾಲಯಗಳ ಮಾದರಿಯದೇ ಆದರೂ ಅದರಲ್ಲಿ ಚೋಳರ ಕಾಲದ ಅನಂತರ ಬೆಳೆದ ದೇವಾಲಯಗಳ ರಚನೆಯ ವೈವಿಧ್ಯವನ್ನು ಗುರುತಿಸಬಹುದು.

   ಚೋಳರ ಕಾಲದ ಮೂರ್ತಿಶಿಲ್ಪ ಜೀವಂತವಾದ ಶಿಲ್ಪಮಾದರಿ. ಪಲ್ಲವರ ಕಾಲದಲ್ಲಿ ತೆಳುವುಬ್ಬು ಶಿಲ್ಪದಲ್ಲಿರುತ್ತಿದ್ದ ಮೂರ್ತಿಗಳು ಚೋಳರ ದೇವಾಲಯಗಳ ಮೇಲೆ ಹೆಚ್ಚು ಗುಂಡು ರೂಪ ತಾಳುತ್ತವೆ. ಅವರ ಕಾಲದ ಕಂಚು ಶಿಲ್ಪಗಳಂತೂ ಲೋಕಪ್ರಸಿದ್ಧವಾಗಿವೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧