ಉದಾರೀಕರಣದ ಅರ್ಥವಿವರಣೆ (ಆರ್ಥಿಕ ಸುಧಾರಣೆಗಳು)

ಸೂಚನೆ: ಕೆಳಗಿನ ವಿವರಗಳನ್ನು ಶ್ರೀ. ಕೆ.ಡಿ. ಬಸವ ಅವರ ಭಾರತದ ಆರ್ಥಿಕಾಭಿವೃದ್ಧಿ ಎಂಬ ಪಠ್ಯಪುಸ್ತಕದಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ತಿಗಳ ಅನುಕೂಲಕ್ಕಾಗಿ ಮಾತ್ರವೇ ನೀಡಲಾಗಿದೆ.


ಪೀಠಿಕೆ: ನಮ್ಮ ದೇಶವು 1947 ರಲ್ಲಿ ಸ್ವತಂತ್ರವಾದ ನಂತರ ಮತ್ತು ಮುಖ್ಯವಾಗಿ 1951 ರಲ್ಲಿ ಆರ್ಥಿಕ ಯೋಜನೆಯನ್ನು ಜಾರಿಗೊಳಿಸಿದನಂತರ, ಸರಕಾರವು ದೇಶದ ಅರ್ಥವ್ಯವಸ್ಥೆಯ ಪುನರಚನೆಗಾಗಿ ಮತ್ತು ತ್ವರಿತ ಔದ್ಯಮಿಕ ಅಭಿವೃದ್ಧಿಗಾಗಿ ಅನೇಕ ಕ್ರಮಗಳನ್ನು ಕೈಕೊಂಡಿತು. ಆದರೆ 40 ವರ್ಷಗಳ ನಂತರವೂ ಆರ್ಥಿಕ ಯೋಜನೆಯ ಮೂಲಕ, ಈ ದಿಶೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಕೈಗಾರಿಕೆಗಳ ಅಭಿವೃದ್ಧಿಯು ಇಷ್ಟು ಮಂದಗತಿಯಲ್ಲಿ ಸಾಗಿರುವದಕ್ಕೆ ಕಾರಣವಾಗಿರುವ, ಆಳವಾಗಿ ಬೇರೂರಿದ ಮೂಲಭೂತ ಅಂಶಗಳನ್ನು ಕಂಡುಹಿಡಿಯುವುದು ಸರಕಾರಕ್ಕೆ ಅತ್ಯಾವಶ್ಯಕವಾಯಿತು. ಇವುಗಳಲ್ಲಿ ಮಹತ್ವದ ಕಾರಣಗಳು ಯಾವುವೆಂದರೆ, ಸಾರ್ವಜನಿಕ ವಲಯದ ಕೈಗಾರಿಕಾ ಸಂಸ್ಥೆಗಳಲ್ಲಿ ಮಿತಿಮೀರಿದ ಮೇಲ್‌ವೆಚ್ಚಗಳು ಅಂದರೆ ಮಿತಿಮೀರಿದ ಆಡಳಿತ ವೆಚ್ಚ, ವ್ಯವಸ್ಥಾಪನೆಯ ವೆಚ್ಚ ಮತ್ತು ಮೇಲ್ವಿಚಾರಣೆಯ ವೆಚ್ಚ, ವ್ಯವಸ್ಥಾಪನೆಯಲ್ಲಿ ಆಳವಾಗಿ ಬೇರೂರಿದ ಅದಕ್ಷತೆ, ಅತಿ ಕಡಿಮೆ ಅಥವಾ ಶೂನ್ಯ ಪ್ರತಿಫಲ, ಸಾಕಷ್ಟು ಪ್ರತಿಫಲವಿಲ್ಲದ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ, ನಿರಾಶಾದಾಯಕವಾದ ದೃಷ್ಟಿಕೋನ, ಅತ್ಯಧಿಕ ಪ್ರಮಾಣದಲ್ಲಿ ಧೈರ್ಯಗೆಡಿಸುವ ಬಂಡವಾಳ-ಉತ್ಪತ್ತಿಯ ಪ್ರಮಾಣ, ಬಲವಾದ ವಿದೇಶಿ ಪೈಪೋಟಿ, ಸಾರ್ವಜನಿಕ ವಲಯದ ಕೈಗಾರಿಕೆಗಳಲ್ಲಿ ಮಿತಿಮೀರಿದ ಸರಕು-ಸೇವೆಗಳ ಉತ್ಪಾದನಾ ವೆಚ್ಚ, ಹೆಚ್ಚುತ್ತಿರುವ ಕಾರ್ಮಿಕರ ತಂಟೆಗಳು ಮತ್ತು ಔದ್ಯಮಿಕ ಅಶಾಂತಿ, ಇತ್ಯಾದಿ. ಇದೂ ಅಲ್ಲದೆ, ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳಿಗೆ ಸೇವಾ ನಿಯಮಗಳ ಪ್ರಕಾರ ನೌಕರಿಯ ಭದ್ರತೆ ಮತ್ತು ರಕ್ಷಣೆ ಇದ್ದುದರಿಂದ, ಅವರು ಸೋಮಾರಿಗಳೂ ಮತ್ತು ಮಿತಿ ಮೀರಿ ತಂಟೆಕೊರರೂ ಆಗಿದ್ದರಲ್ಲದೆ, ಅವರು ಬೇಜವಾಬ್ದಾರರೂ ಮತ್ತು ನಿರಾಸಕ್ತರೂ ಆಗಿದ್ದರು.

ಮಂದಗತಿಯ ಆರ್ಥಿಕ ಬೆಳವಣಿಗೆಗೆ ಇನ್ನೂ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ಮುಖ್ಯವಾದವುಗಳು ಯಾವುವೆಂದರೆ- ಸಂಪನ್ಮೂಲಗಳ ಅಪೂರ್ಣ ಮತ್ತು ಅಸಮರ್ಪಕ ಬಳಕೆ, ಸಾರಿಗೆ- ಸಂಪರ್ಕ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆ, ಪ್ರೇರಣೆಯ ಅಭಾವ, ಬಂಡವಾಳ ಹೂಡಿಕೆಗೆ ನಿರುತ್ತೇಜಕ ವಾತಾವರಣ, ಸರಿಯಾದ ಸ್ಥಳಗಳಲ್ಲಿ ತಪ್ಪು ವ್ಯಕ್ತಿಗಳ ನೇಮಕ, ಸಾಹಸಿ ಬಂಡವಾಳ ಹೂಡಿಕೆಯ  ಅಭಾವ, ಸರಿಯಾದ ನಿರ್ದೇಶನ ಮತ್ತು ಮಾರ್ಗದರ್ಶನಗಳ ಅಭಾವ, ತಪ್ಪು ನಿರ್ದೇಶನದ ಮೂಲಕ ಲಾಭದಾಯಕವಲ್ಲದ ಮತ್ತು ದುಂದು ವೆಚ್ಚದ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ, ಕಡಿಮೆ ಪ್ರತಿಫಲ ಅಥವಾ ಪ್ರತಿಫಲವೇ ಇಲ್ಲದ ಮೂಲಕ ಹೂಡಿಕೆದಾರರಲ್ಲಿ ನಿರಾಸಕ್ತಿ ಮತ್ತು ನಿರುತ್ಸಾಹ ಇವೇ ಮೊದಲಾದವುಗಳೊಂದಿಗೆ, ಗೊಂದಲಮಯವಾದ, ಸಂದಿಗ್ಧವಾದ ಮತ್ತು ಅಸ್ಪಷ್ಟವಾದ  ವಾತಾವರಣ ಕೈಗಾರಿಕೆ ಮತ್ತು ಔದ್ಯಮಿಕ ವಲಯದಲ್ಲಿದ್ದಿತು.

ಈ ಎಲ್ಲ ಕಾರಣಗಳ ಮೂಲಕ ಇಡಿಯ ಆರ್ಥಿಕ ಮತ್ತು ಕೈಗಾರಿಕೆಯ ಪ್ರಪಂಚದಲ್ಲಿ ದಿಕ್ಕು ತೋಚದಂತಾಗಿ ಯಾವುದೇ ಪ್ರಗತಿಯ ಸಂಕೇತವನ್ನು ಸೂಚಿಸಲು ಅದಕ್ಕೆ ಅಸಾಧ್ಯವಾಯಿತು. ಯೋಜನೆಯ ಅವಧಿಯಲ್ಲಿ ಸರಕಾರವು ಕೈಗಾರಿಕೆಗಳ ತ್ವರಿತ ಅಭಿವೃದ್ಧಿಗಾಗಿ ಮತ್ತು ಆರ್ಥಿಕ ಬೆಳವಣಿಗೆಗಾಗಿ ಶತಪ್ರಯತ್ನ ಮಾಡಿದರೂ ಸಹ, ದೋಷಯುಕ್ತ ಯೋಜನೆ ಮತ್ತು ದೀರ್ಘಕಾಲದಲ್ಲಿ ಫಲಪ್ರದವಾಗಬಹುದಾದ ಯೋಜನೆಗಳ ಮೂಲಕ, ಸರಕಾರವು ನಿರೀಕ್ಷಿಸಿದ ಪ್ರಗತಿಯ ಮಟ್ಟವನ್ನು ಮುಟ್ಟಲು ಕೈಗಾರಿಕೆಗಳಿಗೆ ಸಾಧ್ಯವಾಗಲಿಲ್ಲ.

ಆದ್ದರಿಂದ, ಅಭಿವೃದ್ಧಿಯತ್ತ ಭರದಿಂದ ಮುನ್ನಡೆಯಲು, ಕೈಗಾರಿಕೆಯ ಕ್ಷೇತ್ರದಲ್ಲಿ ಮತ್ತು ಆರ್ಥಿಕ ಪರಿಸರದಲ್ಲಿ ಭಾರೀ ಬದಲಾವಣೆಯನ್ನು ತರಲು ಪ್ರಬಲವಾದ ಧುರೀಣತ್ವ ಮತ್ತು ದೂರದೃಷ್ಟಿಗಳ ಆವಶ್ಯಕತೆ ಅತ್ಯಾವಶ್ಯಕವಾಯಿತು. ಆದರೆ ದೇಶದ ರಾಜಕೀಯ ಧುರೀಣರು ಭಾರೀ ಸಾಂಪ್ರದಾಯಕವಾದ ಮತ್ತು ಸಂಕುಚಿತವಾದ ದೃಷ್ಟಿಕೋನವನ್ನು ಹೊಂದಿದ್ದರಿಂದ ಅವರು ಔದ್ಯಮಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಎಳ್ಳಷ್ಟೂ ಅವಕಾಶವಿಲ್ಲದ, ಆದರೆ ಅಪಾಯಕರವಾದ ಮಾರ್ಗವನ್ನು ಅನುಸರಿಸತೊಡಗಿದರು. ಸಾರ್ವಜನಿಕ ವಲಯದ ಕೈಗಾರಿಕೆಗಳಿಗೆ ಸಂಪೂರ್ಣವಾಗಿ ಸರಕಾರದ ರಕ್ಷಣೆ ಮತ್ತು ಆಶ್ರಯ ಇದ್ದರೂ, ಅವು ವಿದೇಶಿ ಪೈಪೋಟಿಯನ್ನು ಎದುರಿಸಲು ಅಸಮರ್ಥವಾದವು. ಅಲ್ಲದೆ ದೇಶದ ಖಾಸಗೀವಲಯವು ನೀಡಿದ ಸಣ್ಣ ಪ್ರಮಾಣದ ಪೈಪೋಟಿಯನ್ನೂ ಸಹ ಎದುರಿಸಲಾರದಂತಾದವು. ಅದೇ ವೇಳೆಗೆ, ಖಾಸಗಿ ವಲಯದ ಕೈಗಾರಿಕೆಗಳ ಮೇಲೆ ಸರಕಾರವು ಅನೇಕ ಸಂಕೋಲೆಗಳನ್ನು, ನಿರ್ಬಂಧಗಳನ್ನು, ನಿಯಂತ್ರಣಗಳನ್ನು, ಕಟ್ಟು ನಿಟ್ಟಿನ ನಿಯಮ-ನಿಬಂಧನೆಗಳನ್ನು, ಬಿಗಿಯಾದ ಲೈಸೆನ್ಸ್‌  ಧೋರಣೆಗಳನ್ನು ವಿಧಿಸಿದ್ದರಿಂದ, ಖಾಸಗಿ ವಲಯಕ್ಕೆ ಮುಕ್ತವಾಗಿ ಬೆಳೆಯಲು ಅವಕಾಶವಿಲ್ಲದ ಕಾಲವಾಗಿತ್ತು.

 

ಸಾರ್ವಜನಿಕ ವಲಯದ ಕಾರ್ಯನಿರ್ವಹಣೆಯ ವಿಶ್ಲೇಷಣೆ

ಇಂದು ಭಾರತದ ಅರ್ಥವ್ಯವಸ್ಥೆಯು ಬದಲಾವಣೆಯ ನಿರ್ಣಾಯಕ ಹಂತದಲ್ಲಿದೆ. ನಲವತ್ತು ವರ್ಷಗಳಿಂದ ಸರಕಾರವು ಸಾರ್ವಜನಿಕ ವಲಯಕ್ಕೆ ಅತ್ಯಧಿಕ ಪ್ರಾಮುಖ್ಯತೆ ನೀಡಿ, ದೇಶದ ಅರ್ಥವ್ಯವಸ್ಥೆಯ ತ್ವರಿತ ಬೆಳವಣಿಗೆಯ ಪ್ರಮುಖ ಸಾಧನವಾಗುವದೆಂದು ನಿರೀಕ್ಷಿಸಿ ಆದರೆ 1970 ರ ದಶಕದ ಮಧ್ಯದ ಸುಮಾರಿಗೆ ಸಾರ್ವಜನಿಕ ವಲಯದ ಬಗೆಗಿನ ಸರಕಾರದ ನಿರೀಕ್ಷೆಯು ಹುಸಿಯಾಗತೊಡಗಿದೆಯೆಂಬ ಅರಿವು ಅದಕ್ಕುಂಟಾಯಿತು. ಅಷ್ಟರಲ್ಲಿ ಅದರ ವಿರುದ್ಧ ಕೂಗು ಮತ್ತು ಪ್ರತಿಭಟನೆಗಳು ಪ್ರಾರಂಭವಾದವು. ಆದರೆ ಅವು ಸರಕಾರದ ಕಣ್ಣು ತೆರೆಸುವಷ್ಟು ಪ್ರಬಲವಾಗಿದ್ದಿಲ್ಲ. ಸಾರ್ವಜನಿಕ ವಲಯವು ತನಗೆ ವಹಿಸಿಕೊಟ್ಟ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಲು ವಿಫಲವಾಗಿದ್ದರಿಂದಲೇ ಇಂಥ ಪ್ರತಿಭಟನೆಗಳು ಅಲ್ಲಲ್ಲಿ ಪ್ರಾರಂಭವಾದವು. 

1980ರ ದಶಕದ ಆರಂಭದಲ್ಲಿ ಸರಕಾರವು ಈವರೆಗೆ ಸಾರ್ವಜನಿಕ ವಲಯಕ್ಕೆ ಮೀಸಲಾಗಿಟ್ಟಿದ್ದ ಕೈಗಾರಿಕೆಗಳಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ಅವಕಾಶ ನೀಡಿತು. ಆದರೂ ಸರಕಾರ ಸಾರ್ವಜನಿಕ ವಲಯದ ಬಗೆಗಿನ ತನ್ನ ನೀತಿಯನ್ನು ಸ್ಪಷ್ಟಪಡಿಸಲು ಹಿಂಜರಿಯಿತು. ಆದರೆ 1984 ರಲ್ಲಿ ದಿ. ರಾಜೀವ ಗಾಂಧಿಯವರು ಪ್ರಧಾನಿಗಳಾದ ನಂತರ ತಮ್ಮ ಪ್ರಥಮ ಆಕಾಶವಾಣಿ ಭಾಷಣದಲ್ಲಿ ಸಾರ್ವಜನಿಕ ವಲಯದ ಬಗೆಗಿನ ನೀತಿಯಲ್ಲಿ ಮಾಡಿದ ಬದಲಾವಣೆಯನ್ನು ಸ್ಪಷ್ಟಪಡಿಸಿದರು. “ಸಾರ್ವಜನಿಕ ವಲಯವು ಇಂದು ತಾನು ಪ್ರವೇಶಿಸಬಾರದ ಅನೇಕ ಕ್ಷೇತ್ರಗಳಲ್ಲಿ ಪ್ರವೇಶಮಾಡಿದೆ. ಆದರೆ ಇನ್ನು ಮುಂದೆ ಖಾಸಗಿ ವಲಯವು ಅಭಿವೃದ್ಧಿಪಡಿಸಲಾರದಂಥ ಕೈಗಾರಿಕೆಗಳನ್ನು ಮಾತ್ರ ಸಾರ್ವಜನಿಕ ವಲಯಕ್ಕೆ ಮೀಸಲಾಗಿಡಲಾಗುತ್ತದೆ. ಅಲ್ಲದೆ ಖಾಸಗಿ ವಲಯಕ್ಕೆ ಸಾರ್ವಜನಿಕ ವಲಯದ ಕೈಗಾರಿಕೆಗಳಲ್ಲಿಯೂ ಪ್ರವೇಶ ನೀಡಿ, ಅದು ಸಾಕಷ್ಟು ವಿಸ್ತಾರವಾಗುವಂತೆ ಹಾಗೂ ಭಾರತದ ಅರ್ಥವ್ಯವಸ್ಥೆಯು ಹೆಚ್ಚು ಮುಕ್ತವಾಗಿ ಬೆಳೆಯುವಂತೆ ನೋಡಿಕೊಳ್ಳಲಾಗುತ್ತದೆ”.

ಇತ್ತೀಚಿನ ಹಲವಾರು ವರ್ಷಗಳಲ್ಲಿ ಸೋವಿಯತ್‌ ಒಕ್ಕೂಟ ಮತ್ತು ಇತರ ಪೂರ್ವ ಯುರೋಪಿನ ರಾಷ್ಟ್ರಗಳಲ್ಲಿ ಭಾರೀ ಬದಲಾವಣೆಗಳಾಗಿ ಅಲ್ಲಿ ಸಮತಾವಾದ ಅಥವಾ ಸರಕಾರಿ ವಲಯವು ಭಾರೀ ಪ್ರಮಾಣದಲ್ಲಿ ಕುಸಿಯಿತು. ಅದರ ಸ್ಥಳದಲ್ಲಿ ಖಾಸಗಿ ವಲಯವು ಮತ್ತೆ ತಲೆಎತ್ತತೊಡಗಿದೆ. ಅಲ್ಲಿ ಸಾರ್ವಜನಿಕ ವಲಯವು ಜನತೆಯ ಆಶೋತ್ತರಗಳನ್ನು ಈಡೇರಿಸಲು ವಿಫಲವಾಗಿದ್ದರಿಂದ ಅದರ ವಿರುದ್ಧ ಜನತೆ ಬಂಡಾಯವೆದ್ದಿತು ಮತ್ತು ಸರಕಾರಿ ವಲಯವನ್ನು ಬಗ್ಗು ಬಡಿಯಿತು. ಇದರಿಂದ ಭಾರತದಲ್ಲಿ ಸಾರ್ವಜನಿಕ ವಲಯದ ವಿರುದ್ಧ ಪ್ರತಿಭಟನೆಗಳಾಗತೊಡಗಿದವು. ಅದರ ವಿಫಲತೆಯ ಬಗೆಗೆ ಭಾರಿ ಪ್ರಮಾಣದಲ್ಲಿ ಜನರು ಟೀಕೆಗಳನ್ನು ಮಾಡಲು ಪ್ರಾರಂಭಿಸಿದರು. ಅದೇ ವೇಳೆಗೆ ಭಾರತದ ಸಂದಾಯ ಬಾಕಿಯ ಪರಿಸ್ಥಿತಿಯು ಬಿಗಡಾಯಿಸಿತು. ಆದ್ದರಿಂದ ಸರಕಾರವು ಅಂತಾರಾಷ್ಟ್ರೀಯ ಹಣಕಾಸಿನ ನಿಧಿ (IMF) ಮತ್ತು ವಿಶ್ವಬ್ಯಾಂಕಿಗೆ (World Bank) ಭಾರಿ ಮೊತ್ತದ ಸಾಲಕ್ಕಾಗಿ ಮೊರೆ ಹೋಗಬೇಕಾಯಿತು. ಈ ಎರಡೂ ಸಂಸ್ಥೆಗಳು ಭಾರತ ಸರಕಾರದ ಮೇಲೆ ವಿನಿಯಂತ್ರಣ ಮತ್ತು ಖಾಸಗೀಕರಣಗಳಿಗಾಗಿ ಒತ್ತಡ ತಂದವು. ಆಗ ಸರಕಾರವು ಅನಿವಾರ್ಯವಾಗಿ ತನ್ನ ಕೈಗಾರಿಕಾ ನೀತಿಯಲ್ಲಿ ವಿನಿಯಂತ್ರಣ ಮತ್ತು ಖಾಸಗೀಕರಣಗಳನ್ನು ಅಳವಡಿಸಲೇಬೇಕಾಯಿತು. ಅಲ್ಲದೆ ಮುಕ್ತ ಮಾರುಕಟ್ಟೆಗೂ ಅವಕಾಶ ನೀಡಬೇಕಾಯಿತು. ಇಂಥ ಪರಿಸ್ಥಿತಿಯು ಮುಂದುವರೆದಿದ್ದರಿಂದ ಅಂತಿಮವಾಗಿ ಸರಕಾರವು ೧೯೯೧ ರಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಘೋಷಿಸಬೇಕಾಯಿತು. ಈ ನೀತಿಯಿಂದಾಗಿ ಸಾರ್ವಜನಿಕ ವಲಯವನ್ನು ಕುಗ್ಗಿಸಲು ಹಾಗೂ ಖಾಸಗಿ ವಲಯವನ್ನು ಸಾಕಷ್ಟು ಮುಕ್ತಗೊಳಿಸಲು ಕ್ರಮಗಳನ್ನು ಕೈಕೊಳ್ಳಲಾಯಿತು.

ಸಾರ್ವಜನಿಕ ವಲಯವು ಭಾರಿ ದೋಷಾರೋಪಣೆಗಳಿಗೆ ಒಳಗಾಗಿರುವುದು ಈ ಕೆಳಗೆ ಕೊಟ್ಟ ವಾಸ್ತವಿಕಾಂಶಗಳ ಮೂಲಕ ಎಂಬುದನ್ನು ಮರೆಯಬಾರದು.

1. ಬಂಡವಾಳದ ಮೇಲಿನ ಪ್ರತಿಫಲದ ದರ ಬಹಳ ಕಡಿಮೆ : ಯೋಜನೆಗೆ ಸಂಬಂಧಿಸಿದ ಅನೇಕ ಕಾಗದಪತ್ರಗಳಲ್ಲಿ ಹಾಗೂ ಯೋಜನೆಗಳಲ್ಲಿ ಸೂಚಿಸಿದ ಪ್ರಕಾರ, ಸಾರ್ವಜನಿಕ ವಲಯದ ಸಂಸ್ಥೆಗಳು ಪ್ರತಿವರ್ಷ ಪ್ರತಿಶತ 12 ರಷ್ಟು ಪ್ರತಿಫಲವನ್ನು ಗಳಿಸಬೇಕಾಗಿತ್ತು. ಆದರೆ ಕೆಲವೇ ಸಾರ್ವಜನಿಕ ಸಂಸ್ಥೆಗಳು ಮಾತ್ರ ಇದನ್ನು ಸಾಧಿಸಿರುತ್ತವೆ. ಆದರೆ ಉಳಿದ ಅನೇಕ ಸಾರ್ವಜನಿಕ ಸಂಸ್ಥೆಗಳು ಅತಿ ಕಡಿಮೆ ದರದ ಪ್ರತಿಫಲವನ್ನು ಗಳಿಸಿದವು. ಕೆಲವು ಸಂಸ್ಥೆಗಳು ನಷ್ಟವನ್ನೂ ಅನುಭವಿಸುತ್ತಿವೆ.

2. ರಾಷ್ಟ್ರೀಯ ಉಳಿತಾಯಕ್ಕೆ ಅತಿ ಕಡಿಮೆ ಕೊಡುಗೆ : ಒಂದು ಸಮೀಕ್ಷೆಯ ಪ್ರಕಾರ, ಸಾರ್ವಜನಿಕ ಸಂಸ್ಥೆಗಳು ಕಳೆದ 40 ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಉಳಿತಾಯಕ್ಕೆ ಸಲ್ಲಿಸಿದ ವಂತಿಗೆಯ ಪ್ರಮಾಣವು 1950-51 ರಲ್ಲಿ ಶೇ. 17 ರಷ್ಟು ವಂತಿಗೆ ಸಲ್ಲಿಸುತ್ತಿತ್ತು. ಆದರೆ ಅದು 1989-90 ರಲ್ಲಿ ಶೇ. 8 ಕ್ಕೆ ಇಳಿಯಿತು. ಆದರೆ ಖಾಸಗಿ ವಲಯದ ಕಂಪನಿಗಳ ವಂತಿಗೆಯ ಪ್ರಮಾಣವು 1950-51 ರಿಂದ 1989-90 ರ 39 ವರ್ಷಗಳ ಅವಧಿಯಲ್ಲಿ ಶೇ. 9 ರಿಂದ 10 ರಷ್ಟು ಸ್ಥಿರವಾಗಿಯೇ ಉಳಿದಿದೆ. ರಾಷ್ಟ್ರೀಯ ಉಳಿತಾಯಕ್ಕೆ ಖಾಸಗಿ ವಲಯದ ವಂತಿಗೆಯೇನೂ ಸಮಾಧಾನಕರವಾಗಿಲ್ಲ. ಆದರೆ ಸಾರ್ವಜನಿಕ ವಲಯದ ವಂತಿಗೆಯು ಮಾತ್ರ ಇಳಿದಿರುವುದು ವಿಷಾದನೀಯವಾಗಿದೆ.

3. ಉತ್ಪಾದನಾ ಸಾಮರ್ಥ್ಯದ ಅಪೂರ್ಣ ಬಳಕೆ : ಸಾರ್ವಜನಿಕ ವಲಯದ ಅನೇಕ ಸಂಸ್ಥೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಪೂರ್ತಿ ಉಪಯೋಗಿಸಲು ಅಸಮರ್ಥವಾಗಿರುವುದು ಕಂಡುಬಂದಿದೆ. ಕೆಲವು ಸಾರ್ವಜನಿಕ ಸಂಸ್ಥೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚು-ಕಡಿಮೆ ಪೂರ್ತಿಯಾಗಿ ಇಲ್ಲವೆ ಸ್ವಲ್ಪ ಕಡಿಮೆ ಅಂದರೆ ಶೇ. 95 ರಿಂದ 97 ರಷ್ಟು ಉಪಯೋಗಿಸುತ್ತಿದ್ದರೆ ಬಹಳಷ್ಟು ಸಾರ್ವಜನಿಕ ಸಂಸ್ಥೆಗಳು ಶೇ. 70 ರಿಂದ ಶೇ. 50 ರವರೆಗೆ ಮಾತ್ರ ತಮ್ಮ ಸಾಮರ್ಥ್ಯವನ್ನು ಬಳಸುತ್ತಿವೆ.

4. ಸಿಬ್ಬಂದಿಯ ಪ್ರಮಾಣ ಅತ್ಯಧಿಕ : ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಸಿಬ್ಬಂದಿಯ ಪ್ರಮಾಣವು ಉದ್ಯೋಗಿಗಳ ಸಂಖ್ಯೆಯು ಮಿತಿಮೀರಿ ಅಧಿಕವಿದ್ದುದರಿಂದ ಅವುಗಳ ಆದಾಯದ ಬಹುಭಾಗವನ್ನು ಈ ಸಿಬ್ಬಂದಿಯ ವೆಚ್ಚಕ್ಕಾಗಿಯೇ ಬಳಸಲಾಗುತ್ತಿದೆ.

5. ಅತ್ಯಮೂಲ್ಯವಾದ ಸಂಪನ್ಮೂಲಗಳ ದುಂದು ವ್ಯಯ : ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಅತ್ಯಮೂಲ್ಯವಾದ ಸಂಪನ್ಮೂಲಗಳು ಅಧಿಕ ಪ್ರಮಾಣದಲ್ಲಿ ಹಾಳಾಗುತ್ತಿರುವುದು ಹಾಗೂ ಅವುಗಳ ಸದುಪಯೋಗದ ಮೇಲೆ ನಿಯಂತ್ರಣ ಇಲ್ಲದಿರುವುದು ಕಂಡುಬಂದಿದೆ.

ಇವೆಲ್ಲ ಕಾರಣಗಳಿಂದಾಗಿ ಸಾರ್ವಜನಿಕ ವಲಯದ ಸಂಸ್ಥೆಗಳ ಕಾರ್ಯನಿರ್ವಹಣೆಯು ದೋಷಯುಕ್ತವಾಗಿದ್ದರಿಂದ ಅವುಗಳ ಬಗೆಗೆ ಸರಕಾರವು ಮರು-ವಿಚಾರ ಮಾಡಬೇಕಾದ ಮತ್ತು ಖಾಸಗೀಕರಣದತ್ತ ಒಲವು ತೋರಿಸಬೇಕಾದ ಸಂದರ್ಭ ಒದಗಿ ಬಂದಿತು.

ಹೊಸ ಆರ್ಥಿಕ ನೀತಿ (New Economic Policy)

1980 ರ ದಶಕದಲ್ಲಿ ಸಮಗ್ರ ಆರ್ಥಿಕ ನೀತಿಗಳಾದ ಕೈಗಾರಿಕಾ ನೀತಿ, ಲೈಸೆನ್ಸ್‌  ನೀಡುವ ನೀತಿ, ರಾಜ್ಯಾದಾಯ ನೀತಿ, ವಿದೇಶ ವಿನಿಮಯ ದರ ನೀತಿ, ಆಮದು-ರಫ್ತು ನೀತಿ ಮತ್ತು ಹಣಕಾಸಿನ ನೀತಿಗಳೆಲ್ಲವೂ ಭಾರಿ ಬದಲಾವಣೆಗೊಳಗಾದವು. ಈ ಬದಲಾದ ನೀತಿಗಳ ಮೂಲಕ ಭಾರಿ ಪ್ರಮಾಣದ ‘ನಿಯಂತ್ರಿತ ಅರ್ಥವ್ಯವಸ್ಥೆ’ ಯಿಂದ ‘ಉದಾರೀಕರಣದ ಅರ್ಥ ವ್ಯವಸ್ಥೆ’ ಯತ್ತ ಭಾರತವು ಒಲಿಯತೊಡಗಿತು. ಹೀಗೆ ಬದಲಾವಣೆಗೊಳಗಾದ ನೀತಿಗಳನ್ನೊಳಗೊಂಡ ಸಮಗ್ರ ಆರ್ಥಿಕ ನೀತಿಗೆ ‘ಹೊಸ ಆರ್ಥಿಕ ನೀತಿ’ (New Economic Policy) ಎಂದು ಕರೆಯಲಾಗುತ್ತಿದೆ. ಈ ಹೊಸ ಆರ್ಥಿಕ ನೀತಿಯಿಂದಾಗಿ ದೇಶವು ‘ಲೈಸೆನ್ಸ್ ಪರ್ಮಿಟ್ ರಾಜ್’ (Licence Permit Raj) ದಿಂದ ದೂರ ಸರಿಯುತ್ತ ಖಾಸಗೀಕರಣ ಮತ್ತು ಮುಕ್ತ ಅರ್ಥವ್ಯವಸ್ಥೆಯತ್ತ ಸಾಗತೊಡಗಿತು. ಇದಕ್ಕೆ ‘ಆರ್ಥಿಕ ಉದಾರೀಕರಣ’ (Economic Liberalisation) ಎಂದು ಕರೆಯಲಾಗಿದೆ. ಅಂದರೆ ನಿಯಂತ್ರಣಗಳನ್ನು ಸಡಿಲಿಸಲಾಯಿತು. ಲೈಸೆನ್ಸುಗಳನ್ನು ಕಡಿಮೆ ಮಾಡಲಾಯಿತು. ಆರ್ಥಿಕ ಚಟುವಟಿಕೆಗಳ ಮೇಲಿನ ಹಲವಾರು ನಿರ್ಬಂಧಗಳನ್ನು ತೆಗೆದು ಹಾಕಲಾಯಿತು. ಆದ್ದರಿಂದಲೇ ಇದಕ್ಕೆ ಆರ್ಥಿಕ ಉದಾರೀಕರಣ ಎಂದು ಕರೆಯಲಾಯಿತು. ಆದರೆ ಆರ್ಥಿಕ ಉದಾರೀಕರಣ ಎಂದರೆ ಸರಕಾರದ ಹಸ್ತಕ್ಷೇಪವಿಲ್ಲದ ಮುಕ್ತ ವ್ಯಾಪಾರ ನೀತಿಯಲ್ಲ.

ಆರ್ಥಿಕ ಉದಾರೀಕರಣ ಅಥವಾ ಹೊಸ ಆರ್ಥಿಕ ನೀತಿಯು ಅಪೇಕ್ಷಣೀಯವಲ್ಲದ ನಿರ್ಬಂಧಗಳನ್ನು ನಿಯಂತ್ರಣಗಳನ್ನು ಮತ್ತು ಉತ್ಪಾದನೆ, ಆಮದು ಮತ್ತು ಬಂಡವಾಳ ವಿನಿಯೋಗಗಳಿಗಾಗಿ ಲೈಸೆನ್ಸ್‌ ನೀಡುವ ವಿಧಾನಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿರುತ್ತದೆ. ಹೀಗೆ ಹೊಸ ಆರ್ಥಿಕ ನೀತಿಯು ಸಂಪನ್ಮೂಲಗಳ ವಿನಿಯೋಗದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವ ಗುರಿಯನ್ನು ಹೊಂದಿದೆಯೇ ಹೊರತು ಅದು ಸರಕಾರದ ತಾಟಸ್ಥ್ಯ ನೀತಿಯಾಗಿರುವುದಿಲ್ಲ. ಹೊಸ ಆರ್ಥಿಕ ನೀತಿಯ ಪ್ರಮುಖ ಲಕ್ಷಣಗಳು ಇಂತಿವೆ :

1. ನಿಯಂತ್ರಣದ ಬದಲು ಪೈಪೋಟಿಯನ್ನು ಉಂಟುಮಾಡುವುದು.

2. ಕೈಗಾರಿಕೆಗಳಿಗೆ ಲೈಸೆನ್ಸ್‌ ನೀಡುವ ವಿಧಾನವನ್ನು ಕ್ರಮೇಣ ತೆಗೆದು ಹಾಕುವುದು.

 3. ವ್ಯಾಪಾರಿ ಕ್ಷೇತ್ರದಲ್ಲಿ ಉದಾರೀಕರಣವನ್ನು ಮತ್ತು ಆಮದು-ರಫ್ತು ವ್ಯಾಪಾರದಲ್ಲಿ ಪೈಪೋಟಿಯನ್ನು ಅನುಷ್ಠಾನಗೊಳಿಸುವುದು.

4. ರಾಜ್ಯಾದಾಯ ನೀತಿಯನ್ನು ಪೂರ್ತಿಯಾಗಿ ಹೊಸ ವ್ಯವಸ್ಥೆಗನುಗುಣವಾಗಿ ಪುನ ರೂಪಿಸುವುದು.

5. ಏಕಸ್ವಾಮ್ಯ ಮತ್ತು ಪ್ರತಿಬಂಧಿತ ವ್ಯಾಪಾರಿ ಚಟುವಟಿಕೆಗಳ ಕಾನೂನಿಗೆ (MRTP Act) ಅವಶ್ಯವಾದ ತಿದ್ದುಪಡಿಗಳನ್ನು ಮಾಡುವುದು ಮತ್ತು ತನ್ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಹಾಗೂ ಸಣ್ಣ ಕಂಪನಿಗಳು ಸಾಕಷ್ಟು ಬಂಡವಾಳವನ್ನು ವಿನಿಯೋಗಿಸಲಾರದಂಥ ಬೃಹತ್ ಕೈಗಾರಿಕೆಗಳಲ್ಲಿ ಅವು ತಮ್ಮ ಸಂಪನ್ಮೂಲಗಳನ್ನು ವಿನಿಯೋಗಿಸುವಂತೆ ಮಾಡುವುದು.

6. ವಿದೇಶಿ ಬಂಡವಾಳ ಮತ್ತು ವಿದೇಶಿ ತಂತ್ರಜ್ಞಾನಗಳು ದೇಶದೊಳಗೆ ಸರಳವಾಗಿ ಹಾಗೂ ಸುಲಭವಾಗಿ ಹರಿದುಬರುವಂತಹ ಉದಾರ ನೀತಿಯನ್ನು ಅನುಸರಿಸುವುದು.

7.  ಖಾಸಗಿ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು.

8. ದೇಶವನ್ನು 21 ನೇ ಶತಮಾನಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ ಅರ್ಥವ್ಯವಸ್ಥೆಯ ಎಲ್ಲ ರಂಗಗಳಲ್ಲಿ ತಂತ್ರಜ್ಞಾನದ ಮಟ್ಟವನ್ನು ಸುಧಾರಿಸುವುದು. ಮತ್ತು

9, ರಾಜ್ಯಾದಾಯ, ಆಮದು ಮತ್ತು ರಫ್ತು ನೀತಿಗಳಲ್ಲಿ ಆಗಾಗ್ಗೆ ತಾತ್ಕಾಲಿಕವಾಗಿ ಬದಲಾವಣೆಗಳನ್ನು ಮಾಡುವುದಕ್ಕೆ ಬದಲು ದೀರ್ಘಾವಧಿಯ ದೃಷ್ಟಿಯಿಂದ ಬದಲಾವಣೆಗಳನ್ನು ಮಾಡುವುದು.

ಒಟ್ಟಿನಲ್ಲಿ ಹೇಳಬೇಕೆಂದರೆ, ಹೊಸ ಆರ್ಥಿಕ ನೀತಿಯು ದೇಶದ ಅರ್ಥವ್ಯವಸ್ಥೆಯನ್ನು ಅಧಿಕಾರಶಾಹಿ ಸಂಕೋಲೆಗಳಿಂದ ಮುಕ್ತಮಾಡಿ, ನಿಯಂತ್ರಣಗಳನ್ನು ಸಡಿಲಗೊಳಿಸಿ, ಔದ್ಯಮಿಕ ಬೆಳವಣಿಗೆಯತ್ತ ಸಾಗಿಸುವ ಗುರಿಯನ್ನು ಹೊಂದಿರುತ್ತದೆ. ಅಂದರೆ ಹೊಸ ಆರ್ಥಿಕ ನೀತಿಯು ದೇಶದಲ್ಲಿ ಪರಿಪೂರ್ಣ ಮುಕ್ತ ಮಾರುಕಟ್ಟೆಯ ವ್ಯವಸ್ಥೆಯನ್ನು ಅಳವಡಿಸುವದೇ ಎಂದು ಯಾರಾದರೂ ಕೇಳಬಹುದು. ಆದರೆ ಹಾಗಲ್ಲವೆಂದೇ ಅದಕ್ಕೆ ಉತ್ತರ ಹೇಳಬೇಕಾಗುತ್ತದೆ. ನಮ್ಮ ಮಾದರಿಯ ಸಮಾಜವನ್ನು ಸ್ಥಾಪಿಸಲು ಸರಕಾರವು ಹೇಗೆ ದೇಶದಲ್ಲಿ ಸಮಾಜವಾದಿ ತತ್ವವನ್ನು ಜಾರಿಗೊಳಿಸಲು ತೀರ್ಮಾನಿಸಿದೆಯೋ ಹಾಗೂ ಇಂಥ ಸಮಾಜವು ಹೇಗೆ ಪರಿಪೂರ್ಣವಾದ ಸಮಾಜವಾದಿಯಾಗಿರುವುದಿಲ್ಲವೋ ಅದೇ ರೀತಿಯಾಗಿ ಉದಾರೀಕರಣದ ನೀತಿಯು ಪರಿಪೂರ್ಣವಾದ ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಾಗಿರುವುದಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಸಮಾಜವಾದಿ ಮಾದರಿಯ ಸಮಾಜವೆಂದರೆ ಹೇಗೆ ಪರಿಪೂರ್ಣವಾದ ಸಮಾಜವಾದವಲ್ಲವೋ ಹಾಗೇಯೇ ಉದಾರೀಕರಣವು ಪರಿಪೂರ್ಣವಾದ ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಾಗುವುದಿಲ್ಲ.

ಸರಕಾರವು ತ್ವರಿತಗತಿಯಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಸಾಧಿಸಲು, ಸಂಪತ್ತು ಮತ್ತು ಆದಾಯಗಳ ಹಂಚಿಕೆಯಲ್ಲಿನ ಅಸಮಾನತೆಯನ್ನು ಕಡಿಮೆ ಮಾಡಲು, ಆರ್ಥಿಕ ಶಕ್ತಿಯ ಕೇಂದ್ರೀಕರಣವನ್ನು ನಿವಾರಿಸಲು ಮತ್ತು ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳನ್ನು ಈಡೇರಿಸಲು ಹಾಗೂ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಪರಸ್ಪರ ಪೂರಕವಾಗಿ ಹಾಗೂ ಪೋಷಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಬೇಕಾದರೆ ಮಿಶ್ರ ಅರ್ಥವ್ಯವಸ್ಥೆಯೇ ಅತ್ಯಂತ ಯೋಗ್ಯವಾದ ವ್ಯವಸ್ಥೆಯಾಗಿದೆಯೆಂದು ತೀರ್ಮಾನಿಸಿ, ಅದನ್ನು ಅನುಷ್ಠಾನಗೊಳಿಸಲು ೧೯೫೦ರ ದಶಕದಿಂದಲೇ ಪ್ರಾರಂಭಿಸಿತು. ಈ ದಿಶಯಲ್ಲಿ ಅನೇಕ ಕಾನೂನುಗಳನ್ನು ಪಾಸು ಮಾಡಿ ದೇಶದಲ್ಲಿ ‘ಲೈಸೆನ್ಸ್‌ ಪರ್ಮಿಟ್-ಸಬ್ಸಿಡಿ-ರಾಜ’ (Licence-Permit-Subsidy Raj) ವನ್ನು ಸ್ಥಾಪಿಸಲು ಕ್ರಮ ಕೈಕೊಂಡಿತು. ಇದರ ಪರಿಣಾಮವಾಗಿ ಖಾಸಗಿ ವಲಯದ ಮೇಲೆ ಅನೇಕ ನಿಯಂತ್ರಣಗಳು ಮತ್ತು ನಿರ್ಬಂಧಗಳನ್ನು ಹೇರಲಾಯಿತು. ಸಾರ್ವಜನಿಕ ವಲಯವನ್ನು ಅಧಿಕವಾಗಿ ವಿಸ್ತರಿಸಲಾಯಿತು. ಪ್ರತಿಯೊಂದಕ್ಕೂ ಲೈಸೆನ್ಸ್ ಅಥವಾ ಪರ್ಮಿಟ್ ಪಡೆಯುವುದು ಅವಶ್ಯವಾಯಿತು. ಸರಕಾರಿ ಅಧಿಕಾರಿಗಳು ಬಲಶಾಲಿಗಳಾದರು. ಅಧಿಕಾರಶಾಹಿಯು ಜನತೆಯನ್ನು ಮತ್ತು ವ್ಯಾಪಾರೋದ್ಯಮಿಗಳನ್ನು ಪೀಡಿಸತೊಡಗಿತು. ಲೈಸೆನ್ಸ್ ಮತ್ತು ನಿಯಂತ್ರಣಗಳಿಂದ ಹಲವಾರು ಪ್ರಯೋಜನಗಳಾದರೂ ಅನಿಷ್ಟಗಳೇ ಅಧಿಕವಾದವು. ವಿಳಂಬ, ಹೊಂದಾಣಿಕೆಯ ಅಭಾವ, ಪೈಪೋಟಿಯ ಅಭಾವ, ಅದಕ್ಷತೆ, ಕೈಗಾರಿಕೆಗಳ ಕುಂಠಿತ ಬೆಳವಣಿಗೆ, ಸಮಾಂತರ ಅರ್ಥವ್ಯವಸ್ಥೆಯ ಬೆಳವಣಿಗೆ, ಲಂಚ-ಋಷುವತ್ತು- ಭ್ರಷ್ಟಾಚಾರಗಳ ದುರಾಡಳಿತ, ಪಕ್ಷಪಾತತನ, ಗ್ರಾಹಕರ-ಕಾರ್ಮಿಕರ-ಬಡರೈತರ ಸುಲಿಗೆ-ಶೋಷಣೆ, ಅತ್ಯಮೂಲ್ಯವಾದ ಸಂಪನ್ಮೂಲಗಳ ದುರುಪಯೋಗ, ದುಂದು ಬಳಕೆ, ಅಪವ್ಯಯ, ಬೆಲೆ ಏರಿಕೆ ಇವೇ ಅಧಿಕವಾಗಿದ್ದವು. ಆದ್ದರಿಂದ ಇವೆಲ್ಲ ಅನಿಷ್ಟಗಳನ್ನು ನಿವಾರಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳಬೇಕೆಂದು ಸರಕಾರದ ಮೇಲೆ ಭಾರೀ ಒತ್ತಡ ತರಲಾಯಿತು. ಸರಕಾರವು ಲೈಸೆನ್ಸ್-ಪರ್ಮಿಟ್ಟು ನಿಯಂತ್ರಣಗಳ ಮೂಲಕ ಕೈಕೊಂಡ ಕ್ರಮಗಳಿಂದ ಅಹಿತಕರವಾದ ಪರಿಣಾಮಗಳೇ ಉಂಟಾಗಿದ್ದರಿಂದ ಅವುಗಳನ್ನು ಸಡಿಲಿಸಲು ಹಾಗೂ ಅವುಗಳ ಬದಲು ಉದಾರೀಕರಣವನ್ನು ಅನುಷ್ಠಾನಗೊಳಿಸಲು ಸರಕಾರವನ್ನು ಒತ್ತಾಯಿಸಲಾಯಿತು. ಇವೆಲ್ಲವುಗಳ ಪರಿಣಾಮವೇ ಹೊಸ ಆರ್ಥಿಕ ನೀತಿ ಮತ್ತು ಹೊಸ ಆರ್ಥಿಕ ಸುಧಾರಣೆಗಳು.

 

ಹೊಸ ಆರ್ಥಿಕ ಸುಧಾರಣೆಗಳು (New Economic Reforms)

ಹೊಸ ಆರ್ಥಿಕ ನೀತಿಯ ಪ್ರಕಾರ ಹೊಸ ಆರ್ಥಿಕ ಸುಧಾರಣೆಗಳನ್ನು ಒಮ್ಮೆಲೇ ಅನುಷ್ಠಾನದಲ್ಲಿ ತಂದಿಲ್ಲ. ಅವುಗಳನ್ನು ಕ್ರಮೇಣ 70 ರಿಂದ 90 ರ ಎರಡು ದಶಕಗಳ ಅವಧಿಯಲ್ಲಿ ಅನುಷ್ಠಾನದಲ್ಲಿ ತರಲಾಗಿದೆ. ಈ ಅವಧಿಯನ್ನು ನಾಲ್ಕು ಪ್ರಕಾರವಾಗಿ ವಿಂಗಡಿಸಬಹುದು

(ಅ) ಪ್ರಥಮ ಹಂತ – 1975 ರಿಂದ 1980

(ಬ) ಎರಡನೆಯ ಹಂತ 1980 ರಿಂದ 1985

(ಕ) ಮೂರನೆಯ ಹಂತ – 1985 ರಿಂದ 1990

(ಡ) ನಾಲ್ಕನೆಯ ಹಂತ – 1991 ರಿಂದ

(ಅ) ಪ್ರಥಮ ಹಂತ (1975 ರಿಂದ 1980 ರ ಅವಧಿಯಲ್ಲಿ)

ಕೇಂದ್ರ ಸರಕಾರವು ಕೈಗಾರಿಕೆಗಳಿಗೆ ಲೈಸೆನ್ಸ್‌ ನೀಡುವ ವಿಧಾನವನ್ನು ಪ್ರಪ್ರಥಮವಾಗಿ ಉದಾರೀಕರಣಗೊಳಿಸಿದ್ದು 1975 ರ ಅಕ್ಟೋಬರದಲ್ಲಿ. ಆಗ ಅದು 21 ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಲೈಸೆನ್ಸ್‌  ಪಡೆಯುವದರಿಂದ ಮುಕ್ತಗೊಳಿಸಿತು. ಅವು ಲೈಸೆನ್ಸ್‌  ಪಡೆಯದೇ ಹೊಸ ಸಂಸ್ಥೆಗಳನ್ನು ಸ್ಥಾಪಿಸಬಹುದು. ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಹೊಸ ವಸ್ತುಗಳನ್ನು ಉತ್ಪಾದಿಸಬಹುದೆಂದು ಸರಕಾರವು ಸ್ಪಷ್ಟಪಡಿಸಿತು. ಅಲ್ಲದೆ ಅವು ತಮ್ಮ ಸದ್ಯದ ಉತ್ಪಾದನಾ ಸಾಮರ್ಥ್ಯವನ್ನು ಪೂರ್ತಿಯಾಗಿ ಉಪಯೋಗಿಸಲು ಮುಕ್ತ ಅನುಮತಿ ನೀಡಿತು. ವಿದೇಶಿ ಕಂಪನಿಗಳಿಗೂ ಮತ್ತು ಕೈಗಾರಿಕೆಗಳಲ್ಲಿನ 30 ಏಕಸ್ವಾಮ್ಯಗಳಿಗೂ ತಮ್ಮ ಉತ್ಪಾದನೆಯನ್ನು ಬೇಕಾದಷ್ಟು ಹೆಚ್ಚಿಸಲು ಅವಕಾಶ ನೀಡಿತು. ದೇಶದಲ್ಲಿ ಕಂಡುಬರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಮೂಲ ಹಾಗೂ ಮಹತ್ವದ ಕೈಗಾರಿಕೆಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದೇ ಈ ಸಡಿಲಿಕೆಯ ಗುರಿಯಾಗಿತ್ತು.

1978 ರಲ್ಲಿ ಲೈಸೆನ್ಸ್‌ ನೀಡುವ ನೀತಿಯನ್ನು ಮತ್ತಷ್ಟು ಸಡಿಲಗೊಳಿಸಲಾಯಿತು ಹಾಗೂ ವಿದೇಶೀ ಬಂಡವಾಳವನ್ನು ಆಕರ್ಷಿಸಲು ಉದಾರ ನೀತಿಯನ್ನು ಅನುಸರಿಸಲಾಯಿತು. ಮುಂದೆ 1978- 79 ಹಾಗೂ 1979-80 ರಲ್ಲಿ ಸಹ ಸರಕಾರವು ಕೈಗಾರಿಕೆಗಳಿಗೆ ಮತ್ತು ಆಮದುಗಳಿಗೆ ಸಂಬಂಧಿಸಿದಂತೆ ತನ್ನ ಲೈಸೆನ್ಸ್‌  ನೀತಿಯನ್ನು ಬಹಳಷ್ಟು ಸಡಿಲಗೊಳಿಸಿತು.

(ಬ) ಎರಡನೆಯ ಹಂತ (1980 ರಿಂದ 1985 ರ ಅವಧಿಯಲ್ಲಿ)

1980 ರ ಔದ್ಯಮಿಕ ನೀತಿಯು ಕೈಗಾರಿಕೆಗಳಿಗೆ ಲೈಸೆನ್ಸ್ ನೀಡುವ ವಿಧಾನದಲ್ಲಿ ಸರಕಾರವು ಮತ್ತಷ್ಟು ಉದಾರಗೊಳಿಸಿತು ಮತ್ತು ಕೈಗಾರಿಕೆಗಳ ಮೇಲಿನ ನಿಯಂತ್ರಣವನ್ನೂ ಸಡಿಲಗೊಳಿಸಿತು. ಅದು ಉದಾರೀಕರಣದ ಎರಡು ಕ್ರಮಗಳನ್ನು ಜಾರಿಗೆ ತಂದಿತು : (i) ವಿಚಾರಾಪೇಕ್ಷೆಯಿಲ್ಲದ ಬೆಳವಣಿಗೆಯ ಸೌಲಭ್ಯವನ್ನು ಒದಗಿಸುವುದು (Automatic Growth Facility), ಮತ್ತು (ii) ಹೆಚ್ಚಿನ ಸಾಮರ್ಥ್ಯವನ್ನು ಕ್ರಮಬದ್ಧಗೊಳಿಸುವುದು. 1982 ರಲ್ಲಿ ಸರಕಾರವು ತನ್ನ ಲೈಸೆನ್ಸ್‌  ನೀತಿಯನ್ನು ಮತ್ತೆ ಸಡಿಲಿಸಿತು. ಹೀಗೆ ಅನೇಕ ಉದ್ದಿಮೆ ಸಂಸ್ಥೆಗಳಿಗೆ ಯಾವ ಲೈಸೆನ್ಸನ್ನೂ ಪಡೆಯದ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಯಿತು. 1980-85 ರ ಅವಧಿಯಲ್ಲಿ ಸರಕಾರವು ವಿದೇಶೀ ಸಹಯೋಗ ಮತ್ತು ವಿದೇಶಿ ಖಾಸಗಿ ಬಂಡವಾಳಗಳಿಗೆ ಸಂಬಂಧಿಸಿದಂತೆ ಉದಾರವಾದ ನೀತಿಯನ್ನು ಅನುಸರಿಸಿತು. ಹೀಗೆ ಈ ಅವಧಿಯಲ್ಲಿನ ಉದಾರೀಕರಣವು ಹಿಂದಿನ ಅವಧಿಗಿಂತಲೂ ಅಧಿಕ ಪ್ರಮಾಣದಲ್ಲಾಯಿತೆಂದು ಹೇಳಬಹುದು. ಆದರೂ ಅದು ಅತಿ ಕಡಿಮೆ ಪ್ರಮಾಣದಲ್ಲಿತ್ತೆಂದು ಹೇಳಬಹುದು.

ಮೂರನೆಯ ಹಂತ (1985 ರಿಂದ 1990 ರ ಅವಧಿಯಲ್ಲಿ)

ಹಿಂದಿನ ಉದಾರೀಕರಣದ ಮೂರನೆಯ ಹಂತವು (1985-90) ‘ಭಾರತದ ಪರಸ್ಕೋಯಿಕಾ’ (Indian Perestroika) ಅಂದರೆ ಆರ್ಥಿಕ ಸುಧಾರಣೆಯ ಕ್ರಮಗಳ ಹಂತವೆಂದೇ ಹೇಳಬಹುದು. ಭಾರತದ ಅರ್ಥವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಹಾಗೂ ಭಾರತದ ಅರ್ಥವ್ಯವಸ್ಥೆಯನ್ನು ವಿದೇಶಗಳಿಗೆ ಮುಕ್ತವಾಗಿಡಲು ಮತ್ತು ಆಂತರಿಕವಾಗಿ ದೇಶದ ಅರ್ಥವ್ಯವಸ್ಥೆಯಲ್ಲಿ ಪೈಪೋಟಿಯ ಸಾಮರ್ಥ್ಯವನ್ನು ತುಂಬಲು ಪ್ರಯತ್ನಗಳನ್ನು ಮಾಡಲಾಯಿತು. ಉದಾರೀಕರಣವು ಈ ಅವಧಿಯಲ್ಲಿ ನಾಲ್ಕು ಅಂಶಗಳನ್ನು ಒಳಗೊಂಡಿತ್ತು. ಅವು ಯಾವುವೆಂದರೆ-

(i), ವಿಕೃತ-ಬಂಧನದ ವಿಸ್ತಾರ (Broad-banding) ದ ಪ್ರಕಾರ ಕೈಗಾರಿಕೆಗಳು ಸರಕಾರದ ಅನುಮತಿಯಿಲ್ಲದೆ ತಮ್ಮ ಸಾಮರ್ಥ್ಯದಲ್ಲಿ ಯಾವುದೇ ಹೊಸ ವಸ್ತುವನ್ನು ಉತ್ಪಾದಿಸಬಹುದು.

(ii) ಬೃಹತ್‌ ಪ್ರಮಾಣದ ಮಿತವ್ಯಯಗಳ ಕನಿಷ್ಟ ಮಟ್ಟದ ಪ್ರಕಾರ ಉದ್ದಿಮೆ ಘಟಕವು ವಿಚಾರಾಪೇಕ್ಷೆಯಿಲ್ಲದೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದು.

(iii) ತಾಂತ್ರಿಕ ಮಟ್ಟದ ಸುಧಾರಣೆಯ ಪ್ರಕಾರ MRTP ಮತ್ತು FERA ಕಂಪನಿಗಳೂ ಸಹ ಸರಕಾರದ ಅನುಮತಿಯಿಲ್ಲದೆ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಉತ್ಪಾದಿಸಲು ಪ್ರಾರಂಭಿಸಬಹುದು. ಮತ್ತು (

iv) ಉದಾರವಾದ ವಿದೇಶಿ ಬಂಡವಾಳ ವಿನಿಯೋಗ ಮತ್ತು ವಿದೇಶಿ ತಂತ್ರಜ್ಞಾನದ ಬಳಕೆ ಇದರ ಪ್ರಕಾರ ಕೆಲವೊಂದು ಷರತ್ತುಗಳಿಗೊಳಪಟ್ಟು ವಿದೇಶಿ ಬಂಡವಾಳ ಮತ್ತು ವಿದೇಶೀ ತಂತ್ರ ಜ್ಞಾನಗಳಿಗೆ ಮುಕ್ತ ಪ್ರವೇಶ ನೀಡುವುದು.

1985 ರಲ್ಲಿ ರಾಜೀವ ಗಾಂಧಿಯವರು ಪ್ರಧಾನ ಮಂತ್ರಿಗಳಾದ ಕೂಡಲೇ ಸರಕಾರದ ಹೊಸ ಆರ್ಥಿಕ ನೀತಿಯನ್ನು ಮತ್ತು ಖಾಸಗೀಕರಣದತ್ತ ಇರುವ ತಮ್ಮ ಒಲವನ್ನು ಘೋಷಿಸಿದರು. ಖಾಸಗಿ ವಲಯವು ಈಗಿರುವದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತನ್ನ ಪಾತ್ರವನ್ನು ವಹಿಸಬೇಕಾಗಿದೆಯೆಂದೂ, ಸಾರ್ವಜನಿಕ ವಲಯವು ತಾನು ಪ್ರವೇಶಿಸಬಾರದ ಕ್ಷೇತ್ರಗಳಲ್ಲಿಯೂ ಪ್ರವೇಶಿಸಿದ್ದರಿಂದ ಅದು ವಿಫಲವಾಗಿದ್ದು, ಅದನ್ನು ಸರಿಪಡಿಸುವುದು ಅತ್ಯಾವಶ್ಯಕವಾಗಿದೆಯೆಂದೂ ಸ್ಪಷ್ಟಪಡಿಸಿದರು.

ಖಾಸಗಿ ವಲಯಕ್ಕೆ ಹೆಚ್ಚಿನ ಸ್ಥಾನ ನೀಡಲು ಅವರು ಆರ್ಥಿಕ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದರು. ಕೈಗಾರಿಕೆಗಳಿಗೆ ಲೈಸೆನ್ಸ್ ನೀಡುವ ಪದ್ಧತಿ, ಆಮದು-ರಫ್ತು ನೀತಿ, ತಾಂತ್ರಿಕ ಜ್ಞಾನದ ಸುಧಾರಣೆ, ರಾಜ್ಯಾದಾಯ ನೀತಿ, ವಿದೇಶಿ ಬಂಡವಾಳದ ನೀತಿ ಇವೆಲ್ಲವುಗಳಲ್ಲಿ ಖಾಸಗಿ ವಲಯಕ್ಕೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಲಾಯಿತು ಹಾಗೂ ನಿರ್ಬಂಧ ಮತ್ತು ನಿಯಂತ್ರಣಗಳನ್ನು ತೆಗೆದುಹಾಕಲಾಯಿತು. ರಾಜ್ಯಾದಾಯ ಮತ್ತು ಆಡಳಿತದ ವ್ಯವಸ್ಥೆಯನ್ನು ಸಮಗ್ರ ಬದಲಾಯಿಸಿ ಸರಳಗೊಳಿಸಲಾಯಿತು. ಇದರಿಂದ ಖಾಸಗಿ ವಲಯವು ಅನಿರ್ಬಂಧವಾಗಿ ಬೆಳೆಯುವುದಕ್ಕೆ ಸಾಧ್ಯವಾಯಿತು.

ಈ ಅವಧಿಯಲ್ಲಿ ಸರಕಾರವು ಕೈಕೊಂಡ ಪ್ರಮುಖ ಕ್ರಮಗಳು ಇಂತಿವೆ :

1.  ಸಿಮೆಂಟ್ ಕೈಗಾರಿಕೆಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಲಾಯಿತು ಮತ್ತು ಖಾಸಗಿ ವಲಯದಲ್ಲಿನ ಅನೇಕ ಕೈಗಾರಿಕಾ ಸಂಸ್ಥೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು.

2. ಸಕ್ಕರೆ ಕೈಗಾರಿಕೆಯಲ್ಲಿ ಮುಕ್ತ ಮಾರಾಟದ ಸಕ್ಕರೆಯ ಪಾಲನ್ನು ಹೆಚ್ಚಿಸಲಾಯಿತು.

3.  MRTP ಕಂಪನಿಗಳ ಗರಿಷ್ಠ ಬಂಡವಾಳದ ಮಿತಿಯನ್ನು 20 ಕೋಟಿ ರೂ. ಗಳಿಂದ 100 ಕೋಟಿ ರೂ. ಗಳಿಗೆ ಏರಿಸಲಾಯಿತು.

4. 94 ಔಷಧಗಳನ್ನು ವಿನಿಯಂತ್ರಣಗೊಳಿಸಲಾಯಿತು ಹಾಗೂ 27 ಕೈಗಾರಿಕೆಗಳನ್ನು MRTP ಕಾನೂನಿನಿಂದ ಹೊರಗಿಡಲಾಯಿತು.

5. 1985 ರ ಹೊಸ ಬಟ್ಟೆಯ ನೀತಿಯ ಮೂಲಕ ಗಿರಣಿ ಬಟ್ಟೆ, ವಿದ್ಯುತ್-ಚಾಲಿತ ಬಟ್ಟೆ ಮತ್ತು ಕೈಮಗ್ಗದ ಬಟ್ಟೆಗಳ ನಡುವಿನ ವ್ಯತ್ಯಾಸವನ್ನು ತೆಗೆದು ಹಾಕಲಾಯಿತು.

6. ಇಲೆಕ್ಟ್ರಾನಿಕ್ ಕೈಗಾರಿಕೆಯನ್ನು MRTP ಕಾನೂನಿನ ನಿರ್ಬಂಧಗಳಿಂದ ಮುಕ್ತಗೊಳಿಸ ಲಾಯಿತು. ವಿದೇಶಿ ಕಂಪನಿಗಳಿಗೆ ಈ ಕೈಗಾರಿಕೆಗೆ ಪ್ರವೇಶವನ್ನು ನೀಡಲಾಯಿತು.

7. ಆಮದು-ರಫ್ತು ನೀತಿಯನ್ನು ಬಹಳಷ್ಟು ಉದಾರಗೊಳಿಸಲಾಯಿತು.

 

(ಡ) ನಾಲ್ಕನೆಯ ಹಂತ (ಎಪ್ರಿಲ್ 1991 ರಿಂದ)

ಈ ಹಿಂದಿನ ಅವಧಿಯಲ್ಲಿ ಸರಕಾರವು ಅನೇಕ ಕ್ರಮಗಳನ್ನು ಕೈಕೊಂಡರೂ ಪರಿಸ್ಥಿತಿ ಸುಧಾರಿಸಲಿಲ್ಲ. ಶ್ರೀ ಪಿ. ವಿ. ನರಸಿಂಹರಾವ ಅವರ ನೇತೃತ್ವದ ಸರಕಾರವು ಸಂದಾಯ ಬಾಕಿಯ ಕೊರತೆಯನ್ನು ನೀಗಿಸಲು ವಿಶ್ವಬ್ಯಾಂಕ ಮತ್ತು ಅಂತಾರಾಷ್ಟ್ರೀಯ ಹಣಕಾಸಿನ ನಿಧಿಗಳನ್ನು ಸಂಪರ್ಕಿಸಿ 7,000 ಶತ ಕೋಟಿ ಡಾಲರ್ ಸಾಲ ನೀಡಲು ಕೇಳಿಕೊಂಡಿತು. ಈ ಎರಡೂ ಸಂಸ್ಥೆಗಳು ಭಾರತ ಸರಕಾರದ ಮೇಲೆ ಖಾಸಗೀಕರಣದ ವಿಸ್ತಾರದ ಷರತ್ತನ್ನು ಹಾಕಿ ಸಾಲವನ್ನು ನೀಡಿದವು. 1991 ಜುಲೈ 24 ರಂದು ಸರಕಾರವು ತನ್ನ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಿತು. ಕೈಗಾರಿಕೆಗಳ ತ್ವರಿತ ಬೆಳವಣಿಗೆಗಾಗಿ ಔದ್ಯಮಿಕ ರಂಗದಲ್ಲಿ ಕ್ರಾಂತಿಕಾರಕವಾದ ವ್ಯಾಪಕ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ಮಾಡಿತು. ಆಯ್ದ 18 ಕೈಗಾರಿಕೆಗಳನ್ನು ಹೊರತು ಪಡಿಸಿ, ಉಳಿದೆಲ್ಲ ಕೈಗಾರಿಕೆಗಳಿಗೆ ಲೈಸೆನ್ಸ್‌  ನೀಡುವ ಪದ್ಧತಿಯನ್ನು ರದ್ದುಪಡಿಸಿತು. ಖಾಸಗಿ ಕೈಗಾರಿಕೆಗಳ ಮೇಲೆ ಹೇರಿದ ಅನೇಕ ಸಂಕೋಲೆಗಳನ್ನು ಮತ್ತು ನಿರ್ಬಂಧಗಳನ್ನು ತೆಗೆದು ಹಾಕಿತು. ಭಾರಿ ಪ್ರಮಾಣದ ಕೈಗಾರಿಕೆಗಳಿಗೆ ಹಾಕಿದ್ದ ಬಂಡವಾಳದ ಮಿತಿಯನ್ನು ರದ್ದು ಪಡಿಸಿತು. ವಿದೇಶಿ ಬಂಡವಾಳದ ಮೀತಿಯನ್ನು ಶೇ. 40 ರಿಂದ ಶೇ. 51 ಏರಿಸಿತು.

ಸರಕಾರವು ಖಾಸಗಿ ವಲಯದ ಕೈಗಾರಿಕೆಗಳ ವಿಸ್ತರಣೆಗಾಗಿ ಮತ್ತು ಆರ್ಥಿಕ ಸುಧಾರಣೆಗಳಿಗಾಗಿ ಈ ಕೆಳಗೆ ಕೊಟ್ಟ ಕ್ರಮಗಳನ್ನು ತೆಗೆದುಕೊಂಡಿತು :

1. ವಿತ್ತೀಯ ನೀತಿಯ ಸುಧಾರಣೆಗಳು (Fiscal Policy Reforms)

2. ಹಣಕಾಸಿನ ನೀತಿಯ ಸುಧಾರಣೆಗಳು

3. ಬೆಲೆ ನೀತಿಯ ಸುಧಾರಣೆಗಳು

4. ವಿದೇಶಿ ನೀತಿಯ ಸುಧಾರಣೆಗಳು

5. ಕೈಗಾರಿಕಾ ನೀತಿಯ ಸುಧಾರಣೆಗಳು

6.  ವಿದೇಶಿ ಬಂಡವಾಳ ಹೂಡಿಕೆಯ ನೀತಿಯ ಸುಧಾರಣೆಗಳು

7. ವ್ಯಾಪಾರ ನೀತಿಯ ಸುಧಾರಣೆಗಳು

8. ಸಾರ್ವಜನಿಕ ವಲಯದ ನೀತಿಯ ಸುಧಾರಣೆಗಳು,

 

ಸರಕಾರವು ಈ ದಿಶೆಯಲ್ಲಿ ತೆಗೆದುಕೊಂಡಕ್ರಮಗಳನ್ನು ಕೆಳಗೆ ವಿವರಿಸಿದೆ:

1. 1991ರ ಕೈಗಾರಿಕಾ ನೀತಿ : ಸರಕಾರವು ಜುಲೈ 24, 1991 ರಂದು ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸಿತು. ಈ ಹೊಸ ಕೈಗಾರಿಕಾ ನೀತಿಯು ಈ ವರೆಗೆ ಖಾಸಗಿ ವಲಯದ ಮೇಲೆ ಹೇರಿದ ಅನೇಕ ಸಂಕೋಲೆಗಳನ್ನು ಮತ್ತು ನಿರ್ಬಂಧಗಳನ್ನು ತೆಗೆದುಹಾಕಿತು ಮತ್ತು ಅದು ಮುಕ್ತವಾಗಿ ಹೊಸ ಹೊಸ ಕೈಗಾರಿಕೆಗಳಲ್ಲಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಕೈಗಾರಿಕಾ ಕ್ಷೇತ್ರದಲ್ಲಿ ಸರಕಾರವು ಈ ಕೈಗಾರಿಕಾ ನೀತಿಯ ಮೂಲಕ ತೆಗೆದುಕೊಂಡ ಹಲವಾರು ಕ್ರಮಗಳು ಇಂತಿವೆ:

(i) ಲೈಸೆನ್ಸ್ ನೀಡುವ ಪದ್ಧತಿಯ ರದ್ದತಿ : 1951ರ ಕೈಗಾರಿಕಾ ಕಾನೂನಿನ ಪ್ರಕಾರ ಕೈಗಾರಿಕೆಗಳಿಗೆ ಲೈಸೆನ್ಸ್‌  ನೀಡುವ ಪದ್ಧತಿಯನ್ನು ರಕ್ಷಣಾ ಅವಶ್ಯಕತೆಗಳಿಗೆ ಸಂಬಂಧಿಸಿದ ಉದ್ದಿಮೆಗಳಿಗೆ ಮತ್ತು ಐಷಾರಾಮದ ವಸ್ತುಗಳನ್ನುತ್ಪಾದಿಸುವ 15 ಕೈಗಾರಿಕೆಗಳಿಗೆ ಮಾತ್ರ ಮೀಸಲಾಗಿರಿಸಲಾಯಿತು. ಇತರ ಎಲ್ಲ ಕೈಗಾರಿಕೆಗಳಿಗೆ ಲೈಸೆನ್ಸ್‌  ನೀಡುವ ಪದ್ಧತಿಯನ್ನು ಕೈಬಿಡಲಾಯಿತು.

(ii) ವಿಚಾರಾಪೇಕ್ಷೆಯಿಲ್ಲದ ಅನುಮತಿ : ವಿದೇಶಿ ಬಂಡವಾಳದ ಸರಕುಗಳ ಅವಶ್ಯಕತೆ ಇರುವ ಉದ್ದಿಮೆಗಳು ವಿದೇಶಿ ಶೇರು ಬಂಡವಾಳದ ಮೂಲಕ ವಿದೇಶಿ ವಿನಿಮಯವನ್ನು ದೊರಕಿಸುವದಾದರೆ, ಅವು ಯಾವ ಅನುಮತಿಯನ್ನೂ ಪಡೆಯಬೇಕಾಗಿಲ್ಲ.

(iii) ನೇರ ವಿದೇಶಿ ಬಂಡವಾಳ ಹೂಡಿಕೆ : ಭಾರತದ ಕೈಗಾರಿಕೆಗಳಲ್ಲಿ ನೇರ ವಿದೇಶಿ ಬಂಡವಾಳದ ಹೂಡಿಕೆಯನ್ನು ಶೇ. 40 ರಿಂದ ಶೇ. 51 ಕ್ಕೆ ಏರಿಸಲಾಯಿತು. ಅಂಥ ವಿದೇಶಿ ಬಂಡವಾಳವನ್ನು ಹೆಚ್ಚು ಆದ್ಯತೆ ಪಡೆದ ಉದ್ದಿಮೆಗಳಲ್ಲಿ ಮಾತ್ರ ನೇರವಾಗಿ ತೊಡಗಿಸಬೇಕು. ಅಂಥ ಬಂಡವಾಳದ ವಿನಿಯೋಗಕ್ಕೆ ವಿಚಾರಾಪೇಕ್ಷೆಯಿಲ್ಲದೆ (Automatic) ಅನುಮತಿ ನೀಡಲಾಗುತ್ತದೆ.

(iv) ಅಕ್ಟೋಬರ 1991ರಲ್ಲಿ, ಸರಕಾರವು ವಿದೇಶಿ ಬಂಡವಾಳದ ವಿನಿಯೋಗದ ನೀತಿಯನ್ನು ಇನ್ನೂ ಹೆಚ್ಚು ಉದಾರಗೊಳಿಸಿತು. ಇದರ ಪ್ರಕಾರ, ಅತಿ ಹೆಚ್ಚು ಪ್ರಾಶಸ್ತ್ಯದ ಉದ್ದಿಮೆಗಳಲ್ಲಿ ಅನಿವಾಸಿ ಭಾರತೀಯರಿಗೆ ಮತ್ತು ಸಾಗರೋತ್ತರ ಕಾರ್ಪೊರೇಟ್ ಸಂಸ್ಥೆಗಳಿಗೆ ನೂರಕ್ಕೆ ನೂರರಷ್ಟು, ವಿದೇಶಿ ಬಂಡವಾಳವನ್ನು ಹೂಡಲು ಅನುಮತಿಯನ್ನು ನೀಡಲಾಯಿತು. ಪ್ರಾಶಸ್ತ್ಯದ ಉದ್ದಿಮೆಗಳೊಂದಿಗೆ ಹೋಟೆಲ್ ಉದ್ದಿಮೆ, ಪ್ರವಾಸೋದ್ದಿಮೆ, ಹಡಗು ಸಾರಿಗೆ, ಮತ್ತು ಆಸ್ಪತ್ರೆಗಳನ್ನು ಸಹ ಪ್ರಾಶಸ್ತ್ಯದ ಪಟ್ಟಿಯಲ್ಲಿ ಸೇರಿಸಲಾಯಿತು. ಈ ಸೌಲಭ್ಯವನ್ನು, ಕೆಲವೊಂದು ಕರಾರುಗಳಿಗೊಳಪಟ್ಟು, ಚಿಕ್ಕ ಕೈಗಾರಿಕೆಗಳಿಗೂ ವಿಸ್ತರಿಸಲಾಯಿತು.

(v) ವಿದೇಶಿ ಹೂಡಿಕೆಯಲ್ಲಿ ಯಾವ ಅಡೆತಡೆಗಳೂ ಇಲ್ಲ : ವಿದೇಶಿ ಬಂಡವಾಳದಲ್ಲಿ ವಿದೇಶೀಯರು ಭಾಗವಹಿಸುವದರ ಮೇಲೆ ಯಾವ ಅಡೆತಡೆಗಳೂ ಇಲ್ಲ.

 

2, ವ್ಯಾಪಾರ ನೀತಿ (Trade Policy) :

(i) ದೇಶದ ವಿದೇಶಿ ವ್ಯಾಪಾರದ ಮೇಲಿನ ಸಂಕೋಲೆಗಳನ್ನು ಮತ್ತು ನಿರ್ಬಂಧಗಳನ್ನು 1991 ರ ಕೈಗಾರಿಕಾ ನೀತಿಯು ಕಿತ್ತಿ ಹಾಕಿತು ಮತ್ತು ಮುಕ್ತ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿತು. ಆಮದು-ರಫ್ತುಗಳಿಗೆ ಸಂಬಂಧಿಸಿದ ಲೈಸೆನ್ಸ್ ಪದ್ಧತಿ,  ನಿಯಂತ್ರಣ, ಪೂರ್ವಾನುಮತಿ ಮೊದಲಾದವುಗಳನ್ನು ರದ್ದುಪಡಿಸಲಾಯಿತು.

(ii)1991 ರಿಂದ ವಿದೇಶಿ ವ್ಯಾಪಾರವನ್ನು ಇನ್ನೂ ಹೆಚ್ಚು ಉದಾರಗೊಳಿಸಲಾಯಿತು. ರಫ್ತುಗಳ ಮೇಲಿನ ನಿಯಂತ್ರಣಗಳನ್ನು ಮತ್ತು ಕಾರ್ಯವಿಧಾನಗಳನ್ನು ಸಬಲಗೊಳಿಸಲಾಯಿತು. ರಾಸಾಯನಿಕ ಮತ್ತು ಲೋಹದ ವಸ್ತುಗಳು ಮತ್ತಿತರ ಒಟ್ಟು 63 ವಸ್ತುಗಳ ರಫ್ತು ನಿಯಮಗಳನ್ನು  ಉದಾರಗೊಳಿಸಲಾಯಿತು. ಮತ್ತು 17 ವಸ್ತುಗಳನ್ನು OGL (Open General Licence)  ನಿಯಮಗಳ ಅಡಿ ವರ್ಗಾಯಿಸಲಾಯಿತು.

(iii) 1992 ರಲ್ಲಿ ಉದಾರೀಕರಣ ನೀತಿಯನ್ನು ಮತ್ತು ವಿಸ್ತರಿಸಲಾಯಿತು. 3 ಮಾರ್ಚ 1992 ರಂದು ‘ಉದಾರೀಕೃತ ವಿದೇಶಿ ವಿನಿಮಯ ದರದ ತಂತ್ರದ ವ್ಯವಸ್ಥೆ’ (Liberalised Exchange Rate Mechanism System) ಯನ್ನು ಜಾರಿಗೆ ತರಲಾಯಿತು. ಇದರಿಂದ ವಿದೇಶೀ ವಿನಿಮಯದ ಮುಕ್ತ ಮಾರುಕಟ್ಟೆಯ ದರ ಮತ್ತು ಹವಾಲಾದರಗಳಲ್ಲಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಇದರಿಂದ ವಿದೇಶಿ ವ್ಯಾಪಾರಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲಾಯಿತು.

(iv) 1991ರ ವ್ಯಾಪಾರ ನೀತಿಯು ಇನ್ನೂ ಹಲವಾರು ಉದಾರೀಕರಣದ ಕ್ರಮಗಳನ್ನು ಜಾರಿಗೆ ತಂದಿತು. ಬಂಡವಾಳದ ಸರಕುಗಳು, ಕಚ್ಚಾ ಸರಕುಗಳು, ಮಧ್ಯವರ್ತಿ ಸರಕುಗಳು ಮತ್ತು ಬಿಡಿ ಭಾಗಗಳು ಇವೆಲ್ಲವುಗಳ ಆಮದನ್ನು ಲೈಸೆನ್ಸ್‌  ನೀತಿಯಿಂದ ಮುಕ್ತಗೊಳಿಸಲಾಯಿತು.

 

3. ವಿದೇಶಿ ಬಂಡವಾಳ ಹೂಡಿಕೆ ನೀತಿ (Foreign Investment Policy) : 1992 ರಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉದಾರಗೊಳಿಸಲಾಯಿತು.

(i) 1992 ಮೇ 14ರಿಂದ ವಿದೇಶಿ ಕಂಪನಿಗಳು ತಮ್ಮ ವಸ್ತುಗಳನ್ನು ನಮ್ಮ ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ತಮ್ಮ ವ್ಯಾಪಾರಿ ಹೆಸರನ್ನಾಗಲಿ ಅಥವಾ ಚಿಹ್ನೆಯನ್ನಾಗಲಿ ಉಪಯೋಗಿಸಲು ಅನುಮತಿ ನೀಡಲಾಯಿತು.

(ii) 1992 ರ ಸಪ್ಟೆಂಬರ 15 ರಿಂದ, ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಯಿತು.

(iii) ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ (Foreign Institutional Investors Flls) ಭಾರತದ ಬಂಡವಾಳ ಪೇಟೆಯನ್ನು ಪ್ರವೇಶಿಸಲು ಅನುಮತಿ ನೀಡಲಾಯಿತು. ಇದರಿಂದ ವಿದೇಶಿ ಹೂಡಿಕೆ ಸಂಸ್ಥೆಗಳು ಭಾರತದಲ್ಲಿ ಪಾರಸ್ಪರಿಕ ನಿಧಿ (Mutual Funds), ನಿವೃತ್ತಿ ನಿಧಿ (Pen sion Funds), ಹೂಡಿಕೆಯ ಟ್ರಸ್ಟುಗಳು (Investment Trusts), ಸ್ವತ್ತುಗಳ ನಿರ್ವಹಣೆಯ ಕಂಪನಿ (Assets Management Companies) ಗಳಲ್ಲಿ ಬಂಡವಾಳ ಹೂಡಿ ವ್ಯವಹರಿಸಲು ಸಾಧ್ಯವಾಯಿತು.

(iv) ವಿದೇಶಿ ಹಣಕಾಸಿನ ಹೂಡಿಕೆ ಸಂಸ್ಥೆಗಳಿಗೆ (Foreign Financial Investors-FFls) ಭಾರತೀಯ ಕಂಪನಿಗಳ ಶೇರು ಬಂಡವಾಳದಲ್ಲಿ ಶೇ. 25 ರಷ್ಟು ಬಂಡವಾಳ ತೊಡಗಿಸಲು ಅನುಮತಿ ನೀಡಲಾಯಿತು, 31 ಡಿಸೆಂಬರ 1994ರವರೆಗೆ 281 ವಿದೇಶಿ ಸಂಸ್ಥೆಗಳು 3,000 ಮಿಲಿಯನ್ ಡಾಲರುಗಳನ್ನು ಭಾರತೀಯ ಕಂಪನಿಗಳ ಶೇರು ಬಂಡವಾಳದಲ್ಲಿ ತೊಡಗಿಸಿದ್ದವು.

ವರ್ಗಗಳಲ್ಲಿ ಅವುಗಳಿಗೆ ಇನ್ನೂ ಹೆಚ್ಚು ಬಂಡವಾಳ ತೊಡಗಿಸಲು ಇನ್ನೂ ಹಲವಾರು ಆಕರ್ಷಣೀಯ ಉತ್ತೇಜನಗಳನ್ನು ನೀಡಲಾಗಿದೆ.

4. ಬಂಡವಾಳ ಪೇಟೆಯ ಸುಧಾರಣೆ : ಭಾರತದ ಬಂಡವಾಳ ಪೇಟೆಯು ಯಾವುದೇ ನಿಯಂತ್ರಣ-ನಿರ್ಬಂಧಗಳಿಲ್ಲದೆ ಇನ್ನೂ ಹೆಚ್ಚು ಮುಕ್ತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಹಲವಾರು ಸುಧಾರಣೆಯ ಕ್ರಮಗಳನ್ನು ಸರಕಾರವು ತೆಗೆದುಕೊಂಡಿತು. 1992ರಲ್ಲಿ 1956 ರ ಬಂಡವಾಳ ನೀಡಿಕೆಯ (ನಿಯಂತ್ರಣ) ಕಾನೂನನ್ನು (Capital Issues (Control) Act) ರದ್ದುಪಡಿಸಲಾಯಿತು. ಇದರಿಂದ ಕಂಪನಿಗಳು ಸರಕಾರದ ಪೂರ್ನಾನುಮತಿಯನ್ನು ಪಡೆಯದ ಶೇರು ಬಂಡವಾಳವನ್ನು ಸಾರ್ವಜನಿಕರಿಂದ ಸಂಗ್ರಹಿಸಲು ಅವುಗಳಿಗೆ ಅವಕಾಶವಾಯಿತು.

5.  ಖಾಸಗಿ ಬ್ಯಾಂಕುಗಳಿಗೆ ಉತ್ತೇಜನ : ನರಸಿಂಹನ್ ಸಮಿತಿಯ ಶಿಫಾರಸಿನ ಪ್ರಕಾರ, ಭಾರತೀಯ ರಿಝರ್ವ ಬ್ಯಾಂಕು ಖಾಸಗಿ ಬ್ಯಾಂಕುಗಳ ಪ್ರವೇಶಕ್ಕಾಗಿ ಹೊಸ ಮಾರ್ಗದರ್ಶಕ ಸೂತ್ರಗಳನ್ನು ಪ್ರಕಟಿಸಿತು. ವಾಣಿಜ್ಯ ಬ್ಯಾಂಕುಗಳು ಖಾಸಗಿ ವಲಯದಲ್ಲಿ ಸುಲಭವಾಗಿ ಸ್ಥಾಪಿಸಲ್ಪಡುವಂತೆ ಮತ್ತು ಅವು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಹಾಗೂ ಸರಕಾರಿ ಬ್ಯಾಂಕುಗಳೊಂದಿಗೆ ಹಿತಕರವಾದ ಪೈಪೋಟಿಯನ್ನು ನಡೆಸುವಂತೆ ನಿಯಮಗಳನ್ನು ರೂಪಿಸಲಾಗಿದೆ.

6. ಸರಕಾರಿ ಬ್ಯಾಂಕುಗಳಿಗೆ ಸೌಲಭ್ಯ : ಸರಕಾರಿ ವಾಣಿಜ್ಯ ಬ್ಯಾಂಕುಗಳೂ ಸಹ ಸಾರ್ವಜನಿಕರಿಂದ ಶೇರು ಬಂಡವಾಳವನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಅಲ್ಲದೆ. ಅವು ತಮ್ಮ ಶಾಖೆಗಳನ್ನು ಸುಧಾರಿಸಲು ಹಾಗೂ ಸಮನ್ವಯಗೊಳಿಸಲು ಅವುಗಳಿಗೆ ಅನುಮತಿ ನೀಡಲಾಗಿದೆ. ರೋಗಗ್ರಸ್ಥ ಶಾಖೆಗಳನ್ನು ಮುಚ್ಚಲು ಮತ್ತು ಅಶಕ್ತ ಶಾಖೆಗಳನ್ನು ಸಶಸ್ತ್ರ ಶಾಖೆಗೊಳೊಂದಿಗೆ ವಿಲೀನ ಮಾಡಲು ಅವುಗಳಿಗೆ ಅನುಮತಿ ನೀಡಲಾಗಿದೆ. ದೀರ್ಘಾವಧಿ ಸಾಲದ ಮೇಲಿನ ಗರಿಷ್ಟ ಮಿತಿ 50 ಕೋಟಿ ರೂಪಾಯಿಗಳನ್ನು ತೆಗೆದುಹಾಕಲಾಗಿದೆ. 1994 ರ ಅಕ್ಟೋಬರ 18 ರಿಂದ ಅವು ಸಾಲಗಳ ಮೇಲೆ ವಿಧಿಸುವ ಬಡ್ಡಿದರಗಳ ಮೇಲಿನ ನಿಯಂತ್ರಣವನ್ನು ತೆಗೆದುಹಾಕಲಾಗಿದೆ. ಇದರಿಂದ ಬ್ಯಾಂಕುಗಳು ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

7. ಖಾಸಗಿ ವಲಯಕ್ಕೆ ಪಾರಸ್ಪರಿಕ ನಿಧಿಗಳನ್ನು (Mutual Funds) ಪ್ರಾರಂಭಿಸಲು ಅನುಮತಿ ನೀಡಲಾಗಿದೆ.

8. ರೋಗಗ್ರಸ್ಥ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಔದ್ಯಮಿಕ ಮತ್ತು ಹಣಕಾಸಿನ ಪುನರಚನೆಯ ಮಂಡಳಿಗೆ (Board for Industrial and Financial Reconstruction- BIFA) ಒಪ್ಪಿಸಲು ಅವಕಾಶ ಮಾಡಿಕೊಡಲಾಗಿದೆ.

9. ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಸರಕಾರದ ಪಾಲಿನ ಶೇರು ಬಂಡವಾಳವನ್ನು ಕ್ರಮೇಣ ಹಿಂದೆಗೆಯಲು ಕ್ರಮ ಕೈಕೊಳ್ಳಲಾಗಿದೆ.

10. ಸಾರ್ವಜನಿಕ ವಲಯಕ್ಕೆ ಮೀಸಲಾಗಿರಿಸಿದ ಕೈಗಾರಿಕೆಗಳನ್ನು 15 ರಿಂದ 6 ಕ್ಕೆ ಇಳಿಸಲಾಗಿದೆ.

11. 1993 ರಲ್ಲಿ ಇನ್ನೂ ಹೆಚ್ಚಿನ ಉದಾರೀಕರಣದ ಕ್ರಮಗಳನ್ನು ಜಾರಿಗೆ ತರಲಾಯಿತು. Foreign Exchange Regulation Act-(FERA) ಎಂಬ ಕಾನೂನನ್ನು ರದ್ದು ಪಡಿಸಲಾಯಿತು. ಈಗ ಅದರ ಬದಲು FEMA (Forign Exchange Management Act) ಎಂಬ ಉದಾರವಾದ ಕಾನೂನನ್ನು ಜಾರಿಗೊಳಿಸಲಾಗಿದೆ. ಫೆರಾ ಕಂಪನಿಗಳ ಮೇಲಿನ ಅನೇಕ ನಿರ್ಬಂಧಗಳನ್ನು ತೆಗೆದುಹಾಕಲಾಯಿತು.

12. ಭಾರತೀಯ ಕಂಪನಿಗಳು ಯುರೋ-ಸಾಮಾನ್ಯ ಶೇರುಗಳ (Euro-Equity Shares | ಮೂಲಕ ಅಂತಾರಾಷ್ಟ್ರೀಯ ಬಂಡವಾಳ ಪೇಟೆಯನ್ನು ಪ್ರವೇಶಿಸಲು ಅವುಗಳಿಗೆ ಅನುವ ನೀಡಲಾಗಿದೆ. 1995 ರ ಮಾರ್ಚ 31 ರ ವರೆಗೆ ಭಾರತೀಯ ಕಂಪನಿಗಳು 4,300 ದಶಲಕ್ಷ ಡಾಲರ ಬಂಡವಾಳವನ್ನು ಅಂತಾರಾಷ್ಟ್ರೀಯ ಬಂಡವಾಳ ಪೇಟೆಯಿಂದ ಸಂಗ್ರಸಿದವು.

13. ವಿದೇಶಿ ವಿನಿಮಯ ನಿಯಂತ್ರಣಗಳನ್ನು ಇತ್ತೀಚಿನ ವರ್ಷಗಳಲ್ಲಿ ಸಾಕನ್ನು ಸಡಿಲಗೊಳಿಸಲಾಗಿದೆ.

14. 1993-94ರ ಮುಂಗಡ ಪತ್ರಿಕೆಯ ಪ್ರಕಾರ ಸರಕಾರವು ಇನ್ನೂ ಹಲವ ಉದಾರೀಕರಣದ ಕ್ರಮಗಳನ್ನು ಜಾರಿಗೊಳಿಸಲಾಯಿತು. ಗರಿಷ್ಟ ಆಮದು ಸುಂಕವನ್ನು ಶೇ. 110 ರಿಂದ ಶೇ. 85 ಕ್ಕೆ ಇಳಿಸಲಾಯಿತು.

15. 1994-95 ರ ಮುಂಗಡ ಪತ್ರದ ಪ್ರಕಾರ, ಆಮದು ಸುಂಕದ ದರವನ್ನು ಶೇ. 85 ರಿಂದ ಶೇ. 65 ಕ್ಕೆ ಇಳಿಸಲಾಯಿತು.

16. 1995-96ರ ಮುಂಗಡ ಪತ್ರದ ಪ್ರಕಾರ, ಆಮದು ಸುಂಕದ ದರವನ್ನು ಶೇ. 66 ರಿಂದ ಶೇ. 50 ಕ್ಕೆ ಇಳಿಸಲಾಯಿತು. ಇದೂ ಅಲ್ಲದೆ ಅನೇಕ ವಸ್ತುಗಳ ಮೇಲಿನ ಅಬಕಾರಿ ಸುಂಕವನ್ನೂ ಇಳಿಸಲಾಯಿತು.

17. 1997 ಫೆಬ್ರುವರಿ 2 ರಂದು ಸರಕಾರವು ಬಳಕೆಯ ವಸ್ತುಗಳ ಆಮದುಗಳ ಮೇಲಿನ ಅನೇಕ ನಿರ್ಬಂಧಗಳನ್ನು ಸಡಿಲಗೊಳಿಸಿತು. 69 ವಸ್ತುಗಳನ್ನು ನಿರ್ಬಂಧಿತ ಯಾದಿಯಿಂದ ವಿಶೇಷ ಅನುಮತಿಯ ಯಾದಿಗೂ ಮತ್ತು 92 ವಸ್ತುಗಳನ್ನು ವಿಶೇಷ ಅನುಮತಿಯ ಯಾದಿಯಿಂದ ಮುಕ್ತ ಆಮದುಗಳ ಯಾದಿಗೂ ವರ್ಗಾಯಿಸಲಾಯಿತು.

18. 1997-98ರ ಮುಂಗಡ ಪತ್ರದ ಪ್ರಕಾರ, ಬಂಡವಾಳದ ಸಂಕುಗಳು, ಕಂಪ್ಯೂಟರಗಳ ಬಿಡಿ ಭಾಗಗಳು, ಮತ್ತು ವೈದ್ಯಕೀಯ ಯಂತ್ರೋಪಕರಣಗಳ ಮೇಲಿನ ಸುಂಕದ ದರಗಳನ್ನು ಇಳಿಸಲಾಯಿತು ಮತ್ತು ಕಂಪ್ಯೂಟರಗಳ ಮೇಲಿನ ಸುಂಕವನ್ನು ಪೂರ್ತಿಯಾಗಿ ತೆಗೆದು ಹಾಕಲಾಯಿತು.

19. ವಿಮಾ ವ್ಯವಹಾರದಲ್ಲಿ ಭಾಗವಹಿಸಲು ಖಾಸಗಿ ವಲಯಕ್ಕೆ ಅನುಮತಿ ನೀಡಲಾಯಿತು. 20. ಖಾಸಗಿ ವಲಯವು ಸಾಕಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುವಂತೆ ಹಾಗೂ ದೇಶದ ಅರ್ಥ ವ್ಯವಸ್ಥೆಯು ಶೀಘ್ರಗತಿಯಿಂದ ಅಭಿವೃದ್ಧಿಯಾಗುವಂತೆ ಮಾಡಲು, ಖಾಸಗಿ ವಲಯಕ್ಕೆ ಎಲ್ಲ ತರದ ಹಣಕಾಸಿನ ನೆರವನ್ನು ಮತ್ತು ಉತ್ತೇಜನವನ್ನು ನೀಡುವದರ ಬಗೆಗೆ ಸರಕಾರವು ಭರವಸೆ ನೀಡತು. ತನ್ಮೂಲಕ ಪ್ರಗತಿ ಪಥದಲ್ಲಿರುವ ಭಾರತದ ಅರ್ಥವ್ಯವಸ್ಥೆಯನ್ನು 21 ನೇ ಶತಮಾನಕ್ಕೆ ತೆಗೆದುಕೊಂಡು ಹೋಗುವಂತೆ ಸರಕಾರವು ಖಾಸಗಿ ವಲಯಕ್ಕೆ ಮನವಿ ಮಾಡಿತು.


ಈ ಎಲ್ಲ ಸುಧಾರಣೆಗಳ ಮುಖ್ಯ ಉದ್ದೇಶವೇನೆಂದರೆ ಅರ್ಥವ್ಯವಸ್ಥೆಯನ್ನು ನಿಯಂತ್ರಣ ಮತ್ತು ಲೈಸೆನ್ಸುಗಳ ಸಂಕೋಲೆಗಳಿಂದ ಮುಕ್ತಗೊಳಿಸುವುದು ಹಾಗೂ ಖಾಸಗಿ ವಲಯವು ಮುಕ್ತವಾಗಿ ಹಿತಕರವಾಗಿ ಶೀಘ್ರಗತಿಯಲ್ಲಿ ಬೆಳೆಯಲು ಅನುಕೂಲ ಮಾಡಿಕೊಡುವುದು ಮತ್ತು ಅದೇ ವೇಳೆಗೆ ಸಾರ್ವಜನಿಕ ವಲಯವನ್ನು ಅದಕ್ಷತೆ, ಕಡಿಮೆ ಉತ್ಪಾದನೆ, ನಷ್ಟ ಮೊದಲಾದವುಗಳಿಂದ ಮುಕ್ತಮಾಡಿ ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸುವದೇ ಆಗಿದೆ.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources