ಖಾಸಗೀಕರಣದ ಅರ್ಥವಿವರಣೆ ಮತ್ತು ವ್ಯಾಪ್ತಿ

(Meaning and Scope of Privatisation)

 

 

ಪೀಠಿಕೆ: ನಮ್ಮ ದೇಶದ ಸರಕಾರವು ಸಾರ್ವಜನಿಕ ವಲಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ಖಾಸಗಿ ವಲಯಕ್ಕೆ ದ್ವಿತೀಯ ಪ್ರಾಶಸ್ತ್ಯವನ್ನು ನೀಡಿ ಕೈಗಾರಿಕಾ ಅಭಿವೃದ್ಧಿಯನ್ನು ಮತ್ತು ತನ್ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸಿತು. ಆದರೆ ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ತಾನು ಮಾಡಿದ ತಪ್ಪಿನ ಅರಿವು ಉಂಟಾಗಿದ್ದರಿಂದ ಅದು ಈಗ ಖಾಸಗಿ ವಲಯಕ್ಕೆ ಹಿಂದೆ ಎಂದೂ ಇಲ್ಲದಂಥ ಉತ್ತೇಜನವನ್ನು ನೀಡಲು ಪ್ರಾರಂಭಿಸಿದೆ. ಆರನೇ ಪಂಚವಾರ್ಷಿಕ ಯೋಜನೆಯಿಂದಲೇ ಇದು ಪ್ರಾರಂಭವಾಯಿತು. ಅದೇ ವೇಳೆಗೆ ಸಾರ್ವಜನಿಕ ವಲಯವು ರೋಗಗ್ರಸ್ತವಾಗುತ್ತಿರುವ ಬಗೆಗೆ ಹಾಗೂ ಅದು ಬಿಳಿ ಆನೆಯಾಗಿ ಬೆಳೆಯುತ್ತಿರುವ ಬಗೆಗೆ ಸರಕಾರಕ್ಕೆ ಮನವರಿಕೆಯಾಯಿತು. ಹೀಗಾಗಿ ಅದು ಸಾರ್ವಜನಿಕ ವಲಯದ ಶೇರುಗಳನ್ನು ಖಾಸಗಿಯವರಿಗೂ ಹಾಗೂ ಹಣಕಾಸಿನ ಸಂಸ್ಥೆಗಳಿಗೂ ವರ್ಗಾಯಿಸಲು ಕ್ರಮಕೈಕೊಂಡಿದೆ ಮತ್ತು ಖಾಸಗಿ ವಲಯದ ಮೇಲಿನ ಅನೇಕ ನಿರ್ಬಂಧಗಳನ್ನು ತೆಗೆದುಹಾಕಲು ಹಾಗೂ ಅದು ಮುಕ್ತವಾಗಿ ಸ್ವತಂತ್ರವಾಗಿ ಬೆಳೆಯಲು ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸುತ್ತಿದೆ.

 ‘ಖಾಸಗೀಕರಣ’ ಎಂಬ ಪದಕ್ಕೆ ಹಲವಾರು ಅರ್ಥ ವಿವರಣೆಗಳನ್ನು ನೀಡಲಾಗಿದೆ. ಸಂಕುಚಿತ ಅರ್ಥದಲ್ಲಿ ‘ಖಾಸಗೀಕರಣ’ವೆಂದರೆ ಸಾರ್ವಜನಿಕ (ಅಥವಾ ಸರಕಾರಿ) ಒಡೆತನದ ಸಂಸ್ಥೆಗಳನ್ನು ಖಾಸಗಿ ಒಡೆತನಕ್ಕೆ ಸೇರಿಸುವುದು ಅಂದರೆ ಸರಕಾರಿ ಒಡೆತನಕ್ಕೆ ಬದಲು ಖಾಸಗಿ ಒಡೆತನವನ್ನು ಸೇರಿಸುವುದು ಎಂದು ಅರ್ಥವಾಗುತ್ತದೆ. ಅದು ರಾಷ್ಟ್ರೀಕರಣದ ವಿರುದ್ಧದ ಪ್ರಕ್ರಿಯೆಯಾಗಿದೆ. ರಾಷ್ಟ್ರೀಕರಣದಲ್ಲಿ ಸಂಸ್ಥೆಯ ಖಾಸಗಿ ಒಡೆತನವನ್ನು ತೆಗೆದುಹಾಕಿ ಅದನ್ನು ಸರಕಾರಿ ಅಥವ ಸಾರ್ವಜನಿಕ ಒಡೆತನಕ್ಕೆ ಒಳಪಡಿಸಲಾಗುತ್ತದೆ. ಆದರೆ ಖಾಸಗೀಕರಣದಲ್ಲಿ ಸರ್ಕಾರದ ಒಡೆತನವನ್ನು ತೆಗೆದುಹಾಕಿ ಅದನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲಾಗುತ್ತದೆ. ಮತ್ತೊಂದು ಅರ್ಥದಲ್ಲಿ, ಖಾಸಗೀಕರಣವೆಂದರೆ ಖಾಸಗಿ ಒಡೆತನದೊಂದಿಗೆ (ಇಲ್ಲವೆ ಕೆಲವು ಸಲ ಒಡೆತನದಲ್ಲಿ ಏನೂ ಬದಲಾವಣೆ ಮಾಡದೆ), ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿ ಆಡಳಿತ ಮತ್ತು ನಿಯಂತ್ರಣಗಳಿಗೆ ಒಪ್ಪಿಸುವುದು ಎಂದು ಅರ್ಥವಾಗುತ್ತದೆ. ಒಟ್ಟಿನಲ್ಲಿ ಖಾಸಗೀಕರಣವು ಮೂರು ಪ್ರಕಾರದ ಕ್ರಮಗಳನ್ನು ಒಳಗೊಂಡಿರುತ್ತದೆ. ಅವು ಯಾವುವೆಂದರೆ-

(ಅ) ಒಡೆತನದ ಕ್ರಮಗಳು (ಬ) ಸಂಘಟನಾತ್ಮಕ ಕ್ರಮಗಳು ಮತ್ತು (ಕ) ಕಾರ್ಯನಿರ್ವಹಣೆಯ ಕ್ರಮಗಳು.

 

(ಅ) ಒಡೆತನದ ಕ್ರಮಗಳು (Ownership Measures)

ಈ ಕ್ರಮಗಳ ಮೂಲಕ ಸಾರ್ವಜನಿಕ ಸಂಸ್ಥೆಗಳ ಒಡೆತನವನ್ನು ಭಾಗಶಃ ಅಥವಾ ಪೂರ್ತಿಯಾಗಿ ಖಾಸಗಿಯವರಿಗೆ ವರ್ಗಾಯಿಸಲಾಗುತ್ತದೆ. ಒಡೆತನದ ವರ್ಗಾವಣೆಯ ಪ್ರಮಾಣವು ಅಧಿಕವಿದ್ದಂತೆ, ಖಾಸಗೀಕರಣದ ಪ್ರಮಾಣವು ಅಧಿಕವಾಗಿರುತ್ತದೆ. ಸಾರ್ವಜನಿಕ ಸಂಸ್ಥೆಗಳ ಒಡೆತನವನ್ನು ಖಾಸಗಿಯವರಿಗೆ ಒಪ್ಪಿಸಲು ನಾಲ್ಕು ಪ್ರಕಾರದ ವಿಧಾನಗಳಿರುತ್ತವೆ :

i) ಪೂರ್ಣ ಖಾಸಗಿಕರಣ  : ಇಲ್ಲಿ ಸಾರ್ವಜನಿಕ ಸಂಸ್ಥೆಯ ಸಾರ್ವಜನಿಕ ಒಡೆತನವನ್ನು ತೆಗೆದುಹಾಕಿ, ಅದನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲಾಗುತ್ತದೆ. ಆಗ ಸಂಸ್ಥೆಯು ಪೂರ್ತಿಯಾಗಿ ಖಾಸಗಿ ಸಂಸ್ಥೆಯಾಗುತ್ತದೆ.

(ii) ಸಂಯುಕ್ತ ಒಡೆತನ (Joint Ownership) : ಇಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡೂ ಒಡೆತನ ಹೊಂದಿರುತ್ತವೆ. ಖಾಸಗಿ ಒಡೆತನದ ವ್ಯಾಪ್ತಿಯು ಶೇ. 20 ರಿಂದ 50 ಅಥವಾ ಅದಕ್ಕೂ ಹೆಚ್ಚು ಇರುತ್ತದೆ.

(iii) ವಿಸರ್ಜನೆ (Liquidation) : ಇಲ್ಲಿ ಸಾರ್ವಜನಿಕ ಸಂಸ್ಥೆಯನ್ನು ವಿಸರ್ಜಿಸಿ ಆಸ್ತಿಗಳೆಲ್ಲವನ್ನೂ ಮಾರಾಟ ಮಾಡಲಾಗುತ್ತದೆ. ಕೊಳ್ಳುವವರು ಅದೇ ವ್ಯವಹಾರವನ್ನು ಇಲ್ಲವೆ ಬೇರೆ ವ್ಯವಹಾರವನ್ನು ಕೈಕೊಳ್ಳಬಹುದು.

(iv) ಉದ್ಯೋಗಿಗಳಿಂದ ಖರೀದಿ : ಇಲ್ಲಿ ಸಂಸ್ಥೆಯ ಉದ್ಯೋಗಿಗಳೇ ಅದರ ಆಸ್ತಿ ಗಳೆಲ್ಲವನ್ನೂ ಕೊಂಡುಕೊಳ್ಳುತ್ತಾರೆ. ಇದಕ್ಕಾಗಿ ಬ್ಯಾಂಕುಗಳು ಉದ್ಯೋಗಿಗಳಿಗೆ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಉದ್ಯೋಗಿಗಳು ಸಹಕಾರಿ ಸಂಘವನ್ನು ರಚಿಸಿಕೊಂಡು ಸಂಸ್ಥೆಯನ್ನು ನಡೆಸಬಹುದು.

 

ಬ) ಸಂಘಟನಾತ್ಮಕ ಕ್ರಮಗಳು (Organisational Measures)

(1) ಧಾರಕ ಕಂಪನಿ (Holding Company) : ಒಂದು ಹೊಸ ಧಾರಕ ಕಂಪನಿಯನ್ನು ಸ್ಥಾಪಿಸಿ ಅದಕ್ಕೆ ಸಾರ್ವಜನಿಕ ಸಂಸ್ಥೆಯ ಆಡಳಿತವನ್ನು ಒಪ್ಪಿಸಬಹುದು. ಆಗ ಸರಕಾರವು ಸಂಸ್ಥೆಯ ಆಡಳಿತದಲ್ಲಿ ಕೈಹಾಕುವುದಿಲ್ಲ ಹಾಗೂ ನಿಯಂತ್ರಿಸುವುದೂ ಇಲ್ಲ. ಕೆಲವು ಸಲ ಅತಿ ದೊಡ್ಡ ಸಾರ್ವಜನಿಕ ಸಂಸ್ಥೆಯು ಧಾರಕ ಕಂಪನಿಯಾಗಿ ಪರಿವರ್ತನೆ ಹೊಂದಿ, ಅದರ ವಿವಿಧ ವಿಭಾಗಗಳಿಗಾಗಿ ಒಂದೊಂದು ಅಂಗಸಂಸ್ಥೆಯನ್ನು ಸ್ಥಾಪಿಸಬಹುದಾಗಿದೆ.

 (2) ಗೇಣಿ ಪದ್ಧತಿ (Leasing Method) : ಇಲ್ಲಿ ಸಾರ್ವಜನಿಕ ಸಂಸ್ಥೆಯು ಖಾಸಗಿ ಸಂಸ್ಥೆಯೊಂದಕ್ಕೆ ತನ್ನ ವ್ಯವಹಾರವನ್ನು ನಡೆಸಲು ನಿರ್ದಿಷ್ಟ ಅವಧಿಯವರೆಗೆ ಗೇಣಿಗೆ ಕೊಡಬಹುದು. ಆದರೆ ಒಡೆತನವು ಮಾತ್ರ ಸರಕಾರದಲ್ಲಿಯೇ ಉಳಿಯುತ್ತದೆ. ಗೇಣಿ ಹಿಡಿಯುವವರು ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಪ್ರತಿವರ್ಷ ಲಾಭದ ಇಂತಿಷ್ಟು ಪಾಲನ್ನು ಸಂಸ್ಥೆಗೆ ಕೊಡುವುದಾಗಿ ಒಪ್ಪಿಕೊಳ್ಳಬೇಕಾಗುತ್ತದೆ.

(3) ಪುನರಚನೆ (Restructuring) : ಸಾರ್ವಜನಿಕ ಸಂಸ್ಥೆಯನ್ನು ಎರಡು ಪ್ರಕಾರವಾಗಿ ಪುನರಚಿಸಬಹುದು : (i) ಹಣಕಾಸಿನ ಪುನರಚನೆ ಮತ್ತು (ii) ಅಮೂಲಾಗ್ರ ಪುನರಚನೆ. ಹಣಕಾಸಿನ ಪುನರಚನೆಯಲ್ಲಿ ಸಂಚಿತ ನಷ್ಟವೆಲ್ಲವನ್ನೂ ತೊಡೆದು ಹಾಕಿ ಬಂಡವಾಳವನ್ನು ಕಡಿಮೆ ಮಾಡಿ ಸಮರ್ಪಕವಾದ ಸಾಲ-ಬಂಡವಾಳದ ಪ್ರಮಾಣವನ್ನು ಕಾಯ್ದುಕೊಳ್ಳಲಾಗುತ್ತದೆ. ಅಮೂಲಾಗ್ರ ಪುನರಚನೆಯಲ್ಲಿ ಸಂಸ್ಥೆಯ ಕೆಲವೊಂದು ಚಟುವಟಿಕೆಗಳನ್ನೇ ಪುನರಚಿಸಲಾಗುತ್ತದೆ. ಸಂಸ್ಥೆಯ ಪ್ರಮುಖ ಚಟುವಟಿಕೆಗಳನ್ನು ತಾನಿಟ್ಟುಕೊಂಡು, ಉಳಿದ ಚಟುವಟಿಕೆಗಳನ್ನು ಇತರ ಅಂಗ ಸಂಸ್ಥೆಗಳಿಗೋ ಅಥವಾ ಚಿಕ್ಕ ಘಟಕಗಳಿಗೋ ಬಿಟ್ಟುಕೊಡಬಹುದಾಗಿದೆ.

 

)  ಕಾರ್ಯನಿರ್ವಹಣೆಯ ಕ್ರಮಗಳು (Operational Measures)

ಸಾರ್ವಜನಿಕ ಸಂಸ್ಥೆಯನ್ನು ಖಾಸಗೀಕರಣ ಮಾಡದಿದ್ದರೂ ಅದರ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಸುಧಾರಿಸಲು ಕ್ರಮ ಕೈಕೊಳ್ಳಬಹುದು. ಸಾರ್ವಜನಿಕ ಸಂಸ್ಥೆಗಳಲ್ಲಿ ವ್ಯಾಪಾರಿ ದೃಷ್ಟಿಯನ್ನು ಅಳವಡಿಸುವುದೇ ಇವುಗಳ ಗುರಿಯಾಗಿದೆ. ಇತರ ಕ್ರಮಗಳು ಯಾವುವೆಂದರೆ:-

ತೀರ್ಮಾನಗಳನ್ನು ಕೈಕೊಳ್ಳಲು ಸಾರ್ವಜನಿಕ ಸಂಸ್ಥೆಗಳಿಗೆ ಸ್ವಾತಂತ್ರ್ಯವನ್ನು ಕೊಡುವುದು, ಕಾರ್ಯಾಲಯದ ಮತ್ತು ಕಾರ್ಖಾನೆಯ ಉದ್ಯೋಗಿಗಳಿಗೆ ತಮ್ಮ ದಕ್ಷತೆ ಅಥವಾ ಉತ್ಪಾದಕತೆಯನ್ನು ಹೆಚ್ಚಿಸುವಂತೆ ಮಾಡಲು ಪ್ರೇರಣೆಗಳನ್ನು ಅಥವಾ ಆಮಿಷಗಳನ್ನು ನೀಡುವುದು, ಕೆಲವು ಸಲುವಳಿಗಳನ್ನು ಕಾರ್ಖಾನೆಯಲ್ಲಿಯೇ ಉತ್ಪಾದಿಸುವುದರ ಬದಲು ಮಾರುಕಟ್ಟೆಯಿಂದ ನೇರವಾಗಿ ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಳ್ಳುವುದು, ಬಂಡವಾಳ ಹೂಡಿಕೆಯ ಬಗೆಗೆ ಯೋಗ್ಯ ವಾತಾವರಣವನ್ನು ನಿರ್ಮಿಸುವುದು, ಸಾರ್ವಜನಿಕ ಸಂಸ್ಥೆಗಳಿಗೆ ಬಂಡವಾಳ ಪೇಟೆಯಿಂದ ನೇರವಾಗಿ ಬಂಡವಾಳ ಸಂಗ್ರಹಿಸಲು ಅನುಮತಿ ನೀಡುವುದು ಇತ್ಯಾದಿ. ಇಂಥಹ ಕ್ರಮಗಳ ಮುಖ್ಯ ಉದ್ದೇಶವೇನೆಂದರೆ ಸಾರ್ವಜನಿಕ ಸಂಸ್ಥೆಗಳ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ನಿಯಂತ್ರಣಗಳನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡುವುದೇ ಆಗಿದೆ.

 

ಈ ಮೇಲೆ ಹೇಳಿದ ಎಲ್ಲ ಕ್ರಮಗಳ ಪರಿಣಾಮವೇನೆಂದರೆ ಸಾರ್ವಜನಿಕ ಸಂಸ್ಥೆಗಳಲ್ಲಿ ಖಾಸಗೀಕರಣದ ಪ್ರಮಾಣವನ್ನು ಹೆಚ್ಚಿಸುವುದೇ ಆಗಿದೆ. ನಿಜ ಹೇಳಬೇಕೆಂದರೆ ಖಾಸಗೀಕರಣವೆಂದರೆ ಸರಕಾರಿ ಒಡೆತನವನ್ನು ತಪ್ಪಿಸಿ ಖಾಸಗಿ ಒಡೆತನಕ್ಕೆ ಅವಕಾಶ ಮಾಡಿಕೊಡುವುದೇ ಆಗಿದೆ. ಖಾಸಗಿ ಒಡೆತನವು ಒಬ್ಬ ವ್ಯಕ್ತಿ, ಸಹಕಾರಿ ಸಂಘ ಅಥವಾ ಸಂಸ್ಥೆಯದಾಗಿರಬಹುದು. ಕೆಲವು ಸಲ ಸಾರ್ವಜನಿಕ ಸಂಸ್ಥೆಯಲ್ಲಿನ ಶೇ. 30 ರಷ್ಟು ಸರಕಾರಿ ಶೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವದೂ (Disinvestment) ಸಹ ಖಾಸಗೀಕರಣವೆಂದು ಬಗೆಯಲಾಗಿದೆ. ಈ ಶೇರುಗಳನ್ನು ಪಾರಸ್ಪರಿಕ ನಿಧಿ ಹಾಗೂ ಹಣಕಾಸಿನ ಸಂಸ್ಥೆಗಳಿಗೂ ಹಾಗೂ ಶೇ. 5 ರಷ್ಟು ಸಂಸ್ಥೆಯ ಉದ್ಯೋಗಿಗಳಿಗೂ ಮಾರಾಟ ಮಾಡಲಾಗುತ್ತದೆ. ಇದರಿಂದ ಖಾಸಗೀಕರಣ ಮಾಡಲಾಗುವದೆಂದು ಸರಕಾರವು ಹೇಳಿಕೊಳ್ಳುತ್ತದೆ. ಶೇ. 5 ರಷ್ಟು ಶೇರುಗಳನ್ನು ಉದ್ಯೋಗಿಗಳಿಗೆ ಮಾರುವುದರಿಂದ ಏನೂ ಪರಿಣಾಮವಾಗದು. ಆದರೆ ಸರಕಾರವು ಖಾಸಗೀಕರಣವನ್ನು ಅರೆ-ಮನಸ್ಸಿನಿಂದ ಮಾಡುತ್ತಿದೆಯೇ ಹೊರತು ಪೂರ್ತಿ ಮನಸ್ಸಿನಿಂದ ಮಾತ್ರ ಮಾಡುತ್ತಿಲ್ಲವೆಂದೇ ಹೇಳಬೇಕಾಗುತ್ತದೆ.

 

ಖಾಸಗಿ ವಲಯದ ಸಮಸ್ಯೆಗಳು ಮತ್ತು ಭವಿಷ್ಯದಲ್ಲಿ ಪ್ರಗತಿ

ಖಾಸಗಿ ವಲಯಕ್ಕೆ ಸಂಬಂಧಿಸಿದಂತೆ ಸರಕಾರದ ಪ್ರವೃತ್ತಿ ಮತ್ತು ನೀತಿಗಳ ನಡುವೆ ಅಜಗಜಾಂತರ ಅಂತರವಿದೆ. ಅವೆರಡೂ ಪರಸ್ಪರ ವಿರುದ್ಧವಾಗಿವೆ. ಭಾರತದ ಅರ್ಥವ್ಯವಸ್ಥೆಯಲ್ಲಿ ಖಾಸಗಿ ವಲಯವು ಅತ್ಯಂತ ಮಹತ್ವದ ಪಾತ್ರ ವಹಿಸಬೇಕೆಂದೂ, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ತಾನು ನೀಡುತ್ತಿರುವುದಾಗಿಯೂ ಹಾಗೂ ಈ ದಿಶೆಯಲ್ಲಿ ತಾನು ಉತ್ತೇಜನಕರವಾದ ಕ್ರಮಗಳನ್ನು ಕೈಕೊಂಡಿರುವುದಾಗಿಯೂ ಸರಕಾರವು ಜಂಭಕೊಚ್ಚಿಕೊಳ್ಳುತ್ತಿದೆ. ಆದರೆ ಅದೇ ವೇಳೆಗೆ ಖಾಸಗಿ ವಲಯವು ಮುಕ್ತವಾಗಿ ಮತ್ತು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗದಂತಹ ಹಾಗೂ ಅದರ ಬೆಳವಣಿಗೆಯನ್ನು ಕುಂಠಿತಗೊಳಿಸುವಂಥ ಕ್ರಮಗಳನ್ನು ಸರಕಾರವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈಕೊಂಡಿದೆ. ಕೆಳಗೆ ಖಾಸಗಿ ವಲಯವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ವಿವರಿಸಿದೆ.

1. ಕಾರ್ಯವಿಧಾನದಲ್ಲಿ ವಿಳಂಬ : ಭಾರತವನ್ನೊಳಗೊಂಡು ಎಲ್ಲ ಅಭಿವೃದ್ಧಿಪರ ರಾಷ್ಟ್ರಗಳಲ್ಲಿ ಸರಕಾರಗಳು ಖಾಸಗಿ ವಲಯದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆಯಲ್ಲದೆ ಅದರ ಕಾರ್ಯವಿಧಾನದಲ್ಲಿ ಅತ್ಯಧಿಕ ಪ್ರಮಾಣದ ವಿಳಂಬವು ಸರ್ವೆಸಾಮಾನ್ಯವಾಗಿದೆ. ಭಾರತದಲ್ಲಿಯಂತೂ ಅದು ಅತೀ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಯಾವುದೇ ಒಂದು ಬಂಡವಾಳ ಹೂಡುವಿಕೆಯ ಯೋಜನೆಯು ರೂಪಿತಗೊಂಡು ಅದು ಉತ್ಪಾದನೆಯ ಹಂತ ತಲುಪುವವರೆಗೆ ಅದಕ್ಕೆ ಕನಿಷ್ಠ ಏಳು ವರ್ಷಗಳು ಬೇಕಾಗುತ್ತವೆಯೆಂದು ಅಂದಾಜು ಮಾಡಲಾಗಿದೆ. ಖಾಸಗಿ ವಲಯದ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಯಾವುದೇ ಒಂದು ಸಣ್ಣ ವಿಷಯದ ಬಗೆಗೆ ಒಂದು ಕಾಲದಲ್ಲಿ ಕೆಳಗಿನ ಹಂತದಲ್ಲಿಯೇ ತೀರ್ಮಾನಗಳನ್ನು ಕೈಕೊಳ್ಳುತ್ತಿದ್ದುದನ್ನು ಈಗ ಅತ್ಯುನ್ನತ ಅಧಿಕಾರಿಗಳು: ಇಲ್ಲವೇ ಸಂಬಂಧಿಸಿದ ಮಂತ್ರಿಗಳು ತೆಗೆದುಕೊಳ್ಳುವ ಪ್ರಸಂಗ ಉದ್ಭವಿಸಿದೆ. ಇದರಿಂದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಕಷ್ಟು ವಿಳಂಬವಾಗುತ್ತಿದೆಯಲ್ಲದೆ ಭ್ರಷ್ಟಾಚಾರದ ಪ್ರಮಾಣವೂ ಅತ್ಯಧಿಕವಾಗಿದೆ. ಹೀಗಾಗಿ ಖಾಸಗಿ ವಲಯವು ಅಲ್ಪ ವೆಚ್ಚದಲ್ಲಿ ಮುಗಿಸಬಹುದಾದ ಕೆಲಸಕ್ಕೆ ಭಾರಿ ವೆಚ್ಚವನ್ನು ಭರಿಸಬೇಕಾಗಿದೆ.

2. ಅವಾಸ್ತವಿಕ ನಿಯಂತ್ರಣಗಳು : ಸರಕಾರವು ಖಾಸಗಿ ವಲಯದವರು ಉತ್ಪಾದಿಸುವ ವಸ್ತುಗಳ ಬೆಲೆಯನ್ನು ನಿಯಂತ್ರಿಸುವ ಹಾಗೂ ಸಂಪತ್ತಿನ ಕೇಂದ್ರೀಕರಣವನ್ನು ನಿವಾರಿಸುವ ಮತ್ತು ಆದಾಯದ ಅಸಮಾನ ಹಂಚಿಕೆಯನ್ನು ಪ್ರತಿಬಂಧಿಸುವ ಕ್ರಮಗಳನ್ನು ಕೈಕೊಂಡಿದೆ. ಆದರೆ ಸರಕಾರವು ರೂಪಿಸಿದ ಬೆಲೆ-ನಿಯಂತ್ರಣದ ನೀತಿಗಳು ಅವಾಸ್ತವಿಕವಾಗಿದ್ದು, ಅನೇಕ ಉದ್ದಿಮೆದಾರರಿಗೆ ತಮ್ಮ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಯಾವ ಪ್ರೇರಣೆಯೂ ಇಲ್ಲದಂತಾಗಿದೆ. ಸರಕಾರವು ಹೀಗೆ ಬೆಲೆಗಳನ್ನು ನಿಯಂತ್ರಿಸುವುದಕ್ಕೆ ಬದಲು ಅನೇಕ ಉತ್ಪಾದಕರಿಗೆ ಅವೇ ವಸ್ತುಗಳನ್ನುತ್ಪಾದಿಸಲು ಅವಕಾಶ ನೀಡಿ, ಮಾರುಕಟ್ಟೆಯಲ್ಲಿ ಪೈಪೋಟಿ ಉಂಟಾಗುವಂತೆ ಮಾಡಿದ್ದರೆ ಬೆಲೆಗಳು ತಮ್ಮಷ್ಟಕ್ಕೆ ತಾವೇ ಕಡಿಮೆಯಾಗುತ್ತಿದ್ದವಲ್ಲದೆ ಬೆಲೆ ನಿಯಂತ್ರಣದ ಅವಶ್ಯಕತೆಯೇ ಉಂಟಾಗುತ್ತಿದ್ದಿಲ್ಲ. ಸರಕುಗಳ ಅಭಾವವಿದ್ದಾಗ ಬೆಲೆ ನಿಯಂತ್ರಣ ವಿಧಾನವು ಕಪ್ಪು ಪೇಟೆಗೆ ಅವಕಾಶ ಮಾಡಿಕೊಡುತ್ತದೆ. ಖಾಸಗಿ ಉದ್ದಿಮೆದಾರರು ತಮ್ಮ ಬಂಡವಾಳವನ್ನು ಬೆಲೆ ನಿಯಂತ್ರಿತ ಉದ್ದಿಮೆಗಳಿಂದ ಬೆಲೆ ನಿಯಂತ್ರಣವಿರದ ಉದ್ದಿಮೆಗಳಿಗೆ ವರ್ಗಾಯಿಸಲು ಉದ್ಯುಕ್ತರಾಗುತ್ತಾರೆ. ಈ ದಿಶೆಯಲ್ಲಿ ದ್ವಿ-ವಿಧ`ಬೆಲೆ ನೀತಿಯು ಅವಾಸ್ತವಿಕವಾದ ಬೆಲೆ ನಿಯಂತ್ರಣಕ್ಕಿಂತಲೂ ಹೆಚ್ಚು ಯೋಗ್ಯವಾಗಿದೆ. ಇಡಿಯ ಪ್ರಪಂಚದಲ್ಲಿ ವಸ್ತುಗಳ ಉತ್ಪಾದನೆಯ ಸಾಮರ್ಥ್ಯದ ಮೇಲೆ ಮಿತಿಯನ್ನು ಹೇರಿ ಉತ್ಪಾದನೆಯನ್ನು ಮಿತಿಗೊಳಿಸಿದ ರಾಷ್ಟ್ರವೆಂದರೆ ಭಾರತವೊಂದೇ ಎಂದು ಹೇಳಬಹುದು. ಉದ್ಯೋಗಾವಕಾಶಗಳನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಖಾಸಗಿ ಉದ್ದಿಮೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಅವಶ್ಯವಿದೆ. ಆದರೆ ಸರಕಾರವು ಇದಕ್ಕೆ ತದ್ವಿರುದ್ಧವಾದ ನೀತಿಯನ್ನು ಅನುಸರಿಸಿ, ಖಾಸಗಿ ವಲಯದ ಕೈಗಾರಿಕೆಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡಿತು. ಆದರೆ ಸರಕಾರಕ್ಕೆ ಇದರ ಅರಿವು ಆದದ್ದು ಇತ್ತೀಚಿನ ವರ್ಷಗಳಲ್ಲಿ ಮಾತ್ರ. ಕಳೆದ ಒಂದು ದಶಕದಿಂದ ಈ ನೀತಿಯನ್ನು ಸರಕಾರವು ಬಿಟ್ಟುಕೊಟ್ಟಿರುವುದು ಶುಭ-ಸಂಕೇತವೆಂದೇ ಹೇಳಬಹುದು.

3. ಚಿಕ್ಕ ಕೈಗಾರಿಕೆಗಳಿಗೆ ಮೀಸಲು : ದೊಡ್ಡ ಉದ್ದಿಮೆಗಳು ಚಿಕ್ಕ ಉದ್ದಿಮೆಗಳೊಡನೆ ಪೈಪೋಟಿಗಿಳಿದು ಅವುಗಳ ಬೆಳವಣಿಗೆಯನ್ನು ಹತ್ತಿಕ್ಕಬಹುದೆಂಬ ವಿಚಾರದಿಂದ ಸರಕಾರವು ಚಿಕ್ಕ ಉದ್ದಿಮೆಗಳನ್ನು ದೊಡ್ಡ ಉದ್ದಿಮೆಗಳಿಂದ ರಕ್ಷಿಸಲು ಹಲವಾರು ಕ್ರಮಗಳನ್ನು ಕೈಕೊಂಡಿದೆ. ಉದಾಹರಣೆಗೆ, ಚಿಕ್ಕ ಕೈಗಾರಿಕೆಗಳನ್ನು ಅಬಕಾರಿ ತೆರಿಗೆಯಿಂದ ಮುಕ್ತಗೊಳಿಸಿರುವುದು ಇಲ್ಲವೆ ಕಡಿಮೆ ದರದ ಅಬಕಾರಿ ಸುಂಕವನ್ನು ಹೇರಿರುವುದು, ಕೆಲವೊಂದು ಸರಕುಗಳ ಉತ್ಪಾದನೆಯನ್ನು ಕೇವಲ ಚಿಕ್ಕ ಕೈಗಾರಿಕೆಗಳಿಗೆ ಮಾತ್ರ ಮೀಸಲಾಗಿಟ್ಟಿರುವುದು ಹಾಗೂ ದೊಡ್ಡ ಉದ್ದಿಮೆಗಳು ಅವುಗಳನ್ನು ಉತ್ಪಾದಿಸದಂತೆ ನೋಡಿಕೊಂಡಿರುವುದು ಇಂತಹ ಕ್ರಮಗಳಾಗಿವೆ. ಇದರ ಪರಿಣಾಮ ಮಾತ್ರ ವಿಪರೀತವಾಗಿದೆ. ನಿಜ ಹೇಳಬೇಕೆಂದರೆ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ವಿವಿಧ ಕೈಗಾರಿಕೆಗಳ ನಡುವೆ, ಮುಖ್ಯವಾಗಿ ಚಿಕ್ಕ ಮತ್ತು ದೊಡ್ಡ ಕೈಗಾರಿಕೆಗಳ ನಡುವೆ ಸಮನ್ವಯ ಸಹಕಾರ ಇರುವುದು ಅತ್ಯಾವಶ್ಯಕವಾಗಿದೆ. ಚಿಕ್ಕ ಕೈಗಾರಿಕೆಗಳು ದೊಡ್ಡ ಕೈಗಾರಿಕೆಗಳಿಗೆ ಪೂರಕವಾಗುವಂತೆ ತಮ್ಮ ಸರಕುಗಳನ್ನುತ್ಪಾದಿಸುವುದು ಮತ್ತು ದೊಡ್ಡ ಕೈಗಾರಿಕೆಗಳು ತಮ್ಮ ಅನೇಕ ಆವಶ್ಯಕತೆಗಳಿಗಾಗಿ ಚಿಕ್ಕ ಕೈಗಾರಿಕೆಗಳನ್ನವಲಂಬಿಸುವುದರಿಂದ ಅವೆರಡೂ ಪ್ರಕಾರದ ಕೈಗಾರಿಕೆಗಳು ಬೆಳೆದು ಬರುತ್ತವೆ. ನಮ್ಮ ದೇಶದ ಸರಕಾರವು ಇದಕ್ಕೆ ವಿರುದ್ಧವಾದ ನೀತಿಯನ್ನು ಅನುಸರಿಸಿತು. ಚಿಕ್ಕ ಕೈಗಾರಿಕೆಗಳಿಗೆ ಸರಕುಗಳ ಉತ್ಪಾದನೆಯ ಬಗೆಗೆ ಮೀಸಲಾತಿ ನೀಡುವುದಕ್ಕೆ ಬದಲು ಅವು ಸಹ ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸುವಂತೆ ಮಾಡಿ ಅವುಗಳ ಪೈಪೋಟಿಯ ಸಾಮರ್ಥ್ಯವನ್ನು ಹೆಚ್ಚಿಸುವುದು ಅತ್ಯಾವಶ್ಯಕವಾಗಿದೆ. ಅದೇ ವೇಳೆಗೆ ಅವುಗಳ ತೆರಿಗೆ ರಿಯಾಯಿತಿ ಮತ್ತು ವಿನಾಯಿತಿಗಳನ್ನು ಮುಂದುವರಿಸುವುದೂ ಅವಶ್ಯಕವಾಗಿದೆ.

4. ಹಣಕಾಸು ಮತ್ತು ಪತ್ತಿನ ಸಮಸ್ಯೆ : ಖಾಸಗಿ ವಲಯದ ದೊಡ್ಡ ಕೈಗಾರಿಕೆ ಸಂಸ್ಥೆಗಳು ಬ್ಯಾಂಕುಗಳಿಂದ ಮತ್ತಿತರ ಹಣಕಾಸಿನ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ತಮಗೆ ಬೇಕಾಗುವ ಹಣಕಾಸನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ. ಅವು ಇತ್ತೀಚೆಗೆ ಪರಿವರ್ತಿತ ಮತ್ತು ಅಪರಿವರ್ತಿತ ಡಿಬೆಂಚರುಗಳನ್ನು ನೀಡಿ, ಸಾರ್ವಜನಿಕ ಠೇವಣಿಗಳ ಮೂಲಕ ಬಂಡವಾಳವನ್ನು ಸಂಗ್ರಹಿಸುತ್ತಿವೆ.

 

ಭವಿಷ್ಯದಲ್ಲಿ ಪ್ರಗತಿ :

1991 ರ ಹೊಸ ಕೈಗಾರಿಕಾ ನೀತಿಯು ಖಾಸಗಿ ವಲಯಕ್ಕೆ ವರದಾನವಾಗಿದೆಯೆಂದೇ ಹೇಳಬಹುದು. ಖಾಸಗಿ ವಲಯದ ಮೇಲಿನ ಸಂಕೋಲೆಗಳನ್ನು ಹಾಗೂ ನಿರ್ಬಂಧಗಳನ್ನು ಅದು ತೆಗೆದು ಹಾಕಿತು. ವಿದೇಶಿ ಬಂಡವಾಳವು ದೇಶದೊಳಗೆ ಹರಿದುಬರುವಂತೆ ಹಾಗೂ ದೇಶೀಯ ಬಂಡವಾಳವು ಅಧಿಕ ಪ್ರಮಾಣದಲ್ಲಿ ವಿವಿಧ ಕೈಗಾರಿಕೆಗಳಲ್ಲಿ ವಿನಿಯೋಗಿಸಲ್ಪಡುವಂತೆ ಸರಕಾರವು ಕ್ರಮಗಳನ್ನು ಕೈಗೊಂಡಿದೆ. ಒಂದು ದೃಷ್ಟಿಯಿಂದ ಸರಕಾರವು ‘ಖಾಸಗೀಕರಣಕ್ಕೆ’ ಹಿಂದೆಂದೂ ಇಲ್ಲದ ಒಲವನ್ನು ತೋರಿದೆ. ಅದುವರೆಗೆ ಸಾರ್ವಜನಿಕ ವಲಯಕ್ಕೆ ಮೀಸಲಾಗಿದ್ದ ಹಲವಾರು ಉದ್ದಿಮೆಗಳಲ್ಲಿ ಖಾಸಗಿ ವಲಯವು ಪ್ರವೇಶಿಸುವಂತೆ ಅವಕಾಶ ಮಾಡಿಕೊಟ್ಟಿದೆ. ಲೈಸೆನ್ಸ್‌  ನೀಡುವ ಪದ್ಧತಿಯನ್ನು ಅದು ರದ್ದುಪಡಿಸಿದೆ. ಒಟ್ಟಿನಲ್ಲಿ 1991ರ ನಂತರ ಖಾಸಗೀಕರಣಕ್ಕೆ ಸರಕಾರವು ತೆಗೆದುಕೊಂಡ ಕ್ರಮಗಳನ್ನು ಈ ಕೆಳಗಿನಂತೆ ವಿವರಿಸಬಹುದು

1. ಸಂಕೋಲೆಗಳ ನಿವಾರಣೆ (Removal of Hurdles) : ಖಾಸಗಿ ಉದ್ದಿಮೆಗಳ ಮೇಲೆ ಹೇರಿದ ಅನೇಕ ಸಂಕೋಲೆಗಳನ್ನು ಮತ್ತು ನಿರ್ಬಂಧಗಳನ್ನು ತೆಗೆದುಹಾಕಲಾಯಿತು.

2. ಲೈಸೆನ್ಸ್‌  ಪದ್ಧತಿಯ ರದ್ದತಿ (Abolition of Licensing) : 1951 ರ ಕೈಗಾರಿಕಾ ಕಾಯಿದೆಯನ್ನು ಕೈಗಾರಿಕೆಗಳಿಗೆ ಲೈಸೆನ್ಸ್ ನೀಡುವ ಪದ್ಧತಿಯನ್ನು ರಕ್ಷಣಾ ಅವಶ್ಯಕತೆಗಳಿಗೆ ಸಂಬಂಧಿಸಿದ ಉದ್ದಿಮೆಗಳು ಮತ್ತು ಐಷಾರಾಮದ ವಸ್ತುಗಳನ್ನು ತಯಾರಿಸುವ ಒಟ್ಟು 18 ಉದ್ದಿಮೆಗಳನ್ನು ಹೊರತುಪಡಿಸಿ ಉಳಿದೆಲ್ಲ ಉದ್ದಿಮೆಗಳಿಗೆ ಲೈಸೆನ್ಸ್ ನೀಡುವದನ್ನು ರದ್ದುಪಡಿಸಲಾಯಿತು.

3. ಚಿಕ್ಕ ಕೈಗಾರಿಕೆಗಳಿಗೆ ಮೀಸಲಾತಿ (Reservation for Small Sector) : ಈ ವರೆಗೆ ಚಿಕ್ಕ ಪ್ರಮಾಣದ ಕೈಗಾರಿಕೆಗಳಿಗೆ ಕೆಲವು ವಸ್ತುಗಳ ಉತ್ಪಾದನೆಯನ್ನು ಮೀಸಲಾಗಿರಿಸಿದ್ದನ್ನು ಮುಂದುವರಿಸಲಾಯಿತು. ಅದರಂತೆ ಕೃಷಿ ಆಧರಿತ ಯೋಜನೆಗಳಿಗೆ ಚಿಕ್ಕ ಉದ್ದಿಮೆ ರಂಗದಲ್ಲಿ ನೀಡಿದ ಆದ್ಯತೆಯನ್ನು ಮುಂದುವರಿಸಲಾಯಿತು.

4. ವಿಚಾರಾಪೇಕ್ಷೆಯಿಲ್ಲದೆ ಅನುಮತಿ (Automatic Clearance) : ಬಂಡವಾಳದ ಸರಕುಗಳ ಅವಶ್ಯಕತೆ ಇರುವ ಉದ್ದಿಮೆಗಳು ವಿದೇಶಿ ಷೇರು ಬಂಡವಾಳದ ಮೂಲಕ ವಿದೇಶಿ ವಿನಿಮಯವನ್ನು ದೊರಕಿಸುವುದಾದರೆ, ಅವು ಸರಕಾರದಿಂದ ಯಾವ ಅನುಮತಿಯನ್ನೂ ಪಡೆಯಬೇಕಾಗುವುದಿಲ್ಲ.

5. ವಿಚಾರಾಪೇಕ್ಷೆಯಿಲ್ಲದ ಒಪ್ಪಿಗೆ (Automatic Approval) : ಎರಡು ಕೋಟಿ ರೂಪಾಯಿಗಳಿಗೆ ಮಿಕ್ಕಿದಂತೆ ವಿದೇಶಿ ಬಂಡವಾಳದ ಸರಕುಗಳನ್ನು ಆಮದು ಮಾಡಬೇಕಾದ ಉದ್ದಿಮೆಗಳಿಗೆ ಸರಕಾರದ ಪೂರ್ವಾನುಮತಿ ಬೇಕಾಗುವುದಿಲ್ಲ.

6. ವಿಸ್ತೃತ ಬಂಧನದ ಸೌಲಭ್ಯ (Broad-banding Facility) : ಸ್ಥಾವರ ಮತ್ತು ಯಂತ್ರೋಪಕರಣಗಳಲ್ಲಿ ಹೆಚ್ಚುವರಿ ಬಂಡವಾಳದ ಹೂಡಿಕೆಯ ಅವಶ್ಯಕತೆ ಇರದಿದ್ದರೆ ಸದ್ಯ ಅಸ್ತಿತ್ವದಲ್ಲಿದ್ದ ಹಾಗೂ ಹೊಸದಾಗಿ ಸ್ಥಾಪಿಸಲ್ಪಡುವ ಉದ್ದಿಮೆ ಘಟಕಗಳು ಯಾವುದೇ ಹೊಸ ವಸ್ತುವಿನ ಉತ್ಪಾದನೆಯನ್ನು ಕೈಕೊಳ್ಳಬಹುದು.

7. ಲೈಸನ್ಸ್ ಪಡೆಯುವುದರಿಂದ ವಿಮುಕ್ತಿ (Exemption from Licensing) : ಸದ್ಯ ಅಸ್ತಿತ್ವದಲ್ಲಿದ್ದ ಉದ್ದಿಮೆ ಘಟಕಗಳನ್ನು ವ್ಯಾಪಕವಾಗಿ ವಿಸ್ತರಿಸಬೇಕಾದರೆ ಅವು ಲೈಸೆನ್ಸ್‌ ಪಡೆಯುವ ಅವಶ್ಯಕತೆಯಿಲ್ಲ.

8. ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ (Approval for Direct Foreign Investment) : ಈ ಮೊದಲು ವಿದೇಶಿ ವಿನಿಮಯ ನಿಯಂತ್ರಣ ಕಾನೂನಿನ (Foreign Exchange Regulation Act) ಪ್ರಕಾರ ಭಾರತದ ಉದ್ದಿಮೆಗಳಲ್ಲಿ ಶೇ. 40 ರಷ್ಟು ವಿದೇಶಿ ಬಂಡವಾಳ ಹೂಡುವಿಕೆಗೆ ಅವಕಾಶವಿತ್ತು. ಈಗ ಅದನ್ನು ಶೇ. 51 ಕ್ಕೆ ಏರಿಸಲಾಗಿದೆ. ಅಂಥ ವಿದೇಶಿ ಬಂಡವಾಳವನ್ನು ಹೆಚ್ಚು ಆದ್ಯತೆ ಪಡೆದ ಉದ್ದಿಮೆಗಳಲ್ಲಿ ಮಾತ್ರ ನೇರವಾಗಿ ಅಂಥ ಬಂಡವಾಳ ವಿನಿಯೋಗಕ್ಕೆ ವಿಚಾರಾಪೇಕ್ಷೆಯಿಲ್ಲದೆ ಅನುಮತಿ ನೀಡಲಾಗುತ್ತದೆ.

9. ಯಾವ ಅಡೆತಡೆಗಳೂ ಇಲ್ಲ (No Bottlenecks) : ವಿದೇಶಿ ವಿನಿಮಯದ ಮೂಲಕ ಷೇರು ಬಂಡವಾಳದಲ್ಲಿ ವಿದೇಶಿಯರು ಭಾಗವಹಿಸುವುದರ ಮೇಲೆ ನಿರ್ಬಂಧಗಳನ್ನೂ ಹೇರಲಾಗುವುದಿಲ್ಲ.

10. ವಿಶೇಷ ಅಧಿಕಾರವುಳ್ಳ ಮಂಡಳಿ ಸಂಸ್ಥೆಗಳೊಡನೆ ಒಪ್ಪಂದದ ಮೂಲಕ ಮಾತುಕತೆ ನಡೆಸಿ, ಆಯ್ದ ಕ್ಷೇತ್ರಗಳಲ್ಲಿ ನೇರ ಬಂಡವಾಳ ತೊಡಗಿಸುವುದಕ್ಕೆ ಅನುಮೋದನೆ ನೀಡಲು ವಿಶೇಷ ಅಧಿಕಾರವುಳ್ಳ ಮಂಡಳಿಯೊಂದನ್ನು ಕೂಡಲೇ ಸ್ಥಾಪಿಸಲಾಗುವುದು.

11. ವಿದೇಶಿ ಹೂಟೆಗಳು ಮುಕ್ತ (Foreign Investments Freed) : ವಿದೇಶಿ ಸಂಸ್ಥೆಗಳು ಭಾರತದ ಉದ್ದಿಮೆಗಳಲ್ಲಿ ಬಂಡವಾಳ ಹೂಡುವದನ್ನು ಯಾವುದೇ ನಿರ್ಬಂಧ ನಿಯಮಾವಳಿಗಳಿಂದ ಮುಕ್ತಗೊಳಿಸಲಾಗುವುದು.

12. ವಿದೇಶಿ ತಂತ್ರಜ್ಞಾನ ಒಪ್ಪಂದಗಳಿಗೆ ವಿಚಾರಾಪೇಕ್ಷೆಯಿಲ್ಲದ ಅನುಮತಿ (Automatic Permission of Foreign Technology Agreements): ಆದ್ಯತೆವುಳ್ಳ 34 ಉದ್ದಿಮೆಗಳಲ್ಲಿ 1 ಕೋಟಿ ರೂಪಾಯಿಯವರೆಗೆ ಸಂದಾಯದ ಮೊತ್ತವುಳ್ಳ ವಿದೇಶಿ ತಂತ್ರಜ್ಞಾನ ಒಪ್ಪಂದಗಳಿಗೆ ವಿಚಾರಾಪೇಕ್ಷೆಯಿಲ್ಲದೆ ಅನುಮತಿ ನೀಡಲಾಗುವುದು.

13. ಇತರ ಉದ್ದಿಮೆಗಳಿಗೆ ವಿಚಾರಾಪೇಕ್ಷೆಯಿಲ್ಲದ ಅನುಮತಿ : ಆದ್ಯತೆಯಿರದ ಇತರ ಉದ್ದಿಮೆಗಳಲ್ಲಿ ಯಾವುದೇ ಸಂದಾಯಗಳಿಗೆ ಉಚಿತ ವಿದೇಶಿ ವಿನಿಮಯ ಬೇಕಾಗಿರದಿದ್ದರೆ ವಿದೇಶಿ ತಂತ್ರಜ್ಞಾನ ಒಪ್ಪಂದಗಳಿಗೂ ವಿಚಾರಾಪೇಕ್ಷೆಯಿಲ್ಲದೆ ಅನುಮತಿ ನೀಡಲಾಗುವುದು.

14. ಅನುಮತಿ ಅವಶ್ಯಕತೆಯಿಲ್ಲ : ವಿದೇಶಿ ತಂತ್ರಜ್ಞರನ್ನು ಸಂಭಾವನೆಯ ಮೇಲೆ ನೇಮಿಸಿಕೊಳ್ಳಲು ಅಥವಾ ದೇಶೀಯವಾಗಿ ಅಭಿವೃದ್ಧಿಪಡಿಸಿದ ವಸ್ತುಗಳನ್ನು ವಿದೇಶಿ ತಂತ್ರಜ್ಞರ ಪರಿಶೀಲನೆಗೆ ಒಳಪಡಿಸಲು ಇನ್ನು ಮುಂದೆ ಅನುಮತಿ ಬೇಕಾಗಿಲ್ಲ.

15. ಸಾರ್ವಜನಿಕ ರಂಗದ ಹೂಟೆಗಳ ಪರಿಶೀಲನ (Review of Public Sector Undertakings) : ಸಾರ್ವಜನಿಕ ರಂಗದ ಉದ್ದಿಮೆ ಘಟಕಗಳು ಲಾಭದಾಯಕವಾಗಿ ಸಮರ್ಥವಾಗಿ ನಡೆಯುತ್ತಿಲ್ಲವಾದ್ದರಿಂದ ಅವುಗಳಲ್ಲಿ ತೊಡಗಿಸಿದ ಷೇರು ಬಂಡವಾಳವನ್ನು (Mutual Funds), ಹಣಕಾಸಿನ ಸಂಸ್ಥೆಗಳು, ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ನೀಡಲಾಗುವುದು. ಇದರಿಂದ ಅವು ಹೆಚ್ಚು ಸಮರ್ಥವಾಗಿ ನಷ್ಟವಿಲ್ಲದೆ ನಡೆಯುವಂತಾಗಬೇಕೆಂಬುದೇ ಇದರ ಉದ್ದೇಶ.

16. ಖಾಸಗಿ ರಂಗಕ್ಕೆ ಮೀಸಲಾತಿ ಕ್ಷೇತ್ರಗಳಲ್ಲಿ ಪ್ರವೇಶ : ಈಗಾಗಲೇ ಮೀಸಲಾದ ಕ್ಷೇತ್ರಗಳಲ್ಲಿ ಸಾರ್ವಜನಿಕ ರಂಗದ ಉದ್ದಿಮೆ ಘಟಕಗಳನ್ನು ಮುಂದುವರಿಸಲಾಗುವದಲ್ಲದೆ ಸ್ಪರ್ಧೆಗೆ ಪ್ರೋತ್ಸಾಹ ನೀಡಲು ಖಾಸಗಿ ರಂಗಕ್ಕೂ ಇಲ್ಲಿ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುವುದು. ಇದೇ ಪ್ರಕಾರವಾಗಿ ಸಾರ್ವಜನಿಕ ರಂಗಕ್ಕೂ ತನಗೆ ಮೀಸಲಾಗಿಡದ ಕ್ಷೇತ್ರಗಳಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗುವುದು.

17. ರೋಗಗ್ರಸ್ತ ಸಾರ್ವಜನಿಕ ಉದ್ದಿಮೆ ಘಟಕಗಳು: ನಷ್ಟವನ್ನನುಭವಿಸುತ್ತಿದ್ದ ಕೆಲವು ಸಾರ್ವಜನಿಕ ಘಟಕಗಳನ್ನು ಕೈಗಾರಿಕಾ ಮತ್ತು ಹಣಕಾಸು ಪುನರ್ನಿಮಾಣದ ಮಂಡಳಿಗೆ (Board of Industrial and Financial Re-construction-BIFR) ಸುಧಾರಣೆಯ ಉದ್ದೇಶಕ್ಕಾಗಿ ವಹಿಸಿಕೊಡಲಾಗುವುದು. ಅದು ಈ ರೋಗಗ್ರಸ್ತ ಘಟಕಗಳ ಪುನಶ್ಚೇತನ ಕಾರ್ಯವನ್ನು ನಿರ್ವಹಿಸುವುವು.

18. ಎಮ್.ಆರ್.ಟಿ.ಪಿ. ಕಾಯಿದೆಯಲ್ಲಿ ಬದಲಾವಣೆ : ಈ ವರೆಗೆ ಏಕಸ್ವಾಮ್ಯ ಮತ್ತು ಸರಕಾರದ ಪ್ರತಿಬಂಧಿತ ವ್ಯಾಪಾರಿ ಚಟುವಟಿಕೆಗಳ ಕಾಯಿದೆಯು ಬೃಹತ್‌ ಪ್ರಮಾಣದ ಕಂಪನಿಗಳ ಮೇಲೆ ಅನೇಕ ನಿರ್ಬಂಧನೆಗಳನ್ನು ಹೇರಿತ್ತು. ಅವು ಈ ನಿರ್ಬಂಧನೆಗಳ ಸಡಿಲಿಕೆಗಾಗಿ ಪೂರ್ವಾನುಮತಿಯನ್ನು ಪಡೆಯಬೇಕಾಗುತ್ತಿತ್ತು. ಉದಾಹರಣೆಗೆ, ಹೊಸ ಘಟಕಗಳನ್ನು ಸ್ಥಾಪಿಸಲು, ಇದ್ದ ಘಟಕಗಳನ್ನು ವಿಸ್ತರಿಸಲು, ವಿಲಿನೀಕರಣಗೊಳಿಸಲು, ಇತರ ಘಟಕಗಳನ್ನು ಖರೀದಿಸಲು, ನಿರ್ದೇಶಕರನ್ನು ನೇಮಿಸಲು ಇವೇ ಮೊದಲಾದವುಗಳ ಮೇಲೆ ನಿರ್ಬಂಧನೆಗಳನ್ನು ಹೇರಲಾಗಿತ್ತು. ಈಗ ಸರಕಾರದಿಂದ ಇವುಗಳಿಗಾಗಿ ಪೂರ್ವಾನುಮತಿ ಪಡೆಯುವ ಅವಶ್ಯಕತೆಯಿಲ್ಲ. ಇದಕ್ಕನುಗುಣವಾಗಿ ಈ ಕಾಯಿದೆಯನ್ನು ತಿದ್ದುಪಡಿ ಮಾಡಲಾಗುವುದು.

19. ಹೊಸದಾಗಿ ಸಂಘಟಿತವಾದ ಎಂ.ಆರ್.ಟಿ.ಪಿ. ಆಯೋಗ : ಎಮ್.ಆರ್.ಟಿ.ಪಿ. (Monopolies and Restrictive Trade Practices ಆಯೋಗವನ್ನು ಹೊಸದಾಗಿ ಪುನರ್ಘಟಿಸಲಾಗುವುದು ಹಾಗೂ ಅದಕ್ಕೆ ವ್ಯಾಪಕ ಅಧಿಕಾರಗಳನ್ನು ಕೊಡಲಾಗುವುದು. ಈ ಅಧಿಕಾರಗಳ ಮೂಲಕ ಅದು ತನ್ನ ಸ್ವಂತ ತನಿಖೆಯ ಮೂಲಕ ಇಲ್ಲವೆ ಗ್ರಾಹಕರಿಂದ ಬಂದ ದೂರುಗಳ ಮೇಲೆ ಕ್ರಮಗಳನ್ನು ತೆಗೆದುಕೊಳಬಹುದಾಗಿದೆ. ಹೀಗೆ ಈ ಆಯೋಗವು ಕಾವಲು ಪಾತ್ರದ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತದೆ.

20. ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಮೇಲಿನ ನಿರ್ಬಂಧದ ಸಡಿಲಿಕೆ: 1956 ರ ಕೈಗಾರಿಕಾ ನೀತಿಯು 18 ಕೈಗಾರಿಕೆಗಳನ್ನು ಸಾರ್ವಜನಿಕ ವಲಯಕ್ಕೆ ಮಿಸಲಾಗಿಟ್ಟಿತ್ತು. 1991 ರ ಕೈಗಾರಿಕಾ ನೀತಿಯು ಈ ಸಂಖ್ಯೆಯನ್ನು 8 ಕ್ಕೆ ಇಳಿಸಿತು. 1993 ರಲ್ಲಿ ಸರಕಾರವು ಮತ್ತೆ ಎರಡು ಕೈಗಾರಿಕೆಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಟ್ಟಿತು. ಈಗ ಕೇವಲ ಆರು ಕೈಗಾರಿಕೆಗಳು ಮಾತ್ರ ಸಾರ್ವಜನಿಕ ವಲಯಕ್ಕೆ ಮೀಸಲಾಗಿವೆ. ಅವು ಯಾವುವೆಂದರೆ (1) ರಕ್ಷಣಾ ಸಾಮಗ್ರಿಗಳು (2) ಅಣುಶಕ್ತಿ (3) ಕಲ್ಲಿದ್ದಲು (4) ಖನಿಜ ತೈಲ (5) ಅಣುಶಕ್ತಿಯ ಉತ್ಪಾದನೆಗೆ ಅವಶ್ಯವಾದ ಖನಿಜಗಳು ಮತ್ತು (6) ರೇಲ್ವೆ ಸಾರಿಗೆ.

ಹೀಗೆ 1990 ರ ದಶಕದಲ್ಲಿ (1990-99) ಖಾಸಗಿ ವಲಯದ ಕಂಪನಿಗಳ ಬೆಳವಣಿಗೆಗೆ ಸರಕಾರವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತು. ೨೧ನೆಯ ಶತಮಾನದ ಆರಂಭದಿಂದಲೂ (2000ದಿಂದ) ಖಾಸಗಿ ವಲಯದ ಕಂಪನಿಗಳ ಸರ್ವಾಂಗೀಣ ಪ್ರಗತಿಗೆ ಸರಕಾರವು ತನ್ನ ಈ ಕಾಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ.

*****



0        


Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources