ಅಧ್ಯಾಯ ೫. ಕಾನೂನಾತ್ಮಕ ಸಂಘಟನೆ ಹಿಂದೂ ಕೋಡ್ ಬಿಲ್

ಪೀಠಿಕೆ:- ಭಾರತೀಯ ನಾಗರೀಕ ಕಾನೂನುಗಳ ಕ್ರೋಢೀಕರಣದ ಪ್ರಕ್ರಿಯೆಯು 1832ರಷ್ಟು ಹಿಂದಕ್ಕೆ ಹೋಗುತ್ತದೆ. ಅದಕ್ಕಾಗಿ ಒಂದು ಕಾನೂನು ಆಯೋಗವನ್ನು ಲಾರ್ಡ್‌ ಮೆಕಾಲೆ ನೇತೃತ್ವದಲ್ಲಿ ನೇಮಿಸಲಾಯಿತು. 22 ವರ್ಷಗಳ ನಂತರ ನೂತನ ಕ್ರೋಢೀಕೃತ ಕಾನೂನುಗಳು ಜಾರಿಗೆ ಬಂದವು. ಆದರೆ, ಭಾರತೀಯ ಮಹಿಳೆಯು ತಲಾ-ತಲಾಂತರದಿಂದಲೂ ಸಾಂಪ್ರದಾಯಿಕವಾಗಿ ರೂಡಿಯಲ್ಲಿರುವ ಹಿಂದೂ ಧಾರ್ಮಿಕ ಕಾನೂನುಗಳಿಂದಾಗಿ ನಿರಂತರ ಶೋಷಣೆಗೊಳಗಾಗಿದ್ದು, ಅದರ ವಿರುದ್ಧ ಅವಳಿಗೆ ನ್ಯಾಯ ಒದಗಿಸುವ ಸಲುವಾಗಿ ಕೌಟುಂಬಿಕ ಕಾನೂನುಗಳಲ್ಲಿ ಮಾರ್ಪಾಡು ಮಾಡುವ ಅವಶ್ಯಕತೆಯು ಕಂಡುಬಂದಿತು. ಈ ನಿಟ್ಟಿನಲ್ಲಿ 1937ರಲ್ಲಿ ಜಾರಿಗೆ ಬಂದ ಹಿಂದೂ ಮಹಿಳೆಯರ ಆಸ್ತಿ ಹಕ್ಕಿನ ಕಾನೂನು  ಪ್ರಪ್ರಥಮ ಬಾರಿಗೆ ಹಿಂದೂ ವಿಧವೆಯರಿಗೆ ಅವಳ ಗಂಡನ ಆಸ್ತಿಯಲ್ಲಿ ಭಾಗವನ್ನು ಪಡೆಯುವ ಅಧಿಕಾರವನ್ನು ನೀಡಿತು.

 

ಅರ್ಥ ಮತ್ತು ವಿವರನೆ: ದೇಶದ ಪ್ರಜೆಗಳಿಗೆಲ್ಲ ಅನ್ವಯವಾಗುವ ಒಂದೇ ಬಗೆಯ ಕಾನೂನನ್ನು ಏಕರೂಪದ ನಾಗರೀಕ ಸಂಹಿತೆ ಎಂದು ಕರೆಯಲಾಗುತ್ತದೆ. ಒಂದು ದೇಶ ಹಾಗೂ ಒಂದೇ ಕಾನೂನು ಎಂಬುದು ಈ ಸಂಹಿತೆಯ ಸ್ವರೂಪವಾಗಿರುತ್ತದೆ. ಅಂದರೆ  ದೇಶದ ಪ್ರಜೆಗಳು ಯಾವುದೇ ಜನಾಂಗ, ಧರ್ಮ, ಲಿಂಗ, ಭಾಷೆಗೆ ಸೇರಿರಲಿ ತಾರತಮ್ಯವಿಲ್ಲದೇ ಎಲ್ಲರೂ ಜಾರಿಯಲ್ಲಿರುವ ಏಕರೂಪದ ರಾಷ್ಟ್ರೀಯ ಕಾನೂನಿಗೆ ಒಳಪಡುತ್ತಾರೆ. ಅಲ್ಲದೇ ವ್ಯಕ್ತಿಯೊಬ್ಬನ ಸಾರ್ವಜನಿಕ ಮತ್ತು ವೈಯಕ್ತಿಕ ಚಟುವಟಿಕೆಗಳನ್ನೂ ಒಂದೇ ಬಗೆಯ ಕಾನೂನಿನಡಿ ಪಾಲಿಸುವುದನ್ನು ಏಕರೂಪ ನಾಗರಿಕ ಸಂಹಿತೆ ಪ್ರತಿಪಾದಿಸುತ್ತದೆ. ಒಟ್ಟಾರೆ ದೇಶವೊಂದರ ಭಿನ್ನ ವರ್ಗಗಳಿಗೆ ಭಿನ್ನ ಕಾನೂನುಗಳಿರದೇ ಸರ್ವ ಪ್ರಜೆಗಳಿಗೆ ಒಂದೇ ಜಾತ್ಯಾತೀತ ಕಾನೂನು ಅನ್ವಯವಾಗುವುದೇ ಏಕರೂಪ ನಾಗರಿಕ ಸಂಹಿತೆ.

 

ಹಿಂದೂ ಕೋಡ್ ಬಿಲ್ ಜಾರಿಯ ಹಿನ್ನೆಲೆ:

1941 ರಲ್ಲಿ ಬ್ರಿಟಿಷ್ ಸರ್ಕಾರ ನೇಮಿಸಿದ್ದ ನಾಲ್ಕು ಸದಸ್ಯರ ಬಿ. ಎನ್. ರಾವ್ ನೇತೃತ್ವದ ಸಮಿತಿಯಿಂದ ವೈವಿಧ್ಯಮಯ ಹಿಂದೂ ವೈಯಕ್ತಿಕ ಕಾನೂನುಗಳನ್ನು ಕ್ರೋಢೀಕರಿಸಿ ಮೊದಲ ಏಕರೂಪದ ಹಿಂದೂ ಸಂಹಿತೆಯನ್ನು ಕರಡಿನ ರೂಪದಲ್ಲಿ ಸಿದ್ಧಪಡಿಸಿತು. ತದನಂತರ ಅದನ್ನು ಆಧರಿಸಿದ ಮಸೂದೆಯು ಆಗಸ್ಟ್ 1946 ರಲ್ಲಿ ಕೇಂದ್ರ ಶಾಸಕಾಂಗದಲ್ಲಿ ಮಂಡಿಸಲಾಯಿತು. ಆದರೆ ಆ ಮಸೂದೆಗೆ ಅಂಗೀಕಾರ ದೊರಕಲಿಲ್ಲ. ಏತನ್ಮಧ್ಯೆ, ಕೇಂದ್ರ ಮತ್ತು ಕೆಲವು ಪ್ರಾಂತೀಯ ಶಾಸಕಾಂಗಗಳು ಹಿಂದೂ ಮಹಿಳೆಯರ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಹಲವಾರು ಕಾಯಿದೆಗಳನ್ನು ಅಂಗೀಕರಿಸಿದವು. 1946 ಹಿಂದೂ ವಿವಾಹ ದೋಷ ನಿರ್ಮೂಲನಾ ಕಾಯ್ದೆಯು ಒಂದೇ ಕುಲಕ್ಕೆ (ಗೋತ್ರ ಅಥವಾ ಪ್ರವರ) ಸೇರಿದ ಹಿಂದೂಗಳ ನಡುವಿನ ವಿವಾಹಗಳನ್ನು ಕಾನೂನುಬದ್ಧಗೊಳಿಸಿತು. ವಿವಾಹಿತ ಹಿಂದೂ ಮಹಿಳೆ 1946 ಹಿಂದೂ ವಿವಾಹಿತ ಮಹಿಳೆಯರ ಪ್ರತ್ಯೇಕ ನಿವಾಸ ಮತ್ತು ನಿರ್ವಹಣೆಯ ಹಕ್ಕು ಕಾಯಿದೆಯ ಮೂಲಕ ಕೆಲವು ಆಧಾರದ ಮೇಲೆ ತನ್ನ ಪತಿಯಿಂದ ಪ್ರತ್ಯೇಕ ನಿರ್ವಹಣೆ ಮತ್ತು ವಾಸದ ಮನೆಯನ್ನು ಪಡೆಯಲು ಸಾಧ್ಯವಾಯಿತು.

 

   ಮುಂದೆ ಏಪ್ರಿಲ್ 11, 1947 ರಂದು ಸಂವಿಧಾನ ರಚನಾ ಸಭೆಯಲ್ಲಿ ಹಿಂದೂ ಸಂಹಿತೆಯ ಮಸೂದೆಯನ್ನು ಪುನಃ ಚರ್ಚೆಗೆ ಮಂಡಿಸಲಾಯಿತು. ಸಭೆಯ ತೀರ್ಮಾನದಂತೆ ಡಾ. ಅಂಬೇಡ್ಕರ್ ಅವರ ನೇತೃತ್ವದ ಆಯ್ಕೆ ಸಮೀತಿಗೆ ಮಸೂದೆಯನ್ನು ಪರಿಷ್ಕರಿಸಲು  ನೀಡಲಾಯಿತು. ಪರಿಣಾಮವಾಗಿ 1948 ರ ವೇಳೆಗೆ ವಿವಿಧ ಧರ್ಮ ಗ್ರಂಥಗಳ ಆಳವಾದ ಅಧ್ಯಯನದ ಬಳಿಕ ಹಿಂದೂ ವೈಯಕ್ತಿಕ ಕಾನೂನುಗಳನ್ನು ಕ್ರೋಢೀಕರಿಸಿ ಏಕರೂಪ ಸಂಹಿತೆಯೊಂದನ್ನು ಅಳವಡಿಸಲು ಅಂದಿನ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಅವರಿಂದ ಹಿಂದೂ ಕೋಡ್ ಬಿಲ್‌ನ ಮತ್ತೊಂದು ಕರಡು ಸಿದ್ಧವಾಯಿತು.

 

ಡಾ. ಅಂಬೇಡ್ಕರ್‌ ಅವರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಹಿಂದೂ ಸಂಹಿತೆಯ ಸ್ವರೂಪ

ಬಿ. ಎನ್.‌ ರಾವ್‌ ಅವರಿದ್ದ ಸಮಿತಿಯು ರಚಿಸಿದ್ದ ಏಕರೂಪ ಹಿಂದೂ ಸಂಹಿತೆಯ ಮೊದಲನೇ ಕರಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯು ಎರಡನೇ ಕರಡಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿತು. ನೂತನವಾಗಿ ರಚನೆಗೊಂಡ  ಸಂಹಿತೆಯ ಕರಡಿನಲ್ಲಿ ಒಟ್ಟು ಎಂಟು ಭಾಗಗಳಿದ್ದವು. ಅದು ಹಿಂದೂ ಸಮಾಜದಲ್ಲಿನ ಸ್ತ್ರೀ ಮತ್ತು ಪುರುಷರ ನಡುವಿನ ಅಸಮಾನತೆಯನ್ನು ಹೋಗಲಾಡಿಸುವ ಗುರಿಯನ್ನು ಹೊಂದಿತ್ತು.

ಹಿಂದೂ ಕೋಡ್‌ ಬಿಲ್‌ ಒಳಗೊಂಡ ಪ್ರಮುಖ ಅಂಶಗಳೆಂದರೆ:

1. ಒಬ್ಬ ಹೆಂಡತಿ ಬದುಕಿರುವಾಗ ಅವಳ ಪತಿ ಇನ್ನೊಂದು ಮದುವೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ.

2. ನಿಷ್ಠೆ, ಕ್ರೌರ್ಯ ಅಥವಾ ಪರಿತ್ಯಾಗದ ಆಧಾರದ ಮೇಲೆ ಅಥವಾ ಅವನು ತನ್ನ ಧರ್ಮವನ್ನು ಬದಲಾಯಿಸಿದ್ದರೆ ಅಥವಾ ಅವಳು ಪ್ರತ್ಯೇಕವಾಗಿ ವಾಸಿಸುವಂತಹ ಬೇರೆ ಯಾವುದೇ ಕಾರಣವಿದ್ದರೆ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹಿಂದೂ ಪತ್ನಿ ಹೊಂದಿರುತ್ತಾಳೆ. ಆದರೆ,  ಹಿಂದೂ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಹೆಂಡತಿ ತನ್ನ ಪತಿಯೊಂದಿಗೆ ಅವನ ಮನೆಯಲ್ಲಿ ವಾಸಿಸದಿದ್ದರೆ ಜೀವನಾಂಶವನ್ನು ಪಡೆಯಲು ಅವಕಾಶವಿರಲಿಲ್ಲ.

3. ಮದುವೆಯ ಸಂದರ್ಭದಲ್ಲಿ ಹುಡುಗಿಯ ಹೆತ್ತವರು ವರದಕ್ಷಿಣೆಯಾಗಿ ನೀಡಿದ ಆಸ್ತಿಯನ್ನು ದತ್ತಿಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅವಳು ಹದಿನೆಂಟು ವರ್ಷವನ್ನು ತಲುಪಿದಾಗ ಅದರ ಒಡೆತನ ಲಭಿಸುತ್ತದೆ. ಆದ್ದರಿಂದ ಅವಳ ಪತಿ ಅಥವಾ ಅವನ ಸಂಬಂಧಿಕರು ಅಂತಹ ಆಸ್ತಿಯ ಮೇಲೆ ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ ಅಥವಾ ಅದನ್ನು ದುರುಪಯೋಗಿಸಿಕೊಳ್ಳುವ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ.

4. ತಂದೆ ಸತ್ತರೆ ತಂದೆಯ ಆಸ್ತಿಯಲ್ಲಿ ಮಗಳಿಗೂ ಪಾಲು ನೀಡಬೇಕಾಗಿತ್ತು. ಅವಳಿಗೆ ಮಗನ ಅರ್ಧದಷ್ಟು ಆಸ್ತಿಯ ಪಾಲನ್ನು ನಿಗದಿಪಡಿಸಲಾಗಿತ್ತು.

5. ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಅವಳ ಹಕ್ಕು ಸ್ವಾಭಾವಿಕವೆಂದು ಮತ್ತು ಅದು ಸಂದರ್ಭಗಳ ಮೇಲೆ ಅವಲಂಬಿತವಾಗಿಲ್ಲ ಎಂದು ಘೋಷಿಸಲಾಗಿತ್ತು. ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ, ಮೃತರ ಮರಣದ ಸಮಯದಲ್ಲಿ ಅವರು ಶ್ರೀಮಂತ ಅಥವಾ ಬಡವರು, ವಿವಾಹಿತರು ಅಥವಾ ಅವಿವಾಹಿತರು ಎಂಬುದಕ್ಕೆ ಅನುಗುಣವಾಗಿ ಮಹಿಳಾ ಆಸ್ತಿಯ ಹಕ್ಕಿನಲ್ಲಿ ತಾರತಮ್ಯವಿತ್ತು.  ಆದರೆ ಪ್ರಸ್ತಾವಿತ ಮಸೂದೆಯು ಎಲ್ಲಾ ತಾರತಮ್ಯಗಳನ್ನು ರದ್ದುಗೊಳಿಸಿತ್ತು.

 

ಹಿಂದೂ ಸಂಹಿತೆಗೆ ವಿರೋಧ

ಪುರುಷ ಪ್ರಧಾನವಾಗಿದ್ದ ಹಿಂದೂ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದ್ದ ಹಿಂದೂ ಸಂಹಿತೆಗೆ ಸಂಪ್ರದಾಯವಾದಿ ಸಂವಿಧಾನ ರಚನಾಕಾರರಿಂದ ವಿರೋಧ ವ್ಯಕ್ತವಾಯಿತು. ವಿಶೇಷವಾಗಿ ಅಂದಿನ ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಮತ್ತು ಗೃಹ ಮಂತ್ರಿ ಸರ್ದಾರ್ ಪಟೇಲ್ ಅವರು ಹಿಂದೂ ಸಂಹಿತೆಯ ಮಸೂದೆಯು ಭಾರತ ವಿರೋಧಿ ಎಂದು ಕಟುವಾಗಿ ಟೀಕಿಸಿದರು. ಇದರಿಂದಾಗಿ ಮಸೂದೆಯಲ್ಲಿದ್ದ ಉತ್ತರಾಧಿಕಾರತ್ವ ಮತ್ತು ವಿವಾಹ ಕುರಿತಂತೆ ಸಂಪ್ರದಾಯವಾದಿ ಸಂವಿಧಾನ ರಚನಾಕಾರರು ಸೂಚಿಸಿದ  ತಿದ್ದುಪಡಿಗಳಿಗೆ ಡಾ. ಅಂಬೇಡ್ಕರ್ ಅವರು ಸಮ್ಮತಿಸಿದರು. ಸಂವಿಧಾನ ರಚನಾಕಾರರ ಆಶಯದಂತೆ ತದನಂತರ ನಡೆದ ಸುದೀರ್ಘ ಚರ್ಚೆಯಲ್ಲಿ ಡಾ. ಅಂಬೇಡ್ಕರ್ ಅವರು ಹಿಂದೂ ಸಂಹಿತೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಆದರೂ ಸದಸ್ಯರ ಒತ್ತಾಯದಿಂದಾಗಿ ಹಿಂದೂ ಸಂಹಿತೆಯಲ್ಲಿ ಹಲವು ತಿದ್ದುಪಡಿಗಳನ್ನು ಅಳವಡಿಸಲು ತೀರ್ಮಾನಿಸಿದರೂ ಸಂವಿಧಾನ ರಚನಾಕಾರರಿಂದ ಹಿಂದೂ ಸಂಹಿತೆಯ ಕರಡಿಗೆ ಸಮ್ಮತಿ ದೊರೆಯಲಿಲ್ಲ.  ಇದರಿಂದ ಬೇಸರಗೊಂಡ ಡಾ. ಅಂಬೇಡ್ಕರ್ ಅವರು ಸೆಪ್ಟೆಂಬರ್ 27, 1951 ರಂದು ತಮ್ಮ ಕಾನೂನು ಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿ ಮಂತ್ರಿಮಂಡಲದಿಂದ ಹೊರನಡೆದರು.

 

ಬದಲಾದ ರೂಪದಲ್ಲಿ ಜಾರಿಗೊಂಡ  ಹಿಂದೂ ಸಂಹಿತೆ:-

1952 ರಿಂದ 1956ರ ನಡುವೆ ಅಂಬೇಡ್ಕರ್ ಅವರು ತಯಾರಿಸಿದ್ದ ಹಿಂದೂ ಸಂಹಿತೆಯ ಕರಡಿಗೆ ಮಾರ್ಪಾಡು ಮಾಡಲಾಯಿತು ಹಾಗೂ ಅದನ್ನು ಪ್ರತ್ಯೇಕ ಕಾನೂನುಗಳ ರೂಪದಲ್ಲಿ ಕೆಳಕಂಡಂತೆ ಜಾರಿಗೊಳಿಸಲಾಯಿತು.

ಹಿಂದೂ ವಿವಾಹ ಕಾಯಿದೆ

ಹಿಂದೂ ಉತ್ತರಾಧಿಕಾರತ್ವ ಕಾಯಿದೆ

ಹಿಂದೂ ದತ್ತು ಸ್ವೀಕಾರ ಕಾಯಿದೆ

ಹಿಂದೂ ಅಲ್ಪಸಂಖ್ಯಾತರ ಪೋಷಣೆಯ ಕಾಯಿದೆ

ಎಂಬ ನಾಲ್ಕು ಪ್ರತ್ಯೇಕ ಕಾನೂನುಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡು ಜಾರಿಗೆ ಬಂದವು. ಆಸಕ್ತಿದಾಯಕ ಅಂಶವೇನೆಂದರೆ ಈ ವಿವಿಧ ಕಾಯಿದೆಗಳು ಅಂಬೇಡ್ಕರ್ ಅವರ ಆಶಯದಂತೆ ಸಿಖ್, ಬೌದ್ಧ, ಜೈನ ಹಾಗೂ ಹಿಂದೂ ಧರ್ಮೀಯರ ವೈಯಕ್ತಿಕ ಕಾನೂನುಗಳನ್ನು ಏಕರೂಪಗೊಳಿಸಿದವು.

 

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources