ಅಧ್ಯಾಯ-1. 18ನೆ ಶತಮಾನದ ಮಧ್ಯಭಾಗದಲ್ಲಿ ಭಾರತದ ಸಮಾಜ
V. ಸಾಮಾಜಿಕ
ಜೀವನ: ವಿಭಿನ್ನ ದೃಷ್ಟಿಕೋನಗಳಿಂದ, ಹದಿನೆಂಟನೆಯ ಶತಮಾನವು
ಭಾರತದ ಇತಿಹಾಸದಲ್ಲಿಯೇ ಅಪಮಾನಕರವಾದ ಅವಧಿಯಾಗಿದೆ. ಮೊಗಲ್ ಸಾಮ್ರಾಜ್ಯಾಧಿಕಾರವು
ಕ್ರಮೇಣ ಶಿಥಿಲವಾಗುತ್ತ ಬಂದು, ಕೊನೆಯಲ್ಲಿ ಪತನ ಹೊಂದಿದುದರಿಂದಾಗಿ, ಹಾಗೂ ಗಣ್ಯ ವರ್ಗದವರ ಚಾರಿತ್ರ್ಯವೂ
ಕುಸಿದುದರಿಂದಾಗಿ ಆ ಅವಧಿಯಲ್ಲಿನ ಎಲ್ಲ ಪ್ರಗತಿಪರಬಲಗಳೂ ನಾಶವಾದುವು. ಪರಿಣಾಮವಾಗಿ ದೇಶದಲ್ಲಿ ಭಯಂಕರ
ರಾಜಕೀಯ ಶೋಭೆಗಳು, ಸಾಮಾಜಿಕ ಅಶಾಂತಿ ಮತ್ತು ಗೊಂದಲಗಳು ಹಾಗೂ ಶೋಚನೀಯ ಆರ್ಥಿಕ ಅವನತಿಗಳು ಕಾಣಿಸಿಕೊಂಡವು.
ಆದರೆ ದೇಶದ ಸಾಮಾನ್ಯ ಜೀವನ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತಿದ್ದ ಅರಾಜಕತೆ ಹಾಗೂ ಗೊಂದಲಗಳು ಹದಿನೆಂಟನೆಯ ಶತಮಾನದಲ್ಲಿ ಇದ್ದಾಗ್ಯೂ ಭಾರತದಲ್ಲಿನ
ಸಮಾಜವು ಹಲವು ಸಾಂಪ್ರದಾಯಿಕ ಲಕ್ಷಣಗಳನ್ನು ಉಳಿಸಿಕೊಂಡು ಬಂದಿತ್ತು. ಹೊಸ ಪರಿಸರದಲ್ಲಿ ಕೆಲವು ಬದಲಾವಣೆಗಳು
ಮಾತ್ರ ಉಂಟಾಗಿದ್ದವು. ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಮತ್ತು ಸಹಾಯಕರಿಗೆ ನೀಡಿದ
Notes of Instructions ನಲ್ಲಿ ಮಾಲ್ಕಮ್ ಎಂಬ ಬ್ರಿಟಿಷ್ ಅಧಿಕಾರಿ ಹೀಗೆ ಹೇಳಿದ್ದಾನೆ:
"ಬದಲಾವಣೆಗಳು ಉಂಟಾಗುತ್ತಿರುವ ಹಾಗೂ ಭಾರತದಲ್ಲಿ ದಬ್ಬಾಳಿಕೆಯ ರಾಜ್ಯಭಾರ ನಡೆಯುತ್ತಿರುವ ಅವಧಿಯಲ್ಲಿ
ಕೂಡ, ದೇಶದ ಅತ್ಯಧಿಕ ಸಂಖ್ಯೆಯ ಜನರು ಮೌಲ್ಯಗಳನ್ನು ಮತ್ತು ಉತ್ತಮ ಗುಣ-ಸ್ವಭಾವಗಳನ್ನು ಉಳಿಸಿಕೊಂಡು
ಬಂದಿರುತ್ತಾರೆ. ಇಂಥ ಇನ್ನೊಂದು ನಿದರ್ಶನವನ್ನು ನಾನು ತಿಳಿದಿಲ್ಲ. ಕಳ್ಳತನ, ಕುಡಿತ ಮತ್ತು ಹಿಂಸಾಚಾರಗಳಂತಹ
ಸಾಮಾನ್ಯ ದುಶ್ಚಟಗಳು ಅವರಲ್ಲಿಲ್ಲ. ಅವರು ಕುಟುಂಬ ಹಾಗೂ ರಕ್ತಸಂಬಂಧಗಳ ಎಲ್ಲ ಅಮೂಲ್ಯ ಸಂಬಂಧಗಳನ್ನೂ
ಉಳಿಸಿಕೊಂಡು ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಆ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳು ಕೆಳಕಂಡಂತಿದ್ದವು
ಎಂಬುದನ್ನು ಗಮನಿಸಬಹುದು.
1. ಧರ್ಮ: ಆ ಕಾಲದಲ್ಲಿದ್ದ ಅನಾರೋಗ್ಯಕರ ಸನ್ನಿವೇಶದಲ್ಲಿಯೂ ಕೆಲವು ಉತ್ತಮ ಸಾಂಪ್ರದಾಯಿಕ ವೈಶಿಷ್ಟ್ಯಗಳು
ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಮುಂದುವರಿದಿದ್ದವು. ಆಗಲೂ ಇತರ ಧರ್ಮಗಳತ್ತ
ಇರುವ ಸಹನಾಮನೋಭಾವ ಹಾಗೂ ಹೊಸ ಪರಿಸರ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತಹ ಗುಣ ಇವು ಹಿಂದೂಧರ್ಮದ
ವಿಶೇಷ ಲಕ್ಷಣಗಳಾಗಿದ್ದವು. 1768-1771ರ ನಡುವಣ ಅವಧಿಯಲ್ಲಿ ಭಾರತವನ್ನು ಸಂದರ್ಶಿಸಿದ ಡಚ್ ಪ್ರವಾಸಿ
ಸ್ಟಾವೊರಿನಸ್ ಹೀಗೆ ಬರೆದಿದ್ದಾನೆ: "ಧರ್ಮಗಳು ಪರಸ್ಪರವಾಗಿ ಸಂಪೂರ್ಣ ವಿಭಿನ್ನವಾಗಿರುವ ಮುಸ್ಲಿಮರು,
ಹಿಂದೂಗಳು ಮತ್ತು ಪಾರ್ಸಿಗಳು - ಈ ಮೂರೂ ಪ್ರತ್ಯೇಕ ಧರ್ಮಿಯರು ಧಾರ್ಮಿಕ ವಿಚಾರಗಳಲ್ಲಿ ಪರಸ್ಪರವಾಗಿ
ತುಂಬ ಸಹನೆಯನ್ನು ತೋರಿಸುತ್ತಿದ್ದರು; ವಿಭಿನ್ನ ಧರ್ಮದ ಆಧಾರದ ಮೇಲೆ ಯಾರೂ ಯಾರನ್ನೂ ಪೀಡಿಸುತ್ತಿರಲಿಲ್ಲ;
ಹಿಂಸಿಸುತ್ತಿರಲಿಲ್ಲ. ಪೇಶ್ವೆಗಳ ಕೈಕೆಳಗೆ ಪದಾತಿ ಸೈನ್ಯವೊಂದರಲ್ಲಿ ನೇಮಕಗೊಂಡಿದ್ದ ವಿಲಿಯಮ್ ಹೆನ್ರಿ
ಟೋನ್ 1799ರಲ್ಲಿ ಪೂನಾದ ಬಗ್ಗೆ ಹೀಗೆ ವರದಿಮಾಡಿದ್ದಾನೆ : "(ಮರಾಠಾ) ಸಾಮ್ರಾಜ್ಯದ ರಾಜಧಾನಿಯೂ,
ಮುಖ್ಯ ನಗರವೂ ಬ್ರಾಹ್ಮಣ ವಿದ್ವಾಂಸರ ಕೇಂದ್ರಸ್ಥಾನವೂ ಆಗಿದ್ದ ಪೂನಾದಲ್ಲಿ, ಅನೇಕ ಮಸೀದಿಗಳು ಮತ್ತು
ಒಂದು ಕ್ರೈಸ್ತ ಚರ್ಚ್ ಕೂಡ ಇದ್ದಿತು. ಇವುಗಳಲ್ಲಿ ಎರಡೂ ಧರ್ಮಗಳಿಗೆ ಸೇರಿದ ಉಪಾಸಕರು ಯಾವುದೇ ಹಿಂಜರಿಕೆ ಅಥವಾ ಇತರರ ಹಿಂಸೆಯ ಭಯಗಳಿಲ್ಲದೆ ಪೂಜೆ-ಪ್ರಾರ್ಥನೆಗಳನ್ನು
ನಡೆಸಬಹುದಾಗಿತ್ತು"
ಹಿಂದೂ ಧರ್ಮಕ್ಕೆ ಸೇರಿದ ಬಹುಮಂದಿ ಸಾಮಾನ್ಯ ಜನರು ಧಾರ್ಮಿಕ ಉಪಾಸನೆಯ ಹಳೆಯ ರೀತಿನೀತಿಗಳನ್ನೂ
ಕಾರ್ಯವಿಧಾನಗಳನ್ನೂ ಅನುಸರಿಸುತ್ತಿದ್ದರು. ಅಲ್ಲಿ ಅನೇಕ ಸಂಖ್ಯೆಯ ಶಕ್ತಿ ಆರಾಧಕರಿದ್ದರು. ಶಕ್ತಿಯ
ಆರಾಧನೆಯೆಂದರೆ ಮಾತೃದೇವತೆ, ದುರ್ಗಾ, ಕಾಳಿ, ತಾರಾ, ಮಾನಸಾ
- ಇವರ ಪೂಜೆ. ಇದು ಬಂಗಾಳದಲ್ಲಿ ಹಾಗೂ ಬಿಹಾರದ ಪೂರ್ವ ಜಿಲ್ಲೆಗಳಲ್ಲಿ ಬಹು ವ್ಯಾಪಕವಾಗಿತ್ತು. ಅಂದು ಶೈವ ಹಾಗೂ ವೈಷ್ಣವ ಪಂಥಗಳಿಗೆ ಮತ್ತು ಅವುಗಳ ಉಪಪಂಥಗಳಿಗೆ ಸೇರಿದ ಅನೇಕ ಅನುಯಾಯಿಗಳೂ
ಇದ್ದರು. ಈ ಪಂಥಗಳು ಕ್ರಮೇಣ ದೇಶದ ವಿವಿಧ ಭಾಗಗಳಿಗೂ ವಿಸ್ತರಿಸಿದವು. ಶ್ರೀ ಚೈತನ್ಯ ಪಂಥದ ಅನುಯಾಯಿಗಳು
ಬಂಗಾಳ, ಒರಿಸ್ಸಗಳಲ್ಲಿ ಬಹುಸಂಖ್ಯೆಯಲ್ಲಿಯೂ, ಬಿಹಾರದಲ್ಲಿ ಕಡಿಮೆ ಸಂಖ್ಯೆಯಲ್ಲಿಯೂ ಇದ್ದರು. ರಾಮಾನುಜಿಗಳು,
ರಾಮಾನಂದಿಗಳು, ಕಬೀರಪಂಥಿಗಳು, ನಾನಕಪಂಥಿಗಳು, ರಾಧಾಬಲ್ಲವಿಗಳೇ ಮುಂತಾದ ಇತರ ಪಂಥಗಳ ಅನುಯಾಯಿಗಳು
ವಿವಿಧ ಭಾಗಗಳಲ್ಲಿ ಚದುರಿ ಹೋಗಿದ್ದರು. ಬಂಗಾಳ ಹಾಗೂ ಬಿಹಾರಗಳಲ್ಲಿ ಅನೇಕ ಜನರು ಸೂರ್ಯದೇವನ ಆರಾಧಕರಾಗಿದ್ದರು.
ಅಲ್ಲಿ ಗಾಣಪತ್ಯರೆಂಬ ಹೆಸರಿನ ಗಣೇಶನ ಆರಾಧಕರೂ ಇದ್ದರು. ಮಾಟ ಹಾಗೂ ಮಂತ್ರವಾದಗಳಲ್ಲಿ ಜನಪ್ರಿಯ ನಂಬಿಕೆ
ಹೆಚ್ಚಾಗುತ್ತಿತ್ತು. ಮತಕ್ರಿಯಾವಿಧಿಗಳು ಮತ್ತು ಸಮಾರಂಭಗಳ ಪ್ರಾಮುಖ್ಯ ಹಾಗೂ ಪುರೋಹಿತರ ಮಿತಿಮೀರಿದ
ಪ್ರಾಬಲ್ಯಗಳು, ಧಾರ್ಮಿಕ ಕ್ಷೇತ್ರಗಳಲ್ಲಿ, ವಿಶೇಷವಾಗಿ ಯಾತ್ರಾಸ್ಥಳಗಳಲ್ಲಿ ಕೂಡ, ಕೆಲವು ಅನಪೇಕ್ಷಣೀಯ
ಆಚರಣೆಗಳು ಪ್ರಾರಂಭವಾಗಲು ಕಾರಣವಾದವು.
2. ಶಿಕ್ಷಣ:- ಒಂದು ರಾಷ್ಟ್ರದ ಶೈಕ್ಷಣಿಕ ಪದ್ಧತಿಯು ಅದರ
ಸಮಾಜವನ್ನು ರೂಪಿಸುವಲ್ಲಿ ಗಮನಾರ್ಹವಾದ ಪ್ರಭಾವವನ್ನು ಹೊಂದಿರುತ್ತದೆ. ಶಿಕ್ಷಣಕ್ಕೆ ಕೆಲವು ಸ್ಥಳೀಯ
ದೊರೆಗಳು ಮತ್ತು ಶ್ರೀಮಂತ ಪ್ರಭುತ್ವಕ್ಕೆ ಸೇರಿದ ಸದಸ್ಯರು ಆಶ್ರಯ ನೀಡುತ್ತಿದ್ದರು ಹಾಗೂ ಉದಾರ ಮನೋಧರ್ಮದ
ಕೆಲವು ಜನರು ಕೊಡುಗೆಗಳನ್ನು ನೀಡಿ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದ್ದರು. ಉದಾ: ನಾಟೋರ್‌ನ ರಾಣಿ
ಭವಾನಿ, ನಾದಿಯಾದ ರಾಜಾ ಕೃಷ್ಣ ಚಂದ್ರ , ಮಿಥಿಲಾದಲ್ಲಿ ದರ್ಭಾಂಗಾದ ರಾಜ ಮತ್ತು ಪೇಶ್ವೆಗಳು ಕೂಡ
ಸಾಂಪ್ರದಾಯಿಕ ಶಿಕ್ಷಣಕ್ಕೆ ತುಂಬ ಪ್ರೋತ್ಸಾಹವನ್ನು ನೀಡಿದರು.
ಬಂಗಾಳ ಮತ್ತು ಬಿಹಾರಗಳಲ್ಲಿ 'ಚತುಷ್ಪಾರಿಗಳು' ಅಥವಾ 'ಟೊಲ್'ಗಳೆಂದು ಹೆಸರಾಗಿದ್ದ ಉನ್ನತ
ಸಂಸ್ಕೃತ ಶಿಕ್ಷಣ ಸಂಸ್ಥೆಗಳು, ದ್ರಾವಿಡ (ದಕ್ಷಿಣ ಭಾರತ), ಕಾಶಿ (ಬನಾರಸ್), ತಿರ್ಹುತ್ (ಮಿಥಿಲಾ),
ಮತ್ತು ಉತ್ಕಲಾ (ಒರಿಸ್ಸ)ಗಳಂಥ ದೇಶದ ಇತರ ಭಾಗಗಳಲ್ಲಿಯೂ ಇದ್ದವು. ನಾದಿಯಾ 'ಆ ಪ್ರಾಂತದ ಆಕ್ಸ್‌ಫರ್ಡ್
ಆಗಿತ್ತು" ಎಂದು ಒಬ್ಬ ಲೇಖಕ 1782ರಲ್ಲಿ ವರ್ಣಿಸಿದ್ದಾನೆ. 1787ರಲ್ಲಿ "ಬ್ರಾಹ್ಮಣರ
ಒಂದು ಪ್ರಾಚೀನ ವಿಶ್ವವಿದ್ಯಾನಿಲಯದ (ನಾದಿಯಾ) ಸಮೀಪ ಪ್ರತಿವರ್ಷವೂ ಸುಮಾರು ಮೂರು ತಿಂಗಳ ಕಾಲವನ್ನು
ಕಳೆದುದರ ಹಾಗೂ ಅಲ್ಲಿನ ಜನರೊಡನೆ ನಿರರ್ಗಳವಾಗಿ ಮಾತನಾಡಲು ತಾನು ಪ್ರಾರಂಭಿಸಿದುದರ ಬಗ್ಗೆ ಸರ್ ವಿಲಿಯಮ್
ಜೋನ್ಸ್ ಸಂತೋಷವನ್ನು ವ್ಯಕ್ತಪಡಿಸಿರುತ್ತಾನೆ. 17ನೆಯ ಶತಮಾನದಲ್ಲಿ ಬನಾರಸ್ "ಭಾರತದ ಅಥೆನ್ಸ್”
ಆಗಿತ್ತೆಂದೂ, ಭಾರತದಲ್ಲಿ ಸಂಸ್ಕೃತ ಕಲಿಕೆಯ ಕೇಂದ್ರವಾಗಿ ಅಗ್ರಸ್ಥಾನವನ್ನು ಹೊಂದಿತ್ತೆಂದೂ ಬೆರ್ನಿಯರ್
ವರ್ಣಿಸಿದ್ದಾನೆ. ಹದಿನೆಂಟನೆಯ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ ಕೆಲವು ಯೂರೋಪಿಯನ್ನರು ಬನಾರಸ್‌ನಲ್ಲಿ
ಸಿಗುತ್ತಿದ್ದ ಸಂಸ್ಕೃತ ಶಿಕ್ಷಣದ ಉಚ್ಚ ಗುಣಮಟ್ಟದ ಬಗ್ಗೆ ತುಂಬ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದರು
ಹಾಗೂ ಅಲ್ಲಿ ಜೈಪುರದ ರಾಜನಾದ ಎರಡನೆಯ ಜಯಸಿಂಗನು ನಿರ್ಮಿಸಿದ್ದ ಖಗೋಳ ವಿಜ್ಞಾನ ವೀಕ್ಷಣಾಲಯದಿಂದ
ಕೂಡ ಅವರು ಪ್ರಭಾವಿತರಾಗಿದ್ದರು. ಭಾರತದಲ್ಲಿ ಉನ್ನತ ಸಂಸ್ಕೃತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ,
ಫೋರ್ಟ್ಸ್ ಹೀಗೆ ಬರೆದಿದ್ದಾನೆ: "ಹಿಂದೂಸ್ಥಾನದ ಬನಾರಸ್ ಮತ್ತು ಇತರ ಭಾಗಗಳಲ್ಲಿರುವ ಹಿಂದೂ
ಕಾಲೇಜುಗಳನ್ನೂ ಬ್ರಾಹ್ಮಣ ಪಾಠಶಾಲೆಗಳನ್ನೂ ನೋಡಿ ನಮಗೆ ಸಂತೋಷವಾಗಿದೆ; ಅವು ಉಪಯುಕ್ತ ಸಂಸ್ಥೆಗಳಾಗಿವೆ;
ಆದರೆ ಅವುಗಳ ಉಪಯೋಗವು ಕೆಲವು ಜಾತಿಗಳು ಹಾಗೂ ಪಂಥಗಳಿಗಷ್ಟೇ ಸೀಮಿತ. ಹಿಂದೂ ಶಿಕ್ಷಣಸಂಸ್ಥೆಗಳು ಸಾಹಿತ್ಯ,
ವೈದ್ಯ ಮತ್ತು ವಿಜ್ಞಾನಗಳಿಗೆ ಪೋಷಣೆ ನೀಡುತ್ತಿದ್ದು, ಅವುಗಳನ್ನು ಹಿಂದೂಗಳಿಗೆ ಅತ್ಯಂತ ಆವಶ್ಯಕವಾದುದೆಂದು
ಪರಿಗಣಿಸಬಹುದಾಗಿದೆ'.
ಮುಸ್ಲಿಮ್ ದೊರೆಗಳು ಹಾಗೂ ಗಣ್ಯಕುಲೀನರು ನೀಡಿದ ಪೋಷಣೆಯಿಂದಾಗಿ, ಆಗ ಪರ್ಷಿಯನ್ ಶಿಕ್ಷಣವೂ
ಪ್ರವರ್ಧಮಾನ ಸ್ಥಿತಿಯಲ್ಲಿತ್ತು. ಮುಸ್ಲಿಮ್ ಜನರ ದೃಷ್ಟಿಯಲ್ಲಿ, ಪರ್ಷಿಯನ್ ಭಾಷೆಯು ಉನ್ನತ ಶಿಕ್ಷಣದ
ಪ್ರಮುಖ ಮಾಧ್ಯಮವಾಗಿತ್ತು, ಅನೇಕ ವರ್ಷಗಳ ಕಾಲ ಅದು ಅಧಿಕೃತ ಭಾಷೆಯಾಗಿ ಪಡೆದ ಮಹತ್ವದ ಹಿನ್ನೆಲೆಯಲ್ಲಿ
ಪರ್ಷಿಯನ್ ಭಾಷಾಜ್ಞಾನದ ಪ್ರಾಯೋಗಿಕ ಆವಶ್ಯಕತೆಯನ್ನು ಅರಿತ ಹಿಂದೂಗಳೂ ಆ ಭಾಷೆಯನ್ನು ಕಲಿಯುತ್ತಿದ್ದರು.
ಆ ಕಾಲದ ಹಲವು ಪರ್ಷಿಯನ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿದ್ದರು. ಪಾಟ್ನಾದ ಆಜಿಮಾಬಾದ್ ಎಂಬುದು
ಬಂಗಾಳ ಹಾಗೂ ಬಿಹಾರಗಳಲ್ಲಿನ ಪ್ರಮುಖ ಪರ್ಷಿಯನ್ ಶಿಕ್ಷಣ ಕೇಂದ್ರವಾಗಿತ್ತು. ಹದಿನೆಂಟನೆಯ ಶತಮಾನದ
ಮಧ್ಯಭಾಗದಲ್ಲಿ, ಪರ್ಷಿಯನ್ ಭಾಷಾ ಪ್ರಭುತ್ವ ಪಡೆದಿದ್ದ ಕೆಲವು ವಿದ್ವಾಂಸರು ಇರಾನಿನಿಂದ ಭಾರತಕ್ಕೆ
ಬಂದು ನೆಲೆಸಿ, ಭಾರತದ ಕೆಲವು ಸ್ಥಳಗಳಲ್ಲಿ ಅರಾಬಿಕ್ ಹಾಗೂ ಪರ್ಷಿಯನ್ ಉನ್ನತ ಶಿಕ್ಷಣ ನೀಡುವ 'ಮದರಸಾ'ಗಳನ್ನು
ನಿರ್ವಹಿಸಿದರು.
ಅ. ಪ್ರಾಥಮಿಕ ಶಿಕ್ಷಣ:- ಪ್ರಾಥಮಿಕ ಶಿಕ್ಷಣವು ಎಲ್ಲೆಡೆ ಪಸರಿಸಿತ್ತು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿದ್ದವು. ಸಮಾಜದ ಎಲ್ಲ ಸ್ತರಗಳಲ್ಲಿಯೂ
ಪ್ರಾಥಮಿಕ ಶಿಕ್ಷಣಕ್ಕೆ ಪ್ರೋತ್ಸಾಹವಿತ್ತು. ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಬಂಗಾಳಕ್ಕೆ ಬಂದ
ಎಡ್ವರ್ಡ್ ಈವ್, ಈ ಪ್ರಾಂತವನ್ನು ಕುರಿತು ಹೀಗೆ ಬರೆದಿದ್ದಾನೆ : "ಮಕ್ಕಳಿಗೆ ಶಿಕ್ಷಣ ನೀಡುವ
ಅನೇಕ ಶಾಲೆಗಳು ಇಲ್ಲಿವೆ” ಕೆಲಕಾಲದ ಬಳಿಕ ಬಂಗಾಳಕ್ಕೆ ಆಗಮಿಸಿದ ಕ್ರಾಫರ್ಡ್ ಕೂಡ "ಎಲ್ಲ ನಗರಗಳು
ಮತ್ತು ಪ್ರಮುಖ ಗ್ರಾಮಗಳಲ್ಲಿ ಶಾಲೆಗಳಿದ್ದವು'' ಎಂದು ಬರೆದಿದ್ದಾನೆ. ಮಧ್ಯ ಭಾರತದ ಬಗ್ಗೆ, 19ನೆಯ
ಶತಮಾನದ ಪ್ರಾರಂಭದಲ್ಲಿ ಮಾಲ್ಕಮ್ ಹೀಗೆ ಬರೆದಿದ್ದಾನೆ: ಈ ದೇಶದಲ್ಲಿ ಸರ್ಕಾರದ ಆಶ್ರಯ ಅಥವಾ ಬೆಂಬಲ
ಪಡೆದಿರುವ ಒಂದೇ ಒಂದು ಸಾರ್ವಜನಿಕ ಶಿಕ್ಷಣ ಸಂಸ್ಥೆಯಿಲ್ಲವಾದರೂ ನಗರಗಳು ಹಾಗೂ ಗ್ರಾಮಗಳಲ್ಲಿ, ಅತ್ಯಧಿಕ
ಸಂಖ್ಯೆಯ ಖಾಸಗಿ ಶಾಲೆಗಳಿದ್ದವು”. ಅವನು ಅಂದಾಜು ಮಾಡಿದಂತೆ, ನೂರಕ್ಕಿಂತ ಹೆಚ್ಚು ಮನೆಗಳಿದ್ದ ಪ್ರತಿಯೊಂದು
ಗ್ರಾಮದಲ್ಲಿಯೂ ಒಬ್ಬ ಶಾಲಾ ಶಿಕ್ಷಕನಿದ್ದ; ಅವನು “ಬನಿಯಾ ಅಥವಾ ಅಂಗಡಿ ಮಾಲೀಕರ ಮಕ್ಕಳಿಗೂ ಆಯ್ಕೆ
ಮಾಡಲಾದ ಕೃಷಿಕರಂಥವರ ಮಕ್ಕಳಿಗೂ" ಬೋಧಿಸುತ್ತಿದ್ದ. ಬ್ರಿಟಿಷರು ಪೇಶ್ವೆಗಳಿಂದ ಜಯಿಸಿದ ಪ್ರಾಂತಗಳಲ್ಲಿನ
ಶಾಲೆಗಳ ಬಗ್ಗೆ
ಎಲ್ವಿನ್‌ಸ್ಟನ್ ಈ ಕೆಳಗಿನಂತೆ ವರದಿ ಮಾಡಿದ್ದಾನೆ.
"ಎಲ್ಲ ಪಟ್ಟಣಗಳಲ್ಲಿ ಹಾಗೂ ಅನೇಕ ಗ್ರಾಮಗಳಲ್ಲಿ ಆಗಲೇ ಶಾಲೆಗಳಿದ್ದವು; ಆದರೆ ವಿದ್ಯೆಯು ಬ್ರಾಹ್ಮಣರು,
ಬನಿಯಾಗಳು ಮತ್ತು ಲೆಕ್ಕ ಇಲಾಖೆಗಳಲ್ಲಿ ದುಡಿಯಬೇಕಾದ ಕೃಷಿಕರಂತಹ ಇತರ ಕೆಲವು ವರ್ಗಗಳಿಗಷ್ಟೇ ಸೀಮಿತವಾಗಿತ್ತು".
ಫೋರ್ಟ್ಸ್ ಗಮನಿಸಿದಂತೆ, ಅಲ್ಲಿ "ಎಲ್ಲ ಪಟ್ಟಣಗಳಲ್ಲಿಯೂ ಇತರ ಹುಡುಗರ ಶಿಕ್ಷಣಕ್ಕಾಗಿ ಅನೇಕ
ಶಾಲೆಗಳಿದ್ದವು; ಈ ಶಾಲೆಗಳು ಸಾಮಾನ್ಯವಾಗಿ ಮನೆಗಳ ನೆರಳು ಬೀಳುವ ತೆರೆದ ಸ್ಥಳಗಳಲ್ಲಿ ನಡೆಯುತ್ತಿದ್ದವು.
ವಿದ್ಯಾರ್ಥಿಗಳು ಚಾಪೆಗಳು ಅಥವಾ ಸಗಣಿಯಿಂದ ಸಾರಿಸಲಾದ ನೆಲದ ಮೇಲೆ ಕುಳಿತು ಕಲಿಯುತ್ತಿದ್ದರು. ಓದುವುದು,
ಬರೆಯುವುದು ಹಾಗೂ ಗಣಿತಗಳಲ್ಲದೆ, ಆಯಾ ಜಾತಿಯವರು ಅನುಸರಿಸುವ ಧರ್ಮಗಳ ಬಗ್ಗೆ ಕೂಡ ಅಲ್ಲಿ ಬೋಧನೆ
ನಡೆಯುತ್ತಿತ್ತು”. ಪ್ರತಿಯೊಂದು ಮಸೀದಿಗೂ ಹೊಂದಿಕೊಂಡಂತೆ, ಒಂದೊಂದು ಪರ್ಷಿಯನ್ ಶಾಲೆಯಿರುತ್ತಿತ್ತು.
ಇಂತಹ ಶಾಲೆಗಳು ಇತರ ಸ್ಥಳಗಳಲ್ಲಿಯೂ ನಡೆಯುತ್ತಿದ್ದವು. ಭಾರತದ ವಿವಿಧ ಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣದ ಸಾಮಾನ್ಯ
ಗುಣಲಕ್ಷಣಗಳು ಒಂದೇ ರೀತಿಯಲ್ಲಿದ್ದವು.
ಆ. ಶಿಕ್ಷಕರ ನೇಮಕ:- ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಅಧ್ಯಾಪಕರನ್ನು
ನೇಮಕಮಾಡಿಕೊಳ್ಳಲಾಗುತ್ತಿತ್ತು. ಬಂಗಾಳದ ಇಂಥ ಕೆಲವು ಶಾಲೆಗಳಲ್ಲಿ ದಲಿತವರ್ಗದವರೆಂದು ಕರೆಯಲಾದವರು
ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಹಾಗೂ ಕೆಲವು ಸ್ಥಳಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಬೋಧಿಸುವ
ಮುಸ್ಲಿಮ್ ಶಿಕ್ಷಕರೂ ಇದ್ದರು. ಜಾತಿ ಅಥವಾ ಮತಗಳಿಗೆ ವಿಶೇಷ ಗಮನ ನೀಡದೆ ವಿದ್ಯಾರ್ಥಿಗಳನ್ನು ಶಾಲೆಗೆ
ಸೇರಿಸಿಕೊಳ್ಳಲಾಗುತ್ತಿತ್ತು
ಇ. ಪಠ್ಯಕ್ರಮ:- ಗ್ರಾಮೀಣ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ
ನಾಲ್ಕು ಅನುಕ್ರಮ ಹಂತಗಳಲ್ಲಿ - ನೆಲದ ಮೇಲೆ, ತಾಡಪತ್ರದ ಮೇಲೆ, ಬಾಳೆ ಎಲೆಗಳ ಮೇಲೆ ಹಾಗೂ ಕಾಗದದ
ಮೇಲೆ - ಬರೆಯುವುದನ್ನು ಕಲಿಸಲಾಗುತ್ತಿತ್ತು. "ಉತ್ಕೃಷ್ಟ ಲೇಖನ ಕೌಶಲವನ್ನು ಮಹಾ ಸಾಧನೆಯೆಂದೇ"
ಪರಿಗಣಿಸಲಾಗಿತ್ತು. ಅವರು (ವ್ಯವಸಾಯಿಕ ಅಥವಾ ವಾಣಿಜ್ಯ ಸಂಬಂಧವಾದ) ಗಣಿತ ಹಾಗೂ ಲೆಕ್ಕ ಬರವಣಿಗೆಗಳನ್ನೂ
ಭೌತವಿಜ್ಞಾನ ಮತ್ತು ಪ್ರಕೃತಿ ವಿಜ್ಞಾನಗಳ ಕೆಲವು ಮೊದಲ ಪಾಠಗಳನ್ನೂ ಕಲಿಯುತ್ತಿದ್ದರು. ಹೀಗೆ ಸಾಮಾನ್ಯ
ಜೀವನಕ್ಕೆ ಅಗತ್ಯವಾದ ವಿಷಯಗಳ ಕೆಲಮಟ್ಟಿನ ಪರಿಚಯವನ್ನು ಅವರು ಮಾಡಿಕೊಳ್ಳುತ್ತಿದ್ದರು. ಜೀವನದ ಉನ್ನತ
ಮೌಲ್ಯಗಳನ್ನೂ ಅವರಿಗೆ ಬೋಧಿಸಲಾಗುತ್ತಿತ್ತು.
3. ಜಾತಿ ಪದ್ಧತಿಯು ಹಿಂದೂ
ಸಮಾಜದ ಅತ್ಯಂತ ಗಮನಾರ್ಹವಾದ ಪ್ರಧಾನ ಲಕ್ಷಣವಾಗಿತ್ತು. ಜಾತಿಗೆ ಸಂಬಂಧಿಸಿದ ನಿಯಮಗಳನ್ನು ಮದುವೆ
ಮತ್ತು ಆಹಾರಕ್ರಮವೇ ಮೊದಲಾದ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಜಾತಿ ನಿಯಮಗಳು
ವಿವಿಧ ದೋಷಗಳನ್ನೂ ಹೊಂದಿದ್ದವು. ಅಂದರೆ ಇದು ವೃತ್ತಿಯು ವಂಶಪಾರಂಪರ್ಯವಾಗಿ ಮುಂದುವರಿಯಲು ಸಹಾಯಕವಾಗಿತ್ತು.
ಆದರೆ ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಭಾರತದಲ್ಲಿ ಪ್ರಾರಂಭವಾಗ ತೊಡಗಿದ ಆರ್ಥಿಕ ಹಾಗೂ ಆಡಳಿತಾತ್ಮಕ
ಬದಲಾವಣೆಗಳಿಂದಾಗಿ, ಜಾತಿ ಆಧಾರಿತವಾದ ವೃತ್ತೀಯ ಪರಿಣತಿಗಳಲ್ಲಿ ಕೆಲಮಟ್ಟಿನ ಬದಲಾವಣೆಗಳು ಕಂಡುಬಂದವು.
ಜಾತಿ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದರ
ಮೇಲೆ ನಿಗಾವಹಿಸುವ ಕೆಲವು ಜಾತಿ ಸಂಪ್ರದಾಯಗಳೂ ಇದ್ದವು. ಜಾತಿಗೆ ಸಂಬಂಧಿಸಿದ ವಿವಾದಗಳನ್ನು ಜಾತಿ
ಸಮಿತಿಗಳ ಅಥವಾ ಜಾತಿಯ ಮುಖ್ಯಸ್ಥರು ತೀರ್ಮಾನಿಸುತ್ತಿದ್ದರು. ಮರಣದಂಡನೆಯೊಂದನ್ನು ಬಿಟ್ಟು ಉಳಿದಂತೆ
ದಂಡ, ಪಾಪನಿವೇದನೆ (ಪ್ರಾಯಶ್ಚಿತ್ತ), ಬಹಿಷ್ಕಾರಗಳೇ ಮುಂತಾದ ವಿವಿಧ ಶಿಕ್ಷೆಗಳನ್ನೂ ಜಾತಿ ನಿಯಮಗಳನ್ನು
ಮೀರಿ ನಡೆದ ಅಪರಾಧಿಗಳಿಗೆ ವಿಧಿಸಲಾಗುತ್ತಿತ್ತು.
4. ಮಹಿಳೆಯರ ಸ್ಥಾನ-ಮಾನಗಳು:- ಮಲಬಾರ್ ಬಿಟ್ಟು ಉಳಿದಂತೆ, ಕುಟುಂಬ ಪದ್ಧತಿಯು ಮುಖ್ಯವಾಗಿ
ಪಿತೃಪ್ರಧಾನವಾಗಿತ್ತು. ಆದುದರಿಂದ ಕುಟುಂಬದ ಅತ್ಯಂತ ಹಿರಿಯ ಸದಸ್ಯನೇ ಅದರ ಮುಖ್ಯಸ್ಥನಾಗಿರುತ್ತಿದ್ದ
ಹಾಗೂ ಮಹಿಳೆಯರು ಸಾಮಾನ್ಯವಾಗಿ ಮುಖ್ಯಸ್ಥನ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಆದರೆ ಕೂಡುಕುಟುಂಬದಲ್ಲಿ
ಮನೆಯ ಯಜಮಾನಿಗೆ ಗೌರವಾರ್ಹ ಸ್ಥಾನ ಇರುತ್ತಿತ್ತು; ಮನೆಯ ಆಗುಹೋಗುಗಳನ್ನು ನಿಯಂತ್ರಿಸುವ ಅಧಿಕಾರ
ಅವಳಿಗಿತ್ತು. ಧರ್ಮಶ್ರದ್ಧೆ, ಭೂತದಯೆ, ವಿನಯಶೀಲತೆ ಹಾಗೂ ವಾತ್ಸಲ್ಯಗಳನ್ನು ಹಿಂದೂ ಮಡದಿಗೆ ಆವಶ್ಯಕವಾಗಿ
ಇರಬೇಕಾದ ಗುಣಗಳೆಂದು ಪರಿಗಣಿಸಲಾಗಿತ್ತು. ಫೋರ್ಟ್ಸ್, ಓರ್ಮ ಮತ್ತು ಅಬ್ಬೆ ಡುಬಾಯಿಸ್‌ರಂತಹ ಕೆಲವು
ಸಮಕಾಲೀನ ಯೂರೋಪಿಯನ್ ಲೇಖಕರು, ಹಿಂದೂ ಮಹಿಳೆಯರ ಈ ಗುಣಗಳನ್ನು ತುಂಬ ಶ್ಲಾಘಿಸಿದ್ದಾರೆ. "ಪರಪುರುಷರ
ಸಂಗದಿಂದ ದೂರವಾಗಿರುವ, ಹಾಗೂ ಪರರ ಗಮನವನ್ನು ಆಕರ್ಷಿಸಬೇಕೆಂದು ಭಾವನೆಯನ್ನು ಹೊಂದಿರದ ಹಿಂದೂ ಮಹಿಳೆಯರು
ತಮ್ಮ ಅಮಾಯಕತೆಯಿಂದಾಗಿಯೇ ಅತ್ಯಂತ ಸುಂದರಿಯರಾಗಿದ್ದಾರೆ ಎಂಬುದು ಆ ಕಾಲದ ವಿದೇಶಿ ವಿದ್ವಾಂಸರ ಅಭಿಪ್ರಾಯವಾಗಿತ್ತು.
ಸಾಮಾನ್ಯವಾಗಿ
ಸಮಾಜದಲ್ಲಿ ಮಹಿಳೆಯರ ಬಗ್ಗೆ ಗೌರವಭಾವನೆಯಿತ್ತು. ಅಲೆಗ್ಸಾಂಡರ್
ಡೊವ್ ವಿಶೇಷವಾಗಿ ಗಮನಿಸಿದಂತೆ, "ಭಾರತದಲ್ಲಿ ಮಹಿಳೆಯರಿಗೆ ಎಂತಹ ಪೂಜ್ಯ ಸ್ಥಾನವಿತ್ತೆಂದರೆ,
ಹತ್ಯೆ ಹಾಗೂ ಹಿಂಸೆಗಳ ನಡುವೆ ಸೈನಿಕರು ಕೂಡ ಅವರನ್ನು
ಪೀಡಿಸದೆ ಬಿಟ್ಟು ಬಿಡುತ್ತಿದ್ದರು. ಮಹಿಳೆಯರಿರುವ ಅಂತಃಪುರ ಪವಿತ್ರವೆನಿಸಿತ್ತು. ಅಲ್ಲಿ ವಿಜಯೋತ್ಸವಕ್ಕೆ
ಸಂಬಂಧಿಸಿದ ಯಾವ ಸ್ವೇಚ್ಚಾಚಾರಗಳಿಗೂ ಆಸ್ಪದವಿರಲಿಲ್ಲ, ಗಂಡನ ಕೊಲೆಯ ರಕ್ತದಿಂದ ಆಚ್ಛಾದಿತರಾದ ಕೊಲೆಪಾತಕರು,
ಅವನ ಪತ್ನಿಯನ್ನು ಗೌರವದಿಂದಲೇ ಕಾಣುತ್ತಿದ್ದರು ". ಮಹಿಳೆಯರ ನಿತ್ಯಜೀವನಕ್ಕೆ ಸಂಬಂಧಿಸಿದಂತೆ
ಡುಬಾಯಿಸ್ ಹೀಗೆ ಬರೆಯುತ್ತಾನೆ: "ಅತ್ಯಂತ ಜನನಿಬಿಡವಾದ ಸ್ಥಳಗಳಲ್ಲಿ ಕೂಡ ಹಿಂದೂ ಮಹಿಳೆಯರು
ಒಂಟಿಯಾಗಿ ಎಲ್ಲಿಗಾದರೂ ಹೋಗಬಹುದಾಗಿತ್ತು. ಸೋಮಾರಿ
ಸ್ವೇಚ್ಛಾಚಾರಿಗಳ ಅಸಂಬದ್ಧ ತಮಾಷೆ ಅಥವಾ ನೋಟಗಳನ್ನು
ಎದುರಿಸುವ ಭಯ ಅವರಿಗಿರಲಿಲ್ಲ. ಮಹಿಳೆಯರೇ ಇರುವ ಮನೆಯು ಪವಿತ್ರ ಸ್ಥಳದಂತೆ ಇದ್ದು, ಸ್ವೇಚ್ಛಾವರ್ತನೆಯವರು ಕೂಡ ಅಲ್ಲಿಗೆ ಬರಲು ಹಿಂಜರಿಯುತ್ತಿದ್ದರು".
ಆದರೆ ಪರದಾ ಅಥವಾ ಮಹಿಳೆಯರನ್ನು
ಮನೆಗಳಲ್ಲಿಯೇ ದೂರವಾಗಿ ಇರಿಸುವ ಪದ್ಧತಿಯು ಹಿಂದೂ ಮತ್ತು ಮುಸ್ಲಿಮ್ ಕುಟುಂಬಗಳಲ್ಲಿ ಆಚರಣೆಯಲ್ಲಿತ್ತು.
ಮಲಬಾರಿನ ಮಾಪಿಳ್ಳೆಗಳಲ್ಲಿ ಕೂಡ ಈ ಪದ್ಧತಿ ಆಚರಣೆಯಲ್ಲಿತ್ತು. ತಮ್ಮ ಜೀವನೋಪಾಯಕ್ಕಾಗಿ ಕೆಲಸ ಮಾಡಲು
ಹೊರಗೆ ಹೋಗಲೇಬೇಕಾಗಿರುವ ಬಡ ಕುಟುಂಬಗಳ ಮಹಿಳೆಯರು ಈ ಪದ್ಧತಿಯನ್ನು ಆಚರಿಸಲು ಅಸಮರ್ಥರಾಗಿದ್ದರು.
ಧಾರ್ಮಿಕ ಉದ್ದೇಶಗಳಿಂದ ಬ್ರಹ್ಮಚರ್ಯೆಯನ್ನು ಆಚರಿಸುವವರನ್ನು
ಬಿಟ್ಟು, ಮದುವೆಯು ಸಾರ್ವತ್ರಿಕ ಸಾಮಾಜಿಕ ಆಚರಣೆಯಾಗಿತ್ತು. ತಮ್ಮ ಗಂಡು ಹಾಗೂ ಹೆಣ್ಣುಮಕ್ಕಳ ಮದುವೆಗಳನ್ನು
ಏರ್ಪಡಿಸುವುದು ತಂದೆತಾಯಿಗಳ ಕರ್ತವ್ಯವೆಂದು ಪರಿಗಣಿಸಲಾಗಿತ್ತು. ಹಿಂದೂ ಸಮಾಜದಲ್ಲಿ ಮದುವೆಯೆಂಬುದು
ಸುಖಕರವಾದ, ವೈವಾಹಿಕ ಜೀವನಕ್ಕೆ ಅಗತ್ಯವಾಗಿರುವ ಸುದೃಢವಾದ ಹಾಗೂ ಪವಿತ್ರವಾದ ಸಂಬಂಧವಾಗಿತ್ತು. ಮದುವೆ
ಐಹಿಕವಾದ ಸುಖಗಳಿಗೆ ಆವಶ್ಯಕವಾಗಿರುವ ಕರಾರುಬದ್ಧ ಸಂಬಂಧವಾಗಿರಲಿಲ್ಲ. ದೇವರುಗಳಿಗೆ ಪೂಜೆ ಮತ್ತು
ಪ್ರಾರ್ಥನೆಗಳನ್ನು ಸಲ್ಲಿಸುವುದರ ಮೂಲಕ ವಿಧ್ಯುಕ್ತವಾಗಿ ಮದುವೆಯನ್ನು ಆಚರಿಸಲಾಗುತ್ತಿತ್ತು. ಹೀಗೆ ವಿಧ್ಯುಕ್ತವಾಗಿ ವಿವಾಹವಾದ ಪತ್ನಿಯನ್ನು, ವ್ಯಭಿಚಾರದ ಆರೋಪದ
ಹೊರತಾಗಿ, ಇನ್ನಾವ ಸಂದರ್ಭಗಳಲ್ಲಿಯೂ ತೊರೆಯುವಂತೆ ಇರಲಿಲ್ಲ. ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ
ಬಾಲ್ಯದಲ್ಲಿಯೇ ಮದುವೆ ಮಾಡುತ್ತಿದ್ದರು, ಆದರೆ ಅವರು ಪ್ರಾಯಕ್ಕೆ ಬರುವವರೆಗೆ ನಿಷೇಕ ಪ್ರಸ್ತವನ್ನು
ನಡೆಸುತ್ತಿರಲಿಲ್ಲ.
ಒಳ್ಳೆಯ ಹೆಂಗಸರು ಮನೆಯಲ್ಲಿ ಆಡಳಿತ ನಡೆಸುವ ದೇವದೂತರಂತೆ"
ಸೇವೆ ಸಲ್ಲಿಸುತ್ತಿದ್ದರು. ಆದರೆ ಅಗತ್ಯವೆನಿಸಿದಾಗ ಅವರಲ್ಲಿ ಕೆಲವರು 'ಜಗತ್ತಿನ ವಿಸ್ತಾರವಾದ ಕ್ಷೇತ್ರದಲ್ಲಿ
" ಹಾಗೂ "ಜೀವನದ ರಣರಂಗದಲ್ಲಿ ಗಂಡಸರ ಸಮೀಪದಲ್ಲಿ ನಿಲ್ಲುತ್ತಿದ್ದರು. ಹದಿನೆಂಟನೆಯ ಶತಮಾನದಲ್ಲಿನ
ಮಹಾರಾಷ್ಟ್ರದ ಆಗುಹೋಗುಗಳ ಬಗ್ಗೆ ಅಪಾರ ಅನುಭವ ಹೊಂದಿದ್ದ ಮಾಲ್ಕಮ್, ಅಲ್ಲಿನ ಮಹಿಳೆಯರ ಬಗ್ಗೆ ಹೀಗೆ
ಬರೆದಿದ್ದಾನೆ: "ಬ್ರಾಹ್ಮಣ ಹಾಗೂ ಶೂದ್ರ ಮರಾಠಾ ಇವೆರಡೂ ಕುಟುಂಬಗಳ ಮಹಿಳೆಯರು, ಸಾಮಾನ್ಯವಾಗಿ
ಹೇಳುವುದಾದರೆ, ತಮ್ಮ ಗಂಡಂದಿರು, ಅರಸರು ಅಥವಾ ನಾಯಕರಾಗಿರುವಾಗ, ತುಂಬ ಪ್ರಭಾವಿಗಳಾಗಿರುತ್ತಿದ್ದರು;
ಅವರು ಜನರ ಮೇಲೆ ತಮಗಿರುವ ಅಧಿಕಾರದಿಂದಾಗಿ, ಜನರೊಡನೆ ಬೆರೆಯುತ್ತಿದ್ದರು, ಕೆಲವು ಸಲ ... ರಾಜ್ಯದ
ಆಗುಹೋಗುಗಳಲ್ಲಿ ಕೂಡ ಖಾಸಗಿಯಾಗಿ ಭಾಗವಹಿಸುತ್ತಿದ್ದರು. ಮೇಲ್ದರ್ಜೆಯ ಗಂಡಸರನ್ನು ಮದುವೆಯಾಗಿದ್ದ
ಪಕ್ಷದಲ್ಲಿ, ಅವರು ಸಾಮಾನ್ಯವಾಗಿ ತಮ್ಮದೇ ಆದ ವಿಶಿಷ್ಟ ಸ್ಥಾನಮಾನಗಳನ್ನು ಹೊಂದಿರುತ್ತಿದ್ದರು; ತಾವು
ಬಯಸುವ ಸ್ವಾತಂತ್ರ್ಯ ಅವರಿಗಿರುತ್ತಿತ್ತು. ಮದುವೆ ಮೊದಲಾದ ಸಮಾರಂಭಗಳಲ್ಲಿ ಮತ್ತು ಕೆಲವು ವಾರ್ಷಿಕೋತ್ಸವಗಳಲ್ಲಿ
ತಮ್ಮ ಸ್ನೇಹಿತೆಯರಿಗಾಗಿ ಭೋಜನಕೂಟಗಳನ್ನೂ ಮನೋರಂಜನಾ ಕೂಟಗಳನ್ನೂ ಏರ್ಪಡಿಸುತ್ತಿದ್ದರು”. ಹದಿನೆಂಟನೆಯ
ಶತಮಾನದಲ್ಲಿ ಮಹಿಳೆಯರು ವಹಿಸಿದ ಇಂಥ ಪಾತ್ರಗಳ ಎರಡು ಅತಿ ಪ್ರಮುಖ ನಿದರ್ಶನಗಳೆಂದರೆ ಬಂಗಾಳದ ನಾಟೋರಿನ
ರಾಣಿ ಭವಾನಿ ಹಾಗೂ 1766ರಿಂದ 1795ರವರೆಗೆ ಇಂದೋರನ್ನು ಆಳಿದ ಶ್ರೀದೇವಿ ಅಹಲ್ಯಾ ಬಾಯೀ. ಕೆಲವು ಮುಸ್ಲಿಮ್
ಮಹಿಳೆಯರು ಕೂಡ ರಾಜಕೀಯ ಆಗುಹೋಗುಗಳಲ್ಲಿ ಭಾಗವಹಿಸಿದ್ದಾರೆ. ಒರಿಸ್ಸದ ಗವರ್ನರ್ ಆಗಿದ್ದ ಮುರ್ಷಿದ್
ಕುಲಿಯ ಹೆಂಡತಿ ದರ್ದಾನಾ ಬೇಗಮ್, 'ಅಲಿ ವರ್ದಿ ಖಾನನು ಒರಿಸ್ಸವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದಾಗ,
ಅವನೊಂದಿಗೆ ಹೋರಾಡುವಂತೆ ಆಕೆ ತನ್ನ ಗಂಡನಿಗೆ ಪ್ರಚೋದನೆ ನೀಡಿದಳು. ನವಾಬ್ ಶುಜಾ-ಉದ್-ದೀನನ ಮಡದಿ
ಜೇಬುನ್ನೀಸಾ ಆಡಳಿತ ವಿಷಯಗಳಲ್ಲಿ ಗಂಡನಿಗೆ ಸಹಾಯಮಾಡುತ್ತಿದ್ದಳು. 'ಆಲಿ ವರ್ದಿ'ಯ ಬೇಗಂ ಕೂಡ, ಆಡಳಿತ
ವಿಷಯಗಳಲ್ಲಿ ಗಂಡನಿಗೆ ಸಹಕಾರ ನೀಡುತ್ತಿದ್ದಳು ಮತ್ತು ಬಂಗಾಳದ ಮರಾಠಾ ಆಕ್ರಮಣಕಾರರ ವಿರುದ್ಧ ನಡೆದ
ಹೋರಾಟದಲ್ಲಿ ಅವನಿಗೆ ಪ್ರೋತ್ಸಾಹ ನೀಡಿದ್ದಳು. ಅವಳ ಬಗ್ಗೆ ಹಾಲ್‌ವೆಲ್ ಹೀಗೆ ಬರೆದಿದ್ದಾನೆ :
''ಇವಳ ಜ್ಞಾನ, ಉದಾರಹೃದಯ, ಉಪಕಾರ ಬುದ್ದಿ ಮತ್ತು ಹೊಂದಿಕೊಳ್ಳುವ ಪ್ರತಿಯೊಂದೂ ಗುಣಗಳು, ಹೆಂಗಸಾಗಿಯೂ
ಅವಳು ಹೊಂದಿದ ಗೌರವ ಹಾಗೂ ಸ್ಥಾನಮಾನಗಳಿಗೆ ಕಾರಣವಾಗಿವೆ. ರಕ್ತಪಾತದಿಂದ ಕೂಡಿದ ಹಾಗೂ ಭೀಕರವಾದ ಕ್ರಮಗಳ
ಬಗ್ಗೆ ತೀರ್ಮಾನ ಮಾಡಬೇಕಾದ ಸಂದರ್ಭವನ್ನು ಬಿಟ್ಟು ಉಳಿದಂತೆ, ಸರ್ಕಾರದ ಪ್ರತಿಯೊಂದೂ ವಿಷಯವನ್ನು
ಕುರಿತು ಅಲಿ ವರ್ದಿ ಅವಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದ.
ಆ
ಕಾಲದಲಿ ಉನ್ನತ ವರ್ಗದವರಲ್ಲಿ ಸಾಮಾನ್ಯವಾಗಿ ಬಹುಪತ್ನಿತ್ವವಿತ್ತು. ವಾರ್ಡ್‌ನ ಅಭಿಪ್ರಾಯದಲ್ಲಿ,
“ಒಬ್ಬ ವ್ಯಕ್ತಿ ಇಬ್ಬರು ಮಡದಿಯರನ್ನು ಹೊಂದಿರುವುದು ಮಹಾಪರಾಧ" ಎಂದು ಎಲ್ಲ ಸಾಮಾನ್ಯ ಹಿಂದೂಗಳೂ
ಭಾವಿಸುತ್ತಾರೆ. ಡುಬಾಯಸ್ ವಿಶೇಷವಾಗಿ ಗಮನಿಸಿರುವ ಹಾಗೆ "ರಾಜರು, ಸಾಮಂತರು, ರಾಜನೀತಿಜ್ಞರು
ಮತ್ತು ಇತರ ಮೇಲ್ದರ್ಜೆಯವರಲ್ಲಿ ಬಹುಪತ್ನಿತ್ವವಿತ್ತು. ಹಾಗಿದ್ದರೂ ಮೇಲ್ದರ್ಜೆಯವರಲ್ಲಿ ರೂಢಿಯಲ್ಲಿರುವ
ಬಹುಪತ್ನಿತ್ವವನ್ನು ಶಾಸನಬಾಹಿರ ಹಾಗೂ ಸಂಪ್ರದಾಯದ ಉಲ್ಲಂಘನೆಯೆಂದೂ ವಾಸ್ತವವಾಗಿ ಕೆಟ್ಟಪದ್ಧತಿಯೆಂದೂ
ಭಾವಿಸಲಾಗಿತ್ತು. ಆದರೆ ಬಂಗಾಳದಲ್ಲಿ ಕುಲೀನರೆಂದು ಭಾವಿಸಲಾಗಿರುವ ಜನರಲ್ಲಿ ಮತ್ತು ಮಿಥಿಲಾದ ಕೆಲವು
ಬ್ರಾಹ್ಮಣರಲ್ಲಿ ಬಹುಪತ್ನಿತ್ವವು ಕ್ರಮಬದ್ಧವೂ ಪ್ರಸಿದ್ಧವೂ ಆದ ಆಚರಣೆಯಾಗಿತ್ತು. ಆಧುನಿಕ ಭಾರತದಲ್ಲಿ
ಮಹಿಳೆಯರ ಹಕ್ಕುಗಳ ಬಗ್ಗೆ ನಿರ್ಭಯವಾಗಿ ಹೋರಾಡಿದ ರಾಜಾರಾಮಮೋಹನ ರಾಯ್ ಅವರು ಈ "ಭೀಕರ ಬಹುಪತ್ನಿತ್ವ
ಪದ್ಧತಿಯ ವಿರುದ್ಧವಾಗಿ ಪ್ರಬಲ ಪ್ರತಿಭಟನೆಯನ್ನು ತೋರಿಸಿದ್ದಾರೆ ಹಾಗೂ 'ಕುಲೀನ ಪದ್ದತಿ' ಮತ್ತು
ಬಹುಪತ್ನಿತ್ವ ಇವುಗಳ ವಿರುದ್ಧ ಅನೇಕ ಲೇಖನಗಳನ್ನು ಬರೆದಿದ್ದಾರೆ. ಕುಲೀನ'ರಲ್ಲದವರಲ್ಲಿ ವರದಕ್ಷಿಣಾ
ಪದ್ಧತಿ ಇರಲಿಲ್ಲ, ಅದು ಕಡ್ಡಾಯವೂ ಆಗಿರಲಿಲ್ಲ. ಮಲಬಾರಿನ ತಿಯಾನ್‌ಗಳಲ್ಲಿ ಬಹುಪತ್ನಿತ್ವ ಪದ್ಧತಿ
ಇದ್ದುದಾಗಿ ಬುಕಾನನ್ ಬರೆದಿದ್ದಾನೆ. ನಾಯರ್ ಮಹಿಳೆಯರಿಗೆ ತಮ್ಮ ಗಂಡಂದಿರನ್ನು ಬದಲಾಯಿಸುವ ಅವಕಾಶ"
ಇದ್ದಾಗ್ಯೂ "ಅವರು ಏಕಕಾಲದಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಗಂಡಂದಿರು ಇರಲು ಅವಕಾಶಮಾಡಿಕೊಳ್ಳುತ್ತ
ಇರಲಿಲ್ಲ"
5. ಗುಲಾಮ ಪದ್ಧತಿ:- ಗುಲಾಮಗಿರಿಯು ಇನ್ನೊಂದು ಸಾಮಾನ್ಯ ಸಾಮಾಜಿಕ ಕೆಡುಕಾಗಿತ್ತು.
ಮಧ್ಯಕಾಲೀನ ಅವಧಿಯಿಂದಲೂ "ಪ್ರತಿ ಗೌರವಾರ್ಹ ಮುಸ್ಲಿಮ್ ಮನೆಯಲ್ಲಿಯೂ ಗುಲಾಮರಿರುವುದು ಸಾಮಾನ್ಯವಾಗಿತ್ತು. ಹದಿನೆಂಟನೆಯ
ಶತಮಾನದಲ್ಲಿ ಗುಲಾಮಗಿರಿಯು ಭಾರತದಲ್ಲಿ ಬಹುವ್ಯಾಪಕವಾಗಿ ಚಾಲ್ತಿಯಲ್ಲಿತ್ತು. ಭಾರತದಲ್ಲಿ ಎರಡು ಬಗೆಯ
ಗುಲಾಮಗಿರಿಗಳಿದ್ದವು. ಮನವಾರ್ತೆ (ಮನೆ ಕೆಲಸ ಮಾಡುವವರು)
ಗುಲಾಮಗಿರಿ ಹಾಗೂ ಊಳಿಗಮಾನ್ಯ ಗುಲಾಮಗಿರಿ. ಎರಡನೆಯ ವಿಧದ ಗುಲಾಮಗಿರಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುವ
ಜೀತದಾಳುಗಳನ್ನು ದಣಿಗಳ ಆಸ್ತಿಯೆಂದು ಪರಿಗಣಿಸಲಾಗಿತ್ತು. ಜಮೀನು ಅಥವಾ ಭೂಮಿ ಒಬ್ಬ ದಣಿಯಿಂದ ಇನ್ನೊಬ್ಬ
ದಣಿಗೆ ವರ್ಗಾವಣೆಯಾದಾಗ ಜೀತದಾಳುಗಳ ದಣಿಗಳೂ ಬದಲಾಗುತ್ತಿದ್ದರು. ಈ ರೀತಿಯ ಗುಲಾಮಗಿರಿ ಭಾರತದ ಉತ್ತರ
ಹಾಗೂ ದಕ್ಷಿಣ ಭಾಗಗಳೆರಡರಲ್ಲಿಯೂ ಚಾಲ್ತಿಯಲ್ಲಿತ್ತು. ಮಲಬಾರಿನ ಪರಿಯಾಗಳಿಗೆ ಸಂಬಂಧಪಟ್ಟಂತೆ ಡುಬಾಯಿಸ್
ಹೀಗೆ ಬರೆದಿದ್ದಾನೆ: "ದೇಶದಲ್ಲಿ ಜನಿಸಿದ ಎಲ್ಲ ಪರಿಯಾಗಳೂ ಜೀವನವಿಡೀ ಜೀತದಾಳುಗಳಾಗಿಯೇ ಇರುತ್ತಿದ್ದರು.
ಗುಲಾಮಗಿರಿಯ ಪದ್ದತಿ ತಂದೆಯಿಂದ ಮಗನಿಗೆ ಮುಂದುವರಿಯುತ್ತಿತ್ತು. ಈ ಗುಲಾಮರು ತಮ್ಮ ಜನ್ಮಭೂಮಿಯ ಅನಿವಾರ್ಯಭಾಗವೆನಿಸಿದ್ದರು.
ಭೂಮಿಯೊಂದಿಗೆ ಅವರನ್ನೂ ಭೂಮಾಲಿಕರು ಮಾರಾಟಮಾಡಬಹುದಾಗಿತ್ತು ಹಾಗೂ ತನಗೆ ಇಚ್ಛೆ ಬಂದಾಗ ಹಾಗೂ ಇಚ್ಛೆ
ಬಂದ ರೀತಿಯಲ್ಲಿ ಅವರನ್ನು ಪರಾಧೀನ ಮಾಡಬಹುದಾಗಿತ್ತು" ಆದರೆ ಭೂಮಾಲಿಕರು ತಮ್ಮ ಗುಲಾಮರನ್ನು "ತುಂಬ ಜರೂರು
ಪ್ರಸಂಗಗಳಲ್ಲಿ ಮಾತ್ರ ಮಾರುತ್ತಿದ್ದರಲ್ಲದೆ, ಸಾಮಾನ್ಯ ಸಂದರ್ಭಗಳಲ್ಲಿ ಅಲ್ಲ. ಸ್ವತಃ ತಮ್ಮನ್ನೇ
ಗುಲಾಮರನ್ನಾಗಿ ಮಾರಾಟ ಮಾಡಲು ವ್ಯಕ್ತಿಗಳನ್ನು ಬಲವಂತಪಡಿಸಿದ ಸನ್ನಿವೇಶಗಳು, 18ನೆಯ ಶತಮಾನದ ಹಾಗೂ
ಹತ್ತೊಂಬತ್ತನೆಯ ಶತಮಾನದ ಪ್ರಾರಂಭಕಾಲದ ಕೆಲವು ಗುಲಾಮಗಿರಿ ದಾಖಲೆಗಳಲ್ಲಿ ಉಲ್ಲೇಖಗೊಂಡಿವೆ. ಕ್ಷಾಮ ಹಾಗೂ ಪ್ರವಾಹಗಳೇ ಮೊದಲಾದಂತಹ ನೈಸರ್ಗಿಕ ದುರಂತಗಳಿಂದ ಉಂಟಾದ ಕಷ್ಟ-ಸಂಕಷ್ಟಗಳ
ಕಾರಣವಾಗಿ ಕೂಡ ಜನರು ತಮ್ಮನ್ನೂ ತಮ್ಮ ಮಕ್ಕಳನ್ನೂ ಗುಲಾಮರನ್ನಾಗಿ ಮಾರಿಕೊಳ್ಳುತ್ತಿದ್ದರು. ಆದರೆ
ಭಾರತೀಯ ಕುಟುಂಬಗಳಲ್ಲಿ ಸಾಮಾನ್ಯವಾಗಿ ಗುಲಾಮರನ್ನು ಚೆನ್ನಾಗಿಯೇ ನಡೆಸಿಕೊಳ್ಳಲಾಗುತ್ತಿತ್ತು.
1792ರ ಜೂನ್‌ನಲ್ಲಿ ಕಮಿಟಿ ಆಫ್ ಸರ್ಕ್ಯುಟ್ ಗಮನಿಸಿದಂತೆ, " ನಮ್ಮ ದೇಶದಲ್ಲಿ ಗುಲಾಮಗಿರಿ
ಬೇರೆಯೇ ಆದ ರೀತಿಯಲ್ಲಿತ್ತು. ಇಲ್ಲಿ ಗುಲಾಮರನ್ನು ಅವರು ಸೇರಿರುವ ಕುಟುಂಬಗಳ ಮಕ್ಕಳಂತೆ ನೋಡಿಕೊಳ್ಳಲಾಗುತ್ತಿದೆ
ಹಾಗೂ ಕೆಲವು ಸಲ ಅವರು ತಮ್ಮ ಗುಲಾಮಗಿರಿಯಿಂದಾಗಿಯೇ ಅತ್ಯಂತ ಹೆಚ್ಚು ಸುಖಕರವಾದ ಸ್ಥಿತಿಯಲ್ಲಿ ಇರುವಂತೆ
ತೋರುತ್ತದೆ; ಅವರು ಬಯಸುವ ಸ್ವಾತಂತ್ರ್ಯವೂ ಅವರಿಗೆ ಇರುತ್ತದೆ”. ಮಾಲ್ಕಂನ ಅಭಿಪ್ರಾಯದಲ್ಲಿ ಗುಲಾಮರನ್ನು
"ಸಾಮಾನ್ಯವಾಗಿ ಮನೆಗೆಲಸದ ಆಳುಗಳಿಗಿಂತ ಹೆಚ್ಚಾಗಿ ದತ್ತು ತೆಗೆದುಕೊಂಡ ಮಕ್ಕಳಂತೆ ನಡೆಸಿಕೊಳ್ಳಲಾಗುತ್ತದೆ.
ಮೇವಾಡದಲ್ಲಿ ಗುಲಾಮರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆಂಬುದನ್ನು ಟಾಡ್ ಕೂಡ ಗಮನಿಸಿದ್ದಾನೆ.
ದಖನ್ನಿನ ಕಮಿಷನರ್‌ನ ಅಧಿಕಾರದ
ಕಾಲದಲ್ಲಿ ಮುದ್ರಣಗೊಂಡ, ವಿಲಿಯಮ್ ಚಾಪ್ಲಿನ್‌ನ ಒಂದು ವರದಿಯಲ್ಲಿ, ಭಾರತದಲ್ಲಿ ಚಾಲ್ತಿಯಲ್ಲಿದ್ದ
ಗುಲಾಮಗಿರಿಯನ್ನು ಕುರಿತ ಈ ಕೆಳಕಾಣಿಸಿದ ವರದಿಯಿರುವುದನ್ನು ನಾವು ನೋಡಬಹುದು: "ಸಂಪೂರ್ಣ ಗುಲಾಮಗಿರಿಗಿಂತ
ಹೆಚ್ಚಾಗಿ, ಇದು ಬಹಳ ಸೌಮ್ಯವಾದ ಹಾಗೂ ಸಹನೀಯವಾದ ದಾಸ್ಯವಾಗಿದೆ... ಗುಲಾಮರನ್ನು ಹಿಂದೂಗಳು ತುಂಬಾ
ತಾಳ್ಮೆಯಿಂದ ನಡೆಸಿಕೊಳ್ಳುತ್ತಾರೆ ಹಾಗೂ ಮನೆಗೆಲಸದ ಆಳುಗಳಿಗಿಂತ ಹೆಚ್ಚಾಗಿ ಕುಟುಂಬದ ಆನುವಂಶಿಕ
ಸೇವಕರಂತೆ ಪರಿಗಣಿಸುತ್ತಾರೆ. ಅವರು ಮೇಲ್ದರ್ಜೆಯ ದಣಿಗಳ ಮನೆಗಳಲ್ಲಿ ಮನೆಯವರಂತೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ.
ತಾವಿರುವ ಮನೆಗಳಲ್ಲಿ ಅವರಿಗೆ ಪ್ರೀತಿವಾತ್ಸಲ್ಯಗಳು ಸಿಗುತ್ತವೆ, ಗುಲಾಮ ಮಹಿಳೆಯರೊಂದಿಗೆ ಜಾತ್ಯಂತರ
ವಿವಾಹವಾಗುವ ಅವಕಾಶವೂ ಅವರಿಗಿರುತ್ತದೆ. ಹಲವು ಸಲ ಪುರುಷ ಗುಲಾಮರನ್ನು ಸ್ವತಂತ್ರರೆಂದು ಭಾವಿಸಲಾಗುತ್ತದೆ,
ಆದರೆ ಗುಲಾಮ ಮಹಿಳೆಯರು ಮಾತ್ರ ಸಾಮಾನ್ಯವಾಗಿ ಗುಲಾಮರಾಗಿಯೇ ಉಳಿಯುತ್ತಾರೆ. ಏನೇ ಇರಲಿ, ಗುಲಾಮ ಮಹಿಳೆಯರ
ಮದುವೆಗಳು ಬಹುಮಟ್ಟಿಗೆ ಅವರ ಬಿಡುಗಡೆಗೆ ಸರಿಸಮವಾಗಿರುತ್ತವೆ. ಏಕೆಂದರೆ ಮದುವೆಮಾಡಿಕೊಂಡ ಗುಲಾಮ
ಮಹಿಳೆಯರ ಜೀವನದ ಹೊಣೆ ಅವರನ್ನು ಮದುವೆಯಾದವರಿಗೆ ಸೇರುತ್ತದೆ. ಇದರೊಂದಿಗೆ ಹೋಲಿಸಿದಾಗ, ಯೂರೋಪಿಯನ್,
ಯುರೇಷಿಯನ್ ಮತ್ತು ಪೋರ್ಚುಗೀಸ್ ಕುಟುಂಬಗಳ, ವಿಶೇಷವಾಗಿ ಕಲ್ಕತ್ತದ, ಗುಲಾಮರ ಪರಿಸ್ಥಿತಿ ತುಂಬ ದುರ್ಭರವಾಗಿತ್ತು.
ಅವರು ವಿವಿಧ ಅಪಮಾನಗಳಿಗೆ ಮತ್ತು ಕ್ಷುಲ್ಲಕ ಅಪರಾಧಗಳನ್ನು ಮಾಡಿದ ಸಂದರ್ಭಗಳಲ್ಲಿ, ದೇಹ ದಂಡನೆಯ
ಶಿಕ್ಷೆಗೆ ಕೂಡ ಒಳಪಟ್ಟಿದ್ದರು.
ಮಾನವ ಹಿತಸಾಧನೆಯ
ಹೋರಾಟಗಳಿಂದಾಗಿ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧ ಭಾಗದ ಅವಧಿಯಲ್ಲಿ ಗುಲಾಮಗಿರಿ ಪದ್ಧತಿ ರದ್ದಾಯಿತು
ಹಾಗೂ 1843ರ ಭಾರತ ಕಾಯ್ದೆಯು ಗುಲಾಮಗಿರಿಗಿದ್ದ ಶಾಸನಬದ್ದ ಮಾನ್ಯತೆಯನ್ನು ತೆಗೆದುಹಾಕಿತು.
*****
Comments
Post a Comment