ಅಧ್ಯಾಯ-1. 18ನೆ ಶತಮಾನದ ಮಧ್ಯಭಾಗದಲ್ಲಿ ಭಾರತದ ರಾಜಕೀಯ ಪರಿಸ್ಥಿತಿ.

I. ಪೀಠಿಕೆ: ಭಾರತದ ಇತಿಹಾಸದಲ್ಲಿ ೧೮ನೆ ಶತಮಾನವು ಅನೇಕ ರಾಜಕೀಯ, ಆರ್ಥಿಕ, ಸಾಮಾಜಿಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದು, ಕೆಲವು ಇತಿಹಾಸಕಾರರು ಈ ಕಾಲವನ್ನು ಚಲನಶೀಲ ಯುಗವೆಂದಿದ್ದರೆ ಮತ್ತೆ ಕೆಲವರು ಅದನ್ನು ಯುದ್ಧಗಳಿಂದ ಕೂಡಿದ ಕತ್ತಲೆಯ ಯುಗವೆಂತಲೂ ಕರೆದಿದ್ದಾರೆ. ಈ ಕಾಲದಲ್ಲಿ ಉಂಟಾದ ವಿವಿಧ ಕ್ಷೇತ್ರಗಳಲ್ಲಿನ ಬದಲಾವಣೆಗಳು ಭಾರತದ ಇತಿಹಾಸದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಿವೆ. ಏಕೆಂದರೆ ಮೊಗಲರ ಪತನ, ಪ್ರಾದೇಶಿಕ ಶಕ್ತಿಗಳ ಉದಯ, ವ್ಯಾಪಾರ-ವಾಣಿಜ್ಯಗಳಲ್ಲಿ ಉಂಟಾದ ಬದಲಾವಣೆ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳು, ವಿದೇಶಿ ಶಕ್ತಿಗಳ ರಾಜಕೀಯ ಪ್ರಾಬಲ್ಯ – ಹೀಗೆ ಆ ಶತಮಾನವು ನಿರಂತರವಾದ ವೈವಿಧ್ಯಮಯವಾದ ಘಟನೆಗಳಿಂದ ಕೂಡಿದ್ದು, ೧೯೯೦ರ ನಂತರ ಇತಿಹಾಸಜ್ಞರಲ್ಲಿ ಆಸಕ್ತಿ ಕೆರಳಿಸಿ ಕುತೂಹಲಕಾರಿ ಅಧ್ಯಯನಗಳಿಗೆ ಅವಕಾಶ ಕಲ್ಪಿಸಿದೆ. ಆ ಶತಮಾನದ ಪ್ರಮುಖ ಘಟನಾವಳಿಗಳನ್ನು ಕೆಳಕಂಡಂತೆ ನೋಡಬಹುದು.

 

II. ಉತ್ತರ ಭಾರತ: ಉತ್ತರ ಭಾರತದಲ್ಲಿ ಈ ಶತಮಾನವು ಮೊಗಲರ ಪತನದಿಂದಾಗಿ ಅವರ ಅಧೀನರಾಗಿದ್ದ ಬಂಗಾಳ ಮತ್ತು ಅವಧ್‌ನ  ಸುಬೆದಾರರು ಸ್ವತಂತ್ರರಾಗಿ ಆಳತೊಡಗಿದರು. ಮೊಗಲರ ಸೈನಿಕ ದೌರ್ಬಲ್ಯದ ಕಾರಣ ನಾದಿರ್‌ ಷಾ ಮತ್ತು ಅಹಮದ್‌ ಷಾ ಅಬ್ದಾಲಿಗಳು ಭಾರತದ ಮೇಲೆ ಧಾಳಿ ನಡೆಸಿದರು. ಅಲ್ಲದೇ ಮರಾಠರು ಪೇಶ್ವೆಗಳ ನೇತೃತ್ವದಲ್ಲಿ ಪ್ರಬಲರಾಗಿ ಮೊಗಲ್ ಬಾದಷಹಾರ ಮೇಲೆ ರಾಜಕೀಯ ಹಿಡಿತ ಸಾಧಿಸಿದರು. ಅಲ್ಲದೇ ಸಿಖ್ಖರು, ಜಾಟರು ಮತ್ತು ರೋಹಿಲ್ಲರು ಸ್ವತಂತ್ರ ಶಕ್ತಿಗಳಾಗಿ ತಲೆ ಎತ್ತಿದರು. ಜೊತೆಗೆ ಆಂಗ್ಲರ ರಾಜಕೀಯ ಪ್ರವೇಶದಿಂದಾಗಿ ಮೊಗಲ್‌ ಬಾದಷಹಾರು ಕೈಗೊಂಬೆ ಆಡಳಿತಗಾರರ ಮಟ್ಟಕ್ಕೆ ಕುಸಿದರು.

1. ಮೊಗಲರ ಪತನ: ಸಾ.ಶ.ವ. ೧೭೦೭ರಲ್ಲಿ ಔರಂಗಜೇಬನ ಮರಣಾನಂತರ ಉತ್ತರ ಭಾರತದಲ್ಲಿ ೧೮ನೆ ಶತಮಾನದುದ್ದಕ್ಕೂ ರಾಜಕೀಯ ವಿಪ್ಲವ ಏರ್ಪಟ್ಟಿತು. ಏಕೆಂದರೆ ಎಲ್ಲಾ ಮೊಗಲ್‌ ಬಾದಷಹಾರ ಮರಣದ  ನಂತರ ಸಾಮಾನ್ಯವಾಗಿದ್ದ ಉತ್ತರಾಧಿಕಾರದ ಸಮಸ್ಯೆ ಆಗಲೂ ತಲೆದೋರಿತು. ಅಂತಿಮವಾಗಿ ಬಹಾದೂರ್‌ ಷಾ (1707-1712) ಗದ್ದುಗೆ ಏರಿದನು. ಅವನು ಮೊಗಲರ ವೈಭವವನ್ನು ಉಳಿಸಲು ಸರ್ವಪ್ರಯತ್ನ ನಡೆಸಿದನು. ಆದರೂ ಅವನ ಮರಣಾನಂತರ ಕೇವಲ ೭ ವರ್ಷಗಳಲ್ಲಿ ನಾಲ್ವರು ಬಾದಶಹಾರು ಸಿಂಹಾಸನವೇರಿದರೂ ಅವರು ಅತ್ಯಂತ ಅಶಕ್ತರಾಗಿದ್ದರು. ನಂತರ ಆಳಿದ ಮಹಮದ್‌ ಶಾ ರಂಗೀಲಾ (1719-1748) ದೀರ್ಘ ಕಾಲ ಆಳಿದರೂ ಉತ್ತಮ ಆಡಳಿತ ನೀಡಲಿಲ್ಲ. ಇವನ ಕಾಲದಲ್ಲಿಯೇ ಪರ್ಷಿಯಾದ ನಾದಿರ್‌  ಷಾ (೧೭೩೯-೪೦) ರಲ್ಲಿ ಭಾರತದ ಮೇಲೆ ಧಾಳಿ ನಡೆಸಿ ಮೊಗಲರ ಅಸ್ಥಿತ್ವಕ್ಕೆ ಪ್ರಬಲ ಪೆಟ್ಟು ಕೊಟ್ಟನು. ಅವನ ನಂತರ ಅಫ್ಘಾನಿಸ್ತಾನದ ಅಹಮದ್‌ ಷಾ ಅಬ್ದಾಲಿ ಕನಿಷ್ಠ ಆರು ಬಾರಿ ಭಾರತದ ಮೇಲೆ ಧಾಳಿ ನಡೆಸಿ ಅಪಾರ ಸಂಪತ್ತನ್ನು ದೋಚುವುದರೊಂದಿಗೆ ೧೭೬೧ ರಲ್ಲಿ ನಡೆದ ತೃತೀಯ ಪಾಣಿಪತ್‌ ಯುದ್ಧದಲ್ಲಿ ಮರಾಠರನ್ನು ಸದೆಬಡಿದು ಏಳಿಗೆಯಲ್ಲಿದ್ದ ಮರಾಠರ ಸೈನಿಕ ಸಾಮರ್ಥ್ಯಕ್ಕೆ ದೊಡ್ಡ ಪೆಟ್ಟು ಕೊಟ್ಟನು. ನಂತರದಲ್ಲಿ ನಡೆದ ಯೂರೋಪಿಯನ್‌ ಶಕ್ತಿಗಳ ಮೇಲಾಟದಲ್ಲಿ ಮೊಗಲ್‌ ಬಾದಶಹಾ ಅಲಹಾಬಾದ್‌ ಒಪ್ಪಂದದ ಮೂಲಕ ಬ್ರಿಟಿಷರ ಪಿಂಚಣಿದಾರನಾದನು. ತದನಂತರದ ಮೊಗಲ್‌ ಬಾದಷಹಾರು ಕೇವಲ ನಾಮಮಾತ್ರದ ಅಧಿಕಾರವನ್ನು ಹೊಂದಿದ್ದರೇ ಹೊರತು ನಿಜವಾದ ಅಧಿಕಾರವೆಲ್ಲವೂ ಮರಾಠರ ಮತ್ತು ಆಂಗ್ಲರ ಕೈಯಲ್ಲಿತ್ತು. ಮೊಗಲರ ಪತನವು ಭಾರತದಲ್ಲಿ ಪ್ರಾದೇಶಿಕ ಮತ್ತು ವಿದೇಶಿ ಶಕ್ತಿಗಳು ತಲೆ ಎತ್ತಲು ಅವಕಾಶ ಕಲ್ಪಿಸಿ, ೧೮ನೆ ಶತಮಾನದ ಭಾರತದ ರಾಜಕೀಯದಲ್ಲಿ ಹೊಸ ಬದಲಾವಣೆಗಳು ಉಂಟಾದುದನ್ನು ಕಾಣಬಹುದು.

2. ಪ್ರಾಂತೀಯ ರಾಜ್ಯಗಳ ಏಳಿಗೆ: ಔರಂಗಜೇಬನ ಕಾಲದವರೆಗೂ ಕೇಂದ್ರಶಕ್ತಿ ಪ್ರಬಲವಾಗಿದ್ದ ಕಾರಣ ಪ್ರಾಂತೀಯ ಸುಬೆದಾರರು ಮೊಗಲ್‌ ಸತ್ತೆಗೆ ನಿಷ್ಠರಾಗಿದ್ದರು. ಆದರೆ ಅವನ ನಂತರದ ಮೊಗಲರ ಕಾಲದಲ್ಲಿನ ಕೇಂದ್ರದ ದುರ್ಬಲತೆಯ ಕಾರಣದಿಂದಾಗಿ ಬಂಗಾಳ, ದಖನ್‌, ಅವಧದ  ಸುಬೆದಾರರು ಸ್ವತಂತ್ರರಾಗಿ ಆಳತೊಡಗಿದ ಕಾರಣದಿಂದಾಗಿ ಮೊಗಲ್‌ ಸಾಮ್ರಾಜ್ಯವು ವಿಸ್ತಾರದಲ್ಲಿ ಕುಸಿಯಿತು.

A. ಬಂಗಾಳದ ನವಾಬ: ಆರಂಭದಲ್ಲಿ ಔರಂಗಜೇಬನ ಕಾಲದಲ್ಲಿ ಬಂಗಾಳದ ಕಂದಾಯ ವಸೂಲಿಗೆ ನೇಮಕಗೊಂಡ ಮುರ್ಷಿದ್‌ ಖುಲಿ ಖಾನನು ಮುಂದೆ ಬಹಾದ್ದೂರ್‌ ಷಾ ಕಾಲದಲ್ಲಿ ಮರುನೇಮಕಗೊಂಡನು. ಫರುಕ್ಸಿಯಾರ್‌ ಕಾಲದಲ್ಲಿ ಬಂಗಾಳ ಮತ್ತು ಒರಿಸ್ಸಾಗಳ ಸುಬೇದಾರನಾಗಿ ನೇಮಕಗೊಂಡನು. ಮುಂದೆ ೧೭೧೭ರಲ್ಲಿ ದಿವಾನಿ ಮತ್ತು ನಿಜಾಮತ್‌ ಎರಡೂ ಅಧಿಕಾರಗಳನ್ನು ನಿರ್ವಹಿಸುವ ಜವಾಬ್ದಾರಿಗಳೊಂದಿಗೆ ಬಂಗಾಳದ ಗವರ್ನರ್‌ ಆದಾಗ ಅವನು ಕ್ರಮೇಣ ಸ್ವತಂತ್ರನಾಗಿ ಆಳತೊಡಗಿದನು. ಆದರೆ ಬಾದಷಹಾನಿಗೆ ಸಲ್ಲಿಸಬೇಕಾದ ಕಪ್ಪವನ್ನು ಸಲ್ಲಿಸುತ್ತಿದ್ದನು. ಮುಂದೆ ೧೭೨೭ರಲ್ಲಿ ಅವನು ಸಾಯುವ ವೇಳೆಗೆ ಅವನು ಆಂತರಿಕವಾಗಿ ಸ್ವತಂತ್ರ ಆಳ್ವಿಕೆ ಮಾಡುತ್ತಿದ್ದನು. ಹೀಗೆ ಬಂಗಾಳವು ಕೇವಲ ದೆಹಲಿಗೆ ಕಪ್ಪ ನೀಡುವಷ್ಟರ ಮಟ್ಟಿಗೆ ವಿಧೇಯವಾಗಿತ್ತೇ ಹೊರತು ಆಂತರಿಕ ಆಡಳಿತದಲ್ಲಿ ಬಾದಷಹಾನ ಯಾವುದೇ ಹಿಡಿತವಿರಲಿಲ್ಲ. ಮುಂದೆ ಅಲಿವರ್ದಿಖಾನನ ಕಾಲದಲ್ಲಿ ಬಂಗಾಳವು ಕಪ್ಪ ಕೊಡುವುದನ್ನೂ ಸಹ ನಿಲ್ಲಿಸಿ ಸಂಪೂರ್ಣವಾಗಿ ಮೊಗಲ್‌ ಬಾದಷಹಾನ ಹಿಡಿತದಿಂದ ಮುಕ್ತವಾಯಿತು.

B. ಹೈದ್ರಾಬಾದಿನ ನಿಜಾಮ: ದಖನ್ನಿನಲ್ಲಿದ್ದ ಹೈದ್ರಾಬಾದ್‌ ಪ್ರಾಂತ್ಯವನ್ನು ಮುಬಾರಿಜ್‌ ಖಾನ್‌ ಎಂಬುವವನು ೧೭೨೩ರ ವೇಳೆಯಲ್ಲಿ ಬಹುತೇಕ ಸ್ವತಂತ್ರನಾಗಿ ಆಳುತ್ತಿದ್ದನು. ಆದರೆ ದೆಹಲಿಯಲ್ಲಿದ್ದ ನಿಜಾಮ ಉಲ್‌ ಮುಲ್ಕ್‌ ಆಸಫ್‌ ಎಂಬುವವನು ಮೊಗಲ್‌ ಬಾದಷಹಾನಿಗೆ ವಜೀರನಾಗಿ ಸೇವೆ ಸಲ್ಲಿಸುತ್ತಿದ್ದನು. ಅವನು ದೆಹಲಿಯಲ್ಲಿನ ರಾಜಕೀಯ ಸಂಘರ್ಷಗಳ ಕಾರಣದಿಂದಾಗಿ ದಖನ್ನಿನಲ್ಲಿದ್ದ ಹೈದ್ರಾಬಾದನ್ನು ಸ್ವತಂತ್ರನಾಗಿ ಆಳಲು ಬಯಸಿ ೧೭೨೩ರಲ್ಲಿ ಮುಬಾರಿಜ್‌ ಖಾನನನ್ನು ಸೋಲಿಸಿ ದಖನ್‌ ಪ್ರಾಂತ್ಯವನ್ನು ವಶಪಡಿಸಿಕೊಂಡನು. ನಂತರ ಅವನು ೧೭೪೦ ರಲ್ಲಿ ಶಾಶ್ವತವಾಗಿ ಹೈದ್ರಾಬಾದಿಗೆ ತೆರಳಿದಾಗ ಆ ಪ್ರಾಂತ್ಯವು ಸಂಪೂರ್ಣವಾಗಿ ಸ್ವತಂತ್ರಗೊಂಡಿತು.

C. ಅವಧದ ನವಾಬ: ದೆಹಲಿಯ ಉತ್ತರಕ್ಕಿದ್ದ ಅವಧ್‌ ಸಹ ಬೃಹತ್‌ ಮತ್ತು ಫಲವತ್ತಾದ ಮೊಗಲ್‌ ಪ್ರಾಂತ್ಯಗಳಲ್ಲಿ ಒಂದಾಗಿತ್ತು. ೧೭೨೨ರಲ್ಲಿ ಅವಧದಲ್ಲಿನ ದಂಗೆಗಳನ್ನು ಅಡಗಿಸುವ ಆದೇಶದೊಂದಿಗೆ ಸಾದತ್‌ ಖಾನ್‌ ಎಂಬುವವನು ಅದರ ಗವರ್ನರ್‌ ಆಗಿ ನೇಮಕಗೊಂಡನು. ಅಲ್ಲಿನ ದಂಗೆಗಳ ದಮನಾನಂತರ ದೆಹಲಿಗೆ ಹಿಂದಿರುಗಿದ ಅವನು ಆಸ್ಥಾನದಲ್ಲಿ ತನ್ನ ಸ್ಥಾನವನ್ನು ಗಳಿಸಿಕೊಳ್ಳಲಾಗದೇ ಪುನಃ ಅವಧ್‌ಗೆ ಮರಳಿ ಅಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸತೊಡಗಿದನು. ಮೊದಲು ತನ್ನ ಅಳಿಯನಾದ ಸಫ್ತರ್‌ ಜಂಗನನ್ನು ಅವಧದ ಉಪ ಗವರ್ನರ್‌ ಎಂದು ಮೊಗಲ್‌ ಬಾದಷಹಾನು ಮಾನ್ಯ ಮಾಡುವಂತೆ ಮಾಡಿದನು. ನಂತರ ಕಂದಾಯ ವಸೂಲಿಯ ದಿವಾನಿ ಕಛೇರಿಯನ್ನು ಬಾದಷಹಾನ ಹಿಡಿತದಿಂದ ಮುಕ್ತಗೊಳಿಸಿ, ಪ್ರಾಂತ್ಯದ ಕಂದಾಯ ಆಡಳಿತವನ್ನು ಸುಧಾರಿಸಿದನು. ಇದರಿಂದ ಸ್ಥಳೀಯ ಜಮೀನುದಾರರ ಬೆಂಬಲ ಅವನಿಗೆ ದೊರೆಯಿತು. ಅಲ್ಲದೇ ನೆರೆ-ಹೊರೆಯ ಪ್ರದೇಶಗಳನ್ನೂ ಅವನು ತನ್ನ ಆಡಳಿತಕ್ಕೆ ಸೇರಿಸಿಕೊಳ್ಳತೊಡಗಿದನು. ಮುಂದೆ ೧೭೩೯ ರಲ್ಲಿ ಅವನು ಪರ್ಷಿಯಾದ ನಾದಿರ್‌ ಷಾನ ದಾಳಿಯ ಕಾಲದಲ್ಲಿ ಮೊಗಲರಿಗೆ ಸಲ್ಲಿಸಿದ ಸೇವೆಯ ಹೊರತಾಗಿಯೂ ಮೀರ್‌ ಭಕ್ಷಿ ಹುದ್ದೆಯನ್ನು ನಿಜಾಮನಿಗೆ ನೀಡಿದಾಗ ಬೇಸರಗೊಂಡ ಅವನು ನಾದಿರ್‌ ಶಾನ ಪಕ್ಷ ಸೇರಿದನು. ಆದರೆ ನಾದಿರ್‌ ಷಾನ ದಬ್ಬಾಳಿಕೆಯ ಕಾರಣ ಆತ್ಮಹತ್ಯೆ ಮಾಡಿಕೊಂಡನು. ಅವನು ಸಾಯುವ ವೇಳೆಗೆ ಅವಧ್‌ ಬಹುತೇಕವಾಗಿ ಸ್ವತಂತ್ರ ರಾಜ್ಯವಾಗಿ ರೂಪುಗೊಂಡಿತ್ತು. ನಂತರ ಅವನ ಅಳಿಯ ಸಪ್ತರ್‌ ಜಂಗ್‌ ಅವಧದ ಸುಬೇದಾರನಾದನು. ಇವನ ಮರಣಾನಂತರ ೧೭೫೪ ರಲ್ಲಿ ಅವನ ಮಗ ಶೂಜ ಉದ್‌ ದೌಲನು ಬಂಗಾಳದ ನವಾಬನಾದನು. ಮುಂದೆ ಇವನು ಅಹಮದ್‌ ಷಾ ಅಬ್ದಾಲಿಯ ದಾಳಿಯ ಕಾಲಕ್ಕೆ ಮರಾಠರ ವಿರುದ್ಧ ಸೆಣಸಿದನಾದರೂ ಸ್ವತಂತ್ರ ಅಸ್ಥಿತ್ವವನ್ನು ಉಳಿಸಿಕೊಂಡಿದ್ದನು. ಮುಂದೆ ಬಕ್ಸಾರ್‌ ಕದನದ ವೇಳೆಯಲ್ಲಿ ಅವಧದ ನವಾಬನು ಸ್ವತಂತ್ರನಾಗಿಯೇ ಬ್ರಿಟಿಷರೊಂದಿಗೆ ಸೆಣಸಿದನು.

3. ಮರಾಠರು: ಶಿವಾಜಿಯ ನೇತೃತ್ವದಲ್ಲಿ ಸ್ಥಾಪನೆಗೊಂಡ ಮರಾಠಾ ರಾಜ್ಯವು ಅವನ ಮರಣಾನಂತರ ಔರಂಗಜೇಬನ ದಾಳಿಗಳ ಕಾರಣ ವಿಸ್ತಾರದಲ್ಲಿ ಕುಸಿದರೂ ಪೇಶ್ವೆಗಳ (ಬಾಜಿರಾಯ ೧ ಮತ್ತು ಬಾಲಾಜಿ ಬಾಜಿರಾಯ) ಕಾಲದಲ್ಲಿ ಬಹುತೇಕ ಭಾರತದಾದ್ಯಂತ ತನ್ನ ಪ್ರಭಾವವನ್ನು ಬೆಳೆಸಿಕೊಂಡಿತು. ನಂತರ ಮೊಗಲರ ಪ್ರಾಂತ್ಯಗಳ ಮೇಲೂ ಅಧಿಕಾರವನ್ನು ವಿಸ್ತರಿಸಿತು. ೧೭೫೨ರಲ್ಲಿ ಅಫ್ಘನ್‌ ಧಾಳಿಗಳನ್ನು ತಡೆಯುವ ಸಲುವಾಗಿ ಏರ್ಪಟ್ಟ ಒಪ್ಪಂದದಂತೆ ಮೊಗಲರು ಮರಾಠರ ರಕ್ಷಣೆಗೆ ಒಳಗಾದರು. ಇದರಿಂದಾಗಿ 1761 ರಲ್ಲಿ  ಪರ್ಷಿಯಾದ ಅಹಮದ್‌ ಶಾ ಅಬ್ದಾಲಿಯು ದೆಹಲಿಯ ಮೇಲೆ ದಾಳಿ ಮಾಡಿದಾಗ ಅವನ  ಸೈನ್ಯವನ್ನು ಮೂರನೆ ಪಾಣಿಪತ್‌ ಕದನದಲ್ಲಿ ಎದುರಿಸಿ ಸೋತು ಅಪಾರ ಸೈನಿಕ ನಷ್ಟಕ್ಕೆ ಒಳಗಾದರು.

4. ಸಿಖ್ಖರು: ಸಿಖ್ಖರ ೯ನೆ ಗುರು ತೇಜ್‌ ಬಹಾದೂರನ ಘೋರ ಅಂತ್ಯದ ಕಾರಣ ೧೦ನೆ ಗುರು ಗೋವಿಂದ ಸಿಂಹನು ಖಾಲ್ಸಾ ಎಂಬ ಸಿಖ್‌ ಸೈನಿಕ ಪಡೆಯನ್ನು ಸ್ಥಾಪಿಸಿದನು. ಅವನ ಮರಣಾನಂತರ ಬಂದಾ ಬಹಾದೂರ್‌ ಖಾಲ್ಸಾದ ನೇತೃತ್ವ ವಹಿಸಿಕೊಂಡನು. ಅವನು ಮುಂದೆ ಮೊಗಲರ ಸೇನಾ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕು, ಮಾರ್ಚ್‌ ೧೭೧೬ರಲ್ಲಿ ಮರಣದಂಡನೆಗೆ ಗುರಿಯಾದನು. ಆದರೆ ಸಿಖ್ಖರು ಆ ವೇಳೆಗೆ ಸ್ಥಳೀಯ ಪ್ರದೇಶಗಳ ಮೇಲೆ ಅಧಿಕಾರ ಸ್ಥಾಪಿಸಿಕೊಂಡು ವ್ಯಾಪಾರ ಮಾರ್ಗಗಳ ಮೇಲೆ ಹಿಡಿತ ಸಾಧಿಸಿದ್ದರು. ಮುಂದೆ ನಾದಿರ್‌ ಷಾ ಮತ್ತು ಅಬ್ದಾಲಿಗಳ ಧಾಳಿಯ ಕಾಲಕ್ಕೆ ಅವರ ಸೇನೆಗಳೊಂದಿಗಿನ ಸಂಘರ್ಷದಲ್ಲಿ ತೊಡಗಿ ಸೈನಿಕವಾಗಿ ಪ್ರಬಲರಾದರು. ನಂತರ ನೆರೆ-ಹೊರೆಯ ಭೂಪ್ರದೇಶಗಳನ್ನು ಗೆದ್ದುಕೊಳ್ಳುತ್ತಾ ಮೀಸಲ್‌ ಎಂಬ ಆಡಳಿತ ಘಟಕಗಳನ್ನು ಸ್ಥಾಪಿಸಿಕೊಂಡರು. ಒಟ್ಟು ೬೦ ಮೀಸಲ್‌ಗಳನ್ನು ಮುಂದೆ ಸುಕಿರಚಾಕಿಯಾ ಮಿಸಲ್‌ನ ಮುಖ್ಯಸ್ಥ  ರಣಜಿತ್‌ ಸಿಂಗನು ಒಟ್ಟುಗೂಡಿಸಿ ಸ್ವತಂತ್ರ ಸಿಖ್‌ ಸಾಮ್ರಾಜ್ಯವನ್ನು ಸ್ಥಾಪಿಸಿ, ೧೮೦೯ರಲ್ಲಿ ಬ್ರಿಟಿಷರೊಂದಿಗೆ ಮಾಡಿಕೊಂಡ ಅಮೃತಸರ ಒಪ್ಪಂದದ ಮೂಲಕ ಸಟ್ಲೆಜ್‌ ನದಿಯಿಂದ ಹಿಂದುಕುಷ್‌ ಸಾಲಿನವರೆಗೆ ಮತ್ತು ಕಾಶ್ಮೀರದಿಂದ ಸಿಂಧ್‌ ತನಕ ರಾಜ್ಯ ವಿಸ್ತರಿಸಿದನು.

5. ಜಾಟರು:  ಇವರು ದೆಹಲಿ ಮತ್ತು ಮಥುರಾ ಸುತ್ತಲಿನ ಕೃಷಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಿಖ್‌ ಧರ್ಮದ ಸ್ಥಾಪನೆಯ ನಂತರ ಅದರ ಅನುಯಾಯಿಗಳಾದರು. ಆದರೆ ಔರಂಗಜೇಬನ ದಬ್ಬಾಳಿಕೆಯ ಕಾರಣ ಗೋಕುಲ ಮತ್ತು ರಾಜಾರಾಂ ಎಂಬ ಜಾಟ ಮುಖಂಡರು ಮೊಗಲರ ವಿರುದ್ಧ ದಂಗೆ ನಡೆಸಿದರು. ರಾಜಾಸ್ಥಾನದ ಭರತಪುರ ಅವರ ಕೇಂದ್ರವಾಗಿತ್ತು.  ಚುರಾಮನ್‌ ಜಾಟನು ಮತ್ತು ಸೂರಜ್‌ ಮಲ್ (1756--63) ಕಾಲದಲ್ಲಿ ಜಾಟರು ಮತ್ತಷ್ಟು ಸಂಘಟಿತರಾದರು. ಸೂರಜ್‌ ಮಲ್‌ನ ಕಾಲದಲ್ಲಿ ಪೂರ್ವದಲ್ಲಿ ಗಂಗಾ ನದಿಯಿಂದ ಪಶ್ಚಿಮದಲ್ಲಿ ಆಗ್ರಾವರೆಗೆ ಮತ್ತು ಉತ್ತರದಲ್ಲಿ ದೆಹಲಿಯಿಂದ ದಕ್ಷಿಣದಲ್ಲಿ ಚಂಬಲ್‌ ವರೆಗೆ ಹರಡಿದ್ದ ಜಾಟರ ರಾಜ್ಯವು ಅವನ ಮರಣಾನಂತರ ಕುಸಿಯಿತು.

6. ರಜಪೂತರು: ಮೊಗಲ್‌ ಸಾಮ್ರಾಜ್ಯದ ಸ್ಥಾಪನೆಯ ಕಾಲಕ್ಕೆ ಬಾಬರನೊಂದಿಗೆ ಸಂಗ್ರಾಮಸಿಂಗನ ನೇತೃತ್ವದಲ್ಲಿ ಸೆಣಸಿದ್ದ ರಜಪೂತರು ಅವನ ಮೊಮ್ಮೊಗ ಅಕ್ಬರನ ಕಾಲದಲ್ಲಿ ಮೇವಾರ ಹೊರತುಪಡಿಸಿ ಉಳಿದೆಲ್ಲಾ ರಜಪೂತರು ಮೊಗಲರಿಗೆ ನಿಷ್ಠರಾದರು. ಆದರೆ ಔರಂಗಜೇಬನ ಕಾಲದಲ್ಲಿ ಮೇವಾರದ ಅಜಿತ್‌ಸಿಂಗನ ಉತ್ತರಾಧಿಕಾರದ ಸಮಸ್ಯೆಯ ಕಾರಣ ಮೊಗಲರ ವಿರುದ್ಧ ರಜಪೂತರು ಬಂಡಾಯ ಹೂಡಿದರು. ಅವನ ಮರಣಾನಂತರ ರಜಪೂತರು ಬಹುತೇಕ ಸ್ವತಂತ್ರರಾಗಿ ಆಳತೊಡಗಿದರು. ಅವರಲ್ಲಿ ಪ್ರಮುಖನಾದವನೆಂದರೆ ಅಂಬರದ ರಾಜ ಸವಾಯಿ ಜಯಸಿಂಗ್‌ (೧೬೯೯-೧೭೪೩). ಇವನು ಪತನದ ಹಾದಿಯಲ್ಲಿದ್ದ ಮೊಗಲರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.

 

III. ದಕ್ಷಿಣ ಭಾರತ:

1. ಮೈಸೂರು: ವಿಜಯನಗರ ಪತನಾನಂತರ ದಕ್ಷಿಣ ಭಾರತದಲ್ಲಿ ಏಳಿಗೆಗೆ ಬಂದ ಸಣ್ಣ ರಾಜಮನೆತನಗಳಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಏಳಿಗೆಗೆ ಬಂದ ಮೈಸೂರು ರಾಜ್ಯವು ಒಂದು. 18ನೆ ಶತಮಾನದ ಆದಿಯಲ್ಲಿ ಮೈಸೂರು ಒಡೆಯರ ದೌರ್ಬಲ್ಯದ ಕಾರಣದಿಂದಾಗಿ ನಂಜರಾಜಯ್ಯ ಮತ್ತು ದೇವರಾಜಯ್ಯ ಎಂಬ ದಳವಾಯಿಗಳು ಪ್ರಬಲರಾದರು. ದಕ್ಷಿಣ ಭಾರತದ ರಾಜಕೀಯ ಮೇಲಾಟದಲ್ಲಿ ಕರ್ನಾಟಿಕ್‌ ಯುದ್ಧಗಳಲ್ಲಿ ಪಾಲ್ಗೊಂಡ ಮೈಸೂರು ರಾಜ್ಯವು ದಿವಾಳಿಯತ್ತ ಸಾಗಿತ್ತು. ವೇತನವಿಲ್ಲದೆ ಬಂಡಾಯವೆದ್ದಿದ್ದ ಸೈನಿಕರಿಗೆ ತನ್ನ ಬಳಿಯಲ್ಲಿದ್ದ ಹಣದಿಂದ ವೇತನ ನೀಡಿ, ಪ್ರಭಾವ ಬೆಳೆಸಿಕೊಂಡ ಹೈದರಾಲಿಯು ಮುಂದೆ ದಳವಾಯಿಗಳನ್ನು ಮೂಲೆಗುಂಪಾಗಿಸಿ ತಾನು ಮೈಸೂರಿನ ಸರ್ವಾಧಿಕಾರಿಯಾದನು. 1761 ರಿಂದ 1782 ವರೆಗಿನ ಹೈದರನ ಆಳ್ವಿಕೆ ಮತ್ತು 1799ರವರೆಗಿನ ಅವನ ಮಗ ಟಿಪ್ಪುವಿನ ಆಡಳಿತದಲ್ಲಿ ಮೈಸೂರು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಆದರೆ ಅದೇ ವೇಳೆಯಲ್ಲಿ ಅಧಿಕಾರ ವಿಸ್ತರಣೆಗೆ ತೊಡಗಿದ್ದ ಬ್ರಿಟಿಷರು ಹೈದರಾಲಿ ಮತ್ತು ಟಿಪ್ಪುವನ್ನು ತಮ್ಮ ಪ್ರತಿಸ್ಪರ್ಧಿಗಳೆಂದು ಭಾವಿಸಿ ಅವರೊಂದಿಗೆ ಸಂಘರ್ಷದಲ್ಲಿ ತೊಡಗಿದರು.

೨. ತಿರುವಾಂಕೂರು: ಇದು ಕೇರಳ ರಾಜ್ಯದಲ್ಲಿದ್ದ ಒಂದು ಚಿಕ್ಕರಾಜ್ಯವಾಗಿತ್ತು. ಇದನ್ನು 1729-40ರ ನಡುವೆ ಮಾರ್ತಾಂಡ ವರ್ಮ ಎಂಬ ಅರಸನು ಆಳುತ್ತಿದ್ದನು. ಅವನ ನಂತರ ಮಗ ರಾಮವರ್ಮ ಆಳ್ವಿಕೆ ನಡೆಸಿದನು. ಮಾರ್ತಾಂಡವರ್ಮನು ತನ್ನ ಕಾಲದಲ್ಲಿ ತಿರುವಾಂಕೂರನ್ನು ಆಧುನೀಕರಣಗೊಳಿಸಿದ್ದಲ್ಲದೇ, ಸೇನೆಯನ್ನೂ ಸಹ ಯೂರೋಪಿನ ಮಾದರಿಯಲ್ಲಿ ಸಜ್ಜುಗೊಳಿಸಿದನು. ಅಲ್ಲದೇ ಬ್ರಿಟಿಷರೊಂದಿಗೆ ಸ್ನೇಹ ಬೆಳೆಸಿದ್ದನು. ಆದರೆ ಅದು ಸ್ವತಂತ್ರ ರಾಜ್ಯವಾಗಿ ಏಳಿಗೆ ಹೊಂದಿತ್ತು. ಅಲ್ಲದೇ ಮೊಗಲ್‌ ಸಾಮ್ರಾಜ್ಯದ ಪ್ರಭಾವದಾಚೆಗೆ ಈ ರಾಜ್ಯವು ಉಳಿದಿತ್ತು. ಮುಂದೆ ಟಿಪ್ಪುವಿನ ಜೊತೆ ಸಂಘರ್ಷದಲ್ಲಿ ತೊಡಗಿದ್ದ ಇದರ ಮೇಲಿನ ದಾಳಿಯ ಕಾರಣದಿಂದಾಗಿ ಮೂರನೆ ಆಂಗ್ಲೊ-ಮೈಸೂರು ಯುದ್ಧ ನಡೆಯಿತು.

 

IV. ಬ್ರಿಟಿಷರ ಏಳಿಗೆ: 17ನೆ ಶತಮಾನದಲ್ಲಿಯೇ ಭಾರತಕ್ಕೆ ಬಂದರೂ ಬ್ರಿಟಿಷರು 18ನೆ ಶತಮಾನದ ಮಧ್ಯಭಾಗದವರೆಗೆ ಕೇವಲ ವ್ಯಾಪಾರದಲ್ಲಿ ತೊಡಗಿದ್ದರು. ಆದರೆ ಪಾಂಡಿಚೇರಿಯ ಫ್ರೆಂಚ್‌  ಗವರ್ನರ್‌ ಡೂಪ್ಲೆಯ ರಾಜಕೀಯ ವಿಸ್ತರಣೆಯ ಆಕಾಂಕ್ಷೆಯಿಂದಾಗಿ ಅವರು ಫ್ರೆಂಚರೊಂದಿಗೆ ಕರ್ನಾಟಿಕ್‌ ಯುದ್ಧಗಳಲ್ಲಿ ತೊಡಗಿ ಪ್ರಾದೇಶಿಕ ವಿಸ್ತರಣೆಗೆ ಕೈಹಾಕಿದರು. ದಕ್ಷಿಣದಲ್ಲಿ ದೊರೆತ ಜಯಗಳಿಂದಾಗಿ ಉತ್ಸಾಹಿತರಾದ ಅವರು ಬಂಗಾಳದಲ್ಲಿ ಪ್ಲಾಸಿ (1757) ಮತ್ತು ಬಕ್ಸಾರ್‌ (1764) ಕದನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಬಂಗಾಳದಲ್ಲಿ ದಿವಾನಿ ಹಕ್ಕು ಪಡೆದುಕೊಂಡರು. ನಂತರ ನಾಲ್ಕು ಆಂಗ್ಲೊ-ಮೈಸೂರು ಮತ್ತು ಮೂರು ಆಂಗ್ಲೊ-ಮರಾಠಾ ಯುದ್ಧಗಳಲ್ಲಿ  ಭಾಗವಹಿಸಿ ದಕ್ಷಿಣದಲ್ಲಿ ತಮ್ಮ ರಾಜಕೀಯ ಪ್ರಾಬಲ್ಯ ಸ್ಥಾಪಿಸಿಕೊಂಡರು. ರಾಜಕೀಯ ಹಸ್ತಕ್ಷೇಪಗಳು, ಸಹಾಯಕ ಸೈನ್ಯ ಪದ್ಧತಿ ಮತ್ತು ಆಕ್ರಮಣಗಳ ಮೂಲಕ ರಾಜಕೀಯ ಅಧಿಕಾರ ಸ್ಥಾಪನೆ ಮಾಡಿಕೊಂಡರು.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources