ಮೊದಲನೆ ಆಂಗ್ಲೊ-ಮೈಸೂರು ಯುದ್ಧ 1767-1769.

ಯುದ್ಧದ ಕಾರಣಗಳು:-

1. ದಕ್ಷಿಣ ಭಾರತದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದ್ದ ಹೈದರಾಲಿಗೆ    ಮರಾಠರು ಮಾತ್ರವಲ್ಲದೆ ಇಂಗ್ಲಿಷರೂ ಮುಖ್ಯ ಶತ್ರುಗಳಾಗಿ ದ್ದರು. ಅವರು ಕೂಡ ಇವನ ರಾಜ್ಯ ವಿಸ್ತರಣೆಯಿಂದ ಅಸಮಾಧಾನಗೊಂಡು ಇವನನ್ನು ನಾಶಪಡಿಸಲು ಕಾಯುತ್ತಿದ್ದರು. ಏಕೆಂದರೆ ಅವನು ಅವರ ವಸಾಹತು ವಿಸ್ತರಣೆ ನೀತಿಗೆ ತಡೆ ಒಡ್ಡಬಹುದು ಎಂಬುದು ಆಂಗ್ಲರ ಅಭಿಪ್ರಾಯವಾಗಿತ್ತು.

೨. ಕರ್ನಾಟಿಕ್‌ ಯುದ್ಧಗಳ ಸಮಯದಲ್ಲಿ ಬ್ರಿಟಿಷರ ಮಿತ್ರನಾಗಿದ್ದ ಮಹಮದ್‌ ಅಲಿಯ ಶತೃಗಳಾಗಿದ್ದ ಚಂದಾಸಾಹೇಬ್‌ ಮತ್ತು ಮುಬರಿಜ್‌ಖಾನರಿಗೆ ಹೈದರ್‌ ಬೆಂಬಲ ನೀಡಿದುದು ಅವರ ದ್ವೇಷಕ್ಕೆ ಮತ್ತೊಂದು ಕಾರಣವಾಗಿತ್ತು.

3. 1764ರಲ್ಲಿ ನಡೆದ ಬಕ್ಸಾರ್ ಯುದ್ಧದ ತರುವಾಯ ಕ್ಲೈವನು ಮುಗಲ್ ಸಾಮ್ರಾಟ ಷಾ ಆಲಂನಿಂದ ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿಯನ್ನಲ್ಲದೆ ಉತ್ತರ ಸರ್ಕಾರಗಳ ಐದು ಕಿರುಪ್ರದೇಶಗಳನ್ನು ಪಡೆದಿದ್ದ. ಸರ್ಕಾರಗಳು ನಿಜಾಮನಿಗೆ ಸೇರಿದ್ದವು. ಇಂಗ್ಲಿಷರಿಗೆ ಅವನ್ನು ಒಪ್ಪಿಸುವ ಕಾಲ ಬಂದಾಗ ಅವನು ಕೋಪಗೊಂಡಿದ್ದ. ಆದರೆ ಇಂಗ್ಲಿಷರಿಗೆ ನಿಜಾಮನ ಮನಸ್ಸು ಮತ್ತು ಶಕ್ತಿ ತಿಳಿದಿದ್ದರಿಂದ ಅವರು ಬೇಗ ಅವನ ಮನವೊಲಿಸಿ ಮಿತ್ರನನ್ನಾಗಿ ಮಾಡಿಕೊಂಡರು. ನಿಜಾಮನಿಗೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಬರದಿದ್ದ ಕಿರುಪ್ರದೇಶಗಳಿಗೆ ಬದಲಾಗಿ ಇಡೀ ಮೈಸೂರು ರಾಜ್ಯವನ್ನು ಜಯಿಸಿಕೊಡುವ ಆಶಾಭಾವನೆಯನ್ನು ಅವನಲ್ಲಿ ಹುಟ್ಟಿಸಿ ಅವನನ್ನು ತಮ್ಮ ಕಡೆಗೆ ಸೆಳೆದುಕೊಂಡರು. ಅದಕ್ಕಾಗಿ ನಿಜಾಮನ ಬಳಿಗೆ ನಿಯೋಗ ಕಳುಹಿಸಿದ ಇಂಗ್ಲಿಷರು ಅವನ ಬೆಂಬಲ ಗಳಿಸಿದರು. ಇದರಿಂದ ಹೈದರನ ವಿರುದ್ಧ ಇಂಗ್ಲಿಷ್ ಮತ್ತು ನಿಜಾಮರ ಮೈತ್ರಿಕೂಟ ಬಹುಬೇಗ ರಚಿತವಾಯಿತು.

4. ಹೈದರನು ಬ್ರಿಟಿಷರ ಶತೃಗಳಾಗಿದ್ದ ಫ್ರೆಂಚರೊಂದಿಗೆ ಸ್ನೇಹದಿಂದ ಇದ್ದುದು ಆಂಗ್ಲರಿಗೆ ಹಿಡಿಸಲಿಲ್ಲ.

5. ಮರಾಠರು ಸಹ ಆಗಾಗ್ಯೆ ಹೈದರನ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದ್ದರಿಂದ ಆಂಗ್ಲರು ಮರಾಠರನ್ನೂ ತಮ್ಮೆಡೆಗೆ ಸೆಳೆದುಕೊಂಡರು. ಹೀಗೆ ಹೈದರ್ ಅಲಿಯ ವಿರುದ್ಧ ದಕ್ಷಿಣ ಭಾರತದ ಎಲ್ಲ ಮೂರೂ ಮುಖ್ಯರಾಜ್ಯಗಳ ಸಂಯುಕ್ತ ವ್ಯೂಹ ರಚನೆಗೊಂಡಿತು.

ಯುದ್ಧದಆರಂಭ:- 1767 ರಲ್ಲಿ ಮರಾಠರು ಉತ್ತರದಿಂದ ಹೈದರನ ಪ್ರದೇಶಗಳ ಮೇಲೆ ದಾಳಿ ಮಾಡಿದ ಕಾಲದಲ್ಲೇ ಇಂಗ್ಲಿಷರು ಮತ್ತು ನಿಜಾಮ ಮೈಸೂರಿನ ವಿರುದ್ಧ ದೊಡ್ಡ ಸೈನ್ಯದೊಡನೆ ದಂಡೆತ್ತಿಬಂದರು. ಬ್ರಿಟಿಷರು ಹೈದರ್ ಅಲಿಯನ್ನು ಏಕಾಂಗಿಯಾಗಿ ಮಾಡಿದ್ದರೂ ಇವನು ತನ್ನ ಚಾಣಾಕ್ಷತನದಿಂದ ಶತ್ರುಕೂಟವನ್ನು ಭೇದಿಸುವಲ್ಲಿ ಕೊನೆಗೆ ಯಶಸ್ವಿಯಾದ. ಹೈದರನು ಮಾಧವರಾವ್ ನೊಡನೆ ಒಪ್ಪಂದಕ್ಕೆ ಬಂದು ಅವನಿಗೆ ಕೆಲವು ಕೋಟೆಗಳನ್ನು ಮತ್ತು 23 ಲಕ್ಷ ರೂಪಾಯಿಗಳನ್ನು ನೀಡಿ ಅವನನ್ನು ತಟಸ್ಥನಾಗಿಸಿದ. ಇನ್ನು ನಿಜಾಮ ಮತ್ತು ಇಂಗ್ಲಿಷರು ಉಳಿದುಕೊಂಡರು. ಅವರಿಬ್ಬರಲ್ಲಿ ಭೇದಭಾವ ಬರುವಂತೆ ಮಾಡಲು ಹೈದರ್‌ ತನ್ನೆಲ್ಲ ಬುದ್ಧಿವಂತಿಕೆಯನ್ನು ಉಪಯೋಗಿಸಿದ. ಭಾರತೀಯ ರಾಜ್ಯಗಳೆಲ್ಲ ವಿದೇಶೀಯರ ವಿರುದ್ಧ ಒಂದಾಗಬೇಕೆಂದು ನಿಜಾಮನ ಮುಂದಿಟ್ಟ ಇವನ ಸೂತ್ರ ಫಲಪ್ರದವಾಯಿತು. ಇದರಿಂದ ನಿಜಾಮ ಇದ್ದಕ್ಕಿದ್ದಂತೆಯೇ ಬ್ರಿಟಿಷರ ಪಕ್ಷ ತೊರೆದು ಹೈದರನ ಮಿತ್ರನಾದ. ಇಂಗ್ಲಿಷರು ತಮ್ಮ ಮಿತ್ರರೆಲ್ಲ ಶತ್ರುಪಕ್ಷ ಸೇರಿದ್ದನ್ನು ಕಂಡು ಅಚ್ಚರಿಗೊಂಡರು. ರೀತಿ ಮೊದಲ ಮೈಸೂರು ಯುದ್ಧ ಬಹು ವಿಲಕ್ಷಣ ಸ್ಥಿತಿಯಲ್ಲಿ ಪ್ರಾರಂಭವಾಯಿತು.

ಯುದ್ಧದ ಘಟನೆಗಳು:-  1767 ಆಗಸ್ಟ್ನಲ್ಲಿ ಹೈದರನು ನಿಜಾಮನೊಂದಿಗೆ ಕರ್ನಾಟಿಕ್ ಪ್ರದೇಶದ ಮೇಲೆ ದಾಳಿ ಮಾಡಿದ. ಸೆಪ್ಟೆಂಬರ್ 2 ರಂದು ನಡೆದ ನಿರ್ಣಾಯಕ ಯುದ್ಧದಲ್ಲಿ ಇಂಗ್ಲಿಷ್ ಸೇನಾಪತಿ ಕರ್ನಲ್ ಸ್ಮಿತ್ ಹೈದರನಿಗೆ ಭಾರಿ ಪೆಟ್ಟುಕೊಟ್ಟ. ತರುವಾಯ ಹೈದರ್ ತನ್ನ ಯುದ್ಧತಂತ್ರ ವನ್ನು ಬದಲಾಯಿಸಿಕೊಂಡು ವಾಣಿಯಂಬಾಡಿ, ತಿರುವತ್ತೂರು ಮತ್ತು ಅಂಬೂರುಗಳನ್ನು ಹಿಡಿದ. ನಿಜಾಮ ಕಾರ್ಯಾಚರಣೆಗಳಲ್ಲಿ ಎಷ್ಟು ಘಾಸಿಗೊಂಡನೆಂದರೆ ಇಂಗ್ಲಿಷರೊಡನೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡು ಹೈದರನ ಮಿತ್ರಕೂಟದಿಂದ ಹಿಂದೆ ಸರಿದ. ಇಂಗ್ಲಿಷರು ಮತ್ತು ಹೈದರನ ನಡುವೆ ಸುಮಾರು ಎರಡು ವರ್ಷಗಳ ಕಾಲ ನೇರ ಯುದ್ಧ ನಡೆಯಿತು. 1769 ಮಾರ್ಚ್ 28 ರಂದು ಹೈದರ್ ಇದ್ದಕ್ಕಿದ್ದಂತೆ ಮದರಾಸಿನಲ್ಲಿ ಕಾಣಿಸಿಕೊಂಡ. ಇದು ಇಂಗ್ಲಿಷರನ್ನು ತಬ್ಬಿಬ್ಬು ಗೊಳಿಸಿದ್ದಲ್ಲದೆ ಅವರು ಹೈದರನಿಗೆ ಶರಣಾಗದೆ ಅನ್ಯಮಾರ್ಗವೇ ಇರಲಿಲ್ಲ.

ಮದ್ರಾಸ್‌ ಒಪ್ಪಂದ:- ಎಪ್ರಿಲ್‌ 4, 1769:-  ಅನೇಕ ವಿಧದಲ್ಲಿ ಪ್ರಮುಖವಾದ ಇತಿಹಾಸ ಪ್ರಸಿದ್ಧ ಮದರಾಸು ಒಪ್ಪಂದವನ್ನು ಹೈದರ್ ಹೇಳಿ ಬರೆಸಿದ. ಈ ಒಪ್ಪಂದದ ಕರಾರುಗಳೆಂದರೆ,

1. ಪರಸ್ಪರ ಗೆದ್ದ ಪ್ರದೇಶಗಳನ್ನು ಹಿಂತಿರುಗಿಸುವುದು.

2. ಯುದ್ಧ ಖೈದಿಗಳ ವಿನಿಮಯ ಮಾಡಿಕೊಳ್ಳುವುದು.

3. ಬ್ರಿಟಿಷರು ಹೈದರನಿಗೆ ಯುದ್ಧವೆಚ್ಚ ಕೊಡುವುದು.

4. ಹೈದರನು ಕಡೂರು ಜಿಲ್ಲೆಯನ್ನು ಆರ್ಕಾಟಿನ ನವಾಬನಿಗೆ ಕೊಡುವುದು.

5. ಅನ್ಯರಾಜ್ಯ ಅಥವಾ ಪಕ್ಷದವರು ಮೈಸೂರಿನ ಮೇಲೆ ದಾಳಿ ಮಾಡಿದಾಗ ಬ್ರಿಟಿಷರು ಅವನ ನೆರವಿಗೆ ಹೋಗುವುದು.

ಯುದ್ಧದ ಮಹತ್ವ:-  ಇದು ಭಾರತೀಯ ರಾಜನೊಬ್ಬ ಇಂಗ್ಲಿಷರ ಮೇಲೆ ಸಾಧಿಸಿದ ಮೊದಲ ವಿಜಯವಾಗಿತ್ತು. ಯುದ್ಧದಿಂದ ಇಂಗ್ಲಿಷರು ಅಜೇಯರೆಂಬ ಪ್ರತೀತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲಾಯಿತು. ಇಂಗ್ಲಿಷರು ಯುದ್ಧದಲ್ಲಿ ಆದ ಸರ್ವತೋಮುಖ ಹಾನಿಯನ್ನು ಅವರು ಭಾರತದ ನೆಲದಲ್ಲಿ ಎಂದೂ ಅನುಭವಿಸಿರಲಿಲ್ಲ. ಅವರು ಆರ್ಥಿಕ, ಸೈನಿಕ, ರಾಜಕೀಯ ಮತ್ತು ನೈತಿಕ ಹಾನಿಗೊಳಗಾಗಿ ದ್ದರು.    ಹೈದರ್ ಅಲಿ ಇಂಗ್ಲಿಷರನ್ನು ಸೋಲಿಸಿದ್ದರಿಂದ ಇವನ ಘನತೆ ಬಹುವಾಗಿ ಹೆಚ್ಚಿತು.

*****

 


Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources